ಅಗಣಿತ ಅಲೆಮಾರಿ - ಆನಂದ್ ಋಗ್ವೇದಿ ಅವರ ವಿಮರ್ಶೆ

 #ಸಮಾಜವಾದಿ_ಕಂಡ_ಪ್ರಜಾಪ್ರಭುತ್ವದ_ಕನಸು!!


#ರವಿ_ಹಂಜ್ ಅವರ ಪ್ರವಾಸ ಕಥನ #ಅಗಣಿತ_ಅಲೆಮಾರಿ


ಕನ್ನಡ ಸಾಹಿತ್ಯದಲ್ಲಿ ಪ್ರವಾಸ ಸಾಹಿತ್ಯ ಪ್ರಕಾರಕ್ಕೆ ದೊಡ್ಡ ಇತಿಹಾಸವೇ ಇದೆ. ನಮ್ಮದಲ್ಲದ ನೆಲ, ಜಲ, ಸಂಸ್ಕೃತಿ ಮತ್ತು ಜನಪದಗಳ ನಿಕಟ ದರ್ಶನ ಮಾಡಿಸುವ ಪ್ರವಾಸ ಕೃತಿಗಳು ಹೇರಳವಲ್ಲದಿದ್ದರೂ ಅಲ್ಪ ಸಂಖ್ಯೆಯಲ್ಲೇ ಗಮನಾರ್ಹ. ಧಾರ್ಮಿಕ ಮನೋಭಾವದ ಭಾರತೀಯರಿಗೆ ತೀರ್ಥಯಾತ್ರೆಯೇ ಪ್ರವಾಸ ಎನ್ನಿಸುವುದರಿಂದ ಹಲವು ಅಂತರ್ ರಾಜ್ಯ, ಅಂತರ್ ದೇಶೀಯ ಪ್ರವಾಸಗಳಲ್ಲಿ ಬಹುತೇಕ ಗುಡಿ ಗುಂಡಾರಗಳ ವಿವರಗಳೇ ಹೆಚ್ಚು. ಅವನ್ನು ಹೊರತುಪಡಿಸಿದರೆ ಕನ್ನಡಕ್ಕೆ ದಕ್ಕಿದ ಹೊರ ದೇಶದ ಪ್ರವಾಸ ಕಥನವೆಂದರೆ ಅದು 'ಅಮೇರಿಕೆ'ಯ ಕುರಿತದ್ದು. ಅಮೇರಿಕೆಯ ಬಗ್ಗೆ ಮೂರು ತಲೆಮಾರುಗಳ ಪ್ರವಾಸಾನುಭವ ಮತ್ತು ಗ್ರಹಿಕೆ ಲಭ್ಯವಿವೆ. ಗೊರೂರು ರಾಮಸ್ವಾಮಿ ಅಯ್ಯಂಗಾರ್, ಪ್ರಭುಶಂಕರ, ಮೂರ್ತಿ ರಾಯರು, ಕೃಷ್ಣಾನಂದ ಕಾಮತರಿಂದ ಮೊದಲ್ಗೊಂಡು ಈಚಿನ ವರೆಗಿನ ಪ್ರವಾಸ ಕಥನಗಳು ಅಮೇರಿಕದ ವಾಸ್ತು ಬೆರಗು, ವಾಹನ ದಟ್ಟಣೆ, ನಯಾಗರ ಜಲಪಾತದಂತಹ ಬೆರಗುಗಳನ್ನು ಪರಿಚಯಿಸಿವೆ. ಈ ಸಾಫ್ಟ್‌ವೇರ್ ಕಾಲದಲ್ಲಿ ಭಾರತದ ಕಿರಿಯ ತಲೆಮಾರು ಅಮೇರಿಕೆಯನ್ನು ತಮ್ಮ ಔದ್ಯೋಗಿಕ ಆಡುಂಬೊಲ ಮಾಡಿಕೊಂಡಿರುವಾಗ ಅವರ ಬಸಿರು ಬಾಣಂತನಗಳ ಭಾರತೀಯತೆಗಾಗಿ ಅಮೇರಿಕೆಯನ್ನು ಎಡತಾಕುವ ಅವರ ಅಪ್ಪಮ್ಮಂದಿರು ತಮ್ಮ ಪ್ರವಾಸಾನುಭವಗಳನ್ನು ದಾಖಲಿಸಿರುವುದು ಅತ್ಯಲ್ಪ!


ಧಾರ್ಮಿಕ ಕಾರಣಗಳಿಲ್ಲದ ಒಳ ನಾಡಿನ ಪ್ರವಾಸ ಕಥನಗಳನ್ನು ಅಕಾಡೆಮಿಗಳು ಸಾಂಸ್ಕೃತಿಕ ಅನುಸಂಧಾನದ ನೆಲೆಯಲ್ಲಿ ಪ್ರೋತ್ಸಾಹಿಸಿದ್ದರೂ ಅವು ದಿನಚರಿಗಳ ದಾಖಲೀಕರಣವಾಗಿರುವುದೇ ಹೆಚ್ಚು! ಶೈಕ್ಷಣಿಕ ಮತ್ತು ಸಮಾಜಶಾಸ್ತ್ರೀಯ ಅಧ್ಯಯನದಂತೆ ಭಾಸವಾಗುವ ರಹಮತ್ ತರೀಕೆಯವರ 'ನಾಡ ಸುತ್ತಾಟ'ದಂತಹ ಗ್ರಹಿಕೆಗಳು ಅತ್ಯಪರೂಪ. ಇಂತಹ ಕೃತಿಗಳಲ್ಲಿಯೂ ಧಾರ್ಮಿಕ ಪ್ರತ್ಯೇಕತೆಯ ಕಾರಣದಿಂದ  ಒಳ ಹೋಗಲಾಗದ, ಮುಕ್ತವಾಗಿ ಗ್ರಹಿಸಿಯೂ ಢಾಳಾಗಿ ವ್ಯಕ್ತಪಡಿಸಲಾಗದ ಸಹಜ ಹಿಂಜರಿಕೆಗಳಿಂದ ವಾಸ್ತವದ ದಾಖಲೀಕರಣ ತೀರಾ ವಿರಳ.


ಇಂತಹ ದುರ್ಲಭಗಳ ಕಾಲದಲ್ಲಿ ಥಟ್ಟನೇ ಗಮನ ಸೆಳೆದು ಗಬಕ್ಕನೇ ಓದಿಸಿಕೊಂಡದ್ದು #ರವಿ_ಹಂಜ್ ಅವರ #ಅಗಣಿತ_ಅಲೆಮಾರಿ ಕೃತಿ. ಈಗಾಗಲೇ ಚೀನಿ ಪ್ರವಾಸಿ ಹುಯೆನತ್ಸಾಂಗನ ಮಹಾ ಪ್ರವಾಸದ ಬಗ್ಗೆ ಬರೆದು ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಗುರುತಿಸಲ್ಪಟ್ಟ ರವಿ ಹಂಜ್ ಮೂಲತಃ ಕನ್ನಡದವರು, ನಮ್ಮವರು ಅಷ್ಟೇ ಅಲ್ಲ ನನ್ನ ಊರು ದಾವಣಗೆರೆಯವರು. ಭಾರತದಿಂದ ಮಾನಸಿಕವಾಗಿಯೂ ಸುದೂರದಲ್ಲಿ ನಿಂತು ದೇಶದ ವರ್ತಮಾನವನ್ನು ನಿರಂತರ ಗಮನಿಸಿ ಪ್ರತಿಕ್ರಿಯಿಸುವ ಅವರು ಉಪಯೋಗಿಸುವ 'ಹುಚ್ಚಾಸ್ಪತ್ರೆ' ಮತ್ತು 'ಕಮಂಗೀಪುರ' ಎಂಬ ಹ್ಯಾಷ್ ಟ್ಯಾಗ್ ಗಳ ಬಗ್ಗೆ ತಕರಾರು ತೆಗೆದೇ ಜಗಳವಾಡುತ್ತಾ ಸ್ನೇಹಿತನಾದವನು ನಾನು.‌ ಅವರು ಬಳಸುವ ಹ್ಯಾಷ್ ಟ್ಯಾಗಿನ ಸಕಾರಣ ಈ ಕೃತಿಯಲ್ಲಿ ಲಭ್ಯವಿದೆ!


ತನ್ನನ್ನೇ ತಾನು ದೂರ ನಿಂತು ನೋಡುವ ತಂತ್ರವಾಗಿ ಎ ಕೆ ರಾಮಾನುಜನ್ನರ ಆತ್ಮ ಕತೆ "ಮತ್ತೊಬ್ಬನ ಆತ್ಮ ಕತೆ" ಪರಿಚಯವಿರುವ ಕನ್ನಡಕ್ಕೆ ಅಂತಹುದೇ ತಂತ್ರದ ಪ್ರವಾಸ ಕಥನವನ್ನು ರವಿ ಕೊಟ್ಟಿದ್ದಾರೆ.‌ ಇದು ರವಿಯವರೇ ಬರೆದ ಕಥನವಾದರೂ ಇದರ ನಿರೂಪಕ "ವೂಶಿಯಾನ್ ಡಿ ಲ್ಯುಲಾಂಗ್ಟ" ಎಂಬ ಚೀನಿ! ಹಾಗಾಗಿ ಈ ಕಥನದಲ್ಲಿ ಸಹ ಪ್ರವಾಸಿಯಾಗಿರುವ ರವಿಯವರಿಗೆ ಮುಕ್ತವಾಗಿ ಗ್ರಹಿಸುವ, ಯಾವುದೇ ಹಿಂಜರಿಕೆಯಿಲ್ಲದೇ ಮಾತುಗಳನ್ನು ದಾಖಲಿಸುವ ಅವಕಾಶವೊಂದು ತಾನೇ ತಾನಾಗಿ ಲಭ್ಯವಾಗಿದೆ!


ಕಮ್ಯುನಿಸ್ಟ್ ಆಡಳಿತದ ಮತ್ತು ಮಾವೋ ಅವರ ಸಾಂಸ್ಕೃತಿಕ ಕ್ರಾಂತಿಯ ದಿನಗಳ ಚೀನಾದಲ್ಲಿ ಬೆಳೆದ ಈ ಕೃತಿಯ ನಿರೂಪಕ ವೂಶಿಯಾನ್…… ಯಾನೆ ಲೀ, ಅನಿವಾಸಿ ಭಾರತೀಯ ರವಿ ಮತ್ತಿವರ ಅಮೇರಿಕನ್ ಗೆಳೆಯ ಫ್ರ್ಯಾಂಕ್ ಮೂವರೂ ಭಿನ್ನ ಪ್ರದೇಶ ಮತ್ತು ಸಂಸ್ಕೃತಿಯ ಹಿನ್ನೆಲೆಯಿಂದ ಬಂದವರಾದರೂ ಮೂವರು ಸಮಾಜವಾದಿಗಳು. ಮದ್ಯ, ಮಾಂಸ, ಮತ್ಸ್ಯ, ಮಾನಿನಿ ಮತ್ತು ಮೈಥುನಗಳಂತಹ ಪಂಚ'ಮ'ಗಳ ಬಗ್ಗೆ ಸಮಾನಾಸಕ್ತಿ ಹೊಂದಿರುವ ಇವರೆಲ್ಲಾ ಎಕ್ಸಾಟಿಕ್ ಮತ್ತು ಎರೋಟಿಕ್ ಗಳಲ್ಲೇ ಕಳೆದು ಹೋಗದೇ ರವಿಯ ಆಸಕ್ತಿ ಮತ್ತು ಕುತೂಹಲವಾದ ಹುಯೆನತ್ಸಾಂಗನ ಮಹಾ ಪ್ರವಾಸದ ನೆಲೆಗಳನ್ನು ಸಂದರ್ಶಿಸಲು ಬಯಸುವುದೇ ಈ ಪ್ರವಾಸಕ್ಕೆ ಕಾರಣ.‌


