ಸೌಹಾರ್ದ ಕರ್ನಾಟಕ ೨ ರ ಲೇಖನ

 ನಾನು ಆಗಷ್ಟೇ ದಾವಣಗೆರೆಯಲ್ಲಿ ಶಾಲೆಗೆ ಸೇರಿದ್ದೆ. ಮಸೀದಿಯೊಂದರ ಮುಂದೆ ಆಗಾಗ್ಗೆ ಹಾದು ಹೋಗುತ್ತಿದ್ದಾಗ ನನ್ನ ಹಿರಿಯ ಸಹಪಾಠಿಗಳು "ಇಸೀ ಸಾಬ್ರದು ಒಳಗೆಲ್ಲಾ ಕೋಳಿ ಕೊಯ್ದಿರ್ತಾರ" ಎನ್ನುತ್ತಾ ಮೂಗು ಮುಚ್ಚಿಕೊಂಡು ಮಸೀದಿ ದಾಟುತ್ತಿದ್ದರು. ಇದನ್ನೇ ನಾನೂ ಅನುಕರಿಸುತ್ತಿದ್ದೆ. ನನ್ನೊಂದಿಗೆ ಬರುತ್ತಿದ್ದ ಖಲೀಲ ಸಹ ಇದನ್ನೊಂದು ಆಟ ಎಂಬಂತೆ ಅನುಕರಿಸುತ್ತಿದ್ದ. ಒಮ್ಮೆ 

ನಮ್ಮಮ್ಮನ ಜೊತೆ ಪೇಟೆಗೆ ಹೋಗುವಾಗ ಮಸೀದಿ ಹತ್ತಿರ ಬರುತ್ತಿದ್ದಂತೆಯೇ ಮೂಗು ಮುಚ್ಚಿ "ಇಸಿ, ಸಾಬ್ರುದು" ಎಂದೆ. ಆಗ ನಮ್ಮಮ್ಮ "ಹಂಗನ್ನಬಾರದು. ಇದು ಸಾಬ್ರು ಗುಡಿ ಇದ್ದಂಗ. ಇದರೊಳಗೆಲ್ಲಾ ಕೋಳಿ ಕೊಯ್ಯಲ್ಲ. ಮೂಗು ತೆಗೆದು ನಡಿ" ಎಂದಾಗ ಹೊಳ್ಳೆ ಅಘ್ರಾಣಿಸಿ ನಡೆದೆ. ಮುಂದೆ ನನ್ನ ಸಹಪಾಠಿಗಳೂ ನನ್ನಂತೆಯೇ ಮೂಗು ಅಘ್ರಾಣಿಸಿಯೇ ನಡೆಯಹತ್ತಿದ್ದರು, ಖಲೀಲನೂ ಸೇರಿ.

***

ಶಿವಮೊಗ್ಗ ನಮ್ಮಮ್ಮನ ತವರುಮನೆ. ನಮ್ಮ ಅಜ್ಜಿಯ ಬೃಹತ್ ಸಂಸಾರದೊಡನೆ ನಾವು ಮೂವರು ಸೋದರರು ಮತ್ತು ಅರಸೀಕೆರೆಯ ನಮ್ಮ ದೊಡ್ಡಮ್ಮನ ಮಕ್ಕಳು ನಾಲ್ವರು ಸೇರಿ ಇಡೀ ಮನೆ ಗಜಿಬಿಜಿಯಿಂದ ಕೂಡಿರುತ್ತಿತ್ತು. ಆದರೆ ಯಾರ‍್ಯಾರು ಎಲ್ಲಿದ್ದಾರೆಂದು ಗೊತ್ತಾಗದಷ್ಟು ನಮ್ಮಜ್ಜಿಯ ಮನೆ ದೊಡ್ಡದಾಗಿತ್ತು. ಮುಂದೆ ನಮ್ಮ ಚಿಕ್ಕಮ್ಮಂದಿರ ಮದುವೆಗಳಾಗಿ ಮಕ್ಕಳಾಗಿ ಆ ಮಕ್ಕಳು ಕೂಡ ಬೇಸಿಗೆ ರಜೆಗೆ ಇಲ್ಲಿ ಜೊತೆಯಾಗುತ್ತಿದ್ದರು.

ಮೂರು ದೊಡ್ಡ ಹಾಲುಗಳು, ಕಟಾಂಜನ, ವಿಶಾಲವಾದ ಮಹಡಿ ಮತ್ತು ನಾಲ್ಕು ರೂಮುಗಳು ಒಂದು ಕಟ್ಟಡದಲ್ಲಿದ್ದರೆ ದೊಡ್ಡದಾದ ಅಡುಗೆ ಮನೆ, ಊಟದ ಮನೆ, ದೇವರಮನೆ, ಬಚ್ಚಲುಮನೆ ಮತ್ತು ಕಕ್ಕಸ್ಸುಗಳು ಇನ್ನೊಂದು ಕಟ್ಟಡದಲ್ಲಿದ್ದವು. ಎರಡೂ ಕಟ್ಟಡಗಳ ನಡುವೆ ವಿಶಾಲವಾದ ಕೈತೋಟವಿದ್ದಿತು. ಆ ಕೈತೋಟದಲ್ಲಿ ಮಾವು, ಪಪ್ಪಾಯಿ, ಪೇರಳೆ, ಸೀತಾಫಲ, ದಾಳಿಂಬೆ, ಕಂಚಿಕಾಯಿ, ನಿಂಬೆಕಾಯಿಯ ಗಿಡಮರಗಳಲ್ಲದೆ ಯಥೇಚ್ಛವಾಗಿ ಗೊರಟೆ ಹೂವಿನ ಗಿಡಗಳಿದ್ದವು. ಅದಲ್ಲದೆ ಕೊಟ್ಟಿಗೆಯೊಂದಿದ್ದು ಅಲ್ಲಿ ಎರಡು ಹಸುಗಳನ್ನು ನಮ್ಮಜ್ಜಿ ಸಾಕುತ್ತಿತ್ತು. ಸಂಸಾರದ ಖರ್ಚನ್ನು ಸರಿತೂಗಿಸಲು ನಮ್ಮಜ್ಜಿ ಮುಂದಿನ ನಾಲ್ಕು ರೂಮುಗಳನ್ನು ಸಹ ಬಾಡಿಗೆಗೆ ಕೊಟ್ಟಿತ್ತು.

