ಅಂತೂ ಒಂದು ಮಹಾಯುದ್ಧದ ಮುನ್ನುಡಿ ಮುಂಬೈಯಿಂದ ಶುರುವಾಗಿದೆ. ಈವರೆಗೂ ಎಲ್ಲೋ ಕಾಶ್ಮೀರದ ಕಣಿವೆಯಿಂದಲೋ, ಯಾರೂ ಅರಿಯದ ಕತ್ತಲ ಕೋಣೆಗಳಿಂದಲೋ ಆಕ್ರಮಿಸಿ ಬಾಂಬುಗಳನ್ನು ಹುಗಿದಿಟ್ಟು ಮುಗ್ಧರನ್ನು ಕೊಲ್ಲುತ್ತಿದ್ದ ಭಯೋತ್ಪಾದಕರು ಇಂದು ಮುಂಬಾಗಿಲಾದ ’ಗೇಟ್ ವೇ ಆಫ್ ಇಂಡಿಯಾ’ದಿಂದಲೇ ಆಡಿಯಿಟ್ಟು ಮುಂಬೈಯ ಮುಡಿಯೇರಿದ್ದಾರೆ. ಮುಖ್ಯ ನಮ್ಮಲ್ಲಿ ಸರಿಯಾದ ಕಾನೂನುಗಳೇ ಇಲ್ಲದಿರುವುದು. ಇದ್ದರೂ ಅವುಗಳ ಅನುಷ್ಟಾನ........?
ನಮ್ಮಲ್ಲಿ ಎಂತಹ ದ್ವಂದ್ವಗಳಿವೆಯೆಂದರೆ, ನಮ್ಮ ಮಕ್ಕಳಿಗೆ ಶಾಲೆಯಲ್ಲಿ ಸಂವಿಧಾನವನ್ನು ಭೋಧಿಸುತ್ತ, ಅಪರಾಧೀ ಹಿನ್ನೆಲೆಯಿರುವವರು ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎನ್ನುತ್ತೇವೆ. ಆದರೆ ಇಂದಿನ ಶೇಕಡಾ ೬೦% ನಮ್ಮ ಜನಪ್ರತಿನಿಧಿಗಳು ಅಪರಾಧೀ ಹಿನ್ನೆಲೆಯವರಾಗಿದ್ದಾರೆ. ಅದರಲ್ಲೂ ಅನೇಕರು ಜೈಲಿನಲ್ಲಿ ಕುಳಿತೇ ಚುನಾವಣೆಗಳನ್ನು ಗೆದ್ದಿದ್ದಾರೆ. ಸಂವಿಧಾನದ ಅದ್ಯಾವ ತಿದ್ದುಪಡಿ ಕೊಲೆಗಡುಕರು, ರೌಡಿಗಳು, ಕಳ್ಳರನ್ನೆಲ್ಲಾ ಜನಪ್ರತಿನಿಧಿಗಳಾಗುವಂತೆ ಮಾರ್ಪಾಡಿಸಿತೋ ನಾ ಕಾಣೆ.
