ಪಂಥಕೂಪದಲ್ಲಿ ಮುಳುಗಿ ಹೋಗಿರುವ ಇಂದಿನ ಕನ್ನಡ ಬೌದ್ಧಿಕ(?)ರ ಪಟಾಲಂ

ಪಂಥಕೂಪದಲ್ಲಿ ಮುಳುಗಿ ಹೋಗಿರುವ ಇಂದಿನ ಕನ್ನಡ ಬೌದ್ಧಿಕ(?)ರ ಪಟಾಲಂ ನನ್ನ ಕೃತಿ "ಭಾರತ ಒಂದು ಮರುಶೋಧನೆ" ಬಗೆಗಿನ ಅಪಪ್ರಚಾರವು ನಾನು ನನ್ನ ಕೃತಿಯ ಅವಲೋಕನದಲ್ಲಿ ವ್ಯಕ್ತಪಡಿಸಿದ್ದ ಕಳವಳ ವಾಸ್ತವಕ್ಕೆ ಇಳಿದುಬಂದುದರ ಸಾಕ್ಷಿಯನ್ನೊದಗಿಸಿದೆ.
ಆದರೆ, ಹಾಗೆಯೇ ಭಾರತದ ಸತ್ಯದ ಅರಿವು ನಾನು ವ್ಯಕ್ತಪಡಿಸಿದ ಆಶಾವಾದದ ಆಶಾಕಿರಣವಾಗಿ ದಾಕ್ಷಾಯಿಣಿ ಹುಡೇದ್ ಅವರ ವಿಮರ್ಶೆಯಲ್ಲಿ ಮತ್ತು ಅಪಪ್ರಚಾರದ ವಿಮರ್ಶೆಯ ವಿಮರ್ಶೆಯನ್ನು ಮಾಡಿದ Mallikarjuna Tankada ಅವರ ಅಭಿಪ್ರಾಯದಲ್ಲಿ ಮೂಡಿಬಂದಿದೆ. ಸತ್ಯವನ್ನು ಯಾರೂ ಮುಚ್ಚಿಡಲಾಗದು ಎಂಬುದಕ್ಕೆ ಇದೇ ಸಾಕ್ಷಿ! ಬನ್ನಿ, ಸತ್ಯಪಂಥವನ್ನು ಬೆಳೆಸೋಣ.
Mallikarjuna Tankada ಬರೆಯುತ್ತಾರೆ:
ಒಬ್ಬ ಇತಿಹಾಸ ವಿದ್ಯಾರ್ಥಿಗೆ ಆಧಾರ ತಿಳಿಯದೆ ಮಾತಾಡಬಾರದು ಅನ್ನೊದು ಕನಿಷ್ಟ ತಿಳುವಳಿಕೆ. ಶ್ರೀಯುತ ರೇಣುಕಾರಾದ್ಯರ ಎಲ್ಲ ಪೋಸ್ಟುಗಳನ್ನ ಬೆದಕಿನ ಆಧಾರದ ಮೇಲಷ್ಟೆ ಹೇಳುವುದಾದರೆ, ಅವರಿಗೆ history and historiography ಗಳ ಅರ್ಥ ಮತ್ತು ವ್ಯತ್ಯಾಸದ ಅರಿವೇ ಇಲ್ಲ. ಒಂದು ಇತಿಹಾಸದ ಕುರಿತಾದ ಪುಸ್ತಕದ ವ್ಯಾಖ್ಯಾನ ಮತ್ತು ಹರವುಗಳ ವಿಶ್ಲೇಷಣೆಯ ಪರಿಭಾಷೆ ಅವರಿಗೆ ದಕ್ಕಿದ ಶಿಸ್ತು ಅಲ್ಲವೆಂದು ನಿಖರವಾಗಿ ಹೇಳಬಲ್ಲೆ.
ಉದಾ- ೧. ರವಿಯವರು ಪ್ರತಿಯೊಂದು ಸಾಧ್ಯತೆಗೂ ಪರಮರ್ಸಿತ ಅಕಾರಾದಿಗಳನ್ನ ನೀಡಿದ್ದಾರೆ. ಇದು ಒಬ್ಬ ಶುದ್ದ ಇತಿಹಾಸ ಕೆದರುವವನ ಪಕ್ಕಾ ಲಕ್ಷಣ.
೨. ರೇಣುಕಾರಾಧ್ಯರು ಇತಿಹಾಸ ಪ್ರಜ್ಞೆಯಲ್ಲಿ ಸೊನ್ನೆ. ಕಾರಣ, ಬಲವಾದ ಆಧಾರಗಳ ಮೇಲೆ ನಿಂತಿರುವ ಕೃತಿಯ ವಿಮರ್ಶೆಗೂ ಪ್ರಬಲ ಅಧ್ಯಯನದ ಆಧಾರ ಮತ್ತು ಕೃತಿಗಳ ಆಧಾರ ಬೇಕು. ಆದರೆ ರಾಧ್ಯರು ಇಲ್ಲಿ ಸಂಪೂರ್ಣ ಸೋತಿದ್ದಾರೆ. ಏಕೆಂದರೆ ಹಂಜರ ಕೃತಿಯು ಯಾಕೆ ನಿರಾಸೆ ಮೂಡಿಸಿದೆ ಅನ್ನುವುದಕ್ಕೆ ಒಂದು ಆಧಾರ ಕೂಡ ನೀಡದೆ ಇರೋದು ಅವರ ಖಾಲಿತನ ತೋರಿಸುತ್ತದೆ.
೩. " ಆ ಕೃತಿ ಬಗ್ಗೆ ಇನ್ನೊಮ್ಮೆ ಬರೆಯಬಾರದು ಅಂದುಕೊಂಡಿದ್ದೆ" ಎಂದು ಬರೆದು ಕೊಂಡಿದ್ದಾರೆ. ಇದು ಅವರ ಚೌಟಳೆತೆಯ ಅಧ್ಯಯನದ ದೂರ ತಿಳಿಸುತ್ತೆ.. ಹಾ.ಹಾ.. ಪಾಪಾ ಅವರಿಗೆ ರವಿಯವರು ಕೊಟ್ಟಿರುವ ಆಕರಗಳ ಒಂದು ಕೃತಿಯು ತಿಳಿದಿಲ್ಲ ..ತಿಳಿದಿದ್ದರೆ ಹೀಗಾಡುತ್ತಿರಲಿಲ್ಲ!
೪. ಪ್ರತಿಕ್ರಿಯಿಸಿರುವ ಆನೇಕರು ರಾಧ್ಯರ ಸಿಗರೇಟ್ ತುದಿಯ ಬೆಂಕಿಯನ್ನೆ ಬ್ರಹ್ಮಾಂಡ ಜ್ಯೋತಿ ಅದ್ಕೊಂಡಿದ್ದಾರೆ. ಏಕಂದ್ರೆ ಅವರುಗಳೇ ಹೇಳಿಕೊಂಡಂತೆ, ಅವರ್ಯಾರೂ ಈ ಕೃತಿಯನ್ನು ಓದಿದವರಲ್ಲ.
೫. ಒಬ್ಬ ಮಹಿಳಾ ಶಕ್ತಿ ತಮ್ಮ ಸಿಟ್ಟಿನ ಧಾಟಿಯಲ್ಲಿ, ಕಟ್ಟಾದ ಹಾವಿನ ಬಾಲದಂತೆ ನಾಲಿಗೆಯನ್ನ ಚಟಪಟಿಸಿದ್ದಾರೆ. ಅದರೆ ಅದಕ್ಕೂ ಮೊದಲು ಅವರೇ ನಾನ್ಸೆಸ್, ಚಿಂಗಿ.‌ ಹೀಗೆ ಸ್ಖಲಿಸಿಕೊಂಡಿದ್ದಾರೆ. ಇದನ್ನು ಬುಲ್ ಶಿಟ್ ಅನ್ನಬಹುದು ನಾವು.
೬. ಕೃತಿಯನ್ನ ಓದದೇನೆ ಒಬ್ಬ ಮಹಾಶಯರು ಪರ್ವ ಅಂಥ ಅಧ್ಯಾಯಗಳನ್ನು ಕರೆದಿದ್ದಕ್ಕೆ ಓದಿಲ್ಲವಂತೆ ಇದನ್ನ ಹೇಗೆ ವಿಶ್ಲೇಷಿಸಲಿ ಹೇಳಿ!
೭. ಈ ಥರದ ಚರ್ಚೆಯಿಂದ ಕೃತಿಗೆ ಪ್ರಚಾರ ಸಿಗುತ್ತಿದೆ ಎಂದು ಮತ್ತೊಬ್ಬರು ವಕ್ರ ವಿಚಾರ ನುಡಿದಿದ್ದಾರೆ. ಆದರೆ ನಿಜವೆಂದರೆ ಒಬ್ಬ ಅಧ್ಯಯನಶೀಲನ ಕೃತಿಯನ್ನ ಆರಂಭದಲ್ಲೇ ಹೊಸಕಲು ಒಗ್ಗಟ್ಟಾಗಿ ಪ್ರಯತ್ನ ಮಾಡಿದ್ದಾರೆ.
೮. ಕೊನೆಗೆ ರಾಧ್ಯರವರು "ವ್ಯಕ್ತಿ ಒಳ್ಳೆಯವರು" ಎಂದಿರುವುದು ಅವರ ಹೊರ-ಒಳಗಿನ ತಾಕಲಾಟವನ್ನ ತಿಳಿಸುತ್ತೆ. ಓದುಗರಿಗೆ ಅವರ ಬಗ್ಗೆ ಮ್ಲಾನತೆ ಉಂಟಾಗುತ್ತದೆ.
೯. ಪೇಚಿಗೆ ಸಿಲುಕಿರೋದು ರವಿಯವರಲ್ಲ .. ನೀಗದ ವಿಷಯಕ್ಕೆ ಕೈಹಾಕಿ, ಸ್ವಂತಿಕೆ ಇಲ್ಲದ ಗುಂಪಿನ ಸಮರ್ಥಿಗಳೇ ತಾವುಗಳು. ತಮಗೆ ಅದು ಇದ್ದರೆ ರವಿಯವರ ಆಧಾರಗಳನ್ನ ಆಧಾರಸಹಿತ ಹೀಗಳೆಯಿರಿ ..... ಗೊತ್ತು, ಆಡಿಕೊಳ್ಳುವ ದಬ್ಬಾಕಿದ ಕೊಡವೆಂದು.
ಓದುಗರೇ ಸ್ವಂತಿಕೆ ಬೆಳೆಸಿಕೊಳ್ಳಿ... ಸ್ವಂತ ಇಚ್ಚೆಯಿಂದ ಓದಿ.
ರೇಣುಕಾರಾಧ್ಯರದು ಈರ್ಶೆ, ವಿಮರ್ಶೆಯಲ್ಲ. ಅವರಾರು ಸ್ವಂತಿಕೆಯಿಂದ ಓದಿದವರಲ್ಲ. ಸ್ವಲ್ಪ ಓದಿದ್ದರೂ ಅದು ರೇಣುಕಾರಾಧ್ಯರು ನೋಟಿಸಿದ ಕೆಲವು ಉಪ್ಪಡಿ ಪುಸ್ತಕಗಳಷ್ಟೆ.
ರವಿಯವರು ಆರಂಭದಲ್ಲಿ ರಾಧ್ಯರು ಉತ್ತಮ ವಿಮರ್ಶಕರಾಗುವ ಲಕ್ಷಣಗಳಿವೆ ಎಂದಿದ್ದಕ್ಕೆ ಗೌರವವಿತ್ತು. ಆದರೆ ಅವರಲ್ಲಿ ಆ ಯಾವ ಲಕ್ಷಣಗಳು ಕಾಣಿಸುತ್ತಿಲ್ಲ. ಉತ್ತಮ ವಿಮರ್ಶಕ ಯಾವಗುಂಪಿಗೂ ಸೇರಬಾರದು. ಇವರಲ್ಲಿ ಪಂಥವಿಷ ತುಂಬಿದೆ. ಸಾಧ್ಯವಾದರೆ ತೇಜಸ್ವಿಯವರ ವಿಮರ್ಶೆಯ ವಿಮರ್ಶೆ ಓದಿದರೆ ಸಾಕು.

ಬುದ್ದಿ ಬಂಡವಾಳಶಾಹಿಗಳ ಸಂಶೋಧ(ಷ)ಣೆ!

ಬುದ್ದಿ ಬಂಡವಾಳಶಾಹಿಗಳ ಸಂಶೋಧ(ಷ)ಣೆ!
ಈ ಬರಹ ಯಾರನ್ನೂ ಅವಹೇಳನ ಮಾಡಲಲ್ಲ. ಈ ಲೇಖನದ ಲೇಖಕ ಮಿತ್ರರು ಇದೇ ರೀತಿ ಹಲವರನ್ನು ಹೆಸರಿಸಿ ಸಾಕಷ್ಟು ಆಕ್ಷೇಪಗಳನ್ನು ಸಾಮಾಜಿಕ ಜವಾಬ್ದಾರಿಯಿಂದ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ನಾನು ಕೂಡ ಇದು ವೈಯಕ್ತಿಕ ಅವಹೇಳನ ಮಾಡಲಲ್ಲದೇ ಸತ್ಯವನ್ನು ಎತ್ತಿಹಿಡಿಯುವ ಅವರದೇ ರೀತಿಯ ಸಾಮಾಜಿಕ ಜವಾಬ್ದಾರಿಯ ಹಿನ್ನೆಲೆಯಲ್ಲಿ ಬರೆಯುತ್ತಿದ್ದೇನೆ.
"ವಿಶ್ವಾಸಾರ್ಹ ಪ್ರಜಾವಾಣಿ"ಯಲ್ಲಿ ಬಂದ ಈ ಬರಹ ಕೆಲವು ವರ್ಷಗಳ ನಂತರ ನನ್ನ ಗಮನ ಸೆಳೆಯಿತು. ಕಾಲ ಹಳೆಯದಾದರೂ ಸತ್ಯವನ್ನು ಎತ್ತಿಹಿಡಿಯಬೇಕಾದುದು ಇಂದಿನ ಜರೂರಿ ಎಂದುಕೊಂಡಿದ್ದೇನೆ. ಏಕೆಂದರೆ ಇದು "ದುರಿತ ಕಾಲ!"
ಇಲ್ಲಿ ಲೇಖಕರು, ನೊಬೆಲ್ ವಿಜೇತ ಸಂಗೀತಗಾರ ಬಾಬ್ ಡಿಲಾನ್ ಜೂಯಿಷ್ ಎಂಬ ಸಣ್ಣ ಬುಡಕಟ್ಟು ಹಿನ್ನೆಲೆಯವನು ಎನ್ನುತ್ತಾರೆ. ನಂತರ ಆತನ ಪೂರ್ವಜರು ಟರ್ಕಿಯಿಂದ ಅಮೇರಿಕೆಗೆ ವಲಸೆ ಬಂದವರು ಎನ್ನುತ್ತಾರೆ. ವಾಸ್ತವದಲ್ಲಿ ಬಾಬ್ ಒಬ್ಬ ಜೂ/ಯಹೂದಿ. ಆತನ ಕುಟುಂಬ ಟರ್ಕಿಯಿಂದ ಬಂದದ್ದಲ್ಲ. ಲೇಖಕರು ಪ್ರತಿಪಾದಿಸುವ ಕಮ್ಯುನಿಸ್ಟ್ ಸರ್ಕಾರದ ದೇಶದಿಂದ ಬಾಬ್ ನ ಹಿರಿಯರು ಬಂಡವಾಳಶಾಹಿ ಅಮೇರಿಕೆಗೆ ಬೇಡಿಕೊಂಡು ಅರ್ಜಿ ಹಾಕಿ ವಲಸೆ ಬಂದವರು!
ಕಮ್ಯುನಿಸ್ಟ್ ಸರ್ಕಾರದ ಜನಾಂಗೀಯ ದಬ್ಬಾಳಿಕೆಯಲ್ಲಿ ನೊಂದು ನಿರಾಶ್ರಿತರಾಗಿ ಅಂದಿನ USSR ರಷ್ಯದಿಂದ ಅಂದರೆ ಇಂದಿನ ಉಕ್ರೇನಿನಿಂದ ಅಮೇರಿಕೆಗೆ ಆತನ ಹಿರಿಯರು ವಲಸೆ ಬಂದವರು.
ಇದು ಸ್ಮಾರ್ಟ್ ಫೋನ್ ಇರುವ ಯಾರಾದರೂ ಕಂಡುಕೊಳ್ಳಬಹುದಾದ ಸಾಮಾನ್ಯ ಸಂಗತಿ. ಆದರೆ ಹೆಸರಾಂತ ವಿಶ್ವವಿದ್ಯಾಲಯದ ಸಂಶೋಧಕರಾದ ಲೇಖಕರು ಬಾಬ್ ನ ಹಿನ್ನೆಲೆಯನ್ನು ಬೇರೊಂದು "ಸಂಶೋಧನಾ ನೆಲೆ"ಯಲ್ಲಿ ಕಂಡುಕೊಂಡಿರಬಹುದೆನಿಸುತ್ತದೆ.
ಏನದು ಆ "ಸಂಶೋಧನಾ ನೆಲೆ?"
ಇಂದಿನ "ಸಂಶೋಧನಾ ನೆಲೆ"ಯ ಪ್ರಮುಖ ಪದಗಳು "ಬುಡಕಟ್ಟು", "ಪರಿಶಿಷ್ಟ", "ಅಲ್ಪಸಂಖ್ಯಾತ", "ಅವೈದಿಕ", "ಬುದ್ಧ", "ದ್ರಾವಿಡ" ಇತ್ಯಾದಿ ಇತ್ಯಾದಿ. ಈ ಪದಗಳು ನಿಮ್ಮ ಸಂಶೋಧನೆಯಲ್ಲಿದ್ದರೆ ಮಾತ್ರ ಅದು ಸಂಶೋಧನೆ, ಇಲ್ಲದಿದ್ದರೆ ಅದು ಪೂರ್ವಾಗ್ರಹ, ಮತೀಯ, ಬ್ರಾಹ್ಮಣ್ಯ, ಹಿಂದೂ, ಜೀವಪರವಲ್ಲದ ಇತ್ಯಾದಿ ಇತ್ಯಾದಿ!
ಹಾಗಾಗಿ ನಮ್ಮ ಸಂಶೋಧಕರು ಬಾಬ್ ಅನ್ನು ಬುಡಕಟ್ಟು ಎಂದು, ಆತನ ಹಿರಿಯರು ಟರ್ಕಿಯಿಂದ ಬಂದವರೆಂದೂ ಸಂಶೋಧನಾತ್ಮಕವಾಗಿ ಹೇಳಿದ್ದಾರೆ. ಇದು ಏಕೆಂದರೆ ತಮ್ಮ ಲೇಖನ ಜೀವಪರವಾಗಿ ನಮ್ಮಲ್ಲಿನ ಬುಡಕಟ್ಟು ಮತ್ತು ಅಲ್ಪಸಂಖ್ಯಾತ ಜನಾಂಗ ತಮ್ಮನ್ನು ಬಾಬ್ ಡಿಲಾನ್ ಒಟ್ಟಿಗೆ ಸಮೀಕರಿಸಿಕೊಂಡು ತಮ್ಮಂತೆಯೇ ಬಾಬ್ ಒಬ್ಬ ಬ್ರಾಹ್ಮಣ್ಯ/ಬಂಡವಾಳಶಾಹಿತನದ ವಿರುದ್ಧ ಸಿಡಿದೆದ್ದ ನಮ್ಮವನೇ ಆದ ಹೋರಾಟಗಾರ ಎಂದುಕೊಳ್ಳಲಿ ಎಂದು ಜೀವಪರ, ಸಿದ್ದಾಂತಪರ ಸ್ಪೂರ್ತಿಯನ್ನು ತುಂಬಿದ್ದಾರೆ, ಅಸಲಿಗೆ ಅದು ಹುಸಿಯಾದರೂ ಕೂಡ. ಸಾವಿರ ಸುಳ್ಳು ಹೇಳಿ ಒಂದು ಕಲ್ಯಾಣ ಮಾಡಿಸು ಎಂದು ನಾಣ್ನುಡಿಯೇ ಇದೆಯಲ್ಲವೇ!
ಆದರೆ ಹಕೀಕತ್ತಿನಲ್ಲಿ ಈ ಪ್ರಗತಿಪರರೆಲ್ಲಾ ವಿರೋಧಿಸುವ ಇಸ್ರೇಲ್ ದೇಶದ ಹೋರಾಟವನ್ನು ಬಾಬ್ ಎತ್ತಿ ಹಿಡಿದಿದ್ದಾನೆ. ಹಿಟ್ಲರನ ಅಟ್ಟಹಾಸ, ರಷ್ಯಾ ಕಮ್ಯುನಿಸ್ಟರ ಜನಾಂಗೀಯ ದ್ವೇಷವನ್ನು ಕಂಡಿರುವ ಯಹೂದಿಗಳು, ಈಗ ಇಸ್ರೇಲ್ ಮುಖಾಂತರ ಜಿಹಾದ್ ವಿರುದ್ಧ ಜಿಹಾದ್ ಘೋಷಿಸಿದ್ದಾರೆ. ಆ ಇಸ್ರೇಲಿ ಜಿಹಾದ್ ಅನ್ನು ಬಾಬ್ ಬೆಂಬಲಿಸಿದ್ದಾನೆ ಎಂಬುದು "ವಿಶ್ವಾಸಾರ್ಹ"ವಷ್ಟೇ ಅಲ್ಲದೆ ಸತ್ಯ ಕೂಡ!
ಇದು ಇಂದಿನ ಸಂಶೋಧನೆ, ಜೀವಪರ, ಪ್ರಗತಿಪರ, ಉದಾರವಾದ, ಸೈದ್ಧಾಂತಿಕ, ಇತ್ಯಾದಿ ಇತ್ಯಾದಿ ಎನ್ನುವವರ some/sum ಶೋಧನೆ! ಇಂತಹ ಸಂಶೋಧಕರ ತಂಡ ಬುದ್ಧತತ್ವದ "ತೇರಾ"ವಾದವನ್ನು "ಮೇರಾ"ವಾದವಾಗಿಸಿ, ವೀರಶೈವ ಲಿಂಗಾಯತ ಪಂಥವನ್ನು ಧರ್ಮವೆನಿಸಿ ಮತ್ತವುಗಳು ಬೇರೆ ಬೇರೆ ಎಂದು someಶೋಧಿಸಿದ್ದಾರೆ. ಇಂತಹ "ಬುದ್ದಿ ಬಂಡವಾಳಶಾಹಿ"ಗಳು ಭಾರತದ ಇತಿಹಾಸದಾದ್ಯಂತ ಹೇಗೆ ತಿರುಚಿ, ಮರೆಮಾಚಿ, ವೈಭವೀಕರಿಸಿ, ತುಚ್ಹೀಕರಿಸಿದ್ದಾರೆಂದು ಅರಿಯಲು ನನ್ನ "ಭಾರತ ಒಂದು ಮರುಶೋಧನೆ"ಯನ್ನು ಓದಬೇಕಾಗುತ್ತದೆ.
ಇರಲಿ, ಇಂತಹ ಅಸತ್ಯದ, ಅವಾಸ್ತವದ ಆದರೆ ಕರುಣಾಜನಕವಾದ ಭಾವನಾತ್ಮಕ ಸೃಜನಶೀಲತೆಯಿಂದ ಕೂಡಿದ ಕಥೆಗಳಿಗೆ ಕಣ್ಣೀರು ಹಾಕದೆ ನಿಮ್ಮ ಬೆರಳುಗಳಿಗೆ ಕೆಲಸ ಕೊಟ್ಟು ಅನಿಯಮಿತ ಅಂತರ್ಜಾಲವನ್ನು ಸತ್ಯಶೋಧನೆಗೆ ಬಳಸಿಕೊಳ್ಳಿ.
RCEPಯಿಂದ ಹಾಲು ಆಸ್ಟ್ರೇಲಿಯಾ/ನ್ಯೂಜಿಲ್ಯಾಂಡಿನಿಂದೆಲ್ಲಾ ಭಾರತಕ್ಕೆ ಬಂದು ಇಲ್ಲಿನ ಹಸು ಕಟ್ಟಿ ಜೀವನ ಮಾಡುವ ರೈತರು ಹಾಳಾಗುತ್ತಾರೆ ಎನ್ನುವ ಹಾಸ್ಯಾಸ್ಪದ ಕರುಣಾಜನಕವಾದ ಕತೆ ಈ ತಂಡದ ಹೊಸ ಶೋಧನೆ!
ಆಸ್ಟ್ರೇಲಿಯಾ/ನ್ಯೂಜಿಲ್ಯಾಂಡ್ ದೇಶಗಳಲ್ಲಿ ಒಂದು ಲೀಟರ್ ಹಾಲಿನ ಬೆಲೆ, ಭಾರತಕ್ಕೆ ಸಾಗಾಣಿಕೆ ವೆಚ್ಚ/ಸಮಯ (ಏರೋಪ್ಲೇನಿನಲ್ಲಿ ತಂದರೆ ಲಕ್ಷಾಂತರ ಏರೋಪ್ಲೇನುಗಳು ನಿತ್ಯ ಹಾಲು ಹೇರಿಕೊಂಡು ಬರಬೇಕಾಗುತ್ತದೆ. ಹಡಗಾದರೆ ತಿಂಗಳ ಮೇಲೆ ಸಮಯ ಬೇಕಾಗುತ್ತದೆ. ಹಾಲು ಪೆರಿಶಬಲ್ ವಸ್ತು)
ಇವುಗಳ ಒಂದು ವಾಸ್ತವದ ನೆಲೆಯಲ್ಲಿ ಆ ಹಳಸಲು ಹಾಲು ಐನೂರು ರೂಪಾಯಿಗೆ ಒಂದು ಲೀಟರ್ ಆಗುತ್ತದೆ. ಅದನ್ನು ಆ ಬೆಲೆಗೆ ಯಾರು ಕೊಳ್ಳುವರು? ಇನ್ನು ಹಾಲಿನ ಉತ್ಪನ್ನ ಚೀಸ್ (ಪನೀರ್ ಅಲ್ಲ), ಇದು ಭಾರತೀಯ ಅಡುಗೆಗಳಲ್ಲಿ ಬಳಸುವಂತಹದಲ್ಲ. RCEP ಒಳ್ಳೆಯದೋ ಕೆಟ್ಟುದೋ ಎನ್ನುವುದಕ್ಕಿಂತ, RCEP ವಿರೋಧಿಸುವವರು ಕೊಡುವ ಉತ್ಪನ್ನಗಳ ವಾಸ್ತವ ಹೀಗಿದ್ದು ಅವರೆಲ್ಲರ ವಾದ ಹಾಸ್ಯಾಸ್ಪದವಾಗಿದೆ. ಇನ್ನು ಚೀನಾದಲ್ಲಿರುವ ಡೈರಿಗಳು ಹಾಲಿಗೆ ಇರುವುದಲ್ಲ, ದನದ ಮಾಂಸಕ್ಕಾಗಿ ಇರುವವು.
ಇಂತಹ ಕರುಣಾಜನಕವಾದ ಕಣ್ಣೀರಿನ ಕಥೆ ಹೆಣೆಯುವವರ ದೊಡ್ಡ ತಂಡವೇ ಸಾಮಾಜಿಕ ತಾಣಗಳಲ್ಲಿ ದಂಡಿಯಾಗಿ ನಿಮ್ಮನ್ನು ನಿಮ್ಮ ಅರಿವಿಗೆ ಬಾರದಂತೆ ಕಣ್ಣೀರಿಡಿಸುತ್ತಿದೆ ಮತ್ತು ದಂಡಿಸುತ್ತಿದೆ. ಅದರಲ್ಲೂ ನೀವು ಪರಿಶಿಷ್ಟ, ಬುಡಕಟ್ಟು, ಬಡ ಆರ್ಥಿಕ ಹಿನ್ನೆಲೆ, ಕನ್ನಡ ಮಾಧ್ಯಮದ ಹಿನ್ನೆಲೆ, ಮತ್ತು ಭಾವಜೀವಿಗಳಾಗಿದ್ದರೆ ನೀವೇ ಇವರ ಪ್ರಮುಖ ಗುರಿ. ನಿಮ್ಮನ್ನು ಕಾವ್ಯ ಕಮ್ಮಟ, ಸಂವಾದ, ಸಾಹಿತ್ಯ ಚರ್ಚೆ ಎಂಬ ಕ್ಯಾಂಪುಗಳ ಮುಖಾಂತರ ಆಕರ್ಷಿಸಿ ವ್ಯವಸ್ಥಿತವಾಗಿ ನಿಮ್ಮ ಅಂತರಂಗದಲ್ಲಿ ಕೀಳರಿಮೆಯನ್ನು ತುಂಬಿ ಬಹಿರಂಗವಾಗಿ ಹೇಗೆ ಹೋರಾಟಗಳ ಮೂಲಕ ಮೇಲರಿಮೆಯನ್ನು ಪ್ರದರ್ಶಿಸಬೇಕು ಎಂದು ತಲೆ ತಿದ್ದುತ್ತಾರೆ.
ಹಾಗಾಗಿ ನಿಮ್ಮ ಹೃದಯ, ಭಾವುಕತೆಯನ್ನು ತೊಡಗಿಸುವಲ್ಲಿ ತೊಡಗಿಸಿ, ಇಲ್ಲದಿದ್ದರೆ ಕಿಂಡರ್ ಗಾರಟನ್ನಿನಿಂದಲೇ ಲಕ್ಷ, ಲಕ್ಷ ಸುರಿದು ಕಲಿತು ಕೂಡಾ ಗುಯ್ಗುಟ್ಟುವ ಗುಂಗಾಡಿಗಳು ನೀವಾಗುವುದು ಶತಸಿದ್ದ!

ಕೌದಿಯ ಮುಸುಕಿನಾಚೆಯ ಸೌದಿ!

ಕೌದಿಯ ಮುಸುಕಿನಾಚೆಯ ಸೌದಿ!
ನನ್ನ ಆತ್ಮೀಯ ಮಿತ್ರರಾದ ಸೌದಿ ಅರೇಬಿಯಾದ ಮಾನವ ಹಕ್ಕುಗಳ ಆಯೋಗದ ನಿರ್ದೇಶಕರಾದ ಹೀಶಮ್ ಅಲಾಮಾರ್ ಅಚಾನಕ್ ಆಗಿ ನಾನು ಉಳಿದುಕೊಂಡಿದ್ದ ಬೆಂಗಳೂರಿನ ಹೋಟೆಲಿನಲ್ಲಿ ಕಾಣಿಸಿಕೊಂಡರು. ನಾನವರನ್ನು ಹಲವಾರು ವರ್ಷಗಳ ಹಿಂದೆ ಅಮೆರಿಕಾದ ಏರ್ಪೋರ್ಟ್ ಒಂದರಲ್ಲಿ ಭೇಟಿಯಾದಾಗ ಸೌದಿ ರಾಯಭಾರ ಕಚೇರಿಯಲ್ಲಿ ಹುದ್ದೆಯನ್ನು ಹೊಂದಿದ್ದರು. ಅಂದು ಹೆಚ್ಚು ಮಾತನಾಡಲಾಗಿರದ ನಮಗೆ ಕಳೆದ ವಾರ ಭರಪೂರ ಮೂರು ದಿನಗಳ ಸಮಯ ಸಿಕಿತ್ತು. ನನ್ನನ್ನು ನಂದಿಬೆಟ್ಟ, ಬನ್ನೇರುಘಟ್ಟ ಸುತ್ತಿಸಿದ ಹೀಶಮ್ ರನ್ನು ನಾನು ನನ್ನ ಶಾಸಕ ಮಿತ್ರರುಗಳ ಸಹಾಯದಿಂದ ವಿಧಾನಸೌಧ, ಶಾಸಕರ ಭವನ ಸುತ್ತಿಸಿದೆ.
ಮಾನವ ಹಕ್ಕುಗಳ ಪ್ರಚಲಿತ ಸಮಸ್ಯೆಯಾದ ಮಾನವ ಕಳ್ಳಸಾಗಣೆಯೂ ಸೇರಿದಂತೆ ಇ-ಗವರ್ನೆನ್ಸ್, ಸರ್ಕಾರಿ ಉದ್ದಿಮೆಗಳ ಖಾಸಗೀಕರಣ, ಧರ್ಮ, ವಿದೇಶದಲ್ಲಿರುವ ಭಾರತೀಯರ ಕಟ್ಟುನಿಟ್ಟಿನ ನಿಯಮ ಪಾಲನೆ ಆದರೆ ಭಾರತದಲ್ಲಿರುವ ಭಾರತೀಯರ ಎಲ್ಲಾ ನಿಯಮಗಳ ಉಲ್ಲಂಘನೆಯ ಕುರಿತು ಸೋಜಿಗ,
ಬೆಂಗಳೂರು ಟ್ರಾಫಿಕ್ ಹೀಗೆ ಎಲ್ಲದನ್ನೂ ಚರ್ಚಿಸುವ ಮುನ್ನ ಸೌದಿ ಕುರಿತಾದ ಕೌತುಕದ ಬಾಸುಂಡೆ ಮೂಡಿಸುವ ಛಡಿಯೇಟು ಶಿಕ್ಷೆ, ತಲೆದಂಡ, ಕೈ ಕತ್ತರಿಸುವುದು, ಅನ್ಯಧರ್ಮದ ಮಹಿಳೆಯರೂ ಸೇರಿದಂತೆ ಎಲ್ಲಾ ಮಹಿಳೆಯರ ಮೇಲೆ ಬುರ್ಖಾ ಹೇರಿಕೆ, ಸ್ತ್ರೀ ಅಸಮಾನತೆ, ಶುಕ್ರವಾರದ ನಮಾಜು ವೇಳೆ ರಸ್ತೆಗಳಲ್ಲಿ ಯಾರೂ ಸಂಚರಿಸದಂತೆ ನಿಯಮ ಹೇರಿಕೆ, ಧಾರ್ಮಿಕ ಗುರುಗಳ ಕಾನೂನು ಚಲಾಯಿಸುವಿಕೆ, ಇತ್ಯಾದಿ ಇತ್ಯಾದಿಯಾಗಿ ನನ್ನ ಪತ್ರಕರ್ತ ಮಿತ್ರರು ಮತ್ತು ರಾಜಕಾರಣಿ ಮಿತ್ರರು ಪ್ರಶ್ನೆಗಳನ್ನು ಕೇಳಿದರು.
ಅದಕ್ಕೆ ನಸುನಗುತ್ತ ಹೀಶಮ್ "ನೋಡಿ, ನೀವು ಹೇಳಿದ ವಿಚಾರಗಳಲ್ಲಿ ಬಹುತೇಕ ಸುಳ್ಳು. ನೂರಕ್ಕೆ ನೂರು ಪ್ರತಿಶತ ಈ ವಿಚಾರಗಳನ್ನು ಉದ್ಯೋಗಕ್ಕೆ ಸೌದಿಗೆ ಹೋಗಿಬಂದ ಭಾರತೀಯರ ಮುಖಾಂತರ ನೀವು ತಿಳಿದುಕೊಂಡಿರುತ್ತೀರಿ. ಆ ಉದ್ಯೋಗಿಗಳು ಕೂಡ ಸೌದಿ ನಿಯಮಗಳನ್ನು ಓದಿ ತಿಳಿಯದೇ ತಮ್ಮಂತೆಯೇ ಉದ್ಯೋಗಕ್ಕೆ ಬಂದ ಇತರೆ ಭಾರತೀಯ ಮೂಲದವರನ್ನೋ, ಇತರೆ ವಿದೇಶಿ ನೌಕರರನ್ನೋ ಕೇಳಿ ತಿಳಿದುಕೊಂಡಿರುತ್ತಾರೆ. ನಾನು ಇದೆಲ್ಲವೂ ಊಹಾಪೋಹ ಎಂದರೆ ನಂಬುವಿರಾ! ಇರಲಿ, ನೀವು ಕೇಳಿದ ಪ್ರತಿಯೊಂದು ವಿಚಾರದ ಸತ್ಯವನ್ನು ಹೇಳುತ್ತಾ ಸಾಗುವೆ ಕೇಳಿ" ಎಂದರು.
ತಲೆದಂಡ - ಈ ಶಿಕ್ಷೆಯನ್ನು ಕೊಲೆ ಮಾಡಿದವರಿಗೆ ಕೊಡಲಾಗುತ್ತದೆ. ಅಪರಾಧ ಕೋರ್ಟಿನಲ್ಲಿ ಸಾಬೀತಾಗಬೇಕು. ಆದರೆ ಕೊಲೆಯಾದ ವ್ಯಕ್ತಿಯ ಪೋಷಕರು ಯಾ ಆತನ ಹೆಂಡತಿ/ಗಂಡ/ಮಕ್ಕಳು ಕೊಲೆ ಮಾಡಿದವನನ್ನು ಕ್ಷಮಿಸಿದ್ದೇವೆ ಎಂದರೆ ಸೌದಿ ಕೋರ್ಟ್ ಕೂಡ ಕ್ಷಮಿಸಿ ಬಿಟ್ಟುಬಿಡುತ್ತದೆ. ಅದೇ ಅಪರಾಧಿಯೇನಾದರೂ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದರೆ, ಆತನಿಗೆ ಯಾವ ಕ್ಷಮೆಯೂ ಇಲ್ಲ. ತಲೆದಂಡ ಶತಸಿದ್ದ. ಇದು ಸೌದಿ ಸರ್ಕಾರ ಮಹಿಳೆಯರ ಬಗ್ಗೆ ತೋರುವ ಕಳಕಳಿ.
ಕಳ್ಳತನಕ್ಕೆ ಕೈಕಡಿಯುವುದು - ಇದು ಸತ್ಯ. ಆದರೆ ಎಲ್ಲಾ ಕಳ್ಳತನಗಳಿಗೂ ಕೈಕಡಿಯುವುದಿಲ್ಲ. ಉದಾಹರಣೆಗೆ ನೀವು ನಿಮ್ಮ ಮನೆಯ ಟೇಬಲ್ಲಿನ ಮೇಲೆ ಬೆಲೆಬಾಳುವ ವಸ್ತುವನ್ನು ಬಿಟ್ಟಿದ್ದು ಅದನ್ನು ಕಂಡ ನಿಮ್ಮ ಮನೆ ಕೆಲಸದವರು ಅಥವಾ ದಾರಿಹೋಕರು ಕದ್ದರೆ ಅದಕ್ಕೆ ಅವರ ಕೈಕತ್ತರಿಸುವುದಿಲ್ಲ. ಯಾವ ರಕ್ಷಣೆಯೂ ಇಲ್ಲದೆ ಸುಲಭವಾಗಿ ಸಿಕ್ಕುವ ವಸ್ತುವಿನ ಆಸೆಯಿಂದಾದ ಕಳ್ಳತನದ ಅಪರಾಧಕ್ಕೆ ಕೈಕಡಿಯುವ ಶಿಕ್ಷೆಯಿಲ್ಲ. ಅದಕ್ಕೆ ಸೂಕ್ತವಾದ ಜೈಲುವಾಸ ಅಥವಾ/ಮತ್ತು ಛಡಿಯೇಟಿನ ಶಿಕ್ಷೆಯಿರುತ್ತದೆ. ಅದೇ ಕಳ್ಳತನ ಮಾಡಲೆಂದೇ ಬಾಗಿಲು ಮುರಿದು, ಲಾಕರ್ ಒಡೆದು ಮಾಡಿದ ಕಳ್ಳತನಕ್ಕೆ ಕೈ ಕಡಿಯಲಾಗುತ್ತದೆ. ಏಕೆಂದರೆ ಅದು ಉದ್ದೇಶಿತ ಮತ್ತು ಯಾವ ಪ್ರಚೋದನೆಯೂ ಇಲ್ಲದೆ, ಅಪರಾಧಿ ಕಳ್ಳತನವನ್ನು ಮಾಡುವ ಪೂರ್ವಭಾವಿ ಮನಸ್ಸಿನಿಂದ ಮಾಡಿರುತ್ತಾನೆ. ಹಾಗಾಗಿ ಇದಕ್ಕೆ ಕೈಕಡಿಯುವುದು ತಪ್ಪದು.
ಛಡಿಯೇಟು - ಛಡಿಯೇಟು ಎಂದರೆ ಶಕ್ತಿಯನ್ನು ಕ್ರೋಢೀಕರಿಸಿ ಚಾಟಿಯಿಂದ ಬಾಸುಂಡೆ ಬರುವಂತೆ ಅಥವಾ ಪಕ್ಕೆಲುಬುಗಳು ಮುರಿದು ಅಂಗವಿಕಲರಾಗುವಂತೆ ಹೊಡೆಯುವುದೆಂದಲ್ಲ. ಹಾಗೆ ಹೊಡೆದರೆ ನಮ್ಮಲ್ಲಿಗೆ ಯಾವ ದೇಶದವರೂ ಕೆಲಸಕ್ಕೆ ಬರುವುದಿಲ್ಲ. ಮೇಲಾಗಿ ನಮ್ಮ ಮಾನವ ಸಂಪನ್ಮೂಲವನ್ನು ಹೀಗೆ ಹೊಡೆದು ಬಡಿದು ಯಾರು ತಾನೆ ಕಳೆದುಕೊಳ್ಳಲು ಸಿದ್ಧವಿರುತ್ತಾರೆ ಹೇಳಿ. ನೀವೆಂದುಕೊಂಡ ಛಡಿಯೇಟು ಹಿಂಸೆ! ಹಿಂಸೆ ಇಸ್ಲಾಮಿನಲ್ಲಿ ನಿಷಿದ್ಧ. ನೀವು ಡೋಲು ಬಡಿಯುವಂತೆಯೇ ಕೈಯನ್ನು L ಆಕಾರದಲ್ಲಿ ಹಿಡಿದು ಕೋಲಿನಿಂದ ಡೋಲು ಬಡಿದಂತೆಯೇ ನಾವು ಛಡಿಯೇಟು ಕೊಡುವುದು. ನೀವು ನಲವತ್ತು ಛಡಿಯೇಟು ಅನುಭವಿಸಿದರೂ ಅದರಿಂದ ನೋವೇನೂ ಉಂಟಾಗದು. ಬದಲಿಗೆ ಒಂದು ಮಸಾಜ್ ಪ್ರಕ್ರಿಯೆಯಂತಿರುತ್ತದೆ! ಏಕೆಂದರೆ ಇದು ಒಂದು ಸಿಂಬಾಲಿಕ್ ಪ್ರಕ್ರಿಯೆ ಮಾತ್ರ. ನಿಜವಾದ ಶಿಕ್ಷೆಗಳೆಂದರೆ ದಂಡ, ಜೈಲುವಾಸ, ಕೈಕಡಿಯುವುದು, ಮತ್ತು ಡೆತ್ ಪೆನಾಲ್ಟಿಗಳು ಮಾತ್ರ. ಹಾಂ, ಎಲ್ಲಾ ದೇಶಗಳಲ್ಲಿರುವಂತೆಯೇ ನಮ್ಮಲ್ಲೂ ಟ್ರಾಫಿಕ್ ನಿಯಮಗಳ ಉಲ್ಲಂಘನೆಗಳಿಗೆ ದಂಡವಿದೆಯೇ ಹೊರತು ಛಡಿಯೇಟಿಲ್ಲ.