ನಮ್ಮ ಅಜ್ಜನ ಈ ಮನೆ ಅವರ ಒಬ್ಬ ಮುಸ್ಲಿಮ್ ಸ್ನೇಹಿತರದಾಗಿತ್ತು. ಸ್ವಾತಂತ್ರ್ಯದ ನಂತರದ ಒಂದು ಕೋಮು ಗಲಭೆಯ ಸಮಯದಲ್ಲಿ ಈ ಮನೆಯನ್ನು ಸುಟ್ಟೇ ಬಿಡುತ್ತಾರೆನ್ನುವಾಗ ಅವರನ್ನು ರಕ್ಷಿಸಿ ನಮ್ಮಜ್ಜ ತನ್ನ ಮನೆಯನ್ನು ಅವರಿಗೆ ನೀಡಿ ತನ್ನ ಸಂಸಾರವನ್ನು ರಾತ್ರೋರಾತ್ರಿ ಅಲ್ಲಿಗೆ ವರ್ಗಾಯಿಸಿತ್ತು. ಅದಲ್ಲದೆ ಅದಕ್ಕೆ ಬಾಡಿಗೆಯನ್ನು ಸಹ ಕೊಡುತ್ತಿತ್ತು. ನಮ್ಮಜ್ಜ ಅಲ್ಲಿ ಬಾಡಿಗೆಗಿದ್ದ ಸಮಾಚಾರ ಯಾರಿಗೂ ಗೊತ್ತಿರಲಿಲ್ಲ.

ಹೀಗೆ ಸುಮಾರು ಐವತ್ತಕ್ಕೂ ಹೆಚ್ಚು ವರ್ಷ ನಮ್ಮ ಅಜ್ಜಿಯ ಸಂಸಾರ ಆ ಮನೆಯಲ್ಲಿತ್ತು. ನಮ್ಮಜ್ಜಿಯ ಬಾಣಂತನವನ್ನು ಆ ಮುಸ್ಲಿಂ ಮನೆಯ ಒಡತಿಯೂ, ಆಕೆಯ ಬಾಣಂತನವನ್ನು ನಮ್ಮಜ್ಜಿಯೂ ಪರಸ್ಪರ ಮಾಡಿಕೊಂಡಿದ್ದರೆಂದು ಆ ಇಬ್ಬರು ಆಜ್ಜಿಯರು ಪರಸ್ಪರ ಭೇಟಿಯಾದಾಗ ಮಾತನಾಡಿಕೊಳ್ಳುತ್ತಿದ್ದರು.

ನಮ್ಮಜ್ಜನ ಎಲ್ಲಾ ಹೆಣ್ಣುಮಕ್ಕಳ ಮದುವೆಯಾಗಿ ನಮ್ಮಜ್ಜ ತೀರಿಕೊಂಡು ಎಷ್ಟೋ ವರ್ಷಗಳ ನಂತರ ಆ ಮುಸ್ಲಿಂ ಸ್ನೇಹಿತರ ಮಕ್ಕಳು ಆಸ್ತಿಪಾಲಾಗಿ ಈ ಮನೆಯನ್ನು ಕೇಳಲಾರದೆ ತೊಳಲಾಡುತ್ತಿದ್ದಾಗ ನಮ್ಮಜ್ಜಿ ಆ ಮನೆಯನ್ನು ಅವರಿಗೆ ಬಿಟ್ಟುಕೊಡಲು ನಿರ್ಧರಿಸಿತ್ತು.

ಆಗ ಆ ಮುಸ್ಲಿಂ ಕುಟುಂಬ ಮುಖ್ಯ ಕಟ್ಟಡವನ್ನು ತಾವಿಟ್ಟುಕೊಂಡು ಹಿಂದಿದ್ದ ಅಡುಗೆಮನೆ, ದೇವರಮನೆ, ಊಟದಮನೆ, ಬಚ್ಚಲುಮನೆಯಿದ್ದ ಕಟ್ಟಡವನ್ನು ನಮ್ಮಜ್ಜಿಗೆ ಉಡುಗೊರೆಯಾಗಿ ನೀಡಿದರು.

***


ನಾನು ನಾಲ್ಕನೇ ತರಗತಿಗೆ ಬರುವ ಹೊತ್ತಿಗೆ ಬಿದ್ದು ಮಾಡಿಕೊಂಡ ಗಾಯಗಳು ಒಣಗಿ ಬಿಳಿಯ ಕಲೆಯಾಗುತ್ತಿದ್ದವು. ಅತ್ಯಂತ ’ಸೂಕ್ಷ್ಮಮತಿ’ಯಾದ ನಮ್ಮಪ್ಪ ಇದು ತೊನ್ನೆಂದು ಪರಿಹಾರ ಹುಡುಕತೊಡಗಿತು. ನಮ್ಮಪ್ಪನ ಸ್ನೇಹಿತರೊಬ್ಬರು ಹರಿಹರದ ಮುಸ್ಲಿಂ ಪಂಡಿತರೊಬ್ಬರ ಗುಣಗಾನ ಮಾಡಿ ಅವರನ್ನು ಪರಿಚಯಿಸಿದರು. ಆ ಮುಸ್ಲಿಂ ಪಂಡಿತರು ಯಾವುದ್ಯಾವುದೋ ಪುಡಿಗಳನ್ನು ನಮ್ಮ ಅಪ್ಪಾಜಿ ಕೈಗೆ ಕೊಟ್ಟು ನನಗೆ ಮಂತ್ರಿಸಿದರು. ಆ ಪುಡಿಗಳನ್ನು ಆರು ತಿಂಗಳು ತೆಗೆದುಕೊಳ್ಳಬೇಕು ಮತ್ತು ಆ ಆರು ತಿಂಗಳು ಕಟ್ಟುನಿಟ್ಟಿನ ಪಥ್ಯೆ ಮಾಡಬೇಕು ಎಂದು ತಿಳಿಸಿದರು.

ಆ ಹರಿಹರದ ಪಂಡಿತರ ಪಥ್ಯೆಯ ಪ್ರಕಾರ ಎಣ್ಣೆ, ಗೋಧಿ, ಅಕ್ಕಿ, ಈರುಳ್ಳಿ, ಕೆಲವು ತರಕಾರಿಗಳು ವರ್ಜ್ಯವಿದ್ದು ಕೇವಲ ನವಣಕ್ಕಿಯನ್ನು ಮಾತ್ರ ತಿನ್ನಬಹುದಿತ್ತು. ಅದೆಲ್ಲಕ್ಕಿಂತ ನನ್ನನ್ನು ಮಾನಸಿಕವಾಗಿ ಜರ್ಜರಿತಗೊಳಿಸಿದ್ದು ಆರು ತಿಂಗಳ ಕಾಲ ಪಂಡಿತರು ನನ್ನ ಇಡೀ ಮೈಗೆ ಹಚ್ಚಿಕೊಳ್ಳಲು ಹೇಳಿದ್ದ ’ಮುಲಾಮು’!

