ಅಸ್ಪೃಶ್ಯತೆ ಧರ್ಮದ ಸೃಷ್ಟಿಯೇ ಅಥವಾ ವ್ಯವಸ್ಥೆಯ ಸೃಷ್ಟಿಯೇ?

ಭಾಗ ೧:
ಏಳನೇ ಶತಮಾನದ ಚೀನೀ  ಪ್ರವಾಸಿ ಹುಯೆನ್ ತ್ಸಾಂಗ್, ಜಾತಿಪದ್ದತಿಗಳನ್ನು ದಾಖಲಿಸುತ್ತ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಮತ್ತು ಬೌದ್ಧರೆಂದು ಗುರುತಿಸಿ, ಭಾರತದಲ್ಲಿ ಇಂದಿಗೂ ಪ್ರಸ್ತುತವಾಗಿರುವ ಸದಾ ಸಂಚಾರಿಗಳಾದ ಸಾಧು ಸನ್ಯಾಸಿಗಳನ್ನು ಯಾವುದೇ ಜಾತಿ ಇಲ್ಲದ ವರ್ಗಕ್ಕೆ ಸೇರಿಸುತ್ತ, ಎಲ್ಲಿಯೂ ಅಸ್ಪೃಶ್ಯತೆಯ ಬಗ್ಗೆ ಯಾವುದೇ ಮಾಹಿತಿಯನ್ನು ದಾಖಲಿಸಿಲ್ಲವೆಂಬುದು ಗಮನಾರ್ಹ ಸಂಗತಿ!

ಅಂದರೆ ಅಸ್ಪೃಶ್ಯತೆ ಆ ಕಾಲದಲ್ಲಿ ಇತ್ತೇ ಇಲ್ಲವೇ? ಅಥವಾ ಹುಯೆನ್ ತ್ಸಾಂಗ್ ಇದನ್ನು ಕಂಡುಕೊಳ್ಳುವಲ್ಲಿ ವಿಫಲನಾದನೇ?

ಮೊದಲು ಹುಯೆನ್ ತ್ಸಾಂಗ್ ಅಸ್ಪೃಶ್ಯತೆಯನ್ನು ಗುರುತಿಸುವಲ್ಲಿ ವಿಫಲನಾದನೇ ನೋಡೋಣ.
 
ಹುಯೆನ್ ತ್ಸಾಂಗನು ಭಾರತದ ಉದ್ದಗಲಕ್ಕೂ ಸಂಚರಿಸಿ ತನ್ನ ಜ್ಞಾನಾರ್ಜನೆಯೊಂದಿಗೆ ಮುಂದಿನ ಜನಾಂಗಕ್ಕೆ ಭಾರತದ ಇತಿಹಾಸದ ನೈಜ ಜೀವನದ ಚಿತ್ರಣವನ್ನು ಕೊಟ್ಟಿದ್ದಾನೆ. ಆತನಲ್ಲಿದ್ದ ಸ್ಥಿತಪ್ರಜ್ಞತೆ, ವಿವರಣಾ ಕೌಶಲ್ಯ, ವಿಮರ್ಶೆ, ಮತ್ತು ಜನಜೀವನ ಚಿತ್ರಣ ಅಂದಿನ ಭಾರತದ ಇತಿಹಾಸವನ್ನು ಯಾವುದೇ ಉತ್ಪ್ರೇಕ್ಷೆಯಿಲ್ಲದೆ ತೆರೆದಿಡುತ್ತದೆ.

ಈತ ದಾಖಲಿಸಿದಂತಹ ಭೌಗೋಳಿಕ ವಿಶೇಷಣಗಳಾದ ಹಾಮೀ ಮರುಭೂಮಿಯಲ್ಲಿನ ಕರಬೂಜಗಳು ಅಂದಿಗೂ ಖ್ಯಾತಗೊಂಡಿದ್ದವು ಹಾಗೂ ಇಂದಿಗೂ ಕೂಡಾ! ಶತಶತಮಾನಗಳೇ ಕಳೆದು ಹೋಗಿದ್ದರೂ ಹಾಮೀ ಕರಬೂಜಗಳು ಜಗತ್ತಿನಲ್ಲೇ ಅತ್ಯಂತ ರುಚಿಕರ ಎಂಬುದು ಈಗಲೂ ಸತ್ಯ.  ಆತನ ವರ್ಣನೆಯ ಸಿಂಧ್ ಪರ್ವತಶ್ರೇಣಿಗಳು, ಗಂಗಾನದಿ, ಕಶ್ಮೀರದ ಕಣಿವೆಗಳು, ಅರಣ್ಯಶ್ರೇಣಿಗಳು, ಅಸ್ಸಾಮಿನ ಮಳೆಗಾಲ, ಅಲ್ಲಿನ ವನ್ಯಪ್ರಾಣಿ ಸಮೂಹವಾದ ಆನೆ, ಘೇಂಡಾಮೃಗ, ಕಪ್ಪುಚಿರತೆ ಹೇಗಿದ್ದವೋ ಹಾಗೆಯೇ ಇರುವವು, ಸಂಖ್ಯೆಗಳ ವ್ಯತ್ಯಾಸವಿರಬಹುದು. ಆದರೆ ಭಾರತೀಯ ಭೌಗೋಳಿಕತೆ ಯಥಾವತ್ತಾಗಿದೆ. 

