'ಅರಿದಡೆ ಆರದು ಮರೆದಡೆ ಮೂರದು' ಕುರಿತು ನೀಲಾ ಅವರ ಅಭಿಪ್ರಾಯ

ಸಾಮಾಜಿಕ ಕಳಕಳಿಯ ಹೊತ್ತಗೆ 'ಅರಿದಡೆ ಆರದು ಮರೆದಡೆ ಮೂರದು' 


ನಾವೀನ್ಯಯುತ ಸಾಹಿತ್ಯಕ ಪ್ರಯೋಗವುಳ್ಳ ರವಿ ಹಂಜ್ ಅವರ 'ಅರಿದಡೆ ಆರದು ಮರೆದಡೆ ಮೂರದು' ಕಾದಂಬರಿಯು ಮಠೀಯ ವ್ಯವಸ್ಥೆಯನ್ನು ಅರಹುವ ಕೃತಿಯಾಗಿದೆ. ಸಂಶೋಧಕನಾತ್ಮಕ, ವಿಮರ್ಶಾತ್ಮಕ ಕೃತಿಗಳಿಗೆ ಹೆಸರಾಗಿರುವ ಲೇಖಕರ ಪ್ರಸ್ತುತ ಕೃತಿಯು ಇತಿಹಾಸ ಆಧಾರಿತ ಕಥನವು ಹೇಗೆ ಸಮಕಾಲೀನ ಜಗತ್ತಿನಲ್ಲೂ ಪುನರಾವರ್ತಿತವಾಗಿ ಮರುಕಳಿಸುತ್ತಲೇ ಇರುತ್ತದೆ ಎಂಬುದನ್ನು ಸಾಬೀತುಪಡಿಸುತ್ತದೆ. ಅಂತಹ ಸಾರ್ವತ್ರಿಕ ಶೀರ್ಷಿಕೆಯನ್ನು ಹೊಂದಿರುವ ಕಾದಂಬರಿಯು 'ವ್ಯಕ್ತಿಯೋರ್ವನು ತನ್ನ ಜೀವನದ ಪ್ರತಿಯೊಂದು ತಿರುವುಗಳಲ್ಲೂ ಅರಿತು ನಡೆದರೆ ಮಾತ್ರ ಸದ್ಗತಿಯನ್ನು ಹೊಂದಲು ಸಾಧ್ಯವೇ ವಿನಃ ತನ್ನ ಅಸ್ತಿತ್ವವನ್ನು, ಘನತೆಯನ್ನು ಮರೆತು ನಡೆದರೆ ದುಸ್ಥಿತಿಯು ಎದುರಾಗದೇ ಇರದು' ಎಂಬ ಸಾಮಾಜಿಕ ಕಳಕಳಿಯ ಸಂದೇಶವನ್ನು ಅರಹುತ್ತದೆ. ಲೇಖಕರ ಈವರೆಗಿನ ಕೃತಿಗಳನ್ನು ಗಮನಿಸಲಾಗಿ, ಸಂಶೋಧಕರು ಕಥೆಗಾರರಾದುದು ಯಾವಾಗ ಎಂದು ಬೆರಗು ಮೂಡಿಸುವ ಅವರ ಯಶಸ್ವಿ ಕಾದಂಬರಿ ಪ್ರಯೋಗವಾಗಿದೆ. ಕೃತಿಯ ಆರಂಭಿಕ ಅಧ್ಯಾಯ 'ಬಿಂಬಗಲ್ಲಿನ ಮೃಗವಧ ಸಂಸ್ಥಾನ'- ಕಥನದಿಂದ ಕೊನೆಯ ಅಧ್ಯಾಯ ಬಿಂಬಮಾಯೆಯ ವರೆಗೂ ಇದರ ಶೀರ್ಷಿಕೆಯ/ಮೌಲ್ಯದ ಸಮಂಜಸತೆಗೆ ಪಾತ್ರಗಳನ್ನು ಒರೆಗೆ ಹಚ್ಚುವ ಮೂಲಕ ನಿರಂತರವಾಗಿ ಅವರನ್ನು ಎಚ್ಚರಿಸುತ್ತಲೇ ಬರುತ್ತದೆ. ಆದಾಗ್ಯೂ 'ಮೇಲೇರಿದ್ದು ಕೆಳಗಿಳಿಯಲೇಬೇಕು' ಎಂಬ (ಲೇಖಕರ) ಸಾರ್ವತ್ರಿಕ ಉಕ್ತಿಯಂತೆ ಕಾಲನ ಕೈಯಲ್ಲಿ ಎಲ್ಲರೂ ಆಟಿಕೆಗಳೇ ಎನ್ನುವ ವಾಸ್ತವವನ್ನು ತೆರೆದಿಡುವ ಕಹಿ-ಸತ್ಯವನ್ನು ಇಲ್ಲಿ ತೋರ್ಪಡಿಸಲಾಗಿದೆ. 

 

*ಸಮಾಜದಲ್ಲಿ ಕಟ್ಟಳೆಗಳಿಲ್ಲದಿದ್ದರೆ ಮನುಷ್ಯನು ಅನ್ಯ ಮಾರ್ಗಗಳನ್ನು ತುಳಿಯುತ್ತಲೇ ಇರಲಿಲ್ಲ. ಸಮಾಜವು ಒಡ್ಡುವ ಅತಿರೇಕದ ಕಟ್ಟಳೆಗಳಿಂದಲೇ ಬಹುಶಃ ಮನುಷ್ಯನ ಮರ್ಕಟ ಮನಸ್ಸು ಅವುಗಳಿಗೆಲ್ಲ ಪ್ರತಿರೋಧವೊಡ್ಡಿ, ದಾರಿತಪ್ಪಿ ಅನಾಹುತಗಳಿಗೆ ಈಡಾಗುತ್ತದೆ..  


*ಲೇಖಕರ ಪ್ರಸ್ತುತ ಕಾದಂಬರಿಯನ್ನೂ ಒಳಗೊಂಡಂತೆ ಇತರೆ ಕೃತಿಗಳನ್ನು ಸಮೀಕ್ಷಿಸಲಾಗಿ, ಅವರು ಕೇವಲ ಪಾತ್ರಗಳನ್ನಷ್ಟೇ ಸೃಷ್ಟಿಸುವುದಿಲ್ಲ, ಆ ಪಾತ್ರಗಳ ವರ್ತನೆಗಳಿಗೆ ಸೂಕ್ತ ಮನೋವೈಜ್ಞಾನಿಕ ಕಾರಣಗಳನ್ನೂ ಕೊಡುತ್ತ ಕಥೆಯನ್ನು ಸಮರ್ಪಕವಾಗಿ/ವೈಜ್ಞಾನಿಕವಾಗಿ/ವಸ್ತುನಿಷ್ಠವಾಗಿ ಕಟ್ಟಿಕೊಡುತ್ತಾರೆ. ಪಾತ್ರವೊಂದರ ಪೂರ್ವಗ್ರಹಗಳು, ಅಸಹಾಯಕತೆ, ಉಪಶಮನಗಳಂತಹ ಭಾವನೆಗಳೇ ಅವುಗಳ ಸದಾಚಾರ ಮತ್ತು ದುರಾಚಾರದ ನಡೆಗೆ ಕಾರಣವೆಂಬುದನ್ನು ಸಹ ಸ್ಪಷ್ಟಪಡಿಸುತ್ತಾರೆ. 


*ವೀರಶೈವ, ಸನ್ಯಾಸತ್ವ, ಪಂಚಾಚಾರ ಮುಂತಾದ ಪರಿಕಲ್ಪನೆಗಳ ಬಗ್ಗೆ ಲೇಖಕರು ಪಾತ್ರವೊಂದರ ಮುಖೇನ ಸ್ಥೂಲವಾಗಿ ಅರ್ಥೈಸಿರುತ್ತಾರೆ. ಇಂತಹ ಮಾದರಿ ವ್ಯವಸ್ಥೆಗೆ ಒಗ್ಗಿಕೊಳ್ಳದ ಸಮಾಜದ ಮಹತ್ತರವಾದ ಸ್ಥಾನದಲ್ಲಿರುವ ಮಠದ ಪೀಠಾಧಿಪತಿ ಮತ್ತು ಅಂಥವರು ಎಸಗುವ ಅಪಚಾರವನ್ನು ಖಂಡಿಸುವ/ವಿಡಂಬನೆ ಮಾಡುವ ಮೂಲಕ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶವನ್ನು ಕೊಟ್ಟಿರುತ್ತಾರೆ. ಅಂತೆಯೇ ಇಂತಹ ಸತ್ಯವನ್ನು ಎತ್ತಿ ಹಿಡಿಯುವ ಸಾತ್ವಿಕ ಧೈರ್ಯವನ್ನು ತೋರುತ್ತಾರೆ.  


*ಮನುಷ್ಯನಿಗೆ ತನ್ನ ಅಗತ್ಯಗಳನ್ನು ಪೂರೈಸಿಕೊಳ್ಳುವಲ್ಲಿ ಕೊರತೆ ಅನುಭವಿಸಿದಾಗಲೇ ಅದನ್ನು ಬೆಂಬತ್ತುವ ಮೂಲಕ ಅನ್ಯ ಮಾರ್ಗವನ್ನು ಆಯ್ದುಕೊಳ್ಳುತ್ತಾನೆ. ಸರಿ ತಪ್ಪುಗಳ ಗೊಡವೆಗೆ ಹೋಗದೇ ತಕ್ಷಣದ ಸುಖ, ಸಂತೃಪ್ತಿ, ನೆಮ್ಮದಿಗೋಸ್ಕರ ಹಪಹಪಿಸುತ್ತಾನೆ. ಸಮಾಜವು ಓರ್ವ ವ್ಯಕ್ತಿಯನ್ನು ಅವನ ವೃತ್ತಿಗೆ ಪೂರಕವಿರುವ ಸಂಹಿತೆಗಳಿಗನುಗುಣವಾಗಿ ನಡೆಯುವಂತೆ ಕಟ್ಟಳೆಗಳನ್ನು ವಿಧಿಸಿದರೂ ಸಹ ಅವನ ಮನಸ್ಸು/ಪ್ರವೃತ್ತಿಯು ಯಾರಿಗೂ/ಯಾವುದಕ್ಕೂ/ಯಾವ ವ್ಯವಸ್ಥೆಗೂ ಬಂಧಿಯಲ್ಲವಲ್ಲ? ಅವನೊಬ್ಬ ಕಟ್ಟಳೆಗಳನ್ನು ಮೀರುವ, ಬಂಧ-ಮುಕ್ತನಾಗುವ, ಮುಕ್ತತೆಯನ್ನು ಬಯಸುವ, ಮನಸೋ ಇಚ್ಛೆ ಜೀವಿಸಲು ಬಯಸುವ ಜೀವಿ ಎಂದಷ್ಟೇ ತೀರ್ಮಾನಿಸಬಹುದೇ ವಿನಃ ಅವನಿಗೆ ಕಣ್ತಡೆಪಟ್ಟಿಗಳನ್ನು ಹಾಕಿ ನೇರವಾದ ಮಾರ್ಗದಲ್ಲಿ ನಡೆ ಎಂದು ಪ್ರತಿಬಂಧಿಸಲು ಸಾಧ್ಯವಾದೀತೇ? ಪ್ರತಿಯೊಬ್ಬ ವ್ಯಕ್ತಿ ವಿಭಿನ್ನವಾಗಿದ್ದರೂ ಸಹ ನಮ್ಮ ಸಂಹಿತೆ/ನೀತಿಗಳು ಮಾತ್ರ ಎಲ್ಲರಿಗೂ ಸಮಾನ! 

 

*ಹೇಳಬೇಕಾದ್ದನ್ನು ಮುಕ್ತವಾಗಿ ಹೇಳಿದಾಗಲೇ ಅದು ವಸ್ತುನಿಷ್ಠ ಸಾಹಿತ್ಯ ಎಂದು ಕರೆಸಿಕೊಳ್ಳುತ್ತದೆ.  ಸಿನೆಮಾದ ತರಹ ಸೆನ್ಸಾರ್ ಸಿಸರ್ ಪ್ರಯೋಗಿಸಿದರೆ ಅಂತಹ ಸಾಹಿತ್ಯ ರುಚಿಸದು. ಇಂತಹ ಸಮಕಾಲೀನ ರಸಿಕತೆಯ ಸಾಮರಸ್ಯವನ್ನು ಲೇಖಕರು ತಮ್ಮ ಕೃತಿಯಲ್ಲಿ ಯಶಸ್ವಿಯಾಗಿ ಸಾಧಿಸಿರುತ್ತಾರೆ. ಅನಿವಾಸಿಯಾಗಿದ್ದರೂ ಸಹ ನೆಲದ ಭಾಷಾ ಸೊಗಡು ಪ್ರಾದೇಶಿಕರಲ್ಲಿ ಆಶ್ಚರ್ಯವನ್ನು ಉಂಟುಮಾಡುವಂತದ್ದು! ಕೃತಿಯಲ್ಲಿನ ಕೆಲವು ನಾಟಿ ಪದಗಳ ಬಳಕೆಯು ಬಹುಶಃ ನಮ್ಮ ತಲೆಮಾರಿನವರಿಗೆ ಮಾತ್ರ ಅರ್ಥವಾಗಬಲ್ಲದು. ನಮ್ಮ ನಂತರದ ತಲೆಮಾರಿನವರಿಗಾಗಿ ಗ್ಲೋಸರಿಯ ಅಗತ್ಯ ಉಂಟಾಗಬಹುದೆಂದು ಖಾಸಗಿಯಾದ ಅಭಿಪ್ರಾಯ. ಇದರ ಹೊರತು ಕೃತಿಯು ಅತ್ಯಂತ ಆಪ್ತವೆನಿಸುವ ಗಟ್ಟಿ ಭಾಷೆಯನ್ನು ಒಳಗೊಂಡಿದೆ. 

ಒಟ್ಟಾರೆಯಾಗಿ, ಕಾದಂಬರಿಯಲ್ಲಿನ ಪಾತ್ರಗಳ ಸೃಷ್ಟಿಯಂತೂ ಅದ್ಭುತವಾದುದು! ಬಿಂಬಗಲ್ಲಿನಿಂದ ಡ್ಯಾಲಸ್ ವರೆಗಿನ ಪಾತ್ರವೊಂದರ ಪ್ರಯಾಣವು ರೋಚಕವಾಗಿದೆ. ಕೃತಿಯ ಸಂದೇಶವು ವ್ಯವಸ್ಥೆಯೊಂದರ ಬದಲಾವಣೆಗೆ ನಾಂದಿಯಾಗುವಂತಹುದು. ಹಾಗಾಗಿ ಕೃತಿಯು ಸಂಪೂರ್ಣವಾಗಿ ಲೇಖಕನೋರ್ವನಿಗೆ ಇರಲೇಬೇಕಾದ ಸಾಮಾಜಿಕ ಕರ್ತವ್ಯವನ್ನು, ಸಾಹಿತ್ಯಕ ಹೊಣೆಯನ್ನು ನಿಭಾಯಿಸುವ ಕ್ರಮ ಹೇಗೆಂಬುದಕ್ಕೆ ಮಾದರಿಯಾಗಿದೆ. 


-ನೀಲಾ. ಆರ್. ಎಮ್ 


ಪ್ರತಿಗಳಿಗೆ ಸಂಪರ್ಕಿಸಿ:

ಸಂವಹನ ಪ್ರಕಾಶನ, ಮೈಸೂರು

ದರ: ₹೨೫೦.

rajendraprinters@gmail.com

Ph: +919902639593

ರೂಪಾ ಮತ್ತಿಕೆರೆ

+919945010606

No comments:

Post a Comment