ಪಿಹೆಚ್ಡಿ ಸಂಶೋಧನೆಗಳ ಶೋಷಣೆ!

ಜಾತಿ ಪದ್ದತಿ ತೊಲಗಬೇಕೆನ್ನುವ ವೈಚಾರಿಕತೆಯನ್ನು ಮೆಚ್ಚಿಕೊಳ್ಳುವ ಹಳ್ಳಿಗಾಡು, ಬಡತನದ ಹಿನ್ನೆಲೆಯ ಮೂವರು ಯುವಕರು ಮತ್ತು ಮೂವರು ಯುವತಿಯರು ಖ್ಯಾತ ಭಾಷಾ ವಿಶ್ವವಿದ್ಯಾಲಯದಲ್ಲಿ ಪಿಹೆಚ್ಡಿ ಮಾಡಲು ಆಯ್ಕೆಯಾಗಿದ್ದರು. ನವ ಸಮಾಜದ ಕನಸು ಕಾಣುತ್ತ ಅದಕ್ಕೆ ಪೂರಕವಾದ ವಿಚಾರಗಳ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳುವಂತಹ ವಿಷಯ ತಮ್ಮ ಪಿಹೆಚ್ಡಿ ವಿಷಯವಾಗುತ್ತದೆಂಬ ನಿರೀಕ್ಷೆಯನ್ನಿಟ್ಟುಕೊಂಡಿದ್ದರು.

ಭಾಷಾ ಅಧ್ಯಯನ ಸಂಸ್ಥೆಯ ಮುಖ್ಯಸ್ಥ ಪ್ರೊ. ಕನ್ನಡದೇವ. ಇವರು ಸಾಹಿತ್ಯ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದ್ದರು. ತಮ್ಮ ಜಾತಿವಿನಾಶದ ಕತೆ ಕಾದಂಬರಿಗಳಿಂದ ಸಾಕಷ್ಟು ಪ್ರಶಸ್ತಿಗಳನ್ನು ಪಡೆದಿದ್ದರು.  ಇವರ ಸಾಹಿತ್ಯದಿಂದ ಪ್ರಭಾವಿತರಾಗಿದ್ದ ಆ ಆರು ಜನ ವಿದ್ಯಾರ್ಥಿಗಳ ನಿರೀಕ್ಷೆ ಜಾತಿಮುಕ್ತ ಸಮಾಜದ ಕುರಿತಾದ ಸಂಶೋಧನೆಗಳೇ ಆಗಿದ್ದವು. ಇಂತಹ ಧೀಮಂತರು ತಮಗೆ ಅತ್ಯುತ್ತಮ ಸಂಶೋಧನಾ ವಿಷಯವನ್ನೇ ಕೊಡುತ್ತಾರೆಂದು ಪ್ರೊಫೆಸರರಿಗಾಗಿ ಈ ಪಿಹೆಚ್ಡಿ ವಿದ್ಯಾರ್ಥಿಗಳು ಕಾತುರದಿಂದ ಕಾಯುತ್ತ ಕುಳಿತಿದ್ದರು. ಕನ್ನಡದೇವರ ತಂದೆ ತಮ್ಮ ಮಗನಿಗೆ ಜಾತಿಯ ಸೋಂಕು ಭಾದಿಸದ ಕನ್ನಡವೇ ಧರ್ಮ ಜಾತಿಯಾಗಲೆಂಬ ಸದುದ್ದೇಶದಿಂದ "ಕನ್ನಡದೇವ" ಎಂಬ ತಟಸ್ಥ ಹೆಸರನ್ನಿರಿಸಿದ್ದರು.

ಚಕಚಕನೆ ಮೆಟ್ಟಿಲೇರಿ ತಮ್ಮ ಚೇಂಬರಿಗೆ ಬಂದ ಪ್ರೊ.ಕನ್ನಡದೇವರು ಈ ವಿದ್ಯಾರ್ಥಿಗಳನ್ನು ಕರೆಸಿಕೊಂಡು ಪಿಹೆಚ್ಡಿ ವಿಷಯ ಹಂಚಲು ತೊಡಗಿದರು. ಮೊದಲ ವಿದ್ಯಾರ್ಥಿ ಪ್ರವೀಣ್ ನಾಯಕನಿಗೆ "ನೋಡು ಪ್ರವೀಣ, ನಿನ್ನ ವಿಷಯ 'ಕಾಡು ನಾಯಕ ಮತ್ತು ಊರು ನಾಯಕರ ಸೂಕ್ಷ್ಮ ಸಂಸ್ಕೃತಿ ಬೇಧ'" ಎನ್ನುತ್ತಾ ಪ್ರಭಾವತಿ ಸಾಲಿಮಠಳಿಗೆ 'ವಚನಕಾರರ ಕಾಮ ಮುಕ್ತತೆ ಮತ್ತು ಸಂಪ್ರದಾಯ ನಿಗ್ರಹ', ರಾಜಾಸಾಬ್ ಹುಕ್ಕೇರಿಗೆ 'ಪಿಂಜಾರರ ಆಲಿ ದೇವ ಮತ್ತು ಸಕ್ಕರೆ ಶಾಸ್ತ್ರ ಸಂಸ್ಕೃತಿ', ದೀಪಾ ಪೂಜಾರಳಿಗೆ 'ಹಾಲುಮತದ ಜನಪದದಲ್ಲಿ ಮಹಿಳೆಯರ ಪಾತ್ರ',    ಶಂಕರಶಾಸ್ತ್ರಿಗೆ ' ವೈದಿಕ ಪೌರೋಹಿತ್ಯಶಾಹಿಯಲ್ಲಿ ತಾಂತ್ರಿಕ ಪಂಥದ ಏಕೀಕರಣ' ಮತ್ತು ಯೂಸುಫಾ ಜಾನ್ ಳಿಗೆ 'ಉತ್ತರ ಕರ್ನಾಟಕದ ಉರ್ದು ಗಜಲ್ಗಳ ಮೇಲೆ ಗುರುರಾಜ ಹೊಸಕೋಟಿಯ ಪೋಲಿ ಪ್ರಭಾವ' ಎಂದು ವಿಷಯಗಳನ್ನು ಕೊಟ್ಟರು.

ಈ ವಿಷಯಗಳಿಂದ ವಿಚಲಿತರಾದ ವಿದ್ಯಾರ್ಥಿಗಳು ಪೆಚ್ಚಾಗಿ " ಸರ್, ನಾವು ನಿಮ್ಮ ಜಾತಿಮುಕ್ತ ಚಳುವಳಿಯಿಂದ ತುಂಬಾ ಪ್ರಭಾವಿತರಾಗಿದ್ದೇವೆ. ಹಾಗಿದ್ದಾಗ ಈ ವಿಷಯಗಳು..." ಎನ್ನುತ್ತಿದ್ದಂತೆಯೇ ಅವರನ್ನು ಅರ್ಧದಲ್ಲಿ ತುಂಡರಿಸಿ "ನೋಡಿ, ನಾವು ಪಿಹೆಚ್ಡಿಯನ್ನು ಜಾತಿ ವಿಷಯಗಳಲ್ಲೇ ಮಾಡ್ಬೇಕು. ಏಕೆಂದರೆ ಜಾತಿ ನಮ್ಮ ಅಸ್ಮಿತೆ. ನಿಮ್ಮ ಜಾತಿಯ ಮೂಲಬೇರು ನಿಮಗೆ ತಿಳಿದಿರುವುದರಿಂದ ಈ ವಿಷಯವನ್ನು ನೀವು ಸಮರ್ಥವಾಗಿ ನಿಭಾಯಿಸಬಲ್ಲಿರಿ ಮತ್ತು ಅದು ನಿಮ್ಮ ಕರ್ತವ್ಯ ಕೂಡ. ಇನ್ನು ಜಾತಿಮುಕ್ತತೆ ಕೇವಲ ಅಂತರ್ಜಾತಿ ವಿವಾಹವಾದರೆ ಸಾಕು, ನಿಮಗೆ ಮುಕ್ತಿ ಸಿಗುತ್ತದೆ. ಅಂತಹ ಅಸ್ಮಿತೆಯ ಕುರಿತಾಗಿಯೇ ನೆರೂಡ, ಕಾಫ್ಕಾ, ಟಾಲ್ಸ್ಟಾಯ್ ಅವರೆಲ್ಲಾ ಹೇಳಿರುವುದು.  ಆದರೆ ಜಾತಿ ಎಂಬ ಅಸ್ಮಿತೆ ನಿಮ್ಮಲ್ಲಿ ಸದಾ ಜಾಗೃತವಾಗಿರಲಿ. ಹಾಂ, ಮುಂದಿನ ತಿಂಗಳೊಷ್ಟತ್ತಿಗೆ ಒಂದು ರೂಪು ರೇಷೆ ಹಾಕಿಕೊಂಡು ಬನ್ನಿ, ಈಗ ಹೊರಡಿ" ಎಂದರು.

ಯೂಸುಫಾ ಜಾನ್ ಮಾತ್ರ ಅಲ್ಲೇ ನಿಂತಿದ್ದಳು.  ಏನೆಂದು ಪ್ರೊಫೆಸರರು ಹುಬ್ಬೇರಿಸಿದರು. "ಸರ್, ನನ್ನ ಹೆಸರು ಜೋಸೆಫಾ ಜಾನ್. ಅದನ್ನು ನಮ್ಮ ಪಾದ್ರಿಗಳು ಯೂಸುಫಾ ಎನ್ನಬೇಕು ಎಂದು ಹಾಗೆ ಹೆಸರಿಟ್ಟಿದ್ದಾರೆ" ಎಂದಳು.

