ಸತ್ಯ ಮೇವ ಜಯತೇ!

ಅಂತೂ ಭಾರತದ ಒಂದು ಐ.ಟಿ. ಕಂಪೆನಿಯ ಪರಿಣಿತಿ ಹೊರಹೊಮ್ಮಿದೆ. ಈ ವ್ಯವಹಾರವನ್ನು ಒಬ್ಬ ಐ.ಟಿ. ಉದ್ಯೋಗಿಯಾಗಿ ತುಲನೆ ಮಾಡುವುದಕ್ಕಿಂತಲೂ ಒಬ್ಬ ಸಾಮಾನ್ಯ ಭಾರತೀಯನಾಗಿ ನಾವೆಲ್ಲರೂ ಸ್ವಯಂ ತುಲನೆ ಮಾಡಿಕೊಂಡಾಗ ನಾವೆಲ್ಲರೂ ಸತ್ಯಂ ರಾಜು ಆಗಿಯೂ, ಸತ್ಯಂ ರಾಜುರವರು ನಾವಾಗಿಯೂ ಕಾಣುತ್ತೇವೆ. ಏಕೆಂದರೆ ನಾವೆಲ್ಲರೂ ಒಂದೇ ಬಳ್ಳಿಯ ಹೂವುಗಳು!

ಈಗ ಸತ್ಯಂ ಮಾಡಿರುವ ಅಪರಾಧವನ್ನು ಸರಳೀಕರಿಸಿ ನೋಡೋಣ. ತಮ್ಮ ಕಂಪೆನಿಯ ನಿಜ ಲಾಭಾಂಶವನ್ನು ಮುಚ್ಚಿಟ್ಟು ಹೆಚ್ಚೆಚ್ಚು ಲಾಭ ಗಳಿಸಿದ್ದಾಗಿ ತಮ್ಮ ಲೆಕ್ಕಪತ್ರವನ್ನು ತೋರಿಸಿ ತಮ್ಮ ಕಂಪೆನಿಯ ಸ್ಟಾಕ್ ವ್ಯಾಲ್ಯೂ ಲಾಭದ ಅನುಗುಣವಾಗಿ ಮೇಲೇರುವಂತೆ ನೋಡಿಕೊಂಡಿರುವುದು. ಸಾಮಾನ್ಯವಾಗಿ ಅನೇಕ ಐ.ಟಿ. ಕಂಪೆನಿಗಳು ’ರೆವೆನ್ಯೂ ಬುಕಿಂಗ್’ ಎಂಬ ತತ್ವವನ್ನು ಆಳವಡಿಸಿಕೊಂಡಿರುತ್ತವೆ. ಮುಂದಿನ ಕ್ವಾರ್ಟರ್ ನಲ್ಲಿ ಬರಬಹುದಾದ ಪ್ರಾಜೆಕ್ಟೊಂದರ ಲಾಭವನ್ನು, ಆ ಪ್ರಾಜೆಕ್ಟ್ ಈ ಕ್ವಾರ್ಟರ್ ನಲ್ಲಿ ಸೇಲ್ ಆಗಿರುವುದರಿಂದ ಅದನ್ನು ಈ ಕ್ವಾರ್ಟರ್ರಿನ ಲಾಭವೆಂದು ಪರಿಗಣಿಸುವುದು, ಇಲ್ಲಾ ಈ ಕ್ವಾರ್ಟರ್ರಿನ ಲಾಭವನ್ನು ಮುಂದಿನ ಕ್ವಾರ್ಟರ್ರಿಗೆ ವರ್ಗಾಯಿಸಿಕೊಳ್ಳುವುದನ್ನು ತಮ್ಮ ಲಾಭಾಂಶದ ಟಾರ್ಗೆಟ್ಟುಗಳಿಗನುಗುಣವಾಗಿ, ಬ್ರೋಕರೇಜ್ ಫರ್ಮುಗಳ ಎಕ್ಸ್ಪೆಕ್ಟೇಷನ್ನಿಗೆ ತಕ್ಕಂತೆ ಬಳಸಿಕೊಳ್ಳುತ್ತವೆ. ಆದರೆ ಇಲ್ಲಿ ಎಡವಟ್ಟಾಗಿದ್ದು ಸತತ ಆರ್ಥಿಕತೆಯ ಹಿಂಜರಿಕೆ. ಇದು ಇನ್ನೂ ಅದೆಷ್ಟು ಐ.ಟಿ. ಕಂಪೆನಿಗಳನ್ನು ಬಾಧಿಸಲಿದೆಯೋ!

ಇರಲಿ, ಇಲ್ಲಿ ಮೂರ್ಖರಾಗಿದ್ದು ಷೇರುದಾರರು. ಅವರು ಮೂರ್ಖರಾಗಿದ್ದುದರಿಂದಲೇ ಇಂದು ಈ ರೀತಿಯ ಬಾಡಿಶಾಪುಗಳ ಸ್ಟಾಕುಗಳ ಬೆಲೆ ಈ ಪಾಟಿ ಏರಿರುವುದು. ಈ ಮೂರ್ಖತನ ಕೇವಲ ಈ ಕಂಪೆನಿಗಳಲ್ಲಿ ಬಂಡವಾಳ ಹೂಡಿದ ಷೇರುದಾರರದಷ್ಟೇ ಅಲ್ಲ, ಇಡೀ ಭಾರತೀಯ ವ್ಯವಸ್ಥೆ ಕೂಡಾ. ಕೇವಲ ಭಾರತದ ಮೂರು ಪರ್ಸೆಂಟ್ ಕೂಡಾ ಇಲ್ಲದ ಐ.ಟಿ. ಬೆಳವಣಿಗೆಯನ್ನು ಭಾರತದ ಬೆಳವಣಿಗೆಯೆಂದು ಪರಿಗಣಿಸಿ ಅಲ್ಲೋಲಕಲ್ಲೋಲವಾಗಿಸಿರುವುದು ಕೇವಲ ಸತ್ಯಂ ಸುಳ್ಳೆನಿಸುತ್ತದೆಯೇ?

ಇನ್ನು ಈ ಭಾರತೀಯ ಐ.ಟಿ. ಕಂಪೆನಿಗಳ ಮೂಲ ಬ್ಯುಸಿನೆಸ್ ಪ್ಲ್ಯಾನ್ ಆದರೂ ಏನು? ನೂರು ಪ್ರೋಗ್ರ್ಯಾಮರ್ರುಗಳು ಬೇಕೆಂದರೆ ನೂರು ಪ್ರೋಗ್ರ್ಯಾಮರ್ರುಗಳನ್ನು ಸಪ್ಲೈಸುವುದು. ಕಾಫೀ ಪ್ಲಾಂಟರ್ರುಗಳಿಗೆ ಲೇಬರ್ ಸಪ್ಲೈ ಮಾಡುವವರಂತೆ. ಆ ಕೂಲಿಗಳಿಗೆ ಕೊಡಮಾಡುವ ಕೂಲಿಯಲ್ಲಿ ತಮ್ಮ ಕಮೀಷನ್ನನ್ನು ಉಳಿಸಿಕೊಳ್ಳುವುದು. ಸೊಫಿಸ್ಟಿಕೇಟೆಡ್ ಕಾರ್ಪೋರೇಟ್ ಕಲ್ಚರ್ರಿನಲ್ಲಿ ಎಂಪ್ಲಾಯೀ, ಎಂಪ್ಲಾಯೀ ಬೆನೆಫಿಟ್ಸ್....ಎನ್ನುವ ರಂಗಿನ ಕೂಲಿಯೊಂದಿಗೆ. ಹೆಚ್ಚೆಚ್ಚು ಕೂಲಿಗಳಿದ್ದರೆ ಹೆಚ್ಚೆಚ್ಚು ಕಮೀಷನ್! ಇವುಗಳೇನಾದರೂ ತಮ್ಮದೇ ಆದ ಸಾಫ್ಟ್ವೇರ್ ಪ್ರಾಡಕ್ಟುಗಳನ್ನು ಹೊಂದಿದ್ದರೆ, ಆಗ ಇವುಗಳನ್ನು ಲಾಭದಾಯಕ ಕಂಪೆನಿಗಳು ಎನ್ನಬಹುದು. ಇಂತಹ ಕಮೀಷನ್ ಏಜೆಂಟರನ್ನೇ ಭವ್ಯ ಭಾರತದ ಆರ್ಥಿಕತೆಯ ಪೈಯೋನೀಯರ್ರುಗಳೆಂದು ಅರ್ಥೈಸಿದ್ದು ಖಂಡಿತಾ ಭಾರತದ ವಿಪರ್ಯಾಸವಲ್ಲ! ಏಕೆಂದರೆ ಸ್ವತಂತ್ರ್ಯ ಭಾರತದಲ್ಲಿ ಕಮೀಷನ್ ಏಜೆಂಟರುಗಳದೇ ದರ್ಬಾರು. ಇದು ಬಡರೈತನ ವ್ಯವಸಾಯೋತ್ಪನ್ನಗಳ ಮಾರುಕಟ್ಟೆಯಿರಬಹುದು, ಮುಂಬೈಯ ಕೆಂಪುದೀಪದ ಕಮಂಗಿಗಳಿರಬಹುದು, ಅಥವಾ ಸೈನ್ಯದ ಬೋಫೋರ್ಸ್ ಶಸ್ತ್ರಗಳಿಂದ ಸೈನಿಕರ ಶವಪೆಟ್ಟಿಗೆಗಳಾಗಿರಬಹುದು, ಒಟ್ಟಾರೆ ಕಮೀಷನ್.

ಇನ್ನು ಜನಸಾಮಾನ್ಯರುಗಳನ್ನೇ ತೆಗೆದುಕೊಳ್ಳಿ. ಪೋಷಕರು ತಮ್ಮ ಮಕ್ಕಳು ಅವರುಗಳ ಶಾಲೆಯಲ್ಲೇ ನಂಬರ್ ಒನ್ ಎಂದೂ, ಹುಡುಗ ಫೇಲಾಗಿದ್ದರೂ ಬಿ.ಇ. ಫಸ್ಟ್ ಕ್ಲಾಸೆಂದು ಮದುವೆಯಾಗುವುದರೊಂದಿಗೇ ಭಾರೀ ವರದಕ್ಷಿಣೆಯನ್ನು ಡಿಮ್ಯಾಂಡಿಸುವುದು (ಇದಕ್ಕೆ ನಮ್ಮ ಭಾರತೀಯ ತತ್ವವೇ ಪ್ರೋತ್ಸಾಹಿಸುತ್ತದೆ, ಸಾವಿರ ಸುಳ್ಳು ಹೇಳಿ ಒಂದು ಲಗ್ನ ಮಾಡಿಸು ಎಂದು)...ನೀವೇ ನಿಮ್ಮ ಸುತ್ತಮುತ್ತ ಯೋಚಿಸಿ, ರಾಜು ತರಹ ನಾವುಗಳೇ ಅದೆಷ್ಟು ಸುಳ್ಳು ಹೇಳಿದ್ದೇವೆಂದು. ಈ ನಮ್ಮ ಹುಟ್ಟುಗುಣ ಯಾರನ್ನೂ ಬಿಟ್ಟಿಲ್ಲ. ಅದು ನಮ್ಮ ಸಮಾಜಮುಖಿಗಳಾದ ಅನೇಕ ವರ್ಗದವರೇ ಇರಬಹುದು. ರಾಜಕಾರ್‍ಅಣಿಗಳಾದರೆ ಭರವಸೆಯ ಮಹಾಪೂರವನ್ನೇ ಹರಿಸುತ್ತಾರೆ. ಪತ್ರಿಕಾವಲಯವಾದರೆ ಗಾಳಿಸುದ್ದಿಗಳೇ ಪ್ರಮುಖ ಸುದ್ದಿಗಳಾಗುತ್ತವೆ. ಬುದ್ಧಿಜೀವಿಗಳಾದರೆ ಭಾರತದ ಅಲ್ಪಸಂಖ್ಯಾತರು ಹಿಟ್ಲರನ ಕಾಲದ ಯಹೂದಿಗಳಿಗಿಂತಲೂ ಕಡುಕಷ್ಟದಲ್ಲಿದ್ದಾರೆಂದು ಬೊಬ್ಬಿಡುತ್ತಾರೆ. ಇನ್ನುಳಿದಂತೆ ನಿಮ್ಮ ನಿಮ್ಮ ಚಿತ್ತಗಳಿಗೇ ಬಿಡುತ್ತೇನೆ.

ಇನ್ನು ಪ್ರತಿಯೊಂದು ಐ.ಟಿ. ಕಂಪೆನಿಗಳೂ ತಮ್ಮ ಉದ್ಯೋಗಿಯ ಕನಿಷ್ಟ ಹತ್ತು ವಿಧವಾದ ರೆಸ್ಯೂಮೆಗಳನ್ನು ಮಾಡಿಟ್ಟುಕೊಂಡಿರುತ್ತವೆ. ಸತ್ಯವಾನನ ರೆಸ್ಯೂಮೆ ಹತ್ತು ವರ್ಷ ಜಾವಾ ಎಕ್ಸ್ಪರ್ಟ್ ಎಂದು ಜಾವಾ ಬೇಕಾದವನ ಬಳಿ ಹೋದರೆ, ಅದೇ ಸತ್ಯವಾನ ಹತ್ತು ವರ್ಷ ಡಾಟ್ ನೆಟ್ ಎಕ್ಸ್ಪರ್ಟ್ ಆಗಿ ಇನ್ನೊಂದು ಕಂಪೆನಿಯಲ್ಲಿ ಕಂಗೊಳಿಸುತ್ತಿರುತ್ತಾನೆ. ಇದು ಉದ್ಯೋಗ ಬಯಸಿ ಯಾವುದೇ ವೈಯುಕ್ತಿಕ ವ್ಯಕ್ತಿ ಮಾಡುತ್ತಿರುವುದಲ್ಲ, ನಮ್ಮ ಮಹಾನ್ ಐ.ಟಿ. ಕಂಪೆನಿಗಳೇ ಮಾಡುತ್ತಿವೆ. ಇನ್ನು ಈ ಕಂಪೆನಿಗಳ ಉದ್ಯೋಗಿಗಳು ಅದೆಷ್ಟು ಪ್ರಾಮಾಣಿಕರಾಗಿರುತ್ತಾರೆ ಎಂಬುದು....!

ಇನ್ನು ರಾಷ್ಟ್ರ್‍ಅಪತಿ ಸ್ಥಾನಕ್ಕೆ ಪ್ರತಿಸ್ಪರ್ಧಿಯೆಂದು ಗಾಳಿಸುದ್ದಿಯಿದ್ದ ಪಿತಾಮಹರು ತಮ್ಮ ಕಂಪೆನಿಗೆ ಎಸ್ಸೆಸ್ಸೆಲ್ಸಿಯಿಂದ ಡಿಗ್ರಿವರೆಗೂ ಡಿಸ್ಟಿಂಕ್ಷನ್ನಿನಲ್ಲಿ ಪಾಸಾಗಿ, ಕಾಂಪೆಟೆಟಿವ್ ಟೆಸ್ಟುಗಳನ್ನು ಪಾಸಾದವರಿಗೆ ಮಾತ್ರ ಉದ್ಯೋಗಕ್ಕೆ ತೆಗೆದುಕೊಳ್ಳುತ್ತಾರೆ. ಆದರೆ ಈ ಅಪರಿಮಿತ ಬುದ್ಧಿಮತ್ತೆಯ ಯುವಜನತೆ ಮಾಡುತ್ತಿರುವ ಕೆಲಸವಾದರೂ ಏನು? ಐ.ಟಿ ಗುಮಾಸ್ತಿಕೆ. ಐ.ಟಿ ಅಲ್ಲದವರಿಗೆ ಮನವರಿಕೆಯಾಗುವಂತೆ ಹೇಳುವುದಾದರೆ ನಲ್ಲಿಯವ ದಿನನಿತ್ಯ ವಾಲ್ವ್ ತಿರುಗಿಸಿ ನೀರು ಬಿಡುವುದು, ಕಡತಗಳ ಹುಡುಕಿ ರಿಪೋರ್ಟ್ ಸಿದ್ಧಪಡಿಸುವುದು....ಈ ರೀತಿಯ ಮೇಂಟೇನೆನ್ಸ್ ಕೆಲಸ. ಈ ರೀತಿಯ ಮೇಂಟೇನೆನ್ಸ್ ಕೆಲಸಗಳಿಗೆ ಈ ರೀತಿಯ ಬುದ್ದಿಮತ್ತೆ ಬೇಕೇ? ಆರ್.ಇ.ಸಿ., ಐ.ಐ.ಟಿ, ಐ. ಐ.ಎಮ್...ನಂತಹ ಪ್ರತಿಷ್ಟಿತ ಶಾಲೆಗಳಲ್ಲಿ ಕಲಿತವರ ಪ್ರತಿಭೆಯನ್ನು ಹಾಗೆಯೇ ಚಿವುಟಿ ಐ.ಟಿ. ಕೂಲಿಗಳನ್ನಾಗಿ ಮಾಡಿರುವುದು ಒಂದು ಸಾಧನೆಯೇ? ಈ ಪ್ರತಿಭೆಯನ್ನು ಉಪಯೋಗಿಸಿಕೊಂಡು ಭಾರತದಿಂದ ಈವರೆಗೂ ಒಂದಾದರೂ ಗೂಗಲ್, ಯಾಹೂ, ಮೈಕ್ರೋಸಾಫ್ಟ್ ತರಹದ ಪ್ರಾಡಕ್ಟುಗಳು ಮಾರುಕಟ್ಟೆಯಲ್ಲಿ ಇವೆಯೆ?

ಅಂದಹಾಗೆ ಮೈಕ್ರೋಸಾಫ್ಟ್ ನ ಬಿಲ್ ಗೇಟ್ಸ್, ಒರ್‍ಯಾಕಲ್ ನ ಲ್ಯಾರಿ ಎಲ್ಲಿಸನ್ ನಿಂದ ರಿಲೈಯನ್ಸ್ ನ ಧೀರೂಬಾಯಿ ಅಂಬಾನಿಯವರ್‍ಯಾರೂ ಕಾಲೇಜು ಡಿಗ್ರಿದಾರರಾಗಿರಲಿಲ್ಲ! ಕಾಲೇಜು ಡಿಗ್ರಿ ಇರದ ಧೀರೂಬಾಯಿ ಅಂಬಾನಿ ಕಟ್ಟಿದ ಸಾಮ್ರಾಜ್ಯವನ್ನು ಐ.ಐ.ಎಮ್ ಪದವೀಧರರು ಇಭ್ಭಾಗವಾಗಿಸಿದ್ದು ನಮ್ಮ ಶಿಕ್ಷಣ ಪದವಿಗಳ ವಿಪರ್ಯಾಸ.

ಈ ರೀತಿಯ ಸುಳ್ಳು ರೆಸ್ಯೂಮೆಗಳ ಬುನಾದಿಯ ಮೇಲೆ ನಿಂತು, ಬಡ ಭಾರತದ ಆರ್ಥಿಕತೆಯ ದಿವ್ಯಶಕ್ತಿಗಳೆನಿಸಿರುವ ಈ ಕಮೀಷನ್ ಏಜೆಂಟರುಗಳ ಬಂಡವಾಳವನ್ನು ಜನ ಅದೆಂದು ಅರ್ಥೈಸಿಕೊಳ್ಳುವರೋ! ಹಾಂ, ನ್ಯೂಯಾರ್ಕನ್ನೂ ಮೀರಿಸಿರುವ ಬೆಂಗಳೂರಿನ ರಿಯಲ್ ಎಸ್ಟೇಟ್ ಬೆಲೆ, ಹತ್ತಿರ ಹತ್ತಿರ ಸಿಂಗಪೂರ್ ಸಂಬಳ, ಅದೆಲ್ಲಕ್ಕಿಂತಲೂ ಪ್ರಾಮಾಣಿಕತೆ, ಬದ್ಧತೆಯಿರದ ರೆಸ್ಯೂಮೆಗಳು ಅದೆಷ್ಟು ದಿನ ತಮ್ಮ ವಿದೇಶೀ ಗ್ರಾಹಕರನ್ನು ಸಂತುಷ್ಟಿಯಾಗಿರಿಸುವವೋ? ಏಕೆಂದರೆ ಈ ರೀತಿಯ ಹಲವಾರು ವಿದೇಶೀ ಕಂಪೆನಿಗಳಿಗೆ ಹಂಗರಿ, ಪೋಲೆಂಡ್ ಮುಂತಾದ ಯುರೋಪಿಯನ್ ರಾಷ್ಟ್ರ್‍ಅಗಳು ಹೊರಗುತ್ತಿಗೆಯ ಗಾಳ ಹಾಕುತ್ತಿವೆ. ಈ ಉದ್ದೇಶವಾಗಿ ನಾನೇ ಹಲವು ಫೀಸಿಬಿಲಿಟಿ ಸ್ಟಡಿಗಳನ್ನು ಮಾಡಿದ್ದೇನೆ.

ನಮ್ಮ ಅರೆನಗ್ನ ಮಹಾತ್ಮರು ’ಸತ್ಯ ಮೇವ ಜಯತೇ’ ಎನ್ನುತ್ತಾ ಗಳಿಸಿಕೊಟ್ಟ ಸ್ವತಂತ್ರ ಭಾರತದಲ್ಲಿ, ನಾವುಗಳು ವಸ್ತ್ರಾಭರಣಭೂಷಿತರಾಗಿಯೂ ನಗ್ನರಾಗಿದ್ದೇವೆಯೇನೋ ಎನಿಸುತ್ತದೆ. ಬಹುಶಃ ನಗ್ನಸತ್ಯ ಹೀಗಿರುತ್ತದೆಯೇನೋ!

ಅಣಕ:

ಬೆಂಗಳೂರಿಗೆ ನ್ಯೂಯಾರ್ಕ್ ಬೆಲೆ ಹೇಗೆ ಬಂತು ಗೊತ್ತೆ?

ಒಬ್ಬ ಮಾಮೂಲಿ ಮನೆ ಬ್ರೋಕರ್ ನ ಬಳಿ ಒಬ್ಬ ಬಾಂಬೆವಾಲಾ ಬಂದು, ಒಂದು ನಿವೇಶನ ಬೇಕೆಂದು ಕೇಳಿದ.

ಸರಿ, ಬ್ರೋಕರ್ ಒಂದು ನಿವೇಶನ ತೋರಿಸಿ ತನ್ನ ಹರಕು-ಮುರುಕು ಹಿಂದಿಯಲ್ಲಿ ಐನೂರು ರುಪಾಯಿ ಚದರಡಿ ಎಂಬುದಕ್ಕೆ "ಪಾಂಚ್ ಹಜಾರ್" ಎಂದ.

ಬಾಂಬೆವಾಲಾ ಕೂಡ ತನ್ನ ಪ್ರತಿಷ್ಟೆಯನ್ನು ಮೆರೆಸುತ್ತ ತನ್ನ ಹರಕು-ಮುರುಕು ಇಂಗ್ಲಿಷ್ ನಲ್ಲಿ "ಓನ್ಲೀ ಫೋರ್ ಥೌಸಂಡ್ ಫೈವ್ ಹಂಡ್ರೆಡ್" ಎಂದ.

ಅದನ್ನರಿತ ಬ್ರೋಕರ್ ಒಳಗೆ ಖುಷಿಯಾಗಿ ವ್ಯವಹಾರ ಮುಗಿಸಿದ.

ಅಂದಿನಿಂದ ಬೆಂಗಳೂರಿನ ಆ ಏರಿಯಾಕ್ಕೆ ೪೫೦೦/ಚದರಡಿ ಫಿಕ್ಸ್ ಆಯಿತು. ಅಷ್ಟೇ ಅಲ್ಲದೆ ಇಡೀ ಬೆಂಗಳೂರಿನ ಬ್ರೋಕರ್ ಮಂಡಳಿಗೆ ಈ ಬೆಲೆ ಮಾದರಿಯಾಯಿತು.

ಇಷ್ಟು ಸರಳವಾದ ಇಕನಾಮಿಕ್ಸ್ ಗೆ ಪಾಶ್ಚಿಮಾತ್ಯರು ಅದೇಕೆ ಇನಫ್ಲೇಶನ್, ಡಿಫ್ಲೇಶನ್, ರಿಸೆಷನ್ ಅಂತ ತಲೆ ಕೆರೆದುಕೊಳ್ಳುವರೋ? ಗೊತ್ತೆ?