ಕನ್ನಡತನ ಓಲಾಟವೋ, ಒಡಲಾಳವೋ?

ಕನ್ನಡಕ್ಕಾಗಿ ಕೈಯೆತ್ತು ನಿನ್ನ ಕೈ
ಕಲ್ಪವೃಕ್ಷವಾಗುತ್ತದೆಂದನಾ ಕವಿ.
ಖನ್ನಡವೆನಿ ಕೈ ಎತ್ತಿ ಕರವ(ವೇ) ಹೇರಿ
ಕಲ್ಪಕವ ಕಂಡುಕೊಂಡ ಭವಿ!
ಕವಿಯ ನುಡಿಗಿಂತ, ಭವಿಯ ಉದರಾಗ್ನಿ
ದಳ್ಳುರಿಯಾಗಿ ಆ ಬಣ ಈ ಬಣ ಸೇರಿ
ಹಿರಿಹಿರಿದು ಸಜ್ಜನರ
ಕಲ್ಪವೃಕ್ಷದೊಂದಿಗೆ ಕನ್ನಡ
ಕಾಮಧೇನುವ ಹಿಂಡುವುದ ಕಂಡು
ಬಸವಳಿದ ಹಗೆದಿಬ್ಬೇಶ್ವರ!

ಕಳೆದ ತಿಂಗಳು ನಾನು ಮುಖ್ಯ ಸಲಹೆಗಾರನಾಗಿರುವ ನನ್ನ ಸ್ನೇಹಿತನ ಬೆಂಗಳೂರು ಆಫೀಸಿನಲ್ಲಿ ಕುಳಿತಿದ್ದೆ.

ಕಳೆದ ಇಪ್ಪತ್ತು ವರ್ಷಗಳಿಗೂ ಮೀರಿ ಅಮೆರಿಕದಲ್ಲಿ ನನ್ನೊಂದಿಗೆ ಕೆಲಸ ಮಾಡಿ, ಉದ್ಯಮಿಯಾಗಿರುವ ಈತನೊಂದಿಗೆ ನನ್ನದು ಗುರು-ಶಿಷ್ಯ ಸಂಬಂಧ. ಘಟಾನುಘಟಿ ಆಂಧ್ರ ರಾಜಕಾರಣಿಗಳ ಸಂಬಂಧವಿದ್ದರೂ ಅದೆಲ್ಲ ಬಿಟ್ಟು  ಗುರುವಾದ ನನ್ನನ್ನು ಸಂಪ್ರೀತಗೊಳಿಸಲು ಬೆಂಗಳೂರಿನಲ್ಲಿ ಕಚೇರಿ ತೆರೆದ ಪುಣ್ಯಾತ್ಮ ಈತ.

ನನ್ನ ಸಲಹೆಯ ಮೇರೆಗೆ ತನ್ನ ಭಾರತದ ಶಾಖೆಯನ್ನು  ಕಳೆದ ವರ್ಷ ಬೆಂಗಳೂರಿನಲ್ಲಿ ತೆರೆದು ನೂರು ಜನಕ್ಕೆ ಐ.ಟಿ. ಉದ್ಯೋಗವನ್ನು ನೀಡಿದ್ದಾನೆ. ಆ ನೂರು ಜನರಲ್ಲಿ ಶೇಕಡಾ 90 ಭಾಗ ಕನ್ನಡಿಗರು, ಅದರಲ್ಲೂ ಒಳನಾಡು ಕನ್ನಡಿಗರಿಗೆ ಉದ್ಯೋಗ ನೀಡಿರುವ ತೆಲುಗು ಅಬ್ಬಾಯಿ ಈತ! ಜಗಳೂರಿನ ಸಿಕಂದರ್, ಹರಿಹರದ ಪಂಚಾಕ್ಷರಿ, ದಾವಣಗೆರೆಯ ಸಿಂಧು, ಬೆಂಗಳೂರಿನ ಲತಾ, ಮೈಸೂರಿನ ಕುಮಾರ್...ಹೀಗೆ ಪಟ್ಟಿ ಬೆಳೆಯುತ್ತದೆ.

ಇರಲಿ, ಆತನೊಂದಿಗೆ ಮಾತನಾಡುತ್ತ ಕುಳಿತಾಗ ನಾಲ್ಕು ಜನ ಆತನ ಛೇಂಬರಿಗೆ ಅಕ್ಷರಶಃ ನುಗ್ಗಿದರು. ಕೆಳಗಡೆ ಇದ್ದ ಸೆಕ್ಯೂರಿಟಿ, ಮೇಲ್ಮಹಡಿಯ ರಿಸೆಪ್ಸನ್ ದಾಟಿ ಮುಖ್ಯಾಧಿಕಾರಿಯ ಕೊಠಡಿಗೆ ದಬಾಯಿಸಿಕೊಂಡು ಕನ್ನಡ ರಾಜ್ಯೋತ್ಸವಕ್ಕೆ ಚಂದಾ ವಸೂಲಿಗೆ ಕರವೇ ಕಾರ್ಯಕರ್ತರೆಂದು ಹೇಳಿಕೊಂಡು ಬಂದಿದ್ದರು. ಕನ್ನಡ ಬಾರದ ನನ್ನ ಸ್ನೇಹಿತ ನನ್ನನ್ನು ತೋರಿ ಇವರೇ ಮುಖ್ಯಾಧಿಕಾರಿ ಎಂದು ಕೈಚೆಲ್ಲಿದ.

ಈಗಷ್ಟೇ ಸಾಲ ಸೋಲ ಮಾಡಿ ಕಂಪೆನಿ ನಡೆಸುವ ಕಷ್ಟಗಳ ಗೋಳಿಟ್ಟು, ಕೈಯಲ್ಲಿದ್ದ ಸಮಾಜಮುಖಿ ಪತ್ರಿಕೆ, ಹುಯೆನ್ ತ್ಸಾಂಗ್ ಪುಸ್ತಕದ ಹಿಂದಿದ್ದ ನನ್ನ ಚಿತ್ರ ತೋರಿಸಿ "ನಾವು ಸಾಕಷ್ಟು ಕನ್ನಡ ಸೇವೆ ಮಾಡುತ್ತಿದ್ದೇವೆ. ಸದ್ಯಕ್ಕೆ ಲಾಭದ ಹಾದಿ ಹಿಡಿದು ಮುಂದೆ ಹಣ ಸಹಾಯ ಮಾಡುವಷ್ಟು ಶಕ್ತಿ ಬರಲೆಂದು ಹಾರೈಸಿ" ಎಂದು ಚಹಾ ಕುಡಿಸಿ ಸಾಗಹಾಕಿದೆ.

ಆ ಕ್ಷಣದಲ್ಲಿ ನನ್ನ ಮೇಲಿನ ಅಭಿಮಾನಕ್ಕೆ ಮಹಾ ರಿಸ್ಕ್ ತೆಗೆದುಕೊಂಡಿದ್ದ ನನ್ನ ಶಿಷ್ಯನ ಕಣ್ಣಿನಲ್ಲಿ ಆ ನಿರ್ಧಾರದ ಕುರಿತು ಒಂದು ಸಣ್ಣ ಅಳುಕು ಕಂಡಿದ್ದು ಮಾತ್ರ ಸತ್ಯ!

ಕನ್ನಡ ಉಳಿಕೆ, ಬಳಕೆ ವ್ಯವಸ್ಥೆಯ ಒಂದು ಭಾಗವಾಗಿ ಬರಬೇಕೇ ಹೊರತು ಈ ರೀತಿಯ ಊಳಿಗಶಾಹಿ ಸಂಘ ಸಂಸ್ಥೆಗಳಿಂದಲೇ?

ವ್ಯಾಲೆಂಟೈನ್ಸ್ ದಿನ ಪ್ರೇಮಿಗಳ ಹಿಡಿದು ಮದುವೆ ಮಾಡಿಸುವ, ಮತ್ತದನ್ನು ವಿರೋಧಿಸಲು ಹ್ಯಾಲೋವೀನ್ ರೀತಿ ಚುಂಬಿಸಿ ನೈತಿಕ ಪೊಲೀಸುಗಿರಿ ಪ್ರತಿಭಟಿಸುವ, ಸಾವಿರ ಗುಡಿಗಳಿದ್ದರೂ ಆಯ್ದ ಗುಡಿಗೆ ಹೆಂಗಸರು ಹೋಗುವುದಕ್ಕೆ ಕ್ಯಾತೆ ಎತ್ತಿ ಕೋರ್ಟಿಗೆ ಹೋಗುವ, ಯಾರೋ ಯಾವುದೋ ಕಲ್ಲಿನ ಮೇಲೆ ಉಚ್ಚೆ ಹುಯ್ದುಕೊಂಡಿದ್ದಕ್ಕೆ ಹೇತುಕೊಳ್ಳುವ, ಊಟಕ್ಕೆ ಕರೆದದ್ದನ್ನು ಕಾಮಪೀಡನೆಯೆಂದು ಗೋಳಿಟ್ಟು "ಆಯ್ದ" ನಟಿಯ ಮೀಟೂ ಚಳುವಳಿಗೆ ಮಾತ್ರ ಬೆಂಬಲಿಸುವ, ಹುಡುಕಿ ಹುಡುಕಿ ಕ್ಷುಲ್ಲಕ ಸಂಗತಿಗಳಿಗೆ ರಾಷ್ಟ್ರವ್ಯಾಪಿ ಚಳುವಳಿ ನಡೆಸುವ ಚಿಂತಕರು, ಸಮಾಜ ಸುಧಾರಕರು, ನೈತಿಕಗಿರಿಕಾರರಿಂದ ಹಿಡಿದು, ಕನ್ನಡ ನಾಡು ನುಡಿಯೆಂದು ಕ್ರಿಯಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಪತ್ರಿಕೆ, ಬಳಗ, ಸಿದ್ದಾಂತಿಗಳಿಗೆ ಈ ರೀತಿಯ ಕನ್ನಡಕ್ಕಾಗಿ "ಕೈಯೆತ್ತುವ" ಭಾಷಾ ಪೊಲೀಸುಗಿರಿ ಸಹ್ಯವಾಗಿರುವುದು ಏಕೆ?!

ಹಿಂದಿ ಹೇರಿಕೆ ಎಂದು ಬಡಬಡಿಸುವ ಅದೆಷ್ಟೋ ಕನ್ನಡ, ಪ್ರಾದೇಶಿಕತೆಯ ಓಲಾಟಗಾರರು ತಮ್ಮ ಜಾತಿಸೂಚಕವನ್ನು ಪ್ರಗತಿಯ ಸಂಕೇತವೆಂಬ ಲೋಲುಪ್ತತೆಯಲ್ಲಿ ಯಾದವ, ಮೌರ್ಯ ಎಂಬ ಹಿಂದಿ ಹೇರಿಕೆಯನ್ನು ಹೇರಿಕೊಂಡು "ಸುಪೀರಿಯಾರಿಟಿ ಕಾಂಪ್ಲೆಕ್ಸ್"ನಲ್ಲಿ ತೇಲುತ್ತ ಅದ್ಯಾವ ಕನ್ನಡತೆಯನ್ನು ಪ್ರತಿಪಾದಿಸುತ್ತಿದ್ದಾರೆ?

ಈ ಹುಚ್ಚು ಸದ್ಯದಲ್ಲೇ ಕಾರ್ಪೆಂಟರ್, ಶೆಪರ್ಡ್, ಸ್ಮಿತ್, ಶುಮಾಕರ್, ಕೌಬಾಯ್ ಎಂದು ಬಿಳಿಯತನದೊಂದಿಗೆ ಶ್ರೇಣೀಕರಿಸಿಕೊಂಡು ಹಮ್ಮಿನ ಬಿಮ್ಮಿನಿಂದ ಬೀಗುವ ಹಾದಿಯಲ್ಲಿದೆ.

ತಾವು "ಮೆಚ್ಚಿದ" ಸಿದ್ಧಾಂತ, ಪಂಥ, ಧರ್ಮದ ಕುರಿತಾಗಿ ಆಧುನಿಕ ಮಾನವನ ಮನದಾಳದಲ್ಲೆಲ್ಲೋ ಸುಪ್ತವಾಗಿರುವ ಭಾವನೆಯೇ ಸಿದ್ಧಾಂತವಾದ/ಪಂಥೀಯತೆ/ಜಾತೀಯತೆ/ಧಾರ್ಮಿಕ ಉಗ್ರವಾದಗಳನ್ನು ಪೋಷಿಸುತ್ತಿರುವಂತೆಯೇ, ಭಾಷಾಪ್ರೇಮಿಗಳ ಮನದಾಳದಲ್ಲಿ ಬೇರೂರಿರುವ ಆ ಒಂದು ಪಕ್ಷಪಾತೀ ಊಳಿಗಮಾನ್ಯ ಕ್ರೌರ್ಯದ ಭಾವ, ಈ ಭಾಷಾ ಉಗ್ರವಾದೀ ಸಂಘಟನೆಗಳನ್ನು ಪೋಷಿಸುತ್ತಿರುವುದು ಕನ್ನಡದಷ್ಟೇ ಸತ್ಯ.

#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ
#ಕರ್ನಾಟಕವೆಂಬೋಕಮಂಗಿಪುರದಲ್ಲಿ

ಮೀಟೂವಿನ ಆಚೆ ದಾಟು

ಲಂಕೇಶ್ ಆರತಿಯನ್ನು ಹಾಕಿಕೊಂಡು ಸಿನೆಮಾ ಮಾಡುತ್ತಿದ್ದಾಗ, ಪ್ರಣಯ ಸನ್ನಿವೇಶವೊಂದರಲ್ಲಿ ಆರತಿ "ಕಣ್ಣಲ್ಲೇ ಎಲ್ಲಾ ಕಾಮನೆ/ಭಾವನೆಗಳನ್ನು ತೋರಿಸುತ್ತೇನೆ" ಎಂದಳಂತೆ.

ಆಗ ಕಣ್ಣಲ್ಲೇ ಎಲ್ಲಾ ತೋರ್ಸೋದಾದ್ರೆ ಬೇರೇ ಅಂಗಾಗಗಳು ಏಕಿರಬೇಕು ಎಂದು ತಪರಾಕಿ ತಟ್ಟಿ ತಮಗೆ ಬೇಕಾದಂತೆ ಲಂಕೇಶ್ ಚಿತ್ರೀಕರಿಸಿಕೊಂಡರಂತೆ! ಇದು ಲಂಕೇಶರ ಒಂದು "ಕೋಡು", "ಕ್ರಿಯಾಶೀಲತೆ", "ಸೃಜನಶೀಲತೆ" ಎಂಬಂತೆ ಹೆಮ್ಮೆಯಿಂದ ಅವರ ಭಕ್ತರನೇಕರು ಬರೆದಿದ್ದನ್ನು ಸಾಕಷ್ಟು ಸಾರಿ ಓದಿದ್ದೇವೆ.

ಈಗ ಆ ಲಂಕೇಶರ ನಿರ್ದೇಶನದ, ಸಾಮಾಜಿಕ ಕಳಕಳಿಯ ಪರಂಪರೆಯನ್ನು (ವ್ಯಕ್ತಿತ್ವ, ವೈಯಕ್ತಿಕ ಜೀವನವಲ್ಲದ) ಹೊತ್ತಿರುವ ಪುತ್ರಿ, ಮತ್ತು ಲಂಕೇಶರನ್ನು ಆರಾಧಿಸುವ ಅಭಿಮಾನಿಗಳ ಪಡೆಯಿರುವ FIRE ಸಂಸ್ಥೆ, ನಿಜಕ್ಕೂ MeToo ಪರ ನಿಷ್ಪಕ್ಷಪಾತವಾಗಿರುತ್ತದೆಯೇ?

ಆತ ಒಂದು ಕ್ರಿಯಾಶೀಲ ಹೆಣ್ಣಿಗೆ ಅಂಗಾಂಗ ತೋರೆಂದುದು ಕ್ರಿಯಾತ್ಮಕವೂ, ಮತ್ತೊಬ್ಬ ಗಂಡು ಒಂದು ಹೆಣ್ಣನ್ನು ಊಟಕ್ಕೆ (ಆಟಕ್ಕೇ ಎಂದುಕೊಳ್ಳಿ) ಯಾವುದೇ ವೃತ್ತಿ ಸಂಬಂಧೀ ನಿಬಂಧನೆಗಳ ಒತ್ತಡವಿಲ್ಲದೆ ಕರೆದುದು ಕಾಮಪೀಡನೆ ಎಂದು ಪ್ರತಿಪಾದಿಸುವುದೇ ಹಾಸ್ಯಾಸ್ಪದ. ಹಾಗಿದ್ದರೆ ಸಂಗಾತಿಯನ್ನು ಬಯಸಿ ನಡೆಸುವ ಎಲ್ಲಾ ಸಾಮಾಜಿಕ ಪ್ರಕ್ರಿಯೆಗಳಾದ ವಧುವರಾನ್ವೇಷಣೆ, ಡೇಟಿಂಗ್, ಇತ್ಯಾದಿ ಕೂಡ ಕಾಮಪೀಡನೆಯೇ?!

ಡೇಟಿಂಗಿಗೆಂದೇ ಹೊರಕ್ಕೆ ಕರೆಯುವುದು ಕಾಮಪೀಡನೆಯಾಗುವುದಿಲ್ಲ. ಭಾರತೀಯ ಸಿನೆಮಾ ಉದ್ಯಮದಲ್ಲಿ ನಿಜ ಕಾಮಪೀಡನೆಯ ಪ್ರಕರಣಗಳು ಸಾರ್ವಭೌಮನಿಂದ ಹಿಡಿದು ಕ್ಲ್ಯಾಪ್ಬಾಯ್ಸ್ ವರೆಗೆ ಅಗಣಿತವಾಗಿವೆ. ಇದ್ದುದರಲ್ಲಿ ಸಂಗೀತಾ ಭಟ್ ಎತ್ತಿರುವ ದೂರು ಸತ್ಯಕ್ಕೆ ಸಮಂಜಸವಾಗಿದೆ. ಅಂತಹ ಪ್ರಕರಣಗಳನ್ನು ಬೆಳೆಕಿಗೆ ತರುವತ್ತ FIRE ಕಾರ್ಯೋನ್ಮುಖವಾಗಲಿ.

"Asking Out" doesn't constitute as "Sexual Harassment". You need a stronger case than mere "he asked me out"! The Indian film industry is full of such real strong cases. Hope FIRE would work to bring the real cases out.

#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

FIRE ಸಂಸ್ಥೆಯ ಸಹಾಯ ಕೋರಿ ಸಂಗೀತಾ ಭಟ್ ಬರದಿದ್ದುದರಿಂದ ಸಂಸ್ಥೆ ಆಕೆಗೆ ಸಹಾಯ ಮಾಡುತ್ತಿಲ್ಲವಂತೆ. ಸಂಸ್ಥೆಗೆ ಅದರದೇ ಆದ "ಚೌಕಟ್ಟು" ಇದೆಯಂತೆ. ಹಾಗೆಂದು ಸಂಸ್ಥೆಯ ಪರಿಚಯವಿರುವ ಸ್ನೇಹಿತ ನಿತೇಶ್ ಕುಂಟಾಡಿ Kuntady Nithesh ತಿಳಿಸಿದ್ದಾರೆ.

ಶೋಷಿತ ಮಹಿಳೆ ತನ್ನ ಬಾಗಿಲಿಗೆ ಬಂದು ಸಹಾಯ ಕೇಳಲಿ ಎಂಬ ನಿಯಮವೇ ಊಳಿಗಮಾನ್ಯ ಪದ್ದತಿ!

ಪದೇ ಪದೇ ಊಟಕ್ಕೆ ಕರೆದನೆಂಬ ಒಬ್ಬ ನಟಿಯ ದೂರಿಗೆ ಅಲ್ಲೋಲಕಲ್ಲೋಲ ಮಾಡುತ್ತಿರುವ ಚಳುವಳಿ ವೀರರು, ಬಿಡಿಬಿಡಿಯಾಗಿ ಪೀಡನೆಯನ್ನು ವರ್ಣಿಸಿರುವ ಸಂಗೀತಾ ಭಟ್ ರನ್ನೇಕೆ ಮೂಲೆಯಲ್ಲಿರಿಸಿದ್ದಾರೆ? ಆಕೆಗೆ ಸಾಂತ್ವನ, ಧೈರ್ಯ ನೀಡಿ ಆಕೆಯ ಪೀಡನೆಗೆ ಕಾರಣರಾದವರ ವಿರುದ್ಧ ಕ್ರಮ ಜರುಗಿಸಲು ಸಹಾಯ ಮಾಡುತ್ತಿಲ್ಲವೇಕೆ? ಆಕೆ ಕನ್ನಡ ಚಿತ್ರರಂಗದ ಕುರಿತು ಪ್ರಪ್ರಥಮವಾಗಿ ದೂರಿದ್ದಾಳೆಂದು ಹೆಸರಿಸಿದ್ದು ಬಿಟ್ಟರೆ ಲಕ್ಷ್ಯವೆಲ್ಲಾ ಸೋಲುವ ಕುದುರೆಯ ಮೇಲಿದೆ.

ಒಬ್ಬ ಸ್ನೇಹಿತ ಯಾ ಸಹೋದ್ಯೋಗಿ ಪದೇ ಪದೇ ಊಟಕ್ಕೆ ಆಟದ ಉದ್ದೇಶದಿಂದಲೇ ಕರೆದರೆ ಅದು ವೃತ್ತಿರಂಗದ ಕಾಮಪೀಡನೆ ಆಗುವುದಿಲ್ಲ. ಆತ ಅದರೊಂದಿಗೆ ವೃತ್ತಿಗೆ ಸಂಬಂಧಿಸಿದ ಯಾವುದಾದರೂ ಆಮಿಷವನ್ನೊಡ್ಡಿದಾಗ ಮಾತ್ರ ಅದು ಕಾಮಪೀಡಿತ. ಇಲ್ಲದಿದ್ದರೆ ಅದು ಇಬ್ಬರು ವಯಸ್ಕರ ನಡುವಿನ ಮಾತುಕತೆ ಮಾತ್ರ, ಇದು ಸಾಮಾನ್ಯ ಜ್ಞಾನ. 

ಆಯ್ದ ಆಯ್ಕೆಯ ಶೋಷಿತರನ್ನು ಮಾತ್ರ (ಮ)ಮೆರೆಸುವ ಇಂತಹ ಚಳುವಳಿ, ಬುದ್ಧಿಜೀವಿ, ನಿವೇದನೆ, ಸಂಸ್ಥೆಗಳು ಸ್ವಾಸ್ಥ್ಯ ಸಮಾಜವನ್ನು ನಿರ್ಮಾಣ ಮಾಡಿಯಾವೆಯೇ?

ಯಾವುದೇ ನಿವೇದನೆಗಳನ್ನು ಸಹಿ ಹಾಕಿ ಹಂಚಿಕೊಳ್ಳುವ ಮುಂಚೆ ಸಂಚಿನ ಅರಿವಿರಲಿ.

#ಸೂಚನೆ: ನನ್ನ ಹಿಂದಿನ ಪೋಸ್ಟಿನಲ್ಲಿ ಉದ್ದೇಶಪೂರ್ವಕವಾಗಿ ಲಂಕೇಶರನ್ನು ಎಳೆದು ತಂದಿದ್ದೆ. ಏಕೆಂದರೆ ಲಂಕೇಶ್ ಆರತಿಗೆ ಹಾಗೆ ಹೇಳಿದ್ದರೋ ಇಲ್ಲವೋ ಅವರ ಭಕ್ತರು ಮಾತ್ರ ಆ ಕುರಿತಾಗಿ ಅವರು ತೀರಿಕೊಂಡ ನಂತರ ಬರೆದದ್ದೇ ಬರೆದದ್ದು!

ಲಂಕೇಶರ ಪರಂಪರೆ(?)ಯನ್ನು ಗುತ್ತಿಗೆ ಹಿಡಿದಿರುವ ಒಂದು ಬಹುದೊಡ್ಡ ಗುಂಪು ಅವರ ಅಮಾಯಕ ಮಗಳನ್ನು ಹುಯಿಲೆಬ್ಬಿಸಿ ದಿಕ್ಕೆಡಿಸಿ ಆದ ಅನಾಹುತ ದೇಶ ನೋಡಿದೆ.

ಈಗ ಅದೇ ಗುಂಪು, ದೇಶದ ಎಲ್ಲ ವಿವಾದಗಳಲ್ಲಿ ತಮಗೆ ಮೈಲೇಜ್ ಕೊಡುವ, ಸಂಗತಿಗಳನ್ನು ಮಾತ್ರ ಆಯ್ದುಕೊಂಡು (ವೀರಶೈವ ಲಿಂಗಾಯತ, ಅಯ್ಯಪ್ಪ, ಮೀಟೂ, ಇತ್ಯಾದಿ)
ತಮ್ಮ ವಿರೋಧಿಗಳಿಗೆ "F" ಮಾಡುವ ಏಕಮಾತ್ರ ಉದ್ದೇಶಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಜನತೆ ಆ ಉದ್ದೇಶಕ್ಕೆ ವ್ಯಾಸಲಿನ್ ಆಗಬಾರದು.

#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