ಭಗವದ್ಗೀತೆ ಮತ್ತು ವಚನಗಳು, ಒಂದು ತೌಲನಿಕ ಅಧ್ಯಯನ!
ಪ್ರಾದೇಶಿಕವಾಗಿ ಭಾಷೆ, ಆಹಾರ, ಜನಾಂಗೀಯ ವಂಶೀಯತೆ, ಭೌಗೋಳಿಕ ಮತ್ತು ಸಾಂಸ್ಕೃತಿಕ ವ್ಯತ್ಯಾಸಗಳಿದ್ದರೂ ಸಹ, ಎಲ್ಲಾ ಪ್ರದೇಶಗಳ ನಡುವೆ ಅನೇಕ ಸಾಮ್ಯತೆಗಳು ಇವೆ. ಕನ್ನಡ, ಇಂಗ್ಲಿಷ್, ಹಿಂದಿ, ಸ್ಪ್ಯಾನಿಷ್, ಜರ್ಮನ್ ಅಥವಾ ಫ್ರೆಂಚ್ ಆಗಿರಲಿ, ಭಾಷಿಕವಾಗಿ ಈ ಸಾಮಾನ್ಯ ಅಂಶಗಳನ್ನು ಪ್ರತಿನಿಧಿಸುವ ಉತ್ತಮ ಉದಾಹರಣೆಗಳೆಂದರೆ ನಾಣ್ನುಡಿಗಳು! ಎಲ್ಲವುಗಳಲ್ಲೂ ಅಂತರಾರ್ಥದ ಮೂಲ ಸಾರ ಒಂದೇ ಆಗಿರುತ್ತದೆ. ಜನಾಂಗೀಯ ವಂಶೀಯತೆ ಮತ್ತು ಸಂಸ್ಕೃತಿಗಳ ಆಧಾರದ ಮೇಲೆ ಉಪಮೆ ಮತ್ತು ರೂಪಕಗಳ ನಿರೂಪಣೆ ವಿಭಿನ್ನವಾಗಿರಬಹುದು, ಆದರೆ ಅವು ಬೋಧಿಸುವ ನೈತಿಕ ಮೌಲ್ಯಗಳ ಸಾರವು ಜಾಗತಿಕವಾಗಿ ಸಾರ್ವತ್ರಿಕವೆನಿಸುತ್ತದೆ. ನಮ್ಮ ಪೂರ್ವಜರ ಜೀವನದ ಪಾಠಗಳಿಂದ ರೂಪುಗೊಂಡ ಈ ಬುದ್ಧಿವಾದದ ಮಾತುಗಳು, ಚುರುಕಾದ, ಸ್ಪಷ್ಟವಾದ, ಸರಳವಾದ ವಾಕ್ಯಗಳಲ್ಲಿ ತಲೆಮಾರುಗಳಿಂದ ತಲೆಮಾರುಗಳಿಗೆ ಉಳಿದುಕೊಂಡಿವೆ. ಕುತೂಹಲಕರ ವಿಷಯವೆಂದರೆ, ಎಲ್ಲ ವಂಶೀಯ ಗುಂಪುಗಳಲ್ಲೂ ಇರುವ ಈ ಏಕವಾಕ್ಯದ ಬುದ್ಧಿವಾದಗಳು, ಮಾನವಕುಲವೆಲ್ಲವೂ ಒಂದೇ ಎಂದು ಬೋಧಿಸುತ್ತವೆ.
ನಾವು ಹೊಸ ಭಾಷೆಗಳನ್ನು ಕಲಿಯುವಾಗ ಮತ್ತು ಆ ಭಾಷೆಗಳ ನಡುವೆ ಇರುವ ಗಮನಾರ್ಹ ಸಾದೃಶ್ಯಗಳನ್ನು ಗುರುತಿಸುವಾಗ, ಅದು ನಮಗೆ ಯಾವಾಗಲೂ ಅಚ್ಚರಿಯನ್ನುಂಟುಮಾಡುತ್ತದೆ. ದೂರದ ಅಂತರ ಮತ್ತು ಜನಾಂಗೀಯ ವಂಶೀಯತೆ, ಜೀವನಶೈಲಿ ಮತ್ತು ಸಂಸ್ಕೃತಿಯ ವ್ಯತ್ಯಾಸಗಳಿದ್ದರೂ ಸಹ, ನೈತಿಕ ಮೌಲ್ಯಗಳು ಮತ್ತು ಮಾನವೀಯ ಭಾವನೆಗಳು ಒಂದೇ ಆಗಿವೆ. ಸುಂದರ ಮತ್ತು ಸರಳ ಜೀವನದ ಭಾವನೆಯೇ ಎಲ್ಲ ಸಂಸ್ಕೃತಿಗಳ ಏಕಮಾತ್ರ ಧ್ಯೇಯವಾಗಿತ್ತು ಎಂದು ಅನಿಸುತ್ತದೆ. ಉದಾಹರಣೆಗೆ, ಕನ್ನಡದ ಗಾದೆ, "ಮನಸ್ಸಿದ್ದರೆ ಮಾರ್ಗ" ಎಂಬುದು ಇಂಗ್ಲಿಷಿನಲ್ಲಿ "Where there is a will, there's a way" ಎಂದಾದರೆ ಸ್ಪ್ಯಾನಿಷ್ ಭಾಷೆಯಲ್ಲಿ "donde hay gana, hay mana" ಎಂದಿದೆ. ಅದೇ ಗಾದೆಯ ಇಟಾಲಿಯನ್ ಭಾಷೆಯಲ್ಲಿ "Volere è potere" ಎಂದೂ, ಫ್ರೆಂಚಿನಲ್ಲಿ, Quand on veut, on peut ಎಂದಿದೆ. ಹೀಗೆ ಒಂದೇ ಗಾದೆಯ ಸಮಾನಾರ್ಥಕ ಗಾದೆಗಳು ಮನುಷ್ಯರ ನಡುವೆ ಯಾವುದೇ ಸಂಪರ್ಕವಿರದಿದ್ದ ಕಾಲದಿಂದಲೂ ಸಮಾನವಾಗಿವೆ. ಇಂತಹ ಐವತ್ತಕ್ಕೂ ಹೆಚ್ಚು ಸ್ಪ್ಯಾನಿಷ್ ಮತ್ತು ಕನ್ನಡದ ಗಾದೆಗಳನ್ನು ಮಿತ್ರರಾದ ರಂಗಸ್ವಾಮಿ ಮೂಕನಹಳ್ಳಿಯವರು "ಸ್ಪ್ಯಾನಿಷ್ ಗಾದೆಗಳು" ಎಂಬ ಕೃತಿಯನ್ನು ಬರೆದಿದ್ದರು. ಅದನ್ನು ನಾನು ಇಂಗ್ಲಿಷಿಗೆ ಅನುವಾದಿಸಿದ್ದೆ. ಕುತೂಹಲದಿಂದ ಈ ಐವತ್ತು ಗಾದೆಗಳನ್ನು ಇಟಾಲಿಯನ್ ಮತ್ತು ಫ್ರೆಂಚಿನಲ್ಲಿ ಹುಡುಕಿದಾಗ ಆ ಭಾಷೆಗಳಲ್ಲೂ ಸಮಾನಾರ್ಥಕ ಗಾದೆಗಳಿರುವುದು ತಿಳಿಯಿತು.
ಹೀಗೆ ಜಾಗತಿಕವಾಗಿ ಗಾದೆಗಳು ಹೇಗೆ ಒಂದೇ ಎನ್ನುವಂತೆ ಇರುವವೋ ಅದೇ ರೀತಿ ಮಾನವನ ವೈಯಕ್ತಿಕ ಮತ್ತು ಸಾಮಾಜಿಕ ಜೀವನ ಮೌಲ್ಯಗಳನ್ನು ಎಲ್ಲ ಮತಧರ್ಮಗಳೂ ಹೊಂದಿವೆ. ಆದರೆ ಈ ಮತಧರ್ಮಗಳಲ್ಲಿ ಆಚರಣೆಯ ವಿಷಯಗಳನ್ನು ಬೇರ್ಪಡಿಸಿ ಕೇವಲ ಮಾನವ ಮೌಲ್ಯಗಳನ್ನು ಪರಿಗಣಿಸಿದಾಗ ಅವೆಲ್ಲವೂ ಒಂದೇ ಆಗಿವೆ ಮತ್ತವು ಮತಧರ್ಮಗಳ ಹೊರತಾಗಿವೆ.
ಇಂತಹ ಧರ್ಮಾಚರಣೆಯ ಆಚೆಗಿನ ನೈತಿಕತೆಯು ಭಗವದ್ಗೀತೆಯ ಕರ್ಮಯೋಗವಾಗಿ ವಚನಗಳಲ್ಲಿ "ಕಾಯಕವೇ ಕೈಲಾಸ"ವಾಗಿದೆ.
ಹೀಗೆ ಸನಾತನವಾಗಿದ್ದ ಮತಧರ್ಮಗಳ ಸಂಹಿತೆಗನುಗುಣವಾಗಿ ಇದ್ದಂತಹ ಜೀವನ ಮೌಲ್ಯಗಳನ್ನು ಕೃಷ್ಣನು ಸರಳೀಕರಿಸಿ ಸಂಸ್ಕೃತದಲ್ಲಿ ಭಗವದ್ಗೀತೆಯ ರೂಪದಲ್ಲಿ ಹೇಳಿದ್ದಾನೆ ಎನ್ನುವಂತೆಯೇ ಬಸವಣ್ಣ ಮತ್ತು ಶರಣರು ಸಹ ಸಾಮೂಹಿಕವಾಗಿ ಕನ್ನಡದಲ್ಲಿ ವಚನಗಳ ಮೂಲಕ ಹೇಳಿದರೇ ವಿನಃ "ಛೂ ಮಂತರ್" ಎಂದು ಶೂನ್ಯದಿಂದ ವಚನಗಳನ್ನು ಸೃಷ್ಟಿಸಲಿಲ್ಲ. ಈ ಎಲ್ಲಾ ಮಾನವ ಮೌಲ್ಯಗಳನ್ನು ಕೃಷ್ಣಬಸವಾದಿಶರಣರು ಸನಾತನ ವೇದಾಗಮ ಶಾಸ್ತ್ರಗಳಿಂದ ಹೆಕ್ಕಿ ಹಾಲಿಗೆ ಹೆಪ್ಪು ಹಾಕಿ, ಕಡೆದು ಬೆಣ್ಣೆಯನ್ನು ತೆಗೆದು ತುಪ್ಪ ಮಾಡಿ ಬಡಿಸಿದ್ದಾರೆ. ಇಂತಹ ಕೆನಪದರವನ್ನು ಕೊಟ್ಟಿರುವ ಕಾರಣವೇ ಶ್ರೀಸಾಮಾನ್ಯನಿಗೆ ಸಂಸಾರಿಕ ಜೀವನ ಸಾಗಿಸಲು ಬೇರೇನೂ ಬೇಕಿಲ್ಲದೇ ಇಷ್ಟನ್ನು ಪಾಲಿಸಿಕೊಂಡು ಹೋದರೆ ಸಾಕು ಎಂಬರ್ಥದಲ್ಲಿ ಗೀತೆ ಮತ್ತು ವಚನಗಳು ಇವೆ. ಹಾಗಾಗಿಯೇ ಇದು ಭಕ್ತ ಸ್ಥಲ ಯೋಗಾಚಾರ! ಭಕ್ತ ಸ್ಥಲ ಯೋಗಾಚಾರಕ್ಕಿಂತ ಹೆಚ್ಚಿನ ಆಧ್ಯಾತ್ಮಿಕ ಸಾಧನೆಗೆ ಹೆಚ್ಚಿನ ಅಧ್ಯಯನ, ತಪಸ್ಸು ಬೇಕಾಗುತ್ತದೆ. ಅದಕ್ಕೆ ಯೋಗದ ಅಷ್ಟಾಂಗ ಯೋಗವಿದ್ದರೆ ವೀರಶೈವದಲ್ಲಿ ಮಾಹೇಶ್ವರ, ಪ್ರಸಾದಿ, ಪ್ರಾಣಲಿಂಗಿ, ಶರಣ, ಐಕ್ಯ ಎಂಬ ಷಟ್ಸ್ಥಲಗಳು ಇರುವದು. ಹೀಗೆ ಒಂದು ಸಾಮಾನ್ಯ ತೌಲನಿಕ ಅವಲೋಕನವನ್ನು ಕೈಗೊಂಡರೆ ಎಲ್ಲವೂ ಸ್ಫಟಿಕ ಸದೃಶ ಅನಿಕೇತನದ ಗಮ್ಯವನ್ನೇ ತೆರೆದಿಡುತ್ತದೆ!
ಇರಲಿ, ಭಗವದ್ಗೀತೆಯು ಸಾಮಾಜಿಕ ಜೀವನದಲ್ಲಿ ಮಾನವನು ವಹಿಸಬಹುದಾದ ಹಲವಾರು ಕರ್ತವ್ಯ (ಪಾತ್ರ)ಗಳ ವೃತ್ತಿಪರತೆ, ಕರ್ತವ್ಯ ಸಂಹಿತೆ, ಮತ್ತು ನಡಾವಳಿಗಳ ಕೈಪಿಡಿಯಾಗಿದೆ. ಇಲ್ಲಿ ಯಾವುದೇ ಮತಧರ್ಮ ಆಚರಣೆಯ ವಿವರಗಳಿರದೇ ಕೇವಲ ಆಯಾಯ ಜವಾಬ್ದಾರಿಗಳನ್ನು ಯಾವುದೇ ಅರಿಷಡ್ವರ್ಗಗಳಿಗೆ ಎಡೆಯಾಗದೆ ಹೇಗೆ ನಿರ್ವಹಿಸಬೇಕು ಎಂಬ ಕರ್ತವ್ಯ ನಿರ್ವಹಣೆ ನಿಯಮಗಳ ಅನುಸೂಚಿ (code of conduct) ಯ ಮಾರ್ಗದರ್ಶಿಕೆಯಾಗಿ ಹೇಳಲಾಗಿದೆ. ಇಲ್ಲಿ ಮಾನವನೆಂದರೆ ಕೇವಲ ಪುರುಷನಲ್ಲದೆ ಸ್ತ್ರೀಪುರುಷರಾದಿಯಾಗಿ ಎಲ್ಲಾ ಲಿಂಗಾತೀತರೂ ನಿರ್ವಹಿಸಬಹುದಾದ ವೈಯಕ್ತಿಕ ಶಿಶುಧರ್ಮ, ವಿದ್ಯಾರ್ಥಿಧರ್ಮ, ಗುರುಧರ್ಮ, ಪಿತೃಧರ್ಮ, ಮಾತೃಧರ್ಮ, ಗೃಹಸ್ಥಧರ್ಮ, ಮಿತ್ರಧರ್ಮಗಳಲ್ಲದೆ ಸಾಮಾಜಿಕವಾಗಿರುವ ರಾಜ, ಸೈನಿಕ, ದಾಸ, ದಾಸಿಯರಾದಿಯಾಗಿ ಆಚರಿಸುವ ಅವರವರ ವೃತ್ತಿಧರ್ಮವನ್ನು ಹೇಗೆ ರಾಗದ್ವೇಷಗಳಿಗೊಳಗಾಗದೆ ನಿರ್ವಹಿಸಬೇಕು ಎನ್ನುವುದನ್ನು ಹೇಳಲಾಗಿದೆ. ಅಂತೆಯೇ ಅಂತಹ ಕರ್ತವ್ಯಮುಖಿ ಸ್ಥಿತಪ್ರಜ್ಞತೆಯನ್ನು ಸಾಧಿಸುವ ಕರ್ಮಯೋಗಮಾರ್ಗವನ್ನು ವಿವರಿಸಲಾಗಿದೆ ಎಂದು ಸಂಕ್ಷಿಪ್ತವಾಗಿ ಹೇಳಬಹುದು.
ಇಲ್ಲಿ ಕರ್ಮ ಎಂಬುದು ಕಾಯಕವೇ ಆಗಿದೆ! ಹಾಗಾಗಿ ಗೀತೆ ಮತ್ತು ವಚನಗಳ ಸಾಮ್ಯತೆಯನ್ನು ಗಮನಿಸೋಣ. ಮೊದಲಿಗೆ ಗೀತೆಯ ಪ್ರಮುಖ ಬೋಧನೆಗಳನ್ನು ಪರಿಶೀಲಿಸಿ ನಂತರ ಅವುಗಳ ಸಮಾನಾರ್ಥದ ವಚನಗಳನ್ನು ತಾಳೆ ಹಾಕಿ ತೂಲಿಸಿ ನೋಡೋಣ.
ಭಗವದ್ಗೀತೆಯ ಪ್ರಮುಖ ಬೋಧನೆಗಳು ಹೀಗಿವೆ:
"ನಿನಗೆ ನಿಗದಿತ ಕರ್ತವ್ಯವನ್ನು ನಿರ್ವಹಿಸುವ ಹಕ್ಕು ಇದೆ, ಆದರೆ ಕರ್ಮ ಫಲಗಳಿಗೆ ನೀನು ಅರ್ಹನಲ್ಲ." (ಅಧ್ಯಾಯ 2, ಶ್ಲೋಕ 47)
"ಧರ್ಮದ ಅವನತಿ ಮತ್ತು ಅಧರ್ಮದ ಉನ್ನತಿಯಾದಾಗಲೆಲ್ಲಾ, 'ನಾನು' ಉದ್ಭವಿಸುತ್ತೇನೆ" (ಅಧ್ಯಾಯ 4, ಶ್ಲೋಕ 7)
"'ನಾನು' ಎಲ್ಲಾ ಆಧ್ಯಾತ್ಮಿಕ ಮತ್ತು ಭೌತಿಕ ಲೋಕಗಳ ಮೂಲ. ಎಲ್ಲವೂ 'ನನ್ನಿಂದ' ಹೊರಹೊಮ್ಮುತ್ತದೆ." (ಅಧ್ಯಾಯ 10, ಶ್ಲೋಕ 8)
ಇಲ್ಲಿ 'ನಾನು' ಎನ್ನುವದು ಕೃಷ್ಣನಲ್ಲ, ಆತ್ಮ! ನಾನು, ನನ್ನಿಂದ ಎನ್ನುವುದು ಆತ್ಮವನ್ನು ಕುರಿತಾಗಿದೆ. ಒಟ್ಟಾರೆ ಗೀತೆಯ ಅಂತಿಮ ಸಂದೇಶವು, "ಜಾಗೃತಿಯಿಂದ ಬಾಳುವುದು, ನಿಸ್ವಾರ್ಥವಾಗಿ ತನ್ನ ಕರ್ತವ್ಯವನ್ನು ನಿರ್ವಹಿಸುವುದು, ಭಕ್ತಿಯನ್ನು ಬೆಳೆಸುವುದು, ನಿಜವಾದ ಜ್ಞಾನವನ್ನು ಅನ್ವೇಷಿಸುವುದು, ಮತ್ತು 'ತನ್ನ' ಶಾಶ್ವತ ಸ್ವರೂಪವನ್ನು ಅರಿತುಕೊಳ್ಳುವುದು — ಇದರ ಮೂಲಕ ಆಂತರಿಕ ಶಾಂತಿ (ಆತ್ಮ) ಮತ್ತು ಅಂತಿಮ ಮುಕ್ತಿ (ಪರಮಾತ್ಮ) ಪಡೆಯುವುದು" ಎಂದಿದೆ.
ಹೀಗೆ ಗೀತೆಯ ಆತ್ಮ(ಕೃಷ್ಣ) ದ ಸಮಗ್ರ ಸಾರವೇ ವಚನಗಳ ಆತ್ಮ (ಲಿಂಗ) ದ ವಿಸ್ತೃತ ವಾಣಿಗಳಾಗಿವೆ.
ಉದಾಹರಣೆಗೆ ಗೀತೆಯ, "ಯೋಗಸ್ಥಃ ಕುರು ಕರ್ಮಾಣಿ ಸಂಗಂ ತ್ಯಕ್ತ್ವಾ ಧನಂಜಯ ।
ಸಿದ್ಧ್ಯಸಿದ್ಧ್ಯೋಃ ಸಮೋ ಭೂತ್ವಾ ಸಮತ್ವಂ ಯೋಗ ಉಚ್ಯತೇ॥"
(ಯೋಗದಲ್ಲಿ ಸ್ಥಿರನಾಗಿರುವ ಅರ್ಜುನ, ಆಸಕ್ತಿಯನ್ನು ತ್ಯಜಿಸಿ ಕರ್ಮಗಳನ್ನು ಮಾಡು, ಯಶಸ್ಸು ಮತ್ತು ವೈಫಲ್ಯದಲ್ಲಿ ಸಮಭಾವನೆಯಿಂದ ಇರು; ಮನಸ್ಸಿನ ಸಮತೋಲನವೇ ಯೋಗ ಎಂದು ಕರೆಯಲ್ಪಡುತ್ತದೆ.)
"ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ ।
ಮಾ ಕರ್ಮಫಲಹೇತುರ್ಭೂರ್ಮಾ ತೇ ಸಂಗೋಽಸ್ತ್ವಕರ್ಮಣಿ॥"
(ನಿನಗೆ ನಿರ್ದಿಷ್ಟ ಕರ್ತವ್ಯವನ್ನು ನಿರ್ವಹಿಸುವ ಹಕ್ಕು ಇದೆ, ಆದರೆ ಕರ್ಮ ಫಲಗಳಿಗೆ ನೀನು ಅರ್ಹನಲ್ಲ. ನಿಮ್ಮ ಚಟುವಟಿಕೆಗಳ ಫಲಗಳ ಕಾರಣ ಎಂದು ಎಂದಿಗೂ ಭಾವಿಸಬೇಡ, ಮತ್ತು ನಿಷ್ಕ್ರಿಯತೆಗೆ ಆಸಕ್ತಿ ಹೊಂದಬೇಡ.) ಎನ್ನುವುದನ್ನು ಆಯ್ದಕ್ಕಿ ಮಾರಯ್ಯನು ತನ್ನ ವಚನದಲ್ಲಿ,
"ಕಾಯಕದಲ್ಲಿ ನಿರತನಾದಡೆ, ಗುರುದರ್ಶನವಾದಡೂ ಮರೆಯಬೇಕು,
ಲಿಂಗಪೂಜೆಯಾದಡೂ ಮರೆಯಬೇಕು,
ಜಂಗಮ ಮುಂದೆ ನಿಂದಿದ್ದಡೂ ಹಂಗ ಹರಿಯಬೇಕು.
ಕಾಯಕವೆ ಕೈಲಾಸವಾದ ಕಾರಣ.
ಅಮರೇಶ್ವರಲಿಂಗವಾಯಿತ್ತಾದಡೂ ಕಾಯಕದೊಳಗು"
ಎಂದಿದ್ದಾನೆ.
ಅದೇ ರೀತಿ, "ವಾಸಾಂಸಿ ಜೀರ್ಣಾನಿ ಯಥಾ ವಿಹಾಯ
ನವಾನಿ ಗೃಹ್ಣಾತಿ ನರೋಽಪರಾಣಿ ।
ತಥಾ ಶರೀರಾಣಿ ವಿಹಾಯ ಜೀರ್ಣಾ-
ನ್ಯನ್ಯಾನಿ ಸಂಯಾತಿ ನವಾನಿ ದೇಹೀ ॥"
(ಹಳೆಯವುಗಳನ್ನು ತ್ಯಜಿಸಿದ ನಂತರ ವ್ಯಕ್ತಿಯು ಹೊಸ ಬಟ್ಟೆಗಳನ್ನು ಧರಿಸುವಂತೆ, ಹಾಗೆಯೇ ಆತ್ಮವು ಹಳೆಯ ಮತ್ತು ನಿಷ್ಪ್ರಯೋಜಕವಾದ ದೇಹಗಳನ್ನು ತ್ಯಜಿಸಿದ ನಂತರ ಹೊಸ ಭೌತಿಕ ದೇಹಗಳನ್ನು ಸ್ವೀಕರಿಸುತ್ತದೆ.)
"ನೈನಂ ಛಿಂದಂತಿ ಶಸ್ತ್ರಾಣಿ ನೈನಂ ದಹತಿ ಪಾವಕಃ ।
ನ ಚೈನಂ ಕ್ಲೇದಯಂತ್ಯಾಪೋ ನ ಶೋಷಯತಿ ಮಾರುತಃ॥"
(ಯಾವುದೇ ಆಯುಧದಿಂದ ಆತ್ಮವನ್ನು ತುಂಡು ತುಂಡಾಗಿ ಮಾಡಲಾಗುವುದಿಲ್ಲ, ಅಗ್ನಿಯಿಂದ ಸುಡಲಾಗುವುದಿಲ್ಲ, ನೀರಿನಿಂದ ನೆನೆಸಲಾಗುವುದಿಲ್ಲ, ಅಥವಾ ಗಾಳಿಯಿಂದ ಒಣಗಿಸಲಾಗುವುದಿಲ್ಲ.) ಎನ್ನುವುದನ್ನೇ ವೀರಶೈವ ಸಿದ್ಧಾಂತವು ಆತ್ಮವನ್ನು ಲಿಂಗರೂಪಿಯಾಗಿ ಕೊಟ್ಟಿದೆ. ಲಿಂಗಕ್ಕೆ ಯಾವುದೇ ಮೈಲಿಗೆಯಿಲ್ಲ. ಇದನ್ನು ಒಮ್ಮೆ ಧರಿಸಿದರೆ ತೆಗೆಯುವ ಪ್ರಮೇಯವೇ ಇಲ್ಲ. ಹಾಗಾಗಿಯೇ ದೇವರ ದಾಸಿಮಯ್ಯನು ನಡುವೆ ಸುಳಿವಾತ್ಮ ಗಂಡೂ ಅಲ್ಲ, ಹೆಣ್ಣೂ ಅಲ್ಲ ಎಂದಿರುವುದು. ಆತ್ಮಕ್ಕೆ ಯಾವುದೇ ಮಡಿ, ಮೈಲಿಗೆ, ಹುಟ್ಟು, ಸಾವು, ಹಸಿವು ಎಂಬುದಿಲ್ಲ ಎಂದು ಅನೇಕ ವಚನಕಾರರು ತಮ್ಮ ವಚನಗಳಲ್ಲಿ ಹೇಳಿದ್ದಾರೆ. ಇದನ್ನೇ ಮೋಳಿಗೆ ಮಾರಯ್ಯನು,
"ವಸ್ತುವ ಮುಟ್ಟಿ ಇಹಪರದಲ್ಲಿ ಸುಖಿಯಾದೆನೆಂಬನ್ನಬರ,
ಅದು ತನ್ನ ನೆಲೆಯೋ? ಆತ್ಮನ ಭೇದವೋ? ಎಂಬುದ ತಾನರಿತಲ್ಲಿ,
ಇಷ್ಟಲಿಂಗಕ್ಕೆ ದೃಷ್ಟವ ಕೊಟ್ಟು, ಆತ್ಮಲಿಂಗಕ್ಕೆ ತೃಪ್ತಿಯ ಕೊಟ್ಟು,
ನಿಶ್ಚಯಿಸಿಕೊಂಡೆಹೆನೆಂಬುದು ಅದೇನು ಹೇಳಾ.
ಉಭಯಭಿನ್ನವುಳ್ಳನ್ನಕ್ಕ ಪ್ರಾಣಲಿಂಗಿಯಲ್ಲ,
ನಿಃಕಳಂಕ ಮಲ್ಲಿಕಾರ್ಜುನಾ."
ಎಂದಿದ್ದಾನೆ.
ಗೀತೆಯ, "ಸಮದುಃಖಸುಖಃ ಸ್ವಸ್ಥಃ ಸಮಲೋಷ್ಟಾಶ್ಮಕಾಂಚನಃ ।
ತುಲ್ಯಪ್ರಿಯಾಪ್ರಿಯೋ ಧೀರಸ್ತುಲ್ಯನಿಂದಾತ್ಮಸಂಸ್ತುತಿಃ॥"
(ಎಲ್ಲರೂ ಸಂತೋಷ ಮತ್ತು ದುಃಖದಲ್ಲಿ ಸಮಾನ. ಆತ್ಮದಲ್ಲಿ ಕಲ್ಲು, ಮಣ್ಣು, ಚಿನ್ನ ಸಮಾನವೆಂಬ ಸಮಭಾವ ಸ್ಥಾಪಿಸುವಂತೆ, ಬುದ್ಧಿವಂತನು ಪ್ರಶಂಸೆ ಮತ್ತು ದೂಷಣೆಯನ್ನು ಸಮಾನವಾಗಿ ಪರಿಗಣಿಸುವವನು.) ಎನ್ನುವುದನ್ನು ವಚನಕಾರ ಸಿದ್ಧರಾಮನು,
"ವರ್ಗ ಪಟ್ಟಣದಲ್ಲಿ ಎರಡೆಂಟು ಕಳೆಗಳನು
ಹದುಳ ಪಟ್ಟಣಮಾಡಿ ಒಪ್ಪಿತೋರಿ
ಸಮತೆ ಅಧಿಕಾರದ ಸುಮತಿಯಾದುದು.
ಗ್ರಾಮ ಭ್ರಮೆಗೆಟ್ಟುದೈ ಬಿಡು ಜ್ಯೋತಿಮತಿರ್ಮಯವೈ.
ಆನಂದ ಪಾತ್ರೆಯ ಸಮತೆ ತೈಲವನೆರೆಯೆ
ಬೆಳಗು ಪ್ರಭೆಯಾಗಿ ದೆಸೆದೆಸೆಗೆವರಿದು,
ಅತಿಶಯದ ನಿತ್ಯ ಕಪಿಲಸಿದ್ಧಮಲ್ಲಿಕಾರ್ಜುನನ
ಎಯ್ದಿದ ಬೆಳಗು ಸಮತೆಯಾದೆ." ಎಂದಿದ್ದಾನೆ.
ಅದನ್ನೇ ಅಕ್ಕಮ್ಮನು, "ಸಮಶೀಲ ನೇಮ ಒಂದಾದಲ್ಲಿ ಉಡುವ ತೊಡುವ ಕೊಡುವ ಕೊಂಬ
ಅಡಿಯೆಡೆ ಮುಂತಾಗಿ ಸಕ್ಕರೆಯ ಬುಡಶಾಖೆಯಂತೆ
ಮಧುರಕ್ಕೆ ಹೆಚ್ಚು ಕುಂದಿಲ್ಲದೆ ಇಪ್ಪ ನೇಮ ಕಟ್ಟಾಚಾರ ನಿಶ್ಚಯವಾದವಂಗೆ,
ಅಂಗ ಹಲವಲ್ಲದೆ ಕುಂದಣ ಒಂದೆ ಭೇದ.
ನೇಮ ಹಲವಲ್ಲದೆ ಜ್ಞಾನವೊಂದೆ ಭೇದ.
ಭೂಮಿ ಹಲವಲ್ಲದೆ ಅಪ್ಪುವೊಂದೆ ಭೇದ, ಬಂದ ಯೋನಿ ಒಂದೆ.
ತಾ ಮುಂದಿಕ್ಕುವ ಯೋನಿ ಒಂದಾದ ಕಾರಣ.
ಹಿಟ್ಟು ಹಲವಾದಡೆ ಅಪ್ಪದಕಲ್ಲು ಒಂದೆಯಾದಂತೆ.
ಇದು ತಪ್ಪದ ಆಚಾರ, ಇದಕ್ಕೆ ಮಿಥ್ಯತಥ್ಯವಿಲ್ಲ, ತಪ್ಪದು ನಿಮ್ಮಾಣೆ.
ಆಚಾರಕ್ಕರ್ಹನಾದ ರಾಮೇಶ್ವರಲಿಂಗವೆ ನೀನೆ ಬಲ್ಲೆ." ಎಂದಿದ್ದಾಳೆ.
ಗುರು ಚೆನ್ನಬಸವಣ್ಣನು, "ಗುರುವಿನಲ್ಲಿ ಸದಾಚಾರಿ, ಲಿಂಗದಲ್ಲಿ ಶಿವಾಚಾರಿ, ಜಂಗಮದಲ್ಲಿ ಸಮಯಾಚಾರಿ.
ಇಂತೀ ತ್ರಿವಿಧಾಚಾರ ಸಂಬಂಧವಾದ ಬಳಿಕ
ತನ್ನ ಶೀಲಕ್ಕೆ ಸಮಶೀಲವಾಗದವರ
ಮನೆಯಲನುಸರಿಸಿ ನಡೆದಡೆ ಕೂಡಲಚೆನ್ನಸಂಗನ ಶರಣ,
ಪೂರ್ವಾಚಾರ್ಯ ಸಂಗನಬಸವಣ್ಣ ಮೆಚ್ಚ ಕಾಣಿರಣ್ಣಾ." ಎಂದಿದ್ದಾನೆ.
ಭಕ್ತಿಯ ಕುರಿತಾದ ಗೀತೆಯ ಶ್ಲೋಕ, "ಮನ್ಮನಾ ಭವ ಮದ್ಭಕ್ತೋ ಮದ್ಯಾಜೀ ಮಾಂ ನಮಸ್ಕುರು ।
ಮಾಮೇವೈಷ್ಯಸಿ ಯುಕ್ತ್ವೈವಮಾತ್ಮಾನಂ ಮತ್ಪರಾಯಣಃ॥"
(ನನ್ನ ಮೇಲೆ ನಿನ್ನ ಮನಸ್ಸನ್ನು ಸ್ಥಿರಪಡಿಸು, ನನ್ನ ಭಕ್ತನಾಗಿರು, ನನ್ನನ್ನು ಆರಾಧಿಸು, ನನಗೆ ನಮಸ್ಕರಿಸು. ಹೀಗೆ, ನಿನ್ನನ್ನು ನನ್ನೊಂದಿಗೆ ಐಕ್ಯಗೊಳಿಸಿಕೊಂಡು ಮತ್ತು ನನ್ನಲ್ಲಿ ಸಂಪೂರ್ಣವಾಗಿ ಲೀನವಾದ ನೀನು ಖಂಡಿತವಾಗಿ ನನ್ನ ಬಳಿಗೆ ಬರುತ್ತೀಯ.)
"ಸರ್ವಧರ್ಮಾನ್ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ ।
ಅಹಂ ತ್ವಾಂ ಸರ್ವಪಾಪೇಭ್ಯೋ ಮೋಕ್ಷಯಿಷ್ಯಾಮಿ ಮಾ ಶುಚಃ॥"
(ಎಲ್ಲಾ ರೀತಿಯ ಧರ್ಮವನ್ನು ತ್ಯಜಿಸಿ ಮತ್ತು ನನ್ನಲ್ಲಿ ಶರಣು ಹೋಗು. ನಾನು ನಿನ್ನನ್ನು ಎಲ್ಲಾ ಪಾಪಕ್ರಿಯೆಗಳಿಂದ ಮುಕ್ತಿಗೊಳಿಸುತ್ತೇನೆ. ಭಯಪಡಬೇಡ.) ಎನ್ನುವುದನ್ನು ಅಲ್ಲಮಪ್ರಭು,
"ಎಣ್ಣೆ ಬೇರೆ ಬತ್ತಿ ಬೇರೆ: ಎರಡೂ ಕೂಡಿ ಸೊಡರಾಯಿತ್ತು.
ಪುಣ್ಯ ಬೇರೆ ಪಾಪ ಬೇರೆ: ಎರಡೂ ಕೂಡಿ ಒಡಲಾಯಿತ್ತು.
ಮಿಗಬಾರದು, ಮಿಗದಿರಬಾರದು, ಒಡಲಿಚ್ಛೆಯ ಸಲಿಸದೆ ನಿಮಿಷವಿರಬಾರದು.
ಕಾಯಗುಣವಳಿದು ಮಾಯಾಜ್ಯೋತಿ ವಾಯುವ ಕೂಡುವ
ಮುನ್ನ,
ಭಕ್ತಿಯ ಮಾಡಬಲ್ಲಡೆ ಆತನೆ ದೇವ ಗುಹೇಶ್ವರಾ." ಎಂದಿದ್ದಾನೆ.
ಎಲ್ಲಕ್ಕೂ ಮಿಗಿಲಾಗಿ ಪರಮಪದ ಕುರಿತು ಗೀತೆಯು, "ಅಹಂ ಸರ್ವಸ್ಯ ಪ್ರಭವೋ ಮತ್ತಃ ಸರ್ವಂ ಪ್ರವರ್ತತೇ ।
ಇತಿ ಮತ್ವಾ ಭಜನ್ತೇ ಮಾಂ ಬುಧಾ ಭಾವಸಮನ್ವಿತಾಃ॥"
(ನಾನು ಎಲ್ಲಾ ಆಧ್ಯಾತ್ಮಿಕ ಮತ್ತು ಭೌತಿಕ ಲೋಕಗಳ ಮೂಲ. ಎಲ್ಲವೂ ನನ್ನಿಂದ ಹೊರಹೊಮ್ಮುತ್ತದೆ. ಇದನ್ನು ತಿಳಿದುಕೊಂಡ ವಿವೇಕಿಗಳು ನನ್ನನ್ನು ತಮ್ಮ ಚೇತನವನ್ನು ನನ್ನಲ್ಲಿ ಲೀನಗೊಳಿಸಿ ಆರಾಧಿಸುತ್ತಾರೆ) ಎಂದಿದ್ದರೆ, ತೋಂಟದ ಸಿದ್ದಲಿಂಗೇಶ್ವರರು,"ಬ್ರಹ್ಮವೆನಲು ಪರಬ್ರಹ್ಮವೆನಲು
ಪರಮನೆನಲು ಪರಮೇಶ್ವರನೆನಲು
ಪರಮಾತ್ಮನೆನಲು ಪರತತ್ವವೆನಲು
ಪರಂಜ್ಯೋತಿಯೆನಲು ಪರವಸ್ತುವೆನಲು ಪರಾಪರವೆನಲು
ಇಂತಿವೆಲ್ಲಾ ನಾಮದಲ್ಲಿಯೂ ಪ್ರಕಾಶಿಸುತ್ತಿಪ್ಪಾತನು ಪರಶಿವನು.
ಪರಶಿವನೆಂದರೆ ಪರಮಾತ್ಮ.
ಪರಮಾತ್ಮನೆಂದರೆ ಮಹಾಲಿಂಗ.
ಆ ಮಹಾಲಿಂಗ ತಾನೆ ಪ್ರಸಾದಲಿಂಗವಾಗಿ ಉದ್ಭವಿಸಿತ್ತು.
ಪ್ರಸಾದಲಿಂಗದಲ್ಲಿ ಜಂಗಮಲಿಂಗ ಹುಟ್ಟಿತ್ತು.
ಜಂಗಮಲಿಂಗದಲ್ಲಿ ಶಿವಲಿಂಗ ಹುಟ್ಟಿತ್ತು.
ಶಿವಲಿಂಗದಲ್ಲಿ ಗುರುಲಿಂಗ ಜನಿಸಿತ್ತು.
ಗುರುಲಿಂಗ ಆಚಾರಲಿಂಗ ಉತ್ಪತ್ಯವಾಯಿತ್ತು.
ಇಂತೀ ಷಡ್ವಿಧಲಿಂಗವೂ ಒಂದರಿಂದೊಂದಾದವು.
ಒಂದನೊಂದ ಕೂಡಿಹವು.
ಇಂತೀ ಷಟ್‍ಸ್ಥಲವೂ ಏಕವೆಂದರಿವುದಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ." ಎಂದಿದ್ದಾರೆ.
ಒಟ್ಟಾರೆ, ಆತ್ಮ-ಪರಮಾತ್ಮವೆಂಬ ಲಿಂಗಾಂಗ-ಸಾಮರಸ್ಯಕ್ಕೆ ಮಾರ್ಗಗಳಾದ ಕರ್ಮಯೋಗ, ಭಕ್ತಿಯೋಗ ಮತ್ತು ಧ್ಯಾನಯೋಗಗಳೇ ಗೀತೆ ಮತ್ತು ವಚನಗಳ ಅಂಶಗಳಾಗಿವೆ.
ಹೀಗೆ ಮೊಗೆದಷ್ಟೂ ಗೀತೆ ಮತ್ತು ವಚನಗಳಲ್ಲಿನ ಅರ್ಥ ಸಾಮ್ಯತೆ ಒಂದಾಗುತ್ತಾ ಎಲ್ಲಾ ಧರ್ಮಗಳ ತಿರುಳು ಒಂದೇ.ಎಂದು ಸಾಬೀತಾಗುತ್ತದೆ. ಲಿಂಗಾಯತ ಪ್ರತ್ಯೇಕಿಗಳು ಎಷ್ಟೇ ವಿಧವಿಧವಾಗಿ 'ನಾವು ಹಿಂದೂಗಳಲ್ಲ' ಎಂದರೂ ಅವರು ಅಷ್ಟೇ ಗಾಢವಾಗಿ ಹಿಂದೂ ಮೂಲವೇ ಆಗಿದ್ದಾರೆ.
ಅಂದ ಹಾಗೆ ಗೀತೆ ಮತ್ತು ವಚನ ಎರಡೂ ಪದಗಳ ಅರ್ಥವೂ ಒಂದೇ ಅಲ್ಲವೇ?!
- ರವಿ ಹಂಜ್