ಇನ್ನು ಭಾರತದ ಜನತೆ, ಹುಯೆನ್ ತ್ಸಾಂಗನು ವರ್ಣಿಸಿದ ಗಂಗಾತೀರದ ದರೋಡೆಕೋರರ ಖ್ಯಾತಿ ಕೂಡಾ! ಇಂದಿಗೂ ಬಿಹಾರ್, ಉತ್ತರಪ್ರದೇಶಗಳಲ್ಲಿ ದರೋಡೆಕೋರರ ಹಾವಳಿ. ಉದಾಹರಣೆಗೆ ಪ್ರಖ್ಯಾತ ಚಂಬಲ್ ಕಣಿವೆಯ ದರೋಡೆಕೋರರು. ಆತ ಕಂಡಂತೆ ಗುಜರಾತಿನಲ್ಲಿ ಕೃಷಿಕರಿಗಿಂತ ಹೆಚ್ಚಾಗಿ ವ್ಯಾಪಾರಿಗಳಿದ್ದ ಚಿತ್ರಣ ಕೂಡಾ ಇಂದೇನು ಬದಲಾಗಿಲ್ಲ. ಇಂದು ವಿಶ್ವದಲ್ಲೇ ಗುಜರಾತಿನವರು ವ್ಯಾಪಾರಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ಆತನ ವರ್ಣನೆಯ ಮಹಾರಾಠರು ಮಹಾನ್ ಪರಾಕ್ರಮಶಾಲಿಗಳೆಂಬುದನ್ನು ಪ್ರಮಾಣೀಕರಿಸುವಂತೆ ಬ್ರಿಟಿಷರಿಗೆ ಕಟ್ಟಕಡೆಯದಾಗಿ ಶರಣಾದವರು ಮರಾಠರು. 

ಒಟ್ಟಾರೆ ಭಾರತ ಇತಿಹಾಸದ ರಾಯಭಾರಿಯಾಗಿ ಹುಯೆನ್ ತ್ಸಾಂಗ್ ಎದ್ದು ಬಂದು ಚರಿತ್ರೆಯ ಪುಟಗಳನ್ನು ಯಥಾವತ್ತಾಗಿ ತೆರೆದಿಡುತ್ತಾನೆ. ಇಂತಹ ಒಂದು ಖಚಿತತೆ ವಿಶ್ವದ ಇನ್ಯಾವ ಇತಿಹಾಸದ ಪುಟಗಳಲ್ಲಿಯೂ ಕಾಣಬರುವುದಿಲ್ಲ. 

ಅಂತಹ ಖಚಿತತೆಯ ಹುಯೆನ್ ತ್ಸಾಂಗ್ ಅಸ್ಪೃಶ್ಯತೆಯನ್ನು ಗುರುತಿಸುವಲ್ಲಿ ಎಡವಿಲ್ಲವೆನಿಸುತ್ತದೆ. ಆದರೂ  ಅದನ್ನು ಖಚಿತ ಪಡಿಸಿಕೊಳ್ಳಲು ಹುಯೆನ್ ತ್ಸಾಂಗನಿಗಿಂತ ಎರಡು ಶತಮಾನಗಳ ಮೊದಲೇ ಬಂದಿದ್ದ ಮತ್ತೊಬ್ಬ ಚೀನೀ ಯಾತ್ರಿಕ ಫಾಹಿಯಾನನ ಕಡೆ ನೋಡೋಣ. ಏಕೆಂದರೆ ಪ್ರಸ್ತುತ ದಲಿತ ಇತಿಹಾಸ ಕೂಡಾ ಚೀನೀ ಯಾತ್ರಿಕ ಫ಼ಾಹಿಯಾನನೆಡೆಗೇ ಬೆರಳು ತೋರುತ್ತದೆ. ಕ್ರಿ.ಶ. ಐದನೇ ಶತಮಾನದಲ್ಲಿ ಭಾರತಕ್ಕೆ ಭೇಟಿ ಕೊಟ್ಟಿದ್ದ ಫ಼ಾಹಿಯಾನ್ ಮೊಟ್ಟಮೊದಲ ಬಾರಿಗೆ ಚಾಂಡಾಲರ ಕುರಿತಾಗಿ ಟಿಪ್ಪಣಿ ಬರೆದಿದ್ದುದನ್ನು ತೋರುತ್ತಾ, ಅಸ್ಪೃಶ್ಯತೆಯ ಇತಿಹಾಸವನ್ನು ಐದನೇ ಶತಮಾನಕ್ಕೆ ಕರೆದೊಯ್ಯುತ್ತದೆ. ದಲಿತ ಇತಿಹಾಸ.  ಅದಕ್ಕೂ ಮುಂಚಿನ ಯಾವುದೇ ಐತಿಹಾಸಿಕ ಗ್ರಂಥಗಳಲ್ಲಿ ಅಸ್ಪೃಶ್ಯತೆಯ ಉಲ್ಲೇಖವಿಲ್ಲದಿರುವುದರಿಂದ ಫಾಹಿಯಾನನ ಕಾಲದಿಂದ ಅಸ್ಪೃಶ್ಯತೆ ಇದೆ ಎನ್ನುತ್ತದೆ ಇತಿಹಾಸ.

ಇನ್ನು ಋಗ್ವೇದದ ನಂತರದ ವೇದಗಳಲ್ಲಿ ಚಾಂಡಾಲರ ಕುರಿತು ಉಲ್ಲೇಖವಿದ್ದರೂ ಅವರ ಕೈಯಿಂದ ಆಹಾರ ಸ್ವೀಕಾರಯೋಗ್ಯವೆಂದಿದೆ ಎಂಬ ವಾದವಾಗಲೀ, ಕೆಳಸ್ತರದ ಉದ್ಯೋಗಗಳ ಕೊಳಕುತನದಿಂದ ಅಸ್ಪೃಶ್ಯತೆ ಉದಯವಾಗಿರಬಹುದೆಂಬ ವಿಶ್ಲೇಷಣೆಗಳಾಗಲಿ ಒಪ್ಪತಕ್ಕದ್ದವಾದರೂ ಯಾವುದೇ ಕಾಲದ ಖಚಿತತೆಯನ್ನು ಕೊಡುವುದಿಲ್ಲ. ಅದಲ್ಲದೇ ವೇದಗಳನ್ನು ಕಾಲಕಾಲಕ್ಕೆ ಪರಿಷ್ಕರಿಸಲಾಗಿದೆ ಎನ್ನುತ್ತದೆ ಇತಿಹಾಸ.