ಕೋಣನ ಸಗಣಿಯನ್ನು ನಿತ್ಯ ಬೆಳಿಗ್ಗೆ ಮೈಗೆ ಬಳಿದುಕೊಂಡು ಬಿಸಿಲಿನಲ್ಲಿ ಅರ್ಧ ಗಂಟೆ ಕೂರಬೇಕೆಂಬುದೇ ಆ ಅತ್ಯುಗ್ರ ಶಿಕ್ಷೆ! ಇಂತಹ ಮುಲಾಮು, ಪಥ್ಯೆಯನ್ನು ಅವರು ತಜ್ಞ ನಾಟಿ ವೈದ್ಯರಾಗಿ ಆಚರಿಸುತ್ತಿದ್ದರು ಎಂದು ಈ ಮೊದಲೇ ಔಷಧಿ ಕೊಟ್ಟಿದ್ದ ದೀಪದಯ್ಯ ಅವರಿಂದ ನನ್ನ ಅನುಭವಕ್ಕೆ ಬಂದಿತ್ತು.

ಈ ಮಧ್ಯೆ ಆ ಪಂಡಿತರು ತಾವು ನಡೆಸುವ ಹರಿಹರ ಸಮೀಪದ ನಂದ್ಯಾಲ ಉರುಸಿಗೆ ಎರಡು ದಿನ ಬರಬೇಕೆಂದು ಪ್ರೀತಿಯಿಂದ ತಾಕೀತು ಮಾಡಿದರು. ಪಂಡಿತರ ದಾವಣಗೆರೆಯ ವೈಶ್ಯ ವರ್ತಕ ಭಕ್ತರೊಟ್ಟಿಗೆ ನಾನು ನಮ್ಮ ಅಪ್ಪಾಜಿಯೂ ಉರುಸಿಗೆ ಹೋದೆವು. ದಾವಣಗೆರೆಯ ವಿಶೇಷ ವರ್ತಕ ಭಕ್ತರಾಗಿದ್ದುದರಿಂದ ನಮಗೆಲ್ಲ ವಿಶೇಷ ಊಟ ವಸತಿಯ ವ್ಯವಸ್ಥೆಯಿತ್ತು. ಕೇವಲ ಹೊರಗಿನಿಂದ ಮಸೀದಿಗಳನ್ನು ಕುತೂಹಲದಿಂದ ನೋಡುತ್ತಿದ್ದ ನನಗೆ ಒಳಹೊಕ್ಕು ಅರಿತುಕೊಳ್ಳಲು ನಂದ್ಯಾಲ ಉರ್ಸ್ ಉತ್ತಮ ಅವಕಾಶವಾಯಿತು. ಅಲ್ಲಿನ ದರ್ಗಾದ ಎಲ್ಲಾ ಪೂಜಾ ಕಾರ್ಯಕ್ರಮಗಳನ್ನು ನೋಡುತ್ತ ಅವರೆಲ್ಲರೂ ’ಆಮೀನ್ ಆಮೀನ್’ ಎನ್ನುತ್ತಿದ್ದಾಗ ನಾನೂ ’ಆಮೀನ್, ಆಮೀನ್’ ಎನ್ನುತ್ತಿದ್ದೆ. ನಮ್ಮ ಸ್ವಾಮೀಜಿಗಳು ವಿವಿಧ ಮಂತ್ರಗಳನ್ನು ಹೇಳುವಾಗ ಇತರರು ಕೋರಸ್ ರೀತಿಯಲ್ಲಿ ’ ಓಂ ಶಿವಾಯ ನಮಃ’ ಅಥವಾ ’ಸ್ವಾಹಾ’ ಎನ್ನುವಂತೆ ಈ ಆಮೀನ್ ಸಹ ಎಂದು ಅರ್ಥೈಸಿಕೊಂಡಿದ್ದೆ. ಆಲ್ಲದೆ ನನಗೆ ಮಸೀದಿ ದರ್ಗಾದ ಕಾರ್ಯಕ್ರಮ, ಪೂಜಾವಿಧಿ ವಿಧಾನಗಳು ನಮ್ಮ ಗುಡಿ ಮಠಗಳಿಗಿಂತ ಬೇರೆಯದಾಗಿ ಕಾಣಲಿಲ್ಲ. ಅವುಗಳಂತೆಯೇ ಇಲ್ಲಿಯೂ ಧೂಪ, ದೀಪ, ಚಾಮರ, ಮಂತ್ರಪಠಣಗಳಿದ್ದವು. ಸಂಜೆ ಭಜನೆಗಳ ರೀತಿ ಕವ್ವಾಲಿ ಇದ್ದು, ಆಕರ್ಷಕ ಬಾಣ ಬಿರುಸಿನ ಮತಾಪು ಪ್ರದರ್ಶನ ಸಹ ಇರುತ್ತಿತ್ತು. ನಮ್ಮ ಪಂಡಿತರು ಟಾರ್ಚ್ ಹಿಡಿದು ಒಂದೊಂದು ದಿಕ್ಕಿನತ್ತ ಬೆಳಕು ಬಿಡುತ್ತಿದ್ದಂತೆಯ ಆ ದಿಕ್ಕಿನಿಂದ ಮಾತಾಪುಗಳು ಸಿಡಿದು ಆಕಾಶದಲ್ಲೆಲ್ಲಾ ಬೆಳಕಿನ ಹೂವು, ನಕ್ಷತ್ರಗಳ ಮಳೆಗರೆಯುತ್ತಿದ್ದವು.

ಆದರೆ ಇತ್ತ ನಮ್ಮ ’ಸೂಕ್ಷ್ಮಮತಿ’ ಅಪ್ಪಾಜಿಗೆ ನಾನು ’ಆಮೀನ್ ಆಮೀನ್’ ಎನ್ನುವುದು ಚಿಂತೆಗೀಡುಮಾಡಿಬಿಟ್ಟಿತ್ತು. ಏಕೆಂದರೆ ’ಆಮೀನ್ ಆಮೀನ್’ ಎಂದರೆ ಏನೆಂದು ಅದಕ್ಕೆ ಗೊತ್ತಿರಲಿಲ್ಲ. ಉರ್ಸಿನಿಂದ ವಾಪಸ್ ಬಂದ ನಂತರ ತನ್ನ ಮಿತ್ರನಾದ ಶಫಿಯನ್ನು ಮನೆಗೆ ಕರೆದು "ಲೇ ಶಫಿ, ಆಮೀನ್ ಆಮೀನ್ ಅಂದ್ರ ಏನಲೇ" ಎಂದು ಕೇಳಿತು. ಅದಕ್ಕೆ ಶಫಿ "ನೀವು ಶಿವ ಶಿವ, ಬಸವ ಬಸವ ಅಂತೀರಲ್ಲ ಹಂಗ ನಾವು ಆಮೀನ್ ಆಮೀನ್" ಅಂತೇವಿ ಎಂದಾಗ "ಹೌದಾ, ನಾನೆಲ್ಲೋ ನಮ್ಮಡುಗುನ್ನ ಸಾಬ್ರ ಮಾಡಿಬಿಟ್ರೇನ ಪಂಡಿತರು ಅನ್ಕಂಡಿದ್ದೆ" ಎಂದಿತು. ಆಗ ಶಫಿ "ಮಾಡ್ಲಿ ತಗಳಪಾ, ಒಳ್ಳೆ ಕೋಳಿ ಕುರಿ ತಿಂದು ಸ್ವಾಮಿ ಪೈಲ್ವಾನ್ ಅಕ್ಕನ" ಎಂದಾಗ ನಾನು ’ಆಹಾ! ಹಾಗಾದರೆ?!’ ಎಂದು ಕನಸು ಕಾಣಲಾರಂಭಿಸಿಬಿಟ್ಟಿದ್ದೆ.

***

ಮುಂದೆ ನಾನು ಬಂಡಾಯಕ್ರಾಂತಿಗೆ ಮರುಳಾಗಿ ಎಸ್ಸೆಸ್ಸಲ್ಸಿಯಲ್ಲಿ ವಿಜ್ಞಾನದ ಮೇಷ್ಟ್ರೊಬ್ಬರು ಪಾಠವನ್ನೇ ಮಾಡಿರದ ಕಾರಣವಾಗಿ ಬಂಡೆದ್ದು ವಿಜ್ಞಾನದ ಪರೀಕ್ಷೆ ಬರೆಯದೆ ಫೇಲ್ ಆಗಿ ದಲಾಲಿ ಕಂ ಖರೀದಿ ಅಂಗಡಿ ಕಂ ಜಿನ್ನಿಂಗ್ ಫ್ಯಾಕ್ಟರಿಯೊಂದರಲ್ಲಿ ಗುಮಾಸ್ತನಾಗಿದ್ದೆ. ಹೀಗೆ ಒಂದು ದಿನ ’ಬೀಬಿ ಜಾನ್’ ಎನ್ನುವ ನನಗಿಂತ ಒಂದೆರಡು ವರ್ಷ ದೊಡ್ಡವಳಿರಬಹುದಾದ ಹುಡುಗಿ ನನ್ನನ್ನು ಜಿನ್ನಿಂಗ್ ಫ್ಯಾಕ್ಟರಿಯಲ್ಲಿ ಬೀಜದಿಂದ ಬೇರ್ಪಟ್ಟ ಅರಳೆಯು ಬೀಳುವ ನೆಲಮಾಳಿಗೆಯನ್ನು ತೋರಿಸುವುದಾಗಿ ಕರೆದುಕೊಂಡು ಹೋಗಿ ನನ್ನನ್ನು ಅರಳೆಯ ಮೇಲೆ ನೂಕಿದ್ದಳು. ಆಕೆ ನನ್ನನ್ನು ಯಾವ ಉದ್ದೇಶದಿಂದ ನೂಕಿದ್ದಳೋ ಎಂದು ಅರಿಯುವ ಮುನ್ನವೇ ನನ್ನನ್ನು ಅಕ್ಕರೆಯಿಂದ ಕಾಣುತ್ತಿದ್ದ ಖಾತುಂ ಬೀ ಎನ್ನುವ ಅಜ್ಜಿ ಮಕದುಮ್ಮಿ (ಮುಖ್ಯಸ್ಥೆ) ಹಿಂದೆಯೇ ಬಂದು ಬೀಬಿ ಜಾನಳನ್ನು ಗದರಿಸಿ ಕಳಿಸಿ ನನ್ನ ಶೀಲ ಕಾಪಾಡಿದ್ದಳು! ಮುಂದೆ ಈ ಬೀಬಿ ಜಾನಳು ಖಾತುಂ ಬೀಯ ಮೊಮ್ಮಗನನ್ನು ಮದುವೆಯಾದಳು. ಮುಕ್ತವಾದದ ಖಾತುಂ ಬೀ ಅಷ್ಟರ ಮಟ್ಟಿಗೆ ಉದಾರವಾದಿಯಲ್ಲದೆ ಜೀವನಾರ್ಥದಲ್ಲೂ ಮಕದುಮ್ಮಿ ಎನಿಸಿದ್ದಳು. ಮುಂದೆ ನಮ್ಮ ಅಂಗಡಿ ಸಾಹುಕಾರರು ಟಿಕೆಟ್ ಪಡೆದು ಚುನಾವಣೆಗೆ ಸ್ಪರ್ಧಿಸಿದ್ದರು. ಆಗ ನನ್ನ ಮತ್ತು ಸಂಗನಬಸಯ್ಯ ಎಂಬ ಕಲಾಕಾರರ ಜಂಟಿ ಸಹಯೋಗದಲ್ಲಿ ಚುನಾವಣೆಯ ಪ್ರಚಾರದ ಉಸ್ತುವಾರಿಯನ್ನು ಸಾಹುಕಾರರು ನಮಗೆ ವಹಿಸಿದರು. ಅಂದಿನ ನಾಯಕಿ ಮಾಜಿ ತಾರೆ ವೈಜಯಂತಿಮಾಲಾ ಅವರ ಪ್ರಚಾರ ಭಾಷಣವನ್ನು ಅಜಾದ್ ನಗರದ ಹೋಟೆಲ್ ಮೇಲ್ಛಾವಣಿಯೊಂದರ ಮೇಲೆ ಆಯೋಜಿಸಿದ್ದವು. ಆ ಹೋಟೆಲ್ಲಿನ ಮುಂದೆ ಭಾರೀ ಜನಸಂದಣಿ ಸೇರಿಬಿಟ್ಟಿತು. ಆ ಜನಸಂದಣಿಯ ನಡುವೆ ಬೀಬಿ ಜಾನ್ ಕಂಡಳು. ಅವಳು ನನ್ನನ್ನು ಅರಳೆಯ ಮೇಲೆ ನೂಕಿದ್ದ ಸಂಗತಿಯನ್ನು ಸಂಗನಬಸಯ್ಯನವರಿಗೆ ಈ ಮೊದಲೇ ಹೇಳಿದ್ದೆ. ಹಾಗಾಗಿ ಅವಳನ್ನು ಸಂಗನಬಸಯ್ಯನವರಿಗೆ ತೋರಿಸಿ ಇವಳೇ ಅವಳು ಎಂದು ಹೇಳಿದೆ. "ಎಲಾ ಅವ್ನೌನ ಮೇಕಪ್ ಇಲ್ಲದ ಮಧುಬಾಲಾ ಇದ್ದಾಂಗ್ ಅದಾಳಲ್ಲೋ! ಥೇಟ್ ಮಧುಬಾಲಾನ ಇಕಿ...ಅಕಿ ಹಿಂಗ ಇರೂದು! ಎಂಥಾ ಲುಕ್ಸಾನು ಮಾಡ್ಕೊಂಡಿ, ಆ ಖಾತುಂ ಬೀ ನಿಂದ್ ಖತಮ್ಮಾ ಮಾಡಿದ್ಲು ನೋಡು ಛೇ ಛೇ" ಎಂದು ಮಮ್ಮಲ ಮರುಗಿದರು.