ವರ್ಗ ಹಿತಾಸಕ್ತಿಯ ಅಪ್ಲೈಡ್ ರಾಜಕೀಯ ಅರ್ಥಶಾಸ್ತ್ರವಾದ ಮಾರ್ಕ್ಸ್ ವಾದವನ್ನು ಸಾಮಾಜಿಕವಾಗಿ ಅನುಷ್ಠಾನಗೊಳಿಸುವಲ್ಲಿ ಆದ ತೊಡಕುಗಳು, ಅದರಿಂದಾದ ನಷ್ಟಗಳು, ಸಾಮಾಜಿಕ ಬದುಕಿನ ನಂಬುಗೆ, ರೀತಿ ರಿವಾಜುಗಳ ನೆಲೆ ಹಿನ್ನೆಲೆ, ತನ್ನ ಕರ್ಮಠತೆಯನ್ನು ಕಳಚಿಕೊಂಡು ಬೃಹತ್ ಉತ್ಪಾದಕ ದೇಶವಾಗಿ ಬದಲಾದ ಚೀನಾದ ಈಗಿನ ಪರಿ,.... ರಾಜಕೀಯ ಸ್ವಾತಂತ್ರ್ಯ ಸಿಕ್ಕರೂ ಮೂಲ ಗಣತಂತ್ರದಿಂದ ದೂರವಾದ ಫ್ಯೂಡಲ್ ಪ್ರಜಾಪ್ರಭುತ್ವದ ಪರಿ, ಎರಡೂ ಸಿದ್ಧಾಂತಗಳ ನೆರವಿನಿಂದ ನಡೆಯುತ್ತಿರುವ ಸರ್ವಾಧಿಕಾರದ ರಾಜಕೀಯ…. ಧಾರ್ಮಿಕ ನಂಬುಗೆ ಮತ್ತು ಭಾವುಕತೆಗಳನ್ನೇ ಉಪಯೋಗಿಸಿಕೊಂಡು ದೋಚುವ ಸಾಮಾಜಿಕ ಹುನ್ನಾರಗಳು, ಭಾರತದಲ್ಲಿ ಸರ್ವಮಾನ್ಯವಾಗಿರುವ ಭ್ರಷ್ಟಾಚಾರ, ಲೈಂಗಿಕ ಶಿಕ್ಷಣದ ಕೊರತೆ ಮತ್ತು ಜನಸಂಖ್ಯಾ ಸ್ಪೋಟ….. ಎಷ್ಟೆಲ್ಲಾ ನೆಲೆಗಳನ್ನು ದರ್ಶಿಸಿ ಪರಿಚಯಿಸಿದೆ ಈ ಪ್ರವಾಸ ಕಥನ!!!


ನವಿರು ಹಾಸ್ಯದ ಪ್ರಬಂಧದಂತಿರುವ ನಿರೂಪಣೆ, ಮುಚ್ಚು ಮರೆ ಇಲ್ಲದ ಮುಕ್ತತೆಯ ಅಭಿವ್ಯಕ್ತಿ, ಹಿಂಜರಿಕೆಯಿಲ್ಲದೆ ಮುಖವಾಡ ಧರಿಸದೇ ವ್ಯಕ್ತವಾಗುವ ಖಾಸಗಿ ಅನುಭವಗಳು ಈ ಪ್ರವಾಸ ಕಥನವನ್ನು ಮತ್ತೆ ಮತ್ತೆ ಓದುವಂತೆ, ಚಿಂತಿಸುವಂತೆ ಮಾಡಿದೆ. ಸನಾತನತೆಯ ಯಥಾ ಸ್ಥಿತಿವಾದಿಗಳಿಗೆ ಮಾತ್ರ'ಮಜಾವಾದ'ದಂತೆ ಕಾಣಿಸುವ, ಈ ಸಮಾಜವಾದಿಯ ಪ್ರಜಾಪ್ರಭುತ್ವದ ಕನಸು ನಮ್ಮೊಳಗೂ ಮೊಳಕೆಯೊಡೆಯುವುದೇ ವಿಸ್ಮಯ!


ಡಾ. ಆನಂದ್ ಋಗ್ವೇದಿ

ದಾವಣಗೆರೆ

No comments:

Post a Comment