ಲಾಲಿಪಾಪ್ ಲಾಲಾಲ್ಯಾಂಡ್

 ಫೇಸ್ಬುಕ್ ಸ್ನೇಹಿತರಾದ ರೂಪಾ ರಾಜೀವ್ ಅವರು ರಾಜೇಂದ್ರ ಪ್ರಸಾದ್ ಎನ್ನುವವರು ಓರ್ವ ದಲಿತರನ್ನು ತಮ್ಮ ಮನೆಗೆ ಕರೆದು ಊಟ ಹಾಕಿ ಸಮಾನತೆಯನ್ನು ಮೆರೆದೆವೆಂದೋ, ತಮ್ಮ ಶೋಷಣೆಗೆ ಪಶ್ಚಾತ್ತಾಪ ಪಟ್ಟೆನೆಂದೋ ಸ್ಟೇಟಸ್ ಹಾಕಿಕೊಂಡಿದ್ದಾರೆ. ಇದು  ಮೇಲ್ವರ್ಗದವರಲ್ಲಿ ಮೇಲರಿಮೆಯನ್ನೋ ಶೋಷಿತರಲ್ಲಿ ಕೃತಜ್ಞ ಭಾವನೆಯನ್ನು ಮೂಡಿಸುವುದಲ್ಲದೆ ಸಮಾನತೆಯನ್ನಲ್ಲ. ಜಾತ್ಯಾತೀತ ಎಂದರೆ ಜಾತಿಪ್ರಜ್ಞೆಯೇ 

ಇಲ್ಲದಿರುವುದು. ಅದು ಮಕ್ಕಳಿಂದ ಮಾತ್ರ ಸಾಧ್ಯ ಎಂದಿದ್ದಾರೆ. 


ಖಂಡಿತ ರೂಪಾ ಅವರ ಅಭಿಪ್ರಾಯ ಒಪ್ಪುವಂತಹದ್ದು!


ಇಂತಹ ಬಾಲಿಶ ಭಾವೋತ್ಕರ್ಷದ ಕ್ರಿಯೆಗಳು ಜಾತಿ ಜಾಗೃತರಿಂದ ಸಮಾನತೆಯನ್ನು ತರುವವೇ? ಇಂತಹ ಭಾವೋತ್ಕರ್ಷಗಳು ಸಾಗರೋಪಾದಿಯಲ್ಲಿ ಬಂದು ಹೋದದ್ದು ಖ್ಯಾತ ಟ್ಯಾಬ್ಲಾಯ್ಡ್ ಪತ್ರಿಕೆಯ ಕತೆ, ಕವನಗಳ ಒಂದು ಅಮಲಿನ ಎಂಬತ್ತರ ಘಟ್ಟದಲ್ಲಿ! ಆ ಅಮಲಿನಲ್ಲಿ ಇದು ಆದರ್ಶದ ಪರಮೋಚ್ಚ ನೀತಿ ಎಂದುಕೊಂಡವರನ್ನು ಕಾಪಿ ಕ್ಯಾಟ್ ಮಾಡುವ ಫ್ಯಾಷನ್ ಆಗಿತ್ತೇ ಹೊರತು ಜೀವಂತಿಕೆ, ವಾಸ್ತವಿಕತೆ, ಸ್ವಂತಿಕೆ ಏನೂ ಅಲ್ಲ. ಅದು ಬರೀ ವಾಸ್ತವವಿಲ್ಲದ, ಜೀವಂ ಇಲ್ಲದ ಸ್ವಂ ಇಲ್ಲದ್ದು ಮಾತ್ರ!


ಖ್ಯಾತ ಕಥೆಗಾರರಾದ ಬೆಸಗರಹಳ್ಳಿ ರಾಮಣ್ಣ ಅವರು ಆಸ್ಪತ್ರೆಯಲ್ಲಿದ್ದಾಗ ಎಲ್. ಹನುಮಂತಯ್ಯನವರು ರಾಮಣ್ಣನವರನ್ನು ನೋಡಲು ಹೋಗಿದ್ದರು. ಆಗ ರಾಮಣ್ಣನವರು ಒಂದು ಲೋಟ ಹಾಲು ತರಿಸಿ "ಅಯ್ಯೋ ದಲಿತರನ್ನು ನಾವು ತುಂಬಾ ಶೋಷಿಸಿದ್ದೇವೆ. ಹಾಗಾಗಿ ನೀನು ಅರ್ಧ ಹಾಲು ಕುಡಿದು ಆ ಕಪ್ ಕೊಡು. ಉಳಿದ ನಿನ್ನ ಎಂಜಲಿನ ಅರ್ಧ ಹಾಲು ನಾನು ಕುಡಿಯುವೆ" ಎಂದು ಎಂಜಲು ಹಾಲು ಕುಡಿದಿದ್ದರಂತೆ. ಇದನ್ನು ಎಲ್. ಹನುಮಂತಯ್ಯನವರು ಸಾಕಷ್ಟು ಸಾರಿ ಭಾಷಣದಲ್ಲಿ, ಲೇಖನಗಳಲ್ಲಿ ಉಲ್ಲೇಖಿಸಿದ್ದಾರೆ. ಇಂತಹ ಭಾವೋತ್ಕರ್ಷಗಳು ಕವಿ, ಕತೆಗಾರ, ಸಾಹಿತಿಗಳ ಕೃತಿಗಳಿಗೆ ಸೃಜನಶೀಲ ಆಯಾಮವನ್ನು ತಂದುಕೊಡುವ ನೋವಿನ ವ್ಯಾಕುಲತೆಗಳೆನಿಸುವವೇ ಹೊರತು ಸಮಾಜದಲ್ಲಿ ಏನಾದರೂ ಗಮನಾರ್ಹ ಬದಲಾವಣೆಗಳನ್ನು ವಾಸ್ತವದಲ್ಲಿ ತಂದಿವೆಯೇ? ಆದರೆ ಇಂತಹ ಭಾವೋತ್ಕರ್ಷಗಳು ಭ್ರಾಮಕ ಯುವ ಶಿಷ್ಯರಿಗೆ ಕ್ರಾಂತಿಯೆನಿಸಿ ಅನುಕರಣೆಗೆ ಪ್ರೇರೇಪಿಸುತ್ತವೆ. ಅದರಲ್ಲೂ ಕೆಲ ಜಾತಿ ಜಾಗೃತ ಪ್ರಗತಿಪರ ಘೋಷಿತ ಯುವಜನರಿಗೆ ತಮ್ಮ ಜಾತಿಯ ಆದರ್ಶ ಪುರುಷರ ಕ್ರಿಯೆಗಳು.......ಬೈಬಲ್, ಕುರಾನ್, ಭಗವದ್ಗೀತೆ, ಮಾವೋ ನ ಕೆಂಪು ಪುಸ್ತಕ ಎನಿಸಿಬಿಡುತ್ತವೆ!  ಆದರೆ ವಾಸ್ತವವಾಗಿ ಇದು ಕ್ರಾಂತಿಯೇ? ಇದರಿಂದ ಆದ ಅಥವಾ ಸೃಜಿಸಿದ ಸಮಾನತೆ ಏನು? 


ಇದೆ ರೀತಿ ಪೇಜಾವರ ಶ್ರೀಗಳು ದಲಿತರ ಮನೆಗೆ ಭೇಟಿ ಕೊಟ್ಟದ್ದು, ಮೈಸೂರಿನ ಬ್ರಾಹ್ಮಣರು ಮಾದಾರ ಚೆನ್ನಯ್ಯ ಶ್ರೀಗಳ ಪಾದಪೂಜೆ ಮಾಡಿದ್ದು. ಕೇವಲ ಕೇವಲ ಭಾವೋತ್ಕರ್ಷಗಳು ಮಾತ್ರ!


ಮಾದಾರ ಚನ್ನಯ್ಯನ ಬಾಯ ತಾಂಬೂಲವ ಮೆಲುವೆ.

ಡೋಹರ ಕಕ್ಕಯ್ಯನ ಒಕ್ಕುಮಿಕ್ಕುದನುಂಬೆ.

ಚೋಳಿಯಕ್ಕನ ಊಳಿಗದವನಾಗುವೆ.

ಶ್ವಪಚಯ್ಯನ ಆಳಾಗಿರುವೆ.

ಇನ್ನುಳಿದ ಸಕಲಗಣಂಗಳ ತೊತ್ತು ಬಂಟ ಲೆಂಕನಾಗಿ

ರಾಜಾಂಗಣ ಬಳಿಯುವೆನಯ್ಯಾ ಅಖಂಡೇಶ್ವರಾ.

- ಷಣ್ಮುಖಸ್ವಾಮಿ

(ಸಮಗ್ರ ವಚನ ಸಂಪುಟ: 14   ವಚನದ ಸಂಖ್ಯೆ: 643)


ಹನ್ನೆರಡನೇ ಶತಮಾನದ ವಚನಕಾರರು ಸಹ ಇಂತಹುದೇ ಭಾವೋತ್ಕರ್ಷದ ಹೋರಾಟ ಮಾಡಿ ದಾರುಣವಾಗಿ ಸೋತಿದ್ದಾರೆ. ಹಾಗಿದ್ದೂ ವಾಸ್ತವಿಕ, ಆಡಳಿತಾತ್ಮಕ ಪರಿಹಾರ ಕಂಡುಹಿಡಿಯದಿದ್ದರೆ ಕತೆಗಳು ಕವನಗಳು ಬಹುಮಾನ ಪಡೆಯುವವಷ್ಟೇ ಏನೋ!


ಮದಿಸದೆ ಮಥಿಸಿದ ಜಾಗೃತ ಮನಸ್ಸುಗಳೇ ಹೇಳಬೇಕು.


ವಿಪರ್ಯಾಸವೆಂಬಂತೆ ಪ್ರಗತಿಪರರೋರ್ವರು

ಭೂತಕಾಲದ ಕೆಡುಕುಗಳನ್ನು ಮರೆತು ಒಳಿತನ್ನು ಮಾತ್ರ ಬೋಧಿಸಬೇಕು, ಪರಿಗಣಿಸಬೇಕು, ಪ್ರಚಾರಕೊಡಬೇಕು ಎಂದು ಲಾಲಾಲ್ಯಾಂಡ್ ಮಾತುಗಳನ್ನು ನೆನ್ನೆಯಷ್ಟೇ ಹೇಳಿದ್ದಾರೆ!!! ಇತಿಹಾಸವನ್ನು ಅರಿಯದೆ ಇತಿಹಾಸವನ್ನು ಸೃಷ್ಟಿಸಲಾಗದು ಎಂಬ ಅಂಬೇಡ್ಕರ್ ಮಾತನ್ನು ಹೇಳುತ್ತಲೇ ಇಂತಹ ದ್ವಂದ್ವವನ್ನು ಈ ಪ್ರಗತಿಪರ ಪ್ರೊಫೆಸರರು ಹೇಳಿರುವುದು.........!


ಇರಲಿ, ಈ ಲಾಲಿಪಾಪ್ ಆನ್ನು ಜನ ಚೀಪುತ್ತಿದ್ದಾರೆ. ಒಂದೆಡೆ ಪ್ರಧಾನಿಯ ಲಾಲಿಪಾಪ್, ಇನ್ನೊಂದೆಡೆ ವಿರೋಧ ಪಕ್ಷದ ಲಾಲಿಪಾಪ್, ಮಗದೊಂದೆಡೆ ಪ್ರಗತಿಪರರ ರಸಸ್ವಾದದ ಲಾಲಿಪಾಪ್.....


ಭಾರತ ವಿಶ್ವದ ಏಕಮಾತ್ರ ಲಾಲಿಪಾಪ್ ಲಾಲಾಲ್ಯಾಂಡ್!


#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ

ಚೇಲಾಗಿರಿಯ ಪಠ್ಯ ಸಮಿತಿ

 ಆಗಷ್ಟೇ ಬೆಂಗಳೂರಿನಲ್ಲಿ ನಾನು ಮತ್ತು ನನ್ನ ಸ್ನೇಹಿತ ಸೇರಿ ಕಂಪ್ಯೂಟರ್ ಬಿಡಿ ಭಾಗಗಳನ್ನು SJP ರಸ್ತೆಯ ಮತ್ತೊಬ್ಬ ಸ್ನೇಹಿತನಲ್ಲಿ ಖರೀದಿಸಿ ಜೋಡಿಸಿ ಕಂಪ್ಯೂಟರ್ ಆಗಿಸಿ ಮಾರುತ್ತಿದ್ದೆವು. ಕೆಲವು ಸಮಯದ ಹಿಂದೆಯಷ್ಟೇ ಕ್ಲಾಸಿಕ್ ಕಂಪ್ಯೂಟರ್ ಹಗರಣ ಮುಗಿದು ಅಂದಿನ ಮುಖ್ಯಮಂತ್ರಿ ರಾಜ್ಯದ ಪ್ರತಿಯೊಂದು ಊರಿನಲ್ಲೂ ಒಂದೊಂದು ಸಿನೆಮಾ ಮಂದಿರ ಖರೀದಿ ಮಾಡಿದ್ದಾರೆ ಎಂಬ ಸುದ್ದಿಯಾಗಿತ್ತು. ನಂತರ ಮುಖ್ಯಮಂತ್ರಿ ಬದಲಾಗಿ ವೀರಪ್ಪ ಮೊಯ್ಲಿ ಮುಖ್ಯಮಂತ್ರಿ ಆಗಿದ್ದರು. ಅವರ ಗೃಹ ಕಚೇರಿಯಲ್ಲಿ ನನ್ನ ಮಿತ್ರನೊಬ್ಬ ಉದ್ಯೋಗಿಯಾಗಿದ್ದ. ನಾನವನಿಗೆ ಕಂಪ್ಯೂಟರ್ ಸರಬರಾಜು ಕಾಂಟ್ರಾಕ್ಟ್ ಆಗದಿದ್ದರೆ ಬೇಡ ಡೇಟಾ ಎಂಟ್ರಿ ಕಾಂಟ್ರಾಕ್ಟ್ಗಳನ್ನಾದರೂ ಕೊಡಿಸು ಎನ್ನುತ್ತಿದ್ದೆ. ಅದೇ ರೀತಿ ನನ್ನ ಆರ್ಕಿಟೆಕ್ಟ್ ಮಿತ್ರನು ಆ ಮುಮ ಕಾರ್ಯದರ್ಶಿಗೆ ಕಾಮಗಾರಿ, ಇಂಟೀರಿಯರ್ ಡಿಸೈನ್ ಕಾಂಟ್ರಾಕ್ಟ್ ಕೇಳುತ್ತಿದ್ದ. ಆದರೆ ಅವನಿಂದ ಒಂದೇ ಒಂದು ಉಪಯೋಗ ನಮಗಾಗಲಿಲ್ಲ. ಹಾಗೆಯೇ ಅವನೂ ಸಹ ತನ್ನ ಹಳೆಯ ಬೈಕ್ ಬಿಟ್ಟು ಕಾರ್ ಇರಲಿ ಇನ್ನೊಂದು ಬೈಕ್ ಸಹ ಕೊಳ್ಳ(ಲಾಗ)ಲಿಲ್ಲ.


ನಂತರ JH ಪಟೇಲ್ ಸರ್ಕಾರ ಬಂದಿತು. ಅಲ್ಲಿ ಮುಖ್ಯಮಂತ್ರಿಯವರ ಬಂಧುವೂ ಆಗಿದ್ದ ನನ್ನ ಸಹಪಾಠಿಯೊಬ್ಬ ಮುಖ್ಯಮಂತ್ರಿ ಕಚೇರಿಯಲ್ಲಿ ಸಿಬ್ಬಂದಿಯಾದ. ಮತ್ತದೇ ರಾಗ, ಮತ್ತದೇ ಹಾಡು! ಆದರೆ  ಇವನಿಂದ ಆದ ಒಂದೇ ಒಂದು ಉಪಯೋಗವೆಂದರೆ ಅಮಿತಾಭ್ ಬಚ್ಚನ್ ಅನ್ನು ಭೇಟಿಯಲ್ಲ, ನೋಡಿದ್ದು ಮಾತ್ರ! ಅಂದು ನನ್ನ ಮಿತ್ರನನ್ನು ಮಾತನಾಡಿಸಲು ವಿಧಾನಸೌಧಕ್ಕೆ ಹೋಗಿದ್ದೆ. ಅಂದು ಅಮಿತಾಭ್ ಬೆಂಗಳೂರಿನಲ್ಲಿ ನಡೆಯಲಿದ್ದ ವಿಶ್ವಸುಂದರಿ ಸ್ಪರ್ಧೆಯ ಕುರಿತು ಮುಖ್ಯಮಂತ್ರಿಗಳೊಂದಿಗೆ ಪತ್ರಿಕಾ ಗೋಷ್ಠಿ ನಡೆಸಿದರು. ಆ ಗೋಷ್ಠಿಗೆ ಅವನು ನನ್ನನ್ನು ಕರೆದೊಯ್ದದ್ದು ಬಿಟ್ಟರೆ ಇನ್ಯಾವ ಉಪಯೋಗವೂ ಆಗಲಿಲ್ಲ. ಅವನೂ ಅಷ್ಟೇ ಪಟೇಲರ ಅಧಿಕಾರ ಮುಗಿದ ಮೇಲೆ ದಾವಣಗೆರೆಗೆ ಮರಳಿದ.


ಆ ನಂತರದ ಸರ್ಕಾರಗಳಿಂದ ಬೆಂಗಳೂರು ಸಿಂಗಾಪುರವಾಗಿ ಕರ್ನಾಟಕದಲ್ಲಿ ಸುವರ್ಣಯುಗ ಆರಂಭವಾಯಿತು!


ಸ್ವಿಸ್ ಬ್ಯಾಂಕ್ ಸೇರುತ್ತಿದ್ದ ಕಪ್ಪು ಹಣ ಮಾರ್ಗ ಬಂದ್ ಆದ ಕಾರಣ ರಿಯಲ್ ಎಸ್ಟೇಟಿಗೆ ಭೋರ್ಗರೆಯಲಾರಂಭಿಸಿತು. ಅದಕ್ಕೆ ತಕ್ಕಂತೆ ಸರ್ಕಾರದ ಆದಾಯ ಸಹ! ಅಲ್ಲಿಯವರೆಗೆ ತಮ್ಮ ಊರಿನಿಂದ ಬಸ್ಸಿನ ಮುಂದಿನ ರಿಸರ್ವ್ ಸೀಟಿನಲ್ಲಿ ಬೆಂಗಳೂರಿಗೆ ಬರುತ್ತಿದ್ದ ಶಾಸಕರು ವೈಭವೋಪೇತ ಕಾರುಗಳಲ್ಲಿ ಬರುತ್ತಾ ತಮ್ಮ ಚೇಲಾಗಳು ಸಹ ಬಸ್ ಹತ್ತದಷ್ಟು ಸುವರ್ಣ ಕರ್ನಾಟಕ ನಿರ್ಮಿಸಿದರು. ಇದರ ಮುಂದಿನ ಹಂತವಾಗಿ ನಿಗಮ, ಮಂಡಲಿಗಳಿಂದ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯತ್ವ, ಪರಿಷತ್ತು, ರೈಲ್ವೆ ಸಲಹಾ ಮಂಡಳಿ ಸದಸ್ಯತ್ವ, ಮಲೆನಾಡು ಅಭಿವೃದ್ದಿ, ಬಯಲು ಸೀಮೆ ನೀರಾವರಿ ಸಮಿತಿ, ಬಯಲು ಶೌಚಮುಕ್ತ ಸಮಿತಿ, ಮಾಧ್ಯಮ ಸಲಹೆಗಾರ ಸಮಿತಿ, ಪೇಜ್ ಪ್ರಮುಖ್ ಇನ್ನೂ ಅನೇಕಾನೇಕ ಕಂಡು ಕೇಳರಿಯದ ಸುವರ್ಣ ಅವಕಾಶಗಳನ್ನು ಸೃಷ್ಟಿಸಿ ರಾಜಕಾರಣಿಗಳು ತಮ್ಮ ತಮ್ಮ ಬೆಂಬಲಿಗರಿಗೆ ಪೊಡಮಟ್ಟರು. ನಂತರ ಎಲ್ಲಾ ಪಕ್ಷಗಳ ಒಬ್ಬೊಬ್ಬ ಶಾಸಕನ ವಾಹನ ಚಾಲಕ, ಗನ್ಮನ್, ಪಾತ್ರೆ ತೊಳೆಯುವ ಸಿಬ್ಬಂದಿ ಸಹ ಕೋಟ್ಯಾಧಿಪತಿಗಳಾದರು. ನಾನು ಕಂಡಂತೆ ಮಾಜಿ ಮುಖ್ಯಮಂತ್ರಿಗಳ ಮಗನ ಮನೆಯಲ್ಲಿ ಕರೆಂಟ್ ಬಿಲ್ಲು, ಫೋನ್ ಬಿಲ್ಲು ಕಟ್ಟಲು, ತರಕಾರಿ ತರಲು ಇದ್ದ ಈಗಲೂ ಅದೇ ಹುದ್ದೆಯಲ್ಲಿರುವ ಒಬ್ಬ ಸಹಾಯಕ ಇಂದು ಎಪ್ಪತ್ತು ಕೋಟಿಗೂ ಮೀರಿ ಆಸ್ತಿವಂತನಾಗಿದ್ದಾನೆ. ಅದೇ ರೀತಿ ಮಾಧ್ಯಮ ಸಲಹೆಗಾರರು ಕೋಟ್ಯಾಧಿಪತಿಯಾಗಿ ಸಾಮರಸ್ಯ, ಸಾಹಿತ್ಯ ಸಮ್ಮೇಳನಗಳ ಪ್ರಾಯೋಜಕರಾಗಿದ್ದಾರೆ ಎಂದು ನನ್ನ ಮಾಧ್ಯಮ ಮಿತ್ರರು ಹೇಳುತ್ತಾರೆ. ಕೆಲವರಿಗೆ ಹಣದ ವ್ಯಾಮೋಹ, ಇನ್ನೂ ಕೆಲವರಿಗೆ ಪ್ರಚಾರದ ತೀಟೆ. ಅವೆಲ್ಲವನ್ನೂ ಈ "ಗಿರಿ"ಗಳು ಒದಗಿಸುತ್ತವೆ.


ಇದಕ್ಕೆ ಪಠ್ಯ ಪರಿಷ್ಕೃತ ಸಮಿತಿಗಿರಿ ಸಹ ಬೆಂಬಲಿಗರಿಗೆ ಪೊಡಮಾಡುವ ಅಂತಹ ಒಂದು ಸುವರ್ಣ ಅವಕಾಶಗಿರಿ! 


ಈ ಹಿಂದೆ ಖ್ಯಾತ ಸಾಹಿತಿಗಳು ಪರಿಷ್ಕರಣ ಸಮಿತಿ ಅಧ್ಯಕ್ಷರಾಗಿದ್ದಾಗ ಅವರಿಗೆ ಬೇಕಾದ ಅಜೆಂಡಾ ಸೇರಿಸಿದರು ಎಂದು ಇಂದಿನಂತೆಯೆ ಅಂದೂ ಹುಯಿಲೆಬ್ಬಿತ್ತು. ಆ ಸಮಿತಿಯ ಎಡ ತೊಡೆ ತಟ್ಟುವಿಕೆಯ ಸವಾಲಿಗೆ ಇಂದು ಈ ಹೊಸ ಸಮಿತಿ ಬಲ ತೊಡೆ ತಟ್ಟಿ ಉತ್ತರ ನೀಡಿದೆ. 


ಆದರೆ ಇಲ್ಲಿ ವಿರೋಧಕ್ಕೆ ಗುರಿಯಾಗಿರುವುದು ಪರಿಷ್ಕರಣೆ ಆಗಿರುವ ಕನ್ನಡ ಭಾಷಾ ಪಠ್ಯ ಎಂದು ಗಮನಿಸಿದ್ದೇನೆ! ಆದರೆ ಪಠ್ಯವೆಂದರೆ ಕೇವಲ ಕನ್ನಡ ಭಾಷಾ ವಿಷಯ ಮಾತ್ರವೇ? ಅದರಲ್ಲೂ ನನ್ನ ಹೈಸ್ಕೂಲ್ ದಿನಗಳಿಂದಲೂ ಕನ್ನಡಕ್ಕೆ ಪರ್ಯಾಯವಾಗಿ ಅಂಕ ಮಿತ್ರ ಸಂಸ್ಕೃತ, ಉರ್ದು ಆಯ್ಕೆ ಮಾಡಿಕೊಳ್ಳುವವರು ಹೆಚ್ಚಿದ್ದರು. ಅದು ಈಗಲೂ ಹಾಗೆಯೇ ಇದೆ. ಉಳಿದಂತೆ ಇಂಗ್ಲಿಷ್, ವಿಜ್ಞಾನ, ಗಣಿತ, ಇತಿಹಾಸ, ಗಣಕ ವಿಷಯಗಳ ಪರಿಷ್ಕರಣೆ ಹೇಗಿದೆ? ಒಂದು ವೇಳೆ ಆ ವಿಷಯಗಳು ಪರಿಷ್ಕರಣೆ ಆಗಿಲ್ಲದಿದ್ದರೆ, ಏಕಾಗಿಲ್ಲ? ಅವು ಬದಲಾಗದ static ಶಾಸ್ತ್ರಗಳೆಂದೆ? 


ಆಯಾಯ ಪಕ್ಷಗಳ ಬೆಂಬಲಿಗರ ಸಿಂಡಿಕೇಟ್ ಸದಸ್ಯರನ್ನು ಓಲೈಸಿ ಉದ್ಯೋಗ, ಬಡ್ತಿ, ಪದವಿ, ಪಿಹೆಚ್ಡಿ ಪಡೆದ, ಅದರಲ್ಲೂ ಕನ್ನಡ ಉಪನ್ಯಾಸಕ ಎಡಪಂಥೀಯ ಸಾಹಿತಿವರ್ಗ ತಾವು ಪಿಹೆಚ್ಡಿ ಪಡೆದದ್ದು ತಮ್ಮ ವಿರೋಧಿ ಬಣವನ್ನು ವಾಚಾಮಗೋಚರ ಬೈಯುವುದರಲ್ಲಿ ಎಂದು ಸಾಬೀತು ಮಾಡುತ್ತಿದ್ದಾರೆ. ಕೇವಲ ಕನ್ನಡವಲ್ಲದೆ ಜಗತ್ತಿನ ಎಲ್ಲಾ ವಿಷಯಗಳ ಬಗ್ಗೆ ಉನ್ನತ ಪದವಿ ಪಡೆದಿರುವಂತೆ ನಿರರ್ಗಳವಾಗಿ ಮಾತನಾಡುವ ಈ ಸುಜ್ಞಾನಿಗಳು ಇಂತಹ ಬಂದ-ಹೋದ ಸಮಿತಿಗಳನ್ನು ನಿಷೇಧಿಸಿ ಶಿಕ್ಷಣ ಇಲಾಖೆಯಲ್ಲಿಯೆ ಉದ್ಯೋಗದಲ್ಲಿರುವ ತಜ್ಞರಿಂದ ಪಠ್ಯ ರಚಿಸಿ ಎಂದೇಕೆ ಕಳೆದ ಬಾರಿ ಸಾಹಿತಿ ಅಧ್ಯಕ್ಷರ ವಿರುದ್ಧ ಹುಯಿಲೆದ್ದಾಗಲೇ ನೈತಿಕವಾಗಿ ಪ್ರಶ್ನಿಸಲಿಲ್ಲ! ಹೋಗಲಿ, ಈಗಲಾದರೂ ಏಕೆ ಅಂತಹ ದೂರಾಲೋಚನೆಯ ಕುರಿತು ಪ್ರಶ್ನಿಸುತ್ತಿಲ್ಲ?


ಕುಲುಮೆಗೆ ನಿಲುಮೆ, ಹಿಂದುತ್ವಕ್ಕೆ ಸಾಮರಸ್ಯ, ಲಿಂಗಕ್ಕೆ ಕಾರಂಜಿ, ಬರಗೂರಿಗೆ ಚಕ್ರತೀರ್ಥ, ಕಾಂಗ್ರೆಸ್ಸಿಗೆ ಬಿಜೆಪಿ...ಇದರಾಚೆಗೆ ಚಿಂತಿಸಲಾಗದ ಚಿಂತನೆಯನ್ನು ಸಪ್ತ ಸಾಗರದಾಚೆಯಿಂದಲೂ ನೋಡಲಾಗುತ್ತಿಲ್ಲ. 


ಒಟ್ಟಿನಲ್ಲಿ ಈ ಪಠ್ಯ ಪರಿಷ್ಕರಣೆ ನಿಜಕ್ಕೂ ಒಂದು ಅತ್ಯುತ್ತಮ ಬೆಳವಣಿಗೆ! ಏಕೆಂದರೆ ಈ ಮುಂಚೆ ಇಂತಹದ್ದನ್ನು ಗಮನಿಸುತ್ತಲೇ ಇರದಿದ್ದ ಪ್ರಜೆಗಳು ಈಗ ಈ ಬಗ್ಗೆಯೂ ಆಲೋಚಿಸಲಾರಂಭಿಸಿದ್ದಾರೆ.  ಈ ಆಲೋಚನೆ ಮುಂದೆ ಒಂದು ಶಾಶ್ವತ ಪರಿಹಾರಕ್ಕೆ ನಾಂದಿಯಾಗಬಹುದು! ಹಾಗೆಯೇ ಅಂಕದ ಕೋಳಿಗಳ ಮಂಕು ಕಳೆಯಬಹುದು.


#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ

ಅವಳ ವಚನ ಬೆಲ್ಲದಂತೆ: ಹೃದಯದಲ್ಲಿಪ್ಪುದು ನಂಜು ಕಂಡಯ್ಯಾ

 ಮಿತ್ರರಾದ ರಾಧಾಕೃಷ್ಣ ಕೌಂಡಿನ್ಯ ಅವರು 'ರವಿ ಹಂಜ್, ನೀವು ಬರೆದ ಕಾರಣ ಬಚಾವಾದ್ರಿ. ಬೇರೆ ಯಾರಾದರೂ ಆಗಿದ್ದರೆ ಟೈಟಲ್ ಕಾರಣಕ್ಕೆ ಇಪ್ಪತ್ನಾಲ್ಕು ಕೇಸ್ ಆಗಿರೋದು' ಎಂದು ನನ್ನ "ಬಸವರಾಜಕಾರಣ" ಕುರಿತು ಹೇಳಿದ್ದಾರೆ.

