ಅಸಹಿಷ್ಣ ಭಾರತ

“ತಮ್ಮದೇ ಸರಿ ಅಂದುಕೊಳ್ಳುವ 'ಬಲಪಂಥೀಯರಿಗೆ', ಹಿಂದುಗಳಾಗಲಿ ಮುಸಲ್ಮಾನರಾಗಲಿ, ಸಾಮಾಜಿಕ ಕಟ್ಟುಪಾಡುಗಳು ಸ್ವಲ್ಪ ಸಡಿಲವಾದರೂ ಭಯವಾಗುತ್ತದೆ. ಯಾಕೆಂದರೆ ಇದರಿಂದ ಯಾವುದೇ ಸಾಂಪ್ರದಾಯಿಕ ಧರ್ಮಗಳ ಶ್ರೇಷ್ಠತೆಯ ಮುದ್ರೆಗಳಾದ ಪುರಾತನ ಪಿತೃಪ್ರಾಧಾನ್ಯ ಮತ್ತು ಮೇಲ್ಗಾರಿಕೆಗಳು ಅಲ್ಲಾಡತೊಡಗುತ್ತವೆ.

ಮಹಿಳೆಯರು ತಮ್ಮ ಆಯ್ಕೆಗಳನ್ನ ತಾವೇ ಮಾಡಿಕೊಳ್ಳುತ್ತಾರೆ ಅಥವಾ ಹಾಗೆ ಮಾಡುವ ಸ್ವಾತಂತ್ರವನ್ನು ಕೇಳುತ್ತಾರೆ ಅಂದಾಗ ಪ್ರತಿಯೊಂದು ಧರ್ಮದ ಮೂಲಗಳಾದ ಪಿತೃಪ್ರಧಾನತ್ವ ಮತ್ತು ಸ್ತ್ರೀ ವಿರುದ್ಧದ ಪೂರ್ವಗ್ರಹಗಳಿಗೆ ಸವಾಲು ಹಾಕಿದಂತಾಗುತ್ತದೆ.”

ಇದು ಚಿದಾನಂದ ರಾಜಘಟ್ಟ ಗೌರಿ ಲಂಕೇಶ್ ಕುರಿತು ಬರೆದಿರುವ "ಇಲ್ಲಿಬರಲ್ ಇಂಡಿಯಾ" ಪುಸ್ತಕದಿಂದ.

ಪ್ರಸ್ತುತ ಭಾರತದಲ್ಲಿ ವೈಚಾರಿಕತೆ ಹೇಗೆ ಎಡ, ಬಲ ಎಂಬ ಸಿದ್ಧಾಂತಗಳಿಗೆ ಕಟ್ಟುಬಿದ್ದು ನರಳುತ್ತಿದೆ ಎಂಬುದನ್ನು ಈ ಪುಸ್ತಕದಿಂದ ಅವಲೋಕಿಸೋಣ. ಬಲಪಂಥವನ್ನು ಮೋದಿ ಭಕ್ತರೆಂದು ಬ್ರ್ಯಾಂಡು ಮಾಡಿರುವ ಎಡಪಂಥೀಯರು ಈ ಭಕ್ತಿಯಿಂದ ವಿಮುಕ್ತಿ ಹೊಂದಿದ್ದಾರೆಯೇ? ಈ ಪಂಥಗಳು ಪರಸ್ಪರ ದ್ವಂದನಿಲುವಿನಲ್ಲಿ ತಮ್ಮನ್ನು ತಾವೇ ಬಿಚ್ಚಿಕೊಳ್ಳುತ್ತಿದ್ದಾರೆ. ಬಲಪಂಥೀಯರು ಮುಗ್ಧಭಕ್ತರೆಂದು ಮನ್ನಿಸೋಣ, ಏಕೆಂದರೆ ಅವರನ್ನು ಮುಗ್ದಭಕ್ತರೆಂದು ಎಡಪಂಥವೇ ಸಾರಿ ಹೇಳುತ್ತಿದೆ. ಆದರೆ ಬುದ್ಧಿಜೀವಿಗಳೆಂಬ ಎಡಪಂಥೀಯರು!

ಈ ಪುಸ್ತಕದಲ್ಲಿ ಆದಿಯಿಂದ ಅಂತ್ಯದವರೆಗೆ ಒಂದು ಗುಂಪನ್ನು ಮೆಚ್ಚಿಸಲು ಬರೆದಂತಿದೆ. ಪುಸ್ತಕದ ಮೇಲಿನ ಪ್ಯಾರಾದಲ್ಲಿ "ಬಲಪಂಥೀಯ" ಪದವನ್ನು ಬಿಟ್ಟು ಓದಿ ನೋಡಿದರೆ ತೂಕವೆನಿಸುವ  ಪ್ಯಾರಾ, ಆ ಪದದಿಂದ ತೂಕ ಕಳೆದುಕೊಂಡು ಬಿಡುತ್ತದೆ. ಅನವಶ್ಯಕವಾಗಿ ಯಾರನ್ನೋ ಮೆಚ್ಚಿಸಲು "ಬಲಪಂಥೀಯ" ಪದವನ್ನು ತುರುಕಿದಂತಿದೆ. ಏಕೆಂದರೆ ಬಲಪಂಥೀಯರು ಈ ಪುಸ್ತಕವನ್ನು ಮೂಸಿಯು ನೋಡಲಾರರೆಂದು ಪೂರ್ವಾಲೋಚಿಸಿ, ಎಡಪಂಥೀಯರ ಮಾರುಕಟ್ಟೆಗೆ ತಕ್ಕಂತೆ ಬರೆಯಲಾಗಿದೆ. ಈ ರೀತಿಯ ಸಾಕಷ್ಟು "ಮೆಚ್ಚಿಸುವ" ಅಂಶಗಳೇ ಈ ಪುಸ್ತಕದಲ್ಲಿ ತುಂಬಿದೆ. ಅದೇ ರೀತಿ "ಪಿತೃಪ್ರಧಾನ". ಭಾರತದಲ್ಲಿ ಹಿರಿಯ ಗಂಡುಮಗನಿಗೆ ಪಿತ್ರಾರ್ಜಿತ ಆಸ್ತಿ ಎಂದು ಆರಂಭಗೊಂಡ ವ್ಯವಸ್ಥೆ, ಮಂಗಮಾನವ ಮರದಿಂದ ಇಳಿದು ಕೃಷಿಯಲ್ಲಿ ತೊಡಗಿನಂದಿನಿಂದ ವಿಕಾಸಗೊಂಡ ವ್ಯವಸ್ಥೆ. ಅದು ನಂತರ ಎಲ್ಲಾ ಗಂಡುಮಕ್ಕಳಿಗೆ ಎಂದಾಗಿ, ಕಳೆದ ಇಪ್ಪತ್ತನೇ ಶತಮಾನದಲ್ಲಿ ಅಂದರೆ ನಲವತ್ತೈದು ವರ್ಷಗಳ ಹಿಂದೆ ಹೆಣ್ಣು ಮತ್ತು ಗಂಡುಮಕ್ಕಳಿಗೆ ಸಮಾನ ಹಕ್ಕಿದೆ ಎಂದಾಗಿದೆ. ಹೀಗಿದ್ದಾಗ ಪಿತೃಪ್ರಧಾನ ವ್ಯವಸ್ಥೆ ಕಾನೂನಿನ ಪ್ರಕಾರ ಇಲ್ಲವಾಗಿದೆ. ಆದರೆ "ಪಿತೃಪ್ರಧಾನ" ಪದ ಎಡಪಂಥೀಯರ ಕಿವಿಗೆ ಮಧುರ ಸಂಗೀತ! ಹಾಗಾಗಿ ಆ ಗುಂಪು ತಲೆದೂಗುವ ಅಂಶಗಳು ಸಾಕಷ್ಟಿವೆ.

ಇನ್ನು ಕೇವಲ ಗೌರಿಯ ಓದುಗರಾಗಿ ಆಕೆಯ ಬಗ್ಗೆ ತಿಳಿದುಕೊಂಡಿರುವವರಿಗೆ ಅಥವಾ ಆಕೆಯ ಆಸ್ಥಾನದಲ್ಲಿದ್ದು ಹೊರಬಂದೋ ಯಾ ನೂಕಿಸಿಕೊಂಡಿದ್ದ ಬರಹಗಾರರು ಆಕೆಯ ಕುರಿತು ಬರೆದ ಬರಹಗಳಿಂದ ಆಕೆಯ ವ್ಯಕ್ತಿತ್ವದ ಅರಿವು ಸಾಕಷ್ಟು ಜನರಿಗೆ ತಿಳಿದಿದೆ.

ಅವುಗಳಲ್ಲಿ ಪ್ರಮುಖವಾಗಿ ತಾನು ಬರೆದದ್ದೇ ಸರಿ, ಅದನ್ನು ಪ್ರಶ್ನಿಸುವವರ ವಿರುದ್ಧ ದ್ವೇಷ ಕಾರುವುದು. ತನ್ನ ಬಳಗದ ಲೇಖಕರು ಯಾರಾದರೂ ಆಕೆಗಿಂತ ಚಂದ ಬರೆದರೆ ಅಂತವರ ವಿರುದ್ಧ ತನ್ನ ಭಯಾನಕ ಟ್ಯಾಬ್ಲಾಯ್ಡ್ ಲೇಖನಿಯಿಂದ ಬಾಯಿ ಮುಚ್ಚಿಸುತ್ತಿದ್ದುದು, #JustAsking ನ ಗೆಳೆಯರಷ್ಟೇ ಅಲ್ಲದೆ ಇಡೀ ನಾಡಿಗೇ ತಿಳಿದಿತ್ತು.  ಇಂತಹ ಸಾಮಾನ್ಯ ವಿಷಯಗಳ ಕುರಿತು ತಮ್ಮ ಮಾಜಿ ಶ್ರೀಮತಿಯ ಬಗ್ಗೆ ದೂರದಲ್ಲಿದ್ದ ಲೇಖಕರಿಗೆ ಗೊತ್ತಿರಲಿಲ್ಲವೆನಿಸುತ್ತದೆ! ಹಾಗಾಗಿ ಆ ಕುರಿತು ಏನೂ ಬರೆದಿಲ್ಲವೆಂದುಕೊಳ್ಳಬಹುದಿತ್ತು. ಅದಲ್ಲದೆ ಲೇಖಕರು ಬೇರೆ ಯಾವುದೋ ರಂಗದಲ್ಲಿದ್ದಿದ್ದರೆ ಕೂಡಾ ಈ ವಿಷಯಗಳ ಅರಿವಿಲ್ಲವೆಂದುಕೊಳ್ಳಬಹುದಿತ್ತು. ಆದರೆ ಲೇಖಕರು ಪತ್ರಿಕಾರಂಗದಲ್ಲಿ ದೇಶಾದ್ಯಂತ ಖ್ಯಾತರಿದ್ದಾರೆ! ತಾವು ಗೌರಿಯಿಂದ ಬೇರೆಯಾದರೂ, ಒಳ್ಳೆಯ ಸ್ನೇಹಿತರಂತೆ ಪರಸ್ಪರ ಸಂಪರ್ಕದಲ್ಲಿದ್ದೆವೆಂದು ಅವರೇ ಹೇಳಿಕೊಂಡಿದ್ದಾರೆ.

ವಿಷಯಗಳ ಆಳ ಹರಿವು, ವಿಶ್ಲೇಷಣಾ ತಂತ್ರಗಳ ಅರಿವಿಲ್ಲದೆ, ಧೀರ್ಘಾಲೋಚನೆಯ ದೃಷ್ಟಿಕೋನವಿರದೆ, ಲಂಕೇಶರು ಎಂತಹವರನ್ನು ಕೊಂಚ ದೂರದಲ್ಲಿಟ್ಟಿದ್ದರೋ ಆ ಎಲ್ಲರನ್ನೂ ಗೌರಿ ತಲೆಯ ಮೇಲೆ ಕೂರಿಸಿಕೊಂಡಿದ್ದರು. ಭಟ್ಟಂಗಿಗಳ ಕೋಡಂಗಿತನಕ್ಕೆ ಬಲಿಯಾಗುತ್ತ ಗೌರಿ ಹಂತ ಹಂತವಾಗಿ ಕುಗ್ಗುತ್ತ, ತಾನು ಕುಗ್ಗುತ್ತಿಲ್ಲವೆಂದು ಸಾರಲು ಪ್ರಚಾರದ ಹಪಾಹಪಿಯಲ್ಲಿ ವೈರತ್ವದ ಸುಂಟರಗಾಳಿಯನ್ನು ಎಬ್ಬಿಸುತ್ತ, ತೊಡೆತಟ್ಟಿ ಸಂಪ್ರದಾಯವಾದಿಗಳನ್ನು ರೊಚ್ಚಿಗೆಬ್ಬಿಸಿ ಕಡೆಗೆ ಅದಕ್ಕೇ ಬಲಿಯಾದ "ಪರಿ"ಯ, ಉದಾರವಾದದ ಮುಕ್ತ ಅಂಶಗಳಿರುವ, ತಮ್ಮಿಬ್ಬರ ಪ್ರೇಮ, ಪ್ರಣಯ, ಜಗಳ, ಜಿಪುಣತನ, ಧಾರಾಳತನಗಳನ್ನೊಳಗೊಂಡ Tell All ಪುಸ್ತಕ ಇದಾಗಿರಬಹುದೆಂಬ ನಿರೀಕ್ಷೆಯನ್ನಿಟ್ಟುಕೊಂಡಿದ್ದೆ. 

