ಮೇಲ್ವರ್ಗದ ಜನರೇಕೆ ವಲಸೆ ಹೋಗುತ್ತಿದ್ದಾರೆ?

 ಮೇಲ್ವರ್ಗದ ಜನರೇಕೆ ವಲಸೆ ಹೋಗುತ್ತಿದ್ದಾರೆ? ಎಂಬ ಪ್ರಶ್ನೆ ತುಂಬಾ ಗಹನವಾದದ್ದು. 


ಈ ವರ್ಗ ಭೇದವನ್ನು ಬದಿಗಿಟ್ಟು ನೋಡಿದಾಗಲೂ ಮಾನವ ಸಹಜವಾಗಿ ಅಲೆಮಾರಿ. ಮಾನವ ವಿಕಾಸ ಪಥದಲ್ಲಿ ಆಹಾರ ಹುಡುಕುತ್ತಾ ವಲಸೆ ಆರಂಭಿಸಿದ ಆದಿಮಾನವ ಇಂದು ಹೊಸ ಹೊಸ ಅವಕಾಶಗಳನ್ನು, ಉತ್ತಮ ಭವಿಷ್ಯ, ಭದ್ರತೆ, ತನ್ನ ಆಲೋಚನಾ ಕ್ರಮಕ್ಕೆ ಪೂರಕ ವಾತಾವರಣಗಳನ್ನು ಹುಡುಕುತ್ತಾ ವಲಸೆ ಹೋಗುತ್ತಿದ್ದಾನೆ. ಒಂದೊಮ್ಮೆಯ ವಲಸಿಗರ ತಾಣವಾಗಿದ್ದ ಭಾರತ ಪೂರ್ವ ಆಫ್ರಿಕಾದ ಆದಿ ವಲಸೆಗಾರರನ್ನು, ನಂತರ ಆರ್ಯರನ್ನು ಆಕರ್ಷಿಸಿ ಅಂದಿನ ವಲಸಿಗರ ಸ್ವರ್ಗ ಎನಿಸಿತ್ತು. ಇಂತಹ ಸ್ವರ್ಗಸದೃಶ ಭಾರತವು ಕಾಲಾಂತರದಲ್ಲಿ ಅಯೋಮಯಗೊಂಡು ಕಳೆದ ಅರ್ಧ ಶತಮಾನದಿಂದ ಇತ್ತೀಚೆಗೆ ತನ್ನ ನಾಗರಿಕರು ವಿದೇಶಗಳೆಡೆ ಹೆಚ್ಚು ಹೆಚ್ಚು 

ಮುಖ ಮಾಡುವಂತೆ ಮಾಡಿದೆ.


ಇದರ ಆರಂಭ ಬ್ರಿಟಿಷ್ ಭಾರತದ ಮೇಲ್ವರ್ಗದ ಜನ ಉನ್ನತ ಶಿಕ್ಷಣ ಪಡೆಯಲು ವಿದೇಶಕ್ಕೆ ಹೋಗಲು ಆರಂಭಗೊಂಡ ದಿನಗಳಿಂದ ಎಂದರೂ  ಅದು ವಲಸೆಯ ರೂಪ ಪಡೆದಿರಲಿಲ್ಲ. ಆದರೆ ಸ್ವತಂತ್ರ ಭಾರತದ ಎಪ್ಪತ್ತರ ದಶಕದಲ್ಲಿ ಭಾರತೀಯ ಡಾಕ್ಟರರುಗಳಲ್ಲದೆ ಸಾಕಷ್ಟು ಕುಶಲಕರ್ಮಿಗಳು ಅಮೇರಿಕಾ ಸೇರಿದಂತೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲದೆ ಇರಾನ್, ಇರಾಕ್, ಸೌದಿ, ಮುಕ್ತ ಮಾರುಕಟ್ಟೆಯ ಸಿಂಗಪೂರ್, ದುಬೈಗಳಲ್ಲದೆ ಆಫ್ರಿಕಾ ರಾಷ್ಟ್ರಗಳಿಗೂ ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಹೋದರು. ಅಂದು ಅವರೆಲ್ಲರ ಉದ್ದೇಶ, ಕೇವಲ ಹಣವಾಗಿತ್ತು. ಕಡಿಮೆ ಸಮಯದಲ್ಲಿ ಸಾಕಷ್ಟು ಹಣ ಸಂಪಾದನೆ ಮಾಡಿ ಭಾರತಕ್ಕೆ ವಾಪಸ್ಸಾಗಿ ಸುಭದ್ರ ಜೀವನವನ್ನು ತಮ್ಮದಾಗಿಸಿಕೊಳ್ಳಬೇಕೆಂಬ ಏಕೈಕ ಮಹದಾಸೆ ಅವರುಗಳದಾಗಿತ್ತು. ಇಂತಹ ಉದ್ದೇಶದಿಂದ ವಲಸೆ ಹೋದ ಸಾಕಷ್ಟು ವಲಸಿಗರು ತಮ್ಮ ಆಕಾಂಕ್ಷೆಯ ಗುರಿ ಮುಟ್ಟಿದ ನಂತರ ಭಾರತಕ್ಕೆ ವಾಪಸ್ಸಾದರು ಸಹ. ಹಾಗೆ ವಾಪಸ್ಸಾದವರಲ್ಲಿ ಹೆಚ್ಚಿನವರು ಇರಾನ್, ಇರಾಕ್, ಸೌದಿ ಮತ್ತು ಆಫ್ರಿಕಾ ದೇಶಗಳಿಗೆ ವಲಸೆ ಹೋದವರು. ಇನ್ನು ಅಮೇರಿಕಾ ಮತ್ತು ಯೂರೋಪ್ ರಾಷ್ಟ್ರಗಳಿಗೆ ವಲಸೆ ಹೋದ ಸಾಕಷ್ಟು ಜನ ಅಲ್ಲಿಯೇ ನೆಲೆ ನಿಂತರು ಮತ್ತು ಕೆಲವರು ಭಾರತಕ್ಕೆ ಮರಳಿದರು.


ಅವರು ದೇಶ ತೊರೆದದ್ದು ಕೇವಲ ಮತ್ತು ಕೇವಲ ಹಣ ಸಂಪಾದನೆಗಾಗಿಯಾದರೂ ಅವರಲ್ಲಿ ವಾಪಸ್ಸಾದದ್ದು ಮತ್ತು ಅಲ್ಲಿಯೇ ನೆಲೆ ನಿಂತದ್ದು ಸುಭದ್ರ ನಾಗರಿಕ ಸ್ವಾತಂತ್ರ್ಯ, ಸಾಮಾಜಿಕ ವ್ಯವಸ್ಥೆ, ಮಾನವ ಹಕ್ಕುಗಳ ರಕ್ಷಣೆ, ಅಭಿವ್ಯಕ್ತಿ ಸ್ವಾತಂತ್ರ್ಯ, ಮತ್ತು ಸಾಮಾಜಿಕ ನೆಮ್ಮದಿಯ ಆಕರ್ಷಣೆ ಹಿನ್ನೆಲೆಯಾಗಿತ್ತು. ಈ ಆಯ್ಕೆಗಳು ಎಲ್ಲಿದ್ದವೋ ಅಂತಹ ರಾಷ್ಟ್ರಗಳಲ್ಲಿ ನೆಲೆ ನಿಂತರು ಅಥವಾ ಭಾರತಕ್ಕೆ ವಾಪಸ್ಸಾದರು. ಕೆಲವರು ಭಾವುಕರಾಗಿ ಸಹ ಭಾರತಕ್ಕೆ ವಾಪಸ್ಸಾದದ್ದು ಇದೆ.


ಮೇಲಿನ ನಿಯಮದಂತೆ ಈ ಹಣ ಸಂಪಾದನೆಯೇ ಪ್ರಮುಖವಾಗಿ ತೊಂಭತ್ತರ ದಶಕದ ಕೊನೆಯವರೆಗೆ ಭಾರತೀಯರು ವಲಸೆ ಹೋಗುತ್ತಲೇ ಇದ್ದರು, ಕೆಲವರು ಹೋದ ಕಡೆ ನೆಲೆ ನಿಲ್ಲುತ್ತಿದ್ದರು, ಕೆಲವರು ವಾಪಸ್ಸಾಗುತ್ತಿದ್ದರು. ಆದರೆ ಇಪ್ಪತ್ತೊಂದನೇ ಶತಮಾನದ ಹೊರಳಿನೊಂದಿಗೆ ಹಣಕ್ಕಾಗಿ ಬರುತ್ತಿದ್ದ ಭಾರತೀಯ ವಲಸೆಗಾರರು ಉತ್ತಮ ಜೀವನ, ಉದಾರತೆ, ನಾಗರಿಕ ಸಂಹಿತೆ, ಮಾನವ ಹಕ್ಕು, ಸ್ವಾತಂತ್ರ್ಯ, ಸಮಾನತೆ, ಅಭಿವ್ಯಕ್ತಿ ಸ್ವಾತಂತ್ರ್ಯ, ಪ್ರತಿಭಾ ಪುರಸ್ಕಾರ ಮುಂತಾದ ಜನಪರ ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆಯನ್ನು ಬಯಸಿ ಬರಲಾರಂಭಿಸಿದರು. ಈ ಹೊರಳಿಗೆ ಕಾರಣಗಳೇನು?


ನಾನೂ ಸಹ ತೊಂಬತ್ತರ ದಶಕದ ಮಧ್ಯದಲ್ಲಿ ಹಣ ಸಂಪಾದನೆಯ ಗುರಿಯಾಗಿ ಅಮೇರಿಕಾಕ್ಕೆ ವಲಸೆ ಬಂದೆ. ನನ್ನಂತೆಯೇ ಸಾಕಷ್ಟು ಜನ ರಷ್ಯಾ, ಚೈನಾ, ಕ್ಯೂಬಾ, ಇರಾನ್, ಇಥಿಯೋಪಿಯಾ ಮುಂತಾದ ಹಲವಾರು ರಾಷ್ಟ್ರಗಳಿಂದ ಅಮೇರಿಕೆಗೆ ವಲಸೆ ಬಂದಿದ್ದರು. ಅವರೆಲ್ಲರನ್ನೂ ನಾನು ನನ್ನಂತೆಯೇ ಹಣಕ್ಕಾಗಿ ಬಂದವರೆಂದುಕೊಂಡಿದ್ದೆ.  ಕ್ರಮೇಣ ತಿಳಿದದ್ದು ಅವರು ಹಣಕ್ಕಲ್ಲದೆ ಉತ್ತಮ ಸಾಮಾಜಿಕ ವ್ಯವಸ್ಥೆ, ಸ್ವಾತಂತ್ರ್ಯ, ಮಾನವ ಹಕ್ಕುಗಳ ರಕ್ಷಣೆ ಬಯಸಿ ಅಂದರೆ ಜೀವನಕ್ಕಾಗಿ ಬಂದಿದ್ದವರು ಎಂದು! ಆಗ ನನಗೆ ಹಣ-ಜೀವನಗಳ ನಡುವಿನ ವ್ಯತ್ಯಾಸವನ್ನು ಬಹುಪಾಲು ಕಮ್ಯುನಿಸ್ಟ್ ರಾಷ್ಟ್ರಗಳಾದ ಚೈನಾ, ರಷ್ಯಾ ಮತ್ತು ಕ್ಯೂಬಾಗಳಿಂದಲೂ ಮತ್ತು ಇರಾನಿನಂತಹ ಫತ್ವಾ ರಾಷ್ಟವಲ್ಲದೇ ಇರಾಕ್ ಮತ್ತಿತರೆ ಸರ್ವಾಧಿಕಾರಿಗಳ ರಾಷ್ಟ್ರಗಳಿಂದ ಬಂದ ಜನರಿಂದ ತಿಳಿಯಲಾರಂಭಿಸಿ ವಿವಿಧ ಆಡಳಿತ ವ್ಯವಸ್ಥೆಗಳಿಂದುಂಟಾಗುವ ಸಾಮಾಜಿಕ ಪಲ್ಲಟ "ಹೀಗೂ ಉಂಟೆ" ಎಂದು ಸೋಜಿಗವನ್ನುಂಟುಮಾಡಿತು. ಆ ದೇಶಗಳಿಂದ ಬಂದಿದ್ದ ನನ್ನ ಅನೇಕ ಮಿತ್ರರು ನಿನಗೆ ಕ್ರಮೇಣ ಜೀವನದ ಈ ಅರಿವು ಮೂಡಿ ಕೇವಲ ಆರ್ಥಿಕತೆಯಲ್ಲದೆ ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆಯ ತುರ್ತಿನ ಅರಿವಾಗುತ್ತದೆ, ಆಗ ಮಾತನಾಡೋಣ ಎನ್ನುತ್ತಿದ್ದರು. ಹುಟ್ಟಿದ ರಾಷ್ಟ್ರಕ್ಕೆ ಮತ್ತೆಂದೂ ಕಾಲಿಡುವುದಿಲ್ಲ ಎಂಬ ದೃಢ ನಿರ್ಧಾರವನ್ನು ಕೈಗೊಂಡಿದ್ದ ಇವರ ನಡೆ ನನಗೆ ಸಹಜವಾಗಿ ವಿಸ್ಮಯ ಮೂಡಿಸಿತ್ತು.


ಅಂತಹ ಪರಿಸ್ಥಿತಿ ನನ್ನ ಭಾರತಕ್ಕೆ ಎಂದೂ ಬಾರದು ಎಂದೇ ಬೀಗುತ್ತಿದ್ದೆ. ಆದರೆ ಅಂತಹ ವರ್ಷಗಳು ಭಾರತಕ್ಕೆ ಬಂದೇ ಬಿಟ್ಟಿವೆ.


ಇದರ ಪ್ರಪ್ರಥಮ ಹೊಳಹು ಕೊಟ್ಟವರು ಸಾಹಿತಿ ದಿವಂಗತ ಯು. ಆರ್. ಅನಂತಮೂರ್ತಿಯವರು! ಹೀಗೆಂದಾಗ ಸಹಜವಾಗಿ ಅವರ ಇತ್ತೀಚಿನ "ಮೋದಿ ಗೆದ್ದರೆ ರಾಷ್ಟ್ರ ಬಿಡುತ್ತೇನೆ" ಎಂಬ ಮಾತುಗಳು ನೆನಪಿಗೆ ಬರಬಹುದು. ಆದರೆ ಅವರು ಈ ಹೊಳಹನ್ನು ಕೊಟ್ಟದ್ದು  "ವಿಪಿ ಸಿಂಗ್ ಅವರು ತಂದಿದ್ದ ಮೀಸಲಾತಿ ನೀತಿಯಿಂದ ಯುವಜನಾಂಗ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾಗ ನಾನು ದೇಶ ತೊರೆದೆ" ಎಂದದ್ದು ಎಂದು ಜ್ಞಾಪಿಸಬೇಕಾಗುತ್ತದೆ. 


ಅನಂತಮೂರ್ತಿಯವರು ದೇಶ ಬಿಟ್ಟಿದ್ದ ಅಂದಿನ ಪ್ರಧಾನಿ ವಿ.ಪಿ. ಸಿಂಗ್ ಅವರ "ಓಲೈಕೆ"ಯ ಕಾಲದಿಂದ ಇತ್ತೀಚೆಗೆ ಅವರು ದೇಶ ಬಿಡುತ್ತೇನೆ ಎಂದಿದ್ದ ಪ್ರಧಾನಿ ಮೋದಿಯವರ "ಉತ್ಪ್ರೇಕ್ಷೆ"ಯ ಕಾಲಮಾನದ ನಡುವೆ ಉಂಟಾದ ಭಾರತೀಯ ಸಾಮಾಜಿಕ ಪಲ್ಲಟವು ಮೇಲ್ವರ್ಗವಲ್ಲದೆ ಅವಕಾಶ ಸಿಕ್ಕರೆ ಪ್ರತಿಯೊಬ್ಬ ಪ್ರಾಮಾಣಿಕ ಶ್ರೀಸಾಮಾನ್ಯ ನಾಗರಿಕನೂ ವಲಸೆಯತ್ತ ಒಂದು ನೋಟ ಹರಿಸುವಂತೆ ಮಾಡಿದೆ.


ಅತಿಯಾದ ಓಲೈಕೆ ಮತ್ತು ಉತ್ಪ್ರೇಕ್ಷೆಗಳ ಅಮಲಿನ ನಡುವೆ ಮಿತಿ ಮೀರುತ್ತಿರುವ ಭ್ರಷ್ಟಾಚಾರ, ಜಾತಿ ಪ್ರೌಢಿಮೆ/ರಾಜಕಾರಣ, ಧಾರ್ಮಿಕ ಅಸಹಿಷ್ಣುತೆ, ಜನಾಂಗೀಯ ತಾರತಮ್ಯ, ಮಾನವ ಹಕ್ಕುಗಳ ಉಲ್ಲಂಘನೆ, ನೈತಿಕ ಪೊಲೀಸ್ ಗಿರಿ, "ಮೀಸಲಾತಿ" ಮುಂತಾದ ಸಾಮಾಜಿಕ ಪಿಡುಗುಗಳು ನವ್ಯ ತಂತ್ರಜ್ಞಾನವನ್ನೂ ಬಳಸಿಕೊಂಡು ಹರಡುತ್ತಿರುವ ವೇಗ ಅತ್ಯಂತ ಕಳವಳಕಾರಿ. 


ಹಾಗಾಗಿಯೇ ಒಂದೊಮ್ಮೆ ಹಣ ಅಥವಾ ಪ್ರತಿಷ್ಟೆಗಾಗಿ ಮಾತ್ರ ಹೊರದೇಶಗಳಿಗೆ ವಲಸೆ ಹೋಗುತ್ತಿದ್ದ ಭಾರತೀಯರು ಇಂದು ಸರ್ವಾಧಿಕಾರಿ, ಕಮ್ಯುನಿಸ್ಟ್, ಧಾರ್ಮಿಕ ದೇಶಗಳಲ್ಲಿ ನಲುಗಿದ್ದ ಉದಾರವಾದಿ ಜೀವಪರ ಜನರಂತೆಯೇ ಮುಕ್ತ ಜೀವನವನ್ನು ಬಯಸಿ ಅಮೇರಿಕ ಅಲ್ಲದೆ ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಯುರೋಪ್ ರಾಷ್ಟ್ರಗಳಿಗೆ ವಲಸೆ ಬರುತ್ತಿದ್ದಾರೆ. ಪ್ರತಿಷ್ಠೆ ಮತ್ತು ಹಣ ಈಗ ಗೌಣ! ಏಕೆಂದರೆ ಹಣ ಭಾರತದಲ್ಲಿ ಸಾಕಷ್ಟಿದೆ. ನಾನು ಭಾರತ ಬಿಟ್ಟಾಗ ಒಬ್ಬ ಸರ್ಕಾರಿ ಇಂಜಿನಿಯರನಿಗೆ ಮೂರೂವರೆ ಸಾವಿರ ಸಂಬಳವಿರುತ್ತಿತ್ತು. ಅದು ಈಗ ಮೂರೂವರೆ ಲಕ್ಷವಾಗಿದೆ. ಸಾಮಾಜಿಕ ನ್ಯಾಯಕ್ಕೆ ಮೀಸಲಾತಿ ಎಷ್ಟೇ ಅವಶ್ಯಕವೆಂದರೂ ಅದು ಸಹ ಈ ವಲಸೆಗೆ ಸಾಕಷ್ಟು ಕಾರಣೀಭೂತವಾಗಿದೆ ಎಂಬ ನಿಷ್ಠುರ ಸತ್ಯವನ್ನು ಹೇಳಲೇಬೇಕಾಗಿದೆ.


ಇರಲಿ, ಈ ಭಾರತೀಯ ವಲಸೆಯ ಪಲ್ಲಟವನ್ನು ನನ್ನ ಸಹಪಾಠಿಯೋರ್ವನ ಒಂದು ತಲೆಮಾರಿನಲ್ಲಿ ನಾನು ಸ್ಪಷ್ಟವಾಗಿ ಕಂಡುಕೊಂಡಿದ್ದೇನೆ, ಅದನ್ನೇ ಇಲ್ಲಿ ಕಟ್ಟಿಕೊಡುತ್ತೇನೆ:


ಆಂಧ್ರಪ್ರದೇಶದ ನನ್ನ ಸಹಪಾಠಿಯೊಬ್ಬ ನನ್ನಂತೆಯೇ ನನ್ನೊಟ್ಟಿಗೆ ಅಮೇರಿಕೆಗೆ ವಲಸೆ ಬಂದಿದ್ದ. ಹಣಕಾಸಿನಲ್ಲಿ ಸಬಲನಾಗಿದ್ದ ಅವನ ವಲಸೆಗೆ ಹಣಕ್ಕಿಂತ ವಿದೇಶಿ ಅನುಭವ ಮತ್ತು ಪ್ರತಿಷ್ಠೆ ಕಾರಣವಾಗಿತ್ತು. ಇಲ್ಲಿ ಎರಡು ವರ್ಷವಿದ್ದು ನಂತರ ಹೈದರಾಬಾದಿಗೆ ತೆರಳಿ ತನ್ನದೇ ಆದ ಸಾಫ಼್ಟ್ವೇರ್ ಕಂಪೆನಿ ತೆರೆದ. ಅವನು ಇಲ್ಲಿದ್ದ ಆ ಎರಡು ವರ್ಷಗಳಲ್ಲಿ ಅವನ ಮದುವೆಯಾಗಿ ಒಬ್ಬ ಮಗಳೂ ಹುಟ್ಟಿದ್ದಳು. 


ನನ್ನ ಆರ್ಥಿಕ ಪರಿಸ್ಥಿತಿಯ ಕಾರಣ ನಾನು ಅಮೆರಿಕೆಯಲ್ಲಿಯೇ ಉಳಿದಿದ್ದೆ. ಮುಂದಿನ ಇಪ್ಪತ್ತು ವರ್ಷಗಳಲ್ಲಿ ಭಾರತದಲ್ಲುಂಟಾದ ರಿಯಲ್ ಎಸ್ಟೇಟ್ ಆಸ್ಫೋಟದಲ್ಲಿ ಸಾಕಷ್ಟು ಹಣ ಅವನಿಗೆ ಸಲೀಸಾಗಿ ಹರಿದು ಬಂದಿತು. ತನ್ನ ವ್ಯಾಪಾರಕ್ಕಿಂತಲೂ ತನ್ನ ಪೂರ್ವಜರ ಆಸ್ತಿಯಿಂದಲೇ ಸಾಕಷ್ಟು ಹಣ ಅವನನ್ನು ಸೇರಿತ್ತು. ಆ ಆಸ್ಫೋಟದಿಂದಾಗಿ ಭಾರತದಲ್ಲಿ ಮನೆಯನ್ನು ಕೊಳ್ಳುವುದು ಅತ್ಯಂತ ದುಬಾರಿ ಎನ್ನಿಸಿ ನಾನು ಶಾಶ್ವತವಾಗಿ ಅಮೇರಿಕೆಯಲ್ಲೇ ಉಳಿದುಬಿಟ್ಟೆ.


ಆದರೆ ನನ್ನ ಅದೇ ಸ್ನೇಹಿತನ ಮಗಳು ಇಂಜಿನಿಯರಿಂಗ್ ಮುಗಿಸಿ ಹುಟ್ಟಿನ ಕಾರಣ ಅಮೇರಿಕನ್ ಆಗಿದ್ದುದರಿಂದ ಸಲೀಸಾಗಿ ಅಮೇರಿಕೆಗೆ ಬಂದು ಕೆಲಸ ಹಿಡಿದು ಇಂದು ತನ್ನ ಇಪ್ಪತ್ನಾಲ್ಕನೆ ವಯಸ್ಸಿಗೆ ಸ್ಯಾನ್ ಆಂಟೋನಿಯೊದಲ್ಲಿ ಮನೆ ಕೊಂಡಳು. ಆ ಯುವತಿಯ ಅಭಿಪ್ರಾಯದಂತೆ ಭಾರತದಲ್ಲಿ ಈಗ ಎಲ್ಲವೂ ದುಬಾರಿಯಲ್ಲದೆ ಅಷ್ಟು ಬೆಲೆ ತೆತ್ತರೂ ಅದಕ್ಕೆ ಬೆಲೆಯಿಲ್ಲ, ತಕ್ಕ ವ್ಯವಸ್ಥೆಯಿಲ್ಲ. ಎಲ್ಲಾ ರೀತಿಯ

ಭ್ರಷ್ಟಾಚಾರಗಳ ನಡುವೆ ಹೊಂದಿಕೊಂಡು ಬಾಳುವುದು ಸಹ  ಭ್ರಷ್ಟಾಚಾರದ ಬಾಳು ಎಂದೇ ಅಭಿಪ್ರಾಯ ವ್ಯಕ್ತಪಡಿಸಿದಳು. ಈಗ ಅವಳ ಮದುವೆ ನಡೆಯಲಿದೆ. ಅವಳ ಭಾವೀಪತಿ ಸಹ ನನ್ನ ಇನ್ನೋರ್ವ ಶ್ರೀಮಂತ ಸ್ನೇಹಿತನ ಏಕ ಮಾತ್ರ ಪುತ್ರ. ಆಂಧ್ರಪ್ರದೇಶದಲ್ಲಿ ಆರು ಕಾರ್ ಶೋರೂಂ ಹೊಂದಿದ್ದರೂ ಅದೆಲ್ಲವನ್ನೂ ತೊರೆದು ಅಮೆರಿಕೆಗೆ ವಲಸೆ ಬರುತ್ತಿದ್ದಾನೆ. ಕಾರಣ, ಆಂಧ್ರಪ್ರದೇಶದ ಮಿತಿ ಮೀರಿದ ಜಾತಿ ರಾಜಕಾರಣ! ಕಮ್ಮಾ ಜನಾಂಗದ ಉದ್ಯಮಿಗಳಿಗೆ ರೆಡ್ಡಿ ಜಾತಿ ಮುಖ್ಯಮಂತ್ರಿಯ ಅತೀವ ಕಿರುಕುಳವನ್ನು ಭರಿಸಲಾಗದೆ ನನ್ನ ಉದ್ಯಮಿ ಮಿತ್ರ ತನ್ನ ಏಕಮಾತ್ರ ಪುತ್ರನನ್ನು ಅಮೆರಿಕಾ ಮಡಿಲಿಗೆ ಹಾಕುತ್ತಿದ್ದಾನೆ. ಭ್ರಷ್ಟಾಚಾರದ ಜೊತೆ ಜಂಜಾಡಿ ವೈಭವೋಪೇತ ಭ್ರಷ್ಟ ಜೀವನ ನಡೆಸುವುದಕ್ಕಿಂತ ಮುಕ್ತ ವಾತಾವರಣದಲ್ಲಿ ಸರಳ ಸ್ವಚ್ಛ ಬಾಳು ಕಂಡುಕೊಳ್ಳಲಿ ಎಂಬುದು ಅವನ ಆಕಾಂಕ್ಷೆ. 

ಇಂತಹ ತಲೆಮಾರು ಹೊರಳ ಮದುವೆಗೆ ನನ್ನ ಮನೆ ಈಗ ವೇದಿಕೆಯಾಗಿದೆ.


ಹೀಗೆ ಆಂಧ್ರ ಅಲ್ಲದೇ ಗುಜರಾತ್, ಪಂಜಾಬ್, ಬಿಹಾರಗಳಿಂದ ಎಲ್ಲಾ ಧರ್ಮದ ಜನರೂ ಸಮಾನತೆ (ಮೀಸಲಾತಿಯಲ್ಲದ), ಭ್ರಷ್ಟಾಚಾರರಹಿತ, ಅಭಿವ್ಯಕ್ತಿ ಸ್ವಾತಂತ್ರ್ಯ, ಪ್ರತಿಭಾ ಪುರಸ್ಕಾರಗಳನ್ನರಸಿ ವಲಸೆ ಬರುತ್ತಿದ್ದಾರೆ.  ಸಮಾಜದಲ್ಲಿ ಸುಖವಾಗಿರುವ, ಉದ್ಯೋಗ ಸೃಷ್ಟಿಸಬಲ್ಲ, ವಿದ್ಯಾವಂತ, ಚಿಂತಕ, ಸೃಜನಶೀಲ, ಕುಶಲಕರ್ಮಿ ಮೇಲ್ವರ್ಗವೇ ಹೀಗೆ ವಲಸೆ ಹೋದರೆ.....!?!


ಇನ್ನು ಕೆಲವರು ಇಂದು ಭಾರತ ವಿಶ್ವಗುರುವಾಗಿದೆ, ಸಾಕಷ್ಟು ಎನ್ನಾರೈಗಳು ವಾಪಸ್ ಬರುತ್ತಿದ್ದಾರೆ, ಇತ್ಯಾದಿಯಾಗಿ ಹುಸಿ ದೇಶಾಭಿಮಾನದ ಮಾತುಗಳನ್ನು ಆಡಬಹುದು. ಆದರೆ  ಅವರೆಲ್ಲರೂ ಇಂದು ವಾಪಸ್ ಬರುತ್ತಿರುವುದು ತಮ್ಮ ಎಂದೋ ಕೊಂಡಿದ್ದ ಚಿಲ್ಲರೆ ಹಣದ ರಿಯಲ್ ಎಸ್ಟೇಟ್ ಆಸ್ತಿಯ ಉಬ್ಬರವನ್ನು ನಗದೀಕರಿಸಿ ಹಣವನ್ನು ವಾಪಸ್ ತೆಗೆದುಕೊಂಡುಹೋಗಲೋ, ತಮ್ಮ ಹೆಣ್ಣುಮಗು ಭಾರತೀಯ ಸಂಸ್ಕೃತಿಯಲ್ಲಿ ಬೆಳೆಯಲೆಂದೋ, ಅಥವಾ ಉಬ್ಬರಿಸಿದ ರಿಯಲ್ ಎಸ್ಟೇಟ್ ಹಣದಲ್ಲಿ ರಾಜಕೀಯ ಭವಿಷ್ಯವನ್ನು ಕಂಡುಕೊಳ್ಳಲೋ ಹೊರತು ಇನ್ಯಾವ ದೇಶಾಭಿಮಾನದಿಂದಲ್ಲ. ಓಟಿನ ಹಕ್ಕು ಇಲ್ಲದಿದ್ದರೂ ಅವರಲ್ಲಿ ಅನೇಕರು ರಾಜಕೀಯ ಪಕ್ಷಗಳೊಂದಿಗೆ ಗುರುತಿಸಿಕೊಂಡಿದ್ದಾರೆ. ಇಂತಹ ಪ್ರಕ್ಷೇಪ ಉದಾಹರಣೆಗಳಾಚೆ ನೋಡಿದಾಗ ಸಾಕಷ್ಟು ಮೇಲ್ವರ್ಗದ ಜನ ವಲಸೆಯತ್ತ ಮುಖ ಮಾಡಿ ನಿಂತಿದೆ.


ಆದರೆ ಇಪ್ಪತ್ತೈದು ವರ್ಷಗಳ ಹಿಂದೆ ಯಾವುದೋ ಸರ್ವಾಧಿಕಾರಿ, ಕಮ್ಯುನಿಸ್ಟ್, ಧಾರ್ಮಿಕ, ಅರಾಜಕತೆಯ ರಾಷ್ಟ್ರಗಳ ಜನರು ಉತ್ತಮ ಸಾಮಾಜಿಕ ವ್ಯವಸ್ಥೆಯಲ್ಲಿ ತಮ್ಮ ಮಕ್ಕಳು ಉತ್ತಮ ಭವಿಷ್ಯವನ್ನು ಕಂಡುಕೊಳ್ಳಲೆಂದು ಅಮೇರಿಕಾದಂತಹ ಪ್ರಜಾಪ್ರಭುತ್ವ ರಾಷ್ಟ್ರಗಳಿಗೆ ವಲಸೆ ಬರುತ್ತಿದ್ದದ್ದು ಇಂದು ವಿಶ್ವದ ಬಹುದೊಡ್ಡ ಪ್ರಜಾಪ್ರಭುತ್ವದ ರಾಷ್ಟ್ರ ಎನಿಸಿಕೊಂಡ ಭಾರತದಂತಹ ರಾಷ್ಟ್ರದಿಂದ ಅಲ್ಲಿನ ನಾಗರಿಕರು ಸಾಮಾಜಿಕ ನ್ಯಾಯವನ್ನು ಬಯಸಿ, ಪ್ರಜಾಪ್ರಭುತ್ವವನ್ನು ಬಯಸಿ  ವಲಸೆ ಬರುತ್ತಿರುವುದು ಪ್ರಜಾಪ್ರಭುತ್ವದ ಅದರಲ್ಲೂ ಈ ಶತಮಾನದ ಬಹುದೊಡ್ಡ ದುರಂತ! 

No comments:

Post a Comment