ಬ್ರಾಹ್ಮಣ್ಯಮುಕ್ತ ಸಮಾಜವೋ, ಬುದ್ಧಿಜೀವಿಮುಕ್ತ ಸಮಾಜವೋ!

ಕೆಳಸ್ತರದ ಚಂದ್ರಗುಪ್ತ ಮೌರ್ಯನನ್ನು ಚಕ್ರವರ್ತಿಯಾಗಿಸಿದ ಕ್ರಿಸ್ತಪೂರ್ವ ಚಾಣಕ್ಯನೆಂಬ ಬ್ರಾಹ್ಮಣನಿಂದ ಕ್ರಿಸ್ತಶಕೆಯ ನರಹಂತಕನಾಗಿದ್ದ ಟಿಪ್ಪುವನ್ನು ದೂರದರ್ಶಿತ್ವದ ನಾಯಕನಾಗಿಸಿದ ದಿವಾನ್ ಪೂರ್ಣಯ್ಯನೆಂಬೋ, ದಲಿತ ಅಂಬೇಡ್ಕರರನ್ನು ಆಧುನಿಕ ಭಾರತದ ಸಂವಿಧಾನಶಿಲ್ಪಿಯಾಗಿಸಿದ ಅಂಬೇಡ್ಕರ್ (ಅಂಬೇವಾಡೇಕರ್) ಎಂಬ ಬ್ರಾಹ್ಮಣರವರೆಗೆ ಆಗಿಹೋದ ಎಲ್ಲ ಬಡ ಬ್ರಾಹ್ಮಣರು ಜೀವ ಸವೆಸಿದ್ದು ತಮ್ಮನ್ನು ನಂಬಿದ ಕ್ಷತ್ರಿಯ, ವೈಶ್ಯ, ಶೂದ್ರ, ಹಾಗೂ ದಲಿತ ಬಲಶಾಲಿಗಳ ವೃದ್ಧಿಗಾಗಿ. ಇವರ ಕುಟಿಲತೆ, ಚತುರತೆ, ಬುದ್ಧಿಮತ್ತೆ, ಶಾನುಭೋಗತನ, ಗುಮಾಸ್ತಿಕೆ ಎಲ್ಲಾ ಅವರ ಆಶ್ರಯದಾತ ಜಮೀನುದಾರ, ಗೌಡ, ಸರದಾರ, ಸಾಮಂತ, ರಾಜರುಗಳ ಉದ್ಧಾರಕ್ಕಾಗಿ! ಹೀಗಿದ್ದ, ಇರುವ ಭಾರತದ ಈ ಎರಡು ಪ್ರತಿಶತ ಜನಸಂಖ್ಯೆಯ ಅಲ್ಪಸಂಖ್ಯಾತರ ಮೇಲೆ ನಿರಂತರವಾಗಿ ಭಾರತದ ಬುದ್ದಿಜೀವಿಗಳು ಬ್ರಾಹ್ಮಣ್ಯಮುಕ್ತ ಸಮಾಜವನ್ನು ಕಟ್ಟುವ ಕರೆ ಜನಾಂಗದ್ವೇಷವಲ್ಲದೇ ಇನ್ನೇನು!?! ದಲಿತ ಶೋಷಣೆ ಇದ್ದರೆ ಅದು ಅಬ್ರಾಹ್ಮಣ್ಯರಿಂದಲೇ ಹೊರತು ಅಲ್ಪಸಂಖ್ಯಾತರಲ್ಲೇ ಅಲ್ಪಸಂಖ್ಯಾತರಾದ ಬ್ರಾಹ್ಮಣರಿಂದಲ್ಲ.

