ರಾಜ್ಯದಲ್ಲಿ ಒಂದು ರವಂಡು!

 ನನ್ನ ಒಂದು ಕಾರು ಬೆಂಗಳೂರಿನಲ್ಲಿ ಇದ್ದುದರಿಂದ ಅದನ್ನು ತರಲು ಹೊಸದುರ್ಗದಿಂದ ಬಸ್ಸಿನಲ್ಲಿ ಬೆಂಗಳೂರಿಗೆ ಹೋಗುವುದು ಎಂದು ನಿರ್ಧರಿಸಿದೆ. ಅದಕ್ಕೆ ದಾವಣಗೆರೆಯಲ್ಲಿರುವ ನನ್ನ ಸೋದರಳಿಯ, "ನಾನೂ ಬರುತ್ತೇನೆ. ನೀವು ಚಿತ್ರದುರ್ಗಕ್ಕೆ ಬನ್ನಿ. ಅಲ್ಲಿಂದ ಸುಸಜ್ಜಿತ ಎಲೆಕ್ಟ್ರಿಕ್ ಬಸ್ಸಿನಲ್ಲಿ ಹೋಗೋಣ" ಎಂದ. ಸರಿಯೆಂದು ಬೆಳಿಗ್ಗೆ ಆರೂವರೆಗೆ ಹೊಸದುರ್ಗದಿಂದ ಚಿತ್ರದುರ್ಗಕ್ಕೆ ಬಸ್ ಹತ್ತಿ ಕಂಡಕ್ಟರ್ ಕೈಗೆ ನೂರು ರೂಪಾಯಿ ಕೊಟ್ಟೆ. ಅದಕ್ಕೆ ಆತ, "ಒಂದು ರೂಪಾಯಿ ಚಿಲ್ಲರೆ ಕೊಡಿ" ಎಂದ. ಚಿಲ್ಲರೆ ಇರದ ಕಾರಣ ಇಲ್ಲವೆಂದೆ.


ಒಂದು ರೂಪಾಯಿ ಕೊಟ್ಟಿದ್ದರೆ ನಲ್ವತ್ತು ರೂಪಾಯಿ ವಾಪಸ್ ಕೊಟ್ಟು ಟಿಕೆಟ್ ಕೊಡುತ್ತಿದ್ದ ಕಂಡಕ್ಟರ್, "೩೯" ಎಂದು ಅರವತ್ತೊಂದರ ಟಿಕೆಟ್ ಹಿಂದೆ ಗೀಚಿ ಟಿಕೆಟ್ ಕೊಟ್ಟ. 


ಮೂವತ್ತು ಅಥವಾ ಮೂವತ್ತೈದು ವಾಪಸ್ ಕೊಟ್ಟು ಉಳಿದದ್ದು ಗೀಚಿ ಕೊಡಬಹುದಾಗಿದ್ದ ಆ ವಿಶ್ವಗುರು ಹಾಗೇಕೆ ಕೊಟ್ಟನೋ ಗೊತ್ತಿಲ್ಲ! 


ಆತನ ಉದ್ದೇಶ ಏನೇ ಆಗಿದ್ದರೂ ಚಿತ್ರದುರ್ಗದಲ್ಲಿ ಇಳಿದಾಗ ಮರೆಯದೆ ಚಿಲ್ಲರೆ ಪಡೆದುಕೊಳ್ಳಬೇಕೆಂಬ ವಿಷಗುರುತ್ವ ನನ್ನದಾಯಿತು. ಬಸ್ ಇಳಿದು ಚಿಲ್ಲರೆ ಕೇಳಿದಾಗ ಆತ ನೂರಾ ಇಪ್ಪತ್ತು ರೂಪಾಯಿ ನನ್ನ ಕೈಗೆ ತುರುಕಿ, "ನಿಮ್ಮ ಚಿಲ್ಲರೆ ಮುರಿದುಕೊಂಡು ಉಳಿದದ್ದು ಈ ಈರ್ವರಿಗೆ ಹಂಚಿ ಎಂದು ರೈಟ್ ಹೇಳಿದ!


ಎಲಾ ಇವನ...ಎಂದುಕೊಂಡು ಇಪ್ಪತ್ತು ನನಗೆ ಸಾಕೆಂದು ಹೇಳಿ ನೂರು ರೂಪಾಯಿ ಇನ್ನೊಬ್ಬ ಸಹಚಿಲ್ಲರಿಗನಿಗೆ ಕೊಟ್ಟು, ಬೈಟು ಕಾಫಿ ಕುಡಿದು ಹಂಚಿಕೊಳ್ಳಿ ಎಂದು ನಾನೂ ರೈಟ್ ಹೇಳಿ ಬೆಂಗಳೂರು ಪ್ಲಾಟ್ಫಾರ್ಮ್ ಕಡೆ ನಡೆದೆ.


ಇತ್ತ ನನ್ನ ಸೋದರಳಿಯ ಹೇಳಿದ್ದ ಬಸ್ ಬಂದಾಗ ಅದರಲ್ಲಿ ಅವನು ಕಾಣಲಿಲ್ಲ. ಫೋನ್ ಮಾಡಿದಾಗ ಹಾಯಾಗಿ ಮಲಗಿದ್ದ ಅವನು ಎದ್ದು, "ನೀವು ಅಲ್ಲಿ ತಿಂಡಿ ತಿನ್ನುತ್ತೀರಿ. ಈ ಕೂಡಲೇ ಹೊರಟು ಬರುತ್ತೇನೆ" ಎಂದ.


ಗತಿಯಿಲ್ಲದೆ ಮರೆತಿದ್ದ ಲಕ್ಷ್ಮಿ ಟಿಫಿನ್ ರೂಂ ನೆನೆಸಿಕೊಂಡು ಆ ಕಡೆ ಆಟೋ ಹತ್ತಲು ಅನುವಾಗುತ್ತಿದ್ದಂತೆಯೇ ನನ್ನ ಸಹಚಿಲ್ಲರಿಗ ಓಡೋಡಿ ಬಂದು ಹತ್ತೊಂಬತ್ತು ರೂಪಾಯಿ ಕೊಟ್ಟು ಬದ್ಧತೆ ಮೆರೆದ. ಆತನ ಬದ್ಧತೆ ಕಂಡಕ್ಟರನ ಮಲಬದ್ಧತೆಯ ಮುಖವನ್ನು ಮರೆಸಿತು. ಆದರೆ ಅದನ್ನು ಮರೆಯದಂತೆ ನಾನು ಹತ್ತಿದ ಆಟೋ ಚಾಲಕ ಲಕ್ಷ್ಮಿ ಟಿಫಿನ್ ರೂಂ ಮುಂದೆಯೇ ಹಲವಾರು ಬಾರಿ ಸುತ್ತಿಸತೊಡಗಿದ. ಚೆನ್ನೈನಲ್ಲಿ ಆಟೋದವರು ಸುತ್ತಿಸುವುದು ಕೇಳಿದ್ದೆ. ಆ ಚಾಳಿ ದುರ್ಗಕ್ಕೆ ಬಂದುದು ಪ್ರಗತಿಯ ಸಂಕೇತ ಎಂದುಕೊಂಡು, "ವಿಶ್ವಗುರುವೇ, ಏಕೆ ಮೂರು ಬಾರಿ ಲಕ್ಷ್ಮಿ ಟಿಫಿನ್ ರೂಂ ಬಂದರೂ ನಿಲ್ಲಿಸದೆ ಇಲ್ಲೇ ಸುತ್ತಿಸಿದೆ?" ಎಂದೆ. 


ಅದಕ್ಕೆ ಅವನು, "ಅದರ ಹತ್ತಿರ ಎಲ್ಲಾದರೂ ಅಡ್ರೆಸ್ ಹೇಳುವಿರೇನೋ ಎಂದು ಸುತ್ತಿಸಿದೆ" ಎಂದ.


"ಸರಿ, ಬಿಡಪ್ಪ" ಎಂದು ಬಸ್ ನಿಲ್ದಾಣದಿಂದ ನಡೆಯಬಹುದಾದ ಜಾಗಕ್ಕೆ ಆಟೋದಲ್ಲಿ ಬಂದ ತಪ್ಪಿಗೆ ಅರವತ್ತು ರೂಪಾಯಿ GST ಸಮೇತ ಕಕ್ಕಿದೆ.

***

ಟಿಫಿನ್ ರೂಮಿನಲ್ಲಿ ಕೆಲವು ನಿಯೋಜಿತ ಭೇಟಿಗಳನ್ನು ಮುಗಿಸಿ ಅನಿಯೋಜಿತ ಎಸ್ಕೆ ಶಾಮಸುಂದರ ಅವರನ್ನೂ ಭೇಟಿ ಮಾಡಿ ನಂತರ ನನ್ನ ಸೋದರಳಿಯ ಹತ್ತಿ ಬಂದ ವಿದ್ಯುತ್ ಚಾಲಿತ ಬಸ್ ಹತ್ತಿದೆ. ಅಷ್ಟರಲ್ಲೇ ನನ್ನ ಸೋದರಳಿಯನ ಬಾಸ್ ಕರೆ ಮಾಡಿ ಯಾವುದೋ ಅರ್ಜೆಂಟ್ ಕೆಲಸವನ್ನು ಅವನಿಗೆ ವಹಿಸಿದ ಕಾರಣ ನಾನೊಬ್ಬನೇ ಬೆಂಗಳೂರಿಗೆ ಪಯಣಿಸಿದೆ. 


ನವರಂಗ್ ಬಳಿ ಬಸ್ ಇಳಿದವಗೆ ಓರ್ವ ನವರಂಗಿ ವಿಶ್ವಗುರು ಆಟೋ ಚಾಲಕ ಸಿಕ್ಕಿದ. ಆಟೋ ಹತ್ತಿ ಮಲ್ಲೇಶ್ವರ ಹನ್ನೊಂದನೇ ಕ್ರಾಸ್ ಎಂದೆ. "ಜಾಸ್ತಿ ಕೇಳಲ್ಲ. ನೂರು ರೂಪಾಯಿ ಕೊಡಿ, ಸಾಕು" ಎನ್ನುತ್ತಾ "ಎಲ್ಲಿಂದ?" ಎಂದ. "ದಾವಣಗೆರೆ" ಎಂದೆ.  ಆಗಷ್ಟೇ ನಮ್ಮ ದಾವಣಗೆರೆ ಧಣಿಗಳ ಗುಣಗಾನ ಮಾಡಿ ಖ್ಯಾತನಾಗಿದ್ದ ರಿಜ್ವಾನನಿಗೆ ಅಜ್ವಾನ ಹಾಕಿ ಹಪ್ಪಳ ಮಾಡಿದ. ನಂತರ ನನ್ನ ಉದ್ಯೋಗದ ಬಗ್ಗೆ ಕೇಳಿದ. ನಾನು ನಿವೃತ್ತಿಯಾಗಿದ್ದೇನೆ ಎಂದೆ. ಥಟಕ್ಕನೆ ಆಟೋ ನಿಲ್ಲಿಸಿ ಮುಖ ನೋಡಿ, "ಇಷ್ಟು ಬೇಗ!?" ಎಂದ. 


"ಹೌದು, ಕೈಕಾಲು ಗಟ್ಟಿಯಿದ್ದಾಗ ರಿಟೈರ್ ಆಗಿ ದೇಶ ಸುತ್ತಿ, ವಯಸ್ಸಾದ ಮೇಲೆ ಖುರ್ಚಿ ಮೇಲೆ ಕುಳಿತು ಕೆಲಸ ಮಾಡಬೇಕೆಂಬುದು ನನ್ನ ಪ್ಲ್ಯಾನ್" ಎಂದೆ.


"ಸಂತೋಷ. ನಿಮ್ಮಿಂದ ಒಂದು ಸಹಾಯ ಎಕ್ಸ್ಪೆಕ್ಟ್ ಮಾಡಬಹುದಾ?" ಎಂದ.


"ಆಗುವುದಾದರೆ ಮಾಡೋಣ, ಹೇಳಿ" ಎಂದೆ.


"ಖಂಡಿತ ಮಾಡ್ತೀನಿ ಅಂದ್ರೆ ಕೇಳ್ತೀನಿ" ಎಂದು 'ವೃಥಾ ಸುಖಾಸುಮ್ಮನೆ ಎಲ್ಲಾ ನಾನು ಕೇಳುವ ಚಿಲ್ಲರೆ ಮನುಷ್ಯ ಅಲ್ಲ. ಸಹಾಯ ಮಾಡದೆ ಹೋದರೆ ನೀನೇ ಚಿಲ್ಲರೆ ಆಗುವುದು' ಎಂಬರ್ಥದಲ್ಲಿ ನಮ್ಮೀರ್ವರ ಘನತೆಯ ಬಗ್ಗೆ ಒಂದು ಸೂಕ್ಷ್ಮ ಎಚ್ಚರಿಕೆ ಕೊಟ್ಟ.


"ನನ್ನ ಕೈಲಾದರೆ ಮಾಡುತ್ತೇನೆ. ಆಗದ್ದನ್ನೆಲ್ಲ ಮಾಡಲು ಆಗುತ್ತದೆ ಎನ್ನಲು ನಾನು ರಾಜಕಾರಣಿ ಅಲ್ಲ" ಎಂದೆ.


"ಏನೂ ಇಲ್ಲ, ನನ್ನ ಮಗಳ ಕಾಲೇಜ್ ಫೀಸು ಹದಿನೈದು ಸಾವ್ರ ಕಟ್ಟಬೇಕಿತ್ತು. ನೀವು ಕೊಟ್ರೆ ನಾನು ಸ್ವಲ್ಪ ಸ್ವಲ್ಪ ವಾಪಸ್ ಕೊಟ್ಟು ತೀರುಸ್ತೀನಿ. ನಿಮಗೆ ಹದಿನೈದು ಸಾವ್ರ ಏನು ದೊಡ್ಡದಲ್ಲ. ಎಲ್ಲೋ ಕಳೆದುಬಿಡ್ತೀರಿ. ನೋಡಿ ಗೂಗಲ್ ಪೇ ಮಾಡಿ" ಎಂದ.


"ಡಬ್ಬಲ್ ಮೀಟ್ರು ಓಕೆ, ನುರೈವತ್ತರಷ್ಟು ಮೀಟ್ರು ಯಾಕೆ!?!" ಎಂದುಕೊಳ್ಳುತ್ತ, "ಅಷ್ಟೆಲ್ಲಾ ದೊಡ್ಡ ಮನುಷ್ಯ ನಾನಲ್ಲ, ವಿಶ್ವಗುರುವೇ" ಎಂದು ನೂರು ರೂಪಾಯಿ ಕೊಟ್ಟು ಇಳಿದೆ.

***

ದಾವಣಗೆರೆಯಲ್ಲಿ ನನಗೆ ಈಗ ಇರಲು ಜಾಗವಿಲ್ಲ. ಏಕೆಂದರೆ ನನ್ನ ಮನೆಯನ್ನು ಬಾಡಿಗೆ ಕೊಟ್ಟಿದ್ದೇನೆ. ಹಾಗಾಗಿ ದಾವಣಗೆರೆಗೆ ಹೋದಾಗ ಹೋಟೆಲ್ಲಿನಲ್ಲಿ ಇರುವುದು ಅನಿವಾರ್ಯ. ವಾರದಲ್ಲಿ ಸದಾ ನಾಲ್ಕು ದಿನ ಹೋಟೆಲ್ಲಿನಲ್ಲಿರುವುದು ನನಗೆ ಅಭ್ಯಾಸವಾಗಿಹೋಗಿರುವ ಕಾರಣ, ಹೋಟೆಲ್ಲಿನಲ್ಲಿರುವುದು ನನಗೆ ಅತ್ಯಂತ ಪ್ರೀತಿಯ ಸಂಗತಿ. ಆದರೆ ನನ್ನ ಊರಿನಲ್ಲಿಯೇ ಎಂದೂ ಹೋಟೆಲ್ಲಿನಲ್ಲಿ ಉಳಿಯದ ನನಗೆ ದಾವಣಗೆರೆಯಲ್ಲಿ ಹೋಟೆಲ್ಲಿನಲ್ಲಿರುವುದು ಒಂದು ರೀತಿಯ ನಿರ್ವಾತ ಅನಾಥ ಭಾವನೆಯನ್ನು ಉಂಟು ಮಾಡಿತು. ಅದರಲ್ಲೂ ದಾವಣಿಗರ ಹೋಟೆಲ್ಲುಗಳ ಸೊಕ್ಕಿನ ಸಿಬ್ಬಂದಿಗಳು ರೂಮು ಕೊಡುವುದೇ ತಾವು ಮಾಡುವ ಮಹದುಪಕಾರ ಎಂಬಂತೆ ವರ್ತಿಸಿ ಒಂದೇ ನೀರಿನ ಬಾಟಲ್ಲು, ಒಂದೇ ಒಂದು ಟವೆಲ್ಲು ಕೊಟ್ಟು ಶವರ್ ಕರ್ಟನ್ನು ಹಾಕದೆ, ಚೆಕಿನ್ ಮುಂಚಿತವಾಗಿ ಎಸಿ ರೂಮನ್ನು ತಂಪಾಗಿರಿಸದೆ ಆದರೆ ಡೆಂಟಲ್ ಕಿಟ್ ಇಟ್ಟು ದಿನಕ್ಕೆ ನಾಲ್ಕೂವರೆಯಿಂದ ಏಳು ಸಾವಿರ ಕೀಳುವ ಪಕ್ಕಾ ವ್ಯಾಪಾರಿ ಮಾಜಿ ದಲ್ಲಾಳಿ, ಹಾಲಿ ರಿಯಲ್ ಎಸ್ಟೇಟ್ ಟೈಕೂನುಗಳ ಹೋಟೆಲ್ ನನ್ನಲ್ಲಿ ಇನ್ನಷ್ಟು ಅನಾಥ ನಿರ್ವಾತವನ್ನು ತುಂಬಿದವು.