ಮುಂಬೈಯ ದಾಳಿಗೆ ಒಂದು ತಿಂಗಳ ಮುಂಚೆಯೇ ಜಲಮಾರ್ಗವಾಗಿ ಭಾರತದ ಮೇಲೆ ಉಗ್ರರು ದಾಳಿ ಮಾಡಬಹುದೆಂದು ಅಮೇರಿಕಾ ಸೂಚನೆ ನೀಡಿದ್ದರೂ ಅದನ್ನು ’ನಾಸ್ಟ್ರಡಾಮಸ್’ನ ಭವಿಷ್ಯವಾಣಿಯೆಂಬಂತೆ ಹಗುರವಾಗಿ ಪರಿಗಣಿಸಿದ್ದುದು, ದಾಳಿಯ ನಂತರವೂ ಪಾಕಿಸ್ತಾನದ ಐ.ಎಸ್.ಐ. ಮುಖ್ಯಸ್ಥನನ್ನು ಬಂದು ನೋಡೆಂದು ಕೇಳಿಕೊಳ್ಳುವುದು, ಸಹಾಯ ಮಾಡಲು ಬಂದ ಅಮೇರಿಕಾದ ಎಫ್.ಬಿ.ಐ.ಯನ್ನು ವಿಮಾನನಿಲ್ದಾಣದಲ್ಲೇ ಕಾಯಿಸಿದ್ದುದು ಭಾರತದ ಘನ ಸರ್ಕಾರದ ಕ್ರಿಯಾಶೀಲತೆಗೆ ಹಿಡಿದ ಕೈಗನ್ನಡಿಯಾಗಿದೆಯೋ ಅಥವಾ ಈ ಘಟನೆಯನ್ನೂ ಕೂಡಾ ಓಲೈಕೆಗೋ, ಮತರಾಜಕೀಯಕ್ಕೋ ಅನ್ವಯಿಸಲು ಸೂತ್ರವನ್ನು ಹುಡುಕುವ ವ್ಯವಧಾನವಾಗಿದೆಯೋ ಅರಿಯೆ. ಒಂದೆಡೆ ಭ್ರಷ್ಟ ಅಧಿಕಾರೀಶಾಹಿಗಳು ದೇಶವನ್ನು ಹಿಂಡಿ ಕೋಟಿ ಕೋಟಿ ದೋಚುತ್ತಿದ್ದರೆ, ನಮ್ಮ ಅಗ್ನಿಶಾಮಕದಳದವರು ಬೂಟುಗಳಿಲ್ಲದೇ ಚಪ್ಪಲಿ ತೊಟ್ಟೇ ಬೆಂಕಿಯೊಂದಿಗೆ ಹೋರ್ಆಡುತ್ತಿದ್ದಾರೆ.
ನೀವು ಗಮನಿಸಿದ್ದೀರೋ ಇಲ್ಲವೋ ಅಮೇರಿಕಾದ ಮೇಲೆ ೯೧೧ ದಾಳಿಯ ನಂತರ ಇದುವರೆಗೂ ಒಂದೇ ಒಂದು ಉಗ್ರರ ದಾಳಿ ನಡೆದಿಲ್ಲ. ಆ ಒಂದು ಉಗ್ರರ ದಾಳಿಯಿಂದಾಗಿ ಅಫ್ಘಾನಿಸ್ತಾನವು ಇಂದು ಸ್ಮಶಾನವಾಗಿದೆ. ಅದೇ ಪಾಕಿಸ್ತಾನವು ಹಲವಾರು ದಶಕಗಳಿಂದಲೂ ಭಾರತದ ನೆಲದ ಮೇಲೆ ಸತತ ಉಗ್ರರ ದಾಳಿಯನ್ನು ನಡೆಸುತ್ತಿದೆ. ಇದನ್ನು ಹತ್ತಿಕ್ಕುವುದಿರಲಿ, ಈ ದಾಳಿಯನ್ನು ಕೇವಲ ಕಾಶ್ಮೀರದ ಅಂಚಿಗೆ ಸೀಮಿತಗೊಳಿಸಲು ಕೂಡಾ ಭಾರತ ಹೆಣಗುತ್ತಿದೆ. ಎಲ್ಲಿಯ ಕಾಶ್ಮೀರ ಎಲ್ಲಿಯ ಕಲಘಟಗಿ? ಕಲಘಟಗಿಯಲ್ಲಿಯೂ ಉಗ್ರರನ್ನು ಬಂಧಿಸುವಂತಾಗಿದೆ ಇಂದು. ಭಾರತ ಅದ್ಯಾವ ದಿಕ್ಕಿನಲ್ಲಿ ಮುಂದುವರಿಯುತ್ತಿದೆಯೋ! ಒಂದೆಡೆ ಭಯೋತ್ಪಾದನೆ, ತೀವ್ರ ಹಣದುಬ್ಬರ, ಐ.ಟಿ. ಬೆಳವಣಿಗೆಯನ್ನೇ ಭಾರತದ ಬೆಳವಣಿಗೆಯೆಂಬಂತೆ ತೋರಿಸುತ್ತ, ಕೇವಲ ಬೆಂಗಳೂರೊಂದರಿಂದಲೇ ರಿಯಲ್ ಎಸ್ಟೇಟ್ ರೌಡಿಗಳು ಬಿಲಿಯನ್ ಡಾಲರ್ ಟರ್ನೋವರ್ ಮಾಡುತ್ತಾ ಬುಲೆಟ್ ಪ್ರೂಫ್ ಕಾರುಗಳಲ್ಲಿ ತಿರುಗುತ್ತಿದ್ದರೆ, ಸಿಯಾಚೆನ್ ನಲ್ಲಿ ನಮ್ಮ ಯೋಧರು ಚಳಿಗೆ ಸರಿಯಾಗಿ ಹೊದಿಕೆ ಇಲ್ಲದೇ ದೇಶ ಕಾಯುವಂತಾಗಿದೆ.
ಇಂದು ಸ್ವೇಚ್ಚಾಚಾರೀ ರಾಜಕಾರಣಿಗಳಿಗೆ ಬೇಕಾದ್ದು ಏನು ಎಂಬುದು ನಮ್ಮ ಸರ್ಕಾರೀಯಂತ್ರಕ್ಕೆ ಚೆನ್ನಾಗಿ ತಿಳಿದಿದೆ. ಹಾಗಾಗಿ ಯಾವ ರಾಜಕಾರಣಿ/ಪಕ್ಷಗಳು ಅಧಿಕಾರಕ್ಕೆ ಬಂದರೇನು? ಸರ್ಕಾರೀ ಅಧಿಕಾರಿಗಳ ಸ್ಥಾನ ಖಾಯಂ ತಾನೆ? ಹಾಗಾಗಿ ಭಾರತಕ್ಕೆ ಸರಿ ಅರ್ಥದಲ್ಲಿ ಸ್ವಾತಂತ್ರ್ಯ ಸಿಕ್ಕಿಯೇ ಇಲ್ಲವೆನ್ನಬಹುದು, ಸಿಕ್ಕಿರುವುದು "ಭಾರತೀಯ ಆಡಳಿತಶಾಹೀ ಸ್ವಾತಂತ್ರ್ಯ" ಯಾವುದೇ ರಂಗವಾದರೂ ಭ್ರಷ್ಟಾಚಾರ ತುಂಬಿ ಎಲ್ಲೆಲ್ಲೂ ಅರಾಜಕತೆ ಮೆರೆಯುತ್ತಿದೆ. ಇದು ಮಾಧ್ಯಮರಂಗವಿರಬಹುದು ಅಥವಾ ರಾಜಕೀಯರಂಗವಿರಬಹುದು.
ಪಾಪ, ಜನಸಾಮಾನ್ಯರು ಇನ್ನೇನು ಮಾಡಿಯಾರು? ಲಂಗುಲಗಾಮಿಲ್ಲದೆ ಸುದ್ದಿ ಭಿತ್ತರಿಸುವ ಟಿವಿ ಮಾಧ್ಯಮಗಳನ್ನು ನೋಡಿ, ಖಾರಪುರಿ ತಿಂದು, ಲೊಚಗುಟ್ಟುತ್ತ ಮಾತನಾಡಿಕೊಂಡು ಒಂದು ಗಾಳಿಯನ್ನು ತೆಗೆಯುತ್ತಾರೆ. ಅದೇ ರೀತಿ ನಮ್ಮಂಥಹ ಬರಹಗಾರರೂ ಕೂಡ ಒಂದು ಲೇಖನವನ್ನು ಬರೆದು ಶಹಬ್ಬಾಸ್ ಗಿಟ್ಟಿಸಿಕೊಳ್ಳುತ್ತಾರೆ. ಅದೂ ಇಂದಿನ ರಿಸೆಷನ್ ಯುಗದಲ್ಲಿ ಐ.ಟಿ. ಜನಕ್ಕೆ ಇಂಟರ್ನೆಟ್ ಲೇಖನಗಳನ್ನು ಓದಲು ಅವಕಾಶ ಸಿಕ್ಕಿದರೆ, ಇಲ್ಲದಿದ್ದರೆ ನಾವುಗಳು ನಮ್ಮೊಂದು ತೀಟೆಯನ್ನು ತೀರಿಸಿಕೊಂಡೆವೆಂದು ಸಮಾಧಾನಿಸಿಕೊಳ್ಳಬೇಕಾಗುತ್ತದೆ.
ಇದೆಲ್ಲವನ್ನೂ ಮೀರಿದ ಒಂದು ಎತ್ತರಕ್ಕೆ ಸಾಗುವ ಶಕ್ತಿ ಭಾರತಕ್ಕೆ, ಭಾರತದಲ್ಲಿ ಇದೆಯೇ? ಡೆಮಾಕ್ರಸಿಯಿಂದ ಡಿಕ್ಟೇಟರ್ಶಿಪ್, ಡಿಕ್ಟೇಟರ್ಶಿಪ್ ನಿಂದ ಡೆಮಾಕ್ರಸಿಗಳ ಮಧ್ಯೆ ಹೊಯ್ದಾಡುತ್ತಾ, ತನ್ನ ಹಲವು ಪ್ರಾಂತ್ಯಗಳ ಮೇಲೆ ಅಧಿಕಾರವೇ ಇಲ್ಲದಂತೆ ಅತ್ಯಂತ ಅರಾಜಕತೆಯಿಂದ ಕೂಡಿದ ಒಂದು ಅತಿ ಚಿಕ್ಕ ರಾಷ್ಟ್ರ್ಅವಾದ ಪಾಕಿಸ್ತಾನದ ಮೇಲೆ, ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ್ಅವಾದ ಭಾರತ ಕ್ರಮ ಕೈಗೊಳ್ಳಲು ಕಳೆದ ನಾಲ್ಕು ದಶಕಗಳಿಂದಲೂ ಹಿಂಜರಿಯುತ್ತಿದೆ. ನಮ್ಮಲ್ಲಿ ಇದುವರೆಗೂ ನಾಯಕತ್ವದ ಪ್ರಥಮ ಗುಣವೆಂದು ಐ.ಐ.ಎಮ್ ನಿಂದ ಹಿಡಿದು ಬಿ.ಬಿ.ಎಮ್ (ಬೀದಿ ಬದಿಯ ಮಾರಿ)ವರೆಗೂ ಎಲ್ಲರೂ ಒಪ್ಪುವ ಗುಣವಾದ "ಗಟ್ಟಿ ನಿರ್ಧರಿಸುವ (ಸ್ಟ್ರಾಂಗ್ ಡಿಸಿಷನ್ ಮೇಕಿಂಗ್)" ಗುಣವಿರುವ ಯಾವೊಬ್ಬ ನಾಯಕನೂ ದೊರೆಯದಂತಿರುವುದು ನಮ್ಮ ಸ್ವಾತಂತ್ರ್ಯದ ಕ್ರೂರ ಅಣಕ!
ಹಾಗಾಗಿಯೇ ಇತ್ತೀಚೆಗೆ ಅಂಕಣ ಲೇಖನವನ್ನು ಬರೆಯುತ್ತಿಲ್ಲ. ವರ್ತಮಾನದ ಸಾಮಾಜಿಕ ಘಟನೆಗಳನ್ನೆತ್ತಿಕೊಂಡು ಈ ಹಿಂದೆ ನಾನು ಬರೆದೆಲ್ಲಾ ಲೇಖನಗಳಲ್ಲಿ ಯಾವುದಾದರೂ ಒಂದು ಲೇಖನ ಹೊಸ ಘಟನೆಗೆ ತಾಳೆಯಾಗಿ, ಮತ್ತದನ್ನೇ ಬರೆದು ಬೋರ್ ಹೊಡೆಸಬೇಕೇ ಎನಿಸುತ್ತದಲ್ಲದೇ ಬರೆಯಲೂ ಬೋರ್ ಎನಿಸುತ್ತದೆ. ಹಾಗಾಗಿ ಇತ್ತೀಚೆಗೆ ಅದೇ ಸಮಯವನ್ನು ಒಂದು ಐತಿಹಾಸಿಕ ಅನ್ವೇಷಣೆಯ ಪುಸ್ತಕವನ್ನು ಬರೆಯಲು ವಿನಿಯೋಗಿಸುತ್ತಿದ್ದೇನೆ. ಏಳನೇ ಶತಮಾನದಲ್ಲಿ ಹುಯೆನ್ ತ್ಸಾಂಗನು ನಡೆದ ರೇಶಿಮೆಯ ಹಾದಿಯಲ್ಲಿ ಕಳೆದ ವರ್ಷ ಟ್ರೆಕ್ಕಿಂಗ್ (ಕಾರಿನಲ್ಲಿ) ಮಾಡಿದ್ದುದರ ಬಗ್ಗೆ ಸ್ವಾರಸ್ಯವಾಗಿ ರಸಿಕ ಅನುಭವಗಳನ್ನೆಲ್ಲಾ ಮುಚ್ಚುಮರೆಯಿಲ್ಲದೆ ಒಂದು ಪ್ರವಾಸಕಥನ ಬರೆಯುವಷ್ಟು ಸರಕಿದ್ದರೂ ಅದನ್ನು ಬದಿಗೊತ್ತಿ ನಾನು ಸಂಗ್ರಹಿಸಿದ ಮಾಹಿತಿ, ಪುಸ್ತಕ, ಚಿತ್ರಗಳ ಸಮೇತ ಹುಯೆನ್ ತ್ಸಾಂಗನ ಕುರಿತಾಗಿ, ಅವನು ಕಂಡ ಭಾರತದ ಕುರಿತಾಗಿ, ಅಂದಿನ ಭಾರತದ ಭೌಗೋಳೇತಿಹಾಸಿಕವನ್ನು ಅವನು ಕಂಡಂತೆಯೇ ಬರೆಯುತ್ತಿದ್ದೇನೆ. ಅತ್ಯಂತ ಕುತೂಹಲಕರ ಅಂಶವೆಂದರೆ ಅವನು ಕಂಡ ಅಂದಿನ ಭಾರತಕ್ಕೂ, ನಾವುಗಳು ಕಾಣುತ್ತಿರುವ ಇಂದಿನ ಭಾರತಕ್ಕೂ ಏನೇನೂ ವ್ಯತ್ಯಾಸವಿಲ್ಲವೆಂಬುದು!! ಇದರ ಕುರಿತಾಗಿ ಮತ್ತೊಮ್ಮೆ ಬರೆಯುತ್ತೇನೆ.
ಅಣಕ:
ಚಂದ್ರೇಗೌಡರ ’ಕಟ್ಟೇಪುರಾಣ’ದಂತಹ ಪಟ್ಟಣಿಗರ ಗುಂಪೊಂದು ’ಅಡ್ಡೇಪುರಾಣ’ದಲ್ಲಿ ತೊಡಗಿದ್ದಿತು. ಒಬ್ಬೊಬ್ಬರೂ ಒಂದೊಂದು ವಿಧವಾದ ಸಲಹೆಗಳನ್ನು ಭಯೋತ್ಪಾದನೆ ನಿವಾರಣೆಯ ಕುರಿತು ಕೊಡುತ್ತಿದ್ದರು. ಬಿಜೆಪಿ ಪ್ರೇರಿತನೊಬ್ಬ ’ಅಲ್ಲಾ, ಹಿಂದೂ ಸಾಧ್ವಿಯನ್ನು ಅನವಶ್ಯಕವಾಗಿ ಬಂಧಿಸಿದ್ದಕಾಗಿಯೇ, ಕರ್ಕರೆ ತನ್ನ ಬುಲೆಟ್ ಪ್ರೂಫ್ ಜಾಕೆಟ್ ಕುರ್ಕುರೆ ಆಗಿ ಸಾಯುವಂತಾಗಿದ್ದು’ ಎಂದು ಜೆಡಿಎಸ್ ನವರಂತೆ ಶಾಸ್ತ್ರ ಹೇಳಿದ್ದೇ ಅಲ್ಲದೇ ಸಾಧ್ವಿಯ ಶಾಪದ ಭರಕ್ಕೆ ಬುಲೆಟ್ ಪ್ರೂಫ್ ಜಾಕೆಟ್ ಚಿಂದಿಯಾಯಿತೆನ್ನುತ್ತ ಸರ್ಕಾರದ ಕಳಪೆ ಜಾಕೆಟ್ಟಿಗೆ ಜಾಕೆಟ್ ತೊಡಿಸಿದ. ಕಾಂಗ್ರೆಸ್ ಪ್ರೇರಿತನೊಬ್ಬ ’ಬಿಜೆಪಿಗಳು ಅನವಶ್ಯಕವಾಗಿ ಕೆಣಕಿ, ಕೆಣಕಿ, ಭಯೋತ್ಪಾದನೆ ಹೆಚ್ಚಿಕೊಂಡಿದೆ’ ಎಂದ. ಇನ್ನೊಬ್ಬ ಜಾತ್ಯಾತೀತ, ಧರ್ಮಾತೀತ, ಬುದ್ಧಿಜೀವಿಗಳಿಂದೆಲ್ಲಾ ಪ್ರೇರಿತನಾದವ ’ಈ ಭಯೋತ್ಪಾದನೆ ವಿಚಾರಣೆಯಲ್ಲಿ ಮುಗ್ಧರಿಗೆ ಪೊಲೀಸ್ ಬ್ರುಟಾಲಿಟಿ ತಟ್ಟದಂತೆ ಎಚ್ಚರವಹಿಸಬೇಕು’ ಎಂದ.
ಇದನ್ನೆಲ್ಲಾ ಕೇಳುತ್ತಿದ್ದ ಪ್ಯಾರೇ ಬೇಟಾ ’ಅರೆ ಇದ್ಕೆಲ್ಲಾ ನಮ್ದು ಕಾನೂನೇ ಅಡ್ಡಿ. ಬರೀ ಮದ್ವೆಗೆ ಮುಸ್ಲಿಂ ಕಾನೂನು, ಹಿಂದೂ ಕಾನೂನ್ ಅಂತ ಬೇರೆ ಮಾಡ್ಬಿಟ್ಟಿ, ಬಾಕಿದ್ಕೆಲ್ಲಾ ಒಂದೇ ಕಾನೂನ್ ಮಾಡ್ಬಿಟ್ರೆ ಆಗ್ತದೆ? ಮುಸ್ಲಿಂಗೆ ಎಲ್ಲಾ ಶರಿಯತ್ ಕಾನೂನು ಅಂತ ಮಾಡ್ಬಿಟ್ಟಿ ಕದ್ದೌನಿಗೆ ಕೈ ಕತ್ರಿಸಿ, ಮರ್ಡರ್ ಮಾಡಿದವ್ನಿಗೆ ಕತ್ತು ಕತ್ರಿಸಿ, ಕೈ ಕೊಟ್ಟೌಂಗೆ ಬೆಂಗ್ಳೂರ್ಲಿ ಇತ್ತೀಚ್ಗೆ ಒಬ್ಳು ’ಅದ್ನ’ ಕತ್ರಿಸ್ದಂಗೆ ಹಲಾಲ್ ಮಾಡೋ ಹಂಗೆ ಕಾನೂನ್ ಮಾಡ್ಬಿಟ್ರೆ, ಆಗ ಎಲ್ಲಾ ನಿಯತ್ತು ಇರೋ ನಮ್ ಥರ ಮುಸ್ಲಿಂ ಉಳ್ಕೊತಾರೆ, ಇಲ್ದಿರೋರು ಯಾವ್ದು ಧರ್ಮದ್ದು ಕಾನೂನು ಕಡಿಮೆ ಇದೆ ಅದ್ಕೆ ಮತಾಂತರ ಆಗೋಯ್ತರೆ’ ಎಂದು ಭಯೋತ್ಪಾದನೆಗೆ ಕಾನೂನು ಭಯೋತ್ಪಾದನೆಯೇ ಉತ್ತಮವೆಂದು ಸೂಚಿಸಿದ. ಯಾವ್ದು ಸರಿ ಅಂತೀರಾ?
Subscribe to:
Posts (Atom)