ಕಾನೂನು ಪ್ರಕ್ರಿಯೆ - ನಿಮ್ಮಲ್ಲಿ ಹೇಗೆ ಭಾರತೀಯ ಕಾನೂನು ಶಾಸನವಿದೆಯೋ ಅದೇ ರೀತಿ ನಮ್ಮಲ್ಲಿ ಷರಿಯಾ ಕಾನೂನು ಶಾಸನವಿದೆ. ಅದನ್ನು ಜಾರಿಗೊಳಿಸಲು ನ್ಯಾಯಾಂಗ ವ್ಯವಸ್ಥೆ, ನಮ್ಮ ಕಾನೂನಿನಲ್ಲಿ ಪದವೀಧರರಾದ ವಕೀಲರು ಇದ್ದಾರೆ. ಇದಾವುದೂ ಯಾವುದೋ ಮಸೀದಿಯ ಮುಲ್ಲಾ ಕೊಡುವ ನ್ಯಾಯದ ವ್ಯವಸ್ಥೆಯಲ್ಲ. ಇದೊಂದು ವ್ಯವಸ್ಥಿತ ರಾಷ್ಟ್ರೀಯ ಕಾನೂನು ವ್ಯವಸ್ಥೆ, ಅಮೆರಿಕ, ಯುಕೆ, ಚೈನಾ, ಭಾರತ ಅಥವಾ ಯಾವುದೇ ವ್ಯವಸ್ಥಿತ
ರಾಷ್ಟ್ರಗಳಲ್ಲಿರುವಂತೆಯೇ ಇರುವ ನ್ಯಾಯಾಂಗ ಸುವ್ಯವಸ್ಥೆ. ಇದು ಯಾವುದೇ ಸೌದಿ ಶ್ರೀಸಾಮಾನ್ಯ ಕಾಣುವ ಆಡಳಿತದ ವ್ಯವಸ್ಥೆ.
ವಿಚಾರಣಾ ಹಿಂಸೆ - ಮತ್ತೊಮ್ಮೆ ಹೇಳುತ್ತೇನೆ ಕೇಳಿ, ನಮ್ಮಲ್ಲಿ ಎಂತಹ ಅಪರಾಧಿಗಳೇ ಆದರೂ ಅವರನ್ನು ಹಿಂಸಿಸುವುದಿಲ್ಲ. ಹಿಂಸೆ ಇಸ್ಲಾಮಿನಲ್ಲಿ ಪರಮ ನಿಷಿದ್ಧ. ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿ ಶಿಕ್ಷೆಯನ್ನು ಜಾರಿಗೊಳಿಸುವವರೆಗೆ ಯಾವುದೇ ಹಿಂಸೆಯನ್ನು ಆರೋಪಿಗಳಿಗೆ ಕೊಡುವುದಿಲ್ಲ. ಸರಣಿ ಕೊಲೆ ಅಥವಾ ಸರಣಿ ಅತ್ಯಚಾರಗಳಂತಹ ಅಪರಾಧಗಳಿಂದ ಸಮಾಜದಲ್ಲಿ ಆತಂಕವನ್ನು ಸೃಷ್ಟಿಸಿದ ಸಮಾಜ ವಿದ್ರೋಹಿ ಅಪರಾಧಿಗಳ ತಲೆದಂಡದ ನಂತರ ಆತನ/ಆಕೆಯ ದೇಹವನ್ನು ತುಂಡುತುಂಡಾಗಿ ಸಾರ್ವಜನಿಕವಾಗಿ ಕತ್ತರಿಸಲಾಗುತ್ತದೆಯೇ ಹೊರತು ಜೀವಂತವಿದ್ದಾಗ ಯಾವುದೇ ಹಿಂಸೆಯನ್ನು ನೀಡಲಾಗುವುದಿಲ್ಲ. ಇಂತಹ ಘೋರ ಅಪರಾಧವನ್ನು ಮಾಡಿದವರಿಗೆ ಯಾವ ರೀತಿಯ ಅಂತಿಮ ಮರ್ಯಾದೆ ಸಿಗುತ್ತದೆ ಎಂಬ ಸಂದೇಶವನ್ನು ಕೊಡುವುದು ಇದರ ಉದ್ದೇಶ ಮಾತ್ರ, ಮತ್ತಿದು ನಾವು ಪಾಲಿಸುವ ಇಸ್ಲಾಂ ಷರಿಯಾ ಕಾನೂನಿನಲ್ಲಿದೆ.
ಇನ್ನು ಒಂದು ವೇಳೆ ಯಾರಾದರೂ ಅಧಿಕಾರಿಗಳು ಆರೋಪಿಗಳನ್ನು ವಿಚಾರಣೆಯ ವೇಳೆ ಹಿಂಸಿಸಿದ್ದರೆ ಅದು ಅವರಿಗೂ ಮತ್ತು ಆರೋಪಿಯ ನಡುವೆಯೂ ಇರಬಹುದಾದ ವೈಯಕ್ತಿಕ ದ್ವೇಷದಿಂದ. ಆ ಅಧಿಕಾರಿ ಅದಕ್ಕಾಗಿ ವಿಚಾರಣೆಯನ್ನು ಎದುರಿಸಬೇಕಾಗುತ್ತದೆ. ಪೊಲೀಸ್ ಅಧಿಕಾರಿಗಳ ಅಧಿಕಾರ ದುರುಪಯೋಗ ಎಲ್ಲಾ ರಾಷ್ಟ್ರಗಳಲ್ಲಿಯೂ ನಡೆಯುತ್ತದೆ. ಆದರೆ ಅದರ ಪ್ರಮಾಣ ಸೌದಿಯಲ್ಲಿ ಮಾತ್ರ ಅತ್ಯಂತ ಕಡಿಮೆ.
ಮಟ್ಟಾ ಮದುವೆಗಳು - ಇದು ವ್ಯಭಿಚಾರ ಮತ್ತು ವೇಶ್ಯಾವಾಟಿಕೆ ಎಂದೇ ಸೌದಿ ಸರ್ಕಾರದ ನಿಲುವು. ಈ ಮಟ್ಟಾ ಮದುವೆಗಳು ಎಲ್ಲಿ ನಡೆಯುತ್ತವೆಯೋ ಆಯಾಯ ದೇಶಗಳು ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು. ನಿಮ್ಮ ಹೈದರಾಬಾದಿಗೆ ಅರಬರು ಬಂದು pleasure ಮದುವೆಯಾದರೆ ಅದಕ್ಕೆ ಇಲ್ಲಿನ ಸರ್ಕಾರ ಕ್ರಮ ಕೈಗೊಳ್ಳಬೇಕೆ ಹೊರತು ಸೌದಿ ಸರ್ಕಾರವಲ್ಲ. ಮೇಲಾಗಿ ಈ ರೀತಿ ಮದುವೆಯಾಗುವವರು ಸೌದಿ ಪ್ರಜೆಗಳಾಗಿರದೆ ಇತರೆ ಮಧ್ಯಪ್ರಾಚ್ಯದ ದೇಶಗಳ ಪ್ರಜೆಗಳಿರಬಹುದು. ಒಟ್ಟಾರೆ ಸೌದಿ ಅರೇಬಿಯಾದ ಪ್ರಕಾರ ಇದು ವೇಶ್ಯಾವಾಟಿಕೆ ಮತ್ತದು ತಲೆದಂಡದ ಅಪರಾಧ.
ಬುರ್ಖಾ ಹೇರಿಕೆ - ಇದು ಸುಳ್ಳು. ನಮ್ಮಲ್ಲಿ ಬುರ್ಖಾ ಹೇರಿಕೆಯಿಲ್ಲ. ನನ್ನ ಹೆಂಡತಿ ಮತ್ತು ನಾಲ್ಕು ಹೆಣ್ಣುಮಕ್ಕಳು ಇದುವರೆಗೂ ಬುರ್ಖಾ ಧರಿಸಿಲ್ಲ. ನನ್ನ ಮಗಳು ಅಲ್ಲಿ ಕುಳಿತಿದ್ದಾಳೆ ನೋಡಿ ಎಂದು ಜೀನ್ಸ್ ಮತ್ತು ಟೀಷರ್ಟ್ ತೊಟ್ಟಿದ್ದ ಅವರ ಮಗಳ ಕಡೆ ಬೆರಳು ತೋರಿದರು.
ಅಸಮಾನತೆ - ಮೇಲಿನ ಎಲ್ಲಾ ಶಿಕ್ಷೆಗಳೂ ಮತ್ತು ನಿಯಮಗಳೆಲ್ಲವೂ ಸ್ತ್ರೀ-ಪುರುಷರಿಗೆ ಸಮಾನವಾಗಿ ಅನ್ವಯಿಸುತ್ತವೆ. ಯಾವುದೇ adultry ಅಪರಾಧಕ್ಕೆ ಸಮಾನ ಶಿಕ್ಷೆಯಿರುತ್ತದೆ. ಹಾಗೆಂದು ಅವರುಗಳು ಹೊಂದಾಣಿಕೆಯಾಗದಿದ್ದರೆ ವಿಚ್ಛೇದನವನ್ನು ಪಡೆದು ಇಷ್ಟವಾದವರೊಂದಿಗೆ ಮದುವೆಯಾಗಬಹುದು. ಆಸ್ತಿಯಲ್ಲಿ ಸ್ತ್ರೀಯರಿಗೆ ಅರ್ಧ ಭಾಗವಿದ್ದರೆ ಪುರುಷರಿಗೆ ಒಂದು ಭಾಗ ಸಿಗುತ್ತದೆ. ಏಕೆಂದರೆ ಪ್ರತಿಯೊಬ್ಬ ಸ್ತ್ರೀಯ ಪುರುಷನಿಗೆ ಒಂದು ಭಾಗ ಆಸ್ತಿ ಬಂದಿರುತ್ತದೆ ಮತ್ತು ಆ ಅಸ್ತಿಯನ್ನು ಆತ ಕುಟುಂಬಕ್ಕೆ ವ್ಯಯಿಸುತ್ತಾನೆಯೇ ಹೊರತು ಆತನ ಸ್ವಂತಕ್ಕಲ್ಲ. ಹಾಗಾಗಿ ಇಲ್ಲಿ ಕೌಟುಂಬಿಕ ಸಮಾನತೆಯಿದೆ.
ಇನ್ನು ಟ್ರಿಪಲ್ ತಲಾಖ್ ಅನ್ನು ಮೂರು ಬಾರಿ ಒಟ್ಟಿಗೆ ಹೇಳುವಂತಿಲ್ಲ. ಸೌದಿಯಲ್ಲಿ ಅದನ್ನು ಅಷ್ಟು ಸುಲಭವಾಗಿ ಹೇಳಲಾಗದು. ನೀವು ಕೇಳಿರಿರುವ ಟ್ರಿಪಲ್ ತಲಾಖ್ ಸೌದಿಯನ್ನು ಬಿಟ್ಟು ಇತರೆ ಮೂಲಭೂತವಾದಿ ಇಸ್ಲಾಂ ರಾಷ್ಟ್ರಗಳಲ್ಲಿರಬಹುದು. ಸೌದಿಯಲ್ಲಿಲ್ಲ.