ಸತ್ರದ ಕಾವಲುಭಟನ ಸಾಮ್ರಾಟನಾಗಿಸಿದನಂದು ಚಾಣಕ್ಯನೆಂಬ ವಿಪ್ರ,
ಕೊಲೆಗಡುಕ ತಿಪ್ಪನ ರಕ್ಷಕನಾಗಿಸಿದ ಪೂರ್ಣಯ್ಯನೆಂಬನಿನ್ನೊಬ್ಬ ಬ್ರಾಹ್ಮಣ,
ಸಂವಿಧಾನಶಿಲ್ಪಿಯ ಪೊರೆದು ಪೋಷಿಸಿದ ಅಂಬೇವಾಡೇಕರನೆಂಬ ಹಾರುವ, ಇಂತಪ್ಪು ಅಲ್ಪ ಹಾರುವರು ಮುಂತಪ್ಪು ಜನಂಗಳ ಕಲ್ಪ ಕಟ್ಟಿರೆ ಅವಂಗಳ ನಿರ್ನಾಮ ಮಾಡೆಂಬ ಲದ್ದಿಜೀವಿಗಳ ಶುದ್ಧಿ ಮಾಡೆಂಬ ಹಗೇದಿಬ್ಬೇಶ್ವರ

#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

ಹುಯೆನ್ ತ್ಸಾಂಗ್, ಪುಲಿಕೇಶಿ

ಹುಯೆನ್ ತ್ಸಾಂಗ್: "ಕನ್ನಡ ಭಾಷೆಯನ್ನು ಮಾತನಾಡುವ ಮಹಾರಾಷ್ಟ್ರ ಜನತೆ ಎತ್ತರವೂ ಸಧೃಢರೂ ಮತ್ತು ಸ್ವಾಮಿನಿಷ್ಟೆ ಪರಿಪಾಲಕರೂ ಆಗಿದ್ದಾರೆ. ಇಲ್ಲಿನ ಪ್ರಭುವು ಎರಡನೇ ಪುಲಿಕೇಶಿ.  ಅತ್ಯಂತ ಬಲಶಾಲೀ ಸಾಮ್ರಾಜ್ಯವನ್ನು ಕಟ್ಟಿರುವ ಇವನು ಹುಟ್ಟಿನಿಂದ ಕ್ಷತ್ರಿಯನಾಗಿದ್ದು, ವೀರನೂ ಪರಾಕ್ರಮಿಯೂ ಆಗಿದ್ದಾನೆ. ತನ್ನ ತೋಳ್ಬಲದ ಪರಾಕ್ರಮದ ಆಭಿಮಾನಿಯಾಗಿರುವ ಈತನ ಸಾಮಂತರೆಲ್ಲಾ ಮಹಾ ಸ್ವಾಮಿನಿಷ್ಟರು. ನಿಷ್ಟೆಗೆ ಯಾರಾದರೂ ಧಕ್ಕೆ ತೋರಿದರೆ ಅವರನ್ನು ಅತ್ಯಂತ ಉಗ್ರ ಶಿಕ್ಷೆಗೆ ಗುರಿಪಡಿಸುತ್ತಿದ್ದನು. ಯುದ್ಧಗಳಲ್ಲಿ ತನ್ನ ಸೇನಾಧಿಕಾರಿಗಳೇನಾದರೂ ಪರಾಕ್ರಮವನ್ನು ಮೆರೆಯದೇ ಸೋತಿದ್ದರೆ ಅಂತವರಿಗೆ ಯಾವ ಕಠಿಣ ಶಿಕ್ಷೆಯನ್ನು ನೀಡದೇ ಕೇವಲ ಹೆಣ್ಣಿನ ವೇಷವನ್ನು ಹಾಕಿಸುತ್ತಿದ್ದನು. ಹೆಣ್ಣಿನ ವೇಷದ ಅವಮಾನಕ್ಕೆ ನೊಂದು ಆ ಅಧಿಕಾರಿಗಳು ಆತ್ಮಹತ್ಯೆಯನ್ನು ಮಾಡಿಕೊಳ್ಳುತ್ತಿದ್ದರು.

ರಾಜ ಹರ್ಷನಂತೆಯೇ ಪುಲಿಕೇಶಿ ಕೂಡಾ ನೂರಾರು ಆನೆಗಳ ಪಡೆಯೊಂದನ್ನು ಹೊಂದಿದ್ದನು. ಹರ್ಷನ ಸೈನ್ಯದ ಮಾದರಿಯಲ್ಲೇ ಇಲ್ಲಿಯೂ ಕೂಡ ಆನೆಗಳಿಗೆ ಮದ್ಯವನ್ನು ಕುಡಿಸಿ ಶತ್ರುಗಳ ಮೇಲೆ ನುಗ್ಗಿಸುತ್ತಿದ್ದರು. ಈತನ ಯುದ್ಧಕೌಶಲ್ಯ, ತಂತ್ರಗಾರಿಕೆಗಳಿಂದಾಗಿ ಶತ್ರುಗಳು ಭಯಭೀತರಾಗುತ್ತಿದ್ದರು. ಪುಲಿಕೇಶಿಯ ಕೀರ್ತಿ ಬಹುದೂರದವರೆಗೆ ಹಬ್ಬಿತ್ತು. ಶಿಲಾದಿತ್ಯನು (ಹರ್ಷ) ಪಶ್ಚಿಮದಿಂದ ಪೂರ್ವದವರೆಗೆ ದೂರದ ರಾಜ್ಯಗಳನ್ನು ಗೆದ್ದು ತನ್ನ ಆಡಳಿತಕ್ಕೊಳಪಡಿಸಿಕೊಂಡಿದ್ದರೂ, ಚಾಲುಕ್ಯ ಸಾಮ್ರಾಜ್ಯವನ್ನು ಮಾತ್ರ ಗೆಲ್ಲಲಾಗಿಲ್ಲ. ರಾಜ ಪುಲಿಕೇಶಿ ಹಿಂದು ರಾಜನಾಗಿದ್ದರೂ ಆತನ ಸಾಮ್ರಾಜ್ಯದಲ್ಲಿ ನೂರು ಬೌದ್ಧವಿಹಾರಗಳಿರುವವು"

ನನ್ನ ಅನಿಸಿಕೆ:  ಕನ್ನಡ ಮಾತಿನ ಪುಲಿಕೇಶಿ ತನ್ನ ರಾಷ್ಟ್ರವನ್ನು ಮಹಾನ್ ಎಂಬರ್ಥದಲ್ಲಿ "ಮಹಾರಾಷ್ಟ್ರ"ವೆಂದು ಕರೆದುಕೊಂಡಿದ್ದನು. ಕನ್ನಡದ ಪದವಾದ "ಮಹಾ ಹೋರಾಟಗಾರ" ಎಂಬ ಪದ ಅಪಭ್ರಂಶವಾಗಿ "ಮಹಾರಾಠ"ವಾಗಿ ಕ್ರಮೇಣ ಮರಾಠವಾಯಿತು. ಪುಲಿಕೇಶಿಯ ಆ ಕೆಚ್ಚು ಆತನ ನಂತರ ಕೂಡಾ ಮುಂದುವರಿದಿದ್ದರೆ ಇಂದು ಕರ್ನಾಟಕ ಕಾವೇರಿಯಿಂದ ಗೋದಾವರಿಯವರೆಗೆ ಇರುತ್ತಿದ್ದು, ಮರಾಠಿ ಎಂಬ ಭಾಷೆ ಇರುತ್ತಿರಲೇ ಇಲ್ಲವೇನೋ! ಮರಾಠಿ ಭಾಷೆ ಎಂಟನೇ ಶತಮಾನದಿಂದ ವೃದ್ಧಿಯಾಗುತ್ತಾ ಸಾಗಿಬಂದಿತು. ಇಂದಿನ ಪ್ರಸ್ತುತ ಭಾರತದಲ್ಲಿ ಕನ್ನಡ ಮಾತನಾಡುವ ಮಹಾರಾಷ್ಟ್ರದೊಂದಿಗೆ ಈಗಿನ ಕರ್ನಾಟಕವೂ ಸೇರಿ ಕನ್ನಡ ಮಾತನಾಡುವ ಎರಡು ರಾಜ್ಯಗಳಿರುತ್ತಿದ್ದವೆನಿಸುತ್ತದೆ. 

ಹುಯೆನ್ ತ್ಸಾಂಗ್

ಹುಯೆನ್ ತ್ಸಾಂಗ್ ಕುರಿತಾಗಿ ಬರೆಯುತ್ತಿರುವ ನನ್ನ ಪುಸ್ತಕದ ಆಯ್ದ ಬರಹ:

ಒಬ್ಬ ಪ್ರವಾಸೀ ಯಾತ್ರಿಕನಲ್ಲಿ ಹೇಗೆ ತನ್ನ ಭಕ್ತಿಭಾವಗಳ ನಡುವೆ ಕೂಡಾ ಭಕ್ತಿಯನ್ನೂ, ವಾಸ್ತವ ಸಂಗತಿಗಳನ್ನೂ ಬೇರೆ ಬೇರೆಯಾಗಿ ದಾಖಲಿಸುವ ಸ್ಥಿತಪ್ರಜ್ಞತೆ ಇರಬೇಕೋ ಆ ಸ್ಥಿತಪ್ರಜ್ಞತೆ, ಹುಯೆನ್ ತ್ಸಾಂಗನನ್ನು ಒಬ್ಬ ಉನ್ನತ ಇತಿಹಾಸಕಾರನನ್ನಾಗಿಸುತ್ತದೆ. ಎಂತಹ ಭಕ್ತಿಭಾವುಕತೆಯ ಉನ್ಮಾದದಲ್ಲಿಯೂ ಕೂಡಾ ತಾನು ಕಂಡ ಭೌಗೋಳಿಕ, ಸಾಮಾಜಿಕ, ಮತ್ತು ರಾಜಕೀಯ ವಾಸ್ತವಗಳನ್ನು ಕರಾರುವಾಕ್ಕಾಗಿ ದಾಖಲಿಸಿದ್ದರಿಂದಲೇ ಆತನ ಯಾತ್ರೆ ಚಾರಿತ್ರಿಕ ಮಹಾಯಾತ್ರೆಯೆನಿಸುವುದು. ತನ್ನ ಭಕ್ತಿಯ ಉನ್ಮಾದದಲ್ಲಿ ಬುದ್ಧನ ಕುರಿತಾದ ದಂತಕತೆಗಳನ್ನು ವರ್ಣಿಸಿದರೂ, ಐತಿಹಾಸಿಕ ಸ್ಥಳ ಮತ್ತವುಗಳ ವರ್ಣನೆಯನ್ನು ವಾಸ್ತವಕ್ಕೆ ಸೀಮಿತಗೊಳಿಸುತ್ತಾನೆ. ಆಯಾಯಾ ಮಾಹಿತಿಗಳ ಉತ್ಪ್ರೇಕ್ಷೆ ಎಲ್ಲಿಯೂ ಕಾಣಬರುವುದಿಲ್ಲ. ಈ ನಿಖರವಾದ ಮಾಹಿತಿಯ ದಾಖಲಾತಿಯ ಕಾರಣವಾಗಿಯೇ ಹುಯೆನ್ ತ್ಸಾಂಗ್ ಚಾರಿತ್ರಿಕವಾಗಿ ಮಹತ್ವವೆನ್ನಿಸುವನು.  ಹುಯೆನ್ ತ್ಸಾಂಗನ ಮಹಾಯಾತ್ರೆ ಕೈಗೂಡದಿದ್ದರೆ, ಭಾರತದ ಇತಿಹಾಸ ಏನೆಂದಿರುತ್ತಿತ್ತೋ!

ಬಸವಣ್ಣನ ಕ್ರಾಂತಿಯೂ, ಮಾ ಶೀಲಾಳ ಭ್ರಾಂತಿಯೂ!

ಬಸವಣ್ಣನ ಕ್ರಾಂತಿಯೂ, ಮಾ ಶೀಲಾಳ ಭ್ರಾಂತಿಯೂ!

ವೀರಶೈವ ಲಿಂಗಾಯತ ಲೇಖನದ ನಂತರ ಸಾಕಷ್ಟು ಪ್ರಶಂಸೆಗಳು ಮತ್ತು ಪ್ರಶ್ನೆಗಳೂ ಬಂದಿದ್ದವು. ಪ್ರಶ್ನೆಗಳಿಗೆಲ್ಲ ತಕ್ಕ ಉತ್ತರವ ಕೊಟ್ಟಿದ್ದರೂ ಕೆಲವರು ಅಲ್ಲಮ, ಅಕ್ಕಮಹಾದೇವಿಯರು ತಮ್ಮ ವಚನಗಳ್ಯಾವುದಾದರಲ್ಲಿ ತಾವು ಬಸವಣ್ಣನನ್ನು ಭೆಟ್ಟಿಯಾಗುವ ಮೊದಲೇ ಲಿಂಗಧಾರಣೆಯಾಗಿ ವೀರಶೈವರಾಗಿದ್ದೆವೆಂದು ಹೇಳಿಕೊಂಡಿದ್ದಾರೆಯೇ ಎಂದು ಕೇಳುತ್ತಿದ್ದರು. ಬಹುಶಃ ಅಕ್ಕ, ಅಲ್ಲಮ, ಬಸವರಿಗೆ ಇಪ್ಪತ್ತೊಂದನೇ ಶತಮಾನದಲ್ಲಿ ಈ ಸಮಸ್ಯೆಯ ಅಂದಾಜಿದ್ದಿದ್ದರೆ ಜನ್ಮಪತ್ರದ ದಾಖಲೆಯನ್ನೇ ಕೊಟ್ಟಿರುತ್ತಿದ್ದರೇನೋ!

ಯಾವುದೇ ಐತಿಹಾಸಿಕ ಘಟನೆಯನ್ನು ವಿವಿಧ ಆಕಾರ ಮೂಲಗಳ ಸಹಾಯದ ಅಂತರ್ ಶಿಸ್ತೀಯ ಅಧ್ಯಯನ ಮಾತ್ರ ಚರಿತ್ರೆಯ ವಾಸ್ತವಾಂಶ ಗ್ರಹಿಸಲು ಸಾಧ್ಯವಾಗಿಸುವುದು. ಇದು ಅಕ್ಷರಶಃ ಸತ್ಯ.

ಈ ತರಲೆ ಪ್ರಶ್ನೆಗಳಿಂದ ಕೊಂಚ ಟಿವಿ ನೋಡೋಣವೆಂದು ಇಂದಿನ ಸೆನ್ಸೇಷನಲ್ ಡಾಕ್ಯುಮೆಂಟರಿ ಆಗಿರುವ "ವೈಲ್ಡ್ ವೈಲ್ಡ್ ಕಂಟ್ರಿ" ವೀಕ್ಷಿಸತೊಡಗಿದೆನು.