ಆದರೆ ಆಕೆಯ ಆ ಎಲ್ಲಾ ವಿಕ್ಷಿಪ್ತ ವ್ಯಕ್ತಿತ್ವದ ಒಳನೋಟಗಳನ್ನು ಕೈಬಿಟ್ಟು ದಿವಂಗತರಾದವರೆಲ್ಲ ದೇವರೆಂಬಂತೆ ಸ್ತುತಿಸುವ ಗೌರಿಪಾರಾಯಣ ಗ್ರಂಥ ಇದಾಗಿಬಿಟ್ಟಿದೆ. ದೇವಿಯೊಬ್ಬಳು ಬಲಪಂಥೀಯ, ಪಿತೃಪ್ರಧಾನ, ಅಧ್ಯಾತ್ಮವೆಂಬ ರಾಕ್ಷಸರುಗಳನ್ನು ಹೇಗೆ ಕಮ್ಯುನಿಸಂ, ಲಿಬರಲಿಸಂ ಶಸ್ತ್ರಗಳ ನಂಬಿ ಹೋರಾಡಿದಳೆಂಬ ಅಂಶಗಳ ವೈಭವವಿದೆ.

ದೇಶ ಸುತ್ತಿ ಕೋಶ ಓದಿ ವೈಚಾರಿಕ ಜಾಗತೀಕರಣದ ಬಗ್ಗೆ ಬರೆಯುವ ಉದ್ಯೋಗದಲ್ಲಿರುವವರಿಗೆ, ಗೌರಿ ಪ್ರತಿಪಾದಿಸುತ್ತಿದ್ದ ನಕ್ಸಲಿಸಮ್, ಕಮ್ಯುನಿಸಂಗಳು  ಜಾಗತಿಕವಾಗಿ ಏನಾಗಿವೆಯೆಂದು ತಿಳಿಯದೆ? ಪಿತೃಪ್ರಧಾನ ವ್ಯವಸ್ಥೆ ಭಾರತೀಯ ಕಾನೂನಿನಲ್ಲಿ ನಲವತ್ತೈದು ವರ್ಷಗಳ ಹಿಂದೆಯೇ ಇತಿಹಾಸವಾಗಿದೆ ಎಂಬುದು ಅರಿಯದೆ? ಒಬ್ಬ ಗಾಢ ಅನುಭವ, ವಿಶ್ಲೇಷಣ ಪ್ರತಿಭೆ, ಪಂಥೀಯ ಜ್ಞಾನ, ಜಾಗತಿಕ ವಿದ್ಯಾಮಾನಗಳ ಅರಿವಿರುವ ವಿಚಾರವಂತನೆಂದು ಬಿಂಬಿಸಿಕೊಂಡಿರುವ ಲೇಖಕ, ಭಾವನೆಗಳ ಬೆನ್ನತ್ತಿಯೋ ಅಥವಾ ಇನ್ಯಾವುದೋ ಪ್ರಭಾವಕ್ಕೊಳಗಾದರೆ ಏನಾಗಬಹುದೋ ಅದಾಗಿ ಈ ಪುಸ್ತಕ ಏಕಪಕ್ಷೀಯವೆನಿಸುತ್ತದೆ.

ಯಾರು ಕಾರಣರೋ ಅವರನ್ನು ಕೇಳದ ಜಸ್ಟ್ ಅಸ್ಕಿಂಗ್ ಎಂಬ ಜಾಣಮರೆವಿನ ಬಡಬಡಿಕೆಯನ್ನು ಚಳುವಳಿ ಎನ್ನುವ, "ಬಂಡವಾಳಶಾಹಿ" ದೇಶದಲ್ಲಿದ್ದು ಗೌರಿಯ ಸಾವಿನ ಅನುಕಂಪವನ್ನು ಬಂಡವಾಳ ಮಾಡಿಕೊಂಡು,  ಬಿಸಿ ಆರುವ ಮುನ್ನ ತಮ್ಮ ರೊಟ್ಟಿ ಬೇಯಿಸಿಕೊಳ್ಳುವ ಯಾದಿಯಲ್ಲಿ, ಗೌರೀವೃತ ಕೈಗೊಂಡಿರುವವರ ಭಕ್ತಿಯನ್ನು ನಗದಾಗಿಸಿಕೊಳ್ಳಲು ಪುಸ್ತಕ ಮಾರಿಕೊಳ್ಳುತ್ತಿದ್ದಾರೆಂಬ ಅಪವಾದವನ್ನು ಅದೇ ಗೌರೀವೃತನಿರತರ ಪಡೆ ಗುಸುಗುಸು ಹಬ್ಬಿಸಿದೆ.

ಈ ಗುಸುಗುಸುವಿನ ಹಿನ್ನೆಲೆ, ಮತ್ತು ಚಿಂತಕ ಭಗವಾನರನ್ನು ಒಟ್ಟಾಗಿ ದೂಷಿಸಲು ಶುರುಹಚ್ಚಿಕೊಂಡ ಬುದ್ಧಿಜೀವಿಗಳ ತಲೆಯಲ್ಲಿ ಅದ್ಯಾವ ನವ್ಯ ಚಿಂತನೆ ಮೂಡುತ್ತಿದೆಯೋ! ಬಹುಶಃ ಮೃದುಹಿಂದುತ್ವವನ್ನು ಅಪ್ಪಿಕೊಳ್ಳಿರೆಂದು ಹೈಕಮಾಂಡ್ ವಿಶ್ವವಿದ್ಯಾಲಯದ ಆಜ್ಞೆ ಇರಬಹುದು. ಏಕೆಂದರೆ ಭಗವಾನರ ಈ ಕುಚೋದ್ಯದ ಪುಸ್ತಕ ಹೊಸದಲ್ಲ! ಇದು ಅವರೇ ತಿಳಿಸಿದಂತೆ ಹಳೆಯ ಪುಸ್ತಕದ ಎರಡನೇ ಮುದ್ರಣ. ಮೊದಲ ಮುದ್ರಣದಲ್ಲಿ ಜೊತೆಯಿದ್ದ ಬುದ್ಧಿಜೀವಿಗಳೆಲ್ಲ ಎರಡನೇ ಮುದ್ರಣದ ಹೊತ್ತಿಗೆ ಅವರನ್ನು ಕೈಬಿಟ್ಟಿದ್ದಾರೆ. ಏಕೆ!?!
–----

 ಭಗ"ವಾನರ"ರಿಗೆ ರಾಮ ಚಾತುರ್ವರ್ಣ ಪಾಲಕ ಯಾ ರಕ್ಷಕನಾಗಿದ್ದ ಎಂದರೆ ಸರ್ವೇಜನೌ ಸುಖೀನೌಭವಂತು ಎಂದು ಅರಿಯುವಷ್ಟು ತಿಳುವಳಿಕೆಯಿಲ್ಲವೇ? ಏಕೆಂದರೆ ಆ ಕಾಲದಲ್ಲಿದ್ದುದು ಎಲ್ಲಾ ಜನಗಳನ್ನೊಳಗೊಂಡ ನಾಲ್ಕೇ ನಾಲ್ಕು ವರ್ಣಗಳು! ಮತ್ತು ಆ ವರ್ಣಗಳು ಹುಟ್ಟಿನಿಂದ ನಿರ್ಧಾರವಾಗುತ್ತಿರಲಿಲ್ಲ. ಅಂದರೆ ರಾಮ ಎಲ್ಲಾ ಜನಗಳ ಪಾಲಕ ಯಾ ರಕ್ಷಕ ಎಂದರ್ಥ. ಕಾಲಕ್ಕೂ, ಕಲರ್ರಿಗೂ (ವರ್ಣ), ವ್ಯತ್ಯಾಸವರಿಯದ ಈ ಸುಬುದ್ಧಿ ಕರ್ನಾಟಕದ ಅಪ್ರತಿಮ ಬುದ್ದಿ! ಕಾಲದ ಜೊತೆಗೆ ಅವರ ಜೊತೆಗಾರರು ಕಲರ್ ಬದಲಾಯಿಸಿದ್ದು ಅವರ ದುರದೃಷ್ಟ. ಅವರ ಸಂಶೋಧನೆಯ ಬಗ್ಗೆ ಎರಡು ಮಾತಿಲ್ಲ. ಆದರೆ ಅವರದನ್ನು ತಳುಕು ಹಾಕಿ ಮಂಡಿಸುವ ಕುಚೋದ್ಯ, ಪ್ರಚಾರಪ್ರಿಯತೆಯ ಹಸಿವು ಪ್ರಶ್ನಾರ್ಹ. ರಾಮನನ್ನು ಮತ್ತು ರಾಮಭಕ್ತ ಗಾಂಧಿಯನ್ನು ವಿರೋಧಿಸುವ ಭಗವಾನರು, ರಾಮಾಯಣದರ್ಶನಂ ಬರೆದು ಜ್ಞಾನಪೀಠ ಪಡೆದ ಕುವೆಂಪುರನ್ನು ಮಾತ್ರ ತಮ್ಮ ಅದರ್ಶವೆನ್ನುತ್ತಾರೆ, ಏಕೆ?!?! 

ಇರಲಿ, ಒಟ್ಟಾರೆ ತಲೆ ಗಟ್ಟಿಯಿದೆಯೆಂದು ಬಂಡೆಗೆ ಚಚ್ಚಿಕೊಳ್ಳಲು ಉತ್ತೇಜಿಸಿದ ಗೌರಿಯ just asking ಮಿತ್ರರೆಲ್ಲರೂ ಆಕೆಯ ಕೊಲೆಗೆ ಕಾರಣರು. ಸಮಾಜದ ಸ್ವಾಸ್ಥ್ಯವನ್ನು ಕೆಡಿಸದೇ ವೈಚಾರಿಕತೆಯ ಮಂಡನೆ ಸಾಧ್ಯವೇ ಇಲ್ಲವೆಂಬಂತೆ ಬಲಪಂಥೀಯರ ಮೇಲೆ ಯುದ್ಧ ಸಾರಲು ಗೌರಿಯನ್ನು ದಾಳವಾಗಿ ಬಳಸಿಕೊಂಡ ಈ ಎಲ್ಲಾ ಬುದ್ದಿಜೀವಿಗಳು, ಅಂದಿನ ರಾಜ್ಯಸರ್ಕಾರ, ರಾಜಕಾರಣಿಗಳು, ಮಾಧ್ಯಮಗಳೆಲ್ಲವೂ ಆಕೆಯ ಹತ್ಯೆಗೆ ಕಾರಣೀಭೂತರು.  ಡಚ್ ಪತ್ರಿಕೆ ಜಿಲ್ಲೆನ್ಡ್ ಪೋಸ್ಟನ್ ಪ್ರವಾದಿಯ ಚಿತ್ರವನ್ನು ಪ್ರಕಟಿಸಿದ್ದುದು ಹಿಂಸೆಗೆ ಪ್ರಚೋದನೆಯೋ, ಹಾಗೆಯೇ ಹಿಂದೂ ಧರ್ಮದ ಅಪ್ಪ ಅಮ್ಮ ಎಂದೆಲ್ಲಾ ಹೀಯಾಳಿಸಿದ್ದು ಕೂಡಾ ಪ್ರಚೋದನಕಾರಿಯೇ ಎಂದು ಎಡಪಂಥೀಯರಿಗೆ ಅನ್ನಿಸಲಿಲ್ಲವೇ!

