ಲಾಲಿಪಾಪ್ ಲಾಲಾಲ್ಯಾಂಡ್

 ಫೇಸ್ಬುಕ್ ಸ್ನೇಹಿತರಾದ ರೂಪಾ ರಾಜೀವ್ ಅವರು ರಾಜೇಂದ್ರ ಪ್ರಸಾದ್ ಎನ್ನುವವರು ಓರ್ವ ದಲಿತರನ್ನು ತಮ್ಮ ಮನೆಗೆ ಕರೆದು ಊಟ ಹಾಕಿ ಸಮಾನತೆಯನ್ನು ಮೆರೆದೆವೆಂದೋ, ತಮ್ಮ ಶೋಷಣೆಗೆ ಪಶ್ಚಾತ್ತಾಪ ಪಟ್ಟೆನೆಂದೋ ಸ್ಟೇಟಸ್ ಹಾಕಿಕೊಂಡಿದ್ದಾರೆ. ಇದು  ಮೇಲ್ವರ್ಗದವರಲ್ಲಿ ಮೇಲರಿಮೆಯನ್ನೋ ಶೋಷಿತರಲ್ಲಿ ಕೃತಜ್ಞ ಭಾವನೆಯನ್ನು ಮೂಡಿಸುವುದಲ್ಲದೆ ಸಮಾನತೆಯನ್ನಲ್ಲ. ಜಾತ್ಯಾತೀತ ಎಂದರೆ ಜಾತಿಪ್ರಜ್ಞೆಯೇ 

ಇಲ್ಲದಿರುವುದು. ಅದು ಮಕ್ಕಳಿಂದ ಮಾತ್ರ ಸಾಧ್ಯ ಎಂದಿದ್ದಾರೆ. 


ಖಂಡಿತ ರೂಪಾ ಅವರ ಅಭಿಪ್ರಾಯ ಒಪ್ಪುವಂತಹದ್ದು!


ಇಂತಹ ಬಾಲಿಶ ಭಾವೋತ್ಕರ್ಷದ ಕ್ರಿಯೆಗಳು ಜಾತಿ ಜಾಗೃತರಿಂದ ಸಮಾನತೆಯನ್ನು ತರುವವೇ? ಇಂತಹ ಭಾವೋತ್ಕರ್ಷಗಳು ಸಾಗರೋಪಾದಿಯಲ್ಲಿ ಬಂದು ಹೋದದ್ದು ಖ್ಯಾತ ಟ್ಯಾಬ್ಲಾಯ್ಡ್ ಪತ್ರಿಕೆಯ ಕತೆ, ಕವನಗಳ ಒಂದು ಅಮಲಿನ ಎಂಬತ್ತರ ಘಟ್ಟದಲ್ಲಿ! ಆ ಅಮಲಿನಲ್ಲಿ ಇದು ಆದರ್ಶದ ಪರಮೋಚ್ಚ ನೀತಿ ಎಂದುಕೊಂಡವರನ್ನು ಕಾಪಿ ಕ್ಯಾಟ್ ಮಾಡುವ ಫ್ಯಾಷನ್ ಆಗಿತ್ತೇ ಹೊರತು ಜೀವಂತಿಕೆ, ವಾಸ್ತವಿಕತೆ, ಸ್ವಂತಿಕೆ ಏನೂ ಅಲ್ಲ. ಅದು ಬರೀ ವಾಸ್ತವವಿಲ್ಲದ, ಜೀವಂ ಇಲ್ಲದ ಸ್ವಂ ಇಲ್ಲದ್ದು ಮಾತ್ರ!


ಖ್ಯಾತ ಕಥೆಗಾರರಾದ ಬೆಸಗರಹಳ್ಳಿ ರಾಮಣ್ಣ ಅವರು ಆಸ್ಪತ್ರೆಯಲ್ಲಿದ್ದಾಗ ಎಲ್. ಹನುಮಂತಯ್ಯನವರು ರಾಮಣ್ಣನವರನ್ನು ನೋಡಲು ಹೋಗಿದ್ದರು. ಆಗ ರಾಮಣ್ಣನವರು ಒಂದು ಲೋಟ ಹಾಲು ತರಿಸಿ "ಅಯ್ಯೋ ದಲಿತರನ್ನು ನಾವು ತುಂಬಾ ಶೋಷಿಸಿದ್ದೇವೆ. ಹಾಗಾಗಿ ನೀನು ಅರ್ಧ ಹಾಲು ಕುಡಿದು ಆ ಕಪ್ ಕೊಡು. ಉಳಿದ ನಿನ್ನ ಎಂಜಲಿನ ಅರ್ಧ ಹಾಲು ನಾನು ಕುಡಿಯುವೆ" ಎಂದು ಎಂಜಲು ಹಾಲು ಕುಡಿದಿದ್ದರಂತೆ. ಇದನ್ನು ಎಲ್. ಹನುಮಂತಯ್ಯನವರು ಸಾಕಷ್ಟು ಸಾರಿ ಭಾಷಣದಲ್ಲಿ, ಲೇಖನಗಳಲ್ಲಿ ಉಲ್ಲೇಖಿಸಿದ್ದಾರೆ. ಇಂತಹ ಭಾವೋತ್ಕರ್ಷಗಳು ಕವಿ, ಕತೆಗಾರ, ಸಾಹಿತಿಗಳ ಕೃತಿಗಳಿಗೆ ಸೃಜನಶೀಲ ಆಯಾಮವನ್ನು ತಂದುಕೊಡುವ ನೋವಿನ ವ್ಯಾಕುಲತೆಗಳೆನಿಸುವವೇ ಹೊರತು ಸಮಾಜದಲ್ಲಿ ಏನಾದರೂ ಗಮನಾರ್ಹ ಬದಲಾವಣೆಗಳನ್ನು ವಾಸ್ತವದಲ್ಲಿ ತಂದಿವೆಯೇ? ಆದರೆ ಇಂತಹ ಭಾವೋತ್ಕರ್ಷಗಳು ಭ್ರಾಮಕ ಯುವ ಶಿಷ್ಯರಿಗೆ ಕ್ರಾಂತಿಯೆನಿಸಿ ಅನುಕರಣೆಗೆ ಪ್ರೇರೇಪಿಸುತ್ತವೆ. ಅದರಲ್ಲೂ ಕೆಲ ಜಾತಿ ಜಾಗೃತ ಪ್ರಗತಿಪರ ಘೋಷಿತ ಯುವಜನರಿಗೆ ತಮ್ಮ ಜಾತಿಯ ಆದರ್ಶ ಪುರುಷರ ಕ್ರಿಯೆಗಳು.......ಬೈಬಲ್, ಕುರಾನ್, ಭಗವದ್ಗೀತೆ, ಮಾವೋ ನ ಕೆಂಪು ಪುಸ್ತಕ ಎನಿಸಿಬಿಡುತ್ತವೆ!  ಆದರೆ ವಾಸ್ತವವಾಗಿ ಇದು ಕ್ರಾಂತಿಯೇ? ಇದರಿಂದ ಆದ ಅಥವಾ ಸೃಜಿಸಿದ ಸಮಾನತೆ ಏನು? 


ಇದೆ ರೀತಿ ಪೇಜಾವರ ಶ್ರೀಗಳು ದಲಿತರ ಮನೆಗೆ ಭೇಟಿ ಕೊಟ್ಟದ್ದು, ಮೈಸೂರಿನ ಬ್ರಾಹ್ಮಣರು ಮಾದಾರ ಚೆನ್ನಯ್ಯ ಶ್ರೀಗಳ ಪಾದಪೂಜೆ ಮಾಡಿದ್ದು. ಕೇವಲ ಕೇವಲ ಭಾವೋತ್ಕರ್ಷಗಳು ಮಾತ್ರ!


ಮಾದಾರ ಚನ್ನಯ್ಯನ ಬಾಯ ತಾಂಬೂಲವ ಮೆಲುವೆ.

ಡೋಹರ ಕಕ್ಕಯ್ಯನ ಒಕ್ಕುಮಿಕ್ಕುದನುಂಬೆ.

ಚೋಳಿಯಕ್ಕನ ಊಳಿಗದವನಾಗುವೆ.

ಶ್ವಪಚಯ್ಯನ ಆಳಾಗಿರುವೆ.

ಇನ್ನುಳಿದ ಸಕಲಗಣಂಗಳ ತೊತ್ತು ಬಂಟ ಲೆಂಕನಾಗಿ

ರಾಜಾಂಗಣ ಬಳಿಯುವೆನಯ್ಯಾ ಅಖಂಡೇಶ್ವರಾ.

- ಷಣ್ಮುಖಸ್ವಾಮಿ

(ಸಮಗ್ರ ವಚನ ಸಂಪುಟ: 14   ವಚನದ ಸಂಖ್ಯೆ: 643)


ಹನ್ನೆರಡನೇ ಶತಮಾನದ ವಚನಕಾರರು ಸಹ ಇಂತಹುದೇ ಭಾವೋತ್ಕರ್ಷದ ಹೋರಾಟ ಮಾಡಿ ದಾರುಣವಾಗಿ ಸೋತಿದ್ದಾರೆ. ಹಾಗಿದ್ದೂ ವಾಸ್ತವಿಕ, ಆಡಳಿತಾತ್ಮಕ ಪರಿಹಾರ ಕಂಡುಹಿಡಿಯದಿದ್ದರೆ ಕತೆಗಳು ಕವನಗಳು ಬಹುಮಾನ ಪಡೆಯುವವಷ್ಟೇ ಏನೋ!


ಮದಿಸದೆ ಮಥಿಸಿದ ಜಾಗೃತ ಮನಸ್ಸುಗಳೇ ಹೇಳಬೇಕು.


ವಿಪರ್ಯಾಸವೆಂಬಂತೆ ಪ್ರಗತಿಪರರೋರ್ವರು

ಭೂತಕಾಲದ ಕೆಡುಕುಗಳನ್ನು ಮರೆತು ಒಳಿತನ್ನು ಮಾತ್ರ ಬೋಧಿಸಬೇಕು, ಪರಿಗಣಿಸಬೇಕು, ಪ್ರಚಾರಕೊಡಬೇಕು ಎಂದು ಲಾಲಾಲ್ಯಾಂಡ್ ಮಾತುಗಳನ್ನು ನೆನ್ನೆಯಷ್ಟೇ ಹೇಳಿದ್ದಾರೆ!!! ಇತಿಹಾಸವನ್ನು ಅರಿಯದೆ ಇತಿಹಾಸವನ್ನು ಸೃಷ್ಟಿಸಲಾಗದು ಎಂಬ ಅಂಬೇಡ್ಕರ್ ಮಾತನ್ನು ಹೇಳುತ್ತಲೇ ಇಂತಹ ದ್ವಂದ್ವವನ್ನು ಈ ಪ್ರಗತಿಪರ ಪ್ರೊಫೆಸರರು ಹೇಳಿರುವುದು.........!


ಇರಲಿ, ಈ ಲಾಲಿಪಾಪ್ ಆನ್ನು ಜನ ಚೀಪುತ್ತಿದ್ದಾರೆ. ಒಂದೆಡೆ ಪ್ರಧಾನಿಯ ಲಾಲಿಪಾಪ್, ಇನ್ನೊಂದೆಡೆ ವಿರೋಧ ಪಕ್ಷದ ಲಾಲಿಪಾಪ್, ಮಗದೊಂದೆಡೆ ಪ್ರಗತಿಪರರ ರಸಸ್ವಾದದ ಲಾಲಿಪಾಪ್.....


ಭಾರತ ವಿಶ್ವದ ಏಕಮಾತ್ರ ಲಾಲಿಪಾಪ್ ಲಾಲಾಲ್ಯಾಂಡ್!


#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ

ಚೇಲಾಗಿರಿಯ ಪಠ್ಯ ಸಮಿತಿ

 ಆಗಷ್ಟೇ ಬೆಂಗಳೂರಿನಲ್ಲಿ ನಾನು ಮತ್ತು ನನ್ನ ಸ್ನೇಹಿತ ಸೇರಿ ಕಂಪ್ಯೂಟರ್ ಬಿಡಿ ಭಾಗಗಳನ್ನು SJP ರಸ್ತೆಯ ಮತ್ತೊಬ್ಬ ಸ್ನೇಹಿತನಲ್ಲಿ ಖರೀದಿಸಿ ಜೋಡಿಸಿ ಕಂಪ್ಯೂಟರ್ ಆಗಿಸಿ ಮಾರುತ್ತಿದ್ದೆವು. ಕೆಲವು ಸಮಯದ ಹಿಂದೆಯಷ್ಟೇ ಕ್ಲಾಸಿಕ್ ಕಂಪ್ಯೂಟರ್ ಹಗರಣ ಮುಗಿದು ಅಂದಿನ ಮುಖ್ಯಮಂತ್ರಿ ರಾಜ್ಯದ ಪ್ರತಿಯೊಂದು ಊರಿನಲ್ಲೂ ಒಂದೊಂದು ಸಿನೆಮಾ ಮಂದಿರ ಖರೀದಿ ಮಾಡಿದ್ದಾರೆ ಎಂಬ ಸುದ್ದಿಯಾಗಿತ್ತು. ನಂತರ ಮುಖ್ಯಮಂತ್ರಿ ಬದಲಾಗಿ ವೀರಪ್ಪ ಮೊಯ್ಲಿ ಮುಖ್ಯಮಂತ್ರಿ ಆಗಿದ್ದರು. ಅವರ ಗೃಹ ಕಚೇರಿಯಲ್ಲಿ ನನ್ನ ಮಿತ್ರನೊಬ್ಬ ಉದ್ಯೋಗಿಯಾಗಿದ್ದ. ನಾನವನಿಗೆ ಕಂಪ್ಯೂಟರ್ ಸರಬರಾಜು ಕಾಂಟ್ರಾಕ್ಟ್ ಆಗದಿದ್ದರೆ ಬೇಡ ಡೇಟಾ ಎಂಟ್ರಿ ಕಾಂಟ್ರಾಕ್ಟ್ಗಳನ್ನಾದರೂ ಕೊಡಿಸು ಎನ್ನುತ್ತಿದ್ದೆ. ಅದೇ ರೀತಿ ನನ್ನ ಆರ್ಕಿಟೆಕ್ಟ್ ಮಿತ್ರನು ಆ ಮುಮ ಕಾರ್ಯದರ್ಶಿಗೆ ಕಾಮಗಾರಿ, ಇಂಟೀರಿಯರ್ ಡಿಸೈನ್ ಕಾಂಟ್ರಾಕ್ಟ್ ಕೇಳುತ್ತಿದ್ದ. ಆದರೆ ಅವನಿಂದ ಒಂದೇ ಒಂದು ಉಪಯೋಗ ನಮಗಾಗಲಿಲ್ಲ. ಹಾಗೆಯೇ ಅವನೂ ಸಹ ತನ್ನ ಹಳೆಯ ಬೈಕ್ ಬಿಟ್ಟು ಕಾರ್ ಇರಲಿ ಇನ್ನೊಂದು ಬೈಕ್ ಸಹ ಕೊಳ್ಳ(ಲಾಗ)ಲಿಲ್ಲ.


ನಂತರ JH ಪಟೇಲ್ ಸರ್ಕಾರ ಬಂದಿತು. ಅಲ್ಲಿ ಮುಖ್ಯಮಂತ್ರಿಯವರ ಬಂಧುವೂ ಆಗಿದ್ದ ನನ್ನ ಸಹಪಾಠಿಯೊಬ್ಬ ಮುಖ್ಯಮಂತ್ರಿ ಕಚೇರಿಯಲ್ಲಿ ಸಿಬ್ಬಂದಿಯಾದ. ಮತ್ತದೇ ರಾಗ, ಮತ್ತದೇ ಹಾಡು! ಆದರೆ  ಇವನಿಂದ ಆದ ಒಂದೇ ಒಂದು ಉಪಯೋಗವೆಂದರೆ ಅಮಿತಾಭ್ ಬಚ್ಚನ್ ಅನ್ನು ಭೇಟಿಯಲ್ಲ, ನೋಡಿದ್ದು ಮಾತ್ರ! ಅಂದು ನನ್ನ ಮಿತ್ರನನ್ನು ಮಾತನಾಡಿಸಲು ವಿಧಾನಸೌಧಕ್ಕೆ ಹೋಗಿದ್ದೆ. ಅಂದು ಅಮಿತಾಭ್ ಬೆಂಗಳೂರಿನಲ್ಲಿ ನಡೆಯಲಿದ್ದ ವಿಶ್ವಸುಂದರಿ ಸ್ಪರ್ಧೆಯ ಕುರಿತು ಮುಖ್ಯಮಂತ್ರಿಗಳೊಂದಿಗೆ ಪತ್ರಿಕಾ ಗೋಷ್ಠಿ ನಡೆಸಿದರು. ಆ ಗೋಷ್ಠಿಗೆ ಅವನು ನನ್ನನ್ನು ಕರೆದೊಯ್ದದ್ದು ಬಿಟ್ಟರೆ ಇನ್ಯಾವ ಉಪಯೋಗವೂ ಆಗಲಿಲ್ಲ. ಅವನೂ ಅಷ್ಟೇ ಪಟೇಲರ ಅಧಿಕಾರ ಮುಗಿದ ಮೇಲೆ ದಾವಣಗೆರೆಗೆ ಮರಳಿದ.


ಆ ನಂತರದ ಸರ್ಕಾರಗಳಿಂದ ಬೆಂಗಳೂರು ಸಿಂಗಾಪುರವಾಗಿ ಕರ್ನಾಟಕದಲ್ಲಿ ಸುವರ್ಣಯುಗ ಆರಂಭವಾಯಿತು!


ಸ್ವಿಸ್ ಬ್ಯಾಂಕ್ ಸೇರುತ್ತಿದ್ದ ಕಪ್ಪು ಹಣ ಮಾರ್ಗ ಬಂದ್ ಆದ ಕಾರಣ ರಿಯಲ್ ಎಸ್ಟೇಟಿಗೆ ಭೋರ್ಗರೆಯಲಾರಂಭಿಸಿತು. ಅದಕ್ಕೆ ತಕ್ಕಂತೆ ಸರ್ಕಾರದ ಆದಾಯ ಸಹ! ಅಲ್ಲಿಯವರೆಗೆ ತಮ್ಮ ಊರಿನಿಂದ ಬಸ್ಸಿನ ಮುಂದಿನ ರಿಸರ್ವ್ ಸೀಟಿನಲ್ಲಿ ಬೆಂಗಳೂರಿಗೆ ಬರುತ್ತಿದ್ದ ಶಾಸಕರು ವೈಭವೋಪೇತ ಕಾರುಗಳಲ್ಲಿ ಬರುತ್ತಾ ತಮ್ಮ ಚೇಲಾಗಳು ಸಹ ಬಸ್ ಹತ್ತದಷ್ಟು ಸುವರ್ಣ ಕರ್ನಾಟಕ ನಿರ್ಮಿಸಿದರು. ಇದರ ಮುಂದಿನ ಹಂತವಾಗಿ ನಿಗಮ, ಮಂಡಲಿಗಳಿಂದ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯತ್ವ, ಪರಿಷತ್ತು, ರೈಲ್ವೆ ಸಲಹಾ ಮಂಡಳಿ ಸದಸ್ಯತ್ವ, ಮಲೆನಾಡು ಅಭಿವೃದ್ದಿ, ಬಯಲು ಸೀಮೆ ನೀರಾವರಿ ಸಮಿತಿ, ಬಯಲು ಶೌಚಮುಕ್ತ ಸಮಿತಿ, ಮಾಧ್ಯಮ ಸಲಹೆಗಾರ ಸಮಿತಿ, ಪೇಜ್ ಪ್ರಮುಖ್ ಇನ್ನೂ ಅನೇಕಾನೇಕ ಕಂಡು ಕೇಳರಿಯದ ಸುವರ್ಣ ಅವಕಾಶಗಳನ್ನು ಸೃಷ್ಟಿಸಿ ರಾಜಕಾರಣಿಗಳು ತಮ್ಮ ತಮ್ಮ ಬೆಂಬಲಿಗರಿಗೆ ಪೊಡಮಟ್ಟರು. ನಂತರ ಎಲ್ಲಾ ಪಕ್ಷಗಳ ಒಬ್ಬೊಬ್ಬ ಶಾಸಕನ ವಾಹನ ಚಾಲಕ, ಗನ್ಮನ್, ಪಾತ್ರೆ ತೊಳೆಯುವ ಸಿಬ್ಬಂದಿ ಸಹ ಕೋಟ್ಯಾಧಿಪತಿಗಳಾದರು. ನಾನು ಕಂಡಂತೆ ಮಾಜಿ ಮುಖ್ಯಮಂತ್ರಿಗಳ ಮಗನ ಮನೆಯಲ್ಲಿ ಕರೆಂಟ್ ಬಿಲ್ಲು, ಫೋನ್ ಬಿಲ್ಲು ಕಟ್ಟಲು, ತರಕಾರಿ ತರಲು ಇದ್ದ ಈಗಲೂ ಅದೇ ಹುದ್ದೆಯಲ್ಲಿರುವ ಒಬ್ಬ ಸಹಾಯಕ ಇಂದು ಎಪ್ಪತ್ತು ಕೋಟಿಗೂ ಮೀರಿ ಆಸ್ತಿವಂತನಾಗಿದ್ದಾನೆ. ಅದೇ ರೀತಿ ಮಾಧ್ಯಮ ಸಲಹೆಗಾರರು ಕೋಟ್ಯಾಧಿಪತಿಯಾಗಿ ಸಾಮರಸ್ಯ, ಸಾಹಿತ್ಯ ಸಮ್ಮೇಳನಗಳ ಪ್ರಾಯೋಜಕರಾಗಿದ್ದಾರೆ ಎಂದು ನನ್ನ ಮಾಧ್ಯಮ ಮಿತ್ರರು ಹೇಳುತ್ತಾರೆ. ಕೆಲವರಿಗೆ ಹಣದ ವ್ಯಾಮೋಹ, ಇನ್ನೂ ಕೆಲವರಿಗೆ ಪ್ರಚಾರದ ತೀಟೆ. ಅವೆಲ್ಲವನ್ನೂ ಈ "ಗಿರಿ"ಗಳು ಒದಗಿಸುತ್ತವೆ.


ಇದಕ್ಕೆ ಪಠ್ಯ ಪರಿಷ್ಕೃತ ಸಮಿತಿಗಿರಿ ಸಹ ಬೆಂಬಲಿಗರಿಗೆ ಪೊಡಮಾಡುವ ಅಂತಹ ಒಂದು ಸುವರ್ಣ ಅವಕಾಶಗಿರಿ! 


ಈ ಹಿಂದೆ ಖ್ಯಾತ ಸಾಹಿತಿಗಳು ಪರಿಷ್ಕರಣ ಸಮಿತಿ ಅಧ್ಯಕ್ಷರಾಗಿದ್ದಾಗ ಅವರಿಗೆ ಬೇಕಾದ ಅಜೆಂಡಾ ಸೇರಿಸಿದರು ಎಂದು ಇಂದಿನಂತೆಯೆ ಅಂದೂ ಹುಯಿಲೆಬ್ಬಿತ್ತು. ಆ ಸಮಿತಿಯ ಎಡ ತೊಡೆ ತಟ್ಟುವಿಕೆಯ ಸವಾಲಿಗೆ ಇಂದು ಈ ಹೊಸ ಸಮಿತಿ ಬಲ ತೊಡೆ ತಟ್ಟಿ ಉತ್ತರ ನೀಡಿದೆ. 


ಆದರೆ ಇಲ್ಲಿ ವಿರೋಧಕ್ಕೆ ಗುರಿಯಾಗಿರುವುದು ಪರಿಷ್ಕರಣೆ ಆಗಿರುವ ಕನ್ನಡ ಭಾಷಾ ಪಠ್ಯ ಎಂದು ಗಮನಿಸಿದ್ದೇನೆ! ಆದರೆ ಪಠ್ಯವೆಂದರೆ ಕೇವಲ ಕನ್ನಡ ಭಾಷಾ ವಿಷಯ ಮಾತ್ರವೇ? ಅದರಲ್ಲೂ ನನ್ನ ಹೈಸ್ಕೂಲ್ ದಿನಗಳಿಂದಲೂ ಕನ್ನಡಕ್ಕೆ ಪರ್ಯಾಯವಾಗಿ ಅಂಕ ಮಿತ್ರ ಸಂಸ್ಕೃತ, ಉರ್ದು ಆಯ್ಕೆ ಮಾಡಿಕೊಳ್ಳುವವರು ಹೆಚ್ಚಿದ್ದರು. ಅದು ಈಗಲೂ ಹಾಗೆಯೇ ಇದೆ. ಉಳಿದಂತೆ ಇಂಗ್ಲಿಷ್, ವಿಜ್ಞಾನ, ಗಣಿತ, ಇತಿಹಾಸ, ಗಣಕ ವಿಷಯಗಳ ಪರಿಷ್ಕರಣೆ ಹೇಗಿದೆ? ಒಂದು ವೇಳೆ ಆ ವಿಷಯಗಳು ಪರಿಷ್ಕರಣೆ ಆಗಿಲ್ಲದಿದ್ದರೆ, ಏಕಾಗಿಲ್ಲ? ಅವು ಬದಲಾಗದ static ಶಾಸ್ತ್ರಗಳೆಂದೆ? 


ಆಯಾಯ ಪಕ್ಷಗಳ ಬೆಂಬಲಿಗರ ಸಿಂಡಿಕೇಟ್ ಸದಸ್ಯರನ್ನು ಓಲೈಸಿ ಉದ್ಯೋಗ, ಬಡ್ತಿ, ಪದವಿ, ಪಿಹೆಚ್ಡಿ ಪಡೆದ, ಅದರಲ್ಲೂ ಕನ್ನಡ ಉಪನ್ಯಾಸಕ ಎಡಪಂಥೀಯ ಸಾಹಿತಿವರ್ಗ ತಾವು ಪಿಹೆಚ್ಡಿ ಪಡೆದದ್ದು ತಮ್ಮ ವಿರೋಧಿ ಬಣವನ್ನು ವಾಚಾಮಗೋಚರ ಬೈಯುವುದರಲ್ಲಿ ಎಂದು ಸಾಬೀತು ಮಾಡುತ್ತಿದ್ದಾರೆ. ಕೇವಲ ಕನ್ನಡವಲ್ಲದೆ ಜಗತ್ತಿನ ಎಲ್ಲಾ ವಿಷಯಗಳ ಬಗ್ಗೆ ಉನ್ನತ ಪದವಿ ಪಡೆದಿರುವಂತೆ ನಿರರ್ಗಳವಾಗಿ ಮಾತನಾಡುವ ಈ ಸುಜ್ಞಾನಿಗಳು ಇಂತಹ ಬಂದ-ಹೋದ ಸಮಿತಿಗಳನ್ನು ನಿಷೇಧಿಸಿ ಶಿಕ್ಷಣ ಇಲಾಖೆಯಲ್ಲಿಯೆ ಉದ್ಯೋಗದಲ್ಲಿರುವ ತಜ್ಞರಿಂದ ಪಠ್ಯ ರಚಿಸಿ ಎಂದೇಕೆ ಕಳೆದ ಬಾರಿ ಸಾಹಿತಿ ಅಧ್ಯಕ್ಷರ ವಿರುದ್ಧ ಹುಯಿಲೆದ್ದಾಗಲೇ ನೈತಿಕವಾಗಿ ಪ್ರಶ್ನಿಸಲಿಲ್ಲ! ಹೋಗಲಿ, ಈಗಲಾದರೂ ಏಕೆ ಅಂತಹ ದೂರಾಲೋಚನೆಯ ಕುರಿತು ಪ್ರಶ್ನಿಸುತ್ತಿಲ್ಲ?


ಕುಲುಮೆಗೆ ನಿಲುಮೆ, ಹಿಂದುತ್ವಕ್ಕೆ ಸಾಮರಸ್ಯ, ಲಿಂಗಕ್ಕೆ ಕಾರಂಜಿ, ಬರಗೂರಿಗೆ ಚಕ್ರತೀರ್ಥ, ಕಾಂಗ್ರೆಸ್ಸಿಗೆ ಬಿಜೆಪಿ...ಇದರಾಚೆಗೆ ಚಿಂತಿಸಲಾಗದ ಚಿಂತನೆಯನ್ನು ಸಪ್ತ ಸಾಗರದಾಚೆಯಿಂದಲೂ ನೋಡಲಾಗುತ್ತಿಲ್ಲ. 


ಒಟ್ಟಿನಲ್ಲಿ ಈ ಪಠ್ಯ ಪರಿಷ್ಕರಣೆ ನಿಜಕ್ಕೂ ಒಂದು ಅತ್ಯುತ್ತಮ ಬೆಳವಣಿಗೆ! ಏಕೆಂದರೆ ಈ ಮುಂಚೆ ಇಂತಹದ್ದನ್ನು ಗಮನಿಸುತ್ತಲೇ ಇರದಿದ್ದ ಪ್ರಜೆಗಳು ಈಗ ಈ ಬಗ್ಗೆಯೂ ಆಲೋಚಿಸಲಾರಂಭಿಸಿದ್ದಾರೆ.  ಈ ಆಲೋಚನೆ ಮುಂದೆ ಒಂದು ಶಾಶ್ವತ ಪರಿಹಾರಕ್ಕೆ ನಾಂದಿಯಾಗಬಹುದು! ಹಾಗೆಯೇ ಅಂಕದ ಕೋಳಿಗಳ ಮಂಕು ಕಳೆಯಬಹುದು.


#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