ಮರುದಿನ ನನ್ನ ಅತ್ತೆಯ ಮಗ ತನ್ನಲ್ಲಿರುವ ಪ್ರಾಣಿ ಪ್ರೀತಿಯನ್ನು ನನ್ನಲ್ಲೂ ಕಂಡಂತೆ ಅವರ ಮಿಲ್ಲಿನಲ್ಲಿ ಬೀಡು ಬಿಟ್ಟಿರುವ ಮಠದ ಆನೆಯನ್ನು ತೋರಿಸಲು ಕರೆದುಕೊಂಡು ಹೋದ. ಆನೆ ಆಗಲೇ ನಗರ ಸಂಚಾರಕ್ಕೆ ಹೋಗಿಯಾಗಿತ್ತು. 'ಸರಿ' ಎಂದು ಅಲ್ಲಿಂದ ಒಂದು ಮದುವೆ, ಎರಡು ಗೃಹ ಪ್ರವೇಶಗಳಲ್ಲಿ ಮೂರು ಊಟ ಮುಗಿಸಿಕೊಂಡು ರಾಮ್ ಅಂಡ್ ಕೊ ಸರ್ಕಲ್ ಕಡೆ ಹೊರಟೆ. ಎದುರಿಗೆ ಆನೆ ಬರುವುದು ಕಂಡಿತು. ಅದು ಹೇಗೋ ಏನೋ ಆನೆಯು ಎಲ್ಲಾ ಬಿಟ್ಟು ನನ್ನ ಕಾರನ್ನು ತಡೆದು ಕಿಟಕಿ ತೆರೆಯುವಂತೆ ಸೊಂಡಿಲಿನಿಂದ ನಾಕ್ ನಾಕ್ ಬಡಿಯಿತು. ಕಿಟಕಿ ಇಳಿಸಿದ ನನ್ನ ತಲೆಯ ಮೇಲೆ ಸೊಂಡಿಲಿಟ್ಟು ಆಶೀರ್ವದಿಸಿ ವಿಶ್ವಗುರು ಆನೆ "ತಕ್ಕ" ದಕ್ಷಿಣೆ ಪಡೆದು ಮುನ್ನಡೆಯಿತು. 

***


ನನ್ನ ತೋಟದ ಹತ್ತಿರ ಒಂದು ದೊಡ್ಡ ಕೆರೆಯಿದೆ. ಈ ಕೆರೆಗೆ ಭದ್ರಾ ಮೇಲ್ದಂಡೆ ಯೋಜನೆಯ ನಾಲೆಯಿಂದ ನೀರು ತುಂಬಿಸುವ ಏತ ನೀರಾವರಿಗೆ ಹಿಂದಿನ ಕಮಲ ಶಾಸಕರು ಐದು ಕೋಟಿ ತೆಗೆದಿರಿಸಿದ್ದನ್ನು ಇಂದಿನ ಕೈ ಶಾಸಕರು ಬೇರೆ ಕಾರ್ಯಕ್ಕೆ ಕೊಟ್ಟಿದ್ದಾರಂತೆ. ಮೊನ್ನೆ ಈ ಹಾಲಿ ಕೈ ಶಾಸಕರು ನನ್ನ ತೋಟದ ಪಕ್ಕದಲ್ಲಿರುವ ಹದಿನೈದು ಮನೆಗಳ ಹಳ್ಳಿಗೆ ಭೇಟಿ ಕೊಟ್ಟು ಅಲ್ಲಿನ ರಾಮನ ದೇವಾಲಯಕ್ಕೆ ಮುಜರಾಯಿ ಇಲಾಖೆಯಿಂದ ಹತ್ತು ಲಕ್ಷ ಮತ್ತು ತಮ್ಮ ಕೈಯಿಂದ ಇಪ್ಪತ್ತು ಲಕ್ಷ ಕೊಡಿಸುತ್ತೇನೆ, ದೇವಸ್ಥಾನವನ್ನು ಕೆಡವಿ ಕಟ್ಟಿ ಎಂದು ಹೇಳಿ ಹೋಗಿದ್ದಾರೆ. 


ಐನೂರಕ್ಕೂ ಹೆಚ್ಚಿನ ಓಟುಗಳ ಹಳ್ಳಿಯ ಜನೋಪಯೋಗಿ ನೀರಾವರಿ ಯೋಜನೆಯನ್ನು ತಡೆದು ಮೂವತ್ತು ಓಟುಗಳ ಅರ್ಧದ ಹದಿನೈದು ಓಟುಗಳಿಗೆ ಮೂವತ್ತು ಲಕ್ಷ ರೂಪಾಯಿಗಳ ಬಂಡವಾಳದ ದೇವಸ್ಥಾನವು ಯಾವ ರಾಜಕೀಯ ಸಮೀಕರಣ ಎಂದು ನನಗರ್ಥವಾಗಲಿಲ್ಲ?!? ಬಹುಶಃ ಕೆರೆಯಲ್ಲಿ ಕಮಲ ಬೆಳೆಯುತ್ತದೆಂದು ಕೆರೆಯನ್ನು ಒಣಗಿಸಿ ರಾಮಮಂದಿರವೊಂದನ್ನು ತಮ್ಮ "ಕೈ" ಕಟ್ಟಬಲ್ಲದು ಎಂದು ತೋರುವ ದೂರದೃಷ್ಟಿ ಅವರದಿರಬಹುದು.

 ***

ಹೀಗೆ ಬಸ್ ನಿರ್ವಾಹಕ, ಆಟೋ ಚಾಲಕ, ಹೋಟೆಲ್ ಮಾಲೀಕ, ರಾಜಕಾರಣಿ ಇತ್ಯಾದಿ ಅಷ್ಟೇ ಅಲ್ಲದೆ ಸಾಕುಪ್ರಾಣಿಗಳು ಸಹ ಬಕರಾಗಳನ್ನು ಗುರುತಿಸಿ ನುಣ್ಣಗೆ ಬೋಳಿಸುವ ಜಾಗತಿಕ ವ್ಯಾಪಾರಿತನದ ವಿಶ್ವಗುರುವೆಂಬೋ ವಿಶ್ವಗುರುಗಳನ್ನು ನನ್ನಂತಹ ಅಮಾಯಕ ಅನಿವಾಸಿ ಬೇವರ್ಸಿಗಳು ಮೀರಿಸಲು ಸಾಧ್ಯವೇ?!


#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ

ಮಲೆಯೂರು ಗುರುಸ್ವಾಮಿ ಅವರ ನೆನಪು

 ಮಲೆಯೂರು ಗುರುಸ್ವಾಮಿಯವರು ನನಗೆ ಪರಿಚಯವಾದದ್ದು ಅವರ ಕೃತಿಗಳ ಮೂಲಕ. ಕಾಲಘಟ್ಟದಲ್ಲಿ ಹುದುಗಿ ಹೋದ ಇತಿಹಾಸದ ಕಲಾಕೃತಿಗಳನ್ನು ಉತ್ಖನನಕಾರರು ಬಗೆದು ತೋರುವಂತೆ ಲೋಕ ಮರೆತ ಅಪಾರ ಸಾಧನೆಯ ಸಾಧಕರನ್ನು ಹುಡುಕಿ ಅವರ ಜೀವನಗಾಥೆಯನ್ನು ಪರಿಚಯಿಸುವಂತಹ ಕೃತಿಗಳ ಮೂಲಕ!


ಅವರ ಕೃತಿಗಳು ಒಂದೆಡೆ ಆಯಾಯ ಸಾಧಕರ ಸಾಧನೆಯನ್ನು ಸಮಗ್ರವಾಗಿ ಕಥಾರೂಪದಲ್ಲಿ ಕಟ್ಟಿಕೊಡುವುದರ ಜೊತೆಗೆ ಸೂಕ್ಷ್ಮವಾಗಿ ಗುರುಸ್ವಾಮಿಯವರ ವ್ಯಕ್ತಿತ್ವ, ಕ್ರಿಯಾಶೀಲತೆ, ಧನಾತ್ಮಕ ಚಿಂತನೆಯ ಹೊಳಹನ್ನೂ ನೀಡುತ್ತವೆ. ಈ ಸೂಕ್ಷ್ಮತೆಯ ಛಾಯೆಯನ್ನು ಅವರ "ಕಪಿಲೆ ಹರಿದಳು ಕಡಲಿಗೆ”, ಮತ್ತು "ಬಂಗಾರದೊಡ್ಡಿ” ಕೃತಿಗಳಲ್ಲಿ ಹೆಚ್ಚಾಗಿ ಕಾಣಬಹುದು. ದೇವದಾಸಿಯರ ಕಥನವನ್ನು ಕಟ್ಟಿಕೊಡುವಾಗ ಸಹ ಎಲ್ಲಿಯೂ ಶಿಷ್ಟ ಸಭ್ಯತೆಯ ಮಿತಿಯನ್ನು ಮೀರದೆ ಒಂದು ನಿರ್ದಿಷ್ಟ ಗೆರೆಯ ಪರಿಧಿಯಲ್ಲಿಯೇ ಪ್ರೇಮ, ಕಾಮ, ಶೃಂಗಾರಗಳನ್ನು ಚಿತ್ರಿಸುತ್ತಾರೆ. 


ಸಹಜವಾಗಿಯೇ ಒಂದು ಮಠದ ಸ್ವಾಮಿಗಳಾಗಬೇಕಿದ್ದ ಇಂತಹ ಅತ್ಯಂತ ಸಭ್ಯ ಸುಸಂಸ್ಕೃತ ಮಲೆಯೂರರು ಸಂಸಾರಿಗಳಾದದ್ದು ಮತ್ತು ಕತೆಗಾರರಾದದ್ದು ಓದುಗರ ಪುಣ್ಯ! ಆದರೂ ವಿರಕ್ತಿಯ ಶರಣ ಸಂಸ್ಕೃತಿಯನ್ನು ಯಾವುದೇ ವಿರಕ್ತರಿಗಿಂತ ಕಡಿಮೆ ಇಲ್ಲದಂತೆ ಸಂಸಾರಿ ಮಲೆಯೂರರು ಆವಾಹಿಸಿಕೊಂಡಿದ್ದರು. ಶರಣ ಸಂಸ್ಕೃತಿ ಕೇವಲ ಕಾವಿ, ಬ್ರಹ್ಮಚರ್ಯದಿಂದಲ್ಲ ಪ್ರಮುಖವಾಗಿ ಸಂಸಾರಸಾರದಲ್ಲಿಯೇ ಹೆಚ್ಚು ಅಡಕವಾಗಿದೆ ಎಂಬಂತೆ ಜೀವಿಸಿದ್ದರು.


ಇನ್ನು ಸಾಹಿತ್ಯಿಕವಾಗಿ ಇವರ ಸಮಕಾಲೀನ ಲೇಖಕರು ಅಂತರರಾಷ್ಟ್ರೀಯ ಖ್ಯಾತಿಯ ಸಾಧಕರ ಜೀವನಗಾಥೆ ರಚಿಸಲು ಹವಣಿಸುತ್ತಿದ್ದಾಗ ಮಲೆಯೂರು ಗುರುಸ್ವಾಮಿಗಳು ವಿಶೇಷವಾಗಿ ತಮ್ಮ ಸುತ್ತಮುತ್ತಲಿನ ಮೈಸೂರಿನ ಮಣ್ಣಿನಲ್ಲಿ ಕಳೆದುಹೋಗಿರುವ ಅನರ್ಘ್ಯ ರತ್ನಗಳನ್ನು ಹೆಕ್ಕಿ ಅವರುಗಳ ಜೀವನಗಾಥೆಯನ್ನು ಕಟ್ಟಿಕೊಡುವಲ್ಲಿ ತೊಡಗಿದ್ದರು. ನಿರ್ಲಕ್ಷಿತ ಸಮುದಾಯದ ದೇವದಾಸಿ ಮಹಿಳೆಯರ ಬಗ್ಗೆ ಅಭ್ಯಸಿಸಿ ಅವರ ತ್ಯಾಗದ ಬದುಕು ಮತ್ತು ಸಾಮಾಜಿಕ ಕೊಡುಗೆಗಳ ದಾಖಲೆಯನ್ನು ಸಂಕಥನವಾಗಿಸಿ ಓದುಗರನ್ನು ಭಾವಾವೇಶಕ್ಕೆ ಒಳಗಾಗಿಸಿ ಆ ಅನರ್ಘ್ಯ ರತ್ನಗಳ ಕುರಿತು ಒಂದು ದೈವೀ ಅನುಭೂತಿಯನ್ನು ಮೂಡಿಸಿರುವರು. ಈ ನಿಟ್ಟಿನಿಂದ ಶರಣ ಮಲೆಯೂರು ಗುರುಸ್ವಾಮಿಗಳು ಶರಣ ಸಂಸ್ಕೃತಿಯ ಉನ್ನತ ಪದವಿಯಾದ ಗಣ ಪದವಿಯನ್ನೇ ಪಡೆದರು ಎಂದು ನಿಸ್ಸಂಶಯವಾಗಿ ಹೇಳಬಹುದು. ಅದು ಹೇಗೆಂದರೆ, ಪಂದ್ಯವೊಂದರಲ್ಲಿ ಜಯಿಸಲು ಷಣ್ಮುಖನು ಭೂಮಂಡಲದ ಸುತ್ತ ಸುತ್ತು ಹಾಕಲು ಹೋದಾಗ ಗಣಪತಿಯು ಹೇಗೆ ತನ್ನ ಎದುರೇ ಇದ್ದ ತನ್ನ ಮಾತಾಪಿತರ ಸುತ್ತ ಪ್ರದಕ್ಷಿಣೆ ಹಾಕಿ ಭೂಮಂಡಲದ ಸುತ್ತ ಪ್ರದಕ್ಷಿಣೆ ಬಂದೆನೆಂದನೋ ಹಾಗೆ ತಮ್ಮ ಸುತ್ತಮುತ್ತಲ ಸಾಧಕರ ಕುರಿತು ಬರೆದು ಮಲೆಯೂರರು ಆ ಗಣಪತಿಯಂತೆಯೇ ಗಣಂಗಳಾದರು. ಅವರ ಸಮಕಾಲೀನರು ಇನ್ನೂ ಭೂಮಂಡಲದ ಸುತ್ತ ಗಿರಕಿ ಹೊಡೆಯುತ್ತಲೇ ಇದ್ದಾರೆ! ಈ ಹಿನ್ನೆಲೆಯಿಂದ ಮಲೆಯೂರರು ಅಪ್ಪಟ "ಮಣ್ಣಿನ ಮಗ" ಸಹ ಹೌದು.


ಈ ಸಂಕಥನಗಳ ನಿಟ್ಟಿನಲ್ಲಿ ದೇವದಾಸಿ ಮಹಿಳೆ ಬೆಂಗಳೂರು ನಾಗರತ್ನಮ್ಮನವರ ಜೀವನಗಾಥೆಯ "ಕಪಿಲೆ ಹರಿದಳು ಕಡಲಿಗೆ", ಅಪ್ರತಿಮ ನಾಟಕಕಾರ ಸಂಸರ ಕುರಿತಾದ "ಸಂಸ" ಮತ್ತು ಅವರ ಇತ್ತೀಚಿನ "ಬಂಗಾರದೊಡ್ಡಿ!" ಕೃತಿಗಳು ಉಲ್ಲೇಖಾರ್ಹ.


ಇನ್ನು ಓರ್ವ ಕಥೆಗಾರರಾಗಿ ಮಲೆಯೂರು ಗುರುಸ್ವಾಮಿಗಳು ಆಯಾಯ ಕೃತಿಗಳ ಕಥಾಹಂದರದಲ್ಲಿ ಓದುಗರನ್ನು ಕಥನಗಳ ಕಾಲಘಟ್ಟಕ್ಕೆ ಮಂತ್ರಸದೃಶರಾಗಿ ಕರೆದೊಯ್ದುಬಿಡುತ್ತಾರೆ. ಅಂದಿನ ಜನಜೀವನ, ಜೀವನಶೈಲಿಗೆ ಓದುಗರನ್ನೊಳಗಾಗಿಸುತ್ತ ಕಥಾನಕವನ್ನು ಓದುಗರೂ ಒಂದು ಪಾತ್ರವಾಗಿ ನೋಡುತ್ತಿರುವಂತೆ ಭಾಸವಾಗುವಂತಹ ಕಥಾಚಿತ್ರವನ್ನು ಬಿಡಿಸುವಲ್ಲಿ ಗುರುಸ್ವಾಮಿಯವರ ಕೌಶಲ್ಯ ಎದ್ದು ಕಾಣುತ್ತದೆ. ತಮ್ಮ ಕೃತಿಗಳಾದ್ಯಂತ ಅಂದಿನ ಕಾಲಘಟ್ಟದ ಸಮಾಜ, ಜಾತಿ ಪದ್ಧತಿ, ನ್ಯೂನತೆ, ವ್ಯವಸ್ಥೆಗಳನ್ನು ಕಟ್ಟಿಕೊಡುವುದಲ್ಲದೆ ಆಯಾಯ ಊರುಗಳ ಬಡಾವಣೆಗಳನ್ನು, ಬೀದಿಗಳನ್ನು, ದೇವಸ್ಥಾನಗಳನ್ನು, ಮಠಗಳನ್ನು, ಉತ್ಸವಗಳನ್ನು, ಕಟ್ಟಡಗಳನ್ನು, ಅಡುಗೆಗಳನ್ನು, ನಡಾವಳಿಗಳನ್ನು ಸಾಂದರ್ಭಿಕವಾಗಿ ವರ್ಣಿಸುತ್ತ ಓದುಗನನ್ನು ಅಕ್ಷರಶಃ ಕಥೆಯೊಳಗೆ ಲೀನವಾಗಿಸಿ ಭಾವಾವೇಶಕ್ಕೊಳಪಡಿಸುತ್ತಾರೆ. ಇಂತಹ ಅನುಭೂತಿಯ ಸೃಷ್ಟಿ ಮಲೆಯೂರರ ವಿಶೇಷ. ಓರ್ವ ಕಥೆಗಾರರಾಗಿ, ಅದರಲ್ಲೂ ಜೀವನಗಾಥೆಗಳ ಕಥೆಗಾರರಾಗಿ ಕನ್ನಡ ಸಾಹಿತ್ಯಲೋಕದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪನ್ನು ಅವರು ಮೂಡಿಸಿದ್ದಾರೆ.


ಇದಿಷ್ಟು ನಾನು ಓದುಗನಾಗಿ ಕಂಡುಕೊಂಡ ಸಾಹಿತಿ ಮಲೆಯೂರು ಗುರುಸ್ವಾಮಿಯವರ ಸಾಹಿತ್ಯಿಕ ವ್ಯಕ್ತಿತ್ವ.


ಇನ್ನು ನಾನು ಇವರ ಸಂಪರ್ಕಕ್ಕೆ ಬಂದ ನಂತರ ವೈಯಕ್ತಿಕವಾಗಿ ಕಂಡುಕೊಂಡ ಮಲೆಯೂರು ಗುರುಸ್ವಾಮಿಯವರದು ಮೇರು ವ್ಯಕ್ತಿತ್ವ. ಅತ್ಯಂತ ಸ್ನೇಹಶೀಲ, ತಮಾಷೆ, ವಿಡಂಬನೆ, ಸರ್ವ ಸಮಾನತೆಯ ಹೃದಯ ವೈಶಾಲ್ಯದ ಮೂರ್ತರೂಪ. ತಮ್ಮ ಕಾದಂಬರಿಗಳ ಕಾಲಘಟ್ಟಕ್ಕೆ ಓದುಗರನ್ನು ಕೊಂಡೊಯ್ಯುವಂತೆ ಗುರುಸ್ವಾಮಿಯವರು ಎಲ್ಲಾ ವಯೋಮಾನದವರ ಜೊತೆ ಆಯಾಯ ವಯೋಮಾನದವರ ವಯಸ್ಸಿಗೆ ಪ್ರವೇಶಿಸಿ ಆಪ್ತಮಿತ್ರರಂತೆ ಸ್ನೇಹ ತೋರುತ್ತಿದ್ದರು. ಹಾಗಾಗಿ ಅವರು ಮಕ್ಕಳಿಂದ ಹಿಡಿದು ಪ್ರೌಢ ಹಿರಿಯರತನಕ ಸ್ನೇಹ ವಲಯವನ್ನು ಸಂಪಾದಿಸಿದ್ದರು.


ನನ್ನ ಕೃತಿಗಳನ್ನು ಓದಿ ಸಾಕಷ್ಟು ಪ್ರೋತ್ಸಾಹ ತುಂಬಿ ನಿರ್ಭಿಡೆಯಿಂದ ಬರೆಯಲು ನನ್ನನ್ನು ಹುರಿದುಂಬಿಸುತ್ತಿದ್ದರು. ಆದರೂ ನಾನು, "ಸರ್, ನಾನೊಬ್ಬ ತರಲೆ, ಕೀಟಲೆ, ತಮಾಷೆಯ ಪ್ರವೃತ್ತಿಯ ವ್ಯಕ್ತಿ. ಬರಹದಲ್ಲಿ ಈಗಷ್ಟೇ ಕಣ್ಣು ಬಿಡುತ್ತಿದ್ದೇನೆ" ಎಂದು ಉಡಾಫೆ ತೋರುತ್ತಿದ್ದೆ. "ಹಹ, ಇದು ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವ ಮಾತು. ನಿಮ್ಮ ಬರಹ ವಸ್ತುನಿಷ್ಠವೂ ಸತ್ಯನಿಷ್ಠವೂ ಆಗಿದೆ" ಎಂದು ಹುರಿದುಂಬಿಸುತ್ತಿದ್ದರು. ಇದು ನನ್ನನ್ನಷ್ಟೇ ಅಲ್ಲದೆ ಅವರ ಸಂಪರ್ಕಕ್ಕೆ ಬಂದ ಎಲ್ಲಾ ಬರಹಗಾರರ ಕುರಿತಾಗಿ ಅವರು ಪ್ರೋತ್ಸಾಹಿಸುವ ಪರಿಯಾಗಿತ್ತು. ಅವರ ಈ ಸದ್ಗುಣವನ್ನು ಅವರ ಶಿಷ್ಯರ ಮಾತುಗಳಲ್ಲಿ ಕೇಳಿದಾಗಲೆಲ್ಲ ನನಗೆ ಸದಾ ನೆನಪಾಗುತ್ತಿದ್ದದ್ದು ಸಿದ್ಧರಾಮೇಶ್ವರನ ಈ ವಚನ:


ಆ ಅಕ್ಷರವನು ಆರೈದು ತೋರಿರಿ

ಓರಂತೆ ಎನ್ನ ಸದುಹೃದಯನೆನಿಸಿ

ನಾದ ಕಳೆಗಳನೆನ್ನ ಆಕರದೊಳಗಿಟ್ಟು

ಅಭೇದ್ಯ ಪರಮಾನಂದ ಸತ್ಯರೂಪ ನಿತ್ಯಾನಂದ

ಶ್ರೀ ಗುರು ಚೆನ್ನಬಸವಣ್ಣನುನ್ನತವನಾರು ಬಲ್ಲರು ಹೇಳಾ,

ಕಪಿಲಸಿದ್ಧಮಲ್ಲಿಕಾರ್ಜುನ.


ಹೀಗಿರುವಾಗ ಒಮ್ಮೆ ನನ್ನಂತಹ ಪೋಲಿಪುಂಡ, ಕೀಟಲೆ, ಅತೀ ವಿಡಂಬನೆಯ ಕಾಲೆಳೆಯುವವನಿಗೆ ಫೋನ್ ಮಾಡಿ, "ಬಂಗಾರದೊಡ್ಡಿ ಕಾದಂಬರಿಯ ಕರಡು ಕಳಿಸುತ್ತಿದ್ದೇನೆ. ಮುನ್ನುಡಿ ಬರೆದು ಕೊಡಬೇಕು" ಎಂದರು.


ಆಗ ನಾನು, "ಸರ್, ಕಾಲೆಳೆಯುವುದು ನನ್ನ ಕೆಲಸ. ಇದೇನು ನೀವೇ ನನ್ನ ಕೆಡುವುತ್ತಿದ್ದೀರಿ! ತಮಾಷೆ ತಾನೇ!" ಎನ್ನುತ್ತ ಹಲವಾರು ಶೈಕ್ಷಣಿಕ ವಲಯದ ಖ್ಯಾತನಾಮರನ್ನು ಹೆಸರಿಸಿ "ಅವರನ್ನು ಕೇಳೋಣ ಸರ್. ನಾನೇ ಕೇಳಿ ಬರೆಯಲು ಒಪ್ಪಿಸುವೆ" ಎಂದೆ.


ಅದಕ್ಕೆ ಅವರು, "ರವಿ, ನಿಮ್ಮ ಕೈಯಲ್ಲಿ ಆಗುತ್ತದೆ. ಬರೀರಿ" ಎಂದು ಫೋನಿಟ್ಟರು. 


ನಮ್ಮ ಪ್ರಕಾಶಕರಾದ ಸಂವಹನ ಲೋಕಪ್ಪನವರು ಸಹ ತಕ್ಷಣಕ್ಕೆ ಕರಡನ್ನು ಇಮೇಲ್ ಕಳಿಸಿ ಮುನ್ನುಡಿಗೆ ಮುನ್ನುಡಿ ಹಾಡಿಯೇಬಿಟ್ಟರು.


ಹೀಗೆ ಗುರುಗಳ ನಿಷ್ಕಲ್ಮಶ ಪ್ರೀತಿ, ಪ್ರೋತ್ಸಾಹ ಮತ್ತು ಜವಾಬ್ದಾರಿಯ ಹಿನ್ನೆಲೆಯಲ್ಲಿ "ಬಂಗಾರದೊಡ್ಡಿ" ಕೃತಿಗೆ ಮುನ್ನುಡಿ ಬರೆದು ಹೂವಿನೊಂದಿಗೆ ನಾರೂ ದೇವರ ಮುಡಿ ಏರಿದಂತೆ ನಾನೂ ಗುರುಗಳ ಕೃತಿಯೊಂದರಲ್ಲಿ ದಾಖಲಾದೆ. ನನ್ನ ಮುನ್ನುಡಿಯನ್ನು ಮೆಚ್ಚಿ ಹಲವರು ಮೆಚ್ಚುಗೆ ಸೂಚಿಸಿದಾಗ ಅತ್ಯಂತ ಸಂಪ್ರೀತರಾಗಿ ಫೋನ್ ಮಾಡಿ, "ನಿಮ್ಮ ಕೈಯಲ್ಲಿ ಆಗುತ್ತದೆ ಎಂದಿದ್ದೆನಲ್ಲವೇ! ನೋಡಿ, ಮುನ್ನುಡಿಯನ್ನು ಬಹಳ ಜನರು ಮೆಚ್ಚಿಕೊಂಡಿದ್ದಾರೆ" ಎಂದು ಖುಷಿಯನ್ನು ಹಂಚಿಕೊಂಡಿದ್ದರು. ಇದು ಮಲೆಯೂರರು ಕಿರಿಯರಿಗೆ ಅವಕಾಶ ಕೊಟ್ಟು ಪ್ರೋತ್ಸಾಹಿಸುವ ಒಂದು ಉದಾಹರಣೆಯಷ್ಟೆ. 


ನಂತರ ನಿರಂತರ ಸಂಪರ್ಕದಲ್ಲಿದ್ದರೂ ಅವರು ಎಂದೂ ತಮ್ಮ ದೇಹಸ್ಥಿತಿಯ ಕುರಿತಾಗಿ ನನ್ನೊಂದಿಗೆ ಹೇಳಿರಲಿಲ್ಲ. ನನ್ನ "ಅರಿದಡೆ ಆರದು ಮರೆದೊಡೆ ಮೂರದು" ಕೃತಿಯ ಕುರಿತು ಆಗಾಗ್ಗೆ ಅವರೊಂದಿಗೆ ಚರ್ಚಿಸುತ್ತಿದ್ದೆ. ಆಗಲೂ ಅವರು ವಿಷಯದ ಕುರಿತು ಮಾತನಾಡುತಿದ್ದರೇ ಹೊರತು ತಮ್ಮ ವೈಯಕ್ತಿಕ ದೈಹಿಕ ಸಮಸ್ಯೆಯ ಬಗ್ಗೆಯಲ್ಲ. ನನ್ನ ಕೃತಿ "ಅರಿದಡೆ ಆರದು ಮರೆದೊಡೆ ಮೂರದು" ಬಿಡುಗಡೆಯ ಕೆಲವೇ ದಿನಗಳು ಮುಂಚೆ ಎಲ್ಲವನ್ನೂ ತೊರೆದು ಗಣಪದವಿಗೇರಿದರು. ತಮ್ಮ ದೇಹಸ್ಥಿತಿಯ ಬಗ್ಗೆ ಏನೊಂದೂ ಹೇಳದೆ ಗುರುವಾಗಿ ಗುರಿಯಲ್ಲಿ ನನ್ನನ್ನು ನೆಲೆಗೊಳಿಸಿ ನಿಜದ ಗಣಪದವಿಗೇರಿದರು. ಸಾಂದರ್ಭಿಕವಾಗಿ ಸಿದ್ಧರಾಮೇಶ್ವರನ ಮತ್ತೊಂದು ವಚನ ಉಲ್ಲೇಖಾರ್ಹ:


ತನುವೆಂಬ ಹೇಳಿಗೆಗೆ ಮನಸರ್ಪನಾವರಿಸಿ,

ಇನಿದು ಬಂದಡೆ ಅದಕ್ಕಿಂಬುಗೊಡದೆ,

ಇರುತಿರ್ಪ ಸರ್ಪವನು ತೆಗೆದು

ಶಿವಲಿಂಗವನು ನೆಲೆಗೊಳಿಸಿದ ಶ್ರೀ ಗುರುವೆ ಶರಣು ಶರಣೆಂಬ,

ವಾಕ್ಯಂಗಳ ಆಕಾರ ಚತುಷ್ಟಯಮಾನಂದದದಲ್ಲಿರಿಸಿದ

ಏಕೋ ರುದ್ರ ಶಿಷ್ಟ ಕಪಿಲಸಿದ್ಧಮಲ್ಲಿಕಾರ್ಜುನ.


ನನ್ನ ಕೃತಿಗಳಲ್ಲಿ ಅವರ ಪ್ರೀತಿಯ ಪ್ರೋತ್ಸಾಹ ಪ್ರಭಾವ ಗಾಢವಾಗಿದೆ. ಅವರ ನೆನಪು ನಿರಂತರ.