ಶುಕ್ರವಾರದ ನಮಾಜು ವೇಳೆ ರಸ್ತೆಗಳಲ್ಲಿ ಯಾರೂ ಸಂಚರಿಸದಂತೆ ನಿಯಮ ಹೇರಿಕೆ - ಸುಳ್ಳು. ಆ ದಿನ ರಜೆಯಿರುವುದರಿಂದ ಅಂಗಡಿ ಮುಂಗಟ್ಟುಗಳು ಮುಚ್ಚಿರುತ್ತವೆ. ಹಾಗಾಗಿ ಬಿಸಿಲಿನಲ್ಲಿ ಖಾಲಿ ತಿರುಗಲು ಯಾರು ಹೋಗದ ಕಾರಣ ವಿದೇಶಿ ನೌಕರರು ಏನೇನೋ ಕಲ್ಪಿಸಿಕೊಂಡಿರಬಹುದು!
ಧಾರ್ಮಿಕ ಗುರುಗಳ ಕಾನೂನು ಚಲಾಯಿಸುವಿಕೆ - ಸುಳ್ಳು! ನಮ್ಮಲ್ಲಿನ ಕೆಲವು ಕಟ್ಟರ್ ವಾದಿಗಳು ನಿಮ್ಮ ಖಾಪ್ ಪಂಚಾಯತಿಯ ರೀತಿಯಲ್ಲಿ ತಮ್ಮದೇ ಆದ ವ್ಯವಸ್ಥೆಯನ್ನು ಅಲ್ಲಲ್ಲಿ ಹೊಂದಿ ತಮ್ಮದೇ moral policing ನಡೆಸುತ್ತಿದ್ದರು. ಈಗ ಅದಕ್ಕೆಲ್ಲ ಸೌದಿ ಸರ್ಕಾರ ಕಡಿವಾಣ ಹಾಕಿದೆ. ಬಹುಶಃ ನೀವು ಹೇಳಿದ/ಕೇಳಿದ ವಿಚಾರಗಳೆಲ್ಲ ಈ ಕಟ್ಟರ್ ವಾದಿಗಳಿಗೆ ಸಂಬಂಧಿಸಿದ್ದಿರಬಹುದು. ಭಾರತದ ಖಾಪ್ ಪಂಚಾಯಿತಿ, ಅಮೆರಿಕಾದ ಕೆಲವು ಕಲ್ಟ್ ಪಂಥದೊಳಗಿನ ನ್ಯಾಯ ವ್ಯವಸ್ಥೆಗಳು ಹೇಗೆ ರಾಷ್ಟ್ರೀಯ ವ್ಯವಸ್ಥೆಗಳು ಎಂದೆನಿಸುವುದಿಲ್ಲವೋ ಹಾಗೆಯೇ ನಮ್ಮಲ್ಲಿನ ಕೆಲವು ಮೂಲಭೂತವಾದಿಗಳ ವ್ಯವಸ್ಥೆ, ರಾಷ್ಟ್ರೀಯ ವ್ಯವಸ್ಥೆ ಎನಿಸುವುದಿಲ್ಲವಲ್ಲವೇ?
ಈ ಕಟ್ಟರ್ ಮೂಲಭೂತವಾದಿಗಳು ನಿಗ್ರಹಿಸುವಲ್ಲಿ ಸೌದಿ ಸರ್ಕಾರ ಸಮಯ ತೆಗೆದುಕೊಂಡಿತು ನಿಜ. ಇವರಿಂದ ನಮ್ಮ ಮಹಿಳೆಯರ ಗೌರವವನ್ನು ಕಾಪಾಡಲೆಂದೇ ಕೆಲವು ನಿಯಮಗಳನ್ನು ಮಹಿಳೆಯರ ಮೇಲೆ ಹೇರಿದ್ದೆವು. ನಮ್ಮಲ್ಲಿ ಆರ್ಥಿಕ ಸ್ಥಿತಿಗಿಂತ ಕೌಟುಂಬಿಕ ಹಿನ್ನೆಲೆಯನ್ನು ಹೆಚ್ಚಾಗಿ ಗೌರವಿಸುತ್ತೇವೆ. ವೈವಾಹಿಕ ಸಂಬಂಧಗಳನ್ನು ನೋಡುವಾಗ ಸೌದಿ ಅರಬರಿಗೆ ಕೌಟುಂಬಿಕ ಹಿನ್ನೆಲೆ ಶೇಕಡಾ 80ರಷ್ಟು ಮತ್ತು ಆರ್ಥಿಕ ಸ್ಥಿತಿ 20ರಷ್ಟು ಮುಖ್ಯ. ಹಾಗಾಗಿ ಕುಟುಂಬದ ಗೌರವಕ್ಕೆ ನಮ್ಮಲ್ಲಿ ಅತ್ಯಂತ ಮಹತ್ವ.
ಈ ಮೂಲಭೂತವಾದಿಗಳು ಅವರನ್ನು ಓಲೈಸದವರ ಕೌಟುಂಬಿಕ ಗೌರವಕ್ಕೆ ಚ್ಯುತಿ ತರುವಂತಹ ಕೆಲಸಗಳನ್ನು ಮಾಡುತ್ತಿದ್ದರು. ಅವರ ಅಂತಹ ನೀಚ ಕಾರ್ಯಕ್ಕೆ ಮಹಿಳೆಯರು ಸುಲಭವಾಗಿ ತುತ್ತಾಗುತ್ತಿದ್ದರು. ಹಾಗಾಗಿಯೇ ಕೆಲವು ನಿರ್ಬಂಧಗಳನ್ನು ಹೇರಿದ್ದುದು. ಅವುಗಳಲ್ಲಿ ಕಾರು ಚಲಾಯಿಸುವ ನಿರ್ಬಂಧ ಕೂಡ ಒಂದು. ಈಗ ಎಲ್ಲ ತಹಬದಿಗೆ ಬಂದಿದ್ದು ಆ ನಿರ್ಬಂಧಗಳನ್ನು ತೆಗೆದಿದ್ದೇವೆ. ಹಾಗಾಗಿಯೇ ಈಗ ನಮ್ಮ ಮಹಿಳೆಯರು ಕಾರ್ ಚಲಾಯಿಸುತ್ತಿರುವುದು.
ಒಟ್ಟಾರೆ, ಕೇಳಿದ್ದು ಸುಳ್ಳಾಗಬಹುದು, ನೋಡಿದ್ದು ಸುಳ್ಳಾಗಬಹುದು. ಆದರೆ ವಿಚಾರಿಸಿ ಪರಾಮರ್ಶಿಸಿ ನೋಡಿದಾಗ ಸತ್ಯವು ತಿಳಿಯುವುದು.
ರಾಜಪ್ರಭುತ್ವ vs ಪ್ರಜಾಪ್ರಭುತ್ವ - ರಾಜಪ್ರಭುತ್ವವೆಂದೊಡನೆ ಅದು ಹೇರಿಕೆ ಯಾ ಗುಲಾಮಿಕೆ ಎಂಬ ಅಭಿಪ್ರಾಯವಿದೆ. ಇದು ಸುಳ್ಳು. ನಮ್ಮ ರಾಜರಿಗೆ ಸಾಕಷ್ಟು ವಿದ್ಯಾವಂತ, ಬುದ್ಧಿಜೀವಿ ತಂತ್ರಜ್ಞರಿಂದೊಡಗೂಡಿದ ಸಲಹಾ ಸಮಿತಿಯಿದೆ. ಈ ಎಲ್ಲಾ ಸಲಹಾ ಸಮಿತಿಯ ಸಲಹೆಗಳನ್ನು ವಿಶ್ಲೇಷಿಸಿ ಪರಾಮರ್ಶಿಸಿ ಅನ್ವಯಿಸಲಾಗುತ್ತದೆ. ಇದು ಒಂದು ಅತ್ಯುತ್ತಮ ಗೌವರ್ನೆನ್ಸ್ ವ್ಯವಸ್ಥೆ ಎಂದುಕೊಳ್ಳಿ. ನಿಮ್ಮ ಪ್ರಜಾಪ್ರಭುತ್ವದಲ್ಲಿ ಸಾಕಷ್ಟು ನಿರ್ಧಾರಗಳು ಮಂದಗತಿಯಲ್ಲಿ ಸಾಗಿದರೆ, ನಮ್ಮ ರಾಜಪ್ರಭುತ್ವದಲ್ಲಿ ತ್ವರಿತವಾಗಿ ನಿರ್ಧರಿಸಲ್ಪಡುತ್ತವೆ. ಹಾಗೆಂದು ಅವಸರದ ನಿರ್ಧಾರಗಳು ಇಂದಿಗೂ ಆಗುವುದಿಲ್ಲ. ಸೌದಿಯ ಆರ್ಥಿಕ ಸ್ಥಿತಿ, ಜಾಗತೀಕರಣದ ಇಂದಿನ ಪ್ರಪಂಚದಲ್ಲಿ ಅತ್ಯುನ್ನತವಾಗಿಯೇ ಇದೆ. ಜಗತ್ತಿನ ಎಲ್ಲಾ ರಾಷ್ಟ್ರಗಳೊಂದಿಗೆ ಸೌಹಾರ್ದಯುತ ವ್ಯಾಪಾರ ಸಂಬಂಧಗಳನ್ನು, ರಾಜತಾಂತ್ರಿಕ ಸಂಬಂಧಗಳನ್ನು ಹೊಂದಿದ್ದೇವೆ. ಜನಸಾಮಾನ್ಯರಿಗೆ ಮಿನಿಮಮ್ ಗೌವರ್ನೆನ್ಸ್, ಮ್ಯಾಕ್ಸಿಮಮ್ ಸರ್ವಿಸ್ ಮುಖ್ಯವೇ ಹೊರತು ರಾಜಪ್ರಭುತ್ವ ಯಾ ಪ್ರಜಾಪ್ರಭುತ್ವವಲ್ಲ. ಹಾಗೆಂದು ಜನಸಾಮಾನ್ಯರು ಓದಿ ವಿದ್ಯಾವಂತರಾಗಿ ತಕ್ಕ ಅರ್ಹತೆಯನ್ನು ಗಳಿಸಿದರೆ ಪ್ರಮುಖ ಹುದ್ದೆಗಳಿಗೆ ನಮ್ಮ ಸುಲ್ತಾನರೇ ನೇಮಕಾತಿ ಮಾಡುವರು. ಕೆಲವರು ಇದನ್ನು ಎಲೆಕ್ಷನ್ ಎಂದು ತಪ್ಪಾಗಿ ತಿಳಿದುಕೊಂಡಿದ್ದಾರೆ, ಇದು ಸೆಲೆಕ್ಷನ್. ಹಾಗಾಗಿ ನೀವೇ ನಿರ್ಧರಿಸಿ ಯಾವುದು ಜನಸಾಮಾನ್ಯರಿಗೆ ಒಳಿತೆಂದು.
ಹೀಗೆ ನನ್ನ ಸ್ನೇಹಿತರು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಅತ್ಯಂತ ಸಮಾಧಾನಚಿತ್ತದಿಂದ ಉದಾಹರಣೆಗಳೊಂದಿಗೆ ಉತ್ತರಿಸಿ ಸೌದಿ ಕುರಿತಾದ ಸಾಕಷ್ಟು ತಪ್ಪು ತಿಳುವಳಿಕೆಯನ್ನು ಕಳೆದದ್ದಲ್ಲದೆ ಯಾವುದೇ ರಾಯಭಾರ ಕಚೇರಿಗೆ ಹೋಗದೆ ಮನೆಯಲ್ಲೇ ಕುಳಿತು ಈ-ವೀಸಾ ಪಡೆದು ಸೌದಿಗೆ ಬನ್ನಿ ಎಂದು ಆಹ್ವಾನ ಕೂಡಾ ನೀಡಿದರು.
ಸೌದಿ ಎಂದರೆ ಒಂದು ಮೌಢ್ಯದ ಕೌದಿ ಕವುಚಿಕೊಂಡದ್ದು ಹೀಗೆ ಮಗುಚಿಬಿದ್ದಿತು.

ಬಯಲಾದ ಹಂಪಿ

ಡಾ. ಕುಮಾರ್ ಅಂಕನಹಳ್ಳಿಯವರ "ಬಯಲಾದ ಹಂಪಿ" ಕೃತಿ ಬಿಡುಗಡೆ ಮಾಡಿ ಮಾತನಾಡಿದ ಮಾತುಗಳು:
ನಮಸ್ತೆ,
ಹಂಪಿ ಎನ್ನುವುದು ಒಂದು ಬೆರಗು, ಕೌತುಕ, ನಿಗೂಢ! ಹಾಗಾಗಿಯೇ ಸಾವಿರಾರು ವಿದೇಶಿಯರು ಹಂಪಿಗೆ ಪ್ರತಿ ವರ್ಷ ಮತ್ತೆ ಮತ್ತೆ ಬರುತ್ತಾರೆ. ಹಲವರು ಹಂಪಿಯನ್ನೇ ಮನೆಯಾಗಿಸಿಕೊಂಡಿದ್ದಾರೆ. ಕೇವಲ ಕೌತುಕವಲ್ಲದೆ ದ್ವಂದ್ವ, ಭಿನ್ನಾಭಿಪ್ರಾಯ, ಅನುಮಾನ, ಪಂಥಬೇಧಗಳ ತವರು ಕೂಡಾ ಈ ಹಂಪಿ! ರಾಮಾಯಣದ ಆಂಜನೇಯನಿಂದ, ಇಂದಿನ ಹಂಪಿ ವಿಶ್ವವಿದ್ಯಾಲಯದವರೆಗೂ ಇತಿಹಾಸದ ಎಲ್ಲಾ ಕಾಲಘಟ್ಟದಲ್ಲಿಯೂ ಆ ಎಲ್ಲಾ ವೈಶಿಷ್ಟ್ಯಗಳನ್ನು ಉಳಿಸಿಕೊಂಡು ಬೆಳೆಸಿಕೊಳ್ಳುತ್ತಾ ಸಾಗಿಬಂದಿದೆ, ಬರುತ್ತಿದೆ.
"ಶೈವ ಪರಂಪರೆಯ ಹಾಲುಮತದ ಹಕ್ಕ ಬುಕ್ಕರಿಂದ ಸ್ಥಾಪಿತಗೊಂಡ ವಿಜಯನಗರ ಸಾಮ್ರಾಜ್ಯದ ನಿಜವಾದ ಸಾಮ್ರಾಟ ಅಲ್ಲಿನ ಅಧಿದೇವತೆಯಾದ ಶ್ರೀ ವಿರೂಪಾಕ್ಷ. ತುಳುನಾಡಿನ ಸಾಳ್ವರು ಆಡಳಿತಕ್ಕೆ ಬರುವವರೆಗೆ ಬುಕ್ಕದೇವರಾಯ, ಪ್ರೌಢದೇವರಾಯರೆಲ್ಲಾ ವಿರುಪಾಕ್ಷನ ಹೆಸರಿನಲ್ಲಿ ರಾಜ್ಯಭಾರ ಮಾಡಿದ್ದಲ್ಲದೆ, ಸಹಿಯನ್ನು ವಿರುಪಾಕ್ಷನ ಹೆಸರಿನಲ್ಲಿಯೇ ಹಾಕುತ್ತಿದ್ದರು. ತುಳುನಾಡಿನ ವೈಷ್ಣವ ಪಂಥದ ಹಿನ್ನೆಲೆಯ ಸಾಳ್ವರು ವಿರುಪಾಕ್ಷನ ಹೆಸರನ್ನು ತೆಗೆದು ಶ್ರೀರಾಮ ಎಂಬ ಅಂಕಿತವನ್ನು ಬಳಸಲಾರಂಭಿಸಿದರು. ತುಳುವ ನರಸನಾಯಕನ ಉಪಪತ್ನಿಯಾದ ತೆಲುಗು ಭಾಷೆಯ ನಾಗಲಾದೇವಿಯ ಮಗನಾದ ಕೃಷ್ಣದೇವರಾಯನನ್ನು ನರಸನಾಯಕನ ಮಂತ್ರಿಯಾಗಿದ್ದ ತೆಲುಗರ ತಿಮ್ಮರಸನು ಪಟ್ಟಕ್ಕೆ ತಂದನು. ನರಸನಾಯಕನ ಪಟ್ಟದರಸಿಯರ ಗಂಡುಸಂತಾನವನ್ನು ಉಪೇಕ್ಷಿಸಿ ತೆಲುಗು ಪ್ರಿಯ ರಾಯನನ್ನು ಪಟ್ಟಕ್ಕೆ ವ್ಯವಸ್ಥಿತವಾಗಿ ತರಲಾಯಿತು. ಮುಂದೆ ಕೃಷ್ಣದೇವರಾಯನು ತನ್ನ ಆಸ್ಥಾನದಲ್ಲಿ ತೆಲುಗು ಪಂಡಿತರಿಗೆ ಸಾಕಷ್ಟು ಸ್ಥಾನಮಾನಗಳನ್ನು ನೀಡಿದ್ದಲ್ಲದೆ ವೈಷ್ಣವ ಗುಡಿಗಳನ್ನು ಕಟ್ಟಿಸಿದನು.
ಈ ಎಲ್ಲಾ ಬೆಳವಣಿಗೆಯು ಮೂಲತಃ ಶೈವ ಸಾಮ್ರಾಜ್ಯವಾಗಿದ್ದನ್ನು ವೈಷ್ಣವವಾಗಿಸಿದ್ದು ಸಹಜವಾಗಿ ಶೈವ-ವೈಷ್ಣವವಲ್ಲದೆ ಕನ್ನಡ-ತೆಲುಗು ವೈರತ್ವಕ್ಕೆ ಕೂಡ ನಾಂದಿಯಾಯಿತು. ಯಾವಾಗ ಕೃಷ್ಣದೇವರಾಯನು ತನ್ನ ದಾಯಾದಿ ಪುತ್ರರನ್ನು ಕಡೆಗಣಿಸಿ ತನ್ನ ತೆಲುಗು ಅಳಿಯಂದಿರನ್ನು ಪಟ್ಟಕ್ಕೆ ತಂದನೋ ಆಗಲೇ ವಿಜಯನಗರದ ಅವನತಿ ಪ್ರಾರಂಭವಾಯಿತು.
ಈ ಮೊದಲು ತೆಲುಗರು ಮುಸ್ಲಿಂ ಅರಸರೊಡಗೂಡಿ ಕನ್ನಡದ ಕುಮಾರರಾಮನ ರುಂಡವನ್ನು ಹಾರಿಸಿದ್ದುದು ಮುಂದೆ ಕನ್ನಡಿಗರು ಆದಿಲ್ ಶಾಹಿ ಸುಲ್ತಾನರೊಟ್ಟಿಗೊಡಗೂಡಿ ತೆಲುಗು ಅಳಿಯ ರಾಮರಾಯನ ರುಂಡವನ್ನು ಹಾರಿಸುವಲ್ಲಿಗೆ ಈ ವೈರತ್ವ ಪರಿಸಮಾಪ್ತಿಯಾಯಿತು. ಇಲ್ಲಿ ಮುಸ್ಲಿಂ ಅರಸೊತ್ತುಗೆಗಳು ಪರಿಸ್ಥಿತಿಯನ್ನು ತಮ್ಮ ಅನುಕೂಲಕ್ಕೆ ಬಳಸಿಕೊಂಡರೆ ಹೊರತು ಕಾಲು ಕೆದರಿ ಯುದ್ಧ ಮಾಡಲಿಲ್ಲ." ಇದು ಡಾ. ಎಂ.ಎಂ. ಕಲ್ಬುರ್ಗಿಯವರ ಸಂಶೋಧನೆಯ ಸಂಕ್ಷಿಪ್ತ ರೂಪ.
ಇನ್ನು ವಿಜಯನಗರದ ಸಾಮಂತರಾದ ಬೆಂಗಳೂರಿನ ಕೆಂಪೇಗೌಡರ ಮನೆಮಾತು ಕೂಡ ತೆಲುಗು ಆಗಿದ್ದಿತು. ಹಾಗಾಗಿಯೇ ಅವರ ಮನೆಮಾತು ಸಹಜವಾಗಿ ಈ ಸಾಮಂತಿಕೆ ದೊರೆಯುವಲ್ಲಿ ಸಹಾಯ ಮಾಡಿರಬಹುದು. ಏಕೆಂದರೆ ಸಾಕಷ್ಟು ತೆಲುಗು ಭಾಷಿಗರಿಗೆ ಕೃಷ್ಣದೇವರಾಯನು ಮಣೆ ಹಾಕಿದ್ದನು. ಆತನ "ದೇಸಭಾಶಲೋ ತೆಲುಗು ಲೇಸ" ಎಂಬ ಮಾತು ಆತನ ತೆಲುಗು ಪ್ರೀತಿಯನ್ನು, ಪಕ್ಷಪಾತವನ್ನು ಧೃಢೀಕರಿಸುತ್ತದೆ ಎಂದು ಸಂಶೋಧಕರು ತಿಳಿಸುತ್ತಾರೆ. ಆ ಹಿನ್ನೆಲೆಯಲ್ಲಿ ಇಂದಿನ ಹುಸಿ ಕನ್ನಡ ಅಭಿಮಾನಿಗಳು "ದೇಶಭಾಷೆಯೊಳಗೆ ನಮ್ಮ ಕನ್ನಡ ಚೆನ್ನ" ಎಂದು ರಿಮೇಕ್ ಮಾಡಿಕೊಂಡು ಹಾಡಿ ಕುಣಿಯುತ್ತಿರುವುದು ಎಷ್ಟು ಉಚಿತ?
ಇನ್ನು ಪೋರ್ಚುಗೀಸ್ ಪ್ರವಾಸಿಗರಾದ ನೂನೇಜ್ ಪಾಯಿಸರಿಗೆ ಹಂಪಿ ಬೇರೆಯಾಗಿಯೇ ಕಂಡಿದೆ. ಅವರ ವರ್ಣನೆಯ ಜನಜೀವನದ ಚಿತ್ರಣ ಬೇರೆಯಾಗಿಯೇ ಇದೆ. ಅದು ಇಂದು ಬೆಂಗಳೂರು ಪಟ್ಟಣವನ್ನೇ ಇಡೀ ಕರ್ನಾಟಕದ ಅಭಿವೃದ್ಧಿ ಎಂದು ಬಿಂಬಿಸುವಂತೆಯೇ ಇದ್ದಿತೆಂಬುದನ್ನು ತೆರೆದಿಡುತ್ತದೆ.
ಇದು ಹಂಪಿ ಒಬ್ಬೊಬ್ಬರಿಗೆ ಒಂದೊಂದು ತೆರನಾಗಿ ಬಿಚ್ಚಿಕೊಳ್ಳುವ ಪರಿ.
ಇಂದು ಬಿಡುಗಡೆಯಾಗುತ್ತಿರುವ "ಬಯಲಾದ ಹಂಪಿ" ಕೃತಿಯು ತನ್ನದೇ ವಿಧದಲ್ಲಿ ಹಂಪಿಯನ್ನು ತೆರೆದಿಡುತ್ತಿದೆ. ಪ್ರವಾಸ ಕಥನ ಶೈಲಿಯ ಈ ಕೃತಿ ಹಂಪಿಯ ಮೇಲೆ ಹೊಸದೊಂದು ಕೋನವನ್ನು ಪ್ರವಾಸ ಕರೆದುಕೊಂಡ ಪ್ರೊಫೆಸರರುಗಳ ಮೂಲಕ ತೆರೆದಿಡುತ್ತಿದೆ. ತಾವೆಲ್ಲ ಓದಿ ಆ ಹೊಸ ಕೋನವನ್ನು ಕಂಡು ಹಂಪಿಯ ಕುರಿತಾದ ಕೌತುಕವನ್ನು ಹೆಚ್ಚಿಸಿಕೊಳ್ಳಿ ಎಂದು ಆಶಿಸುತ್ತ ನನ್ನ ಮಾತನ್ನು ಮುಗಿಸುತ್ತೇನೆ. ಧನ್ಯವಾದಗಳು!