ಅವರು ಈ ಮಾತುಗಳನ್ನು ನಾನೊಬ್ಬ ಅನಿವಾಸಿ ಯಾ ಭಾರತೀಯ ಮೂಲದ ಅಮೆರಿಕನ್ ಎಂಬರ್ಥದಲ್ಲಿಯೋ ಅಥವಾ ನಾನೊಬ್ಬ ಹುಟ್ಟಿನಿಂದ ವೀರಶೈವಿಗನಾಗಿ ಎಂಬರ್ಥದಲ್ಲಿಯೋ ತಿಳಿಯದು. ಆದರೆ ಈ ಎರಡೂ ಬಗೆಯ ಲೇಖಕರ ಕೃತಿಗಳು ಭಾರತದಲ್ಲಿ ನಿಷೇಧಕ್ಕೊಳಗಾಗಿದ್ದವು. ಆ ಲೇಖಕರು ಸಲ್ಮಾನ್ ರಶ್ದಿ, ಮತ್ತು ಹೆಚ್. ಎಸ್. ಶಿವಪ್ರಕಾಶ್. ಇವರ ಕೃತಿಗಳ ವಿಷಯ ಕೂಡ ನನ್ನ 'ಬಸವರಾಜಕಾರಣ'ದಂತೆಯೇ ಅವರವರ ಹುಟ್ಟಿನ ಧರ್ಮದವೇ ಆಗಿದ್ದವು. ವ್ಯತ್ಯಾಸ ಅವರುಗಳದು ಸೃಜನಶೀಲ, ನನ್ನದು ಸೃಜನೇತರ!
ಇತಿಹಾಸದ ಘಟನೆಯನ್ನು ಆಗಿರಬಹುದು, ಹೀಗಿರಬಹುದು, ಹೋಗಿರಬಹುದು, ಬಂದಿರಬಹುದು, ಆ..ಬಹುದು, ಈ..ಬಹುದು ಓ..ಬಹುದು ಎಂಬ ಊಹಾತ್ಮಕ ಹಿನ್ನೆಲೆಯಲ್ಲಿ ಕಥನವನ್ನು ಕಟ್ಟಿದಾಗ ಸಮರ್ಥಿಸಿಕೊಳ್ಳಲು ಪುರಾವೆಗಳು ಇರಬೇಕು. ಅಂತಹ ಪುರಾವೆಗಳ ಕೊರತೆಯಿದ್ದಾಗ ಲೇಖಕ ತನ್ನ ಅನಿಸಿಕೆಗೆ ಸೃಜನಶೀಲ ರೂಪ ಕೊಡುತ್ತಾನೆ. ಅಂತಹ ರೂಪ ಕೊಟ್ಟಾಗ ಸಮರ್ಥಿಸಿಕೊಳ್ಳಲಾಗದೆ ಆ ಕೃತಿಗಳು ವಿವಾದ, ನಿಷೇಧಗಳಿಗೆ ತುತ್ತಾಗುವ ಸಂಭವ ಇರುತ್ತದೆ. ಈ ಸಂಭವ ತಕ್ಕ ಪುರಾವೆಗಳಿರದ ಸೃಜನೇತರ ಸಂಶೋಧನಾತ್ಮಕ ಕೃತಿಗಳಿಗೂ ಇರುತ್ತದೆ. ಆದರೆ ಯಾವ ಕೃತಿ ತನ್ನ ಸಂಶೋಧನಾ ವಿಷಯ ಮಂಡನೆಗೆ ತಕ್ಕ ಆಕರ, ಪುರಾವೆಗಳನ್ನು ಒದಗಿಸುತ್ತದೆಯೋ ಅದಕ್ಕೆ ಯಾವ ವಿವಾದ, ನಿಷೇಧದ ಭಯ ಇರುವುದಿಲ್ಲ. ಹಾಗೊಮ್ಮೆ ನಿಷೇಧಕ್ಕೆ ಒಳಪಟ್ಟರೂ ಅದು ಕೋರ್ಟಿನಲ್ಲಿ ನಿಲ್ಲುವುದಿಲ್ಲ. ಹಾಗಾಗಿಯೇ ಪ್ರೊ.ಕಲ್ಬುರ್ಗಿಯವರ ಸಂಶೋಧನೆಯ ತಪ್ಪುಗಳನ್ನು ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಚಿಸಿದ್ದ 'ಲಿಂಗಾಯತ ಪ್ರತ್ಯೇಕ ಧರ್ಮ ಸಮಿತಿ'ಯ ಸದಸ್ಯರುಗಳನ್ನು ಹೆಸರಿಸಿಯೇ ನನ್ನ ವಿಷಯ ಮಂಡನೆ ಮಾಡಿದ್ದೇನೆ.
ಇಂತಹ ಒಂದು ಗಟ್ಟಿ ನಿಲುವಿನಿಂದಲೇ ನಾನು 'ಬಸವರಾಜಕಾರಣ' ಬರೆಯಲು ಕೈ ಹಾಕಿದ್ದು, ಮತ್ತದು ಯಾವ ವಿವಾದಗಳಿಗೆ ಒಳಗಾಗದಿದ್ದುದು ಎಂದುಕೊಂಡಿದ್ದೇನೆ. ಓದುಗರು ಸಹ ಕೆಲವು ವಚನಗಳನ್ನು ನಾನು ಕುಯುಕ್ತಿಯಿಂದ ತಪ್ಪಾಗಿ ವ್ಯಾಖ್ಯಾನಿಸಿದ್ದೇನೆ ಎಂದು ಹೇಳಿರುವುದು ಬಿಟ್ಟರೆ ಉಳಿದ ವಿಚಾರಗಳ ಬಗ್ಗೆ ಏನನ್ನೂ ಹೇಳಿಲ್ಲ. ಅಂತಹ ಒಂದು ವಚನ ವ್ಯಾಖ್ಯಾನ ಹೀಗಿದೆ.
ಅವಳ ವಚನ ಬೆಲ್ಲದಂತೆ: ಹೃದಯದಲ್ಲಿಪ್ಪುದು ನಂಜು ಕಂಡಯ್ಯಾ
ಕಂಗಳಲ್ಲೊಬ್ಬನ ಕರೆವಳು; ಮನದಲೊಬ್ಬನ ನೆನೆವಳು!
ವಚನದಲ್ಲೊಬ್ಬನ ನೆರೆವಳು!
ಕೂಡಲಸಂಗಮದೇವಾ,
ಇಂತಹವಳ ತನುವೊಂದೆಸೆ, ಮನವೊಂದೆಸೆ, ಮಾತೊಂದೆಸೆ
ಈ "ಮಾನಸಗಳ್ಳಿ"ಯ ನನ್ನವಳೆಂದು ನಂಬುವ
ಕುರಿನರರನೇನೆಂಬೆನಯ್ಯಾ?
ಮೇಲುನೋಟಕ್ಕೆ ಈ ವಚನವನ್ನು ಓದಿದವರು ಇದು ಚಂಚಲ ಮನಸ್ಸಿನ ಕುರಿತಾದ ಸೊಗಸಿನ ವಚನ ಎಂದು ಅರ್ಥೈಸಿಕೊಳ್ಳುತ್ತಾರೆ. ಆದರೆ ಬಸವಣ್ಣನ ಕೌಟುಂಬಿಕ ಜೀವನವನ್ನು ಸಮಗ್ರವಾಗಿ ಗ್ರಹಿಸಿದಾಗ, ನೀಲಮ್ಮನ ವಚನಗಳ ಸೂಕ್ಷ್ಮವನ್ನು ಗಮನಿಸಿದಾಗ ಈ ವಚನವು ಬೇರೆಯದೇ ಅರ್ಥವನ್ನು ಮಹಿಳೆಯರ ಕುರಿತಾಗಿಯೇ ಕೊಡುತ್ತದೆ. ಹಾಗಾಗಿ ಬಸವಣ್ಣನು ಸೂಚ್ಯವಾಗಿ ಮಹಿಳೆಯರ ಚಂಚಲತೆ ಕುರಿತು ಈ ವಚನವನ್ನು ಹೇಳಿದ್ದಾನೋ ಅಥವಾ ತನ್ನ ಪತ್ನಿಯರ ಕುರಿತು ಅವಹೇಳನ ಮಾಡಿದ್ದಾನೋ ಎಂಬುದು ಮನೋವಿಶ್ಲೇಷಣೆಯ ಸಂಗತಿ. ಏಕೆಂದರೆ ಈ ವಚನದ ಹಿನ್ನೆಲೆಯಲ್ಲಿ ಬಸವಣ್ಣನು ಮಹಿಳೆಯರ ಬಗ್ಗೆ ಹೊಂದಿದ್ದ ಅಭಿಪ್ರಾಯ ಅವನಿಗೆ ಭೂಷಣಪ್ರಾಯವಂತೂ ಅಲ್ಲ. ಒಟ್ಟಾರೆ ಖುದ್ದು ಬಸವಣ್ಣನಂತಹ ಸಮಾನತೆಯ ಹರಿಕಾರನೇ ಹೀಗೆ ಹೇಳಿರುವಾಗ ಸಮಾಜವು ಅಂದು ಮಹಿಳೆಯನ್ನು ಯಾವ ಸ್ಥಾನಕ್ಕಿಳಿಸಿ ನೋಡುತ್ತಿತ್ತು ಎಂಬುದರ ಹೊಳಹು ಸಿಗುತ್ತದೆ.
ಮಾನವ ಧರ್ಮದ ಹಿನ್ನೆಲೆಯಲ್ಲಿ ಮನಶಾಸ್ತ್ರದ ಮುನ್ನೆಲೆಯಿಂದ ವಚನಕಾರರ ಸಾಮಾಜಿಕ ಮತ್ತು ವೈಯಕ್ತಿಕ ಜೀವನವನ್ನು ಸಮಗ್ರವಾಗಿಟ್ಟುಕೊಂಡು ವಚನಗಳನ್ನು ವಿಶ್ಲೇಷಿಸಿದಾಗ ಕಾಣುವ ಸತ್ಯವೇ ಬೇರೆ. ಭಾರತದ ಇತಿಹಾಸವು ಹೀಗೆ ಕ್ರಿಸ್ತಪೂರ್ವ ಕಾಲದಿಂದ ಇಪ್ಪೊತ್ತೊಂದನೇ ಶತಮಾನದ ವರ್ತಮಾನದವರೆಗಿನ ತನ್ನೆಲ್ಲಾ ಸ್ಥಿತ್ಯಂತರಗಳನ್ನು ಸ್ಪಷ್ಟವಾಗಿ ಸಮಗ್ರ ರೂಪದಲ್ಲಿ ಕಟ್ಟಿಕೊಡುತ್ತದೆ. ಭಾರತದ ಈ "Paradigm Shift" ನಿಚ್ಚಳವಾಗಿ ನೋಡಬಲ್ಲ ಸಂಶೋಧಕರಿಗೆ ಸಮಗ್ರವಾಗಿ ತೆರೆದಿಟ್ಟು ಕಾಯುತ್ತಿದೆ. ಇದಕ್ಕೆ ವಚನಕಾರರು ಮತ್ತವರ ಜೀವನವು ಸಹ ಹೊರತಲ್ಲ.

ಪ್ರವಾದಿಗಳ ' ಶಿಶುಕಾಮಿ' ಅವಹೇಳನ ಸರಿಯೇ!

ಪ್ರವಾದಿಗಳ ' ಶಿಶುಕಾಮಿ' ಅವಹೇಳನ ಸರಿಯೇ!


ಪ್ರವಾದಿ ಮೊಹಮ್ಮದರನ್ನು 'ಶಿಶುಕಾಮಿ' ಎಂದು ಇಸ್ಲಾಮೋಫೋಬಿಯಾ ಹೀಯಾಳಿಸುವುದು ಇಂದು ನೆನ್ನೆಯದಲ್ಲ. ಹಲವಾರು ದಶಕಗಳಲ್ಲದೇ ಶತಮಾನಗಳ ಹಿಂದಿನಿಂದಲೂ ಇದೆ. ಪ್ರತಿಬಾರಿ ಹೀಗೆ ಯಾರಾದರೂ ಹೀಯಾಳಿಸಿದಾಗ ಅರಬ್, ಏಷ್ಯಾ ಅಲ್ಲದೇ ಬಹುಪಾಲು ದೇಶಗಳ ಮುಸ್ಲಿಂ ಜನಾಂಗವು ಉಗ್ರ ವಿರೋಧ ತೋರಿದೆ. ನೂರಾರು ಬಾರಿ ಈ ಕಾರಣಕ್ಕಾಗಿ ಪ್ರವಾದಿಗಳನ್ನು ಮತ್ತು ಇಸ್ಲಾಂ ಅನ್ನು ಅವಹೇಳಿಸುವ ಇಸ್ಲಾಮೋಫೋಬಿಯಾ ಮೂಲದ್ರವ್ಯವಾಗಿರುವ ಈ "ಆರನೇ ವಯಸ್ಸಿನ" ವಿಷಯ ಸತ್ಯವೇ?


ಈ ಇಸ್ಲಾಮೋಫೋಬಿಯಾದವರ ಪ್ರಕಾರ ಐವತ್ತರ ಹರೆಯದಲ್ಲಿದ್ದ ಮೊಹಮ್ಮದರೊಂದಿಗೆ ಆಯೇಷಾಳ ನಿಶ್ಚಿತಾರ್ಥವಾದಾಗ ಆಕೆಯ ವಯಸ್ಸು ಆರು ವರ್ಷವಾಗಿದ್ದು, ಮದುವೆಯು ಆಕೆಯ ಒಂಬತ್ತನೇ ವಯಸ್ಸಿನಲ್ಲಿ ನೆರವೇರಿತು ಎಂಬುದು. ಇದನ್ನು ಖುದ್ದು ಆಯೇಷಾ ಉಲ್ಲೇಖಿಸಿದ್ದಾಳೆನ್ನುವುದು (ಸಹೀಹ್ ಅಲ್ ಬುಖಾರಿ ಗ್ರಂಥದ ಪ್ರಕಾರ) ಮತ್ತು ಅನೇಕ ಮುಸ್ಲಿಮರು ಈ ವಯಸ್ಸಿನ ಅಂತರವನ್ನು ಸತ್ಯ ಎಂದು ಒಪ್ಪಿಕೊಂಡಿರುವ ಕಾರಣ ವಿರೋಧಿಗಳ ಕೂಗಿಗೆ ಮಹತ್ವ ಸಿಗುತ್ತಿರುವುದು. ಸಾಕಷ್ಟು ಮುಸ್ಲಿಮರು ಸಹ ಈ ವಯಸ್ಸಿನ ಅಂತರವನ್ನು ಅಲ್ಲಗಳೆಯದೆ ಕೇವಲ ತಮ್ಮ ಪ್ರವಾದಿಗಳ ಹೀಯಾಳಿಕೆ ವಿರುದ್ಧ ಮಾತ್ರ ಪ್ರತಿಭಟನೆ ತೋರುವುದೂ ಅಷ್ಟೇ ಗಮನಾರ್ಹ. 


ಹಾಗೆಂದು ಜಗತ್ತಿನ ಮುಸ್ಲಿಮರು ತಮ್ಮ ಮಕ್ಕಳನ್ನು ಒಂಬತ್ತನೇ ವಯಸ್ಸಿನಲ್ಲಿ ಮದುವೆ ಮಾಡಿ ಕಳಿಸುತ್ತಾರೆ ಎನ್ನುವುದು ಮೂರ್ಖತನ! ಹಾಗೊಂದು ವೇಳೆ ಮದುವೆ ಮಾಡಿದ್ದರೆ ಅದಕ್ಕೆ ಆರ್ಥಿಕ ಕಾರಣಗಳು ಇರುತ್ತವೆಯೆ ಹೊರತು ಧರ್ಮವಲ್ಲ.


ಕುರಾನ್ ಪ್ರಕಾರ ಮದುವೆಯು ಇಬ್ಬರು ವಯಸ್ಕರ ಮಧ್ಯೆ ನಡೆಯಬೇಕು. ಪೈಗಂಬರರು ಕುರಾನಿನ ಆದ್ಯ ಪ್ರತಿಪಾದಕರು. ಹೀಗಿರುವಾಗ ಆಯೇಷಾಳನ್ನು "ಶಿಶು" ಎನ್ನುವುದು ತಪ್ಪು.  ಆಯೇಷಾ ಮದುವೆಯ ಸಮಯದಲ್ಲಿ ವಯಸ್ಕಳಾಗಿಯೇ ಇರಬೇಕು ಎನ್ನುವುದು ಹೆಚ್ಚು ಸಮಂಜಸ. 


ಹಾಗಿದ್ದರೆ ಒಂಬತ್ತನೇ ವಯಸ್ಸಿನ ಹುಡುಗಿ ಹೇಗೆ ವಯಸ್ಕಳು?


ಏಳನೇ ಶತಮಾನವಲ್ಲದೆ ನಂತರದ ಹಲವಾರು ಶತಮಾನಗಳವರೆಗೆ ಅರಬ್, ಯುರೋಪ್ ಅಲ್ಲದೇ ಭವ್ಯ ಭಾರತವೂ ಸೇರಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಅಲ್ಲದೆ ಎಲ್ಲಾ ಧರ್ಮಗಳಲ್ಲೂ ಹುಡುಗಿಯು ಋತುಮತಿಯಾದರೆ ವಯಸ್ಕಳು ಎಂದು ಪರಿಗಣಿಸಲಾಗುತ್ತಿತ್ತು. ಅಲ್ಲದೆ ಮಕ್ಕಳು ಹುಟ್ಟಿದೊಡನೆಯೇ ಮದುವೆಗಳು ನಿಶ್ಚಯವಾಗುತ್ತಿದ್ದವು. ಅಲ್ಲದೆ ಮದುವೆಗಳು ರಾಜತಾಂತ್ರಿಕ ಮಾರ್ಗವೂ ಆಗಿದ್ದವು.  ಇದಕ್ಕೆ ಜಾಗತಿಕ ಇತಿಹಾಸದಲ್ಲಷ್ಟೇ ಅಲ್ಲದೆ ನಮ್ಮ ನಮ್ಮ ಕುಟುಂಬಗಳ ವೈಯಕ್ತಿಕ ಇತಿಹಾಸದಲ್ಲೇ ಸಾಕಷ್ಟು ಉದಾಹರಣೆಗಳು ಹೇರಳವಾಗಿ ಸಿಗುತ್ತವೆ. ಹಾಗಾಗಿಯೇ ಆಯೇಷಾ ಮತ್ತು ಮೊಹಮ್ಮದರ ನಿಶ್ಚಿತಾರ್ಥ ಅವಳ ಆರನೇ ವಯಸ್ಸಿನಲ್ಲಿ ನಿಶ್ಚಯವಾಗಿ ಮೂರು ವರ್ಷಗಳ ನಂತರ ಆಕೆ ತನ್ನ ಒಂಬತ್ತನೇ ವಯಸ್ಸಿನಲ್ಲಿ ಋತುಮತಿಯಾದಾಗ ಮದುವೆ ನಡೆಯಿತು ಎನ್ನುವುದು ಸೂಕ್ತ.


ದೇವರ ನುಡಿಗಳ ದಾಖಲೆಯಾದ ಕುರಾನ್ ಎಂದೂ ಬದಲಾಗಿಲ್ಲ. ಆದರೆ ಮೊಹಮ್ಮದ್ ಪೈಗಂಬರರ ವಚನಗಳು/ನುಡಿಗಳಾದ ಹದೀತ್ ಸಾಹಿತ್ಯ ಕಾಲಾಂತರದಲ್ಲಿ ಆಗಾಗ್ಗೆ ಪರಿಷ್ಕರಣೆಗೊಳಗಾಗಿದೆ. ಆಯೇಷಾ ವಯಸ್ಸಿನ ವಿಷಯ ಸಹ ಹದೀತ್ ಆಧಾರವಾದುದರಿಂದ ಇದು ನಿಖರವಾಗಿ ಇಲ್ಲದಿರಬಹುದು ಎಂದು ಸಾಕಷ್ಟು ಇಸ್ಲಾಂ ಪಂಡಿತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಇವೇ ಹದೀತ್ಗಳ ಪ್ರಕಾರ ತನ್ನ ಮದುವೆಯ ಕಾಲದಲ್ಲಿ ಆಯೇಷಾ ಸಾಕಷ್ಟು ಪ್ರೌಢಿಮೆಯನ್ನು ಮತ್ತು ಬುದ್ಧಿಮತ್ತೆಯನ್ನು ಹೊಂದಿದ್ದಳು ಎನ್ನಲಾಗಿದೆ. ಇಸ್ಲಾಂ ಪಂಡಿತರು ಆಕೆಯ ಬುದ್ಧಿಮತ್ತೆ ಮತ್ತು ಪ್ರೌಢಿಮೆಯ ಹಿನ್ನೆಲೆಯಲ್ಲಿ ಮದುವೆಯ ಸಮಯದಲ್ಲಿ ಆಕೆಯ ವಯಸ್ಸು ಹತ್ತೊಂಬತ್ತು ಎಂದಿದ್ದರೂ ಆಕೆಯ ವಯಸ್ಸು ಒಂಬತ್ತರಿಂದ ಹತ್ತೊಂಬತ್ತರವರ ನಡುವೆ ಹೊಯ್ದಾಡಿದರೂ ಆಕೆಯ ಮದುವೆಯ ಕಾಲಕ್ಕೆ ಆಕೆ ಅಂದಿನ ಕಾಲದ ನಿಯಮಗಳ ಪ್ರಕಾರ ವಯಸ್ಕಳಾಗಿದ್ದಳು, ಅಷ್ಟೇ. ಅಲ್ಲದೆ ಈಕೆ ಕೇವಲ ಯಾವುದೋ ಒಬ್ಬ ಹುಡುಗಿಯಾಗಿರದೆ ಒಂಟೆಯ ಮೇಲೆ ಕುಳಿತು ಯುದ್ಧಗಳಲ್ಲಿ ಪಾಲ್ಗೊಂಡಿದ್ದಾಳೆ, ಉನ್ನತ ರಾಜತಾಂತ್ರಿಕ ಬುದ್ಧಿವಂತಿಕೆಯಲ್ಲದೆ ಹಾಸ್ಯಪ್ರಜ್ಞೆಯನ್ನು ತೋರಿರುವುದಲ್ಲದೆ ಪೈಗಂಬರರು ತಮ್ಮ ಕಾಲಾನಂತರ ಆಯೇಷಾ ಮಾರ್ಗದರ್ಶನದಲ್ಲಿ ಮುಂದುವರಿಯಿರಿ ಎಂದು ತಮ್ಮ ಅನುಯಾಯಿಗಳಿಗೆ ಕರೆ ನೀಡಿದ್ದಾರೆ. ಅಷ್ಟರ ಮಟ್ಟಿಗೆ ಆಯೇಷಾ ಪ್ರಮುಖವಾಗಿದ್ದಾಳೆ. 


ಇಸ್ಲಾಮೋಫೋಬಿಯಾವಾದಿಗಳು ಮರೆತಿರುವ ಅಥವಾ ಜಾಣಮರೆವು ತೋರುವ ಸಂಗತಿ ಏನೆಂದರೆ ಪೈಗಂಬರರು ಆಯೇಷಾಳಿಗಿಂತ ಮುಂಚೆ ತಮಗಿಂತ ಹದಿನೈದು ವರ್ಷ ಹಿರಿಯಳಾಗಿದ್ದ ಖತೀಜಾಳನ್ನು ಮದುವೆಯಾಗಿ ಇಪ್ಪತೈದು ವರ್ಷ ಸಂಸಾರ ಮಾಡಿದ್ದರು. ಖತೀಜಾಳ ಸಾವಿನ ನಂತರ ಅತ್ಯಂತ ದುಖಿತರಾಗಿದ್ದ ಇವರನ್ನು ಅವರ ಸ್ನೇಹಿತರು ಒತ್ತಾಯಪೂರ್ವಕವಾಗಿ ಆಯೇಷಾ ಜೊತೆ ಮದುವೆಗೆ ಒಪ್ಪಿಸಿದ್ದರು. ಅಲ್ಲದೆ ಆಯೇಷಾ ಮದುವೆ ಸಹ ಒಂದು ರಾಜತಾಂತ್ರಿಕ ಮದುವೆಯಾಗಿತ್ತು. ಇನ್ನು ಮೊಹಮ್ಮದರ ಬಹುಪತ್ನಿತ್ವದ ಬಗ್ಗೆ ಹೀಯಾಳಿಸುವ ವಿರೋಧಿಗಳು ಅವರು ವರಿಸಿದ್ದು ಸಾಕಷ್ಟು ವಿಧವೆಯರನ್ನು ಎಂಬುದನ್ನು ಗಮನಿಸುವುದಿಲ್ಲ. ಮಹಿಳೆಯರ ಬಗ್ಗೆ ಎಂತಹ ಮೇಲ್ಪಂಕ್ತಿಯ ಕಳಕಳಿಯನ್ನು ಪೈಗಂಬರರು ಹೊಂದಿದ್ದರು ಎಂಬುದಕ್ಕೆ ಅವರ ವೈಯಕ್ತಿಕ ಜೀವನವೇ ಸಾಕ್ಷಿಯಾಗಿದೆ.


ಅಂದು ಒಂದು ಉನ್ನತ ದೂರದೃಷ್ಟಿಯಿಂದ ಪೈಗಂಬರರು ಸ್ಥಾಪಿಸಿದ ಧರ್ಮ ಕ್ರಮೇಣ ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಕಾರಣ ಇಂದಿನ ರೂಪಕ್ಕೆ ಬಂದು ನಿಂತಿರುವುದನ್ನು ಒಪ್ಪಿದರೂ ಇಸ್ಲಾಮೋಫೋಬಿಯಾವನ್ನು ಒಪ್ಪಲಾಗದು. ಅದು ಇತಿಹಾಸಕ್ಕೆ ಮಾಡುವ ಅಪಚಾರ.


ಇನ್ನು ಈ "ಶಿಶುಕಾಮಿ" ಅಪವಾದ ಇಂದು ನೆನ್ನೆಯದಲ್ಲ, ಇದರ ಇತಿಹಾಸ ಸಹ ಸಾಕಷ್ಟು ಹಿಂದಿನಿಂದಲೂ ಇದೆ. ಉಳಿದ ಧರ್ಮಗಳ ಅದರಲ್ಲೂ ಅರಬ್ ಪರಿಸರದ ಕ್ರೈಸ್ತಧರ್ಮದ "ಬ್ರಹ್ಮಚಾರಿ" ಯೇಸುಕ್ರಿಸ್ತನನ್ನು "ಮಾದರಿ" ಎಂದು ಪರಿಗಣಿಸಿರುವಾಗ ಅನ್ಯಧರ್ಮಸ್ಥಾಪಕ "ಬಹುಪತ್ನಿತ್ವ"ದ ಪೈಗಂಬರರನ್ನು ವ್ಯವಸ್ಥಿತವಾಗಿ ಲಾಲಸಿ, ಕಾಮಿ ಎಂಬ ಅವಹೇಳನಕ್ಕೆ ಗುರಿಪಡಿಸಲಾಯಿತು. ಈ "ಬ್ರಹ್ಮಚಾರಿ ಮಾದರಿ" ಇತರೆ ಧರ್ಮಗಳಲ್ಲಿಯೂ ಇದ್ದುದರಿಂದ ಈ ಅಪಪ್ರಚಾರ ವಿಶ್ವವ್ಯಾಪಿಯಾಯಿತು.  ಇಂತಹ ಎಲ್ಲಾ ಬಿಟ್ಟ ಬ್ರಹ್ಮಚಾರಿಗಳ ವಿಗ್ರಹಗಳು ಅಭಿಷೇಕಗಳ ಮೇಲೆ ಅಭಿಷೇಕ ಪುಷ್ಪಾರ್ಚನೆ, ಶಯನಮಹೋತ್ಸವ ಮಾಡಿಕೊಳ್ಳುತ್ತಿದ್ದರೆ, ಲಾಲಸಿ ಎಂದ ಪೈಗಂಬರರು ನನ್ನ ಯಾವುದೇ ವಿಗ್ರಹ, ಚಿತ್ರಗಳನ್ನು ರಚಿಸಬಾರದು ಎಂಬ ನಿರ್ವಾಣ ನಿರ್ಧಾರವನ್ನು ತಿಳಿಸಿಹೋಗಿದ್ದಾರೆ ಎಂಬುದು ಉಲ್ಲೇಖಾರ್ಹ. 


ಪೈಗಂಬರರ ಉನ್ನತ ಚಿಂತನೆಗಳನ್ನು ಇಂದಿನ ಸೌದಿಯೇತರ ದೇಶಗಳ ಮುಸ್ಲಿಮರು ಸರಿಯಾಗಿ ಅರ್ಥೈಸಿಕೊಳ್ಳುವುದು ಸಹ ಅತ್ಯಂತ ಅವಶ್ಯಕ. ಇಲ್ಲದಿದ್ದರೆ ಇಸ್ಲಾಮೋಫೋಬಿಯಾಕ್ಕೆ ಅವರೂ ಸಹ ಕೈಜೋಡಿಸಿದಂತೆಯೇ ಸರಿ.


ಈ ಅಪಪ್ರಚಾರ ಈಗ ಇಂತಹುದೇ ರಾಜತಾಂತ್ರಿಕ, ಬಹುಪತ್ನಿತ್ವದ, ಹುಟ್ಟಿನಲ್ಲೇ ನಿಶ್ಚಯವಾಗುತ್ತಿದ್ದ ಬಾಲ್ಯವಿವಾಹಗಳ ಇತಿಹಾಸದ ಆಗರವಾದ, ಸರ್ವೇಜನೌ ಸುಖೀನೌಭವಂತು ಎನ್ನುವ ವಿಶ್ವಗುರು ಭಾರತದಿಂದ ಮತ್ತೊಮ್ಮೆ ಭುಗಿಲೆದ್ದಿದೆ! 


#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ

ಬಸವರಾಜಕಾರಣ - ಪ್ರಶಾಂತ್ ಭಟ್ ಅಭಿಪ್ರಾಯ

 ಬಸವರಾಜಕಾರಣ - ರವಿ ಹಂಜ್


ಈ ಪುಸ್ತಕ ಓದುತ್ತಿದ್ದ ಹಾಗೆ ಕಂಪಿಸಿಬಿಟ್ಟೆ. ಇದನ್ನು ಓದಿದ್ದಕ್ಕೆ ಯಾರಾದರೂ ಕೇಸು ಹಾಕಿದರೇನು ಗತಿ ಎಂಬಷ್ಟು ಭಯವಾಗಿ. ಲಿಂಗಾಯಿತ ವೀರಶೈವ ತಿಕ್ಕಾಟವಷ್ಟೇ ಬಗೆಯುವುದು ಇದರ ಹೂರಣವಲ್ಲ. ಇದು ಇಡಿಯ ಭಾರತೀಯ ತತ್ವಶಾಸ್ತ್ರದ ತರ್ಕವನ್ನು‌ ವಿವರಿಸಿ ಪ್ರವೇಶವನ್ನು ಒದಗಿಸಿ ಅಸ್ಪೃಶ್ಯತೆ ಬಗ್ಗೆ ಇತಿಹಾಸದ ಪುಟಗಳಲ್ಲಿ ಕೆದಕಿ ಬ್ರಾಹ್ಮಣ ಎಂದರೆ ಏನು ಹೇಗಿತ್ತು ಎಂಬುದನ್ನು ವಿವರಿಸಿ ಆಮೇಲೆ ವಚನಗಳ ಮೂಲಕ ಇಡಿಯ ವಿಷಯವನ್ನು ಡೀಕೋಡ್ ಮಾಡಲು ಹೊರಡುತ್ತದೆ.

ಇಲ್ಲಿ ವಚನಗಳಿಗೆ ಬೇರೆ ಬೇರೆ ರೀತಿಯ ವ್ಯಾಖ್ಯಾನವನ್ನು ಕೊಡಬಹುದು.

