ಕೆಂಪೇಗೌಡ, ಚುನಾವಣೆ ಮತ್ತು ರೆಡ್ಡಿಗಳು!

ಕಳೆದ ವಾರದ ಲೇಖನಕ್ಕೆ ಹಲವಾರು ಅಸಹನೆ, ಆಕ್ಷೇಪಗಳು ಬಂದಿದ್ದವು. ಆ ಎಲ್ಲಾ ಆಕ್ಷೇಪಗಳಿಗೆ ಉತ್ತರವಾಗಿ ಹೀಗೆ ಹೇಳಬಲ್ಲೆ -"ನಿಮ್ಮೆಲ್ಲಾ ಅಸಹನೆ, ಆಕ್ಷೇಪಗಳಿಗೆ ಲೇಖನದಲ್ಲಿಯೇ ಸಮಾಧಾನಗಳಿವೆ. ನಿಮ್ಮಗಳ ಪೂರ್ವಾಗ್ರಹಪೀಡಿತ ಮನಸ್ಸಿನಿಂದ ಹೊರಬಂದು ಮತ್ತೊಮ್ಮೆ, ಮಗದೊಮ್ಮೆ ಲೇಖನವನ್ನು ಓದಿ. ನಿಮ್ಮ ನಿಮ್ಮ ಪ್ರಶ್ನೆಗಳಿಗೆ ಉತ್ತರಗಳು ಸಿಗುತ್ತವೆ. ಬೆಂಗಳೂರೇತರ ಯಾವುದಾದರೂ ಪಟ್ಟಣಕ್ಕೋ (ಹುಬ್ಬಳ್ಳಿ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು...ಇತ್ಯಾದಿ) / ಚಿಕ್ಕ ಊರುಗಳಿಗೋ (ಹರಪನಹಳ್ಳಿ, ಹೊಸದುರ್ಗ, ಅರಸೀಕೆರೆ, ಮೂಡಿಗೆರೆ...ಇತ್ಯಾದಿ) ಹೋಗಿ ನೋಡಿ, ಅಲ್ಲಿನ ಮಾರ್ವಾಡಿಗಳು ಕನ್ನಡದಲ್ಲದೇ ಇನ್ಯಾವ ಭಾಷೆಯಲ್ಲಿ ವ್ಯವಹರಿಸುತ್ತಾರೆಂದು! ಬೆಂಗಳೂರೇ ಕರ್ನಾಟಕವಲ್ಲ. ಬೆಂಗಳೂರಿನಲ್ಲಿ ಕಟ್ಟಿರುವ "ಅಂತರ್ರಾಷ್ಟ್ರೀಯ" ವಿಮಾನ ನಿಲ್ದಾಣ ಕೇವಲ ಬೆಂಗಳೂರಿಗೆ ಸೀಮಿತವಲ್ಲ. ಅದು ಕರ್ನಾಟಕದ ಹೆಬ್ಬಾಗಿಲು. ನನ್ನಂಥಹ ಐಟಿ ಗುಲಾಮರಿಗಾಗಿಯೇ ಕಟ್ಟಿರುವ ಈ ವಿಮಾನನಿಲ್ದಾಣ ನನ್ನನ್ನು ಕೇವಲ ಬೆಂಗಳೂರಿಗೆ ಕರೆತರುವುದಿಲ್ಲ. ಅದು ಕರ್ನಾಟಕಕ್ಕೆ ಕರೆತರುತ್ತದೆ".

"ಹಾಗೆಯೇ ಕೆಂಪೇಗೌಡನಾಗಲೀ, ಟಿಪ್ಪೂ ಆಗಲೀ ಅಖಂಡ ಕರ್ನಾಟಕವನ್ನು ಪ್ರತಿನಿಧಿಸುವುದಿಲ್ಲ. ಯಾವುದೇ ಜಾತಿ ಸೋಂಕಿಲ್ಲದ, ಅಖಂಡ ಕರ್ನಾಟಕವನ್ನು ಪ್ರತಿನಿಧಿಸುವ ಅಮೋಘವರ್ಷ, ಹೊಯ್ಸಳ, ಪುಲಕೇಶಿ, ಪಂಪ...ಮುಂತಾದವರ ಹೆಸರುಗಳು ಹೆಚ್ಚು ಸಮಂಜಸವೆಂಬುದು ಲೇಖನದ ತಿರುಳು. ಕೆಂಪೇಗೌಡ ಐತಿಹಾಸಿಕ ವ್ಯಕ್ತಿಯಾದ್ದರಿಂದ ಅವನಿಗಿಂತ ಪ್ರಮುಖರಾದ ಐತಿಹಾಸಿಕ ವ್ಯಕ್ತಿಗಳನ್ನು ಹೆಸರಿಸಿದ್ದೇನೆ. ಹಾಗೆಯೇ ಸಮಗ್ರ ಕರ್ನಾಟಕದ ಪರಿಕಲ್ಪನೆಯಿಲ್ಲದೇ ಭಾವುಕ ಕನ್ನಡ ಹೋರಾಟ ನಡೆಸುವುದು ಐತಿಹಾಸಿಕ ಚರಿತ್ರೆಗೆ ಅರಿಯದೇ ಮಾಡುವ ಅಪಚಾರವೇ ಆಗಿದೆ. ಹಾಗಂತ ಕನ್ನಡಕ್ಕೆ ಹೋರಾಡಲು ಕನ್ನಡ ಪಂಡಿತನೋ ಅಥವಾ ಕನ್ನಡ ಇತಿಹಾಸಕಾರನೋ ಆಗಬೇಕೆಂದೇನೂ ಅಲ್ಲ! ಕನ್ನಡವೆಂದೊಡನೇ ಥಟ್ಟನೇ ನೆನಪಾಗುವ ಕುವೆಂಪು, ಕನ್ನಡಿಗರನ್ನೆಲ್ಲಾ ಒಂದುಗೂಡಿಸಿದ ಗೋಕಾಕ್ ವರದಿಯ ಗೋಕಾಕರು, ಕನ್ನಡ ಹೋರಾಟಗಾರ ಮುಖಂಡರಿಗೆ ಕನಿಷ್ಟವಾಗಿಯಾದರೂ ನೆನಪಿರಬೇಕು. ಇಲ್ಲಿ ನನ್ನ ಆಕ್ಷೇಪ ಕರವೇ ಮುಖಂಡರ ವರ್ತನೆಯ ಕುರಿತಾಗಿದೆಯೇ ಹೊರತು ಕಳಕಳಿಯ ವಿರುದ್ಧವಲ್ಲ. ಕನಿಷ್ಟ ಐತಿಹಾಸಿಕ ಅರಿವಿಲ್ಲದೇ ಮಾಡುವ ಭಾವುಕ ಹೋರಾಟಗಳು ಎಂತಹ ಅನಾಹುತಗಳನ್ನು ಸೃಷ್ಟಿಸುತ್ತದೆ ಎಂಬುದಕ್ಕೆ ಕೆಳಗಿನ ಅಣಕವನ್ನು ಓದಿ, ಚಿಂತಿಸಿ, ಮಂಥಿಸಿ.