Abdul Razak of Gadag

ತಿಳಿರುಗನ್ನಡದ , ಸಾಮರಸ್ಯದ ಸ್ವರ್ಗವಾದ ಗದುಗಿನ ನಡೆದಾಡುವ ಇತಿಹಾಸ ಕೋಶ ಅಬ್ದುಲ್ ರಜಾಕ್ ಅವರೊಟ್ಟಿಗೆ ಕಳೆದ ಎರಡು ದಿನಗಳು ಅದ್ಭುತ ಅನುಭವವನ್ನು ಕೊಟ್ಟವು.
ನನ್ನ "ಭಾರತ ಒಂದು ಮರುಶೋಧನೆ"ಯನ್ನು ಓದಿ ಸಹಮತ ತೋರಿ ಕಾಳಮುಖರ ಕಲಾಮುಖ ಶಿಲ್ಪಶಾಸ್ತ್ರ ಹೇಗೆ ದಕ್ಷಿಣಾಚಾರ, ದಖನಾಚಾರ, ಜಕಣಾಚಾರವೆನಿಸಿಕೊಳ್ಳುತ್ತ ಮುಂದೆ ಹೇಗೆ ಜಕಣಾಚಾರಿ ಎಂಬ ಕಾಲ್ಪನಿಕ ವ್ಯಕ್ತಿ ಸ್ವರೂಪ ತಾಳಿತು ಎಂಬ ಸಾಕಷ್ಟು ಸಂಶೋಧಕರ ಸಂಶೋಧನೆಯನ್ನು ಅಬ್ದುಲ್ ರಜಾಕ್ ಎತ್ತಿ ಹಿಡಿದರು.
ತಮ್ಮ ಯೌವನವನ್ನು ಉತ್ಖನನ ಸಹಾಯಕರಾಗಿ ಅನೇಕ ಸಂಶೋಧಕರೊಂದಿಗೆ ಕೆಲಸ ಮಾಡಿ, ಇತಿಹಾಸ, ಸ್ಮಾರಕ, ಸಂಶೋಧನೆಗಳನ್ನೇ ಉಸಿರಾಗಿಸಿಕೊಂಡು ಅವುಗಳ ಸಂರಕ್ಷಣೆಗೆ ಮ್ಯೂಸಿಯಂ ತೆರೆದು ಸರ್ಕಾರಕ್ಕೆ ದಾನವಾಗಿ ಕೊಟ್ಟ ಸತ್ಯ ಸಂಶೋಧಕರಾದ ಅಬ್ದುಲ್ ರಜಾಕರ
ಸತ್ಯನಿಷ್ಠೆ, ಉದಾರವಾದ, ಇತಿಹಾಸದ ಆಳ ಅರಿವು, ಓದು, ಸ್ಮಾರಕಗಳ ಕುರಿತಾದ ಕಳಕಳಿ ಯಾವುದೇ ಪೋಸ್ಟ್ ಡಾಕ್ಟೋರಲ್ ಸಂಶೋಧಕರಿಗಿಂತ ಕಡಿಮೆ ಇಲ್ಲ. ಹಾಂ, ಗದುಗಿನ ವಾಸಿಯಾದ ಇವರು ನಿವೃತ್ತಿಯ ನಂತರ ಲಕ್ಕುಂಡಿಯಲ್ಲಿ ಗೈಡ್ ಆಗಿ ಸ್ಮಾರಕಗಳ ರಕ್ಷಣೆಯನ್ನು ಪರೋಕ್ಷವಾಗಿ ಮಾಡುತ್ತಿದ್ದಾರೆ.
ರಾಜೀವ್ ದೀಕ್ಷಿತರ ಜಯಂತುತ್ಸವದಲ್ಲಿ ಇತಿಹಾಸದ ಕುರಿತು ಮಾತನಾಡಲು ಸ್ವದೇಶಿ ಆಂದೋಲನದ ಸಂಚಾಲಕರು ನನ್ನನ್ನು ಗದಗಿಗೆ ಆಹ್ವಾನಿಸಿ ಅಬ್ದುಲ್ ರಜಾಕರ ಭೇಟಿಗೆ ಕಾರಣವಾದರು. ಅದಲ್ಲದೇ ನಾನು ರಜಾಕರ ಕುರಿತು ತಿಳಿಸಿದಾಗ ತಕ್ಷಣಕ್ಕೆ ಅವರನ್ನು ಸನ್ಮಾನಿಸಿ ಗೌರವಿಸಿದರು ಕೂಡ. ಇದು ನಿಜವಾದ ಉದಾರವಾದ!
ಇಂತಹ ಉದಾರವಾದವನ್ನು ಮಾತಿನಲ್ಲಿ ಉದ್ಘೋಷಿಸುತ್ತ ಉದರವಾದವನ್ನು ಪಾಲಿಸುವವರು ಇನ್ನಾದರೂ ತಮ್ಮ ಅಸಹನೆ, ಸಂಕುಚಿತತೆ, ಅಸ್ಪೃಶ್ಯತೆ, ದ್ವೇಷ, ಪೂರ್ವಾಗ್ರಹಗಳನ್ನು ಮೀರಿ ಸಮಾಜದಲ್ಲಿ ಸಂಭಾಷಿಸಬಲ್ಲರೆ?!? ಗೊತ್ತಿಲ್ಲ. ಒಟ್ಟಿನಲ್ಲಿ ಆ ವೈರುಧ್ಯದ ಉದರವಾದಿ ಪಂಥದವರು ನನ್ನನ್ನಷ್ಟೇ ಅಲ್ಲದೇ ಅವರದೇ ಪಂಥಬಳಗದವರಿಗೆ "ನೀವು ಅಲ್ಲಿಗೆ ಹೋಗಬಾರದು, ಇವರೊಟ್ಟಿಗೆ ಕೂರಬಾರದು, ಇವರೊಂದಿಗೆ ಮಾತನಾಡಬಾರದು, ಕೈಕುಲುಕಬಾರದು, ಬಾರಿಗೆ ಕುಡಿಯಲು ಹೋದರೆ ಅಲ್ಲಿ ಯಾವುದಾದರೂ ಬಲಪಂಥೀಯ/ದೇಶಭಕ್ತನಿದ್ದಾನೆಯೇ ಎಂದು ಪರಿಶೀಲಿಸಿ ಕುಳಿತುಕೊಳ್ಳಬೇಕು" ಎಂದು
ಸೆಕ್ಷನ್ 144, ಕರ್ಫ್ಯೂಗಳನ್ನು ಹಾಕಿ ದಾದಾಗಿರಿ ನಡೆಸುತ್ತಾರೆ.
ವಿಶ್ವದೆಲ್ಲೆಡೆ ಇರುವ ಲಿಬರಲ್ (ಉದಾರವಾದ) ಮತ್ತು ಕನ್ಸರ್ವೇಟಿವ್ (ಸಂಪ್ರದಾಯವಾದ) ಪಂಥಗಳು ಭಾರತದ ಎಡ ಮತ್ತು ಬಲ ಎಂದಾಗುವುದಿಲ್ಲ. ಹಾಗೆಂದುಕೊಂಡಿದ್ದರೆ ಅದು ತಪ್ಪು ಗ್ರಹಿಕೆ. ಭಾರತದ ಎಡ/ಬಲಗಳೆರಡೂ ಪೂರ್ವಾಗ್ರಹದ ಪಂಥಗಳು.