ಅದೇ ರೀತಿ ಫ಼ಾಹಿಯಾನನ ಟಿಪ್ಪಣಿಯನ್ನು ಕೂಡಾ "ಅಸ್ಪೃಶ್ಯತೆ"ಯ ಖಚಿತ ದಾಖಲೆಯೆಂದು ಪರಿಗಣಿಸಲು ಸಾಧ್ಯವಿಲ್ಲ. ಏಕೆಂದರೆ ಫ಼ಾಹಿಯಾನನು ತನ್ನ ದಾಖಲೆಯಲ್ಲಿ ಅಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಮಾಂಸವನ್ನು ಮಾರಾಟ ಮಾಡಲು "ಚಾಂಡಾಲ", "ಬೆಸ್ತ" ಮತ್ತು "ಬೇಟೆಗಾರ"ರು ಮಾತ್ರ ಅರ್ಹರಾಗಿದ್ದರು ಎನ್ನುತ್ತಾನೆ. ಈ ಚಾಂಡಾಲರು ರಕ್ತಸಿಕ್ತ ವಸ್ತ್ರಗಳಿಂದ ವಿಕಾರವಾಗಿಯೂ  ಭೀಬತ್ಸರಾಗಿಯೂ ಕಾಣುವುದಲ್ಲದೇ  "ಪಾಪಿಗಳು", "ಕಟುಕರು" ಎಂದು  ಕರೆಸಿಕೊಳ್ಳುತ್ತಾ ಊರಿನ ಹೊರಗೆ ವಾಸಿಸಬೇಕಿದ್ದಿತು ಎಂದು ದಾಖಲಿಸಿದ್ದಾನೆ.  ಮಾಂಸ ಮಾರಾಟದೊಂದಿಗೆ ಶವಸಂಸ್ಕಾರವನ್ನು ಕೂಡ ಚಾಂಡಾಲರು ನಿಭಾಯಿಸುತ್ತಿದ್ದರು. ಇವರು ನಗರ ಪ್ರದೇಶಗಳನ್ನು ಪ್ರವೇಶಿಸುವಾಗ ತಮ್ಮ ಆಗಮನವನ್ನು ಸೂಚಿಸಲು ಮರದ ಹಲಗೆಯಿಂದ ಶಬ್ದ ಮಾಡುತ್ತ ಸಂಚರಿಸಬೇಕಿದ್ದಿತು. ಈ ಶಬ್ದ ಕೇಳಿದ ಜನ (ಇವರನ್ನು ನೋಡಲು ಬಯಸದ) ಇವರಿಗೆ ದಾರಿಯನ್ನು ಬಿಟ್ಟು ಮನೆ ಸೇರಿಕೊಳ್ಳುತ್ತಿದ್ದರು.  ಫ಼ಾಹಿಯಾನ್ ತನ್ನ ಟಿಪ್ಪಣಿಯನ್ನು ಮುಂದುವರಿಸುತ್ತಾ ಚಾಂಡಾಲರು ತಮ್ಮ ಕಟುಕ ವೃತ್ತಿಯನ್ನು ಬಿಟ್ಟು ಪರಿವರ್ತನೆಗೊಂಡಲ್ಲಿ  (ಮತಾಂತರವಲ್ಲ) ಪುರೋಹಿತರಾಗುವ ವ್ಯವಸ್ಥೆ ಕೂಡಾ ಇತ್ತೆಂದು ಸ್ಪಷ್ಟಪಡಿಸುತ್ತಾನೆ. ಪ್ರಾಣಿವಧೆ ಮಹಾಪಾಪ ಎಂಬ ಧಾರ್ಮಿಕಾರ್ಥದಲ್ಲಿ ಪಾಪಿಗಳೆಂದು, ಕನಿಕರವಿಲ್ಲದ ಕಟು ಹೃದಯದವರೆಂಬ ಭಾವಾರ್ಥದಲ್ಲಿ ಕಟುಕರೆಂದೂ ಇವರು ಈ ರೀತಿ ಕರೆಸಿಕೊಂಡಿರಬಹುದು. ಅದೇ ರೀತಿ ರಕ್ತಸಿಕ್ತವಾದ ವಸ್ತ್ರಗಳಿಂದ ವಿಕಾರವಾಗಿ ಕಾಣುತ್ತಿದ್ದ ಇವರನ್ನು ನೋಡಲಾಗದವರನ್ನು, ಶುಚಿರಭೂತ  ಯಾ ಮಡಿವಂತರು, ರಕ್ತ, ಮಾಂಸ ನೋಡಲಾಗದ ಅಳ್ಳೆದೆಯ ಜನರೆಂದೂ ಪರಿಗಣಿಸಬಹುದು. 

ಹಾಗಿದ್ದಾಗ ಫಾಹಿಯಾನ್ ಕಂಡದ್ದು ಅಸ್ಪೃಶ್ಯತೆಯೇ ಅಥವಾ ಮಾಂಸೋದ್ಯಮದೆಡೆಗಿದ್ದ ಸಾಮಾಜಿಕ ವ್ಯವಸ್ಥೆಯೇ?  ಈ ಹಿನ್ನೆಲೆಯಲ್ಲಿ ಆತ ದಾಖಲಿಸಿರುವುದು ಒಂದು "ಸಾಮಾಜಿಕ ವ್ಯವಸ್ಥೆ"ಯ ಶ್ರೇಣೀಕೃತ ವರ್ಣಸಂಕರ ಎನ್ನಬೇಕಾಗುತ್ತದೆಯೇ ಹೊರತು "ಧರ್ಮಾಧರಿತ" ವರ್ಣಸಂಕರವಾಗಿಯಲ್ಲ.

ಅದಲ್ಲದೇ ಆತ ಎಲ್ಲಿಯೂ ಇವರು ಮುಟ್ಟಲು ಯಾ ಮುಟ್ಟಿಸಿಕೊಳ್ಳಲು ಅನರ್ಹರೆಂದು ಹೇಳಿಲ್ಲ. ಅದನ್ನು ಹೇಳುವ ಅವಶ್ಯಕತೆಯೇ ಅವನಿಗಿರಲಿಲ್ಲ! ಏಕೆಂದರೆ ಜನ ಅವರ ಕೈಯಿಂದ ಮಾಂಸವನ್ನು ಕೊಳ್ಳುತ್ತಿದ್ದರು ಮತ್ತು ಪರಿವರ್ತಿತರಾದರೆ ಅವರನ್ನು ಆರಾಧಿಸುತ್ತಿದ್ದರು. 

ಹಾಗಾಗಿ ಅಸ್ಪೃಶ್ಯತೆಯ ಕಾಲ ಖಚಿತವಾಗಿ ಐದನೇ ಶತಮಾನವಲ್ಲ!

ಇಂದಿನ ಜಾಗತಿಕ ಪ್ರಪಂಚದಲ್ಲಿ ಐಟಿ ಪಾರ್ಕ್, ಆಹಾರ ಪಾರ್ಕ್, ಜವಳಿ ಪಾರ್ಕ್, ಕರಕುಶಲ ಪಾರ್ಕ್, ಡೈಮಂಡ್ ಹಬ್ ಇತರೆ ವಾಣಿಜ್ಯ ಉದ್ಯಮಗಳಿಗೆ ಮೀಸಲಾದ ಪಾರ್ಕ್ ಯಾ ನಗರಪ್ರದೇಶಗಳಿಂದ ಬೇರ್ಪಡಿಸಿದಂತಿರುವ ಮೀಸಲು ಜಾಗಗಳಿವೆ. ಅದೇ ರೀತಿ ಮಾಂಸೋದ್ಯಮ, ಚರ್ಮೋದ್ಯಮ, ಮತ್ಸ್ಯೋದ್ಯಮ ಮತ್ತು ಕಸ ವಿಲೇವಾರಿ ಉದ್ಯಮ ಕೂಡಾ!  ಇವೆಲ್ಲದಕ್ಕೂ ಆಯಾಯ ಉದ್ಯಮಕ್ಕೆ ಸಂಬಂಧಿಸಿದ ಸಕಾರಣಗಳಿರುವುದರಿಂದಲೇ ಅವನ್ನು ವಸತಿಪ್ರದೇಶಗಳಿಂದ ಬೇರ್ಪಡಿಸಿರುತ್ತಾರೆ. ಇದು ಯಾವುದೇ ಶಿಸ್ತುಬದ್ಧ ನಗರಾಭಿವೃದ್ದಿಯ ಪ್ರಪ್ರಥಮ ವರ್ಗೀಕರಣ ಆಯಾಮ. ಕ್ರಿಸ್ತಪೂರ್ವ ಸಿಂಧೂ ಕೊಳ್ಳದ ನಾಗರೀಕತೆಯಿಂದ ಹಿಡಿದು ಇಂದಿನ ಜಾಗತಿಕ ನಗರಗಳ ನವ್ಯ ನಾಗರೀಕತೆಯವರೆಗೆ ಕೂಡಾ!  ಕೇವಲ ವಾಣಿಜ್ಯ ಕೇಂದ್ರಿತ ನಗರ ವಿಭಜನೆಯಲ್ಲದೆ ಜನಾಂಗೀಯ ವಿಭಜನೆ ಕೂಡಾ ಇರುತ್ತಿತ್ತು. ಬ್ರಾಹ್ಮಣರ ಕೇರಿ, ಕುರುಬರ ಕೇರಿ, ಕುಂಬಾರರ ಕೇರಿ, ಇತ್ಯಾದಿ ಇತ್ಯಾದಿ. ಇಲ್ಲಿ ಬ್ರಾಹ್ಮಣ ಮಡಿಯುಟ್ಟು ಶುಚಿರಭೂತನಾಗಿದ್ದು, ಕುಂಬಾರ ಮಣ್ಣು ಮೆತ್ತಿಕೊಂಡಿದ್ದರೆ ಅದು ಕೇವಲ ಅವರ ಔದ್ಯೋಗಿಕ ಕಾರಣವೇ ಹೊರತು ವರ್ಣಸಂಕರವಾಗಿರಲಿಲ್ಲ.  ಇದು ಆಧುನಿಕ ಸಮಾಜದ ಬಿಳಿಯ ಕಾಲರ್ ಮತ್ತು ನೀಲಿ ಕಾಲರ್ ವ್ಯತ್ಯಾಸವಿದ್ದಂತೆ, ಕಂಪ್ಯೂಟರ್ ತಜ್ಞ ಮತ್ತು ಕಾರ್ ಮೆಕ್ಯಾನಿಕ್ಕುಗಳ ವೃತ್ತಿಯ ಸ್ಥಳಗಳ ವ್ಯತ್ಯಾಸವಿದ್ದಂತೆಯೇ ಹೊರತು ಜಾತಿ, ಧರ್ಮಗಳಿಂದಾದ ವ್ಯತ್ಯಾಸವಲ್ಲ!  