ಕನ್ನಡಕ್ಕೆ ಅಪಚಾರವಾದಾಗ ಕನ್ನಡಿಗರು ಭರ್ಜರಿಯಾಗಿಯೇ ಯಾವ ಸಂಘಟನೆಗಳಿಲ್ಲದೇ ಪ್ರತಿಭಟಿಸಿದ್ದಾರೆ, ಹೋರಾಡಿದ್ದಾರೆ. "ಗೋಕಾಕ್ ವರದಿ ಜಾರಿಗೆ ಬರಲಿ" ಎಂದು ಇಂಗ್ಲಿಷ್ ಪ್ರಶ್ನೆಪತ್ರಿಕೆಯನ್ನು ಕನ್ನಡದಲ್ಲಿ ಉತ್ತರಿಸಿದ್ದ ನಮಗೆ ಅಂದು ಕರವೇಯಂಥಹ ಸಂಘಟನೆಗಳೇನೂ ಇರಲಿಲ್ಲ. "ಕಟ್ಟು-ನಡೆಸು-ಬಿಟ್ಟುಕೊಡು" (ಬಿ.ಒ.ಟಿ) ಒಪ್ಪಂದದಂತೆ ಕಟ್ಟಿರುವ ನೂತನ ವಿಮಾನನಿಲ್ದಾಣದ ಕಂಟ್ರಾಕ್ಟುದಾರರಿಗೆ ಅಂದಿನ ವಿಗ್ಗಿನ ಸುಂದರಾಂಗನ ಸರ್ಕಾರ ಕನ್ನಡಕ್ಕೆ/ಕನ್ನಡಿಗರಿಗೆ ಮಾನ್ಯತೆ, ಉದ್ಯೋಗ ಇತ್ಯಾದಿಗಳನ್ನು ಒಪ್ಪಂದದಲ್ಲಿ ಮಂಡಿಸಿ ಮೂಗುದಾರವನ್ನು ಹಾಕಿದ್ದರೆ ಇಂದು ಹೋರಾಡುವ ಅಗತ್ಯವೇ ಇರುತ್ತಿರಲಿಲ್ಲ. ಈಗ ಹೇಳಿ ಯಾರ ವಿರುದ್ಧ ಹೋರಾಡಬೇಕೆಂದು! ಹೈದರಾಬಾದಿನಲ್ಲಿ ಕಟ್ಟಿದ ನೂತನ ವಿಮಾನನಿಲ್ದಾಣದ ಕಂಟ್ರ್‍ಆಕ್ಟ್ ಅನ್ನು ಫಾರಿನ್ ಸಂಸ್ಥೆ ಬಿಡಿ, ರಿಲೈಯನ್ಸ್ ಸಂಸ್ಥೆಗೂ ಕೂಡ ಕೊಡದೇ ಅಚ್ಚ ತೆಲುಗು ಬಿಡ್ಡನಿಗೆ ಆಂಧ್ರ ಸರ್ಕಾರ ಕೊಟ್ಟಿದ್ದಿತು. ಹೋರಾಟಗಳ ಗುರಿ ತಾರ್ಕಿಕವಾಗಿ ಮೂಲೋಚ್ಚಾಟನೆಯತ್ತ ಮುಖ ಮಾಡಿದ್ದರೆ ಯಶಸ್ವಿಯಾಗುತ್ತವೆ. ಇಲ್ಲದಿದ್ದರೆ ಅವು ಸದ್ದುದ್ದೇಶಗಳಿದ್ದರೂ ಅನುಮಾನಿಸುವಂತಾಗುತ್ತವೆ.

ಇರಲಿ, ಈಗ ಅಂತೂ ಚುನಾವಣೆ ಮುಗಿದು ಬಿಜೆಪಿ ಅಧಿಕಾರ ಹಿಡಿದಿದೆ. ಹಿಂದಿನ ಸಮ್ಮಿಶ್ರ ಸರ್ಕಾರದ ನೆನಹಿಗಾಗಿಯೋ ಏನೋ ಈ ಬಾರಿಯೂ ಪಕ್ಷೇತರರನ್ನೊಳಗೊಂಡು ಸಮ್ಮಿಶ್ರವೆನಿಸಿದರೂ ಏಕಪಕ್ಷೀಯ ಸರ್ಕಾರ ಬಂದಿದೆ. ಹಾಗಂತ ಐದು ವರ್ಷಗಳೂ ಹೀಗೆ ಇರುತ್ತದೆ ಎಂದು ಹೇಳಲಾಗದು. ಮುಂದೆ ಕುಟಿಲ ರಾಜಕಾರಣಿಗಳು ಹೇಗಿರುತ್ತಾರೋ ಬಲ್ಲವರ್‍ಯಾರು? ಐದು ವರ್ಷಗಳ ಸುಭದ್ರತೆಗಾಗಿ ಬಿಜೆಪಿ, ಜೆಡಿಎಸ್ ನ ಹತ್ತು ಹಲವಾರು ಶಾಸಕರನ್ನು ತನ್ನೆಡೆಗೆ ಸೆಳೆದುಕೊಂಡು ಸ್ಥಿರತೆಯನ್ನು ಸೇಫ್ ಮಾಡಿಕೊಳ್ಳುವತ್ತ ಯೋಚಿಸಬೇಕೆನೋ!

ಇರಲಿ, ಒಟ್ಟಾರೆ "ತಾಯಿ-ಮಗ" ಪಕ್ಷವಾದ ಕಾಂಗ್ರೆಸ್ ಮತ್ತು "ಅಪ್ಪ-ಮಕ್ಕಳ" ಜೆಡಿಎಸ್ ಗಳನ್ನು ವಿರೋಧಿಸಿ ಜನಾದೇಶದಂತೆ ಅಧಿಕಾರ ಹಿಡಿದಿರುವ ಬಿಜೆಪಿ, ಗಣಿ ರೆಡ್ಡಿಗಳನ್ನು ಹದ್ದುಬಸ್ತಿನಲ್ಲಿಟ್ಟು, ತಾನು ಕೂಡ "ರೆಡ್ಡಿ ಸೋದರರ" ಕೌಟುಂಬಿಕ ಪಕ್ಷವಾಗದಂತೆ ತಡೆಗಟ್ಟುವುದು ಸೂಕ್ತ. ಏಕೆಂದರೆ ಅದಾಗಲೇ ಈ ರೆಡ್ಡಿ ಸೋದರರ ಬಗ್ಗೆ ಅಪಸ್ವರಗಳು ಮಾಧ್ಯಮದಲ್ಲಿ ಕೇಳಿ ಬರುತ್ತಿವೆ!

ಅಂದ ಹಾಗೆ ಚುನಾವಣೆ ಮುಂಚೆ ಜೆಡಿಎಸ್ ನ ಜಮೀರ್ ಅಹ್ಮದ್ "ಎಡ್ಯೂರಪ್ಪ ಮುಖ್ಯಮಂತ್ರಿಯಾದರೆ ಅವರ ಮನೆಯಲ್ಲಿ ಕೆಲಸದಾಳಾಗಿ ದುಡಿಯುವೆ" ಎಂದು ಸಾರ್ವಜನಿಕ ಪಣ ತೊಟ್ಟಿದ್ದ ಈ ಕುಮಾರಸ್ವಾಮಿ ಡ್ರೈವರ್ ಯಾವಾಗಿನಿಂದ ಎಡ್ಯೂರಪ್ಪ ಮನೆಯಲ್ಲಿ ಕೆಲಸಕ್ಕೆ ಹೋಗುವರೋ? ಬಹುಶಃ ಅವರ ಮಾಲೀಕ ಕುಮಾರಸ್ವಾಮಿಯೇ ವಚನಭ್ರಷ್ಟರಾಗಿರುವಾಗ ತಮ್ಮ ವಚನ ಎಲ್ಲಿಯ ಲೆಕ್ಕವೆಂದುಕೊಂಡು ಸುಮ್ಮನಾಗಿರುವರೇನೋ!

ಈ ಚುನಾವಣೆಯನ್ನು ಅವಲೋಕಿಸಿದಾಗ ಕಾಣುವುದು, ಪ್ರತಿ ಕ್ಷೇತ್ರದಲ್ಲಿಯೂ ಜನರು ಅಧಿಕವಾಗಿ ಮೂರು ಪಕ್ಷಗಳಿಗೆ ಮಾತ್ರ ಮತ ಚಲಾಯಿಸಿರುವುದು. ಬಿಎಸ್ಪಿ, ಎಸ್ಪಿ, ಸ್ವರ್ಣಯುಗ, ಜನತಾದಳ (ಯು), ಲೋಕ ಪರಿತ್ರಾಣ......ಮತ್ತಿತರೆ ಪಕ್ಷಗಳಿಗೆ ಬಿದ್ದಿರುವ ಮತಗಳು ಬಹಳಷ್ಟು ಕಡೆ ನೂರರ ಲೆಕ್ಕದಲ್ಲಿಯೇ ಇದೆ. ಮತಗಳು ಹಂಚಿಹೋಗದೇ ಪ್ರಮುಖ ಮೂರು ಪಕ್ಷಗಳಿಗೇ ಬಿದ್ದಿರುವುದೂ ಕೂಡ ಜನ ಹೆಚ್ಚು ಪಕ್ಷಗಳನ್ನು ಬಯಸದೇ ಇರುವ ಮೂರು ಪಕ್ಷಗಳಲ್ಲೇ ನೆಲೆ ಕಂಡುಕೊಳ್ಳಿರೆಂದು ರಾಜಕೀಯ ನಾಯಕರುಗಳನ್ನು ಎಚ್ಚರಿಸಿದಂತಿದೆ ಈ ಬಾರಿಯ ಚುನಾವಣೆ!

ಈ ಬಾರಿ ಚುನಾವಣಾ ಕಣದಲ್ಲಿದ್ದ ಆದರ್ಶವಾದಿಗಳನ್ನು ಜನ ಡೋಂಗೀ ಆದರ್ಶವಾದಿಗಳೆಂದುಕೊಂಡರೋ ಅಥವಾ ಮತಗಳು ಹಂಚಿಹೋಗುತ್ತವೆಂದೋ ಅಥವಾ ಈ ಆದರ್ಶವಾದಿಗಳನ್ನು ಆರಿಸುವುದರಿಂದ ಮತ್ತಷ್ಟು ಅತಂತ್ರ ವಿಧಾನಸಭೆ ಏರ್ಪಡುತ್ತದೆಂದೋ ಒಟ್ಟಾರೆ ಆದರ್ಶವನ್ನು ತಿರಸ್ಕರಿಸಿದ್ದಾರೆ.

ಈ ಹಿಂದೆ ನಾನು ಬರೆದಿದ್ದ ಹೊಳಲ್ಕೆರೆ ಕ್ಷೇತ್ರದಲ್ಲಿ ಬಿಜೆಪಿ ಗೆದ್ದು, ನನ್ನ ಆದರ್ಶವಾದೀ ಸ್ನೇಹಿತ ಚಂದ್ರಶೇಖರ್ ಒಂದೂವರೆ ಸಾವಿರಕ್ಕೂ ಹೆಚ್ಚು ಮತಗಳನ್ನು ಗಳಿಸಿದ್ದರೆ, ಮತ್ತದೇ ಗಾಂಧೀ ಪಕ್ಷದ ಮಹಿಮಾ ಪಟೇಲ್ ಚನ್ನಗಿರಿಯಲ್ಲಿ ಹತ್ತಿರ ಹತ್ತಿರ ಹತ್ತು ಸಾವಿರ ಮತಗಳನ್ನು ಪಡೆದಿದ್ದಾರೆ. ಕುಲಗೆಟ್ಟ ಮಾಧ್ಯಮಗಳು ಈ ಅಸಲೀ ಆದರ್ಶವಾದಿಗಳಿಗೆ ಸರಿಯಾದ ಪ್ರಚಾರವನ್ನು ಕೊಡದೆ ಅನ್ಯಾಯ ಮಾಡಿದವು.

ಆದರೆ ಈ ಎಲ್ಲಾ ಆದರ್ಶವಾದಿಗಳಲ್ಲಿ ಬೆಂಗಳೂರಿನ ಜಯನಗರದಲ್ಲಿ ಮೌಲ್ಯಾಗ್ರಹಿಸಿ ಸ್ಪರ್ಧಿಸಿದ್ದ ರವಿಕೃಷ್ಣಾರೆಡ್ಡಿಯವರು ಜಯ ಗಳಿಸಬಹುದೆಂದು ತರ್ಕಿಸಿದ್ದೆ. ಇವರಿಗೆ ದೊರೆತ ಮಾಧ್ಯಮಗಳ ಪ್ರಚಾರ ಮತ್ತು ಚನ್ನಗಿರಿ, ಹೊಳಲ್ಕೆರೆಗಿಂತ ವಿದ್ಯಾವಂತರು ಅಧಿಕವಾಗಿರುವ ಕಾರಣ ಬೆಂಗಳೂರಿನ ಜಯನಗರ ಕ್ಷೇತ್ರದಲ್ಲಿ, ರವಿಕೃಷ್ಣಾರೆಡ್ಡಿ ಜಯ ಗಳಿಸದಿದ್ದರೂ ವಿಜಯಿಯ ಸಮೀಪಸ್ಪರ್ಧಿಯಾಗಿ ಹೊಮ್ಮುತ್ತಾರೆಂದುಕೊಂಡಿದ್ದೆನು. ಆದರೆ ನನ್ನ ನಿರೀಕ್ಷೆ ಕ್ವಚಿತ್ತಾಗುವಂತೆ ಅವರಿಗೆ ೨೪೪ ಮತಗಳು ದೊರೆತಿವೆ. ಬಹುಶಃ ಇದು ಇಂದಿನ ಬೆಂಗಳೂರಿನಲ್ಲಿ ಮೌಲ್ಯಗಳಿಗೆ ಇರುವ ಬೆಲೆಯೇನೋ!!! ಇದ್ದುದರಲ್ಲಿ ಚನ್ನಗಿರಿ, ಹೊಳಲ್ಕೆರೆಗಳಂತ ಸಣ್ಣ ಊರುಗಳಲ್ಲಿಯೇ ಇನ್ನೂ ಪ್ರಾಮಾಣಿಕತೆ, ಮೌಲ್ಯಗಳಿಗೆ ಮೌಲ್ಯವಿದೆಯೆಂದೆನಿಸುತ್ತದೆ. ಅದಕ್ಕೇ ಇರಬೇಕು ಬಾಳಪ್ಪ ಹುಕ್ಕೇರಿ "ನಮ್ಮ ಹಳ್ಳೀ ಊರ ನಮಗ ಪಾಡಾಃ ಯಾತಕ್ಕವ್ವಾ ಹುಬ್ಬಳ್ಳೀ ಧಾರವಾಡಾಃ..." ಎಂದು ಹಾಡಿರುವುದು.

ಇಲ್ಲಾ, ಸಾಕಷ್ಟು ಗಿಮಿಕ್ ಗಳನ್ನು ನೋಡಿ, ಮಾಡಿರುವ ಸೊಫಿಸ್ಟಿಕೇಟೆಡ್ ಬೆಂಗಳೂರಿಗರು ರವಿಕೃಷ್ಣಾರೆಡ್ಡಿಯವರ ಪ್ರಾಮಾಣಿಕ ಪ್ರಯತ್ನವನ್ನು "ಕಿವಿ ಮೇಲೆ ಹೂವು ಇಡ್ತಾ ಅವ್ನೇ" ಎಂದು ಕನ್ನಡದಲ್ಲೋ ಅಥವಾ "ಓಲ್ಡ್ ವೈನ್ ಇನ್ ಎ ನ್ಯೂ ಬಾಟಲ್" ಎಂದು ಇಂಗ್ಲಿಷ್ ನಲ್ಲೋ ಅಂದುಕೊಂಡು ದುಬಾರಿಯಾದರೇನೋ! ಏಕೆಂದರೆ ರವಿಕೃಷ್ಣಾರೆಡ್ಡಿಯವರು ಚುನಾವಣೆಗೆ ಖರ್ಚು ಮಾಡಿದ್ದು ಹತ್ತಿರ ಹತ್ತಿರ ನಾಲ್ಕೂವರೆ ಲಕ್ಷ ಮತ್ತು ಗಳಿಸಿದ್ದು ಇನ್ನೂರ ನಲ್ವತ್ನಾಲ್ಕು ಓಟುಗಳು. ಅಲ್ಲಿಗೆ ಒಂದು ಓಟಿನ ಬೆಲೆ ಹದಿನೆಂಟು ಸಾವಿರ ರೂಪಾಯಿಗಳಿಗೂ ಹೆಚ್ಚು! ಒಂದು ಸುದ್ದಿಯ ಪ್ರಕಾರ ಬಿಜೆಪಿಯ ಕರುಣಾಕರರೆಡ್ಡಿ ಹರಪನಹಳ್ಳಿಯಲ್ಲಿ ಐವತ್ತು ಕೋಟಿ ಖರ್ಚು ಮಾಡಿ ಎಪ್ಪತ್ತು ಸಾವಿರ ಓಟು ಗಳಿಸಿ, ಪ್ರತಿಯೊಂದು ಓಟಿಗೆ ಏಳು ಸಾವಿರ ರೂಪಾಯಿ ಚೆಲ್ಲಿದ್ದಾರೆ. ಅಂದರೆ ರವಿಕೃಷ್ಣಾರೆಡ್ಡಿ ಪ್ರತಿ ಓಟಿಗೆ ಗಣಿ ರೆಡ್ಡಿಗಳು ಖರ್ಚು ಮಾಡಿದ್ದುದಕ್ಕಿಂತ ದುಪ್ಪಟ್ಟು ಹೆಚ್ಚಾಗಿ ಖರ್ಚು ಮಾಡಿದ್ದಾರೆ.

ಯಾಕೋ ಮೌಲ್ಯಗಳು ಭಾರತದಲ್ಲಿ ಅತೀ ದುಬಾರಿಯಾಗುತ್ತಿವೆ!

ಅಣಕ:

ಬೆಂಗಳೂರು ಕೇಂದ್ರಿತ ಕನ್ನಡ ಓರಾಟಗಾರರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ "ಕೆಂಪೇಗೌಡ" ಹೆಸರಿಡಬೇಕೆಂದಿರುವುದು ಏಕೆ ಗೊತ್ತೆ?

ಜಾತಿ ಎಂದಿರಾ? ಅಲ್ಲಾ. ಬೆಂದಗಾಳೂರು ಸ್ಥಾಪಿಸಿದ್ದಕ್ಕೆಂದಿರಾ ಅದೂ ಅಲ್ಲ.

ಕೆಂಪೇಗೌಡರು ಇಂದಿನ ಬೆಂಗಳೂರಿಗನ ನೈಜ ರೂಪ! ಅವರ ಮಾತೃಭಾಷೆ ತೆಲುಗು ಮತ್ತವರ ಮೂಲ ತಮಿಳುನಾಡಿನ ಕಂಚಿ ಪ್ರದೇಶ.

ಇದು ಅಣಕವಲ್ಲ, ಐತಿಹಾಸಿಕ ಸತ್ಯ.

ಹಾಗಿದ್ದರೆ ಇದನ್ನು ಅಣಕದಲ್ಲಿ ಬರೆದಿರುವುದಕ್ಕೆ ಕಾರಣ?

ಚೌ-ಚೌ ಕನ್ನಡದ ಬೆಂಗಳೂರಿಗರು ಇದನ್ನರಿಯದೇ ಅವರ ಹೆಸರಿಗಾಗಿ ಹೋರಾಡುತ್ತಿರುವುದು! ಕಣ್ಣರಿಯದಿರ್ದೊಡೇ ಕರುಳರಿಯದೇ?

"ಆನಾ, ಕೆಂಪೇಗೌಂಡರ್ ನಂಬಳ ಆಳ್" ಎಂದು ತಮಿಳ್ ಪಸಂಗಳ್ ಸಿರಿಕ್ಕಿರುವರ್!

ಕನ್ನಡ ಓರಾಟಗಾರರ "ಕೆಂಪೇಗೌಡ" ಹೆಸರಿನ ಜಾಡಿನಲ್ಲಿ...

ಬೆಂಗಳೂರಿನ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆಗೆ ಮುನ್ನ ಅದರ ಹೆಸರಿನ ಬಗ್ಗೆ ಅದಾಗಲೇ ಹೋರಾಟಗಳು ಉದ್ಘಾಟನೆಗೊಂಡಿವೆ! ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಬೆಂಗಳೂರಿನ ಹೊಸ ವಿಮಾನ ನಿಲ್ದಾಣಕ್ಕೆ "ಕೆಂಪೇಗೌಡ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ"ವೆಂದು ಹೆಸರಿಸದಿದ್ದರೆ ವಿಮಾನ ನಿಲ್ದಾಣವನ್ನು ಧ್ವಂಸಗೊಳಿಸುವುದಾಗಿ ಎಚ್ಚರಿಕೆಯನ್ನು ಹೊರಡಿಸಿದೆ.

ಇರಲಿ, ಈಗ ಈ ಕೆಂಪೇಗೌಡ ಬಗ್ಗೆ ಕೊಂಚ ತಿಳಿದುಕೊಳ್ಳೋಣ. ಕ್ರಿ.ಶ. ೧೫೧೩ ರಿಂದ ೧೫೬೩ ಕೆಂಪೇಗೌಡ ಹುಟ್ಟಿ, ಆಳಿ ಹೋದ ಕಾಲ. ವಿಜಯನಗರದ ಸಾಮಂತನಾಗಿದ್ದ ಕೆಂಪೇಗೌಡ ಯಲಹಂಕ ಪ್ರಾಂತವನ್ನು ಆಳುತ್ತಿದ್ದು, ಕ್ರಿ.ಶ. ೧೫೩೭ ರಲ್ಲಿ ಬೆಂಗಳೂರನ್ನು ಸ್ಥಾಪಿಸಿದನು. ಮುಂದೆ ಶಿವಾಜಿಯ ತಂದೆ ಶಹಾಜಿಯು ಬೆಂಗಳೂರನ್ನು ಬಿಜಾಪುರದ ಸುಲ್ತಾನರ ಸರ್ದಾರನಾಗಿದ್ದಾಗ ವಶಪಡಿಸಿಕೊಂಡು ಬೆಂಗಳೂರು, ಬಿಜಾಪುರದ ಸುಲ್ತಾನನ ಆಡಳಿತಕ್ಕೆ ಒಳಪಡುವುದಕ್ಕೆ ಕಾರಣನಾದನು. ಕೆಂಪೇಗೌಡ ತನ್ನ ಆಡಳಿತದಲ್ಲಿ ಬೆಂಗಳೂರಿನ ನಾಲ್ಕು ದಿಕ್ಕಿಗೆ ನಾಲ್ಕು ಗಡಿ ಗೋಪುರಗಳನ್ನು ಕಟ್ಟಿಸಿ ಒಂದು ಮಣ್ಣಿನ ಕೋಟೆಯನ್ನು ಕಟ್ಟಿಸಿದ್ದನು.

ಒಟ್ಟಾರೆ ಇದು ಕೆಂಪೇಗೌಡ ಕುರಿತಾದ ಸಂಕ್ಷಿಪ್ತ ಮಾಹಿತಿ. ಈ ರೀತಿಯ ಸಾಮಂತರು, ಸರದಾರರು ಕನ್ನಡ ನಾಡಿನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಆಗಿಹೋಗಿದ್ದಾರೆ. ಕಲ್ಲಿನ ಕೋಟೆಗಳನ್ನು ಕಟ್ಟಿ ಹೋದ ಇನ್ನೂ ಹೆಚ್ಚಿನ ಸರದಾರ ಸಾಮಂತರುಗಳ ಹೆಸರುಗಳೇ ಇಂದು ಯಾರಿಗೂ ನೆನಪಿಲ್ಲ. ಮದಕರಿ ನಾಯಕ, ಶಿವಪ್ಪ ನಾಯಕ, ಎಚ್ಚಮ ನಾಯಕರಂತಹ ಅಗ್ರಪಂಕ್ತಿಯ ಸರದಾರರೊಂದಿಗೆ ಹೋಲಿಸಿದರೆ ಕೆಂಪೇಗೌಡರ ಕೊಡುಗೆ ಅತ್ಯಂತ ಗೌಣ. ಒಟ್ಟಾರೆ ಕೆಂಪೇಗೌಡ ಅಂದಿನ ಕಾಲದ ಯಾವುದೇ ಸಣ್ಣ ಸಾಮಂತನಿಗಿಂತ ಬೇರೆಯಾಗಿ ನಿಲ್ಲುವಂತೆ ಕಾಣಿಸುವ ಯಾವುದೇ ಚಾರಿತ್ರ್ಯಾರ್ಹ ಕುರುಹುಗಳಾಗಲೀ, ಐತಿಹಾಸಿಕ ದಾಖಲೆಗಳಾಗಲೀ ಇಲ್ಲ. ಈ ಕೆಂಪೇಗೌಡ ಕನ್ನಡ ನಾಡು ನುಡಿಗಾಗಿಯಾಗಲೀ, ಒಗ್ಗಟ್ಟಿಗಾಗಲೀ ಹೋರಾಡಿದ್ದೂ ಇಲ್ಲ ಮತ್ತು ಆ ಅಧಿಕಾರವೂ ಇರಲಿಲ್ಲ. ಏಕೆಂದರೆ ಅವನೊಬ್ಬ ವಿಜಯನಗರ ಸಾಮ್ರಾಜ್ಯದ ಸಾಮಂತ ಮಾತ್ರ! ಅರಸರ ಅಡಿಯಾಳಾಗಿ ತಮ್ಮ ತಮ್ಮ ಪ್ರಾಂತ್ಯಗಳಲ್ಲಿ ಅಧಿಕಾರವನ್ನು ನಡೆಸುವುದಷ್ಟೇ ಅಂದಿನ ಸಾಮಂತರ ಕರ್ತವ್ಯವಾಗಿದ್ದಿತು. ಒಟ್ಟಾರೆ ಕೆಂಪೇಗೌಡರು ಕನ್ನಡ ನಾಡು ನುಡಿಗಳ ದೆಸೆಯಿಂದ ಯಾವುದೇ ರೀತಿಯಲ್ಲಿ ಐತಿಹಾಸಿಕ ವ್ಯಕ್ತಿಯಲ್ಲ.

ಹಾಗೆ ಕನ್ನಡ ನಾಡು ನುಡಿಗಾಗಿ ಹೋರಾಡಿದ ಅಮೋಘವರ್ಷ, ಮಯೂರವರ್ಮ, ಹೊಯ್ಸಳರು, ಚಾಲುಕ್ಯರು, ವಿಜಯನಗರದ ಅರಸರು ಇನ್ನು ಮುಂತಾದ ಅನೇಕ ಸಮಗ್ರ ಕರ್ನಾಟಕಕ್ಕೆ ಹೋರಾಡಿದ ನೂರು ಅರಸರ, ಸಾವಿರಾರು ಸಾಮಂತರ ಸಮೀಪಕ್ಕೆ ಕೂಡ ಕೆಂಪೇಗೌಡ ಹೆಸರು ಸಂದುವುದಿಲ್ಲ. ಏಕೆಂದರೆ ವಿಜಯನಗರ ಸಾಮ್ರಾಜ್ಯದ ನೂರಾರು ಸಾಮಂತರಲ್ಲಿ ಕೆಂಪೇಗೌಡನೂ ಕೂಡ ಒಬ್ಬ ಸಾಮಾನ್ಯ ಸಾಮಂತನಾಗಿದ್ದನು.

ಇನ್ನು ಬೆಂಗಳೂರು ವಿಮಾನ ನಿಲ್ದಾಣ ಕೇವಲ ಬೆಂಗಳೂರಿಗಷ್ಟೇ ಸೀಮಿತವಲ್ಲ. ಇದು ಇಡೀ ಕರ್ನಾಟಕದ ಆಸ್ತಿ. ಏಕೆಂದರೆ ಎಂತಹ ಮುಂದುವರಿದ ರಾಷ್ಟ್ರಗಳಲ್ಲಿಯೂ "ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ"ಗಳು ರಾಜ್ಯಕೊಂದರಂತೆಯೇ ಇರುತ್ತವೆ. ಪ್ರತಿ ರಾಜ್ಯದಲ್ಲಿ ಅನೇಕ ವಿಮಾನ ನಿಲ್ದಾಣಗಳಿದ್ದರೂ ಅವೆಲ್ಲಾ ಅಂತರ್ರಾಷ್ಟ್ರೀಯವಾಗಿರುವುದಿಲ್ಲವೆಂಬುದು ಗಮನಿಸಬೇಕಾದ ಅಂಶ. ಹಾಗಾಗಿಯೇ ಈ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ ರಾಜ್ಯಮಟ್ಟದ / ರಾಷ್ಟ್ರಮಟ್ಟದ ಚಾರಿತ್ರ್ಯಾರ್ಹ ವ್ಯಕ್ತಿಗಳ ಹೆಸರುಗಳನ್ನಿಟ್ಟಿರುತ್ತಾರೆ.

ವಿಷಯ ಹೀಗಿರುವಾಗ ಚಕ್ರವರ್ತಿ, ಅರಸರಾಗಿ ಮೆರೆದು, ಕನ್ನಡ ನಾಡು ನುಡಿಗಾಗಿ ಅಪಾರ ಕೊಡುಗೆಯನ್ನು ನೀಡಿರುವ ಚಾರಿತ್ರಿಕ/ಐತಿಹಾಸಿಕ ಅಮೋಘವರ್ಷ, ಪುಲಕೇಶಿ, ಹೊಯ್ಶಳ, ಮಯೂರವರ್ಮ, ವಿಜಯನಗರದ ಅರಸರುಗಳು ಇನ್ನು ಮುಂತಾದವರ ಹೆಸರುಗಳೆಲ್ಲಾ ಕೇವಲ ರಸ್ತೆ, ಬಡಾವಣೆ, ವೃತ್ತಗಳಿಗೆ ಸೀಮಿತವಾಗಿರುವಾಗ, ಒಬ್ಬ ಸಾಮಂತನಗಿದ್ದವನ ಹೆಸರನ್ನು ಇಡೀ ಕರ್ನಾಟಕದ, ಕನ್ನಡಿಗರ ಹೆಮ್ಮೆಯ ಕುರುಹಾಗಿರುವ ವಿಮಾನ ನಿಲ್ದಾಣಕ್ಕಿಡುವುದು ಸಮಗ್ರ ಕರ್ನಾಟಕದ ಪರಿಕಲ್ಪನೆಯ ಅಪಹಾಸ್ಯವೇ ಸರಿ.

ಮೊದಲಿನಿಂದಲೂ ಬೆಂಗಳೂರೇ ಕರ್ನಾಟಕ, ಬೆಂಗಳೂರು ಶೈಲಿಯ ಕನ್ನಡವೇ ಸ್ವಚ್ಚ ಕನ್ನಡ, ಬೆಂಗಳೂರಿನಲ್ಲಿ ಕನ್ನಡಕ್ಕೆ ಕುಂದುಂಟಾದರೆ ಇಡೀ ಕನ್ನಡಕ್ಕೇ ಕುಂದುಂಟಾಯಿತೆಂದು ಬಗೆಯುವ, ಬೆಂಗಳೂರಿಗೆ ತೊಂದರೆಯಾದರೆ ಅದು ಇಡೀ ಕರ್ನಾಟಕದ ತೊಂದರೆ ಎಂದು ಬೊಬ್ಬಿಡುವ, ಒಟ್ಟಾರೆ "ಘನ ಬೆಂಗಳೂರೇ" ಕರ್ನಾಟಕವೆಂಬ ಸಿದ್ದಾಂತವನ್ನು ಹೊಂದಿರುವ ಈ ಓರಾಟಗಾರರ ಅಲ್ಪದೃಷ್ಟಿಯ "ಹುಗ್ರ ಓರಾಟ"ವೇ ಇಂದಿನ ಬೆಂಗಳೂರಿಗೆ ಕಾರಣವೆನಿಸುತ್ತದೆ.

ಬೆಂಗಳೂರಿನಲ್ಲಿ ಕನ್ನಡಿಗರಿಗೆ ಉದ್ಯೋಗ, ಕನ್ನಡಕ್ಕೆ ಮಾನ್ಯತೆ, ಕನ್ನಡಕ್ಕೆ ಪ್ರಾಧಾನ್ಯತೆ ಎಂದೆಲ್ಲಾ ಇಂದು ಹೋರಾಡುತ್ತಿರುವ ಈ ಬೆಂಗಳೂರು ಕೇಂದ್ರಿತ ಓರಾಟಗಾರರು ತಮ್ಮ ಹೋರಾಟದಿಂದ ಕನ್ನಡ ಸೇವೆ ಮಾಡುತ್ತಿದ್ದಾರೆನ್ನುವಿರಾ? ಖಂಡಿತವಾಗಿಯೂ ಅಲ್ಲವೆನಿಸುತ್ತದೆ. ಅವರ ಈ ಹೋರಾಟ ತತ್ವನಿಷ್ಟವಾಗಿದ್ದರೆ ಅದು ಅವರುಗಳು, ತಮ್ಮ ಬೆಂಗಳೂರಿನಲ್ಲಿ ಕನ್ನಡ ಈ ಹೀನಾಯ ಸ್ಥಿತಿಗೆ ಬರಲು ಒಂದೊಮ್ಮೆ ತಾವೇ ಕಾರಣಕರ್ತರಾಗಿದ್ದಕ್ಕಾಗಿ ಮಾಡಿಕೊಳ್ಳುತ್ತಿರುವ ಪ್ರಾಯಶ್ಚಿತ್ತವೆನಿಸುತ್ತದೆ. ಆ ಪ್ರಾಯಶ್ಚಿತ್ತದ ಭರದಲ್ಲಿ ಕರ್ನಾಟಕದ ಪೂರ್ವಾತಿಹಾಸವನ್ನು ಅರಿಯದೆ ಕೇವಲ ಒಂದು ವರ್ಗಕ್ಕೆ, ಒಂದು ಹೋಬಳಿಗೆ ಸೀಮಿತವೆನಿಸುವಂತಹ ಕೆಂಪೇಗೌಡನ ಹೆಸರನ್ನು ಮೆರೆಸಿ, ಕನ್ನಡ/ಕರ್ನಾಟಕಕ್ಕೆ ಇನ್ನಷ್ಟು ಚ್ಯುತಿ ತರುತ್ತಿದ್ದಾರೆ.

ಬಹುಶಃ ಬೆಂಗಳೂರಿಗೆ "ಬೆಂದಗಾಳೂರು" ಎಂದು ಹೆಸರಿಸಿಸುವ ಮೂಲಕ ಕೆಂಪೇಗೌಡ, ಬೆಂಗಳೂರಿನಲ್ಲಿನ ಇಂದಿನ ದಿಢೀರ್‍ ದೋಸೆಗಳು; ಇನ್ಸ್ಟಂಟ್ ಮಸಾಲೆಗಳು; ತ್ವರಿತಗತಿಯ ತಿಂಡಿಗಳ ದರ್ಶಿನಿಗಳಿಂದ ಹಿಡಿದು ಇನ್ಸ್ಟಂಟ್ ಮದುವೆಗಳು; ಇನ್ಸ್ಟಂಟ್ ಹೋರಾಟಗಳು; ಸದಾ ರೆಡಿಯಾಗಿರುವ ನಾಯಕರುಗಳು....ಒಟ್ಟಾರೆಯ ಇನ್ಸ್ಟಂಟ್ ಸಂಸ್ಕೃತಿಗೆ ಕಾರಣೀಭೂತನಾದನೆಂದು ಈ ಇನ್ಸ್ಟಂಟ್ ಹೋರಾಟಗಾರರು ಸಂಶೋಧಿಸಿಕೊಂಡಿದ್ದಾರೇನೋ?

ಏಕೆಂದರೆ ಇದರ ಹೆಸರೇ "ಬೆಂದಗಾಳೂರು" ಅರ್ಥಾತ್ ಇನ್ಸ್ಟಂಟ್ ರೆಡಿ ಇರುವ ಊರು. ಹಾಗಾಗಿಯೇ ಇಲ್ಲಿ ಎಲ್ಲಾ ಇನ್ಸ್ಟಂಟ್. ಕಟ್ಟಿ ರೆಡಿ ಇರುವ ಏರ್ ಪೋರ್ಟಿಗೆ ಇನ್ಸ್ಟಂಟ್ ಕೆಂಪೇಗೌಡ ನಾಮಧಾರಣೆ!!!

ಬೆಂಗಳೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ ಅವಕಾಶವಾದಿಗಳಿಗೆ ಸಿಕ್ಕಿರುವ ಒಂದು ಸುವರ್ಣಾವಕಾಶ. ಈ ಸುವರ್ಣಾವಕಾಶದಲ್ಲಿ ಭೂಮಿಯನ್ನು ಹೆಚ್ಚಿನ ಬೆಲೆಗೆ ಮಾರಿದ ರೈತ, ವಿಮಾನ ನಿಲ್ದಾಣವನ್ನು ಕಟ್ಟಿ ನಿರ್ವಹಿಸುವ ಸಂಸ್ಥೆ, ರಾಜಕಾರಣಿಗಳು, ಭೂ ಮಾಫಿಯಾ....ಗಳಂತೆಯೇ ಈ ಹೋರಾಟಗಾರರು ಕೂಡ. ಈ ಹೋರಾಟದ ಮುಂಚೂಣಿಯಲ್ಲಿರುವವರಿಗೆ ಕನ್ನಡವೂ ಬೇಕಿಲ್ಲ, ಕೆಂಪೇಗೌಡನೂ ಬೇಕಿಲ್ಲ, ಬಡ ಬೋರೇಗೌಡನೂ ಲೆಕ್ಕಕ್ಕಿಲ್ಲ. ಈ ನಾಯಕರುಗಳಿಗೆ ಬೇಕಿರುವುದು ಸಿಕ್ಕಿರುವ ಈ ಅವಕಾಶವನ್ನು ಯಶಸ್ವಿಯಾಗಿ ಬಳಸಿಕೊಂಡು ಮತ್ತೊಬ್ಬ ಒಕ್ಕಲಿಗ ನಾಯಕನೂ, ಕನ್ನಡ ಕಂಠೀರವನೂ ಉದಕವಾಗುವುದು. ಹಾಗಾಗಿಯೇ ಇಂದು ಇವರು ನಮ್ಮ ನಿಮ್ಮೆಲ್ಲರ ಭಾಷಾ ಅಭಿಮಾನದ ಭಾವನೆಗಳನ್ನು ಶೋಷಿಸುತ್ತ, ಆ ಭಾವನೆಗಳನ್ನು ಯಶಸ್ವಿಯಾಗಿ ಬಿಕರಿಸುತ್ತಾ ತಮ್ಮ ನಾಯಕತ್ವದ ಬೇಳೆಯನ್ನು ಬೆಂದಗಾಳೂರಿನಲ್ಲಿ ಬೇಯಿಸಿಕೊಳ್ಳುತ್ತಿದ್ದಾರೆ.

ಈ ರೀತಿಯ ಹುನ್ನಾರಗಳಿರದಿದ್ದರೆ, ಇವರ ಹೋರಾಟ ತತ್ವನಿಷ್ಟ್ವವಾಗಿದ್ದರೆ ಕರವೇ ಎರಡು ಬಣಗಳಾಗುತ್ತಿತ್ತೇ? ಇಲ್ಲಿ ಕರವೇಯ ಒಂದು ಬಣ ತಮ್ಮ "ಸ್ವಜಾತಿ" ಪಕ್ಷಪಾತವನ್ನು ಮೆರೆಸುವ ಪ್ರಯತ್ನವನ್ನು ಮಾಡುತ್ತಿದೆಯೇ? ಹಾಗೆ ಸ್ವಜಾತೀ ಪಕ್ಷಪಾತವನ್ನು ಮಾಡಲೇಬೇಕಿದ್ದರೆ, ಭಾರತದ ಪ್ರಪ್ರಥಮ ಕನ್ನಡಿಗ ಪ್ರಧಾನಿಯಾಗಿದ್ದ, ಕನ್ನಡಿಗರ (ಕು)ಖ್ಯಾತಿಯನ್ನು ಭಾರತದಾದ್ಯಂತ ಮೆರೆಸಿದ ದೇವೇಗೌಡರ ಹೆಸರು, ಬೆಂಗಳೂರಿನ ಒಬ್ಬ ಮಾಜೀ ಮೇಯರ್ ಆಗಿದ್ದ ಕೆಂಪೇಗೌಡಗಿಂತ ಅತ್ಯಂತ ಹೆಚ್ಚು ಸೂಕ್ತವೆನಿಸುತ್ತದೆ.

ಭಾರತ ಅದ್ಯಾವ ದಿಕ್ಕಿನಲ್ಲಿ ಮುನ್ನಡೆಯುತ್ತಿದೆಯೋ ಅರ್ಥವಾಗುತ್ತಿಲ್ಲ. ಜಾತಿಗಳು ಇಂದು ಹೆಚ್ಚು ಹೆಚ್ಚು ಪ್ರಬಲವಾಗಿ ಪ್ರಜಾಪ್ರಭುತ್ವದಲ್ಲಿ ಬೇರೂರುತ್ತಿವೆ. ಯಾವ ಪ್ರಜಾಪ್ರಭುತ್ವದಿಂದ ಜಾತಿಗಳನ್ನು ಕೇವಲ ಜೀವನಶೈಲಿಗಳನ್ನಾಗಿ ಸೀಮಿತಗೊಳಿಸಬೇಕಾಗಿದ್ದಿತೋ ಅದೇ ಪ್ರಜಾಪ್ರಭುತ್ವ, ಜಾತಿಗಳನ್ನು ಪೋಷಿಸಿ ಹೆಮ್ಮರಗಳನ್ನಾಗಿಸಿದೆ. ಒಂದೆಡೆ ಹೆಮ್ಮರಗಳೆಲ್ಲಾ ನಾಶವಾಗಿ ಪರಿಸರ ವಿನಾಶದಂಚಿನಲ್ಲಿದ್ದರೆ, ಈ ಜಾತೀ ಪರಿಸರ ಅತ್ಯಂತ ಪ್ರಬಲವಾಗಿ ವಿಕಸಿಸುತ್ತಿದೆ.

ಕೆಂಪೇಗೌಡನೇನಾದರೂ ಇಂದು ಬದುಕಿದ್ದರೆ, ತನ್ನನ್ನು ಪಾಲಿಸಿ ಪೋಷಿಸಿದ ಅರಸು, ಚಕ್ರವರ್ತಿಗಳಿಗೆ ದೊರಕದ ಗೌರವ ತನಗೆ ತನ್ನ ಜಾತಿ ಪ್ರತಿಭೆಯಿಂದ ಈ ಓರಾಟಗಾರರು ಕೊಡಲು ಹೊರಟಿರುವುದನ್ನು ಕಂಡು ಖಡ್ಗ ಹಿರಿದು ಓರಾಟಗಾರರ ಧೂಳು ಕೊಡವುತ್ತಿದ್ದನೋ ಅಥವಾ ಇದು ತನ್ನ ಜನ ತನಗೆ ಮಾಡುತ್ತಿರುವ ಅವಮಾನವೆಂದು ಆತ್ಮಹತ್ಯೆಗೆ ಮುಂದಾಗುತ್ತಿದ್ದನೋ!?

ಕನ್ನಡ ಭಾಷೆ, ಕರ್ನಾಟಕದ ಸಂಸ್ಕೃತಿ ಅರಿಯದ ಅನ್ಯಭಾಷಿಗ ಬೆಂಗಳೂರಿಗರಿಂದುಂಟಾಗುವ ಅಪಾಯಕ್ಕಿಂತ, ಸಮಗ್ರ ಕರ್ನಾಟಕದ ಪರಿಕಲ್ಪನೆಯಿಲ್ಲದ ಅಲ್ಪಜ್ಞಾನೀ ಓರಾಟಗಾರರ ಹೋರಾಟ ಕನ್ನಡಕ್ಕೆ ಅತ್ಯಂತ ಅಪಾಯಕಾರಿಯೆನಿಸುತ್ತದೆ. ಅನ್ಯಭಾಷಿಗರು ತಮ್ಮದೇ ದ್ವೀಪಗಳನ್ನು "ಬೆಂಗಳೂರಿನಲ್ಲಷ್ಟೇ" ಸೃಷ್ಟಿಸಿಕೊಂಡರೆ, ನಮ್ಮವರೇ ಆದ ಓರಾಟಗಾರರು ನಮ್ಮ ನಮ್ಮಲ್ಲೇ "ರಾಜ್ಯಾದ್ಯಂತ" ದ್ವೀಪಗಳನ್ನು ಸೃಷ್ಟಿಸುತ್ತಿದ್ದಾರೆ. "ದಕ್ಷಿಣಪಥೇಶ್ವರ"ನೆಂದು ಇಡೀ ವಿಶಾಲ ದಕ್ಷಿಣ ಭಾರತವನ್ನೇ ಆಳಿದ ಪುಲಕೇಶಿ ಇಂದು "ಉತ್ತರ ಕರ್ನಾಟಕ"ದವನಾಗಿ ಕೇವಲ ಬಾದಾಮಿಗೆ ಸೀಮಿತಗೊಂಡಿದ್ದರೆ, ಸಮಾನತೆಯ ಹರಿಕಾರ ಬಸವಣ್ಣ ವೀರಶೈವರ ಅದರಲ್ಲೂ "ವಿರಕ್ತ" ಪಂಥಿಗೆ ಮಾತ್ರ ಸೀಮಿತನಾಗಿದ್ದಾನೆ. ಹಾಗೆಯೇ ಕೃಷ್ಣದೇವರಾಯ, ಹೊಯ್ಸಳ, ವೀರರಾಜೇಂದ್ರ, ಚೆನ್ನಮ್ಮ, ಹೊನ್ನಮ್ಮ.....ಮುಂತಾದ ಸೀಮಾತೀತರೆಲ್ಲಾ ಇಂದು ಅತ್ಯಂತ ಸೀಮಿತ.

ಈಗಾಗಲೇ "ನಾಡ ಪ್ರಭು" ಕೆಂಪೇಗೌಡ ಎನ್ನುತ್ತಿರುವ ಈ ಓಲೈಕೆ ಹೋರಾಟಗಾರರು ಮುಂದೆ "ಕನ್ನಡ ನಾಡ ಪ್ರಭು" ಕೆಂಪೇಗೌಡರು ಎಂದು ಇತಿಹಾಸವನ್ನು ತಿರುಚುವ ಸಾಹಸಕ್ಕೆ ಕೂಡ ಕೈ ಹಾಕುವರೇನೋ? ಯಾರಾದರೂ ಸೊಲ್ಲೆತ್ತಿದರೆ ಇದ್ದದ್ದೇ ಹೊಡಿಮಗಾ, ಕಡಿಮಗಾ ಬಿಡಬೇಡ ಅವ್ನ, ಮಾಡುಮಗಾ, ಮಾಡುಮಗಾ ಕೈಮಾ ಅವ್ನ... ಈ ರೀತಿಯ ಕೆಟ್ಟ ರಾಜಕಾರಣದ ದೆಸೆಯಿಂದಾಗಿಯೇ ಪಾಟೀಲ್ ಪುಟ್ಟಪ್ಪ ಬೇರೆ ರಾಜ್ಯವನ್ನೂ, ಕೊಡವರು ತಮ್ಮದೇ ರಾಜ್ಯವನ್ನೂ, ಕರಾವಳಿಯವರು ಕರಾವಳಿ ರಾಜ್ಯ(?)ವನ್ನೂ ಕೇಳುತ್ತಿದ್ದಾರೆ ಇಲ್ಲಾ ಕೇಳುವ ಹಾದಿಯಲ್ಲಿದ್ದಾರೆ. ಅಷ್ಟೇ ಅಲ್ಲಾ ಬೆಳಗಾವಿಯ ಕನ್ನಡಿಗರು ಕೂಡಾ ತಮಗೆ ಮಹಾರಾಷ್ಟ್ರವೇ ಸರಿಯೆಂದುಕೊಳ್ಳುತ್ತಿದ್ದಾರೆ.

ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ ದೇವರೆಂಬ ಪಂಚಿಂಗ್ ಲೈನಿನ, ಕರ್ನಾಟಕವೆಂದರೆ ಬರೀ ಬೆಂಗಳೂರೆಂಬ ಭ್ರಾಮಕದಲ್ಲಿ ಮುಳುಗಿರುವ ಈ ಓರಾಟಗಾರರಿಂದ ಕನ್ನಡಕ್ಕೆ ಅದೇನು ಗಂಡಾಂತರ ಕಾದಿದೆಯೋ?

ಈ ಓಲೈಕೆಯ ಪ್ರಭಾವ ನಮ್ಮಗಳ ಮೇಲೆ ಅದೆಷ್ಟು ಗಾಢವಾಗಿದೆಯೆಂದರೆ, ಈ ಲೇಖನವನ್ನು ಓದುತ್ತಾ, ಓದುತ್ತಾ ವಿದ್ಯಾವಂತರಾದ ನೀವುಗಳೂ ಕೂಡಾ "ಈ ರವಿ ಹಂಜ್ ಬಹುಶಃ ಬ್ರಾಹ್ಮಣನೋ, ಲಿಂಗಾಯ್ತರವನೋ ಇರಬೇಕು. ಅದಕ್ಕೆ ಕೆಂಪೇಗೌಡನ ಬಗ್ಗೆ ಹೀಗೆ ಬರೆದಿದ್ದಾನೆ!?" ಎಂದು ನನ್ನ ಇತಿಹಾಸದಲ್ಲಿ ಕುತೂಹಲಿಗಳಾಗುತ್ತಾ ಕರ್ನಾಟಕದ ಐತಿಹಾಸಿಕ ಅಂಶಗಳನ್ನು ಮರೆತೇಬಿಡುವಿರಿ. ಇದು "ಭಾರತ ಪ್ರಜಾಪ್ರಭುತ್ವ"ದ ದುರಂತ ವಿಪರ್ಯಾಸ!

ಅಣಕ:

ಕ್ರಿ.ಶ. ೨೦೨೫ ರಲ್ಲಿ ಒಂದು ಕನ್ನಡ ಕುಟುಂಬದ ತಂದೆ ಮಗುವಿನ ಸಂಭಾಷಣೆ ಹೀಗಿರುತ್ತದೆ.

ಆಗಷ್ಟೇ ಪೋಷಕರ ಜತೆ ಕರ್ನಾಟಕ ಪ್ರವಾಸ ಮಾಡಿ ಹಿಂದಿರುಗಿದ್ದ ಮಗು, "ಡ್ಯಾಡೀ, ಇಲ್ಲಿನ ಕಿಂಗ್ಸ್ ಅಂತಹ ಹಂಪಿ, ಗೋಲಗುಮ್ಮಟ, ಬಾದಾಮಿ ಗುಹೆಗಳು, ಹಳೇಬೀಡು-ಬೇಲೂರು ಟೆಂಪಲ್ ಮಾನ್ಯುಮೆಂಟ್ಸ್, ಚಿತ್ರದುರ್ಗದಂತಹ ಕಲ್ಲಿನ ಫೋರ್ಟ್ ಗಳನ್ನು ಕಟ್ಟಿಸಿದರೆ, ಕೆಂಪೇಗೌಡ ಏಕೆ ಕೇವಲ ನಾಲ್ಕು ಗೋಪುರ ಕಟ್ಟಿಸಿದ್ದಾನೆ?" ಎಂದು ಪ್ರಶ್ನಿಸಿತು.

"ಸನ್, ಕೆಂಪೇಗೌಡ ವಾಸ್ ಅ ಬಿಗ್ ಎಂಪರರ್. ಅವನಿಗೆ "ನಾಡ ಪ್ರಭು" ಅಂತಾರೆ ಗೊತ್ತ? ಅವನು ತನ್ನೆಲ್ಲಾ ಹಣವನ್ನು ತನ್ನ ಸಾಮಂತ/ಸರದಾರರಾಗಿದ್ದ ಈ ಸಿಲ್ಲೀ ಹಂಪಿ, ಬಾದಾಮಿ, ದುರ್ಗ ರಾಜರುಗಳಿಗೆ ಇವುಗಳನ್ನೆಲ್ಲಾ ಕಟ್ಟಿಸಲು ಕೊಟ್ಟುದುದರಿಂದ ಅವನು ಕೇವಲ ನಾಲ್ಕು ಗೋಪುರಗಳನ್ನು ಕಟ್ಟಿಸುವಂತಾಯಿತು. ಬೈ ದ ವೇ, ಯು ವಿಲ್ ಬಿ ಲರ್ನಿಂಗ್ ಇಟ್ ಇನ್ ಯುವರ್ ಸಿಕ್ಸ್ತ್ ಗ್ರೇಡ್ ಹಿಸ್ಟರಿ" ಎಂದು ತಂದೆ ಉತ್ತರಿಸಿದನು.

ಭಾರತ ಪ್ರಜಾಪ್ರಭುತ್ವದ ಅವಿರತ ಓಲೈಕೆಯ ದೆಸೆಯಿಂದಾಗಿ ಆ ತಂದೆಯಾಗಲೇ ತನ್ನ ಶಾಲಾ ಇತಿಹಾಸ ಪಠ್ಯದಲ್ಲಿ ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ಸುಭಾಸ್ ಚಂದ್ರ ಬೋಸರನ್ನು ಉಗ್ರಗಾಮಿಗಳೆಂದು ಓದುತ್ತಾ ಬೆಳೆದಿದ್ದನು!