ಸಮಾಜ, ಸಂಘಟನೆ, ಸಮೂಹವೆಂದು ಹೋರಾಡುವ ಈ ಬುದ್ಧಿಜೀವಿಗಳಿಗೆ ಆರ್ಯ/ಅನಾರ್ಯರ ಬಹುಸಮಾಜ ಸಂಘಟಿತವಾಗಿ ವಿಕಸಿಸಿದ ಸಂಸ್ಕೃತಿಯ ರೂಪವೇ ಹಿಂದೂಧರ್ಮ ಎನಿಸದಿದ್ದುದು ಅವರ ಬೌದ್ಧಿಕ ವಿಕಾಸವನ್ನೇ ಪ್ರಶ್ನಿಸುತ್ತದೆ.

ಇನ್ನು ಈ ಸೆಲೆಬ್ರಿಟಿಗಳಿಗೇ ಭದ್ರತೆಯಿಲ್ಲ, ದೇಶ ಬಿಟ್ಟು ಹೋಗಬೇಕೆಂದೆನಿಸಿದರೆ ನಮ್ಮ ನಿಮ್ಮಂಥ ಶ್ರೀಸಾಮಾನ್ಯರು ಬಾಡಿಗಾರ್ಡುಗಳನ್ನಿಟ್ಟುಕೊಂಡು ಆಫೀಸು, ಶಾಪಿಂಗು, ಹೋಟೆಲು, ಸಿನಿಮಾಗಳಿಗೆ ಹೋಗುವಂತಹ ಪರಿಸ್ಥಿತಿ ಇರಬೇಕಿತ್ತು. ಹಾಗಿದೆಯೇ? ನಿಮ್ಮ ಬೀದಿಗಳಲ್ಲಿ ಕರ್ಫ್ಯೂ ಇದೆಯೇ? ನಿಮ್ಮ ನಿಮ್ಮ ಬೀದಿಗಳಲ್ಲಿ ಕೊನೆಯ ಬಾರಿಗೆ ಕರ್ಫ್ಯೂ ಎಂದಿತ್ತು? ಚಿಂತಕರಿಗೆ ತಮ್ಮ ಅಭಿಪ್ರಾಯಗಳನ್ನು ನಿರ್ಭಿಡೆಯಿಂದ ಹೇಳುವ ಸ್ವಾತಂತ್ರ್ಯವಿದ್ದೇ ಇದೆ. ಆದರೆ ಅದನ್ನು ನಿಮ್ಮ ಧರ್ಮಕ್ಕೆ ಅಪ್ಪ ಇಲ್ಲ ಅಮ್ಮ ಇಲ್ಲ ಎಂಬುವಂತಹ ಕೊಳಕು ಭಾಷೆಯಲ್ಲಿ ಪ್ರಚೋದಿಸಿದರೆ  ಪರಿಣಾಮ ಕೂಡಾ ಕೊಳಕಾಗಿಯೇ ಇರತ್ತದಲ್ಲವೇ. ಇಂತಹ ಕೊಳಕು ಜಗಳಗಳನ್ನು ಸಾಕಷ್ಟು ಬೀದಿಗಳಲ್ಲಿ ನಿಮ್ಮ ದಿನನಿತ್ಯ ಜೀವನದಲ್ಲಿ ಕಂಡಿರುತ್ತೀರಿ. ಅಭಿಪ್ರಾಯಗಳ ಮಂಡನೆಯ ರೀತಿ, ಅಂಶ, ಸ್ಪಷ್ಟತೆ ಮುಖ್ಯವಾಗಬೇಕೇ ಹೊರತು ಪ್ರಚೋದನೆಯಲ್ಲ. "ಭಾರತವೆಂಬೋ ಹುಚ್ಚಾಸ್ಪತ್ರೆಯಲ್ಲಿ", ಮತ್ತು "ಕರ್ನಾಟಕವೆಂಬೋ ಕಮಂಗಿಪುರದಲ್ಲಿ" ಎಂಬ ಹ್ಯಾಷ್ಟ್ಯಾಗ್ ಬಳಸುವ ನನಗೆ ಇದುವರೆಗೆ ಯಾವುದೇ ಬೆದರಿಕೆಗಳು ಬಂದಿಲ್ಲ. ನನ್ನೆಲ್ಲ ಅನಿಸಿಕೆಗಳನ್ನು ನಿರ್ಭಿಡೆಯಿಂದ ಬರೆದಿದ್ದೇನೆ.  ಆದರೆ ಇದುವರೆಗೆ ನನಗ್ಯಾವ ಬೆದರಿಕೆಗಳು ಬಂದಿಲ್ಲವೆಂದರೆ ನೀವು ನಿಮ್ಮ ಅಭಿಪ್ರಾಯಗಳನ್ನು ನಿರ್ಭಿಡೆಯಿಂದ ಹೇಳಬಹುದಾದ ವಾತಾವರಣವಿದೆಯೆಂದಲ್ಲವೇ!

ಭಾರತದ ಎಡಪಂಥೀಯರು, ಸಮಾಜವಾದ, ಕಮ್ಯುನಿಸಂ, ನಕ್ಸಲಿಸಮ್ ಭಜನೆಗಳನ್ನು ಮಾಡುತ್ತಾ ಹಣಕಾಸಿನ ಐಶ್ವರ್ಯ, ಅಂತಸ್ತುಗಳ ಆರಮನೆಯ ಬಂಡವಾಳಶಾಹಿತ್ವವನ್ನು ಅಪ್ಪಿಕೊಂಡಿದ್ದಾರೆ. ಅಂದ ಹಾಗೆ ಈ ವಿಚಾರವಂತರ ಕೈಯಲ್ಲಿರುವ ಐಫೋನು ಬಂಡವಾಳಶಾಹಿ ಅಮೆರಿಕಾದ್ದು! ಇವರ ಟೀಶರ್ಟುಗಳ ಮೇಲೆ ರಾರಾಜಿಸುವ ಚೆ ಗುವೇರಾ ನ ಕ್ಯೂಬಾದಲ್ಲಿ ಸೆಲ್ ಫೋನು ಬಿಡಿ, ಟಿವಿ ಕೂಡಾ ಮೊನ್ನೆಯವರೆಗೆ ಇರಲಿಲ್ಲ.

ಇನ್ನು ಭಾರತದ ಎಡಪಂಥೀಯರ ಆರಾಧ್ಯದೈವ ಕೇರಳದ ಮುಖ್ಯಮಂತ್ರಿ ಪಿಣರಾಯಿ ಕೂಡಾ ತಾನು ಕಮ್ಯುನಿಸ್ಟನೆಂದು ಕಮ್ಯುನಿಸ್ಟ್ ಚೈನಾ/ರಷ್ಯಾ/ಕ್ಯೂಬಾಕ್ಕೊ ತಮ್ಮ ಚಿಕಿತ್ಸೆಗೆ ತೆರಳದೆ ಬಂಡವಾಳಶಾಹಿ ಅಮೆರಿಕಾಕ್ಕೆ "ತಾನು ಕಮ್ಯುನಿಸ್ಟನಲ್ಲ"ವೆಂದೇ ಅರ್ಜಿ ಹಾಕಿ ಚಿಕಿತ್ಸೆಗೆ ಬರಲಿದ್ದಾರೆ. ಅಮೆರಿಕೆಗೆ ಬರುವ ಎಲ್ಲರೂ ತಾವು ಕಮ್ಯುನಿಸ್ಟರಲ್ಲವೆಂದೇ ಅರ್ಜಿ ಹಾಕಿ ಬರಬೇಕು. ನಮ್ಮ ಕಮ್ಯುನಿಸ್ಟ್ ನಾಯಕರು ಅಮೆರಿಕಾಕ್ಕೆ ಭೇಟಿ ಕೊಟ್ಟಿದ್ದಾರೆಂದರೆ ಅವರೆಲ್ಲಾ ಸುಳ್ಳರೆಂದೇ ಪ್ರಮಾಣಿಸಿದಂತೆಯೇ!

ಇತ್ತ ಬಂಡವಾಳಶಾಹಿ ಬಲಪಂಥೀಯರು ಧರ್ಮ, ಜಾತಿ ಜನಾಂಗೀಯ ಸಮಾನತೆ, ಮಂದಿರ ನಿರ್ಮಾಣದಂತಹ ಬಂಡವಾಳ ನಷ್ಟದ ಸಮಾನ ಕಾನೂನುಗಳಿಗೆ ಹೋರಾಡುತ್ತಿದ್ದಾರೆ. ಬಲಪಂಥೀಯರ ಬಗ್ಗೆ ಎಡಪಂಥೀಯರೇ ಸಾಕಷ್ಟು ದಿನನಿತ್ಯ ತುತ್ತೂರಿ ಊದುತ್ತಿರುವುದರಿಂದ ಹೆಚ್ಚಿಗೆ ಹೇಳಬೇಕಾದ್ದಿಲ್ಲ. ಒಟ್ಟಾರೆ ಭಾರತದ ವೈಚಾರಿಕತೆಯ ಬಲಪಂಥೀಯರು ಮತ್ತು ಎಡಪಂಥೀಯರು ಹೇಗೆ ತಮ್ಮ ತಮ್ಮ ಸಿದ್ಧಾಂತಗಳಿಗೆ ಬದ್ಧತೆ ತೋರುತ್ತ, ಆದರೆ ಆ ಸಿದ್ಧಾಂತಗಳ ವೈರುಧ್ಯತೆಯಲ್ಲಿ ಬಾಳುತ್ತಿರುವರೆಂದು ಗಮನಿಸಿ. ಸಿದ್ಧಾಂತಗಳನ್ನು ಮೀರಿ ಬೆಳೆಯದ ವೈಚಾರಿಕತೆ, ಧರ್ಮವಾಗಿಬಿಡುತ್ತದೆ. ಆ ನಿಟ್ಟಿನಲ್ಲಿ ಬಹುಧರ್ಮಗಳ ಭಾರತದಲ್ಲಿ ಎಡ ಮತ್ತು ಬಲ ಸಿದ್ದಾಂತಗಳು ಮತ್ತೆರಡು ಧರ್ಮವಾಗಿಬಿಟ್ಟಿವೆ.

#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ
#ಕರ್ನಾಟಕವೆಂಬೋಕಮಂಗಿಪುರದಲ್ಲಿ

ಅಸ್ಪೃಶ್ಯತೆ ಧರ್ಮದ ಸೃಷ್ಟಿಯೇ ಅಥವಾ ವ್ಯವಸ್ಥೆಯ ಸೃಷ್ಟಿಯೇ?

ಭಾಗ ೧:
ಏಳನೇ ಶತಮಾನದ ಚೀನೀ  ಪ್ರವಾಸಿ ಹುಯೆನ್ ತ್ಸಾಂಗ್, ಜಾತಿಪದ್ದತಿಗಳನ್ನು ದಾಖಲಿಸುತ್ತ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಮತ್ತು ಬೌದ್ಧರೆಂದು ಗುರುತಿಸಿ, ಭಾರತದಲ್ಲಿ ಇಂದಿಗೂ ಪ್ರಸ್ತುತವಾಗಿರುವ ಸದಾ ಸಂಚಾರಿಗಳಾದ ಸಾಧು ಸನ್ಯಾಸಿಗಳನ್ನು ಯಾವುದೇ ಜಾತಿ ಇಲ್ಲದ ವರ್ಗಕ್ಕೆ ಸೇರಿಸುತ್ತ, ಎಲ್ಲಿಯೂ ಅಸ್ಪೃಶ್ಯತೆಯ ಬಗ್ಗೆ ಯಾವುದೇ ಮಾಹಿತಿಯನ್ನು ದಾಖಲಿಸಿಲ್ಲವೆಂಬುದು ಗಮನಾರ್ಹ ಸಂಗತಿ!

ಅಂದರೆ ಅಸ್ಪೃಶ್ಯತೆ ಆ ಕಾಲದಲ್ಲಿ ಇತ್ತೇ ಇಲ್ಲವೇ? ಅಥವಾ ಹುಯೆನ್ ತ್ಸಾಂಗ್ ಇದನ್ನು ಕಂಡುಕೊಳ್ಳುವಲ್ಲಿ ವಿಫಲನಾದನೇ?

ಮೊದಲು ಹುಯೆನ್ ತ್ಸಾಂಗ್ ಅಸ್ಪೃಶ್ಯತೆಯನ್ನು ಗುರುತಿಸುವಲ್ಲಿ ವಿಫಲನಾದನೇ ನೋಡೋಣ.
 
ಹುಯೆನ್ ತ್ಸಾಂಗನು ಭಾರತದ ಉದ್ದಗಲಕ್ಕೂ ಸಂಚರಿಸಿ ತನ್ನ ಜ್ಞಾನಾರ್ಜನೆಯೊಂದಿಗೆ ಮುಂದಿನ ಜನಾಂಗಕ್ಕೆ ಭಾರತದ ಇತಿಹಾಸದ ನೈಜ ಜೀವನದ ಚಿತ್ರಣವನ್ನು ಕೊಟ್ಟಿದ್ದಾನೆ. ಆತನಲ್ಲಿದ್ದ ಸ್ಥಿತಪ್ರಜ್ಞತೆ, ವಿವರಣಾ ಕೌಶಲ್ಯ, ವಿಮರ್ಶೆ, ಮತ್ತು ಜನಜೀವನ ಚಿತ್ರಣ ಅಂದಿನ ಭಾರತದ ಇತಿಹಾಸವನ್ನು ಯಾವುದೇ ಉತ್ಪ್ರೇಕ್ಷೆಯಿಲ್ಲದೆ ತೆರೆದಿಡುತ್ತದೆ.

ಈತ ದಾಖಲಿಸಿದಂತಹ ಭೌಗೋಳಿಕ ವಿಶೇಷಣಗಳಾದ ಹಾಮೀ ಮರುಭೂಮಿಯಲ್ಲಿನ ಕರಬೂಜಗಳು ಅಂದಿಗೂ ಖ್ಯಾತಗೊಂಡಿದ್ದವು ಹಾಗೂ ಇಂದಿಗೂ ಕೂಡಾ! ಶತಶತಮಾನಗಳೇ ಕಳೆದು ಹೋಗಿದ್ದರೂ ಹಾಮೀ ಕರಬೂಜಗಳು ಜಗತ್ತಿನಲ್ಲೇ ಅತ್ಯಂತ ರುಚಿಕರ ಎಂಬುದು ಈಗಲೂ ಸತ್ಯ.  ಆತನ ವರ್ಣನೆಯ ಸಿಂಧ್ ಪರ್ವತಶ್ರೇಣಿಗಳು, ಗಂಗಾನದಿ, ಕಶ್ಮೀರದ ಕಣಿವೆಗಳು, ಅರಣ್ಯಶ್ರೇಣಿಗಳು, ಅಸ್ಸಾಮಿನ ಮಳೆಗಾಲ, ಅಲ್ಲಿನ ವನ್ಯಪ್ರಾಣಿ ಸಮೂಹವಾದ ಆನೆ, ಘೇಂಡಾಮೃಗ, ಕಪ್ಪುಚಿರತೆ ಹೇಗಿದ್ದವೋ ಹಾಗೆಯೇ ಇರುವವು, ಸಂಖ್ಯೆಗಳ ವ್ಯತ್ಯಾಸವಿರಬಹುದು. ಆದರೆ ಭಾರತೀಯ ಭೌಗೋಳಿಕತೆ ಯಥಾವತ್ತಾಗಿದೆ. 

ಇನ್ನು ಭಾರತದ ಜನತೆ, ಹುಯೆನ್ ತ್ಸಾಂಗನು ವರ್ಣಿಸಿದ ಗಂಗಾತೀರದ ದರೋಡೆಕೋರರ ಖ್ಯಾತಿ ಕೂಡಾ! ಇಂದಿಗೂ ಬಿಹಾರ್, ಉತ್ತರಪ್ರದೇಶಗಳಲ್ಲಿ ದರೋಡೆಕೋರರ ಹಾವಳಿ. ಉದಾಹರಣೆಗೆ ಪ್ರಖ್ಯಾತ ಚಂಬಲ್ ಕಣಿವೆಯ ದರೋಡೆಕೋರರು. ಆತ ಕಂಡಂತೆ ಗುಜರಾತಿನಲ್ಲಿ ಕೃಷಿಕರಿಗಿಂತ ಹೆಚ್ಚಾಗಿ ವ್ಯಾಪಾರಿಗಳಿದ್ದ ಚಿತ್ರಣ ಕೂಡಾ ಇಂದೇನು ಬದಲಾಗಿಲ್ಲ. ಇಂದು ವಿಶ್ವದಲ್ಲೇ ಗುಜರಾತಿನವರು ವ್ಯಾಪಾರಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ಆತನ ವರ್ಣನೆಯ ಮಹಾರಾಠರು ಮಹಾನ್ ಪರಾಕ್ರಮಶಾಲಿಗಳೆಂಬುದನ್ನು ಪ್ರಮಾಣೀಕರಿಸುವಂತೆ ಬ್ರಿಟಿಷರಿಗೆ ಕಟ್ಟಕಡೆಯದಾಗಿ ಶರಣಾದವರು ಮರಾಠರು. 

ಒಟ್ಟಾರೆ ಭಾರತ ಇತಿಹಾಸದ ರಾಯಭಾರಿಯಾಗಿ ಹುಯೆನ್ ತ್ಸಾಂಗ್ ಎದ್ದು ಬಂದು ಚರಿತ್ರೆಯ ಪುಟಗಳನ್ನು ಯಥಾವತ್ತಾಗಿ ತೆರೆದಿಡುತ್ತಾನೆ. ಇಂತಹ ಒಂದು ಖಚಿತತೆ ವಿಶ್ವದ ಇನ್ಯಾವ ಇತಿಹಾಸದ ಪುಟಗಳಲ್ಲಿಯೂ ಕಾಣಬರುವುದಿಲ್ಲ. 

ಅಂತಹ ಖಚಿತತೆಯ ಹುಯೆನ್ ತ್ಸಾಂಗ್ ಅಸ್ಪೃಶ್ಯತೆಯನ್ನು ಗುರುತಿಸುವಲ್ಲಿ ಎಡವಿಲ್ಲವೆನಿಸುತ್ತದೆ. ಆದರೂ  ಅದನ್ನು ಖಚಿತ ಪಡಿಸಿಕೊಳ್ಳಲು ಹುಯೆನ್ ತ್ಸಾಂಗನಿಗಿಂತ ಎರಡು ಶತಮಾನಗಳ ಮೊದಲೇ ಬಂದಿದ್ದ ಮತ್ತೊಬ್ಬ ಚೀನೀ ಯಾತ್ರಿಕ ಫಾಹಿಯಾನನ ಕಡೆ ನೋಡೋಣ. ಏಕೆಂದರೆ ಪ್ರಸ್ತುತ ದಲಿತ ಇತಿಹಾಸ ಕೂಡಾ ಚೀನೀ ಯಾತ್ರಿಕ ಫ಼ಾಹಿಯಾನನೆಡೆಗೇ ಬೆರಳು ತೋರುತ್ತದೆ. ಕ್ರಿ.ಶ. ಐದನೇ ಶತಮಾನದಲ್ಲಿ ಭಾರತಕ್ಕೆ ಭೇಟಿ ಕೊಟ್ಟಿದ್ದ ಫ಼ಾಹಿಯಾನ್ ಮೊಟ್ಟಮೊದಲ ಬಾರಿಗೆ ಚಾಂಡಾಲರ ಕುರಿತಾಗಿ ಟಿಪ್ಪಣಿ ಬರೆದಿದ್ದುದನ್ನು ತೋರುತ್ತಾ, ಅಸ್ಪೃಶ್ಯತೆಯ ಇತಿಹಾಸವನ್ನು ಐದನೇ ಶತಮಾನಕ್ಕೆ ಕರೆದೊಯ್ಯುತ್ತದೆ. ದಲಿತ ಇತಿಹಾಸ.  ಅದಕ್ಕೂ ಮುಂಚಿನ ಯಾವುದೇ ಐತಿಹಾಸಿಕ ಗ್ರಂಥಗಳಲ್ಲಿ ಅಸ್ಪೃಶ್ಯತೆಯ ಉಲ್ಲೇಖವಿಲ್ಲದಿರುವುದರಿಂದ ಫಾಹಿಯಾನನ ಕಾಲದಿಂದ ಅಸ್ಪೃಶ್ಯತೆ ಇದೆ ಎನ್ನುತ್ತದೆ ಇತಿಹಾಸ.

ಇನ್ನು ಋಗ್ವೇದದ ನಂತರದ ವೇದಗಳಲ್ಲಿ ಚಾಂಡಾಲರ ಕುರಿತು ಉಲ್ಲೇಖವಿದ್ದರೂ ಅವರ ಕೈಯಿಂದ ಆಹಾರ ಸ್ವೀಕಾರಯೋಗ್ಯವೆಂದಿದೆ ಎಂಬ ವಾದವಾಗಲೀ, ಕೆಳಸ್ತರದ ಉದ್ಯೋಗಗಳ ಕೊಳಕುತನದಿಂದ ಅಸ್ಪೃಶ್ಯತೆ ಉದಯವಾಗಿರಬಹುದೆಂಬ ವಿಶ್ಲೇಷಣೆಗಳಾಗಲಿ ಒಪ್ಪತಕ್ಕದ್ದವಾದರೂ ಯಾವುದೇ ಕಾಲದ ಖಚಿತತೆಯನ್ನು ಕೊಡುವುದಿಲ್ಲ. ಅದಲ್ಲದೇ ವೇದಗಳನ್ನು ಕಾಲಕಾಲಕ್ಕೆ ಪರಿಷ್ಕರಿಸಲಾಗಿದೆ ಎನ್ನುತ್ತದೆ ಇತಿಹಾಸ.

ಅದೇ ರೀತಿ ಫ಼ಾಹಿಯಾನನ ಟಿಪ್ಪಣಿಯನ್ನು ಕೂಡಾ "ಅಸ್ಪೃಶ್ಯತೆ"ಯ ಖಚಿತ ದಾಖಲೆಯೆಂದು ಪರಿಗಣಿಸಲು ಸಾಧ್ಯವಿಲ್ಲ. ಏಕೆಂದರೆ ಫ಼ಾಹಿಯಾನನು ತನ್ನ ದಾಖಲೆಯಲ್ಲಿ ಅಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಮಾಂಸವನ್ನು ಮಾರಾಟ ಮಾಡಲು "ಚಾಂಡಾಲ", "ಬೆಸ್ತ" ಮತ್ತು "ಬೇಟೆಗಾರ"ರು ಮಾತ್ರ ಅರ್ಹರಾಗಿದ್ದರು ಎನ್ನುತ್ತಾನೆ. ಈ ಚಾಂಡಾಲರು ರಕ್ತಸಿಕ್ತ ವಸ್ತ್ರಗಳಿಂದ ವಿಕಾರವಾಗಿಯೂ  ಭೀಬತ್ಸರಾಗಿಯೂ ಕಾಣುವುದಲ್ಲದೇ  "ಪಾಪಿಗಳು", "ಕಟುಕರು" ಎಂದು  ಕರೆಸಿಕೊಳ್ಳುತ್ತಾ ಊರಿನ ಹೊರಗೆ ವಾಸಿಸಬೇಕಿದ್ದಿತು ಎಂದು ದಾಖಲಿಸಿದ್ದಾನೆ.  ಮಾಂಸ ಮಾರಾಟದೊಂದಿಗೆ ಶವಸಂಸ್ಕಾರವನ್ನು ಕೂಡ ಚಾಂಡಾಲರು ನಿಭಾಯಿಸುತ್ತಿದ್ದರು. ಇವರು ನಗರ ಪ್ರದೇಶಗಳನ್ನು ಪ್ರವೇಶಿಸುವಾಗ ತಮ್ಮ ಆಗಮನವನ್ನು ಸೂಚಿಸಲು ಮರದ ಹಲಗೆಯಿಂದ ಶಬ್ದ ಮಾಡುತ್ತ ಸಂಚರಿಸಬೇಕಿದ್ದಿತು. ಈ ಶಬ್ದ ಕೇಳಿದ ಜನ (ಇವರನ್ನು ನೋಡಲು ಬಯಸದ) ಇವರಿಗೆ ದಾರಿಯನ್ನು ಬಿಟ್ಟು ಮನೆ ಸೇರಿಕೊಳ್ಳುತ್ತಿದ್ದರು.  ಫ಼ಾಹಿಯಾನ್ ತನ್ನ ಟಿಪ್ಪಣಿಯನ್ನು ಮುಂದುವರಿಸುತ್ತಾ ಚಾಂಡಾಲರು ತಮ್ಮ ಕಟುಕ ವೃತ್ತಿಯನ್ನು ಬಿಟ್ಟು ಪರಿವರ್ತನೆಗೊಂಡಲ್ಲಿ  (ಮತಾಂತರವಲ್ಲ) ಪುರೋಹಿತರಾಗುವ ವ್ಯವಸ್ಥೆ ಕೂಡಾ ಇತ್ತೆಂದು ಸ್ಪಷ್ಟಪಡಿಸುತ್ತಾನೆ. ಪ್ರಾಣಿವಧೆ ಮಹಾಪಾಪ ಎಂಬ ಧಾರ್ಮಿಕಾರ್ಥದಲ್ಲಿ ಪಾಪಿಗಳೆಂದು, ಕನಿಕರವಿಲ್ಲದ ಕಟು ಹೃದಯದವರೆಂಬ ಭಾವಾರ್ಥದಲ್ಲಿ ಕಟುಕರೆಂದೂ ಇವರು ಈ ರೀತಿ ಕರೆಸಿಕೊಂಡಿರಬಹುದು. ಅದೇ ರೀತಿ ರಕ್ತಸಿಕ್ತವಾದ ವಸ್ತ್ರಗಳಿಂದ ವಿಕಾರವಾಗಿ ಕಾಣುತ್ತಿದ್ದ ಇವರನ್ನು ನೋಡಲಾಗದವರನ್ನು, ಶುಚಿರಭೂತ  ಯಾ ಮಡಿವಂತರು, ರಕ್ತ, ಮಾಂಸ ನೋಡಲಾಗದ ಅಳ್ಳೆದೆಯ ಜನರೆಂದೂ ಪರಿಗಣಿಸಬಹುದು. 

