ಅಯೋಧ್ಯೆಯೇ? ಸಾಕೇತವೇ? ವಿನೀತವೇ?


ಅಯೋಧ್ಯೆ ಮತ್ತೆ ಸುದ್ದಿಯಾಗುತ್ತಿದೆ. ಈ ಬಾರಿ ಮಂದಿರವಾಗಿಬಿಡುವುದು ಎನ್ನುತ್ತಿದ್ದಂತೆಯೇ ಇದು ಬುದ್ಧನ ಸಾಕೇತ ಪಟ್ಟಣ ಎಂಬ ಸುದ್ದಿಯ ಹಿನ್ನೆಲೆಯಲ್ಲಿ ಇತಿಹಾಸದಲ್ಲೊಮ್ಮೆ ಇಣುಕಿ ನೋಡೋಣ.

ಹಿಂದೂ ಧರ್ಮಗ್ರಂಥಗಳಾದ, ಮಹಾಭಾರತ ಮತ್ತು ರಾಮಾಯಣದಲ್ಲಿ ಅಯೋಧ್ಯೆಯ ಉಲ್ಲೇಖವಿದ್ದರೂ ಸಾಕೇತದ ಉಲ್ಲೇಖವಿಲ್ಲ! ಆದರೆ ಈ ಧರ್ಮಗ್ರಂಥಗಳ ರಚನೆಯ ಕಾಲಕ್ಕೆ ಇತಿಹಾಸದ ಪುರಾವೆಯಿಲ್ಲ. ಪುರಾವೆಯಿಲ್ಲದ ಕಾರಣಕ್ಕಾಗಿ ಇವುಗಳನ್ನು ಸದ್ಯಕ್ಕೆ ಕಲ್ಪಿತ ಪೌರಾಣಿಕಗಳೆಂದು ಪರಿಗಣಿಸಬೇಕಾಗುತ್ತದೆ.

ಕ್ರಿಸ್ತಪೂರ್ವ ನಾಲ್ಕನೇ ಶತಮಾನದಲ್ಲಿ ರಚಿತ ಬೌದ್ಧ ಗ್ರಂಥವಾದ ಮಹಾವಸ್ತು ಸಾಕೇತವು ಇಕ್ಷಾವಕು ರಾಜ ಸುಜಾತನ ರಾಜಧಾನಿಯಾಗಿತ್ತು. ನಂತರ ಈ ಸುಜಾತನ ವಂಶಸ್ಥರೇ ಶಾಕ್ಯ ಮತ್ತು ಕಪಿಲವಸ್ತುಗಳನ್ನು ಕಟ್ಟಿದರೆನ್ನುತ್ತದೆ. ಈ ಗ್ರಂಥದಲ್ಲಿ ಅಯೋಧ್ಯೆಯ ಉಲ್ಲೇಖವಿಲ್ಲ. ಆದರೆ ಮಹಾವಸ್ತು ಒಂದು ಐತಿಹಾಸಿಕ ಗ್ರಂಥ. ಇದರ ರಚನೆಯ ಕಾಲವನ್ನು ಇತಿಹಾಸ ಪುಷ್ಟೀಕರಿಸುತ್ತದೆ.

ರಾಮಾಯಣ/ಮಹಾಭಾರತಗಳಲ್ಲಿರದ ಸಾಕೇತ, ಮತ್ತು ಮಹಾವಸ್ತುವಿನಲ್ಲಿರದ ಅಯೋಧ್ಯೆ ಏನನ್ನು ಹೇಳುತ್ತವೆ?

ಧರ್ಮ ಸಂಘರ್ಷ ಇಂದು ನೆನ್ನೆಯದಲ್ಲ!