"ಅರೆ, ಅದಕ್ಕೇನಂತೆ...ಇನ್ನೂ ಉತ್ತಮ ವಿಷಯ ಕೊಡುತ್ತೇನೆ ತಗೋ. 'ಪ್ರೊಟೆಸ್ಟಂಟರ ಚಳುವಳಿ ಮತ್ತು ಕಲ್ಯಾಣ ಕ್ರಾಂತಿ ಸಮೀಕರಣ.' ಗಾಡ್ ಬ್ಲೆಸ್ ಯೂ, ನೌ ಗೋ"  ಎಂದರು.

ಇದು ಯಾವುದೇ ಉತ್ಪ್ರೇಕ್ಷೆಯಲ್ಲ, ಇಂದು ಸಂಶೋಧನಾ ವಿಶ್ವವಿದ್ಯಾಲಯಗಳಲ್ಲಿ ನಡೆಯುತ್ತಿರುವ ಪಿಹೆಚ್ಡಿಗಳೇ ಹೀಗೆ. ಕಳೆದ ಹತ್ತು ವರ್ಷಗಳಲ್ಲಿ ಕನ್ನಡ ನಾಡು ನುಡಿ ಕುರಿತಾದ ಸಂಶೋಧನಾ ವಿಭಾಗಗಳಲ್ಲಿ ಆದ ಪಿಹೆಚ್ಡಿಗಳನ್ನು ಗುಡ್ಡೆ ಹಾಕಿ ನೋಡಿ! ಹಾಗೆಯೇ ಕಾಫ್ಕಾ, ನೆರೂಡಾ, ಮುಂತಾದ ವಿದೇಶಿ ಲೇಖಕರುಗಳನ್ನು ಬಿಡಿ, ನಮ್ಮ ಅಂಬೇಡ್ಕರರ ಪುಸ್ತಕಗಳ ಕನ್ನಡ ಅನುವಾದಗಳನ್ನು ಗಮನಿಸಿ. ABCD ಬಿಟ್ಟರೆ ಇನ್ನೇನೂ ಬಾರದ ಕನ್ನಡ ಭಾಷಾ ಪ್ರೊಫೆಸರರುಗಳು ಮೂಲ ಕೃತಿಗಳನ್ನು ಕೈಯಲ್ಲಿ ಹಿಡಿದು ಹಿಂದೆ ಮುಂದೆ ತಿರುವಿ ನೋಡಿ ಅನುವಾದಿಸಿರುವಂತಿವೆ. ನನ್ನ ಈ ಮೊದಲ "ಮಹಿಷ ಮತ್ತು ವಿದೂಷ" ಲೇಖನ ಇಂತಹ ತಿರುಚುವಿಕೆಯ ಸವಿವರಗಳನ್ನು ಹೊಂದಿದೆ.

ಹಾರ್ವರ್ಡ್ ವಿಶ್ವವಿದ್ಯಾಲಯದ ಡೇವಿಡ್ ರೀಚ್ ಅವರ R1A DNA ಸಂಶೋಧನೆಯನ್ನು ಎತ್ತಿಹಿಡಿದು ವೈದಿಕ, ಪುರೋಹಿತಶಾಹಿ, ದಲಿತ, ದಮನಿತ ಎಂಬ ರಂಗುಗಳ ಸೃಜನಶೀಲ ಮೆರುಗನ್ನು ಹಚ್ಚಿ ಮಿರಿಮಿರಿ ಮಿಂಚಿಸುತ್ತಾರೆ. ಆದರೆ ಇದೇ ಹಾರ್ವರ್ಡ್ ವಿಶ್ವವಿದ್ಯಾಲಯದ ಮೈಕಲ್ ವಿಟ್ಜೆಲ್ ಋಗ್ವೇದವನ್ನು ಆರ್ಯರ ಆಗಮನಕ್ಕೂ ಮುಂಚಿತವಾಗಿಯೇ ಮೂಲನಿವಾಸಿಗಳು ರಚಿಸಿದ್ದರು ಎಂಬ ಸಂಶೋಧನೆಯನ್ನು ಮರೆಮಾಚಿಸಿ ತಮ್ಮ ವೈದಿಕ ಬ್ರಾಹ್ಮಣ್ಯ ಹೇರಿಕೆ/ದಲಿತ ಶೋಷಣೆ ಎಂಬ ಸಿದ್ದ ಸಿದ್ಧಾಂತವನ್ನು ಸಂಶೋಧನೆಗಳಿಗೆ ಸಂಯೋಜಿಸುತ್ತಾರೆ.

ಕಪ್ಪು ಬಿಳುಪಿನ ಸಂಶೋಧನೆಗಳಿಗೆ ರಂಗು ಬಳಿಯುವ ಜಾಣತನ/ಸಣ್ಣತನಗಳ ಕನ್ನಡದೇವರಿಂದ ಸಂಶೋಧನೆಗಳನ್ನು ಬೇರ್ಪಡಿಸುವ ತುರ್ತುಪರಿಸ್ಥಿತಿಯನ್ನು ಹೇರಬೇಕಾಗಿದೆ.

No comments:

Post a Comment