ಜಾತ್ಯಾತೀತ ಅಮೆರಿಕಾದಲ್ಲಿ ಜಾತೀಯತೆ


ಜಾತಿ ಕೊಡುವಷ್ಟು ರೋಮಾಂಚನವನ್ನು ಯಾವ ನೀತಿಯೂ ಕೊಡುವುದಿಲ್ಲ! ರೈತ ಮುಖಂಡ ಪುಟ್ಟಣ್ಣಯ್ಯ

ರೈತ ಮುಖಂಡರಾದ ಪುಟ್ಟಣ್ಣಯ್ಯನವರ ಮೇಲಿನ ಮಾತು ಅತ್ಯಂತ ಮಾರ್ಮಿಕವಾಗಿದೆ.  ಈ ಜಾತೀಯತೆ ಎಂಬುದು ಭಾರತದಲ್ಲಷ್ಟೇ ಅಲ್ಲದೇ  ಭಾರತೀಯರಿರುವ ವಿಶ್ವದೆಲ್ಲೆಡೆ ಪಸರಿಸಿದೆ.  ’ಹಲವು ಕಾಲ ಹಂಸೆಯ ಸಂಗದಲ್ಲಿದ್ದರೇನು, ಬಕ ಶುಚಿಯಾಗಬಲ್ಲುದೇ? ಗಂಗಾನದಿಯಲ್ಲಿದ್ದರೇನು, ಪಾಷಾಣ ಮೃದುವಾಗಬಲ್ಲುದೇ? ಕಲ್ಪತರುವಿನ ಸನ್ನಿಧಿಯಲ್ಲಿದ್ದರೇನು, ಒಣ ಕೊರ್‍ಅಡು ಕೊನರಿ ಫಲವಾಗಬಲ್ಲುದೇ? ಕಾಶೀಕ್ಷೇತ್ರದಲ್ಲಿ ಒಂದು ಶುನಕವಿದ್ದರೇನು, ಅದರ ಹಾಲು ಪಂಚಾಮೃತಕ್ಕೆ ಸಲುವುದೇ? ತೀರ್ಥದಲೊಂದು ಗಾರ್ದಭನಿದ್ದರೇನು, ಕಾರಣಿಕನಾಗಬಲ್ಲುದೇ? ಖಂಡುಗ ಹಾಲೊಳಗೊಂದು ಇದ್ದಲಿಯಿದ್ದರೇನು, ಬಿಳುಹಾಗಬಲ್ಲುದೇ? ಇದ ಕಾರಣ ಕೂಡಲಸಂಗನ ಶರಣರ ಸನ್ನಿಧಿಯಲ್ಲಿ ಅಸಜ್ಜನನಿದ್ದರೇನು, ಸದ್ಭಕ್ತನಾಗಬಲ್ಲನೇ?’ ಎಂಬ ವಚನದಂತೆ ಅಮೇರಿಕಾದಲ್ಲಿದ್ದರೇನು ಭಾರತದಲ್ಲಿದ್ದರೇನು, ವಿದ್ಯೆಯಿದ್ದರೇನು ಅವಿದ್ಯೆಯಾದರೇನು, ಭಾರತೀಯ ಜಾತಿಮುಕ್ತನಾಗಬಲ್ಲನೇ?

ಸಾಮಾನ್ಯವಾಗಿ ಇಲ್ಲಿನ ಭಾರತೀಯರು ತಮ್ಮ ಅಲ್ಪಸಂಖ್ಯೆಯ ಕಾರಣದಿಂದಲೋ, ವಿಶಿಷ್ಟ ಸಂಸ್ಕೃತಿಯ ದೆಸೆಯಿಂದಲೋ ಅಷ್ಟಾಗಿ ಮುಖ್ಯವಾಹಿನಿಯಲ್ಲಿ ಬೆರೆಯದೇ ತಮ್ಮ ತಮ್ಮ ಭಾರತೀಯ ಮೂಲದ ಸ್ನೇಹಿತರುಗಳನ್ನೇ ಕಂಡುಕೊಂಡು ಸ್ನೇಹಸಂಬಂಧಗಳನ್ನು ಹೊಂದಿರುತ್ತಾರೆ. ಹಾಗೆಯೇ ನನಗೂ ಕೂಡ ಅನೇಕ ಭಾರತೀಯ ಮೂಲದ ಸ್ನೇಹಿತರಿದ್ದಾರೆ. ಅವರಲ್ಲಿ ಅನೇಕರು ಹೆಚ್ಚಿನದಾಗಿ ಆಂಧ್ರಪ್ರದೇಶದವರಾಗಿದ್ದಾರೆ. ಎಪ್ಪತ್ತರ ದಶಕ ಭಾರತೀಯ ಮೂಲದ ಡಾಕ್ಟರರುಗಳ ವಲಸೆಯ ಅಲೆಯಾದರೆ, ತೊಂಬತ್ತರ ದಶಕ ಐ.ಟಿ. ವಲಸಿಗರ ಅಲೆಯಾಯಿತು. ಈ ಅಲೆಗಳಲ್ಲಿ ಬಂದು ನೆಲೆಸಿರುವ ಭಾರತೀಯ ಮೂಲದವರು ತಮ್ಮ ತಮ್ಮ ಭಾಷೆಗಳ/ರಾಜ್ಯಗಳ ಹೆಸರಿನಲ್ಲಿ ಸಂಘ, ಸಂಸ್ಥೆಗಳನ್ನು ಸ್ಥಾಪಿಸಿಕೊಂಡು ತಮ್ಮ ಸಂಸ್ಕೃತಿಯ ನೆನಹನ್ನು ತಮ್ಮತಮ್ಮಲ್ಲೇ ಹಂಚಿಕೊಳ್ಳುತ್ತಾರೆ. ಹೀಗಿದ್ದ ಸಂಘ/ಸಂಸ್ಥೆಗಳಲ್ಲಿ ತಮ್ಮ ತಮ್ಮ ಪ್ರೋತ್ಸಾಹಕರ ಸಂಖ್ಯೆ ಏರಿದಂತೆ ನಿಧಾನವಾಗಿ ಭಾರತದ ಇತರೆ ಸಂಸ್ಕೃತಿಗಳಾದ ಜಾತೀಯತೆ, ಗುಂಪುಗಾರಿಕೆ, ರಾಜಕೀಯ, ಪಕ್ಷಭೇದಗಳು ಏರುತ್ತಿವೆ.

ವೈಯುಕ್ತಿಕವಾಗಿ ಇಂತಹ ಯಾವುದೇ ಸಂಘಗಳೊಂದಿಗೆ ಸಂಬಂಧವಿರದ ನನಗೆ ಪ್ರತ್ಯಕ್ಷ ಅನುಭವವಾಗಿರದಿದ್ದರೂ ಪರೋಕ್ಷವಾಗಿ ಆಗಿದೆ. ಕೆಲವು ವರ್ಷಗಳ ಹಿಂದೆ ಕೆಲಸದ ನಿಮಿತ್ತ ಪ್ರತಿ ವಾರವೂ ನ್ಯೂಯಾರ್ಕ್ ನಗರಕ್ಕೆ ಹೋಗುತ್ತಿದ್ದ ನಾನು, ಕೆಲವು ವರ್ಷಗಳ ಹಿಂದೆ ಒಂದು ಬೇಸಿಗೆಯಲ್ಲಿ ನನ್ನ ತೆಲುಗು ಮಿತ್ರರನ್ನು ಕಾಣುವ ಎಂದು ಒಂದು ವೀಕೆಂಡ್ ಅಲ್ಲಿಯೇ ಉಳಿದುಕೊಂಡೆನು. ಅವರೆಲ್ಲ ನನ್ನನ್ನು "ಈ ದಿನ ಆಂಧ್ರದ ಮಾಜಿ ಮುಖ್ಯಮಂತ್ರಿ ಚಂದ್ರಬಾಬುನಾಯ್ಡುಗೆ ಒಂದು ಸನ್ಮಾನವನ್ನು ಮಾಡುತ್ತಿದ್ದೇವೆ ನಡೆ ಹೋಗುವ" ಎಂದು ಕರೆದುಕೊಂಡು ಹೋದರು. ಎಲ್ಲಿ ನೋಡಿದರೂ ಹಳದಿ ವಸ್ತ್ರವನ್ನು ಹಣೆಗೆ ಕಟ್ಟಿಕೊಂಡಿದ್ದ ಜನರು ಕಾಣುತ್ತಿದ್ದರು. ಯಾವುದೋ ಒಂದು ಜಾತಿಯವರು ವೃತಗಳನ್ನೋ ಹಬ್ಬಗಳನ್ನೋ ಆಚರಿಸುವಾಗ ಹಳದಿ ಬಟ್ಟೆ ತೊಡುವುದನ್ನು ಬೆಂಗಳೂರಿನಲ್ಲಿ ನೋಡಿದ್ದೆನು. ಆ ರೀತಿಯ ವೃತವನ್ನು ಈ ಹಳದಿ ಪಟ್ಟಿ ಜನರು ಆಚರಿಸುತ್ತಿರಬಹುದೆಂದುಕೊಂಡು ಸುಮ್ಮನಾದರೂ ಅದು ನನ್ನನ್ನು ಭಾಧಿಸುತ್ತಿದ್ದಿತು. ಪಕ್ಕದಲ್ಲಿದ್ದ ನನ್ನ ಸ್ನೇಹಿತನನ್ನು ಮೆಲ್ಲಗೆ ಕೇಳಿದಾಗ ಅದು ತೆಲುಗುದೇಶಂ ಪಕ್ಷದ ಬಣ್ಣವೆಂದು ಹೇಳಿದನು! ನಂತರ ತಿಳಿದುದುದೇನೆಂದರೆ ಅದೊಂದು ತೆಲುಗು ಕಂ ದೇಶಂ ಸಭೆಯೆಂದೂ, ಚಂದ್ರಬಾಬುನಾಯ್ಡು ತಮ್ಮ ಪಕ್ಷಕ್ಕೆ ಅಮೇರಿಬೆಂಬಲಿಗರಿಂದ ಹಣ ಶೇಖರಿಸಲು ಒಂದು ತಿಂಗಳ "ಫಂಡ್ ರೈಸಿಂಗ್" ಕ್ಯಾಂಪೇನ್ ಗೆ ಬಂದಿರುವುದಾಗಿಯೂ, ಮತ್ತವರಿಗೆ ಇಲ್ಲಿ ತಿರುಗಲು ಒಬ್ಬ ಅಭಿಮಾನಿ ಚಾರ್ಟರ್ಡ್ ಫ್ಲೈಟ್ ಅನ್ನು ಇಪ್ಪತ್ತು ದಿನಗಳಿಗೆ ಕೊಡಿಸಿರುವುದಾಗಿಯೂ ಮತ್ತು ಈ ರೀತಿಯ ಸಾಕಷ್ಟು ಅಭಿಮಾನಿಗಳು ಟಿಕೇಟ್ ಆಕಾಂಕ್ಷಿಗಳಾಗಿ, ರಾಜ್ಯಪ್ರಶಸ್ತಿ ಆಕಾಂಕ್ಷಿಗಳಾಗಿ, ಇಲ್ಲವೇ ಮತ್ಯಾವುದೋ ಉದ್ದೇಶದ ಆಕಾಂಕ್ಷಿಗಳಾಗಿ ಸಾಕಷ್ಟು ಬೆಂಬಲವನ್ನು ನಾಯ್ಡುಗಳಿಗೆ ತೋರುತ್ತಾರಂತೆ! ಅದಕ್ಕೆ ಪೂರಕವಾಗಿ ಆ ಸಭೆಯಲ್ಲಿ ಒಬ್ಬ ಉದ್ಯಮಿ, ಬಹುಶಃ ಟಿಕೆಟ್ ಆಕಾಂಕ್ಷಿ ಇರಬಹುದೇನೋ, ಒಂದು ಚಿನ್ನದ ಗದೆ ಮತ್ತು ಕಿರೀಟವನ್ನು ನಾಯ್ಡುಗೆ ಅರ್ಪಿಸಿದನು.