CAA, NRC

ಕಮ್ಯುನಿಸ್ಟ್ ರಷ್ಯಾದಲ್ಲಿರುವ ಯಹೂದಿ (ಜ್ಯುಯಿಷ್) "ಧರ್ಮೀಯ"ರಿಗೆ, ಧರ್ಮವೇ ಜಯವೆಂಬ ಪಾಕಿಸ್ತಾನದಲ್ಲಿ ಕಿರುಕುಳಕ್ಕೊಳಗಾಗುತ್ತಿರುವ ಅಹ್ಮದಿ "ಧಾರ್ಮಿಕ" ಪಂಥದವರಿಗೆ, ಮತ್ತು ಪ್ರಪಂಚದಾದ್ಯಂಥ ಧಾರ್ಮಿಕ ತುಳಿತಕ್ಕೊಳಗಾಗುತ್ತಿರುವ ಕ್ರಿಶ್ಚಿಯನ್, ಯಹೂದಿ ಮತ್ತಿತರೆ ಧರ್ಮದವರು ಅಮೆರಿಕದೊಂದಿಗೆ ಯಾವುದೇ ಸಂಬಂಧವಿಲ್ಲದಿದ್ದರೂ ಅವರಿಗೆ ಅಮೆರಿಕ ಧರ್ಮದ ಆಧಾರದ ಮೇಲೆ ವಲಸೆಯ ಅವಕಾಶವನ್ನು ಕೊಟ್ಟಿದೆ. ಇದೇ ನೀತಿಯನ್ನು ಸಾಕಷ್ಟು ಮುಂದುವರಿದ ರಾಷ್ಟ್ರಗಳು ಅನುಸರಿಸುತ್ತಿವೆ.

ಇಂದು ಇದೇ ನೀತಿಯನ್ನು ಭಾರತ ತನ್ನ ನೆಲದೊಂದಿಗೆ "ಧರ್ಮ"ದ ಕಾರಣದಿಂದ ಬೇರ್ಪಟ್ಟ ನೆಲದಲ್ಲಿನ ಧಾರ್ಮಿಕ ಕಿರುಕುಳಕ್ಕೊಳಗಾಗಿರುವವರಿಗೆ ವಲಸೆ ಹಕ್ಕನ್ನು ಕೊಟ್ಟರೆ ತಪ್ಪೇನು?!

ಇನ್ನು ರಾಷ್ಟ್ರೀಯ ಪೌರತ್ವ ದಾಖಲಾತಿ...ಇದು ಯಾವುದೇ ಒಂದು ರಾಷ್ಟ್ರದ ಪರಿಕಲ್ಪನೆಯ ಪ್ರಮುಖ ಭಾಗ. ಇದನ್ನು ಭಾರತ ಒಂದು ರಾಷ್ಟ್ರವಾಗಿ ರೂಪುಗೊಂಡ ಕೂಡಲೇ ಆಗಬೇಕಿದ್ದ ಪ್ರಕ್ರಿಯೆ, ಆದರೆ ಹಾಗಾಗಿಲ್ಲ! ಆದ್ದರಿಂದ ಸುಧೀರ್ಘ ಕಾಲದವರೆಗೆ ಬಾಕಿಯಿರುವ  ಈ ಪ್ರಕ್ರಿಯೆಯ ಅನುಷ್ಠಾನಕ್ಕೆ ಸುಧೀರ್ಘ ಮತ್ತು ವ್ಯವಸ್ಥಿತ ರೂಪುರೇಷೆ ಅಗತ್ಯ.

ಈಗಾಗಲೇ ಇಂತಹ ಸುಧೀರ್ಘ ಮತ್ತು ವ್ಯವಸ್ಥಿತ ರೂಪುರೇಷೆಗಳಿಲ್ಲದೆ ಜಾರಿಗೊಳಿಸಿದ ಒಂದು ಸದುದ್ದೇಶದ ನೋಟ್ ಬ್ಯಾನ್ ಅನ್ನು ಭ್ರಷ್ಟಾಚಾರಿ ಭಾರತ ಹೇಗೆ ತಿಪ್ಪರಲಾಗ ಹಾಕಿಸಿದೆ ಎಂಬ ನಿದರ್ಶನ ನಮ್ಮ ಮುಂದಿದೆ. ಹಾಗಿದ್ದಾಗ ಅಂತಹ ತಪ್ಪುಗಳಿಂದ ಕಲಿತ ಪಾಠಗಳನ್ನು ಸದುದ್ದೇಶದ ಪೌರತ್ವ ದಾಖಲಾತಿ ಜಾರಿಯಲ್ಲಿ ಸರ್ಕಾರ ಅನುಷ್ಠಾನಗೊಳಿಸುತ್ತದೆ ಎಂದುಕೊಳ್ಳೋಣ. ಏಕೆಂದರೆ ಪೌರತ್ವ ದಾಖಲಾತಿ ಎಂಬುದು ಒಂದು ರಾಷ್ಟ್ರದ ಅತ್ಯಂತ ಪ್ರಮುಖ ಅಂಗ. ಇದರ ಅನುಷ್ಠಾನ ಎಂದಿಗಿಂತಲೂ ಇಂದು ಅಗತ್ಯ!

ಏಕೆ ಗೊತ್ತೆ?

ಬಾಂಗ್ಲಾದೇಶ ಇನ್ನು ಕೆಲವೇ ದಶಕಗಳಲ್ಲಿ ಕಣ್ಮರೆಯಾಗಲಿದೆ. ಏರುತ್ತಿರುವ ಜಾಗತಿಕ ತಾಪಮಾನದ ಹಿನ್ನೆಲೆಯಲ್ಲಿ ಉಕ್ಕೇರುತ್ತಿರುವ ಸಮುದ್ರದಲ್ಲಿ ಬಾಂಗ್ಲಾದೇಶ ಸಂಪೂರ್ಣ ಮುಳುಗಿ ಹೋಗಲಿದೆ ಎಂದು ಸಾಕಷ್ಟು ವಿಜ್ಞಾನಿಗಳು, ಅಂತರರಾಷ್ಟ್ರೀಯ ಸಂಸ್ಥೆಗಳು ಸಾಕಷ್ಟು ವರದಿಯನ್ನು ಮಂಡಿಸಿವೆ. ಈ ಕುರಿತು ಬಿಬಿಸಿ, ಸೈನ್ಸ್ ಚಾನೆಲ್, ನ್ಯಾಷನಲ್ ಜಿಯಾಗ್ರಫಿ ಚಾನೆಲ್ಗಳು ಸಾಕಷ್ಟು ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿವೆ. ಈ ಹಿನ್ನೆಲೆಯಲ್ಲಿ ಬಾಂಗ್ಲಾದೇಶಿಯರು ನೆರೆಹಾವಳಿಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ನೆರೆಯ ಭಾರತಕ್ಕೆ ಬರದೆ ಇನ್ನೆಲ್ಲಿಗೆ ಹೋಗಿಯಾರು?!? ಭಾರತ ಎಲ್ಲಾ ಬಾಂಗ್ಲಾದೇಶಿಯರನ್ನು ಒಳಗೊಳ್ಳಲು ಸಿದ್ಧವಿದೆಯೇ? ಹಾಗೊಂದು ವೇಳೆ ಒಳಗೊಂಡರೆ ಏನಾಗಬಹುದು? ಅಂತರರಾಷ್ಟ್ರೀಯವಾಗಿ ಭಾರತಕ್ಕೆ ಏನಾದರೂ ಕಿರೀಟ ತೊಡಿಸುವರೆ?

ಈ ಬಾಂಗ್ಲಾದೇಶದ ಕಣ್ಮರೆಯ ಹಿನ್ನೆಲೆಯಲ್ಲಿ ಭಾರತ ವಿಶ್ವಸಂಸ್ಥೆ ಮತ್ತು ಅಂತರರಾಷ್ಟ್ರೀಯ ಗಮನವನ್ನು ಸೆಳೆದು ಬಾಂಗ್ಲಾ ವಲಸೆಯನ್ನು ಒಂದು ಅಂತರರಾಷ್ಟ್ರೀಯ ಸಮಸ್ಯೆಯಾಗಿಸಿ ಎಲ್ಲಾ ರಾಷ್ಟ್ರಗಳೂ ಆ ವಲಸಿಗರನ್ನು ಒಳಗೊಳ್ಳುವಂತೆ ಮಾಡಬೇಕು. ಹಾಗೆ ಮಾಡಲು ಪೌರತ್ವ ದಾಖಲಾತಿ ಅತ್ಯಗತ್ಯ. ಪೌರತ್ವ ದಾಖಲಾತಿಯ ಇತರೆ ಅಗತ್ಯತೆ ಮತ್ತು ಅನುಕೂಲಗಳ ಕುರಿತು ಹೇಳಬೇಕಿಲ್ಲ. ಆ ಕುರಿತು ಸಾಮಾನ್ಯ ಸಮಾಜಶಾಸ್ತ್ರವನ್ನು ಓದಿದವರೆಲ್ಲ ಬಲ್ಲರು.

ಆದರೆ ಈ ಪ್ರಕ್ರಿಯೆಯನ್ನು ಒಂದು ಭಾವನಾತ್ಮಕ ಕಥನವಾಗಿಸಿ, ಭಾವನೆಗಳನ್ನು ಬಡಿದೆಬ್ಬಿಸಿ, ಊಹಾಪೋಹಗಳ ಸೃಷ್ಟಿಸಿ ವಾಸ್ತವವನ್ನು ಮರೆಸುವ ಭಾವಜೀವಿಗಳ ಪ್ರಕ್ರಿಯೆ ಬಾಲಿಶ. ಭಾವಾತ್ಮಕ ಕಲ್ಪನೆ ಕಥೆ, ಕವನ ಬರೆಸಬಲ್ಲುದೇ ಹೊರತು ಸಧೃಢ ಸಮಾಜವನ್ನಲ್ಲ. ಪೌರತ್ವ ದಾಖಲಾತಿಗೆ ಕಥೆ ಕಟ್ಟುವಷ್ಟು ದಾಖಲೆಗಳ ಕೊರತೆಯಿರುವ ಬಹುದೊಡ್ಡ ಜನಸಂಖ್ಯೆಯಿದೆ ಎಂಬುದನ್ನು ನಂಬಬಹುದೇ? ಗೊತ್ತಿಲ್ಲ. ಭಾರತ ರೋಚಕತೆಯ ತವರೂರು ಎಂಬುದಂತೂ ಇತಿಹಾಸದುದ್ದಕ್ಕೂ ಸಾಬೀತಾಗಿದೆ. ಹಾಗಾಗಿ ಈ ಕುರಿತು ಹೆಚ್ಚು ಹೇಳಬೇಕಿಲ್ಲ.

ಪ್ರಪಂಚದ ಕಟ್ಟಕಡೆಯ ರಾಷ್ಟ್ರಗಳು ಕೂಡ ಇಂದು ಪೌರತ್ವ ದಾಖಲಾತಿಯನ್ನು ಹೊಂದಿವೆ, ಇದಕ್ಕೆ ಪ್ರಪಂಚದ ಬಹುದೊಡ್ಡ ಪ್ರಜಾಪ್ರಭುತ್ವ ಹೊರತಾಗಬೇಕಿಲ್ಲ.

#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