ಹಾಸನದ ಮುಂಗಾರು ಮಳೆಯ ಒಂದು ಸಂಜೆ....

 ಹಾಸನದ ಮುಂಗಾರು ಮಳೆಯ ಒಂದು ಸಂಜೆ....ನೀವು ನೋಡಿರಬಹುದಾದ ಕಿರಿಕ್ ಪಾರ್ಟಿ ಸಿನೆಮಾ ಕತೆಯ ಮುತ್ತಜ್ಜನ ಕತೆಯನ್ನೂ ಮೀರಿಸಿದ ಮೂಲ ಸಾಲಗಾಮೇಶ್ವರ ಪಥದ ಕತೆಯನ್ನು ನಾನು ಬಲ್ಲೆ. ಏಕೆಂದರೆ ಈ ಸಿನೆಮಾ ಕತೆಯ ಉತ್ತರ ಪತ್ರಿಕೆಯ ತಿದ್ದುವ ಪ್ರಹಸನದ ಪಿತಾಮಹ ನಾನೇ ಎಂದು ಅಂದು ಗುಸುಗುಸು ಗಾಸಿಪ್ಪಿನ ಹೀರೋ ನಾನೆನಿಸಿದ್ದೆ.


ಅಂತಹ ಕಥಾಗುಚ್ಛದ ಒಂದು ಸೀನ್:

ಸಿಂ-ಹಾಸನದ ಹತ್ತಿರದ ಸಾರೋಟಿನ ಕುಣಿಗಲ್ ಕುದುರೆಗಳಿಗೆ ರಮ್ ಕುಡಿಸಿ ಮಲ್ಯ, ಒಡೆಯರ್, ರೆಬೆಲ್ ಸ್ಟಾರ್ ಮತ್ತು ಖುರ್ಬಾನಿ ಸೋದರರು ಪೂನಾ ಬೆಂಗಳೂರು ರೇಸುಗಳಲ್ಲಿ ಓಡಿಸುತ್ತಿದ್ದರಂತೆ! ಹಾಗಾಗಿ ನಮ್ಮ ಹಾಸ್ಟೆಲ್ಲಿನ ಎಲ್ಲಾ ಹುಚ್ಚು ಹರೆಯದ ಕುದುರೆಗಳ ಆಯ್ಕೆ ಸಹಜವಾಗಿ ಅಂದೆಲ್ಲಾ ಸದಾ ರಮ್ಮೇ ಆಗಿರುತ್ತಿತ್ತು. ತಿಂಗಳ ಶುಭಾರಂಭ ಓಲ್ಡ್ ಮಾಂಕ್ ರಮ್ ಅಥವಾ ಒಮ್ಮೊಮ್ಮೆ ವೆಲ್ಲಿಂಗ್ಟನ್ ವಿಸ್ಕಿಯೊಂದಿಗೆ ಆರಂಭವಾಗಿ ನಂತರ ಹರ್ಕ್ಯೂಲಿಸ್, ತಿಂಗಳ ಮಧ್ಯೆ ಖೋಡೆಸ್ ರಮ್, ನಂತರ ಮಾಸಾಂತ್ಯಕ್ಕೆ ಮಾಸ್ ಮಹನೀಯರ ಅಪ್ಪಟ ಸ್ಫಟಿಕ ಶುಭ್ರ ಪಾರದರ್ಶಕ ಜಲಸದೃಶ್ಯ ಸ್ಯಾಚೆಟ್ ಜಲದೊಂದಿಗೆ ಕೊನೆಗೊಳ್ಳುತ್ತಿತ್ತು. ಇಪ್ಪತ್ತೈದು ಸ್ಯಾಚೆಟ್ ಜಲವನ್ನು ಸ್ನಾನದ ಬಕೆಟ್ಟಿಗೆ ಸುರಿದು ಮೇಲೆ ಇಪ್ಪತ್ತು ನಿಂಬೆ ಹಣ್ಣುಗಳನ್ನು ಹಿಂಡಿ ನಾಲ್ಕು ಪ್ರಮಾಣ ನೀರು ಸೇರಿಸಿದರೆ..ಆಹಾ!!!

