CAA, NRC

ಕಮ್ಯುನಿಸ್ಟ್ ರಷ್ಯಾದಲ್ಲಿರುವ ಯಹೂದಿ (ಜ್ಯುಯಿಷ್) "ಧರ್ಮೀಯ"ರಿಗೆ, ಧರ್ಮವೇ ಜಯವೆಂಬ ಪಾಕಿಸ್ತಾನದಲ್ಲಿ ಕಿರುಕುಳಕ್ಕೊಳಗಾಗುತ್ತಿರುವ ಅಹ್ಮದಿ "ಧಾರ್ಮಿಕ" ಪಂಥದವರಿಗೆ, ಮತ್ತು ಪ್ರಪಂಚದಾದ್ಯಂಥ ಧಾರ್ಮಿಕ ತುಳಿತಕ್ಕೊಳಗಾಗುತ್ತಿರುವ ಕ್ರಿಶ್ಚಿಯನ್, ಯಹೂದಿ ಮತ್ತಿತರೆ ಧರ್ಮದವರು ಅಮೆರಿಕದೊಂದಿಗೆ ಯಾವುದೇ ಸಂಬಂಧವಿಲ್ಲದಿದ್ದರೂ ಅವರಿಗೆ ಅಮೆರಿಕ ಧರ್ಮದ ಆಧಾರದ ಮೇಲೆ ವಲಸೆಯ ಅವಕಾಶವನ್ನು ಕೊಟ್ಟಿದೆ. ಇದೇ ನೀತಿಯನ್ನು ಸಾಕಷ್ಟು ಮುಂದುವರಿದ ರಾಷ್ಟ್ರಗಳು ಅನುಸರಿಸುತ್ತಿವೆ.

ಇಂದು ಇದೇ ನೀತಿಯನ್ನು ಭಾರತ ತನ್ನ ನೆಲದೊಂದಿಗೆ "ಧರ್ಮ"ದ ಕಾರಣದಿಂದ ಬೇರ್ಪಟ್ಟ ನೆಲದಲ್ಲಿನ ಧಾರ್ಮಿಕ ಕಿರುಕುಳಕ್ಕೊಳಗಾಗಿರುವವರಿಗೆ ವಲಸೆ ಹಕ್ಕನ್ನು ಕೊಟ್ಟರೆ ತಪ್ಪೇನು?!

ಇನ್ನು ರಾಷ್ಟ್ರೀಯ ಪೌರತ್ವ ದಾಖಲಾತಿ...ಇದು ಯಾವುದೇ ಒಂದು ರಾಷ್ಟ್ರದ ಪರಿಕಲ್ಪನೆಯ ಪ್ರಮುಖ ಭಾಗ. ಇದನ್ನು ಭಾರತ ಒಂದು ರಾಷ್ಟ್ರವಾಗಿ ರೂಪುಗೊಂಡ ಕೂಡಲೇ ಆಗಬೇಕಿದ್ದ ಪ್ರಕ್ರಿಯೆ, ಆದರೆ ಹಾಗಾಗಿಲ್ಲ! ಆದ್ದರಿಂದ ಸುಧೀರ್ಘ ಕಾಲದವರೆಗೆ ಬಾಕಿಯಿರುವ  ಈ ಪ್ರಕ್ರಿಯೆಯ ಅನುಷ್ಠಾನಕ್ಕೆ ಸುಧೀರ್ಘ ಮತ್ತು ವ್ಯವಸ್ಥಿತ ರೂಪುರೇಷೆ ಅಗತ್ಯ.

ಈಗಾಗಲೇ ಇಂತಹ ಸುಧೀರ್ಘ ಮತ್ತು ವ್ಯವಸ್ಥಿತ ರೂಪುರೇಷೆಗಳಿಲ್ಲದೆ ಜಾರಿಗೊಳಿಸಿದ ಒಂದು ಸದುದ್ದೇಶದ ನೋಟ್ ಬ್ಯಾನ್ ಅನ್ನು ಭ್ರಷ್ಟಾಚಾರಿ ಭಾರತ ಹೇಗೆ ತಿಪ್ಪರಲಾಗ ಹಾಕಿಸಿದೆ ಎಂಬ ನಿದರ್ಶನ ನಮ್ಮ ಮುಂದಿದೆ. ಹಾಗಿದ್ದಾಗ ಅಂತಹ ತಪ್ಪುಗಳಿಂದ ಕಲಿತ ಪಾಠಗಳನ್ನು ಸದುದ್ದೇಶದ ಪೌರತ್ವ ದಾಖಲಾತಿ ಜಾರಿಯಲ್ಲಿ ಸರ್ಕಾರ ಅನುಷ್ಠಾನಗೊಳಿಸುತ್ತದೆ ಎಂದುಕೊಳ್ಳೋಣ. ಏಕೆಂದರೆ ಪೌರತ್ವ ದಾಖಲಾತಿ ಎಂಬುದು ಒಂದು ರಾಷ್ಟ್ರದ ಅತ್ಯಂತ ಪ್ರಮುಖ ಅಂಗ. ಇದರ ಅನುಷ್ಠಾನ ಎಂದಿಗಿಂತಲೂ ಇಂದು ಅಗತ್ಯ!

ಏಕೆ ಗೊತ್ತೆ?

ಬಾಂಗ್ಲಾದೇಶ ಇನ್ನು ಕೆಲವೇ ದಶಕಗಳಲ್ಲಿ ಕಣ್ಮರೆಯಾಗಲಿದೆ. ಏರುತ್ತಿರುವ ಜಾಗತಿಕ ತಾಪಮಾನದ ಹಿನ್ನೆಲೆಯಲ್ಲಿ ಉಕ್ಕೇರುತ್ತಿರುವ ಸಮುದ್ರದಲ್ಲಿ ಬಾಂಗ್ಲಾದೇಶ ಸಂಪೂರ್ಣ ಮುಳುಗಿ ಹೋಗಲಿದೆ ಎಂದು ಸಾಕಷ್ಟು ವಿಜ್ಞಾನಿಗಳು, ಅಂತರರಾಷ್ಟ್ರೀಯ ಸಂಸ್ಥೆಗಳು ಸಾಕಷ್ಟು ವರದಿಯನ್ನು ಮಂಡಿಸಿವೆ. ಈ ಕುರಿತು ಬಿಬಿಸಿ, ಸೈನ್ಸ್ ಚಾನೆಲ್, ನ್ಯಾಷನಲ್ ಜಿಯಾಗ್ರಫಿ ಚಾನೆಲ್ಗಳು ಸಾಕಷ್ಟು ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿವೆ. ಈ ಹಿನ್ನೆಲೆಯಲ್ಲಿ ಬಾಂಗ್ಲಾದೇಶಿಯರು ನೆರೆಹಾವಳಿಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ನೆರೆಯ ಭಾರತಕ್ಕೆ ಬರದೆ ಇನ್ನೆಲ್ಲಿಗೆ ಹೋಗಿಯಾರು?!? ಭಾರತ ಎಲ್ಲಾ ಬಾಂಗ್ಲಾದೇಶಿಯರನ್ನು ಒಳಗೊಳ್ಳಲು ಸಿದ್ಧವಿದೆಯೇ? ಹಾಗೊಂದು ವೇಳೆ ಒಳಗೊಂಡರೆ ಏನಾಗಬಹುದು? ಅಂತರರಾಷ್ಟ್ರೀಯವಾಗಿ ಭಾರತಕ್ಕೆ ಏನಾದರೂ ಕಿರೀಟ ತೊಡಿಸುವರೆ?

ಈ ಬಾಂಗ್ಲಾದೇಶದ ಕಣ್ಮರೆಯ ಹಿನ್ನೆಲೆಯಲ್ಲಿ ಭಾರತ ವಿಶ್ವಸಂಸ್ಥೆ ಮತ್ತು ಅಂತರರಾಷ್ಟ್ರೀಯ ಗಮನವನ್ನು ಸೆಳೆದು ಬಾಂಗ್ಲಾ ವಲಸೆಯನ್ನು ಒಂದು ಅಂತರರಾಷ್ಟ್ರೀಯ ಸಮಸ್ಯೆಯಾಗಿಸಿ ಎಲ್ಲಾ ರಾಷ್ಟ್ರಗಳೂ ಆ ವಲಸಿಗರನ್ನು ಒಳಗೊಳ್ಳುವಂತೆ ಮಾಡಬೇಕು. ಹಾಗೆ ಮಾಡಲು ಪೌರತ್ವ ದಾಖಲಾತಿ ಅತ್ಯಗತ್ಯ. ಪೌರತ್ವ ದಾಖಲಾತಿಯ ಇತರೆ ಅಗತ್ಯತೆ ಮತ್ತು ಅನುಕೂಲಗಳ ಕುರಿತು ಹೇಳಬೇಕಿಲ್ಲ. ಆ ಕುರಿತು ಸಾಮಾನ್ಯ ಸಮಾಜಶಾಸ್ತ್ರವನ್ನು ಓದಿದವರೆಲ್ಲ ಬಲ್ಲರು.

ಆದರೆ ಈ ಪ್ರಕ್ರಿಯೆಯನ್ನು ಒಂದು ಭಾವನಾತ್ಮಕ ಕಥನವಾಗಿಸಿ, ಭಾವನೆಗಳನ್ನು ಬಡಿದೆಬ್ಬಿಸಿ, ಊಹಾಪೋಹಗಳ ಸೃಷ್ಟಿಸಿ ವಾಸ್ತವವನ್ನು ಮರೆಸುವ ಭಾವಜೀವಿಗಳ ಪ್ರಕ್ರಿಯೆ ಬಾಲಿಶ. ಭಾವಾತ್ಮಕ ಕಲ್ಪನೆ ಕಥೆ, ಕವನ ಬರೆಸಬಲ್ಲುದೇ ಹೊರತು ಸಧೃಢ ಸಮಾಜವನ್ನಲ್ಲ. ಪೌರತ್ವ ದಾಖಲಾತಿಗೆ ಕಥೆ ಕಟ್ಟುವಷ್ಟು ದಾಖಲೆಗಳ ಕೊರತೆಯಿರುವ ಬಹುದೊಡ್ಡ ಜನಸಂಖ್ಯೆಯಿದೆ ಎಂಬುದನ್ನು ನಂಬಬಹುದೇ? ಗೊತ್ತಿಲ್ಲ. ಭಾರತ ರೋಚಕತೆಯ ತವರೂರು ಎಂಬುದಂತೂ ಇತಿಹಾಸದುದ್ದಕ್ಕೂ ಸಾಬೀತಾಗಿದೆ. ಹಾಗಾಗಿ ಈ ಕುರಿತು ಹೆಚ್ಚು ಹೇಳಬೇಕಿಲ್ಲ.

ಪ್ರಪಂಚದ ಕಟ್ಟಕಡೆಯ ರಾಷ್ಟ್ರಗಳು ಕೂಡ ಇಂದು ಪೌರತ್ವ ದಾಖಲಾತಿಯನ್ನು ಹೊಂದಿವೆ, ಇದಕ್ಕೆ ಪ್ರಪಂಚದ ಬಹುದೊಡ್ಡ ಪ್ರಜಾಪ್ರಭುತ್ವ ಹೊರತಾಗಬೇಕಿಲ್ಲ.

#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

No comments: