OCI Et al

 "ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ", "ಕನ್ನಡ ಎನೆ ಕುಣಿದಾಡುವುದೆನ್ನೆದೆ", "ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು" ಎಂಬ ಸಾಲುಗಳು ಹೇಗೆ ನಮ್ಮಲ್ಲಿ ಒಂದು ಮಿಂಚು ಮೂಡಿಸಿ ಪ್ರಾಣವನ್ನೇ ಕೊಟ್ಟೇವು ಎನ್ನುವಷ್ಟು ಭ್ರಾಮಕ ಭಾವನೆಯನ್ನು ಮೂಡಿಸುವವೋ ಅದಕ್ಕೆ ನೂರ್ಪಟ್ಟು ಭಾವನೆಯನ್ನು ಅನಿವಾಸಿಗಳಲ್ಲಿ "ಸಾಗರೋತ್ತರ ಭಾರತೀಯ ಪ್ರಜೆ" ಎಂಬ ಸಾಲು ಮತ್ತದನ್ನು ದೃಢೀಕರಿಸುವ ಸರ್ಕಾರಿ ಪತ್ರವು ಮೂಡಿಸುವುದು. ಅಂತೆಯೇ ಒಂದು ಆಂತರಿಕ ಅನಿವಾಸಿತನಕ್ಕೆ ಸಿಲುಕಿ ಅಂತರಿಕ್ಷಕ್ಕೆ ಹಾರಿದ್ದ ರವೀಶ್ ಮಲ್ಹೋತ್ರಾ ಸಹ ಅಂದು ಪ್ರಧಾನಿ ಇಂದಿರಗಾಂಧಿಯವರು "ಅಂತರಿಕ್ಷದಿಂದ ಭಾರತ ಹೇಗೆ ಕಾಣಿಸುತ್ತದೆ?" ಎಂದಾಗ "ಸಾರೇ ಜಹಾನ್ ಸೆ ಅಚ್ಚಾ" ಎಂದು ಹೇಳಿ ಕೋಟ್ಯಾಂತರ ಭಾರತೀಯರಲ್ಲಿ ಪುಳಕವನ್ನುಂಟುಮಾಡಿದ್ದರು. ಇದು ಭಾವನೆಗಳನ್ನು ಮೀಟುವ ಕಲೆ!

ಅಟಲ್ ಬಿಹಾರಿ ವಾಜಪೇಯಿಯವರು ಅನಿವಾಸಿ ಭಾರತೀಯರಿಗೆ ದ್ವಿಪೌರತ್ವ ಕೊಡುವ ಯೋಜನೆಯ ಆರಂಭಿಕ ಹಂತವಾಗಿ "Person of Indian Origin (PIO) ಯಾನೆ ಭಾರತೀಯ ಮೂಲದ ವ್ಯಕ್ತಿ" ಎಂಬ ಕಾರ್ಡನ್ನು ಜಾರಿಗೊಳಿಸಿ ಅನಿವಾಸಿಗಳಲ್ಲಿ ಪುಳಕವನ್ನುಂಟು ಮಾಡಿ ಭಾವನೆಗಳನ್ನು ಮೀಟಿದ್ದರು. ಇಲ್ಲಿ ದಯಮಾಡಿ ಪಂಕಜ್ ಉದಾಸನ "ಚಿಟ್ಟಿ ಆಯಿ ಹೈ ವತನ್ ಸೇ ಚಿಟ್ಟಿ..." ಹಾಡು ಮತ್ತದರ ಸಿನೆಮಾ ಚಿತ್ರಣದ ದೃಶ್ಯವನ್ನು ಜ್ಞಾಪಿಸಿಕೊಳ್ಳಬೇಕಾಗಿ ವಿನಂತಿ.  ೨೦೦೫ ರಲ್ಲಿ ಕಾಂಗ್ರೆಸ್ ಸರ್ಕಾರ ದ್ವಿಪೌರತ್ವದ ಮುಂದಿನ ಹಂತವಾಗಿ OCI ಎಂದು ಇನ್ನಷ್ಟು ಮೀಟಿ ಅನಿವಾಸಿಗಳಲ್ಲಿ ದೇಶಭಕ್ತಿಯ ಹುಚ್ಚು ಹೊಳೆ ಹರಿಯುವಂತೆ ಮಾಡಿತು.  ಮತ್ತದೇ ಪಂಕಜ್ ಉದಾಸನ "ಚಿಟ್ಟಿ ಆಯಿ ಹೈ ವತನ್ ಸೇ ಚಿಟ್ಟಿ..." ಹಾಡು ಮತ್ತದರ ಸಿನೆಮಾ ಚಿತ್ರಣದ ದೃಶ್ಯವನ್ನು ಜ್ಞಾಪಿಸಿಕೊಳ್ಳಬೇಕಾಗಿ ವಿನಂತಿ.