ಹಾಗಾಗಿ ಧರ್ಮಗ್ರಂಥವಲ್ಲದ, ಪೌರಾಣಿಕವಲ್ಲದ,  ಕಥಾನಕವಲ್ಲದ ಯಾವುದಾದರೂ ಐತಿಹಾಸಿಕ ಗ್ರಂಥವನ್ನು ಪರಿಗಣಿಸೋಣ. ಪಾಣಿನಿಯ ಅಷ್ಟಾಧ್ಯಾಯಿ ಗ್ರಂಥದಲ್ಲಿ ಸಾಕೇತ ಪಟ್ಟಣದ ಉಲ್ಲೇಖವಿದೆ. ಅದಲ್ಲದೇ ಮಹಾಭಾಷ್ಯ ಎಂಬ ಸಂಸ್ಕೃತ ಭಾಷಾ ವಿಮರ್ಶೆಯನ್ನು ಬರೆದ ಪತಂಜಲಿ ಕೂಡಾ ಸಾಕೇತ ಪಟ್ಟಣದ ಕುರಿತಾಗಿ ಉಲ್ಲೇಖಿಸಿದ್ದಾನೆ.  ಇವೆರಡರಲ್ಲಿ ಅಯೋಧ್ಯೆಯ ಉಲ್ಲೇಖವಿಲ್ಲ. ಸಂಸ್ಕೃತ ವ್ಯಾಕರಣದ ಪಿತಾಮಹನೆನ್ನಿಸಿದ ಪಾಣಿನಿಯ ಕಾಲ ಕ್ರಿಸ್ತಪೂರ್ವ ನಾಲ್ಕು ಅಥವಾ ಐದನೇ ಶತಮಾನವಾದರೆ, ಸಂಸ್ಕೃತ ಭಾಷೆಯಲ್ಲದೆ ಯೋಗ, ವ್ಯಾಕರಣ, ತತ್ವಜ್ಞಾನದ ಪಿತಾಮಹನೆನಿಸಿದ ಪತಂಜಲಿಯ ಕಾಲ ಕ್ರಿಸ್ತಪೂರ್ವ ಎರಡನೇ ಶತಮಾನ!

ಸಾಕೇತಕ್ಕೆ ಇತಿಹಾಸದ ಪುಷ್ಟೀಕರಣವಿದ್ದರೆ,  ಅಯೋಧ್ಯೆಗೆ ಪೌರಾಣಿಕ ನಂಬಿಕೆಯ ಬೆಂಬಲವಿದೆ.

ಅದಲ್ಲದೇ ಬುದ್ಧ ಮತ್ತು ಮಹಾವೀರರಿಬ್ಬರೂ ಸಾಕೇತದಲ್ಲಿ ಕೆಲಕಾಲ ವಾಸವಿದ್ದರೆಂದು ಇತಿಹಾಸ ತಿಳಿಸುತ್ತದೆ.

ಇನ್ನು ಅಯೋಧ್ಯೆ ಮತ್ತು ಸಾಕೇತ ಒಂದೇ ಊರಿನ ಎರಡು ಹೆಸರುಗಳೇ?

ಹೌದೆನ್ನುತ್ತದೆ ಇತಿಹಾಸ! ಕ್ರಿಸ್ತಶಕ ನಾಲ್ಕನೇ ಶತಮಾನದ ಕಾಳಿದಾಸನ ರಘುವಂಶ ಸಾಕೇತ ಮತ್ತು ಅಯೋಧ್ಯೆಗಳೆರಡೂ ಒಂದೇ ಎನ್ನುತ್ತದೆ. ನಂತರದ ಜೈನಗ್ರಂಥಗಳು ಸಾಕೇತ/ಅಯೋಧ್ಯೆ ವಿನೀತ ಯಾ ವಿನಿಯ ಯಾ ಸಗೇಯಾ (ಸಾಕೇತದ ಅಪಭ್ರಂಶ) ಪಟ್ಟಣ ತಮ್ಮ ಆದಿ ತೀರ್ಥಂಕರನಾದ ರಿಷಭನಾಥನ ಜನ್ಮಸ್ಥಳವೆಂದು ಗುರುತಿಸುತ್ತವೆ. ಈ ರಿಷಭ 1200 ಅಡಿ ಎತ್ತರವಿದ್ದನೆಂದು ಜೈನ ಪುರಾಣಗಳು ಹೇಳುತ್ತವೆ. ಹಾಗಾಗಿಯೇ ಜೈನರು ಎತ್ತರದ ಮೂರ್ತಿಗಳನ್ನು ಸ್ಥಾಪಿಸುತ್ತಿದ್ದುದು. ಇದನ್ನೇ ಬೌದ್ಧರು ನಕಲು ಮಾಡಿ ಬುದ್ಧನ ಎತ್ತರದ ಪ್ರತಿಮೆಗಳನ್ನು ಕಟ್ಟಿದರು. ಇತ್ತೀಚೆಗೆ ಮೂರ್ತಿಸ್ಥಾಪನೆ ಸುದ್ದಿಯಾಗುತ್ತಿರುವುದರಿಂದ ಸಾಂದರ್ಭಿಕವಾಗಿ ಈ ಉಲ್ಲೇಖ ಅವಶ್ಯವೆನಿಸುತ್ತದೆ.

ಸಾಮಾಜಿಕವಾಗಿ ಪ್ರಚಲಿತವಿರುವ ಸಾಕೇತರಾಮ, ಸಗಾಯಿರಾಮ, ಸಗಾಯಪ್ಪನ್ ಎಂಬ ಹೆಸರುಗಳು ಕೂಡಾ ಇವೆರಡೂ ಒಂದೆಂದು ಅನುಮೋದಿಸುತ್ತವೆ.

ಐತಿಹಾಸಿಕವಾಗಿ ಈ ನಗರ ಅದೇಕೆ
ಧರ್ಮಗಳಷ್ಟೇ ಆಲ್ಲದೇ ಲಲಿತಕಲೆ, ತತ್ವಜ್ಞಾನಿ, ಸಂಗೀತಗಾರರು, ಪಂಡಿತರು, ವಣಿಕರೆಲ್ಲರಿಗೂ ಅಷ್ಟೊಂದು ಪ್ರಮುಖವಾಗಿತ್ತು?!

ಆ ಪ್ರಶ್ನೆಗೆ ಉತ್ತರವಾಗಿ ಮತ್ತೆರಡು ಪ್ರಶ್ನೆಗಳನ್ನು ಕೇಳಬೇಕಾಗುತ್ತದೆ.

ಜಾಗತಿಕವಾಗಿ ಇಂದು ಎಲ್ಲರೂ ಏಕೆ ಅಮೆರಿಕಕ್ಕೆ ಹೋಗಬಯಸುವರು? ಅಥವಾ ರಾಜ್ಯದ ಮೂಲೆ ಮೂಲೆಯಿಂದ ಜನ ಬೆಂಗಳೂರಿಗೇ ಏಕೆ ವಲಸೆ ಬರುತ್ತಿದ್ದಾರೆ?

ಎಲ್ಲಾ ಪ್ರಮುಖ ವಾಣಿಜ್ಯ ನಗರಿಗಳು ವಾಣಿಜ್ಯವನ್ನಷ್ಟೇ ಆಲ್ಲದೆ ಉನ್ನತ ಲಲಿತಕಲೆ, ಸಾಹಿತ್ಯ, ತತ್ವಜ್ಞಾನ, ಕುಶಾಗ್ರತೆ, ಮತ್ತು ಪಾಂಡಿತ್ಯವನ್ನು ಆದರಿಸುತ್ತಿದ್ದವು. ಹಾಗಾಗಿಯೇ ಉತ್ತಮ ಅವಕಾಶಗಳಿಗಾಗಿ ಪ್ರತಿಭಾವಂತರು ಇಲ್ಲಿಗೆ ವಲಸೆ ಬಂದರೆ, ಪ್ರಭುತ್ವಗಳು ಇಂತಹ ನಗರಗಳ ಮೇಲೆ ಹಕ್ಕು ಸ್ಥಾಪಿಸುತ್ತಿದ್ದವು. ಅದೇ ರೀತಿ ಧರ್ಮಗಳು ಆ ಪ್ರಭುತ್ವಗಳ ಮೇಲೆ ಹಿಡಿತ ಸಾಧಿಸುತ್ತಿದ್ದವು.

ಸಾಕೇತ, ಹಲವು ಪ್ರಮುಖ ಹೆದ್ದಾರಿಗಳ ನಡುವೆ ಬರುವ ಒಂದು ಜಂಕ್ಷನ್ ಆಗಿತ್ತು. ಸರಕು ಸಾಮಗ್ರಿಗಳ ಹೇರಿಕೊಂಡು ಉತ್ತರದಿಂದ ದಕ್ಷಿಣಕ್ಕೂ, ಪೂರ್ವದಿಂದ ಪಶ್ಚಿಮಕ್ಕೂ ಸಾಗುವ ಹೆದ್ದಾರಿಗಳು ಕೂಡುವ ಮತ್ತು ತಕ್ಷಶಿಲೆ, ವಾರಣಾಸಿ, ರಾಜಗೃಹ, ಕಪಿಲವಸ್ತು, ಸ್ರವಸ್ತಿ ನಗರಗಳನ್ನು ಬೆಸೆಯುವ ತಂಗುದಾಣವಾಗಿತ್ತು.

ಈ ತಂಗುದಾಣವನ್ನು ಪ್ರಮುಖ ನಗರವಾಗಿ ಕಟ್ಟಿದವನು ಧನಂಜಯನೆಂಬ ಕ್ರಿಸ್ತಪೂರ್ವ ಐದನೇ ಶತಮಾನದ ವರ್ತಕ! ತನ್ನ ರಾಜನಾದ ಪ್ರಸನ್ನಜೀತನ ಅಣತಿಯಂತೆ ಇದನ್ನು ಪ್ರಮುಖ ನಗರವಾಗಿಸಿದ. ಹುಯೆನ್ ತ್ಸಾಂಗನ ಕಾಲಕ್ಕೆ ಆಗಲೇ ಧನಂಜಯನ ಕುರಿತು ದಂತಕತೆಗಳಿದ್ದವು. ತನ್ನ ಯಾತ್ರೆಯಲ್ಲಿ ಹುಯೆನ್ ತ್ಸಾಂಗ್ ಈ ದಂತಕತೆಯನ್ನು ನೆನೆದು ಭಕ್ತಿಪರವಶನಾದದ್ದನ್ನು ನನ್ನ ಮಹಾಪಯಣ ಕೃತಿಯಲ್ಲಿ ಹೆಚ್ಚಿನ ಮಾಹಿತಿಗೆ ಓದಬಹುದು. ಈ ಧನಂಜಯನ ಪುತ್ರಿಯೇ ಖ್ಯಾತ ಬೌದ್ಧಭಿಕ್ಷುಣಿ ವಿಶಾಖ!

ಸಾಕೇತ/ಅಯೋಧ್ಯೆ/ವಿನೀತವಿರಲಿ ಅಥವಾ ಮೊಹೆಂಜೋದಾರ, ನಾಸಿಕ, ಹಂಪಿ, ಮುಂಬೈ ಆಗಲೀ ಖ್ಯಾತವಾಗಿದ್ದಿದು ಅವು ಪ್ರಮುಖ ವಾಣಿಜ್ಯ ಕೇಂದ್ರಗಳಾಗಿದ್ದುದಕ್ಕೆ! ವಾಣಿಜ್ಯವೇ ಎಲ್ಲ ಧರ್ಮ, ಪ್ರಭುತ್ವ, ಲಲಿತಕಲೆ, ಸಾಹಿತ್ಯಗಳ ಮಹಾಪೋಷಕ. ಇದು ಗತಕಾಲದ ಮೊಹೆಂಜೋದಾರೋದಿಂದ ಇಂದಿನ ನ್ಯೂಯಾರ್ಕ್ ವರೆಗಿನ ಸಾರ್ವಕಾಲಿಕ ಸತ್ಯ!

ಭಾರತದ ನವನಾಗರೀಕತೆಗೆ ಬುನಾದಿ ಹಾಕಿದ ಮೊಹೆಂಜೋದಾರೋದಿಂದ ಇಲ್ಲಿಯವರೆಗೆ ಎಲ್ಲಾ ನಾಗರೀಕ ಆಯಾಮಗಳಿಗೆ ತನುಮನಧನದಿಂದ ಕಾಣಿಕೆ ಸಲ್ಲಿಸಿರುವುದು ಬಂಡವಾಳಶಾಹಿಯ ವಣಿಕ ವರ್ಗ. ಇದು ಬೌದ್ಧ ಸ್ತೂಪಗಳನ್ನು ಕಟ್ಟಲು ಆರಂಭಿಸಿದ ಕ್ರಿಸ್ತಪೂರ್ವ ವರ್ತಕರಿಂದ ಹಿಡಿದು ಕರ್ನಾಟಕದಾದ್ಯಂತ ಛತ್ರಗಳನ್ನು ಕಟ್ಟಿಸಿದ ವೈಶ್ಯ ವರ್ಗದವರೆಗಿನ ವಾಸ್ತವ! ಇತ್ತೀಚಿನವರೆಗೂ ಯಾವುದೇ ಊರಿನಲ್ಲಿ ಒಂದು ನಾಟಕವನ್ನು ಆಡಿಸಲೋ, ಅಥವಾ ಉಚಿತ ಊಟ ವ್ಯವಸ್ಥೆಗೋ ಮೊದಲು ಚಂದಾ ಕೇಳುತ್ತಿದ್ದುದು ಶೆಟ್ಟರನ್ನೇ.

ಈ ವರ್ತಕರ ಸರಕು ಸಾಗಣೆ ಬಂಡಿಗಳು ಕೇವಲ ಸರಕು ಸಾಗಿಸದೆ ಧರ್ಮ, ಸಾಹಿತ್ಯ, ಲಲಿತಕಲೆ, ವಿಜ್ಞಾನ, ತಂತ್ರಜ್ಞಾನದ ಪ್ರಸಾರಕವಾಗಿದ್ದವು. ಮಾನವ ವಿಕಾಸ, ನಾಗರೀಕತೆಯ ವಿಕಾಸಕ್ಕೆ ವಣಿಕ ವರ್ಗದ ಕೊಡುಗೆ ಅಪಾರ. ಬೌದ್ಧಧರ್ಮ ಈ ವಣಿಕ/ವರ್ತಕ/ವೈಶ್ಯರ ಧರ್ಮವಾಗಿ, ಅವರ ಸರಕು ಸಾಗಣೆಯೊಂದಿಗೆ ತ್ವರಿತವಾಗಿ ಏಷ್ಯಾದಂತ ಪ್ರಸರಿಸಿತ್ತು.

ಶಿವನ ಮಾನಸಪುತ್ರ ವೀರಭದ್ರನಂತೆಯೇ ರೂಪಿಸಿದ್ದ ರಿಷಭ, ಬಾಹುಬಲಿ ಮುಂತಾದ ಜೈನ ರೂಪಗಳು ಕ್ಷತ್ರಿಯರನ್ನು ಜೈನಧರ್ಮಕ್ಕೆ ಆರಂಭದಲ್ಲಿ ಆಕರ್ಷಿಸುತ್ತ ಸಾಹಿತ್ಯಿಕ ಧರ್ಮವಾಗಿ ಬೆಳೆಯುತ್ತಾ ನಡೆದಿತ್ತು.

ಇರಲಿ, ಐತಿಹಾಸಿಕ ಭಾರತದ ಅಸ್ಮಿತೆಯನ್ನು ಹೊಂದಿರುವ "ಪೌರಾಣಿಕ" ಹಿಂದೂ, "ತಾತ್ವಿಕ" ಬೌದ್ಧ, ಮತ್ತು "ಸಾಹಿತ್ಯಿಕ" ಜೈನ ಧರ್ಮಗಳ ಸಮ್ಮಿಳಿತದ ಸಂಕೇತವಾದ ಈ "ವಣಿಕ" ಪಟ್ಟಣ, ಕಾಲಘಟ್ಟದಲ್ಲಿ "ಅಲ್ಪಸಂಖ್ಯಾತ" ಮುಸ್ಲಿಮರ ನಾಡಾಗಿ ಇಂದು "ದಲಿತ" ಬೌದ್ಧರು ರಾಮಮಂದಿರದ ಬದಲಾಗಿ ಬೌದ್ಧಮಂದಿರವನ್ನು ಕಟ್ಟಿರೆಂಬ ಆಧುನಿಕ ಭಾರತದ ಸಂದಿಗ್ಧ ತಿರುವಿನಲ್ಲಿ ನಿಂತಿದೆ.

ಇಲ್ಲಿ ಮಂದಿರವಾಗಬೇಕೆ? ಗೊತ್ತಿಲ್ಲ! ಆದರೆ ಈ ಎಲ್ಲಾ ಐತಿಹಾಸಿಕ ಅಸ್ಮಿತೆಗಳನ್ನೊಳಗೊಂಡ ಬುದ್ಧ, ರಾಮ, ಮತ್ತು ಜಿನ ಮೂರ್ತಿಗಳ ಒಂದು ಅಂತರರಾಷ್ಟ್ರೀಯ ವಾಣಿಜ್ಯ ಸಂಕೀರ್ಣ ಕಟ್ಟಬೇಕೇ? ತುಂಬಾ ಸಂಕೀರ್ಣ ಪ್ರಶ್ನೆ!

ಒಟ್ಟಾರೆ ಎಲ್ಲಾ ಧರ್ಮಗಳಿಗೂ ಬೇಕಿದ್ದ ಈ ನಗರಕ್ಕಾಗಲಿ ಅಥವಾ ಆ ಧರ್ಮಗಳಿಗಾಗಲಿ ಯುಗಯುಗಗಳೇ ಕಳೆದಿದ್ದರೂ "ಹಿಂದೂ" ಮೋಕ್ಷವಾಗಲಿ, "ಬೌದ್ಧ" ನಿರ್ವಾಣವಾಗಲಿ  ಅಥವಾ "ಜೈನ" ಕೈವಲ್ಯವಾಗಲಿ ಸಿಕ್ಕಿಲ್ಲ.



No comments: