ಸಮಾಜಮುಖಿ ಫೆಬ್ರವರಿ ಸಂಚಿಕೆಯಲ್ಲಿ ಪ್ರಕಟವಾದ ಲೇಖನ, ಒಂದೆರಡು ಹೆಚ್ಚಿನ ವಾಕ್ಯಗಳೊಂದಿಗೆ:
ಒಮ್ಮೊಮ್ಮೆ ಜೀವನದ ತಿರುವುಗಳು ಹೀಗೆಯೂ ಘಟಿಸಿಬಿಡುತ್ತವೆ. ಹತ್ತು ವರ್ಷಗಳ ಹಿಂದೆ ಬ್ಲಾಗು, ಪೋರ್ಟಲ್ ಅಂಕಣ ಬರಹ ಮಾಡಿಕೊಂಡಿದ್ದ ನಾನು ಅದ್ಯಾವ ಗಳಿಗೆಯಲ್ಲಿ ಮೇಜುವಾನಿಯ ಮೋಜಿನಲ್ಲಿ ನನ್ನ ಚೀನೀ ಗೆಳೆಯನೊಟ್ಟಿಗೆ ಹುಯೆನ್ ತ್ಸಾಂಗನ ಕುರಿತು ವಿಷಯವೆತ್ತಿದೆನೋ ಅದು ಅಂಕಣ, ಬ್ಲಾಗು ಬಿಡಿಸಿ ಈತನ ಹುಚ್ಚು ಹಿಡಿಸಿತು.
ನಂತರ ಈತನ ಕುರಿತಾಗಿ ಎಲ್ಲಾ ಆಕರಗಳ ಜೋಡಿಸಿಕೊಂಡು, ಒಂದು ಚೀನಾ ಪ್ರವಾಸವನ್ನೂ ಹಾಕಿ ಒಂದು ಪುಸ್ತಕ ಬರೆಯಲಾರಂಭಿಸಿದೆನು. ಭಾಗಶಃ ನಲವತ್ತು ಭಾಗ ಮುಗಿಸಿದ ನಂತರ ಬೋರು ಹೊಡೆದು ನಿಲ್ಲಿಸಿಯೂಬಿಟ್ಟೆ. ಭಾರತದ ಇತಿಹಾಸಕ್ಕೆ ಅನಿವಾರ್ಯನಾದ ಇಂತಹ ಮಹತ್ವದ ಚಾರಿತ್ರಿಕ ವ್ಯಕ್ತಿಯ ಬಗ್ಗೆ ಇದುವರೆಗೆ ಏಕೆ ಯಾವ ಭಾರತೀಯನೂ ಬರೆದಿಲ್ಲವೋ! ಬಹುಶಃ ಈತ ಭಾರತಕ್ಕೆ ಅಷ್ಟೊಂದು ಅನಿವಾರ್ಯನಲ್ಲವೆಂದೋ ಯಾ ಕುತೂಹಲಕಾರನಲ್ಲವೇನೋ ಎಂದೇ ಭಾರತೀಯ ಇತಿಹಾಸಜ್ಞರು ಅಷ್ಟೊಂದು ಪ್ರಾಮುಖ್ಯತೆಯನ್ನು ಕೊಟ್ಟಿಲ್ಲವೆಂದೆನಿಸಿದ್ದು ಕೂಡಾ ಒಂದು ಕಾರಣ. ಹಾಗೆ ನಿಲ್ಲಿಸಿದ್ದನ್ನು ಮತ್ತೆ ಬರೆಯಲಾರಂಭಿಸಿದ್ದುದು ಸಮಾಜಮುಖಿಯ ಸಂಪರ್ಕದಿಂದ!
ಅದೇ ರೀತಿ ಸನ್ ಶೂಯನ್ ತನ್ನ ಬೌದ್ಧಮತನಿಷ್ಠೆಯಾಗಿದ್ದ ಅಜ್ಜಿಯಿಂದ ಕೋತಿರಾಜನ ನೀತಿಕತೆಗಳನ್ನು ಬಾಲ್ಯದಲ್ಲಿ ಕೇಳುತ್ತ ಬೆಳೆದಿದ್ದಳು. ಕ್ರಮೇಣ ಕಮ್ಯುನಿಸ್ಟ್ ಸರ್ಕಾರದ ಶಿಕ್ಷಣ ಆ ಕತೆಗಳ ನೀತಿಯನ್ನೆಲ್ಲಾ ಮೌಢ್ಯವೆನಿಸಿಬಿಟ್ಟಿದ್ದಿತು. ತನ್ನ ಬಾಲ್ಯದಲ್ಲಿ ಕಂಡ ಮಾವೋ ಕ್ರಾಂತಿ, ಆ ಕ್ರಾಂತಿಯ ವಿರೋಧಿಗಳನ್ನು ಸರ್ಕಾರ ಸಾರ್ವಜನಿಕವಾಗಿಯೇ ಹಿಂಸಿಸುತ್ತಿದ್ದ ಪರಿ ಅವಳಿಗೆ ತನ್ನ ಶಿಕ್ಷಣದ ಕಾರಣ ತಪ್ಪೆನಿಸುತ್ತಿರಲಿಲ್ಲ. ಆದರೆ ಅವಳ ಅಜ್ಜಿ ಹಾಗೆಲ್ಲ ಮನುಷ್ಯರನ್ನು ಹಿಂಸಿಸುವವರು ನರಕಕ್ಕೆ ಹೋಗುವರೆಂಬುದನ್ನು ಅಪಹಾಸ್ಯ ಮಾಡುತ್ತಿದ್ದುದರ ಚಿತ್ರಣ ಕಟ್ಟಿಕೊಡುತ್ತಾ ಆರಂಭವಾಗುವ ಈ ಕೃತಿ ಓದುಗರನ್ನು ಆವರಿಸಿಕೊಂಡುಬಿಡುತ್ತದೆ.
ದೊಡ್ಡವಳಾದ ನಂತರ ಆಕ್ಸ್ಫರ್ಡ್ ಸೇರಿದ ಅವಳಿಗೆ ತನ್ನಜ್ಜಿ ಹೇಳಿದ್ದ ನೀತಿಕತೆಗಳ ನಾಯಕ ಹುಯೆನ್ ತ್ಸಾಂಗ್ ರಕ್ತ, ಮಾಂಸಗಳಿಂದ ಕೂಡಿದ್ದ ಒಬ್ಬ ಚಾರಿತ್ರಿಕ ನಿಜವ್ಯಕ್ತಿಯೆಂದು ತಿಳಿಯಿತು. ಆತನ ಕುರಿತು ಕುತೂಹಲ ಬೆಳೆಸಿಕೊಂಡ ಸನ್ ಶುನ್, ಹುಯೆನ್ ತ್ಸಾಂಗನ ಕುರಿತು ಸಾಕಷ್ಟು ಓದಿಕೊಂಡಳು. ಬರುಬರುತ್ತಾ ಆಕೆಯ ಕುತೂಹಲ ಆತನು ಸಾಗಿದ್ದ ಯಾತ್ರೆಯ ಹಾದಿಯಲ್ಲಿ ತಾನೊಮ್ಮೆ ಸಾಗಿ ಬರಬೇಕೆಂಬ ತೀವ್ರ ಬಯಕೆಯನ್ನು ಮೂಡಿಸಿತು. ಒಂದು ದಿನ ಗಟ್ಟಿ ನಿರ್ಧಾರ ಮಾಡಿ ಹುಯೆನ್ ತ್ಸಾಂಗನು ಸಾಗಿದ್ದ ಹಾದಿಯಲ್ಲಿ ನಡೆದೇಬಿಟ್ಟಳು. ಹೀಗೆ ಆರಂಭವಾದ ಆಕೆಯ ಪಯಣ, ಇಂದಿನ ಚೈನಾ, ಅಪಾಯಕಾರಿ ಅಫ಼್ಘಾನಿಸ್ತಾನ, ಬಿಗುವಿನ ಪಾಕಿಸ್ತಾನ, ನಿರಾಳವೆನಿಸುವ ಭಾರತಗಳ ಚಿತ್ರಣಗಳು ಕಮ್ಯುನಿಸ್ಟ್ ನಾಡಿನಿಂದ ಪ್ರಜಾಪ್ರಭುತ್ವದಧಿಪತ್ಯ, ಪ್ರಾಪಂಚಿಕತೆಯಿಂದ ಪಾರಮಾರ್ಥದೆಡೆಯ ಮಹಾಪಯಣವೆನಿಸಿಬಿಡುತ್ತದೆ. ಅಂದು ಗೊಂದಲದ ಗೂಡಾಗಿದ್ದ ಗ್ರಂಥಗಳಿಂದ ಬಿಡುಗಡೆ ಬಯಸಿ ಹುಯೆನ್ ತ್ಸಾಂಗ್ ಓಡಿಹೋದಂತೆಯೇ, ತಾನು ಕೂಡಾ ತನ್ನ ಮಾವೋ ಸರ್ಕಾರದ ಶಿಕ್ಷಣವನ್ನು ಇಲ್ಲವಾಗಿಸಿಕೊಳ್ಳಲು ಮಹಾಪಯಣವನ್ನು ಕೈಗೊಂಡ ಬಗೆಯೆನಿಸುವ ಪರಿಕಲ್ಪನೆಯನ್ನು ಅತ್ಯಂತ ನೈಜವಾಗಿ ಕಟ್ಟಿಕೊಡಲಾಗಿದೆ.
ತನ್ನೆಲ್ಲಾ ಪ್ರವಾಸವನ್ನು ಮುಗಿಸಿ ಕಡೆಯದಾಗಿ ಹುಯೆನ್ ತ್ಸಾಂಗನ ಸಮಾಧಿ ಇರುವ ಜಿಯಾನ್ ಗೆ ಬಂದಳು. ಅಲ್ಲಿನ ಬೌದ್ಧಸನ್ಯಾಸಿಗೆ ತನ್ನ ಯಾತ್ರೆ, ಕಂಡ ದೃಶ್ಯ, ಕಲಿತ ವಿಷಯಗಳ ಕುರಿತಾಗಿ ಹೇಳಿದಳು. ಆಗ ಆ ಬೌದ್ಧಭಿಕ್ಷು "ಹಾಗಿದ್ದರೆ ನಮ್ಮ ಮಹಾಗುರು ಕಂಡದ್ದನ್ನೆಲ್ಲ ಕಂಡುಬಂದಿರುವೆ" ಎಂದು ಧನ್ಯತಾಭಾವದಿಂದ ಕೇಳಿದನು. ಅದಕ್ಕೆ "ಎಲ್ಲವನ್ನೂ ಎಂದು ಹೇಳಲಾರೆ. ಆದರೆ ಸಾಕಷ್ಟು ಎನ್ನಬಲ್ಲೆ" ಎಂದುತ್ತರಿಸುತ್ತಾಳೆ. ನಂತರ ಈ ಯಾತ್ರೆಗೆ ಕಾರಣವಾದ ತನ್ನ ಅಜ್ಜಿಯ ಸಮಾಧಿಗೆ ತೆರಳುತ್ತಾಳೆ. ಅದಾಗಲೇ ಅವಳ ಅಜ್ಜಿ ಸತ್ತು ಒಂಬತ್ತು ವರ್ಷಗಳಾಗಿರುತ್ತದೆ. ಹುಯೆನ್ ತ್ಸಾಂಗನು ತನ್ನ ಪೋಷಕರ ಸಮಾಧಿಯ ಸುತ್ತ ಬೆಳೆದಿದ್ದ ಹುಲ್ಲನ್ನು ಕೀಳುತ್ತ ಭಾವಪರವಶನಾದಂತೆ, ಸನ್ ಶೇಂಗಾ ಹೊಲದಲ್ಲೆಲ್ಲೋ ಹುದುಗಿಹೋಗಿದ್ದ ತನ್ನ ಅಜ್ಜಿಯ ಸಮಾಧಿಯನ್ನು ಹುಡುಕುತ್ತಾಳೆ. ಅಲ್ಲೇ ಸಮೀಪದಲ್ಲಿ ಕೊಂಚ ಉಬ್ಬಿದ ನೆಲದ ಮುಂದಿದ್ದ ವಾಂಗ್ ಮತ್ತು ಲೀ ಪರಿವಾರದ ಹೆಣ್ಣುಮಗಳ ಸಮಾಧಿಯೆಂದಿದ್ದ ಮರದ ತುಂಡು ಕಾಣುತ್ತದೆ. ತನ್ನ ಹೆಸರನ್ನೂ ಹಾಕಿಸಿಕೊಳ್ಳದೇ ಕೇವಲ ಹೆಣ್ಣುಮಗಳು ಎಂದಿದ್ದ ಮರದ ಹಲಗೆಯ ತುಣುಕು, ಆಕೆಯ ಅಜ್ಜಿ ಕನಸಿದ್ದ ಸಮಾಧಿಯ ಚಿತ್ರಣ ಆಕೆಯ ಕಣ್ಣ ಮುಂದೆ ಬರುತ್ತದೆ.
ಎಲ್ಲಾ ಬೌದ್ಧರಂತೆ ಆಕೆಯ ಅಜ್ಜಿ ಕೂಡಾ ಸತ್ತ ನಂತರ ತಾನು ಇನ್ನೊಂದು ಲೋಕಕ್ಕೆ ಹೋಗುತ್ತೇನೆಂದು ನಂಬಿದ್ದಳು. ಸಾವು ಸಮೀಪಿಸುತ್ತಿದ್ದಾಗ ಚೆಂದದ ಬಟ್ಟೆಗಳನ್ನು ಹೊಲಿಸಿಟ್ಟುಕೊಂಡು, ತನ್ನ ಸಾವಿನ ನಂತರ ಹೋಗುವ ಹೊಸ ಮನೆಯಲ್ಲಿ ತನಗೆ ಬೇಕಾದ ಕುರ್ಚಿ, ಮೇಜು, ಮಂಚ, ಮತ್ತಿತರೆ ವಸ್ತುಗಳ ಪಟ್ಟಿ ಮಾಡಿಟ್ಟುಕೊಂಡಿದ್ದಳು. ಸನ್ ಳ ತಾಯಿಗೆ ತಾನು ಹೊಲಿಸಿಟ್ಟ ಹೊಸ ಬಟ್ಟೆಗಳ ತೊಡಿಸು, ನಾನು ಹೊಸ ಲೋಕಕ್ಕೆ ಬೆತ್ತಲೆಯಾಗಿ ಹೋಗಿಬಿಟ್ಟರೆ ಹೇಗೆ ಎಂದಿದ್ದಳಂತೆ ಅಜ್ಜಿ. ಆದರೆ ಮಾವೋ ಸಾಮ್ರಾಜ್ಯದ ಅಂದಿನ ಚೀನಾ, ಅಜ್ಜಿಯ ಆಸೆಯನ್ನು ಈಡೇರಿಸಲು ಬಿಡಲಿಲ್ಲ. ಸರ್ಕಾರ ಮಣ್ಣು ಮಾಡುವ ಸಂಸ್ಕಾರವನ್ನು ಬಹಿಷ್ಕರಿಸಿ, ಅಜ್ಜಿ ದ್ವೇಷಿಸುತ್ತಿದ್ದ ಚಿತೆ ಸಂಸ್ಕಾರವನ್ನು ಮಾತ್ರ ಊರ್ಜಿತಗೊಳಿಸಿತ್ತು! ಆ ಬೂದಿಯನ್ನೇ ಹೂತು ಸಮಾಧಿ ಮಾಡಿದ ತೃಪ್ತಿಯನ್ನು ಪಟ್ಟುಕೊಳ್ಳಬೇಕಿದ್ದಿತು.
ಮಾವೋ ಸರ್ಕಾರ ಧರ್ಮವನ್ನು ಹುಚ್ಚೆಂದು ಪರಿಗಣಿಸಿದ್ದಿತು.
ಹುಯೆನ್ ತ್ಸಾಂಗನ ಹಾದಿಯಲ್ಲಿ ಸಾಗಿಬಂದ ನಂತರ ನಾನು ಅಂದುಕೊಂಡದ್ದಕ್ಕಿಂತ ಹೆಚ್ಚಿಗೆ ಆತನ ಬಗ್ಗೆ ತಿಳಿದುಕೊಂಡೆನು. ಆತನ ಯೋಗಾಚಾರ ಇನ್ನೂ ಅರ್ಥವಾಗದಿದ್ದರೂ, ಸಂಧಿಸಿದ ಜನರಿಂದ ದೊರೆತ ಸ್ನೇಹ, ಪ್ರೀತಿ, ಸಹನೆ, ಸಹಿಷ್ಣುತೆಗಳ ಯೋಗಾಚಾರ ಮಾತ್ರ ನನ್ನ ಹೃದಯವನ್ನು ಸಂಪೂರ್ಣವಾಗಿ ಆಕ್ರಮಿಸಿಕೊಂಡಿದೆ. ಕಾವಿಯನ್ನು ಬಿಟ್ಟು ಸಂಸಾರಿಯಾದ ಬೌದ್ಧಭಿಕ್ಷು ಡುವಾನ್, ನನ್ನಜ್ಜಿ, ಸ್ನೇಹಮಯಿ ರೆನ್, ಪಾಕಿಸ್ತಾನದ ಗಡಿಯಲ್ಲಿನ ಗೈಡ್, ಎಲ್ಲರಿಂದ ಕಲಿತ ಪಾಠವೆಂದರೆ ನಾವು ಜಗತ್ತನ್ನು ನೋಡುವ ದೃಷ್ಟಿಕೋನ, ನಮ್ಮ ಮನಸ್ಸಿನಲ್ಲಿದೆ ಎಂಬುದು. ಇದನ್ನೇ ಬೌದ್ಧಧರ್ಮ ಹೇಳುವುದು ಕೂಡ.
ಅದನ್ನೇ ಮಾವೋ ಸರ್ಕಾರ ಕೂಡಾ ಅನುಮೋದಿಸಿತು, ಆದರೆ ವ್ಯತಿರಿಕ್ತವಾಗಿ! ಮಾವೋ ಸರ್ಕಾರದಲ್ಲಿನ ನನ್ನ ಶಿಕ್ಷಣ ಧರ್ಮವನ್ನು ಹುಚ್ಚೆಂದು ತಿರಸ್ಕರಿಸುವುದನ್ನು ಕಲಿಸಿತು. ದೇವರು, ಸ್ವರ್ಗ, ನರಕ, ಬುದ್ಧ, ಧರ್ಮ, ಆಧ್ಯಾತ್ಮಗಳೆಲ್ಲವೂ ಮೌಢ್ಯವೆಂದು ಬಲವಾಗಿ ನಂಬಿಸಿತು. ಭೌತಿಕ ಹಸಿವು, ನೀರಡಿಕೆಗಳೇ ಸತ್ಯ. ಪ್ರಾಪಂಚಿಕ ಸುಖಗಳಿದ್ದರೆ ಬೇರೆಲ್ಲ ಅನವಶ್ಯಕವೆಂದು ನಂಬಿಸಿತು. ಹುಯೆನ್ ತ್ಸಾಂಗನು ಜೇಡದ್ವಾರವನ್ನು ದಾಟುವುದನ್ನು ತಡೆಯುತ್ತ ಕೆಂಪಂಗಿಯ ಸೈನಿಕರು "ಅನ್ನಾಹಾರಗಳು ತಿನ್ನಲು ಸಾಕಷ್ಟಿರುವಾಗ ಇನ್ನೆಂತಹ ಹಸಿವು ನಿನ್ನದು ನಡೆ" ಎಂದು ನೂಕುತ್ತಿದ್ದರೇನೋ! ಬಾಲ್ಯದಲ್ಲೇ ನನಗೆ ಬೌದ್ಧಧರ್ಮದ ಪರಿಚಯವಾಗಿದ್ದರೆ, ಅದರ ಆತ್ಮತೃಪ್ತಿ, ಆತ್ಮನಿಗ್ರಹಗಳಂತಹ ತತ್ವಗಳ ಪರಿಚಯವಿದ್ದಿದ್ದರೆ ಹೇಗಿರುತ್ತಿದ್ದೆನೆನಿಸುತ್ತದೆ.