ಕೇವಲ ಹೂಸಿದರೆ ಯಾರೂ ಪಕ್ಕದಲ್ಲಿ ಕೂರದ ಮಾನವ ಸಹಜ ಸ್ವಭಾವ, ರಕ್ತಸಿಕ್ತವಾಗಿರುವ ಸ್ವಂತ ಸೋದರನನ್ನ ಮುಟ್ಟಿ ತಬ್ಬಿಕೊಂಡೀತೇ?

ಫಾಹಿಯಾನನು ಕಂಡಿದ್ದ ಚಾಂಡಾಲರು ಸಮಾಜದ ಭಾಗವಾಗಿ ಎಂದಿನಿಂದಲೋ ಇದ್ದರೂ ಅಸ್ಪೃಶ್ಯತೆ ಆಗಿನ್ನೂ ಸಮಾಜದ ಭಾಗವಾಗಿರಲಿಲ್ಲ. ಹಾಗಾಗಿಯೇ ಏಳನೇ ಶತಮಾನದ ಹುಯೆನ್ ತ್ಸಾಂಗ್ ಚಾಂಡಾಲರನ್ನು ಕಂಡಿದ್ದರೂ ಅಸ್ಪೃಶ್ಯತೆಯನ್ನು ಕಂಡಿರಲಿಲ್ಲವೆಂದು ಖಚಿತವಾಗಿ ಹೇಳಬಹುದೆನಿಸುತ್ತದೆ.

ಇತಿಹಾಸ ಹೀಗಿರಬೇಕಿದ್ದರೆ ಅಸ್ಪೃಶ್ಯತೆ ಹೇಗೆ, ಯಾವ ಕಾಲದಲ್ಲಿ ಸೃಷ್ಟಿಯಾಯಿತು?

ಭಾಗ ೨:
ಭಾರತ ಮೂಲತಃ ಜೈನ ರಾಷ್ಟ್ರವೆನ್ನಬಹುದು. ಪ್ರಥಮ ತೀರ್ಥಂಕರ ರಿಷಭನಾಥನ ಪುತ್ರನೆನ್ನಲಾದ ಭರತನ ಹೆಸರು ಹೊತ್ತ ಭರತಶಕೆಯ ಭಾರತದಲ್ಲಿ ಜೈನ ಧರ್ಮ ಪ್ರಮುಖವಾಗಿ ಕ್ಷತ್ರಿಯರ ಧರ್ಮವಾಗಿ ಕ್ರಮೇಣ ಬ್ರಾಹ್ಮಣರನ್ನು ಆಕರ್ಷಿಸುತ್ತ ಸಾಹಿತ್ಯಿಕವಾಗಿ ಬೆಳೆದು ಎಲೈಟ್ ಜನಗಳ ಧರ್ಮವೆನಿಸಿತ್ತು. ಇತ್ತ ಬೌದ್ಧಧರ್ಮ ವಣಿಕ/ವರ್ತಕ/ವೈಶ್ಯರ ಧರ್ಮವಾಗಿ ಬೆಳೆಯಿತು. ಇನ್ನು ಹಿಂದೂ ಧರ್ಮ ವರ್ಣಸಂಕರಗಳ ಒಂದು ಸಾಮಾಜಿಕ ವ್ಯವಸ್ಥೆಯಾಗಿಯೇ ಮುಂದುವರಿದಿತ್ತು. ಈ ವರ್ಣಸಂಕರದ ಧರ್ಮರಹಿತರು ಜೈನ, ಬೌದ್ಧಕ್ಕೆ ಪರ್ಯಾಯವಾಗಿ ತಮ್ಮ ಸಾಮಾಜಿಕ ವ್ಯವಸ್ಥೆಯನ್ನೇ ಧರ್ಮವಾಗಿ ಬಿಂಬಿಸಿದರು. ಆ ಪರ್ಯಾಯ ವ್ಯವಸ್ಥೆಗನುಗುಣವಾಗಿ ರಾಮಾಯಣ, ಮಹಾಭಾರತಗಳು ಸೃಷ್ಟಿಯಾದವು.  ಹಿಂದೂ ಧರ್ಮ ಪೌರಾಣಿಕತೆಯನ್ನು ಮೆರೆದರೆ, ಬೌದ್ಧ ಧರ್ಮ ತತ್ವಜ್ಞಾನಕ್ಕೆ, ಮತ್ತು ಜೈನ ಧರ್ಮ ಶೌರ್ಯ, ತ್ಯಾಗ, ಸಾಹಿತ್ಯಕ್ಕೆ ಪ್ರಾಮುಖ್ಯತೆ ಕೊಟ್ಟಿದ್ದವು. ಆದರೆ ಈ ಮೂರೂ ಧರ್ಮಗಳೂ ಕ್ರಮೇಣ  ಈರ್ಷ್ಯೆಯಿಂದ ಪರಸ್ಪರ ಧರ್ಮಯುದ್ಧದಲ್ಲಿ ತೊಡಗಿದವು.

ಕ್ರಿ. ಶ. 647ರಲ್ಲಿ ಚಕ್ರವರ್ತಿ ಹರ್ಷನ ಮರಣಾನಂತರ ಹರ್ಷನ ಸಾಮ್ರಾಜ್ಯ ಛಿದ್ರವಾಯಿತು. ಹರ್ಷನ ಸಾಮಂತರು ಸ್ವತಂತ್ರರಾದರು.  ಅರಾಜಕತೆ, ದಂಗೆ, ಮತ್ತು ತೀವ್ರ ಬರಗಾಲಗಳು ಭಾರತವನ್ನು ಅಪ್ಪಳಿಸಿದವು. ಎಲ್ಲೆಲ್ಲೂ ಕೋಲಾಹಲ, ಹತಾಶೆ, ಸುಲಿಗೆಗಳು ಮೆರೆದವು. ಹರ್ಷನ ನಂತರದ ಮುಂದಿನ ಆರನೂರರಿಂದ ಏಳುನೂರು ವರ್ಷಗಳವರೆಗೆ ಭಾರತ ಒಂದು ಸಂಯುಕ್ತ ರಾಷ್ಟ್ರವಾಗಿರದೇ ಅನೇಕ ಸಣ್ಣ ಸಣ್ಣ ಸಂಸ್ಥಾನಗಳ ಛಿದ್ರ ರಾಷ್ಟ್ರವಾಗಿದ್ದಿತು. ಅಷ್ಟೇ ಅಲ್ಲದೇ ಹರ್ಷನ ನಂತರದ ಮುಂದಿನ  ಆರು ಶತಮಾನಗಳಲ್ಲಿ ಹಿಂದೂಧರ್ಮದ ಪಂಥಗಳು ಮತ್ತೆ ಮಂಚೂಣಿಗೆ ಬಂದವು. ತಮ್ಮ ತಮ್ಮ ಅನುಯಾಯೀ ರಾಜರುಗಳ ಮೇಲೆ ಪ್ರಭಾವ ಬೀರುತ್ತ ಶೈವರು, ವೈಷ್ಣವರು, ಜೈನರು  ಯಶಸ್ವಿಯಾಗಿ ಬೌದ್ಧ ಧರ್ಮವನ್ನು ತುಳಿದುಹಾಕಿದರು.  ಗುರ್ಜರರು, ರಾಷ್ಟ್ರಕೂಟರು, ಚೋಳರು ಪ್ರಮುಖವಾಗಿ ಆಳಿದರೂ ಕ್ರಮೇಣ ಬಂಡುಕೋರರ ಕೈ ಮೇಲಾಗಿ ಭಾರತ ಮತ್ತಷ್ಟು ಚಿಕ್ಕ ಚಿಕ್ಕ ಸಂಸ್ಥಾನಗಳಾಗಿ ಛಿದ್ರವಾಯಿತು.  ಹಿಂದೂ ಧರ್ಮ ಕೂಡಾ ಧರ್ಮದ ಸ್ವರೂಪವಾಗಿರದೆ ಜಾತಿ, ಪಂಥಗಳಾಗಿ ಛಿದ್ರವಾಯಿತು. 

ಆ ಒಂದು ರಾಜಕೀಯ/ಧಾರ್ಮಿಕ/ಸಾಮಾಜಿಕ ಪಲ್ಲಟ ಪರ್ವದಲ್ಲಿ ದಬ್ಬಾಳಿಕೆಯ, ಸ್ವೇಚ್ಚಾಚಾರದ ಊಳಿಗಮಾನ್ಯ ವ್ಯವಸ್ಥೆ ಎಲ್ಲಾ ಸ್ತರಗಳಲ್ಲಿ ಬಲವಾಗುತ್ತಾ ಸಾಗಿತು. ಬಲವಾದ ಊಳಿಗಮಾನ್ಯ ವ್ಯವಸ್ಥೆಯಲ್ಲಿ ಗುಲಾಮಗಿರಿಗೆ ಸುಲಭವಾಗಿ ಚಾಂಡಾಲರನ್ನೊಳಗೊಂಡಂತೆ ಕೆಳಸ್ತರದ ಜನ ತುತ್ತಾದರು. ಆ ಒಂದು ದಬ್ಬಾಳಿಕೆ ಕ್ರಮೇಣ ಅಸ್ಪೃಶ್ಯತೆಯ ವಿಕೃತ ರೂಪವನ್ನು ಪಡೆದುಕೊಂಡಿರಬಹುದು. ಹಾಗಾಗಿ ಎಂಟನೇ ಶತಮಾನದಿಂದ ಅಸ್ಪೃಶ್ಯತೆ ಆರಂಭವಾಯಿತು ಎನ್ನಬಹುದು. ಈ ವಿಶ್ಲೇಷಣೆಗೆ ಪೂರಕವಾಗಿ ಶಂಕರಾಚಾರ್ಯರು ಮತ್ತು ಚಾಂಡಾಲನೋರ್ವನ ನಡುವೆ ವಾರಾಣಾಸಿಯಲ್ಲಿ ನಡೆಯಿತೆನ್ನಲಾದ ಸಂವಾದ ಅಸ್ಪೃಶ್ಯತೆಯ ಪದ್ದತಿ ಜಾರಿಯಲ್ಲಿದ್ದುದನ್ನು ಸ್ಪಷ್ಟಪಡಿಸುತ್ತದೆ. ಈ ಘಟನೆ  ನಡೆದದ್ದು ಹರ್ಷನ ಸಾವಿನ 170 ವರ್ಷಗಳ ನಂತರ. ಶಂಕರಾಚಾರ್ಯರ ಕಾಲಘಟ್ಟ ಕ್ರಿ. ಶ.788 ರಿಂದ ಕ್ರಿ. ಶ. 820!

ಹಾಗಿದ್ದರೆ ಇದನ್ನು ವಿರೋಧಿಸಿ ತುಳಿತಕ್ಕೊಳಗಾದವರು ದಂಗೆ ಏಳಲಿಲ್ಲವೇ? 

ಖಂಡಿತ ಜನ ದಂಗೆದ್ದಿದ್ದರು. ಈ ಆಕ್ರೋಶವನ್ನು ಬಳಸಿಕೊಂಡು ಸಾಕಷ್ಟು ನವ ಪ್ರಭುತ್ವಗಳು, ಭಕ್ತಿಪಂಥಗಳು ಉದಯವಾದವು. ಉದಾಹರಣೆಗೆ ಕರ್ನಾಟಕದಲ್ಲಿ ಹತ್ತನೇ ಶತಮಾನದಿಂದ ಆರಂಭವಾದ ವೀರಶೈವ ಯಾ ಲಿಂಗಾಯತ ಶರಣ ಚಳುವಳಿ, ಹಕ್ಕ ಬುಕ್ಕರಿಂದ ಸ್ಥಾಪಿತವಾದ ವಿಜಯನಗರ ಸಾಮ್ರಾಜ್ಯ ಇವೆಲ್ಲವೂ ಆ ಆಕ್ರೋಶದ ಧ್ರುವೀಕರಣ.  ಈ ಧ್ರುವೀಕರಣದ ಭಾಗವಾಗಿ ಅಸ್ಪೃಶ್ಯರು ಪ್ರಭುತ್ವಗಳಲ್ಲಿ ಸೈನಿಕರಾಗಿ, ಭಕ್ತಿಪಂಥಗಳಲ್ಲಿ ಭಕ್ತರಾಗಿ ಪಾಲ್ಗೊಂಡಿದ್ದರು.  ದುರಾದೃಷ್ಟವಶಾತ್ ಇವೆಲ್ಲವೂ ಊಳಿಗಮಾನ್ಯ ವ್ಯವಸ್ಥೆಯಿಂದ ತುಳಿಯಲ್ಪಟ್ಟವು ಯಾ ಊಳಿಗಮಾನ್ಯ ವ್ಯವಸ್ಥೆಯನ್ನು ಅಪ್ಪಿಕೊಂಡವು. ಹರ್ಷನ ಸಾವಿನ ನಂತರ ಪಂಥಗಳಾಗಿ ವಿಭಜನೆಗೊಂಡಿದ್ದ ಹಿಂದೂಧರ್ಮ, ಭಕ್ತಿಪಂಥ ಚಳುವಳಿಗಳಲ್ಲಿ ಮತ್ತು ಸಿಡಿದೆದ್ದ ನವ್ಯ ಪ್ರಭುತ್ವಗಳ ಈ ಹೊಸ ಭರಾಟೆಯಲ್ಲಿ ಮತ್ತಷ್ಟು ಪಂಥ/ಜಾತಿಗಳಾಗಿ ವಿಭಜನೆಗೊಂಡಿತು.  ಅದಲ್ಲದೇ ತನ್ನ ವಿಭಜನೆಯಲ್ಲೂ "ವೈವಿಧ್ಯತೆಯಲ್ಲಿ ಏಕತೆ"  ಸಾಧಿಸುತ್ತ ಹಿಂದೂ ಧರ್ಮ, ಜೈನರನ್ನು ತನ್ನ ಮುಂದಿನ ಗುರಿಯಾಗಿಸಿಕೊಂಡು ಜೈನಧರ್ಮವನ್ನು ಯಶಸ್ವಿಯಾಗಿ ತುಳಿದುಹಾಕಿತು.  ಇದನ್ನು ಹಲವು ಭಕ್ತಿಪಂಥ ಚಳುವಳಿಗಳು ಕೂಡ ಪ್ರೋತ್ಸಾಹಿಸಿದವು.  ಯಾವ ಎಗ್ಗಿಲ್ಲದೇ ಸಾಮ, ದಾನ, ದಂಡ, ಭೇದ ನೀತಿಯನ್ನು ಭಕ್ತಿಪಂಥಗಳು ಕೂಡ ಎಗ್ಗಿಲ್ಲದೆ ಪ್ರಯೋಗಿಸಿದವು.  ಈ ಐತಿಹಾಸಿಕ ಧರ್ಮಯುದ್ಧಗಳ ಧರ್ಮಕಾಂಡದ ಮೇಲ್ಪಂಕ್ತಿಯನ್ನೇ ನಂತರದ ಇಸ್ಲಾಂ ಕೂಡ ಅನುಸರಿಸಿತು. ಇನ್ನು  ಉಳಿಗಮಾನದಲ್ಲಿ ಗುಲಾಮರಿರದಿದ್ದರೆ ಹೇಗೆ? ಹಾಗಾಗಿ ಮತ್ತೆ ಅಸ್ಪೃಶ್ಯತೆ ಬಲಗೊಂಡಿತು.

