ಕನ್ನಡತನ ಓಲಾಟವೋ, ಒಡಲಾಳವೋ?

ಕನ್ನಡಕ್ಕಾಗಿ ಕೈಯೆತ್ತು ನಿನ್ನ ಕೈ
ಕಲ್ಪವೃಕ್ಷವಾಗುತ್ತದೆಂದನಾ ಕವಿ.
ಖನ್ನಡವೆನಿ ಕೈ ಎತ್ತಿ ಕರವ(ವೇ) ಹೇರಿ
ಕಲ್ಪಕವ ಕಂಡುಕೊಂಡ ಭವಿ!
ಕವಿಯ ನುಡಿಗಿಂತ, ಭವಿಯ ಉದರಾಗ್ನಿ
ದಳ್ಳುರಿಯಾಗಿ ಆ ಬಣ ಈ ಬಣ ಸೇರಿ
ಹಿರಿಹಿರಿದು ಸಜ್ಜನರ
ಕಲ್ಪವೃಕ್ಷದೊಂದಿಗೆ ಕನ್ನಡ
ಕಾಮಧೇನುವ ಹಿಂಡುವುದ ಕಂಡು
ಬಸವಳಿದ ಹಗೆದಿಬ್ಬೇಶ್ವರ!

ಕಳೆದ ತಿಂಗಳು ನಾನು ಮುಖ್ಯ ಸಲಹೆಗಾರನಾಗಿರುವ ನನ್ನ ಸ್ನೇಹಿತನ ಬೆಂಗಳೂರು ಆಫೀಸಿನಲ್ಲಿ ಕುಳಿತಿದ್ದೆ.

ಕಳೆದ ಇಪ್ಪತ್ತು ವರ್ಷಗಳಿಗೂ ಮೀರಿ ಅಮೆರಿಕದಲ್ಲಿ ನನ್ನೊಂದಿಗೆ ಕೆಲಸ ಮಾಡಿ, ಉದ್ಯಮಿಯಾಗಿರುವ ಈತನೊಂದಿಗೆ ನನ್ನದು ಗುರು-ಶಿಷ್ಯ ಸಂಬಂಧ. ಘಟಾನುಘಟಿ ಆಂಧ್ರ ರಾಜಕಾರಣಿಗಳ ಸಂಬಂಧವಿದ್ದರೂ ಅದೆಲ್ಲ ಬಿಟ್ಟು  ಗುರುವಾದ ನನ್ನನ್ನು ಸಂಪ್ರೀತಗೊಳಿಸಲು ಬೆಂಗಳೂರಿನಲ್ಲಿ ಕಚೇರಿ ತೆರೆದ ಪುಣ್ಯಾತ್ಮ ಈತ.

ನನ್ನ ಸಲಹೆಯ ಮೇರೆಗೆ ತನ್ನ ಭಾರತದ ಶಾಖೆಯನ್ನು  ಕಳೆದ ವರ್ಷ ಬೆಂಗಳೂರಿನಲ್ಲಿ ತೆರೆದು ನೂರು ಜನಕ್ಕೆ ಐ.ಟಿ. ಉದ್ಯೋಗವನ್ನು ನೀಡಿದ್ದಾನೆ. ಆ ನೂರು ಜನರಲ್ಲಿ ಶೇಕಡಾ 90 ಭಾಗ ಕನ್ನಡಿಗರು, ಅದರಲ್ಲೂ ಒಳನಾಡು ಕನ್ನಡಿಗರಿಗೆ ಉದ್ಯೋಗ ನೀಡಿರುವ ತೆಲುಗು ಅಬ್ಬಾಯಿ ಈತ! ಜಗಳೂರಿನ ಸಿಕಂದರ್, ಹರಿಹರದ ಪಂಚಾಕ್ಷರಿ, ದಾವಣಗೆರೆಯ ಸಿಂಧು, ಬೆಂಗಳೂರಿನ ಲತಾ, ಮೈಸೂರಿನ ಕುಮಾರ್...ಹೀಗೆ ಪಟ್ಟಿ ಬೆಳೆಯುತ್ತದೆ.

ಇರಲಿ, ಆತನೊಂದಿಗೆ ಮಾತನಾಡುತ್ತ ಕುಳಿತಾಗ ನಾಲ್ಕು ಜನ ಆತನ ಛೇಂಬರಿಗೆ ಅಕ್ಷರಶಃ ನುಗ್ಗಿದರು. ಕೆಳಗಡೆ ಇದ್ದ ಸೆಕ್ಯೂರಿಟಿ, ಮೇಲ್ಮಹಡಿಯ ರಿಸೆಪ್ಸನ್ ದಾಟಿ ಮುಖ್ಯಾಧಿಕಾರಿಯ ಕೊಠಡಿಗೆ ದಬಾಯಿಸಿಕೊಂಡು ಕನ್ನಡ ರಾಜ್ಯೋತ್ಸವಕ್ಕೆ ಚಂದಾ ವಸೂಲಿಗೆ ಕರವೇ ಕಾರ್ಯಕರ್ತರೆಂದು ಹೇಳಿಕೊಂಡು ಬಂದಿದ್ದರು. ಕನ್ನಡ ಬಾರದ ನನ್ನ ಸ್ನೇಹಿತ ನನ್ನನ್ನು ತೋರಿ ಇವರೇ ಮುಖ್ಯಾಧಿಕಾರಿ ಎಂದು ಕೈಚೆಲ್ಲಿದ.

ಈಗಷ್ಟೇ ಸಾಲ ಸೋಲ ಮಾಡಿ ಕಂಪೆನಿ ನಡೆಸುವ ಕಷ್ಟಗಳ ಗೋಳಿಟ್ಟು, ಕೈಯಲ್ಲಿದ್ದ ಸಮಾಜಮುಖಿ ಪತ್ರಿಕೆ, ಹುಯೆನ್ ತ್ಸಾಂಗ್ ಪುಸ್ತಕದ ಹಿಂದಿದ್ದ ನನ್ನ ಚಿತ್ರ ತೋರಿಸಿ "ನಾವು ಸಾಕಷ್ಟು ಕನ್ನಡ ಸೇವೆ ಮಾಡುತ್ತಿದ್ದೇವೆ. ಸದ್ಯಕ್ಕೆ ಲಾಭದ ಹಾದಿ ಹಿಡಿದು ಮುಂದೆ ಹಣ ಸಹಾಯ ಮಾಡುವಷ್ಟು ಶಕ್ತಿ ಬರಲೆಂದು ಹಾರೈಸಿ" ಎಂದು ಚಹಾ ಕುಡಿಸಿ ಸಾಗಹಾಕಿದೆ.

ಆ ಕ್ಷಣದಲ್ಲಿ ನನ್ನ ಮೇಲಿನ ಅಭಿಮಾನಕ್ಕೆ ಮಹಾ ರಿಸ್ಕ್ ತೆಗೆದುಕೊಂಡಿದ್ದ ನನ್ನ ಶಿಷ್ಯನ ಕಣ್ಣಿನಲ್ಲಿ ಆ ನಿರ್ಧಾರದ ಕುರಿತು ಒಂದು ಸಣ್ಣ ಅಳುಕು ಕಂಡಿದ್ದು ಮಾತ್ರ ಸತ್ಯ!

ಕನ್ನಡ ಉಳಿಕೆ, ಬಳಕೆ ವ್ಯವಸ್ಥೆಯ ಒಂದು ಭಾಗವಾಗಿ ಬರಬೇಕೇ ಹೊರತು ಈ ರೀತಿಯ ಊಳಿಗಶಾಹಿ ಸಂಘ ಸಂಸ್ಥೆಗಳಿಂದಲೇ?

ವ್ಯಾಲೆಂಟೈನ್ಸ್ ದಿನ ಪ್ರೇಮಿಗಳ ಹಿಡಿದು ಮದುವೆ ಮಾಡಿಸುವ, ಮತ್ತದನ್ನು ವಿರೋಧಿಸಲು ಹ್ಯಾಲೋವೀನ್ ರೀತಿ ಚುಂಬಿಸಿ ನೈತಿಕ ಪೊಲೀಸುಗಿರಿ ಪ್ರತಿಭಟಿಸುವ, ಸಾವಿರ ಗುಡಿಗಳಿದ್ದರೂ ಆಯ್ದ ಗುಡಿಗೆ ಹೆಂಗಸರು ಹೋಗುವುದಕ್ಕೆ ಕ್ಯಾತೆ ಎತ್ತಿ ಕೋರ್ಟಿಗೆ ಹೋಗುವ, ಯಾರೋ ಯಾವುದೋ ಕಲ್ಲಿನ ಮೇಲೆ ಉಚ್ಚೆ ಹುಯ್ದುಕೊಂಡಿದ್ದಕ್ಕೆ ಹೇತುಕೊಳ್ಳುವ, ಊಟಕ್ಕೆ ಕರೆದದ್ದನ್ನು ಕಾಮಪೀಡನೆಯೆಂದು ಗೋಳಿಟ್ಟು "ಆಯ್ದ" ನಟಿಯ ಮೀಟೂ ಚಳುವಳಿಗೆ ಮಾತ್ರ ಬೆಂಬಲಿಸುವ, ಹುಡುಕಿ ಹುಡುಕಿ ಕ್ಷುಲ್ಲಕ ಸಂಗತಿಗಳಿಗೆ ರಾಷ್ಟ್ರವ್ಯಾಪಿ ಚಳುವಳಿ ನಡೆಸುವ ಚಿಂತಕರು, ಸಮಾಜ ಸುಧಾರಕರು, ನೈತಿಕಗಿರಿಕಾರರಿಂದ ಹಿಡಿದು, ಕನ್ನಡ ನಾಡು ನುಡಿಯೆಂದು ಕ್ರಿಯಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಪತ್ರಿಕೆ, ಬಳಗ, ಸಿದ್ದಾಂತಿಗಳಿಗೆ ಈ ರೀತಿಯ ಕನ್ನಡಕ್ಕಾಗಿ "ಕೈಯೆತ್ತುವ" ಭಾಷಾ ಪೊಲೀಸುಗಿರಿ ಸಹ್ಯವಾಗಿರುವುದು ಏಕೆ?!

ಹಿಂದಿ ಹೇರಿಕೆ ಎಂದು ಬಡಬಡಿಸುವ ಅದೆಷ್ಟೋ ಕನ್ನಡ, ಪ್ರಾದೇಶಿಕತೆಯ ಓಲಾಟಗಾರರು ತಮ್ಮ ಜಾತಿಸೂಚಕವನ್ನು ಪ್ರಗತಿಯ ಸಂಕೇತವೆಂಬ ಲೋಲುಪ್ತತೆಯಲ್ಲಿ ಯಾದವ, ಮೌರ್ಯ ಎಂಬ ಹಿಂದಿ ಹೇರಿಕೆಯನ್ನು ಹೇರಿಕೊಂಡು "ಸುಪೀರಿಯಾರಿಟಿ ಕಾಂಪ್ಲೆಕ್ಸ್"ನಲ್ಲಿ ತೇಲುತ್ತ ಅದ್ಯಾವ ಕನ್ನಡತೆಯನ್ನು ಪ್ರತಿಪಾದಿಸುತ್ತಿದ್ದಾರೆ?

ಈ ಹುಚ್ಚು ಸದ್ಯದಲ್ಲೇ ಕಾರ್ಪೆಂಟರ್, ಶೆಪರ್ಡ್, ಸ್ಮಿತ್, ಶುಮಾಕರ್, ಕೌಬಾಯ್ ಎಂದು ಬಿಳಿಯತನದೊಂದಿಗೆ ಶ್ರೇಣೀಕರಿಸಿಕೊಂಡು ಹಮ್ಮಿನ ಬಿಮ್ಮಿನಿಂದ ಬೀಗುವ ಹಾದಿಯಲ್ಲಿದೆ.

