ಶಾಟವೂ ಲಂಡ್ ಡಿ ಬರ್ಟನ್ನೂ, ಕೈಮಾ ಶೇರ್ವಾವೂ ಮತ್ತು ಮಲ್ಟೈ ಸ್ಟಾರರ್ ಕಾಲಾ ಪತ್ತರ್ರೂ!

 ಈ ವೀಕೆಂಡ್ ವಿಲಾಸಕ್ಕೆ ವಾರವೆಲ್ಲಾ ಕಾಡುತ್ತಿದ್ದ ಅಂಬಾಭವಾನಿ ಮಿಲ್ಟ್ರಿ ಹೋಟೆಲ್ಲಿನ ಕೈಮಾ, ಶೇರ್ವಾ ಮತ್ತು ಮುದ್ದೆಯ ನೆನಪನ್ನು ಶ್ರಮಿಸಬೇಕೆಂದು ನಿರ್ಧರಿಸಿದ್ದೆ. ಅದಕ್ಕೆ ಸಾಥ್ ಕೊಡಲು ಅಮೆಜಾನ್ ಪ್ರೈಮ್ನಲ್ಲಿ ಕಾಲಾಪತ್ತರ್ ಸಿನೆಮಾ ಕಂಡಿತು. ಈ ಕಾಲಾಪತ್ತರ್ ನನ್ನಲ್ಲಿ ಒಂದು ತಾಜಾ ನೆನಪಿನೊಂದಿಗೆ ಬೆಸೆದುಕೊಂಡಿದೆ.


ಮೊದಲಿಗೆ ಬೆಂಗಳೂರಿಗೆ ಬಂದ ಎಂಟು ತಿಂಗಳು ಕೃಷ್ಣರಾಜಪುರದ ಐಟಿಐ ಕಾರ್ಖಾನೆಯ ಯಂಗ್ ಆಫೀಸರ್ಸ್ ಹಾಸ್ಟೆಲ್ಲಿನಲ್ಲಿ ಕಳೆದಿದ್ದೆ. ಸ್ನಾತಕೋತ್ತರ ಇಂಜಿನಿಯರಿಂಗ್ ಮಾಡಿ ಪ್ರಾಜೆಕ್ಟ್ ಕೆಲಸಕ್ಕೆ ಬರುವವರನ್ನು ಯಂಗ್ ಆಫೀಸರ್ಸ್ ಎಂದು ಉದಾರವಾಗಿ ಸರ್ಕಾರಿ ಸ್ವಾಮ್ಯದ ಐಟಿಐ ಪರಿಗಣಿಸಿತ್ತು. ಹಾಗೆಯೇ ಅಲ್ಲಿನ ಆಫೀಸರ್ಸ್ ಕ್ಲಬ್ಬಿಗೆ ಪ್ರವೇಶವನ್ನು ಸಹ ಕೊಟ್ಟಿತ್ತು. ಸ್ವಾತಂತ್ರ್ಯಪೂರ್ವ ಬ್ರಿಟಿಷ್ ಅಥವಾ ಭಾರತೀಯ ಸೇನೆಯ "ಆಫೀಸರ್ಸ್" ವೈಭವೋಪೇತ ಅನುಭವವನ್ನು ಸ್ವಾತಂತ್ರೋತ್ತರ ಕಾಲದಲ್ಲಿ ನನಗೆ ಈ ಕ್ಲಬ್ ಕೊಟ್ಟಿತ್ತು. ಕ್ಲಬ್ಬಿನ ಬಾರಿನಲ್ಲಿದ್ದ ಏಕೈಕ ವಿಸಿಆರ್ (ವಿಡಿಯೋ ಪ್ಲೇಯರ್) ಸೆಟ್ಟಿನಲ್ಲಿ ಒಬ್ಬ ಪಂಜಾಬಿ ಅಧಿಕಾರಿ ನಿತ್ಯ ಹೆಲೆನ್ ಳ ಕ್ಯಾಬರೆ ವಿಡಿಯೋಗಳನ್ನು ಹಾಕಿ ಅಧಿಕಾರಶಾಹಿಯೊಂದಿಗೆ ತನ್ನ ಊಳಿಗಮಾನಶಾಹಿ ರಸಿಕತೆಯನ್ನು ನೆನಪು ಮಾಡಿಕೊಂಡು ನಿಟ್ಟುಸಿರು ಬಿಡುತ್ತಿದ್ದ. 


ನನ್ನಂತಹ ಪ್ರಾಜೆಕ್ಟ್ ಕೆಲಸಕ್ಕೆ ಬರುತ್ತಿದ್ದವರಿಗೆ ಇದೊಂದು ಅತ್ಯಂತ ದೊಡ್ಡ ಲಕ್ಸುರಿ ಆಗಿತ್ತು. ಏಕೆಂದರೆ ಹತ್ತಿರದಲ್ಲಿ ಯಾವುದೇ ಊಟದ ವ್ಯವಸ್ಥೆಗೆ ಒಂದೆರಡು ಕಿಲೋಮೀಟರ್ ನಡೆಯಬೇಕಿತ್ತು. ಆದರೆ ಈ ಕ್ಲಬ್ಬಿನ ಸದಸ್ಯತ್ವ ಯಾವುದೇ ವೈಭವೋಪೇತ ಪಂಚತಾರಾ ಹೋಟೆಲ್ಲಿಗೂ ಕಡಿಮೆ ಇಲ್ಲದ ಉತ್ತಮ ಊಟದ ವ್ಯವಸ್ಥೆಯನ್ನು ಅತ್ಯಂತ ಕಡಿಮೆ ಬೆಲೆಗೆ ಒದಗಿಸಿತ್ತು. ನನಗೋ ಈ ಸದಾವಕಾಶವನ್ನು ಇದ್ದಷ್ಟು ದಿನ ಅನುಭವಿಸಿಬಿಡಬೇಕೆಂದು ಉಮೇದಿನ ಹುಕಿಯಲ್ಲಿ ಅಲ್ಲಿನ ಬಾರಿಗೆ ಆಗಾಗ್ಗೆ ನುಗ್ಗಿ ಶ್ರೀಮಂತ ವಸಾಹತುಶಾಹಿ/ಅಧಿಕಾರಶಾಹಿ/ಮೊಗಲ್ ಶಾಹಿ/ಪುರೋಹಿತಶಾಹಿ/ಕಾಮ್ರೇಡ್ ಶಾಹಿ ಅನುಭವವನ್ನು ನನ್ನದಾಗಿಸಿಕೊಳ್ಳುತ್ತಿದ್ದೆ. 


ಎಷ್ಟೋ ವರ್ಷಗಳ ಕಾಲ ಕಾರ್ಮಿಕರಾಗಿ ದುಡಿದು ನಿವೃತ್ತಿಯ ವಯಸ್ಸಿಗೆ ಭಡ್ತಿ ಪಡೆದು ಆಫೀಸರ್ ಆದ ಕೆಲವು ಮುದುಕರು ಆ ಕ್ಲಬ್ಬಿನ ಸದಸ್ಯತ್ವವನ್ನು ಪಡೆದು ತಮ್ಮ ಜೀವನ ಪಾವನವಾಯಿತೆಂದು ಹಲುಬುವುದನ್ನು ಕಂಡು ವಿಚಿತ್ರವೆನಿಸುತ್ತಿತ್ತು. ಏಕೆಂದರೆ ಅಂತಹ ಬಹುಪಾಲು ಜನರು ಕಾಮ್ಯೂನಿಸ್ಟ್ ಪಕ್ಷ, ಕಾರ್ಮಿಕ ನೀತಿ, ಲಾಲ್ ಸಲಾಂ ಎಂದು ಜೀವನಪರ್ಯಂತ ಹೋರಾಡಿ ತಮ್ಮ ಮಕ್ಕಳಿಗೆ ಲೆನಿನ್, ಸ್ಟಾಲಿನ್ ಎಂದು ಹೆಸರಿಟ್ಟವರಿದ್ದರು. ಅಮಿತಾಬ್, ಶತ್ರುಘ್ನ, ಶಶಿಕಪೂರರ "ಕಾಲಾ ಪತ್ತರ್" ಅಂತಹ ಕಾರ್ಮಿಕ ಹೋರಾಟ, ಗಣಿ/ಭೂ ಮತ್ತಿತರೆ ಮಾಲೀಕ - ಕಾರ್ಮಿಕ ಸಿನೆಮಾವನ್ನು ಕ್ಲಬ್ಬಿನ ವಿಸಿಆರ್ನಲ್ಲಿ ಹಾಕಿ ನೋಡುತ್ತಿದ್ದ ಈ ಮಾಜಿ ಕಾರ್ಮಿಕರು ಸರ್ದಾರ್ಜಿ ಬಂದೊಡನೆ ಅವನು ಹಾಕುತ್ತಿದ್ದ ಹೆಲೆನ್ ನೃತ್ಯ ನೋಡುತ್ತಾ ತಮ್ಮದೇ ಭಡ್ತಿ ಹೊಂದದ "ನಾನ್ - ಆಫೀಸರ್" ಸ್ನೇಹಿತರ ಕುರಿತು ತುಚ್ಛವಾಗಿ ಅಧಿಕಾರಶಾಹಿ ಉಕ್ತಿಗಳನ್ನು ಉದುರಿಸುತ್ತಿದ್ದರು. ದಾವಣಗೆರೆಯ ಪಂಪಾಪತಿ, ಮೇ ದಿನಾಚರಣೆಯ ಪರೇಡುಗಳನ್ನು ನೋಡುತ್ತಾ ಏನೋ ಒಂದು ಕಾರ್ಮಿಕ ಆದರ್ಶ ನಂಬಿದ್ದ ನನಗೆ ಈ ಕಾರ್ಮಿಕ ಪೊರೆ ಕಳಚಿದ ನವ ಅಧಿಕಾರಶಾಹಿಗಳಷ್ಟೇ ಅಲ್ಲದೆ ಇಂದಿನ, ಹಿಂದಿನ ಎಂದೆಂದಿನ ಕಾಮ್ಯುನಿಸ್ಟ್ ನಾಯಕವರ್ಗಕ್ಕೂ ಯಾವುದೇ ವ್ಯತ್ಯಾಸ ಇಲ್ಲವೆಂದು ನನಗೆ ಅರಿವು ಮೂಡಿಸಿ ದೊಡ್ಡ ಭ್ರಮೆಯನ್ನು ಕಳಚಿಹಾಕಿಸಿದ್ದರು.


ಈ ಭ್ರಮೆ ಕಳಚಿಕೊಂಡು, ಪ್ರಾಜೆಕ್ಟ್ ಮುಗಿಸಿ ಊರ ಹೊರಗಿದ್ದ ಐಟಿಐ ಕ್ಯಾಂಪಸ್ಸಿನಿಂದ ಜನನಿಬಿಡ ಮಾಗಡಿ ರಸ್ತೆಯ ರಹೇಜಾ ಟವರ್ರಿನ ಗೋವಿಂದರಾಜನಗರಕ್ಕೆ ಪದಾರಿಸಿದ್ದೆ. ಆ ರಹೇಜಾ ಅಪಾರ್ಟ್ಮೆಂಟಿನ ಎದುರಿಗಿದ್ದದ್ದೇ ಈ "ಅಂಬಾಭವಾನಿ ಮಿಲ್ಟ್ರಿ ಹೋಟೆಲ್!" ಎಂತದೋ ಒಂದು ಕೆಲಸ ಹಿಡಿದು ಉತ್ತಮ ಅವಕಾಶಕ್ಕೆ ಹುಡುಕುತ್ತಾ ಆ ಹುಡುಕಾಟದ ನೀರಸ ಕ್ಷಣಗಳನ್ನು ರಸಗಳಿಗೆಗಳಾಗಿಸುವ ಒಂದು ಓಯಸಿಸ್ ಈ ಅಂಬಾಭವಾನಿ ಆಗಿತ್ತು. ಅಲ್ಲಿನ ಬಾಯಲ್ಲಿ ಕರಗುತ್ತಿದ್ದ ಕೈಮಾ, ಮುದ್ದೆ, ಶೇರ್ವಾ ಜೊತೆಗೆ ನಂಚಿಕೊಳ್ಳಲು ನಿಮ್ಮದೇನು ಮಹಾ ನೀರಸ ಎಂದು ಜಗತ್ತನ್ನೇ ಹೊತ್ತು ನಿಂತ ಹರ್ಕ್ಯುಲಿಸ್ ರಮ್ ರಸ ನನ್ನೆಲ್ಲಾ ಸಸ್ಯಾಹಾರಿ ಮಿತ್ರರ ಬಹು ಆಪ್ಯಾಯಮಾನ ಖಾದ್ಯವಾಗಿತ್ತು!


ಅದೇಕೋ ದಶಕಗಳ ನಂತರ ಈ ವಾರ ಐಟಿಐ, ಆಫೀಸರ್ಸ್ ಕ್ಲಬ್, ಕಾಮ್ಯುನಿಸ್ಟ್ , ಅಂಬಾಭವಾನಿ ಮತ್ತಲ್ಲಿನ ನಾಟಿ ಮಾತುಗಳು ನನ್ನನ್ನು ಕಾಡತೊಡಗಿದವು. ಈ ನೆನಪುಗಳನ್ನು ತೀವ್ರಗೊಳಿಸಿ ಕಾಡಲು ನಾಟಿ ಮಾತು ಹೋಲುವ ಶಾಟವೂ/ಬರ್ಟನ್ನನ್ನ ಲಂಡವೋ (Chateau Lande De Buetin) ಎಂಬ ಫ್ರಾನ್ಸಿನ ವೈನ್ ಉತ್ತೇಜಿಸಿ ಉನ್ಮಾದಿಸಿತು. ಇದನ್ನು ತೀವ್ರವಾಗಿ ಅನುಭವಿಸುವ ಹೊತ್ತಿನಲ್ಲಿ ಆಕೆಯ ಕರೆ ರಿಂಗಣಿಸಿತು!!!

No comments:

Post a Comment