ನಾವು ಕನಸು ಕಂಡಷ್ಟನ್ನು ಭೂಮಿ ನೀಡುವುದೆಂದು ನಂಬಿಸಿತು. ಒಂದು ಎಕರೆ ಭೂಮಿಯಲ್ಲಿ ಇಪ್ಪತ್ತು ಕಿಂಟಾಲ್ ಭತ್ತ ಬೆಳೆಯುವಂತಾಯಿತೆಂದು ನಂಬಿದೆವು. ಎಲ್ಲರ ಹಸಿವು ನೀಗಿ ಸೌಕರ್ಯಗಳನ್ನು ಒದಗಿಸಿದರೆ ಯಾವುದೇ ಸಮಸ್ಯೆಗಳಿರದೇ ಭೂಲೋಕವೇ ಸ್ವರ್ಗವಾಗುವುದೆಂದು ನಂಬಿದೆವು. ಮಾವೋಗೆ ಹತ್ತು ಸಾವಿರ ವರ್ಷಗಳ ಆಯಸ್ಸೆಂದು ನಿತ್ಯವೂ ನಂಬುತ್ತಿದ್ದೆವು. ಆದರೆ ಮಾವೋ ಸತ್ತಾಗ ಆ ಎಲ್ಲ ಭ್ರಮೆಗಳು ನಿಧಾನವಾಗಿ ಕರಗಲಾರಂಭಿಸಿದವು. ಹಸಿವು ನೀಗಿ ಶ್ರೀಮಂತಿಕೆ ನೆಲೆಸಿದ ಮಾತ್ರಕ್ಕೆ ಸಮಸ್ಯೆಗಳು ಇರುವುದಿಲ್ಲವೆಂಬ ವಾಸ್ತವ ತಿಳಿಯಿತು.
ಇದೆಲ್ಲವೂ ನಮ್ಮ ಮನಸ್ಸಿನಿಂದ ಜಗವನ್ನು ನೋಡುತ್ತಿದ್ದ ಪರಿಯೇ ಆಗಿತ್ತು. ನನ್ನ ಅಜ್ಜಿಯ ಬೌದ್ಧಧರ್ಮದ ಪರಿಯೊಂದಿದ್ದರೆ, ಮಾವೋ ಕಮ್ಯುನಿಸ್ಟರದೊಂದು ಪರಿ! ಒಂದು ಪರಮಾರ್ಥ, ಇನ್ನೊಂದು ಪ್ರಾಪಂಚಿಕಾರ್ಥ.
ಹೀಗೆ ತನ್ನ ಯಾತ್ರೆಯುದ್ದಕ್ಕೂ ಹುಯೆನ್ ತ್ಸಾಂಗ್, ಬೌದ್ಧಧರ್ಮ, ಮಾವೋ, ಕಾಮ್ಯುನಿಸಂ, ಮಾನವೀಯ ಮೌಲ್ಯ, ಸಂಬಂಧಗಳ ತುಲನೆಗಳನ್ನು ಮೇಳೈಸುತ್ತ ಹೆಣೆದಿರುವ "ಟೆನ್ ಥೌಸಂಡ್ ಮೈಲ್ಸ್ ವಿತೌಟ್ ಎ ಕ್ಲೌಡ್" ಒಂದು ಅದ್ಬುತ ಓದು!
ಹುