ಹಗೇದಿಬ್ಬೇಶ್ವರ ವಚನ ಸಂಪುಟ

ಅಂದು,
ವೇದ ಘನವೆಂಬುದೊಂದು ಆssದಾಯ.
ಶಾಸ್ತ್ರ ಘನವೆಂಬುದೊಂದು ಆssದಾಯ.
ಪುರಾಣ ಘನವೆಂಬುದೊಂದು ಆssದಾಯ.
ಆಗಮ ಘನವೆಂಬುದೊಂದು ಆssದಾಯ!
ಇಂದು,
ಬಸವನೆಂಬುದೊಂದು ಆssದಾಯ.
ಶೂನ್ಯವೆಂಬುದೊಂದು ಆssದಾಯ.
ಕಲ್ಯಾಣವೆಂಬುದೊಂದು ಆssದಾಯ.
ಲಿಂಗ ಆಯತವೆಂಬ ನಿರ್ವಾತವೊಂದು ಆssದಾಯ!
ಮುಂದು,
ಜಾತಿಕ್ಲೇಶವ ಕಳೆದು ಮತಿಯ ಹೊಳಹುವೆವೆಂಬ
ಜಾತಿಪೀಠಿಗಳಾದಾಯದಾಯಕ್ಕೆ ಸಾಣಿಯ ಕಲ್ಲು ಚಿನ್ಮೂಲವೆಂಬ ಬರಡುಕೊರಡ ತೇಯಿಸಿ
ಅಹುದಹುದೆಂಬ ಪಾಮರರ ಒಡ್ಡೋಲಗದೆ
ಸೂಸುವ ಮಹದಾದಾಯದಾದಾಯದಾದಾಯ!
ಎಂದೆಂದೂ,
ವ್ಯಯದ ಹಗೆದಿಬ್ಬೇಶ್ವರನೆಂಬ ನಿಕಾಯ ನಿಶ್ಶೂನ್ಯ
ನಿಷ್ಕಲ ನಿಜಾನುಭಾವಾದಾಯವನರಿಯದ ಕಾರಣ
ಅಗಣಿತ ಲಿಂಗಾssಯತದಾದಾಯಗಳಾದವು.
-------
ಬಹುಪರಾಕಿನಿಂದುದಯವಾದಾತ ಪುರುಷೋತ್ತಮ
ಬಹುಪೋಷಾಕನರಿದುದಯವಾದಾತ ಮುಕ್ಕುಂದ.
ಸಾಧನೆಯಿದ್ದೂ ಮಲಪಾತ್ರೆ ಪಿಡಿದು ಜಲಪಾತ್ರೆ ಸುರಿದು
ಜಹಾಪನನ ಪೂಸಿ ಇನಾಮುಗಳ ಪಡೆದ ಈ ಹೊಗಳುಭಟ್ಟ ಭಟ್ಟಂಗಿ
ಬೋಪರಾಕಿನ ಕೋಡಂಗಿಗಳ ಹಿಂದಣ ಮುಂದಣ ಮೇಲಣ ಕೆಳಗಣ
ಪಾದೋದಕ ಪ್ರಸಾದಕ್ಕಾಗಿ ಮರಿಭಟ್ಟಂಗಿ ಕೋಡಂಗಿಗಳ
ಧೋ ಉಧೋ ಮೆರವಣಿಗೆಯ ಭಂಡರ ಕಂಡು
ನಾ ನಾಚಿದೆನಯ್ಯ ಭಂಡರಗಂಡ ಹಗೆದಿಬ್ಬೇಶ್ವರ||

ಸಾಹಿತ್ಯ ಓಲೈಕೆಯ ಮೊರೆತ
ವಿಮರ್ಶೆ ಪರಸ್ಪರ ಬೆನ್ನ ಕೆರೆತ.
ಪುಸ್ತಕ ವ್ಯಾಪಾರ ಪಂಥ ಕೂಟ
ಬಹುಮುದ್ರಣ ಕಪಟದಾಟ
ಪ್ರಶಸ್ತಿ ಕೊಡುಕೊಳ್ಳುವ ಮರ್ಕಟ ಮಾಟ!
ಇಂತಿಪ್ಪು ಒಪ್ಪಿತ ಚರ್ವಿತಚರ್ವಣವ
ಕರೆವರು ನವ್ಯ, ಭವ್ಯ, ಕಾವ್ಯ...ಇದೀಗ ಪಂಚಗವ್ಯ!
ಅಂಡ ಒಳಹೊಕ್ಕದ ಬಾಳೆದಿಂಡ
ಮೇಲ್ಸ್ತರದಿ ತುರುಕಿಸಿಕೊಂಡು
ಕಿಸಿಯುವ ಭಂಡರ ಕಂಡು ಗಹಗಹಿಸಿ ನಗುವ
ಈ ಭಂಡರ ಗಂಡ ಭಂಡಿಯರ ಮಿಂಡ
ವೀರಮಾರ್ತಾಂಡ ಎಮ್ಮ ಹಗೆದಿಬ್ಬೇಶ್ವರ||

ಕಾಯಕವೇನಾದರಾಗಲಿ ಆತ್ಮಲಿಂಗವುಳ್ಳ ಎನ್ನ "ಕಾಯ"ವೇ ಕೈಲಾಸ...!
ಇಂತಿಪ್ಪ ಶಿವ-ಶೈವ-ಕೈಲಾಸ ವಚನ ಸಂಸ್ಕೃತಿ ಯ,
ಕಾಯವನಳಿಸಿ ಭಟ್ಟಿ "ಕಾಯಕ"ವನಿಳಿಸಿ
ಕೇಯುಗದ ಲಿಂಗಜರು ಮತ್ತಿನಾ ವಿಕೃತಿ ಯ
ಮೆರೆಯುತಿರೆ......!
ಕೈಲಾಸ ಪಾತಾಳವನಪ್ಪಿ ಸಂಸ್ಕೃತಿ,
ಸಾಂಸ್ಕೃ-ತಿಕವಾಯಿತು ಕಾಣಾ ಹಗೆದಿಬ್ಬೇಶ್ವರ||

ಶೈವಕ್ಕೆ ಹೊರತಾಗಿ ಲಿಂಗಕ್ಕೆ ನಿರ್ವಾತವಾಗಿ
ಲಿಂಗ ಆಯತವಾಯಿತು ಆಯತವಾಯಿತು ಆಯತವಾಯಿತು ಎಂಬ ಕಾಯಕದ ಪರಿಗೆ
ಕೈಲಾಸ ಪಾತಾಳವನಪ್ಪಿ ಸಾಂಸ್ಕೃ-
ತಿಕವಾಯಿತು ಹಗೆದಿಬ್ಬೇಶ್ವರ||

ಸಕಳೇಶ್ವರನೆಂದುಕೊಂಡವಗೆ ಅಂಜಿಕೇಕಿರಬೇಕು?
ಕಾಳಾಮುಖನ ಕಳೆಯಿಲ್ಲದ, ಬಸವನ ರೂಹಿರದ
ಅಳವಂಡವ ನುಡಿವ ಸಿಂಗಾರಿ ಸಿಡಿದು ಚಿಂಗಾರಿಯಪ್ಪುದೆ?
ಪಂಚಶೀಳದೊಂದು ವಚನವ ಸಿಡಿಸಿಡಿದು
ಕಾಣಿಭೋ ಕಾಣಿಭೋ ಎಂದೊಡೆ ಹೊಮ್ಮುದು
ಅಪಾರ ಅಪಾನ ವಾಯು ಕಾಣಾ ಹಗೆದಿಬ್ಬೇಶ್ವರ!

ಮನದಲ್ಲಿ ಇಷ್ಟಲಿಂಗವ ನೆನೆನೆನೆದು ಕರದ ಲಿಂಗವ ಪುಟಿಪುಟಿಸಿ ಕ್ಷೀರಾಭಿಷೇಕ ಮಾಳ್ವ;
ಪುಕ್ಕಲು ದಾಟಿ ಪುಕ್ಕವ ತೆರೆದು ಅನ್ಯಲಿಂಗದೊಳು
ಲಿಂಗಾಂಗ ಸಾಮರಸ್ಯದೆ ಮುಳುಗೇಳ್ವ;
ಬಹಿರಂಗದೆ ಸಾಮರಸ್ಯ ಪೇಳಿ
ಅಂತರಂಗದೆ ಅರಿಷಡ್ವರ್ಗಗಳ ಪೊರೆವ;
ಕನ್ಯೆಯರೊಡಗೂಡಿ ಪುತ್ರಕಾಮೇಷ್ಟಿ ಯಾಗ ಮಾಳ್ಪ
ಪ್ರಚ್ಛನ್ನ ಶರಣರ ಮರಣದೆ
ಮಹಾನವಮಿಯಲ್ಲದೆ ಇನ್ನೇನ ಕಾಣ್ವ ಕಲ್ಯಾಣಿ ಹಗೆದಿಬ್ಬೇಶ್ವರ!!

ಚೆಲುವಿಂಗೆ ಭಾವುಕನಾಗಿ, ಗಂಡಾಂತರಕೆ ಗುಂಡಿಗನಾಗಿ,
ಸತ್ಯಕ್ಕೆ ನಿಷ್ಠನಾಗಿ, ತ್ಯಾಗಕ್ಕೆ ಶಕ್ತನಾಗಿ
ಅನುವಾಗುವುತ್ತಮನ ಈ ಗುಣಂಗಳೇ 
ಅವನಿಂಗೆ ಘಾಸಿ ಫಾಸಿಗೊಪ್ಪಿಸುವುದು. 
ಈ ಘಾಸಿಫಾಸಿಂಗೆ ನಡುಬೆರಳ ಲಿಂಗಮುದ್ರೆಯದೋರಿ ನಡುವನಪ್ಪನ ಕುಣಿಕುಣಿಸಿ ನಡೆವ ಬಲ್ಲಿದ ಬಪ್ಪ ಸರ್ವೋತ್ತಮನಪ್ಪ ಕಾಣಾ ಹಗೆದಿಬ್ಬೇಶ್ವರ!

ಬಡಗಣದ್ಹಿಂದುಣ ಬೆತ್ತಲಿಗಹ್ ತುಘಲಕ್ಕನಿಗೆ ಬಲದಿಂದರಿವೆ ತೊಡಿಸೋ ಭಟ್ಟಂಗಿಗಳು, ಮತ್ತೆ ಬಂದ ತೆಂಕಣದಹಿಂದಣ ಬೆತ್ತಲಿಗಹ್ ತುಘಲಕ್ಕನಿಗೆ ಎಡದಿಂದುಟ್ಟಿಗೆ ಹೊದಿಸೋ ಕೋಡಂಗಿಗಳು. ಅವರೋ ಹುಚ್ಚರು, ಇವರೋ ಕಮಂಗಿಗಳು! ನಡುವಣ ಸಮರಸ ಮೂಡಿಪ ನಡುನಿಲುವಂಗಿಗಳ ಕಾಫಿರರೆಂಬರು ಹುಚ್ಚರು, ಮುಮಿನ್ ಎಂಬರು ಕಮಂಗಿಗಳು. ನಡು ನಿಲುವಂಗಿಗಳ್ ಬೆತ್ತಲ್ಬೆತ್ತಲ್ ಎಂದು ಧರ್ಮವನರಿಯದ ಕತ್ತಲ್ ಧರ್ಮಿಗಳ್, ಜಾತ್ಯವನರಿಯದ ಗತ್ತಿಲ್ ಕುಲಗೇಡಿಗಳ್ ತಮ್ಮಣ ಮನದ ಮುಂದಣ ಮಾಯೆಯ ಹಗೆದಿಬ್ಬೇಶಗೆ ಬಳಿದಿಹವು||

ಆಯಕಟ್ಟಿನ ಜಾಗ ಆಯಕಟ್ಟಿನ ಹುದ್ದೆ!
ಪ್ರಮುಖ ಖಾತೆ ಉಮೇದುವಾರಿಕೆಯ ಕ್ಯಾತೆ!
ಜಾತಿವಾರು ನ್ಯಾಯ, ಸಾಮಾಜಿಕ ಅನ್ಯಾಯ!
ಜಾತಿ ಅಸ್ಮಿತೆ, ಅದಕ್ಕೆ ತಕ್ಕಂತಹ ಆಸ್ತಿತೆ.
ಪಸರಿಸುತ್ತಿಹುದು ಜಾತಿ ಅತೀಯತೆಯ ಜ್ವಾಲೆ
ಹಿಡಿದು ಸಂವಿಧಾನದ ಹಣತೆಯ ಮಾಲೆ!
ಹಸಿವಿಗೆ, ವಿದ್ಯೆಗೆ, ಉದ್ಯೋಗಕೆ ಜಾತಿ ಉಂಟೆಂದು ಹೇಳುವ ಸಂವಿಧಾನ, ಪ್ರಜಾಪ್ರಭುತ್ವ, ಸಿದ್ಧಾಂತ, ಇತ್ಯಾದಿ ಇತ್ಯಾದಿ ದಿಗ್ದಿಂಗಂತದವರೆಗೆ ಹಬ್ಬಿರುವ ಲಿಂಗದ ಮೇಲಿನ ನಿಕೃಷ್ಟ ಗುಂಗುರು ಹಗೆಗಳ ರೋಮಂಗಳ ಹಡಪಿಸಿಕೊ ಹಗೆದಿಬ್ಬೇಶ್ವರ||

ಪುರಾಣ ಶಕೆಯ "ಕಾಯಕವೇ ಕೈಲಾಸ" ಸೂತ್ರವು ವರ್ತಮಾನದ ಶಕೆಯಲ್ಲಿ "ಕೇಯಕವೇ ಕೈಲಾಸ"ವಾಗಿ, ಶೂನ್ಯ ಪೀಠವು ನಿಶೂನ್ಯ ಅನಂತ ಪೀಠಗಳಾಗಿ, ಶೂನ್ಯ ಸಂಪಾದನೆಯು ಅಸಾಮಾನ್ಯ ಅನಂತ ಅಗಣಿತ ಸಂಪಾದನೆಯಾಗಿ, "ಶರಣು" ಎಂಬುದು ಲಿಂಗಕ್ರಿಯೆಯಾಗಿ "ಶರಣ" ಎಂಬುದು ಲಿಂಗಕರ್ತೃವಾಗಿ ಕೈಲಾಸ ಕಂಡುಕೊಂಡುದು ಬೇರೇನೂ ಅಲ್ಲವೋ ಹಗೆದಿಬ್ಬೇಶ್ವರ! ಅದು ಜಗದ ಚಲನೆಯ ನಿಯಮ. ಕಾಲ ಮುಂದಕ್ಕೆ ಹೋಗುತ್ತಿದ್ದರೂ ಚಕ್ರ ಹಿಂದಕ್ಕುರುಳುತ್ತಿರುವ ಅನಿಯಮದಾ ನಿಯಮ!

ಎಮ್ಮೆಯ ಕೊಂಬಿನಕಹಳೆಯ ಊದಿಗೆ,
ಏಳುನೂರೆಪ್ಪತ್ತು ಕೋಣಂಗಳು ತಲಾಂಗು ತರಿಕಿಟ ತೋಂ ಎಂದು ನರ್ತಿಸುತ
ವಾಸ್ತವವ ತೊರೆದು, ಓದ ಮರೆತು,
ಶಿವಸಾಕ್ಷಿಗಳ ತೂರಿ, ತರ್ಕವಿಲ್ಲದೆ ತಾರಕದನಿಯ 'ಬಾಯ ಬೋಂ' ಎಂದು ಸ್ವಕುಚೋದ್ಯದೆ 'ಇದು ಉತ್ಕೃಷ್ಟ ಅತ್ಯುತ್ಕೃಷ್ಟ' ಎನುತ
ಬಾವಿಯೊಳಗೆಗರಿ ಅಲ್ಲಿನ ಬಗರಿಗೆ,
ಬಗರಿಗೆಯೊಳಗಿನ ಶರಣೆಗೆ ಶರಣೆಂದ ಲಿಂಗಾಂಗರಾಜಕಾರಣ ಪರಿಗೆ
ಅಂಗೈಯ ಲಿಂಗ ಹುಣ್ಣಾಗಿ ಕಣ್ಣು ಕುರುಡಾಗಿ ಜಗದ್ಗತ್ತಲೆ ಮೂಡಿತು ಕಾಣೋ
ಸತ್ಯಕಾರಣಿ ಹಗೆದಿಬ್ಬೇಶ್ವರ!

ಇಥಿಹೋಪಿಯಾ ಓಂಮಾ ಮೂಲಸ್ಯೇ, ಇಥಿಹೋಪಿಯಾ ಆದಿ ಮಾಪಿತಸ್ಯೇ, ಇಸ್ರೇಲೋ ಪೂರ್ವಜ ಸಹಜ ಸಂಕರಸ್ಯೇ, ಭರತ ದ್ವಾರಸ್ಯೇ ಆದಿಮ ಸಂಕರ ಸಂಕರಸ್ಯೇ ಭೂಮಂಡಲದ ಸಕಲ ಮನುಜ ಕುಲಸ್ಯೇ, ಸಂಕರ ಸಂಕರ ಸಂಕರ ಸಂಕರಸ್ಯೇನ ಫಲಿತ ಸಕಲ ಮಾನವ ಜೀವಿಂಗಳಿಕ್ಕು ಮೂಲ ಓಂಮಾ! ಆದಿ ಮಾಪಿತ ವಂಶವಾಹಿಸ್ಯ ಪ್ರಾಮಾಣಿತಗೊಂಡಿರ್ಪ ಇಂತಿಪ್ಪ ಕಾಲಂಗಳಲ್ಲಿ ಶ್ವೇತ-ಕರುಪ್ಪ-ಆರ್ಯ-ದ್ರಾವಿಡ-ಸಂಸ್ಕೃತ-ದಮಿಲ ಎಂಬಿತ್ಯಾದಿ ವಿಲವಿಲ ಒದ್ದಾಡುತ್ತಿರ್ಪ ವಿಹೀನಂಗಳ ವಂಶವಾಹಿ ಅದ್ಯಾವ ಗ್ರಹದ ಗುಹ್ಯದಲ್ಲಿಹುದೋ ಹಗೆದಿಬ್ಬೇಶ್ವರ||


ಹಗೆದಿಬ್ಬದ ವರಾಹವೊಂದನು
ಕಲ್ಯಾಣದ ಪೀಠಕ್ಕೇರಿಸಿದೆಡೆ ಅದು ಅಮೇಧ್ಯವ ಮೂಸದಿದ್ದೀತೆ!
ಕೈಕಾಲು ತಿರುಚಿ ರೇಚಕ ಪೂರಕ ಮಾಡಿ
ಹರಿಹರರ ಸಂಗಮದಿ ವೈರುಧ್ಯ ಪೀಠಕ್ಕೇರಿದೆಡೆ ಅದು ವೈರಾಗ್ಯವ ಕೊಟ್ಟೀತೇ!
ಇಂತಪ್ಪು ಮೂಸುವ, ಹೂಸುವ ಮಾನಗೇಡಿಗಳ ಗುರುವೆಂದು ಭಜಿಸುವ
ಭಂಗದ ಭಕ್ತಮ್ಗೆ ಒಲೆ ಹತ್ತಿ ಉರಿದೆಡೆ ನಿಲಲುಬಹುದು, ಧರೆ ಹತ್ತಿ ಉರಿದೆಡೆ?
ತಾಯಮೊಲೆಹಾಲು ವಿಷವಾಗಿ ಕೊಲುವೆಡೆ ಎಂಬ ವಚನ ಪಚನವಪ್ಪುದೆ!
ಕಾಯಕವ ಬಿಟ್ಟು ಮೀಸಲು ಬೇಕೆಂಬ
ಲಿಂಗವಿಲ್ಲದ ಲಿಂಗಾಯತರ ಕಂಡು
ಹುದುಗಿ ಹೋಗಾ ನೀ ಅಣ್ಣ ಬಸವಣ್ಣ ಹಗೇದಿಬ್ಬೇಶ್ವರ!

ಪಾದಯಾತ್ರೆಯ ಪಂಚಮ
ಲಿಂಗಾಯತ ಧರ್ಮವೆಂದು ಕಡೆಗೆ ಜಾತಿಗೆ ಊರ್ಜಿತಗೊಂಡನೆ?
ಹೆಣ್ಣು ಹೊನ್ನು ಮಣ್ಣು ಮಾಯೆ ಎಂಬ
ಅಲ್ಲಮನ ವಚನವ ವರ್ಜಿಸಿ
ಸೋತ ಪಾದದಿ "ಹೊನ್ನು ಹೊನ್ನು" ಎಂದು ಎಲ್ಲಮನಾಗಿ
ಒಂದು ಹೆಣ್ಣನ್ನು ಸಂಬೋಧಿಸುವುದ ಭಕ್ತ ಅರ್ಜಿಸಬಲ್ಲನೆ?
ಮೆಸೆಂಜರಿನಲ್ಲಿ ಉಸಿರೆಂಜಲಾ ಸುರಿಸುವ
ಅನು ಮೀಸಲಾ ಹೆಣ್ಣ ತನು ಬಯಸುವ
ಗುರುವಿಂಗೆ ಮೀಸಲು ಶಿಷ್ಯ ಮೀಸಲೇ ಕಾಣಾ ಹಗೇದಿಬ್ಬೇಶ್ವರ!

ತಿವಿಮೊನೆಗೆ ಕುದುರೆಯೋಡಿದಂತೆ ಎಂದಂದು ಗಲಭೆಯ ಸಮರ್ಥಿಸುವ, ಅವರದನು ಮಾಡಿದ್ದರು, ನಾವಿದನು ಮಾಡಿಹೆವು ಬಂಡಿ ಅಮೇಧ್ಯವ ಮೇದಿಹರು ಅವರು, ಕೇವಲ ಪ್ರಸಾದದೆ ಸೇವಿಸಿಹೆವು ನಾವು ಎಂದೆಂಬ ಸಮರ್ಥನೆಗೆ ಅಹುದಹುದೆಂದರೆ, ಜಗದನೇಕಾಪರಾಧಗಳು ತಿವಿಮೊನೆಗೆ ಕುದುರೆಯೋಡಿದಂತೆ, ಅಂಕುಶಕೆ ಆನೆ ಆರ್ಭಟಿಸಿದಂತೆ, ಚಂದ್ರಮನ ಬೆಡಗಿಂಗೆ ಸಾಗರವುಕ್ಕಿದಂತೆಂದಾಗಿ ಎಲ್ಲವೂ ಸಮ್ಮತವೆನಿಸುವ ಅರುಹಿರದೆ ಅರುಹುವ ಅರಿವುಗೇಡಿಗಳ ರೂಹ ಕಂಡು ನಾ ಚಿತ್ತ ಭ್ರಮಿತನಾದೆ ರೂಹಿಲ್ಲದ ದೇವ ಹಗೇದಿಬ್ಬೇಶ್ವರ!


ತಿಳಿವಳಿಕೆಯಿರದ ತೆಳುವಳಿಕೆಗಳು
ರಂಗಕ್ಕೇರಿದೆಡೆ ದಿಟವು ಸಟೆಯಾಗುದು, ಪಾಷಾಣ ಶರ್ಕರವಪ್ಪುದು, ನಿಕೃಷ್ಟ ರೋಮ ಯಮಪಾಶವಪ್ಪುದು!
ಭ್ರಮೆಯು ಪಿತೂರಿಯಪ್ಪುದು,
ರಾಸಭ ಕ್ಷೀರ ಅಮೃತವಪ್ಪುದು,
ಕೂಪವೇ ಕಪೋಲ ಸ್ವರ್ಗವಪ್ಪುದಲ್ಲದೆ ಭೂಮಂಡಲದೆ ಮಿಗಿಲಪ್ಪುದು!
ಜಗದಳಲ ಪಿಡುಗ ಪಿತೂರಿಯೆಂಬ ಪಿಡುಗಿನಾ ಕೂಪದ ಕುಂಞಿ, ನಿವಾರಣೆಗೆ ದಾನವ ಮಾಡಿದ ದಾನವೀರನ ದಾನವನೆನ್ನುವ ಸನ್ನಿ,
ಹುಸಿ ಭ್ರಮೆಯ ಹಿರಿಮೆಯ ಗರಿ ತೊಟ್ಟ ಮುನ್ನಿಗಳು ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ, ಪಾತಾಳದಿಂದತ್ತ ಬ್ರಹ್ಮಾಂಡದಿತ್ತಿತ್ತ ಲಿಂಗವ್ಹಿಡಿದು ಪೋಗುದ ಕಂಡು ನಾ ನಿನ್ನಲಿ ಸ್ಥಿರನಾದೆ ಹಗೆದಿಬ್ಬೇಶ್ವರ!

ಖಂಡುಗ ಕಾವ್ಯ, ಗದ್ಯವ ಕೆತ್ತಿದರೇನು
ಭ್ರಷ್ಟ ಭರ್ತನ ಖಂಡಿಸದನ್ನಕ್ಕ!
ಅನಿಕೇತನದ ವಿಚಾರವನೆಷ್ಟು ಊದಿದರೇನು
ವಿಶ್ವಮಾನವನಡಿಯಲ್ಲಿ ಸ್ವಜನಪಾತವ ಒಗೆಯದನ್ನಕ್ಕ!
ದೇಶಭ್ರಷ್ಟ, ಧರ್ಮಭ್ರಷ್ಟವ ಖಂಡಿಸಿ ಸದಾಚಾರವ ಬೋಧಿಸುವ ಬಿನ್ನಾಣದ ಮುನ್ನ,
ಹೇ ಕವಯತ್ರಿ ಸದ್ಗೃಹಿಣಿ ನಿನ್ನ ಮನೆಯಲ್ಲಿ ಸದಾಚಾರವ ತರುವೆ ನೀನೆಂದು?
ಪತ್ನಿವಾಕ್ಯಪರಿಪಾಲಕನ ನಿಗ್ರಹಿಸದ ಪತ್ನಿ ನೀ ಆಚಾರವ ಪೇಳಿ ಪಾಷಾಣವ ನುಂಗಿದ ಪರಿಗೆ,
ನಿನ್ನಂತಹ ಸೋಗಿನ ಸ್ವಜನಪಾತಿ ಸಾಹಿತಿ ಬಳಗ ಭ್ರಷ್ಟ ಮಿತ್ರನ ಭಜಿಸುವ ಮೊರೆಗೆ,
ಸಂಸ್ಕೃತಿಯ ಕನ್ನಡದೇವನವನನಿಕೇತನ
ಬೆಕ್ಕಸ ಬೆರಗಾಗಿ ಶೂನ್ಯನಾದ ಹಗೆದಿಬ್ಬೇಶ್ವರ!

ಸಿಂಗಾರಿಗೌಡರನು ಸಿಂಗರಿಸೆ ಗರಿಯ ಮುಡಿಸಿ
ಗಿಡ್ಡೇಗೌಡರನು ಉದ್ಧರಿಸೆ ವಸಂತದ ಕೋಕಿಲವೆನಿಸಿ,
ಕೊಳಲನೂದಲು ಕುಹೂ ಕುಹೂವೆನ್ನಲು ಮಾಮರವನಕ್ಕಿಳಿಸಿದ
ಪ್ರವಾದಿಗಳ ಜಾಲಗಾರ ಶಿಷ್ಯನ ಪವಾಡವೇ ಹೇಳುತಿದೆ
ಪ್ರವಾದಿಗಳಿಂದಲ್ಲ ಶಿಷ್ಯರಂದೇ ಮಾಡಿದ್ದರೆಂದು!
ಈಗೇನ ಪೇಳುತಿಹೆ ನೀ ಹುಲುಮಾನವ,
ಬಲ್ಲವನೆಲ್ಲಬಲ್ಲ ವಿಶ್ವಮಾನವನವ ಹಗೇದಿಬ್ಬೇಶ್ವರ!

ಲಿಂಗಛೇಧನಕ್ಕೊಳಗಾದ ಪ್ರಚ್ಛನ್ನಾರಾಧ್ಯ ಸೊಟ್ಟ ಸೊಣಗ ಶುನಕ ದಾರಿದ್ರ್ಯ! ಪದ ದಾರಿದ್ರ್ಯದೆ ವಿರೂಪಗೊಂಡು ರೂಪವುಂಟೆಂಬ ಪರಿಯಲಿ ತನ್ನ ಇಪ್ಪತ್ತು ಬೆರಳುಗಳನೆ ಮುಫತ್ತು ಲಿಂಗವನೆಂದು ಕಚಗುಳಿಯನಿಟ್ಟು ಜಿಹ್ವಾಚಪಲದೆ ರಸನಿಸಿದರೆ ತಕಧಿಮಿ ಕುಣಿವ ಹೆಡ್ಡ ಮೂಢರು ಲಿಂಗವಲ್ಲದ ಅಂಗದೆ ಕೆರೆಸಿಕೊಂಡು ಹೆರುವುದೆಂತೋ ಹಗೇದಿಬ್ಬೇಶ್ವರ!

ಸತ್ಯ ಎಂಬುದು ಎಡಕ್ಕೆ ಸುಳಿದೆಡೆ ಅದು ಎಡವಲ್ಲ,
ಬಲಕ್ಕೆ ಸುಳಿದಡೆ ಅದು ಬಲವೂ ಅಲ್ಲ.
ಹೆಣ್ಣುಗಂಡಿನ ನಡುವೆ ಸುಳಿವಾತ್ಮದಂತೆಯೇ ಸುಳಿವ
ಸತ್ಯ ಶಿವ ಸುಂದರ! ಮಿದ ಸತ್ಯವಂ ಬಲ್ಲ 
ಸನಾತನಿ ಬಲರು ಬಲವೆಂದು ಬಳಲಿ,
ವಿನೂತನಿ ಎಡರು ಎಡವೆಂದು ಎಡವಿ 
ಸತ್ಯ ಪಥವ ಮಿಥ್ಯದಿ ತೊಳಲಾಡಿಸುತಿಹೆವೆಂದೊಡೆ
ಸತ್ಯ ಜತನಿಯು ಚಿತ್ತ ಹರ್ಷದಿ ಭಲರೇ ಭಲರೆಂದು ತೊಡೆ ತಟ್ಟಿ ನರ್ತಿಪ ಹಗೇದಿಬ್ಬೇಶ್ವರ!


ನರಿಯಿರದೆ ನರಿ ನರಿ ಎಂದ ಕುರಿಗಾಹಿ ನರರು
ಅಭೂತದೆ ಇಲ್ಲದ ಭೂತವ ಹೊತ್ತ ವಿಚಾರಪರರು
ವಿನಾ ಕಾರಣ ಧರ್ಮಕಾರಣವೆಂದವರು
ಇಂದು ನರಿ ಹುಲಿಯಾದಪ್ಪು
ಭೂತ ವರ್ತಮಾನವಾದಪ್ಪು
ನಿಕೃಷ್ಟ ರೋಮ ಯಮಪಾಶವಾದಪ್ಪು
ಮಾರಿಗೆ ಹೋರಿಯೇ ಹಾದಪ್ಪು
ನರರು, ಪರರು ಮೌನದಾ ಮೊರೆಗೆ ಪೋಗಿರ್ಪ ಪರಿಗೆ
ಪಾಖಂಡಿಗಳು ನೂರ್ಮಡಿ ಪೆಚ್ಚಿಹರು ನೋಡಾ ಹಗೆದಿಬ್ಬೇಶ್ವರ!

ಅಲೋಪತಿ, ಹೋಮಿಯೋಪತಿ, ಆಯುರ್ಪತಿ, ಗೃಹಪತಿ ಮುಂತಪ್ಪುಪತಿಗಳ ಜನಕಿ
ಸಸ್ಯ ಖಗಮೃಗಗಳ ಜನನಿ ಜಾನಕಿ!
ಬೆಳೆಯುತ್ತ ಬೆಳೆಯುತ್ತ ದಾಯಾದಿಗಳಾದ
ಇಂತಪ್ಪು ಜಾನಕೀಸುತರು ಮೂಲವನರಿಯದೆ ತಮ್ಮ ತಮ್ಮ ಹಿರಿತನವ ಮೆರೆವ ವೈದ್ಯ, ಪಂಡಿತ, ಹಕೀಮ, ಪಾಮರರ ಹಕೀಕತ್ತ ಕಂಡು ಬರಿದೇ ಬಪ್ಪುದೆ ಶಿವಜ್ಞಾನವೆಂದು ಗಹಗಹಿಸಿದನಪ್ಪ
ಅಪ್ಪರ ಅಪ್ಪ ನಮ್ಮಪ್ಪ ಹಗೆದಿಬ್ಬೇಶ್ವರ!

ನರೋತ್ತಮ ಸರ್ವೋತ್ತಮ ಪಂಡಿತೋತ್ತಮರೆಂಬ ವೇಷಧಾರಿಗಳೇ ಕೇಳಿರೈ.
ನರಿಯಂತೆ ಸರಿಹೊತ್ತು ಮಾನಿನಿಯರ
ಕಾಮಿನಿಯರೆಂದು ಭ್ರಮಿಸಿ ಉದಾರದಿ
ಮುಕ್ತತೆಯ ದ್ರವಿಸಪೋಗಿ ಪೀಡಿಸದಿರಿ.
ಪಂಥದಿ ಮಂತ್ರಿಸಿ ಸಿದ್ದಾಂತದೆ ಸಿದ್ಧಿಸಿದೊಡೆ ಹೊತ್ತಿ ಉರಿವದು ಉದರಾಗ್ನಿ ಮಾಯೆ ಮಾತ್ರ.
ನಾನು ಮುಕ್ತ ಕಾಮಿ ಶಿಶ್ನಪ್ರಸಾದಿ
ನಿಜ ಗುರುಲಿಂಗಜಂಗಮನೆಂದು
ಕಾಮ ಕಳೆದು ನಾಮವಳಿಸಿ
ನಿಜಮುಕ್ತದೆ ಅರುಹಿದೊಡೆ
ಕುಣಿಕುಣಿದು ಬಪ್ಪ ಮಾನಿನಿ
ಸೃಷ್ಟಿಯಗೈದು ಲಿಂಗೈಕ್ಯವಾ ಮೆರೆದು
ಉದಾರದಿ ನಿಜ ಮಾಯೆಯ ತೋರುವಳೆಂದು
ಪೇಳಿಪನು ಹಗೇದಿಬ್ಬೇಶ್ವರ!

ದೇಶದಂಚಿನ ಗಡಿಯ ಮಾತಿಲ್ಲ,
ದೇಶದೊಳಗಿನ ಖಜಾನೆಯ ಗತಿ ಕುರಿತು ಚಿಂತನೆಯ ಮಂಡಿಸಲಿಲ್ಲ.
ಬಂದೊದಗಿದ ಮಾರಿಯ ಕ್ಯಾರೆ ಎನಲಿಲ್ಲ,
ಸರ್ವರೋಗಕು ಸಾರಾಯಿ ಮದ್ದೆಂಬ
'ಕಾ' ಕಮಂಗಿಗಳ ಭಾಗ್ಯವೊಂದೇ ಬಡಪಾಯಿ ದೇಶಕೆ ಆತ್ಮ ನಿರ್ಭರದ ಸರಿದಾರಿಯೆಂದರಿತ ಸರದಾರ!
ಉಧೋ ಉಧೋ ಉಧೋ,
ಇತಿಹಾಸದಲ್ಲಿ ಇದೇ ಪ್ರಪ್ರಥಮ  ನೋಡಲೇ ಹಗೆದಿಬ್ಬೇಶ್ವರ!

ಕಲುಷಿತ ಜಲ, ಮಲಿನ ವಾಯು,
ಕಿಚ್ಚ ಹಚ್ಚುವ ವಿಷಾಗ್ನಿ, ಮತ್ತು ಬಾಯ್ಬಿರಿದ ಭೂಮಿ!
ಈ ನಾಲ್ಕು ಇಲ್ಲದ ಅಂತರಿಕ್ಷವ ಪಂಚಭೂತವ ಮಾಡಿ
ಜಗದ ನರೋತ್ತಮರು ನಾವೆಂದು ಪರಜನರ ಮರ್ಧಿಸಿದ
ಅಭಿಮಾನವ ನೊರೆಯುಕ್ಕಿಸಿ ಆಮ್ಲೀಯ ಹೆಕ್ಕಳದ
ಮದದೆ ಮಥಿಸಿದಷ್ಟೂ ಉಕ್ಕುತ್ತಿರುವ
ಹಾಲಾಹಲವ ಅಮೃತವೆಂದು ಉಣ್ಣುತ್ತಿರುವ ವರ್ಧಂತಿ ಅಮಲಿಗರ
ಅಮಲಿಳಿಸಿ ನೆಲೆ ನಿಲ್ಲಿಸೋ ಹಗೇದಿಬ್ಬೇಶ್ವರ||

ಅಣುರೇಣುತೃಣಕ್ಕೆ ಬೆದರಿ ತವರಿಗೆ ಬರುವವರ ಕಮರಿಯಾಚೆ ನಿಲ್ಲಿಸಿ
ಹುರಿಯಾಳುಗಳವರನ್ನು ಭಂಗದ ಶುಚಿಗೆ ಗುರಿಯಾಗಿಸೆ,
ಭಂಗಿ ಸೇದಿದಂದದಿ ಭಟ್ಟಂಗಿಗಳು
ಇದು ಅಸ್ಪೃಶ್ಯ, ಬ್ರಾಹ್ಮಣ್ಯ, ಅವಹೇಳನ, ಇದು ಸ್ಥಿತಿವಂತರ ಆಸ್ತಿಯ ಮಸ್ತಿ ಇತ್ಯಾದಿ ತತ್ವ ಸಿದ್ದಾಂತವನು ಕಾವ್ಯ ಮೀಮಾಂಸದಿ ಪೇಳುತಿರೆ,
ಶುದ್ಧಿಗೊಳಗಾದ ಪಾಪದಾ ಕುರಿ,
ಬಾಹ್ಯವನೆಂತೋ ತೊಳೆದಿರಿ ಹುಚ್ಚಪ್ಪಗಳಿರಾ! ದಿಲ್ಲಿಯ ಸೋಂಕಿನ ಕಿಚ್ಚ
ನಾ ಹೊತ್ತು ತಂದಿಹೆ ಬೆಚ್ಚಗೆ ನನ್ನೆದೆಯೊಳಗೆ!
ಅದನೆಂತು ತೊಳೆಯುವಿರೆಂದು ಕೇಳದಾ ನಿಮ್ಮ ತತ್ವ ಮಸಿ ಸಿದ್ದಾಂತ ಕುರುಡು ಕುಂಟುಶಂಟವಪ್ಪುದು ಕಾಣಿ ಹಗೆದಿಬ್ಬೇಶ್ವರ!

ಪುಸ್ತಕವೊಂದನ್ನು ಅರ್ಥೈಸಿಕೊಳ್ಳಲಾಗದ ಕುಂಞಿ
ವಚನವೊಂದರ ಗ್ರಹಿಕೆ ತಪ್ಪೆಂದು
ಕೈಗೆಟುಕದ ದ್ರಾಕ್ಷಿ ಹುಳಿಯೆಂದು
ಕೈಲಾಗದೆ ಮೈ ಪರಚಿಕೊಳ್ಳುವ ಪರಿಗೆ
ಅದರೊಟ್ಟಿಗೆ ಹರಿವಿರದ ಅರಿವುಗೇಡಿಗಳು ಊಳಿಡುವ ಅರುಹಿಗೆ ನಾ ನಸುನಗುವೆ ಹಗೆದಿಬ್ಬೇಶ್ವರ!

ದೇಶ ಸುತ್ತು ಕೋಶ ಓದು ಎಂದನು ಸಂತ.
ಕೋಶ ಓದಿ ಖಂಡುಗ ಹೇಳಿದೊಡೆ ಪಂಡಿತ,
ದೇಶ ಸುತ್ತಿ ಲವಲೇಶ ಹೇಳಿದೊಡೆ ಪಾಮರ.
ಇಂತಪ್ಪು ನುಡಿಯುತೈದಾವೆ ಉಷ್ಣವೇರಿದ ಅಸಹಿಷ್ಣು ಕೋಶದ ಕೂಪ ಮಂಡೂಕಗಳು. ಕಿಂಚಿತ್ತು ಭೋರ್ಗರೆದು ತಂಪಾಗಿಸೋ ಮಂಡೂಕಗಳು ಸತ್ತಾವು ಹಗೇದಿಬ್ಬೆಶ್ವರ!

ಪ್ರಜಾಪ್ರಭುತ್ವದ ಬುನಾದಿಯ ಮೇಲೆ
ಸಂವಿಧಾನದ ನಿಯಮದಡಿಯಲಿ
ಚುನಾಯಿತ ಸರ್ಕಾರ ಸ್ಥಾಪಿತವಾದಲ್ಲಿ,
ಅದು ಜಡ್ದೆಂದು ಜರಿದ ಪ್ರಜ್ಞಾಧಿಪತಿಗಳು
ಸಂವಿಧಾನದ ನಿಲುವಂಗಿಯ ಝಾಡಿಸಿ ಧರಿಸಿ
ಕಾಫ್ಕಾ, ಬೀಫ್ಕಾ, ತಾವೋ ಎಂದು ತಂತ್ರಿಸಿ
ಸ್ಟ್ಯಾಲಿನ್, ಲೆನಿನ್ ಮಾವೋ ಎಂದು ಮಂತ್ರಿಸಿ
ಕ್ಯಾಸ್ಟ್ರೊ ಎಂಬ ಮಂತ್ರದಂಡದಿ ಕ್ಯಾಸ್ಟ್ರೇಟಿಸಿ
ಛೇ ಗವೇರ ಹುಚೇರ ಎಂದು ಹೂಂಕರಿಸಿ  ತತ್ವಾಂಧತೆಯ ಪಸರಿಸಿದೊಡೆ
ಪಂಚಪ್ರಜ್ಞೆಗಳೆಲ್ಲ ಮರೆತು
ಉಘೇ ಉಘೇ ಎಂಬುದೇ ಪ್ರಜ್ಞೆಯಾದೊಡೆ
ಅವಜ್ಞೆಯೆಂದು ಗಹಗಹಿಸೀಯೆ ಹುಚ್ಚ,
ನಿನ್ನ ಭಕ್ತನೆಂದು ಪೆಚ್ಚಾಗಿಸಿ ಹಗೇವಿಗೆ ಹಾಕುವರೋ ಹಗೆದಿಬ್ಬೇಶ್ವರ!

ವೈದಿಕವೆಂಬರು ಅವೈದಿಕವೆಂಬರು
 ಆರ್ಯ ದ್ರಾವಿಡರೆಂದು ಭೇದವ ಮೆರೆವರು
 ಸಹಿಷ್ಣುವೆನ್ನುತ್ತ ಬಂಡಾಯಗೈವೆಂಬ
 ವರ್ಗಭೇದದ ಪ್ರವರ್ಗಿಗಳೇ ಕೇಳಿ,
 ಬ್ರಾಹ್ಮಣ, ಶೂದ್ರ, ದಲಿತಾದಿ ಮುಂತಪ್ಪು ಜಾತಿಗಳಲಿರ್ಪ ಕೆಂಪು ಕಪ್ಪಿನ ತೊಗಲ,
 ನೀಲಿ, ಕಂದು,ಕಪ್ಪು ಕಂಗಳ,
 ಗುಂಗುರು ರೇಶಿಮೆ ಕೂದಲ ಪ್ರವರ್ಗಗಳ
 ಸೃಷ್ಟಿ ಎಂತಪ್ಪಾಯಿತೆಂದು ಬಲ್ಲಿರೇ?
ಹೋಗಿ ತಮ್ಮ ತನುವ ಒರೆಹಚ್ಚಿಸಿಕೊಳ್ಳಿ
ಮನವ ಸಂತೈಸಿಕೊಳ್ಳಿ ಹಗೆದಿಬ್ಬೇಶ್ವರ.

ವೃಷಣವ ಮಸ್ತಕವ ಮಾಡಿ
ತೃಣವ ಘನವೆನ್ನಿಸಿ
ಅರ್ಬುದದ ಬೀಜವ ಘನಲಿಂಗ ಮಾಡಿ
ಒಡ್ಡೋಲಗದಿ ಅದ್ಭುತ ಅತ್ಯದ್ಭುತವೆಂದು ಕೊಂಡಾಡುವ ತನು ವಿಕಾರಿ, ಮನ ವಿಕಾರಿಗಳ
ಅನು ವಿಕಾರವೆಪ್ಪುದೋ ಬಪ್ಪಾ
ವಿಕಾರ ವಿಹಾರಿ ಹಗೆದಿಬ್ಬೇಶ್ವರ!

"ಜಾತಿ ಅತೀಯತೆ"ಯನ್ನು
"ಜಾತ್ಯಾತೀತ"ವೆಂದು ಬಣ್ಣಿಸಿ
"ಜಾತ"ನನ್ನು ಅತೀತನಾಗಿಸಿ 
ಅಮೇಧ್ಯವ ನೈವೇದ್ಯವ ಮಾಡಿ,
ಉಣ್ಣಲಿಕ್ಕುವ ಪಾತಕಿಗಿಂತ
ಘನಘೋರ ಪಾತಕ,
ಆತನ ಕಾಯಕವ ವಿಚಾರಿಸದೆ
ಆ ನೈವೇದ್ಯವ ಮಹಾಪ್ರಸಾದವೆಂದು 
ನೆಕ್ಕಿ ನೆಕ್ಕಿ ಮುಕ್ಕುವ ಭುಂಜಕ.
ಆ ಪಾತಕದ ಭುಂಜಕ ಮೂಶಂಡಿಗಳಿಗೆ 
ರೌರವ ನರಕ ಹಗೆದಿಬ್ಬೇಶ್ವರ!

ಸರ್ಕಾರೀ ಸೇವೆಯ ಗಾಳಿಗೆ ತೂರಿ
ಜಾತಿ ದುರಾಭಿಮಾನದೆಲ್ಲೆ ಮೀರಿ
ಜಾತಿ ಪಕ್ಷವ ಸೇರಿ,
ಐನಾತಿ ಜಾತ್ಯಸ್ಥನ ಹುಲ್ಲ
ಹೊರೆ ಹೊತ್ತ ಮೂಶಂಡಿ,
ವೈನಾತಿ ದೊರೆ ಕುಲಸ್ಥನ ಮೆರೆಸಿದೆಡೆ
ಅವನ ಸೊಲ್ಲ ಮುರಿವೆನೆಂಬ
ಪಾಶಂಡಿ ನೋಡಾ ಹಗೆದಿಬ್ಬೇಶ್ವರ!


ಸುದ್ದಿಯ ಹುಚ್ಚಿನ ಹಜಾರದ ಅಣ್ಣ,
ಇಲ್ಲದಾ ತುರ್ತ ಹೇರಿಕೊಂಡು
ಊಹೆಯ ಕೇಡಿಗೆ ಸಿಲುಕಿ, ಹಗ್ಗವ ಹಾವೆಂಬ ಮೋಡಿ ಮೋಹದ ಗುಡುಗುಡಿಯ ದಾಹದ 
ವಿಭಕ್ತಿಯ ಗುಡಿಯ ಗಾರುಡಿಗರ ಗುಂಪಿಗೆ ಗಾಂಪನಾದ ಹಗೇದಿಬ್ಬೇಶ್ವರ!

ಮಾತೃಭಾಷೆಯಲಿ ಕಲಿತರೇನು
ದೇಶಭಾಷೆಯಲಿ ಓದಿದರೇನು
ಚಿಂತನೆಗೆ ಹಚ್ಚದಾ ಮೂಲ ಶಿಕ್ಷಣ,
ಎಂತಪ್ಪು ಭಾಷೆಯಲಿದ್ದರೇನು!
ಕೂಸು ಕಮಂಗಿಯಾಗುದಕೂ
ಭಾಷೆ ಇಂಗಿ ಹೋಗುದಕೂ
ಸಂಬಂಧವೆನಿತು ವಿಲಕ್ಷಣ
ಭಾಷಾ ವಿರಾಗಿ ಹಗೆದಿಬ್ಬೇಶ್ವರ!


ವಾಸ್ತವದ ಅರಿವ
ಅನುಭವದ ಹರಿವ
ಅನುಭಾವದಿ ಆರುಹಿದೆಡೆ,
ಹುಂಬಜರು ಡಂಭಾಚಾರದಿ
ಕೂಪಮಂಡೂಕ ಭರದಿ
ಧಗಧಗಿಸುವ ಪರಿಗೆ
ಹುಚ್ಚನಾಗದಿರು
ನೀ ಹಗೇದಿಬ್ಬೇಶ್ವರ.

ಕನ್ನಡಕ್ಕಾಗಿ ಕೈಯೆತ್ತು ನಿನ್ನ ಕೈ
ಕಲ್ಪವೃಕ್ಷವಾಗುತ್ತದೆಂದನಾ ಕವಿ.
ಖನ್ನಡವೆನಿ ಕೈ ಎತ್ತಿ ಕರವ(ವೇ) ಹೇರಿ
ಕಲ್ಪಕವ ಕಂಡುಕೊಂಡ ಭವಿ!
ಕವಿಯ ನುಡಿಗಿಂತ, ಭವಿಯ ಉದರಾಗ್ನಿ
ದಳ್ಳುರಿಯಾಗಿ ಆ ಬಣ ಈ ಬಣ ಸೇರಿ
ಹಿರಿಹಿರಿದು ಸಜ್ಜನರ
ಕಲ್ಪವೃಕ್ಷದೊಂದಿಗೆ ಕನ್ನಡ
ಕಾಮಧೇನುವ ಹಿಂಡುವುದ ಕಂಡು

ಬಸವಳಿದ ಹಗೆದಿಬ್ಬೇಶ್ವರ!

ಅರುಹ ಪೂಜಿಸಲೆಂದು ಕುರುಹು
ಎಂದನಾ ಗುಹೇಶ್ವರ
ದೇಹವೇ ದೇಗುಲ ಹೊನ್ನ ಶಿರವೇ
ಕಲಶವೆಂದನಾ ಅಣ್ಣ
ಗುಡಿ ಚರ್ಚು ಮಸಜೀದಿಗಳ ಬಿಟ್ಟು
ಹೊರಬನ್ನಿ ಎಂದನಾ ರಸಋಷಿ
ಈ ಮುಂತಪ್ಪು ಆದ್ಯರ ಮುಂದಿರಿಸಿ
ನಾಸ್ತಿಕ ಬುದ್ಧಿವಂತರು ತೊಡೆ ತಟ್ಟಿ,
ದೇವರಿರುವನು ಗುಡಿಯಲ್ಲೇ,
ಅದು ಆ ಒಂದರಲ್ಲೇ, ಶಬರಿಗಿರಿಯಲ್ಲೇ.
ಕಾಣ ಹೋಗಿರಿ ಹೆಂಗಳೆಯರೇ
ಎಂದು ಜಂಗಮವ ಮರೆಸಿ
ಸ್ಥಾವರವ ಮೆರೆಸಿ
ವೇದ್ಯರ ಮುರುಗಮರ್ಧನೋಲ್ಲಾಸದಿ ಕುಣಿವುದಕೆ ಆಧ್ಯಾತ್ಮ 
ಅದ್ವಾನವಾಯಿತೈ ಹಗೇದಿಬ್ಬೇಶ್ವರ!

ಹರಿ ಹರ ಸುತ
ಹೆಣ್ಣಿಲ್ಲದೇ ಹುಟ್ಟಿದ ಅಚ್ಯುತ
ಸೃಷ್ಟಿ ನಿಯಮ ಮೀರಿ ಅನಂತ
ತಾನನಂತವಾಗುವ ಪರಿಯ ಪ್ರತೀಕ. 
ಆ ಅಮೂರ್ತವ ಪಿಡಿದು 
ಮೂರ್ತ ಮಾಯೆಯ ಸುತ್ತಿ
ಭೌತಿಕಗೊಳಿಸಿ, ಲೌಕಿಕವಾಗಿ ಸ್ತುತಿಸಿ
ಐಹಿಕ ವಾಂಛೆಯ ಗತಿಯಾಗಿಸುವ
ರಂಭೂರ್ವಶಿಮೇನಕೆಯರ ದೈಹಿಕ
ಬಿನ್ನಾಣ, ಗಂಡುಗಳ 
ತೊಳಲಾಟದಲಿ ಅಯ್ಯಪ್ಪ ಬಸವಳಿದು 
ಅಯ್ಯಯ್ಯಪ್ಪಾ ಶರಣೆಂಬ ನೋಡಾ ಹಗೇದಿಬ್ಬೇಶ್ವರ!


ಮೀಟಿದ್ದನ್ನು ಟ್ವೀಟಿಸಿದರೆ ಶಿಕ್ಷೆಯಪ್ಪುದೆ?
ಆರರ ಹೊಲಬ ಮೂರು ಮಾಡಿ
ಆರ್ಯರ ಹೊಲಸ ದೂರು ತೋಡಿ
ದೂರುವಲ್ಲಿ ದೂರಿದೆಡೆ
ನ್ಯಾಯ ಕಾರಣ ಶಿಕ್ಷೆಯಪ್ಪುದು.
ಆರ್ಯನ ಮಾರಿಯ
ಕುಲಗೆಡಿಸುವಾ ಪರಿಯ
ಆರಿಯದೇ ಕುಲೀನ
ನಾರೀ ಬಳಗ ಮತಿಹೀನ
ಬೊಬ್ಬಿರಿವುದಾ ಕಂಡು
ಕಾಳಿ ಗಹಗಹಿಸುತ್ತಿಹಳು ಹಗೇದಿಬ್ಬೇಶ್ವರ!

ರಾಷ್ಟ್ರಪಿತನ ಶಾಖಪ್ರಯೋಗಕ್ಕೆ
ಹದವಾಗಿ ಬದಿಗಿದ್ದು
ವೈಷ್ಣವ ಜನತೋ ತೇನೆ ಕಹಿಯೆಗೆ
ಸಿಹಿ ಸಿಹಿಯೆಂದು ಮುಲುಗಿದಾ ಬಾಲಕನ್ಯೆಯರಿಂದು 
ಹೂವರಳಿ ಕಾಯಾಗಿ
ಮೈಯರಳಿ ಹಣ್ಣಾಗಿ ಮೀಟೂ ಮೀಟೂ ಎಂದು ಏಕತಾರಿಯ
ಮೀಟುವ ಪ್ರೌಢಿಮೆಗೆ ತಾಳ ಹಾಕುವ ಬಾರಾ ಹಗೇದಿಬ್ಬೇಶ್ವರ!


ಕೈರಳಿಯ ಪಿಣರಾಯಿ 
ತೋ(ತು)ರಿಕೆಯ ಕಮ್ಯುನಿಷ್ಠ.
ಹೀಗಳೆ
 ಸಂಸ್ಥಾನ ಫ್ಯಾಸಿಸ್ಟ!
ಕೆರೆಕೆರೆದು ಹುಣ್ಣಾಗಿ
ಮೈಯಳಿಯೆ ತಲೆಬಾಗಿ 
ಫ್ಯಾಸಿಸ್ಟ ಸಂಸ್ಥಾನ ನೆನಪಾಗಿ
ಕಾಮಿ ಚೀನಾ, ಕ್ಯೂಬಾ, ರೂಸು
ಗಬ್ಬು ನಾರುವ ಹೂಸು
ಎನಿ ಮೂಗಮುಚ್ಚಿ ಮಫ್ಲರು ಸುತ್ತಿ 

ಸಂಯುಕ್ತ ಸಂಸ್ಥಾನ ಸೇರಿರೆ, 
ಕುಡುಗೋಲು ಸುತ್ತಿಗೆಯ ಕೆಂಪು ಬಾವುಟದಡಿ 
ಲೆನ್ನಿನ್ನು ಸ್ಟಾಲಿನ್ನು ಪಿಂಪು ಜಪವನ್ನು ಪಠಿಸುತ್ತ, 
ತೊಟ್ಟು ಗುವೆರಾ ಅಂಗಿ
ಎಳೆಯುತ್ತಾ ಕ್ಯಾಸ್ಟ್ರೋ ಭಂಗಿ
ಫ್ಯಾಸಿಸ್ಟ ಐಫೋನು ಐಪಾಡಲಿ
ಬಾಬಿ ಮಾರ್ಲಿಯ ಹಾಡಲಿ
ಪಿಣರಾಯಿ ಶಿಷ್ಯ(ಶ್ನ)ಕೋಟಿ
ಕ್ಯೂಬಾದ ಕಾಮ ಮೀಟಿ
ತೀಟೆ ತೀರುತ್ತಿರೆ ಪರಿಪರಿಯಾಗಿ
ನಾಚಿ ನೀರಾಗಿಹ ಹಗೇದಿಬ್ಬೇಶ್ವರ!


ನೊಬೆಲ್ ಪಾರಿತೋಷಕದ ಲೇಖಕನ 
ಸ್ತ್ರೀಶೋಷಣೆಯ ಕೆಣಕರು
ಕನ್ನಡ ಜಾಣಜಾಣೆಯರ ಪತ್ರಿಕೆಯ ಪಿತಾಮಹ,
ಕಾಮಸಾಹಸವ ವರ್ಣಿಸೆ ಭಜಿಪರು!
ಜ್ಞಾನಪೀಠಿಯ ಸ್ತ್ರೀಪೀಡನೆಯ ಸೃಜನಶೀಲವೆಂಬ 
ಇಂತಪ್ಪು "ಎಡ" ಸ್ತ್ರೀಸಂವೇದಿಗಳು 
ಬಡ "ಬಲ" ಭಟ್ಟನ ಕುಚೋದ್ಯದ ಮದ್ಯಮರ್ಕಟತನಕೆ 
ಯುದ್ಧ ಸಾರುದ ಕಂಡು "ಮಧ್ಯಮ" 
ನಾ ಮುಗ್ಗರಿಸಿದೆ ಹಗೇದಿಬ್ಬೇಶ್ವರ!

ಉಳ್ಳವರ ಸಿರಿ ಕಂಡು ದಾನ ಧರ್ಮವ ಮಾಡರೆಂದು 
ಕರುಬುವ ಮೂಲ ಉರಿಲಿಂಗಬುದ್ಧಿಯ ಮುಂಡಿಸದೆ 
ಜಟೆಕೇಶ ಬೆಳೆಸಿ, ಕೆಂಪು ರುಮಾಲು ತೊಡಿಸಿ, 
ಸಮಾಜವಾದದ ವಸ್ತ್ರವ ಸುತ್ತಿ, ಹಪಾಹಪಿಯ ಭಾವದಿ 
ಪುರಾಣ ಸೃಷ್ಟಿಸಿ ಪ್ರವಚನ ಬೀರುತ್ತಾ, 
ಗುಡುಗುಡಿಯ ಭ್ರಾಮಕದ ಧೂಮವನೆ ವ್ಯೂಮವೆನಿ, 
ಲೋಕವ ಗುದ್ದಿ ತಿದ್ದ ಹೊರಟ ಪೆದ್ದರ ನೋಡಿ 
ಬಿದ್ದು ಹೊರಳಾಡಿ ನಗುತಿಹನು ಹಗೇದಿಬ್ಬೇಶ್ವರ!

ಅರಸನವ ಉಟ್ಟ ಬಟ್ಟೆಯಲ್ಲಿ ಕಾಡಿಗೆ ನಡೆದು ಮೋಕ್ಷವ ಪಡೆದು ಸರಳ ಪಾಲಿಯಲಿ ಬೋಧಿಸಿದ!
ಆರಾಧ್ಯ ಜಂಗಮನವ ಶಿವದೀಕ್ಷೆಯ ಹೊಂದಿ ಸರಳ ಕನ್ನಡದಲಿ ವಚನಗಳ ವಾಚಿಸಿದ!
ವ್ಯತಿರಿಕ್ತವಾಗಿ,
ಅಂತ್ಯಜನೆನಿಸಿದವ ಸೂಟುಬೂಟಿಸಿ ಅಸ್ಪಷ್ಟ ವಿಧಾನವ ಔನತ್ಯ ಭಾಷೆಯಲ್ಲಿ ಬರೆದರೂ
ಶೂದ್ರತಪಸ್ವಿಯವ ಗತ್ತು ಗೈರತ್ತಿನಲಿ ಸಂಸ್ಕೃತದಪಿ ಕನ್ನಡದಲಿ ಬರೆದರೂ
ಸರಿ-ಬೆಸಗಳ ಈ ವೈಪರೀತ್ಯಗಳ ಸರಿಸರಿ ಎಂದು ಸಮಗಟ್ಟಿಸಿ ಸಾಲುಗಟ್ಟಿ ಪೊರೆದು
ಪೂಜಿಪ ವಿಸ್ಮಯವ ಕಂಡು ನಾ ಗೊಂದಲದ ಗೂಡಾದೆ ಹಗೆದಿಬ್ಬೇಶ್ವರ!

ನುಡಿದರೆ ಮುತ್ತಿನ ಹಾರದಂತಿರಬೇಕೆಂದನಣ್ಣ,
ನುಡಿದರೆ ರಕ್ತ ಕಾರಬೇಕೆಂಬ ತಮ್ಮ!
ನುಡಿದರೆ ಸ್ಪಟಿಕದ ಶಲಾಕೆಯಂತಿರಬೇಕೆಂದನಣ್ಣ,
ನುಡಿದರೆ ರಕ್ತದ ಓಕುಳಿಯಾಗಬೇಕೆಂಬ ತಮ್ಮ!
ನುಡಿದರೆ ಲಿಂಗಮೆಚ್ಚಿ ಅಹುದಹುದೆನ್ನಬೇಕೆಂದನಣ್ಣ,
ನುಡಿದರೆ ಕಿಚ್ಚನಚ್ಚಿ ಭಕ್ತರೊಚ್ಚಿ
ಕೆಂಪುಕೆಂಪಾಗಬೇಕೆಂಬ ಕ್ರಾಂತಿಜೀವಿಗಳ ಕೈಯಲ್ಲಿ
ಅಣ್ಣ ಭ್ರಾಂತಿಯಾಗಿ ಹೋಗಿಹ ಹಗೇದಿಬ್ಬೇಶ್ವರ!

ಅನ್ನಕ್ಕೆ ಆಳಾಗಿ, ತತ್ವಕ್ಕೆ ಶರಣಾಗಿ ಜಾತಿಗೆ ಮತಿಯಾಗಿ, 
ಪ್ರಭುತ್ವ ಪತಿ(ತ್ನಿ)ಯೆನಿಸಿ, ಪ್ರಭಾವಳಿಗಳೇ ಹಿರಿಯಾಗಿ,
ಸತ್ಯ ಧರ್ಮ ನ್ಯಾಯಗಳು ಕಿರಿಯಾದೊಡೆ
ಆ ಪಾಂಡಿತ್ಯ ಪಾಮರರ ಅನುಭಾವ ಭವಿಯಾಗಿ 
ಲೋಕಕ್ಕೆ ಹೊರೆ ಕಾಣಾ ಹಗೇದಿಬ್ಬೇಶ್ವರ!


ಸುತಾರನೆಂಬ ಹತಾರ ಕರ್ನಾಟಕದ ಕಬೀರನೆಂದರೆ, 
ಗುರುರಾಜನೆಂಬ ನಾಯ್ಡು ಕರ್ನಾಟಕದ ನಾರದ ಮುನಿಯೇ? 
ತತ್ವಜ್ಞಾನಕ್ಕೂ, ತತ್ವವಾಚನಕ್ಕೂ ವ್ಯತ್ಯಾಸವರಿಯದ, 
ರೂಹನರಿಯದೆ ದೇಹ ಸ್ತುತಿಸುವ, 
ಹರನನರಿಯದೆ ಹರಹರನೆಂದು ಬೊಬ್ಬಿರಿಯುವ, 
ಹರಿಯ ಪೊರೆಯದೆ ಅವನಾಮವ ಪರಿಯುವ 
ಡಂಭರನೇನೆಂಬೆ ಹಗೇದಿಬ್ಬೇಶ್ವರ!

ಆತ ಹುಸಿಯಾನ, ಹೂಸಿದ್ದೆ ಕಲೆಯೆಂದ, 
ಸಂಬಂಧ ಹುಸಿಯೆಂದ, ಕಾಮದೇವತೆಗಳೇ ಅನ್ಯಧರ್ಮಜರವೆಂದ, 
ಕಡೆಗೆ ಮತಿಗೆಟ್ಟು ಕಾಲಕ್ಕೆ ಗತಿಯಾದ!
ಇನ್ನೊಬ್ಬ ಭಗವಾನ,  ಅಕ್ಷರದಿ ಇರಿದ, 
ಮಾತಲಿ ಕೊಂದ, ದ್ವೇಷದ ದಳ್ಳುರಿಯ ಕಿಚ್ಚ ಪಸರಿಸಿದ, 
ಕಡೆಗೆ ಆಸ್ಥಾನ ಪಂಡಿತನೇ ತಾನಾಗಿ ರಾಮನೇ ಹಯವಾನನೆಂದ.
ಈಗೊಬ್ಬ ಬಢವಾನ, ರಾಜಾಶ್ರಯದ ಗಧವಾನ 
ತತ್ವನಿಂದಕನ ಹಿಡಿ ಕಡಿ ಕೊಲ್ಲೆಂದ, ಚಕ್ರಕ್ಕೆ ತೀರ್ಥ ಬಿಡಿಸಲು ಹೋಗಿ 
ಚಕ್ರಸುಳಿಗೆ ಸಿಲುಕಿ, ಹುಸಿನಗೆ ಬೀರುತ್ತಾ ನಾ ತೇಲುತಿಹೆನೆಂಬ 
ಇಂತಿಪ್ಪು ಸಿದ್ಧರಾಮನ ಜಟಿಲಮತಿಗಳ 
ಕುಟಿಲತೆಯ ಅರ್ಥೈಸು ಹಗೇದಿಬ್ಬೇಶ್ವರ!

ಒಲೆ ಹತ್ತಿ ಉರಿದೊಡೆ ನಿಲಲುಬಹುದು ಧರೆ ಹತ್ತಿ ಉರಿದೊಡೆ?
ಲಿಂಗ(ಸಂವಿಧಾನ)ಕ್ಕೊಪ್ಪದ ಬಹುಪತ್ನಿತ್ವ
ಲೋಕ(ನೀತಿ)ಕ್ಕೊಪ್ಪದ ಪರನಾರೀ ಸಂಗ
ಲೋಕಾಳ್ವಿಕೆಗೆ ಒಪ್ಪಿತವಾಗಿ ಮೆರೆದೆಡೆ,
ಆ ವಿಕೃತ ಲೋಕವ ನೀನರ್ಪಿಸಿಕೋ ಹಗೇದಿಬ್ಬೇಶ್ವರ!

ತುಂಬುಗೊಡದ ಮೇಲೆ ಹಾಲ ಸುರಿದೆಡೆ
ಹರಿದು ಪೋಲಾಗುವುದಯ್ಯ
ಹರಿತ ಕತ್ತಿಯ ಮಸೆಯುತಿದ್ದೆಡೆ
ಮೂಸೆಗೆಸೆಯಬೇಕಾಗುವುದಯ್ಯ
ಬೇಕುಬೇಡಗಳ ಮೀರಿ ಸಂಪತ್ತ ಬೆನ್ನತ್ತಿದೆಡೆ
ಸುಖ ಶಾಂತಿಗೆಡುವುದಯ್ಯ
ಲೋಕ ಮೆಚ್ಚಿಸ ಹೋಗಿ
ಲೋಕದಾ ಸೆರೆಗೆ ನೀ ಸಿಲುಕದಿರು ಹಗೇದಿಬ್ಬೆಶ್ವರ!


ಜಿನ ಬ್ರಹ್ಮಶಿವನ ಸಮಯಪರೀಕ್ಷೆಯಲಿ ವೀರಶೈವ
ರಾಘವಾಂಕನ ವೀರೇಶಚರಿತೆಯಲಿ ವೀರಶೈವ
ಹರಿಹರನ ಬಸವರಾಜದೇವರ ರಗಳೆಯಲಿ ವೀರಶೈವ
ಶತ್ರು ಮಿತ್ರ ಭಕ್ತರ ಪುರಾಣಗಳಲಿ
ಆದ್ಯಬಸವಕಾಲೀನ ವಚನಕಾರರಲಿ ವೀರಶೈವ
ಲಿಂಗಾಯತ ಒಂದೆಂದು ಸಾರಿದೆಡೆ 
ಭಿನ್ನವೆಂದು ಭಿನ್ನಹಿಸುವ ಭಿನ್ನಲಿಂಗಿಗಳ
ನಿರ್ವೀರ್ಯ ಲಿಂಗದಾ ಕೂಸ ಕಾಣಾ  ಹಗೇದಿಬ್ಬೇಶ್ವರ!

ಸತ್ರದ ಕಾವಲುಭಟನ ಸಾಮ್ರಾಟನಾಗಿಸಿದನಂದು
ಚಾಣಕ್ಯನೆಂಬ ವಿಪ್ರ,
ಕೊಲೆಗಡುಕ ತಿಪ್ಪನ ರಕ್ಷಕನಾಗಿಸಿದ
ಪೂರ್ಣಯ್ಯನೆಂಬನಿನ್ನೊಬ್ಬ ಬ್ರಾಹ್ಮಣ,
ಸಂವಿಧಾನಶಿಲ್ಪಿಯ ಪೊರೆದು ಪೋಷಿಸಿದ
ಅಂಬೇವಾಡೇಕರನೆಂಬ ಹಾರುವ,
ಇಂತಪ್ಪು ಅಲ್ಪ ಹಾರುವರು ಮುಂತಪ್ಪು ಜನಂಗಳ ಕಲ್ಪ ಕಟ್ಟಿರೆ
ಅವಂಗಳ ನಿರ್ನಾಮ ಮಾಡೆಂಬ
ಲದ್ದಿಜೀವಿಗಳ ಶುದ್ಧಿ ಮಾಡೆಂಬ ಹಗೇದಿಬ್ಬೇಶ್ವರ

ಮಠದೊಳಗಿನ ವಿರಕ್ತ ಕಳ್ಳರು
ಕರವಶದ ಲಿಂಗವನು ಕೆದಕೆದಕಿ
ಅರಸುತ್ತೈದಾರೆ!
ಪೊಗರಿನಲ್ಲಿ ಸೊಡರ ಬಿಟ್ಟು
ಭಿಕ್ಷಾನ್ನದ ಖಾವಿಧಾರಿಗಳು
ತಮ್ಮತಾವರಿಯದೆ
ಆಧರಪಾನವನುಂಡು ತೇಗಿ
ಸುರಾಪಾನವ ಬೇಡುತೈದಾರೆ.
ಇದನರಿತ ಕುರಿಗಾಹಿಯೊಬ್ಬನು
ಹಿರಿದ ತಲೆಗಳ ಹಿಡಿದು
ಅಧ್ಯಾತ್ಮವಿಕಾರದ ನೆತ್ತರ ಕುಡಿದನು
ನೋಡಾ ಹಗೇದಿಬ್ಬೇಶ್ವರ!


ನೊಸಲ ಮೇಲೆ ವಿಭೂತಿ ಭಾರಿ
ಅಂಗದ ಮೇಲೆ ಲಿಂಗವ ಹೇರಿ
ಲಿಂಗವ ಹೊತ್ತ ಯತಿ ನೀ ಲಿಂಗಾಯತಿ
ಹಿಡಿ ಸರಿ ದಾರಿ ಎಂದು ದೀಕ್ಷೆ ಕೊಟ್ಟೆಡೆ
ನಾ ಲಿಂಗಾಯತ ನಾ ಲಿಂಗಾಯತ
ಆಯತವಾಗಲಿ ಭವ ಭಾಗ್ಯವೆನಗೆಂಬ
ಹೋರಿಗಳ ಹುರಿಗಟ್ಟಿ ಕೆಡುಹು ಹಗೇದಿಬ್ಬೇಶ್ವರ!


ಗುಹೇಶ್ವರ ಸ್ತ್ರೀಲಿಂಗ
ಚೆನ್ನಮಲ್ಲಿಕಾರ್ಜುನ ಪುಲ್ಲಿಂಗ
ಕೂಡಲಸಂಗಮದೇವ ಸಂಗಮಲಿಂಗ
ಇಂತಿಪ್ಪು ಅನುರಕ್ತ ಪರಿತ್ಯಕ್ತ ವಿರಕ್ತಿಗಳ
ಲಿಂಗಸಂಗಮದ ನವ ಕಲ್ಯಾಣಕ್ರಾಂತಿ
ಲಿಂಗವಂತ ಧರ್ಮ ಕಾಣಾ ಹಗೇದಿಬ್ಬೇಶ್ವರ!


ಕದಳಿಯ ಬನವ ಹೊಕ್ಕು ಹೊಲಬ
ತಿಳಿಯದೇ ಮೇಲ್ತಿಳಿಯ ನೆಕ್ಕಿ,
ಬಯಲ ಗಾಳಿಯ ಹಿಡಿದು ಘಟ್ಟಿಸದೇ
ಹೂಸಿದ ವಾಯುವ ಮೂಸಿ,
ಆಳಕ್ಕಿಳಿಯದೆ ಬರಿದೇ ಬಂದುದೇ
ಲಿಂಗಜ್ಞಾನವೆಂದು ಶಾಸನವ ಬರೆದ
ಪಂಡಿತರನೇನೆಂಬೆ ಹಗೇದಿಬ್ಬೇಶ್ವರ!

ವೀರಶೈವ ಬೇರೆಯೋ ಲಿಂಗಾಯತ ಬೇರೆಯೋ?
ವೀರಶೈವವೆಂಬ ಶಿವಲಿಂಗಕ್ಕೆ ಲಿಂಗಾಯತವೆಂಬ ಕಂಥಿಯ ಕಟ್ಟಿಸಿ, 
ಆ ಲಿಂಗವ ಪೂಜಿಪ ಲಿಂಗಾಯತಿಗಳೇ 
ಮುಂತಪ್ಪು ಲಿಂಗವ ತೊರೆದು ಬರಿಗಂಥಿಯ ಪೂಜಿಪಿರೇ?
ಆತ್ಮ ಬೇರೆಯೋ, ದೇಹ ಬೇರೆಯೋ!
ಇಂತಿಪ್ಪು ಆತ್ಮವ ತೊರೆದು ದೇಹವ ಪೊರೆವ 
ಶವಗಳಿಗಿಲ್ಲ ಸಂಸ್ಕಾರವೆಂಬ ಹಗೇದಿಬ್ಬೇಶ್ವರ!

ಜಾತಿ ಕೂಟವ ಬಯಸಿ ಕೂಡಲಸಂಗನ
ವಿಶ್ವಗುರುವೆಂದು ಹೊಗಳುವರಯ್ಯ
ಜಾತಿ ಬಲವ ಬಯಸಿ ಸಾಮಂತನ ನಾಡಪ್ರಭುವಾಗಿಸಿದರಯ್ಯ
ಬಹುಮನೆಯ ಗೆಲ್ಲಲು ದಂಡುಕೋರನ ಹಬ್ಬವ ಹೂಡಿ
ರಾಯನ ಭಾರ್ಯನಾಗಿಸಿ
ವೃಷಣಗಳ ಶಿರದ ಗಾತ್ರಕೆ ಹಿಗ್ಗಿಸಿ ಪೊರೆವವರ
ಮಸ್ತಕವೆಲ್ಲಿಹುದೋ ಹಗೇದಿಬ್ಬೇಶ್ವರ!

ಭರತ ಪರ್ವದ ಸಾಗರ ಮಥನದಲ್ಲಿ
ಭಕ್ತಗಣ ಅಮೃತವೆಂದೂ, ಅಭಕ್ತಗಣ
ಹಾಲಾಹಲವೆಂದು ಕೋಲಾಹಲ ಮಾಡುತ್ತಿರೆ
ದೂರತೀರದ ಜನ ಅದೆಲ್ಲ ಉಪ್ಪುನೀರೆಂದಡೇ
ಇಂತಿಪ್ಪು ಭಕ್ತ/ಅಭಕ್ತರ ವಿಸ್ಮೃತಿಯ
ಪ್ರಲಾಪವ ನೋಡಾ ಹಗೇದಿಬ್ಬೇಶ್ವರ!

ಖಾದಿ ಬುದ್ಧಿಜೀವಿ, ಖಾವಿ ಸುದ್ದಿಜೀವಿ, ಕೂಡಲು ಸಂಗನಿಲ್ಲದೇ
ಆತ್ಮಲಿಂಗಾನಂದದ ಲೋಲುಪತೆಯಲ್ಲೂ
ಅತೃಪ್ತ ಸ್ತ್ರೀಜೀವಿ
ಇಂತಿಪ್ಪು ವೀರ ಲಿಂಗ, ಶೈವ ಆಯತ,
 ಹುಚ್ಚ ನೀ ಬಿಡು ಹಗೇದಿಬ್ಬೇಶ್ವರ!

ಒಂದೆಡೆ ಜಗ್ಗೇಶನ ಪ್ರತಾಪ,
ಮಗದೆಡೆ ಪ್ರಕಾಶನ ಪ್ರಲಾಪ!
ಒಬ್ಬ ಕಮಲಮುಖಿಗೆ ಕಣ್ಣು ಹೊಡೆವವ!
ಇನ್ನೊಬ್ಬ ಬುದ್ಧಿಜೀವಿ ದುಪ್ಪಟ್ಟಿಯೊಳಗೆ "ಕೈ"ಕೆಲಸದಲ್ಲಿ ತೊಡಗಿರುವವ
ಹ*ವನ ಬಿಟ್ಟು ಹಣಿಕಿದವನ ಹಿಡಿದಾರು ಹಗೇದಿಬ್ಬೇಶ್ವರ!

ರಂಗಮಂದಿರದಲ್ಲಿ ರಾಷ್ಟ್ರಗೀತೆಯ ಪಾಡೆಂದುದು ನ್ಯಾಯಾಂಗ
ಮಸಣದಿ ರಾಷ್ಟ್ರಧ್ವಜವ ಹಾಸಿತ್ತು ಶಾಸಕಾಂಗ, ಜನಾಂಗ.
ಮೌಢ್ಯ ಸುದ್ದಿಯ ಪಸರಿಸುತಿಹ ಪತ್ರಿಕಾ ವಿಕಾರಾಂಗ,
ಈ ಸುದ್ದಿ ಮೆದ್ದು ವಿಶ್ವಗುರುವೆಂಬ ಪೆದ್ದು ಮುಖಕ್ಕೊರೆಸುವ
ಬುದ್ಧಿಜೀವಿ ವಿಕಲಾಂಗಗಳ ಶಿಕ್ಷಣಾಂಗವನೇನೆಂಬೆ!
ಹುಚ್ಚುಮುಂಡೆಯ ಕಲ್ಯಾಣದಿ ಕಲ್ಯಾಣವಾಗೆಂಬೆ ಹಗೇದಿಬ್ಬೇಶ್ವರ!

ನಿನ್ನೊಳು ಮಾಯೆಯೋ, ಮಾಯೆಯೊಳು ನೀನೋ!
ಮಾಯೆಯನು ಜಯಿಪ
ಕಪಟಿ ಜತನವ ಬಿಟ್ಟು
ಮಾಯೆಯೊಳು ಮಾಯಾಗಿ
ಮಾಯವಾಗಿ ಹೋಗು ಹಗೆದಿಬ್ಬೇಶ್ವರ!

"ಪರ"ಕಾಶ ರಾಜರು, ಪ್ರಕಾಶ್ ರೈ ಆಗುವುದು ಯಾವಾಗ?

ಪರಕಾಶ ರಾಜರು, ಪ್ರಕಾಶ್ ರೈ ಆಗುವುದು ಯಾವಾಗ?

ಸಂವೇದನಾಶೀಲ, ಪ್ರತಿಭಾವಂತ ನಟ ಪ್ರಕಾಶ್ ರಾಜ್ ಇನ್ನು ಜನಪರ ಹೋರಾಟಗಳಿಗೆ ಶಕ್ತಿ ತುಂಬಲು ತಮ್ಮನ್ನು ತೊಡಗಿಸಿಕೊಂಡಿದ್ದಾರೆಂದು ಬಲ್ಲಿರಷ್ಟೇ. ಇದು ಈ ಹೊತ್ತಿನ ತುರ್ತು ಕೂಡ. ಇಂತಹ ಹೆಚ್ಚು ಹೆಚ್ಚು ಪ್ರತಿಭಾವಂತರು ಸಮಾಜ ಕಟ್ಟಲು ತೊಡಗಿಸಿಕೊಳ್ಳುತ್ತಿರುವುದು ಸಂತಸದ ಸಂಗತಿ. ಕನ್ನಡಕ್ಕಿಂತ ಹೆಚ್ಚಾಗಿ ತಮಿಳು, ತೆಲುಗು, ಹಿಂದಿ ಮತ್ತಿತರೆ ಭಾಷೆಗಳಲ್ಲಿ ಹೆಚ್ಚಾಗಿ ನಟಿಸಿರುವ ಇವರನ್ನು ರಾಷ್ಟ್ರೀಯ ಮಟ್ಟದ ನಟರೆನ್ನಬಹುದು. ಹಾಗಾಗಿ ರಾಷ್ಟ್ರಮಟ್ಟದ ನಾಯಕರ ವಿರೋಧವನ್ನೇ ಇವರು ತಮ್ಮ ಹೋರಾಟಕ್ಕೆ ಆಯ್ದುಕೊಂಡಿದ್ದಾರೆ. ಆದರೆ ಕ್ಷೇತ್ರವಾಗಿ ತಾವು ಹೆಚ್ಚು ಪರಿಚಿತವಿರುವ ತಮಿಳುನಾಡಾಗಲಿ, ಆಂಧ್ರ, ತೆಲಂಗಾಣ, ಮಹಾರಾಷ್ಟ್ರ, ಇತರೆ ಕಾರ್ಯಕ್ಷೇತ್ರವನ್ನು ಆಯ್ದುಕೊಳ್ಳದೆ ತಮ್ಮ ಮಣ್ಣಿಗೆ ನಿಷ್ಠರಾಗಿ ಕರ್ನಾಟಕವನ್ನು ಆಯ್ದುಕೊಂಡಿದ್ದಾರೆ. ಮಣ್ಣು, ರಕ್ತದ ಸೆಳೆತ ಅಪಾರವಲ್ಲವೇ! ಅದೂ ವಿರೋಧಿ ಬಣದ ಧುರೀಣ ಅನಂತಕುಮಾರ್ ಹೆಗಡೆ ರಕ್ತ, ಮಣ್ಣು ಪೂಜ್ಯವೆಂದು ಮನವರಿಕೆ ಮಾಡಿಕೊಟ್ಟ ಮೇಲೆ.

ಈ ಹೋರಾಟವನ್ನು ರಾಜರು ತಮ್ಮ ಹೋರಾಟಗಾರ್ತಿ ಮಿತ್ರೆ ಗೌರಿ ಲಂಕೇಶ್ ಹತ್ಯೆಯನ್ನು ಖಂಡಿಸುವಲ್ಲಿಂದ ಉದ್ಘಾಟಿಸಿದರು. ಇವರ ಜನಪರ ಹೋರಾಟದ ಶುರುವಿನಿಂದ ಇವರು ಪರಕಾಶ ರಾಜರಾಗಿದ್ದಾರೆಯೇ ಹೊರತು ಪ್ರಕಾಶರಾಗಿ ಅಲ್ಲ. ಸದಾ ಎಡರಂಗದ ಬ್ರೈಟ್ ಲೈಟ್ ಬಾಯ್ಸ್ಗಳೊಂದಿಗೆ ಕಾಣಿಸಿಕೊಳ್ಳುವ ಇವರು ಸ್ವಯಂ ಪ್ರಕಾಶಕ್ಕಿಂತ "ಪರ"ಕಾಶರೆನಿಸುತ್ತಾರೆ. ಇವರ ಸುತ್ತಲಿರುವವರು ಸಮಾಜವಾದಿ ಎಡರಂಗದ ಸೋಗಿನಲ್ಲಿರುವ ಎಡಬಿಡಂಗಿಗಳು, ಅದರಲ್ಲೂ ಕೆಲವರು ಸರ್ಕಾರಿ ಸಂಬಳ ಸವಲತ್ತುಗಳ ಪಡೆದುಕೊಳ್ಳುವ ಪ್ರೊಫೆಸರ್ಗಳು, ಮುಖ್ಯಮಂತ್ರಿಗಳ ಸುದ್ದಿಪರಿಚಾರಕರು, ಮತ್ತು ಕೆಲ ಸ್ವಯಂ ತುರ್ತುಪರಿಸ್ಥಿತಿ ಘೋಷಿಸಿಕೊಂಡಿರುವ ಕೈಕೆಲಸದಲ್ಲಿ ಕವಿ/ಕವಿಯಿತ್ರಿಯರು. ಅಂದಹಾಗೆ ಗೌರಿ ಲಂಕೇಶ್ ಸಮಾಜವಾದಿ, ಲಿಬರಲ್ ಅಂದೆಲ್ಲ ನೀವು ಅಂದುಕೊಂಡಿದ್ದರೆ ತಪ್ಪು. ಆಕೆ ಒಬ್ಬ ಮೂಲಭೂತವಾದಿ ಮತ್ತು ಸರ್ವಾಧಿಕಾರಿ. ಆಕೆಯ ಮೋದಿ ಮುಂಚಿನ ಸಂಚಿಕೆಗಳನ್ನು ಓದಿ ನೋಡಿ. ಹಲವಾರು ಬಾರಿ ಕೆದಕಿ ಕೆದಕಿ ಐ.ಟಿ. ಕ್ಷೇತ್ರದ ಉದ್ಯೋಗಿಗಳ ಮುಕ್ತ ಕಾಮ, ಲಿವಿಂಗ್ ಟುಗೆದರ್ ಸಂಬಂಧಗಳನ್ನು ಅವಹೇಳನ ಮಾಡಿ, ಅಮೇರಿಕಾದ ಗುಲಾಮರೆಂದು ಹೀಗಳೆದಿದ್ದಳು. ಯುಪಿಎ ಸರ್ಕಾರವಿದ್ದಾಗ ತನ್ನ ಪತ್ರಿಕೆಯಲ್ಲಿ ಸಂಸ್ಕೃತಿ ಪಾಠ ಮಾಡುತ್ತಿದ್ದ ಈಕೆ, ಮೋದಿ ಸರ್ಕಾರ ಬಂದೊಡನೆ ಮುಕ್ತತೆಯ ಪಾಠ ಶುರುವಿಟ್ಟುಕೊಂಡರು. ವಿಪರ್ಯಾಸವೆಂದರೆ ಯಾವ ಲಿವ್ ಇನ್ ಸಂಬಂಧಗಳನ್ನು ಮೂದಲಿಸಿದ್ದಳೋ ಅದೇ ಆಕೆಯ ಸ್ವಂತ ಸಹೋದರಿಯಿಂದ ಹಿಡಿದು ಆಕೆಯ ವೃತ್ತಿ ಬಂಧು ಶೋಭಾ ಡೇ, ಈಗ ಚಳುವಳಿಗೆ ಧುಮುಕಿರುವ ರಾಜರು ಕೂಡ ಲಿವ್ ಇನ್ ಸಂಬಂಧವನ್ನು ಹೊಂದಿದ್ದರು. ಬಹುಶ ಪತ್ರಿಕಾರಂಗ, ಮತ್ತು ಚಿತ್ರರಂಗಗಳು ಯಕ್ಷಲೋಕಗಳೆಂದು ಪರಿಗಣಿಸಿ ಈ ಕ್ಷೇತ್ರಗಳ ಲಿವ್ ಇನ್ ಸಂಬಂಧಗಳಿಗೆ ವಿನಾಯಿತಿ ಕೊಟ್ಟಿದ್ದರೆನೋ. ಯಾವ ಅಮೆರಿಕವನ್ನು ಬಂಡವಾಳಶಾಹಿ ಸರ್ವಾಧಿಕಾರಿ ಧೋರಣೆಯ ದೇಶವೆಂದಿದ್ದಾರೋ ಅದೇ ದೇಶಕ್ಕೆ ಈಕೆಯ ಮಾಜಿಪತಿ ವಲಸೆಗೊಂಡು ನೆಲೆಸಿದ್ದಾರೆನ್ನುವುದು ಇನ್ನೊಂದು ವಿಪರ್ಯಾಸ!

ಇನ್ನು"ನಾನು ಗೌರಿ" ಎಂದು ಪರಕಾಶ ರಾಜರ ಸುತ್ತಲಿರುವ ವಂದಿಮಾಗಧರಲ್ಲನೇಕರು ಗೌರಿಯ ಪತ್ರಿಕೆಯಲ್ಲಿ ಹಿಗ್ಗಾಮುಗ್ಗಾ ವಾಚಾಮಗೋಚರವಾಗಿ ಹಿಂದೆ ಮೂದಲಿಕೆಗೆ ಒಳಗಾಗಿದ್ದಾರೆ. ಉದಾಹರಣೆಗೆ, ಮಲೆನಾಡು ಮೂಲದ ಕವಿಯಿತ್ರಿಯೋರ್ವರನ್ನು, ಮತ್ತು ಅವರ ಗುರುವಿನಂತಿದ್ದ ಕನ್ನಡದ ಭರವಸೆಯ ಕವಿಯೋರ್ವರನ್ನು ಅತ್ಯಂತ ಕೀಳು ಭಾಷೆಯಲ್ಲಿ ತನ್ನ ಪತ್ರಿಕೆಯಲ್ಲಿ ವಿಷ ಕಾರಿಕೊಂಡಿದ್ದಳು ಈಕೆ. ಈಗ ಪರಕಾಶರ ಸುತ್ತಲಿರುವ ಅನೇಕರು, ಆಗ ಈ ಕವಿ/ಯಿತ್ರಿಯವರೊಂದಿಗೆ ಯಾವುದೊ ವೃತ್ತದಲ್ಲಿ ಪ್ರತಿಭಟನೆ ಮಾಡಿ ಗೌರಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಸೋಷಿಯಲ್ ಮೀಡಿಯಾ ತುಂಬಾ ಹೇಳಿಕೊಂಡಿದ್ದರು. ಇನ್ನು ಕೆಲವರು ತಾವು ಗೌರಿಯ ಅಭಿಪ್ರಾಯ ಕೋರಿ ಕೊಟ್ಟ ತಮ್ಮ ಬರಹವನ್ನು ಆಕೆ ಲಪಟಾಯಿಸಿದ್ದಾಳೆಂದೂ, ತಮ್ಮನ್ನು ಬಳಸಿಕೊಂಡು ಬಿಸಾಡಿದಳೆಂದೂ ಗೋಳಾಡಿದ್ದರು. ಈಗವರೆಲ್ಲ "ನಾನು ಗೌರಿ" ಎಂದು ಸೋಗು ಹಾಕುತ್ತಿರುವುದರ ಉದ್ದೇಶ?! ಒಟ್ಟಾರೆ ಪರಕಾಶರ ಬೆಂಬಲಿಗರ ಅಭಿಪ್ರಾಯದಲ್ಲಿ ಹತ್ಯಾಪೂರ್ವ ಗೌರಿ ಒಬ್ಬ ವಿಕ್ಷಿಪ್ತ ವ್ಯಕ್ತಿತ್ವದ ಹಠಮಾರಿಯಂತೆ ಕಂಡಿದ್ದರು. ಇರಲಿ, ಒಬ್ಬ ವ್ಯಕ್ತಿಯ ಎಲ್ಲ ಅವಗುಣಗಳನ್ನು ಆತ ತೀರಿಹೋದ ಕೂಡಲೇ ಸುಗುಣಗಳೆಂದು ಪುರಸ್ಕರಿಸಿ ಆ ವ್ಯಕ್ತಿಯನ್ನು ವಿಜೃಂಭಿಸುವುದು ಮಾನವೀಯ ಸಂಗತಿ! ಒಂದು ವರ್ಗದ ಜನ ಗೌರಿಯ ಸಾವನ್ನು ಸಂಭ್ರಮಿಸಿದ್ದು, ಮತ್ತೊಂದು ವರ್ಗದ ಜನ ಆಕೆಯ ಸಾವನ್ನು ವಿಜೃಂಭಿಸಿದ್ದು ಆಕೆಯ ವ್ಯಕ್ತಿತ್ವದಷ್ಟೇ ವಿಕ್ಷಿಪ್ತ! ಇನ್ನು ಗೌರಿ ಕೊಲೆ ನಡೆದಿರುವುದು ಕರ್ನಾಟಕದಲ್ಲಿ ಮತ್ತು ತನಿಖೆ ಮಾಡುತ್ತಿರುವುದು ಕರ್ನಾಟಕ ಗೃಹ ಇಲಾಖೆ. ಇದು ಸಿಬಿಐಗೆ ವಹಿಸಿದ್ದರೆ, ಮೋದಿಯನ್ನು ಈ ಕುರಿತಾಗಿ ವಿಚಾರಿಸುವುದು ಉಚಿತವೆನಿಸುತ್ತದೆ ಎನ್ನುವುದು ಸಾಮಾನ್ಯಜೀವಿಗಳ ಅಭಿಪ್ರಾಯ.

ಇನ್ನು ಪರಕಾಶರಾಜರ ಹೋರಾಟ ಕರ್ನಾಟಕದ ಆಚೆ ಕಾಣುತ್ತಿಲ್ಲ. ಹಾಗಾಗಿ ಇವರ ಹೋರಾಟವನ್ನು ರಾಜ್ಯಮಟ್ಟಕ್ಕೆ ಸೀಮಿತಗೊಳಿಸಿಕೊಂಡು, ಕರ್ನಾಟಕದ ಸಮಸ್ಯೆಗಳ ಪರಿಚಯ, ಮತ್ತದರ ಹೊಣೆಯನ್ನು ಸ್ವಲ್ಪ ವಿಶ್ಲೇಷಿಸೋಣ. ನನ್ನೂರು ದಾವಣಗೆರೆ. ಇಲ್ಲಿ ಇಂದಿರಾಗಾಂಧಿಯವರು ಪ್ರಧಾನಿಯಾಗಿದ್ದಾಗಿನಿಂದ ಇಂದಿನ ಮೋದಿ ಸರ್ಕಾರದಲ್ಲೂ ನೀರಿನ ಸಮಸ್ಯೆ, ದೂಳಿನ ಸಮಸ್ಯೆ, ಮತ್ತು ಹಂದಿಗಳ ಸಮಸ್ಯೆ. ಸದ್ಯಕ್ಕೆ ಹಂದಿ, ದೂಳಿನ ಸಮಸ್ಯೆಯನ್ನು ಬದಿಗಿರಿಸಿ ಮನುಷ್ಯನಿಗೆ ಮೂಲಭೂತವಾಗಿ ಬೇಕಾದ ನೀರಿನ ಕಡೆ ಗಮನ ಹರಿಸೋಣ. ಈಗಲೂ ಇಲ್ಲಿ ವರ್ಷದ ಸಾಕಷ್ಟು ತಿ0ಗಳುಗಳಲ್ಲಿ ನಲ್ಲಿ ನೀರು ಸರಬರಾಜಾಗುವುದು ಇಪ್ಪತ್ತು ದಿನಗಳಿಗೆ ಒಮ್ಮೆ. ಈ ನೀರಿನ ಸಮಸ್ಯೆ ಕರ್ನಾಟಕ ನಗರಾಭಿವೃದ್ಧಿ, ಜಲಮಂಡಳಿ ಇಲಾಖೆಗೆ ಬರುತ್ತದೆ. ಇನ್ನು ನನ್ನ ಜಮೀನಿರುವುದು ಹೊಸದುರ್ಗ ತಾಲ್ಲೂಕಿನಲ್ಲಿ. ಇಲ್ಲಿಯೂ ನೀರಿನ ಸಮಸ್ಯೆ. ಇಲ್ಲಿಯ ವೇದಾವತಿ ನದಿ ಹರಿಯುವುದನ್ನು ನಿಲ್ಲಿಸಿ ದಶಕಗಳೇ ಆಗಿವೆ. ಈ ನೀರಿನ ಸಮಸ್ಯೆ ನಿವಾರಣೆ ಕರ್ನಾಟಕ ನೀರಾವರಿ ಇಲಾಖೆಯ ಜವಾಬ್ದಾರಿ. ನನ್ನಲ್ಲಿ ಬೋರ್ವೆಲ್ಗಳಿವೆ, ಆದರೆ ಇದಕ್ಕೆ ಮೂರು ಫೇಸ್ ವಿದ್ಯುತ್ತಿನ ಸಮಸ್ಯೆ. ಇದು ಕರ್ನಾಟಕ ರಾಜ್ಯ ವಿದ್ಯುತ್ ಇಲಾಖೆಯ ಹೊಣೆ. ಇನ್ನು ರೈತರ ಆತ್ಮಹತ್ಯೆ, ಬೆಳೆನಾಶ, ಇತ್ಯಾದಿಗಳ ಜವಾಬ್ದಾರಿ ಕರ್ನಾಟಕ ಕೃಷಿ ಇಲಾಖೆಯದು. ಅದೇ ರೀತಿ ರಸ್ತೆಗಳಿಗೆ ಕರ್ನಾಟಕ ರಾಜ್ಯ ಹೆದ್ದಾರಿ ನಿಗಮ....!

ಇನ್ನು ರಾಜ್ಯದ ಹೆಮ್ಮೆ ಬೆಂಗಳೂರಿನ ಸಂಕೀರ್ಣ ಸಮಸ್ಯೆ! ಯಾವುದೇ ಉದ್ಯಮವಿದ್ದರೂ ಅದು ಬೆಂಗಳೂರಿಗೇ ಬೇಕೆಂದು ಬಯಸುವುದು ಕರ್ನಾಟಕ ಸರ್ಕಾರ. ಕರ್ನಾಟಕವನ್ನಾಳಿದ ಎಲ್ಲಾ ಸರ್ಕಾರಗಳೂ ಈ ಎಲ್ಲ ಉದ್ಯಮಗಳನ್ನು ಸಮಾನವಾಗಿ ಕರ್ನಾಟಕದಾದ್ಯಂತ ಹಂಚಿದ್ದರೆ, ಜನ ಬೆಂಗಳೂರಿಗೆ ವಲಸೆ ಹೋಗುತ್ತಿರಲಿಲ್ಲ ಮತ್ತು ಕರ್ನಾಟಕದೆಲ್ಲೆಡೆ ಪ್ರಗತಿ ಸಮಾನತೆಯನ್ನು ಸಾಧಿಸುತ್ತಿತ್ತು. ಇದಕ್ಕೆ ಇಲ್ಲಿಯವರೆಗೂ ಆಗಿ ಹೋದ ಎಲ್ಲಾ ಸರ್ಕಾರಗಳು ಹೊಣೆ. ಅದರಲ್ಲೂ ಬೆಂಗಳೂರೇ ಕರ್ನಾಟಕವೆಂದು ಬಗೆದು, ಸಿಂಗಾಪುರ ಮಾಡುತ್ತೇನೆಂದು ಮಂಗಾಪುರ ಮಾಡಿಟ್ಟ ಎಸ್ ಎಂ ಕೃಷ್ಣ ಅವರು! ಈಗ ಹೇಳಿ ಈ ಎಲ್ಲ ಸಮಸ್ಯೆಗಳಿಗೆ ನಾವು ಪ್ರಧಾನಿಯನ್ನು ಹೊಣೆ ಮಾಡಬೇಕೆ? ಹೌದೆಂದರೆ ಆಗಿ ಹೋದ ಎಲ್ಲ ಪ್ರಧಾನಿಗಳೂ ಈ ಸಮಸ್ಯೆಗಳಿಗೆ ಜವಾಬ್ದಾರರಲ್ಲವೇ? ಬಹುಶಃ ಪರಕಾಶರಾಜರ ಈ ವಿತಂಡ ಆಲೋಚನೆಯ ವಾಸನೆ ಹಿಡಿದೇ ಮೋದಿ ಮೊನ್ನೆ ಸಂಸತ್ತಿನಲ್ಲಿ ಛಾಚಾ ನೆಹರೂರನ್ನು ಜಾಡಿಸಿರಬೇಕು! ಇರಲಿ, ಸಾಮಾನ್ಯರಾದ ನಮಗೆ ಈ ಎಲ್ಲ ಸಮಸ್ಯೆಗಳಿಗೂ ನಮ್ಮ ಎಂಎಲ್ಎ ಗಳು ಕಾರಣವೆನಿಸುತ್ತದೆ ಮತ್ತು ಆಗಿಹೋದ ರಾಜ್ಯ ಸರ್ಕಾರಗಳು ಹೊಣೆಯಾಗುತ್ತವೆ. ಆದ್ದರಿಂದ ಪರಕಾಶರೇ, ನಿಮ್ಮ ಹೋರಾಟವನ್ನು ರಾಜ್ಯಕ್ಕೆ ಸೀಮಿತಗೊಳಿಸಿ. ಏಕೆಂದರೆ ಮನೆ ಗೆದ್ದು ಮಾರು ಗೆಲ್ಲು ಎನ್ನುತ್ತದೆ ಸಮಾಜ.

ನಿಮಗೆ ಮೋದಿಯನ್ನು ಪ್ರಶ್ನಿಸಲೇಬೇಕಿದ್ದರೆ ಆತ ಜವಾಬ್ದಾರಿಯಾದ ಹತ್ತು ಹಲವು ವಿಷಯಗಳಿವೆ. ಆ ವಿಷಯಗಳ ಬಗ್ಗೆ ಕಿಂಚಿತ್ತು ಪ್ರಶ್ನಿಸಿ.

ನೋಟ್ ಬ್ಯಾನ್ ನಂತರ ಜಮೆಯಾದ ಎಲ್ಲ ಹಣದ ಮೂಲಗಳ ಲೆಕ್ಕಪರಿಶೋಧನೆಯ ಪ್ರಗತಿಯೇನೆಂದು ಕೇಳಿ. ಆ ಕುರಿತು ಶ್ವೇತಪತ್ರ ಹೊರಡಿಸೆಂದು ಕೇಳಿ, ಜನತೆ ಬೆಂಬಲಿಸುತ್ತದೆ. ಆದರೆ ಈಗ ನಿಮ್ಮೊಟ್ಟಿಗೆ ಕೈಕೆಲಸದಲ್ಲಿ ತೊಡಗಿರುವವರು ಯಾರೂ ಇದನ್ನು ಬೆಂಬಲಿಸುವುದಿಲ್ಲ. ಏಕೆಂದರೆ ಅವರಿಗೂ ಈ ಪರಿಶೋಧನೆ ಬೇಕಿಲ್ಲ, ಅವರೆಲ್ಲ ಯಾರನ್ನೋ ಕಾಪಾಡಲು ನಿಮ್ಮ ಬೆನ್ನಿಗಿದ್ದಾರೆ ಅಷ್ಟೇ.

ಜಿಎಸ್ಟಿ ತೆರಿಗೆಯ ನ್ಯೂನತೆಗಳ ಪಟ್ಟಿ ಮಾಡಿ, ಅವು ಯಾವ ರೀತಿ ಸಮಾಜಕ್ಕೆ ಮಾರಕ ಎಂದು ಅರ್ಥ ಮಾಡಿಸಿ, ಪರಿಹಾರವಾಗಿ ಏನು ಮಾಡಬೇಕೆಂದು ಮೋದಿಗೆ ಒಂದು ಕರಡು ಯೋಜನೆ ಸಲ್ಲಿಸಿ. ಇದಕ್ಕೆ ನಿಮ್ಮೊಂದಿಗಿರುವ ಬುದ್ದಿಜೀವಿಗಳ ಸಹಾಯ ಪಡೆದುಕೊಳ್ಳಿ. ಜನ ಬೆಂಬಲಿಸುತ್ತಾರೆ.

ಟ್ರಿಪಲ್ ತಲಾಖ್ ನ್ಯೂನತೆಗಳಿದ್ದರೆ, ನಿಮ್ಮಲ್ಲಿರುವ ಪರಿಣಿತ ಬುದ್ಧಿಜೀವಿಗಳಿಂದ ಸರಿಪಡಿಸುವ ವಿಧಾನಗಳ ಪಟ್ಟಿ ಮಾಡಿ, ಸರಿಪಡಿಸಲು ಕೇಳಿ. ಜನ ಬೆಂಬಲಿಸುತ್ತಾರೆ.

ಹೊಸದಾಗಿ ಸೃಷ್ಟಿಯಾದ ರಾಜ್ಯ ಆಂಧ್ರ ಪ್ರದೇಶಕ್ಕೆ ಏಕೆ ಬಜೆಟ್ನಲ್ಲಿ ಹಣಕಾಸು ತೆಗೆದಿರಿಸಿಲ್ಲವೆಂದು ಕೇಳಿ, ಆಂಧ್ರದ ಜನ ನಿಮ್ಮನ್ನು ಬೆಂಬಲಿಸುತ್ತಾರೆ. ನಿಮ್ಮ ಮೇಲೆ ಆಂಧ್ರದ ಋಣ ಕರ್ನಾಟಕಕ್ಕಿಂತ ಹೆಚ್ಚಿದೆ.

ಮೋದಿಯ ಹೆಂಡತಿಯ ವಿಷಯ ಬಿಡಿ, ನಮ್ಮ ಕುಮಾರಸ್ವಾಮಿ, ವಿಶ್ವನಾಥ್, ಇಕ್ಬಾಲ್ ಅನ್ಸಾರಿ ಅಸಂವಿಧಾನಿಕ ದ್ವಿಪತ್ನಿತ್ವವನ್ನು ಹೊಂದಿ ಸಂವಿಧಾನವನ್ನು ಧಿಕ್ಕರಿಸಿದ್ದಾರೆ. ಹಾಗಾಗಿ ಇಂತಹ ಜನ ಹೇಗೆ ಸಂವಿಧಾನವನ್ನು ಪ್ರತಿನಿಧಿಸಬಲ್ಲರೆಂದು ಕೇಳಿ. ಜನ ಬೆಂಬಲಿಸುತ್ತಾರೆ.

ನದಿಜೋಡಣೆಯ ಪ್ರಗತಿಯ ಕುರಿತು ಪ್ರಶ್ನಿಸಿ, ಜನ ಬೆಂಬಲಿಸುತ್ತಾರೆ. ಕೇಳಬೇಕಾದ ಪ್ರಧಾನ ಪ್ರಶ್ನೆಗಳನ್ನು ಕೇಳಿ. ಸದ್ಯಕ್ಕೆ ನೀವು ಕೇಳುತ್ತಿರುವ ಎಲ್ಲ ಮುಖ್ಯ ಪ್ರಶ್ನೆಗಳೂ ಕರ್ನಾಟಕದ ಮುಖ್ಯಮಂತ್ರಿಗೆ ಅನ್ವಯಿಸುತ್ತವೆ . ಅಂದ ಹಾಗೆ ಮೋದಿ ಕರ್ನಾಟಕದ ಮುಖ್ಯಮಂತ್ರಿಯಲ್ಲ.

ಇನ್ನು ಕಾಂಗ್ರೆಸ್ಸಿಗೆ ಪರ್ಯಾಯವಾಗಿ ಮೋದಿ ಗೆದ್ದದ್ದು. ಕಾಂಗ್ರೆಸ್ ಆಡಳಿತದಿಂದ ಜನ ರೋಸಿಹೋಗಿದ್ದರು. ಈಗ ಮೋದಿಗೆ ಪರ್ಯಾಯವಾಗಿ ಮತ್ತೆ ಕಾಂಗ್ರೆಸ್ ಬೇಕಿಲ್ಲ, ಬೇಕಿರುವುದು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬಲ್ಲ ಸರ್ಕಾರ. ನಿಮ್ಮ ಹೋರಾಟ ಜನಪರ, ಸಮಾಜವಾದ, ಮೌಲ್ಯಾಧಾರಿತವಾಗಿದ್ದರೆ, ನೀವು ನಿಜ ಸಮಾಜವಾದಿಗಳ ನಡೆಯನ್ನು ಅನುಕರಿಸಿ. ನಿಮ್ಮ ಹಿಂದಿರುವ ಕೈಕೆಲಸದವರನ್ನಲ್ಲ. ಸದ್ಯಕ್ಕೆ ನೀವು ಯಾವುದನ್ನು ಸಮಾಜವಾದ ಎಂದುಕೊಂಡಿರುವಿರೋ ಅದು ಸಮಾಜವಾದವಲ್ಲ, ಮತ್ತು ಯಾವ ಜನ ನಿಮ್ಮ ಸುತ್ತಿರುವರೋ ಅವರ್ಯಾರು ಸಮಾಜವಾದಿಗಳಲ್ಲ. ಆ ಭಟ್ಟಂಗಿಗಳ ಕಮ್ಯುನಿಸ್ಟ್ ಸಿದ್ದಾಂತ ಹಳತಾಗಿದೆ. ಕಮ್ಯುನಿಸ್ಟ್ ಕ್ಯೂಬಾದ ಜನತೆ ನಿತ್ಯ ಸಮುದ್ರ ಹಾರಿ, ಹೇಗಾದರೂ ಮಾಡಿ ಬಂಡವಾಳಶಾಹಿ ಅಮೆರಿಕ ಸೇರಬೇಕೆಂದು ಸಾಯುತ್ತಿದ್ದಾರೆ. ಕಮ್ಯುನಿಸ್ಟ್ ರಷ್ಯಾದ ಬಹುತೇಕ ಹೈಸ್ಕೂಲ್ ಹುಡುಗಿಯರು ಕಡೆಯ ಪಕ್ಷ ವೇಶ್ಯೆಯರಾಗಿಯಾದರೂ ದೇಶದ ಹೊರಹೋಗಬಯಸುತ್ತಿದ್ದಾರೆ.

ಈ ಎಲ್ಲ ತಿಕ್ಕಲುತನಗಳ ಸ್ಪಷ್ಟ ಅರಿವಿದ್ದ ನಿಜ ಸಮಾಜವಾದಿ ಲಂಕೇಶರು ಹಾಗಾಗಿಯೇ ನಮ್ಮದೇ ನಾಡಿಗನುಗುಣವಾಗಿ ಕ್ರಾಂತಿರಂಗವನ್ನು ಸಂಘಟಿಸಿದ್ದರು. ತೇಜಸ್ವಿ, ನಂಜುಂಡಸ್ವಾಮಿಗಳು ರೈತಸಂಘವನ್ನು ಸಂಘಟಿಸಿದರು. ಆ ಚಿಂತಕರು ಲೋಹಿಯಾ ಚಿಂತನೆಯ ಕಿಡಿಯನ್ನು ರಾಜ್ಯಾದ್ಯಂತ ಹೊತ್ತಿಸಿದ್ದರು. ಅದು ನಿಮ್ಮ ಆದರ್ಶವಾಗಬೇಕು. ಅಂತಹ ಪ್ರಾಮಾಣಿಕ, ನೈಜ ಕಳಕಳಿಯ ಒಬ್ಬನೇ ಒಬ್ಬ ಬುದ್ದಿಜೀವಿ ನಿಮ್ಮ ಸಂಘದಲ್ಲಿ ಇದ್ದಾನೆಯೇ? ಈಗ ನಮಗೆ ಬೇಕಿರುವುದು ಎಲ್ಲಿಯದೋ ಅಲುಪೇಶ, ಜಿಗಣೇಶ, ಹರದಿಕ್ಕು ಎಂಬ ಐಲುಪೈಲುಗಳಂತೂ ಅಲ್ಲ. ನಿಮ್ಮ ಹೋರಾಟದ ಉದ್ದೇಶ ನೈಜವೂ, ಸತ್ಯವೂ ಆಗಿದ್ದರೆ ನಮ್ಮಲ್ಲೇ ದಶಕಗಳಿಂದ ಏಕಾಂಗಿಯಾಗಿ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿರುವ ಜನ ಸಂಗ್ರಾಮ ಪರಿಷತ್ತಿನ ಹಿರೇಮಠರಿದ್ದಾರೆ. ಕಳೆದ ದಶಕದಿಂದ ಮೌಲಾಧಾರಿತ ರಾಜಕಾರಣ/ಚುನಾವಣೆಗಳಿಗೆ ಹೋರಾಡುತ್ತಿರುವ ಶಾಂತಲಾ ದಾಮ್ಲೆ, ರವಿಕೃಷ್ಣಾರೆಡ್ಡಿ ಇದ್ದಾರೆ. ಅಂದ ಹಾಗೆ ಈ ಮೂವರೂ ವಿದೇಶದಲ್ಲಿ ಅತುತ್ತಮ ಉದ್ಯೋಗ, ಉದ್ದಿಮೆಗಳನ್ನು ತೊರೆದು ತಮ್ಮ ರಕ್ತ, ಮಣ್ಣಿಗೆ ಮರಳಿದ್ದಾರೆ. ಇಲ್ಲಿ ರಕ್ತ ಐಡೆಂಟಿಟಿ ಎಂದು, ಮಣ್ಣು ನೇಟಿವಿಟಿ ಎಂದು ನಿಮ್ಮಂಥ ಸೃಜನಾತ್ಮಕ ಕಲಾವಿದರಿಗೆ ಬಿಡಿಸಿ ಹೇಳುವ ಅವಶ್ಯಕತೆ ಇಲ್ಲವೆಂದುಕೊಂಡಿದ್ದೇನೆ. ಇದನ್ನೇ ನಿಮ್ಮ ಸಿನಿಮಾ ಭಾಷೆಯಲ್ಲಿ ಕರುಳಿನ ಕರೆ, ಮಣ್ಣಿನ ಋಣ ಎಂದೆಲ್ಲ ಕರೆಯುತ್ತಾರೆ. ಆದರೆ ಇವರಿಗೆ ನಿಮ್ಮ ಸಮಾನತೆಯ ಪ್ರತಿಪಾದಕರು ಅವಶ್ಯವೆಂದುಕೊಂಡಿರುವ ಅಲ್ಪಸಂಖ್ಯಾತ, ದಲಿತ, ದಮನಿತ ಎನ್ನುವ ಕ್ವಾಲಿಫಿಕೇಷನ್ ಇಲ್ಲ. ಆದರೆ ಸಮಾನತೆಯ ಸಮಾಜಕ್ಕೆ ಮನುಷ್ಯತ್ವವಿದ್ದರೆ ಸಾಕಲ್ಲವೇ?

ಕೇವಲ ಶತ್ರುವಿನ ಶತ್ರು ಮಿತ್ರನೆಂದು ನಿಮ್ಮ ಮಿತ್ರೆ ಅಲುಪೇಶ, ಜಿಗಣೇಶರನ್ನು ಮೆರೆಸಿದ್ದರೇ ಹೊರತು ತನ್ನದೇ ರಾಜ್ಯದ, ಭಾಷೆಯ, ಅಪಾರ ಪ್ರತಿಭಾನ್ವಿತರಾದ ರವಿ, ಶಾಂತಲಾರನ್ನು ಪರಿಗಣಿಸಿಯೇ ಇರಲಿಲ್ಲ. ಹಾಗೆಯೇ ಈ ಮೂವರ ಹೋರಾಟಕ್ಕೆ ಬೆಂಬಲವಾಗಿ ನಿಂತಿರುವ ನಿಮ್ಮ ಮಿತ್ರ ನಿಜ ಸಮಾಜವಾದಿ ಚಂದ್ರಕಾಂತ ವಡ್ಡು ಇದ್ದಾರೆ. ಇಂತಹವರು ನಿಮ್ಮೊಟ್ಟಿಗಿರಲಿ.

ಕರ್ನಾಟಕದಲ್ಲಿ ಪ್ರೊ. ಕಲ್ಬುರ್ಗಿಯವರಿಂದ ಹಿಡಿದು, ಗೌರಿಯಾದಿಯಾಗಿ ಅನೇಕ ಕೊಲೆಗಳು ನಡೆದಿವೆ. ಆ ಎಲ್ಲ ಕೊಲೆಗಳು, ದುರ್ಬಲ ರಾಜ್ಯ ಗೃಹ ಇಲಾಖೆಯ ಕಾರಣವೇ ಹೊರತು ಮೋದಿಯಲ್ಲ. ಈ ವಿಷಯಗಳ ಕುರಿತೂ ಮಾತನಾಡಿ. ನೀವೇ ತುಂಬಿದ ಸಭೆಯಲ್ಲಿ "ಬೆಳೆಸಿದರೆ ಈ ರೀತಿ ಮಗುವನ್ನು ಬೆಳೆಸಬೇಕು" ಎಂದು NA ಹ್ಯಾರಿಸ್ ಪುತ್ರನನ್ನ ಕೊಂಡಾಡಿದ ಕೆಲವೇ ದಿನಗಳಲ್ಲಿ ಆತನೇನು ಎಂದು ರಾಜ್ಯ ಕಂಡಿದೆ. ಯೋಚಿಸಿ, ದೇವನೂರರ ಸರ್ವೋದಯ ಪಕ್ಷವನ್ನೋ, ರೈತಸಂಘವನ್ನೋ ಬೆಂಬಲಿಸಿ ಎಂದರೆ ಜನ ಒಪ್ಪಿಯಾರು. ಆದರೆ ರಾಜ್ಯಸರ್ಕಾರದ ವಿಫಲತೆಗಳ ಮರೆಮಾಚಲು ಜನತೆಯ ಗಮನವನ್ನು ಎತ್ತಲೋ ಹರಿಸಲು ನೀವೊಂದು ದಾಳವಾಗಬೇಡಿ. ತಮ್ಮ ಬ್ರೈಟ್ ಲೈಟ್ ಬಾಯ್ಸ್ ಪ್ರಕಾಶದಲ್ಲಿರುವ ಪರಕಾಶ ರಾಜ, ಪ್ರಕಾಶ್ ರೈ ಆಗಲಿ ಎಂದು ಜನ ಬಯಸುತ್ತಾರೆ. ತೇಜಸ್ವಿಯವರ ಜುಗಾರಿಕ್ರಾಸ್ನಲ್ಲಿ ಬರುವ ಪ್ರೊ. ಗಂಗೂಲಿ ಥರದ ಜನರ ಮಾತು ಕೇಳಿ ಸುಖಾಸುಮ್ಮನೆ ಕಲ್ವರ್ಟ್ ಒಡೆದು ಮೈ ಎಲ್ಲ ಮಲ ಸಿಡಿಸಿಕೋಬೇಡಿ. ನಿಮ್ಮ ಪಟಾಲಂ ಮಾತು ಕೇಳಿ ಜನ ಬಾಣಲೆಯಿಂದ ಬೆಂಕಿಗೆ ಹಾರಲು ತಯಾರಿಲ್ಲ.