ಹಾಗಿದ್ದಾಗ ಫಾಹಿಯಾನ್ ಕಂಡದ್ದು ಅಸ್ಪೃಶ್ಯತೆಯೇ ಅಥವಾ ಮಾಂಸೋದ್ಯಮದೆಡೆಗಿದ್ದ ಸಾಮಾಜಿಕ ವ್ಯವಸ್ಥೆಯೇ?  ಈ ಹಿನ್ನೆಲೆಯಲ್ಲಿ ಆತ ದಾಖಲಿಸಿರುವುದು ಒಂದು "ಸಾಮಾಜಿಕ ವ್ಯವಸ್ಥೆ"ಯ ಶ್ರೇಣೀಕೃತ ವರ್ಣಸಂಕರ ಎನ್ನಬೇಕಾಗುತ್ತದೆಯೇ ಹೊರತು "ಧರ್ಮಾಧರಿತ" ವರ್ಣಸಂಕರವಾಗಿಯಲ್ಲ.

ಅದಲ್ಲದೇ ಆತ ಎಲ್ಲಿಯೂ ಇವರು ಮುಟ್ಟಲು ಯಾ ಮುಟ್ಟಿಸಿಕೊಳ್ಳಲು ಅನರ್ಹರೆಂದು ಹೇಳಿಲ್ಲ. ಅದನ್ನು ಹೇಳುವ ಅವಶ್ಯಕತೆಯೇ ಅವನಿಗಿರಲಿಲ್ಲ! ಏಕೆಂದರೆ ಜನ ಅವರ ಕೈಯಿಂದ ಮಾಂಸವನ್ನು ಕೊಳ್ಳುತ್ತಿದ್ದರು ಮತ್ತು ಪರಿವರ್ತಿತರಾದರೆ ಅವರನ್ನು ಆರಾಧಿಸುತ್ತಿದ್ದರು. 

ಹಾಗಾಗಿ ಅಸ್ಪೃಶ್ಯತೆಯ ಕಾಲ ಖಚಿತವಾಗಿ ಐದನೇ ಶತಮಾನವಲ್ಲ!

ಇಂದಿನ ಜಾಗತಿಕ ಪ್ರಪಂಚದಲ್ಲಿ ಐಟಿ ಪಾರ್ಕ್, ಆಹಾರ ಪಾರ್ಕ್, ಜವಳಿ ಪಾರ್ಕ್, ಕರಕುಶಲ ಪಾರ್ಕ್, ಡೈಮಂಡ್ ಹಬ್ ಇತರೆ ವಾಣಿಜ್ಯ ಉದ್ಯಮಗಳಿಗೆ ಮೀಸಲಾದ ಪಾರ್ಕ್ ಯಾ ನಗರಪ್ರದೇಶಗಳಿಂದ ಬೇರ್ಪಡಿಸಿದಂತಿರುವ ಮೀಸಲು ಜಾಗಗಳಿವೆ. ಅದೇ ರೀತಿ ಮಾಂಸೋದ್ಯಮ, ಚರ್ಮೋದ್ಯಮ, ಮತ್ಸ್ಯೋದ್ಯಮ ಮತ್ತು ಕಸ ವಿಲೇವಾರಿ ಉದ್ಯಮ ಕೂಡಾ!  ಇವೆಲ್ಲದಕ್ಕೂ ಆಯಾಯ ಉದ್ಯಮಕ್ಕೆ ಸಂಬಂಧಿಸಿದ ಸಕಾರಣಗಳಿರುವುದರಿಂದಲೇ ಅವನ್ನು ವಸತಿಪ್ರದೇಶಗಳಿಂದ ಬೇರ್ಪಡಿಸಿರುತ್ತಾರೆ. ಇದು ಯಾವುದೇ ಶಿಸ್ತುಬದ್ಧ ನಗರಾಭಿವೃದ್ದಿಯ ಪ್ರಪ್ರಥಮ ವರ್ಗೀಕರಣ ಆಯಾಮ. ಕ್ರಿಸ್ತಪೂರ್ವ ಸಿಂಧೂ ಕೊಳ್ಳದ ನಾಗರೀಕತೆಯಿಂದ ಹಿಡಿದು ಇಂದಿನ ಜಾಗತಿಕ ನಗರಗಳ ನವ್ಯ ನಾಗರೀಕತೆಯವರೆಗೆ ಕೂಡಾ!  ಕೇವಲ ವಾಣಿಜ್ಯ ಕೇಂದ್ರಿತ ನಗರ ವಿಭಜನೆಯಲ್ಲದೆ ಜನಾಂಗೀಯ ವಿಭಜನೆ ಕೂಡಾ ಇರುತ್ತಿತ್ತು. ಬ್ರಾಹ್ಮಣರ ಕೇರಿ, ಕುರುಬರ ಕೇರಿ, ಕುಂಬಾರರ ಕೇರಿ, ಇತ್ಯಾದಿ ಇತ್ಯಾದಿ. ಇಲ್ಲಿ ಬ್ರಾಹ್ಮಣ ಮಡಿಯುಟ್ಟು ಶುಚಿರಭೂತನಾಗಿದ್ದು, ಕುಂಬಾರ ಮಣ್ಣು ಮೆತ್ತಿಕೊಂಡಿದ್ದರೆ ಅದು ಕೇವಲ ಅವರ ಔದ್ಯೋಗಿಕ ಕಾರಣವೇ ಹೊರತು ವರ್ಣಸಂಕರವಾಗಿರಲಿಲ್ಲ.  ಇದು ಆಧುನಿಕ ಸಮಾಜದ ಬಿಳಿಯ ಕಾಲರ್ ಮತ್ತು ನೀಲಿ ಕಾಲರ್ ವ್ಯತ್ಯಾಸವಿದ್ದಂತೆ, ಕಂಪ್ಯೂಟರ್ ತಜ್ಞ ಮತ್ತು ಕಾರ್ ಮೆಕ್ಯಾನಿಕ್ಕುಗಳ ವೃತ್ತಿಯ ಸ್ಥಳಗಳ ವ್ಯತ್ಯಾಸವಿದ್ದಂತೆಯೇ ಹೊರತು ಜಾತಿ, ಧರ್ಮಗಳಿಂದಾದ ವ್ಯತ್ಯಾಸವಲ್ಲ!  

ಕೇವಲ ಹೂಸಿದರೆ ಯಾರೂ ಪಕ್ಕದಲ್ಲಿ ಕೂರದ ಮಾನವ ಸಹಜ ಸ್ವಭಾವ, ರಕ್ತಸಿಕ್ತವಾಗಿರುವ ಸ್ವಂತ ಸೋದರನನ್ನ ಮುಟ್ಟಿ ತಬ್ಬಿಕೊಂಡೀತೇ?

ಫಾಹಿಯಾನನು ಕಂಡಿದ್ದ ಚಾಂಡಾಲರು ಸಮಾಜದ ಭಾಗವಾಗಿ ಎಂದಿನಿಂದಲೋ ಇದ್ದರೂ ಅಸ್ಪೃಶ್ಯತೆ ಆಗಿನ್ನೂ ಸಮಾಜದ ಭಾಗವಾಗಿರಲಿಲ್ಲ. ಹಾಗಾಗಿಯೇ ಏಳನೇ ಶತಮಾನದ ಹುಯೆನ್ ತ್ಸಾಂಗ್ ಚಾಂಡಾಲರನ್ನು ಕಂಡಿದ್ದರೂ ಅಸ್ಪೃಶ್ಯತೆಯನ್ನು ಕಂಡಿರಲಿಲ್ಲವೆಂದು ಖಚಿತವಾಗಿ ಹೇಳಬಹುದೆನಿಸುತ್ತದೆ.

ಇತಿಹಾಸ ಹೀಗಿರಬೇಕಿದ್ದರೆ ಅಸ್ಪೃಶ್ಯತೆ ಹೇಗೆ, ಯಾವ ಕಾಲದಲ್ಲಿ ಸೃಷ್ಟಿಯಾಯಿತು?

ಭಾಗ ೨:
ಭಾರತ ಮೂಲತಃ ಜೈನ ರಾಷ್ಟ್ರವೆನ್ನಬಹುದು. ಪ್ರಥಮ ತೀರ್ಥಂಕರ ರಿಷಭನಾಥನ ಪುತ್ರನೆನ್ನಲಾದ ಭರತನ ಹೆಸರು ಹೊತ್ತ ಭರತಶಕೆಯ ಭಾರತದಲ್ಲಿ ಜೈನ ಧರ್ಮ ಪ್ರಮುಖವಾಗಿ ಕ್ಷತ್ರಿಯರ ಧರ್ಮವಾಗಿ ಕ್ರಮೇಣ ಬ್ರಾಹ್ಮಣರನ್ನು ಆಕರ್ಷಿಸುತ್ತ ಸಾಹಿತ್ಯಿಕವಾಗಿ ಬೆಳೆದು ಎಲೈಟ್ ಜನಗಳ ಧರ್ಮವೆನಿಸಿತ್ತು. ಇತ್ತ ಬೌದ್ಧಧರ್ಮ ವಣಿಕ/ವರ್ತಕ/ವೈಶ್ಯರ ಧರ್ಮವಾಗಿ ಬೆಳೆಯಿತು. ಇನ್ನು ಹಿಂದೂ ಧರ್ಮ ವರ್ಣಸಂಕರಗಳ ಒಂದು ಸಾಮಾಜಿಕ ವ್ಯವಸ್ಥೆಯಾಗಿಯೇ ಮುಂದುವರಿದಿತ್ತು. ಈ ವರ್ಣಸಂಕರದ ಧರ್ಮರಹಿತರು ಜೈನ, ಬೌದ್ಧಕ್ಕೆ ಪರ್ಯಾಯವಾಗಿ ತಮ್ಮ ಸಾಮಾಜಿಕ ವ್ಯವಸ್ಥೆಯನ್ನೇ ಧರ್ಮವಾಗಿ ಬಿಂಬಿಸಿದರು. ಆ ಪರ್ಯಾಯ ವ್ಯವಸ್ಥೆಗನುಗುಣವಾಗಿ ರಾಮಾಯಣ, ಮಹಾಭಾರತಗಳು ಸೃಷ್ಟಿಯಾದವು.  ಹಿಂದೂ ಧರ್ಮ ಪೌರಾಣಿಕತೆಯನ್ನು ಮೆರೆದರೆ, ಬೌದ್ಧ ಧರ್ಮ ತತ್ವಜ್ಞಾನಕ್ಕೆ, ಮತ್ತು ಜೈನ ಧರ್ಮ ಶೌರ್ಯ, ತ್ಯಾಗ, ಸಾಹಿತ್ಯಕ್ಕೆ ಪ್ರಾಮುಖ್ಯತೆ ಕೊಟ್ಟಿದ್ದವು. ಆದರೆ ಈ ಮೂರೂ ಧರ್ಮಗಳೂ ಕ್ರಮೇಣ  ಈರ್ಷ್ಯೆಯಿಂದ ಪರಸ್ಪರ ಧರ್ಮಯುದ್ಧದಲ್ಲಿ ತೊಡಗಿದವು.

ಕ್ರಿ. ಶ. 647ರಲ್ಲಿ ಚಕ್ರವರ್ತಿ ಹರ್ಷನ ಮರಣಾನಂತರ ಹರ್ಷನ ಸಾಮ್ರಾಜ್ಯ ಛಿದ್ರವಾಯಿತು. ಹರ್ಷನ ಸಾಮಂತರು ಸ್ವತಂತ್ರರಾದರು.  ಅರಾಜಕತೆ, ದಂಗೆ, ಮತ್ತು ತೀವ್ರ ಬರಗಾಲಗಳು ಭಾರತವನ್ನು ಅಪ್ಪಳಿಸಿದವು. ಎಲ್ಲೆಲ್ಲೂ ಕೋಲಾಹಲ, ಹತಾಶೆ, ಸುಲಿಗೆಗಳು ಮೆರೆದವು. ಹರ್ಷನ ನಂತರದ ಮುಂದಿನ ಆರನೂರರಿಂದ ಏಳುನೂರು ವರ್ಷಗಳವರೆಗೆ ಭಾರತ ಒಂದು ಸಂಯುಕ್ತ ರಾಷ್ಟ್ರವಾಗಿರದೇ ಅನೇಕ ಸಣ್ಣ ಸಣ್ಣ ಸಂಸ್ಥಾನಗಳ ಛಿದ್ರ ರಾಷ್ಟ್ರವಾಗಿದ್ದಿತು. ಅಷ್ಟೇ ಅಲ್ಲದೇ ಹರ್ಷನ ನಂತರದ ಮುಂದಿನ  ಆರು ಶತಮಾನಗಳಲ್ಲಿ ಹಿಂದೂಧರ್ಮದ ಪಂಥಗಳು ಮತ್ತೆ ಮಂಚೂಣಿಗೆ ಬಂದವು. ತಮ್ಮ ತಮ್ಮ ಅನುಯಾಯೀ ರಾಜರುಗಳ ಮೇಲೆ ಪ್ರಭಾವ ಬೀರುತ್ತ ಶೈವರು, ವೈಷ್ಣವರು, ಜೈನರು  ಯಶಸ್ವಿಯಾಗಿ ಬೌದ್ಧ ಧರ್ಮವನ್ನು ತುಳಿದುಹಾಕಿದರು.  ಗುರ್ಜರರು, ರಾಷ್ಟ್ರಕೂಟರು, ಚೋಳರು ಪ್ರಮುಖವಾಗಿ ಆಳಿದರೂ ಕ್ರಮೇಣ ಬಂಡುಕೋರರ ಕೈ ಮೇಲಾಗಿ ಭಾರತ ಮತ್ತಷ್ಟು ಚಿಕ್ಕ ಚಿಕ್ಕ ಸಂಸ್ಥಾನಗಳಾಗಿ ಛಿದ್ರವಾಯಿತು.  ಹಿಂದೂ ಧರ್ಮ ಕೂಡಾ ಧರ್ಮದ ಸ್ವರೂಪವಾಗಿರದೆ ಜಾತಿ, ಪಂಥಗಳಾಗಿ ಛಿದ್ರವಾಯಿತು. 

ಆ ಒಂದು ರಾಜಕೀಯ/ಧಾರ್ಮಿಕ/ಸಾಮಾಜಿಕ ಪಲ್ಲಟ ಪರ್ವದಲ್ಲಿ ದಬ್ಬಾಳಿಕೆಯ, ಸ್ವೇಚ್ಚಾಚಾರದ ಊಳಿಗಮಾನ್ಯ ವ್ಯವಸ್ಥೆ ಎಲ್ಲಾ ಸ್ತರಗಳಲ್ಲಿ ಬಲವಾಗುತ್ತಾ ಸಾಗಿತು. ಬಲವಾದ ಊಳಿಗಮಾನ್ಯ ವ್ಯವಸ್ಥೆಯಲ್ಲಿ ಗುಲಾಮಗಿರಿಗೆ ಸುಲಭವಾಗಿ ಚಾಂಡಾಲರನ್ನೊಳಗೊಂಡಂತೆ ಕೆಳಸ್ತರದ ಜನ ತುತ್ತಾದರು. ಆ ಒಂದು ದಬ್ಬಾಳಿಕೆ ಕ್ರಮೇಣ ಅಸ್ಪೃಶ್ಯತೆಯ ವಿಕೃತ ರೂಪವನ್ನು ಪಡೆದುಕೊಂಡಿರಬಹುದು. ಹಾಗಾಗಿ ಎಂಟನೇ ಶತಮಾನದಿಂದ ಅಸ್ಪೃಶ್ಯತೆ ಆರಂಭವಾಯಿತು ಎನ್ನಬಹುದು. ಈ ವಿಶ್ಲೇಷಣೆಗೆ ಪೂರಕವಾಗಿ ಶಂಕರಾಚಾರ್ಯರು ಮತ್ತು ಚಾಂಡಾಲನೋರ್ವನ ನಡುವೆ ವಾರಾಣಾಸಿಯಲ್ಲಿ ನಡೆಯಿತೆನ್ನಲಾದ ಸಂವಾದ ಅಸ್ಪೃಶ್ಯತೆಯ ಪದ್ದತಿ ಜಾರಿಯಲ್ಲಿದ್ದುದನ್ನು ಸ್ಪಷ್ಟಪಡಿಸುತ್ತದೆ. ಈ ಘಟನೆ  ನಡೆದದ್ದು ಹರ್ಷನ ಸಾವಿನ 170 ವರ್ಷಗಳ ನಂತರ. ಶಂಕರಾಚಾರ್ಯರ ಕಾಲಘಟ್ಟ ಕ್ರಿ. ಶ.788 ರಿಂದ ಕ್ರಿ. ಶ. 820!

ಹಾಗಿದ್ದರೆ ಇದನ್ನು ವಿರೋಧಿಸಿ ತುಳಿತಕ್ಕೊಳಗಾದವರು ದಂಗೆ ಏಳಲಿಲ್ಲವೇ? 

ಖಂಡಿತ ಜನ ದಂಗೆದ್ದಿದ್ದರು. ಈ ಆಕ್ರೋಶವನ್ನು ಬಳಸಿಕೊಂಡು ಸಾಕಷ್ಟು ನವ ಪ್ರಭುತ್ವಗಳು, ಭಕ್ತಿಪಂಥಗಳು ಉದಯವಾದವು. ಉದಾಹರಣೆಗೆ ಕರ್ನಾಟಕದಲ್ಲಿ ಹತ್ತನೇ ಶತಮಾನದಿಂದ ಆರಂಭವಾದ ವೀರಶೈವ ಯಾ ಲಿಂಗಾಯತ ಶರಣ ಚಳುವಳಿ, ಹಕ್ಕ ಬುಕ್ಕರಿಂದ ಸ್ಥಾಪಿತವಾದ ವಿಜಯನಗರ ಸಾಮ್ರಾಜ್ಯ ಇವೆಲ್ಲವೂ ಆ ಆಕ್ರೋಶದ ಧ್ರುವೀಕರಣ.  ಈ ಧ್ರುವೀಕರಣದ ಭಾಗವಾಗಿ ಅಸ್ಪೃಶ್ಯರು ಪ್ರಭುತ್ವಗಳಲ್ಲಿ ಸೈನಿಕರಾಗಿ, ಭಕ್ತಿಪಂಥಗಳಲ್ಲಿ ಭಕ್ತರಾಗಿ ಪಾಲ್ಗೊಂಡಿದ್ದರು.  ದುರಾದೃಷ್ಟವಶಾತ್ ಇವೆಲ್ಲವೂ ಊಳಿಗಮಾನ್ಯ ವ್ಯವಸ್ಥೆಯಿಂದ ತುಳಿಯಲ್ಪಟ್ಟವು ಯಾ ಊಳಿಗಮಾನ್ಯ ವ್ಯವಸ್ಥೆಯನ್ನು ಅಪ್ಪಿಕೊಂಡವು. ಹರ್ಷನ ಸಾವಿನ ನಂತರ ಪಂಥಗಳಾಗಿ ವಿಭಜನೆಗೊಂಡಿದ್ದ ಹಿಂದೂಧರ್ಮ, ಭಕ್ತಿಪಂಥ ಚಳುವಳಿಗಳಲ್ಲಿ ಮತ್ತು ಸಿಡಿದೆದ್ದ ನವ್ಯ ಪ್ರಭುತ್ವಗಳ ಈ ಹೊಸ ಭರಾಟೆಯಲ್ಲಿ ಮತ್ತಷ್ಟು ಪಂಥ/ಜಾತಿಗಳಾಗಿ ವಿಭಜನೆಗೊಂಡಿತು.  ಅದಲ್ಲದೇ ತನ್ನ ವಿಭಜನೆಯಲ್ಲೂ "ವೈವಿಧ್ಯತೆಯಲ್ಲಿ ಏಕತೆ"  ಸಾಧಿಸುತ್ತ ಹಿಂದೂ ಧರ್ಮ, ಜೈನರನ್ನು ತನ್ನ ಮುಂದಿನ ಗುರಿಯಾಗಿಸಿಕೊಂಡು ಜೈನಧರ್ಮವನ್ನು ಯಶಸ್ವಿಯಾಗಿ ತುಳಿದುಹಾಕಿತು.  ಇದನ್ನು ಹಲವು ಭಕ್ತಿಪಂಥ ಚಳುವಳಿಗಳು ಕೂಡ ಪ್ರೋತ್ಸಾಹಿಸಿದವು.  ಯಾವ ಎಗ್ಗಿಲ್ಲದೇ ಸಾಮ, ದಾನ, ದಂಡ, ಭೇದ ನೀತಿಯನ್ನು ಭಕ್ತಿಪಂಥಗಳು ಕೂಡ ಎಗ್ಗಿಲ್ಲದೆ ಪ್ರಯೋಗಿಸಿದವು.  ಈ ಐತಿಹಾಸಿಕ ಧರ್ಮಯುದ್ಧಗಳ ಧರ್ಮಕಾಂಡದ ಮೇಲ್ಪಂಕ್ತಿಯನ್ನೇ ನಂತರದ ಇಸ್ಲಾಂ ಕೂಡ ಅನುಸರಿಸಿತು. ಇನ್ನು  ಉಳಿಗಮಾನದಲ್ಲಿ ಗುಲಾಮರಿರದಿದ್ದರೆ ಹೇಗೆ? ಹಾಗಾಗಿ ಮತ್ತೆ ಅಸ್ಪೃಶ್ಯತೆ ಬಲಗೊಂಡಿತು.

ಇಂದಿನ ಸ್ವಾತಂತ್ರ್ಯ ಭಾರತದಲ್ಲಿನ ಪ್ರಜಾಪ್ರಭುತ್ವ ಕೂಡಾ ಊಳಿಗಮಾನ್ಯ ಪ್ರಜಾಪ್ರಭುತ್ವ!  ಐತಿಹಾಸಿಕವಾಗಿ ಹಿಂದೂ ಧರ್ಮ ಹೇಗೆ ವಿಭಿನ್ನ ಕಾಲಘಟ್ಟದಲ್ಲಿ ಪಂಥ, ಜಾತಿಯಾಗಿ ವಿಭಜನೆಗೊಂಡಿತೋ ಅದೇ ರೀತಿ ಇಪ್ಪತ್ತನೇ ಶತಮಾನದಲ್ಲಿ ಜಾತಿಗಳು ವಿಭಜನೆಯಾಗುತ್ತಿವೆ.  ಒಕ್ಕಲಿಗರು ಗಂಗಡಿಕಾರ, ಮೊರಸು, ಕುಂಚಿಟಿಗ (ಇದರಲ್ಲಿ ಕುಂಚಿಟಿಗ ಲಿಂಗಾಯತ, ಕುಂಚಿಟಿಗ ಒಕ್ಕಲಿಗ ಬೇರೆ ಇದೆ) , ವೀರಶೈವರು ಪಂಚಮಸಾಲಿ, ಬಣಜಿಗ, ಸಾದರು, ಇತ್ಯಾದಿ, ಇತ್ಯಾದಿ.  ಇಂದು ಉಳಿಗಮಾನ್ಯದ ಜೊತೆ ಚುನಾಯಿತ ಪ್ರತಿನಿಧಿಗಳ ವಂಶಪಾರಂಪರ್ಯ ಸೇರಿಕೊಂಡಿದೆ. ಈ ಉಳಿಗಮಾನ್ಯದ ಅಮಲು, ದಲಿತರನ್ನು ಕೂಡಾ ಬಿಟ್ಟಿಲ್ಲ. ದಲಿತರು ಎಡಗೈ, ಬಲಗೈ ಎಂದು ವಿಭಜನೆಗೊಂಡಿದ್ದಾರೆ.

ಹಾಗಾಗಿಯೇ ರಾಜಕಾರಣಿಯ ಮಗನನ್ನೇ ನಾವು ಅವನ ಉತ್ತರಾಧಿಕಾರಿಯಾಗಿ "ಚುನಾಯಿಸು"ವುದು. ಇಲ್ಲದಿದ್ದರೆ ನಮ್ಮ ಜಾತಿಯವನನ್ನೇ ನಮ್ಮ "ಪ್ರತಿನಿಧಿ"ಯಾಗಿ ಬಯಸುವುದು. ಸರ್ಕಾರಿ ಉದ್ಯೋಗಿ ಸತ್ತರೆ ಆತನ ಕುಟುಂಬಕ್ಕೆ ಸರ್ಕಾರಿ ಉದ್ಯೋಗ ಕೊಡುವುದು ವ್ಯವಸ್ಥೆಯಲ್ಲಿಯೇ ಒಪ್ಪಿತವಾಗಿದೆ.  ಅದೇ ರೀತಿ "ಮೀಸಲಾತಿ" ಕೂಡಾ ಊಳಿಗಮಾನ್ಯ ಯಾ ವಂಶಪಾರಂಪರ್ಯದ ಹಕ್ಕಾಗಿ ಆಗಲೇ ಮೀಸಲಾತಿಯ ಸವಲತ್ತು ಪಡೆದುಕೊಂಡಿರುವವರ ಮಕ್ಕಳು ಕೂಡಾ ಅದು ತಮ್ಮ ಪಿತ್ರಾರ್ಜಿತ ಆಸ್ತಿ ಎಂಬಂತೆ ತಲೆಮಾರುಗಳಿಂದ  ಬಯಸುವುದು. 

ಇಂದು ಜಾತಿ ಗೌರವ, ಅಭಿಮಾನ, ಹೆಮ್ಮೆ, ಪ್ರೌಢಿಮೆಯ ಸಂಕೇತ! ಯಾವ ಜಾತಿ ನಾಶಕ್ಕಾಗಿ ಸ್ವಾಭಿಮಾನಿ ದ್ರಾವಿಡರು ಜಾತಿಸೂಚಕ ಕುಲನಾಮ / ಅಡ್ಡಹೆಸರುಗಳನ್ನುಬಹಿಷ್ಕರಿಸಿ ಇನಿಷಿಯಲ್ ಇಟ್ಟುಕೊಳ್ಳುವ ಚಳುವಳಿ ಆರಂಭಿಸಿದ್ದರೋ ಅದೇ ಜನನಾಯಕರ ಕುಲತಿಲಕರತ್ನಗಳು ಇಂದು ಅಸ್ಮಿತೆಯ ಹೆಸರಲ್ಲಿಅಹಂನಿಂದ  ಗೊಲ್ಲರು "ಯಾದವ", ದಲಿತರು "ಮೌರ್ಯ" ಮುಂತಪ್ಪು ಉತ್ತರ ಭಾರತೀಯ ವರಸೆಯ ಜಾತಿಪ್ರೌಢಿಮೆಯನ್ನು ಮೆರೆಯುತ್ತಿರುವರು!

ಇದೆಲ್ಲವೂ ಮೀಸೆ ತಿರುವಿ ದಬ್ಬಾಳಿಕೆ ಮಾಡಬೇಕೆಂಬ ಊಳಿಗಮಾನ ಮನಸ್ಥಿತಿ!  ಅವರು ಇಷ್ಟು ದಿನ ಮೆರೆದಿದ್ದರು, ಈಗ ನಾವು ಮೆರೆಯಬೇಕೆಂಬ ಊಳಿಗಮಾನ ಕೆಚ್ಚು.  ಶತಶತಮಾನಗಳಿಂದ ಬೇರೂರಿರುವ ಧರ್ಮ, ಜಾತಿಗಳನ್ನು ತಳುಕು  ಹಾಕಿಕೊಂಡಿರುವ ಊಳಿಗಮಾನ ಪದ್ದತಿಯನ್ನು, ಭಾರತ  ಕೇವಲ ರಾಜಪ್ರಭುತ್ವದಿಂದ ಪ್ರಜಾಪ್ರಭುತ್ವವಾದ ಮಾತ್ರಕ್ಕೆ ತೊರೆದುಕೊಳ್ಳುವುದು ಸಾಧ್ಯವೇ!

ಸಮಾಜಮುಖಿ ಲೇಖನ - ಸಂವಿಧಾನವನ್ನು ಬದಲಿಸಿದರೆ ತಪ್ಪೇನು?

ಎಲ್ಲ ಮಹಾನ್ ಚಿಂತನೆಗಳು, ಅವಿಷ್ಕಾರಗಳು ಆರಂಭದಲ್ಲಿ ಅಸಂಬದ್ಧ ಹಾಗೂ ಹಾಸ್ಯಾಸ್ಪದ ಎನ್ನಿಸುತ್ತವೆ. ಇದು ಭೂಮಿ ದುಂಡಾಗಿದೆ ಎಂದ ಗೆಲೆಲಿಯೋನಿಂದ ಹಿಡಿದು ಇಂದಿನ ವಿಡಿಯೋ ಫ಼ೊನುಗಳ ಅವಿಷ್ಕಾರಿಯವರೆಗೆ ಎಲ್ಲವೂ ಒಂದೊಮ್ಮೆ ಅಸಂಬದ್ಧವೆನಿಸಿತ್ತು. ಆದರೆ ನವ್ಯ ಭಾರತದಲ್ಲಿ ದಿಟವಾದ ಹತ್ತು ಹಲವಾರು ಅಸಂಬದ್ಧತೆಗಳು ಜನಪರ ಹೋರಾಟ, ಕಾನೂನು, ಶಾಸನಗಳಾಗುತ್ತ ಇಡೀ ದೇಶವನ್ನೇ ಅಸಂಬದ್ಧ ಅತಾರ್ಕಿಕ ಸಂಕೀರ್ಣ ವ್ಯವಸ್ಥೆ ಎನಿಸಿಬಿಡುತ್ತಿವೆ. ಉದಾಹರಣೆಗೆ ಸದ್ಯದ ಪ್ರಸ್ತುತ ಸಂಗತಿಗಳನ್ನು ಗಮನಿಸೋಣ.

ಸಂಪರ್ಕ ವ್ಯವಸ್ಥೆ - ವಾಹನಗಳ ನೋಂದಾವಣೆಯ ಭಾಗವಾಗಿ ಅಜೀವಪರ್ಯಂತ ರಸ್ತೆ ತೆರಿಗೆ ಕಟ್ಟಿದರೂ ರಸ್ತೆಗಳಿಗೆ ಟೋಲು ಹಾಕುವ ಪರಿ ಅಸಂಬದ್ಧವಾಗಬೇಕಿದ್ದು ಇಂದು ಸರ್ಕಾರದ ಅಧಿನಿಯಮವಾಗಿದೆ. ಸದ್ಯಕ್ಕೆ ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಈ ಅಸಂಬದ್ಧ ನಿಯಮ ರಾಜ್ಯ ಹೆದ್ದಾರಿಗಳಿಗೂ ಅನ್ವಯವಾಗಲಿದೆ. ರಾಜ್ಯದ ಅನೇಕ ಹೆದ್ದಾರಿಗಳಲ್ಲಿ ಈಗಾಗಲೇ ಟೋಲ್ ಬೂತುಗಳು ಕಟ್ಟಲ್ಪಟ್ಟಿದ್ದು ಸದ್ಯದಲ್ಲೇ ಟೋಲ್ ಪಾವತಿಸಬೇಕಾಗುತ್ತದೆ. ಇದೇ ಮಾದರಿಯಾಗಿ ಮುಂದೆ ಜಿಲ್ಲಾ ಹೆದ್ದಾರಿಗಳಿಂದ ನಿಮ್ಮ ಮನೆಯ ರಸ್ತೆಗಳಿಗೂ ಬರಬಹುದು. ಪ್ರಜಾಪ್ರಭುತ್ವದ ಮೂಲಭೂತ ಹಕ್ಕಾದ ಸಂಚಾರ ಸ್ವಾತಂತ್ರ್ಯಕ್ಕೇ ಸಂಚಕಾರ ಬಂದಿದ್ದರೂ ಅದು ಒಪ್ಪಿತ! ಸಾರಿಗೆ ಸಮಯದಲ್ಲೇನಾದರೂ ಉಳಿತಾಯವಾಗಿದೆಯೇ? ನನಗಂತೂ ಕಂಡಿಲ್ಲ.

ಆರೋಗ್ಯ - ಪ್ರಧಾನಿ ಇಂದಿರಾಗಾಂಧಿ 35 ವರ್ಷಗಳ ಹಿಂದೆಯೇ ಭಾರತ ಕುಷ್ಠ ರೋಗ ಮುಕ್ತ ಎಂದು ಘೋಷಿಸಿದ್ದರು. ಕಳೆದ ವಾರ ಬೆಂಗಳೂರಿನಲ್ಲೇ 1200 ಹೊಸ ಕುಷ್ಠ ರೋಗಿಗಳು ಪತ್ತೆಯಾಗಿದ್ದಾರೆ. ಬೇರೆಲ್ಲೆಡೆ ಗಾಳಿಯಂತೆ ಬೀಸಿ ಹೋದ ಡೆಂಗ್ಯೂ, ಚಿಕೂನ್ ಗುನ್ಯಾ, ಭಾರತದಲ್ಲಿ ಮಾತ್ರ ಖಾಯಂ ಬಿಡಾರ ಹೂಡಿವೆ.

ಕಾನೂನು - ದ್ವಿಪತ್ನಿತ್ವ ಕಾನೂನು ರೀತ್ಯ ಒಂದು ಅಪರಾಧ. ಆದರೆ ಕಾನೂನು ಇದನ್ನು ಕೇವಲ ದ್ವಿಪತ್ನಿತ್ವಕ್ಕೊಳಗಾದ ವ್ಯಕ್ತಿ ಮಾತ್ರ ಪ್ರಶ್ನಿಸಬೇಕು ಎನ್ನುತ್ತದೆ, ದ್ವಿಪತ್ನಿತ್ವದ ವ್ಯಕ್ತಿ ಸಾರ್ವಜನಿಕ ಸೇವೆಯಲ್ಲಿದ್ದರೂ ಕೂಡ. ಇದು ಅಸಂಬದ್ಧವಲ್ಲವೇ? ಮಹಿಳಾ ಶೋಷಣೆಗಳನ್ನು ಹತ್ತಿಕ್ಕಲು ಮಾಡಿದ ಕಾನೂನು ಸರ್ವಾಧಿಕಾರಿ ಧೋರಣೆಯ ಏಕಪಕ್ಷೀಯವಾಗಿ ಪುರುಷ ವಿರೋಧಿ ಕಾನೂನಾಗಿದೆ. ಇದು ಸೌದಿಯಲ್ಲಿರುವಂತಹ ಜಿಹಾದಿ ಕಾನೂನಿನಂತಿದೆ.

ಇಂತಿಷ್ಟು ವರ್ಷದ ಹಳೆಯ ವಾಹನಗಳನ್ನು ಬಹಿಷ್ಕರಿಸುವುದು ಕೂಡ ಇಂತಹ ಮೂರ್ಖತನದ ಪರಮಾವಧಿ. ವಾಹನ ಸಧೃಢವಾಗಿದೆಯೆಂದು ಪ್ರಮಾಣೀಕರಿಸಿ ಎನ್ನುವುದನ್ನು ಬಿಟ್ಟು ಬಹಿಷ್ಕರಿಸುವುದು, ಬಯಲುಶೌಚವನ್ನು ನಿರ್ಮೂಲನೆ ಮಾಡಲಾಗದ್ದಕ್ಕೆ ಶೌಚವನ್ನೇ ಬಹಿಷ್ಕರಿಸಿದಂತಾಗುತ್ತದೆ.

ಎಲ್ಲಕ್ಕಿಂತ ಹೆಚ್ಚಾಗಿ ಬಹುಚರ್ಚಿತ ವೀರಶೈವ/ಲಿಂಗಾಯತ, ಶಬರಿಮಲೆ, ಮೀಟೂ, ಪಕ್ಷಮೈತ್ರಿ, ಇತ್ಯಾದಿ - ಈ ವಿಷಯಗಳ ಕುರಿತು ಸಾಕಷ್ಟು ತಿಳಿದುಕೊಂಡಿರುತ್ತೀರಿ. ಹಾಗಾಗಿ ಇವುಗಳ ಉಲ್ಲೇಖ ಮಾತ್ರ ಸಾಕು.

ಈಗ ಈ ಎಲ್ಲಾ ಸಂಗತಿಗಳಲ್ಲಿ ಯಾವುದು ಜನಪರ ಯಾವುದು ಪ್ರಚಾರಪರ?

ವೀರಶೈವ/ಲಿಂಗಾಯತ, ಶಬರಿಮಲೆ, ಮೀಟೂ, ಪಕ್ಷಮೈತ್ರಿ, ಇತ್ಯಾದಿಗಳು ತರ್ಕಬದ್ಧ ಮೂಲಭೂತ ಹೋರಾಟಗಳೆನಿಸಿ, ನೀರಿನ ಬವಣೆ, ವಿದ್ಯುತ್ ಅಭಾವ, ಅವೈಜ್ಞಾನಿಕ ಕೃಷಿಉತ್ಪನ್ನಗಳ ಬೆಲೆ, ಇನ್ಫಲೇಷನ್, ಹವಾಮಾನ ವೈಪರೀತ್ಯ, ಶೈಕ್ಷಣಿಕ ದೊಂಬರಾಟ, ಓಲೈಕೆ/ಹಾರೈಕೆಯ ರಾಜಕಾರಣ, ರೋಗಗಳು, ಭ್ರಷ್ಟಾಚಾರ ಇವೆಲ್ಲವೂ ಅಸಂಬದ್ಧ ಹಾಸ್ಯಾಸ್ಪದದ ಯಕಶ್ಚಿತ್ ಸಂಗತಿಗಳಾಗಿವೆ.

ಭಾರತ ವಿಶ್ವಗುರು, ಬೆಂಗಳೂರನ್ನು ಸಿಂಗಾಪುರ ಮಾಡುತ್ತೇನೆ, ಭಾರತ ಪ್ರಕಾಶಿಸುತ್ತಿದೆ, ಗರೀಬಿ ಹಠಾವೋ, ಕುಷ್ಠ ರೋಗ ಮುಕ್ತ, ಪೋಲಿಯೋ ಮುಕ್ತಗಳೆಲ್ಲವೂ ಭವ್ಯವಾದ ಉದ್ಘೋಷಗಳಲ್ಲಿವೆ!

ಸಾಕಷ್ಟು ಕಪ್ಪುಹಣ ಭಾರತದಿಂದಾಚೆ ರವಾನೆಯಾಗುವುದು  2003 ರಿಂದ ಸಾಕಷ್ಟು ನಿಂತಿದೆ. ಇದಕ್ಕೆ ಕಾರಣ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಆದ ಕೆಲ ಗಟ್ಟಿ ಬ್ಯಾಂಕಿಂಗ್ ನಿಯಮಗಳ ಬದಲಾವಣೆಗಳು. ಅಂದರೆ ಆ ಕಪ್ಪುಹಣ ಅಂದಿನಿಂದ ಭಾರತದ ರಿಯಲ್ ಎಸ್ಟೇಟ್ ಉದ್ದಿಮೆಯನ್ನು ಹೊಕ್ಕಿದೆ. ಭಾರತದ ರಿಯಲ್ ಎಸ್ಟೇಟ್ ಬೆಲೆ ಸುಯ್ಯನೇ ಮೇಲೆ ಹೋಗುತ್ತಿರುವುದು ಕಪ್ಪುಹಣಕ್ಕೆ ಉದ್ಘೋಷಗಳು ಕೊಟ್ಟ ಮೆರುಗು ಲೇಪನದಿಂದ. ಜನಸಂಖ್ಯೆಯ ಏಕೈಕ ಕಾರಣಗಳಿಂದಾಗಿ ರಿಯಲ್ ಎಸ್ಟೇಟ್ ಬೆಲೆ ನಿಯಂತ್ರಣದಲ್ಲಿದೆಯೇ ಹೊರತು ಇಲ್ಲದಿದ್ದರೆ ಎಂದೋ ಪಾತಾಳ ಸೇರಿರುತ್ತಿತ್ತು.

ಇನ್ನು ಈ ಎಲ್ಲ ಅಸಂಬದ್ಧಗಳಿಗೆ ನಮ್ಮ ಪ್ರಗತಿಪರರು ಹೋರಾಟದ ಆಯಾಮ ಕೊಟ್ಟಿದ್ದಾರೆ. ಉದ್ಘೋಷಗಳ ಪರಿಯಲ್ಲೇ ಲಿಂಗಾಯತ-ವೀರಶೈವ, ಆಯ್ದ ಮೀಟೂ (ಜಾಗತಿಕ ಮೀಟೂ ಚಳುವಳಿಯ ಮೂಲೋದ್ದೇಶ ಅಪ್ರಾಪ್ತರ ಮೇಲಾದ ಲೈಂಗಿಕ ಶೋಷಣೆಯನ್ನು ಬಯಲು ಮಾಡುವುದು, ವೃತ್ತಿಗಳಲ್ಲಿ ನಡೆವ ಲೈಂಗಿಕ ಶೋಷಣೆಯನ್ನಲ್ಲ. ಅದಕ್ಕೆ ವೃತ್ತಿಪರತೆಯಲ್ಲಿಯೇ ಪರಿಹಾರವಿದೆ), ಅರ್ಬನ್ ನಕ್ಸಲರ ಬಂಧನಕ್ಕೆ ತುರ್ತು ಪರಿಸ್ಥಿತಿಯ ಮೆರುಗು ಕೊಟ್ಟದ್ದು, ಗುಡಿ ಚರ್ಚು ಮಸಜೀದಿಗಳ ಬಿಟ್ಟು ಹೊರಬನ್ನಿ ಎನ್ನುತ್ತಾ ಅಯ್ಯಪ್ಪನ ದೇವಸ್ಥಾನಕ್ಕೆ ಅಂಟಿಕೊಂಡದ್ದು, ಇತ್ಯಾದಿ, ಇತ್ಯಾದಿ "ಉದ್ಘೋಷ ಹೋರಾಟ"ಗಳಿಂದ ಹೋರಾಟದ ಮೂಲಭೂತ ಉದ್ದೇಶವನ್ನೇ ಬದಲಾಯಿಸಿಬಿಟ್ಟಿದ್ದಾರೆ.

ಗಂಭೀರ ಗಾಬರಿ ಹುಟ್ಟಿಸುವುದು ಈ ಎಲ್ಲ ಅಸಂಬದ್ಧತೆಗಳ "ಉದ್ಘೋಷ ಹೋರಾಟ"ಗಳ ಮುಂಚೂಣಿಯಲ್ಲಿ ಖ್ಯಾತ ವಿಶ್ವವಿದ್ಯಾಲಯಗಳ ಪ್ರೊಫೆಸರರುಗಳಿರುವುದು! ಹಿಂದಿದ್ದ ಇದೇ ಹಿನ್ನೆಲೆಯ ಕುವೆಂಪು, ಅಡಿಗ, ಅನಂತಮೂರ್ತಿ, ಲಂಕೇಶ್ ಮುಂತಾದವರ ತರ್ಕಬದ್ಧ ವೈಚಾರಿಕತೆಗೂ ಇಂದಿನ ಪ್ರೊಫೆಸರರುಗಳ ಅಸಂಬದ್ಧ ಪ್ರಲೋಭನೆಗಳಿಗೂ ಇರುವ ವಿಪರ್ಯಾಸ ಅಜಗಜಾಂತರ!

ಯಾವುದೇ ಘಟನೆಗೆ ಪ್ರತಿಭಟಿಸಿ ಪ್ರತಿಕ್ರಿಯಿಸುವುದನ್ನೇ ಹೋರಾಟ ಮಾಡಿಕೊಂಡಿದ್ದಾರೆ.
ಇವೆಲ್ಲವೂ ಟ್ರೋಲು, ಕಾಲೆಳೆಯುವಿಕೆಯಾಗುತ್ತವೇ ಹೊರತು ಹೋರಾಟಗಳಲ್ಲ.

ಪದೇ ಪದೇ ಕಮ್ಯುನಿಸ್ಟ್ ಉಲ್ಲೇಖಿಸುವ ಈ ಉದಾರವಾದಿಗಳು ಯಾವ ಕಮ್ಯುನಿಸ್ಟ್ ರಾಷ್ಟ್ರವನ್ನು ಕಂಡಿದ್ದಾರೆ?  ಜಗತ್ತಿನ ಎಲ್ಲ ಕಮ್ಯುನಿಸ್ಟ್ ಪ್ರಭುತ್ವಗಳು ಪ್ರಜಾಪೀಡಕವಾಗಿ, ಸರ್ವಾಧಿಕಾರವಾಗಿ, ಏಕವ್ಯಕ್ತಿ ಆರಾಧಕವಾಗಿ ಪರಿವರ್ತಿತಗೊಂಡಿರುವುದು ಸಾರ್ವಕಾಲಿಕ ವಾಸ್ತವ ಸತ್ಯ! ಉದಾರವಾದಿಗಳನ್ನು ಸೆರೆಮನೆಗೆ ತಳ್ಳಿ ಅತ್ಯಂತ ಹಿಂಸಾತ್ಮಕ ಕಿರುಕುಳ ನೀಡಿ ಕೊಲೆಗೈಯುವುದರಲ್ಲಿ ಕಮ್ಯುನಿಸ್ಟ್ ಸರ್ಕಾರಗಳು ಮುಂಚೂಣಿಯಲ್ಲದ್ದವು, ಇವೆ.

ಇನ್ನು ಇವರ ಸಂವಿಧಾನ ತಿದ್ದುಪಡಿ ಹೋರಾಟದ ಕುರಿತು, ಯಾವುದೇ ದೇಶದ ಸಂವಿಧಾನಗಳು ಉಸಿರಾಡುವ ಜೀವಂತ ದಸ್ತಾವೇಜುಗಳು. ಕಾಲಕ್ಕನುಗುಣವಾಗಿ ಹೊಸತಾಗುತ್ತ "ಬದಲಾಗಲೆಂಬ" ಉದ್ದೇಶಕ್ಕಾಗೆ ರಚಿಸಲ್ಪಟ್ಟಿವೆ. ನ್ಯಾಯಾಂಗ, ಶಾಸಕಾಂಗ ಮತ್ತು ಆಡಳಿತ ವರ್ಗ ಸಂವಿಧಾನದ ಭಾಗಗಳನ್ನು ಜಡವಾಗಿರಿಸದೆ ವರ್ತಮಾನದ ಅವಶ್ಯಕತೆಗೆ ತಕ್ಕಂತೆ "ಬದಲಾಯಿಸಿ" ಕ್ರಿಯಾಶೀಲವಾಗಿರಿಸಬೇಕೆಂಬುದೇ ಸಂವಿಧಾನ ರಚನೆಯ ಮೂಲೋದ್ದೇಶ. ಜೀವಂತ ಸಮಾಜಕ್ಕೆ ತಕ್ಕಂತೆ ವಿಕಸಿಸುವ ವೈಜ್ಞಾನಿಕ ಅನುಶಾಸನವಿರಬೇಕೇ ಹೊರತು ಶಾಸ್ತ್ರಪುರಾಣಗಳಂತಹ ಜಡಗ್ರಂಥವಲ್ಲ!

ಊಳಿಗಮಾನ್ಯ ವ್ಯವಸ್ಥೆ, ಜಾತೀಯತೆಯನ್ನು ವಿರೋಧಿಸಿ ನಡೆದ ಹೋರಾಟಗಳ ಸಿದ್ದಾಂತದ ಇತಿಹಾಸವನ್ನು ಮರೆತು ಊಳಿಗಮಾನ್ಯ ಪ್ರಜಾಪ್ರಭುತ್ವವನ್ನು ಮಾನ್ಯ ಮಾಡುತ್ತಾ, ಜಾತೀಯತೆಯನ್ನು ಅಸ್ಮಿತೆಯ ಹೆಸರಲ್ಲಿ ಬೆಂಬಲಿಸುತ್ತಿರುವ ಈ "ಉದರವಾದಿ"ಗಳಿಂದ "ಉದಾರವಾದ"ವನ್ನು ಬಿಡಿಸಿಕೊಳ್ಳಬೇಕಾದ ಅಸಂಬದ್ಧ ತುರ್ತು ಪರಿಸ್ಥಿತಿ ಇದೆ.