ಭಾರತದಲ್ಲಿ ರಜನೀಶ್ ಆಶ್ರಮದ ಬುಡ ಅಲುಗಾಡಲಾರಂಭಿಸಿದಾಗ ಹೊಸ ಸ್ಥಳದ ಹುಡುಕಾಟ ಅವರನ್ನು ಅಮೆರಿಕಾದ ಒರೆಗಾನ್ ಗೆ ತರುತ್ತದೆ. ಅವರ ಆತ್ಮೀಯ ಸೇವಕಿಯಾದ ಸನ್ಯಾಸಿನಿ ಮಾ ಶೀಲಾ ಆನಂದ್ ಹೇಗೆ ಕ್ಷಿಪ್ರವಾಗಿ ಆಶ್ರಮವನ್ನು ಕಟ್ಟಿ ಬೆಳೆಸಿದಳೆಂಬುದನ್ನು ತೋರುತ್ತದೆ. ಆದರೆ ರಜನೀಶ್ ಧರ್ಮದ ಕ್ಷಿಪ್ರ ಬೆಳವಣಿಗೆ, ಮಹತ್ವಾಕಾಂಕ್ಷೆಗೆ ಅಲ್ಲಿನ ಸ್ಥಳೀಯರು ತೊಡಕಾಗುತ್ತಾರೆ. ಆಗ ಚತುರ್ಮತಿಯಾದ ಶೀಲಾ ಅಲ್ಲಿನ ಪ್ರಮುಖ ಪಟ್ಟಣಗಳಾದ ಸ್ಯಾನ್ ಫ್ರಾನ್ಸಿಸ್ಕೊ, ಎಲ್.ಎ, ಶಿಕಾಗೋ, ಸಿಯಾಟಲ್ ಗಳಿಂದ ವಸತಿಹೀನ ನಿರ್ಗತಿಕರನ್ನು ಊಟ, ವಸತಿ, ಬಿಯರ್ ಸೌಕರ್ಯಗಳನ್ನು ಒದಗಿಸುವುದಾಗಿ ಕರೆತಂದು ಮತದಾರರಾಗಿ ನೋಂದಾಯಿಸಿ ಚುನಾವಣೆಯಲ್ಲಿ ರಜನೀಶ್ ಭಕ್ತರು ಗೆಲ್ಲುವಂತೆ ನೋಡಿಕೊಳ್ಳುತ್ತಾಳೆ.

ಮುಂದೆ ರಜನೀಶ ಮೇಲಿನ ಪ್ರೇಮ, ರಾಗ ದ್ವೇಷ ಅಸೂಯೆಗಳಿಗೆ ಬಲಿಯಾಗಿ ಆಶ್ರಮವನ್ನು ಬಿಟ್ಟು, ನಂತರ ರಜನೀಶರು ತಮ್ಮ ನೂತನ ಧರ್ಮವನ್ನು ಪರಿಸಮಾಪ್ತಿಗೊಳಿಸಿ ಭಾರತಕ್ಕೆ ಹಿಂದಿರುಗುತ್ತಾರೆ.

ಡಾಕ್ಯುಮೆಂಟರಿ ನೋಡುತ್ತಾ ನನಗೆ ಅರೆ ಮಾ ಶೀಲಾಳ ಕ್ರಾಂತಿ ಕೂಡಾ ಬಸವ ಕ್ರಾಂತಿಯಂತೆಯೇ ಇದೆಯಲ್ಲ, ಎಂತಹ ಸಾಮ್ಯತೆ!

ಅಲ್ಲಿ ಬಸವ ತನ್ನ ಗುರು ಸದ್ಯೋಜಾತರಿಂದ ಲಿಂಗಧಾರಿಯಾಗಿ ತಾನು ಕಂಡುಕೊಂಡ ಆ ಹೊಸ ವೀರಶೈವ ಧರ್ಮವನ್ನು ಪ್ರಸರಿಸಬೇಕೆಂಬ ಮಹತ್ವಾಕಾಂಕ್ಷಿಯಾಗಿ ನಿರ್ಗತಿಕರಿಗೆ ಲಿಂಗ ಕಟ್ಟುವ ಕ್ರಾಂತಿಯಲ್ಲಿ ತೊಡಗಿದರೆ, ಇಲ್ಲಿ ಮಾ ಶೀಲಾ ಕೂಡ ತಮ್ಮ ಸಂಖ್ಯೆಯನ್ನು ವೃದ್ಧಿಸಲು ನಿರ್ಗತಿಕರನ್ನೇ ಆಶ್ರಯಿಸಿದ್ದಳು.

ಅಲ್ಲಿ ಬಸವ ತನ್ನ ಅನುಯಾಯಿಗಳ ಕಂಡು,
ಬಡಹಾರುವನೇಸು ಭಕ್ತನಾದಡೆಯೂ ನೇಣಿನ ಹಂಗ ಬಿಡ!
ಮಾಲೆಗಾರನೇಸು ಭಕ್ತನಾದಡೆಯೂ ಬಾವಿಯ ಬೊಮ್ಮನ ಹಂಗ ಬಿಡ!
ಬಣಜಿಗನೇಸು ಭಕ್ತನಾದಡೆಯೂ ಒಟ್ಟಿಲ ಬೆನಕನ ಹಂಗ ಬಿಡ!
ಕಂಚುಗಾರನೇಸು ಭಕ್ತನಾದಡೆಯೂ ಕಾಳಿಕಾದೇವಿಯ ಹಂಗ ಬಿಡ!
ನಾನಾ ಹಂಗಿನವನಲ್ಲ, ನಿಮ್ಮ ಶರಣರ ಹಂಗಿನವನಯ್ಯ                                     ಕೂಡಲಸಂಗಮದೇವಾ.
ಎಂದು ಕರುಬಿದರೆ, ಇಲ್ಲಿ ಮಾ ಶೀಲಾ ತನ್ನ ನಿರ್ಗತಿಕರಿಂದ ಭ್ರಮೆ ನಿರಶನ ಗೊಂಡು ಅವರನ್ನು ಆಶ್ರಮದ ಹೊರಹಾಕುತ್ತಾಳೆ!

ಕ್ಷಿಪ್ರವಾಗಿ ಬೆಳೆದು, ಅಷ್ಟೇ ಕ್ಷಿಪ್ರವಾಗಿ ಅವಸಾನಗೊಂಡ ಬಸವ ಕ್ರಾಂತಿಯಂತೆಯೇ ಶೀಲಾಳ ಭ್ರಾಂತಿ ಕೂಡ ಪರ್ಯವಸಾನಗೊಳ್ಳುತ್ತದೆ.

ಬಸವನಿರದಿದ್ದರೆ ವೀರಶೈವ ಯಾ ಲಿಂಗಾಯತ ಧರ್ಮ/ಪಂಥ ಹೇಗಿರುತ್ತಿತ್ತೋ ಹಾಗೆಯೇ ಬಸವನ ನಂತರ ಕೂಡಾ ಇಷ್ಟಲಿಂಗ, ಶಿವಲಿಂಗ, ಗುಡಿ, ಮಠಗಳೊನ್ನೊಳಗೊಂಡು ಮುಂದುವರಿಯುತ್ತಿದೆ.

ಇತ್ತ ಮಾ ಶೀಲಾಳಿಲ್ಲದೇ, ರಜನೀಶ್ ಪಂಥ ಯಥಾಗತಾ ಮುಂದುವರಿಯುತ್ತಿದೆ.

ಆಗಾಗ ಕ್ರಾಂತಿಕಾರಿಗಳು ಬರುತ್ತಾರೆ ಹೋಗುತ್ತಾರೆ. ಆದರೆ ಇಲ್ಲಿ ಯಾರೂ ಮುಖ್ಯರಲ್ಲ, ಅಮುಖ್ಯರಲ್ಲ! ಕಾಲಚಕ್ರ ಸದಾ ಉರುಳುತ್ತಿರುತ್ತದೆ.

ದೇವ ದೇವರಲ್ಲಿ ಸಂಘರ್ಷ ನಡೆದರೆ ಬಲಿಯಾಗುವುದು ಭಕ್ತರೇ.

ನವೀನ ಲಿಂಗಾಯತ ಧರ್ಮ ತಮ್ಮ ಅಂಗೈಯ ಇಷ್ಟಲಿಂಗವಲ್ಲದೆ ಯಾವುದೇ ದೇವಸ್ಥಾನದ ಶಿವಲಿಂಗಗಳನ್ನು ಪೂಜಿಸುವುದಿಲ್ಲವೆನ್ನುತ್ತದೆ. ಆದರೆ ವಚನಕಾರರ ಕೂಡಲಸಂಗಮದೇವ, ಚೆನ್ನಮಲ್ಲಿಕಾರ್ಜುನ, ಗುಹೇಶ್ವರ, ಕಪಿಲಸಿದ್ದ ಮಲ್ಲಿನಾಥವೆಲ್ಲವೂ ಗುಡಿಯಲ್ಲಿ ಶಿಲೆಯಾಗಿರುವ ಶಿವಲಿಂಗಗಳೇ ಎಂಬ ಮೂಲ ವಿಷಯವನ್ನೇ ಮರೆಯುತ್ತದೆ. ಪುರಾತನ ಮತ್ತು ನವೀನ ಲಿಂಗಾಯತರ ಬೀಜಮಂತ್ರ "ಓಂ ಶಿವಾಯ ನಮಹ"ವೇ ಆಗಿದೆ.

ಇರಲಿ ಈ ಐತಿಹಾಸಿಕ ಸತ್ಯಗಳಿಂದೇನಾಗಬೇಕಿದೆ?

ಅದು ಬೌದ್ಧರ ಹಿನಾಯಾನ, ಮಹಾಯಾನ, ಮಾಧ್ಯಮಿಕ ಆಗಿರಬಹುದು. ಜೈನರ ದಿಗಂಬರ, ಶ್ವೇತಾಂಬರವಿರಬಹುದು. ಕ್ಯಾಥೋಲಿಕ್ ಪ್ರೊಟೆಸ್ಟಂಟ್,  ಸುನ್ನಿ ಶಿಯಾ, ದಲಿತರ ಎಡಗೈ ಬಲಗೈ ಆಗಬಹುದು. ನಿಮ್ಮ ನಂಬಿಕೆ ನಿಮ್ಮ ಧರ್ಮವಾಗಬಹುದು.

ಧರ್ಮಕ್ಕೆ ನಂಬಿಕೆ ಮುಖ್ಯ. ನಂಬಿಕೆ ದೇವರನ್ನು ಸೃಷ್ಟಿಸುತ್ತದೆ, ರೂಪಿಸುತ್ತದೆ ಮತ್ತು ಧರ್ಮವಾಗಿಸುತ್ತದೆ!

ಸುಪ್ರೀಂ ಕೋರ್ಟಿನ ಜಾತಿನಿಂದನೆ ತೀರ್ಪು

ಅಂದು ಮಂಗಳವಾರ. ಹಳ್ಳಿಯ ಕ್ಷೌರಿಕನಿಗೆ ರಜಾ ದಿನ. ಅಂದೇ ಒಬ್ಬ ದಲಿತ ಮರಿ ಪುಡಾರಿಯೊಬ್ಬ ಯಾವುದೋ ಸಭೆಗೆ ಹೋಗಲು ಕ್ಷೌರ ಮಾಡಿಸಬೇಕಿತ್ತು. ರಜೆಯೆಂದು ಕ್ಷೌರ ಮಾಡಲು ನಿರಾಕರಿಸಿದ ಕ್ಷೌರಿಕನ ಮೇಲೆ ಒಂದು ಜಾತಿನಿಂದನೆ ಕೇಸು ಜಡಾಯಿಸಿದ ಪುಡಾರಿ, ಆ ಕ್ಷೌರಿಕ ಮತ್ತೆಂದೂ ಕತ್ತಿ ಮುಟ್ಟದಂತೆ ಮುಚ್ಚಣಿಕೆ ಬರೆಸಿಕೊಂಡ. ಇದು ನಾ ಕಂಡ ಸಂಗತಿ ಬಾಲ್ಯದಲ್ಲೇ!

ಈಗ ಸುಪ್ರೀಂ ಕೋರ್ಟಿನ ತೀರ್ಪಿಗೆ ಬಂದ್ ಕರೆ ನೀಡಿರುವ ರಾಜಕೀಯ ಪಕ್ಷ, ಸಂಘಟನೆಗಳ ಮೇಲೆ ನ್ಯಾಯಾಂಗ ನಿಂದನೆ ಕೇಸು ಜಡಿದು ಮುಚ್ಚಣಿಕೆ ಬರೆಸಿಕೊಳ್ಳಬೇಕಲ್ಲವೇ! ಸಂವಿಧಾನದ ಸಮಾನತೆ ಎಲ್ಲರಿಗೂ ಸಿಗಬೇಕಲ್ಲವೇ?!?
#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