ತಾವು "ಮೆಚ್ಚಿದ" ಸಿದ್ಧಾಂತ, ಪಂಥ, ಧರ್ಮದ ಕುರಿತಾಗಿ ಆಧುನಿಕ ಮಾನವನ ಮನದಾಳದಲ್ಲೆಲ್ಲೋ ಸುಪ್ತವಾಗಿರುವ ಭಾವನೆಯೇ ಸಿದ್ಧಾಂತವಾದ/ಪಂಥೀಯತೆ/ಜಾತೀಯತೆ/ಧಾರ್ಮಿಕ ಉಗ್ರವಾದಗಳನ್ನು ಪೋಷಿಸುತ್ತಿರುವಂತೆಯೇ, ಭಾಷಾಪ್ರೇಮಿಗಳ ಮನದಾಳದಲ್ಲಿ ಬೇರೂರಿರುವ ಆ ಒಂದು ಪಕ್ಷಪಾತೀ ಊಳಿಗಮಾನ್ಯ ಕ್ರೌರ್ಯದ ಭಾವ, ಈ ಭಾಷಾ ಉಗ್ರವಾದೀ ಸಂಘಟನೆಗಳನ್ನು ಪೋಷಿಸುತ್ತಿರುವುದು ಕನ್ನಡದಷ್ಟೇ ಸತ್ಯ.

#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ
#ಕರ್ನಾಟಕವೆಂಬೋಕಮಂಗಿಪುರದಲ್ಲಿ

ಮೀಟೂವಿನ ಆಚೆ ದಾಟು

ಲಂಕೇಶ್ ಆರತಿಯನ್ನು ಹಾಕಿಕೊಂಡು ಸಿನೆಮಾ ಮಾಡುತ್ತಿದ್ದಾಗ, ಪ್ರಣಯ ಸನ್ನಿವೇಶವೊಂದರಲ್ಲಿ ಆರತಿ "ಕಣ್ಣಲ್ಲೇ ಎಲ್ಲಾ ಕಾಮನೆ/ಭಾವನೆಗಳನ್ನು ತೋರಿಸುತ್ತೇನೆ" ಎಂದಳಂತೆ.

ಆಗ ಕಣ್ಣಲ್ಲೇ ಎಲ್ಲಾ ತೋರ್ಸೋದಾದ್ರೆ ಬೇರೇ ಅಂಗಾಗಗಳು ಏಕಿರಬೇಕು ಎಂದು ತಪರಾಕಿ ತಟ್ಟಿ ತಮಗೆ ಬೇಕಾದಂತೆ ಲಂಕೇಶ್ ಚಿತ್ರೀಕರಿಸಿಕೊಂಡರಂತೆ! ಇದು ಲಂಕೇಶರ ಒಂದು "ಕೋಡು", "ಕ್ರಿಯಾಶೀಲತೆ", "ಸೃಜನಶೀಲತೆ" ಎಂಬಂತೆ ಹೆಮ್ಮೆಯಿಂದ ಅವರ ಭಕ್ತರನೇಕರು ಬರೆದಿದ್ದನ್ನು ಸಾಕಷ್ಟು ಸಾರಿ ಓದಿದ್ದೇವೆ.

ಈಗ ಆ ಲಂಕೇಶರ ನಿರ್ದೇಶನದ, ಸಾಮಾಜಿಕ ಕಳಕಳಿಯ ಪರಂಪರೆಯನ್ನು (ವ್ಯಕ್ತಿತ್ವ, ವೈಯಕ್ತಿಕ ಜೀವನವಲ್ಲದ) ಹೊತ್ತಿರುವ ಪುತ್ರಿ, ಮತ್ತು ಲಂಕೇಶರನ್ನು ಆರಾಧಿಸುವ ಅಭಿಮಾನಿಗಳ ಪಡೆಯಿರುವ FIRE ಸಂಸ್ಥೆ, ನಿಜಕ್ಕೂ MeToo ಪರ ನಿಷ್ಪಕ್ಷಪಾತವಾಗಿರುತ್ತದೆಯೇ?

ಆತ ಒಂದು ಕ್ರಿಯಾಶೀಲ ಹೆಣ್ಣಿಗೆ ಅಂಗಾಂಗ ತೋರೆಂದುದು ಕ್ರಿಯಾತ್ಮಕವೂ, ಮತ್ತೊಬ್ಬ ಗಂಡು ಒಂದು ಹೆಣ್ಣನ್ನು ಊಟಕ್ಕೆ (ಆಟಕ್ಕೇ ಎಂದುಕೊಳ್ಳಿ) ಯಾವುದೇ ವೃತ್ತಿ ಸಂಬಂಧೀ ನಿಬಂಧನೆಗಳ ಒತ್ತಡವಿಲ್ಲದೆ ಕರೆದುದು ಕಾಮಪೀಡನೆ ಎಂದು ಪ್ರತಿಪಾದಿಸುವುದೇ ಹಾಸ್ಯಾಸ್ಪದ. ಹಾಗಿದ್ದರೆ ಸಂಗಾತಿಯನ್ನು ಬಯಸಿ ನಡೆಸುವ ಎಲ್ಲಾ ಸಾಮಾಜಿಕ ಪ್ರಕ್ರಿಯೆಗಳಾದ ವಧುವರಾನ್ವೇಷಣೆ, ಡೇಟಿಂಗ್, ಇತ್ಯಾದಿ ಕೂಡ ಕಾಮಪೀಡನೆಯೇ?!

ಡೇಟಿಂಗಿಗೆಂದೇ ಹೊರಕ್ಕೆ ಕರೆಯುವುದು ಕಾಮಪೀಡನೆಯಾಗುವುದಿಲ್ಲ. ಭಾರತೀಯ ಸಿನೆಮಾ ಉದ್ಯಮದಲ್ಲಿ ನಿಜ ಕಾಮಪೀಡನೆಯ ಪ್ರಕರಣಗಳು ಸಾರ್ವಭೌಮನಿಂದ ಹಿಡಿದು ಕ್ಲ್ಯಾಪ್ಬಾಯ್ಸ್ ವರೆಗೆ ಅಗಣಿತವಾಗಿವೆ. ಇದ್ದುದರಲ್ಲಿ ಸಂಗೀತಾ ಭಟ್ ಎತ್ತಿರುವ ದೂರು ಸತ್ಯಕ್ಕೆ ಸಮಂಜಸವಾಗಿದೆ. ಅಂತಹ ಪ್ರಕರಣಗಳನ್ನು ಬೆಳೆಕಿಗೆ ತರುವತ್ತ FIRE ಕಾರ್ಯೋನ್ಮುಖವಾಗಲಿ.

"Asking Out" doesn't constitute as "Sexual Harassment". You need a stronger case than mere "he asked me out"! The Indian film industry is full of such real strong cases. Hope FIRE would work to bring the real cases out.

#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

FIRE ಸಂಸ್ಥೆಯ ಸಹಾಯ ಕೋರಿ ಸಂಗೀತಾ ಭಟ್ ಬರದಿದ್ದುದರಿಂದ ಸಂಸ್ಥೆ ಆಕೆಗೆ ಸಹಾಯ ಮಾಡುತ್ತಿಲ್ಲವಂತೆ. ಸಂಸ್ಥೆಗೆ ಅದರದೇ ಆದ "ಚೌಕಟ್ಟು" ಇದೆಯಂತೆ. ಹಾಗೆಂದು ಸಂಸ್ಥೆಯ ಪರಿಚಯವಿರುವ ಸ್ನೇಹಿತ ನಿತೇಶ್ ಕುಂಟಾಡಿ Kuntady Nithesh ತಿಳಿಸಿದ್ದಾರೆ.

ಶೋಷಿತ ಮಹಿಳೆ ತನ್ನ ಬಾಗಿಲಿಗೆ ಬಂದು ಸಹಾಯ ಕೇಳಲಿ ಎಂಬ ನಿಯಮವೇ ಊಳಿಗಮಾನ್ಯ ಪದ್ದತಿ!

ಪದೇ ಪದೇ ಊಟಕ್ಕೆ ಕರೆದನೆಂಬ ಒಬ್ಬ ನಟಿಯ ದೂರಿಗೆ ಅಲ್ಲೋಲಕಲ್ಲೋಲ ಮಾಡುತ್ತಿರುವ ಚಳುವಳಿ ವೀರರು, ಬಿಡಿಬಿಡಿಯಾಗಿ ಪೀಡನೆಯನ್ನು ವರ್ಣಿಸಿರುವ ಸಂಗೀತಾ ಭಟ್ ರನ್ನೇಕೆ ಮೂಲೆಯಲ್ಲಿರಿಸಿದ್ದಾರೆ? ಆಕೆಗೆ ಸಾಂತ್ವನ, ಧೈರ್ಯ ನೀಡಿ ಆಕೆಯ ಪೀಡನೆಗೆ ಕಾರಣರಾದವರ ವಿರುದ್ಧ ಕ್ರಮ ಜರುಗಿಸಲು ಸಹಾಯ ಮಾಡುತ್ತಿಲ್ಲವೇಕೆ? ಆಕೆ ಕನ್ನಡ ಚಿತ್ರರಂಗದ ಕುರಿತು ಪ್ರಪ್ರಥಮವಾಗಿ ದೂರಿದ್ದಾಳೆಂದು ಹೆಸರಿಸಿದ್ದು ಬಿಟ್ಟರೆ ಲಕ್ಷ್ಯವೆಲ್ಲಾ ಸೋಲುವ ಕುದುರೆಯ ಮೇಲಿದೆ.

ಒಬ್ಬ ಸ್ನೇಹಿತ ಯಾ ಸಹೋದ್ಯೋಗಿ ಪದೇ ಪದೇ ಊಟಕ್ಕೆ ಆಟದ ಉದ್ದೇಶದಿಂದಲೇ ಕರೆದರೆ ಅದು ವೃತ್ತಿರಂಗದ ಕಾಮಪೀಡನೆ ಆಗುವುದಿಲ್ಲ. ಆತ ಅದರೊಂದಿಗೆ ವೃತ್ತಿಗೆ ಸಂಬಂಧಿಸಿದ ಯಾವುದಾದರೂ ಆಮಿಷವನ್ನೊಡ್ಡಿದಾಗ ಮಾತ್ರ ಅದು ಕಾಮಪೀಡಿತ. ಇಲ್ಲದಿದ್ದರೆ ಅದು ಇಬ್ಬರು ವಯಸ್ಕರ ನಡುವಿನ ಮಾತುಕತೆ ಮಾತ್ರ, ಇದು ಸಾಮಾನ್ಯ ಜ್ಞಾನ. 

ಆಯ್ದ ಆಯ್ಕೆಯ ಶೋಷಿತರನ್ನು ಮಾತ್ರ (ಮ)ಮೆರೆಸುವ ಇಂತಹ ಚಳುವಳಿ, ಬುದ್ಧಿಜೀವಿ, ನಿವೇದನೆ, ಸಂಸ್ಥೆಗಳು ಸ್ವಾಸ್ಥ್ಯ ಸಮಾಜವನ್ನು ನಿರ್ಮಾಣ ಮಾಡಿಯಾವೆಯೇ?

ಯಾವುದೇ ನಿವೇದನೆಗಳನ್ನು ಸಹಿ ಹಾಕಿ ಹಂಚಿಕೊಳ್ಳುವ ಮುಂಚೆ ಸಂಚಿನ ಅರಿವಿರಲಿ.

#ಸೂಚನೆ: ನನ್ನ ಹಿಂದಿನ ಪೋಸ್ಟಿನಲ್ಲಿ ಉದ್ದೇಶಪೂರ್ವಕವಾಗಿ ಲಂಕೇಶರನ್ನು ಎಳೆದು ತಂದಿದ್ದೆ. ಏಕೆಂದರೆ ಲಂಕೇಶ್ ಆರತಿಗೆ ಹಾಗೆ ಹೇಳಿದ್ದರೋ ಇಲ್ಲವೋ ಅವರ ಭಕ್ತರು ಮಾತ್ರ ಆ ಕುರಿತಾಗಿ ಅವರು ತೀರಿಕೊಂಡ ನಂತರ ಬರೆದದ್ದೇ ಬರೆದದ್ದು!

ಲಂಕೇಶರ ಪರಂಪರೆ(?)ಯನ್ನು ಗುತ್ತಿಗೆ ಹಿಡಿದಿರುವ ಒಂದು ಬಹುದೊಡ್ಡ ಗುಂಪು ಅವರ ಅಮಾಯಕ ಮಗಳನ್ನು ಹುಯಿಲೆಬ್ಬಿಸಿ ದಿಕ್ಕೆಡಿಸಿ ಆದ ಅನಾಹುತ ದೇಶ ನೋಡಿದೆ.

ಈಗ ಅದೇ ಗುಂಪು, ದೇಶದ ಎಲ್ಲ ವಿವಾದಗಳಲ್ಲಿ ತಮಗೆ ಮೈಲೇಜ್ ಕೊಡುವ, ಸಂಗತಿಗಳನ್ನು ಮಾತ್ರ ಆಯ್ದುಕೊಂಡು (ವೀರಶೈವ ಲಿಂಗಾಯತ, ಅಯ್ಯಪ್ಪ, ಮೀಟೂ, ಇತ್ಯಾದಿ)
ತಮ್ಮ ವಿರೋಧಿಗಳಿಗೆ "F" ಮಾಡುವ ಏಕಮಾತ್ರ ಉದ್ದೇಶಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಜನತೆ ಆ ಉದ್ದೇಶಕ್ಕೆ ವ್ಯಾಸಲಿನ್ ಆಗಬಾರದು.

#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

ಶರಣಂ ಅಯ್ಯಪ್ಪ, ಅಯ್ಯಯ್ಯಪ್ಪಾ

Activist Rehana Fathima's Eka movie poster: "I have a penis and vagina, I want to live."
Yes, this should qualify her to be the first female to visit Ayyappa. When Ayyappa represents the creation of life by male gods Hari and Hara with no females, Rehana is just extending the same "Genetical Engineering" to the next level! She deserves to be the first.
ಹೋರಾಟಗಾರ್ತಿ ರೆಹಾನಾ ಫಾತಿಮಾ ನಟಿಸಿರುವ ಏಕಾ ಚಿತ್ರದ ಪೋಸ್ಟರ್ "ನನಗೆ ಶಿಶ್ನ, ಯೋನಿ ಎರಡೂ ಇವೆ. ನಾನು ಬದುಕಲಿಚ್ಚಿಸುತ್ತೇನೆ".
ಮಹಿಳೆಯಿಲ್ಲದೆ ಸೃಷ್ಟಿ ಸಾಧ್ಯವೆಂಬ ಪುರುಷ ದೇವರುಗಳಾದ ಹರಿ ಹರರ ಮೂರ್ತರೂಪವಾದ ಅಯ್ಯಪ್ಪನನ್ನು ದರ್ಶಿಸುವ ಪ್ರಥಮ ಮಹಿಳೆಯಾಗಲು, ಇನ್ನೊಂದು ಜೀವಿಯ ಅಗತ್ಯವೇ ಇಲ್ಲದೆ ಸೃಷ್ಟಿ ಸಾಧ್ಯವೆಂಬ ಅಯ್ಯಪ್ಪನ ಜೆನೆಟಿಕಲ್ ಇಂಜಿನಿಯರಿಂಗ್ ಅನ್ನು ಮುಂದಕ್ಕೆ ತೆಗೆದುಕೊಂಡು ಹೋಗುವ ಈಕೆ ಅತ್ಯಂತ ಅರ್ಹಳಾಗಿದ್ದಾಳೆ!

#IndiaTheMentalHospital

ಹುಯೆನ್ ತ್ಸಾಂಗ್ ನ ಮಹಾಪಯಣ: ಪ್ರತಿಕ್ರಿಯೆಗಳು

ಹುಯೆನ್ ತ್ಸಾಂಗ್ ನ ಮಹಾಪಯಣ
---------------------------------
ಹೈಸ್ಕೂಲ್ ನಲ್ಲಿ ಸಾಮಾಜಿಕ ವಿಜ್ಞಾನ ಪುಸ್ತಕ ಓದುವಾಗ ಅಂಕಗಳಿಗಾಗಿ ಆತನ ಹೆಸರನ್ನು ನೆನಪಿನಲ್ಲಿಟ್ಟುಕೊಂಡದ್ದು ಬಿಟ್ಟರೆ, ಆತನ ಕುರಿತಾಗಿ ಮತ್ತೇನೂ ತಿಳಿದಿರಲಿಲ್ಲ. ರವಿ ಹಂಜ್ ರವರು ' ಹುಯೆನ್ ತ್ಸಾಂಗನ ಮಹಾಪಯಣ ' ಪುಸ್ತಕದ ಮೂಲಕ ಆತನ ಚರಿತ್ರೆಯನ್ನು ಸೊಗಸಾಗಿ ನಿರೂಪಿಸಿದ್ದಾರೆ.ಪುಸ್ತಕ ಬಿಡುಗಡೆಯ ದಿನ ಹಂಜ್ ರವರು ತಿಳಿಸಿದಂತೆ ಸುಮಾರು ಆರು ವರ್ಷಗಳ ಕಾಲ ಅಧ್ಯಯನ ನಡೆಸಿ ಬರೆದಿರುವಂತ ಕೃತಿ.

ನಾನು ಒಂದೇ ಉಸಿರಿಗೆ,ಒಂದೇ ದಿನದಲ್ಲಿ ಓದಿ ಮುಗಿಸಿದ ಮೊಟ್ಟಮೊದಲ ಪುಸ್ತಕ.

ತನ್ನ ಅಣ್ಣನಂತೆ ತಾನೂ ಬೌದ್ಧ ಭಿಕ್ಷು ವಾಗಬೇಕೆಂಬ ಹಂಬಲದಿಂದ ನಿಗದಿತ ವಯಸ್ಸಿನ ಅರ್ಹತೆಗಿಂತ ಕಿರಿಯನಾಗಿದ್ದರೂ ಧರ್ಮಶಾಲೆಯ ಆಯ್ಕೆ ಸಮಿತಿಯ ಮುಂದೆ ದಿಟ್ಟ ವಾಗಿ ಉತ್ತರಿಸುವ ಮೂಲಕ ಆಯ್ಕೆಗೊಂಡು ಮಹಾಯಾನವನ್ನು ಆಳವಾಗಿ ಅಭ್ಯಸಿಸುತ್ತಾನೆ.
ಬೌದ್ಧ ಧರ್ಮದ ತವರೂರಾದ ಭಾರತವನ್ನು ದರ್ಶಿಸಬೇಕೆಂಬ ಮಹದಾಸೆ ಹೊತ್ತು ಅಂದಿನ ಚೀನೀ ಚಕ್ರವರ್ತಿಯ ಆಜ್ಞೆಯನ್ನು ಮೀರಿ ಟ್ಯಾಂಗ್ ಸಾಮ್ರಾಜ್ಯದ ರಾಜಧಾನಿ ಚಾಂಗಾನ್ ನಿಂದ ಹೊರಟು, ಹಗಲಿನಲ್ಲಿ ಅವಿತುಕೊಂಡು ರಾತ್ರಿಯಲ್ಲಿ ಪ್ರಯಾಣ ಬೆಳೆಸುತ್ತಾನೆ.ಸುಮಾರು 10000 ಮೈಲುಗಳ ದುರ್ಗಮಯಾತ್ರೆ ಕೈಗೊಳ್ಳುವ ತ್ಸಾಂಗನು ಕೇವಲ ಜ್ಞಾನದ ಶೋಧನೆಯ ಗುರಿಹೊತ್ತು ನಡೆಯುತ್ತಾನೆ.
ಭಾರತದಲ್ಲಿ ಬೌದ್ಧ ಧರ್ಮದ ಕುರಿತಾಗಿ ಅಧ್ಯಯನ ನಡೆಸುವುದರೊಂದಿಗೆ ಆಗಿನ ಇಲ್ಲಿನ ಜನರ ಸಂಸ್ಕ್ರತಿಯನ್ನು ದಾಖಲಿಸುವುದರ ಜೊತೆಗೆ ಭೌಗೋಳಿಕ ಹಿನ್ನೆಲೆ, ಹವಾಮಾನ ಮುಂತಾದ ಇತಿಹಾಸದಲ್ಲಿ ದಾಖಲಾಗುವಂತ ಅನೇಕ  ವಿಚಾರಗಳನ್ನು ದಾಖಲಿಸುತ್ತಾ ಸಾಗುತ್ತಾನೆ.ಬೌದ್ಧ ಧರ್ಮ ಅದಾಗಲೇ ಅವನತಿ ಹೊಂದುತ್ತಿದ್ದ ಕಾಲದಲ್ಲಿ ದರ್ಶಿಸುವ ತ್ಸಾಂಗನು ಅದರ ಕುರಿತಾಗಿ ನೊಂದುಕೊಳ್ಳುತ್ತಾನೆ.
ತ್ಸಾಂಗನ ಮಹಾಪಯಣದ ಈ ಪುಸ್ತಕ ರಹಮತ್ ತರೀಕೆರೆ ಯವರು ಹೇಳಿದಂತೆ ನಮಗೂ ಆ ಯಾತ್ರೆಯ ಸ್ಥಳಗಳನ್ನು ನೋಡಿ ಬರುವಂತೆ ಅನಿಸುವುದು ಸತ್ಯ.
ರವಿ ಹಂಜ್ ರವರು ತುಂಬಾ ಸೊಗಸಾಗಿ ನಿರೂಪಿಸಿದ್ದು, ರೋಮಾಂಚಕ ಕಾದಂಬರಿ ಓದಿದ ಅನುಭವ ಸಿಗುತ್ತದೆ.

ಎಲ್ಲರೂ "ಮಹಾಪಯಣ" ದ ಪುಸ್ತಕದ ಮೂಲಕ ಯಾತ್ರೆ ಕೈಗೊಳ್ಳಿ. ರೋಮಾಂಚಕ ಅನುಭವ ಪಡೆದುಕೊಳ್ಳಿ.

-ಪಂಪ ತೋರಣಗಲ್
----------------------------------------------
ಸರ್ ಪುಸ್ತಕ ಓದಿದೆ. ನನ್ನ ಕುತೂಹಲವನ್ನು ತಣಿಸಿದ್ದಲ್ಲದೆ ಹ್ಯುಯೆನ್ ತ್ಸಾಂಗ್‌ನ ಯಾತ್ರೆ ಬಗ್ಗೆ ನನಗಿದ್ದ ಅನೇಕ ಗೊಂದಲ ಗೋಜಲುಗಳಿಗೆ ಪರಿಹಾರ ಒದಗಿಸಿತು. ಹಿನಾಯಾನ, ಮಹಾಯಾನ, ಯೋಗಾಚಾರ ತತ್ವ, ಪಂಥಗಳ ಬಗ್ಗೆ ನನಗಿದ್ದ ಅನುಮಾನಗಳನ್ನು ಬಗೆ ಹರಿಸಿತು. ಹ್ಯುಯೆನ್ ತ್ಸಾಂಗ್ ದಕ್ಷಿಣ ಭಾರತಕ್ಕೆ ಬಂದಾಗ ಇಲ್ಲಿನ ದೊರೆಗಳ ಭೇಟಿ ಮಾಡಿದ್ದರ ಬಗ್ಗೆ ವಿವರ ಮಾಹಿತಿ ನೀಡದಿರುವುದು ನಿರಾಶೆ ತಂದರೂ. ಹರ್ಷವರ್ಧನ, ಅಸ್ಸಾಂನ ಮಹಾರಾಜ, ನಳಂದ ವಿಶ್ವವಿದ್ಯಾಲಯದಲ್ಲಿ ಜ್ಞಾನಾರ್ಜನೆಗೆ ಸೇರಿದ ಬಗೆಗಿನ ವಿವರಗಳು ಓದುಗರ ಜ್ಞಾನದಾಹ ನೀಗಿಸುವುದಲ್ಲದೆ ಇತಿಹಾಸದ ಬಗೆಗಿನ ಅನೇಕ ಗೊಂದಲಗಳನ್ನು ನಿವಾರಿಸುತ್ತವೆ. ಹ್ಯುಯೆನ್ ತ್ಸಾಂಗ್ ಸಿಲೋನ್‌ಗೆ ಭೇಟಿ ನೀಡಿರಲಿಲ್ಲ ಎನ್ನಲಾಗುತ್ತದೆ. ಆದರೆ ಅಲ್ಲಿಗೆ ಭೇಟಿ ನೀಡಿದ್ದ ಎಂದು ಚಿತ್ರಿಸಲಾಗಿದೆ ಆದರೆ ಅದರ ಬಗ್ಗೆಯೂ ಹೆಚ್ಚಿನ ವಿಚಾರಗಳಿಲ್ಲ. ತ್ಸಾಂಗ್ ಕೈಗೊಂಡ ಸಂಪೂರ್ಣ ಯಾತ್ರೆಯ ಮ್ಯಾಪ್ ಹಾಕಿ ಓದುಗರಿಗೆ ಆತನ ತಿರುಗಾಟದ ಸ್ಪಷ್ಟ ಗ್ರಹಿಕೆ ನೀಡಬಹುದಿತ್ತು. ಮತ್ತೊಂದು ಆತ ಟ್ಯಾಂಗ್ ಸಾಮ್ರಾಜ್ಯದ ಪಶ್ಚಿಮಕ್ಕೆ ಬಹುದೂರ ಸಾಗಿ ಮತ್ತೆ ದಕ್ಷಿಣಕ್ಕೆ ಸುತ್ತಿ ಬರುವ ಔಚಿತ್ಯ ಅರ್ಥವಾಗುವುದಿಲ್ಲ. ಕೃತಿಯಲ್ಲೂ ಆ ಬಗ್ಗೆ ಹೆಚ್ಚಿನ ಮಾಹಿತಿ ದೊರಕುವುದಿಲ್ಲ.
ಇರಲಿ.  ತಾಷ್ಕೆಂಟ್, ಕಿರ್ಗಿಸ್ತಾನ್, ಅಪ್ಘಾನಿಸ್ತಾನ, ಈಗಿನ ಪಾಕಿಸ್ತಾನ್ ಮೂಲಕ ಭಾರತದ ನೆಲ ತಲುಪುವ ಹ್ಯುಯೆನ್ ತ್ಸಾಂಗ್ ಭಾರತದ ಅಂದಿನ ಸ್ಥಿತಿಗತಿಗಳ ಬಗ್ಗೆ ದಾಖಲಿಸದೇ ಹೋಗಿದ್ದರೆ ನಮ್ಮ ದೇಶದ ಇತಿಹಾಸವೇ ಅಪೂರ್ಣವಾಗುತ್ತಿತ್ತು ಎನಿಸುತ್ತದೆ. ಭಾರತದ ಇತಿಹಾಸದ ಬಗ್ಗೆ ತಳಸ್ಪರ್ಶಿಯಾಗಿ ಅಧ್ಯಯನ ಕೈಗೊಳ್ಳುವವರಿಗೆ ಹ್ಯುಯೆನ್ ತ್ಸಾಂಗ್ ಎಂಬ ತಿರುಗಾಡಿ ಒಬ್ಬ ಮಾರ್ಗದರ್ಶಕನಂತೆ ಗೋಚರಿಸುತ್ತಾನೆ. ಈ ಕೃತಿ ಅತ್ಯಂತ ಮೌಲಿಕ ಕೃತಿಯಾಗಿದ್ದು ಎಲ್ಲಾ ಸಾಹಿತ್ಯಾಸಕ್ತರು. ಅಧ್ಯಯನಕಾರರು, ಇತಿಹಾಸ ತಜ್ಞರು ಒದಲೇಬೇಕಾದ ಕೃತಿ. ಓದದಿದ್ದರೆ ಇತಿಹಾಸದ ಲಿಂಕ್ ಮಿಸ್ ಆಗುವುದಂತೂ ಖಚಿತ.
- ನೀರಕಲ್ಲು ಶಿವಕುಮಾರ್
-----------------------------------
Ravi Hanj sir I read this book.
This is one of the best informative book especially for teachers and students
This book is of great importance and necessity to Kannada literature and education field
This should be kept in library of all schools and colleges
Your hard work of 5years is not wasted.
People will remember you for the contribution of this book.
Thank you sir.

-Bhagya Lakshmi
------------------------------------------
ಓದಿದೆ....ಸೊಗಸಾದ ಪುಸ್ತಕ..
ಹ್ಯುಯೆನ್ ತ್ಸಾಂಗ್ ಮಹಾಶಯ ಇಷ್ಟೆಲ್ಲಾ ಓಡಾಡಿ,ಸ್ಥಳಗಳಲ್ಲಿನ ವಿವರಗಳನ್ನು ಬಿಚ್ಚಿಡುತ್ತಾ ಹೋದಂತೆಲ್ಲಾ ಮನಸು ತುಂಬಿಬಂತು...ಆ ಕಾಲದಲ್ಲಿ ಈತನ ಪ್ರವಾಸದ ಕನಸು, ಕಷ್ಟ ಕಾರ್ಪಣ್ಯಗಳು ಸುಖ ದುಃಖ ಗಳೆನ್ನಲ್ಲಾ ಆತ ಅವಡುಗಚ್ಚಿಕೊಂಡು ಮೌನವಾಗಿ ಆದರೆ ಯಶಸ್ವಿಯಾಗಿ ದಾಖಲಿಸುತ್ತಾ ಹೋಗಿರೋದು ಇನ್ನೊಂದು ಅದ್ಭುತ...
ಇಂಡಿಯಾ ದವರ ಬಗ್ಗೆ ಆತನ ಅಭಿಪ್ರಾಯ ಈಗಲೂ ಚೂರೂ ಬದಲಾಗದೇ ಉಳಿದಿರೋದು ಇನ್ನೊಂದು ವಿಶಾದದ ಸಂಗತಿ

ಏನಾರ ಆಗ್ಲಿ..ರವಿ ಸರ್ ಅವರಿಗೆ
ಪ್ರಕಾಶಕರಿಗೂ ಅಭಿನಂದನೆಗಳು..

ಇಂಥದೊಂದು ವೈಶಿಷ್ಟ್ಯ ಪೂರ್ಣ ಪುಸ್ತಕ ಕೊಟ್ಟಿದ್ದಕ್ಕೆ!
- ಮೋಹನ್ ಕೋರಿ
-------------------------------------------
Ravi Hanj ಪುಸ್ತಕ ಒಂದೇ ಏಟಿಗೆ ಓದಿ ಮುಗಿಸಿದೆ. ಒಂದು ಅದ್ಭುತ ಪಯಣ. ನನ್ನ ಮಡದಿ Sowmya Suma ಓದಿ ತುಂಬಾ ಖುಷಿ ಪಟ್ಟಳು. ನನ್ನ ಮಗಳು Meghana Sudhindra ಹಾಗೂ ಮೂವರು ಆತ್ಮೀಯ ಮಿತ್ರರಿಗೂ ಪ್ರತಿಗಳನ್ನು ಕೊಂಡಿದ್ದೇನೆ. ಆಲ್ ದಿ ಬೆಸ್ಟ್.
ಒಳ್ಳೆಯ ಪ್ರಯತ್ನ Chandrakanta Vaddu ಅವರೆ.
- ಸುಧೀಂದ್ರ ಹಾಲ್ದೊಡ್ಡೇರಿ

ಲಿಂಗಾಯತ ನವ ಧರ್ಮ ಧುರೀಣರ ನಾಮಪರಿವಿಪರ್ಯಾಸ!

ಲಿಂಗಾಯತ ಎಂಬುದು ಪ್ರತ್ಯೇಕ ಧರ್ಮ, ಇದಕ್ಕೆ ಅಲ್ಪಸಂಖ್ಯಾತ ಮಾನ್ಯತೆ ನೀಡಲು ಕರ್ನಾಟಕ ಸರ್ಕಾರ ಶಿಫಾರಸು ಮಾಡಿದೆ. ಕೇಂದ್ರ ಸರ್ಕಾರ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಬೇಕಿದೆ. ಈ ನಡುವೆ, ಬಸವ ತತ್ತ್ವದ ಮೇಲೆ ರೂಪಿತವಾಗಿರುವ ಹೊಸ ಲಿಂಗಾಯತ ಧರ್ಮಕ್ಕೆ ಸೇರಬಲ್ಲ ನಾಯಕರ ಹೆಸರುಗಳಲ್ಲಿ ಹಿಂದೂ ದೇವರ ಹೆಸರು ಬಳಕೆ ಮಾಡುವುದು ಎಷ್ಟು ಸರಿ?

ಇಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮದ ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ ಶ್ರೀ ಶ್ರೀ ಶ್ರೀ ಗಳ ನಾಮ ವಿಶೇಷಗಳನ್ನು ವಿಶ್ಲೇಷಿಸೋಣ. ಅಂದ ಹಾಗೆ ಈ ಹೆಸರುಗಳು ಸ್ವಾಮಿಗಳಿಗೆ ಬಂದ ಹುಟ್ಟುನಾಮವಲ್ಲ! ಸನ್ಯಾಸ ದೀಕ್ಷೆಯಾದಾಗ ಇಟ್ಟುಕೊಂಡ ಹೆಸರುಗಳು. 

ಶಿವಮೂರ್ತಿ ಮುರುಘರಾಜೇಂದ್ರ ಸ್ವಾಮಿಗಳು: ಇವರ ಹೆಸರಿನಲ್ಲಿಯೇ ಶಿವನಿದ್ದಾನೆ. ಶಿವ ಹಿಂದೂ ದೇವ. ಲಿಂಗಾಯತರು ಯಾವುದೇ ಮೂರ್ತಿಪೂಜೆ, ಹಿಂದೂ ದೇವತೆಯ ಉಪಾಸನೆಯಲ್ಲಿ ತೊಡಗದಿದ್ದರೆ, ಇವರ ಹೆಸರಲ್ಲಿ ಶಿವ ಮತ್ತು ಮೂರ್ತಿಗೆ ಏಕೆ ಸ್ಥಾನ ಕೊಟ್ಟರು? 

ತರಳಬಾಳು ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು: ಶಿವ ಇವರ ಪ್ರಥಮ ಮತ್ತು ದ್ವಿತೀಯ ಎರಡು ಹೆಸರಲ್ಲಿಯೂ ಇದ್ದಾನೆ. ಅದಲ್ಲದೇ ಮೂರ್ತಿ ಮತ್ತು ಆಚಾರ್ಯ (ಗುರು) ಕೂಡ. ಹಾಗಿದ್ದರೆ ಇವರ ಹೆಸರಿನಲ್ಲಿರುವ ಶಿವ ಅದಾವ ಅಹಿಂದು ದೇವಾ/ದೇವತೆ? 

ಸಾಣೇಹಳ್ಳಿ ಪಂಡಿತಾರಾಧ್ಯ ಸ್ವಾಮಿಗಳು: ಪಂಡಿತಾರಾಧ್ಯ ಕಾಳಮುಖ ಯಾ ವೀರಶೈವರ ಪ್ರೀತ್ಯಾರ್ಥ ನಾಮ. ಅದರಲ್ಲೂ ರೇಣುಕರೊಬ್ಬರ ನಾಮ. ಈ ನಾಮವನ್ನು ಇವರ ಗುರುಗಳು ದಯಪಾಲಿಸಿದ್ದು. ಹಾಗಿದ್ದರೆ ಇವರ ಗುರುಗಳಿಗೆ ತಮ್ಮ ಧರ್ಮದ ಬಗ್ಗೆ ತಪ್ಪು ತಿಳುವಳಿಕೆಯಿತ್ತೇ? 

ಜಯ ಮೃತ್ಯುಂಜಯ ಸ್ವಾಮಿಗಳು: ಪಂಚಮಸಾಲಿ ಪೀಠಾಧೀಶರಾದ ಇವರ ಹೆಸರಿನಲ್ಲಿ ಉಗ್ರ ಶೈವ ಸಂಪ್ರದಾಯದ ಶಿವನಾಮವಿದೆ. ಮೃತ್ಯುಂಜಯ ಜಪ ಶೈವರ ಅತ್ಯಂತ ಉಗ್ರಪ್ರೀತಿಯ ಜಪ. ವೀರಶೈವ/ಲಿಂಗಾಯತರಲ್ಲಿ, ಗುರು ಪರಂಪರೆಯ ಮಠಾಧೀಶರು ಈ ಜಪದಲ್ಲಿ ಪರಿಣಿತರು. ಮೃತ್ಯುಂಜಯ ಅದು ಹೇಗೆ ಹಿಂದೂ ನಾಮಕ್ಕಿಂತ ಭಿನ್ನ? 

ಸಿದ್ದರಾಮ, ಸಿದ್ದಲಿಂಗ, ಇತ್ಯಾದಿ, ಇತ್ಯಾದಿ: ಈ ಸ್ವಾಮಿಗಳ ಹೆಸರಲ್ಲಿ ರಾಮನನ್ನು ಸಿದ್ಧಿಸಿದ, ಲಿಂಗವನ್ನು (ಇದು ಶಿವನಲ್ಲ ಎಂಬುದು ಇವರ ಅರಿಕೆ) ಸಿದ್ಧಿಸಿದ ಎಂಬರ್ಥ ಸಹಜ. ಹಾಗಿದ್ದರೆ ರಾಮ, ಲಿಂಗಾರ್ಥದ ಶಿವ, ಹಿಂದೂ ದೇವರುಗಳಲ್ಲವೇ? 

ಇನ್ನು ಲಿಂಗಾಯತ ಧರ್ಮಸಂಸ್ಥಾಪಕ ಬಸವಣ್ಣ! ಶಿವನ ವಾಹನ ನಂದಿಯ ಸಂಪ್ರೀತಿಯ ಕನ್ನಡ ನಾಮ. ಅಕ್ಕ ಮಹಾದೇವಿ ಪಾರ್ವತಿಯ ಅನ್ವರ್ಥಕ ನಾಮ, ಅಲ್ಲಮಪ್ರಭು ಶಿವನಾಮ!! 

ಇಂತಹ ಒಂದು ಸಾಮಾನ್ಯ ತಿಳುವಳಿಕೆ ಜನಸಾಮಾನ್ಯರಲ್ಲಿ ಜನಜನಿತ! ಅದ್ಯಾವ ಬೆಡಗಿನ ಒಡಪು, ದಿಜ್ಞಾನ, "ಅಹಿಂದ"ತ್ವ ಕರ್ನಾಟಕ ಸರ್ಕಾರ ರಚಿಸಿದ್ದ ಸಮಿತಿಯ ಹೊಳಹಿಗೆ ದಕ್ಕಿತು?!? ನ್ಯಾ. ಜಗಮೋಹನದಾಸ್ ಸಮಿತಿಯಾಗಲಿ, ಮುಖ್ಯಮಂತ್ರಿಗಳಾಗಲಿ, ಅಥವಾ ಮೇಲ್ಕಾಣಿಸಿದ ಶ್ರೀ ಶ್ರೀ ಶ್ರೀಗಳಾಗಲಿ ತಾವು ಕಂಡಕೊಂಡ ದಿಜ್ಞಾನದ ಸುಜ್ಞಾನವನ್ನು ನಾಡಿನ ಅಲ್ಪಜ್ಞ ಸಾಮಾನ್ಯರಿಗೆ ತಿಳಿಸಿ ಕಣ್ಣು ತೆರೆಸಬಲ್ಲುದೆ?

#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

ಕುರುಡೆನ್ನಿಸುವಷ್ಟು ಮಹಿಳಾ ಸಬಲೀಕರಣ

ವಿವಾಹ ವಿಚ್ಚೇದಿತ ಆತ ಉತ್ತರ ಭಾರತದ ಡೆಂಟಲ್ ಕಾಲೇಜಿನ ಡಿಪಾರ್ಟ್ಮೆಂಟ್ ಒಂದರ ಮುಖ್ಯಸ್ಥ, ಸ್ನೇಹಜೀವಿ, ಪ್ರಾಮಾಣಿಕ. ವೈವಾಹಿಕವಾಗಿ ಡಾಕ್ಟರ್ ಓರ್ವಳನ್ನು ಮದುವೆಯಾಗಿ ಕಹಿಯುಂಡಿದ್ದವ ಮುಂದೆಂದೂ ಮದುವೆಯಾಗುವುದಿಲ್ಲ. ಹಾಗೇನಾದರೂ ವಿವಾಹವಾದರೆ ಬಡ, ಅವಿದ್ಯಾವಂತೆಯೊಂದಿಗೆ ಮಾತ್ರ ಎಂದು ನಿರ್ಧರಿಸಿದ್ದ. ಸ್ನೇಹಜೀವಿಯ ಸ್ನೇಹಿತರು ಆತನ ಒಳ್ಳೆಯತನಕ್ಕೆ ಮರುಗಿ, ಅವನ ಕೊರಗನ್ನು ತಾವೇ ಅನುಭವಿಸುತ್ತಿರುವಂತೆ ಕೊರಗಿ ಒಂದು ಬಡ ಅವಿದ್ಯಾವಂತೆಯನ್ನು ಹುಡುಕಿ ತೋರಿದರು. ಅವನಿಚ್ಛೆಯಂತೆ ಆತ ಹುಡುಗಿಯ ಪ್ರಸ್ತಾಪವನ್ನು ಒಪ್ಪಿ ಮದುವೆಯಾದ. ಒಂದೇ ತಿಂಗಳಲ್ಲಿ ಹುಡುಗಿ ಅವನೊಂದಿಗೆ ಹೊಂದಾಣಿಕೆಯಾಗದು ಎಂದು ಅಕಾರಣವಾಗಿ ಆತನನ್ನು ಶೋಷಿಸಿ ತೊರೆದು ಓಡಿದಳು. ನಂತರ ಒಂದು "ದೊಡ್ಡ" ಮೊತ್ತದ ಜೀವನಾಂಶ ಕೋರಿದಾಗ, ಕೋರ್ಟು ಡಾಕ್ಟರರ ಲೈಫ್ ಸ್ಟೈಲ್ ಆಧಾರದ ಮೇಲೆ "ಬಹುದೊಡ್ಡ" ಮೊತ್ತದ ಜೀವನಾಂಶ ಕೊಡುವಂತೆ ತೀರ್ಮಾನ ಕೊಟ್ಟಿತು.
ಇನ್ನೊಂದು ಕೇಸಿನಲ್ಲಿ, ಹೆಂಡತಿಯ ಅಕ್ರಮ ಸಂಬಂಧದಿಂದ ಬೇಸತ್ತಿದ್ದ ಗಂಡ ತನ್ನ ಹೆಂಡತಿ ಪ್ರಿಯಕರನೊಂದಿಗಿರುವ ವಿಡಿಯೋ ಸಾಕ್ಷಿಯೊಂದಿಗೆ adultery ಕೇಸ್ ಹಾಕಿ ವಿಚ್ಛೇದನ ಕೇಳಿದ. ಅಲ್ಲಿಯೂ ಆತನಿಗೆ ವ್ಯತಿರಿಕ್ತವಾಗಿ ಆತನ " ಅರ್ಧದಷ್ಟು ಆಸ್ತಿ"ಯನ್ನು ಕೊಡಿಸಿ
ಕೋರ್ಟು ಆಕೆಯ ಕ್ಷಮಾಪಣೆ ಕೇಳುವಂತೆ ಆದೇಶ ನೀಡಿತು.
ಇನ್ನು ನನ್ನ ಕಾರ್ಪೊರೇಟ್ ವಲಯದಲ್ಲಿ ಕೂಡ ಸಾಕಷ್ಟು ಮಹಿಳೆಯರು ಕೆಲಸದ ಒತ್ತಡವನ್ನು ತಾಳಲಾರದೆ, ಲೈಂಗಿಕ ಶೋಷಣೆಯ ನೆಪವೊಡ್ಡಿ ತಮ್ಮ ತಮ್ಮ ಬಾಸ್ಗಳ ನೌಕರಿಗೆ ಕುತ್ತು ತಂದು ಬೆವರಿಳಿಸಿದ್ದಾರೆ. ಕೆಲಸದ ಒತ್ತಡ ಹೆಚ್ಚಾದೊಡನೆ ಆರೋಗ್ಯದಿಂದ ಶುರುವಾಗುವ ನೆಪಗಳು ಕ್ರಮೇಣ ಅಜ್ಜಿ, ಅಜ್ಜರ ಸಾವಿಗೆ ಬಂದು ಕಟ್ಟಕಡೆಗೆ ಲೈಂಗಿಕ ಶೋಷಣೆಗೆ ಬಂದು ನಿಂತಿದ್ದ ಹಲವಾರು ಘಟನೆಗಳನ್ನು ನಾನೇ ನೋಡಿದ್ದೇನೆ.
ಭಾರತದಲ್ಲಿನ ವೈವಾಹಿಕತೆ, ಅತ್ಯಾಚಾರ, ಮಹಿಳಾ ಶೋಷಣೆಯ ಬಗೆಗಿನ ಕಾನೂನುಗಳು ಏಕಪಕ್ಷೀಯವಾಗಿ ಕುರುಡೆನ್ನಿಸುವಷ್ಟು ಮಹಿಳಾ ಸಬಲೀಕರಣವನ್ನು ಪುಷ್ಟೀಕರಿಸುತ್ತಿವೆ. ಕಾನೂನುಗಳ ಈ ಕಪಿಮುಷ್ಟಿಯಿಂದ ಅತ್ಯಾಚಾರ ಮಾಡದ, ಆದರೆ ಆರೋಪಕ್ಕೊಳಗಾದವ ಕೂಡ ತಪ್ಪಿಸಿಕೊಳ್ಳಲಾರ. ಇಂತಹ ಕಠಿಣ ಕಾನೂನುಗಳು ಈಗಾಗಲೇ ಇರುವಾಗ ಹೊಸ ಕಾನೂನುಗಳ ಔಚಿತ್ಯವಾದರೂ ಏನು ಎಂಬ ಪ್ರಶ್ನೆ ಮೂಡುತ್ತದೆ. ಭಾವುಕತೆಯ ಹುಚ್ಚಿನಲ್ಲಿ, ಮೀಡಿಯಾದ ಅಬ್ಬರಕ್ಕೆ ಸೋತು ಈ ರೀತಿ ಹುಚ್ಚು ಕಾನೂನುಗಳನ್ನು ಮಾಡುತ್ತ ಹೋದರೆ...!
ಹಾಗಿದ್ದಾಗ ಭಾರತದಲ್ಲಿ ಅತ್ಯಾಚಾರ ಪ್ರಕರಣಗಳು ತೀವ್ರವಾಗಿ ಹೆಚ್ಚುತ್ತಿರುವವೇ? ರಾಷ್ಟೀಯ ಕ್ರೈಮ್ ಬ್ಯುರೋ ಪ್ರಕಾರ ೨೦೧೩ ರಲ್ಲಿ ೨೪೯೨೩, ೨೦೧೫ ರಲ್ಲಿ ೩೪೬೫೧ ಅತ್ಯಾಚಾರ ಪ್ರಕರಣಗಳು ನಡೆದಿದ್ದು, ಇವುಗಳಲ್ಲಿ ೯೮% ಪರಿಚಿತರಿಂದ ನಡೆದಿವೆ ಎನ್ನುತ್ತದೆ. ಈ ೯೮ ಪ್ರತಿಶತ ಪರಿಚಿತರಿಂದ ನಡೆಯುವ ಅತ್ಯಾಚಾರಗಳಿಗೆ ಕಾರಣಗಳೇನು ಎಂದು ಹುಡುಕಬೇಕು. ಅದೇ ಅಮೇರಿಕಾದಲ್ಲಿ ವರ್ಷಕ್ಕೆ ಮೂರೂ ಲಕ್ಷಕ್ಕೂ ಹೆಚ್ಚು ಲೈಂಗಿಕ ಶೋಷಣೆಗಳು ನಡೆಯುತ್ತವೆ ಎನ್ನಲಾಗುತ್ತದೆ. ಇದ್ಯಾಕೆ ಸುದ್ದಿ ಮಾಧ್ಯಮದಲ್ಲಿ ಸುದ್ದಿಯಾಗುವುದಿಲ್ಲ?ಅಂದರೆ ಅಮೆರಿಕಾದಲ್ಲಿ ಅತ್ಯಾಚಾರಗಳ ಕುರಿತು ಜನ ಪ್ರತಿಭಟಿಸುವುದಿಲ್ಲವೇ? ಅಮೇರಿಕಾದ ಸುದ್ದಿ ಮಾಧ್ಯಮಗಳಲ್ಲಿ ನೈತಿಕತೆ ಭಾರತದಂತೆ ಅಧ್ಹಪತನಕ್ಕಿಳಿದಿಲ್ಲ, ಇಳಿಯಲಾರವು! ಏಕೆಂದರೆ ಅಲ್ಲಿನ ಕಾನೂನುಗಳು ಅಂತಹದಕ್ಕೆ ಆಸ್ಪದ ಕೊಡುವುದಿಲ್ಲ.
ಯಾವುದೇ ದೇಶವಾದರೂ ಆಯಾಯ ಅಪರಾಧವನ್ನು ತಮ್ಮ ತಮ್ಮ ಕಾನೂನುಗಳಿಗನುಗುಣವಾಗಿ ಶಿಸ್ತುಕ್ರಮ ಕೈಗೊಂಡು ಅಪರಾಧಿಗಳನ್ನು ಶಿಕ್ಷೆಗೆ ಗುರಿಪಡಿಸುತ್ತವೆ. ಯಾವುದೇ ಹುಚ್ಚು ವರದಿ ಪ್ರಸಾರವಾಗುವುದಿಲ್ಲ. ಭಾರತದಲ್ಲಿಯೂ ಕೂಡ ಅಪರಾಧಗಳಿಗೆ ತಕ್ಕಂತೆ ನಿಯಮಗಳಿದ್ದು ಅವುಗಳ ಪರಿಪಾಲನೆಯಲ್ಲಿ ಲೋಪಗಳಾಗುತ್ತಿವೆ. ಆಯಾಯ ರಾಜ್ಯ ಸರ್ಕಾರಗಳು ಆ ನಿಯಮಪಾಲನೆಯಲ್ಲಿ ಶಿಸ್ತುಕ್ರಮಗಳನ್ನು ಕೈಗೊಂಡು ಪರಿಸ್ಥಿತಿಯನ್ನು ಹತೋಟಿಯಲ್ಲಿಡಬೇಕೆ ಹೊರತು ಹೊಸ ಹೊಸ ಕಾನೂನುಗಳನ್ನು ಮಾಡುವುದಲ್ಲವೆನಿಸುತ್ತದೆ. ಅತ್ಯಾಚಾರಗಳ, ಮಹಿಳಾಸಬಲೀಕರಣದ ಕುರಿತಾದ ಹೊಸ ಹೊಸ ಕಾನೂನುಗಳ ಬೇಡಿಕೆ ಹೇಗಿದೆಯೆಂದರೆ, ಪ್ಲಾಸ್ಟಿಕ್ ಅನ್ನು ಸರಿಯಾಗಿ ಮರುಬಳಕೆಗೆ ಒಳಪಡಿಸಲಾಗದ ಸರ್ಕಾರಗಳು ಪ್ಲಾಸ್ಟಿಕ್ ಪರಿಸರಕ್ಕೆ ಮಾರಕವೆಂದು ಬಹಿಷ್ಕರಿಸುವ ( ಯಾವ ವಸ್ತು ಅತ್ಯಂತ ಸುಲಭವಾಗಿ ಮರುಬಳಕೆಗೆ ಒದಗಿಬರುವುದೋ ಅದು ಅತ್ಯಂತ ಪರಿಸರಸ್ನೇಹಿ ಕೂಡಾ), ಬಯಲು ಶೌಚವನ್ನು ನಿಯಂತ್ರಿಸಲಾಗದೇ ಮುಂದೆ ಶೌಚವನ್ನೇ ಬಹಿಷ್ಕರಿಸುವ ಆದೇಶ ನೀಡಬಹುದಾದಂತಹ ಮೂರ್ಖತನವೆನಿಸುತ್ತದೆ.
ಕಾನೂನು ಪರಿಪಾಲನೆಯಲ್ಲಿರುವ ಲೋಪಗಳನ್ನು ತಿದ್ದಿ ತೀಡಬೇಕಾದ ಸರ್ಕಾರಗಳ ಲೋಪ, ಹಾಗು ಆ ರೀತಿ ಆಗ್ರಹಿಸಬೇಕಾದ ಜನತೆ ಭಾಗವಾಗಿ ಎರಡು ಭಾರತದಲ್ಲಿ ಎಂದೋ ಕಳೆದುಹೋಗಿರುವವೆನಿಸುತ್ತದೆ.
ಮಾಹಿತಿತಂತ್ರಜ್ಞಾನದ ಆಸ್ಫೋಟನೆಗೊಂಡು ಕೈಗೊಂದು ಕ್ಯಾಮೆರಾ ಫೋನ್ ದೊರೆತು, ಆ ಆಟಿಕೆಗಳಿಗೆ ಕಾನೂನಿನ ಲಂಗುಲಗಾಮಿಲ್ಲದ ದುರವಸ್ಥೆಯಾಗಿ, ಸುದ್ದಿ ಮೀಡಿಯಾಗಳ ಅಬ್ಬರದಲ್ಲಿ ಭಾರತ ಕಳೆದುಹೋಗಿದೆ. ಈಗ ಭಾರತಕ್ಕೆ ಬೇಕಾದ್ದು ಮಹಿಳಾಸಬಲೀಕರಣದ ಕಾನೂನುಗಳಲ್ಲ, ಬದಲಾಗಿ ವೈಯುಕ್ತಿಕ ಘನತೆ, ಮಾಹಿತಿಯನ್ನು ಗೋಪ್ಯತೆಯನ್ನು ಕಾಪಾಡಬೇಕಾದ ಕಾನೂನುಗಳು!
ಇನ್ನು ಅದ್ಯಾವುದೋ ಬಿಜೆಪಿ ರಾಜಕಾರಣಿ ಸುದ್ದಿಮಾಧ್ಯಮಗಳಲ್ಲಿನ ಮಹಿಳೆಯರು ಔದ್ಯೋಗಿಕ ಲಾಭಕ್ಕೆ ಮಲಗುತ್ತಾರೆ ಎಂಬುದನ್ನು ಮಾಧ್ಯಮನಿರತರು ಪ್ರತಿಭಟಿಸುವ ಮುನ್ನ ತಮ್ಮ ಬಳಗದವರೇ ಅದ ಅನೇಕ ಮಹನೀಯರುಗಳು ತಮ್ಮ ಪಲ್ಲಂಗ ಪುರಾಣಗಳನ್ನು ಅಲೆಗ್ಸಾಂಡರನ ದಂಡಯಾತ್ರೆಯಂತೆ ಬರೆದುಕೊಂಡಿದ್ದನ್ನು ಪ್ರಶ್ನಿಸಲಿಲ್ಲವೇಕೆ? ನಿಮ್ಮ ಹೋರಾಟದ ಮಂಚೂಣಿಯಲ್ಲಿರುವ ನಟ ಕಮ್ ನೂತನ ಲೇಖಕ ಪ್ರಜಾವಾಣಿಯಲ್ಲಿ ಉಮೇದಿನಿಂದ ತನ್ನ ಕಾಮಸಂಬಂಧ ಕುರಿತು ಬರೆದುಕೊಂಡಿದ್ದಾರೆ. ನಿಮ್ಮ ಬಳಗದವರ ಅಲೌಕಿಕ, ಕ್ರಿಯಾತ್ಮಕ ಚಟುವಟಿಕೆಗಳ ಹೆಸರಲ್ಲಿ ನಡೆಸುವ ಲೈಂಗಿಕ ಶೋಷಣೆಯನ್ನು ಪ್ರಶ್ನಿಸದೇ, ಆ ರಾಜಕಾರಣಿ ತಾನು ಕಂಡಿರಬಹುದಾದ ಔದ್ಯೋಗಿಕ ಉನ್ನತಿಯ ಲೌಕಿಕ ಕಾರಣ ಕುರಿತು ಮಾತನಾಡಿದ್ದು ತಪ್ಪೇ?
ಅತಿಯಾಗಿ ತಿಂದು ಭೇಧಿಯಾದರೆ ಅದಕ್ಕೆ ಪ್ರಧಾನಮಂತ್ರಿ ಕಡೆ ಬೆರಳು ತೋರುವ, ಫೇಸ್ಬುಕ್ ಸ್ಟೇಟಸ್ , ವಾಟ್ಸಾಪ್ ಮೆಸೇಜ್ ಹರಡುವ ರೋಗ ನಿಲ್ಲಬೇಕು. ಈ ಬೆರಳು ತೋರುವ ಪ್ರವೃತ್ತಿಯಿಂದ ನಾಡಿನ ಬುದ್ದಿಜೀವಿಗಳು ಪ್ರಧಾನಿಯನ್ನು ಕೇಳಬೇಕಾದ ಅನೇಕ ಪ್ರಮುಖ ಸಂಗತಿಗಳ ಕುರಿತು ಸೊಲ್ಲೆತ್ತದೆ ಹುಚ್ಚು ಆರ್ಭಟದಲ್ಲಿ ಕಳೆದುಹೋಗಿದ್ದಾರೆ. ಬುದ್ಧಿಜೀವಿಗಳೇ ತಮ್ಮ ಬಾಯನ್ನು ಮುಚ್ಚಿಸಲಾಗುತ್ತಿದೆ ಎಂದು ನೀವು ತಿಳಿದಿದ್ದರೆ ನಿಮ್ಮನ್ನು ಬುದ್ದಿಜೀವಿಗಳೆಂದುಕೊಂಡದ್ದಕ್ಕೆ ನಾವು ನಮ್ಮನ್ನು ಹಳಿದುಕೊಳ್ಳಬೇಕು. ತಮ್ಮ ಈ ಬೆರಳು ತೋರುವ ಆರ್ಭಟದಲ್ಲಿ ನೀವಾಗಿಯೇ ನಿಮ್ಮ ಬಾಯಿ ಮುಚ್ಚಿಕೊಳ್ಳುತ್ತಿರುವಿರಿ. ಕಳೆದುಹೋಗಿರುವ ಅಥವಾ ಮಾರಿಕೊಂಡಿರುವ ನಿಮ್ಮ ಕ್ರಿಯಾಶೀಲತೆಯನ್ನು ದಯವಿಟ್ಟು ಮತ್ತೊಮ್ಮೆ ಪಡೆದುಬನ್ನಿ ಪಾಲನೆಯಾಗಬೇಕಾದ ನಿಯಮಗಳ ಕುರಿತು ಪ್ರತಿಭಟಿಸಿ, ದೇಶಕಾರಣ ನಿಮ್ಮ ಪ್ರತಿಭಟನೆಯ ಗುರಿಯಾಗಬೇಕಾದ್ದು ರಾಜಕಾರಣ ಗುರಿಯಾದದ್ದಕ್ಕೆ ವಿಷಾದವಿದೆ.
ಕೊಟ್ಟ ಕುದುರೆಯನೇರಲರಿಯದೆ ಮತ್ತೊಂದು ಕುದುರೆಯ ಬಯಸುವವ ವೀರನು ಅಲ್ಲ ಶೂರನೂ ಅಲ್ಲ.

#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

ತಿಪ್ಪ, ತಿಪ್ಪು/ಟಿಪ್ಪು

ಓಲೈಕೆ ಇಂದಿನ ರಾಜಕಾರಣಿಗಳಿಗೆ ಎಷ್ಟು ಅನಿವಾರ್ಯವೋ ಅಶೋಕ, ಹರ್ಷ, ಹೊಯ್ಸಳ, ವಿಜಯನಗರ, ಹೈದರಾಲಿ, ಟಿಪ್ಪುಗಳಿಗೂ ಅಷ್ಟೇ ಅನಿವಾರ್ಯವಾಗಿತ್ತು. ಹೈದರಾಲಿ ಹೈದರಾಬಾದನ್ನು ಸೇರಲು ಆತನಿಗೆ ಅಗತ್ಯ ಸೇನಾ ನೆರವು ನೀಡಲು ಅಪಾರ ಸಂಖ್ಯೆಯಲ್ಲಿ ನಾಯಕ ಜನಾಂಗ ಒಡಂಬಡಿಕೆ ಮಾಡಿಕೊಂಡಿತ್ತು. ಹೈದರಾಬಾದ್ ಮಾರ್ಗಮಧ್ಯದಲ್ಲಿ ಬರುವ ಊರುಗಳನ್ನು ದೋಚಿದ ಸಿರಿ ತಮಗೆ ಸೇರಬೇಕೆಂಬುದೇ ಆ ಒಡಂಬಡಿಕೆ. ಅತ್ಯಂತ ನಿರ್ದಾಕ್ಷಿಣ್ಯವಾಗಿ ಹೋರಾಡಿ ವೈರಿಗಳನ್ನು ನಿರ್ನಾಮ ಮಾಡುತ್ತಿದ್ದ ಈ ಜನಾಂಗವನ್ನು ಎದುರು ಹಾಕಿಕೊಳ್ಳದೇ ಅವರನ್ನು ಓಲೈಸಿಕೊಂಡಿರಬೇಕೆಂಬುದನ್ನಾಗಲೇ ಹೈದರಾಲಿ ಕಂಡುಕೊಂಡಿದ್ದನು. ಆ ಓಲೈಕೆಯ ಫಲಶ್ರುತಿಯೇ ಟಿಪ್ಪು ನಾಮ! ನಾಯಕರುಗಳ ಆದ್ಯದೈವ ತಿಪ್ಪೇರುದ್ರನ ಹೆಸರನ್ನು ತನ್ನ ಮಗನಿಗೆ ತಿಪ್ಪ ಎಂದು ಇರಿಸಿದ.
ಮೈಸೂರು ಸೀಮೆಯ ಜನ ಪ್ರೀತಿಪೂರ್ವಕವಾಗಿ ಹೆಸರುಗಳ ಮುಂದೆ "ಉ"ಕಾರವನ್ನು ಸೇರಿಸುತ್ತಾರೆ. ಉದಾಹರಣೆಗೆ ಶಿವನನ್ನು ಶಿವು, ಶಂಕರನನ್ನು ಶಂಕ್ರೂ, ರಂಗ ರಂಗು, ಇತ್ಯಾದಿಯಂತೆ. ಆ ರೀತಿಯಾಗಿ ತಿಪ್ಪ, ತಿಪ್ಪು/ಟಿಪ್ಪು ಆಗಿರಬಹುದೆಂಬುದು ನನ್ನ ಗಟ್ಟಿ ಅನಿಸಿಕೆ.
ಇತಿಹಾಸದ ಅಂದಿನ ಭಾರತದಲ್ಲಿಯೂ, ವಾಸ್ತವದ ಇಂದಿನ ಭಾರತದಲ್ಲಿಯೂ ಜನಮನಸ್ಥಿತಿ ಯಥಾಸ್ಥಿತಿ! ಇನ್ನು ವಸ್ತುಸ್ಥಿತಿಯನ್ನು ವಿಶ್ಲೇಷಿಸದೆ ಇತಿಹಾಸಕಾ(ಕೋ)ರರು ಗುಂಗಿನಲ್ಲಿ ತಥಾಗತ ಬರೆದುದರ ಫಲಶ್ರುತಿಯೇ ಇಂದಿನ ರಂಗಿತರಂಗ ಭಾರತದ ಇತಿಹಾಸ. ಓಲೈಕೆಯೇ ಭಾರತದ ಭದ್ರ ಬುನಾದಿ, ಇದು ಐತಿಹಾಸಿಕ ಸತ್ಯ! ಇದು ನಮ್ಮ ನಿಮ್ಮೆಲ್ಲರ ಡಿಎನ್ಎ.

#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ 

ಸಂವಿಧಾನಗಳು ಉಸಿರಾಡುವ ಜೀವಂತ ದಸ್ತಾವೇಜುಗಳು

ಯಾವುದೇ ದೇಶದ ಸಂವಿಧಾನಗಳು ಉಸಿರಾಡುವ ಜೀವಂತ ದಸ್ತಾವೇಜುಗಳು. ಕಾಲಕ್ಕನುಗುಣವಾಗಿ ಹೊಸತಾಗುತ್ತ ಬದಲಾಗಲೆಂಬ ಉದ್ದೇಶಕ್ಕಾಗೆ ರಚಿಸಲ್ಪಟ್ಟಿವೆ.
ನ್ಯಾಯಾಂಗ, ಶಾಸಕಾಂಗ ಮತ್ತು ಆಡಳಿತ ವರ್ಗ ಸಂವಿಧಾನದ ಭಾಗಗಳನ್ನು ಜಡವಾಗಿರಿಸದೆ ವರ್ತಮಾನದ ಅವಶ್ಯಕತೆಗೆ ತಕ್ಕಂತೆ ಬದಲಾಯಿಸಿ ಕ್ರಿಯಾಶೀಲವಾಗಿರಿಸಬೇಕೆಂಬುದೇ ಸಂವಿಧಾನ ರಚನೆಯ ಮೂಲೋದ್ದೇಶ.
ಜೀವಂತ ಸಮಾಜಕ್ಕೆ ತಕ್ಕಂತೆ ವಿಕಸಿಸುವ ವೈಜ್ಞಾನಿಕ ಅನುಶಾಸನವಿರಬೇಕೇ ಹೊರತು ಶಾಸ್ತ್ರಪುರಾಣಗಳಂತಹ ಜಡಗ್ರಂಥವಲ್ಲ!
ಇದು ವುಡ್ ರೋ ವಿಲ್ಸನ್ 1912ರಲ್ಲೇ ಪ್ರತಿಪಾದಿಸಿದ್ದು.
2018ರ ಪ್ರಕಾಶಿಸುತ್ತಿರುವ ಭಾರತದಲ್ಲಿ ಅರ್ಬನ್ ನಕ್ಸಲ್, ಹರ್ಬಲ್ ನಕ್ಸಲ್, ಕಮ್ಯುನಿಸ್ಟ್ ಮತ್ತು ಜಡ ಸಂವಿಧಾನ ಪ್ರತಿಪಾದಕರು ಫ್ಯಾಸಿಸ್ಟ್ ಅಮೆರಿಕಾದ ಐಫೋನು, ಐಪ್ಯಾಡು, ಫೇಸ್ಬುಕ್, ಗೂಗಲ್ ಬಳಸುತ್ತಾ ಏನನ್ನು, ಹೇಗೆ, ಯಾರಿಗೆ ಪ್ರತಿಪಾದಿಸುತ್ತಿದ್ದಾರೆ?!
ಇವರೆಲ್ಲ ಉದಾರವಾದಿಗಳಲ್ಲ, ಉದಾರವಾದ ಕಮ್ಯುನಿಸ್ಟ್, ನಕ್ಸಲ್, ಜಡ ಸಮಾಜವಾದವಂತೂ ಅಲ್ಲವೇ ಆಲ್ಲ!
ಸದ್ಯದ ಭಾರತದ ತುರ್ತು, ಅಪಹರಣಕ್ಕೊಳಗಾಗಿರುವ ಉದಾರವಾದ ಮತ್ತು ಸ್ಟಾಕ್ ಹೋಮ್ ಸಿಂಡ್ರೋಮಿಗೊಳಗಾಗಿರುವ ಉದಾರವಾದಿಗಳನ್ನು ಈ ಎಡಬಿಡಂಗಿತನದಿಂದ ಬಿಡಿಸುವುದು.
By living and breathing, they mean the Constitution was written as a “dynamic” document; flexible, so it can change with the times. Instead of maintaining a fixed meaning, judges, lawmakers and bureaucrats mold its various clauses and provisions to fit the needs of the day.
“Society is a living organism and must obey the laws of life, not of mechanics; it must develop. All that progressives ask or desire is permission – in an era when ‘development,’ ‘evolution,’ is the scientific word – to interpret the Constitution according to the Darwinian principle; all they ask is recognition of the fact that a nation is a living thing and not a machine.”
- Woodrow Wilson
In 2018, the urban naxals, herbal naxals, communists, and static constitution mongers of India using their fascist American iPhones, iPads, Facebook and Google are preaching whom, what, and why?!?
They are not liberals, liberalism has no affiliation with communism, leftist or naxal thoughts. Need of the hour is to separate liberalism from these proclaimed intellectuals and protect liberals from the Stockholm syndrome!

ಸಿದ್ಧಾಂತಕ್ಕೆ ಅನ್ವಯಿಸದ ಹುಯೆನ್ ತ್ಸಾಂಗ್ ಬಗ್ಗೆ ಎಷ್ಟು ಪುಸ್ತಕಗಳಿವೆ?


Image may contain: 5 people, including Puttaswamy Kempegowda, people smiling, people on stage and people standing
ನಮಸ್ಕಾರ,
ಭಾರತೀಯರಾದ ನಿಮಗೊಬ್ಬ ಚೀನಿ ಸಹೋದ್ಯೋಗಿ ಸಿಗುತ್ತಾನೆ ಎಂದಿಟ್ಟುಕೊಳ್ಳಿ. ಆಗ ನಿಮ್ಮ ಅವನ ಬಗ್ಗೆ ಇರುವ ಸಮಾನ ವಿಷಯ ಎಂದರೆ ಜನಸಂಖ್ಯೆ, ಇಂಡೋ ಚೈನಾ ಯುದ್ಧ, ಕಮ್ಯುನಿಸಂ, ಬಿಟ್ಟರೆ ಹುಯೆನ್ ತ್ಸಾಂಗ್! ಹಾಗಾಗಿ ಹುಯೆನ್ ತ್ಸಾಂಗ್ ಬಗ್ಗೆ ಅವನು ಗೊತ್ತಾ, ಓದಿದ್ದೀಯಾ ಇತ್ಯಾದಿ ಮಾತನಾಡುತ್ತೀರಿ.
ಆ ರೀತಿಯಾಗಿ ಆರಂಭಗೊಂಡ ನನ್ನ ಮೇಜುವಾನಿ ಸಂಭಾಷಣೆ ಪುಸ್ತಕವಾಗಿದೆ.
ನಂತರ ಭಾರತದ ಹುಯೆನ್ ತ್ಸಾಂಗ್ ನೇ ಚೀನಾದ ಝುಎನ್ ಜಿಯಂಗ್ ಎಂದು ಅರಿಯಲು ಒಂದು ತಿಂಗಳು ಬೇಕಾಯಿತು. ನಂತರ ಚೀನೀ ದೃಷ್ಟಾಂತ, ಕಾರ್ಟೂನಗಳು, ಮ್ಯೂಸಿಯಂ ದಾಖಲೆ, ಸಂಗ್ರಹ, ಫೋಟೋಗಳನ್ನೆಲ್ಲ ವಿಂಗಡಿಸಿ ವಿಶ್ಲೇಷಿಸುತ್ತ ನಡೆಯಬೇಕಿತ್ತು. ಕಾರ್ಟೂನ್ ಪ್ರಕಾರ ಈತನಿಗೆ ಮಂಗವೊಂದು ಸಹಾಯ ಮಾಡಿದಂತೆ ಚಿತ್ರಿಸಿ ರಾಮನ ಮಾಡಿದ್ದರು! ಹನುಮಂತ ರಾಮನಿಗೆ ಸಮುದ್ರ ದಾಟಲು ಸಹಾಯಿಸಿದ ರಾಮಾಯಣದಂತೆ, ಕೋತಿಯೊಂದು ಇವನಿಗೆ ಮರುಭೂಮಿ ದಾಟಲು ಸಹಾಯಿಸಿದಂತೆ.
ಆದರೆ ಯಾವಾಗ ಈ ಚೀನೀ ಯಾತ್ರಿಕ ಭಾರತದ ಇತಿಹಾಸಕ್ಕೆ ಅನಿವಾರ್ಯವೆನ್ನುವಷ್ಟು ಪ್ರಮುಖನೆನಿಸಿದನೋ ಆಗ ಈತನ ಬಗ್ಗೆ, ಈತ ದಾಖಲಿಸಿದ ಭಾರತದ ಇತಿಹಾಸದ ಬಗ್ಗೆ ಕುತೂಹಲಕ್ಕಿಂತ ಸಂಶಯ ಮೂಡಿತು. ಈ ಸಂಶಯಕ್ಕೆ ಕಾರಣ, ಚೀನಿಯರೊಂದಿಗಿನ ನನ್ನ ವೃತ್ತಿನಿರತ ಅನುಭವ, ಅವರ ಅನ್ಯಭಾಷಾ ಜ್ಞಾನದ ಅರಿವು, ಮತ್ತು ಚೀನೀಯರ "ತಳ್ಳು" ಪ್ರವೃತ್ತಿಯ ನಿಕಟ ಪರಿಚಯ . ಈ ತಳ್ಳುವ ಪ್ರವೃತ್ತಿ ಭಾರತೀಯರನ್ನೊಳಗೊಂಡಂತೆ ಎಲ್ಲಾ ಏಷಿಯನ್ನರಲ್ಲಿಯೂ ಇದೆ. ಚೀನೀ ರೆಸ್ಟೋರೆಂಟುಗಳಲ್ಲಿ ನಿಮಗೆ ತಂದಿಟ್ಟ ಊಟತಿಂಡಿಯ ಬಗ್ಗೆ ಅನುಮಾನ ಮೂಡಿ ಇದು ಸಸ್ಯಾಹಾರವೇ ಎಂದು ಕೇಳಿದರೆ ಹಿಂದುಮುಂದು ನೋಡದೆ "ಹೌ"ದೆನ್ನುತ್ತಾರೆ. ಒಟ್ಟಾರೆ ಕೊಟ್ಟ, ಮಾರಿದ ವಸ್ತು ಹಿಂದಕ್ಕೆ ಬರಬಾರದು ಎಂಬ ತಳ್ಳುವ ಉದ್ದೇಶದಿಂದ ಕೇಳಿದ್ದಕ್ಕೆಲ್ಲ "ಹೌ"ದೆನ್ನುತ್ತಾರೆ!
ನನ್ನ ಕ್ಲೀಷಾ ಪ್ರವೃತ್ತಿ ಇವನ ಇತಿಹಾಸವನ್ನು ಕೆದಕುವಂತೆ ಮಾಡಿತು. ಮೇಲ್ನೋಟಕ್ಕೆ ಈತ ಇತರೆ ಚೀನಿಯರಂತೆ ತಳ್ಳು ಪ್ರವೃತ್ತಿಯವನಾಗಿರಲಿಲ್ಲವೆಂದು ತಿಳಿಯಿತು. ನಂತರ ಕೆದಕಿದಷ್ಟೂ ಈತನ ನಿಖರತೆ, ಪ್ರಖರತೆ, ಸ್ಪಷ್ಟತೆ ಕಾಣುತ್ತಾ ಸಾಗಿ ಪುಸ್ತಕವಾಯಿತು.
ಬಿಗ್ ಡೇಟಾ, ಬಿಸಿನೆಸ್ ಇಂಟೆಲಿಜೆನ್ಸ್, ಮಷಿನ್ ಲರ್ನ್ನಿಂಗ್ ಎನ್ನುವ ನನಗೆ, ಸಮುದ್ರಮಥನದಿಂದ ಅಮೃತ ಸೃಷ್ಟಿಯಾಯಿತೆಂಬುವ ಪೌರಾಣಿಕ ಕತೆ ಪ್ರಪ್ರಥಮ ಮಾಹಿತಿ ತಂತ್ರಜ್ಞಾನದ ವಿಶ್ಲೇಷಣೆಯ ದೃಷ್ಟಾಂತ ಸೂಚಿಯಾದರೆ, ಹುಯೆನ್ ತ್ಸಾಂಗ್ ಅಗಣಿತ ಮಾಹಿತಿಯನ್ನು ಮಥಿಸಿ, ಭಾರತದ ಇತಿಹಾಸದ ಉಪಯುಕ್ತ ನಿಖರ ಮಾಹಿತಿಯನ್ನು ನೀಡಿ ಮಾಹಿತಿ ವಿಶ್ಲೇಷಣೆಯನ್ನು ಸಾಕಾರಗೊಳಿಸಿದ ಆದಿಪುರುಷನೆನಿಸುತ್ತಾನೆ.
ಹಾಗಾಗಿ ಈತ ಕೇವಲ ಒಬ್ಬ ಬೌದ್ಧಭಿಕ್ಷು, ಸಾಹಸಿ, ವಿದ್ವಾಂಸ, ರಾಜತಾಂತ್ರಿಕ, ಸಂಚಾರಿಯಲ್ಲದೆ ಮಾಹಿತಿ ವಿಶ್ಲೇಷಣೆಯ ಪಿತಾಮಹನೂ ಎನಿಸುತ್ತಾನೆ. ಚಾರ್ಲ್ಸ್ ಬ್ಯಾಬೇಜ್ ಕಂಪ್ಯೂಟರ್ ಪಿತಾಮಹನೆನ್ನಿಸಿದರೆ, ಹುಯೆನ್ ತ್ಸಾಂಗ್ ಮಾಹಿತಿ ವಿಶ್ಲೇಷಣೆಯ ಪಿತಾಮಹ!!!
ಇನ್ನು ಇಪ್ಪತ್ತೈದು ಸಾವಿರ ಪುಸ್ತಕಗಳನ್ನು ನೂರು ರೂಪಾಯಿಗೊಂದರಂತೆ ಮಾರಿ, ಹದಿನೈದು ಪರ್ಸೆಂಟ್ ರಾಯಧನ ಗಳಿಸಿದರೆ ಸಿಗುವುದು ಮೂರುಮುಕ್ಕಾಲು ಲಕ್ಷ! ಯಾವುದೇ ಒಂದು ಸಂಶೋಧನೆಗೆ ಸಂಪನ್ಮೂಲಗಳನ್ನು ಒಟ್ಟುಗೂಡಿಸಲು ತಿರುಗಾಡಿ ವ್ಯಯಿಸುವ ಹಣ, ಶ್ರಮ ಸುಮಾರು ಐದು ಲಕ್ಷಕ್ಕೂ ಹೆಚ್ಚು. ಅದರಲ್ಲಿಯೂ ಸಂಶೋಧನೆ, ಹುಯೆನ್ ತ್ಸಾಂಗನಂತಹ ಅಂತರರಾಷ್ಟ್ರೀಯ ವ್ಯಕ್ತಿ ವಿಷಯವಾಗಿದ್ದರೆ ಇನ್ನೂ ಹೆಚ್ಚು!
ಸರ್ಕಾರಿ ಅನುದಾನಗಳಿಲ್ಲದೆ ಈ ರೀತಿಯ ಪುಸ್ತಕ ಕಷ್ಟ.
ಆದರೆ ಇದು ನನ್ನ ಅರಿವಿನ ಪರಿಧಿಯ ವಿಸ್ತರಿಸಿಕೊಳ್ಳುವ ವೈಯಕ್ತಿಕ ಮೂಲೋದ್ದೇಶದ ಕಾರಣ ಇಲ್ಲಿ ಹಣ ಗೌಣ. ನಾನು ಕಂಡುಕೊಂಡ ಆ ಅರಿವನ್ನು ಸಮಾಜಕ್ಕೆ ಹಂಚಲು ಪುಸ್ತಕವಾಗಿಸಿದಾಗ, ಅದೇ ಸಾಮಾಜಿಕ ಕಳಕಳಿಯ, ಚಿಂತನೆಗಳನ್ನು ಮೀರಿದ ವೈಚಾರಿಕತೆಯ ಸಮಾಜಮುಖಿ ಬಳಗ ಪ್ರಕಟಿಸಲು ಉತ್ಸಾಹ ತೋರಿತು.
ಇಂದು ಸಿದ್ಧಾಂತ ಬದ್ಧ ಕರ್ನಾಟಕದ ಕನ್ನಡದಲ್ಲಿ ಸಿದ್ಧಾಂತಕ್ಕೆ ಜೋಡಣೆಯಾದ, ಲಿಯೋ ಟಾಲ್ಸ್ಟಾಯ್, ಲೆನಿನ್, ಚೆ ಗುವೆರಾ ಮುಂತಾದವರ ಬಗ್ಗೆ ಅನೇಕ ಪುಸ್ತಕಗಳಿವೆ. ಆದರೆ ಭಾರತದ ಇತಿಹಾಸದ ಅನಿವಾರ್ಯನಾದ, ಸಿದ್ಧಾಂತಕ್ಕೆ ಅನ್ವಯಿಸದ ಹುಯೆನ್ ತ್ಸಾಂಗ್ ಬಗ್ಗೆ ಎಷ್ಟು ಪುಸ್ತಕಗಳಿವೆ?
ಇನ್ನು ಏಳನೇ ಶತಮಾನದ ಅಂದಿನ ಚೀನಾ/ಭಾರತಕ್ಕೂ ಇಂದಿನ ಇಪ್ಪತ್ತೊಂದನೇ ಶತಮಾನದ ಆ ದೇಶಗಳಿಗೂ ವ್ಯತ್ಯಾಸವಿದೆಯೇ?
ಆಗಿನಿಂದಲೂ ಚೈನಾದಲ್ಲಿ ಚಕ್ರಾಧಿಪತ್ಯ. ಈಗಲೂ ಚುನಾಯಿತ ಚಕ್ರಾಧಿಪತ್ಯ!
ಅಂದು ಭಾರತದಲ್ಲಿ ರಾಜರು, ಸರದಾರರು, ಸಾಮಂತರು, ಪಾಳೆಗಾರರು. ಈಗಲೂ ಚುನಾಯಿತ ರಾಜರ, ಸಾಮಂತರ, ಪಾಳೆಗಾರರ ಊಳಿಗಮಾನ್ಯ, ಚುನಾಯಿತ ಊಳಿಗಮಾನ್ಯ Elected feudalism!
ಇನ್ನು ಸಿದ್ದಾಂತಗಳ ಮೀರಿದ ವೈಚಾರಿಕ ಚಿಂತನೆಯ ಕಾಡುಸಿದ್ದರಾದ ನನ್ನ ಮತ್ತು ಸಮಾಜಮುಖಿ ಬಳಗದ ಒಂದು axis of civil ಏರ್ಪಟ್ಟು ಹುಯೆನ್ ತ್ಸಾಂಗ್ ಪುಸ್ತಕ ಇಂದು ಬಿಡುಗಡೆಗೊಂಡಿದೆ.
ನಿಮ್ಮ ಪ್ರೋತ್ಸಾಹ ನಮಗಿರಲಿ.
ಧನ್ಯವಾದಗಳು.