ಬೀಬಿ ಜಾನ್ ಅಕ್ಷರಶಃ ಮೊಘಲ್-ಎ-ಆಜಮ್ ಮಧುಬಾಲಾಳಂತೆ ಸಹಸ್ರಾರು ಕನ್ನಡಿಗಳಲ್ಲಿ ಕಣ್ಣ ಕೊರೈಸಿದಳು.

***

ನನ್ನೊಟ್ಟಿಗೆ ಯೋಗಾಸನ ಮಾಡುತ್ತಿದ್ದ ದಾದಾ ಪೀರ್, ಸಾಮು ತೆಗೆಯುತ್ತಿದ್ದ ರಶೀದ್ ಇಬ್ಬರೂ ಆಂಜನೇಯನ ಪರಮಭಕ್ತರಾಗಿದ್ದರು. ನನ್ನನ್ನೂ ಪೈಲ್ವಾನ್ ಮಾಡಬೇಕೆಂದು ರಂಜಾನ್ ಹಬ್ಬದಲ್ಲಿ ಅವರ ಮನೆಗೆ ಕರೆದುಕೊಂಡು ಹೋಗಿ ಬಿರಿಯಾನಿಯನ್ನು ಬಿಸ್ಮಿಲ್ಲಾ ಮಾಡಿಸುತ್ತಿದ್ದರು. ನಮ್ಮಮ್ಮ ’ಏನು ತಿಂದು ಬಂದೆ’ ಎಂದರೆ "ಶ್ಯಾವಿಗೆ ಪಾಯಸ" ಎನ್ನುತ್ತಿದ್ದೆ. ’ಎಲ್ಲಿ ಉಸಿರು ಬಿಡು ನೋಡೋಣ’ ಎಂದು ಪರೀಕ್ಷೆಯೊಡ್ಡಿದಾಗ ಉಸಿರನ್ನು ಗಟ್ಟಿಯಾಗಿ ಸಶಬ್ಧವಾಗಿ ಒಳಗೆಳೆದುಕೊಂಡು ’ಬಿಟ್ಟೆ’ ಎನ್ನುತ್ತಿದ್ದೆ. ಉಸಿರು ಎಳೆದುಕೊಂಡ ಶಬ್ಧ ಬಿಟ್ಟಂತೆ ಕೇಳಿಸಿ ನಮ್ಮಮ್ಮನ ಪರೀಕ್ಷೆಯಲ್ಲಿ ಪಾಸಾಗಿಬಿಡುತ್ತಿದ್ದೆ! ಇದು ಯೋಗಾಸನದಿಂದ ನನಗಾದ ಅಂದಿನ ಏಕಮಾತ್ರ ಉಪಯೋಗ.

ಇದರಲ್ಲಿ ದಾದಾ ಪೀರ್ ಆಗಷ್ಟೇ ಮದುವೆಯಾಗಿದ್ದ. ಅವನ ಮದುವೆಯನ್ನು ನಮ್ಮ ಯೋಗಾಸನ ಕ್ಲಬ್ಬಿನ ಖಾಯಂ ಸದಸ್ಯರಾಗಿದ್ದ ವರದಿಚಂದ್, ಮಾಣಿಕ್ ಲಾಲ್, ಕಾಳಪ್ಪ, ಬ್ರಷ್ಮನ್, ಅಧ್ಯಕ್ಷರಾದ ಕೆ. ಮಲ್ಲಪ್ಪ ಎಲ್ಲರೂ ಸೇರಿ ಓಡಾಡಿ ಸಂಭ್ರಮಿಸಿ ಮಾಡಿದ್ದರು. ನಾನು ಅವನ ಪ್ರಾಥಮಿಕ ಪ್ರೇಮಪತ್ರಗಳನ್ನು ಬರೆದುಕೊಡುತ್ತಿದ್ದೆ. ಆದರೆ ಅವೆಲ್ಲಾ ನಮ್ಮ ಪ್ರಶ್ನೆಪತ್ರಿಕೆಗಳ ಮಾದರಿಯಲ್ಲಿ ತೀರ್ಥರೂಪು, ಮಾತೋಶ್ರೀ, ಪಿತಾಶ್ರೀ ಎನ್ನುವಂತೆ ಅತ್ಯಂತ ಸೌಮ್ಯವಾಗಿ ಪ್ಯಾರೆ ಜಾನ್ ..... ಇನ್ಶಾ ಅಲ್ಲಾಹ್ ಯಹ ಸಬ್ ಕೈರಿಯತ್....ಎಂದಷ್ಟೇ ಬರೆಸುವಷ್ಟು ದಾದಾ ಪೀರ್ ವಿಧೇಯ ಪತಿಯಾಗಿದ್ದ!

***

ನಾನು MCA ಓದಲು ಹಾಸನದ ಮಲ್ನಾಡ್ ಕಾಲೇಜ್ ಆಫ್ ಇಂಜಿನಿಯರಿಂಗ್ ಸೇರಿದ್ದೆ. ಮೈಸೂರಿನಿಂದ ಬಂದಿದ್ದ ಅರ್ಷದ್ ಅಹ್ಮದ್ ನನ್ನ ಸಹಪಾಠಿಯಾಗಿದ್ದ. ಅಲ್ಲದೆ ಹಾಸನದ ಖ್ಯಾತ ಮುಸ್ಲಿಂ ಮನೆತನದ ಹುಡುಗಿ ಶಾಹಿಸ್ತಾ ಸಹ ನನ್ನ ಸಹಪಾಠಿ. ನಾವು BCom, BBM ಮಾಡಿ MCA ಸೇರಿದ್ದರಿಂದ ಗಣಿತವಲ್ಲದೆ ಎಲ್ಲಾ ಇಂಜಿನಿಯರಿಂಗ್ ಪಠ್ಯಗಳೂ ನಮಗೆ ಉಕ್ಕಿನ ಕಡಲೆಗಳಾಗಿದ್ದವು. ಅದಕ್ಕೆ ಟ್ಯೂಷನ್ ತೆಗೆದುಕೊಳ್ಳಲು ನಿರ್ಧರಿಸಿ ಪ್ರೊಫೆಸರರೊಬ್ಬರನ್ನು ಕೇಳಿದಾಗ ಸ್ನಾತಕೋತ್ತರ ಪದವಿಗೆ ಟ್ಯೂಷನ್ ಮಾಡಬೇಕೆ ಎನ್ನುತ್ತಾ ಮೊದಲ ಸೆಮಿಸ್ಟರ್ ಗೆ ಮಾತ್ರ ಪಾಠ ಮಾಡಲು ಒಪ್ಪಿಕೊಂಡರು. ಪಾಠಕ್ಕೆ ಶಾಹಿಸ್ತಾಳ ಭವ್ಯ ಬಂಗಲೆಗೆ ಹೋಗುತ್ತಿದ್ದೆವು. ಅಲ್ಲಿ ಅವರ ಇಡೀ ಕುಟುಂಬ ನಮ್ಮನ್ನು ಆದರದಿಂದ ಕಾಣುತ್ತಿತ್ತು. ಶಾಹಿಸ್ತಾ ಅವರ ತಂದೆ ನಿವೃತ್ತ ಪ್ರೊಫೆಸರರು ಮುಸ್ಲಿಂ ಹಾಸ್ಟೆಲ್ಲಿನ ಗೌರವ ವಾರ್ಡನ್ ಸಹ ಆಗಿದ್ದರು. ಈ ಮಧ್ಯೆ ಅರ್ಷದ್ ನನಗೆ ‘ಟೈಗರ್ ಮಾಮ’ ಎನ್ನುತ್ತಿದ್ದ. ನಾನವನಿಗೆ ‘ಬೇಟಾ’ ಎನ್ನುತ್ತಿದ್ದೆ. ಮುಂದೆ ಇಡೀ ಕ್ಲಾಸ್ ಅವನಿಗೆ ಬೇಟಾ ಎನ್ನತೊಡಗಿತು. ಏಕೆಂದರೆ ಅವನು ಅಂತಹ ಮುಗ್ಧ ಬೇಟಾ ಆಗಿದ್ದ. 

ಕಾಲೇಜ್ ಹಾಸ್ಟೆಲಿನಲ್ಲಿ ಜಂಡಾ ಊರುತ್ತಿದ್ದಂತೆಯೆ ನಮ್ಮೆಲ್ಲಾ ವಿದ್ಯಾರ್ಥಿ ಆನುಷಂಗಿಕ ಗುಣಗಳು ಆನಾವರಣಗೊಳ್ಳತೊಡಗಿದವು. ಎರಡನೇ ಸೆಮಿಸ್ಟರಿಗೆ ಟ್ಯೂಷನ್ ಬಿಟ್ಟಿದ್ದೆವು, ಸಬ್ಜೆಕ್ಟುಗಳಲ್ಲಿ ಪಳಗಿದ್ದೆವು. ಹಾಗೆಯೇ ಪ್ರತಿ ತಿಂಗಳ ಕೊನೆಯ ಭೂರೀ ಭೋಜನಕ್ಕೆ ಮುಸ್ಲಿಂ ಹಾಸ್ಟೆಲ್ಲಿನ ಖಾಯಂ ಅತಿಥಿಗಳಾಗಿದ್ದೆವು. ಅದೇ ರೀತಿ ಬೇಟಾ ನಮ್ಮ ಹಾಸ್ಟೆಲ್ಲಿನ ಖಾಯಂ ನಿವಾಸಿಯಾಗಿದ್ದ. ಹಾಸ್ಟೆಲಿನಲ್ಲಿ ಬಕೆಟ್ಟಿನಲ್ಲಿ ಸಾರಾಯಿ, ರಮ್ಮು, ವಿಸ್ಕಿ ಎಲ್ಲಾ ಸುರಿದು "ಜುಮ್ಮಾ ಚುಮ್ಮಾ ದೇ ದೇ" ಎಂದು ಹಾಡಿ ಕುಣಿಯುವುದರಿಂದ ಎಲ್ಲಾ ರೀತಿಯ ಆಟಗಳಿಗೆ ಖ್ಯಾತರಾಗಿದ್ದೆವು. ಬೇಟಾ ನಮ್ಮ designated driver ಆಗಿ ಹೆಗಲು ಕೊಟ್ಟು ರೂಮಿಗೆ ಸೇರಿಸುತ್ತಿದ್ದ. ಇಷ್ಟೆಲ್ಲಾ ವ್ಯವಹಾರಿಕ ವಾಸ್ತವಗಳಲ್ಲಿ ಮುಳುಗಿದ್ದರೂ ಪ್ರತಿಬಾರಿ ಅರ್ಷದ್ ಕಾಲೇಜಿನಿಂದ ತನ್ನ ಹಾಸ್ಟೆಲ್ಲಿಗೆ ಹೋಗುವಾಗ ಹನಿಗಣ್ಣನಾಗುವಷ್ಟು ಭಾವುಕಜೀವಿಯಾಗಿ ಬೇಟಾ ಪದಕ್ಕೆ ವಾರಸುದಾರನೆನಿಸಿದ್ದ.

