ನಾ ಕಂಡಂತೆ ಸಿದ್ದಲಿಂಗಯ್ಯ!

 ನಾನು ಆಗ ಐದನೇ ತರಗತಿಯಲ್ಲಿದ್ದೆ. ಅದ್ಯಾರೋ ನಮ್ಮಮ್ಮನಿಗೆ ತಮ್ಮ ಮಗ ಯೋಗಾಸನ ಮಾಡುತ್ತಾನೆ. ಇದನ್ನು ಮಾಡುವುದರಿಂದ ಮಕ್ಕಳ ಬುದ್ದಿ ಚುರುಕಾಗುತ್ತದೆ ಎಂದು ತಿಳಿಸಿಬಿಟ್ಟಿದ್ದರು. ಸರಿ, ನಮ್ಮಮ್ಮ ನಮ್ಮಪ್ಪನಿಗೆ ಹೇಳಿ ನಾನು ಬೆಳ್ ಬೆಳಿಗ್ಗೆ ಎದ್ದು ಎದ್ದು ಯೋಗಾಸನ ಮಾಡಲು ನಮ್ಮೂರಾದ ದಾವಣಗೆರೆಯ ಹೈಸ್ಕೂಲ್ ಮೈದಾನಕ್ಕೆ ಹೋಗುವಂತಾಗಿತ್ತು. ಹಾಗೆ ಹೋಗುವಾಗ ಗವ್ ಎನ್ನುವ ಬೆಳಗಿನ ನಿಶ್ಶಬ್ದಕ್ಕೆ ಗಟ್ಟಿಯಾಗಿ ಅಂಗಡಿ ಮುಂಗಟ್ಟುಗಳ ಬೋರ್ಡುಗಳನ್ನು ಹಾಡಿನ ರೂಪದಲ್ಲಿ ಓದುತ್ತ ಸಾಗುತ್ತಿದ್ದೆ.


ಒಂದು ಮುಂಜಾನೆ ಹಾಗೆ ಹೋಗುವಾಗ ಅಂಡರ್ ಬ್ರಿಡ್ಜಿನ ಗೋಡೆಯ ಮೇಲೆ "ಯಾರಿಗೆ ಬಂತು ಎಲ್ಲಿಗೆ ಬಂತು 47ರ ಸ್ವಾತಂತ್ರ್ಯ..." ಎಂಬ ವಿಶೇಷ ಬರಹ ಕಾಣಿಸಿತು. ಅಲ್ಲಿಯವರೆಗೆ ಅಂಗಡಿ ಬೋರ್ಡುಗಳಲ್ಲದೆ ದೇಶದ ಆಗುಹೋಗುಗಳಾದ ಬೆಲೆ ಏರಿಕೆ, ಮುಷ್ಕರ, ಬಂದ್, ಸಿನೆಮಾ, ನಾಟಕಗಳ ಶೀರ್ಷಿಕೆ, ಇತ್ಯಾದಿ ವರ್ತಮಾನದ ಸಂಗತಿಗಳನ್ನು ಓದಿ ಶಿಶುಗೀತೆಗಳಂತೆ ಹಾಡಿಕೊಳ್ಳುತ್ತಿದ್ದ ನನಗೆ ಈ ಬರಹ ಅತ್ಯಂತ ಆಕರ್ಷಣೀಯವೆನಿಸಿತು. ಮೈಯಲ್ಲಿ ಏನೋ ಒಂದು ಆವೇಶ, ಪುಳಕಗಳು ಒಟ್ಟೊಟ್ಟಿಗೆ ಚಿಮ್ಮಿದವು. ತತ್ ಕ್ಷಣಕ್ಕೆ ಆ ಉದ್ಘೋಷ ನಮ್ಮ ಹೊಸ ಶಿಶುಗೀತೆಗೆ ಪ್ರಾಸವಾಯಿತು. ನಂತರ "ಪೊಲೀಸರ ಬೂಟಿಗೆ ಬಂತು, ಟಾಟಾ ಬಿರ್ಲಾ ಜೇಬಿಗೆ ಬಂತು..." ಎಂಬ ಸಾಲುಗಳನ್ನೂ ಕಲಿತ ನನ್ನ ಸಹಪಾಠಿಗಳು ಇದಕ್ಕೆ ನಮ್ಮವೇ ಆದ ಸಾಲುಗಳನ್ನು ಸೇರಿಸಿ ನಿತ್ಯನೂತನವಾಗಿ ಇದನ್ನು ಹಾಡಿಕೊಳ್ಳುತ್ತಿದ್ದೆವು.


ಹೀಗೆ ನಮಗೆ ನಮ್ಮದೇ ಆದ ಸಾಲುಗಳನ್ನು ಸೇರಿಸಿ ನಮ್ಮದೆನಿಸಿಕೊಳ್ಳುವ, ಮಾನವನ ಅತ್ಯಂತ ನಿಸರ್ಗದತ್ತವಾಗಿರುವ ಪ್ರತಿಭಟಿಸುವ instinct ಗುಣವನ್ನು ನಮ್ಮರಿವಿಗೆ ಬಾರದಂತೆ ಉದ್ದೀಪಿಸುವ ಒಂದು ಅತ್ಯಂತ ಅವಿಷ್ಕಾರಕವೆಂಬ ಗೀತೆಯನ್ನು ಕೊಟ್ಟು ನಮಗೆ ಸಿದ್ದಲಿಂಗಯ್ಯ ಪರಿಚಿತರಾದರು! ಹೀಗೆ ನಮಗಷ್ಟೇ ಅಲ್ಲದೆ ರಾತ್ರೋರಾತ್ರಿ ಇಡೀ ಕರ್ನಾಟಕಕ್ಕೆ ಪರಿಚಿತರಾದರೆಂದು ನಂತರ ತಿಳಿಯಿತು. 


ಕಾಕತಾಳೀಯವೆಂಬಂತೆ ಸಿದ್ದಲಿಂಗಯ್ಯನವರ ಪ್ರಥಮ ಕೃತಿಯೂ ದಾವಣಗೆರೆಯಲ್ಲೇ ಬಿಡುಗಡೆಯಾಗಿತ್ತು ಎನ್ನುವುದು ಇಲ್ಲಿ ಉಲ್ಲೇಖಾರ್ಹ. ಅಲ್ಲಿಯವರೆಗೆ ಈ ದಲಿತ/ಶೋಷಿತ/ದಮನಿತರ ಜಾಗೃತಿ ಎಂಬ ಸಂಕಥನವನ್ನು ಕೆಲವು ದಲಿತೇತರ ಸಾಹಿತಿಗಳು ಮೈದಡವಿ ಕಕ್ಕುಲಾತಿ ತೋರುವ ಅಬ್ಬಬ್ಬಾ ಎಂದರೆ ನಿಮ್ಮ ಮಕ್ಕಳನ್ನು ಜೀತಕ್ಕೆ ಬಿಡಬೇಡಿ ಎನ್ನುವಂತೆ ಕಟ್ಟಿಕೊಟ್ಟಿದ್ದರು. ಅದೇ ಸಂಕಥನದ ಅಡಿಯಲ್ಲಿ "ಜೀತಕ್ಕಿದ್ದ ಸಿದ್ದನ ಹುರಿಗಟ್ಟಿದ ಮೈಯನ್ನು ನೋಡಿ ಗೌಡನ ಮಗಳು ಭಾರತಿಗೆ ಪ್ರೇಮಾಂಕುರವಾಯಿತು" ಎಂಬಂತಹ ಕಥನಗಳಿಂದ ದಮನಿತರ ಹೋರಾಟವನ್ನು ಪ್ರೇಮಕ್ಕೂ, ಕಾಮಕ್ಕೂ, ಧಿಕ್ಕಾರಕ್ಕೂ ಥಳುಕು ಹಾಕಿ ಇಂತಹ ಸಾವಿರಾರು ಕತೆಗಳಿಗೆ ವೇದಿಕೆಯೊದಗಿಸಿದ್ದರೆ ಹೊರತು ಅಸಲಿಗೆ ಅದು ಹಕ್ಕೊತ್ತಾಯದ ಹೋರಾಟದ ರೂಪವನ್ನು ಅಷ್ಟಾಗಿ ಪಡೆದಿರಲಿಲ್ಲ ಎಂದೇ ನನ್ನರಿವಿಗೆ ಅಂದು ದಕ್ಕಿದ್ದುದು. ಇದರಿಂದ ಸಾಕಷ್ಟು ಪ್ರೇಮಿಗಳ ಕೊಲೆಯಾದವು, ಆತ್ಮಹತ್ಯೆಗಳಾದವು, ಊರು ಬಿಟ್ಟು ಕೆಲವರು ಅತಂತ್ರರೂ ಮತ್ತು ಸ್ವತಂತ್ರರೂ ಆದರು. ಅದನ್ನೇ ಕ್ರಾಂತಿ ಎಂದು ಸಾಕಷ್ಟು ಜನರು ನಂಬಿದ್ದರು ಅಥವಾ ನಂಬಿಸಲಾಗಿತ್ತು. ಈ ಎಲ್ಲಾ ಸಿದ್ಧ ಮಾದರಿಯ ಹೋರಾಟಗಳನ್ನು ರಾತ್ರೋರಾತ್ರಿ ದಮನಿತರ ಹಕ್ಕೊತ್ತಾಯವಾಗಿಸಿದ ಆದಿ ಪುರುಷ ಸಿದ್ದಲಿಂಗಯ್ಯ!


ಇರಲಿ, ಕ್ರಮೇಣ ಈ ಕ್ರಾಂತಿಗೀತೆಯ ಹರಿಕಾರರನ್ನು ನಮ್ಮೂರ ಲೈಬ್ರರಿಯಲ್ಲಿ ಮತ್ತಷ್ಟು ಓದಿಕೊಳ್ಳುತ್ತ ಬೆಳೆದೆ.

ಸಿದ್ಧಲಿಂಗಯ್ಯನವರನ್ನು ಓದಿಕೊಂಡಷ್ಟೂ ಅವರ ಅನುಭವ, ಅನುಭಾವ ನನ್ನದೇ ಎನಿಸಲಾರಂಭಿಸಿತು. ಒಂದೇ ರೀತಿಯ ಮಾನಸಿಕ ತುಮುಲ, ನೋವು, ಅವಮಾನಗಳನ್ನು ಅನುಭವಿಸುತ್ತಿದ್ದ ನನಗೂ ಸಿದ್ದಲಿಂಗಯ್ಯನವರ ನಡುವೆ ಒಂದೇ ಒಂದು ವ್ಯತ್ಯಾಸವಿತ್ತು.  ಅವರು ಸಮಾಜದ ತುಚ್ಛೀಕರಣದ ಕ್ವಾರಂಟೈನಿಗೊಳಗಾಗಿ ಈ ಮಾನಸಿಕ ತುಮುಲಕ್ಕೊಳಗಾಗಿದ್ದರೆ, ನಾನು ಸಮಾಜದ ಪೂಜೀಕರಣದ ಕ್ವಾರಂಟೈನಿಗೊಳಗಾಗಿ ನೋವು, ಸಂಕಟ ಅನುಭವಿಸುತ್ತಿದ್ದೆ.


ಹೀಗೆ ಸಿದ್ಧಲಿಂಗಯ್ಯನವರ ಬರಹಗಳಲ್ಲಿ ವ್ಯಕ್ತವಾಗಿದ್ದ ಸಾಮಾಜಿಕ ಕೀಳರಿಮೆಯ ಮೈಲಿಗೆಯ ಅಸ್ಪೃಶ್ಯತೆ, ಓರ್ವ ಜಂಗಮನ ಮೇಲರಿಮೆಯ ಮಡಿಯ ಅಸ್ಪೃಶ್ಯತೆಗೆ ತಾಳೆ ಹಾಕುತ್ತ ಸಿದ್ದಲಿಂಗಯ್ಯನವರನ್ನು ಓದಿಕೊಳ್ಳುತ್ತಿದ್ದ ನನಗೆ ಸಿದ್ದಲಿಂಗಯ್ಯನವರು ಆದರ್ಶಪ್ರಾಯರೆನಿಸತೊಡಗಿದರು. ಅವರ ಹಾಸ್ಯಪ್ರಜ್ಞೆ, ಬಂಡಾಯ, ನಿರ್ಭಿಡೆ ಮತ್ತು ತೆರೆದ ಮನಸ್ಸಿನಿಂದ ಎಲ್ಲವನ್ನೂ ಗ್ರಹಿಸುವ ವ್ಯಕ್ತಿತ್ವ ನನ್ನಲ್ಲಿ ಘನೀರ್ಭೂತಗೊಳ್ಳತೊಡಗಿದವು. ಆದರೆ ಈ ಕೀಳರಿಮೆ ಮತ್ತು ಮೇಲರಿಮೆಯ ಸಮಾನ ಅಂಶವಾದ ನಿಷೇಧದ ಕುರಿತು ಯಾವ ಮೇಲರಿಮೆ ವರ್ಗದ ವ್ಯಕ್ತಿ ಮಾತನಾಡಿರಲಿಲ್ಲ. ಈ ಮಾನಸಿಕ ತುಮುಲದ ಕುರಿತು ನನ್ನ "ರ ಠ ಈ ಕ"ದಲ್ಲಿ  ಸಿದ್ಧಲಿಂಗಯ್ಯನವರಿಂದ ಘನೀರ್ಭೂತಗೊಂಡ ಆ ಎಲ್ಲಾ ಆದರ್ಶಪ್ರಾಯ ವ್ಯಕ್ತಿತ್ವದ ಅಂಶಗಳ ಕಾರಣವೇ ನಾನು ಆ ಮೇಲರಿಮೆ ನಿಷೇಧದ ಬಗ್ಗೆ ಬರೆಯಲು ಸಾಧ್ಯವಾಯಿತು. ಆ ಬರಹ ಹೀಗಿದೆ:


ಹೇಗೆ ಒಬ್ಬ ದಲಿತನ ನೋವನ್ನು ದಲಿತೇತರರು ಅರ್ಥ ಮಾಡಿಕೊಳ್ಳುವುದು ಸಾಧ್ಯವಿಲ್ಲವೆನ್ನುವರೊ ಹಾಗೆಯೇ ಓರ್ವ ಜಂಗಮನ ನೋವನ್ನು ಜಂಗಮೇತರರು ಅರ್ಥ ಮಾಡಿಕೊಳ್ಳುವುದೂ ಸಾಧ್ಯವಿಲ್ಲ. ಹೀಗೆ ಪ್ರತಿಯೊಂದು ಜಾತಿಯನ್ನೂ ಪರಸ್ಪರ ಅವಮಾನಿಸುವುದರಲ್ಲಿ ಭಾರತೀಯರೆಲ್ಲರೂ ಪರಿಣಿತರೇ ಆಗಿರುವುದರಿಂದ ಜಾತಿ ಸಂಚಿತ ಅವಹೇಳನವನ್ನು ಪ್ರತಿಯೊಬ್ಬನೂ ಅನುಭವಿಸಿರುತ್ತಾನೆ. ಒಬ್ಬನದು ಹೆಚ್ಚು ಮತ್ತೊಬ್ಬನದು ಕಡಿಮೆ ಎನ್ನುವುದೇ ಅಸಮಾನತೆ ಎನಿಸಿಬಿಡುತ್ತದೆ.


ದೈಹಿಕ ಸಂಕಷ್ಟದ ತಾರತಮ್ಯವನ್ನು ಅಳೆಯಬಹುದೇ ಹೊರತು ಮಾನಸಿಕ ತುಮುಲ, ಆಘಾತ, ಅವಮಾನಗಳ ಅಳತೆ ಯಾವ ಅಳತೆಗೋಲಿಗೂ ನಿಲುಕದ್ದು! ಪ್ರತಿಯೊಬ್ಬನ ಮಾನಸಿಕ ನೋವು ಒಂದೇ ತೆರನಾದದ್ದು ಎಂದು ಯಾವ ಮಾನಸಿಕ ತಜ್ಞನೂ ಸಾಮಾನ್ಯಗೊಳಿಸಿ ಸಮೀಕರಣವನ್ನು ಮಂಡಿಸುವುದಿಲ್ಲ. ಹಾಗಾಗಿ ಜಾತಿ ಅವಹೇಳನದ ಮಾನಸಿಕ ಆಘಾತವನ್ನು ಒಂದು ಜಾತಿಗೆ ಮಾತ್ರ ಸೀಮಿತಗೊಳಿಸುವುದು ಮೂಲಭೂತವಾಗಿ ತಪ್ಪೆನಿಸುತ್ತದೆ.


ಮೈಲಿಗೆಯೆಂದು ಊರ ಹೊರಗಿಟ್ಟು ಮುಟ್ಟಿಸಿಕೊಳ್ಳಬಾರದ ನಿಕೃಷ್ಟನೆನಿಸಿ ಯಾರ ಗಮನವನ್ನು ಸೆಳೆಯದೆ ಆದರೆ ಬಾಲ್ಯದ ಎಲ್ಲದನ್ನೂ ಅನುಭವಿಸುವ ಸ್ವಾತಂತ್ರ್ಯದ ಮಾನಸಿಕ ಸ್ಥಿತಿಗಿಂತಲೂ ಮಡಿಯೆಂದು ಅದನ್ನು ಮಾಡಬೇಡ ಇದನ್ನು ಮಾಡಬೇಡ, ಅವನ ಜೊತೆ ಹೋಗಬೇಡ, ಹಳ್ಳದಲ್ಲಿನ ಮೀನನ್ನು, ದಾರಿಯಲ್ಲಿನ ನಾಯಿಮರಿಯನ್ನು ಮುಟ್ಟಬೇಡ, ಇತರರ ಕೈಕಾಲು ಮುಟ್ಟಿ ಕುಸ್ತಿ ಆಡಬೇಡ, ಅಲ್ಲಿ ತಿನ್ನಬೇಡ, ಇಲ್ಲಿ ಉಣ್ಣಬೇಡ ಎಂಬ ಬಾಲ್ಯದ ಸಹಸ್ರ ಚಟುವಟಿಕೆಗಳನ್ನು ಕಟ್ಟಿಹಾಕಿಸಿಕೊಂಡು ಬಂಧಿಯಾಗಿ ಊರ ನಡುವಿದ್ದು ಎಲ್ಲರ ವಿಪರೀತ ಆದರದ ಮಾನಸಿಕ ಹಿಂಸೆಯನ್ನು ಅನುಭವಿಸುವವನ ಮನಸ್ಥಿತಿ ಇದೆಯಲ್ಲ ಅದನ್ನು ಅನುಭವಿಸಿಯೇ ತಿಳಿಯಬೇಕು. ಇನ್ನು ಬಡತನದ ಬೇಗೆಯನ್ನು ಸಮಾನವಾಗಿ ಈ ಬಾಲ್ಯಗಳಿಗೆ ತಟ್ಟಿಸಿದರೆ ಅದರ ಆಯಾಮವೂ ಮಡಿಯ ಮುಡಿಗೇ ಹೆಚ್ಚು ಸಂಚಕಾರದ ಆಯಾಮವನ್ನು ತರುವುದು. ಏಕೆಂದರೆ ಮಡಿಯ ಭಾರ ಹೊತ್ತ ಬಡವನಿಗೆ ಸಿಗುವ ಅವಕಾಶಗಳು ಅತ್ಯಂತ ಸೀಮಿತ.


ಇಂತಹ ಮಡಿಯ ಬಂಧನದ ಬಾಲ್ಯಕ್ಕಿಂತ ನನ್ನ ಮೈಲಿಗೆ ಮಿತ್ರರ ನಿರಾಳ ಸರ್ವತಂತ್ರ ಸ್ವಾತಂತ್ರ್ಯದ ಬಾಲ್ಯ ನನಗೆ ಅಚ್ಚುಮೆಚ್ಚೆನಿಸಿತ್ತು. ನನ್ನನ್ನು "ಅಯ್ಯ ಮಠದಯ್ಯ ಕುಂಡೆ ಕಟದಯ್ಯ, ಹೂಸು ಲೋಬಾನ, ಉಚ್ಚೆ ತೀರ್ಥ, ಹೇಲು ಪ್ರಸಾದ" ಎಂದು ಎಲ್ಲರೂ ಗೇಲಿ ಮಾಡುತ್ತಿದ್ದರೆ ನಾನು ಪ್ರತಿಯಾಗಿ ಇತರರನ್ನು ಗೇಲಿ ಮಾಡಲು ’ಅಯ್ಯ ಮಠದಯ್ಯ’ದಷ್ಟು ’ಕ್ರೂರ’ ಅಣಕಗಳೇ ಇರಲಿಲ್ಲ! 


ಹೊಗಳಿ ಹೊಗಳಿ ಎನ್ನ ಹೊನ್ನ ಶೂಲಕ್ಕೇರಿಸಿದಿರಯ್ಯಾ’ ಎನ್ನುವ ವಚನವನ್ನು ಹೊಗಳುವ ಪಂಡಿತ ಪಾಮರರು ನನ್ನ ಈ ರತ್ನಖಚಿತ ಚಿನ್ನದ ಕಂಝರದಿಂದ ಇರಿದು ಮಾನಸಿಕವಾಗಿ ಜರ್ಜರಿತಗೊಳಿಸುವ ಪರಿಯನ್ನು ಏಕೆ ಅರ್ಥ ಮಾಡಿಕೊಳ್ಳುತ್ತಿಲ್ಲವೆಂದು ಆಶ್ಚರ್ಯವಾಗುತ್ತಿತ್ತು.


ಅದೇ ಸಮಯದಲ್ಲಿ ನನ್ನ ಮಾದರಹಟ್ಟಿಯ ಸ್ನೇಹಿತರು "ಲೇ ಅಯ್ಯಪ್ಪ,  ನೀನು ಇನ್ಮ್ಯಾಲ ಮಾದರಹಟ್ಟಿ ಆನ್ನಂಗಿಲ್ಲ, ಗಾಂಧಿನಗರ ಅನ್ನಬಕು. ಇಲ್ಲಾ ಅಂದ್ರ ಇಂದ್ರಾ ಗಾಂಧಿ ಜೈಲಿಗೆ ಹಾಕುಸ್ತಾಳ" ಎಂದರು. ಆಹಾ! ಇಂತಹ ಒಂದು ರೂಲ್ ಅನ್ನು ’ಅಯ್ಯ ಮಠದಯ್ಯ’ ಎನ್ನುವವರಿಗೂ ತಂದರೆ ಎಂದು ಆಲೋಚಿಸುತ್ತ ರೋಮಾಂಚನಗೊಂಡಿದ್ದೆ. ಆದರೆ ಅಂತಹ ರೂಲ್ ಬರಲೇ ಇಲ್ಲ!  ಅದು ಇಂದಿರಾಗಾಂಧಿಯ ಮೊಮ್ಮಕ್ಕಳು ಪ್ರಧಾನಿಯಾದರೂ ಬರುವುದಿಲ್ಲವೆಂಬುದು ನಿಶ್ಚಿತವೇನೋ!


ನಮ್ಮ ಹಳೆಪೇಟೆಯ ಸುತ್ತಮುತ್ತಲ ಧರ್ಮಬೀರು ಜನ ಯಾವುದೇ ಹಬ್ಬ ತೇರು, ಗುಗ್ಗಳ, ಜಾತ್ರೆಗಳಲ್ಲದೆ ಎಲ್ಲಾ ಕಾರ್ತಿಕ, ಹುಣ್ಣಿಮೆ, ಅಮವಾಸ್ಯೆಗಳನ್ನೂ ಸೇರಿಸಿಕೊಂಡು ಅವುಗಳ ಮೇಲೆ ಹಲವಾರು ಬಾರಿ ಸುಖಾಸುಮ್ಮನೆ ಕೂಡ ಐದು ಜನ ಜಂಗಮರನ್ನು ಬಿನ್ನಹಕ್ಕೆ ಕರೆದು ಊಟ ಮಾಡಿಸಿ ಒಂದೂಕಾಲು ರೂಪಾಯಿಯ ದಕ್ಷಿಣೆ ಕೊಟ್ಟು ಕಳುಹಿಸುತ್ತಿದ್ದರು. ಶತಮಾನಗಳ ಮೊದಲೇ ಸಾಮಾಜಿಕ ಪರಿಸ್ಥಿತಿಗಳು ಸುಧಾರಿಸಿ ಊರಿಂದೂರಿಗೆ ಲೋಕ ಸಂಚಾರದಲ್ಲಿರುತ್ತಿದ್ದ ಜಂಗಮರು ಸ್ಥಾವರಗೊಂಡರೂ ದಾಸೋಹವನ್ನು ನಿಲ್ಲಿಸಲು ಶರಣರು ಸಿದ್ಧರಿಲ್ಲದೆ ಬಿನ್ನಹದ ದಾಸೋಹ ನಡೆದೇ ಬಂದಿತ್ತು! ಹಾಗಾಗಿ ನಮ್ಮಂತಹ ಸ್ಥಾವರ ಜಂಗಮರನ್ನೇ ಪದೇ ಪದೇ ಬಿನ್ನಹಕ್ಕೆ ಬಿನ್ನವಿಸಿ ಖುಷಿ ಪಡುತ್ತಿದ್ದ ಶರಣರ ಸಂತೋಷವನ್ನು ನಿರಾಕರಿಸಲಾದೀತೆ? ಇಲ್ಲ.


ಒಂದೆಡೆ ಅವರ ಈ ಗೌರವದ ಪ್ರೀತಿ ಬಾಯಿ ಕಟ್ಟಿಸಿ ಬಿನ್ನಹದ ಕರೆಗೆ ಹೋಗುವಂತೆ ಮಾಡಿದರೆ, ಅದರ ಹಿಂದೆಯೇ ಓರಗೆಯವರ ಹೀಗಳೆತ ನನ್ನನ್ನು ಮಾನಸಿಕವಾಗಿ ಕಾಡುತ್ತಿತ್ತು. ಆಯಾಯ ಮನೆಯ ಹಿರಿಯರು ಅಪಾರ ಪ್ರೀತಿ ಗೌರವ ತೋರಿ ಭೋಜನದ ಶಿಕ್ಷೆಗೆ ಗುರಿಪಡಿಸಿದರೆ, ನನ್ನ ಸಹಪಾಠಿಯಾಗಿರುತ್ತಿದ್ದ ಅವರ ಮಕ್ಕಳು ಆ ದಿನ ಇಡೀ ಸ್ಕೂಲಿನಲ್ಲಿ ’ಅಯ್ಯಪ್ಪ ನಮ್ಮನಿಗೆ ಬಿನ್ನಕ್ಕ ಬಂದಿದ್ದ’ ಎಂದು ಬಿನ್ನಹದ ಬಿನ್ನಾಣವನ್ನು ಜಗಜ್ಜಾಹೀರುಗೊಳಿಸಿ ಜಾತ್ಯತೀತವಾಗಿ ಎಲ್ಲರಿಂದ ’ಅಯ್ಯ ಮಠದಯ್ಯ’ಕ್ಕೆ ಭಾಜನನಾಗುವ ಶಿಕ್ಷೆಗೆ ಗುರಿಪಡಿಸುತ್ತಿದ್ದರು. ಅದಲ್ಲದೇ ಎಷ್ಟೋ ಬಾರಿ ಇವರೊಟ್ಟಿಗೆ ’ನಿಮ್ಮನಿಗೆ ಬಿನ್ನಕ್ಕ ಬಂದುದ್ದು ಸ್ಕೂಲಿನ್ಯಾಗ ಯಾರಿಗೂ ಹೇಳಬ್ಯಾಡ. ನಿಮ್ಮಪ್ಪ ಕೊಟ್ಟಿರ ದಕ್ಷಿಣಾ ನಿನಿಗೆ ಕೊಡ್ತನಿ’ ಎಂದು ರಾಜೀ ಸೂತ್ರ ಮಾಡಿಕೊಳ್ಳುತ್ತಿದ್ದೆ. ಆದರೆ ಅದು ಅವರ ಮನೆಯಲ್ಲಿ ಗೊತ್ತಾದರೆ ಎಂದು ಅವರೂ ಹೆದರಿ ಅರ್ಧರ್ಧಕ್ಕೆ ಡೀಲ್ ಮಾಡಿಕೊಳ್ಳುತ್ತಿದ್ದರು.


ಈ ಎಲ್ಲಾ ಅವಹೇಳನಗಳಿಗೆ ಮೂಲವಾದ ಬಿನ್ನಹಕ್ಕೆ ಹೋಗುವ ವಿಷಯ ನನಗೆ ಕಡುಕೋಪ ತರಿಸುತ್ತಿತ್ತು. ಈ ವಿಷಯದ ಬಗ್ಗೆ ಸಾಕಷ್ಟು ಆಕ್ರೋಶದಿಂದ ಮನೆಯಲ್ಲಿ ಜಗಳವಾಡಿದರೂ ನಮ್ಮ ಅಪ್ಪಾಜಿಯ ’ಸರ್ವಾಧಿಕಾರ’ದ ಮುಂದೆ ನನ್ನದೇನೂ ಸಾಗದೆ ಉಗ್ರ ಶಿಕ್ಷೆಗೆ ಗುರಿಯಾಗುತ್ತಿದ್ದೆ.


ನನ್ನ ಕಷ್ಟವನ್ನು ಅರ್ಥ ಮಾಡಿಕೊಳ್ಳುತ್ತಿದ್ದ ಬಿನ್ನವಿಸಿಕೊಂಡವರು "ಅಂಗಿ, ಚಣ್ಣ ಇಲ್ಲ ಪ್ಯಾಂಟಿನಾಗೆ ಬಾ. ಯಾರಿಗೂ ಗೊತ್ತಾಗಲ್ಲ ನೀನು ಬಿನ್ನಕ್ಕ ಹೊಂಟಿಯಂತ" ಎಂದು ರಿಯಾಯ್ತಿ ಕೊಟ್ಟರೂ ನಮ್ಮ ಅಪ್ಪಾಜಿ "ನಿನಿಗೇನು ಮಲಿ ಬಂದಾವೇನಲೇ ಬೋಸುಡಿಕೆ" ಎಂದು ಅಂಗಿ ಬನಿಯನ್ನು ಬಿಚ್ಚಿಸಿ ಒಂದು ಪಂಚೆ ಸುತ್ತಿಸಿ, ಕೆಂಪು ವಸ್ತ್ರ ಮೈಮೇಲೆ ಹಾಕಿಕೊಂಡು ಹೋಗುವ ಶಿಕ್ಷೆಗೆ ಗುರಿ ಮಾಡುತ್ತಿತ್ತು. 


ಹೀಗೆ ಅವಹೇಳನಕ್ಕೊಳಗಾದರೂ ಅದು ನನ್ನ ಸುಪ್ತ ಮನಸ್ಸನ್ನು ಬಾಧಿಸಿತ್ತೇ ಹೊರತು ಲುಪ್ತವಾಗಿಯಲ್ಲ. ಸಾಮಾಜಿಕ ರಚನೆಯೇ ಹೀಗೆಂದು ಸ್ವೀಕರಿಸಿ ಮುನ್ನಡೆದಿದ್ದೆ. ಆದರೆ ಇದೇ ಅಯ್ಯ ಮಠದಯ್ಯನ ಅವಹೇಳನ ಸಹಿಸದ ಸೂಕ್ಷ್ಮ ಸಂವೇದಿ ಬಾಲಕನೊಬ್ಬ ಮನೆಯಲ್ಲಿ ನೇಣು ಹಾಕಿಕೊಂಡು ಸತ್ತಿದ್ದ. ಆಗ ಇಂದಿರಾ ಗಾಂಧಿ ಮಾದರಹಟ್ಟಿ ಎಂದರೆ ಜೈಲಿಗೆ ಹಾಕಿಸುವಂತೆ ಅಯ್ಯ ಮಠದಯ್ಯ ಎಂಬುವವರನ್ನೂ ಶೀಘ್ರ ಜೈಲಿಗೆ ಹಾಕಿಸಲಿ ಎಂದು ಆಶಿಸುತ್ತಿದ್ದೆ. ಆದರೆ ಅದು ಹಾಗೆಂದೂ ಆಗಲೇ ಇಲ್ಲ!


ಇತ್ತ ನಾನು ನನ್ನ ಹುಟ್ಟಿನೊಂದಿಗೆ ಅಂಟಿಕೊಂಡು ಬಿಟ್ಟಿದ್ದ ಜಾತಿ ಜಂಗಮತ್ವವನ್ನು ದ್ವೇಷಿಸತೊಡಗಿದೆ. ಯಾವುದೆಲ್ಲಾ ನಿಷಿದ್ಧವೆನಿಸಿತ್ತೊ ಅದನ್ನೆಲ್ಲಾ ದೊಡ್ಡವನಾದ ಮೇಲೆ ಮಾಡಿ ಸಿದ್ಧಿಸಲೇಬೇಕೆಂದು ನಿಶ್ಚಯಿಸಿದೆ. ಅಲ್ಲಿಯವರೆಗೆ ಇದೆಲ್ಲದನ್ನು ಸಹಿಸಿಕೊಂಡಿರುವುದು ನನ್ನ ಹಣೆಬರಹವೆಂದು ’ಅಯ್ಯ ಮಠದಯ್ಯ’ನೊಂದಿಗೆ ಅನುಸಂಧಾನ ಮಾಡಿಕೊಂಡು, ವೆಂಕಟರಾವ್ ಮೇಷ್ಟ್ರ ಸಂಶೋಧನೆಯಂತೆ ನನ್ನ ಮುಕುಳಿಯಲ್ಲಿದ್ದ ಮೂರು ಮಂಗಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡು ಜನ ಮೆಚ್ಚುಗೆ ಪಡೆದು ನನ್ನ ಗುರಿ ಸಾಧಿಸಬೇಕೆಂದುಕೊಂಡೆ.

***

ಇಂತಹ ಅನುಷಂಗಿಕ ನೋವನ್ನು ನೋವೆಂದು ನಮ್ಮ ಪ್ರಗತಿಪರರು ಗುರುತಿಸಲು ತೀವ್ರವಾಗಿ ಹಿಂದೇಟು ಹಾಕುತ್ತಾರೆ. "ಅಸ್ಪೃಶ್ಯರ ನೋವಿಗೆ ತಮ್ಮ ಜಾತಿದೂಷಣೆಯನ್ನು ಸರಿಗಟ್ಟುವ ವ್ಯರ್ಥ ಅಸಮಂಜಸ ಪ್ರಯತ್ನವನ್ನು ಮಾಡಿದ್ದಾರೆ" ಎನ್ನುವುದು ಪ್ರಗತಿಪರರ ಸಿದ್ಧ ಮಾದರಿಯ ವಾದ. ಇದನ್ನು ನೋವೆಂದು ಪರಿಗಣಿಸುವ ಮನಸ್ಥಿತಿಗೆ ಭಾರತ ಇನ್ನೂ ಸಜ್ಜಾಗಿಲ್ಲ. ಇಂತಹ ನೋವನ್ನು ದಲಿತರು ವ್ಯಕ್ತಪಡಿಸಿದಾಗ ಸ್ವೀಕರಿಸುವ ಮನಸ್ಥಿತಿಗೆ ಒಂದೊಮ್ಮೆ ದೇಶವೂ ಸಜ್ಜಾಗಿರದೆ ನಂತರ ಅನುವುಗೊಳ್ಳುತ್ತ ಸಾಗಿ ಬಂದಿತೆಂದು ಸ್ವಾತಂತ್ರೋತ್ತರ ಇತಿಹಾಸವನ್ನು ನೋಡಿ ತಿಳಿದುಕೊಳ್ಳಬಹುದು.


ಇನ್ನು ಕನ್ನಡ ಸಾಹಿತ್ಯ ಲೋಕದಲ್ಲಿ ನಾನು ಆದರ್ಶಪ್ರಾಯರೆಂದು ಪರಿಗಣಿಸಿರುವ ಇಬ್ಬರೇ ಇಬ್ಬರು ಸಾಹಿತಿಗಳೆಂದರೆ ಪೂರ್ಣಚಂದ್ರ ತೇಜಸ್ವಿ ಮತ್ತು ಸಿದ್ದಲಿಂಗಯ್ಯನವರು! ಏಕೆಂದರೆ ನಾನು ಅರಿತಂತೆ ಇವರೀರ್ವರೇ ಬರೆದಂತೆ ಬಾಳಿದವರು, ಬಾಳಿದಂತೆ ಬರೆದವರು. ಮತ್ಯಾರನ್ನೂ ನಾನು ಕಂಡಿಲ್ಲ! ಇವರೀರ್ವರ ಹಿನ್ನೆಲೆಯನ್ನು ಗಮನಿಸಿದಾಗ, ಸಿದ್ದಲಿಂಗಯ್ಯನವರ ಹಿನ್ನೆಲೆ ಕಡುಕಷ್ಟದ್ದು.


ಇವರೀರ್ವರ ವ್ಯಕ್ತಿತ್ವದ ಕುರಿತಾಗಿ, ಅವರ ಜೀವನಪ್ರೀತಿಯ ಕುರಿತಾಗಿ, ಅವರುಗಳ ಹಾಸ್ಯಪ್ರಜ್ಞೆ, ಭೋಜನ ಪ್ರೀತಿ, ವಿಡಂಬನೆ ಬಗ್ಗೆ ಸಾಕಷ್ಟು ಜನರು ಬರೆದಿದ್ದಾರೆ. ಆದರೆ ಇವರ ಬರಹಗಳಿಂದ ಪ್ರಭಾವಿತರಾಗಿ ಬರವಣಿಗೆಯಲ್ಲಿ ತೊಡಗಿಸಿಕೊಂಡು ಸಮಾಜವನ್ನು ಪ್ರಭಾವಿಸುವುದು ಆ ಮಹಾನ್ ಚೇತನಗಳಿಗೆ ಗೌರವ ತೋರುವ ಒಂದು ಗೌರವಯುತ ಮಾರ್ಗ. ಕೇವಲ ಓದುಗನಾಗಿದ್ದ ನಾನು ಬರಹದಲ್ಲಿ ತೊಡಗಿಸಿಕೊಳ್ಳಲು ಈ ಈರ್ವರೇ ಪ್ರೇರಣೆ ಎನ್ನಬಹುದು. ಇಂತಹ ಆದರ್ಶಪ್ರಾಯರನ್ನು ಒಮ್ಮೆಯೂ ನಾನು ಭೇಟಿಯಾಗಿಲ್ಲವೆಂಬುದೊಂದು ನನ್ನ ಬಹು ದೊಡ್ಡ ಕೊರಗು.


ಇರಲಿ, ಇಂತಹ ಪ್ರೇರಕ ಶಕ್ತಿಯಾದ ಸಿದ್ಧಲಿಂಗಯ್ಯನವರನ್ನು  ಕನ್ನಡ ಸಾಹಿತಿಗಳನೇಕರು ಇನ್ನಿಲ್ಲದಂತೆ ಬೌದ್ಧಿಕ ಅಸ್ಪೃಶ್ಯತೆಗೊಳಪಡಿಸಿದ್ದು ಕನ್ನಡ ಸಾಹಿತ್ಯಿಕ ಲೋಕದ ಮಹಾನ್ ದುರಂತಗಳಲ್ಲೊಂದು! ಸಿದ್ದಲಿಂಗಯ್ಯನವರಿಗೆ ಸಿಕ್ಕಿದ ಸರ್ಕಾರಿ ಸ್ಥಾನಮಾನಗಳಿಂದಲೋ, ಅವರ ಅಸಾಮಾನ್ಯ ಪ್ರತಿಭೆಯಿಂದಲೋ ಈರ್ಷೆಗೊಳಗಾಗಿ ಲೇವಡಿ ಮಾಡಿದ ಅನೇಕರು ಮೂಲದಲ್ಲಿ ನಿಗಮ, ಮಂಡಳಿ, ಅಕಾಡೆಮಿಗಳ ಸ್ಥಾನಗಳನ್ನು ಗಿಟ್ಟಿಸಿಕೊಂಡವರೇ ಆಗಿದ್ದುದು ಆ ದುರಂತದ ಹಿಂದಿನ ದುರಂತ. 


ಅದಕ್ಕೆ ಕಾರಣ, ಸಿದ್ಧಲಿಂಗಯ್ಯನವರು ಬರುವ ಮುನ್ನ ಒಂದು ಕಾಲದವರೆಗೆ ದಲಿತ ಸಂಘರ್ಷವನ್ನು ಆದರ್ಶವೆಂದುಕೊಂಡು ಕೆಲವು ದಲಿತೇತರ ಕನ್ನಡ ಸಾಹಿತಿಗಳು ಮಾರ್ಗದರ್ಶನ ಮಾಡುತ್ತಿದ್ದರು. ಮೈದಡವಿ, ಕಕ್ಕುಲಾತಿ ತೋರಿ ದಲಿತರನ್ನು ಜಾಗೃತಿಗೊಳಿಸುವುದು ಒಂದು passion ಎಂದು ಕೆಲವರು ನೈತಿಕ ಹೊಣೆ ಹೊತ್ತು ತೊಡಗಿದ್ದರೆ, ಅನೇಕರಿಗೆ ಅದು ಒಂದು fashion ಆಗಿತ್ತು. ಅಂತಹ ಒಂದು ಕಾಲಘಟ್ಟದಲ್ಲಿ ಸಿದ್ಧಲಿಂಗಯ್ಯನವರು ಎಲ್ಲಾ ಸ್ಥಾಪಿತ ಸಿದ್ದ ಮಾದರಿಗಳನ್ನು ಮುರಿದು "ಇಕ್ರಲಾ, ವದೀರ್ಲಾ" ಎನ್ನುತ್ತಾ ಸಂಚಲನ ಮೂಡಿಸಿ ಕನ್ನಡ ಸಾಹಿತ್ಯ ಮತ್ತು ಹೋರಾಟದ ದಿಕ್ಕಿನಲ್ಲಿ ಒಂದು (paradigm shift) ಸ್ಥಿತ್ಯಂತರವನ್ನು ತಂದರು. ಈ  ಬದಲಾದ ಸ್ಥಿತ್ಯಂತರವು ಸಂಘರ್ಷವನ್ನು fashion ಮಾಡಿಕೊಂಡಿದ್ದ  ಹಲವರನ್ನು ಸ್ಥಿತ್ಯಂತರಗೊಳಿಸಿಬಿಟ್ಟಿತು. ಅದು ಆ ಫ್ಯಾಶನ್-ಶೀಲರನ್ನು ಆಗಾಗ್ಗೆ ಬಾಧಿಸುತ್ತಿತ್ತೋ ಏನೋ, ಹಾಗಾಗಿ ಅವರೆಲ್ಲಾ ಅವಕಾಶ ಸಿಕ್ಕಾಗಲೆಲ್ಲಾ ಹೀಗೆ ಸಿದ್ದಲಿಂಗಯ್ಯನವರ ಮೇಲೆ ಮುಗಿಬೀಳುತ್ತಿದ್ದರು!


ಕನ್ನಡ ಸಾಹಿತ್ಯ ಲೋಕದ ಮೊದಲ ಸರ್ವಕಾಲಿಕ ಹತ್ತು ಸ್ಥಾನಗಳನ್ನೂ ಓರ್ವ ಸಾಹಿತಿ ಮತ್ತು ಸಂಚಲನ ಮೂಡಿಸಿ ಕ್ರಮೇಣ ಟ್ಯಾಬ್ಲಾಯ್ಡ್ ಪತ್ರಿಕೆಯಾದ ಪತ್ರಿಕೆಯ ಸಂಸ್ಥಾಪಕರಿಗೇ ಮೀಸಲಿಟ್ಟು ಹನ್ನೊಂದರಿಂದ ಉಳಿದ ಸ್ಥಾನಗಳನ್ನು ಹಂಚುವ "ಫ್ಯಾಷನ್" ಪರಿಪಾಠವನ್ನು ಹಾಕಿಕೊಂಡಿರುವ ಮತ್ತೊಂದು ಫ್ಯಾಶನ್ ವರ್ಗ ಈ ಬೌದ್ಧಿಕ ಅಸ್ಪೃಶ್ಯತೆಯ ಹಿಂದಿದ್ದದ್ದು ಸಹ ಢಾಳಾಗಿಯೇ ಕಾಣಿಸುತ್ತದೆ.  ಏನೆಲ್ಲಾ ಸಾಧನೆ ಮಾಡಿ, ಪ್ರಾಯೋಗಿಕವಾಗಿ ಎಲ್ಲರಿಗೂ ತೆರೆದುಕೊಳ್ಳುವ ನಿಜ ಉದಾರವಾದದ ಸಿದ್ಧಲಿಂಗಯ್ಯನವರನ್ನು ಕ್ಷುಲ್ಲಕ ಕಾರಣಗಳಿಗೆ ಆ ಒಂದು ವರ್ಗ ತೀವ್ರ ಬೌದ್ಧಿಕ ಅಸ್ಪೃಶ್ಯತೆಗೆ ತಳ್ಳುತ್ತಲೇ ಇದ್ದಿತು. ಆ ಪತ್ರಿಕೆಯ ಸರ್ವಾಧಿಕಾರಿ ಒಡ್ಡೋಲಗದಲ್ಲಿ ಬೇರಾವ ಸ್ಥಾನಗಳೂ ಖಾಲಿಯಿಲ್ಲದೆ ಕೇವಲ ವಿದೂಷಕ ಸ್ಥಾನದಲ್ಲಿದ್ದು ಸಾಹಿತಿಗಳೆನಿಸಿಕೊಂಡವರಿಂದ ಬೇರೇನನ್ನು ತಾನೇ ಬಯಸಲು ಸಾಧ್ಯವಿದ್ದೀತು!


ಆ ಬೌದ್ಧಿಕ ಅಸ್ಪೃಶ್ಯತೆಯಿಂದಾಗಿ ಸಿದ್ದಲಿಂಗಯ್ಯನವರಿಗೆ ಸಿಗಬೇಕಾದ ಗೌರವ, ಮನ್ನಣೆ ಸಿಗದೆ ಸಾಕಷ್ಟು ಅನ್ಯಾಯವಾಗಿದೆ.  ಫ್ಯಾಷನ್ನಿಗರ ಆಡಂಬರದ ನಡುವೆ ಪ್ಯಾಷನ್ನಿನ ಸರಳತೆ ಕುಂದಿದೆ.  ಕನ್ನಡ ಸಾಹಿತ್ಯಿಕ ಲೋಕದ ಇಂತಹ ಬೌದ್ಧಿಕ ತಾಲಿಬಾನಿ ಸಂಸ್ಕೃತಿಯ ಅರಿವಿದ್ದರೂ ಸಿದ್ಧಲಿಂಗಯ್ಯನವರು ಅದನ್ನು ಉಪೇಕ್ಷಿಸಿ ಎಲ್ಲರನ್ನೂ ಎಲ್ಲದನ್ನೂ ಒಳಗೊಳ್ಳುವ ನಿಜ ಉದಾರವಾದವನ್ನು ಮೆರೆದದ್ದು ಆ ವಾಮನರೂಪಿಯ ಅಗಾಧತೆಯ ಹೃದಯ ವೈಶಾಲ್ಯವೆನ್ನಬಹುದು.


ಅವರ "ಇಕ್ರಲಾ, ವದೀರ್ಲಾ" ಎಂಬ ಪ್ಯಾಷನ್ನಿನ, ನೈತಿಕತೆಯ, ಸಾತ್ವಿಕ ಆಕ್ರೋಶದ, ನಿಷ್ಠುರತೆಯೇ ಇಂದು ನನ್ನ "ಭಾರತವೆಂಬೋ_ಹುಚ್ಚಾಸ್ಪತ್ರೆಯಲ್ಲಿ, ಕರ್ನಾಟಕವೆಂಬೋ_ಕಮಂಗಿಪುರದಲ್ಲಿ" ಎಂಬ ಹ್ಯಾಷ್ಟ್ಯಾಗ್ ಆಗಿದೆ.


ಆದರೆ ಸಿದ್ಧಲಿಂಗಯ್ಯನವರ ಮರಣಾನಂತರವೂ ಸಾಮಾಜಿಕ ಮಾಧ್ಯಮಗಳಲ್ಲಿ ಆ ಬೌದ್ಧಿಕ ಅಸ್ಪೃಶ್ಯತೆ ಅಷ್ಟೇ ಢಾಳಾಗಿ ಆಸ್ಫೋಟಗೊಂಡು ಅವರಿಗೆ ಸಿಗಬೇಕಾದ ಮಟ್ಟಿಗಿನ ಅಂತಿಮ ಗೌರವ ಸಿಗಲಿಲ್ಲವೆನಿಸಿ ಅತ್ಯಂತ ಖೇದವೆನಿಸಿತು.


ಇದಿಷ್ಟು ನಾನು ದೇಶವಾಸಿಯಾಗಿ ಕಂಡಿದ್ದ ಕನ್ನಡ ಸಾಹಿತ್ಯಲೋಕವನ್ನೇ ಮತ್ತೆ ಸಪ್ತ ಸಾಗರದಾಚೆ ಕುಳಿತು ಓದುತ್ತ, ಅವಲೋಕಿಸುತ್ತ, ವಿಶ್ಲೇಷಿಸುತ್ತ ಗ್ರಹಿಸಿದ್ದುದು. ನಮ್ಮ ನಡುವೆಯೇ ಜೊತೆಜೊತೆಯಾಗಿದ್ದಾಗ ಇಂತಹ ವಿಭಿನ್ನ ಗ್ರಹಿಕೆ ಸಾಧ್ಯವಿಲ್ಲವೆಂದು ನನ್ನ ಅನೇಕ ಸಾಹಿತ್ಯ ಲೋಕದ ಮಿತ್ರರು ಹೇಳುತ್ತಿರುತ್ತಾರೆ. ಅವರು ಹೇಳಿದ್ದು ಸತ್ಯವಿದ್ದರೂ ಇರಬಹುದು, ಏಕೆಂದರೆ From a distance the whole world looks different, you know!


ರವಿ ಹಂಜ್,

ಜೀವ ವಿಜ್ಞಾನ ಆಡಳಿತ ತಜ್ಞ,

ಶಿಕಾಗೋ, ಯು. ಎಸ್.ಎ.

No comments:

Post a Comment