ಅದು ಯಾವ ಶಾಂಪೇನಿಗಿಂತಲೂ ಕಡಿಮೆ ಇರುತ್ತಿರಲಿಲ್ಲ ಎಂಬುದು ನಮ್ಮ ಸಂಶೋಧನೆಯಾಗಿತ್ತು. ಈ ಸಂಶೋಧನೆಯನ್ನು ಪರಾಮರ್ಶಿಸಲು ಆಗಿನ ಕಾಲದಲ್ಲಿ ಇಡೀ ಹಾಸನದಲ್ಲಿ ಎಲ್ಲಿಯೂ ಶಾಂಪೇನ್ ಸಿಗುತ್ತಿರಲಿಲ್ಲ. ಯಾರಾದರೂ ಕೇಳಿದರೆ ಪಾಂಪೆ ಡಿ ಶಾಂಪೇನ್ ಹೀಗೆಯೇ ಇರುತ್ತದೆ ಎಂದು ಬಾಯಿ ಮುಚ್ಚಿಸುತ್ತಿದ್ದೆವು. ಆ ಮಾಸು ಡ್ರಿಂಕಿಗೆ ಎಂಥಾ ಬಿಗುಮಾನದವನೂ ಬಾಗಿ ನರ್ತಿಸದೆ ಇರುತ್ತಿರಲಿಲ್ಲ. ಅಂದ ಹಾಗೆ ಈ ನಮ್ಮ ಶಾಂಪೇನಿಗೆ ಸಮಾಜವು ನಿಕೃಷ್ಟವಾಗಿ ಸಾರಾಯಿ ಎನ್ನುತ್ತಿತ್ತು.

ಮಾಸದ ಪಾನಾವತಾವರಣಕ್ಕೆ ತಕ್ಕಂತೆ ತಿನಿಸು ಮತ್ತು ಟೇಬಲ್ಲುಗಳು ಸಹ ಕ್ವಾಲಿಟಿ ಕೆಸಿನೋ ಬಾರುಗಳ ಚಿಲ್ಲಿ ಚಿಕನ್, ಬಟರ್ ಚಿಕನ್ನಿನಿಂದ ಮಮತಾ ಮಿಲಿಟರಿ ಹೋಟೆಲ್ಲಿನ ಫಿಶ್ ಫ್ರೈ, ಕೈಮ ಮುದ್ದೆಯಿಂದ ಸಾಗಿ ಸಹ್ಯಾದ್ರಿ ಟಾಕೀಸಿನ ಎದುರಿನ ಗಾಡಿಗಳ ಪ್ಲಾಸ್ಟಿಕ್ ಅಡಿ ಮುದುರಿ ನಿಂತುಕೊಂಡು ಇಡ್ಲಿ, ಚಿತ್ರಾನ್ನದ ಬಡವರ ಊಟದೊಂದಿಗೆ "ಬಡವರ ಊಟಿ"ಯಲ್ಲಿ ಪ್ರತಿ ತಿಂಗಳ ಕೊನೆ ಬಡತನದಲ್ಲಿ ಪರಿಸಮಾಪ್ತಿಯಾಗುತ್ತಿತ್ತು.

ಇಂತಹ ಒಂದು ಮಾಸಾಂತ್ಯದ ಮಂಜಿನ ಮುಸುಕು ಸಂಜೆ ಶಾಂಪೇನ್ ಪಾರ್ಟಿಗೆ ಸ್ನಾನದ ಬಕೆಟ್ಟು ಬಾಯ್ತೆರೆದು ಕಾದಿತ್ತು. ಶಾಸ್ತ್ರೋಕ್ತವಾಗಿ ಅದಕ್ಕೆ ಸ್ಯಾಚೆಟ್ ಮೇಲೆ ಸ್ಯಾಚೆಟ್ಟುಗಳು, "ನಾನು ಮಾಲಿನಿ, ಬಕೆಟ್ಟಿಗೆ ಬೀಳ್ತೀನಿ" ಎಂದು ಹೇಮಾಮಾಲಿನಿ ಥರ ಬಳುಕಿ ಬಳುಕಿ ರಸಧಾರೆ ಹರಿಸಿದ ನಂತರ, "ಈ ನಿಂಬೆಹಣ್ಣಿನಂಥ ಹುಡುಗಿ ಬಂತು ನೋಡು" ಎಂದು ಹಲವಾರು ನಿಂಬೆಗಳು, ನಂತರ ಹೇಮಾವತಿಯ, "ಜಲಲ ಜಲಲ ಜಲ ಧಾರೆ..." ಬಕೆಟ್ ಸೇರಿ ಶಾಂಪೇನ್ ಸಿದ್ಧವಾಯಿತು. ಖಾಲಿ ಬಿಯರ್ ಬಾಟಲಿಗಳಲ್ಲಿ ಇದನ್ನು ತುಂಬಿಕೊಂಡು, "ಯಾರಿವಳು ಯಾರಿವಳು ಸೂಜಿ ಮಲ್ಲಿ ಕಣ್ಣವಳು ಓ ಓ ಓ.... ಎಂಸಿಯಿ ತೋಪಿನಲ್ಲಿ ಲಂಗ ಎತ್ತಿ ನಿಂತವಳು ಓ ಓ ಓ" ಎಂದು ಹಂಸಲೇಖರಿಗಿಂತ ಸೃಜನಶೀಲರಾಗಿ ಹೀರೋ ರವಿಚಂದ್ರನ್ನಿಗಿಂತ ತೇಲುಗಣ್ಣಾಗಿ ಹುಚ್ಚೆದ್ದು ಒಂದು ಗುಂಪು ಹಾಡಿದರೆ ಇನ್ನೊಂದು ಗುಂಪು, "ಜುಮ್ಮಾ ಚುಮ್ಮಾ ದೇದೇ" ಎನ್ನುತ್ತ ಎಲ್ಲರೂ ಹಾಡುತ್ತಾ ಕುಡಿಯುತ್ತಾ ಕುಣಿಯುತ್ತಾ ಇದ್ದೆವು.

ನಮ್ಮ ಗಲಾಟೆಯ ನಡುವೆ ಅಂದು ನಮ್ಮ ಮಂಗಳೂರಿನ ಸ್ಟ್ಯಾನ್ಲಿ ತನ್ನ ಕಶ್ಮೀರಿ ಕುಳ್ಳಿಯನ್ನು ನೆನೆದು ಸ್ಟೈಲಾಗಿ "ಯೂ ಬಗ್ಗರ್ಸ್, ಲೆಟ್ಸ್ ಪ್ಲೇ ರಿಚರ್ಡ್ ಮಾರ್ಕ್ಸ್" ಎಂದು, "ಓಶನ್ಸ್ ಅಪಾರ್ಟ್ ಡೇ ಆಫ್ಟರ್ ಡೇ..... ಎವ್ರಿಥಿಂಗ್ ಐ ಡು, ಐ ಡೂ ಇಟ್ ಫಾರ್ ಯು....ಐ ವಿಲ್ ಬಿ ರೈಟ್ ಹಿಯರ್ ವೇಟಿಂಗ್ ಫಾರ್ ಯು!" ಎಂದು ಕೋರ್ಸು ಮುಗಿಸಿ ಆರ್ಕಿಟೆಕ್ಚರ್ರಿನ ಎವರೆಸ್ಟ್ ಶಿಖರವನ್ನು ಏರಿದ್ದ ಕಶ್ಮೀರಿ ಬೆಡಗಿಯ ನೆನೆನೆನೆದು ಕಣ್ಣೀರ ಕಡಲ ಹರಿಸುತ್ತ ಎಮ್ಸಿಯಿನಲ್ಲಿ ಪರ್ಮನೆಂಟ್ ಠಿಕಾಣಿ ಹೂಡಿದ್ದ. ಹಾಗಿದ್ದೂ ತನ್ನ ಆಂಗ್ಲ ಮೂಲದ ಇಂಗ್ಲಿಷಿನಲ್ಲಿ ನಾವು ಕೇಳಿರದ ಪದಗಳಿಂದ ಬೈಯುತ್ತಿದ್ದ. ಅವೆಲ್ಲವೂ ನಮಗೆ ಬಿರುದುಗಳಂತೆ ಕೇಳಿಸಿ ಮುದ ನೀಡುತ್ತಿದ್ದವು.

ಅದೇಕೋ ಅಂದು ನನ್ನ ಮುಕುಳಿಯಲ್ಲಿದ್ದ ಮೂರು ಮಂಗಗಳು ಜಾಗೃತವಾಗಿ ಸ್ಟ್ಯಾನ್ಲಿಯನ್ನು ಕಡಲತಡಿಯಿಂದ ಕಡಲಾಚೆಗೆ ಕಳಿಸುವ ಘನ ಉದ್ದೇಶಕ್ಕೆ ನನ್ನರಿವಿಗೆ ಬಾರದಂತೆ ಸಂಕಲ್ಪ ಮಾಡಿದವು. ಈ ಸಂಕಲ್ಪದಂತೆ, ಬಿಯರ್ ಬಾಟಲಿಯ ಕಾಲು ಭಾಗವಿದ್ದ ಶಾಂಪೇನಿಗೆ ಒಂದರವತ್ತು ಎಮ್ ಎಲ್ ನನ್ನ ಕಡಲಜಲದ ರುಚಿಯ ಲಿಂಗಜಲ ಸೇರ್ಪಡೆಗೊಳಿಸಿದೆ. ಬಾಟಲಿಯನ್ನು ಕೈಯಲ್ಲಿ ಹಿಡಿದು ಜೂಮ್ ಜೂಮುತ್ತ, "ಸ್ಟೈಲಿಶ್ ಸ್ಟ್ಯಾನ್ಲಿ, ಯು ವಿಲ್ ಬಿ ವೇಟಿಂಗ್ ಫಾರ್ ಎವ....ರ್ ಫಾರ್ ದಟ್ ಕುಲ್ಲಿ" ಎಂದೆ. ಅದಕ್ಕೆ ಆಂಗ್ಲೋ ಇಂಡೋ ಸ್ಟ್ಯಾನ್ಲಿಯು ಪಕ್ಕಾ ಉರಿಗೌಡನಾಗಿ, "ಲೇಯ್, ಓಗ್ಲಾ, ಬಿದ್ಕ ಓಗ್ಲ...ಬಂದ ಇವನೊಬ್ಬ ಇಂಗ್ಲಿಷ್ ಮಾತಾಡೋಕೆ!" ಎಂದು ನನ್ನ ಕೈಯಲ್ಲಿದ್ದ ಬಾಟಲಿ ಕಿತ್ತುಕೊಂಡು ಗಟಗಟನೆ ಕುಡಿದು ಬಾಟಲಿ ಕುಕ್ಕಿದ.

ನಾನು, "ಓಹ್!!!! ಎಂಗಿತ್ತಮ್ಮ?" ಎಂದೆ.

"ಟಕೀಲ ಇದ್ಹಂಗೆ ಇತ್ತು, ಓಗ್ಲಾ ಬಿದ್ಕಾ ಯು ಬ್ಲಡಿ ಬಗ್ಗರ್" ಎಂದ. ಅವತ್ತೇ ಮೊದಲು ನಾನು ಟಕೀಲ ಪದ ಕೇಳಿದ್ದು! ಆ ಪದ ಕೇಳಿದ್ದೇ ತಡ ನಾನು ಸ್ಟ್ಯಾನ್ಲಿಯನ್ನು ಯಾಮಾರಿಸಿ ಲಿಂಗಾಜಲ ಕುಡಿಸಿದ್ದನ್ನೂ ಮರೆತು ಬಾಯಿ ಬಿಟ್ಟುಕೊಂಡು "ಟಕೀಲ, ಟಕೀಲ" ಎಂದು ಉದ್ಗರಿಸಿದೆ. ಸ್ಟ್ಯಾನ್ಲಿ, "ಹೂಂ, ಟಕೀಲ" ಎಂದು ತನ್ನ ಲಿಂಗಾಜಲ ಖಾಲಿ ಮಾಡಲು ಹೋದ. ಅವನು ಅತ್ತ ಹೋದ ಮೇಲೆ ನಾನು ನನ್ನ ಸ್ನೇಹಿತರೂ ಕಣ್ಣು ಮಿಟುಕಿಸಿ ಲಿಂಗಾಜಲದ ಬಗ್ಗೆ ಈಗಲೇ ಸ್ಟ್ಯಾನ್ಲಿಗೆ ಹೇಳುವುದು ಬೇಡ ಎಂದು ಸುಮ್ಮನಾದೆವು.

ಆ ನಂತರ ಅದು ಹೇಗೋ ಸ್ಟ್ಯಾನ್ಲಿ ಆ ಸೆಮಿಸ್ಟರ್ ಪಾಸಾಗಿಬಿಟ್ಟ! ಅಷ್ಟೇ ಅಲ್ಲದೆ ಮುಂದಿನ ಎಲ್ಲಾ ಸೆಮಿಸ್ಟರ್ ಮುಗಿಸಿ ನನಗಿಂತ ಮೊದಲೇ ಸಪ್ತ ಸಾಗರದಾಚೆಯ ಅಮೆರಿಕಕ್ಕೂ ಹಾರಿಬಿಟ್ಟ.

ಹಾರುವ ಒಂದು ವಾರ ಮೊದಲು ನಮಗೆಲ್ಲಾ ಬ್ರಿಗೇಡ್ ರೋಡ್ ಸಂದಿಯ ಗಜ್ಲರ್ಸ್ ಇನ್ನಿನಲ್ಲಿ ಭರಪೂರ ಬಿಯರ್ ಕುಡಿಸಿದ ಸ್ಟ್ಯಾನ್ಲಿಗೆ ಟಕೀಲಾ ರಹಸ್ಯ ತಿಳಿಸಿ, "ಅದನ್ನು ಕುಡಿದ ಮೇಲೆಯೇ ನೀನು ಉದ್ಧಾರ ಆದೆ ಮಗನೆ" ಎಂದೆ. ಅದಕ್ಕೆ ಸ್ಟ್ಯಾನ್ಲಿ, "ಲೋ ಮುಂಚೆನೇ ಕುಡಿಸಿದ್ರೆ ಎಲ್ಲೋ ಇರ್ತಿದ್ದೆನಲ್ಲೋ ಬ್ಲಡಿ ಬಗ್ಗರ್" ಎಂದು ನಸು ನಕ್ಕ.

"ಬಗ್ಗರ್ ಅಲ್ಲ ಕಣ್ಲಾ, ಬೆಗ್ಗರ್ ನಾನು. ಬಿಲ್ ಕಕ್ಕಿ ನಡಿ" ಎಂದೆ.

ಸ್ಟ್ಯಾನ್ಲಿ, "ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮೂಗುತಿ" ಎಂದು ತನ್ನ ವರಾತ ಹಾಡುತ್ತ ಬಿಲ್ ನೋಡಿ, "ದಿಸ್ ಈಸ್ ನಥಿಂಗ್" ಎಂದು ಬಿಲ್ ಕಕ್ಕಿದ.

ಈಗ ಸ್ಟ್ಯಾನ್ಲಿ ಎಲ್ಲಿದ್ದಾನೋ ಗೊತ್ತಿಲ್ಲ. ಸ್ಯಾಚೆಟ್ ಪಾನೀಯ ಇಲ್ಲ ಆದರೆ ಮಮತಾ ಮಿಲ್ಟ್ರಿ ಹೋಟೆಲ್ ಮಾತ್ರ ಹಾಗೆಯೇ ಇದೆ.

ವಿ. ಸೂ: ಸಿನೆಮಾ ಗೀತೆ, ದಾಸ ಸಾಹಿತ್ಯ ತಿರುಚಿದ ಎಂಬ ಶಿಶುಸೃಜನ ಕ್ಲೇಮುಗಳನ್ನು ಟಿಶ್ಯೂ ಪೇಪರ್ರಿನಂತೆ ಬಳಸಲಾಗುವುದು.

No comments:

Post a Comment