ನಾಡಿನ ಖ್ಯಾತ ಚಿಂತಕರಾದ ಅರವಿಂದ ಚೊಕ್ಕಾಡಿಯವರು ನನ್ನ ಬಸವರಾಜಕಾರಣ ಕುರಿತು ಹೀಗೆ ಹೇಳುತ್ತಾರೆ:
ರವಿ ಹಂಜ್ ಅವರ ' ಬಸವ ರಾಜಕಾರಣ' ಕೃತಿಯ ಅಗಾಧವಾದ ವಿವರ ಮತ್ತು ಜಿಜ್ಞಾಸೆಗಳ ಭಾಗಕ್ಕೆ ನಾನು ಹೋಗುವುದಿಲ್ಲ. ಅದಕ್ಕೆ ಪುಸ್ತಕವನ್ನೆ ಓದುವುದು ಸೂಕ್ತ. ಆದರೆ ವರ್ತಮಾನದಲ್ಲಿ ಈ ಕೃತಿಗೆ ಇರುವ ಮಹತ್ವವನ್ನು ಇಲ್ಲಿ ಹೇಳಲು ಬಯಸುತ್ತೇನೆ. ಬಹುಶಃ ಇದು ಹೊಸ ತಲೆಮಾರಿನ ಲೇಖಕರು ನ್ಯಾಯ ಪಕ್ಷಪಾತಿಯಾದ ನಿಲುವನ್ನು ಮುಂಬರುವ ದಿನಗಳಲ್ಲಿ ತೆಗೆದುಕೊಳ್ಳಲು ಪ್ರೇರಕವಾಗುವ ಕೃತಿಯೂ ಆಗಿದೆ.
ಭಾರತದ ಸಂಶೋಧನಾ ಪದ್ಧತಿಯ ಮುಖ್ಯವಾಹಿನಿ ಇಂದಿಗೂ ವಸಾಹತುಶಾಹಿ ಸಂಕಥನವನ್ನು ಆಧರಿಸಿದೆ. ಇಲ್ಲಿ ಬರುವ ತೌಲನಿಕ ಅಧ್ಯಯನಗಳ ಹಿಂದೆ 'ಭಂಜನೆ' ಯ ಗುಣವಿದೆ. ವಚನ ಸಾಹಿತ್ಯದ ಕುರಿತ ಅಧ್ಯಯನವಾದಾಗ ಹಿಂದೂ ಧರ್ಮ ಯಾಕೆ ಕೆಟ್ಟದು ಎಂದು ಹೇಳುವುದು ಸಂಶೋಧನೆಯ ಉದ್ದೇಶವಾಗಿರುತ್ತದೆ. ಗಾಂಧಿ-ಅಂಬೇಡ್ಕರ್ ತೌಲನಿಕ ಅಧ್ಯಯನವಾದಾಗ ಗಾಂಧಿ ಯಾಕೆ ಅಮುಖ್ಯ ಎಂದು ಹೇಳುವುದು ಉದ್ದೇಶವಾಗಿರುತ್ತದೆ. ಯಾವುದೆ ಸಾಂಸ್ಕೃತಿಕ ಅಧ್ಯಯನವೂ ಕೂಡ ಹಿಂದೂ ಧರ್ಮವನ್ನು ವಿಲನ್ ಆಗಿ ನಿಲ್ಲಿಸಿಕೊಂಡು ತುಲನೆಗೊಳಗಾಗುವ ಇನ್ನೊಂದನ್ನು ಹೀರೋ ಆಗಿ ರೂಪಿಸುತ್ತಾ ಹೋಗುವುದು ಭಾರತದ ಸಂಶೋಧನೆಗಳ ಸಹಜ ವಿನ್ಯಾಸವಾಗಿದೆ. ಈ ವಿನ್ಯಾಸವನ್ನು ರೂಪಿಸಿದ್ದು ವಸಾಹತುಶಾಹಿ ಆಡಳಿತವಾಗಿದೆ.
ರವಿ ಹಂಜ್ ಈ ಸಂಶೋಧನಾ ವಿನ್ಯಾಸವನ್ನು ಒಡೆಯುತ್ತಾರೆ. ಸಂಶೋಧನೆಯನ್ನು ತೆರೆದ ಮನಸ್ಸಿನಿಂದ ಇಟ್ಟಿದ್ದಾರೆ. ಒಮ್ಮೆ ಅದ್ವೈತವನ್ನು ಪುರಸ್ಕರಿಸುವ, ಮತ್ತೊಮ್ಮೆ ತಿರಸ್ಕರಿಸುವ, ಒಮ್ಮೆ ಮಾಂಸಾಹಾರವನ್ನು ತಿರಸ್ಕರಿಸುವ, ಮತ್ತೊಮ್ಮೆ ಮಾಂಸಾಹಾರಿಗಳನ್ನೂ ಒಳಗೊಳ್ಳುವ ವಚನ ಸಾಹಿತ್ಯದ ದ್ವಂದ್ವಗಳನ್ನೂ ಚರ್ಚೆಗೆ ಒಳಪಡಿಸಿದ್ದಾರೆ. " ವಚನ ಚಳವಳಿಯ ಪ್ರತಿಯೊಂದು ಹಂತದಲ್ಲೂ ಸನಾತನ ಕಾಳಾಮುಖ ಸಂಸ್ಕೃತಿ ಗಾಢವಾಗಿ ಆವರಿಸಿಕೊಂಡಿದೆ. ಕಾಳಾಮುಖಿಗಳ ಪಂಥ ಶ್ರೇಷ್ಠತೆ, ಸವಾಲುವಾದ, ಪಂಥ ವಿಸ್ತರಣೆ, ಪಂಥ ಹೇರಿಕೆ, ಸವಾಲಿನಲ್ಲಿ ಸೋತರೆ ಆತ್ಮಾಹುತಿಯಾಗುವ ಸಂಸ್ಕೃತಿಗೆ ಭಿನ್ನವಾಗಿ ಶರಣರು ಏನೂ ಮಾಡಿಲ್ಲ. ತಮ್ಮ ಪಂಥ ಶ್ರೇಷ್ಠತೆಯನ್ನು ಮೆರೆದಿದ್ದಾರೆ. ಪರ ಪಂಥ ಅವಹೇಳನವನ್ನು ಮಾಡಿದ್ದಾರೆ. ಸವಾಲುಗಳನ್ನು ಹಾಕಿದ್ದಾರೆ. ಕಡೆಗೆ ತಮ್ಮ ಸವಾಲಿನಲ್ಲಿ ಸೋತು ಕಲ್ಯಾಣ ಕ್ರಾಂತಿಯಲ್ಲಿ ವೀರರಂತೆ ಆತ್ಮಾಹುತಿಗೊಂಡಿದ್ದಾರೆ(ಪು. ೧೪೧)" ಎನ್ನುವಲ್ಲಿ ಸಾಕಷ್ಟು ತೀಕ್ಷ್ಣವಾದ ವಿಮರ್ಶೆಯೇ ಇದೆ. ಶರಣ ಚಳವಳಿಯ ಮಹತ್ತನ್ನು ಗೌರವಿಸಿಯೂ ಈ ಮಾತನ್ನಾಡುವುದಕ್ಕೆ ಅಪಾರವಾದ ನೈತಿಕ ಸ್ಥೈರ್ಯ ಬೇಕಾಗುತ್ತದೆ.
ಬೌದ್ಧ ಧರ್ಮದ ನಾಶಕ್ಕೆ ಮುಸ್ಲಿಂ ಬಂಡುಕೋರರ ದಾಳಿಯ ಕಾರಣವನ್ನು ಅಂಬೇಡ್ಕರ್ ಹೇಳಿರುವುದನ್ನು ಪ್ರಸ್ತಾಪಿಸಿರುವ ರವಿ ಹಂಜ್, ಮಹತ್ತರವಾದ ಅಬ್ಸರ್ವೇಷನ್ ಕೊಟ್ಟಿದ್ದಾರೆ. ಯಾವುದೆ ಧಾರ್ಮಿಕ ಸಮುದಾಯದ ಸಂಘಟನೆಗೆ ಪುರೋಹಿತ ವರ್ಗ ಅವಶ್ಯಕ. ಬೌದ್ಧ ಬಿಕ್ಕುಗಳಿಗೆ ಪ್ರತಿಯಾಗಿ ಹಿಂದೂ ಧರ್ಮದಲ್ಲಿರುವ ಬ್ರಾಹ್ಮಣರು ಸಂಸಾರಿಗಳಾಗಿದ್ದುದು ಕೂಡ ಹಿಂದೂ ಧರ್ಮ ಉಳಿದುಕೊಳ್ಳಲು ಒಂದು ಕಾರಣ ಎನ್ನುವುದು ಒಳ್ಳೆಯ ಅಬ್ಸರ್ವೇಷನ್.
ಫಾಹಿಯಾನ್‌ನ ದಾಖಲೆಗಳ ಆಧಾರದಲ್ಲಿ ಚಂಡಾಲರು ಮಾಂಸೋದ್ಯಮಿಗಳು, ಅವರೂ ಬ್ರಾಹ್ಮಣರಾಗಿ ಬದಲಾಗಲು ಅವಕಾಶವಿತ್ತು ಎಂಬುದನ್ನು ನಿರೂಪಿಸಿರುವ ರವಿ ಹಂಜ್ ಜಾತಿ ವ್ಯವಸ್ಥೆಯನ್ನು ಮುಸ್ಲಿಂ ದಾಳಿಯ ನಙತರದ ವಿದ್ಯಮಾನವಾಗಿ ಗುರುತಿಸುತ್ತಾರೆ. ಇದು ಸ್ವಲ್ಪ ಜಾಸ್ತಿ ಚರ್ಚೆಯನ್ನು ಬಯಸುವ ವಿಷಯ. ನನ್ನ ಮಟ್ಟಿಗೆ ಜಾತಿಯ ರಚನೆ ಮುಸ್ಲಿಂ ಪೂರ್ವ ಕಾಲದ್ದೆಂಬ ಅಂಬೇಡ್ಕರ್ ಅವರ ಅವಲೋಕನವೇ ಸರಿ ಇದೆ. ಆಲೂರು ವೆಂಕಟ್ರಾಯರು ಹರ್ಡೇಕರ್ ಮಂಜಪ್ಪ ಅವರೊಂದಿಗೆ ನಡೆಸಿದ ಸಂವಾದದಲ್ಲಿ ವರ್ಣ ಮತ್ತು ಜಾತಿಗಳೆರಡೂ ಜೊತೆಜೊತೆಯಾಗಿ ಅಸ್ತಿತ್ವದಲ್ಲಿದ್ದುದನ್ನು ಹೇಳಿದ್ದಾರೆ. ಅಲ್ಲದೆ ಹಿಂದೂ ಧರ್ಮದ ಬಳಿ ನಾಥ ಪಂಥದ ಪ್ರಧಾನ ಬೇಡಿಕೆ ಹಳೆಯ ವರ್ಣ ಪದ್ಧತಿಯನ್ನೆ ಮತ್ತೆ ಜಾರಿಗೆ ತರಬೇಕು ಎಂಬುದೇ ಆಗಿತ್ತು. ಹಾಗಿರುವಾಗ ಮುಸ್ಲಿಂ ಆಡಳಿತದಲ್ಲಿ ಜಾತಿಗಳು ಬಿಗಿಯಾದವು ಎನ್ನಬಹುದೆ ಹೊರತು ಆ ನಂತರವೇ ಜಾತಿ ಸ್ಥಿರೀಕರಣಗೊಂಡಿತು ಎನ್ನುವುದು ಕಷ್ಟ. ಜಾತಿ ಕಾನೂನಾತ್ಮಕ ಸ್ಥಿರೀಕರಣವಾದದ್ದು ಬ್ರಿಟಿಷ್ ಆಡಳಿತದಲ್ಲೆ. ಅಲ್ಲಿಯ ವರೆಗೂ ಒಂದು ಜಾತಿಯಿಂದ ಮತ್ತೊಂದು ಜಾತಿಗೆ ವರ್ಗಾವಣೆಯಾಗಬಹುದಾಗಿತ್ತು.
ಭಾರತದ ಗಣಿತ, ವಿಜ್ಞಾನ, ಶಾಸ್ತ್ರಗಳ ಆವಿಷ್ಕಾರಗಳನ್ನು ಮೊಘಲ್ ಪೂರ್ವ ಕಾಲದ್ದಾಗಿ ರವಿ ಹಂಜ್ ಸಮರ್ಪಕವಾಗಿಯೆ ಗುರುತಿಸಿದ್ದಾರೆ. ಈ ಅಂಶವನ್ನು ಜವಾಹರ ಲಾಲ್ ನೆಹರೂ ಅವರೂ ಗುರುತಿಸಿದ್ದು," ಇಸ್ಲಾಂ ಭಾರತಕ್ಕೆ ಯಾವುದೆ ವೈಜ್ಞಾನಿಕ ಅಥವಾ ರಾಜಕೀಯ ಕೊಡುಗೆಗಳನ್ನು ತಂದಿಲ್ಲ" ಎಂದು ಹೇಳಿದ್ದಾರೆ. ಆದರೆ ಮೊಘಲರದ್ದೂ ಭಾರತೀಯ ಆವಿಷ್ಕಾರವನ್ನು ನಾಶ ಪಡಿಸುವ ಉದ್ದೇಶ ಪೂರ್ವಕ ಯೋಜನೆಯಾಗಿರಲಿಲ್ಲ ಎನ್ನುವಲ್ಲಿ ಎಡಬಲ ಪಂಥಗಳನ್ನು ಮೀರಿದ ಸತ್ಯ ಶೋಧಕನ ಜಾಗದಲ್ಲಿ ರವಿ ಹಂಜ್ ನಿಲ್ಲುತ್ತಾರೆ.
ಹುಟ್ಟಿನಿಂದ ಬರುವ ಜಾತಿ ವ್ಯವಸ್ಥೆಯ ಅಧಿಕೃತತೆ ಆವಿಷ್ಕಾರ ಪ್ರವೃತ್ತಿಯ ಹಿನ್ನಡೆಗೆ ಕಾರಣವಾಗಿರುವುದನ್ನು ಗುರುತಿಸಿರುವ ರವಿ ಹಂಜ್ ಆಧುನಿಕ ಗಣಕ ಯಂತ್ರಗಳಲ್ಲಿಯೂ ಬಳಕೆಯಾಗಿರುವ ಭಾರತದ ಪುರಾತನ ಆವಿಷ್ಕಾರಗಳ ಕುರಿತು ಬೆಳಕು ಚೆಲ್ಲಿದ್ದಾರೆ. ಕನಿಷ್ಕನ ಕರಂಡಕ ಮತ್ತು ವೀರಶೈವ ಕರಡಿಗೆಗಳ ಹೋಲಿಕೆಯ ಮೂಲಕ ಹಿಂದೂ, ಬೌದ್ಧ, ಜೈನ, ಪಾಶುಪತಗಳು ಹೇಗೆ ಒಂದೇ ಸಂಸ್ಕೃತಿಯ ಕವಲುಗಳಾಗಿವೆ ಎಂಬುದನ್ನು ಹೇಳಿದ್ದಾರೆ.
ರವಿ ಹಂಜ್ ಅವರ ಅಧ್ಯಯನ ಮತ್ತು ಸೂಕ್ಷ್ಮತೆಗಳ ಆಧಾರದಲ್ಲಿ ಈ ಕೃತಿಯನ್ನು ವರ್ತಮಾನದ ಸಮಾಜವನ್ನು ವಿಭಜಿಸುವ ಪ್ರವೃತ್ತಿಯ; ಆದರೆ ಅನುಯಾಯಿಗಳನ್ನು ಸೃಷ್ಟಿಸಿಕೊಂಡು "ಜೈ" ಕಾರ ಹಾಕಿಸಿಕೊಳ್ಳಬಹುದಾದ ಬಲಪಂಥಕ್ಕೂ ಕೊಂಡೊಯ್ಯಬಹುದಿತ್ತು. ಎಡಪಂಥಕ್ಕೂ ಕೊಂಡೊಯ್ಯಬಹುದಿತ್ತು. ಆದರೆ ಅವರೆಡನ್ನೂ ಮಾಡದೆ ಕೃತಿಯನ್ನು ತೆರೆದ ಮನಸ್ಸಿನ ಕೃತಿಯಾಗಿ ಇಟ್ಟಿದ್ದಾರೆ. ಬಹುಶಃ ಈ ವಿಧಾನದಲ್ಲೆ ಒಂದು ಹಿಸ ಸ್ಕೂಲ್ ಆಫ್ ಥಾಟ್ ಬೆಳೆಯಲಿದೆ. ಒಂದು ಮೆಥಡಾಲಜಿಯಾಗಿ ಈ ಕೃತಿಗೆ ಅಪಾರ ಮಹತ್ವವಿದೆ. ಆದ್ದರಿಂದಲೇ ಈ ಕೃತಿ ಹೆಚ್ಚು ಜನರನ್ನು ತಲುಪಬೇಕಾದ ಅಗತ್ಯವಿದೆ. ಈ ಮೆಥಡಾಲಜಿಗಾಗಿ ರವಿಯವರನ್ನು ಅಭಿನಂದಿಸುತ್ತೇನೆ.
No comments:
Post a Comment