ವಿಶ್ವವಾಣಿ ಬಸವ ಮಂಟಪ - ವೀರಶೈವ ಲಿಂಗಾಯತ ಪದೋತ್ಪತ್ತಿ ಪ್ರಸಾರೇಣಹ!

 ಗ್ರಂಥೇತಿಹಾಸದ ಪ್ರಕಾರವಾಗಿ ವೀರಶೈವ ಪದವು ವೇದವ್ಯಾಸರು ಬರೆದಿರುವರೆನ್ನುವ ಸ್ಕಂದ ಪುರಾಣದಲ್ಲಿ, "ಯೋ ಹಸ್ತಪೀಠೇ ನಿಜಮಿಷ್ಟಲಿಂಗಂ ವಿನ್ಯಸ್ಯ ತಲ್ಲೀನಮನಃ ಪ್ರಚಾರಃ ಬಾಹ್ಯಕ್ರಿಯಾಸಂಕುಲನಿಸ್ಠಹಾತ್ಮಾ| ಸಂಪೂಜಯತ್ತಂಗ ಸ ವೀರಶೈವಂ|"

ಎಂಬ ಶ್ಲೋಕದಲ್ಲಿ ಬರುತ್ತದೆ. ಈ ಶ್ಲೋಕದ ಅರ್ಥ, "ಯಾರು ತನ್ನ ಹಸ್ತಪೀಠದಲ್ಲಿ ಇಷ್ಟಲಿಂಗವನ್ನಿಟ್ಟು ತನ್ನ ಮನಸ್ಸನ್ನು ನೆಲೆಗೊಳಿಸಿ ಬಾಹ್ಯ ಕ್ರಿಯೆಗಳನ್ನು ದೂರಮಾಡಿ ಶ್ರದ್ಧೆಯಿಂದ ಪೂಜಿಸುವನೋ ಅವನೇ ವೀರಶೈವ" ಎಂದಾಗುತ್ತದೆ. ಸ್ಕಂದ ಪುರಾಣವನ್ನು ಬಹಳಷ್ಟು ಶತಮಾನಗಳ ಹಿಂದೆಯೇ ಬರೆದಿದೆ ಎನ್ನಲಾದರೂ ಇತಿಹಾಸತಜ್ಞರು ಲಭ್ಯ ಪುರಾವೆಗಳ ಪ್ರಕಾರ ಕ್ರಿ.ಶ. ಎಂಟನೇ ಶತಮಾನ ಎಂದು ಮಾನ್ಯ ಮಾಡಿದ್ದಾರೆ. ಹಾಗಾಗಿ ಗ್ರಂಥೇತಿಹಾಸಿಕವಾಗಿ ವೀರಶೈವ ಪದವು ಎಂಟನೇ ಶತಮಾನದಲ್ಲಿ ಇದ್ದಿತು ಎನ್ನಬಹುದು. ವಚನಕಾರ ಸಿದ್ಧವೀರ ದೇಶಿಕೇಂದ್ರನು ತನ್ನ ವಚನದಲ್ಲಿ ಸ್ಕಂದ ಪುರಾಣವನ್ನು ಹೀಗೆ ಉಲ್ಲೇಖಿಸಿದ್ದಾನೆ.

"ವ್ಯಾಸನುಸುರ್ದ ಸ್ಕಂದಪುರಾಣದಲ್ಲಿಯ
ಶ್ರೀಶೈಲಕಲ್ಪ ನೋಳ್ಪುದಯ್ಯಾ.
ಅಲ್ಲಿ ಸಿದ್ಧಸಾಧಕರ ಸನ್ನಿದ್ಥಿಯಿಂದರಿಯಬಹುದಯ್ಯಾ.
ಮಾಡಿದನೊಬ್ಬ ಪೂರ್ವದಲ್ಲಿ ಗೋರಕ್ಷ
ಮಾಡಿದನೊಬ್ಬ ಮತ್ಸ್ಯೀಂದ್ರನಾಥ,
ಮಾಡಿದರೆಮ್ಮ ವಂಶದ ಶ್ರೀಗುರುಶಾಂತದೇವರು.
ಇದು ಕಾರಣ,
ಯೋಗದ ಭೇದ ಯೋಗಿಗಳಂತರಂಗದಿಂದರಿತಡೆ
ಯೋಗಸಿದ್ಧಿ ಸತ್ಯ ಸತ್ಯ,
ಶ್ರೀಗುರು ತೋಂಟದಸಿದ್ಧಲಿಂಗೇಶ್ವರ."

ಸ್ಕಂದ ಪುರಾಣದಲ್ಲಿ "ಶಿವಾಶ್ರಿತೇಷು ತೇ ಶೈನಾ ಜ್ಞಾನಯಜ್ಞ ರತಾ ನರಾಃ | ಮಾಹೇಶ್ವರಾಃ ಸಮಾಖ್ಯಾ ತಾಃ ಕರ್ಮಯಜ್ಜ ರತಾ ಭುವಿ|" ಎಂಬ ಮತ್ತೊಂದು ಶ್ಲೋಕವಿದೆ. ಅರ್ಥಾತ್ ವೀರಶೈವ ಮಾಹೇಶ್ವರರು ಜ್ಞಾನಯಜ್ಞದಲ್ಲಿ, ಕರ್ಮಯಜ್ಞದಲ್ಲಿ ರತರಾಗಿರುವವರು ಎಂದು. ಇವೇ ಶ್ಲೋಕಗಳು ಸಿದ್ಧಾಂತ ಶಿಖಾಮಣಿಯಲ್ಲಿಯೂ ಇವೆ. ವೀರಶೈವ ಪದದ ನಿವೇಚನೆಯನ್ನು "ವಿ ಎಂದರೆ ವಿದ್ಯಾ, "ರ ಎಂದರೆ ರಮಿಸುವುದು; ವೀರಶೈವ ಎಂದರೆ ಶೈವನಿದ್ಯೆಯಲ್ಲಿ ರತನಾದವನು ಎಂದು ಪಂಡಿತರುಗಳು ನಿರ್ವಚಿಸಿದ್ದಾರೆ. ಶಾಸನಗಳಲ್ಲಿ ವೀರಶೈವ ಪದವು ಮೊದಲಬಾರಿಗೆ ಕಂಡುಬರುವುದು ಕ್ರಿಶ. ೧೨೬೧ನೆಯ ಇಸವಿಯ ಮಲ್ಕಾಪುರ ಶಾಸನದಲ್ಲಿ. ಇದರಲ್ಲಿ ಚೋಳಮಾಳವರಾಜರ ಗುರುವೂ, ವೀರಶೈವ ಕಾಕತೀಯರಾಜ “ಗಣಪರಿಕ್ಷ್ಮಾಪಾಲ ದೀಕ್ಷಾ ಗುರು'ವೂ “ಕಳಚುರಿಕ್ಷ್ಮಾಪಾಲದೀಕ್ಷಾಗುರು'ವೂ ಆದ ವಿಶ್ವೇಶ್ವರ ಶಿವಾಚಾರ್ಯನು “ಮಹೀಸುರ'ನೆಂದೂ ವೀರಶೈವಾಚಾರ್ಯನೆಂದೂ ಉಲ್ಲೇಖನಾಗಿದ್ದಾನೆ. ಮಲ್ಕಾಪುರ ಶಾಸವದಂತೆ ವಿಶ್ವೇಶ್ವರ ಶಿವಾಚಾರ್ಯನೇ ವೀರಶೈವ ಕಾಕತೀಯ ಚಕ್ರವರ್ತಿ ಗಣಪತಿಗೆ ದೀಕ್ಷಾ ಗುರುವಾಗಿರುವಂತೆ ಕಳಚುರಿಕ್ಷ್ಮಾಪಾಲನಿಗೂ ದೀಕ್ಷಾ ಗುರುವಾಗಿದ್ದನು. ಖ್ಯಾತ ಕಾಕತೀಯ ರಾಣಿ ರುದ್ರಮದೇವಿ ಇದೇ ಗಣಪತಿಯ ಮಗಳು ಎಂಬುದು ಉಲ್ಲೇಖಾರ್ಹ. ಪಾಲ್ಕುರಿಕಿ ಸೋಮನಾಥನು ಸಹ ತನ್ನ "ಚಾತುರ್ವೇದ ಸಾರಂ" ಗ್ರಂಥದಲ್ಲಿ ಹರಿಯು ಶಿವನಿಗೆ ಭಕ್ತಿ ಪರವಶನಾಗಿ ತನ್ನ ಕಣ್ಣುಗಳನ್ನು ಅರ್ಪಿಸಿದ ಎಂದು ವರ್ಣಿಸುತ್ತ ವೀರಶೈವ ಎಂಬ ಪದದಿಂದ ಶೈವರನ್ನು ಕರೆದಿದ್ದಾನೆ. ಕಾಳಾಮುಖರು ಯಾನೆ ಮಹೇಶ್ವರರು ಯಾನೆ ಜಂಗಮರು ಯಾನೆ ಶಕ್ತಿಗಳು ಯಾನೆ ವೀರರು ಅವರ ಪಂಥ ವಿರೋಧಿಗಳಿಗೆ ಒಡ್ಡುತ್ತಿದ್ದ ಕಠೋರ ಸವಾಲುಗಳ ವೀರತ್ವದ ಕಾರಣಗಳಿಂದಾಗಿ ವೀರಶೈವ ಪದ ಹೆಚ್ಚು ಪರಿಣಾಮಕಾರಿಯಾಗಿ ಬಳಕೆಗೆ ಬಂದಿದೆ ಎನಿಸುತ್ತದೆ.

ವೀರಶೈವ ಪದದ ಪ್ರಾಚೀನತೆಯನ್ನು ಶ್ರೀ ಶಂ.ಬಾ. ಜೋಷಿಯವರು ಸಹ ವೇದಗಳ ಕಾಲಕ್ಕೆ ಒಯ್ಯುವರು. "ಶಿವರಹಸ್ಯ'ವೆಂಬ ಅವರ ಕೃತಿಯಲ್ಲಿ, “ನನಗೆ ತಿಳಿದಮಟ್ಟಿಗೆ ವೀರಶೈವ ಶಬ್ದದ ಮೂಲವು ಋಗ್ವೇದದಲ್ಲಿದೆ. ರುದ್ರನು ವೃಷಭನು, ಎಂದರೆ ವೀರನು. ಆದುದರಿಂದ ಆತನ ಉಪಾಸಕರೂ ವೀರರು; ಅದರಿಂದ ಈ ಹೆಸರು. ಹೀಗೆ ಬರಿಯ ತರ್ಕದಿಂದ ಇದನ್ನು ಎಣಿಕೆ ಹಾಕಬೇಕಾದುದಿಲ್ಲ.

ಇಮಾ ರುದ್ರಾಯ ತವಸೇ ಕಪರ್ದಿನೇ ಕ್ಷಯದ್ದೀರಾಯ ಪ್ರಭರಾಮಹೇ ಮತಿಃ ।
ಯಥಾ ಶಮಸದ್ವಿಷದೇ ಚತುಸ್ಪದೇ ವಿಶ್ವಂ ಪುಷ್ಪಂ ಗ್ರಾಮೇ ಅಸ್ಮಿನ್ನನಾತುರಂ ॥

ಬಲಿಷ್ಟನೂ, ಜಟಾಧಾರಿಯೂ, ವೀರಪುತ್ರರನ್ನುಳ್ಳವನೂ ಆದ ರುದ್ರನನ್ನು ಕೊಂಡಾಡುವ; ಅದರಿಂದ ಈ ಊರಿನಲ್ಲಿ ಎರಡು ಕಾಲಿನವರ ಹಾಗೂ ನಾಲ್ಕು ಕಾಲಿನವರ ಕಲ್ಯಾಣವಾಗಿ ಎಲ್ಲರೂ ನಿರೋಗಿಗಳೂ ಪುಷ್ಠರೂ ಆಗುವರು. ಇದರ ಮುಂದಿನ ಮಂತ್ರದಲ್ಲಿಯೂ, ಬೇರೆ ಮಂಡಲಗಳಲ್ಲಿಯೂ ರುದ್ರಶಿವನು ವೀರರ ತಂದೆ, ವೀರರ ಒಡೆಯ ಎಂಬ ಮಾತುಗಳು ಅಲ್ಲಲ್ಲಿ ಬಂದಿವೆ. ಶಿವ (ರುದ್ರ) ನ ಪುತ್ರರು (ಶಿವಪುತ್ರರು) ಎಂದು ಗೌರವದಿಂದ ಹೇಳಿಕೊಳ್ಳುವ ಮತ್ತು ಆ ಬಗೆಯಾದ ದೃಢಶ್ರದ್ಧೆಯಿರುವ ಶಿವಭಕ್ತರಿಗೆ ಮಾತ್ರವಲ್ಲದೆ, ಬೇರೆ ಇನ್ನಾರಿಗೂ ವೀರ (ಶೈವ) ಎಂಬ ಹೆಸರು ಸಮರ್ಪಕವಾಗಲಾರದು. ಕರ್ನಾಟಕದಲ್ಲಿಯೇ ಈ ವೀರರು ರುದ್ರನ ಅನುಯಾಯಿಗಳಾದ ರುದ್ರೀಯರು ಇರುತ್ತಿರುವುದರಿಂದ ಈ ನಾಡಿನ ಜನಾಂಗಗಳ ವೇದಕಾಲದ ಐತಿಹ್ಯವನ್ನು ಅರಿತುಕೊಳ್ಳಲು ಈ ಶಬ್ದವು ಬಹಳ ಉಪಯುಕ್ತವಾಗಿದೆ. ವೀರ ಬಣಂಜುಗಳು, ವೀರ ಪಂಚಾಳರು ಎಲ್ಲರೂ ರುದ್ರೀಯರೇ" ಎಂದಿದ್ದಾರೆ.

ಜೋಷಿಯವರು ತಿಳಿಸಿರುವ ವೃಷಭನನ್ನೇ ಹರಿಹರನು ಶಾಪಗ್ರಸ್ತನನ್ನಾಗಿಸಿ ಧರೆಯಲ್ಲಿ ಬಸವಣ್ಣನಾಗಿ ತನ್ನ ರಗಳೆಯಲ್ಲಿ ಸೃಜಿಸಿರುವುದು ಮತ್ತು ಸೋಮನಾಥನು ತನ್ನ ಪುರಾಣದಲ್ಲಿ ವರ್ಣಿಸಿರುವುದು. ಬಸವಣ್ಣನೂ ತನ್ನ ಕೆಳಗಿನ ವಚನದಲ್ಲಿ ಅವತಾರಗಳನ್ನು ಹೀಗೆ ಖುದ್ದು ಅನುಮೋದಿಸಿದ್ದಾನೆ:

ಅಯ್ಯಾ, ಏಳೇಳು ಜನ್ಮದಲ್ಲಿ ಶಿವಭಕ್ತನಾಗಿ ಬಾರದಿರ್ದಡೆ
ನಿಮ್ಮಾಣೆ, ನಿಮ್ಮ ಪ್ರಮಥರಾಣೆ !
ನಿಮ್ಮ ಪ್ರಸಾದಕ್ಕಲ್ಲದೆ ಬಾಯ್ದೆರೆಯೆನಯ್ಯಾ.
ಪ್ರಥಮಭವಾಂತರದಲ್ಲಿ
ಶಿಲಾದನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು
ನಿಮ್ಮ ಭೃತ್ಯನ ಮಾಡಿ ಎನನ್ನಿರಿಸಿಕೊಂಡಿರ್ದಿರಯ್ಯಾ.
ಎರಡನೆಯ ಭವಾಂತರದಲ್ಲಿ
ಸ್ಕಂದನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು
ನಿಮ್ಮ ಕಾರುಣ್ಯವ ಮಾಡಿರಿಸಿಕೊಂಡಿರ್ದಿರಯ್ಯಾ.
ಮೂರನೆಯ ಭವಾಂತರದಲ್ಲಿ
ನೀಲಲೋಹಿತನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು
ನಿಮ್ಮ ಲೀಲಾವಿನೋದದಿಂದಿರಿಸಿಕೊಂಡಿರ್ದಿರಯ್ಯಾ.
ನಾಲ್ಕನೆಯ ಭವಾಂತರದಲ್ಲಿ
ಮನೋಹರನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು
ನಿಮ್ಮ ಮನಃಪ್ರೇರಕನಾಗಲೆಂದಿರಿಸಿಕೊಂಡಿರ್ದಿರಯ್ಯಾ.
ಐದನೆಯ ಭವಾಂತರದಲ್ಲಿ
ಕಾಲಲೋಚನನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು
ಸರ್ವಕಾಲಸಂಹಾರವ ಮಾಡಿಸುತ್ತಿರ್ದಿರಯ್ಯಾ.
ಆರನೆಯ ಭವಾಂತರದಲ್ಲಿ
ವೃಷಭನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು
ನಿಮಗೇರಲು ವಾಹನವಾಗಲೆಂದಿರಿಸಿಕೊಂಡಿರ್ದಿರಯ್ಯಾ.
ಏಳನೆಯ ಭವಾಂತರದಲ್ಲಿ
ಬಸವದಣ್ಣಾಯಕನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು
ನಿಮ್ಮ ಒಕ್ಕುದ ಮಿಕ್ಕುದಕ್ಕೆ ಯೋಗ್ಯನಾಗಲೆಂದಿರಿಸಿಕೊಂಡಿರ್ದಿರಯ್ಯಾ.
ಇದು ಕಾರಣ ಕೂಡಲಸಂಗಮದೇವಾ,
ನೀವು ಬರಿಸಿದ ಭವಾಂತರದಲ್ಲಿ ನಾನು ಬರುತಿರ್ದೆನಯ್ಯಾ.

ಇನ್ನು ಶಂಬಾರವರು ಹೆಸರಿಸಿರುವ ವೀರಬಣಂಜುಗಳೇ ವೀರಶೈವ ಬಣಜಿಗರು ಮತ್ತು ವೀರಪಂಚಾಳರೇ ವೀರಶೈವ ಪಂಚಮಸಾಲಿಗಳು ಎನ್ನಬಹುದು. ವಿಕಾಸಪಥದ ಹಾದಿಯಲ್ಲಿ ಕೃಷಿಯಲ್ಲಿ ತೊಡಗಿದ್ದ ವೀರಪಂಚಾಳರಲ್ಲಿ ಸಾಕಷ್ಟು ಜನರು ಕುಶಲಕರ್ಮಿಗಳಾದರು. ಈ ಕುಶಲಕರ್ಮಿಗಳಾಗಿದ್ದ ವೀರಪಂಚಾಳರ ಕಾರಣವಾಗಿಯೇ ಕಾಳಾಮುಖರು ದಕ್ಷಿಣಾಚಾರ ಎಂಬ ಶಿಲ್ಪಕಲಾ ವಾಸ್ತುಶಾಸ್ತ್ರವನ್ನು ರಚಿಸಿದ್ದರು. ಈ ದಕ್ಷಿಣಾಚಾರ ಪದವೇ ದಕ್ಕನಾಚಾರ/ಜಕ್ಕನಾಚಾರ ಎಂದು ಅಪಭ್ರಂಶಗೊಂಡು ಸಂಕಥನಗಳ ಮೂಲಕ ವಾಸ್ತುಶಾಸ್ತ್ರವು ವ್ಯಕ್ತಿರೂಪದ ಜಕಣಾಚಾರಿ ಆಗಿದೆ. ನಮ್ಮ ಪ್ರಭೃತಿ ಪ್ರಭಾವಶಾಲಿ ಸಂಶೋಧಕರ ದೆಸೆಯಿಂದ ಸರ್ಕಾರ ಜಕಣಾಚಾರಿಯ ಹುಟ್ಟಿದ ದಿನವನ್ನು ಸೃಷ್ಟಿಸಿ ಜಯಂತಿ ಘೋಷಿಸಿದೆ. ಈ ಬಗ್ಗೆ ಆಸಕ್ತರು ಖ್ಯಾತ ಇತಿಹಾಸಜ್ಞರಾದ ವಸುಂಧರಾ ಫಿಲಿಯೋಜಾ ಅವರ ಕೃತಿಗಳನ್ನು ಗಮನಿಸಬಹುದು. "ಲಕ್ಕುಂಡಿಯಲ್ಲಿರುವ ದೇವಸ್ಥಾನಗಳ ಆವರಣಗಳು ಈ ಕಾಳಾಮುಖ ದಕ್ಷಿಣಾಚಾರದ ವಾಸ್ತುಶಿಲ್ಪದ ಶಾಲೆಗಳಾಗಿದ್ದವು. ಇಲ್ಲಿ ನಿರ್ಮಿಸಿದ ಸಣ್ಣ ಗಾತ್ರದ ಆಕೃತಿಗಳ ದೊಡ್ಡ ಪ್ರತಿಕೃತಿಗಳೇ ಹಳೇಬೀಡು, ಬೇಲೂರು ಮುಂತಾದ ಕಡೆ ಕೆತ್ತಲ್ಪಟ್ಟಿರುವುದು" ಎಂದು ಪುರಾತತ್ವ ಸ್ಮಾರಕಗಳ ಬಗ್ಗೆ ಅಪಾರ ಜ್ಞಾನ ಹೊಂದಿರುವ ಗದಗಿನ ಅಬ್ದುಲ್ ರಜಾಕ್ ದಸ್ತಗೀರ್ ಸಾಬ್ ಕಟ್ಟಿಮನಿ ಮಾಹಿತಿ ನೀಡಿದ್ದಾರೆ. ಡೇವಿಡ್ ಲೊರೆಂಜನ್ ಅಲ್ಲದೆ ಅನೇಕ ಸಂಶೋಧಕರ ಜೊತೆ ಕೆಲಸ ಮಾಡಿರುವ ಖ್ಯಾತಿ ಇವರದು.

ಇನ್ನು ವೀರಶೈವ, ಪೂರ್ವಕಾಲೀನ/ಹಿರಿಯಕಾಲೀನ ವಚನಕಾರರು, ಮತ್ತು ಬಸವಕಾಲೀನ ವಚನಕಾರರು ಹೆಚ್ಚಿನ ಪ್ರವರ್ಧಮಾನಕ್ಕೆ ಬಂದದ್ದು ಭಕ್ತಿಪಂಥದ ಕ್ರಾಂತಿಯ ಅಲೆಯಲ್ಲಿ! ಜೈನರ ಪ್ರಾಬಲ್ಯದ ವಿರುದ್ಧ ಹೋರಾಡಿ ಶೈವಪಂಥವನ್ನು ಹೇರಿದ್ದು ಈ ಎಲ್ಲಾ ವಚನಕಾರರ ಸಮಾನ ಸಿದ್ಧಾಂತ. ಭಕ್ತಿಪಂಥದ ಭಾಗವಾಗಿ ವೀರಶೈವರ ರೇಣುಕರು ಉದ್ಭವವಾದರು ಎನ್ನುವ ಕೊಲ್ಲಿಪಾಕಿ (ಇಂದಿನ ಕೊಳನುಪಾಕ) ಜೈನರ ಒಂದು ಪ್ರಮುಖ ಸ್ಥಳ. ಅಂದಿನ ವೀರಶೈವರು ಜೈನರೊಟ್ಟಿಗೆ ಹೋರಾಡಿ ಕೊಲ್ಲಿಪಾಕಿಯನ್ನು ತಮ್ಮ ಕೈವಶಮಾಡಿಕೊಂಡಿದ್ದರು. ಈ ರೇಣುಕರ ಸಮಕಾಲೀನರೆನ್ನಬಹುದಾದ ಪೂರ್ವಕಾಲೀನ ಶರಣರಾದ ಓಹಿಲ, ಉದ್ಭಟ, ಕೆಂಭಾವಿ ಭೋಗಯ್ಯ, ಕೊಂಡಗುಳಿ ಕೇಶಿರಾಜ, ಡೋಹರಕಕ್ಕಯ್ಯರನ್ನು ಜೇಡರ ದಾಸಿಮಯ್ಯ (ಕ್ರಿ.ಶ ೯೮೦-ಕ್ರಿ.ಶ. ೧೦೪೦) ತನ್ನ ವಚನಗಳಲ್ಲಿ ಕೊಂಡಾಡಿದ್ದಾನೆ. ಇದರಲ್ಲಿ ಓಹಿಲ ಮತ್ತು ಉದ್ಭಟರಿಬ್ಬರೂ ಸೌರಾಷ್ಟ್ರದವರೆನ್ನಲಾಗಿದೆ. ಈ ಸೌರಾಷ್ಟ್ರ ಮೂಲದ ಕೆಲ ಶೈವರು ಮುಂದೆ ವೀರಶೈವತ್ವದ ಕೆಲ ನವಸಂಪ್ರದಾಯಗಳನ್ನು ಪ್ರಮುಖವಾಗಿ ಸಸ್ಯಾಹಾರವನ್ನು ಒಪ್ಪದೇ ತಮ್ಮದೇ ಒಂದು ಭಾಗವಾಗಿ ಈಗಲೂ ತಮಿಳುನಾಡಿನ ಹಲವೆಡೆ ಸೌರಾಷ್ಟ್ರ ಪಾಶುಪತರಾಗಿ ಕಾಣಸಿಗುತ್ತಾರೆ. ಹಾಗಾಗಿಯೇ ಬಸವಣ್ಣನು ಮಾಂಸಾಹಾರಿ ಪಾಶುಪತರನ್ನು ಕಾಪಾಲಿಕರನ್ನು ಒಳಗೊಳ್ಳುವ ಈ ವಚನವನ್ನು ರಚಿಸಿದ್ದಾನೆ ಎನಿಸುತ್ತದೆ:

'ಎಡದ ಕೈಯಲಿ ಕತ್ತಿ, ಬಲದ ಕೈಯಲಿ ಮಾಂಸ,
ಬಾಯಲಿ ಸುರೆಯ ಗಡಿಗೆ, ಕೊರಳಲಿ ದೇವರಿರಲು
ಅವರ ಲಿಂಗನೆಂಬೆ, ಸಂಗನೆಂಬೆ,
ಕೂಡಲಸಂಗಮದೇವಾ, ಅವರ ಮುಖಲಿಂಗಿಗಳೆಂಬೆನು.'

ಕೊಲ್ಲಿಪಾಕಿಯ ರೇಣುಕರ ಉದ್ಭವದ ಹಿನ್ನೆಲೆಯಲ್ಲಿ ರಸ್ತಾಪುರ ಭೀಮಕವಿಯ ’ಹಾಲುಮತೋತ್ತೇಜಕ ಪುರಾಣ’ದ ಎರಡನೇ ಸಂಧಿಯಲ್ಲಿ ರೇವಣಸಿದ್ದೇಶ್ವರ ಚರಿತ್ರೆಯ ಕುರಿತ ಮಾಹಿತಿ ಹೀಗಿದೆ. "ಕೊಲ್ಲಿಪಾಕಿಯ ಸೋಮಲಿಂಗದಿಂದ ಉದಯಿಸಿದ ರೇವಣಸಿದ್ಧರು ಭಕ್ತರನ್ನು ಉದ್ಧರಿಸಲು ಶಾಂತಮುತ್ತಯ್ಯ ಎಂಬುವವರಿಗೆ ಲಿಂಗದೀಕ್ಷೆಯನ್ನು ಕೊಡುತ್ತಾರೆ. ಇಲ್ಲಿ ರೇವಣಸಿದ್ಧರು ಲೀಲೆಗಳನ್ನು ತೋರುತ್ತಾ ಸರೂರು ಗ್ರಾಮಕ್ಕೆ ಬಂದು ಕುರುಬರ ಮನೆತನದಲ್ಲಿ ಜನಿಸಿದ ಶಾಂತಮುತ್ತಯ್ಯನಿಗೆ ‘ಸಿದ್ಧಿಸಲಿ ನೀನಂದ ನುಡಿಗಳು ಭೂಮಿಯಲ್ಲಿ’ ಎಂದು ಆರ್ಶೀವಾದ ಮಾಡಿ ಲಿಂಗದೀಕ್ಷೆಯನ್ನು ನೀಡಿ ಹಾಲುಮತಕ್ಕೆ ಅಧ್ಯಕ್ಷನನ್ನಾಗಿಸುವನು." ಇದು ಈ ಪುರಾಣದಲ್ಲಿರುವ ಅಂಶ. ಮೌಖಿಕ ಕಥಾನಕದ ಆಧಾರವಾಗಿ ಈ ಪುರಾಣವನ್ನು ಬರೆಯಲಾಗಿದೆ ಎಂದು ತಿಳಿದುಬಂದಿದೆ. (ಎಫ್.ಟಿ. ಹಳ್ಳಿಕೇರಿ (ಸಂ), ರಸ್ತಾಪುರ ಭೀಮಕವಿಯ ಹಾಲುಮತೋತ್ತೇಜಕ ಪುರಾಣ, ಕನ್ನಡ ವಿಶ್ವವಿದ್ಯಾಲಯ ಹಂಪಿ, ವಿದ್ಯಾರಣ್ಯ, ೨೦೦೮.)

ಈ ಪುರಾಣದ ಪ್ರಕಾರ ಕೊಲ್ಲಿಪಾಕಿಯಲ್ಲಿ ಸೋಮನಾಥಲಿಂಗದಿಂದ ಉದ್ಭವಗೊಂಡ ಅವತಾರ ಪುರುಷ ರೇವಣಸಿದ್ದೇಶ್ವರರು ಪಶುಪಾಲಕ ಹಾಲುಮತ (ಕುರುಬ) ಹಿನ್ನೆಲೆಯವರು. ಪೌರಾಣಿಕ ಕಥನದಲ್ಲಿ ಉದ್ಭವಿಸಿವವರು ಇಂತಹ ಕುಲದವರೇ ಎನ್ನುವುದು ಮತ್ತು ಪ್ರಶ್ನಿಸುವುದು ತಾರ್ಕಿಕವಲ್ಲ. ಹಾಗೆಯೇ ಇದರಲ್ಲಿನ ಕಾಲಮಾನಗಳು ಮತ್ತು ಪವಾಡದ ಕತೆಗಳನ್ನು ಐತಿಹಾಸಿಕ ದಾಖಲೆಯನ್ನಾಗಿ ಪರಿಗಣಿಸುವುದೂ ಅಲ್ಲ. ಈ ಪುರಾಣಕ್ಕೆ ಪೂರಕವಾದ ಐತಿಹಾಸಿಕ ಪುರಾವೆಗಳಿದ್ದರೆ ಆಗ ತಾಳೆಹಾಕಿ ವಿಶ್ಲೇಷಿಸಿ ಪವಾಡವಲ್ಲದ ಮಾಹಿತಿಯನ್ನು ಪರಿಗಣಿಸಬಹುದು. ಹಾಗಾಗಿ ಈ ಪೌರಾಣಿಕ ಕತೆಯಿಂದ ಗ್ರಹಿಸಬೇಕಾದ ಏಕಾಂಶವೆಂದರೆ ಪಶುಪಾಲಕರು (ಕುರುಬರು) ಸಹ ವೀರಶೈವ ಪಂಥದ ಕ್ರಾಂತಿಯ ಪ್ರಮುಖ ಭಾಗವಾಗಿದ್ದಲ್ಲದೆ ಮಹತ್ವದ ಗುರುಸ್ಥಾನವನ್ನು ಪಡೆದಿದ್ದರು ಎಂಬುದು! ಸಂಶೋಧನ ಹಿನ್ನೆಲೆಯಲ್ಲಿ ಪಾಶುಪತದ ಆಚರಣೆಯ ಪಶುಪಾಲಕ ಹಾಲುಮತಸ್ಥರಿಗೆ ವೀರಶೈವ ಪಂಥ ಸ್ವಾಭಾವಿಕವಾಗಿ ಬೇರೆಯದೆಂದು ಎನಿಸಿರಲೇ ಇಲ್ಲ. ಮುಂದೆ ಯಾವಾಗ ವೃತ್ತಿಗಳೇ ಜಾತಿಗಳಾದವೋ ಆಗ ಇವರು ಜಾತೀಯವಾಗಿ ಕುರುಬರೆನ್ನಿಸಿಕೊಂಡು ಗುರುತಿಸಿಕೊಂಡಿರಬಹುದು. ಅದೇ ರೀತಿ ’ಹುಟ್ಟಿನಿಂದ ಜಾತಿ’ ನೀತಿಯ ಕಾರಣ ಶಾಶ್ವತವಾಗಿ ಕುರುಬರೆಂಬ ಜಾತಿಗೆ ಸೀಮಿತಗೊಂಡು ವೀರಶೈವದಿಂದ ಹೊರಗುಳಿದಿರಬಹುದೆಂದು ಊಹಿಸಬಹುದು. ಉತ್ತರ ಕರ್ನಾಟಕದಲ್ಲಿ ಬಹಳಷ್ಟು ಕುರುಬರು ಈಗಲೂ ಸಸ್ಯಾಹಾರಿಗಳು ಎಂಬುದು ಇಲ್ಲಿ ಗಮನಿಸಬೇಕಾದ ಪೂರಕ ಅಂಶ. ಅಂತೆಯೇ ತಮ್ಮ ಸನಾತನ ಶೈವ ಪರಂಪರೆಯ ಕುರುಹಾಗಿ ಒಡೆಯರ್ ಎಂಬ ಹಾಲುಮತ ಜಂಗಮರು ಇಂದಿಗೂ ಕರಡಿಗೆ ಧರಿಸಿ ಶಿವಪೂಜಾ ನಿರತರಾಗಿದ್ದಾರೆ. ದಾವಣಗೆರೆಯ ಸಂಸದರಾಗಿದ್ದ ದಿವಂಗತ ಚೆನ್ನಯ್ಯ ಒಡೆಯರ್ ಅಂತಹ ಹಾಲುಮತ ಜಂಗಮ ಪರಂಪರೆಯವರಾಗಿದ್ದರು. 'ಹುಟ್ಟಿನಿಂದ ಜಾತಿ' ನೀತಿಯ ಕಾರಣವಾಗಿಯೇ ಕುಶಲಕರ್ಮಿ ಪಂಚಾಳರು ಕುರುಬರಂತೆಯೇ ವಿಶ್ವಕರ್ಮಿಗಳಾಗಿ ವೀರಶೈವದ ಹೊರಗುಳಿದರೆ ಕೃಷಿಕ ಪಂಚಮಸಾಲಿಗಳು ವೀರಶೈವದ ಒಳಗುಳಿದರು. ಈ ಬಗ್ಗೆ ಖ್ಯಾತ ಸಾಗರದಾಳದ ಉತ್ಖನನಜ್ಞರು ಮತ್ತು ಶಿಲ್ಪಕಲಾ ತಜ್ಞರೂ ಆದ ಗುಡಿಗಾರ್ ಪುಟ್ಟಸ್ವಾಮಿಯವರು ಚರ್ಚೆಯೊಂದರಲ್ಲಿ ಬೆಳಕು ಚೆಲ್ಲಿದ್ದರು.

’ಹಾಲುಮತೋತ್ತೇಜಕ ಪುರಾಣ’ದ ಪೌರಾಣಿಕ ಕತೆಯಲ್ಲದೆ ಕಪಟರಾಳ ಕೃಷ್ಣರಾಯರ "ಕರ್ನಾಟಕ ಲಾಕುಳಶೈವ ಇತಿಹಾಸ"ದ ಪುಟ ೮೫ರಲ್ಲಿ ಲೇಖಕರು "ಮಾಧವಾಚಾರ್ಯನ ಸರ್ವದರ್ಶನ ಸಂಗ್ರಹದಲ್ಲಿ ಮಾಹೇಶ್ವರ ದರ್ಶನಗಳಲ್ಲೊಂದಾದ ಶೈವಮತವನ್ನು ಹೇಳಿದೆ. ಅದರಲ್ಲಿ ಪಶುಗಳಲ್ಲಿ ಮೂರು ಭೇದಗಳು, ೧. ವಿಜ್ಞಾನಕಲ, ೨.ಪ್ರಯಾಯಕಲ, ೩. ಸಕಲ. ವಿಜ್ಞಾನಕಲರು ಮಲಯುಕ್ತರು, ಪ್ರಯಾಯಕಲರು ಮಲಕರ್ಮಯುಕ್ತರು, ಮತ್ತು ಸಕಲರು ಮಲಮಾಯ ಕರ್ಮಯುಕ್ತರು. ಇವುಗಳಲ್ಲಿ ಮೊದಲನೇ ವರ್ಗದ ವಿಜ್ಞಾನಕಲದಲ್ಲಿ ಪುನಃ ಎರಡು ಬಗೆ - ಸಮಾಪ್ತಕಲುಷರು ಮತ್ತು ಅಸಮಾಪ್ತಕಲುಷರು. ಸಮಾಪ್ತಕಲುಷರೇ ಪರಮೇಶ್ವರನ ಕೃಪೆಯಿಂದ ವಿದ್ಯೇಶ್ವರ ಪದವಿಗೆ ಬರುವರು. ಅಸಮಾಪ್ತಕಲುಷರು ಮಂತ್ರಗಳಾಗುವರು. ಈ ಮಂತ್ರಗಳು ಏಳು ಕೋಟಿಗಳು. ಮಂತ್ರೇಶ್ವರರು ಏಳು ಕೋಟಿ ಕೋಟಿಗಳು. ಅಂತೆಯೇ ಈ ಮತಕ್ಕೆ ಎಕ್ಕೋಟಿಸಮಯವೆಂದು ಹೆಸರು. ಇಂದಿಗೂ ಕರ್ನಾಟಕದಲ್ಲಿ ಮೈಲಾರನ ಒಕ್ಕಲಿನವರು "ಏಳು ಕೋಟಿ ಏಳು ಕೋಟಿ ಉಘೇ ಚಾಂಗು ಭಲೇ" ಎಂದು ಶಿವನ ಜಯಘೋಷ ಮಾಡುತ್ತಾರೆ. ಇದುವೇ ಪೂರ್ವದ ಲಾಕುಳಸಿದ್ಧಾಂತವಿದ್ದಂತೆ ತೋರುವುದು. ಶಾಸನಗಳಲ್ಲಿ ಇದನ್ನು ಎಕ್ಕೋಟಿ ಸಮಯವೆಂದು ಕರೆಯಲಾಗಿದೆ. ಸರ್ವದರ್ಶನಕಾರನ ಮಾಹೇಶ್ವರರಲ್ಲಿಯ ಶೈವಸಿದ್ಧಾಂತವೂ ಇದೇ. ಈ ಸಿದ್ಧಾಂತವೇ ಮುಂದೆ ಶ್ರೀಕಂಠ ಶಿವಾಚಾರ್ಯನಿಂದ ನಿರೂಪಿಸಲ್ಪಟ್ಟ ಶಕ್ತಿವಿಶಿಷ್ಟಾದ್ವೈತದಲ್ಲಿ ಪರಿಣಾಮವಾಯಿತೆಂದು ಡಾ. ಭಂಡಾರ್ಕರರು ಅಭಿಪ್ರಾಯಪಟ್ಟಿದ್ದಾರೆ" ಎನ್ನುತ್ತಾರೆ.

ಕಾಳಾಮುಖ-ವೀರಶೈವರನ್ನು ಬೆಸೆಯುವ ವೀರ ಮಾಹೇಶ್ವರ, ಜಂಗಮ, ವೀರಬಣಂಜು, ವೀರಪಂಚಾಳ ಪದಗಳ ಜೊತೆಜೊತೆಗೆ ವೀರಶೈವ, ಲಿಂಗಿ, ಲಿಂಗಾಯತ ಮೊದಲಾದ ಹೆಸರುಗಳಿಂದ ಈ ಮತದವರನ್ನು ವ್ಯಾಸನ ಕಾಲದಿಂದಲೂ ಕರೆಯುತ್ತಿದ್ದರು. ವೀರಶೈವ, ವೀರಮಾಹೇಶ್ವರ, ಮಾಹೇಶ್ವರ, ವೀರಬಣಂಜು, ವೀರಪಂಚಾಳ ಎಂಬ ಹೆಸರುಗಳನ್ನು ಬಹುಮಟ್ಟಿಗೆ ಗ್ರಂಥಗಳಲ್ಲಿ ಉಪಯೋಗಿಸಲ್ಪಟ್ಟರೆ ಜಂಗಮ, ಲಿಂಗಿ, ಲಿಂಗಿ ಬ್ರಾಹ್ಮಣ, ಲಿಂಗವಂತ, ಲಿಂಗಾಯತವೆಂಬ ಪದಗಳು ಜನಸಾಮಾನ್ಯರಿಂದ ಉಪಯೋಗಿಸಲ್ಪಡುತ್ತಿದ್ದವು. ಈ ಹಿನ್ನೆಲೆಯಲ್ಲಿ ಸಿದ್ದಗಂಗಾ ಮಠವು 'ಪಟ್ಟಣಗಳಲ್ಲಿ ವೀರಶೈವ ಎನ್ನುತ್ತಾರೆ, ಹಳ್ಳಿಗಳಲ್ಲಿ ಲಿಂಗಾಯತ ಎನ್ನುತ್ತಾರೆ. ಎರಡೂ ಒಂದೇ' ಎಂದು ಕೆಲವು ವರ್ಷಗಳ ಹಿಂದೆ ವೀರಶೈವ ಬೇರೆ ಲಿಂಗಾಯತ ಬೇರೆ ಎಂಬ ಅಭಿಪ್ರಾಯ ಭುಗಿಲೆದ್ದಾಗ ಹೇಳಿಕೆ ನೀಡಿದ್ದನ್ನು ಇಲ್ಲಿ ಸಾಂದರ್ಭಿಕವಾಗಿ ನೆನಪಿಸಿಕೊಳ್ಳಬಹುದು. ಶಿವಜ್ಞಾನಿ ವಿದ್ಯಾಪಾರಾಂಗತರಾದ ವೀರಶೈವಿಗರನ್ನು ಜನಸಾಮಾನ್ಯರು ಇವರೂ ಬ್ರಹ್ಮಜ್ಞಾನಿ ವಿದ್ಯಾಪಾರಾಂಗತರಾದ ಬ್ರಾಹ್ಮಣರೇ ಆಗಿದ್ದಾರೆ ಎಂದು ವರ್ಣಾಶ್ರಮದ ಪ್ರಕಾರ ಸಮೀಕರಿಸಿ ವೀರಶೈವರನ್ನು "ಲಿಂಗಿ ಬ್ರಾಹ್ಮಣ"ರು ಎನ್ನುತ್ತಿದ್ದರು. ಇಂತಹ ವರ್ಣಾಶ್ರಮ ಸಮೀಕರಣದಲ್ಲಿ ಬೌದ್ಧ ಸನ್ಯಾಸಿಗಳನ್ನೂ ಬ್ರಾಹ್ಮಣರೆಂದೇ ಸಾಮಾನ್ಯರು ಪರಿಗಣಿಸಿದ್ದರು. ಈ ಲಿಂಗಿ ಬ್ರಾಹ್ಮಣ ಎನ್ನುವುದೇ ಲಿಂಗಿಯತಿಯಾಗಿ ಲಿಂಗಾಯತಿ/ತವಾಯಿತು. ದೇಶದ ತುಂಬೆಲ್ಲಾ ನಾಮಪದಗಳು ಹೇಗೆ ನಿಷ್ಪತ್ತಿಗೊಂಡವೋ (ಅಪಭ್ರಂಶಗೊಂಡೋ ಆಡುಮಾತಿಗೆ ಸಿಲುಕಿಯೋ) ಹಾಗೆಯೇ "ಲಿಂಗಾಯತ" ಪದದ ವ್ಯುತ್ಪತ್ತಿ "ಲಿಂಗಿ ಬ್ರಾಹ್ಮಣ" ಪದದಿಂದಲೇ ಆಯಿತು ಎನ್ನಬಹುದು. ಆದರೆ ಇಂತಹ ಸಾಮಾನ್ಯ ಭಾಷಾ ಬೆಳವಣಿಗೆಯ ಪದೋತ್ಪತ್ತಿಯನ್ನು ಕನ್ನಡದಲ್ಲಿ ಸ್ನಾತಕೋತ್ತರ, ಪಿಹೆಚ್ಡಿ, ಪೋಸ್ಟ್ ಡಾಕ್ಟೋರಲ್ ಪದವಿ ಪಡೆದು ಸಂಶೋಧನೆ ಮಾಡಿರುವ ಪಂಡಿತರೇ ಪ್ರಭೃತಿ ಕಾಮಾಲೆಗೊಳಗಾಗಿ "ಕಲ್ಬುರ್ಗಿ ನಾಥ ಪ್ರಮೇಯ"ದನ್ವಯ ಲಿಂಗಿ ಬ್ರಾಹ್ಮಣ ಎಂದರೆ ಇಂದಿನ ವರ್ತಮಾನದ ಬ್ರಾಹ್ಮಣ ಜಾತಿಗೆ ಸಮೀಕರಿಸಿ "ಷರಾ" ಬರೆದು ಜನಸಾಮಾನ್ಯರನ್ನು ವಿಸ್ಮೃತಿಗೆ ನೂಕಿದ್ದಾರೆ. ವಿಪರ್ಯಾಸವೆಂದರೆ ಇವರ ಅಂತರಂಗವೇ ಅವಧೂತ ಸದೃಶವಾಗಿ ಇವರ ಒಂದು ಕೃತಿಯ ಹೆಸರನ್ನು "ಸಂಸ್ಕೃತಿ ವಿಕೃತಿ" ಎಂದಾಗಿಸಿದೆ.

ಈ “ಲಿಂಗಾಯತ” ಪದವನ್ನು ಪಂಡಿತರು ನಾನಾ ರೀತಿಯಲ್ಲಿ ನಿರ್ವಚಿಸುತ್ತಾರೆ. ಬಾಗಾಯತ, ಪಂಚಾಯತ ಮೊದಲಾದ ಪದಗಳಂತೆ ಇದೂ ಒಂದು ಪದ ಎನ್ನುತ್ತಾರೆ. ಆದರೆ ಆಯತ, ಸ್ವಾಯತ, ಸನ್ನಿಹಿತವೆಂಬ ಪದಗಳು ವಚನಕಾರರಲ್ಲಿ ವಿಶೇಷಾರ್ಥದಲ್ಲಿ ಉಪಯೋಗಿಸಲ್ಪಟ್ಟವೆ. ವ್ಯಾಸನ ಸ್ಕಂದಪುರಾಣದಲ್ಲಿ ತಿಳಿಸಿದ ವೀರಶೈವ ಇಷ್ಟಲಿಂಗಾರ್ಚನೆಯ ಕ್ರಮಕ್ಕನುಗುಣವಾಗಿ ಶಿಷ್ಯನ ಚಿತ್ಕಲೆಯನ್ನು ಲಿಂಗದಲ್ಲಿ ವಿಧ್ಯುಕ್ತಕ್ರಮದಿಂದ ಆಹ್ವಾನಿಸಿ ಗುರುವು ಶಿಷ್ಯನಿಗೆ ಆ ಲಿಂಗದ ಸಂಬಂಧವನ್ನುಂಟುಮಾಡಿದಾಗ ಆತನು ಲಿಂಗಾಯತನಾಗುವನು; ಇದು ಆಯತ. ಅವನು ಪ್ರಾಣಲಿಂಗಾನುಸಂಧಾನನನ್ನು ಮಾಡಬಲ್ಲವನಾಗಲು ಲಿಂಗವು ಸ್ವಾಯತವಾಗುವುದು; ಅವನು ಭಾವಲಿಂಗಾನುಸಂಧಾನವನ್ನು ಮಾಡಲು ಬಲ್ಲವನಾಗಲು ಲಿಂಗವು ಸನ್ನಿಹಿತವಾಗುವುದು.

ಹೀಗೆ ಎಲ್ಲಾ ಐತಿಹಾಸಿಕ, ಪೌರಾಣಿಕ ಮತ್ತು ಸಾಮಾಜಿಕ ಸಾಕ್ಷ್ಯಗಳು ಆಕರ ಗ್ರಂಥಗಳು ಪಾಶುಪತ-ಲಾಕುಳ-ಕಾಳಾಮುಖ-ವೀರಶೈವ-ಲಿಂಗಾಯತಗಳು ಒಂದೇ ಎಂದು ಪುರಾವೆ ಕೊಡುತ್ತಾ ಸಾಗಿಬಂದಿವೆ. ಪಶುಪತಿ ಅಂದರೆ ನಾನು ಪಶು (ಭಕ್ತ). ನನ್ನ ಪತಿ (ಒಡೆಯ) ಆ ಶಿವ ಎಂಬ ಪಾಶುಪತಾರ್ಥವೇ ವೀರಶೈವ ಶರಣ ಲಿಂಗಾಯತರ "ಶರಣಸತಿ-ಲಿಂಗಪತಿ"ಯಾಗಿದೆ. ಈ ಎಲ್ಲಾ ಹಿನ್ನೆಲೆಯಲ್ಲಿ ಕ್ರಿಸ್ತಪೂರ್ವದ ಮೊಹೆಂಜೋ-ದಾರೋ ಕಾಲದಿಂದಲೂ ಶೈವಪಥ ಆಚರಣೆಯಲ್ಲಿದ್ದು ಮತ್ತು ಇತಿಹಾಸದುದ್ದಕ್ಕೂ ತಾನು ಸಾಗಿಬಂದ ಪಥದ ಗುರುತನ್ನು ಢಾಳಾಗಿ ತೋರುತ್ತ ಸಂಶೋಧನೆಗಳಿಗೆ ಸಾಕ್ಷ್ಯವನ್ನು ಕೊಟ್ಟಿದೆ. ಹಾಗಾಗಿ ರೇಣುಕರಾಗಲಿ ಬಸವಣ್ಣನಾಗಲಿ ಈ ಪಥದಲ್ಲಿ ಸಾಗಿದ ಸಹಸ್ರಾರು ಶಿವಪಥಿಗಳಂತೆ ಪಂಥ ಪರಿಚಾರಕರೇ ಹೊರತು ಸಂತ ಸಂಸ್ಥಾಪಕರಲ್ಲ!

ಕಾಳಾಮುಖಿ ಏಕಾಂತರಾಮಯ್ಯನನ್ನು, ಶಕ್ತಿವಿಶಿಷ್ಟಾದ್ವೈತಕ್ಕೆ ಭಾಷ್ಯ ಬರೆದ ಶ್ರೀಪತಿ ಪಂಡಿತಾರಾಧ್ಯರನ್ನು, ರೇಣುಕರನ್ನು, ರೇವಣಸಿದ್ಧರನ್ನಲ್ಲದೆ ಸಮಗ್ರವಾಗಿ ಕಾಳಾಮುಖ-ವೀರಶೈವ-ಲಿಂಗಾಯತದ ಎಲ್ಲಾ ಮಹಾಪುರುಷರನ್ನು ಒಕ್ಕೂಡಿಸಿಕೊಂಡು ಬರೆದ ಕೆಳಗಿನ ಈ ವಚನಗಳು ಈ ನಿಟ್ಟಿನಲ್ಲಿ ಇವೆಲ್ಲವೂ ಒಂದೇ ಒಂದೇ ಒಂದೇ ಎಂದು ಸಾರಿ ಸಾರಿ ಎತ್ತಿ ಹಿಡಿಯುತ್ತವೆ.

'ಬಸವಣ್ಣನೆನ್ನ ಅಂಗ, ಮಡಿವಾಳನೆನ್ನ ಮನ,
ಪ್ರಭುವೆನ್ನ ಪ್ರಾಣ, ಚನ್ನಬಸವನೆನ್ನ ಕರಸ್ಥಲದ ಲಿಂಗ,
ಘಟ್ಟಿವಾಳನೆನ್ನ ಭಾವ, ಸೊಡ್ಡಳಬಾಚರಸರೆನ್ನ ಅರಿವು,
ಮಹಾದೇವಿಯಕ್ಕನೆನ್ನ ಜ್ಞಾನ, ಮುಕ್ತಾಯಕ್ಕನೆನ್ನ ಅಕ್ಕರು,
ಸತ್ಯಕ್ಕನೆನ್ನ ಯುಕ್ತಿ, ನಿಂಬಿಯಕ್ಕನೆನ್ನ ನಿಶ್ಚಯ,
ಅಲ್ಲಾಳಿಯಕ್ಕನೆನ್ನ ಸಮತೆ, ಅನುಮಿಷನೆನ್ನ ನಿಶ್ಚಲ,
ನಿಜಗುಣನೆನ್ನ ಕ್ಷಮೆ, ರೇವಣಸಿದ್ಧಯ್ಯದೇವರೆನ್ನ ನೇತ್ರ,
ಸಿದ್ಧರಾಮತಂದೆಗಳೆನ್ನ ನೇತ್ರದ ದೃಕ್ಕು,
ಮರುಳುಸಿದ್ಧಯ್ಯದೇವರೆನ್ನ ಶ್ರೋತೃ,
ಪಂಡಿತಾರಾಧ್ಯರೆನ್ನ ಜಿಹ್ವೆ, ಏಕೋರಾಮಯ್ಯಗಳೆನ್ನ ನಾಸಿಕ,
ಅಸಂಖ್ಯಾತರೆನ್ನ ಅವಯವಂಗಳು, ಪುರಾತರೆನ್ನ ಪುಣ್ಯದ ಪುಂಜ,
ಏಳುನೂರೆಪ್ಪತ್ತು ಅಮರಗಣಂಗಳೆನ್ನ ಗತಿಮತಿ ಚೈತನ್ಯ,
ಸೌರಾಷ್ಟ್ರ ಸೋಮೇಶ್ವರಾ, ಆ ನಿಮ್ಮ ಶರಣರ ಪಡಿದೊತ್ತಯ್ಯಾ'
(ಸಮಗ್ರ ವಚನ ಸಂಪುಟ: ೬ ವಚನದ ಸಂಖ್ಯೆ: ೧೦೩೪)
***
'ಬಸವಣ್ಣನ ಭಕ್ತಿಸ್ಥಲ, ಮಡಿವಾಳ ಮಾಚಣ್ಣನ ಮಾಹೇಶ್ವರಸ್ಥಲ,
ಘಟ್ಟಿವಾಳ ಮುದ್ದಣ್ಣನ ಪ್ರಸಾದಿಸ್ಥಲ, ಚನ್ನಬಸವಣ್ಣನ ಪ್ರಾಣಲಿಂಗಿಸ್ಥಲ,
ಪ್ರಭುವಿನ ಶರಣಸ್ಥಲ, ಸೊಡ್ಡಳ ಬಾಚರಸರ ಐಕ್ಯಸ್ಥಲ,
ಅಜಗಣ್ಣನ ಆರೂಢ, ನಿಜಗುಣನ ಬೆರಗು,
ಅನುಮಿಷನ ನಿಶ್ಚಲ, ಮಹದೇವಿಯಕ್ಕನ ಜ್ಞಾನ,
ನಿಂಬಿಯಕ್ಕನ ನಿಶ್ಚಯ, ಮುಕ್ತಾಯಕ್ಕನ ಅಕ್ಕರು,
ಸತ್ಯಕ್ಕನ ಯುಕ್ತಿ, ಅಲ್ಲಾಳಿಯಕ್ಕನ ಸಮತೆ,
ರೇವಣಸಿದ್ಧಯ್ಯದೇವರ ನಿಷ್ಠೆ, ಸಿದ್ಧರಾಮತಂದೆಗಳ ಮಹಿಮೆ,
ಮರುಳಸಿದ್ಧಯ್ಯದೇವರ ಅದೃಷ್ಟ ಪ್ರಸಾದನಿಷ್ಠೆ,
ಏಕೋರಾಮಯ್ಯಗಳ ಆಚಾರನಿಷ್ಠೆ,
ಪಂಡಿತಾರಾಧ್ಯರ ಸ್ವಯಂಪಾಕ,
ಮುಗ್ಧಸಂಗಯ್ಯ, ಮೈದುನ ರಾಮಣ್ಣ, ಬೇಡರ ಕಣ್ಣಪ್ಪ,
ಕೋಳೂರ ಕೊಡಗೂಸು, ತಿರುನೀಲಕ್ಕರು,
ರುದ್ರಪಶುಪತಿಗಳು, ದೀಪದ ಕಲಿಯಾರ ಮುಗ್ಧಭಕ್ತಿ
ನಿಮ್ಮೊಳೆನಗೆಂದಪ್ಪುದೊ ಸೌರಾಷ್ಟ್ರ ಸೋಮೇಶ್ವರಾ'
(ಸಮಗ್ರ ವಚನ ಸಂಪುಟ: ೬ ವಚನದ ಸಂಖ್ಯೆ: ೧೦೩೩)
***
ನಂದೀಶ್ವರ, ಭೃಂಗೀಶ್ವರ, ವೀರಭದ್ರ,
ದಾರುಕ, ರೇಣುಕ, ಶಂಖುಕರ್ಣ, ಗೋಕರ್ಣ,
ಏಕಾಕ್ಷರ, ತ್ರಯಕ್ಷರ, ಪಂಚಾಕ್ಷರ, ಷಡಕ್ಷರ,
ಸದಾಶಿವ, ಈಶ್ವರ, ಮಹೇಶ್ವರ, ರುದ್ರ,
ಘಂಟಾಕರ್ಣ, ಗಜಕರ್ಣ,
ಏಕಮುಖ, ದ್ವಿಮುಖ, ತ್ರಿಮುಖ, ಚತುರ್ಮುಖ, ಪಂಚಮುಖ,
ಷಣ್ಮುಖ, ಶತಮುಖ, ಸಹಸ್ರಮುಖ ಮೊದಲಾದ
ಗಣಾಧೀಶ್ವರರು ಇವರು,
ನಿತ್ಯಪರಿಪೂರ್ಣವಹಂಥ ಪರಶಿವತತ್ವದಲ್ಲಿ
ಜ್ಯೋತಿಯಿಂದ ಜ್ಯೋತಿ ಉದಿಸಿದಂತೆ ಉದಯಿಸಿದ
ಶುದ್ಧ ಚಿದ್ರೂಪರಪ್ಪ ಪ್ರಮಥರು.
ಅನಾದಿಮುಕ್ತರಲ್ಲ, ಅವಾಂತರಮುಕ್ತರೆಂಬ ನಾಯ ನಾಲಗೆಯ
ಹದಿನೆಂಟು ಜಾತಿಯ ಕೆರಹಿನಟ್ಟಿಗೆ ಸರಿಯೆಂಬೆ.
ಆ ಶ್ವಾನಜ್ಞಾನಿಗಳಪ್ಪವರ ಶೈವಪಶುಮತವಂತಿರಲಿ,
ಅವರಾಗಮವಂತಿರಲಿ.
ನಿಮ್ಮ ಶರಣರಿಗೆ, ನಿಮಗೆ, ಬೇರೆ ಮಾಡಿ ಸಂಕಲ್ಪಿಸಿ ನುಡಿವ
ಅಜ್ಞಾನಿ ಹೊಲೆಯರ ಎನಗೊಮ್ಮೆ ತೋರದಿರಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
ಸಮಗ್ರ ವಚನ ಸಂಪುಟ: 11 ವಚನದ ಸಂಖ್ಯೆ: 55

ವೀರಶೈವ-ಲಿಂಗಾಯತ ಒಂದೇ ಎನ್ನುವ ಅಭಿಪ್ರಾಯದ ಇಂತಹ ಎಲ್ಲಾ ವಚನಗಳು ಕಲಬುರ್ಗಿಯವರ ನಾಲಿಗೆಗೆ ರುಚಿಸದ ಕಾರಣ ಇವುಗಳನ್ನು "ಪ್ರಕ್ಷೇಪ" ಎಂದು ಕರೆದಿದ್ದಾರೆ ಎನ್ನುವುದು ಇಲ್ಲಿ ಮತ್ತೊಂದು ತೌಲನಿಕ ಅಧ್ಯಯನದ ಸಂಶೋಧನಾರ್ಹ ಸಂಗತಿ.

ಇನ್ನು ಅಲ್ಲಮ ತನ್ನ ವಚನದಲ್ಲಿ ಕೈ, ಕೊರಳು, ತಲೆಯಲ್ಲಿ ಲಿಂಗ ಕಟ್ಟುವವರೆಲ್ಲ ತನ್ನ ಆದ್ಯರೇ ಎಂದಿದ್ದಾನೆ,

ಕೈಯಲ್ಲಿ ಕಟ್ಟುವರು ಕೊರಳಲ್ಲಿ ಕಟ್ಟುವರು,
ಮೈಯಲ್ಲಿ ಕಟ್ಟುವರು ಮಂಡೆಯಲ್ಲಿ ಕಟ್ಟುವರು,
ಮನದಲ್ಲಿ ಲಿಂಗವ ಕಟ್ಟರಾಗಿ!
ಆದ್ಯರು ಹೋದರೆಂದು ವಾಯಕ್ಕೆ ಸಾವರು.
ಸಾವುದು ವಿಚಾರವೆ ಗುಹೇಶ್ವರಾ?
(ಸಮಗ್ರ ವಚನ ಸಂಪುಟ: 2 ವಚನದ ಸಂಖ್ಯೆ: 1140)

ಇದಿಷ್ಟು ಕಾಳಾಮುಖ-ವೀರಶೈವ-ಲಿಂಗಾಯತದ ಶತಶತಮಾನಗಳ ಅನುಸಂಧಾನಿ ರೂಪಾಂತರ. ಹಾಗಾಗಿಯೇ ಈಗ ಬಿಡುಗಡೆಯಾಗಬೇಕಿರುವ ಸಿದ್ದರಾಮಯ್ಯನವರ ಜಾತಿ ಜನಗಣತಿಯಲ್ಲಾಗಲಿ ಅಥವಾ ಹಿಂದಿನ ಯಾವುದೇ ಜನಗಣತಿಗಳಲ್ಲಾಗಲಿ ಒಬ್ಬನೇ ಒಬ್ಬ ವ್ಯಕ್ತಿ ತಾನು ಕಾಳಾಮುಖನೆಂದು ನೋಂದಾಯಿಸಿಕೊಂಡಿಲ್ಲ. ಇದಕ್ಕಿಂತ ಬಹುದೊಡ್ಡ ಪುರಾವೆಯನ್ನು ಇನ್ಯಾವುದೇ ಸಂಶೋಧಕ, ಸಂಸ್ಕೃತಿ ಚಿಂತಕ, ಮಾಜಿ ಹಾಲಿ ಸರ್ಕಾರಿ ಸೇವಕ, ಆಡಳಿತ ನಿಯಂತ್ರಕ, ನ್ಯಾಯ ನಿರ್ಣಾಯಕ, ಚೊಕ್ಕ ಪತ್ರಕರ್ತ, ಸಮಾಜವಾದಿ ನಾಯಕರ ಭೋಜನಶಾಲೆಯ ವಿದೂಷಕ ಅಥವಾ ಆ ಸಾಕ್ಷಾತ್ ಲಿಂಗರೂಪಿ ಪರಶಿವನೇ ಅಂಗರೂಪವೆತ್ತಿ ಬಂದರೂ ಕೊಡಲಾರ!

ಇದು ಸವಾಲುವಾದದ ಕಾಳಾಮುಖದ ಪಾರಂಪರಿಕ ಸವಾಲು.

- ರವಿ ಹಂಜ್

ವಿಶ್ವವಾಣಿ ಬಸವ ಮಂಟಪ - ಕಲ್ಯಾಣಕ್ರಾಂತಿಯ ಸತ್ಯ!

 ಇಸ್ಲಾಂ ದಾಳಿಯಿಂದುಂಟಾದ ಧಾರ್ಮಿಕ ನಿರ್ವಾತವನ್ನು ತುಂಬಲು ಹನ್ನೊಂದನೇ ಶತಮಾನದ ಅಂತ್ಯದಿಂದ ಉತ್ತರ ಭಾರತದಲ್ಲಿ ಆರಂಭವಾದ ’ಹುಟ್ಟಿನಿಂದ ಜಾತಿ’ ನೀತಿಯು ಹನ್ನೆರಡನೇ ಶತಮಾನದ ಮಧ್ಯದಲ್ಲಿ ದಕ್ಷಿಣಕ್ಕೆ ಬಂದಿತು. ’ವೃತ್ತಿಯಿಂದ ಜಾತಿ’ ಹೋಗಿ ’ಹುಟ್ಟಿನಿಂದ ಜಾತಿ’ಯನ್ನು ಕಟ್ಟುನಿಟ್ಟಿನ ನಿಯಮವಾಗಿಸುವ ಕಟ್ಟಳೆಯೊಂದಿಗೆ ಗೋಮಾಂಸ ಭಕ್ಷಣೆ ನಿಷೇಧ, ಅಂತರ್ಜಾತಿ ವಿವಾಹ ನಿಷೇಧ ಮುಂತಾದ ಹೊಸ ಧರ್ಮಸೂತ್ರಗಳನ್ನು ಅನುಷ್ಠಾನಕ್ಕೆ ತರಲಾಯಿತು. ಮಾಂಸೋದ್ಯಮದ ಕಾರಣ ಊರಿನ ಹೊರಗಿರುತ್ತಿದ್ದ ಚಾಂಡಾಲ, ಬೆಸ್ತ ಮುಂತಾದರನ್ನು ಹುಟ್ಟಿನ ಕಾರಣ ಶಾಶ್ವತವಾಗಿ ಕೆಳಸ್ತರದ ಉದ್ಯೋಗಗಳಿಗೆ ಸೀಮಿತಗೊಳಿಸಿ ಅವರನ್ನು ಅಲ್ಲಿಯೇ ಇರುವಂತೆ ಶಾಶ್ವತಗೊಳಿಸಲಾಯಿತು. ಇದೇ ಸೂತ್ರವನ್ನು ವೀರಶೈವ ಪಂಥ ಕೂಡಾ ಅಳವಡಿಸಿಕೊಳ್ಳಲು ಮೊದಲ್ಗೊಂಡಿತು. ಇದಕ್ಕೆ ತೀವ್ರವಾದ ವಿರೋಧ ಕೂಡಾ ತಕ್ಷಣಕ್ಕೆ ಸೃಷ್ಟಿಯಾಯಿತು. ಅದನ್ನು ವಿರೋಧಿಸಿ ಸಂಘಟನೆಗೊಂಡು ನಡೆದ ಕ್ರಾಂತಿಯೇ ಕಲ್ಯಾಣಕ್ರಾಂತಿ!


ಆದರೆ ಈ ಕ್ಷಿಪ್ರ ಕ್ರಾಂತಿ ನಡೆಯುವ ಮುನ್ನ ಸಾಕಷ್ಟು ಪರ, ವಿರೋಧ, ಭಿನ್ನಮತಗಳೆಲ್ಲಾ ನಡೆದು ವೀರಶೈವವು ಜಾತಿ ವೀರಶೈವ ಮತ್ತು ವಿಜಾತಿ ವೀರಶೈವ ಎಂದು ಎರಡಾದುದರ ಸ್ಪಷ್ಟ ಚಿತ್ರಣ ವಚನಸಾಹಿತ್ಯದಲ್ಲಿದೆ.

"ಹುಟ್ಟಿನಿಂದ ಜಾತಿ" ನೀತಿಯನ್ನು ಸಾತ್ವಿಕವಾಗಿ ಪ್ರಶ್ನಿಸುತ್ತ ಕ್ರಮೇಣ ಅತ್ಯುಗ್ರರಾಗಿ ಖಂಡಿಸುವ ಪುರಾವೆಗಳನ್ನು ಸಹ ವಚನಸಾಹಿತ್ಯವು ಸಮಗ್ರವಾಗಿ ಕಟ್ಟಿಕೊಡುತ್ತದೆ. ಈ ಕಾರಣವಾಗಿಯೇ ವಚನಗಳನ್ನು ಸಮಗ್ರವಾಗಿ ಗಮನಿಸಿದಾಗ ಅವುಗಳಲ್ಲೇ ಸಾಕಷ್ಟು ದ್ವಂದ್ವಗಳಿವೆ ಎನಿಸುತ್ತದೆ. ಒಮ್ಮೆ ಆದ್ಯ ವಚನಕಾರರನ್ನು ಹೊಗಳಿದರೆ ಇನ್ನೊಮ್ಮೆ ಅವಹೇಳಿಸುತ್ತಾರೆ. ಒಮ್ಮೆ ಅದ್ವೈತವನ್ನು ಪುರಸ್ಕರಿಸಿ ಮಗದೊಮ್ಮೆ ನಿರಾಕರಿಸುತ್ತಾರೆ. ಒಮ್ಮೆ ಮಾಂಸ, ಮದ್ಯ ಸೇವಿಸುವವರನ್ನು ಖಂಡಿಸಿದರೆ ಇನ್ನೊಮ್ಮೆ ಒಳಗೊಳ್ಳುತ್ತೇವೆ ಎನ್ನುತ್ತಾರೆ. ಇಂತಹ ದ್ವಂದ್ವಗಳು ಬದಲಾದ ಸಾಮಾಜಿಕ ಮತ್ತು ಪಂಥದ ನಿಲುವಿಗೆ ತಕ್ಕಂತೆ ಇವೆಯೇ ಹೊರತು ವಿಕ್ಷಿಪ್ತ ಮನಸ್ಥಿತಿಯಿಂದಲ್ಲ. ಇದು ಕೇವಲ ಓರ್ವ ವಚನಕಾರ/ಕಾರ್ತಿಯಲ್ಲದೆ ಸಾಮೂಹಿಕವಾಗಿ ಎಲ್ಲರಲ್ಲೂ ಈ ಇಬ್ಭಗೆಯ ವಚನಗಳನ್ನು ಕಾಣಬಹುದು. ಪೂರ್ವಾರ್ಧ ಕಲ್ಯಾಣ ಪರ್ವದಲ್ಲಿ ಆದ್ಯರನ್ನು ಹಾಡಿ ಹೊಗಳುತ್ತ ಜೈನರ ವಿರುದ್ಧ ಯುದ್ಧ ಸಾರಿದ್ದ ಈ ಪಂಥ ತಮ್ಮಲ್ಲೇ ಉಂಟಾದ ಈ ಭಿನ್ನಾಭಿಪ್ರಾಯಕ್ಕೆ ತೀವ್ರವಾಗಿ ಬಲಿಯಾಗಿ ಪರಸ್ಪರ ತಮ್ಮತಮ್ಮಲ್ಲೇ ಹೋರಾಡತೊಡಗಿತು. ಹಾಗಾಗಿಯೇ ಶರಣರ ಉತ್ತರಾರ್ಧದ ಎಲ್ಲಾ ವಚನಗಳಲ್ಲಿ ಗೋಮಾಂಸನಿಷೇಧ, ಹುಟ್ಟಿನಿಂದ ಜಾತಿ, ಕೀಳು ಜಾತಿಯವರು ಮೋಕ್ಷಕ್ಕೆ ಅನರ್ಹರೆಂಬ, ಅಂತರ್ಜಾತಿ ವಿವಾಹ ನಿಷೇಧ ಇವುಗಳ ವಿರುದ್ಧದ ವಚನಗಳ ಜೊತೆಗೆ ತಮ್ಮ ಪಂಥದವರನ್ನೇ ಹೀಯಾಳಿಸುವ ವಚನಗಳಿವೆ. ಹಿಂದಿನ ಅಧ್ಯಾಯದಲ್ಲಿನ ಪೂರ್ವಾರ್ಧದ ವಚನಗಳ ವೈರುಧ್ಯವನ್ನು ಕಲ್ಯಾಣಪರ್ವದ ಉತ್ತರಾರ್ಧ ಕಾಲದಲ್ಲಿ ಕಾಣುತ್ತೇವೆ.

ನವನೂತನ ನಿಯಮವಾದ ’ಹುಟ್ಟಿನಿಂದ ಜಾತಿ’ಯನ್ನು ವಿರೋಧಿಸಿ ಸನಾತನವಾಗಿ ರೂಢಿಯಲ್ಲಿದ್ದ ’ವೃತ್ತಿಯಿಂದ ಜಾತಿ’ಯನ್ನು ಎತ್ತಿ ಹಿಡಿಯಲೆಂದೇ ಕಾಯವೇ ಕೈಲಾಸ ಎಂದಿದ್ದ ಬಸವಣ್ಣನು ಆಯ್ದಕ್ಕಿ ಮಾರಯ್ಯನ ’ಕಾಯಕವೇ ಕೈಲಾಸ’ ಎಂಬ ಉದ್ಘೋಷವನ್ನು ತನ್ನ ಮುಂದಿನ ಹೋರಾಟದ ಧ್ಯೇಯೋದ್ದೇಶವಾಗಿಸಿಕೊಂಡನು. ವಚನಚಳವಳಿಯ ಕಾಯಕದ ಕಾಯಕಲ್ಪಕ್ಕೆ ಈ ಜಾತಿಪಲ್ಲಟವೇ ಪ್ರಮುಖ ಕಾರಣ. ಈ ಪಲ್ಲಟದಿಂದ ವೃತ್ತಿಪರತೆಯನ್ನು ಮೆರೆಯುವ ಮತ್ತು ವೃತ್ತಿಯಿಂದಲೇ ಸಾಕ್ಷಾತ್ಕಾರವನ್ನು ಹೊಂದುವ ಚಿಂತನೆಯನ್ನು ಎತ್ತಿ ಹಿಡಿಯುವ ವಚನಗಳು ರಚಿಸಲ್ಪಟ್ಟವು ಎಂಬುದು ಗಮನಾರ್ಹ ಸಂಗತಿ. ಈ ಕುರಿತು ಜನರನ್ನು ಜಾಗೃತಗೊಳಿಸಲು ಶರಣರೆಲ್ಲರೂ ಆಯ್ದಕ್ಕಿ ಮಾರಯ್ಯನ "ಕಾಯಕವೇ ಕೈಲಾಸ" ಉದ್ಘೋಷಕ್ಕೆ ಅನುವಾಗಿ ಸಾಕಷ್ಟು ವಚನಗಳನ್ನು ರಚಿಸಿದರು. ಅಲ್ಲಿಯವರೆಗೆ ಪಂಥ ಶ್ರೇಷ್ಠತೆ, ಪರಪಂಥ ದ್ವೇಷಗಳ ಕುರಿತು ವಚನ ರಚಿಸುತ್ತಿದ್ದ ವಚನಕಾರರು ಈ ಬದಲಾವಣೆಯ ವಿರುದ್ಧ ಕಾಯಕ ಮಹತ್ವದ ವಚನಗಳನ್ನು ರಚಿಸಲು ಮೊದಲ್ಗೊಂಡರು.

ಆಯ್ದಕ್ಕಿ ಮಾರಯ್ಯನ "ಕಾಯಕವೇ ಕೈಲಾಸ"ದ ವಚನವು ’ವೃತ್ತಿಯಿಂದ ಜಾತಿ’ಯು ’ಹುಟ್ಟಿನಿಂದ ಜಾತಿ’ಯಾದ ಸ್ಥಿತ್ಯಂತರವನ್ನು ಸಮರ್ಥವಾಗಿ ಬಿಂಬಿಸುತ್ತದೆ. ಕಾಯಕದ ಮುಂದೆ ಇನ್ನೆಲ್ಲವೂ ಕಾಯಲೇಬೇಕು ಎಂಬ ಅವನ ವಚನ ಹೀಗಿದೆ:

ಕಾಯಕದಲ್ಲಿ ನಿರತನಾದಡೆ, ಗುರುದರ್ಶನವಾದಡೂ
ಮರೆಯಬೇಕು ಲಿಂಗಪೂಜೆಯಾದಡೂ ಮರೆಯಬೇಕು, ಜಂಗಮ ಮುಂದೆ ನಿಂದಿದ್ದಡೂ ಹಂಗ ಹರಿಯಬೇಕು, ಕಾಯಕವೆ ಕೈಲಾಸವಾದ ಕಾರಣ
ಅಮರೇಶ್ವರಲಿಂಗವಾಯಿತ್ತಾದಡೂ ಕಾಯಕದೊಳಗು.
(ಸಮಗ್ರ ವಚನ ಸಂಪುಟ: ೬ ವಚನದ ಸಂಖ್ಯೆ: ೧೧೭೦)

ಅದೇ ಬಸವಣ್ಣನು ಸ್ಥಿತ್ಯಂತರ ಪೂರ್ವದಲ್ಲಿ ಕಾಯವನ್ನು ಕೈಲಾಸವೆಂದಿರುವ ವಚನವು ಹೀಗಿದೆ:

ಶರಣ ನಿದ್ರೆಗೈದಡೆ ಜಪ ಕಾಣಿರೊ,
ಶರಣನೆದ್ದು ಕುಳಿತಡೆ ಶಿವರಾತ್ರಿ ಕಾಣಿರೊ,
ಶರಣ ನಡೆದುದೆ ಪಾವನ ಕಾಣಿರೊ,
ಶರಣ ನುಡಿದುದೆ ಶಿವತತ್ವ ಕಾಣಿರೊ,
ಕೂಡಲಸಂಗನ ಶರಣನ
ಕಾಯವೆ ಕೈಲಾಸ ಕಾಣಿರೊ.
(ಸಮಗ್ರ ವಚನ ಸಂಪುಟ: ೧ ವಚನದ ಸಂಖ್ಯೆ: ೮೭೩)

ಆಯ್ದಕ್ಕಿ ಮಾರಯ್ಯನದು ಕಲ್ಯಾಣಕ್ರಾಂತಿಯ ಉತ್ತರಾರ್ಧದಲ್ಲಿ ರಚಿತಗೊಂಡಿದ್ದರೆ, ಬಸವಣ್ಣನ ವಚನ ಪೂರ್ವಾರ್ಧದ್ದು ಎಂದು ಸ್ಪಷ್ಟವಾಗಿ ಹೇಳಬಹುದು. ಏಕೆಂದರೆ ಮಾರಯ್ಯನು ಕಾಯಕದ ಮುಂದೆ ತನ್ನ ಆದ್ಯದೈವ ಅಮರಲಿಂಗವೂ ಸೇರಿದಂತೆ ಎಲ್ಲವೂ ತಿರಸ್ಕೃತ ಎಂದರೆ, ಬಸವಣ್ಣನು ತನ್ನ ಆರಾಧ್ಯದೈವಿ ಶರಣರು ಎಲ್ಲಕ್ಕಿಂತ ಪುರಸ್ಕೃತ ಎಂದಿದ್ದಾನೆ. ಇದು ವಚನಗಳಲ್ಲಿನ ಸ್ಥಿತ್ಯಂತರ ಪಲ್ಲಟದ ಮತ್ತೊಂದು ಸ್ಪಷ್ಟ ನಿದರ್ಶನ. ಕಾಯಕ್ಕೂ ಮತ್ತು ಕಾಯಕಕ್ಕೂ ಇರುವ ಒಂದಕ್ಷರದ ವ್ಯತ್ಯಾಸವೇ "ಕ"ಲ್ಯಾಣ ಕ್ರಾಂತಿಯ ಮೂಲ!

ಹೀಗೆ ವಚನಗಳಲ್ಲುಂಟಾದ ಈ (Paradigm Shift) ಸ್ಥಿತ್ಯಂತರ ಬದಲಾವಣೆಗಳನ್ನು ಸ್ಪಷ್ಟವಾಗಿ ಗುರುತಿಸಬಹುದು. ಅದಕ್ಕೆ ನಿದರ್ಶನವಾಗಿ ಈ ಕೆಳಗಿನ ವಚನಗಳಾಧರಿತ ಸಂಕಥನವು ಮತ್ತಷ್ಟು ಸ್ಪಷ್ಟತೆಯನ್ನು ತೋರುತ್ತದೆ.

’ಹುಟ್ಟಿನಿಂದ ಜಾತಿ’ಯಲ್ಲದೆ ’ಅಂತರ್ಜಾತೀಯ ವಿವಾಹ ಬಹಿಷ್ಕಾರ’, ’ಗೋಮಾಂಸಭಕ್ಷಣೆ ನಿಷೇಧ’ ಮುಂತಾದ ನವ ನಿಯಮಗಳನ್ನು ಆಗಷ್ಟೇ ಜಾರಿಗೊಳಿಸಿದ್ದನ್ನು ಕೇಳಿದಾಕ್ಷಣ ಬಸವಣ್ಣನು ಹೇಗೆ ಪ್ರತಿಕ್ರಿಯಿಸಿರಬಹುದೆಂದು ಅವನ ವಚನಗಳ ಧಾಟಿಯಿಂದಲೇ ತಿಳಿದು ಬರುತ್ತದೆ:

"ಉತ್ತಮ ಕುಲದಲ್ಲಿ ಹುಟ್ಟಿದೆನೆಂಬ ಕಷ್ಟತನದ ಹೊರೆಯ ಹೊರಿಸಿದಿರಯ್ಯ!
ಕಕ್ಕಯ್ಯನೊಕ್ಕುದನಿಕ್ಕ ನೋಡಯ್ಯ,
ದಾಸಯ್ಯ ಶಿವದಾನವನೆರೆಯ ನೋಡಯ್ಯ.
ಮನ್ನಣೆಯ ಚೆನ್ನಯ್ಯನೆನ್ನುವ ಮನ್ನಿಸ. ಉನ್ನತಮಹಿಮ ಕೂಡಲಸಂಗಮದೇವಾ ಶಿವಧೋ! ಶಿವಧೋ!!"
(ಸಮಗ್ರ ವಚನ ಸಂಪುಟ: ೧ ವಚನದ ಸಂಖ್ಯೆ: ೩೪೪)

ಈ ವಚನದಲ್ಲಿ ನನಗೆ ಉತ್ತಮ ಜಾತಿಯಲ್ಲಿ ಹುಟ್ಟಿದೆನೆಂಬ ಭಾರವ ಹೊರಿಸಿದಿರಿ ಎಂದು ತಮ್ಮ ಪಂಥದ ಹಿರಿಯರನ್ನು ದೂರುತ್ತಾನೆ. ಇಲ್ಲಿ ಗಮನಿಸಬೇಕಾದ ಸಂಗತಿ "ಹೊರಿಸಿದಿರಯ್ಯ" ಎಂಬ ವರ್ತಮಾನಕಾಲ ಸೂಚಕ. ಅಂದರೆ ಈ ಹೊಸ ನೀತಿ ನಿಯಮಾವಳಿಗಳನ್ನು ತನ್ನ ಹಿರಿಯರಿಂದ ಆಗಷ್ಟೇ ಕೇಳಿ ಬಸವಣ್ಣನು ತಣ್ಣಗೆ ಪ್ರತಿಕ್ರಿಯಿಸಿದ್ದಾನೆ ಎನ್ನಬಹುದು.

ಅದಲ್ಲದೆ ಬಸವಣ್ಣನು ಹಿರಿಯ ಆದ್ಯ ವಚನಕಾರರಾಗಿದ್ದ ಮಾಚಯ್ಯ, ಕಕ್ಕಯ್ಯ, ಚೆನ್ನಯ್ಯರನ್ನು ಈ ಹೊಸ ಹುಟ್ಟುಜಾತಿಯ ಕಾರಣ ಹೀನಜಾತಿಯವರೆನ್ನಬೇಕೆ ಎಂದೂ ತನ್ನ ಇನ್ನೊಂದು ವಚನದಲ್ಲಿ,

"ಮಡಿವಾಳನೆಂಬೆನೆ ಮಾಚಯ್ಯನ?
ಡೋಹರನೆಂಬೆನೆ ಕಕ್ಕಯ್ಯನ?
ಮಾದಾರನೆಂಬೆನೆ ಚೆನ್ನಯ್ಯನ?
ಆನು ಹಾರುವನೆಂದರೆ, ಕೂಡಲಸಂಗಯ್ಯ ನಗುವನಯ್ಯ"
(ಸಮಗ್ರ ವಚನ ಸಂಪುಟ: ೧ ವಚನದ ಸಂಖ್ಯೆ: ೩೪೫) ಪ್ರಶ್ನಿಸಿದ್ದಾನೆ.

ನಂತರದ ಈ ಕೆಳಗಿನ ವಚನದಲ್ಲಿ ಬಸವಣ್ಣನು ತನ್ನ ಸಹ ಶರಣರರೊಟ್ಟಿಗೆ ಈ ಹೊಸ ನಿಯಮಾವಳಿಗಳನ್ನು ಚರ್ಚಿಸಿ,

"ಮುನ್ನಿನ ಆದ್ಯರ ಪಥಂಗಳು ಇನ್ನಾರಿಗೂ ಅಳವಡವು ನೋಡಾ.
ಬಲ್ಲೆನಾಗಿ ಒಲ್ಲೆನು ಅವರ, ಸಲ್ಲರು ಶಿವಪಥಕ್ಕೆ.
ಒಳ್ಳಿಹ ಮೈಲಾರನ ಸಿಂಗಾರದಂತೆ,
ವೇಶಿಯ ಬಾಯ ಎಂಜಲನುಂಬ ದಾಸಿಯ ಸಂಸಾರದಂತೆ,
ಕೂಡಲಸಂಗನ ಶರಣರನರಿಯದೆ ಉಳಿದ ಭಂಗಿತರ."
(ಸಮಗ್ರ ವಚನ ಸಂಪುಟ: ೧ ವಚನದ ಸಂಖ್ಯೆ: ೬೩೪) ಎಂದು ವಿಷಾದ ವ್ಯಕ್ತಪಡಿಸಿರುವ ಸ್ಪಷ್ಟ ಚಿತ್ರಣ ವಚನಗಳಲ್ಲಿದೆ.

ಅಲ್ಲಮನು ಸಹ ಅದಕ್ಕೆ ಸ್ಪಂದಿಸುವವನಂತೆ,

"ಜಾನುಜಂಘೆಯಲಿ ಹುಟ್ಟಿ ಜಂಗಮವೆನಿಸಿಕೊಳಬಹುದೆ?
ಆಠಾವು ಹಿಂಗಿದಡೆ ಭಂಗಿತನು ಕಂಡಾ.
ಅಂತರಂಗದಳೊದಗೂದನರಿಯರು
ಗುಹೇಶ್ವರನೆಂಬುದು ಮೀರಿದ ಘನವ"
(ಅಲ್ಲಮನ ವಚನ ಚಂದ್ರಿಕೆ, ಎಲ್. ಬಸವರಾಜು, ವಚನ ಸಂಖ್ಯೆ ೪೭೦)

ಎಂದು ಹೀಗಳೆಯುತ್ತಾ,

"ಆದ್ಯರಲ್ಲ, ವೇದ್ಯರಲ್ಲ,
ಸಾಧ್ಯರಲ್ಲದ ಹಿರಿಯರ ನೋಡಾ!
ತನುವಿಕಾರ, ಮನವಿಕಾರ, ಇಂದ್ರಿಯವಿಕಾರದ
ಹಿರಿಯರ ನೋಡಾ! ಶಿವಚಿಂತೆ ಶಿವಜ್ಞಾನಿಗಳ
ಆಳವಾಡಿ ನುಡಿವರು ಗುಹೇಶ್ವರನನರಿಯದ ಕರ್ಮಿಗಳಯ್ಯ"
(ಸಮಗ್ರ ವಚನ ಸಂಪುಟ: ೨ ವಚನದ ಸಂಖ್ಯೆ: ೧೨೯)

ಎಂದು ಹುಟ್ಟಿನಿಂದ ಜಾತಿ ಮಾಡಿದ ಶಿವಜ್ಞಾನಿ ಹಿರಿಯರನ್ನು ಮೂದಲಿಸಿದ್ದಾನೆ.

ಯುವಕ ಚೆನ್ನಬಸವಣ್ಣ ಉಗ್ರನಾಗಿ,

"ಜಾತಿವಿಡಿದು ಜಂಗಮವ ಮಾಡಬೇಕೆಂಬ ಪಾತಕರು ನೀವು ಕೇಳಿರೊ:
ಜಾತಿ ಘನವೊ ಗುರುದೀಕ್ಷೆ ಘನವೊ?
ಜಾತಿ ಘನವಾದ ಬಳಿಕ, ಆ ಜಾತಿಯೆ ಗುರುವಾಗಿರಬೇಕಲ್ಲದೆ
ಗುರುದೀಕ್ಷೆ ಪಡೆದು, ಗುರುಕರಜಾತರಾಗಿ
ಜಾತಕವ ಕಳೆದು ಪುನರ್ಜಾತರಾದೆವೆಂಬುದ ಏತಕ್ಕೆ ಬೊಗಳುವಿರೊ?
ಜಾತಿವಿಡಿದು ಕಳೆಯಿತ್ತೆ ಜಾತಿತಮವು? ಅಜಾತಂಗೆ ಆವುದು ಕುಲಳ
ಆವ ಕುಲವಾದಡೇನು ದೇವನೊಲಿದಾತನೆ ಕುಲಜ.
ಅದೆಂತೆಂದಡೆ; ದೀಯತೇ ಜಾನಸಂಬಂಧಃ ಕ್ಷೀಯತೇ ಚ ಮಲತ್ರಯಂ
ದೀಯತೇ ಕ್ಷೀಯತೇ ಯೇನ ಸಾ ದೀಕ್ಷೇತಿ ನಿಗದ್ಯತೇ ಎಂಬುದನರಿದು,
ಜಾತಿ ನಾಲ್ಕುವಿಡಿದು ಬಂದ ಜಂಗಮವೇ ಶ್ರೇಷ್ಠವೆಂದು
ಅವನೊಡಗೂಡಿಕೊಂಡು ನಡೆದು ಜಾತಿ ಎಂಜಲುಗಳ್ಳರಾಗಿ
ಉಳಿದ ಜಂಗಮವ ಕುಲವನೆತ್ತಿ ನುಡಿದು, ಅವನ ಅತಿಗಳೆದು
ಕುಲವೆಂಬ ಸರ್ಪಕಚ್ಚಿ, ಎಂಜಲೆಂಬ ಅಮೇಧ್ಯವ ಭುಂಜಿಸಿ
ಹಂದಿ-ನಾಯಂತೆ ಒಡಲ ಹೊರೆವ ದರುಶನಜಂಗುಳಿಗಳು
ಜಂಗಮಪಥಕ್ಕೆ ಸಲ್ಲರಾಗಿ.
ಅವರಿಗೆ ಗುರುವಿಲ್ಲ ಗುರುಪ್ರಸಾದವಿಲ್ಲ, ಲಿಂಗವಿಲ್ಲ ಲಿಂಗಪ್ರಸಾದವಿಲ್ಲ,
ಜಂಗಮವಿಲ್ಲ ಜಂಗಮಪ್ರಸಾದವಿಲ್ಲ.
ಇಂತೀ ತ್ರಿವಿಧಪ್ರಸಾದಕ್ಕೆ ಹೊರಗಾದ ನರಜೀವಿಗ?
ಸ್ವಯ-ಚರ-ಪರವೆಂದಾರಾಧಿಸಿ ಪ್ರಸಾದವ ಕೊಳಸಲ್ಲದು ಕಾಣಾ
ಕೂಡಲಚೆನ್ನಸಂಗಮದೇವಾ"
(ಸಮಗ್ರ ವಚನ ಸಂಪುಟ: ೩ ವಚನದ ಸಂಖ್ಯೆ: ೧೨೩೦)

ಇನ್ನು ಕೆಲವು ವಚನಕಾರರು ತಮ್ಮ ಆದ್ಯರ ನಿರ್ಧಾರವನ್ನು ಬೆಂಬಲಿಸಿಯೂ ಇದ್ದರೇನೋ ಎಂಬಂತೆ ಭಿನ್ನಮತದ ಸುಳಿವು ಸಹ ಅಲ್ಲಲ್ಲಿ ಕೆಲವು ವಚನಗಳಲ್ಲಿ ಕಾಣಸಿಗುತ್ತದೆ. ಅಮುಗೆ ರಾಯಮ್ಮನ ಕೆಳಗಿನ ಈ ವಚನ ಅಂತಹ ಭಿನ್ನದನಿಯನ್ನು ತೋರಿದರೂ ಅದು ಕೇವಲ ಹಿರಿಯರ ಮೇಲಿನ ಗೌರವದಿಂದಲೇ ಹೊರತು ಆಕೆ ಅವರ ನೀತಿಯನ್ನು ಒಪ್ಪಿದ್ದಳೆಂದಲ್ಲ! ಏಕೆಂದರೆ ಆಕೆ ಸಹ "ಹುಟ್ಟಿನಿಂದ ಜಾತಿ" ನಿಯಮವನ್ನು ವಿರೋಧಿಸಿದ್ದಳು ಎಂದು ಆಕೆಯ ಇನ್ನೊಂದು ವಚನದಲ್ಲಿ ತಿಳಿದುಬರುತ್ತದೆ.

"ತೊಗಲಬೊಕ್ಕಣದಲ್ಲಿ ಪಾಷಾಣವ ಕಟ್ಟುವರಲ್ಲದೆ
ಪರುಷವ ಕಟ್ಟುವರೆ?
ಮಣ್ಣಹರವಿನಲ್ಲಿ ಸುರೆಯ ತುಂಬುವರಲ್ಲದೆ
ರತ್ನವ ತುಂಬುವರೆ?
ಆದ್ಯರ ವಚನಂಗಳಿರ್ದುದ ಕಾಣಲರಿಯದೆ
ನಾ ಘನ ತಾ ಘನವೆಂದು ಅಗಮ್ಯವ ಬೀರುವ
ಅಜ್ಞಾನಿಗಳ ವಿರಕ್ತರೆಂಬೆನೆ? ಅನುಭಾವಿಗಳೆಂಬೆನೆ?
ನಿಜವನರಿದ ಲಿಂಗೈಕ್ಯರೆಂಬೆನೆ? ಅಮುಗೇಶ್ವರಲಿಂಗವನರಿಯದಜ್ಞಾನಿಗಳ
ಆರೂಢರೆಂಬೆನೆ?"
(ಸಮಗ್ರ ವಚನ ಸಂಪುಟ: ೫ ವಚನದ ಸಂಖ್ಯೆ: ೬೪೮)

ಅದಲ್ಲದೇ ಆಕೆ ತನ್ನ ಸಹಚರರು ಕಾಳಾಮುಖಿ, ಪಾಶುಪತರನ್ನು ಬಹಿಷ್ಕರಿಸಿದ್ದನ್ನು ಕಡುವಾಗಿ ಖಂಡಿಸುತ್ತ ಈ ಕೆಳಗಿನ ವಚನವನ್ನು ರಚಿಸಿದ್ದಾಳೆನಿಸುತ್ತದೆ:

ಆರುಸ್ಥಲದಲ್ಲಿ ನಿಂದವಂಗೆ ಬೇರೊಂದು ಬ್ರಹ್ಮದ ಮಾತೇಕೆ?
ಬೀದಿಯಲ್ಲಿ ನಿಂದು ನೀನೇನು, ತಾನೇನು ಎಂಬವಂಗೆ ಆದ್ಯರ ವಚನವೇಕೆ?
ಗಗನವ ಮುಟ್ಟುವಂಗೆ ಅಗಣಿತನ ಸುದ್ದಿಯೇಕೆ?
ಆರುಸ್ಥಲದಲ್ಲಿ ನಿಂದವಂಗೆ ಅಭೇದ್ಯನ ಸುದ್ದಿಯೇಕೆ?
ಆರು ಸ್ಥಲವೆಂಬುವ ಷಟ್‍ಸ್ಥಲಜ್ಞಾನಿಗಳ
ಅರಿವು ಮೀರಿದ ಘನವು ನಿಮಗೇಕೆ? ಅಮುಗೇಶ್ವರಲಿಂಗವನರಿಯರಣ್ಣಾ.
(ಸಮಗ್ರ ವಚನ ಸಂಪುಟ: ೫ ವಚನದ ಸಂಖ್ಯೆ: ೬೦೩)
***

'ಹುಟ್ಟಿನಿಂದ ಜಾತಿ’ ಎಂಬುದು ಆಗಷ್ಟೇ ಅಳವಡಿಸಿಕೊಂಡದ್ದು ಎಂಬ ವಿಶ್ಲೇಷಣೆಗೆ ಪೂರಕವಾಗಿ ಅಲ್ಲಮನು ಕೆಳಗಿನ ವಚನದಲ್ಲಿ "ಪುರಾತನ" ಚಾರಿತ್ರ್ಯದಲ್ಲಿ ಅಂದರೆ ಹಳೆಯ "ವೃತ್ತಿಯಿಂದ ಜಾತಿ" ವ್ಯವಸ್ಥೆಯನ್ನು ಪುರಸ್ಕರಿಸುತ್ತಾನೆ.

"ಆವ ಜಾತಿಯಾದಡೂ ಆಗಲಿ;
ಪುರಾತನ ಚಾರಿತ್ರದಲ್ಲಿ ನಡೆದು,
ಗುರುಲಿಂಗಜಂಗಮಕ್ಕೆ ಅರ್ಥಪ್ರಾಣಾಭಿಮಾನಮಂ ಕೊಟ್ಟು,
ಅಹಂಕಾರವಳಿದಿಹಂತಹ ಮಹಾತ್ಮರ
ಬಾಯ ತಂಬುಲವ ಮೆಲುವೆ, ಬೀಳುಡಿಗೆಯ ಹೊದಿವೆ.
ಅವರ ಪಾದರಕ್ಷೆಗಳೆರಡನೂ,
ಮಂಡೆಯ ಮೇಲೆ ಹೊತ್ತುಕೊಂಡು ಬದುಕುವೆನಯ್ಯಾ.
ಆ ಗಣಂಗಳ ದಾಸನ ದಾಸ ನಾನು,
ಜನ್ಮ ಜನ್ಮದಲ್ಲಿ ಆಗುವೆ ಕಾಣಾ ಗುಹೇಶ್ವರಾ||"
(ಸಮಗ್ರ ವಚನ ಸಂಪುಟ: ೨ ವಚನದ ಸಂಖ್ಯೆ: ೯೧೯)

ಸೊಡ್ಡಳ ಬಾಚರಸ ಸಹ ಈವರೆಗೆ ಎಲ್ಲಾ ಜಾತಿಯವರ ನಡುವೆ ವೈವಾಹಿಕ ಸಂಬಂಧಗಳಾಗುತ್ತಿದ್ದುದನ್ನು ಎತ್ತಿ ಹಿಡಿದು ಜಾತಿಯೊಳಗೇ ಮದುವೆಯಾಗಬೇಕೆಂಬ ’ಹುಟ್ಟಿನಿಂದ ಜಾತಿ’ಯ ಇನ್ನೊಂದು ಸ್ವರೂಪವನ್ನು ಹೀಗೆ ಪ್ರಶ್ನಿಸಿದ್ದಾನೆ:

"ಶಿಖಿ ಬ್ರಾಹ್ಮಣ, ನಯನ ಕ್ಷತ್ರಿಯ, ನಾಶಿಕ ಬಣಜಿಗ, ಅಧರ ಒಕ್ಕಲಿಗ,
ಕರ್ಣ ಗೊಲ್ಲ, ಕೊರಳು ಕುಂಬಾರ, ಬಾಹು ಪಂಚಾಳ, ಅಂಗೈ ಉಪ್ಪಾರ,
ನಖ ನಾಯಿಂದ, ಒಡಲು ಡೊಂಬ, ಬೆನ್ನು ಅಸಗ, ಚರ್ಮ ಬೇಡ,
ಪೃಷ್ಠಸ್ಥಾನ ಕಬ್ಬಿಲಿಗ, ಒಳದೊಡೆ ಹೊಲೆಯ,
ಮೊಣಕಾಲು ಈಳಿಗ, ಕಣಕಾಲು ಸಮಗಾರ,
ಮೇಗಾಲು ಮಚ್ಚಿಗ, ಚಲಪಾದವೆಂಬ ಅಂಗಾಲು ಶುದ್ಧ ಮಾದಿಗ ಕಾಣಿರೊ!
ಇಂತೀ ಹದಿನೆಂಟುಜಾತಿ ತನ್ನಲಿ ಉಂಟು.
ಇವು ಇಲ್ಲಾಯೆಂದು ಜಾತಿಗೆ ಹೋರುವ ಅಜ್ಞಾನಿಗಳ
ನಮ್ಮ ಸೊಡ್ಡಳದೇವರು ಮೆಚ್ಚನಯ್ಯಾ."
(ಸಮಗ್ರ ವಚನ ಸಂಪುಟ: ೯ ವಚನದ ಸಂಖ್ಯೆ: ೮೧೨)

ಚೆನ್ನಬಸವಣ್ಣ ಇನ್ನೂ ಸ್ಪಷ್ಟವಾಗಿ ’ಹುಟ್ಟಿನಿಂದ ಜಾತಿ’ ಎಂಬುದು ಆಗಷ್ಟೇ ಹುಟ್ಟಿದ ನಿಯಮ ಎನ್ನುವಂತೆ ಅದನ್ನು "ಜಾತಿ ಪರಿಕಲ್ಪನೆ" ಎಂದು ಸ್ಪಷ್ಟವಾಗಿ ಹೇಳುತ್ತಾನೆ:

"ಸಾಧಕದೆಸೆಯಲ್ಲಿ ಕುಲವನರಸಬಹುದಲ್ಲದೆ,
ಸಿದ್ಧದೆಸೆಯಲ್ಲಿ ಅರಸಲಹುದೆ?
ಹಲವು ಜಾತಿಯ ಕಟ್ಟಿಗೆಯ ಸುಟ್ಟಲ್ಲಿ ಅಗ್ನಿಯೊಂದಲ್ಲದೆ
ಅಲ್ಲಿ ಕಟ್ಟಿಗೆಗಳ ಕುರುಹು ಕಾಂಬುದೆ ?
ಶಿವಭಕ್ತಸಮಾವೇಶೇ ನ "ಜಾತಿಪರಿಕಲ್ಪನಾ"
ಇಂಧನೇಷ್ವಗ್ನಿದಗ್ಧೇಷು ಕೋ ವಾ ಭೇದಃ ಪ್ರಕೀತ್ರ್ಯತೇ ’ ಎಂದುದಾಗಿ,
ಶಿವಜ್ಞಾನಸಿದ್ಧರಾದ ಶಿವಭಕ್ತರಲ್ಲಿ ಪೂರ್ವಜಾತಿಯನರಸುವ
ಅರೆಮರುಳರನೇನೆಂಬೆ ಕೂಡಲಚೆನ್ನಸಂಗಮದೇವಾ."
(ಸಮಗ್ರ ವಚನ ಸಂಪುಟ: ೩ ವಚನದ ಸಂಖ್ಯೆ: ೧೬೫೬)

ಹೀಗೆ ವೀರಶೈವ ಸಂಕಥನವು ವಚನ ಸಾಹಿತ್ಯದಲ್ಲಿ ಸ್ಪಷ್ಟವಾಗಿ ಅನಾವರಣಗೊಳ್ಳುತ್ತದೆ. ಇಂತಹ ಸ್ಪಷ್ಟ ಚಿತ್ರಣವಿದ್ದರೂ ಇಲ್ಲಿಯವರೆಗೆ ಸಂಶೋಧಕರು ಏಕೆ ಕಂಡಿಲ್ಲವೋ ನಾನರಿಯೆ! ಕಾಯಕ ಮಹತ್ವ, ಸಾಮೂಹಿಕ ಲಿಂಗಧಾರಣೆ, ಶಿವದೀಕ್ಷೆ, ದಾಸೋಹದಂತಹ ಸಮಾಜ, ಸಮೂಹದ ಕಾರ್ಯಕ್ರಮಗಳನ್ನು ಹಾಕಿಕೊಂಡು ಸಮರೋತ್ಪಾದಿಯಲ್ಲಿ ಪಂಥ ವಿಜಯ ಮೆರೆಯುತ್ತಿದ್ದ ಇಂತಹ ಶರಣ ಸೇನೆಗೆ ತಮ್ಮ ಪಂಥದ ಹಿರಿಯರ "ಹುಟ್ಟಿನಿಂದ ಜಾತಿ" ನಿಯಮ ಬರಸಿಡಿಲಿನಂತೆ ಬಂದೆರಗಿರಬೇಕು. ಹುಟ್ಟಿನಿಂದ ಮಾತ್ರ ಪಂಥ ವಿಸ್ತರಣೆಯಾದರೆ ತಮ್ಮೆಲ್ಲಾ ಹೋರಾಟಗಳು, ರೂಪುರೇಷೆಗಳು, ನಂಬಿಕೆಗಳೇ ಬುಡಮೇಲಾದಂತಾಗಿ ಈ ನವನೀತಿಯ ವಿರುದ್ಧ ಅವರೆಲ್ಲಾ ಒಗ್ಗಟ್ಟಾಗಿ ಸಿಡಿದು ನಿಂತಿದ್ದಾರೆ. ಆ ಹಿನ್ನೆಲೆಯಲ್ಲಿ ’ಹುಟ್ಟಿನಿಂದ ಜಾತಿ’ ನಿಯಮವನ್ನು ಅವಹೇಳಿಸುವ ವಚನಗಳು ಹೀಗಿವೆ:

"ಮಾಯಾಯೋನಿಯಲ್ಲಿ ಹುಟ್ಟುವ ಮರುಳರೆಲ್ಲರು
ಮಹಾಜ್ಞಾನಿಗಳಪ್ಪರೆ?
ಕಾಮವಿಕಾರಕ್ಕೆ ತಿರುಗುವ ಜೀವಗಳ್ಳರು
ಅನಾದಿವಸ್ತುವನರಿವರೆ?
ಮಾತಿನಲ್ಲಿ ಮಹಾಜ್ಞಾನಿಗಳೆಂಬ ವೇಷಧಾರಿಗಳ ಕಂಡು ನಾಚುವೆ ಕಾಣಾ ಅಮುಗೇಶ್ವರಾ"
- ಅಮುಗೆ ರಾಯಮ್ಮ
(ಸಮಗ್ರ ವಚನ ಸಂಪುಟ: ೫ ವಚನದ ಸಂಖ್ಯೆ: ೬೭೮)

ಅಕ್ಕ ಮಹಾದೇವಿಯು ಶೈವ ಎರಡಾಯಿತು ಎಂಬ ತನ್ನ ವಚನದಲ್ಲಿ ಶೈವಪಂಥ ಕೂಡಾ ಹುಟ್ಟಿನಿಂದ ಜಾತಿಯನ್ನು ಅಪ್ಪಿಕೊಂಡುದುದನ್ನು ಹೇಳಿದ್ದಾಳೆ. (ವರ್ತಮಾನಕಾಲ ಸೂಚಕವನ್ನು ವಿಶೇಷವಾಗಿ ಗಮನಿಸಿ.)

"ಜಾತಿಶೈವ-ಅಜಾತಿಶೈವವೆಂದೆರಡು ಪ್ರಕಾರವಾಗಿಹುದಯ್ಯ
ಜಾತಿಶೈವರೆಂಬವರು ಶಿವಂಗೆ ಭೋಗಸ್ತ್ರೀಯರಯ್ಯ
ಅಜಾತಿಶೈವರೆಂಬವರು ಶಿವಂಗೆ ಕುಲಸ್ತ್ರೀಯರಯ್ಯ..." ಈ ವಚನ ಹುಟ್ಟಿನಿಂದ ಜಾತಿ ಹನ್ನೆರಡನೇ ಶತಮಾನದ ಉತ್ತರಾರ್ಧದಲ್ಲಿಯೇ ಆರಂಭವಾಯಿತೆನ್ನುವುದನ್ನು ದೃಢಪಡಿಸುತ್ತದೆ. ಇದೇ ಅಭಿಪ್ರಾಯದ ವಚನವನ್ನು ರೇಚದ ಬಂಕಣ್ಣ ಹೀಗೆ ಹೇಳಿದ್ದಾನೆ:

"ಜಾತಿ ಶೈವರು ಅಜಾತಿ ಶೈವರೆಂದು
ಎರಡು ಪ್ರಕಾರವಾಗಿಹರಯ್ಯಾ.
ಜಾತಿ ಶೈವರೆಂಬವರು ಶಿವಂಗೆ ಭೋಗಸ್ತ್ರೀಯರಯ್ಯಾ.
ಅಜಾತಿ ಶೈವರೆಂಬವರು ಶಿವಂಗೆ ಕುಲಸ್ತ್ರೀಯರಯ್ಯಾ.
ಜಾತಿ ಶೈವರೆಂಬವರು ಸರ್ವಭೋಗಂಗಳ ಬಯಸಿ ಮಾಡುವರಾಗಿ,
ದ್ವಾರೇ ಯಸ್ಸ ಚ ಮಾತಂಗೋ ವಾಯುವೇಗ ತುರಂಗಮಃ |
ಪೂರ್ಣೆಂದು ವದನಾ ನಾರೀ ಶಿವಪೂಜಾ ವಿಧೇಃ ಫಲಂಃ ||
ಎಂದುದಾಗಿ, ಇವು ಜಾತಿಶೈವರಿಗೆ ಕೊಟ್ಟ ಭೋಗಂಗಳಯ್ಯಾ.
ಅಜಾತಿಶೈವರು ಗುರುಲಿಂಗಜಂಗಮಕ್ಕೆ ತನುಮನಧನವ ನಿವೇದಿಸಿ,
ಸರ್ವಸೂತಕರಹಿತರಾಗಿಹರಯ್ಯಾ.
ಅಹಂ ಮಾಹೇಶ್ವರ ಪ್ರಾಣೇ ಮಾಹೇಶ್ವರೋ ಮಮ ಪ್ರಾಣಃ |
ತಥೈಕಂ ನಿಷ್ಕ್ರೀಯಂ ಭೂಯಾದನ್ಯಲ್ಲಿಂಗೈಕ್ಯಮೇವ ಚ ||
ಇದು ಕಾರಣ, ಸರ್ವೇಶ್ವರ ಚೆನ್ನಮಲ್ಲಿಕಾರ್ಜುನಯ್ಯನು
ಭಕ್ತಿಕಾಯನೆಂಬೈಕ್ಯಪದವನು ಅಜಾತಿಶೈವರಿಗೆ ಕೊಡುವನಯ್ಯಾ."
(ಸಮಗ್ರ ವಚನ ಸಂಪುಟ: ೯ ವಚನದ ಸಂಖ್ಯೆ: ೧೧೫೩)

ಈ ಎಲ್ಲಾ ವಚನಗಳು ಬಹುಪಾಲು ವರ್ತಮಾನಕಾಲ ಸೂಚಕದಲ್ಲಿರುವುದು ಏನನ್ನು ಹೇಳುತ್ತವೆ ಎನ್ನುವುದು ಸುಸ್ಪಷ್ಟ. ಹೀಗೆ ಬಸವಣ್ಣ, ಅಕ್ಕಮಹಾದೇವಿ, ಅಲ್ಲಮ, ಉರಿಲಿಂಗಪೆದ್ದಿ, ಅಂಬಿಗರ ಚೌಡಯ್ಯ, ಮುಂತಾದವರ ಉತ್ತರಾರ್ಧದ ವಚನಗಳೆಲ್ಲಾ ಕಾಯಕ ಮಹತ್ವ, ಹುಟ್ಟಿನಿಂದಾದ ಜಾತಿ, ಗೋಮಾಂಸಭಕ್ಷಕರನ್ನು ಕೀಳುಜಾತಿಯವರನ್ನಾಗಿ ವರ್ಗೀಕರಿಸಿದ ವರ್ಗೀಕರಣ, ಜಾತಿವ್ಯವಸ್ಥೆಗಳು ಸೃಷ್ಟಿಸಿದ ಅಸಮಾನತೆ, ಹೇರಲ್ಪಟ್ಟ ಉದ್ಯೋಗಗಳು, ಮೀಸಲಾದ ಉದ್ಯೋಗಗಳು, ಸೀಮಿತಗೊಂಡ ಅವಕಾಶಗಳು, ಕಾಯಕದಿಂದ ಅಸ್ಮಿತೆ ಕಂಡುಕೊಳ್ಳುತ್ತಿದ್ದುದು ನಿಕಾಯವಾದದ್ದು ಮುಂತಾದ ಸಾಮಾಜಿಕ ಸ್ಥಿತ್ಯಂತರಗಳ ಕುರಿತಾಗಿವೆ.

ಒಟ್ಟಾರೆ ಶರಣ ಚಳವಳಿಯನ್ನು ಹೀಗೆ ಎರಡು ಭಾಗಗಳಾಗಿ ನೋಡಬಹುದು. ಚಳವಳಿಯ ಪೂರ್ವಾರ್ಧ ಪಂಥ ವಿಸ್ತರಣೆ, ಜೈನಪಂಥ ವಿರೋಧವಾದರೆ, ಉತ್ತರಾರ್ಧದ ಕಲ್ಯಾಣಕ್ರಾಂತಿಯ ಭಾಗ ಆಗಷ್ಟೇ ಹೇರಿದ್ದ ಹುಟ್ಟಿನಿಂದ ಜಾತಿಯನ್ನು ವಿರೋಧಿಸುವುದಾಗಿದ್ದಿತು. ಹಾಗಾಗಿಯೇ ಕಲ್ಯಾಣ ಕ್ರಾಂತಿ ಪಂಥವೊಂದರ ಅಂತರಿಕ ಕ್ರಾಂತಿಯಾದರೂ ಸಾಮಾಜಿಕ ಕ್ರಾಂತಿ ಎಂದೆನಿಸುವುದು. ಅಂತಹ ಪ್ರಬಲ ಕಾರಣವಿದ್ದುದರಿಂದಲೇ ಕ್ರಾಂತಿಯೆನ್ನಿಸುವ ಸಾಮೂಹಿಕ ಸಂಘಟನೆ ಮತ್ತು ಬೆಂಬಲ ಅದಕ್ಕೆ ಸಾಧ್ಯವಾಗಿದ್ದುದು. ಹುಟ್ಟಿನಿಂದ ಜಾತಿ ಸಲ್ಲದೆಂಬುದನ್ನು ವಿರೋಧಿಸಲೆಂದೇ ಸಾಮೂಹಿಕ ಲಿಂಗ ಕಟ್ಟುವ, ಕಾಯಕವೇ ಕೈಲಾಸವೆನ್ನುವ, ಅಂತ್ಯಜರನ್ನು ಆದಿಮರೆಂಬುವ, ಊರ ಹೊರಗಿರಬೇಕೆನಿಸಿಕೊಂಡವರನ್ನು ಒಳಗೊಳ್ಳುವ, ಮೋಕ್ಷಕ್ಕೆ ಅರ್ಹರಲ್ಲವೆನಿಸಿಕೊಂಡವರನ್ನು ಆರಾಧಿಸುವಂತಹ ಕ್ರಿಯಾತ್ಮಕ ಪ್ರತಿಭಟನೆಗಳು ಚಳವಳಿಯ ಭಾಗಗಳಾದವು.

ಇನ್ನು ಅಂತರ್ಜಾತಿ ವಿವಾಹವಾಗುವುದನ್ನು ನಿರ್ಬಂಧಿಸಿ ಅಂತಹ ಸಂಬಂಧಗಳೇರ್ಪಟ್ಟಾಗ ಅವರ ಮಕ್ಕಳನ್ನು ಅಂತ್ಯಜರೆಂದು ವರ್ಗೀಕರಿಸುವುದನ್ನು ವಿರೋಧಿಸಿವುದೇ ಬಸವಣ್ಣನ ಖ್ಯಾತ ವಚನದ ಹಿನ್ನೆಲೆಯಾಗಿದೆ. ತನ್ನ,

ಚೆನ್ನಯ್ಯನ ಮನೆಯ ದಾಸನ ಮಗನು,
ಕಕ್ಕಯ್ಯನ ಮನೆಯ ದಾಸಿಯ ಮಗಳು,
ಇವರಿಬ್ಬರು ಹೊಲದಲು ಬೆರಣಿಗೆ ಹೋಗಿ, ಸಂಗವ ಮಾಡಿದರು.
ಇವರಿಬ್ಬರಿಗೆ ಹುಟ್ಟಿದ ಮಗ ನಾನು,
ಕೂಡಲಸಂಗಮದೇವ ಸಾಕ್ಷಿಯಾಗಿ.
(ಸಮಗ್ರ ವಚನ ಸಂಪುಟ: ೧ ವಚನದ ಸಂಖ್ಯೆ: ೩೪೬)

ಈ ವಚನದಲ್ಲಿ ಬಸವಣ್ಣನ ಉದ್ದೇಶ ಹೀಗೆ ಚೆನ್ನಯ್ಯನ ದಾಸನ ಮಗನಿಗೂ ಕಕ್ಕಯ್ಯನ ದಾಸಿಯ ಮಗಳಿಗೂ ಸಂಬಂಧವುಂಟಾಗಿ ನಾನು ಹುಟ್ಟಿದ್ದೇನೆ ಹಾಗಾಗಿ ನನ್ನನ್ನು ಹುಟ್ಟಿನ ಕಾರಣ ಅಂತ್ಯಜನೆನ್ನುವಿರೇ? ಎಂಬರ್ಥದಲ್ಲಿ ಪ್ರಶ್ನಿಸಿದ್ದಾನೆ.

ಈ ನೂತನ ವೈವಾಹಿಕ ಕಟ್ಟಳೆಯನ್ನು ವಿರೋಧಿಸುವ ಪ್ರತಿಭಟನೆಯ ಅಂಗವಾಗಿ ಶರಣರು ಮಧುವಯ್ಯನ ಮಗಳು ಮತ್ತು ಹರಳಯ್ಯನ ಮಗನ ಮದುವೆಯನ್ನು ಹಮ್ಮಿಕೊಂಡರು. ಈ ಕುರಿತು ಸಿದ್ದರಾಮೇಶ್ವರನ ಕೆಳಗಿನ ವಚನದಲ್ಲಿ ’ಹುಟ್ಟಿನಿಂದ ಜಾತಿ’ಯೇ ಅಧಿಕವೆಂದು ಹೋರಾಡುವ ಆದ್ಯರೇ ಕೇಳಿರಿ ಎಂಬ ಮತ್ತದೇ ವರ್ತಮಾನಕಾಲದಲ್ಲಿರುವ ವಾಚ್ಯವನ್ನು ಗಮನಿಸಿಬಹುದು:

ಕುಲದಿಂದಧಿಕವೆಂದು ಹೋರಾಡುವ ಅಣ್ಣಗಳಿರಾ, ಕೇಳಿರಯ್ಯಾ.
ಬ್ರಾಹ್ಮಣನವ ಮಧುವಯ್ಯ, ಚಂಡಾಲನವ ಹರಳಯ್ಯ,
ದೂರ್ವಾಸನವ ಮಚ್ಚಿಗ, ಊರ್ವಶಿಯಾಕೆ ದೇವಾಂಗನೆ,
ಚಂಡಾಲನವ ಪರಾಶರ, ಕುಸುಮಗಂಧಿಯಾಕೆ ಕಬ್ಬಿಲಗಿತ್ತಿ.
’ಜಪತಸ್ತಪತೋ ಗುಣತಃ’ ಕಪಿಲಸಿದ್ಧಮಲ್ಲಿಕಾರ್ಜುನಾ ಕೇಳಾ,
ಕೇದಾರಯ್ಯ.
(ಸಮಗ್ರ ವಚನ ಸಂಪುಟ: ವಚನದ ಸಂಖ್ಯೆ: ೧೯೩೩)

ಹೀಗೆ ಹಮ್ಮಿಕೊಂಡ ಈ ಕಲ್ಯಾಣವು ಕಲ್ಯಾಣ ಕ್ರಾಂತಿಗೆ ಮಂಗಳ ಹಾಡಿತು. ತಮ್ಮ ಸಾಮಾಜಿಕ ಹೋರಾಟದೊಂದಿಗೆ ರಾಜಕೀಯ ಹೋರಾಟವನ್ನೂ ತಳುಕು ಹಾಕಿಕೊಂಡು ಬಿಜ್ಜಳನನ್ನು ಕೊಂದಿದ್ದ ಶರಣರಿಗೆ ತಕ್ಕ ಶಾಸ್ತಿ ಮಾಡಲು ಇದು ಬಿಜ್ಜಳನ ಮಗನಿಗೆ ಅವಕಾಶವನ್ನೂ ಒದಗಿಸಿತು. ಶರಣರನ್ನು ಸೋವೇಶನ ಸೈನ್ಯ ಮತ್ತು ಆದ್ಯರ ನವನಿಯಮಗಳ ಒತ್ತಡಗಳು ಸಂಪೂರ್ಣವಾಗಿ ಆಕ್ರಮಿಸಿಕೊಂಡುಬಿಟ್ಟವು. ಜಗತ್ತಿನ ಎಲ್ಲಾ ಕ್ರಾಂತಿಕಾರಿಗಳೂ ತಮ್ಮ ಕ್ರಾಂತಿಯ ವೈರುಧ್ಯ ಫಲವನ್ನು ಕಂಡಾಗ ಉಂಟಾಗುವ ಹತಾಶೆ, ನೋವು ಮತ್ತು ಅವರುಗಳು ತೆಗೆದುಕೊಳ್ಳುವ ಅಂತಿಮ ನಿರ್ಣಯದಂತೆಯೇ,

"ಅವಧಿ ಅಳಿಯಿತ್ತು ವ್ಯವಧಾನ ಉಳಿಯಿತ್ತು.
ನಿಜವೆ ನಿಜವನೊಡಗೂಡಿತ್ತು ಕೇಳಾ ಬಸವಣ್ಣ.
ಕಲಿಯುಗದಲ್ಲಿ ಮುಂದೆ ಇರಬಾರದು ನಿಜ ಶರಣಂಗೆ
ನಡೆ ನೀನು ಕಪ್ಪಡಿಯ ಸಂಗಯ್ಯನಲ್ಲಿ ಒಡಗೂಡು.
ಉಳುಮೆಯಲ್ಲಿ ನಿಜವನೆಯ್ದು ನಡೆ, ಚೆನ್ನಬಸವಣ್ಣಾ.
ಮಹವನೊಡಗೂಡು ಮಡಿವಾಳಯ್ಯ.
ಸೊಡ್ಡಳ ಬಾಚರಸರು ಮೊದಲಾದ ಪ್ರಮಥರೆಲ್ಲರು
ನಿಜವನೆಯ್ದುವುದು ನಿರ್ವಯಲ ಸಮಾಧಿಯಲ್ಲಿ.
ಬಗಿದು ಹೋಗಿ ಲಿಂಗದೊಳಗೆ ಹೊಗುವರೆಲ್ಲರೂ!
ನಡೆಯಿರಿ ಕಾಯವೆರಸಿ ಕೈಲಾಸಕ್ಕೆ, ಕಾಯಸಹಿತ ಎಯ್ದುವುದು.
ನಿಮಗೆಲ್ಲರಿಗೆಯೂ ಉಪದೇಶಮಂತ್ರ ತಪ್ಪದು.
ನಮಗೆ ಕದಳಿಯಲ್ಲಿ ಹೊಕ್ಕು ನಿಜದಲ್ಲಿ ಒಡಗೂಡುವ ಪರಿಣಾಮ.
ಇದು ನಮ್ಮ ಗುಹೇಶ್ವರಲಿಂಗದ ಅಣತಿ ನಿಮಗೆಲ್ಲರಿಗೆಯೂ."
(ಸಮಗ್ರ ವಚನ ಸಂಪುಟ: ೨ ವಚನದ ಸಂಖ್ಯೆ: ೮೪೭)

ಅಲ್ಲಮನು ಶೂನ್ಯಪೀಠಾಧ್ಯಕ್ಷನಾಗಿ ತನ್ನ ಶಿವಗಣಂಗಳಿಗೆ ಬಯಲಾಗಲು ನೇರ ನಿರ್ದೇಶನವನ್ನು ಕೊಟ್ಟು ಚಳವಳಿಯನ್ನು ಬರಖಾಸ್ತುಗೊಳಿಸುವಲ್ಲಿಗೆ ಕಲ್ಯಾಣಕ್ರಾಂತಿ ಪರಿಸಮಾಪ್ತಿಗೊಳ್ಳುತ್ತದೆ.

ಅಲ್ಲಿಂದ ಮುಂದಾದ ಘಟನಾವಳಿಗಳೊಂದಿಗೆ ಶರಣ ಕ್ರಾಂತಿಯು ಅಷ್ಟೇ ಕ್ಷಿಪ್ರವಾಗಿ ಅವಸಾನಗೊಂಡು ಭಿನ್ನರೊಂದಿಗೆ ಒಂದಾಗಿ ’ಹುಟ್ಟಿನಿಂದ ಜಾತಿ’ಯನ್ನು ಅಪ್ಪಿಕೊಂಡು ಮತ್ತೆ ಮೂಲಸ್ಥಿತಿಗೆ ಮರಳಿ ಜೈನರನ್ನು ಗುರಿಯಾಗಿಸಿಕೊಂಡಿತು.

ಹೀಗೆ ವಚನಗಳು ಕೇವಲ ನೀತಿಯನ್ನಲ್ಲದೆ ಅಂದಿನ ಕಾಲಘಟ್ಟದ ಪ್ರಾಗೈತಿಹಾಸಿಕ, ಸಾಮಾಜಿಕ, ರಾಜಕೀಯದ ಕುರುಹು ಪುರಾವೆಗಳನ್ನು ಸ್ಪಷ್ಟವಾಗಿ ಕಟ್ಟಿಕೊಡುತ್ತವೆ. ಸರಳವಾಗಿರುವ ಇಂತಹ ವಚನ ಸಾಹಿತ್ಯದ ಜಾಡನ್ನು ಹಿಡಿದು ಸಾಗಿದರೆ ವಚನಕಾರರ ಮನಸ್ಥಿತಿಯನ್ನೂ ಅರಿಯಬಹುದಾದಷ್ಟು ಸುಸ್ಪಷ್ಟವಾದ ಚಿತ್ರಣ ಸಿಗುತ್ತದೆ. ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು ಎಂಬುದರ ಸ್ಫಟಿಕ ಸದೃಶ ಸ್ಪಷ್ಟತೆ, ನುಡಿದರೆ ಮುತ್ತಿನಹಾರದಂತಿರಬೇಕು ಎಂಬುದರ ಮುತ್ತಿನಹಾರವ ಪೋಣಿಸಿದಂತಿರುವ ಸಂಕಥನದ ಸಾಹಿತ್ಯ ಪ್ರಕಾರವು ವಚನಸಾಹಿತ್ಯವಾಗಿದೆ. ಇಂತಹ ಸ್ಪಷ್ಟ ಸಂಕಥನವನ್ನು ನಾವೇಕೆ ಈ ಮೊದಲೇ ಅರಿಯಲಿಲ್ಲ!?! ಏಕೆಂದರೆ ಎಲ್ಲಾ ಕನ್ನಡ ಭಾಷಾ ಪಂಡಿತ ಸಂಶೋಧಕರೂ ರವಿಯಾಗದೆ ಕವಿಗಳಾಗಿದ್ದರು. ಉದಾಹರಣೆಗೆ ತುರುಗಾಹಿ ರಾಮಣ್ಣನ, "ಬಂದಿತ್ತು ದಿನ ಬಸವಣ್ಣ ಕಲ್ಲಿಗೆ
ಚನ್ನಬಸವಣ್ಣ ಉಳುವೆಯಲ್ಲಿಗೆ
ಪ್ರಭು ಅಕ್ಕ ಕದಳಿದ್ವಾರಕ್ಕೆ
ಮಿಕ್ಕಾದ ಪ್ರಮಥರೆಲ್ಲರೂ ತಮ್ಮ ಲಕ್ಷ ್ಯಕ್ಕೆ
ನಾ ತುರುವಿನ ಬೆಂಬಳಿಯಲ್ಲಿ ಹೋದ ಮರೆಯಲ್ಲಿ
ಅಡಗಿಹರೆಲ್ಲರು ಅಡಗಿದುದ ಕೇಳಿ ನಾ
ಗೋಪತಿನಾಥ ವಿಶ್ವೇಶ್ವರಲಿಂಗದಲ್ಲಿಯೆ ಉಡುಗುವೆನು"
ವಚನದಲ್ಲಿ 'ಬಸವಣ್ಣ ಕಲ್ಲಿಗೆ' ಎಂಬ ಸಾಲಿನ ಅರ್ಥ ಬಸವಣ್ಣ ಸಮಾಧಿಗೆ ಎಂದು. ಆದರೆ ಇದನ್ನು ಖ್ಯಾತ ವಚನಯಾನ ಸಂಶೋಧಕರೊಬ್ಬರು ಕಲ್ಲಿಗೆ ಎಂಬುದು ಇನ್ನೂ ಯಾರೂ ಒಡೆಯಲಾಗದ ಒಡಪು ಎಂದು ಭಾವುಕ ಕವಿಯಾಗಿಬಿಟ್ಟಿದ್ದಾರೆ. ಸಮಾಧಿ ಮಾಡಿ ಗುರುತಿಗೆ ಕಲ್ಲಿಡುವುದನ್ನು ದನಗಾಹಿಯ ಆಡುನುಡಿಯಲ್ಲಿ ಕಲ್ಲಿಗೆ ಎಂಬುದು ಅದ್ಯಾವ ಅಮಲಿನ ಒಡೆಯಲಾಗದ ಒಗಟೋ ನಾನರಿಯೆ!

ಇರಲಿ, ಶರಣರ ಕ್ರಾಂತಿಯನ್ನು ಮತ್ತು ವಚನಗಳನ್ನು ಇತಿಹಾಸದ ಒಂದು ಕಾಲದ ಪರಿಮಿತಿಗೆ ಸೀಮಿತಗೊಳಿಸಿ ಅಥವಾ ಪೂರ್ವಾಗ್ರಹಗಳ ದೃಷ್ಟಿಕೋನದಿಂದ ಮಾತ್ರ ಈವರೆಗೆ ನೋಡಲಾಗಿದೆ. ಇತಿಹಾಸವನ್ನು ಸಮಗ್ರವಾಗಿ ಗ್ರಹಿಸಿ ತೂಲಿಸಿ ವಿಶ್ಲೇಷಿಸಿ ಒರೆಗೆ ಹಚ್ಚುವ ಸಂಶೋಧನೆಗಳು ಈ ವಿಷಯದಲ್ಲಿ ನಡೆದೇ ಇಲ್ಲವೆನ್ನಬಹುದು. ವಚನ ಮತ್ತು ಶರಣ ಸಂಸ್ಕೃತಿಯ ಬಗ್ಗೆ ಈವರೆಗೆ ನಡೆದಿರುವ ಯಾವುದೇ ಸಂಶೋಧನೆಗಳಲ್ಲಿಯೂ ಈ ರೀತಿಯ ಹೊಳಹು ಸಿಕ್ಕಿಲ್ಲದಿರುವುದಕ್ಕೆ ನಮ್ಮ ಸಂಶೋಧನೆಗಳ ವೈಧಾನಿಕತೆಯ ತೊಡಕುಗಳ ಕಾರಣವಿರಬಹುದು. ಸ್ವಾತಂತ್ರ್ಯಪೂರ್ವ ಭಾರತದಲ್ಲಿನ ಸಂಶೋಧಕರು ಸಮಗ್ರವಾಗಿ ಆಕರಗಳನ್ನು ಪರಿಗಣಿಸಿ ಸಂಶೋಧನ ವೈಧಾನಿಕತೆಗಳನ್ನು ಅಳವಡಿಸಿಕೊಂಡಿರುವುದು ಗೋವಿಂದ ಪೈಗಳಂತಹ ಪಂಡಿತರ ಸಂಶೋಧನೆಗಳಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ಆದರೆ ಸ್ವಾತಂತ್ರೋತ್ತರ ಸಂಶೋಧಕರಲ್ಲಿ "ಹೀಗಿದ್ದರೆ ಹೇಗೆ" ( What if) ಎಂಬ ವೈಧಾನಿಕತೆ ಕ್ಷೀಣಿಸುತ್ತ "ಅದು ಹೀಗೆಯೇ" ಎಂದು ಸಾಗಿಬಂದಿರುವುದನ್ನು ಸ್ಪಷ್ಟವಾಗಿ ಗುರುತಿಸಬಹುದಾಗಿದೆ. ಕನ್ನಡ ಸಂಶೋಧನ ನೆಲೆಯಲ್ಲಿ ಬಿ. ಎಲ್. ರೈಸ್ ನಂತರದ ಗೋವಿಂದ ಪೈ, ವೆಂಕಣ್ಣಯ್ಯ, ಶಂ.ಬಾ. ಜೋಷಿ, ಆರ್.ಜಿ. ದೀಕ್ಷಿತ್, ರಾಮಸ್ವಾಮಿ ಐಯಂಗಾರ್ ಮುಂತಾದವರ ಪರಂಪರೆಯನ್ನು ಸಮರ್ಥವಾಗಿ ಮುನ್ನಡೆಸುವಲ್ಲಿ ಸ್ವತಂತ್ರ ಭಾರತದಲ್ಲಿ ಏಕೀಕರಣಗೊಂಡ ಕರ್ನಾಟಕದ ಸಂಶೋಧನ ಪರಂಪರೆ ನಿಸ್ಸಂಶಯವಾಗಿ ಶೂನ್ಯ ಸಂಶೋಧನೆಯಾಗಿದೆ.

ಎಲ್ಲಾ ಪ್ರಕ್ಷಿಪ್ತ, ವಿಕ್ಷಿಪ್ತ, ವಿಪ್ಲವಗಳ ನಡುವೆಯೂ ವಚನ ಸಾಹಿತ್ಯವು ತನ್ನ ವರ್ತಮಾನದ ಇತಿಹಾಸವನ್ನು ಸ್ಪಷ್ಟವಾಗಿ ಕಟ್ಟಿಕೊಟ್ಟಿದೆ. ಅದನ್ನು ಗುರುತಿಸುವಲ್ಲಿ ಸಂಶೋಧಕರು ಸೋತಿದ್ದಾರೆ. ಅನುಭವ ಮಂಟಪದ ಚರ್ಚೆಯ ದಾಖಲೆಗಳೇ ವಚನಗಳು ಎಂಬ ಸ್ಪಷ್ಟ ತಿಳಿವಳಿಕೆ ಇದ್ದರೂ ಅವುಗಳನ್ನು ಹಾಗೆ ಪರಿಗಣಿಸಿ ಚರ್ಚೆಯ ವಿಷಯವನ್ನು ಅರಿಯದೆ ಧರ್ಮ, ಧರ್ಮಗ್ರಂಥ ಇತ್ಯಾದಿಯಾಗಿ ಸಂಶೋಧಕರು ದಿಕ್ಕು ತಪ್ಪಿರುವುದು ಸಹ ಸ್ಪಟಿಕಸದೃಶ ಸೋಲಾಗಿದೆ.

ಒಟ್ಟಾರೆ ಬಸವಣ್ಣ ಮತ್ತವರ ಸಮಕಾಲೀನ ಶರಣರು ಸನಾತನವಾಗಿ ಬಂದಿದ್ದ ಕರ್ಮ (ಕಾಯಕ) ಮತ್ತು ಜ್ಞಾನ (ಅರಿವು) ಆಧಾರಿತವಾಗಿ ನಿರ್ಧಾರವಾಗುತ್ತಿದ್ದ ಜಾತಿಯನ್ನು ಬೆಂಬಲಿಸಿ ಹುಟ್ಟಿನಿಂದ ಜಾತಿ ಎಂಬ ನೂತನ ಬದಲಾವಣೆಯನ್ನು ವಿರೋಧಿಸಿದ್ದರು. ಆದರೆ ಅದನ್ನು ಇಲ್ಲಿಯವರೆಗಿನ ಸಂಶೋಧನೆಗಳು ಬಸವಣ್ಣನವರು ಸನಾತನವಾಗಿ ಬಂದಿದ್ದ ಹುಟ್ಟಿನಿಂದ ಜಾತಿ ಪದ್ಧತಿಯನ್ನು ವಿರೋಧಿಸಿದ್ದರು ಎನ್ನುತ್ತವೆ. ಕ್ಷಿಪ್ರ ಕ್ರಾಂತಿಗಳಿಗೆ ಕ್ಷಿಪ್ರವಾಗಿ ತರಲಾಗುವ ಬದಲಾವಣೆಗಳು ಪ್ರಮುಖ ಕಾರಣವಾಗಿರುತ್ತವೆಯೇ ಹೊರತು ಶತಮಾನಗಳಿಂದ ಆಚರಣೆಯಲ್ಲಿರುವ ಆಚರಣೆಗಳಲ್ಲ. ಹಾಗಾಗಿ ಕಲ್ಯಾಣ ಕ್ರಾಂತಿ ಎಂಬ ಕ್ಷಿಪ್ರ ಕ್ರಾಂತಿ ಉಂಟಾಗಿದ್ದು ’ಹುಟ್ಟಿನಿಂದ ಜಾತಿ’ ಎಂಬ ಕ್ಷಿಪ್ರ ಬದಲಾವಣೆಯ ಕಾರಣದಿಂದಲೇ! ತನ್ನ ಪಂಥದ ಯಾವ ಮೌಲ್ಯಗಳನ್ನು ಮೆಚ್ಚಿ ವೀರಶೈವ ಪಂಥವನ್ನು ಪಸರಿಸುತ್ತಿದ್ದನೋ, ಅದೇ ಪಂಥವೀಗ ತಮ್ಮ ವಿರೋಧಿಗಳಂತೆಯೇ ’ಹುಟ್ಟಿನಿಂದ ಜಾತಿ’ಯನ್ನು ಅಳವಡಿಸಿಕೊಂಡಿದ್ದುದು ಬಸವಣ್ಣನಿಗೆ ಮರ್ಮಾಘಾತವನ್ನುಂಟು ಮಾಡಿದ್ದಿತು.

’ಹುಟ್ಟಿನಿಂದ ಜಾತಿ’ಯನ್ನು ವಚನಚಳವಳಿಯಷ್ಟು ಪ್ರಬಲವಾಗಿ ವಿರೋಧಿಸಿ ಸನಾತನವಾಗಿದ್ದ ’ವೃತ್ತಿಯಿಂದ ಜಾತಿ’ಯ ನಿಯಮವೇ ಬೇಕೆಂದು ’ಕಾಯಕವೇ ಕೈಲಾಸ’ವೆಂಬ ಉದ್ಘೋಷದೊಂದಿಗೆ ಉಗ್ರವಾಗಿ ಹೋರಾಡಿದಷ್ಟು ಇನ್ಯಾವ ಚಳವಳಿಯೂ ಭಾರತದ ಇತಿಹಾಸದಲ್ಲಿಯೇ ಹೋರಾಡಿಲ್ಲ ಎಂಬುದು ಗಮನಾರ್ಹ. ಸನಾತನ ವರ್ಣಾಶ್ರಮ ಪದ್ಧತಿಯೇ ಸರಿಯೆಂದು ಹೋರಾಡಿದ ಈ ಏಕೈಕ ಚಳವಳಿ ಇಡೀ ದೇಶಕ್ಕೆ ಮಾದರಿ! ಆದರೆ ಇದನ್ನು ಕುದುರೆಯ ಕಣ್ಪಟ್ಟಿ ತೊಟ್ಟಿದ್ದ ಸಂಶೋಧಕರು ಜನಾಂಗೀಯ ದ್ವೇಷಕ್ಕೆ ತಿರುಗಿಸಿ ಶೂನ್ಯವಾಗಿಸಿಬಿಟ್ಟಿದ್ದಾರೆ.

ವೀರಶೈವದ ಈ ಸಮಾಜೋಧ್ಧಾರ್ಮಿಕ ಸ್ಥಿತ್ಯಂತರದ ಸಾಕ್ಷ್ಯ ಸುಸ್ಪಷ್ಟವಾಗಿ ವಚನಗಳಲ್ಲಿ ಅಡಕವಾಗಿದೆ. ಪಂಥ ಶ್ರೇಷ್ಠತೆ, ಪರಪಂಥ ದ್ವೇಷ, ವೃತ್ತಿಯಿಂದ ಜಾತಿಪರತೆ ಮತ್ತು ಹುಟ್ಟಿನಿಂದ ಜಾತಿ ವಿರೋಧ, ಗೋಮಾಂಸ ನಿಷೇಧದ ವಿರೋಧ, ಅಂತರ್ಜಾತಿ ವಿವಾಹ ನಿರ್ಬಂಧದ ವಿರೋಧಗಳಂತಹ ಸ್ಥಿತ್ಯಂತರಗಳು ಹೇಗೆ ಒಂದು ಧಾರ್ಮಿಕ ಪಂಥವನ್ನು ಸಾಮಾಜಿಕ ಪಂಥವಾಗಿ ರೂಪಿಸಿದವು ಎಂಬುದು ವಚನಗಳಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ವಿದೇಶಿ ದಾಳಿಗಳಿಂದುಂಟಾದ ಇಂತಹ ಸ್ಥಿತ್ಯಂತರಗಳನ್ನು ವಿರೋಧಿಸಲು ಎಲ್ಲೆಡೆ ನವ ಪಂಥಗಳು ಉದಯವಾದರೆ ವೀರಶೈವವು ತನ್ನ ಸ್ವರೂಪವನ್ನೇ ಬದಲಾಯಿಸಿಕೊಂಡಿತು. ಹೀಗೆ ಕಾಲಕ್ಕನುಗುಣವಾಗಿ ಶಿಶ್ನಾರಾಧನೆಯಿಂದ ರೂಪಾಂತರಗೊಳ್ಳುತ್ತ ಕಡೆಗೆ ಹುಟ್ಟಿನಿಂದ ಜಾತಿಯಂತಹ ಸ್ಥಿತ್ಯಂತರಗಳನ್ನು ಒಪ್ಪಿಕೊಂಡರೂ ತನ್ನ ಸಾಮಾಜಿಕ ಕಳಕಳಿಯನ್ನು ಬಿಟ್ಟುಕೊಡದೆ ಹಿಂದೂ ಸಂಸ್ಕೃತಿಯಂತೆಯೇ ನಿತ್ಯನೂತನವಾಗುತ್ತ ಸಾಗಿಬಂದಿರುವ ಮತ್ತೊಂದು ಮೂಲ ಸಂಸ್ಕೃತಿಯೆಂದರೆ ಅದು ವೀರಶೈವ ಸಂಸ್ಕೃತಿ!

-ರವಿ ಹಂಜ್