ಮೋದಿ ವಿರೋಧಿಗಳ ವೈಫಲ್ಯಕ್ಕೆ ಕಾರಣಗಳೇನು?

ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಮೋದಿಯವರ ಕ್ರಿಯೆಗಳಿಂದಲೇ ತಾರ್ಕಿಕವಾಗಿ ಹೇಗೆ ಸಾಬೀತುಪಡಿಸಬಹುದಿದ್ದಿತು, ಆದರೆ ಆ ರೀತಿ ಇಲ್ಲಿಯವರೆಗೆ ಒಂದು ತಾರ್ಕಿಕ ವಾದವನ್ನು ವಿರೋಧಪಕ್ಷಗಳನ್ನು ಬಿಡಿ, ಪ್ರಜ್ಞಾವಂತರು ಕೂಡಾ ಎತ್ತದೆ ಕೇವಲ ಟ್ರೋಲಿಗೆ ಬಲಿಯಾಗಿಬಿಟ್ಟಿದ್ದಾರೆ. ಎಲ್ಲೆಡೆ ರೋಚಕ, ತಕ್ಷಣದ ಪ್ರತಿಕ್ರಿಯೆಯನ್ನೇ ಮೆರೆಸಿದ್ದಾರೆಯೇ ಹೊರತು ಹೂರಣವಿರುವ ಒಂದು ವಾದವನ್ನೋ, ಪ್ರತಿಭಟನೆಯನ್ನೋ ಮಾಡಿಲ್ಲ. ತಮಗೆ ತಾವೇ ಪರೋಕ್ಷವಾಗಿ ತಮ್ಮ ಟ್ರೋಲುಗಳಿಂದಲೇ ವ್ಯತಿರಿಕ್ತವಾಗಿ ಮೋದಿಯವರಿಗೆ ಒಳಿತಾಗುವಂತೆ ಮಾಡಿಬಿಟ್ಟಿದ್ದಾರೆ.
ಇರಲಿ, ಟ್ರೋಲಿಲ್ಲದೆ ತಾರ್ಕಿಕವಾಗಿ ವಾದಮಂಡನೆ ಅಂದರೆ ಹೇಗೆ?
ಸರಿ, ಅದಕ್ಕೆ ಉದಾಹರಣೆಯಾಗಿ ಮೋದಿಯವರ ಇತ್ತೀಚಿನ ಗುಹಾಂತರವನ್ನೇ ತೆಗೆದುಕೊಳ್ಳೋಣ. ಇದರಲ್ಲಿ ಎರಡು ಆಯಾಮಗಳಿವೆ:
1. ಮೋದಿ ಉಳಿದುಕೊಂಡ ಗುಹೆಯ ಬಾಡಿಗೆ ದಿನವೊಂದಕ್ಕೆ ರೂ.990 ಮತ್ತದನ್ನು ಭರಿಸಿದ್ದು ಮೋದಿ ತನ್ನ ಜೇಬಿನಿಂದ!
ಅದೇ ಮೊನ್ನೆ ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಕಳೆದ ವಾರ ಮಡಿಕೇರಿಯ ಇಬ್ಬನಿ ರಿಸಾರ್ಟಿನಲ್ಲಿದ್ದುದು ದಿನಕ್ಕೆ ರೂ.36000 ಬಾಡಿಗೆಯ ಕೋಣೆಯಲ್ಲಿ. ಆ ಖರ್ಚನ್ನು ಭರಿಸಿದ್ದು ರಾಜ್ಯ ಸರ್ಕಾರವೆಂದು ಪತ್ರಿಕಾ ವರದಿಗಳು ತಿಳಿಸಿವೆ.
ಈ ಮೊದಲನೇ ಆಯಾಮದಲ್ಲಿ ಮೇಲುನೋಟಕ್ಕೆ ಮೋದಿ ಅಪ್ರತಿಮ ಪ್ರಶ್ನಾತೀತ ಪ್ರಾಮಾಣಿಕ ವ್ಯಕ್ತಿಯೆನಿಸುತ್ತಾರೆ.
ಆದರೆ ಕೇವಲ ಪ್ರಾಮಾಣಿಕ, ಸತ್ಯಸಂಧರೆನ್ನುವ ಅರ್ಹತೆ ದೇಶವನ್ನು ಮುನ್ನಡೆಸಲು ಸಾಕೆ?
2. ಈ ಗುಹೆಗಳನ್ನು ನಿರ್ಮಿಸಿದ ಸಂಸ್ಥೆಯು ತಮಗೆ ಈ ಗುಹೆಗಳನ್ನು ನಿರ್ಮಿಸಿ ಆಧ್ಯಾತ್ಮಿಕ ಪ್ರವಾಸಿಗಳನ್ನು ಸೆಳೆಯುವ ಐಡಿಯಾ ಕೊಟ್ಟವರು ಮೋದಿಯವರೇ ಎಂದಿದೆ. ಈ ಐಡಿಯಾವನ್ನು ಅದ್ಭುತವೆಂದು ಪರಿಗಣಿಸಿ ಬಂಡವಾಳ ಹೂಡಿದ ಸಂಸ್ಥೆ ಈಗ ನಷ್ಟವನ್ನು ಅನುಭವಿಸುತ್ತಿದೆ. ಆದರಲ್ಲೂ ಮೋದಿಯವರು ಕೇದಾರಕ್ಕೆ ಪದೇ ಪದೇ ಸಂದರ್ಶಿಸಿ ರಸ್ತೆಗಳು ಪರೋಕ್ಷವಾಗಿ ಅಭಿವೃದ್ಧಿಯನ್ನು ಕಂಡಿದ್ದರೂ ಕೂಡ.
ದಿನಕ್ಕೆ ಮೂರು ಸಾವಿರ ಬಾಡಿಗೆಯಿದ್ದು ಕನಿಷ್ಟ ಮೂರುದಿನದ ಬುಕ್ಕಿಂಗ್ ಕಡ್ಡಾಯವೆಂದು ಆರಂಭಿಸಿದ ಈ ವ್ಯವಸ್ಥೆ ಪ್ರವಾಸಿಗರ ಕೊರತೆಯಿಂದ ಬಾಡಿಗೆಯನ್ನು ರೂ.990ಕ್ಕೆ ಇಳಿಸಿ ಕನಿಷ್ಟ ಮೂರು ದಿನದ ಬುಕ್ಕಿಂಗ್ ಸಡಿಲಿಸಿ ದಿನದ ದಿನದ ಬಾಡಿಗೆ ಲೆಕ್ಕದಲ್ಲಿ ಕೂಡಾ ಗಿರಾಕಿಗಳನ್ನು ಕಾಣುತ್ತಿಲ್ಲವೆಂದು ಆ ಸಂಸ್ಥೆಯೇ ಹೇಳಿಕೊಂಡಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ ಮೋದಿಯವರು ಕೊಟ್ಟ ಸಲಹೆ ವಿಫಲವಾಗಿದೆ.
ಈ ಗುಹಾಂತರದ ವಿಷಯದ ಮೇಲಿನ ಎರಡೂ ಆಯಾಮಗಳನ್ನು ಗಮನಿಸಿದಾಗ ಮೇಲುನೋಟಕ್ಕೆ ಕಾಣುವ ಮೊದಲನೇ ಆಯಾಮದ ಪ್ರಾಮಾಣಿಕತೆಯ ಸಂಗತಿಯನ್ನೇ ಪ್ರಮುಖವಾಗಿ ಪರಿಗಣಿಸಿ ಅವರ ಅಭಿಮಾನಿಗಳು ಆರಾಧಿಸುವುದು ಮತ್ತು ಅವರ ವಿರೋಧಿಗಳು ಟ್ರೋಲಿಸುವುದು ನಡೆದಿದೆಯೇ ಹೊರತು, ಎರಡನೇ ಆಯಾಮವನ್ನು ಯಾರೂ ನೋಡುತ್ತಿಲ್ಲ.
ಇಲ್ಲಿಯೇ ಪ್ರಜ್ಞಾವಂತರು ಸೋಲುತ್ತಿರುವುದು. ಕೇವಲ ಮೇಲ್ಮೆಯನ್ನು ಪರಿಗಣಿಸಿ ವಿಷಯಗಳ ಆಳಕ್ಕಿಳಿಯುವ ತಮ್ಮ ಪ್ರಜ್ಞೆಯನ್ನು ಮರೆತೇಬಿಟ್ಟಿದ್ದಾರೆ. ಮೋದಿ ಅಭಿಮಾನಿಗಳು ಜೈ ಎಂದರೆ ತಾವು ಧಿಕ್ಕಾರ ಕೂಗಲೇಬೇಕೆಂಬ ನಿಯಮವನ್ನು ಹಾಕಿಕೊಂಡುಬಿಟ್ಟಿದ್ದಾರೆ.
ಹಾಗೆ ನೋಡಿದರೆ ಆಧ್ಯಾತ್ಮ ಮೋದಿಯವರ ಆಳ ಅನುಭವವಿರುವ ವಿಷಯ. ದೇವೇಗೌಡರು ಗುಡಿ ಸುತ್ತುವುದು ಮೌಢ್ಯವಾದರೆ, ಮೋದಿಯವರದು ಆಧ್ಯಾತ್ಮ, ವಿಶ್ವಮಾನ್ಯ ಆಧ್ಯಾತ್ಮ! ಹೀಗಿದ್ದಾಗ ಅಧ್ಯಾತ್ಮದ ವಿಶ್ವಗುರು, ಯೋಗದ ಮಾಂತ್ರಿಕ, ಬ್ರಹ್ಮಚಾರಿ ಎಂದೆಲ್ಲಾ ಎನಿಸಿಕೊಂಡಿರುವ ಮತ್ತು ಇವುಗಳಲ್ಲಿ ಆಳ ಅನುಭವವಿರುವ ವಿಷಯದ ಹಿನ್ನೆಲೆಯ ಆಧ್ಯಾತ್ಮಿಕ ಪ್ರವಾಸದ ಅವರ ಸಲಹೆ ಮುಗ್ಗರಿಸಿ ಮಕಾಡೆ ಮಲಗಿದೆ ಎಂದು ಅವರ ಗುಹಾಂತರದ ಎರಡನೇ ಆಯಾಮ ತಿಳಿಸುತ್ತದೆ. ಹೀಗಿದ್ದಾಗ ಅವರ ಅದೆಂತು ಅಪರಿಮಿತ ಅನನುಭವೀ ಯೋಜನೆಗಳು ವಿಫಲವಾಗಬಹುದು? ಈ ನಿಟ್ಟಿನಲ್ಲಿ ಬುದ್ಧಿಜೀವಿಗಳು ಒಂದು ವಾಸ್ತವವಾದವನ್ನು ಇದುವರೆಗೂ ಮಂಡಿಸಿಲ್ಲ.
ನರ್ಮದಾ ತೀರದಲ್ಲಿ ನಿಲ್ಲಿಸಿದ ವಿಗ್ರಹದ ಬದಲು ನರ್ಮದೆಯನ್ನು ಇನ್ನೊಂದು ನದಿಯೊಂದಿಗೆ ಜೋಡಿಸಿ ಮೋದಿಯವರು ತಮ್ಮ ಪಕ್ಷದ ಪ್ರಣಾಳಿಕೆಯ ನದಿ ಜೋಡನೆಯ ಪ್ರಾಯೋಗಿಕ ಪ್ರಾತ್ಯಕ್ಷಿಕೆಯನ್ನು ತಮ್ಮ ಮೊದಲ ಅಧಿಕಾರಾವಧಿಯಲ್ಲಿ ನಿರೂಪಿಸಬಹುದಿತ್ತಲ್ಲವೇ ಎಂಬ ಒಂದು ಮೋದಿಯವರ ಪ್ರಣಾಳಿಕೆಗೆ ಬದ್ಧ ವಿಷಯಮಂಡನೆಯನ್ನು ಮಾಡದೆ ವಿಗ್ರಹದ ವ್ಯಕ್ತಿಯ ಚಾರಿತ್ರ್ಯಹೀನ ಮಾಡುವಲ್ಲಿ ಎಲ್ಲಾ ಪ್ರಜ್ಞಾವಂತರು ತಮ್ಮ ಪ್ರಜ್ಞೆಯನ್ನು ಮೀಸಲಿಟ್ಟರು. ಒಂದು ತಾರ್ಕಿಕ ಅರ್ಥಪೂರ್ಣ ವಾದವನ್ನು ಹುಟ್ಟು ಹಾಕಿದ್ದರೆ ಅವರ ಮೇಲಿನ ಭರವಸೆಗೆ ಇಂಬು ದೊರೆಯುತ್ತಿದ್ದಿತು.
ಇದು ಕೇವಲ ಒಂದು ಉದಾಹರಣೆ ಮಾತ್ರ. ಈ ರೀತಿಯ ಸಾಕಷ್ಟು ತಾರ್ಕಿಕ ವಿಚಾರಗಳನ್ನು ಕಳೆದ ಐದು ವರ್ಷಗಳಲ್ಲಿ ಕೇಂದ್ರ ಸರ್ಕಾರದ ಅನೇಕ ಯೋಜನೆಗಳ ವಿಷಯಗಳಲ್ಲಿ ಮಂಡಿಸಬಹುದಿತ್ತು. ಆದರೆ ಜನತೆ, ವಿರೋಧಪಕ್ಷ, ಮತ್ತು ಪ್ರಜ್ಞಾವಂತರು ಟ್ರೋಲಿನ ರೋಚಕತೆಯಲ್ಲಿ ಕಳೆದುಹೋಗಿದ್ದರು. ನೋಟ್ ಬ್ಯಾನಿನ ನೋಟುಗಳು ಜಮೆಗೊಂಡ ಖಾತೆಗಳ ಜಾಡು ಹಿಡಿದು ಕಪ್ಪುಹಣವನ್ನು ದೇಶದೊಳಗಿನಿಂದಲೇ ಗುಡಿಸಿ ಹಾಕಬಹುದಿತ್ತು. ಹಾಗೆ ಗುಡಿಸಿ ಎಂದು ಯಾರೂ ಕೇಳಲಿಲ್ಲ. ಯಾರೂ ಕೇಳದಿದ್ದುದರಿಂದ ಅವರು ಗುಡಿಸಲಿಲ್ಲ. ಪರ್ಯಾಯವಾಗಿ ಇನ್ನೇನನ್ನೋ ಸ್ವಚ್ಛ ಭಾರತವೆಂದು ಗುಡಿಸಿದರು.
ಇಂತಹ ಅನೇಕ ತಾರ್ಕಿಕ ವಿಷಯಗಳ ಪಟ್ಟಿಯನ್ನೇ ನಾನು ಕೊಡಬಲ್ಲೆ. ಆದರೆ ನಾನೊಬ್ಬ ಅನಿವಾಸಿ ಸಾಗರೋತ್ತರ ನಾಗರೀಕ. ಈ ರೀತಿಯ ಚಿಂತನೆ ಹೊರಗಿನಿಂದ ಬರುವುದಕ್ಕಿಂತ ಒಳಗಿನಿಂದ ಬಂದರೆ ಉತ್ತಮ ಮತ್ತು ಪರಿಣಾಮಕಾರಿಯಲ್ಲವೇ.
ಮೋದಿಯವರು ಮತ್ತೊಮ್ಮೆ ಗೆಲ್ಲುತ್ತಾರೆ ಎಂದು ಸಮೀಕ್ಷೆಗಳು ಹೇಳುತ್ತಿವೆ. ಒಂದು ಪಕ್ಷ ಆ ಸಮೀಕ್ಷೆಗಳು ನಿಜವಾದಲ್ಲಿ ಮುಂದಿನ ಐದು ವರ್ಷಗಳಾದರೂ ಟ್ರೋಲಿಲ್ಲದ ತಾರ್ಕಿಕ ವಾದಗಳನ್ನು ಮಂಡಿಸಿ ದೇಶ ಸರಿದಾರಿಯಲ್ಲಿ ಸಾಗುವುದನ್ನು ಕಾಣಬಹುದೇ?
ಅಂದ ಹಾಗೆ, ನಾನು ಎಡವೂ ಅಲ್ಲ, ಬಲವೂ ಅಲ್ಲ. ನಾನೊಬ್ಬ ನಾಸ್ತಿಕ ಉದಾರವಾದದ ವಾಸ್ತವವಾದಿ. ನಾನು ಬಾಲಕನಾಗಿದ್ದಾಗ, ಮತ್ತು ಅಂದು ಯುವಕನಾಗಿದ್ದ ಮತ್ತು ಇತ್ತೀಚಿನ ಕೆಲ ವರ್ಷಗಳ ಹಿಂದೆ ಸಮಾಜ ಕಲ್ಯಾಣ ಸಚಿವರಾಗಿದ್ದ ಆಂಜನೇಯ ಅವರೊಟ್ಟಿಗೆ ಕೂಡಿ ಕಾಂಗ್ರೆಸ್ಸಿಗೆ ಬ್ಯಾನರ್ ಕಟ್ಟುತ್ತಿದ್ದೆನು. ಆ ನನ್ನ ಹಿನ್ನೆಲೆಯಲ್ಲಿ ಮತ್ತು ಮೋದಿ ಗೆಲ್ಲುತ್ತಾರೆಂದು ಸಮೀಕ್ಷೆಗಳು ಹೇಳುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಏಕೆ ಈ ಚುನಾವಣೆಯಲ್ಲಿ ವಿಫಲವಾಯಿತೆಂದು ಖಚಿತವಾಗಿ ಹೇಳಬಲ್ಲೆ.
1. ಮೋದಿಗೆ ಓಟು ಹಾಕಿದವರನ್ನೆಲ್ಲಾ ಭಕ್ತರೆಂದು ಕರೆದು ಹೀಗಳೆದಿದ್ದು. ಭಾರತವನ್ನು ವಿಭಜಿಸುವಲ್ಲಿ ಕಾಂಗ್ರೆಸ್ ಪಕ್ಷದ ಮತ್ತು ಅದು ಬೆಂಬಲಿಸಿದ ಬುದ್ಧಿಜೀವಿಗಳ ಪಾಲು ಸಾಕಷ್ಟಿದೆ. ಕೂದಲೆಳೆಯಷ್ಟು ಮೋದಿ ಯೋಜನೆಯ ಪರ ಸಹಮತವನ್ನು ವ್ಯಕ್ತಪಡಿಸುವವರನ್ನು ಬೆನ್ನಟ್ಟಿ ಭಕ್ತ ಎಂದು ವಿಭಜನೆ ಮತ್ತು ಹೀಯಾಳಿಕೆಯನ್ನು ವಿಜೃಂಭಿಸಿದ್ದಾರೆ. ಕೋತಿ ಬೆಣ್ಣೆ ಮೆದ್ದು ಮೇಕೆಗೆ ಒರೆಸಿದಂತೆ ಆ ವಿಭಜನೆಯನ್ನು ಮೋದಿಯವರ ಮೂತಿಗೆ ಒರೆಸಲಾಗಿದೆ. ಜನರನ್ನು ಒಗ್ಗೂಡಿಸುವ ಕೆಲಸವನ್ನು ಕಾಂಗ್ರೆಸ್ ಈ ಐದು ವರ್ಷಗಳಲ್ಲಿ ಮಾಡಲೇ ಇಲ್ಲ.
2. JNU ಮುಂತಾದ ವಿಶ್ವವಿದ್ಯಾಲಯದ ವಿವಾದ ಸೃಷ್ಟಿಕರ್ತರನ್ನು ಮೋದಿಯ ವಿರುದ್ಧ ಛೂ ಬಿಟ್ಟು ಕಮ್ಯುನಿಸ್ಟ್, ಎಡ, ನಕ್ಸಲ ಮತ್ತು ಭಯೋತ್ಪಾದಕರನ್ನು ಬೆಂಬಲಿಸಿದ್ದು, ಮತ್ತು ಅತಾರ್ಕಿಕವಾಗಿ 'ಒದರಿದ್ದು.'
3. ತಮ್ಮ ಪರವಾಗಿ ಪತ್ರಿಕಾರಂಗದ ಕಳ್ಳರನ್ನೆಲ್ಲಾ ಒಗ್ಗೂಡಿಸಿ ದುಡ್ಡು ಕೊಟ್ಟು ಮಾನ ಹರಾಜು ಹಾಕಿಸಿಕೊಂಡದ್ದು.
4. ಸಂಸತ್ತಿನಲ್ಲಿ ಬೇಕಾಬಿಟ್ಟಿ ಲಂಗುಲಗಾಮಿಲ್ಲದೆ ವಾದ ಮಂಡಿಸಿದ್ದು. ಅಲ್ಪಸಂಖ್ಯಾತರ ಓಲೈಕೆಯಲ್ಲಿ ಬಹುಸಂಖ್ಯಾತರನ್ನು ತಿರಸ್ಕರಿಸುವುದಿರಲಿ ಅವರನ್ನು ನಿಕೃಷ್ಟವಾಗಿ ಅವಹೇಳನ ಮಾಡಿದ್ದುದು.
5. ಅವಕಾಶವಾದಿಯಾದ ದೇವೇಗೌಡ, ಲಾಲೂ, ಮುಲಾಯಂ, ಸ್ಟ್ಯಾಲಿನ್, ಮಾಯಾವತಿ, ಮುಂತಾದವರೊಂದಿಗೆ 'ಹಸ್ತ' ಜೋಡಿಸಿದ್ದು. 3G ಕೇಸಿನಲ್ಲಿ ಕ್ಲೀನಾಗಿ ಬಂದವರು ಈ ಮೇಲಿನವರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಮತ್ತೆ ತಮಗೆ ತಾವೇ ಮಸಿ ಬಳಿದುಕೊಂಡರು.
...ಹೀಗೆ ನೂರೊಂದು ಕಾರಣಗಳನ್ನು ನೀಡಬಹುದು.
ಮೆಜೆಸ್ಟಿಕ್ಕಿನ ಒಂದು ಸ್ವೀಟ್ ಅಂಗಡಿಯಲ್ಲಿ ಲಾಡು ಕೊಂಡು ಹೋಗಿ ದೆಹಲಿಯ ಹೈಕಮ್ಯಾಂಡಿಗೆ ತಿರುಪತಿ ತಿಮ್ಮಪ್ಪನ ಪ್ರಸಾದವೆಂದು ಕೊಡುವ ಕಾಲ ಎಂದೋ ಮುಗಿದುಹೋಗಿದೆ ಎಂದು ಕಾಂಗ್ರೆಸ್ ಪಕ್ಷ ಈಗಲಾದರೂ ಅರಿಯುವುದು ಅತ್ಯಾವಶ್ಯಕ! ಹಾಗೆಯೇ ರಾಹುಲ್ ಆ ಲಾಡುವನ್ನು ತನ್ನ ಅಜ್ಜಿ, ಅಪ್ಪನಂತೆ ಮಹಾಪ್ರಸಾದವೆಂದು ಮೇಯುವುದು ಕೂಡಾ. ಇದು ಉತ್ಪ್ರೇಕ್ಷೆಯಲ್ಲ, ನೈಜ ಸಂಗತಿ!
ಆದರೆ ಈ ನೈಜ ಸಂಗತಿಗಳನ್ನು ಗಹನವಾಗಿ ಪರಿಗಣಿಸಿ ಆತ್ಮವಿಮರ್ಶೆಯನ್ನು ಮಾಡಿಕೊಳ್ಳುವ ತಾಳ್ಮೆ, ವೈಶಾಲ್ಯ, ಪ್ರೌಢಿಮೆಯನ್ನು ಕಾಂಗ್ರೆಸ್ ಪಕ್ಷ ಉಳಿಸಿಕೊಂಡಿದೆಯೇ?
ಒಂದು ಉತ್ತಮ ವಿರೋಧ ಪಕ್ಷವೆನಿಸಿಕೊಳ್ಳುವುದು ಕೂಡ ಆಡಳಿತ ಹಿಡಿದಷ್ಟೇ ಅತ್ಯಾವಶ್ಯಕ. ಏಕೆಂದರೆ ಕೊಟ್ಟ ಕುದುರೆಯನೇರಲರಿಯದೆ ಮತ್ತೊಂದು ಕುದುರೆಯ ಬಯಸುವಾತ ವೀರನೂ ಅಲ್ಲ ಶೂರನೂ ಅಲ್ಲ....ಗುಹೇಶ್ವರ!

ಸೆಕ್ಯುಲರಿಸಂ ಹೋಯ್ತು ಟೋಟಲಿಟೇರಿಯನ್ ಬಂತು ಡುಂ ಡುಂ!

ಇಂದಿನ ಉದಯಕಾಲದಲ್ಲಿ ನನ್ನ ಒಂದು ಲೇಖನ:

ದೇಶ ಇಂದು ಅತ್ಯಂತ ವಿಭಜಿತಗೊಂಡಿದೆ ಅಥವಾ ಆ ರೀತಿಯಾಗಿ ಬಿಂಬಿಸಲಾಗಿದೆ. ಮೋದಿ ಎಂಬ ವ್ಯಕ್ತಿಯ ಆರಾಧನೆಯಲ್ಲಿ ತೊಡಗಿದ ದೇಶ ಕ್ರಮೇಣ ಟೋಟಲಿಟೇರಿಯನ್ ಆಗುತ್ತಾ ನಂತರ ಸರ್ವಾಧಿಕಾರಿಯನ್ನು ಹೊಂದುವತ್ತ ಭಾರತ ದಾಪುಗಾಲಿಡುತ್ತಿದೆ ಎಂಬ ಪ್ರಜ್ಞಾವಂತರ ಕಳವಳದ ಕೂಗು ತೀವ್ರವಾಗಿ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೊಂಚ ಇದರ ಪರಿಣಾಮಗಳನ್ನು ಅವಲೋಕಿಸೋಣ.

ಮೊದಲಿಗೆ ಟೋಟಲಿಟೇರಿಯನ್ ಎಂದರೆ ಸಾಕಷ್ಟು ಸಂಖ್ಯೆಯಲ್ಲಿ ವಿರೋಧಪಕ್ಷಗಳಿಲ್ಲದೇ ಆಡಳಿತ ಏಕಪಕ್ಷೀಯವಾಗಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ಟೋಟಲಿಟೇರಿಯನ್ ವ್ಯವಸ್ಥೆ ಎನ್ನಬಹುದು. ಅದಕ್ಕೆ ಕಾರಣ ಒಂದು ಪ್ರಜಾಪ್ರಭುತ್ವ ದೇಶದ ಜನರೆಲ್ಲಾ ಒಂದು ಪ್ರಮುಖ ಪಕ್ಷವನ್ನು ಏಕಪಕ್ಷೀಯವಾಗಿ ಚುನಾವಣೆಗಳಲ್ಲಿ ಗೆಲ್ಲಿಸುವುದು. ಇದನ್ನು ತಪ್ಪಿಸಲು ಸಾಧ್ಯವಿಲ್ಲ. ಅದಕ್ಕೆ ಆ ಪಕ್ಷಗಳು ಯಾವುದೇ ರೀತಿಯ ಕಾನೂನಾತ್ಮಕ ವಾಮಮಾರ್ಗಗಳನ್ನು ಬಳಸಿಕೊಂಡು ಅಧಿಕಾರ ಹಿಡಿಯುವುದನ್ನು ಇಂದಿನ ಸಂವಿಧಾನ ಮತ್ತು ಕಾನೂನುಗಳು ತಪ್ಪಿಸುವುದು ಸಾಧ್ಯವಾಗಿದ್ದರೆ ಇಂದು ಇಂತಹ ಕೂಗು ಇರುತ್ತಿರಲಿಲ್ಲ. ಹಾಗಾಗಿ ಇದು ವ್ಯವಸ್ಥೆಯ ದೋಷ. ಈ ರೀತಿಯ ಟೋಟಲಿಟೇರಿಯನ್ ಪರಿಸ್ಥಿತಿ ಸದ್ಯಕ್ಕೆ ಬಂದಿಲ್ಲ. ಆದರೆ ಬರುವುದನ್ನು ತಡೆಯಲು ಸಾಧ್ಯವಿಲ್ಲ.

ಆದರೆ ಆ ರೀತಿಯ ಟೋಟಲಿಟೇರಿಯನ್ ಪರಿಸ್ಥಿತಿ ಆಗಲೇ ಸೃಷ್ಟಿಯಾಗಿ ಮೋದಿ ಅದರ ಚುಕ್ಕಾಣಿ ಹಿಡಿದಿದ್ದಾನೆ ಎಂಬುದು ಪ್ರಜ್ಞಾವಂತರ ಪ್ರಬಲ ಅನಿಸಿಕೆ ಮತ್ತು ವಿರೋಧ.

ಸರಿ, ಪರ್ಯಾಯವೇನು?

ನಮ್ಮ ಪ್ರಜ್ಞಾವಂತರು ಇದಕ್ಕೆ ಪರಿಹಾರವಾಗಿ ಬಹುತ್ವವೇ ಮಾರ್ಗವೆನ್ನುತ್ತಾರೆ. ಅಂದರೆ ಸಧೃಢ ವಿರೋಧಪಕ್ಷ, ಮತ್ತು ಎಲ್ಲಾ ವರ್ಗಗಳ ಸಮತೋಲಿತ ಪ್ರತಿನಿಧಿತ್ವವನ್ನು ಹೊಂದಿದಾಗ ಅದು ಆರೋಗ್ಯಕರ ಪ್ರಜಾಪ್ರಭುತ್ವವಾಗುತ್ತದೆ ಎನ್ನುತ್ತಾರೆ. ಅದು ಅಕ್ಷರಶಃ ಸತ್ಯ ಕೂಡ.

ಹಾಗಿದ್ದರೆ ಅಂತಹ ಬಹುತ್ವದ ಸರ್ಕಾರ ಹೇಗಿರುತ್ತದೆ?

ಈಗ ಅಂತಹ ಆರೋಗ್ಯಕರ ಬಹುತ್ವವನ್ನು ಪ್ರತಿನಿಧಿಸುವ ಪ್ರಜಾಪ್ರಭುತ್ವ ಕರ್ನಾಟಕದಲ್ಲಿ ಅಸ್ತಿತ್ವಕ್ಕೆ ಬಂದಿದೆ. ಯಾರಿಗೂ ಮೆಜಾರಿಟಿ ಬರದೆ ಎರಡು ಪಕ್ಷಗಳ ಸಮ್ಮಿಶ್ರ ಸರ್ಕಾರ ಆಡಳಿತ ಹಿಡಿದಿದ್ದು, ನೂರಾನಾಲ್ಕು ಸದಸ್ಯರ ಸಂಖ್ಯೆಯ ಪ್ರಬಲ ವಿರೋಧಪಕ್ಷವನ್ನು ಹೊಂದಿ ಕರ್ನಾಟಕದಲ್ಲಿ ಮಾದರೀ ಪ್ರಜಾಪ್ರಭುತ್ವ ಜಾರಿಯಲ್ಲಿದೆ.

ಹಾಗೆಂದು ಕರ್ನಾಟಕದಲ್ಲಿ ಈ ಬಹುತ್ವದ ವ್ಯವಸ್ಥೆ ಅಸಲಿಗೆ ಮಾದರಿಯಾಗಿದೆಯೇ?

ಕರ್ನಾಟಕದಲ್ಲಿ ಸರ್ಕಾರವಿದೆಯೇ ಎಂಬಷ್ಟು ಸರ್ಕಾರ ನಿಷ್ಕಿಯವಾಗಿದೆ, ವಿರೋಧಪಕ್ಷಗಳೂ ಸೇರಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಕರ್ನಾಟಕದ ಮಂತ್ರಿಯೊಬ್ಬನ ಐನೂರು ಕೋಟಿಯಷ್ಟು ಅಕ್ರಮ ಆಸ್ತಿ ಜಪ್ತಿಗೊಂಡಿದ್ದರೂ ಸರ್ಕಾರ, ವಿರೋಧಪಕ್ಷಗಳು ಆತನ ರಾಜೀನಾಮೆಯನ್ನು ಕೇಳಿಲ್ಲ. ಕತ್ತೆ ಮೆರವಣಿಗೆಯಂತಹ ವಿಭಿನ್ನ ಚಳುವಳಿಗಳ ಮಾಡಿ ಸುದ್ದಿಯಾಗುತ್ತಿದ್ದ ವಾಟಾಳ್ ಕೂಡಾ ಈ ಕುರಿತು ಸುದ್ದಿ ಮಾಡುತ್ತಿಲ್ಲ. ಇನ್ನು ಮಳೆ ಬಾರದಿದ್ದುದಕ್ಕೆ ಕಪ್ಪೆ ಮದುವೆ ಮಾಡುವ ಜನತೆ, ಟೌನ್ ಹಾಲ್ ಮುಂದೆ ತೌಡು ಕುಟ್ಟುವ ಹಣತೆಗಳೂ ಮೌನಕ್ಕೆ ಜಾರಿವೆ. ಅಂದರೆ ರಾಮರಾಜ್ಯಕ್ಕೆ ಅತ್ಯಂತ ಸಮೀಪವೆನ್ನಬಹುದಾದ ಬಹುತ್ವದ ವ್ಯವಸ್ಥೆ ಕೂಡಾ ಅತ್ಯಂತ ಕಳಪೆಯಾಗುವುದಕ್ಕೆ ಇದು ನಿದರ್ಶನವಾಗಿದೆ. ಅಂದರೆ ಈ ಬಹುತ್ವದ ಮಾದರಿ ಎನ್ನಬಹುದಾದ ಕಲ್ಪನೆ ಕೂಡಾ ಹುಸಿಯಾಗಿದೆ.

ಹಾಗಿದ್ದರೆ ಇದನ್ನು ಸರಿಪಡಿಸುವ ಮಾರ್ಗ?

ಇದನ್ನು ಸರಿಪಡಿಸಲೆಂದೇ ಸಂವಿಧಾನಿಕವಾಗಿ ಸಮತೋಲನ ಮತ್ತು ನಿಯಂತ್ರಣಗಳನ್ನು ಹೊಂದಿ, ಅಧಿಕಾರವನ್ನು ವಿಭಜಿಸಲಾಗಿರುತ್ತದೆ. ಅಂತಹ ಸಮತೋಲಿತ ನಿಯಂತ್ರಣ ಮತ್ತು ಪ್ರತಿಬಂಧನ ಮತ್ತು ಅಧಿಕಾರ ವಿಕೇಂದ್ರೀಕರಣಗಳು ನಮ್ಮ ಸಂವಿಧಾನದಲ್ಲಿ ಇಲ್ಲವೇ? ಇರಬಹುದು, ಆದರೆ ಪರಿಣಾಮಕಾರಿಯಾಗಿಲ್ಲ ಎಂಬುದನ್ನು ಈ ಎಲ್ಲಾ ಪರಿಸ್ಥಿತಿಗಳು ತೋರಿಸಿಕೊಡುತ್ತಿವೆ.

ಮೇಲಾಗಿ ಇಂತಹ ಬಹುತ್ವದ ಸರ್ಕಾರ ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೇ ಕೇಂದ್ರದಲ್ಲಿ ಕೂಡಾ ಈ ಮೊದಲು ಇದ್ದಿತು.  ಆ ಬಹುತ್ವದ ಸರ್ಕಾರದ ವೈಫಲ್ಯವನ್ನು ಮನಗಂಡೇ  ಜನ ಇಂದಿನ ಟೋಟಲಿಟೇರಿಯನ್ ಸರ್ಕಾರವನ್ನು ಆರಿಸಿದ್ದಲ್ಲದೇ ಮತ್ತೊಮ್ಮೆ ಅದನ್ನೇ ಆರಿಸಿ ಅನುಮೋದಿಸಲಿದೆಯೆಂದು ಸಮೀಕ್ಷೆಗಳು ತಿಳಿಸಿವೆ. ಏತಕ್ಕಾಗಿ ಜನತೆ ಇಂತಹ ಟೋಟಲಿಟೇರಿಯನ್ ಯಾ ಸರ್ವಾಧಿಕಾರಿ ಸರ್ಕಾರವನ್ನು ಆರಿಸುತ್ತಿದ್ದಾರೆ?

ಕೇವಲ ಸ್ವಲ್ಪ ಪ್ರಾಮಾಣಿಕತೆ, ಗಟ್ಟಿ ನಿಲುವು, ದಿಟ್ಟ ಮಾತಿಗೆ ಇಡೀ ದೇಶ ಮರುಳಾಗುವಂತಾಗಿದೆ ಎಂದರೆ ಅದಕ್ಕೆ ಆ ವ್ಯಕ್ತಿ ಕಾರಣನಲ್ಲ, ಆತನ ಯಾವುದೇ ತಂತ್ರಗಳೂ ಕಾರಣವಲ್ಲ.  ಕಿಂದರಿಜೋಗಿಯ ತುತ್ತೂರಿಗೆ ತಲೆದೂಗಿ ಬಲಿಯಾಗುವಷ್ಟು ಜನ ಮೂರ್ಖರೇ?

ಆದರೆ ಅಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುವುದಾದರೆ ಅದಕ್ಕೆ ಅಂತಹ ದೇಶ ಸಾಗಿಬಂದ ಸುಧೀರ್ಘ ಬೌದ್ಧಿಕ ದಿವಾಳಿತನ, "ಆತ್ಮಸಾಕ್ಷಿ" ಮತ್ತದರ ಧಾಷ್ಟ್ಯತೆಗಳು ಕಾರಣಗಳೇ ಹೊರತು, ಭಾರತದಂತಹ ವೈವಿಧ್ಯತೆಯ ದಟ್ಟ ಜನಸಂಖ್ಯೆಯ ನಾಡು ಯಾವುದೇ ರೀತಿಯ ತಂತ್ರಗಳಿಗೆ ಏಕಪಕ್ಷೀಯವಾಗಿ ತುತ್ತೂರಿಯ ಸಂಗೀತ ನಿನಾದಕ್ಕೆ ಬಲಿಯಾಗುತ್ತಿದೆ ಎಂಬುದು ಸುಳ್ಳು.

ಹತಾಶೆಗೊಳಗಾದ ಜನತೆ, ’ಮುಳುಗುವವನಿಗೆ ಹುಲ್ಲುಕಡ್ಡಿ ಆಸರೆ’ ಎಂಬ ಭರವಸೆಯನ್ನು ನೆಚ್ಚಿಕೊಂಡು ಮೋದಿಯೊಂದಿಗಿದ್ದಾರೆಯೇ ಹೊರತು ಯಾವುದೇ ಪವಾಡಸದೃಶ ಬದಲಾವಣೆಯನ್ನು ಬಯಸಿಯಲ್ಲ. ಭರವಸೆಗಳನ್ನು ಇಟ್ಟುಕೊಳ್ಳುವುದು ಭಕ್ತಿ ಎನಿಸಿದರೆ ಅದಕ್ಕಿಂತ ಬೌದ್ಧಿಕ ದಿವಾಳಿತನ ಮತ್ತೊಂದಿಲ್ಲ.

ಇಂದು ದೇಶವನ್ನು ವಿಭಜಿಸುತ್ತಿರುವವರು ಯಾವುದೋ ಒಂದು ಭರವಸೆಯನ್ನು ಹೊತ್ತ ಜನರಲ್ಲ. ಸತ್ತ ಸಂಚಲನಹೀನ ಪಂಥಗಳಿಗೆ ಅಲವತ್ತುಕೊಂಡ ಜನರು ವಿಭಜಿಸುತ್ತಿದ್ದಾರೆ. ಅವರ ನಿಲುವು ಅಭಿಪ್ರಾಯಗಳೇ ದ್ವಂದ್ವದ ಗೂಡಾಗಿವೆ.  ಒಂದೆಡೆ ಸಂವಿಧಾನ ಸಧೃಢವಾಗಿದೆ ಎನ್ನುತ್ತಾರೆ. ಮತ್ತೊಂದೆಡೆ ವ್ಯವಸ್ಥೆ ಟೋಟಲಿಟೇರಿಯನ್ ಆಗಿದೆ ಬಹುತ್ವ ಬೇಕೆನ್ನುತ್ತಾರೆ. ಆ ದ್ವಂದ್ವವನ್ನು ಇಂದಿನ ವಾಸ್ತವದ ಹಿನ್ನೆಲೆಯಲ್ಲಿ ಅರ್ಥಮಾಡಿಕೊಂಡಿದ್ದಾರೋ ಅಥವಾ ಕುರುಡು ಜಾಣತನವನ್ನು ತೋರುತ್ತಿದ್ದರೋ ಅರಿಯದು. 

ಒಟ್ಟಿನಲ್ಲಿ, ಮುಕ್ತ ಮನಸ್ಸಿನ ಕ್ರಿಯಾಶೀಲ ವೈಚಾರಿಕತೆಯ ಮೇಲೆ ಪ್ರಜ್ಞಾವಂತರ ಚಿಂತನೆ ರೂಪುಗೊಂಡಿದ್ದರೆ ಇಂದು ದ್ವಂದ್ವ, ವಿಭಜನೆ, ನಿಷ್ಕ್ಟ್ರಿಯತೆಗಳೇ ಇರುತ್ತಿರಲಿಲ್ಲ. ಅಂದಹಾಗೆ, ಮೋದಿಯ ಸರ್ಕಾರ ಬಹುತ್ವದ ಸರ್ಕಾರ. ಅದರಲ್ಲೂ ಅನೇಕ ಮಿತ್ರಪಕ್ಷಗಳಿದ್ದು ಅವೆಲ್ಲವೂ ತಮ್ಮ ಮೋದಿಯನ್ನು ತಮ್ಮ ಸಂಸದೀಯ ನಾಯಕನೆಂದು ಒಪ್ಪಿಕೊಂಡಿದ್ದಾರೆ. ಹೀಗಿದ್ದಾಗ ಈ "ಟೋಟಲಿಟೇರಿಯನ್" ಪದ ಹೇಗೆ ಎಲ್ಲಿಂದ ಯಾರಿಂದ ಬಂದಿತು? ಜನರನ್ನು ಏನೂ ಗೊತ್ತಿರದ ಮತ್ಸ್ಯಬುದ್ಧಿ ಮೂರ್ಖರೆಂದು ತಿಳಿದು ಈ ರೀತಿ ಬಣ್ಣ ಹಚ್ಚುತ್ತಿದ್ದಾರೆಯೇ ಅಥವಾ ನಿಜಕ್ಕೂ ಕಸಿವಿಸಿಯ ಆಘಾತದಲ್ಲಿ ಬಡಬಡಾಯಿಸುತ್ತಿರುವರೇ?!?

ಈ ರೀತಿಯ ದ್ವಂದ್ವಗಳ ಗೂಡಾಗಿರುವುದರಿಂದಲೇ  ಇಂದು ಬುದ್ಧಿಜೀವಿಗಳು ನಗೆಪಾಟಲಿಗೀಡಾಗುತ್ತಿರುವುದು. ಮಂತ್ರಕ್ಕಿಂತ ಉಗುಳು ಜಾಸ್ತಿಯಾದರೆ ಏನಾಗುತ್ತದೋ ಅದಾಗಿ ನೈಜ ಸಮಸ್ಯೆಗಳು ಮರೆಗೆ ಸೇರಿವೆ.  ಏನನ್ನು ಕಂಡು ಚರ್ಚಿಲ್ ಕೆಳಕಂಡಂತೆ ಹೇಳಿದ್ದನೋ ಗೊತ್ತಿಲ್ಲ. ಆದರೆ ಅದನ್ನು ನಿಜ ಮಾಡಿಯೇ ತೀರುವೆವೆಂದು ಭಾರತೀಯ ಸಮಾಜವಾದಿಗಳು ಪಣ ತೊಟ್ಟು ಇಂದು ಜಾರಿಗೊಳಿಸಿರುವಂತಿದೆ.

Socialism is a philosophy of failure, the creed of ignorance, and the gospel of envy, its inherent virtue is the equal sharing of misery.

Winston Churchill.


ಚೌಕಿದಾರ ವರ್ಸಸ್ ಫೌಜುದಾರ

"ಮುಳುಗುತ್ತಿರುವವನಿಗೆ ಹುಲ್ಲುಕಡ್ಡಿಯೂ ಆಸರೆ" ಎಂಬಂತೆ ಯಾರೋ ಒಬ್ಬ ಮಾಜಿ ಸೈನಿಕನ ಹಿನ್ನೆಲೆ ಗೊತ್ತಿಲ್ಲದೆ, ಅರಿತುಕೊಳ್ಳುವ ಪ್ರಯತ್ನವನ್ನೂ ಮಾಡದೆ, ಕೇವಲ ಆತನ ಟ್ರೋಲು ನಂಬಿಕೊಂಡು ಆತನಿಗೆ ಒಂದು ಪ್ರಮುಖ ರಾಜಕೀಯ ಪಕ್ಷ ವಾರಾಣಸಿಯಿಂದ ಸಂಸತ್ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಕೊಟ್ಟಿತು.

ಆತನನ್ನು ನಾಡಿನ ಸಮಸ್ತ ಪ್ರಜ್ಞಾವಂತರು, ವಿಶ್ವವಿದ್ಯಾಲಯದ ಪ್ರೊಫೆಸರರುಗಳು ಬೆಂಬಲಿಸಿ ಆನಂದಭಾಷ್ಪ ಸುರಿಸುತ್ತಾ ಚೌಕಿದಾರನಿಗೆ ಫೌಜುದಾರ ಎಂದು ಉದ್ಘೋಷಗಳನ್ನು ಜೋಡಿಸಿದರು. 

ಆತನ ಅಭ್ಯರ್ಥಿತನ ಸಂವಿಧಾನಿಕ ಕಾನೂನಿನ ಪ್ರಕಾರ ತಿರಸ್ಕೃತಗೊಂಡಿದೆ!

ಒಂದು ಅತಿ ಸಣ್ಣ ಕಾನೂನನ್ನು ತಿಳಿದುಕೊಳ್ಳದ ಈ ಪಕ್ಷಗಳು ಏನು ಆಡಳಿತ ನಡೆಸಿಯಾವು?

ಈ ಪ್ರೊಫೆಸರರುಗಳು, ಸಂಶೋಧನೆ ಬಿಡಿ, ಏನನ್ನು ಬೋಧಿಸಿಯಾರು?

ಮುಳುಗುತ್ತಿರುವವರನ್ನು ಎತ್ತಿ ಸಂರಕ್ಷಿಸುವ ಕಾರ್ಯವನ್ನು ದೇಶ ತ್ವರಿತವಾಗಿ ಮಾಡಲಿ.

ಹಾಂ, ಅದಕ್ಕೆ ನನ್ನ ಹ್ಯಾಷ್ ಟ್ಯಾಗ್ ಹೇಳುವುದು..

#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

ವ್ಯಂಗ್ಯ

ಇದು ಭಾರತದ ವರ್ತಮಾನವನ್ನು ಯಥಾವತ್ತಾಗಿ ತೆರೆದಿಡುವ ವ್ಯಂಗ್ಯ!  ಇಲ್ಲಿ ಇದು ಸಾಧ್ವಿಯೋರ್ವಳ ಮತ್ತು ಸೈನಿಕನೋರ್ವನ ನಾಮಪತ್ರಕ್ಕಿಂತ ಭಾರತದ ಅಸ್ಮಿತೆ, ಪ್ರಜಾಪ್ರಭುತ್ವವನ್ನೇ ವ್ಯಂಗಿಸುವ ಚಿತ್ರ! ಆದರೆ ಅದು ಆ ರೀತಿಯಾಗಿ ಎಲ್ಲಿಯೂ ಬಿಂಬಿತಗೊಂಡಿಲ್ಲ. ಇಲ್ಲಾ ಸಾಧ್ವಿಯೆಡೆ ಅಥವಾ ಸೈನಿಕನೆಡೆ ವಾಲಿಕೊಂಡು ಬಿಂಬಿತಗೊಂಡಿದೆ.

ಗಾಬರಿಯ ಸಂಗತಿ ಯಾವುದೆಂದರೆ ಇಂತಹ ಯಕಶ್ಚಿತ್ ಸಂಗತಿಯನ್ನು ನನ್ನ ಬಳಗದಲ್ಲಿರುವ ಮುಗ್ಧ ಭಕ್ತರಾಗಲೀ ಅಥವಾ ಮಾಧ್ಯಮ/ಬುದ್ಧಿಜೀವಿಗಳಾಗಲಿ ಭಿನ್ನವಾಗಿ ಎತ್ತದೇ, ಎಡ ಅಥವಾ ಬಲ ಆಗಿ ವಾಲಿಕೊಂಡು ಸಮಾನತೆಯನ್ನು ಮೆರೆದಿರುವುದು!!!

ಪೂಲನ್ ದೇವಿಯಿಂದ ಪಪ್ಪು ಯಾದವನವರೆಗೆ, ಮತ್ತು ಈಗಿನ ಸಾಧ್ವಿ ಸೈನಿಕನವರೆಗೆ ಸಮಾಜದಲ್ಲಿ ಕ್ರಿಮಿನಲ್ ಅಥವಾ ಸ್ಪರ್ಧಿಸಲು ಅಸಿಂಧು ಎನ್ನಿಸಿಕೊಂಡವರು ಚುನಾವಣೆಗಳಲ್ಲಿ ಸ್ಪರ್ಧಿಸುತ್ತಿದ್ದಾರೆ. ಆಗೆಲ್ಲಾ ಮೋದಿ ಇರಲಿಲ್ಲ, ಈಗಿದ್ದಾನೆ. ಅಂದರೆ ಮೋದಿ ಒಂದು ವ್ಯತ್ಯಾಸವೇ ಆಲ್ಲ!

ಇಲ್ಲಿ ಘನವಾಗಿ ಎತ್ತಬೇಕಾದ ವಿಷಯ, ನಮ್ಮ ಸಂವಿಧಾನ ಮತ್ತು ನಮ್ಮ ನ್ಯಾಯಾಂಗ!

ಇಂತಹದ್ದಕ್ಕೆ ಅವಕಾಶ ನೀಡಿರುವುದು ಆ ಸಾಂವಿಧಾನಿಕ ಮತ್ತು ನ್ಯಾಯಾಂಗ ವ್ಯವಸ್ಥೆಯ ವಿಫಲತೆ ಎಂದೇಕೆ ಈ ಪ್ರಜ್ಞಾವಂತ ಬಳಗ ಪ್ರಸ್ತುತ ಪಡಿಸುತ್ತಿಲ್ಲ, ಅದರಲ್ಲೂ ಸಂವಿಧಾನವನ್ನು ಉಳಿಸುವುದೇ ತಮ್ಮ ಜೀವನದ ಪರಮೋಚ್ಚ ಗುರಿ ಎಂದು ಬಿಂಬಿಸಿಕೊಂಡ ಪತ್ರಕರ್ತರು, ಪ್ರೊಫೆಸರರುಗಳು, ಕಲಾವಿದರು, ಮತ್ತು ಬುದ್ಧಿಜೀವಿಗಳು...? 

ಇಂದು ಇಂತಹ ಸಾಮಾನ್ಯ ಸಂಗತಿಯನ್ನು ಅರಿಯದಷ್ಟು ಮೌಢ್ಯವನ್ನು ಶಿಶುವಿಹಾರದಿಂದಲೇ ಲಕ್ಷ ಲಕ್ಷ ಫೀಯನ್ನು ಕಕ್ಕಿ ಪ್ರಜ್ಞಾವಂತರಾದ ವಿದ್ಯಾವಂತ ಸಮಾಜ ಪಡೆದುಕೊಂಡ ಶಿಕ್ಷಣದ ಬಳುವಳಿಯೋ, ಅಂಬೇಡ್ಕರರ ಹೆಸರು ಹೇಳುತ್ತಾ ಸಂವಿಧಾನದ/ಸಮಾನತೆಯ ದಿವ್ಯಜ್ಞಾನವನ್ನು ಪಡೆದುಕೊಂಡೆವೆಂಬುವರ ಮತಿ(ತೀ)ಯೋ, ಪೂರ್ವಯೋಜಿತ ನಿಯಮಬದ್ಧತೆಯೋ, ಅಥವಾ ಪಾಪಿ ಪೇಟ್ ಕಾ ಸವಾಲೋ... ಎಸ್ಸೆಸ್ಸೆಲ್ಸಿಯಲ್ಲಿ ಫೇಲಾದ ನಾನು ಅರಿಯೆ!

ಇಂತಹ ಅತೀ ಸಾಮಾನ್ಯ ಸಂಗತಿ, ಅಂತಹ ಅಪ್ರಮೇಯ, ಅದ್ವಿತೀಯ, ಅಸಾಮಾನ್ಯರಿಗೆ ಹೊಳೆಯದಿರುವುದು ನನ್ನ ಮೂಢಮತಿಯ ಎಲ್ಲೆಯನ್ನು ಮೀರಿದೆ.

#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