ಇಂದಿನ ಸ್ವಾತಂತ್ರ್ಯ ಭಾರತದಲ್ಲಿನ ಪ್ರಜಾಪ್ರಭುತ್ವ ಕೂಡಾ ಊಳಿಗಮಾನ್ಯ ಪ್ರಜಾಪ್ರಭುತ್ವ!  ಐತಿಹಾಸಿಕವಾಗಿ ಹಿಂದೂ ಧರ್ಮ ಹೇಗೆ ವಿಭಿನ್ನ ಕಾಲಘಟ್ಟದಲ್ಲಿ ಪಂಥ, ಜಾತಿಯಾಗಿ ವಿಭಜನೆಗೊಂಡಿತೋ ಅದೇ ರೀತಿ ಇಪ್ಪತ್ತನೇ ಶತಮಾನದಲ್ಲಿ ಜಾತಿಗಳು ವಿಭಜನೆಯಾಗುತ್ತಿವೆ.  ಒಕ್ಕಲಿಗರು ಗಂಗಡಿಕಾರ, ಮೊರಸು, ಕುಂಚಿಟಿಗ (ಇದರಲ್ಲಿ ಕುಂಚಿಟಿಗ ಲಿಂಗಾಯತ, ಕುಂಚಿಟಿಗ ಒಕ್ಕಲಿಗ ಬೇರೆ ಇದೆ) , ವೀರಶೈವರು ಪಂಚಮಸಾಲಿ, ಬಣಜಿಗ, ಸಾದರು, ಇತ್ಯಾದಿ, ಇತ್ಯಾದಿ.  ಇಂದು ಉಳಿಗಮಾನ್ಯದ ಜೊತೆ ಚುನಾಯಿತ ಪ್ರತಿನಿಧಿಗಳ ವಂಶಪಾರಂಪರ್ಯ ಸೇರಿಕೊಂಡಿದೆ. ಈ ಉಳಿಗಮಾನ್ಯದ ಅಮಲು, ದಲಿತರನ್ನು ಕೂಡಾ ಬಿಟ್ಟಿಲ್ಲ. ದಲಿತರು ಎಡಗೈ, ಬಲಗೈ ಎಂದು ವಿಭಜನೆಗೊಂಡಿದ್ದಾರೆ.

ಹಾಗಾಗಿಯೇ ರಾಜಕಾರಣಿಯ ಮಗನನ್ನೇ ನಾವು ಅವನ ಉತ್ತರಾಧಿಕಾರಿಯಾಗಿ "ಚುನಾಯಿಸು"ವುದು. ಇಲ್ಲದಿದ್ದರೆ ನಮ್ಮ ಜಾತಿಯವನನ್ನೇ ನಮ್ಮ "ಪ್ರತಿನಿಧಿ"ಯಾಗಿ ಬಯಸುವುದು. ಸರ್ಕಾರಿ ಉದ್ಯೋಗಿ ಸತ್ತರೆ ಆತನ ಕುಟುಂಬಕ್ಕೆ ಸರ್ಕಾರಿ ಉದ್ಯೋಗ ಕೊಡುವುದು ವ್ಯವಸ್ಥೆಯಲ್ಲಿಯೇ ಒಪ್ಪಿತವಾಗಿದೆ.  ಅದೇ ರೀತಿ "ಮೀಸಲಾತಿ" ಕೂಡಾ ಊಳಿಗಮಾನ್ಯ ಯಾ ವಂಶಪಾರಂಪರ್ಯದ ಹಕ್ಕಾಗಿ ಆಗಲೇ ಮೀಸಲಾತಿಯ ಸವಲತ್ತು ಪಡೆದುಕೊಂಡಿರುವವರ ಮಕ್ಕಳು ಕೂಡಾ ಅದು ತಮ್ಮ ಪಿತ್ರಾರ್ಜಿತ ಆಸ್ತಿ ಎಂಬಂತೆ ತಲೆಮಾರುಗಳಿಂದ  ಬಯಸುವುದು. 

ಇಂದು ಜಾತಿ ಗೌರವ, ಅಭಿಮಾನ, ಹೆಮ್ಮೆ, ಪ್ರೌಢಿಮೆಯ ಸಂಕೇತ! ಯಾವ ಜಾತಿ ನಾಶಕ್ಕಾಗಿ ಸ್ವಾಭಿಮಾನಿ ದ್ರಾವಿಡರು ಜಾತಿಸೂಚಕ ಕುಲನಾಮ / ಅಡ್ಡಹೆಸರುಗಳನ್ನುಬಹಿಷ್ಕರಿಸಿ ಇನಿಷಿಯಲ್ ಇಟ್ಟುಕೊಳ್ಳುವ ಚಳುವಳಿ ಆರಂಭಿಸಿದ್ದರೋ ಅದೇ ಜನನಾಯಕರ ಕುಲತಿಲಕರತ್ನಗಳು ಇಂದು ಅಸ್ಮಿತೆಯ ಹೆಸರಲ್ಲಿಅಹಂನಿಂದ  ಗೊಲ್ಲರು "ಯಾದವ", ದಲಿತರು "ಮೌರ್ಯ" ಮುಂತಪ್ಪು ಉತ್ತರ ಭಾರತೀಯ ವರಸೆಯ ಜಾತಿಪ್ರೌಢಿಮೆಯನ್ನು ಮೆರೆಯುತ್ತಿರುವರು!

ಇದೆಲ್ಲವೂ ಮೀಸೆ ತಿರುವಿ ದಬ್ಬಾಳಿಕೆ ಮಾಡಬೇಕೆಂಬ ಊಳಿಗಮಾನ ಮನಸ್ಥಿತಿ!  ಅವರು ಇಷ್ಟು ದಿನ ಮೆರೆದಿದ್ದರು, ಈಗ ನಾವು ಮೆರೆಯಬೇಕೆಂಬ ಊಳಿಗಮಾನ ಕೆಚ್ಚು.  ಶತಶತಮಾನಗಳಿಂದ ಬೇರೂರಿರುವ ಧರ್ಮ, ಜಾತಿಗಳನ್ನು ತಳುಕು  ಹಾಕಿಕೊಂಡಿರುವ ಊಳಿಗಮಾನ ಪದ್ದತಿಯನ್ನು, ಭಾರತ  ಕೇವಲ ರಾಜಪ್ರಭುತ್ವದಿಂದ ಪ್ರಜಾಪ್ರಭುತ್ವವಾದ ಮಾತ್ರಕ್ಕೆ ತೊರೆದುಕೊಳ್ಳುವುದು ಸಾಧ್ಯವೇ!

No comments: