ಭಾರತ ಒಂದು ಮರುಶೋಧನೆ ಕೃತಿಯ ಹಿನ್ನೆಲೆ



ಭಾರತೀಯರಾದ ನಿಮಗೊಬ್ಬ ಚೀನಿ ಸಹೋದ್ಯೋಗಿ ಸಿಗುತ್ತಾನೆ ಎಂದಿಟ್ಟುಕೊಳ್ಳಿ. ಆಗ ನಿಮ್ಮ ಅವನ ಬಗ್ಗೆ ಇರುವ ಸಮಾನ ವಿಷಯ ಎಂದರೆ ಜನಸಂಖ್ಯೆ, ಇಂಡೋ ಚೈನಾ ಯುದ್ಧ, ಬುದ್ಧ, ಕಮ್ಯುನಿಸಂ, ಬಿಟ್ಟರೆ ಹುಯೆನ್ ತ್ಸಾಂಗ್! ಹೀಗೆ ಹುಯೆನ್ ತ್ಸಾಂಗ್ ಬಗ್ಗೆ ಅವನು ಗೊತ್ತಾ, ಓದಿದ್ದೀಯಾ ಇತ್ಯಾದಿ ಮಾತನಾಡುತ್ತೀರಿ.
ಆ ರೀತಿಯಾಗಿ ಆರಂಭಗೊಂಡ ನನ್ನ ಮೇಜುವಾನಿ ಸಂಭಾಷಣೆ, ಹುಯೆನ್ ತ್ಸಾಂಗನ ಮಹಾಪಯಣ ಎಂಬ ಪುಸ್ತಕವಾಯಿತು.
ಆ ಪುಸ್ತಕ, ಡಲ್ಲಾಸ್ ನಗರದಲ್ಲಿ ನಡೆದ ಅಕ್ಕ ಸಮ್ಮೇಳನದಲ್ಲಿ ಕಳೆದ ವರ್ಷ ಬಿಡುಗಡೆಗೊಂಡಿತು.  ಅಕ್ಕದ ಆ ಸಮ್ಮೇಳನದ ಒಂದು ಸಂಜೆ ಶಿಕಾಗೋದಿಂದ ಬಂದಿದ್ದ ನಾನು, ಮೋಹನ್ ಗೌಡರು, ಶ್ರೀಶೈಲ ವಿರುಪಣ್ಣಾವರ್, ಪ್ರಭು ನಂಜಣ್ಣಾವರ್, ಬೆಂಗಳೂರಿನಿಂದ ಬಂದಿದ್ದ ಸಮಾಜಮುಖಿ ಬಳಗದ ಜಯರಾಮ್, ಮತ್ತು ಡಲ್ಲಾಸಿನವರೇ ಆದ ಸುಷ್ಮಾ ಮತ್ತು ನನ್ನ ಹೆಂಡತಿ ಸುನೀತಾ ಕುಳಿತು ಹುಯೆನ್ ತ್ಸಾಂಗನ ಕುರಿತಾದ ನನ್ನ ಸಂಶೋಧನೆಯ ಕುರಿತು ಮಾತನಾಡುವಾಗ, ಜಯರಾಮ್ ಅವರು ರಾಖೀಗಢಿಯಲ್ಲಿ ದೊರೆತ ಪಳೆಯುಳಿಕೆಗಳ ಇತ್ತೀಚಿನ ಉತ್ಖನನದ ಸಂಶೋಧನೆಯ ಬಗ್ಗೆ ಉಲ್ಲೇಖಿಸಿದರು. ಆಗ ಚರ್ಚೆ ಗಂಭೀರವಾಗುತ್ತಾ ರಾಮಾಯಣ, ಮಹಾಭಾರತ, ಆರ್ಯ, ದ್ರಾವಿಡ, ಸಂಸ್ಕೃತ, ಪ್ರಾಕೃತ, ಹಿಂದುತ್ವ, ಕೊಲಂಬಸ್, ಐಟಿ ಎಲ್ಲಾ ವಿಷಯಗಳೂ ಚರ್ಚಾ ವಿಷಯಗಳಾಗಿ ಎಲ್ಲರೂ ಇತಿಹಾಸದ ಕುತೂಹಲಿಗಳಾದರು.
ಇತ್ತ ಸುನೀತಾ ಮತ್ತು ಸುಷ್ಮಾ ಯಾವುದೋ ನೃತ್ಯ ನೋಡಲು ಹೋಗುತ್ತಿದ್ದಂತೆಯೇ ಶ್ರೀಶೈಲರು ಸ್ಕಾಚ್ ತೆಗೆದು ಚರ್ಚೆಗೆ ತುಪ್ಪ ಸುರಿದರು. ಮೋಹನ್ ಗೌಡರು ಈ ಎಲ್ಲಾ ವಿಷಯಗಳ ಬಗ್ಗೆ ಯಾರಾದರೂ ಸ್ವಲ್ಪ ಹೆಚ್ಚಿನ ಸಂಶೋಧನೆ ಮಾಡಿ ಒಂದು ಕೈಪಿಡಿ ಮಾಡಬೇಕು ಕಣ್ರೀ ಎಂದರು. ನಂಜಣ್ಣಾವರರು ನೀವೆಲ್ಲಾ ಇಸ್ಪೀಟು ಆಡಲು ಬರುತ್ತೀರಿ ಎಂದುಕೊಂಡರೆ ಇತಿಹಾಸ ಕೆದಕುತ್ತಿರುವಿರಿ ಎಂದು ಹುಸಿ ಬೇಸರ ತೋರಿದರೂ, ಜೂಜು ಭಾರತೀಯರ ಮೂಲಗುಣ ಎಂದಾಗ ತಮ್ಮ ಜೂಜಿನ ಚಟ ವಂಶವಾಹಿ ಗುಣವೆಂದು ಬೀಗುತ್ತ ಚರ್ಚೆಗೆ ಕಿವಿಯಾದರು. ಹೀಗೆ ಜಯರಾಮರು ಎತ್ತಿದ ರಾಖೀಗಢಿ ಒಂದು ಕಿಡಿಯನ್ನು ಹಚ್ಚಿತು. ಆ ಕಿಡಿ, ಇಂದು ಕೃತಿಯಾಗಿ ನಿಮ್ಮ ಕೈ ಸೇರಿದೆ. 
ಬಿಸಿನೆಸ್ ಪ್ರಾಸೆಸ್, ರೋಡ್ ಮ್ಯಾಪ್, ಬ್ಲೂ ಪ್ರಿಂಟ್, ಬಿಗ್ ಡೇಟಾ, ಮಷಿನ್ ಲರ್ನ್ನಿಂಗ್ ಎನ್ನುವ ನನಗೆ, ಸಮುದ್ರಮಥನದಿಂದ ಅಮೃತ ಸೃಷ್ಟಿಯಾಯಿತೆಂಬುವ ಪೌರಾಣಿಕ ಕತೆ ಪ್ರಪ್ರಥಮ ಮಾಹಿತಿ ತಂತ್ರಜ್ಞಾನದ ವಿಶ್ಲೇಷಣೆಯ ದೃಷ್ಟಾಂತ ಸೂಚಿಯಾದರೆ, ಹುಯೆನ್ ತ್ಸಾಂಗ್ ಅಗಣಿತ ಮಾಹಿತಿಯನ್ನು ಮಥಿಸಿ, ಭಾರತದ ಇತಿಹಾಸದ ಉಪಯುಕ್ತ ನಿಖರ ಮಾಹಿತಿಯನ್ನು ನೀಡಿ ಮಾಹಿತಿ ವಿಶ್ಲೇಷಣೆಯನ್ನು ಸಾಕಾರಗೊಳಿಸಿದ ಆದಿಪುರುಷನೆನಿಸುತ್ತಾನೆ. ಅಂತಹ ಮಹಾನ್ ಪುರುಷನ ಕುರಿತು ಬರೆದ ನಾನು, ಅದೇ ರೀತಿಯಲ್ಲಿ ಮಾಹಿತಿಯನ್ನು ಮಥಿಸಿ ಈ ನನ್ನ ಕೃತಿ 'ಭಾರತ ಒಂದು ಮರುಶೋಧನೆ'ಯನ್ನು ರಚಿಸಿದ್ದೇನೆ ಎಂದುಕೊಂಡಿದ್ದೇನೆ.
ಹಮ್ಮ್, ಯಾರು ಹೇಳಿದ್ದು ಇತ್ತಲಿಂದ ಆಲೂಗಡ್ಡೆ ಹಾಕಿ ಅತ್ತಲಿಂದ ಬಂಗಾರ ತೆಗೆಯಲು ಸಾಧ್ಯವಿಲ್ಲ ಎಂದು? ಇನ್ನೊಮ್ಮೆ ಯೋಚಿಸಿ.😊
ಇರಲಿ, ಈ ಕೃತಿ ಕೇವಲ tip of an iceberg.
ಹಾಗಾಗಿಯೇ ಇದು ಒಂದು ಕೈಪಿಡಿಯಂತಿರುವುದು. ಇದನ್ನು ಅರಗಿಸಿಕೊಳ್ಳಲಿಕ್ಕೆ ತುಂಬಾ ಮುಕ್ತ ಮನಸ್ಸು ಬೇಕು. ಇನ್ನು ಆಳಕ್ಕೆ ಇಳಿದು ವಸ್ತುನಿಷ್ಠವಾಗಿ, ನಿರ್ಭಿಡೆಯಿಂದ ಬರೆದರೆ ಏನಾಗಬಹುದು ಎಂಬುದನ್ನು ಊಹಿಸಿಕೊಂಡು ಸತ್ಯವನ್ನು ಅಪ್ಪಿಕೊಳ್ಳಲು ತಯಾರಾಗಿ. ಏಕೆಂದರೆ ನಮ್ಮ ಪರಂಪರೆ ಉನ್ನತ, R1 DNA ಭಾರತ ಮೂಲದ್ದೆಂದು ಕೂಡ ಇತ್ತೀಚೆಗೆ ಸಾಬೀತಾಗುತ್ತಿದೆ.  ಆದರೂ ಒಂದು ಪರಂಪರೆಯಲ್ಲಿ ಒಳಿತು, ಕೆಡಕುಗಳು ಇದ್ದೇ ಇರುತ್ತವೆ ಎಂಬ ಸತ್ಯದ ಆಧಾರದ ಮೇಲೆ ನಮ್ಮ ಪರಂಪರೆಯನ್ನು ನಮ್ಮ ಚರಿತ್ರೆಯಾಗಿ ಒ/ಅಪ್ಪಿಕೊಂಡು ಮುಂದುವರಿಯಬೇಕಾಗಿದೆ.
ಒಟ್ಟಿನಲ್ಲಿ ಭಾರತ ಸದಾ ಮುಕ್ತ ಚಿಂತನೆಗೆ ತನ್ನನ್ನು ಸದಾ ತೆರೆದುಕೊಂಡಿದ್ದಿತು. ಹಾಗಾಗಿಯೇ ಹೊಸ ಹೊಸ ಚಿಂತನೆ, ಶಾಸ್ತ್ರ, ಪಂಥ, ಭಾಷೆ, ಪ್ರಭುತ್ವ, ಸಂಸ್ಕೃತಿಗಳು ಇಲ್ಲಿ ಹುಟ್ಟಿದ್ದು ಮತ್ತು ಪಸರಿಸಿದ್ದುದು. ಈ ಮುಕ್ತ ಚಿಂತನೆಯನ್ನು ಕೆಲವರು ತಮ್ಮ ಪಂಥ, ಭಾಷೆ, ಪ್ರಭುತ್ವಗಳನ್ನು ಹೇರಲು ಬಳಸಿಕೊಂಡರು, ಬಳಸಿಕೊಳ್ಳುತ್ತಿದ್ದಾರೆ. ಹಾಗೆಯೇ ಆ ಹೇರಿಕೆಯ ವಿರುದ್ಧದ ಹೋರಾಟ ಕೂಡ. ಈ ಘರ್ಷಣೆ ಸಾರ್ವಕಾಲಿಕ. ಇದೆಲ್ಲದರ ನಡುವೆಯೂ ಎದ್ದು ಕಾಣುವುದು ಭಾರತದ ಮುಕ್ತತೆ! ವಿಪರ್ಯಾಸವೆಂದರೆ, ಇಂದಿನ ಭಾರತೀಯ ತನ್ನ ಅಗಾಧ ಮುಕ್ತತೆಯ ಪಂಪರೆಯನ್ನು ಮರೆತು ಇತರೆ ದೇಶಗಳ ಮುಕ್ತತೆಯನ್ನು ಕೊಂಡಾಡುತ್ತಿದ್ದಾನೆ.
ಇಂತಹ ಇತಿಹಾಸದ ವಿಶ್ಲೇಷಣೆಗಳು, ಮತ್ತು ಶಾಸ್ತ್ರೋಕ್ತ ಸಂಶೋಧನೆಗಳು ಹೆಚ್ಚು ಹೆಚ್ಚಾಗಿ ಬಂದು ಭಾರತದ ಪರಂಪರೆಯನ್ನು ಕಟ್ಟಿಕೊಡಲು ಓದುಗರ ಪ್ರೋತ್ಸಾಹ ಅತ್ಯಾವಶ್ಯಕ.
ಬನ್ನಿ, ನಮ್ಮ ಪರಂಪರೆಯ ಒಂದು ಪಕ್ಷಿನೋಟವನ್ನು ನೋಡೋಣ. ಭಾರತ ಒಂದು ಮರುಶೋಧನೆಯನ್ನು ಇಲ್ಲಿ ಕೊಳ್ಳಬಹುದು.

No comments:

Post a Comment