ನಾಯ್ಡುರವರಿಗೆ ಏನೆನ್ನಿಸಿತೋ ಕೂಡಲೇ ತಮ್ಮ ಪಕ್ಕದಲ್ಲಿ ಕೂತಿದ್ದ ಎಡಿಸನ್ ಸಿಟಿ ಮೇಯರ್ ಅವರಿಗೆ ಆ ಕಿರೀಟವನ್ನು ತೊಡಿಸಿ, ಗದೆಯನ್ನು ಕೂಡ ಅವರ ಹೆಗಲಿಗೇರಿಸಿದರು! ಇದರಿಂದ ಆನಂದಗೊಂಡ ಎಡಿಸನ್ ಮೇಯರ್ ಆ ಕೊಡುಗೆಗಳನ್ನು ತನ್ನ ಮನೆಗೆ ಹೊತ್ತೊಯ್ದರೆ, ಕೊಟ್ಟ ಉದ್ಯಮಿ ಪೆಚ್ಚಾಗಿದ್ದ! ಅಂದು ನನಗೆ ಅಪ್ಪಟ ಭಾರತದ ಒಂದು ರಾಜಕೀಯ ಸಭೆಯ ಅನುಭವ ಬಹುಕಾಲದ ನಂತರ ಆಗಿತ್ತು. ಮರುದಿನ ಮೋಟಾರ್ ಸೈಕಲ್ ರ್‍ಯಾಲಿ ಕೂಡ ಇರುವುದೆಂದೂ, ರ್‍ಯಾಲಿಯ ನಂತರ ಉಚಿತ "ವೈನ್ ಅಂಡ್ ಡೈನ್" ಪಾರ್ಟಿ ಇರುವುದೆಂದನು. ಸಾಮಾನ್ಯವಾಗಿ ಮೋಟಾರ್ ಸೈಕಲ್ಲುಗಳನ್ನು ಹೊಂದಿರದ ಇಲ್ಲಿನ ಭಾರತೀಯರಲ್ಲಿ ಅದೆಷ್ಟು ಮಂದಿ ಆ ರ್‍ಯಾಲಿಗೆ ಬರುವರೋ ಎಂದು ನಾನು ಸಂದೇಹವನ್ನು ವ್ಯಕ್ತಪಡಿಸಿದ್ದಕ್ಕೆ, ನನ್ನ ಮಿತ್ರನು ರ್‍ಯಾಲಿಗಾಗಿಯೇ ಇಲ್ಲಿನ ಮೋಟಾರ್ ಸೈಕಲ್ ಕ್ಲಬ್ಬುಗಳನ್ನು ಬುಕ್ ಮಾಡಿಕೊಂಡಿದ್ದು, ಈ ರ್‍ಯಾಲಿಗೆ ಬರುವವರೆಲ್ಲಾ ಬಿಳಿ/ಕರಿಯ ಅಮೇರಿಕನ್ನರೆಂದನು! ಒಂದು ರೀತಿ ಭಾರತೀಯ ಸಿನೆಮಾಗಳಲ್ಲಿ ಬಿಳಿ ಸಹನಟ/ನಟಿಯರ ನೃತ್ಯಗಳಿರುವಂತೆ! ಭಾರತದ ಚುನಾವಣಾ ಸಮಯದಲ್ಲಿ ಹೆಂಡ, ಬಿರ್ಯಾನಿ ಹಂಚುವುದರ ಸುಧಾರಿತ ಕ್ರಮದಂತೆ, ಅಂದಿನ ಸಭೆಯಲ್ಲಿ ಕೂಡಾ ಉಚಿತ ವೈನ್ ಇದ್ದಿತು!

ಮತ್ತೊಮ್ಮೆ ಮತ್ತದೇ ಸ್ನೇಹಿತರನ್ನು ಕಾಣಲು ಮತ್ತೆ ನ್ಯೂಜೆರ್ಸಿಗೆ ಹೋಗಿದ್ದೆನು. ಈ ಬಾರಿ ತೆಲುಗು ನಟ ಬಾಲಕೃಷ್ಣನ ಯಾವುದೋ ಸಿನಿಮಾ ಇಲ್ಲಿಯೂ ಬಿಡುಗಡೆಯಾಗಿ ಅದರ ಪ್ರಚಾರಕ್ಕೆ ಖುದ್ದು ಬಾಲಕೃಷ್ಣ ಬಂದಿದ್ದನು. ಅವನ ಸಿನಿಮಾ ಬಿಡುಗಡೆಯ ದಿನ ಮತ್ತದೇ ಹಳದಿ ಪಟ್ಟಿಯ ಅಭಿಮಾನಿಗಳು ಹಳದಿ ಬಾವುಟಗಳನ್ನ್ಹಿಡಿದು ಬೆಂಬಲವನ್ನು ವ್ಯಕ್ತಪಡಿಸಿದರೆ, ಚಿರಂಜೀವಿ ಅಭಿಮಾನಿಗಳು ಕಪ್ಪು ಪಟ್ಟಿ, ಬಾವುಟಗಳನ್ನ್ಹಿಡಿದು ವಿರೋಧವನ್ನು ತೋರಿಸಿದ್ದರು. ವಿಚಾರಿಸಲಾಗಿ ಕಮ್ಮ ಜಾತಿಯ ಬಾಲಕೃಷ್ಣನನ್ನು ಕಾಪು ಜಾತಿಯವರು ವಿರೋಧಿಸುತ್ತಿದ್ದಾರೆ ಎಂದು ತಿಳಿಯಿತು. ಅದಕ್ಕೂ ಮುನ್ನ ಚಿರಂಜೀವಿಯ ಒಂದು ಚಿತ್ರಕ್ಕೂ ಇದೇ ಮರ್ಯಾದೆ ಸಿಕ್ಕಿತ್ತಂತೆ!

ಇಲ್ಲಿನ ತೆಲುಗು ಸಂಘಗಳು ತಾನಾ, ಬಾನಾ ಗಾನಾಗಳೆಂದು ಕಮ್ಮ, ರೆಡ್ಡಿ, ಕಾಪು ಜಾತಿಗಳಿಗನುಗುಣವಾಗಿ ಒಂದೊಂದು ತಲೆಯೆತ್ತಿವೆ!

ಹಾಗೆಯೇ ಆಂಧ್ರದಲ್ಲಿ ಚುನಾವಣೆಗಳಾದರೆ ಇಲ್ಲಿನ ತೆಲುಗರ ಬಿ.ಪಿ ಏರುತ್ತದೆ. ಆ ಬಿ.ಪಿ.ಯನ್ನು ಇಳಿಸಲು ಹಳದಿ ಪಟ್ಟಿ ಕಟ್ಟಿಕೊಂಡು ಕ್ಯಾಲಿಫೋರ್ನಿಯಾದ ಉದ್ದಗಲಕ್ಕೂ ಸೈಕಲ್ ಹೊಡೆಯುತ್ತಾರೆ!

ಇದು ಮೇಲ್ನೋಟಕ್ಕೆ ಸಿನಿಮಾ ಅಭಿಮಾನಿಗಳಂತೆ ಕಂಡರೂ ಇಲ್ಲಿ ಜಾತಿಗಳೇ ಪ್ರಮುಖವಾಗಿವೆ. ಕಮ್ಮ ಜಾತಿಯ ಪ್ರಾಬಲ್ಯವನ್ನು ಮುರಿಯಲು ಚಿರಂಜೀವಿ ಕಾಪು ಜನಗಳನ್ನು ಬೆಂಬಲಿಸಿ ರಾಜಕೀಯ ಎಂಟ್ರಿ ಆಗುತ್ತಿದ್ದಂತೆಯೇ ಈ ಜಾತೀಯತೆಯ ವಿಷ ಇಲ್ಲಿನ ತೆಲುಗು ಮೂಲದ ಭಾರತೀಯರನ್ನು ಬಹುವಾಗಿ ಆವರಿಸಿಕೊಂಡು ಬಿಟ್ಟಿತ್ತು. ಇದು ಕೇವಲ ತೆಲುಗರ ಕುರಿತಾಗಿ ಅಷ್ಟೇ ಅಲ್ಲ, ಉತ್ತರ ಭಾರತೀಯರಲ್ಲಿ ಇದು ಇನ್ನೂ ಭಯಂಕರವಾಗಿದೆ. ಅಮೇರಿಕಾದಲ್ಲಿದ್ದರೂ ಅವರು ತಮ್ಮ ರಾಜ್ಯದ ಅನ್ಯಜಾತಿಯವನಲ್ಲಿ ಸ್ನೇಹವನ್ನೂ ಮಾಡುವುದಿಲ್ಲ! ಬಿಹಾರೀ ಬ್ರಾಹ್ಮಣರು ಬನಿಯಾ ಜನಗಳನ್ನು ಸ್ವಲ್ಪ ದೂರವೇ ಇಡುತ್ತಾರೆ. ನನ್ನ ಆಪ್ತ ಬಿಹಾರೀ ಸ್ನೇಹಿತನ ಮನೆಗೆ ಅವರ ಸಂಬಂಧಿ ಶತ್ರುಘ್ನ ಸಿನ್ಹಾರವರು ಬಂದಾಗ ನಡೆದ ಗುಂಡಿನ ಪಾರ್ಟಿಯಲ್ಲಿ ಈ ವಿಷಯ ನನಗೆ ತಿಳಿಯಿತು. ಬಿಹಾರಿ ಸಂಘಗಳಲ್ಲಿ ಇದು ಇನ್ನೂ ವಿಕೋಪಕ್ಕೆ ಹೋಗುತ್ತದೆಂದು ನನ್ನ ಸ್ನೇಹಿತನು ತಿಳಿಸಿದನು.  ಅದೇ ರೀತಿ ಪಂಜಾಬಿ ಮೂಲದ ಸಿಖ್ಖರ ಗುರುದ್ವಾರಗಳಲ್ಲಿ ಒಳಪಂಗಡಗಳ ನಡುವೆ ಹೊಡೆದಾಟಗಳೇ ನಡೆದಿವೆ.

ಇದೆಲ್ಲವನ್ನು ಅರಿಯದೇ ನೋಡುವ ಇತರೇ ಅಮೇರಿಕನ್ನರು ಈ ಭಾರತೀಯರುಗಳೇ ವಿಚಿತ್ರ ಎಂದು ಮೂಗುಮುರಿಯುತ್ತಾರೆ! ಅದಕ್ಕೆ ಇರಬೇಕು, ಅನೇಕ ವಿದೇಶೀಯರು ಭಾರತೀಯರೆಂದರೆ ಪುಂಗಿ ನುಡಿಸಿ ಹಾವಾಡಿಸುವವರು, ಕೋತಿಗಳನ್ನು ಕುಣಿಸುವವರು, ಇಲಿ ಹಿಡಿದು ತಿನ್ನುವವರು, ಕತ್ತೆ, ನಾಯಿಗಳೊಂದಿಗೆ ಮುದುವೆಯಾಗುವವರು (ಮಳೆಯಾಗಲೆಂದೋ, ಪಾಪ ಪರಿಹಾರದ ನಿಮಿತ್ತವಾಗಿಯೋ ಇರಬಹುದು) ಇನ್ನೂ ಏನೇನೋ ವಿಚಿತ್ರ ಭಾರತೀಯ ಸುದ್ದಿಗಳನ್ನು ಕೇಳಿ, ಅದಕ್ಕೆ ತದ್ವಿರುದ್ಧವಾಗಿ ಇಲ್ಲಿನ ಭಾರತೀಯರು ಶುದ್ಧ ಸಸ್ಯಾಹಾರಿಗಳಾಗಿಯೋ, ಹಂದಿ/ದನವನ್ನು ತಿನ್ನದೆಯೋ, ಕತ್ತೆ ನಾಯಿಗಳನ್ನು ಬಿಡಿ, ಇಲ್ಲಿನ ಬಿಳಿ ಹುಡುಗಿಯರನ್ನೂ ಪರಿಗಣಿಸದೇ ಭಾರತೀಯರನ್ನೇ ಮದುವೆಯಾಗುವ ಭಾರತೀಯ ಸಂಸ್ಕೃತಿಯ ಇನ್ನೊಂದು ಬಗೆಯನ್ನು ನೋಡಿ, "ಇಂಡಿಯನ್ಸ್ ಆರ್ ಕ್ರೇಜಿ" ಎನ್ನುತ್ತಾರೆ.

ಈ ಜಾತಿಯ ವಿಷಗಾಳಿ ಅಮೇರಿಕಾದ ಕನ್ನಡ ಸಂಘಗಳಲ್ಲಿ ಎಷ್ಟರಮಟ್ಟಿಗಿದೆಯೋ ಗೊತ್ತಿಲ್ಲ. ನನ್ನ ಹಲವು ಕನ್ನಡ ಸ್ನೇಹಿತರು ಹೇಳುವುದೇನೆಂದರೆ ಅಲ್ಲಿಯೂ ಕೂಡ ಇದು ಸಂಖ್ಯೆಯೇರಿದಂತೆ ನಿಧಾನವಾಗಿ ಕಾಣಿಸುತ್ತಿದೆಯೆಂದು. ಮೊದಲೆಲ್ಲಾ ಇಲ್ಲಿನ ಕನ್ನಡ ಸಂಘಗಳ ಸಭೆಗಳಲ್ಲಿ, ವನಭೋಜನಗಳಲ್ಲಿ ಕೇವಲ ಸಸ್ಯಹಾರೀ ಊಟವಿರುತ್ತಿದ್ದರೆ, ಕೆಲವರು ಪ್ರತಿಭಟಿಸಿ ಭೋಜನಗಳಲ್ಲಿ ಮಾಂಸಹಾರವೂ, ವನಭೋಜನಗಳಲ್ಲಿ ಸುಟ್ಟ ಕೋಳಿಗಳೂ (ಗ್ರಿಲ್ಡ್ ಚಿಕನ್) ಸಿಗುವಂತೆ ಮಾಡಿದ್ದಾರೆಂದೂ, ಸದ್ಯಕ್ಕೆ ಈ ವಿವಾದವನ್ನು ಸಸ್ಯಾಹಾರ-ಮಾಂಸಹಾರದವರೆಗೆ ತಂದಿದ್ದಾರೆ.

ಬಹುವರ್ಷಗಳಿಂದಲೇ ಇಲ್ಲಿ ಸಾಕಷ್ಟು ಜಾತಿ ಕೂಟಗಳಿವೆ.  ಬಹುಶಃ  ತಮ್ಮ ಮಕ್ಕಳ ವಧುವರಾನ್ವೇಷಣೆಗೆ ಇವುಗಳನ್ನು ಹುಟ್ಟುಹಾಕಿದರೋ ಏನೋ ತಿಳಿಯದು ಒಟ್ಟಾರೆ ಜಾತಿಕೂಟಗಳು ಇಲ್ಲಿನ ಕನ್ನಡ ಅನಿವಾಸಿಗಳಲ್ಲಿ ಅದ್ಯಾವಾಗಲೋ ಬಂದಾಗಿದೆ. ವೀರಶೈವರೆಲ್ಲಾ ಉತ್ತರ ಅಮೇರಿಕಾ ವೀರಶೈವ ಸಂಘವನ್ನು ಎಪ್ಪಂತೆಂಟರಲ್ಲೇ ಸ್ಥಾಪಿಸಿಕೊಂಡಿದ್ದರೆ, ಅಮೇರಿಕಾ ಒಕ್ಕಲಿಗರ ಪರಿಷತ್ ತೊಂಬತ್ತೊಂದರಲ್ಲಿ ಅಸ್ತಿತ್ವಕ್ಕೆ ಬಂದಿದೆ. ಹಾಗೆಯೇ ಹವ್ಯಕರ ಸಂಘ, ಮಾಧ್ವರ ಸಂಘ, ಕೊಡವ ಸಂಘ, ಬಂಟರ ಸಂಘ, ಗೌಡ ಸಾರಸ್ವತ ಸಂಘ,  .................ಇತ್ಯಾದಿ, ಇತ್ಯಾದಿಗಳೂ ಇವೆ.

ವೀರಶೈವವೋ ಲಿಂಗಾಯತವೋ ಎಂಬ ಜಿಜ್ಞಾಸೆಯನ್ನು ಬದಿಗಿಟ್ಟು ಇಲ್ಲಿನ ವೀರಶೈವ/ಲಿಂಗಾಯತರು ತಮ್ಮ ಉತ್ತರ ಅಮೇರಿಕಾ ವೀರಶೈವ ಸಂಘವನ್ನು ಧಾರ್ಮಿಕ ಆಚರಣೆ, ಸಂಸ್ಕೃತಿ, ವಚನ ಪಾಠಗಳಿಗೆ ಸೀಮಿತಗೊಳಿಸಿದ್ದರೆ, ಒಕ್ಕಲಿಗ ಪರಿಷತ್ ನೇರವಾಗಿ ’ಅಕ್ಕ’ ರಾಜಕೀಯದಲ್ಲಿ ಸಕ್ರಿಯವಾಗಿದೆ.  ಈ ಜಾತಿ ರಾಜಕಾರಣದಿಂದಾಗಿಯೇ ಅಕ್ಕದಿಂದ ಒಂದು ಗುಂಪು ಬೇರೆಯಾಗಿ ನಾವಿಕ ಎಂಬ ಇನ್ನೊಂದು ಸಂಘವನ್ನು ಸ್ಥಾಪಿಸಿಕೊಂಡಿದೆ.  ಅಮೆರಿಕದಾದ್ಯಂತವಿರುವ ಕನ್ನಡ ಸಂಘಗಳು ತಮ್ಮ ತಮ್ಮ ಸಂಖ್ಯೆಗಳಿಗನುಗುಣವಾಗಿ ಅಕ್ಕ ಮಾತು ನಾವಿಕದೊಂದಿಗೆ ಗುರುತಿಸಿಕೊಂಡಿವೆ. ಇನ್ನಿತರೆ ಕನ್ನಡ ಮೂಲದ ಜಾತಿ ಸಂಘಗಳ ಬಗ್ಗೆ ನನಗೆ ಅಷ್ಟಾಗಿ ಪರಿಚಯವಿಲ್ಲ, ಹಾಗಾಗಿ ಅವುಗಳ ಬಗೆಗೆ ಏನನ್ನೂ ಹೇಳಲಾರೆ.

ಇರಲಿ, ಸಾಮಾನ್ಯವಾಗಿ ಉನ್ನತ ಶಿಕ್ಷಣವನ್ನು ಪಡೆದು, ಉತ್ತಮ ಬುದ್ದಿಮತ್ತೆಯನ್ನು ಹೊಂದಿ, ಅಮೇರಿಕಾ ಸೇರಿ, ಇಲ್ಲಿನ ಪ್ರಜೆಗಳಾದರೂ ತಮ್ಮ ಸುಪ್ತ ಜಾತೀಯತೆಯನ್ನು ತೊರೆಯಲಾಗದಷ್ಟು ಜಾತಿಗಳು ನಮ್ಮನ್ನು ಆವರಿಸಿಕೊಂಡಿವೆ. ಭಾರತದಲ್ಲಿಯೂ ಕೂಡ ವಿದ್ಯಾವಂತರಾದಷ್ಟು ಜಾತಿಜಾಗೃತರಾಗುತ್ತಾರೆಯೇ ಹೊರತು ಜಾತಿಪರಿಧಿಯ ಹೊರಕ್ಕೆ ಬರುವವರು ಕಡಿಮೆಯೇ! ಇದು ಸ್ವತಂತ್ರ್ಯ ಭಾರತದ ಸಾಮಾಜಿಕತೆಯ ವಿಕಾಸವೋ ವಿಕಾರವೋ, ಅಥವಾ ಭಾರತ ಸ್ವಾತಂತ್ರ್ಯಾ ನಂತರದ ಶಿಕ್ಷಣ ಕ್ರಾಂತಿಯ ಪರಿಣಾಮವೋ ಅರಿಯೇ! ಒಟ್ಟಾರೆ ಭಾರತ ಎತ್ತಲೋ ಪ್ರಗತಿಸುತ್ತಿದೆ.

ಇರಲಿ, ಆದರೆ ಇಲ್ಲಿನ ಬಹುತೇಕ ಭಾರತೀಯ ಮೂಲದ ಮಕ್ಕಳಿಗೆ ಮಾತ್ರ ಇಂಗ್ಲಿಷ್ ಬಿಟ್ಟರೆ ತಮ್ಮ ಮನೆಮಾತಾಗಲೀ ಇನ್ಯಾವ ಭಾಷೆಯಾಗಲಿ ಕಲಿತರೂ ಮಾತನಾಡಲಾಗದಷ್ಟು ಪರಿಣಿತಿ ಬರುವುದೇ ಇಲ್ಲ. ಇದು ಅಮೇರಿಕಾದ ಗಾಳಿ, ನೀರಿನ ಪರಿಣಾಮವೆಂದೇ ನನಗನಿಸುತ್ತದೆ. ಭಾಷಾ ಪಂಡಿತ ಪೋಷಕರಿದ್ದರೂ ಅಷ್ಟೇ, ಅನ್ಯಭಾಷಾ ತರಗತಿಗಳಿಗೆ ಕಳುಹಿಸಿದರೂ ಅಷ್ಟೇ. ಈ ಮಕ್ಕಳು ತಮ್ಮ ಮಾತೃಭಾಷೆಯನ್ನಷ್ಟೇ ಮಾತನಾಡುವವರಾಗಿದ್ದರೂ ಶಾಲೆಗೆ ಸೇರಿದೊಡನೆ ತಮ್ಮ ಮಾತೃಭಾಷೆಯನ್ನು ಕೆಲವೇ ತಿಂಗಳುಗಳಲ್ಲಿ ಮರೆತುಬಿಡುತ್ತಾರೆ. ನಂತರ ಅದು ಅಳಿಸಿಯೇ ಹೊಗುತ್ತದೆ. ಇವರು ತಮ್ಮ ಮಾತೃಭಾಷೆಯಲ್ಲಿ ಓದಲು/ಬರೆಯಲು ಕಲಿತರೂ ಅದು ಕೇವಲ ಓದಲು ಮತ್ತು ಬರೆಯುವಲ್ಲಿಗೆ ಸೀಮಿತವಾಗುತ್ತದಲ್ಲದೇ, ಅದರ ಅರ್ಥವೇ ಇವರಿಗೆ ಗೊತ್ತಾಗುವುದಿಲ್ಲ. ಅವರ ಮನೆಗಳಲ್ಲಿ ಇಂಗ್ಲಿಷ್ ಮಾತನಾಡದೇ ಅವರವರ ಮನೆಮಾತಿನಲ್ಲಿಯೇ ಅವರ ಪೋಷಕರು ಮಾತನಾಡುತ್ತಿದ್ದರೂ ಕೂಡ ಅವರುಗಳ ಮಾತೃಭಾಷೆ ಈ ಮಕ್ಕಳಿಗೆ ಅಷ್ಟಕ್ಕಷ್ಟೇ. ಇದು ಏಕೆ ಹೀಗೆಂದು ನನಗೆ ಇದುವರೆಗೂ ಅರ್ಥವಾಗದೇ ಒಂದು ರೀತಿಯ ಚಿದಂಬರ ರಹಸ್ಯವೇ ಆಗಿದೆ.

ಈ ಮಾತೃಭಾಷೆ ಬಾರದು ಎಂಬ ಕೊರತೆಯೊಂದನ್ನು ಬಿಟ್ಟರೆ, ಈ ಮಕ್ಕಳು ಭಾರತೀಯರು ಹೆಮ್ಮೆ ಪಡಬೇಕಾದಂತಹ ಪೀಳಿಗೆ ಎಂದೇ ಹೇಳಬಹುದು. ಇಲ್ಲಿನ ಪರಿಸರ, ಶಿಕ್ಷಣ, ಮೌಲ್ಯಗಳನ್ನು (ಭಾರತದಲ್ಲಿ ಈ ಬಗ್ಗೆ ಸಾಕಷ್ಟು ತಪ್ಪು ಕಲ್ಪನೆಯ ಅಪಪ್ರಚಾರವೇ ಇದ್ದು, ಇಲ್ಲಿನ ಅಸಲೀ ವಿಷಯಗಳ ನೈಜ ತಿಳುವಳಿಕೆ ಅಷ್ಟಾಗಿ ಇಲ್ಲ. ಇದರ ಬಗ್ಗೆ ಮತ್ತೊಮ್ಮೆ ಬರೆಯುವೆ.) ನೋಡುತ್ತ, ಕೇಳುತ್ತ ಬೆಳೆಯುವ ಈ ಮಕ್ಕಳು ಇದ್ದುದರಲ್ಲಿ ಅತ್ಯಂತ ಬುದ್ದಿವಂತರೂ, ವಿವೇಚನೆಯಿರುವವರೂ ಮತ್ತು ಪ್ರಾಮಾಣಿಕರೂ ಆಗಿರುತ್ತಾರೆ. ಇವರ ಪೋಷಕರು ಏನೇ ಸಂಘ/ಸಮ್ಮೇಳನಗಳನ್ನು ಮಾಡಿ, ಸಂಸ್ಕೃತಿಯ ನೆಪವಾಗಿ ತಮ್ಮ ಜಾತಿಯ ಅರಿವು ಮೂಡಿಸುವ ಪ್ರಯತ್ನಗಳು ಎಳ್ಳಷ್ಟೂ ಫಲಪ್ರದವಾಗಿರುವುದನ್ನು ನಾನಂತೂ ನೋಡಿಲ್ಲ. ನನ್ನ ಕಂಪೆನಿ ಪರವಾಗಿ ಸಾಕಷ್ಟು ಕ್ಯಾಂಪಸ್ ಇಂಟರ್ವ್ಯೂಗಳನ್ನು ಮಾಡಿ, ಈ ರೀತಿಯ ಭಾರತೀಯ ಮೂಲದ ಎರಡನೇ ಪೀಳಿಗೆಯ ಅನೇಕರನ್ನು ನಮ್ಮ ಕಂಪೆನಿಗೆ ಸೇರಿಸಿಕೊಂಡಿದ್ದೇನೆ. ಹಾಗೆಯೇ ಅವರೊಂದಿಗೆ ಕೆಲಸವನ್ನೂ ಮಾಡಿದ್ದೇನೆ. ಆ ಒಂದು ಅನುಭವವಿರುವುದರಿಂದ ಮೇಲಿನ ಮಾತುಗಳನ್ನು ನಾನು ಧೃಢವಾಗಿ ಹೇಳಬಲ್ಲೆ. ಅಷ್ಟೇ ಅಲ್ಲ, ಇದೇ ರೀತಿ ಭಾರತದಲ್ಲಿಯೂ ನಮ್ಮ ಯುವಜನತೆಗೆ ಜಾತಿ ಪರಿಧಿಯ ಪರಿಮಿತಿಗೆ ಸಿಕ್ಕದಂತಹ ಮುಕ್ತ ಪರಿಸರವಿರುವಂತಿದ್ದರೆ? ಎಂದು ಇವರನ್ನು ನೋಡಿದಾಗೆಲ್ಲ ಅಂದುಕೊಳ್ಳುತ್ತೇನೆ.

ಇರಲಿ, ಭಾರತದಲ್ಲಿಯೇ ಹದಿಹರೆಯದವರು ಏನೇನೋ ಸಮಸ್ಯೆಗಳಿಗೆ ಸಿಲುಕುತ್ತಿರುವಾಗ ಅಮೇರಿಕಾದ ಸ್ವಚ್ಛಂದ ವಾತಾವರಣದಲ್ಲಿ ಈ ಯುವಕರು ಹದಿಹರೆಯದ ಸಮಸ್ಯೆಗಳಿಗೆ ಸಿಲುಕದೇ ಇರಲು ಹೇಗೆ ಸಾಧ್ಯ? ಇಲ್ಲದ್ದನ್ನೆಲ್ಲಾ ಹೇಳಬೇಡಿ ಎನ್ನುವಿರಾ? ನಾನು ಗಮನಿಸಿದಂತೆ, ಈ ಸಮಸ್ಯೆ ಭಾರತೀಯ ಮೂಲದವರನ್ನು ಅಷ್ಟಾಗಿ ಕಾಡುತ್ತಿಲ್ಲವೆಂದೇ ಅನಿಸುತ್ತದೆ. ಈ ನವಪೀಳಿಗೆ ತಮ್ಮ ಅಲ್ಪಸಂಖ್ಯಾತತೆಯ ಕಾರಣದಿಂದಲೋ ಏನೋ ಒಂದು ರೀತಿಯಲ್ಲಿ ಸದಾ ಜಾಗೃತರಾಗಿರುತ್ತಾರೆ.  ಹಾಗೆಯೇ ಯಾರಾದರೂ ತಕ್ಷಣಕ್ಕೆ ಭಾರತೀಯರೆಂದು ಗುರುತಿಸಬಹುದಾದ ಚಹರೆಯಿಂದಾಗಿ ಈ ರೀತಿಯ ಜಾಗೃತಿ ಬೆಳೆದುಬಂದಿದೆಯೆಂದೇ ನನಗನಿಸುತ್ತದೆ! ಈ ಜಾಗೃತಿಯ ಪರಿಣಾಮದಿಂದಲೇ ಏನೋ ಅಷ್ಟಾಗಿ ಯುವ ಸಮಸ್ಯೆಗಳಿಗೆ ಸಿಲುಕದೇ ತಮ್ಮ ಹದಿಹರೆಯದ ಸಮಸ್ಯೆಗಳನ್ನು ಬುದ್ಧಿವಂತಿಕೆಯಿಂದ ನಿಭಾಯಿಸುತ್ತ ಬಹುಪಾಲು ಯುವಜನತೆ ಯಶಸ್ವಿಯಾಗಿದ್ದಾರೆ ಮತ್ತು ಆಗುತ್ತಿದ್ದಾರೆ ಎಂದೇ ಅನಿಸುತ್ತದೆ.

’ಪ್ರತ್ಯಕ್ಷವಾಗಿ ನೋಡಿದ್ದರೂ ಪರಾಮರ್ಶಿಸಿ ನೋಡು’ ಎಂಬುದನ್ನು ಚೆನ್ನಾಗಿ ಅರ್ಥೈಸಿಕೊಂಡಿರುವ ಈ ಮಕ್ಕಳು ಯಾವುದೇ ತತ್ವವನ್ನೋ, ವಿಚಾರವನ್ನೋ ಹೇಳಿದರೆ ಅದಕ್ಕೆ ನೂರೆಂಟು ಪ್ರಶ್ನೆಗಳನ್ನು ಹಾಕಿ, ಅರಿತು ನಂತರವೇ ಒಪ್ಪಿಕೊಳ್ಳುವಂತಹ ಶಾಲಾ ವಾತಾವರಣದಲ್ಲಿ ಬೆಳೆದಿರುವುದರಿಂದಲೂ ಮತ್ತು ಅವರುಗಳ ಪೋಷಕರು ತಮ್ಮ ಜಾತಿ/ಧರ್ಮಗಳ ಆಚರಣೆಗಳ ಬಗ್ಗೆ ತಿಳಿಸಿ, ಅವರುಗಳ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ಕೊಡುವ ಶಕ್ತಿಯನ್ನು ಹೊಂದಿರದ ಕಾರಣದಿಂದಲೂ, ಮತ್ತು ಪೋಷಕರು ಭಾರತದಲ್ಲಿಯ ಗದರಿಸುವಿಕೆಯ ರೀತಿ "ತಲೆಪ್ರತಿಷ್ಟೆ ಮಾಡಬೇಡ ಹೇಳಿದ್ದಷ್ಟನ್ನು ಮಾಡು" ಎಂದು ಇಲ್ಲಿನ ಪರಿಸರದಲ್ಲಿ ಹೇಳಲಾಗದ ಪರಿಣಾಮವಾಗಿಯೂ, ಈ ಯುವಶಕ್ತಿ ಜಾತಿ, ಅಂಧಶ್ರದ್ಧೆಗಳ ಬಗ್ಗೆ ಅಷ್ಟೊಂದು ಮಾಹಿತಿಯನ್ನು ಪಡೆದಿರಲಾರರು ಎಂದುಕೊಂಡಿದ್ದೇನೆ.

ಒಟ್ಟಾರೆ ಈ ಭಾರತೀಯ ಅಮೇರಿಕನ್ ಯುವ ಪೀಳಿಗೆ, "ಯಾತರ ಹೂವೇನು? ನಾತವಿದ್ದರೆ ಸಾಕು, ಜಾತಿಯಲಿ ಜಾತಿಯೆನಬೇಡ ಶಿವನೊಲಿದಾತನೇ ಜಾತ ಸರ್ವಜ್ಞ" ಎಂಬಂತೆ ಜಾತಿಪರಿಧಿಯ ಪರಿವೆ ಇಲ್ಲದೆ ಒಟ್ಟಿನಲ್ಲಿ ’ಭಾರತೀಯ ಅಮೇರಿಕನ್’ ಆಗಿದ್ದಾರೆ. ಇದೇ ರೀತಿ ಭಾರತದ ನಮ್ಮ ಸಮಾಜದಲ್ಲಿಯೂ "ಎಲುವಿನಾ ಕಾಯಕ್ಕೆ ಸಲೆ ಚರ್ಮದ ಹೊದಿಕೆ ಮಲಮೂತ್ರ ಕ್ರಿಮಿಗಳೊಳಗಿರ್ದ ದೇಹಕ್ಕೆ ಕುಲವಾವುದಯ್ಯ ಸರ್ವಜ್ಞ" ಎಂಬಂತಹ ಸ್ವಚ್ಛ ವಾತಾವರಣವಿದ್ದಿದ್ದರೆ ಭಾರತದಲ್ಲಿ ಇಂದು ’ಅಮೇರಿಕನ್ ಭಾರತೀಯ’ರಿರುತ್ತಿದ್ದರೋ ಏನೋ!

 http://epaper.udayakala.news/


ಅಯೋಧ್ಯೆಯೇ? ಸಾಕೇತವೇ? ವಿನೀತವೇ?


ಅಯೋಧ್ಯೆ ಮತ್ತೆ ಸುದ್ದಿಯಾಗುತ್ತಿದೆ. ಈ ಬಾರಿ ಮಂದಿರವಾಗಿಬಿಡುವುದು ಎನ್ನುತ್ತಿದ್ದಂತೆಯೇ ಇದು ಬುದ್ಧನ ಸಾಕೇತ ಪಟ್ಟಣ ಎಂಬ ಸುದ್ದಿಯ ಹಿನ್ನೆಲೆಯಲ್ಲಿ ಇತಿಹಾಸದಲ್ಲೊಮ್ಮೆ ಇಣುಕಿ ನೋಡೋಣ.

ಹಿಂದೂ ಧರ್ಮಗ್ರಂಥಗಳಾದ, ಮಹಾಭಾರತ ಮತ್ತು ರಾಮಾಯಣದಲ್ಲಿ ಅಯೋಧ್ಯೆಯ ಉಲ್ಲೇಖವಿದ್ದರೂ ಸಾಕೇತದ ಉಲ್ಲೇಖವಿಲ್ಲ! ಆದರೆ ಈ ಧರ್ಮಗ್ರಂಥಗಳ ರಚನೆಯ ಕಾಲಕ್ಕೆ ಇತಿಹಾಸದ ಪುರಾವೆಯಿಲ್ಲ. ಪುರಾವೆಯಿಲ್ಲದ ಕಾರಣಕ್ಕಾಗಿ ಇವುಗಳನ್ನು ಸದ್ಯಕ್ಕೆ ಕಲ್ಪಿತ ಪೌರಾಣಿಕಗಳೆಂದು ಪರಿಗಣಿಸಬೇಕಾಗುತ್ತದೆ.

ಕ್ರಿಸ್ತಪೂರ್ವ ನಾಲ್ಕನೇ ಶತಮಾನದಲ್ಲಿ ರಚಿತ ಬೌದ್ಧ ಗ್ರಂಥವಾದ ಮಹಾವಸ್ತು ಸಾಕೇತವು ಇಕ್ಷಾವಕು ರಾಜ ಸುಜಾತನ ರಾಜಧಾನಿಯಾಗಿತ್ತು. ನಂತರ ಈ ಸುಜಾತನ ವಂಶಸ್ಥರೇ ಶಾಕ್ಯ ಮತ್ತು ಕಪಿಲವಸ್ತುಗಳನ್ನು ಕಟ್ಟಿದರೆನ್ನುತ್ತದೆ. ಈ ಗ್ರಂಥದಲ್ಲಿ ಅಯೋಧ್ಯೆಯ ಉಲ್ಲೇಖವಿಲ್ಲ. ಆದರೆ ಮಹಾವಸ್ತು ಒಂದು ಐತಿಹಾಸಿಕ ಗ್ರಂಥ. ಇದರ ರಚನೆಯ ಕಾಲವನ್ನು ಇತಿಹಾಸ ಪುಷ್ಟೀಕರಿಸುತ್ತದೆ.

ರಾಮಾಯಣ/ಮಹಾಭಾರತಗಳಲ್ಲಿರದ ಸಾಕೇತ, ಮತ್ತು ಮಹಾವಸ್ತುವಿನಲ್ಲಿರದ ಅಯೋಧ್ಯೆ ಏನನ್ನು ಹೇಳುತ್ತವೆ?

ಧರ್ಮ ಸಂಘರ್ಷ ಇಂದು ನೆನ್ನೆಯದಲ್ಲ!

ಹಾಗಾಗಿ ಧರ್ಮಗ್ರಂಥವಲ್ಲದ, ಪೌರಾಣಿಕವಲ್ಲದ,  ಕಥಾನಕವಲ್ಲದ ಯಾವುದಾದರೂ ಐತಿಹಾಸಿಕ ಗ್ರಂಥವನ್ನು ಪರಿಗಣಿಸೋಣ. ಪಾಣಿನಿಯ ಅಷ್ಟಾಧ್ಯಾಯಿ ಗ್ರಂಥದಲ್ಲಿ ಸಾಕೇತ ಪಟ್ಟಣದ ಉಲ್ಲೇಖವಿದೆ. ಅದಲ್ಲದೇ ಮಹಾಭಾಷ್ಯ ಎಂಬ ಸಂಸ್ಕೃತ ಭಾಷಾ ವಿಮರ್ಶೆಯನ್ನು ಬರೆದ ಪತಂಜಲಿ ಕೂಡಾ ಸಾಕೇತ ಪಟ್ಟಣದ ಕುರಿತಾಗಿ ಉಲ್ಲೇಖಿಸಿದ್ದಾನೆ.  ಇವೆರಡರಲ್ಲಿ ಅಯೋಧ್ಯೆಯ ಉಲ್ಲೇಖವಿಲ್ಲ. ಸಂಸ್ಕೃತ ವ್ಯಾಕರಣದ ಪಿತಾಮಹನೆನ್ನಿಸಿದ ಪಾಣಿನಿಯ ಕಾಲ ಕ್ರಿಸ್ತಪೂರ್ವ ನಾಲ್ಕು ಅಥವಾ ಐದನೇ ಶತಮಾನವಾದರೆ, ಸಂಸ್ಕೃತ ಭಾಷೆಯಲ್ಲದೆ ಯೋಗ, ವ್ಯಾಕರಣ, ತತ್ವಜ್ಞಾನದ ಪಿತಾಮಹನೆನಿಸಿದ ಪತಂಜಲಿಯ ಕಾಲ ಕ್ರಿಸ್ತಪೂರ್ವ ಎರಡನೇ ಶತಮಾನ!

ಸಾಕೇತಕ್ಕೆ ಇತಿಹಾಸದ ಪುಷ್ಟೀಕರಣವಿದ್ದರೆ,  ಅಯೋಧ್ಯೆಗೆ ಪೌರಾಣಿಕ ನಂಬಿಕೆಯ ಬೆಂಬಲವಿದೆ.

ಅದಲ್ಲದೇ ಬುದ್ಧ ಮತ್ತು ಮಹಾವೀರರಿಬ್ಬರೂ ಸಾಕೇತದಲ್ಲಿ ಕೆಲಕಾಲ ವಾಸವಿದ್ದರೆಂದು ಇತಿಹಾಸ ತಿಳಿಸುತ್ತದೆ.

ಇನ್ನು ಅಯೋಧ್ಯೆ ಮತ್ತು ಸಾಕೇತ ಒಂದೇ ಊರಿನ ಎರಡು ಹೆಸರುಗಳೇ?

ಹೌದೆನ್ನುತ್ತದೆ ಇತಿಹಾಸ! ಕ್ರಿಸ್ತಶಕ ನಾಲ್ಕನೇ ಶತಮಾನದ ಕಾಳಿದಾಸನ ರಘುವಂಶ ಸಾಕೇತ ಮತ್ತು ಅಯೋಧ್ಯೆಗಳೆರಡೂ ಒಂದೇ ಎನ್ನುತ್ತದೆ. ನಂತರದ ಜೈನಗ್ರಂಥಗಳು ಸಾಕೇತ/ಅಯೋಧ್ಯೆ ವಿನೀತ ಯಾ ವಿನಿಯ ಯಾ ಸಗೇಯಾ (ಸಾಕೇತದ ಅಪಭ್ರಂಶ) ಪಟ್ಟಣ ತಮ್ಮ ಆದಿ ತೀರ್ಥಂಕರನಾದ ರಿಷಭನಾಥನ ಜನ್ಮಸ್ಥಳವೆಂದು ಗುರುತಿಸುತ್ತವೆ. ಈ ರಿಷಭ 1200 ಅಡಿ ಎತ್ತರವಿದ್ದನೆಂದು ಜೈನ ಪುರಾಣಗಳು ಹೇಳುತ್ತವೆ. ಹಾಗಾಗಿಯೇ ಜೈನರು ಎತ್ತರದ ಮೂರ್ತಿಗಳನ್ನು ಸ್ಥಾಪಿಸುತ್ತಿದ್ದುದು. ಇದನ್ನೇ ಬೌದ್ಧರು ನಕಲು ಮಾಡಿ ಬುದ್ಧನ ಎತ್ತರದ ಪ್ರತಿಮೆಗಳನ್ನು ಕಟ್ಟಿದರು. ಇತ್ತೀಚೆಗೆ ಮೂರ್ತಿಸ್ಥಾಪನೆ ಸುದ್ದಿಯಾಗುತ್ತಿರುವುದರಿಂದ ಸಾಂದರ್ಭಿಕವಾಗಿ ಈ ಉಲ್ಲೇಖ ಅವಶ್ಯವೆನಿಸುತ್ತದೆ.

ಸಾಮಾಜಿಕವಾಗಿ ಪ್ರಚಲಿತವಿರುವ ಸಾಕೇತರಾಮ, ಸಗಾಯಿರಾಮ, ಸಗಾಯಪ್ಪನ್ ಎಂಬ ಹೆಸರುಗಳು ಕೂಡಾ ಇವೆರಡೂ ಒಂದೆಂದು ಅನುಮೋದಿಸುತ್ತವೆ.

ಐತಿಹಾಸಿಕವಾಗಿ ಈ ನಗರ ಅದೇಕೆ
ಧರ್ಮಗಳಷ್ಟೇ ಆಲ್ಲದೇ ಲಲಿತಕಲೆ, ತತ್ವಜ್ಞಾನಿ, ಸಂಗೀತಗಾರರು, ಪಂಡಿತರು, ವಣಿಕರೆಲ್ಲರಿಗೂ ಅಷ್ಟೊಂದು ಪ್ರಮುಖವಾಗಿತ್ತು?!

ಆ ಪ್ರಶ್ನೆಗೆ ಉತ್ತರವಾಗಿ ಮತ್ತೆರಡು ಪ್ರಶ್ನೆಗಳನ್ನು ಕೇಳಬೇಕಾಗುತ್ತದೆ.

ಜಾಗತಿಕವಾಗಿ ಇಂದು ಎಲ್ಲರೂ ಏಕೆ ಅಮೆರಿಕಕ್ಕೆ ಹೋಗಬಯಸುವರು? ಅಥವಾ ರಾಜ್ಯದ ಮೂಲೆ ಮೂಲೆಯಿಂದ ಜನ ಬೆಂಗಳೂರಿಗೇ ಏಕೆ ವಲಸೆ ಬರುತ್ತಿದ್ದಾರೆ?

ಎಲ್ಲಾ ಪ್ರಮುಖ ವಾಣಿಜ್ಯ ನಗರಿಗಳು ವಾಣಿಜ್ಯವನ್ನಷ್ಟೇ ಆಲ್ಲದೆ ಉನ್ನತ ಲಲಿತಕಲೆ, ಸಾಹಿತ್ಯ, ತತ್ವಜ್ಞಾನ, ಕುಶಾಗ್ರತೆ, ಮತ್ತು ಪಾಂಡಿತ್ಯವನ್ನು ಆದರಿಸುತ್ತಿದ್ದವು. ಹಾಗಾಗಿಯೇ ಉತ್ತಮ ಅವಕಾಶಗಳಿಗಾಗಿ ಪ್ರತಿಭಾವಂತರು ಇಲ್ಲಿಗೆ ವಲಸೆ ಬಂದರೆ, ಪ್ರಭುತ್ವಗಳು ಇಂತಹ ನಗರಗಳ ಮೇಲೆ ಹಕ್ಕು ಸ್ಥಾಪಿಸುತ್ತಿದ್ದವು. ಅದೇ ರೀತಿ ಧರ್ಮಗಳು ಆ ಪ್ರಭುತ್ವಗಳ ಮೇಲೆ ಹಿಡಿತ ಸಾಧಿಸುತ್ತಿದ್ದವು.

ಸಾಕೇತ, ಹಲವು ಪ್ರಮುಖ ಹೆದ್ದಾರಿಗಳ ನಡುವೆ ಬರುವ ಒಂದು ಜಂಕ್ಷನ್ ಆಗಿತ್ತು. ಸರಕು ಸಾಮಗ್ರಿಗಳ ಹೇರಿಕೊಂಡು ಉತ್ತರದಿಂದ ದಕ್ಷಿಣಕ್ಕೂ, ಪೂರ್ವದಿಂದ ಪಶ್ಚಿಮಕ್ಕೂ ಸಾಗುವ ಹೆದ್ದಾರಿಗಳು ಕೂಡುವ ಮತ್ತು ತಕ್ಷಶಿಲೆ, ವಾರಣಾಸಿ, ರಾಜಗೃಹ, ಕಪಿಲವಸ್ತು, ಸ್ರವಸ್ತಿ ನಗರಗಳನ್ನು ಬೆಸೆಯುವ ತಂಗುದಾಣವಾಗಿತ್ತು.

ಈ ತಂಗುದಾಣವನ್ನು ಪ್ರಮುಖ ನಗರವಾಗಿ ಕಟ್ಟಿದವನು ಧನಂಜಯನೆಂಬ ಕ್ರಿಸ್ತಪೂರ್ವ ಐದನೇ ಶತಮಾನದ ವರ್ತಕ! ತನ್ನ ರಾಜನಾದ ಪ್ರಸನ್ನಜೀತನ ಅಣತಿಯಂತೆ ಇದನ್ನು ಪ್ರಮುಖ ನಗರವಾಗಿಸಿದ. ಹುಯೆನ್ ತ್ಸಾಂಗನ ಕಾಲಕ್ಕೆ ಆಗಲೇ ಧನಂಜಯನ ಕುರಿತು ದಂತಕತೆಗಳಿದ್ದವು. ತನ್ನ ಯಾತ್ರೆಯಲ್ಲಿ ಹುಯೆನ್ ತ್ಸಾಂಗ್ ಈ ದಂತಕತೆಯನ್ನು ನೆನೆದು ಭಕ್ತಿಪರವಶನಾದದ್ದನ್ನು ನನ್ನ ಮಹಾಪಯಣ ಕೃತಿಯಲ್ಲಿ ಹೆಚ್ಚಿನ ಮಾಹಿತಿಗೆ ಓದಬಹುದು. ಈ ಧನಂಜಯನ ಪುತ್ರಿಯೇ ಖ್ಯಾತ ಬೌದ್ಧಭಿಕ್ಷುಣಿ ವಿಶಾಖ!

ಸಾಕೇತ/ಅಯೋಧ್ಯೆ/ವಿನೀತವಿರಲಿ ಅಥವಾ ಮೊಹೆಂಜೋದಾರ, ನಾಸಿಕ, ಹಂಪಿ, ಮುಂಬೈ ಆಗಲೀ ಖ್ಯಾತವಾಗಿದ್ದಿದು ಅವು ಪ್ರಮುಖ ವಾಣಿಜ್ಯ ಕೇಂದ್ರಗಳಾಗಿದ್ದುದಕ್ಕೆ! ವಾಣಿಜ್ಯವೇ ಎಲ್ಲ ಧರ್ಮ, ಪ್ರಭುತ್ವ, ಲಲಿತಕಲೆ, ಸಾಹಿತ್ಯಗಳ ಮಹಾಪೋಷಕ. ಇದು ಗತಕಾಲದ ಮೊಹೆಂಜೋದಾರೋದಿಂದ ಇಂದಿನ ನ್ಯೂಯಾರ್ಕ್ ವರೆಗಿನ ಸಾರ್ವಕಾಲಿಕ ಸತ್ಯ!

ಭಾರತದ ನವನಾಗರೀಕತೆಗೆ ಬುನಾದಿ ಹಾಕಿದ ಮೊಹೆಂಜೋದಾರೋದಿಂದ ಇಲ್ಲಿಯವರೆಗೆ ಎಲ್ಲಾ ನಾಗರೀಕ ಆಯಾಮಗಳಿಗೆ ತನುಮನಧನದಿಂದ ಕಾಣಿಕೆ ಸಲ್ಲಿಸಿರುವುದು ಬಂಡವಾಳಶಾಹಿಯ ವಣಿಕ ವರ್ಗ. ಇದು ಬೌದ್ಧ ಸ್ತೂಪಗಳನ್ನು ಕಟ್ಟಲು ಆರಂಭಿಸಿದ ಕ್ರಿಸ್ತಪೂರ್ವ ವರ್ತಕರಿಂದ ಹಿಡಿದು ಕರ್ನಾಟಕದಾದ್ಯಂತ ಛತ್ರಗಳನ್ನು ಕಟ್ಟಿಸಿದ ವೈಶ್ಯ ವರ್ಗದವರೆಗಿನ ವಾಸ್ತವ! ಇತ್ತೀಚಿನವರೆಗೂ ಯಾವುದೇ ಊರಿನಲ್ಲಿ ಒಂದು ನಾಟಕವನ್ನು ಆಡಿಸಲೋ, ಅಥವಾ ಉಚಿತ ಊಟ ವ್ಯವಸ್ಥೆಗೋ ಮೊದಲು ಚಂದಾ ಕೇಳುತ್ತಿದ್ದುದು ಶೆಟ್ಟರನ್ನೇ.

ಈ ವರ್ತಕರ ಸರಕು ಸಾಗಣೆ ಬಂಡಿಗಳು ಕೇವಲ ಸರಕು ಸಾಗಿಸದೆ ಧರ್ಮ, ಸಾಹಿತ್ಯ, ಲಲಿತಕಲೆ, ವಿಜ್ಞಾನ, ತಂತ್ರಜ್ಞಾನದ ಪ್ರಸಾರಕವಾಗಿದ್ದವು. ಮಾನವ ವಿಕಾಸ, ನಾಗರೀಕತೆಯ ವಿಕಾಸಕ್ಕೆ ವಣಿಕ ವರ್ಗದ ಕೊಡುಗೆ ಅಪಾರ. ಬೌದ್ಧಧರ್ಮ ಈ ವಣಿಕ/ವರ್ತಕ/ವೈಶ್ಯರ ಧರ್ಮವಾಗಿ, ಅವರ ಸರಕು ಸಾಗಣೆಯೊಂದಿಗೆ ತ್ವರಿತವಾಗಿ ಏಷ್ಯಾದಂತ ಪ್ರಸರಿಸಿತ್ತು.

ಶಿವನ ಮಾನಸಪುತ್ರ ವೀರಭದ್ರನಂತೆಯೇ ರೂಪಿಸಿದ್ದ ರಿಷಭ, ಬಾಹುಬಲಿ ಮುಂತಾದ ಜೈನ ರೂಪಗಳು ಕ್ಷತ್ರಿಯರನ್ನು ಜೈನಧರ್ಮಕ್ಕೆ ಆರಂಭದಲ್ಲಿ ಆಕರ್ಷಿಸುತ್ತ ಸಾಹಿತ್ಯಿಕ ಧರ್ಮವಾಗಿ ಬೆಳೆಯುತ್ತಾ ನಡೆದಿತ್ತು.

ಇರಲಿ, ಐತಿಹಾಸಿಕ ಭಾರತದ ಅಸ್ಮಿತೆಯನ್ನು ಹೊಂದಿರುವ "ಪೌರಾಣಿಕ" ಹಿಂದೂ, "ತಾತ್ವಿಕ" ಬೌದ್ಧ, ಮತ್ತು "ಸಾಹಿತ್ಯಿಕ" ಜೈನ ಧರ್ಮಗಳ ಸಮ್ಮಿಳಿತದ ಸಂಕೇತವಾದ ಈ "ವಣಿಕ" ಪಟ್ಟಣ, ಕಾಲಘಟ್ಟದಲ್ಲಿ "ಅಲ್ಪಸಂಖ್ಯಾತ" ಮುಸ್ಲಿಮರ ನಾಡಾಗಿ ಇಂದು "ದಲಿತ" ಬೌದ್ಧರು ರಾಮಮಂದಿರದ ಬದಲಾಗಿ ಬೌದ್ಧಮಂದಿರವನ್ನು ಕಟ್ಟಿರೆಂಬ ಆಧುನಿಕ ಭಾರತದ ಸಂದಿಗ್ಧ ತಿರುವಿನಲ್ಲಿ ನಿಂತಿದೆ.

ಇಲ್ಲಿ ಮಂದಿರವಾಗಬೇಕೆ? ಗೊತ್ತಿಲ್ಲ! ಆದರೆ ಈ ಎಲ್ಲಾ ಐತಿಹಾಸಿಕ ಅಸ್ಮಿತೆಗಳನ್ನೊಳಗೊಂಡ ಬುದ್ಧ, ರಾಮ, ಮತ್ತು ಜಿನ ಮೂರ್ತಿಗಳ ಒಂದು ಅಂತರರಾಷ್ಟ್ರೀಯ ವಾಣಿಜ್ಯ ಸಂಕೀರ್ಣ ಕಟ್ಟಬೇಕೇ? ತುಂಬಾ ಸಂಕೀರ್ಣ ಪ್ರಶ್ನೆ!

ಒಟ್ಟಾರೆ ಎಲ್ಲಾ ಧರ್ಮಗಳಿಗೂ ಬೇಕಿದ್ದ ಈ ನಗರಕ್ಕಾಗಲಿ ಅಥವಾ ಆ ಧರ್ಮಗಳಿಗಾಗಲಿ ಯುಗಯುಗಗಳೇ ಕಳೆದಿದ್ದರೂ "ಹಿಂದೂ" ಮೋಕ್ಷವಾಗಲಿ, "ಬೌದ್ಧ" ನಿರ್ವಾಣವಾಗಲಿ  ಅಥವಾ "ಜೈನ" ಕೈವಲ್ಯವಾಗಲಿ ಸಿಕ್ಕಿಲ್ಲ.



Brahminical Patriarchy

Patriarchy ಯಾ ಪಿತೃಪ್ರಧಾನ ಯಾ ಪಿತೃಪ್ರಭುತ್ವದಲ್ಲಿ ಬ್ರಾಹ್ಮಣ್ಯ, ಶೂದ್ರ, ದಲಿತ ಎಂಬ ವರ್ಗೀಕರಣವಿದೆಯೆಂದು ಭಾರತದ ಪ್ರಬುದ್ಧತೆ ಇತ್ತೀಚೆಗೆ ತನ್ನ "Brahminical Patriarchy" ಮುಖಾಂತರ ತಿಳಿಸಿಕೊಟ್ಟಿದೆ.
ಮಂಗನಿಂದ ಮಾನವ ಮರವಿಳಿದು ಗುಂಪಿನಲ್ಲಿ ಬೇಟೆಯಾಡುತ್ತ ಬೇಟೆಯನ್ನು ಸಮಾನವಾಗಿ ಹಂಚಿಕೊಳ್ಳುತ್ತಿದ್ದ. ಬೇಟೆಯಿಂದ ವಿಕಾಸಗೊಳ್ಳುತ್ತ ಅದಿಮಾನವ ಕೃಷಿಯಲ್ಲಿ ಯಾವಾಗ ತೊಡಗಿಕೊಂಡನೋ ಆಗಿನಿಂದ ಪಿತೃಪ್ರಧಾನ ವ್ಯವಸ್ಥೆ ರೂಪುಗೊಂಡಿತು. ಇದು ಜಾಗತಿಕ ಮಾನವ ವಿಕಾಸವನ್ನು ಓದಿಕೊಂಡ ಸಾಮಾನ್ಯನ ತಿಳಿವಳಿಕೆ. ಪುರೋಹಿತಶಾಹಿಯ ಉದಯಕ್ಕೂ ಅದೆಷ್ಟೋ ಶತಮಾನಗಳ ಮುಂಚೆಯೇ ಪಿತೃಪ್ರಧಾನ ವ್ಯವಸ್ಥೆ ಜಾರಿಯಲ್ಲಿದ್ದಿತು.
ಈ ವಿಕಾಸವನ್ನು ಕೊಡವರಲ್ಲಿ ಇಂದು ಕೂಡಾ ಯಥಾವತ್ತಾಗಿ ಕಾಣಬಹುದು. ಕೊಡವರು ಪುರೋಹಿತದಿಂದ ಸಾಕಷ್ಟು ದೂರವಿದ್ದಾರೆ.
ಇನ್ನು ಒಬ್ಬ ಮಂತ್ರಿ ಮಂಗನಿಂದ ಮಾನವ ಒಪ್ಪತಕ್ಕದ್ದಲ್ಲ ಎಂದುದನ್ನು ತೀವ್ರವಾಗಿ ಟ್ರೋಲಿಸಿದ್ದ ಬುದ್ದಿಜೀವಿಗಳು, "ಜಾಗತಿಕ ಪಿತೃಪ್ರಧಾನ" ವ್ಯವಸ್ಥೆಯನ್ನು ಅದೆಷ್ಟೋ ಶತಮಾನಗಳಷ್ಟು ಮುಂದಕ್ಕೆ ಹಾರಿಸಿ "ಭಾರತೀಯ ಪುರೋಹಿತಶಾಹಿ" ಗೆ ಜೋಡಿಸಿದ್ದಾರೆ.
ಈ ಪುರಾವೆಗಳಿಲ್ಲದ ಪುರೋಗಾಮಿಗಳ ಪುಕಾರಿನ ಪುರೋಗಾಮಿತ್ವಕ್ಕೂ, ಆ ಮಂತ್ರಿಯ ತೀವ್ರವಾದಕ್ಕೂ ವ್ಯತ್ಯಾಸ ಏನಿದೆ?!?

ಮೋದಿಯ ಹೂಸು, ಬುದ್ದಿಜೀವಿಗಳ ಪೂಸು!

ಮೋದಿ ಹೂಸಿದರೂ ಅದು ಸುವಾಸಿತವಾಗಿರಬೇಕು ಎಂದು ಫರ್ಮಾನು ಹೊರಡಿಸುವ ಕಾಮಿ ಬುದ್ದಿಜೀವಿಗಳ ಬೇಡಿಕೆ ಅತ್ಯಂತ ಸಹಜವಾದದ್ದು.

ಏಕೆಂದರೆ ಜಗತ್ತಿನ ಎಲ್ಲ ಕಮ್ಯುನಿಸ್ಟ್ ಪ್ರಭುತ್ವಗಳು ವಾಕ್ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ, ಸ್ತ್ರೀಸ್ವಾತಂತ್ರ್ಯ, ಆಹಾರಸ್ವಾತಂತ್ರ್ಯ, ಮುಂತಾದ "ಸ್ವಾ"ಗಳನ್ನೆಲ್ಲ "ಸ್ವಾಹ" ಮಾಡಿವೆ.

ಈ ಎಲ್ಲ ಸ್ವಾಹ ಮಾಡಿದ ಕಮ್ಯುನಿಸ್ಟ್ ನಾಯಕ ಹೂಸಿದರೆ ಅದು ಸುವಾಸಿತವಾಗಿರುತ್ತದೆ. ಇಲ್ಲದಿದ್ದರೆ ಆತನ ಅಡುಗೆಯವ ಗಲ್ಲಿಗೇರುತ್ತಾನೆ.

ತಮ್ಮ ಪ್ರೀತಿಪಾತ್ರ ಕಮ್ಯುನಿಸ್ಟ್ ತತ್ವಗಳಾದ ಎಲ್ಲ ಸ್ವಾತಂತ್ರ್ಯಗಳ ಹರಣ "ಸ್ವಾಹ" ಮಾಡಿ ಸರ್ವಾಧಿಕಾರವನ್ನು ಸ್ಥಾಪಿಸುತ್ತಿರುವ ಮೋದಿ ಈ ಬುದ್ಧಿಜೀವಿಗಳ ಅಪ್ರತಿಮ ನಾಯಕ! ಆತನ ಕೇಸರಿ ಧ್ವಜ ಅಸಲಿಗೆ ಕೆಂಪು ಧ್ವಜ. ಆತನ ಭಾರತ್ ಮಾತಾಕಿ, ಲಾಲ್ ಸಲಾಂ!

ಕಮ್ಯುನಿಸ್ಟರ ಕ್ರಾಂತಿ ಭೂಗತವಾಗಿ ನಿರ್ಧಾರವಾಗುವಂತೆ ಈ ಕಾಮಿ ಬುದ್ದಿಜೀವಿಗಳು ಕೂಡಾ ಒಂದು ಭೂಗತ ಉದ್ದೇಶವನ್ನಿಟ್ಟುಕೊಂಡು ಚಳುವಳಿಗಳು ಮಾಡುತ್ತಿದ್ದಾರೆ. ತಮ್ಮ ಅಪ್ರತಿಮ ನಾಯಕನಿಗೆ ಅತ್ಯಂತ ಪ್ರಚಾರ ಗಳಿಸಿಕೊಡುವ ಚಳುವಳಿಗಳನ್ನು ಮಾತ್ರ ಅವರು ಏರ್ಪಡಿಸುತ್ತಿದ್ದಾರೆ. ಆತನನ್ನು ಒಂದಿಪ್ಪತ್ತು ವರ್ಷಗಳ ಕಾಲ ಅಧಿಕಾರದಲ್ಲಿರಿಸುವುದು ಅವರ ಒಳ ಉದ್ದೇಶ. ಹಾಗಾಗಿ ಇವರು ಅನ್ಯಪಕ್ಷ ಜಪದ ಬಿಜೆಪಿ ಡಬಲ್ ಏಜೆಂಟರು!

ಅಂದಹಾಗೆ ಕಮ್ಯುನಿಸ್ಟರಿಗೆ ಡಬಲ್ ಏಜೆಂಟ್ ಎಂಬುದು ಒಂದು ಜೇಮ್ಸ್ಬಾಂಡ್ ರೋಲಿನಂತಹ ರೋಚಕ ಹುದ್ದೆ. ಬಾಂಡನ ಗೆಳತಿಯರಿಗಿಂತ  ಸ್ನಾತಕೋತ್ತರ ಪದವಿಯನ್ನು ಪಡೆದ ಲಾಲ್ ಲಾಲ್ ಕಾಮಿ ಪ್ರೇಯಸಿಯರು, ಕಾಮಿ ಡಬಲ್ ಏಜೆಂಟರಿಗಿರುತ್ತಾರೆ. ಕಾಮಿ ಎಂದರೆ ಕಾಮ್ಯುನಿಸ್ಟರು.

ಫಿಡೆಲ್ ಕ್ಯಾಸ್ಟ್ರೊ ತನ್ನ ದೇಶದ ಸೂಳೆಯು ಕೂಡ ಸ್ನಾತಕೋತ್ತರ ಪದವೀಧರೆಯಾಗಿರುವಳೆಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದುದನ್ನು ಒಮ್ಮೆ ನೆನಪಿಸಿಕೊಳ್ಳಿ. ಇವರ ಹೆಮ್ಮೆಯ ಕುವರ, ಗುವೆರಾ ಬದುಕಿರುತ್ತಿದ್ದರೆ ಇಂದು ಆ "ಸ್ನಾತಕೋತ್ತರ" ಮಹಿಳೆಯರೊಂದಿಗೆ ಕಾಲ ಕಳೆಯುತ್ತಿದ್ದ!

ಮುಂಬಯಿಯ ಅಪಾರ್ಟುಮೆಂಟುಗಳ ಮೆಟ್ಟಿಲುಗಳ ಪ್ರತಿ ಮೂಲೆಗಳಲ್ಲಿ ಯಾರೂ ಉಗುಳಬಾರದೆಂದು ಎಲ್ಲಾ ಧರ್ಮದ ದೇವರುಗಳ ಟೈಲ್ಸ್ ಅಂಟಿಸಿರುವಂತೆ, ಇವರ ಹುನ್ನಾರವನ್ನು ಯಾರೂ ಕೆಣಕಬಾರದೆಂದು ಕಡೆಯಲ್ಲಿ ಒಂದು  "ಜೈಭೀಮ್" ಘೋಷಣೆಯನ್ನು  ಅಸ್ತ್ರವಾಗಿಸಿಕೊಂಡಿರುವ ಕಿಲಾಡಿಗಳು ಇವರು.

ಇಷ್ಟೆಲ್ಲಾ ತಯಾರಾಗಿ ಅಲ್ಲಲ್ಲಿ ಕಲ್ವರ್ರುಗಳನ್ನು ಒಡೆಯುತ್ತಾ ಜುಗಾರಿ ಕ್ರಾಸಿನ ಪ್ರೊ. ಗಂಗೂಲಿ ಶಿಷ್ಯರು ಮಾಡುತ್ತಿರುವ ಕ್ರಾಂತಿಯನ್ನು ಭಕ್ತರೇ ಅರಿತುಕೊಳ್ಳಿ. ಇವರೂ ಕೂಡಾ ನಿಮ್ಮವರೇ.

Disclaimer:
ಜಗತ್ತಿನ ಎಲ್ಲ ಕಮ್ಯುನಿಸ್ಟ್ ಪ್ರಭುತ್ವಗಳು
ಪ್ರಜಾಪೀಡಕವಾಗಿ, ಸರ್ವಾಧಿಕಾರವಾಗಿ, ಏಕವ್ಯಕ್ತಿ ಆರಾಧಕವಾಗಿ ಪರಿವರ್ತಿತಗೊಂಡಿರುವುದು ಸಾರ್ವಕಾಲಿಕ  ವಾಸ್ತವ ಸತ್ಯ!

#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

ಟಿಪ್ಪು ಸುಲ್ತಾನ!

ಪ್ರಜಾಪ್ರಭುತ್ವದ ರಾಜ್ಯವೊಂದು ರಾಜಪ್ರಭುತ್ವದ ವ್ಯಕ್ತಿಯೋರ್ವನ ಹುಟ್ಟನ್ನು ಸಂಭ್ರಮಿಸುವುದು ಗುಲಾಮಿತನದ ಸಂಕೇತ ಮತ್ತು ಪ್ರಜಾಪ್ರಭುತ್ವದ ಅಣಕ. ಇದು ಟಿಪ್ಪು, ಕೆಂಪೇಗೌಡ, ಕಿತ್ತೂರು ರಾಣಿ ಜಯಂತಿಗಳಿಗೆಲ್ಲ ಅನ್ವಯ.  ಈ ಮೂಲ ಪ್ರಭುತ್ವಗಳ ವ್ಯತ್ಯಾಸವರಿಯದೆ ರಾಜಜಯಂತಿಗಳ ಸಮರ್ಥಿಸಿಕೊಳ್ಳುವ ಜ್ಞಾನಪೀಠಿ, ವಿಶ್ವವಿದ್ಯಾಲಯದ ಪ್ರೊಫೆಸರ್ಗಳು, ಪ್ರಜಾಪ್ರಭುತ್ವದ ಪ್ರತಿನಿಧಿಗಳು, ಮತ್ತವರ ಬುದ್ಧಿಮಟ್ಟ, ಬುದ್ಧಿಮತ್ತೆ, ಸೊಗಲಾಡಿತನ, ಓಲೈಕೆ, ತಲೆಹಿಡುಕುತನ ಸಂವಿಧಾನವನ್ನೇನು ಉಳಿಸೀತು?
ಅವರೆಲ್ಲ ಹುಚ್ಚು ಮುಂಡೆ ಮದುವೆಯಲ್ಲಿ ಉಂಬುವ ಜಾಣರು!!

ದಸರಾ ಆಚರಣೆಯಲ್ಲಿ ಮೈಸೂರಿನ ಅರಸು ಮನೆತನದ ಭಾಗವಹಿಸುವಿಕೆಯನ್ನು ಊಳಿಗಮಾನ್ಯದ ವಿಜೃಂಭಣೆ, ಗುಲಾಮಿತನದ ಸಂಕೇತವೆಂದು "ಪರ್ಯಾಯ ದಸರಾ" ಆಚರಿಸುವ ಪ್ರಗತಿಪರ ವರ್ಗ, ಊಳಿಗಮಾನ್ಯದ ಟಿಪ್ಪುವನ್ನು ಸಮರ್ಥಿಸಿಕೊಳ್ಳುತ್ತಾರೆ. ವೈಚಾರಿಕತೆ, ಜಾತಿ ಓಲೈಕೆಗನುಗುಣವಾಗಿ ಊಳಿಗಮಾನ್ಯ ವ್ಯವಸ್ಥೆಯನ್ನು ಬೆಂಬಲಿಸೆನ್ನುತ್ತದೆಯೇ?

ಯಾವುದೇ ಊಳಿಗಮಾನ್ಯ ಪ್ರಭುತ್ವದ ವ್ಯಕ್ತಿ ಹೋರಾಡಿದ್ದುದು ತನ್ನ ಪ್ರಭುತ್ವಕ್ಕಾಗಿಯೇ ಹೊರತು ಪ್ರಜಾಪ್ರಭುತ್ವಕ್ಕಲ್ಲ! ಈ ನಿಟ್ಟಿನಲ್ಲಿ ಅವರ್ಯಾರೂ ಸ್ವಾತಂತ್ರ್ಯ ಹೋರಾಟಗಾರರಲ್ಲ. ಹಾಗಾಗಿ ಆತನ ಪರವಾದ ಎಲ್ಲಾ ಸಮರ್ಥನೆ ಅರ್ಥಹೀನ.

ಒಬ್ಬ ರಾಜನಾಗಿ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿಕೊಳ್ಳುವಾಗ ಆಗುವ ಸಾವು ನೋವುಗಳಂತೆಯೇ ಕೊಡಗು ಕೇರಳದಲ್ಲಿ ಆತ ನಡೆಸಿದ ಹತ್ಯೆಗಳೆಂದು ಸಮರ್ಥಿಸಿಕೊಳ್ಳುತ್ತಾರೆ. ಅದೇ ವಾದವನ್ನಿಟ್ಟುಕೊಂಡು ನೋಡಿದಾಗ ಬ್ರಿಟಿಷರ ವಿರುದ್ಧ  ಅವರ ಸಾಮ್ರಾಜ್ಯ ವಿಸ್ತರಣೆಯ ಕಾರಣವಾಗಿ ಟಿಪ್ಪು ಕೂಡ ಹತನಾದ. ಊಳಿಗಮಾನ್ಯ ಪ್ರಭುತ್ವದ ಅರಸರು ಅನ್ಯರಾಜ್ಯದ ವಿರುದ್ಧ ಹೋರಾಡುವುದನ್ನು ಒಪ್ಪುವ ನಾವು ಅನ್ಯದೇಶದವರೆಂದೊಡನೆ ಭಕ್ತಿಪರಾಕಾಷ್ಟೆಯನ್ನು ಮೆರೆಸುವುದೇಕೆ?

ಭಾರತ ಸ್ವಾತಂತ್ರ್ಯ ಹೋರಾಟದ ಆರಂಭವನ್ನು ಯಾವುದೇ ದೇಶೀ ರಾಜ ರಾಣಿಯರು ಆರಂಭಿಸಿದ್ದರೆಂಬುದನ್ನು ಪುನರ್ ಪರಿಶೀಲಿಸಬೇಕಿದೆ.

ಒಡೆತನದ ದಾಖಲೆಯಿರದ ಭೂಮಿಯನ್ನು ಕಂದಾಯ ಕಟ್ಟುವವರಿಗೆ ಪುಕ್ಕಟೆಯಾಗಿ ಇತಿಹಾಸದುದ್ದಕ್ಕೂ ಎಲ್ಲಾ ರಾಜರುಗಳೂ ಕೊಡುತ್ತಾ ಬಂದಿದ್ದಾರೆ. ಇದನ್ನು ಪ್ರಜಾಪ್ರಭುತ್ವದ ರಾಜ್ಯ ಸರ್ಕಾರ ಕೂಡ ಭೂಮಿಗೆ ಬೆಲೆಯಿಲ್ಲದ ಕಾಲಘಟ್ಟದಲ್ಲಿ ಕಾಫಿ ತೋಟ ಮಾಡಲು, ಗೇರು ಬೆಳೆಯಲು, ತೋಟಗಾರಿಕೆಯ ಕೆಲವು ಬೆಳೆಗಳನ್ನು ಪ್ರೋತ್ಸಾಹಿಸಲು ಈ ರೀತಿಯಾಗಿ ಮಾಡಿದೆ. ಆದರೆ ಈ ಸಾಮಾನ್ಯ ಐತಿಹಾಸಿಕ ಆಡಳಿತಾತ್ಮಕ ಸಂಗತಿಯನ್ನು ಟಿಪ್ಪುವಿಗೆ ಮಾತ್ರ ಅನ್ವಯಿಸಿ "ಉಳುವವನೇ ಒಡೆಯ" ಎಂಬ ನೀತಿಯ ಹರಿಕಾರ ಟಿಪ್ಪು ಎಂದು ಅಸಂಬದ್ಧವಾಗಿ ಊಳಿಗಮಾನ್ಯವನ್ನು ಸಮಾಜವಾದಕ್ಕೆ ಜೋಡಿಸುತ್ತಾರೆ.

ಇತಿಹಾಸದಲ್ಲಿ ಲಾವಣಿಕಾರರು ಆಸ್ಥಾನ ಕೃಪಾಪೋಷಿತರಾಗಿದ್ದರು. ಪ್ರಭುತ್ವದ ಸಾಧನೆಯನ್ನು ಇಂದಿನ ಸರ್ಕಾರೀ ಸಾಧನೆಗಳ ಜಾಹೀರಾತಿನ ಮಾದರಿ ಪ್ರಚಾರ ಮಾಡುವುದು ಲಾವಣಿಗರ ಕರ್ತವ್ಯವಾಗಿತ್ತು. ಹಾಗಾಗಿ ಆತನ ಕುರಿತಾಗಿ ಕೃಪಾಪೋಷಿತ ಲಾವಣಿ ಪದಗಳು ಸೃಷ್ಟಿಯಾಗಿರಬಹುದು. ಆ ಕೃಪಾಪೋಷಿತ ಲಾವಣಿಯನ್ನೇ ಇತಿಹಾಸ ಎನ್ನಲಾಗುತ್ತದೆಯೇ?

ಆತ ಪ್ರಬಲ ಸಂಖ್ಯೆಯ ಕೋಮಿನ ಒಕ್ಕಲಿಗ, ಲಿಂಗಾಯತ, ನಾಯಕರ ಭಾಷೆ, ಧರ್ಮವನ್ನ ಒಂದೆಡೆ ಓಲೈಸುತ್ತ ಇನ್ನೊಂದೆಡೆ ಆಯ್ದ ಅಲ್ಪ ಸಂಖ್ಯಾತ ಅಯ್ಯಂಗಾರರನ್ನು ಹತ್ಯೆಗೈದ. ಆತನ  ಕನ್ನಡ ಪ್ರೋತ್ಸಾಹ, ಹಿಂದೂ ಧಾರ್ಮಿಕ ದತ್ತಿಗಳು,  ಬಹುಸಂಖ್ಯಾತರ ಓಲೈಕೆಯ ಒಂದು ಭಾಗ.

ಆಧುನಿಕತೆಯ ಎಲ್ಲ ಆಕರ ಪರಿಕರಗಳನ್ನು ಹೊಂದಿದ್ದರೂ ಕೂಡಾ ಕೇವಲ ಹದಿನೆಂಟನೇ ಶತಮಾನದ ಟಿಪ್ಪು ಇತಿಹಾಸವನ್ನೇ ಸರಿಯಾಗಿ ವಿಶ್ಲೇಷಿಸಲಾಗದ ಬುದ್ಧಿವಂತರು ಹಿಂದೂ-ಬೌದ್ಧ-ಜೈನ-ಶೈವ ಪಂಥಗಳು ಪರಸ್ಪರ ರಕ್ತಕ್ರಾಂತಿ ನಡೆಸುತ್ತ ಸಾಗಿಬಂದ ಕರ್ನಾಟಕದ ಧಾರ್ಮಿಕ ವಿಕಸನವನ್ನು ಹೇಗೆಂದು ವಿಶ್ಲೇಷಿಸಿಯಾರು!?!

#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ
#ಕರ್ನಾಟಕವೆಂಬೋಕಮಂಗಿಪುರ
FIRE ಸಂಸ್ಥೆಯ ಸಹಾಯ ಕೋರಿ ಸಂಗೀತಾ ಭಟ್ ಬರದಿದ್ದುದರಿಂದ ಸಂಸ್ಥೆ ಆಕೆಗೆ ಸಹಾಯ ಮಾಡುತ್ತಿಲ್ಲವಂತೆ. ಸಂಸ್ಥೆಗೆ ಅದರದೇ ಆದ "ಚೌಕಟ್ಟು" ಇದೆಯಂತೆ. ಹಾಗೆಂದು ಸಂಸ್ಥೆಯ ಪರಿಚಯವಿರುವ ಸ್ನೇಹಿತ ನಿತೇಶ್ ಕುಂಟಾಡಿ Kuntady Nithesh ತಿಳಿಸಿದ್ದಾರೆ.

ಶೋಷಿತ ಮಹಿಳೆ ತನ್ನ ಬಾಗಿಲಿಗೆ ಬಂದು ಸಹಾಯ ಕೇಳಲಿ ಎಂಬ ನಿಯಮವೇ ಊಳಿಗಮಾನ್ಯ ಪದ್ದತಿ!

ಪದೇ ಪದೇ ಊಟಕ್ಕೆ ಕರೆದನೆಂಬ ಒಬ್ಬ ನಟಿಯ ದೂರಿಗೆ ಅಲ್ಲೋಲಕಲ್ಲೋಲ ಮಾಡುತ್ತಿರುವ ಚಳುವಳಿ ವೀರರು, ಬಿಡಿಬಿಡಿಯಾಗಿ ಪೀಡನೆಯನ್ನು ವರ್ಣಿಸಿರುವ ಸಂಗೀತಾ ಭಟ್ ರನ್ನೇಕೆ ಮೂಲೆಯಲ್ಲಿರಿಸಿದ್ದಾರೆ? ಆಕೆಗೆ ಸಾಂತ್ವನ, ಧೈರ್ಯ ನೀಡಿ ಆಕೆಯ ಪೀಡನೆಗೆ ಕಾರಣರಾದವರ ವಿರುದ್ಧ ಕ್ರಮ ಜರುಗಿಸಲು ಸಹಾಯ ಮಾಡುತ್ತಿಲ್ಲವೇಕೆ? ಆಕೆ ಕನ್ನಡ ಚಿತ್ರರಂಗದ ಕುರಿತು ಪ್ರಪ್ರಥಮವಾಗಿ ದೂರಿದ್ದಾಳೆಂದು ಹೆಸರಿಸಿದ್ದು ಬಿಟ್ಟರೆ ಲಕ್ಷ್ಯವೆಲ್ಲಾ ಸೋಲುವ ಕುದುರೆಯ ಮೇಲಿದೆ.

ಒಬ್ಬ ಸ್ನೇಹಿತ ಯಾ ಸಹೋದ್ಯೋಗಿ ಪದೇ ಪದೇ ಊಟಕ್ಕೆ ಆಟದ ಉದ್ದೇಶದಿಂದಲೇ ಕರೆದರೆ ಅದು ವೃತ್ತಿರಂಗದ ಕಾಮಪೀಡನೆ ಆಗುವುದಿಲ್ಲ. ಆತ ಅದರೊಂದಿಗೆ ವೃತ್ತಿಗೆ ಸಂಬಂಧಿಸಿದ ಯಾವುದಾದರೂ ಆಮಿಷವನ್ನೊಡ್ಡಿದಾಗ ಮಾತ್ರ ಅದು ಕಾಮಪೀಡಿತ. ಇಲ್ಲದಿದ್ದರೆ ಅದು ಇಬ್ಬರು ವಯಸ್ಕರ ನಡುವಿನ ಮಾತುಕತೆ ಮಾತ್ರ, ಇದು ಸಾಮಾನ್ಯ ಜ್ಞಾನ.

ಆಯ್ದ ಆಯ್ಕೆಯ ಶೋಷಿತರನ್ನು ಮಾತ್ರ (ಮ)ಮೆರೆಸುವ ಇಂತಹ ಚಳುವಳಿ, ಬುದ್ಧಿಜೀವಿ, ನಿವೇದನೆ, ಸಂಸ್ಥೆಗಳು ಸ್ವಾಸ್ಥ್ಯ ಸಮಾಜವನ್ನು ನಿರ್ಮಾಣ ಮಾಡಿಯಾವೆಯೇ?

ಯಾವುದೇ ನಿವೇದನೆಗಳನ್ನು ಸಹಿ ಹಾಕಿ ಹಂಚಿಕೊಳ್ಳುವ ಮುಂಚೆ ಸಂಚಿನ ಅರಿವಿರಲಿ.

#ಸೂಚನೆ: ನನ್ನ ಹಿಂದಿನ ಪೋಸ್ಟಿನಲ್ಲಿ ಉದ್ದೇಶಪೂರ್ವಕವಾಗಿ ಲಂಕೇಶರನ್ನು ಎಳೆದು ತಂದಿದ್ದೆ. ಏಕೆಂದರೆ ಲಂಕೇಶ್ ಆರತಿಗೆ ಹಾಗೆ ಹೇಳಿದ್ದರೋ ಇಲ್ಲವೋ ಅವರ ಭಕ್ತರು ಮಾತ್ರ ಆ ಕುರಿತಾಗಿ ಅವರು ತೀರಿಕೊಂಡ ನಂತರ ಬರೆದದ್ದೇ ಬರೆದದ್ದು!

ಲಂಕೇಶರ ಪರಂಪರೆ(?)ಯನ್ನು ಗುತ್ತಿಗೆ ಹಿಡಿದಿರುವ ಒಂದು ಬಹುದೊಡ್ಡ ಗುಂಪು ಅವರ ಅಮಾಯಕ ಮಗಳನ್ನು ಹುಯಿಲೆಬ್ಬಿಸಿ ದಿಕ್ಕೆಡಿಸಿ ಆದ ಅನಾಹುತ ದೇಶ ನೋಡಿದೆ.

ಈಗ ಅದೇ ಗುಂಪು, ದೇಶದ ಎಲ್ಲ ವಿವಾದಗಳಲ್ಲಿ ತಮಗೆ ಮೈಲೇಜ್ ಕೊಡುವ, ಸಂಗತಿಗಳನ್ನು ಮಾತ್ರ ಆಯ್ದುಕೊಂಡು (ವೀರಶೈವ ಲಿಂಗಾಯತ, ಅಯ್ಯಪ್ಪ, ಮೀಟೂ, ಇತ್ಯಾದಿ)
ತಮ್ಮ ವಿರೋಧಿಗಳಿಗೆ "F" ಮಾಡುವ ಏಕಮಾತ್ರ ಉದ್ದೇಶಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಜನತೆ ಆ ಉದ್ದೇಶಕ್ಕೆ ವ್ಯಾಸಲಿನ್ ಆಗಬಾರದು.

#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

ಲಂಕೇಶ್ ಆರತಿಯನ್ನು ಹಾಕಿಕೊಂಡು ಸಿನೆಮಾ ಮಾಡುತ್ತಿದ್ದಾಗ, ಪ್ರಣಯ ಸನ್ನಿವೇಶವೊಂದರಲ್ಲಿ ಆರತಿ "ಕಣ್ಣಲ್ಲೇ ಎಲ್ಲಾ ಕಾಮನೆ/ಭಾವನೆಗಳನ್ನು ತೋರಿಸುತ್ತೇನೆ" ಎಂದಳಂತೆ.

ಆಗ ಕಣ್ಣಲ್ಲೇ ಎಲ್ಲಾ ತೋರ್ಸೋದಾದ್ರೆ ಬೇರೇ ಅಂಗಾಗಗಳು ಏಕಿರಬೇಕು ಎಂದು ತಪರಾಕಿ ತಟ್ಟಿ ತಮಗೆ ಬೇಕಾದಂತೆ ಲಂಕೇಶ್ ಚಿತ್ರೀಕರಿಸಿಕೊಂಡರಂತೆ! ಇದು ಲಂಕೇಶರ ಒಂದು "ಕೋಡು", "ಕ್ರಿಯಾಶೀಲತೆ", "ಸೃಜನಶೀಲತೆ" ಎಂಬಂತೆ ಹೆಮ್ಮೆಯಿಂದ ಅವರ ಭಕ್ತರನೇಕರು ಬರೆದಿದ್ದನ್ನು ಸಾಕಷ್ಟು ಸಾರಿ ಓದಿದ್ದೇವೆ.

ಈಗ ಆ ಲಂಕೇಶರ ನಿರ್ದೇಶನದ, ಸಾಮಾಜಿಕ ಕಳಕಳಿಯ ಪರಂಪರೆಯನ್ನು (ವ್ಯಕ್ತಿತ್ವ, ವೈಯಕ್ತಿಕ ಜೀವನವಲ್ಲದ) ಹೊತ್ತಿರುವ ಪುತ್ರಿ, ಮತ್ತು ಲಂಕೇಶರನ್ನು ಆರಾಧಿಸುವ ಅಭಿಮಾನಿಗಳ ಪಡೆಯಿರುವ FIRE ಸಂಸ್ಥೆ, ನಿಜಕ್ಕೂ MeToo ಪರ ನಿಷ್ಪಕ್ಷಪಾತವಾಗಿರುತ್ತದೆಯೇ?

ಆತ ಒಂದು ಕ್ರಿಯಾಶೀಲ ಹೆಣ್ಣಿಗೆ ಅಂಗಾಂಗ ತೋರೆಂದುದು ಕ್ರಿಯಾತ್ಮಕವೂ, ಮತ್ತೊಬ್ಬ ಗಂಡು ಒಂದು ಹೆಣ್ಣನ್ನು ಊಟಕ್ಕೆ (ಆಟಕ್ಕೇ ಎಂದುಕೊಳ್ಳಿ) ಯಾವುದೇ ವೃತ್ತಿ ಸಂಬಂಧೀ ನಿಬಂಧನೆಗಳ ಒತ್ತಡವಿಲ್ಲದೆ ಕರೆದುದು ಕಾಮಪೀಡನೆ ಎಂದು ಪ್ರತಿಪಾದಿಸುವುದೇ ಹಾಸ್ಯಾಸ್ಪದ. ಹಾಗಿದ್ದರೆ ಸಂಗಾತಿಯನ್ನು ಬಯಸಿ ನಡೆಸುವ ಎಲ್ಲಾ ಸಾಮಾಜಿಕ ಪ್ರಕ್ರಿಯೆಗಳಾದ ವಧುವರಾನ್ವೇಷಣೆ, ಡೇಟಿಂಗ್, ಇತ್ಯಾದಿ ಕೂಡ ಕಾಮಪೀಡನೆಯೇ?!

ಡೇಟಿಂಗಿಗೆಂದೇ ಹೊರಕ್ಕೆ ಕರೆಯುವುದು ಕಾಮಪೀಡನೆಯಾಗುವುದಿಲ್ಲ. ಭಾರತೀಯ ಸಿನೆಮಾ ಉದ್ಯಮದಲ್ಲಿ ನಿಜ ಕಾಮಪೀಡನೆಯ ಪ್ರಕರಣಗಳು ಸಾರ್ವಭೌಮನಿಂದ ಹಿಡಿದು ಕ್ಲ್ಯಾಪ್ಬಾಯ್ಸ್ ವರೆಗೆ ಅಗಣಿತವಾಗಿವೆ. ಇದ್ದುದರಲ್ಲಿ ಸಂಗೀತಾ ಭಟ್ ಎತ್ತಿರುವ ದೂರು ಸತ್ಯಕ್ಕೆ ಸಮಂಜಸವಾಗಿದೆ. ಅಂತಹ ಪ್ರಕರಣಗಳನ್ನು ಬೆಳೆಕಿಗೆ ತರುವತ್ತ FIRE ಕಾರ್ಯೋನ್ಮುಖವಾಗಲಿ.

"Asking Out" doesn't constitute as "Sexual Harassment". You need a stronger case than mere "he asked me out"! The Indian film industry is full of such real strong cases. Hope FIRE would work to bring the real cases out.

#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

ಅನುವಾದದ ವಿಪತ್ತು

ಒಂದು ಕೃತಿಯನ್ನು ಮತ್ತೊಂದು ಭಾಷೆಗೆ ಅನುವಾದಿಸುವಾಗ ಅನುವಾದಕನಿಗೆ ಆ ಭಾಷೆಗಳಲ್ಲಿ ಅದೇನೇ ಪಾಂಡಿತ್ಯವಿದ್ದರೂ ಆಯಾಯ ಭಾಷೆಯನ್ನು ಮಾತನಾಡುವ ಪರಿಸರದಲ್ಲಿ ಅದನ್ನು ಮಾತನಾಡಿ ವ್ಯವಹರಿಸುವ ಅನುಭವವಿರದಿದ್ದರೆ ಆ ಅನುವಾದ ಅಭಾಸವೆನಿಸುತ್ತದೆ. ಒಂದು ಭಾಷಾ ಪರಿಸರದ ನುಡಿಗಟ್ಟು, ಪದ ಪ್ರಯೋಗ, ಹೆಸರುಗಳ ಉಚ್ಚಾರ ಮತ್ತೊಂದು ಭಾಷೆಯಲ್ಲಿ ಯಥಾವತ್ತಾಗಿ ಅನುವಾದಿಸಿದರೆ ವಿಪರ್ಯಾಸಕ್ಕೀಡಾಗುತ್ತದೆ.

ಒಂದು ನಾಟಿ ಆಡುಮಾತಿನ ಕನ್ನಡ ಕೃತಿಯನ್ನು ಇಂಗ್ಲೀಷ್ ನ ಗ್ರಾಂಥಿಕ ಪರಿಭಾಷೆಯಲ್ಲಿ ಅನುವಾದಿಸುವುದು ಎಷ್ಟು ಸರಿ? ಆ ಕೃತಿಯ ಲೇಖಕನ ಮೂಲ ಆಶಯ ಅನ್ಯಭಾಷಿಗರಿಗೆ ತಲುಪೀತೆ?

ಒಂದು ಭಾಷೆಯ ವಾಕ್ಯದಲ್ಲಿ ಅಂತರ್ಗತವಾದ ಅರ್ಥವನ್ನು ಮತ್ತೊಂದು ಭಾಷೆಯಲ್ಲಿ ಕೆಲವೊಮ್ಮೆ ಒಡೆದು ಹೇಳಬೇಕಾಗುತ್ತದೆ, ಹಾಗೆಯೇ ವೈಸ್ ವರ್ಸಾ ಕೂಡ.  ಹಾಗಾಗಿ ಮೂಲ ಕೃತಿಗೆ ಚ್ಯುತಿ ಬರದಂತೆ ಅದರ ಭಾವಾರ್ಥಕ್ಕೆ ಬದ್ಧರಾಗಿ ಒಂದು ಪ್ರಾದೇಶಿಕ ಭಾಷೆಯ ಕೃತಿಯನ್ನು ಇಂಗ್ಲಿಷಿನ ಜಾಗತಿಕ ಪರಿಭಾಷೆಗನುಗುಣವಾಗಿ, ಆ ಪ್ರಾದೇಶಿಕತೆಯ ವಿಶಿಷ್ಟತೆಯನ್ನು ತೋರಿಸಿಕೊಡುತ್ತ ನಾಜೂಕಾಗಿ ಅನುವಾದಿಸಬೇಕೆಂಬುದು ನನ್ನ ಅಭಿಪ್ರಾಯ.

ಆ ರೀತಿಯ ಅನುವಾದದ ಪ್ರಯತ್ನವೇ ನನ್ನ ಅನುವಾದಿತ ಜುಗಾರಿ ಕ್ರಾಸ್!

ಇದರ ಸ್ಯಾಂಪಲ್ ಆಗಿ ಒಂದು ಮೂಲ ಅಧ್ಯಾಯ ಮತ್ತು ಅನುವಾದಿತ ಅಧ್ಯಾಯ ಇಲ್ಲಿದೆ. ದಯವಿಟ್ಟು ತಮ್ಮ ಅಭಿಪ್ರಾಯ ತಿಳಿಸಿ. ಈ ಕುರಿತು ಜ್ಞಾಪಿಸಿದ Vasant Shetty, ಹಾಗೂ Amar Holegadde ಅವರಿಗೆ ಧನ್ಯವಾದಗಳು!