ಕೇವಲ ಓಟು, ಸರ್ಕಾರಿ ನೌಕರಿ, ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧೆ ಬಿಟ್ಟರೆ ಇನ್ನೆಲ್ಲಾ ಸಮಾನ ನಾಗರಿಕ ಹಕ್ಕುಗಳು ನಿಮ್ಮವು ಎಂಬ ಭಾರತ ಸರ್ಕಾರದ ಕರೆಗೆ ಓಗೊಟ್ಟು, ೨೦೦೫ ರಿಂದ ಸಾಕಷ್ಟು ಅನಿವಾಸಿಗಳು ಹಿಂದೆ ಮುಂದೆ ನೋಡದೆ ಭಾವುಕರಾಗಿ ತಾವಿದ್ದ ದೇಶಕ್ಕಿಂತ ಭಾರತದಲ್ಲಿ ಮನೆ ಮಠ ಮಾಡುವುದರೊಂದಿಗೆ ಭಾಷೆ, ತಾಯ್ನಾಡಿನ ಪ್ರತಿರೂಪವೇ ಆದ ಪಿತ್ರಾರ್ಜಿತ ಕೃಷಿ ಭೂಮಿಗೆ ಹಣ ಸುರಿಸುರಿದು ಹಾಕಿದರು. OCI ಎಂಬ ಚಿಟ್ಟಿ ಹಿಡಿದು ಭಾರತ್ ಕಿ ಮಿಟ್ಟಿಯನ್ನು ಹಣೆಗೆ ಪೂಸಿಕೊಂಡರು. ಅಂತಹ ಮಿಂಚಿನ ಸಂಚಾರವನ್ನು "ಸಾಗರೋತ್ತರ ಭಾರತೀಯ ಪ್ರಜೆ" ಸೃಷ್ಟಿಸಿತು. ವೈಭವೀಕರಣದ ಉದ್ಘೋಷದ ಆಮಿಷಕ್ಕೆ ಬಿದ್ದ ಅನಿವಾಸಿಗಳು ಭಾರತೀಯ ದೂತಾವಾಸದ ವೀಸಾ ಜಂಜಾಟದಿಂದ ಮುಕ್ತಿ ಸಿಕ್ಕಿತೆಂದು ಈ "ಸಾಗರೋತ್ತರ ಭಾರತೀಯ ಪ್ರಜೆ"ಗಳಾಗಿ OCI ಯೋಜನೆಯನ್ನು ಅಭೂತಪೂರ್ವಗೊಳಿಸಿದರು.

ಭಾರತೀಯ ಪೌರತ್ವ ಕಾಯ್ದೆ ೧೯೫೫ ಸೆಕ್ಷನ್ ೮ ರ ಪ್ರಕಾರ ಇತರೆ ದೇಶದ ಪೌರತ್ವ ಪಡೆದ ವಯಸ್ಕ ಸ್ಥಿಮಿತ ಬುದ್ದಿಯ "ಹುಟ್ಟು" ಭಾರತೀಯ ಪ್ರಜೆಯು "ಸ್ವಇಚ್ಛೆ"ಯಿಂದ ತನ್ನ ಭಾರತೀಯ ಪೌರತ್ವವನ್ನು ಕೇಂದ್ರ ಸರ್ಕಾರಿ ನಿಯೋಜಿತ ಕ್ರಮದ ಪ್ರಕಾರ ತ್ಯಜಿಸಿದರೆ ಆಗ ಅವನ/ಳ ಭಾರತೀಯ ಪೌರತ್ವ ಅಂತ್ಯವಾಗುತ್ತದೆ. ಒಂದು ವೇಳೆ ಆತನ/ಆಕೆಯ ಭಾರತೀಯ ಪೌರತ್ವವು "ವಲಸೆ ಮೂಲಕ" ಪಡೆದಿದ್ದುದಾಗಿ ಮತ್ತು ಆತನು/ಆಕೆಯು ಇನ್ನೊಂದು ದೇಶದ ಪೌರತ್ವ ಪಡೆದರೆ ಆಗ ಆತನ/ಅವಳ ಭಾರತೀಯ ಪೌರತ್ವವು ತಕ್ಷಣಕ್ಕೆ ರದ್ದಾಗುತ್ತದೆ.

ಅಂದರೆ ಹುಟ್ಟಿನಿಂದ (ಜನವರಿ ೨೬, ೧೯೫೦ ರಂದು ಯಾ ನಂತರ ಭಾರತದಲ್ಲಿ ಜನಿಸಿದವರು ಹುಟ್ಟಿನಿಂದ ಭಾರತೀಯರು) ಅಥವಾ ಪಿತ್ರಾರ್ಜಿತವಾಗಿ ಭಾರತೀಯ ಪೌರತ್ವ ಪಡೆದ ವ್ಯಕ್ತಿಯು (ಜನವರಿ ೨೬, ೧೯೫೦ ರಂದು ಯಾ ನಂತರ ಭಾರತದಲ್ಲಿ ಜನಿಸಿದ ಭಾರತೀಯನ ಮಗ(ಳು)) ತನ್ನ ಪೌರತ್ವವನ್ನು ಕೇಂದ್ರ ಸರ್ಕಾರ ನಿಯೋಜಿಸಿದ ನಿಯಮದ ಪ್ರಕಾರ ಕಡ್ಡಾಯವಾಗಿ ಪರಿತ್ಯಾಗ ಮಾಡಿದಾಗ ಮಾತ್ರ ಆತನ/ಆಕೆಯ ಪೌರತ್ವ ರದ್ದಾಗುತ್ತದೆ. ಅದು ಆತನ ಭಾರತೀಯ ಸಂಜಾತ ಸಂವಿಧಾನಿಕ ಹಕ್ಕು.

"ಹುಟ್ಟಿದ ಮಗುವಿನ ಹೊಕ್ಕಳ ಬಳ್ಳಿಯನ್ನು ಕತ್ತರಿಸಿ ಯಾವ ಭೂಮಿಯಲ್ಲಿ ಹುಗಿಯುತ್ತಾರೋ ಅದೇ ಆ ಮಗುವಿನ ಮಾತೃಭೂಮಿ" ಎಂಬ ಅನ್ನು ಕಪೂರ್ ಉದ್ಘೋಷವನ್ನು ಇಲ್ಲಿ ನೆನಪಿಸಿಕೊಳ್ಳುವುದು ಕಡ್ಡಾಯ.

ಮೊದಲೆಲ್ಲ  ಈ "ಸಾಗರೋತ್ತರ ಭಾರತೀಯ ಪ್ರಜೆ"ಯಾಗಲು ಈ ಭಾರತೀಯ "ಪೌರತ್ವ ಪರಿತ್ಯಾಗ" (Renounciation of Indian Citizenship) ಅವಶ್ಯ ಇರಲಿಲ್ಲ.  ಕ್ರಮೇಣವಾಗಿ ಕೇಂದ್ರ ಸರ್ಕಾರ ಮೇಲಿನ ಪೌರತ್ವ ಕಾಯ್ದೆ ೧೯೫೫ ರ ಸೆಕ್ಷನ್ ೮ ರ ಪೌರತ್ವ ಪರಿತ್ಯಾಗವನ್ನು OCI ಪಡೆಯಲು ಅದ್ಯಾವ ಕಾರಣಕ್ಕೋ ಕಡ್ಡಾಯಗೊಳಿಸಿತು. ಅನಿವಾಸಿಗಳು ಸಾಗರೋತ್ತರ ಪೌರರಾಗಲು ಈ ಒಳನಾಡು ಪೌರತ್ವ ಪರಿತ್ಯಾಗ ಅವಶ್ಯಕ ಎಂದು ವಯಸ್ಕ/ಸ್ಥಿಮಿತ ಬುದ್ದಿಯ ಅನಿವಾಸಿಗಳಿಗೆ ನಿರ್ದೇಶಿಸಿತು. ಅಲ್ಲಿಗೆ ಯಾವ ಅನಿವಾಸಿಯೂ ಇದನ್ನು "ಸ್ವಇಚ್ಛೆಯಿಂದ ಪರಿತ್ಯಾಗ" ಮಾಡಿದ್ದಲ್ಲ, ಕಡ್ಡಾಯವಾಗಿ ಸರ್ಕಾರಿ ನಿರ್ದೇಶನದಿಂದ ಮಾಡಿದ್ದು ಎಂಬುದು ಗಮನಾರ್ಹ. ಇದು ಹುಟ್ಟಿನಿಂದ ಅಥವಾ ಪಿತ್ರಾರ್ಜಿತವಾಗಿ ಭಾರತೀಯ ಪೌರತ್ವ ಪಡೆದುಕೊಂಡವನ ಸಾಂವಿಧಾನಿಕ ಹಕ್ಕಿನ ಉಲ್ಲಂಘನೆ! 

ಇದರ ಅನುಷ್ಠಾನ ಆದದ್ದು ಕಾಂಗ್ರೆಸ್ ಸರ್ಕಾರದಲ್ಲಿ.

ಇಂತಹ ಸಾಂವಿಧಾನಿಕ ಹಕ್ಕಿನ ಉಲ್ಲಂಘನೆಯ ಮೇಲೆ ಮಾರಣಾಂತಿಕ ಉಲ್ಲಂಘನೆಯನ್ನು ಮೋದಿ ಸರ್ಕಾರದ ಪೌರತ್ವ ಕಾಯ್ದೆ ತಿದ್ದುಪಡಿ ೨೦೧೯ ತಂದಿದೆ. ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾ ದೇಶಗಳಲ್ಲಿನ ಹಿಂದೂ, ಬೌದ್ಧ, ಜೈನ, ಪಾರ್ಸಿ, ಕ್ರಿಶ್ಚಿಯನ್ ಅಲ್ಪಸಂಖ್ಯಾತರಿಗೆ ಪೌರತ್ವ ಕೊಡುವುದು ಈ ತಿದ್ದುಪಡಿಯ ಉದ್ದೇಶವಾಗಿತ್ತು. ಆದರೆ ಈ ಅಬ್ಬರದ ತಿದ್ದುಪಡಿಯ ನಡುವೆ ನಿಶ್ಶಬ್ದವಾಗಿ, "ಸಾಗರೋತ್ತರ ಭಾರತೀಯ ಪ್ರಜೆಯು ಕೊಲೆಯಂತಹ ಘೋರ ಅಪರಾಧದಿಂದ ಹಿಡಿದು ಯಾವುದೇ ಅತಿ ಸಣ್ಣ ಕಾನೂನು ಉಲ್ಲಂಘನೆ ಮಾಡಿದರೂ ಅವನ/ಅವಳ ಸಾಗರೋತ್ತರ ಪೌರತ್ವವನ್ನು ಸರ್ಕಾರ ರದ್ದು ಮಾಡಬಹುದು" ಎಂಬ ತಿದ್ದುಪಡಿಯನ್ನೂ ಸೇರಿಸಿಬಿಟ್ಟಿದೆ. ಅಂದರೆ ಯಾವುದೇ ಒಂದು ಸಣ್ಣ ಟ್ರಾಫಿಕ್ ತಪ್ಪು ಸಾಗರೋತ್ತರ ಪ್ರಜೆಯನ್ನು ಹದಿನೈದು ದಿನದಲ್ಲಿ ಸಾಗರೋತ್ತರಕ್ಕೆ ಗಡಿಪಾರು ಮಾಡಬಹುದು. ಅಂತಹ ಪ್ರಯೋಗವನ್ನು ಕೃಷಿ ಕಾಯ್ದೆ ವಿರೋಧಿಸಿ ಚಳುವಳಿ ಮಾಡಿದವರನ್ನು ಬೆಂಬಲಿಸಿದ OCIಗಳ ಮೇಲೆ ಮಾಡಲಾಗಿದೆ ಎಂಬ ಕೂಗಿದೆ. ಇತ್ತೀಚೆಗೆ ಅಹಿಂಸಾ ಚೇತನ್ ಮೇಲೆ ಸಹ ಈ ಪ್ರಯತ್ನ ನಡೆದಿದೆಯೆಂದರೆ, ಈ ತಿದ್ದುಪಡಿಯ ಹಿಂದಿನ ಉದ್ದೇಶ ಸ್ಪಷ್ಟ. ಅಲ್ಲಿಗೆ OCI ಚಿಟ್ಟಿ ಕೊಟ್ಟು ಅನಿವಾಸಿಗಳನ್ನು ಮಿಟ್ಟಿಯಲ್ಲಿ ಸರಿಯಾಗಿ ಮಿಲಾಯಿಸಲಾಯಿತು.

ಇರಲಿ, ಇದು ಸ್ಪಷ್ಟವಾಗಿ ಸಂವಿಧಾನದ ಸಮಾನ ನ್ಯಾಯ ಮತ್ತು ಸ್ವಾತಂತ್ಯದ ಹಕ್ಕುಗಳ ಉಲ್ಲಂಘನೆ.

ಯಾವ ದೇಶದಲ್ಲಿಯೂ ಇಂತಹ ಸರ್ವಾಧಿಕಾರಿ ಧೋರಣೆಯ ವೀಸಾ ರದ್ದತಿ ನಿಯಮಗಳು ಇಲ್ಲ! ಸೌದಿಯಲ್ಲಿ ಸಹ ಆಯಾಯ ತಪ್ಪಿಗೆ ಇಂತಿಷ್ಟು ಛಡಿಯೇಟಿನ ಶಿಕ್ಷೆ ಇದೆಯೇ ಹೊರತು ವೀಸಾ ರದ್ದತಿಯಂತಹ ಶಿಕ್ಷೆ ನನಗೆ ತಿಳಿದಂತೆ ಇಲ್ಲ. ಸೌದಿ ಬಿಡಿ, ಯಾವ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿಯೂ ಇಂತಹ ಅಸಂವಿಧಾನಿಕ ನಡೆ ಇಲ್ಲ.

ಯಾವ ಒಂದೊಮ್ಮೆಯ ಅನಿವಾಸಿಗಳಾಗಿದ್ದ ಗಾಂಧಿ, ನೆಹರೂ, ಜಿನ್ನಾ, ಅಂಬೇಡ್ಕರ್ ಭಾರತದ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಅನುಷ್ಠಾನಕ್ಕೆ ಸಂಘರ್ಷಿಸಿದ್ದರೋ ಅಂತಹ ಅನಿವಾಸಿಗಳನ್ನು ಇಂದಿನ ಪ್ರಜಾಪ್ರಭುತ್ವ ಸರ್ಕಾರಗಳಲ್ಲಿ ಪರದೇಸಿಗಳನ್ನಾಗಿ ಮಾಡಲಾಗುತ್ತಿದೆ. ಯಾವ ಕಾರಣಕ್ಕೆ ಎಂದು ಗೊತ್ತಿಲ್ಲ!

"ಅಬ್ ಕಿ ಬಾರ್ ಟ್ರಂಪ್ ಸರ್ಕಾರ್" ಎಂದು ಟೆಕ್ಸಾಸಿನಲ್ಲಿ ಚಪ್ಪಾಳೆ ಹೊಡೆದು ಕೇಕೆ ಹಾಕಿದ್ದ ಅಸಂಖ್ಯಾತ ಅನಿವಾಸಿ ಸಾಗರೋತ್ತರ ಭಾರತೀಯ ಪ್ರಜೆಗಳಿಗೆ ಈ ವಿಷಯ ಗೊತ್ತಿದೆಯೋ ಅಥವಾ ಒಳನಾಡು ಭಾರತೀಯರಂತೆಯೇ ಅವರೂ ಭಕ್ತಿ ಪರವಶತೆಯ ಸ್ಟಾಕ್ಹೋಮ್ ಸಿಂಡ್ರೋಮಿಗೆ ಒಳಗಾಗಿ ಭಾವುಕತೆಯ ಮೀಟಿಸಿಕೊಂಡು "ಘರ್ ಘರ್, ಬಾರ್ ಬಾರ್" ಎನ್ನುತ್ತಿದ್ದಾರೋ ಗೊತ್ತಿಲ್ಲ. ಒಟ್ಟಾರೆ, "ಮೇರಾ ಭಾರತ್ ಮಹಾನ್", "ಮೇಕ್ ಇನ್ ಇಂಡಿಯಾ", "ನಾವೆಲ್ಲಾ ಒಂದು" ಮುಂತಾದ ಭಾವುಕ ಭ್ರಾಮಕ ಉದ್ಘೋಷಗಳಂತೆಯೇ ಈ "ಸಾಗರೋತ್ತರ ಭಾರತೀಯ ಪ್ರಜೆ" ಎಂಬ ಉದ್ಘೋಷಿತ ವೈಭವೀಕೃತ ಚಿಟ್ಟಿ ಮಿಟ್ಟಿಯಲ್ಲಿ ಹಾಕಿ ಮುಚ್ಚುವ ಒಂದು ವೀಸಾ ಮಾತ್ರ!

ಇಂತಹ ಉದ್ಘೋಷಿತ ವೀಸಾ ನಂಬಿ ನಮ್ಮ ಹಕ್ಕನ್ನು ನಾವೇ ಮೊಟಕಿಸಿಕೊಂಡು ಇರುವುದನ್ನೆಲ್ಲಾ ಭಾರತಕ್ಕೆ ಧಾರೆಯೆರೆದು ಲೆಂಕರಾಗಿರುವ ನಮ್ಮಂತಹ ಭಾವುಕ ಭ್ರಾಮಕ ಸಾಗರೋತ್ತರ ಭಾರತೀಯ ದೇಶಭಕ್ತರು ಎಲ್ಲಿಯಾದರೂ ಸಿಗುವುದುಂಟೆ?!? ಕೇವಲ ತಾಯ್ನಾಡು ಎಂಬ ಭಾವುಕತೆಯಲ್ಲಿ ದುಡಿದದ್ದೆಲ್ಲವನ್ನು ತಂದು ಸುರಿದವನನ್ನು ಒಂದು ಯಕಶ್ಚಿತ್ ಒಮ್ಮುಖ ರಸ್ತೆ ಪ್ರವೇಶಿಸಿದ್ದಕ್ಕೆ ಬಲಿಮಾಡಿ ಗಡಿಪಾರು ಮಾಡುವ ನಡೆ ವಿಶ್ವದ ಬಹುದೊಡ್ಡ ಪ್ರಜಾಪ್ರಭುತ್ವದ ನಡೆಯೆನಿಸುವುದೆ?! ಇನ್ನು ಈ ಅನಿವಾಸಿ ಯಾವ ಜಾತಿಯವನಾಗಿದ್ದರೂ ಮೀಸಲಾತಿ ಪಡೆಯಬಾರದು, ಪತ್ರಿಕೋದ್ಯಮದಲ್ಲಿ ಪರವಾನಗಿ ಇಲ್ಲದೇ ತೊಡಗಬಾರದು, ಪರ್ವತಾರೋಹಣ ಮಾಡಬಾರದು ಎನ್ನುವ freedom of speech, freedom of movement, freedom of availing social justice ಎನ್ನುವ ಮೂಲಭೂತ ಹಕ್ಕುಗಳ ಉಲ್ಲಂಘನೆ ಬಗ್ಗೆ ಕೇಳುವವರು ಯಾರು?

ಹೋಬಳಿಯಂತಹ ಚಿಕ್ಕ ಚಿಕ್ಕ ಊರುಗಳಲ್ಲಿಯೂ "ಡಾಲರ್ ಕಾಲೋನಿ"ಗಳಿವೆಯೇ ಹೊರತು ಈ ಡಾಲರ್ ತರುವ ಸಹನಾಗರಿಕರನ್ನು ಪ್ರತಿನಿಧಿಸುವ ಯಾವ ಸಂಸದ, ಶಾಸಕನೂ ಇಲ್ಲ! ಏಕೆಂದರೆ ಈ ಅನಿವಾಸಿ ಬೇವರ್ಸಿಗಳಿಂದ ಒಂದು ಓಟು ಸಹ ಬೀಳುವುದಿಲ್ಲ.

ಹಾಗಾಗಿ ಈ ಅಸಂಖ್ಯಾತ ಸಾಗರೋತ್ತರ ಭಾರತೀಯ ಲೆಂಕ ದೇಶಭಕ್ತರಲ್ಲಿ ಕೆಲವರು ಈ OCI ಸಂಬಂಧಿತ ತಿದ್ದುಪಡಿಗಳು ಅಸಂವಿಧಾನಿಕ ಎಂದು ಸುಪ್ರೀಂ ಕೋರ್ಟಿನಲ್ಲಿ ದಾವೆ ಹೂಡಿದ್ದಾರೆ. ಅವರಿಗೆ ಗೆಲುವಾಗಿ ಸಾಗರೋತ್ತರ ಭಾರತೀಯ ಪ್ರಜೆಗಳನ್ನು ಒಳಗೊಳ್ಳುವ ಪ್ರಕ್ರಿಯೆಗೆ ನ್ಯಾಯಾಂಗವು ಮುನ್ನುಡಿ ಬರೆದು, ಪ್ರಜಾಪ್ರಭುತ್ವವನ್ನೂ ಎತ್ತಿ ಹಿಡಿಯಲಿ ಎಂದು ಹಾರೈಸೋಣ.

#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ

No comments:

Post a Comment