ಶ್ರೀಲಂಕಾ ಆಹಾರ ಅಭಾವಕ್ಕೆ ಸಾವಯವ ಕೃಷಿ ಕಾರಣವೇ!?

 ಶ್ರೀಲಂಕಾ ಆಹಾರ ಅಭಾವಕ್ಕೆ ಸಾವಯವ ಕೃಷಿ ಕಾರಣವೇ!


ಶ್ರೀಲಂಕಾ ಅಧ್ಯಕ್ಷ ಗೊತಬಾಯ ರಾಜಪಕ್ಸ ಈ ವರ್ಷದ ಆರಂಭದಲ್ಲಿ ತಮ್ಮ ದೇಶ ಸಂಪೂರ್ಣವಾಗಿ ಸಾವಯವ ಕೃಷಿಯ ದೇಶವೆಂದು ಘೋಷಿಸಿ ಎಲ್ಲಾ ರಾಸಾಯನಿಕ ಗೊಬ್ಬರಗಳನ್ನು ಬ್ಯಾನ್ ಮಾಡಿದರು. ಈ ರಾಸಾಯನಿಕ ಗೊಬ್ಬರದ ಬಹಿಷ್ಕಾರ ಶ್ರೀಲಂಕಾದಲ್ಲಿ ಆಹಾರ ಅಭಾವವನ್ನುಂಟು ಮಾಡಿದೆ ಎಂದು ಸುದ್ದಿ ಮಾಧ್ಯಮಗಳು ಸುದ್ದಿ ಮಾಡಿ ಸಾವಯವ ಕೃಷಿಯನ್ನು ಇಂದು ಒರೆಗೆ ಹಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ಶ್ರೀಲಂಕಾದ ಆಹಾರ ಅಭಾವಕ್ಕೆ ಸಾವಯವ ಕೃಷಿಯೇ ಪ್ರಮುಖ ಕಾರಣವೇ? ನೋಡೋಣ ಬನ್ನಿ.


ಶ್ರೀಲಂಕಾ ಕಳೆದೆರಡು ದಶಕಗಳಿಂದಲೂ ಸಾವಯವ ಕೃಷಿಯಲ್ಲಿ ಸಾಕಷ್ಟು ಪ್ರಗತಿ ಮಾಡಿದೆ. ಶ್ರೀಲಂಕಾದ ಸಾವಯವ ಕೃಷಿ ಪದ್ದತಿಯಲ್ಲಿ ಬೆಳೆದ ಕೆಂಪು ಅಕ್ಕಿ, ಮಸಾಲೆ ಪದಾರ್ಥಗಳಿಂದ ತೆಂಗಿನ ಸೇಂದಿಯವರೆಗೆ ಸಾವಯವ ಕೃಷಿ ಉತ್ಪನ್ನಗಳು ವಿಶ್ವಾದ್ಯಂತ ಮಾರುಕಟ್ಟೆಯನ್ನು ಕಂಡುಕೊಂಡಿದ್ದವು. ಆದರೂ ೨೦೧೯ರಲ್ಲಿ ಸುಮಾರು ಹದಿನೈದು ಲಕ್ಷ ಹೆಕ್ಟೇರ್ ಕೃಷಿ ಭೂಮಿಯನ್ನು ಹೊಂದಿದ್ದ ಶ್ರೀಲಂಕಾದಲ್ಲಿ ಸುಮಾರು ಒಂದು ಲಕ್ಷ ಹೆಕ್ಟೇರ್ ಭೂಮಿ ಸಾವಯವ ಕೃಷಿಗೆ ಒಳಪಟ್ಟಿತ್ತು, ಮಾತ್ರ!  ಹಾಗಾಗಿ ಸಾವಯವ ಕೃಷಿಯಲ್ಲಿ ದಾಪುಗಾಲಿನ ಪ್ರಗತಿಯಾಗುತ್ತಿದ್ದರೂ ಅದನ್ನೇ ನಂಬಿಕೊಳ್ಳುವಷ್ಟು ಪ್ರಗತಿ ಅದಾಗಿರಲಿಲ್ಲ. ಅದಲ್ಲದೇ ಆಹಾರ ಸಾಮಗ್ರಿ ಶ್ರೀಲಂಕಾದ ಪ್ರಮುಖ ಅಮದುಗಳಲ್ಲೊಂದು ಕೂಡ!


ಇದೆಲ್ಲದರ ಅರಿವಿದ್ದೇ ೨೦೧೯ರಲ್ಲಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂದಸೇನ ಗೊಟಬಾಯ ರಾಜಪಕ್ಸ ವಿದೇಶಗಳಿಂದ ಅಮದಾಗುವ ರಾಸಾಯನಿಕ ಗೊಬ್ಬರಗಳ ಮೇಲೆ ಸಬ್ಸಿಡಿ ಕೊಡುವುದಾಗಿ ಘೋಷಿಸಿದ್ದರು. ಹೀಗಿದ್ದಾಗ ದಿಢೀರೆಂದು ೨೦೨೧ರ ಆರಂಭದಲ್ಲಿ ರಾಸಾಯನಿಕ ಗೊಬ್ಬರ ಬಳಸುವುದನ್ನೇ ನಿಷೇಧಿಸಿ ಸಂಪೂರ್ಣ ಸಾವಯವ ಕೃಷಿಗೆ ದೇಶವನ್ನಳವಡಿಸಲು ಈ ಅಧ್ಯಕ್ಷರು ಘೋಷಿಸಿದರೇಕೆ?


ಶ್ರೀಲಂಕಾದ ಆರ್ಥಿಕ ಪರಿಸ್ಥಿತಿ ೨೦೧೫/೧೬ ರಲ್ಲೇ ಹದಗೆಟ್ಟಿತ್ತು. ಇದನ್ನು ಸರಿಪಡಿಸಲು ಅಂದಿನ ಸಿರಿಸೇನಾ-ವಿಕ್ರಮಸಿಂಘೆ ಆಡಳಿತ ’ದರ ನೀತಿ ಮಾರ್ಗ’ ಯಾನೆ ಪಾಲಿಸಿ ರೇಟ್ ಕಾರಿಡಾರ್ ಅನ್ನು ಜಾರಿಗೆ ತಂದಿತ್ತು. ಆದರೆ ಈ ದರ ನೀತಿ ಮಾರ್ಗವನ್ನು ಸರಿಯಾಗಿ ರಕ್ಷಿಸಿಕೊಳ್ಳುವ ಮಾರ್ಗವನ್ನು ಕಂಡುಕೊಳ್ಳದಿದ್ದರೆ ಆರ್ಥಿಕ ಸಂಕಷ್ಟ ಕಟ್ಟಿಟ್ಟ ಬುತ್ತಿ ಎಂದು ಆರ್ಥಿಕ ತಜ್ಞರು ಎಚ್ಚರಿಸಿದ್ದರು. ಅದಲ್ಲದೆ 2005 ರಿಂದ 2015ರವರೆಗೆ ಬೃಹತ್ ಯೋಜನೆಗಳಿಗಾಗಿ ಶ್ರೀಲಂಕಾ ಚೈನಾದಿಂದ ಬಿಲಿಯನ್ನುಗಟ್ಟಲೆ ಸಾಲ ಪಡೆದಿತ್ತು. ಈ ಸಾಲದ ಒಂದು ಬಾಬ್ತಾದ ಒಂದೂವರೆ ಬಿಲಿಯನ್ ಡಾಲರನ್ನು 2017ರಲ್ಲಿ ಕಟ್ಟಲಾಗದೆ ಚೀನೀ ಕಂಪೆನಿಯೊಂದಕ್ಕೆ ಹಂಬಂಟೋಟ ಬಂದರನ್ನು 99 ವರ್ಷಗಳ ಕಾಲಕ್ಕೆ ಲೀಸಿಗೆ ಕೊಟ್ಟಿದೆ.


ಹೀಗೆ ಆರ್ಥಿಕ ಸಂಕಷ್ಟಗಳನ್ನು ಬೆನ್ನಿಗೆ ಕಟ್ಟಿಕೊಂಡೇ 2019ರಲ್ಲಿ ಅಧಿಕಾರ ವಹಿಸಿಕೊಂಡ ರಾಜಪಕ್ಸ, ಬೀಳುಗತಿಯಲ್ಲಿದ್ದ ವಿದೇಶಿ ವಿನಿಮಯವನ್ನು ತಹಬದಿಗೆ ತಂದು ಸುಸ್ಥಿರಗೊಳಿಸುವುದಾಗಿ ಭರವಸೆಯನ್ನು ಸಹ ನೀಡಿದ್ದರು. 


ಇದೆಲ್ಲದರ ನಡುವೆಯೂ ಒಂದು ತಾತ್ಕಾಲಿಕ ಆರ್ಥಿಕ ಹಿಂಜರಿತದ ನಂತರ ಮಂದ ಏರುಗತಿಯ ಆರ್ಥಿಕ ಪ್ರಗತಿ ಬರಲಿದೆ, ಏಕೆಂದರೆ ಇದು ಸೈಕ್ಲಿಕಲ್ ಎಂದು ವಿಶ್ಲೇಷಕರು ಅರ್ಥೈಸಿದ್ದರು.


ಆದರೆ ಆ ಸೈಕ್ಲಿಕಲ್ ಆರ್ಥಿಕ ಚಕ್ರವನ್ನು ಪಂಚರ್ ಮಾಡಿದ್ದುದು ಕೋವಿಡ್ ೧೯!


ರಾಜಪಕ್ಸೆಯ ಎಲ್ಲಾ ಪ್ಲ್ಯಾನುಗಳನ್ನು ತಲೆಕೆಳಗಾಗಿಸಿದ ಕೋರೋನಾ ದೇಶವನ್ನು ಹಿಂದೆಂದೂ ಕಾಣದಂತಹ ಆರ್ಥಿಕ ಸಂಕಷ್ಟಕ್ಕೆ ತಳ್ಳಿತು. ಕೋರೋನಾ ಉಂಟು ಮಾಡಿದ ಆರ್ಥಿಕ ಸಂಕಷ್ಟಗಳು ಹಲವಾರು! ವಿದೇಶಿ ವಿನಿಮಯ ತರುತ್ತಿದ್ದ ಪ್ರವಾಸೋದ್ಯಮವನ್ನು ಕೋವಿಡ್ 19 ಸ್ಥಗಿತಗೊಳಿಸಿತು.  ಸಾವಯವ ಕೃಷಿ ಉತ್ಪನ್ನಗಳು ಅಂತರಿಕವಾಗಿಯೇ ಉಪಯೋಗಿಸಲ್ಪಟ್ಟು ಅವುಗಳ ಆಮದು ಸ್ಥಗಿತಗೊಂಡಿತು. ಅದಾಗಲೇ ಹಳ್ಳ ಹಿಡಿದಿದ್ದ ವಿದೇಶಿ ವಿನಿಮಯದ ಮೀಸಲು ನಿಧಿ ಸಹ ಬರಿದಾಗಿ ಇದೇ 2021ರ ಏಪ್ರಿಲ್ ತಿಂಗಳಲ್ಲಿ ವಿದೇಶಿ ವಿನಿಮಯ ಮೀಸಲು ನಿಧಿಗಾಗಿಯೇ 500 ಮಿಲಿಯನ್ ಡಾಲರ್ ಸಾಲವನ್ನು ಮತ್ತೆ ಚೈನಾದಿಂದ ಪಡೆಯಲಾಯಿತು. ಆದರೂ ಪರಿಸ್ಥಿತಿ ತಹಬದಿಗೆ ಬರಲಿಲ್ಲ. ೨೦೧೮ರಲ್ಲಿ ಒಂದು ಡಾಲರಿಗೆ ೧೬೦ ರೂಪಾಯಿಯಿದ್ದದ್ದು ೨೦೧೯ಕ್ಕೆ ೧೮೦ ಆಗಿ ಇಂದು ೨೦೦ ರೂಪಾಯಿಯಾಗಿದೆ. ವಿದೇಶಿ ವಿನಿಮಯವನ್ನು ತಹಬದಿಗೆ ತರುತ್ತೇನೆ ಎಂದಿದ್ದ ರಾಜಪಕ್ಸರ ಕೈಗಳನ್ನು ಕೋರೋನಾ ಕಟ್ಟಿಹಾಕಿಬಿಟ್ಟಿತು. ಶ್ರೀಲಂಕಾದ ಕ್ರೆಡಿಟ್ ರೇಟಿಂಗ್ ತಪ್ಪಿ ಬ್ಯಾಂಕಿಂಗ್ ವ್ಯವಸ್ಥೆ ಅಲ್ಲೋಲಕಲ್ಲೋಲವಾಗಿ ಬಡ್ಡಿ ದರ ಮಿತಿ ಮೀರಿತು. ಬಡ್ಡಿದರಕ್ಕೆ ತಕ್ಕಂತೆ ಹಣದುಬ್ಬರವೇರಿ ಶ್ರೀಲಂಕಾದ ರೂಪಾಯಿ ಮತ್ತಷ್ಟು ಪಾತಾಳಕ್ಕಿಳಿಯಿತು. ವಿದೇಶಿ ವಿನಿಮಯ ದುರ್ಲಭವಾಯಿತು!


ಈಗ ಅನಿವಾರ್ಯವಾಗಿ ರಾಜಪಕ್ಸ ಆಡಳಿತವು ರಾಸಾಯನಿಕ ಗೊಬ್ಬರಗಳಿಗೆ ಸಬ್ಸಿಡಿ ಕೊಡುವುದು ಬಿಡಿ, ಅಮದು ಮಾಡಿಕೊಳ್ಳುವುದೇ ಕಷ್ಟವಾಗಿ ಅಂತಿಮವಾಗಿ ಅಮದನ್ನು ಸ್ಥಗಿತಗೊಳಿಸುವಂತಹ ಆರ್ಥಿಕ ಬಿಕ್ಕಟ್ಟು ಬಂದೆರಗಿದೆ. ಆಹಾರ ಸಾಮಗ್ರಿ ಮತ್ತು ರಾಸಾಯನಿಕ ಗೊಬ್ಬರಗಳೆರಡನ್ನೂ ಆಮದು ಮಾಡಿಕೊಳ್ಳುವುದು ದುಸ್ತರವಾದಾಗ ಅಲ್ಲಿನ ಆಡಳಿತವೇನು ಮಾಡಬಲ್ಲದು?


ಹಾಗಾಗಿಯೇ ರಾಜಪಕ್ಸ ದೇಶವಿನ್ನು ಸಂಪೂರ್ಣ ಸಾವಯವ ಕೃಷಿಯನ್ನು ಅಳವಡಿಸಿಕೊಳ್ಳಬೇಕು ಎಂದು ತುರ್ತಾಗಿ ಘೋಷಿಸಿದ್ದಾರೆ. ಆದರೆ ನಮ್ಮಲ್ಲಿ ಹಣವಿಲ್ಲ, ಪರಿಸ್ಥಿತಿ ಹದಗೆಟ್ಟಿದೆ ಎಂಬ ತೆರೆದ ಗುಟ್ಟಿನ ಸತ್ಯವನ್ನು ಮನವರಿಕೆ ಮಾಡಿಕೊಡದೆ ಪ್ರಪಂಚದಲ್ಲಿಯೇ ಮೊದಲ "ಸಂಪೂರ್ಣ ಸಾಯವಯ ದೇಶ" ಶ್ರೀಲಂಕಾ ಆಗಬೇಕು ಎಂಬ ಹುಸಿ ಅಭಿಮಾನದ ಅಭಿಯಾನವಾಗಿ ಘೋಷಿಸಿಬಿಟ್ಟಿದ್ದಾರೆ. ಏಕೆಂದರೆ ಶ್ರೀಲಂಕಾದ ಹಿಂದಿನ ಸರ್ಕಾರಗಳು ಯಾವುದೇ ವಿರೋಧಿ ಬಣದ್ದಲ್ಲದೆ ಇವರ ಸೋದರನ ಬಣವೇ ಆಗಿತ್ತು!!! LTTEಯನ್ನು ಮಟ್ಟ ಹಾಕಿದರೆಂಬ ಏಕೈಕ ಕಾರಣಕ್ಕಾಗಿ ಈ ರಾಜಪಕ್ಸ ಕುಟುಂಬಕ್ಕೆ ಸಿಂಹಳೀಯರು 2009ರಿಂದಲೂ ಬೆಂಬಲಿಸಿಕೊಂಡು ಬಂದಿದ್ದಾರೆ.


ಆದರೆ ಈ ಘೋಷಣೆ ಅಲ್ಲಿನ ದುರಾಡಳಿತ, ಊಳಿಗಮಾನ್ಯ ಪ್ರಜಾಪ್ರಭುತ್ವದ ಆರ್ಥಿಕ ತುರ್ತುಪರಿಸ್ಥಿತಿಯ ಭಾಗವಾಗಿಯೇ ಹೊರತು ಇನ್ಯಾವುದೇ ಆರ್ಥಿಕ, ಸಾಂಸ್ಕೃತಿಕ, ಸ್ವಾಭಿಮಾನ, ಘನತೆಯ ಭಾಗವಾಗಿ ಅಲ್ಲವೆಂಬುದು ಎಲ್ಲರೂ ಬಲ್ಲ ಗುಟ್ಟು! ಈ ಅರ್ಥಿಕ ತುರ್ತುಪರಿಸ್ಥಿತಿ ಕೇವಲ ರಾಸಾಯನಿಕ ಗೊಬ್ಬರವಲ್ಲದೆ ಅನೇಕ ಆಹಾರ ಸಾಮಗ್ರಿಗಳು, ಔಷಧಿಗಳು ಮತ್ತಿತರೆ ಮೂಲಭೂತ ಸೌಕರ್ಯಗಳ ವಸ್ತುಗಳ ಅಮದಿಗೂ ಕುತ್ತುಂಟಾಗಿ ಇಂದು ಆಹಾರ ಅಭಾವವಲ್ಲದೇ ಆರೋಗ್ಯ, ಮೂಲಸೌಕರ್ಯಗಳ ಅಭಾವವನ್ನೂ ಉಂಟು ಮಾಡಿವೆ. ಇದೆಲ್ಲದರ ಜೊತೆಗೆ ಕೊರೋನಾ ಸಹ ತಾಂಡವವಾಡುತ್ತಿದೆ.


ಇದನ್ನು ಕೆಲವರು ಭಾರತದಲ್ಲಿನ ಮೋದಿ ಸರ್ಕಾರದೊಂದಿಗೆ ರಾಜಪಕ್ಸ ಆಡಳಿತವನ್ನು ಹೋಲಿಸುತ್ತಾರೆ. ರಾಜಪಕ್ಸ ರಾಷ್ಟ್ರೀಯತೆ, ಮತ್ತು ಸಾವಯವ ಕೃಷಿಯನ್ನು ಘನತೆಯಾಗಿಸಿದ್ದಾರೆನ್ನುತ್ತ ಅದನ್ನು ಮೋದಿಯವರ ರಾಷ್ಟ್ರೀಯತೆ, ಆತ್ಮನಿರ್ಭರ, ಮತ್ತು ಹಿಂದುತ್ವಕ್ಕೆ ತುಲನೆ ಮಾಡುತ್ತ ಅಭಾಸವನ್ನುಂಟು ಮಾಡುತ್ತಿದ್ದಾರೆ. ಸದ್ಯದ ಶ್ರೀಲಂಕಾ ಪರಿಸ್ಥಿತಿ ಇಂದಿನದಲ್ಲ. ಅದು 2005ರಿಂದಲೂ ಬೆಳೆಯುತ್ತಾ ಬಂದಿದೆ! ಹಾಗಾಗಿ ಶ್ರೀಲಂಕಾದ ಆರ್ಥಿಕ ತುರ್ತುಪರಿಸ್ಥಿತಿಯನ್ನು ಭಾರತದೊಂದಿಗೆ ತುಲನೆ ಮಾಡುವುದು ಸರಿಯಲ್ಲ. ಎಡಪಂಥೀಯರು ಹಾಗೆ ತುಲನೆ ಮಾಡಿ ಅನವಶ್ಯಕವಾಗಿ ಬಲಪಂಥೀಯರಿಗೆ ಹಿಂದಿನ ಸರ್ಕಾರಗಳನ್ನು ಅದರಲ್ಲೂ ಮನಮೋಹನ್ ಸಿಂಗರಿಂದ ನೆಹರೂರವರೆಗಲ್ಲದೆ ರಾಹುಲ್ ಗಾಂಧಿವರೆಗೆ ಕುಟುಂಬ ರಾಜಕಾರಣವನ್ನು ಇನ್ನಿಲ್ಲದಂತೆ ಹೀಯಾಳಿಸಲು ಅವಕಾಶ ಮಾಡಿಕೊಡುವುದು ಸಲ್ಲ! ಮೋದಿ ಸರ್ಕಾರದ ವೈಫಲ್ಯಗಳು ಬೇರೆಯದೇ ಆದ ಆಯಾಮದಲ್ಲಿವೆ. ಅವುಗಳನ್ನು ಈವರೆಗೆ ಅವರ ವಿರೋಧಿಗಳು ಸಮರ್ಪಕವಾಗಿ ಮಂಡಿಸಿಲ್ಲ.


ಇರಲಿ, ಒಟ್ಟಿನಲ್ಲಿ ಶ್ರೀಲಂಕಾದಲ್ಲಿ ಮುಂದೆಂದೋ ಸ್ಪೋಟಿಸುತ್ತಿದ್ದ ಅಥವಾ ಠುಸ್ ಎನ್ನುತ್ತಿದ್ದ ಒಂದು ಬಾಂಬ್ ಇಂದೇ ಸ್ಪೋಟಿಸುವಂತೆ ಕೊರೋನಾ ಬತ್ತಿ ಇಟ್ಟುಬಿಟ್ಟಿದೆ. ಇಂತಹ ಊಳಿಗಮಾನ್ಯ ಪ್ರಜಾಪ್ರಭುತ್ವ ಹೊಂದಿರುವ ಚಿಕ್ಕ ಚಿಕ್ಕ ರಾಷ್ಟ್ರಗಳ ಸಂಕಷ್ಟಗಳನ್ನು ಶ್ರೀಲಂಕಾ ಮೊದಲನೆಯದಾಗಿ ತೆರೆದಿಡುತ್ತಿದೆ. ಇದೇ ರೀತಿಯ ಆರ್ಥಿಕ ಸಂಕಷ್ಟಗಳಿಗೀಗಾಗಲೇ ಒಳಗಾಗಿರುವ ಅನೇಕ ಊಳಿಗಮಾನ, ಊಳಿಗಮಾನ್ಯ ಪ್ರಜಾಪ್ರಭುತ್ವದ ಸಣ್ಣ ಸಣ್ಣ ರಾಷ್ಟ್ರಗಳ ಆರ್ಥಿಕ ಸಂಕಷ್ಟಗಳು ಒಂದೊಂದಾಗಿ ಮುಂದೆ ಅನಾವರಣಗೊಳ್ಳಲಿವೆ. ಇವುಗಳ ಚೇತರಿಕೆಗೆ ಕೋರೋನಾ ಮರ್ಮಾಘಾತವನ್ನು ಕೊಡುತ್ತಿದೆ.


ಇದಕ್ಕೆ ಶ್ರೀಲಂಕಾ ಕೇವಲ ಮೊದಲ ಬಲಿಯಾಗಿದೆಯಷ್ಟೆ! ಭಾರತ ಇಂತಹ ಸಂಕಷ್ಟಕ್ಕೆ ಒಳಗಾಗಬಹುದೇ? ಖಂಡಿತ ಆಗಬಹುದು, ಏಕೆಂದರೆ ಭಾರತದ ಪ್ರಜಾಪ್ರಭುತ್ವ ಸಹ ಊಳಿಗಮಾನ ಪ್ರಜಾಪ್ರಭುತ್ವದ ಒಂದು ಟೈಮ್ ಬಾಂಬ್! ಕರ್ನಾಟಕದಲ್ಲಿನ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ರೀತಿಯಲ್ಲಿಯೇ ಭಾರತದ ಎಲ್ಲಾ ರಾಜ್ಯದ ಪಂಚಾಯತಿ ಮಟ್ಟದಲ್ಲಿರುವುದೂ ಇದೇ ಊಳಿಗಮಾನ ಪ್ರಜಾಪ್ರಭುತ್ವವಲ್ಲವೇ!?!

No comments:

Post a Comment