ಆದರೆ ಆ ವಚನಗಳು ರಚಿತವಾದ ಕಾಲಮಾನ ಹಾಗೂ ಆ ಕಾಲಘಟ್ಟದ ರಾಜಕೀಯ ಸಾಮಾಜಿಕ ಸ್ಥಿತ್ಯಂತರದ ಮೂಲಕ ಅವುಗಳನ್ನು ಲೇಖಕರು ವಿವರಿಸುತ್ತಾರೆ.

ಇದನ್ನು ಹೌದು ಎನ್ನಲೂ ಅಲ್ಲ ಎನ್ನಲೂ ಮನಸು ಹಿಂಜರಿಯುತ್ತದೆ.

ಕೊನೆಗೆ ಕೊಟ್ಟ ಕೆಂಪೇಗೌಡರ ಕುರಿತಾದ ಸಣ್ಣ ವಿವರಣೆಯನ್ನು ಕೂಡ.


ಬಹುಶಃ ಇಷ್ಟು ನೇರ ವಿಮರ್ಶೆ ಆಗುಂಬೆ ನಟರಾಜ್ ಬಿಟ್ಟರೆ ‌ಬರೆದವರು ಇವರೇ ಇರಬೇಕು.


ಹೆಚ್ಚೇನಿಲ್ಲ. ಈ ಪುಸ್ತಕ ಓದಿರಿ. ಒಪ್ಪುವುದು ಬಿಡುವುದು ನಿಮಗೆ ಬಿಟ್ಟ ವಿಷಯ. ಯಾರೂ ಪ್ರಶ್ನೆಗೆ ಅತೀತರಲ್ಲ ಸತ್ಯಾನ್ವೇಷಣೆಯೇ ಅಂತಿಮ ಗುರಿ ಅನ್ನುವುದು ಮನಸಲ್ಲಿದ್ದರೆ ಸಾಕು.

ಪಠ್ಯ ವಾಪಸ್ಸಾತಿ

 ಸಾಲು ಸಾಲು ಚಿಂತಕರು ತಮ್ಮ ಲೇಖನ, ಪದ್ಯಗಳನ್ನು ಪಠ್ಯದಿಂದ ವಾಪಸ್ ಪಡೆಯುತ್ತಿರುವುದು ನಿಜಕ್ಕೂ ಆಘಾತಕಾರಿ. ಈ ವಾಪಸ್ಸಾತಿಯನ್ನು ಬುದ್ಧಿಜೀವಿಗಳು, ಸಾಮಾಜಿಕ ಚಿಂತಕರು ಎನ್ನಿಸಿಕೊಂಡವರು ಸಾಲು ಸಾಲಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡು ಯುದ್ಧ ಗೆದ್ದವರಂತೆ ಬೀಗುತ್ತಿರುವುದು ಇನ್ನಷ್ಟು ಆಘಾತಕಾರಿ ಮತ್ತು ಅಪಾಯಕಾರಿ ಸಹ.


ಇವರುಗಳು ಹೇಳುವಂತೆ ಪಠ್ಯ ಪರಿಷ್ಕರಣಾ ಸಮಿತಿಯ ಪರಿಷ್ಕರಣೆಗಳು ಬಲಪಂಥೀಯವಾಗಿದ್ದರೂ ಸಹ ಎಡದ ಕನಿಷ್ಠ ಪಠ್ಯಗಳಾದರೂ ಇರುವವಲ್ಲ ಎಂದು, ಮತ್ತು ಆ ಎಡ ಚಿಂತನಶೀಲ ಪದ್ಯಗದ್ಯಗಳು ವಿದ್ಯಾರ್ಥಿಗಳಲ್ಲಿ ಕಿಂಚಿತ್ತಾದರೂ ಭಿನ್ನ ಚಿಂತನೆಯನ್ನು ಹುಟ್ಟು ಹಾಕುತ್ತದಲ್ಲ ಎಂಬ ಸಮಾಜಮುಖಿ ಚಿಂತನೆ ಇವರಿಗೆ ಕಿಂಚಿತ್ತೂ ಇರಬೇಡವೇ?


ಮಕ್ಕಳ ವಿಕಾಸಕ್ಕೆ ಇವರ ಪಠ್ಯಗಳು ಅತ್ಯಾವಶ್ಯಕ ಎಂಬುದು ಮುಖ್ಯವೋ ಅಥವಾ ನಮ್ಮ ಗುಂಪಿನ ಕೆಲವರ ಅಥವಾ ತಮ್ಮ ಮೆಚ್ಚಿನ ಲೇಖನಗಳನ್ನು ಸೇರಿಸಿಲ್ಲದ ಕಾರಣ ನಮ್ಮದೂ ಬೇಡ ಎಂಬ ಜಿದ್ದಿನ ಕ್ರಮ ಇವರ ಉದ್ದೇಶವೋ?! ಇವರ ಉದ್ದೇಶ ಇಂತಹ ಕ್ಷುಲ್ಲಕ, ಮತ್ತು ಸಾಮಾಜಿಕ ವಿಕಾಸವಿಮುಖವಾದರೆ ಇವರು ಕಟ್ಟಲಿರುವ ಅಥವಾ ಕನಸಿರುವ ಸಮಾಜ ಎಂತಹದ್ದು?


ಈ ಪಠ್ಯ ವಾಪಸ್ಸಾತಿಯವರು ಹೇಳುವಂತೆ ನಾಡಿನಲ್ಲಿ ಕೆಡುಕಿನ ವಾತಾವರಣವನ್ನೇ ಈ ಪರಿಷ್ಕರಣಾ ಸಮಿತಿ ನಿರ್ಮಿಸುತ್ತಿದೆ ಎಂದು ಒಪ್ಪಿ ನೋಡಿದಾಗಲೂ ಕನಿಷ್ಠ ಭಿನ್ನ ಪಂಥದ ಇವರ ಪಠ್ಯವನ್ನು ಓದಿಯಾದರೂ ಮುಂದಿನ ಪೀಳಿಗೆಯಲ್ಲಿ ಕೆಲವು ಚಿಂತಕರು ಉದಯವಾಗಲಿ ಎಂಬ ದೂರದೃಷ್ಟಿ ಈ ಚಿಂತಕರಿಗೆ ಇಲ್ಲವೇ?


ನಿಮ್ಮ ಹೋರಾಟ ಪಠ್ಯ ಪರಿಷ್ಕರಣೆ ಸಮಿತಿಯ ವಿರುದ್ಧವಾಗಿದ್ದರೆ ಆ ಸಮಿತಿಯನ್ನು ರದ್ದು ಪಡಿಸಿ, ಶಿಕ್ಷಣ ಮಂತ್ರಿಯನ್ನು ಬದಲಾಯಿಸಿ ಎಂದು ಹೋರಾಡಿ. ಅದು ಪ್ರಜಾಪ್ರಭುತ್ವದ ಹೋರಾಟ ಎನಿಸುತ್ತದೆ! ಆದರೆ ಪಠ್ಯ ವಾಪಸ್ಸಾತಿ ಕ್ರಮ ನಿಮ್ಮ ವಿರೋಧಿಗಳ ಕ್ರಮಕ್ಕಿಂತ ಅತ್ಯಂತ ನೀಚ ಮತ್ತು ಸೇಡಿನ ಕ್ರಮ.


"ಈ ಪಠ್ಯ ವಾಪಸ್ಸಾತಿ ಸಹ ನಾಡಿಗೆ ಅಷ್ಟೇ ಕೇಡಿನ ಲಕ್ಷಣ! ಇದು ಮುಂದುವರಿಯಬಾರದು. ದಯವಿಟ್ಟು ಮುಂದುವರಿಯಬಾರದು" ಎಂಬ ಉದ್ಘೋಷದ, ಪಠ್ಯ ವಾಪಸ್ಸಾತಿಯ "ಆದಿ ರೂವಾರಿ"ಗಳು ದಯಮಾಡಿ ತಮ್ಮ ಕೇಡಿನ, ಸೇಡಿನ ನೀತಿಯನ್ನು ಪರಿಶೀಲಿಸಿ ತಮ್ಮ ಹೋರಾಟವನ್ನು ಸಾಮಾಜಿಕ ದೂರದೃಷ್ಟಿ ಮತ್ತು ಮಕ್ಕಳ ವಿಕಾಸದ ದಾರಿಯಲ್ಲಿ ಆಲೋಚಿಸಬೇಕು. 


#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ

ನಾಡಗೀತೆ ಅಣಕ

 ನಾನು ನರ್ಸರಿಯಲ್ಲಿದ್ದಾಗ "ಜೇಡರಬಲೆ ಜಯಂತಿ @&@, ರಾಜ್ಕುಮಾರ್ ಕಲೆ, ನರಸಿಂಹರಾಜ ತಲೆ" ಎಂಬ ಶಿಶುಗೀತೆ ಹಾಡುತ್ತಿದ್ದೆವು.


ಮಾಸ್ಟರ್ ಡಿಗ್ರಿ ಸಮಯದಲ್ಲಿ "ಯಾರಿವಳು ಯಾರಿವಳು ಸೂಜಿಮಲ್ಲಿ t@££ವಳು, ರಾಮನಳ್ಳಿ ತೋಟದಲ್ಲಿ ಲಂಗ ಎತ್ತಿ ನಿಂತವಳು ಓ ಓ ಓ..."ಎಂದು ಹಾಡುತ್ತಿದ್ದೆವು.


ಈ ಎರಡೂ ಆಶುಅಣಕುಗಳ ನಡುವೆ ಆಗಿಹೋದ ಖ್ಯಾತ ಪದ್ಯ, ಗೀತೆಗಳ ಅಣಕಗಳು ಅಸಂಖ್ಯ! ಆ ಕಾಲದಲ್ಲಿ ಬಾಯಿಂದ ಬಾಯಿಗೆ ಹರಡಿದ್ದ ಈ ಪದ್ಯಗಳನ್ನು ಅಂದು ಫೇಸ್ಬುಕ್ ಇದ್ದಿದ್ದರೆ ಅವುಗಳನ್ನು ಆಲ್ಲಿ ಹಾಕಿಯೇ ಹಾಕುತ್ತಿದ್ದೆವು. ಹಾಂ, ಇಲ್ಲಿ ಆ ಗೀತೆಗಳ ಲೇವಡಿಯಾಗಲಿ, ವಿಡಂಬನೆಯನ್ನಾಗಲಿ ಮಾಡದೆ ಕೇವಲ ಜನಪ್ರಿಯ ಗೀತೆಯ ಧಾಟಿಯನ್ನು, ಶೈಲಿಯನ್ನು ನಕಲು ಮಾಡಲಾಗಿತ್ತು ಅಷ್ಟೇ ಎಂಬುದು ಒಂದು ಸಾಮಾನ್ಯ ತಿಳಿವಳಿಕೆ. ಅದಕ್ಕಿಂತ ಹೆಚ್ಚು ಎಂದು ನೀವು ಆಲೋಚಿಸಿದರೆ ನೀವು ಅತ್ಯಂತ ಸೃಜನಶೀಲರು!


ಹಾಗೆ ಹಾಕಿದ್ದ ಮಾತ್ರಕ್ಕೆ ನಾನು ಚುನಾವಣೆಗೆ ನಿಲ್ಲಬಾರದು, ಸಾರ್ವಜನಿಕ ಹುದ್ದೆಗೆ ನೇಮಕಾತಿ ಪಡೆಯಬಾರದು, ಅಮೆರಿಕೆಗೆ ಹೋಗುವ ಹಕ್ಕಿಲ್ಲ, ಹುಯೆನ್ ತ್ಸಾಂಗ್ ಬಗ್ಗೆ ಬರೆಯಬಾರದು, ಭಾರತ ಮರುಶೋಧನೆ ಮಾಡಬಾರದು, ಬಸವರಾಜಕಾರಣ ಕೆತ್ತಬಾರದು, ಇವನಿಗೆ ಪ್ರಶಸ್ತಿ ಕೊಡಬಾರದು ಎಂಬುದು ಎಷ್ಟು ಕ್ಷುಲ್ಲಕವೋ ಅಷ್ಟೇ ಕ್ಷುಲ್ಲಕ ನಾಡಗೀತೆಯ ಶೈಲಿಯನ್ನು ಜೋಕಾಗಿ ಬಳಸಬಾರದು. ಬುದ್ಧ, ಬಸವ, ಅಂಬೇಡ್ಕರ್, ಕುವೆಂಪು ಪ್ರಶ್ನಾತೀತರು ಎಂದು ಷರಾ ಬರೆಯುವುದು ಸಹ. ಇವರೆಲ್ಲರೂ ಕೇವಲ ಮಾನವರು ಮತ್ತು ವಿಶ್ವಮಾನವರು ಆದರೆ ಖಂಡಿತವಾಗಿ ದೇವಮಾನವರಲ್ಲ! ದೇವರೆನಿಸಿದ ರಾಮ, ಕೃಷ್ಣ, ಶಿವ, ಯೇಸು, ಅಬ್ರಹಾಂ ಹೇಗೆ ವಿಮರ್ಶೆಗೆ ದಕ್ಕುವರೋ ಅಷ್ಟೇ ದಕ್ಕಲರ್ಹ ಬುದ್ಧ, ಬಸವ, ಅಂಬೇಡ್ಕರ್, ಮತ್ತು ಕುವೆಂಪು! 


ಗಿಡ್ಡೆಗೌಡ, ಸಿಂಗಾರಿಗೌಡ ಎಂಬುವವರ ನೇಮಕಾತಿಯಲ್ಲಿ ಅವರ ಹೆಸರುಗಳನ್ನು ಬದಲಾಯಿಸಿ  ಜಾತೀಯತೆ ತೋರಿದರು ಎಂಬ ಆರೋಪ ಕುವೆಂಪು ಅವರ ಮೇಲೆ ಆ ಕಾಲದಲ್ಲಿ ಬಂದಿತ್ತು.  ಕ್ರಿಮಿನಲ್ ಶಿಕ್ಷೆಗೆ ಒಳಗಾಗಿರುವವರು ಚುನಾವಣೆಗೆ ನಿಲ್ಲಬಾರದೆಂಬ ಅಂಬೇಡ್ಕರರ ಸಂವಿಧಾನಕ್ಕೆ ವಿರುದ್ಧವಾಗಿ ಕ್ರಿಮಿನಲ್ಲುಗಳು ಸಾಲು ಸಾಲು ಗೆದ್ದು ಬರುತ್ತಿರುವಂತಹ ಬಹುಪತ್ನಿತ್ವದ ಶಾಸಕರು, ಅಧಿಕಾರಿಗಳ ಸಂವಿಧಾನಿಕ ದ್ವಂದ್ವಗಳು ಭಾರತೀಯ ಶಾಸಕಾಂಗ, ನ್ಯಾಯಾಂಗದೆಲ್ಲೆಡೆ ಢಾಳಾಗಿ ಕಾಣಿಸುತ್ತಿವೆ. ಬಸವಣ್ಣನ ದ್ವಂದ್ವಗಳು ಅವನ ವಚನಗಳಲ್ಲೇ ಸಾಕಷ್ಟಿವೆ. ಹೀಗಿದ್ದಾಗ ಕೇವಲ Hegemony ಕಾರಣದಿಂದ ಈಗ ಇವರುಗಳನ್ನು ದೇವರಾಗಿಸಿರುವುದು ಯಾವ ವೈಚಾರಿಕ ಉನ್ನತಿ ಎಂದು ವಿಚಾರವಂತರು ಹೇಳಬಲ್ಲರು! They came, they saw, they conquered, and they're gone! Let's move on.


ಇನ್ನು ಇಂದಿನ ಪಠ್ಯ ಪರಿಷ್ಕರಣಾ ಸಮಿತಿಯ ಅಧ್ಯಕ್ಷ porn ಬಗ್ಗೆ ಜೋಕು ಮಾಡಿದ್ದ ಎಂದು ಅವನನ್ನು ಹೀಯಾಳಿಸುವವರ ಪಡೆಯ ಅಧ್ಯಕ್ಷ ಗವ್ಡ ನಿಷೇಧಕ್ಕೊಳಪಟ್ಟ ರತಿವಿಜ್ಞಾನ ಸುರತಿಗಳನ್ನು ಫೇಸ್ಬುಕ್ಕಿನ ಮಹರ್ಷಿ ವಾತ್ಸಾಯನ ಪೇಜಿನಲ್ಲಿ ಮರುಸೃಷ್ಟಿಸಿರುವ ಮಹಾತ್ಮನಲ್ಲದೆ ಚಂದ್ರಿಕಾ, ಭಾವನಾ ಎಂದು ಹೆಸರೆತ್ತಿ ಹಲುಬುತ್ತ ಜೊಲ್ಲು ಸುರಿಸುವುದೂ ಅಷ್ಟೇ ಸತ್ಯ. ಇದಕ್ಕೆ ಲಂಕೇಶ್, ಬೆಳಗೆರೆ ಅವರಂತಹ ಪೋಲಿ ಜೋಕ್ - ಜಾಲಿ ಲೈಫ್ ಪ್ರಭಾವ ಒಂದು ಪೀಳಿಗೆಯ ಮೇಲೆ ಪ್ರಭಾವಿಸಿರುವುದೂ ಅಷ್ಟೇ ಸತ್ಯ. ಇದಕ್ಕೆ ಪುಸ್ತಕ ಪರಿಷ್ಕರಣೆ ಅಧ್ಯಕ್ಷ ಸಹ ಹೊರತಲ್ಲ ಹಾಗೆಯೇ ಅವನ ವಿರೋಧಿ ಬಣ ಸಹ. ಪರಿಷ್ಕರಣಾ ಸಮಿತಿಯ ಅಧ್ಯಕ್ಷಗಿರಿ ಯಾವುದೋ ಮಠದ ಬ್ರಹ್ಮಚಾರಿ ಪೀಠವಲ್ಲ, ಅದೊಂದು ಸರ್ವಶಕ್ತ ಸದಸ್ಯರುಗಳ ಕಮಿಟಿಯ ಅಲಂಕಾರಿಕ ಹುದ್ದೆ ಮಾತ್ರ. ಸ್ಪಷ್ಟವಾಗಿ ಹೇಳಬೇಕೆಂದರೆ ಯಾವುದೋ ಘನಂದಾರಿ ಕೆಲಸವನ್ನು ಇವರುಗಳು ಆಡಳಿತ ಪಕ್ಷಕ್ಕೆ ಮಾಡಿಕೊಟ್ಟಿದ್ದಕ್ಕೆ ಕೊಟ್ಟ ಋಣ ಸಂದಾಯ!


ವಿಪರ್ಯಾಸವೆಂದರೆ ಅಧ್ಯಕ್ಷನ ಹಳೆಯ ಪೋಸ್ಟ್ಗಳ ಕುರಿತು ಸಂಪ್ರದಾಯಬದ್ಧ ಮಡಿವಂತಿಕೆ ತೋರುತ್ತಿರುವವರು ಉದಾರವಾದದ ಮುಖವಾಡ ತೊಟ್ಟಿರುವುದು!!! ಇಂತಹ ಮುಖೇಡಿಗಳೂ ಸಹ ಸಮಾಜಕ್ಕೆ ಮೂಲಭೂತವಾದಿಗಳಷ್ಟೇ ಅಪಾಯಕಾರಿ. ಇಂತಹ ಪ್ರಚ್ಛನ್ನ ಮೂಲಭೂತವಾದಿಗಳ ಗುರಾಣಿ ಬುದ್ಧ, ಬಸವ, ಅಂಬೇಡ್ಕರ್, ಕುವೆಂಪು ಆಗಿದ್ದಾರೆ ಎಂಬುದು ಅತ್ಯಂತ ಕಳವಳಕಾರಿ ಸಂಗತಿ.


ಇರಲಿ, ಹೋರಾಟ ಸತ್ಯ, ತರ್ಕದ ಭದ್ರ ನೆಲೆಯಲ್ಲಿರಬೇಕು, ಪಂಥದ ಟ್ರೋಲಿನ ತೀಟೆಯಲ್ಲಂತೂ ಅಲ್ಲವೇ ಅಲ್ಲ!


ಮರುಳುಂಡ ಮನುಷ್ಯನ ಇರವಿನ ಪರಿಯಂತೆ,

ವಿವರವನರಿಯಬಾರದು ನೋಡಾ, ಶಿವಜ್ಞಾನ.

ಅದನರಿದೆಹೆನರಿದೆಹೆನೆಂದು ನೆನೆಯ ಹೋದರೆ, ಅದು ಮುಂದುದೋರದು.

ಮರೆದೆಹೆನೆಂದು ಭಾವಿಸ ಹೋದಡೆ ತೆರಹುಗೊಡದು!

ಗುಹೇಶ್ವರಾ, ನಿಮ್ಮ ನೆರೆ ಅರಿದ ಶರಣರು;

ನಿಸ್ಸೀಮಸುಖಿಗಳು ನೋಡಾ.


#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