ಇಂತಿಪ್ಪ ಸೌಮ್ಯ ಬೇಟಾ ಎರಡನೇ ವರ್ಷಕ್ಕೆ ಬಂದಾಗ ತಾನೂ ಹೊಸ ವಿದ್ಯಾರ್ಥಿಗಳಿಗೆ ರ‍್ಯಾಗಿಂಗ್ ಮಾಡಬೇಕು ಆದರೆ ಅದು ಖುಷಿಯ ಮಿತಿಯಲ್ಲಿರಬೇಕು ಎಂದು ನನ್ನ ಸಲಹೆ ಕೇಳಿದ. ನಾನು "ಲೋ ಬೇಟಾ, ನಿಮ್ ಮುಸ್ಲಿಂ ಹಾಸ್ಟೆಲ್ ಎಲ್ಲಾ ಜ್ಯೂನಿಯರರುಗಳಿಗೆ ಒಂದೊಂದು ನಿರೋಧ್ ಪಾಕೆಟ್ ಕೊಟ್ಟು ಅದರ ಮೇಲೆ ಅವರವರ ಪಾಸ್ಪೋರ್ಟ್ ಫೋಟೋ ಅಂಟಿಸಿಕೊಂಡು ಸೀನಿಯರ್ ಒಬ್ಬರ ಸಹಿ ಮಾಡಿಸಿಟ್ಟುಕೊಳ್ಳಲು ಹೇಳು. ಸೀನಿಯರ್ಸ್ ’ಐಡಿ ಕಾರ್ಡ್ ಎಲ್ಲಿ’ ಎಂದು ಕ್ಯಾಂಪಸಿನಲ್ಲಿ ಕೇಳಿದಾಗಲೆಲ್ಲಾ ಅವರು ಅದನ್ನು ತೋರಿಸುವಂತೆ ಹೇಳು. ಸೀನಿಯರುಗಳು ಆದಷ್ಟು ಹುಡುಗಿಯರು ಸುತ್ತಮುತ್ತ ಇದ್ದಾಗ ಈ ಐಡಿ ಕೇಳಲಿ. ಮಜಾ ಇರುತ್ತದೆ" ಎಂದು ಹೇಳಿಕೊಟ್ಟೆ. ಅದನ್ನು ಸೀನಿಯರ್ ಜೂನಿಯರ್ ಅಲ್ಲದೇ ಎಲ್ಲರೂ ಆನಂದದಿಂದ ಪುಳಕಗೊಂಡು ಪಾಲಿಸುತ್ತಿದ್ದರು. ಹುಡುಗಿಯರೂ ಮುದಗೊಂಡು ಕಿಸಿಕಿಸಿ ನಗುತ್ತಿದ್ದರು. ಆದರೆ ಒಬ್ಬ ಮಾತ್ರ ಮುಸ್ಲಿಂ ಹಾಸ್ಟೆಲ್ ವಾರ್ಡನ್ ಅವರಿಗೆ ದೂರು ಕೊಟ್ಟುಬಿಟ್ಟ. ಬೇಟಾ ಸೈಕಲ್ ಮೇಲೆ ಏದುಸಿರುಬಿಡುತ್ತಾ ಬಂದವನೇ "ಮಾಮಾ, ವಾರ್ಡನ್ ಐಡಿ ಕಾರ್ಡ್ ಹಿಡದುಬುಟ್ರು. ಪ್ಯಾಕೆಟ್ ಒಳ್ಗೆ ಇರೋದು ತೆಗ್ದು ’ನಂದು ಜೀವನಾದಲ್ಲೇ ಇದು ನೋಡಿಲ್ಲ!’ ಅಂತ surprise ಆಗಿ ಹಿಂದೆ ಮುಂದೆ ಮೇಲೆ ಕೆಳ್ಗೆ ಅದನ್ನ ನೋಡ್ತಾ ಇದ್ರೆ ನಮ್ಗೆ ನಗಾ ಬರ್ತಿತ್ತು. ಆದ್ರೆ ನಗಂಗಿಲ್ಲ. ತಡ್ಕೊಂಡು ಬಂದೆ. ಇಷ್ಟಾದರೂ ವಾರ್ಡನ್ಗೆ ನಂದು ಮೇಲೆ ನಂಬಿಕೆ ಅದೆ. ಅವ್ರು ಇದು ನಮ್ದು ಹಾಸ್ಟೆಲ್ ಹುಡ್ಗ ಅರ್ಷದ್ ಒಳ್ಳೆ cultured ಇದಾನೆ. ಇದು ಹೊರಗಿನವರ್ದು ಯಾರದೋ ಕಿತಾಪತಿ. ಇಲ್ಲಿ ಯಾರು ಹೊರಗಿನವರು ಬರ್ತಾರೆ ಅಂದಾಗ ಒಂದಿಬ್ಬರು ಹೆದರ್ಕೊಂಡು ನಿಂದು ಹೆಸ್ರು ಹೇಳಿಬಿಟ್ಟಿದಾರೆ. ಅವ್ರು HODಗೆ ಪ್ರಿನ್ಸಿಪಾಲ್ಗೆ ಹೇಳಬೈದು. ನೀನು ಹುಷಾರು" ಎಂದ. ಎಂತೆಂಥದೋ ಕೀಟಲೆ ತಮಾಷೆ ಮಾಡಿದ್ದ ನಮಗೆ ಇದನ್ನೆಲ್ಲಾ ನಿಭಾಯಿಸುವುದು ಸಮಸ್ಯೆಯೇ ಎನಿಸಲಿಲ್ಲ. ಆದರೆ ಆ ವಾರ್ಡನ್ ತಮ್ಮ ಮಗಳ ಬಳಿ ನನ್ನ ಹೆಸರು ಹೇಳಿ ’ಈ ಹುಡ್ಗ ಹಿಂಗಾ’ ಎಂದು ನನ್ನನ್ನು ವಿಲನ್ ಮಾಡಿಬಿಟ್ಟಿದ್ದರು. ಇರಲಿ, ಹೀಗೆ ನಮ್ಮ ಮತ್ತು ಮುಸ್ಲಿಂ ಹಾಸ್ಟೆಲ್ ನಡುವಿನ ಬಾಂಧವ್ಯ ಸುಗಮವಾಗಿ ಸಾಗುತ್ತಿತ್ತು. ಪ್ರತಿ ಸೆಮಿಸ್ಟರ್ ಮುಗಿಸಿ ಎಲ್ಲರೂ ಬೀಳ್ಕೊಡುವಾಗ ಈ ಹನಿಗಣ್ಣೀಶ್ವರನ ಕಂಡು ಎಂದೂ ಅಳದ ನಾನೂ ಕಣ್ಣೀರು ಹರಿಸಿಬಿಡುತ್ತಿದ್ದೆ. ಜೀವನದಲ್ಲಿ ಎಂತೆಂತಹ ಸಾವು ನೋವುಗಳನ್ನು ಅನುಭವಿಸಿದ್ದರೂ ಕಣ್ಣೀರು ಹಾಕದ ನನಗೆ ಈ ಬೇಟಾ ಭೇಟಿಯಾಗಿ ಬೀಳ್ಕೊಡುವಾಗಲೆಲ್ಲಾ ಕಣ್ಣೀರು ಸುರಿಯುತ್ತದೆ, ಇಂದಿಗೂ. ಯಾಕೋ ಗೊತ್ತಿಲ್ಲ!

***


ಸ್ಯಾನ್ ಫ್ರಾನ್ಸಿಸ್ಕೋದಿಂದ ಆಗಷ್ಟೇ ಶಿಕಾಗೋಕ್ಕೆ ಬಂದಿದ್ದೆ. ನಾನು ನನ್ನ ಹೆಂಡತಿ ಒಂದೇ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದೆವು. ಆಗಷ್ಟೇ ಮೂರು ತಿಂಗಳು ತುಂಬಿದ್ದ ನನ್ನ ಹೆಂಡತಿಗೆ ಕೇವಲ ಭಾರತೀಯ ತಿನಿಸುಗಳನ್ನು ತಿನ್ನುವ ಬಯಕೆ! 


ಶಿಕಾಗೋದಂತಹ ಮಹಾನಗರದ ಗಗನಚುಂಬಿ ಕಟ್ಟಡಗಳ ನಡುವೆ ಸಾಕಷ್ಟು ಭಾರತೀಯ ಹೋಟೆಲ್ಲುಗಳಿದ್ದರೂ ಅವುಗಳಲ್ಲಿ ವೆರೈಟಿಗಳಿರಲಿಲ್ಲ. ಹೀಗಿದ್ದಾಗ ನಮ್ಮ ಆಫೀಸ್ ಬಳಿಯ ಕಟ್ಟಡದ ತಳಮಹಡಿಯಲ್ಲಿ ಬೋರ್ಡಿಲ್ಲದ ಜೈಕಾ ಎನ್ನುವ ಪಾಕಿಸ್ತಾನಿ ಡಾಬಾವೊಂದನ್ನು ಟ್ಯಾಕ್ಸಿ ಡ್ರೈವರ್ ಒಬ್ಬ ತೋರಿಸಿಕೊಟ್ಟ. ಅಲ್ಲಿನ ಅಡುಗೆ ಭಟ್ಟ ಅಹ್ಮದ್ ನಿತ್ಯವೂ "ಬೆಹೆನ್ ಜೀ, ಮೆ ಆಪ್ಕೊ ರೋಜ್ ಸ್ಪೆಷಲ್ ಬನಾಕೆ ದೇತಾ ಹೂಂ. ಆಪ್ ಸಿರ್ಫ್ ವಹಿ ಖಾಯಿಯೆಗಾ" ಎಂದು ಮೆನು ಬಿಟ್ಟು ಬೇರೆಯದೇ ಆದ ವಿಶೇಷವನ್ನು ನಿತ್ಯ ಮಧ್ಯಾಹ್ನ ಮಾಡಿಕೊಟ್ಟು ಬಸುರಿಯ ಬಯಕೆ ತೀರಿಸುತ್ತಿದ್ದ. 


ಪಾಕಿಸ್ತಾನಿ ವಿಶೇಷ ಖಾದ್ಯವಾದ ಬೀಫ್ ಚಪ್ಲಿ ಕಬಾಬನ್ನು ನಾನು ಹೇಗಿರುತ್ತದೆ ನೋಡೋಣ ಎಂದು ತಿಂದಾಗ "ಅರೆ ಯಾರ್ ಜಬ್ ಮೆ ಜರ್ಮನಿ ಮೆ ಥಾ, ತಬ್ ಸುವ್ವರ್ ಭಿ ಖಾಲಿಯಾ ಥಾ. ಬಿಯರ್ ಬೀ ಪೀತಾ ಥಾ. ಶಿಕಾಗೋ ಆಖೇ ಲೋಗ್ ಕುಚ್ ಜ್ಯಾದಾ ಹಿ ಮುಸಲ್ಮಾನ್ ಬನ್ ಗಯೇ ಹೈ. May be because of famous Chicago tagline 'holy cow', you know! ಅಬ್ ಮೇ ಯಹಾ ಸುವ್ವರ್ ಖಾವೂ ತೋ ಗೂರ್ ಕೆ ದೇಖ್ ಥೆ ಹೈ ಲೋಗ್" ಎಂದು ಕಣ್ಣು ಮಿಟುಕಿಸುತ್ತಿದ್ದ. ಮುಂದೆ ಈ ಜೈಕಾ ನಮ್ಮ ಆಫೀಸಿನಲ್ಲೆಲ್ಲಾ ಖ್ಯಾತಗೊಂಡು ಅದರಲ್ಲೂ ಶುಕ್ರವಾರದಂದು ಇಡೀ ಆಫೀಸ್ ಬಿರ್ಯಾನಿ ಘಮಗುಟ್ಟವಂತಾಗತೊಡಗಿತು. ಮುಂದೆ ಬಿರಿಯಾನಿಯನ್ನು ಮಧ್ಯಾಹ್ನ ತಿಂದು ರಾತ್ರಿಗೆ ಕಟ್ಟಿಸಿಕೊಂಡು ಬಂದು ಆಫೀಸ್ ಫ್ರಿಡ್ಜ್ ನಲ್ಲಿ ಇಡುವುದನ್ನು ಘಮ್ಮೆನ್ನುವ ಕಾರಣ ನಿಷೇಧಿಸಲಾಗುವಷ್ಟು ಜೈಕಾ ಖ್ಯಾತಿ ಗಳಿಸಿತ್ತು.


ಶಿಕಾಗೋ ಬಂದು ಎರಡು ವರ್ಷದ ನಂತರ ನಾನು ಮನೆ ಖರೀದಿಸಿ ಹಾಲು ಉಕ್ಕಿಸಿದಾಗ ನನ್ನ ಹೆಂಡತಿ "ಯಾವುದಾದರೂ ಭಕ್ತಿ ಗೀತೆ ಹಾಕು" ಎಂದಳು. ನನ್ನ ಬಳಿ ಆಗ ಯಾವುದೇ ಭಕ್ತಿಗೀತೆಯ ಕ್ಯಾಸೆಟ್ ಇರಲಿಲ್ಲ. ಇದ್ದುದರಲ್ಲಿ ಭಕ್ತಿ ಎನ್ನಬಹುದಾದ ನುಸ್ರತ್ ಫತೇ ಅಲಿಖಾನ್ ನ "ಧಮಾ ಧಮ್ ಮಸ್ತ್ ಖಲಂದರ್" ಇತ್ತು. ಭಕ್ತಿಲೋಲುಪ್ತತೆಯ ಉತ್ಕೃಷ್ಠ ಸಂಗೀತ ನನ್ನ ಹೊಸ ಮನೆಯ ಮೂಲೆ ಮೂಲೆಗಳಲ್ಲಿ "ಜೂಲೆ ಲಾಲ್ ಖಲಂದರ್" ಎಂದು ಅಲೆ ಅಲೆಯಾಗಿ ಜೂಲಿಸಿತು.

***


ಹೀಗೆ ಬಾಲ್ಯದಿಂದ ಓರ್ವ ಬಾಲಕನ ತಂದೆಯಾಗುವವರೆಗಿನ ನನ್ನ ಈ ಅನುಭವಗಳು ವಿಶೇಷವೋ ಅಪರೂಪವೋ ಅಲ್ಲವೇ ಅಲ್ಲ! ಇವು ನನ್ನ ಕಾಲಮಾನದ ಬಹುಪಾಲು ಜನರ ಸಾಮಾಜಿಕ ಸಹಜ ಜೀವನದ ಮಾನವಿಕ ಚಿತ್ರಣಗಳು. ಭಾರತದ ಭವ್ಯ ಪರಂಪರೆಯ ಕೂಡು ಕುಟುಂಬ, ಪ್ರೀತಿ ವಾತ್ಸಲ್ಯ, ಹೃದಯ ವೈಶಾಲ್ಯ, ಕಕ್ಕುಲಾತಿ, ಸಹಬಾಳ್ವೆ, ಸೌಹಾರ್ದತೆಗಳ ಸ್ಥಿತಪ್ರಜ್ಞ ಜೀವನದ ಭರಪೂರ ಭಾವನೆಗಳು! ಈ ಮಾನವಿಕ ಮಹಾ ಪ್ರವಾಹದಲ್ಲಿ ಶಿವಮೊಗ್ಗೆಯ ತುಂಗೆ ನನ್ನನ್ನು ಹುಟ್ಟಿನಿಂದಲೇ ತೇಲಿಸಿ, ತುಂಗಾಭದ್ರೆಯಲ್ಲಿ ಆಡಿಸಿ, ಹೇಮೆ-ಕಾವೇರಿಯರಲ್ಲಿ ಮುಳುಗಿಸಿ ಮಿಷಿಗನ್ ಮಹಾಸರೋವರದಲ್ಲಿ ನೆಲೆ ನಿಲ್ಲಿಸಿದ್ದಾಳೆ. ಇದೇನೂ ಯಾವುದೋ ಗತ ಶತಮಾನದ ಕತೆಯಲ್ಲ, ನೆನ್ನೆಮೊನ್ನೆಯದಷ್ಟೇ.

No comments:

Post a Comment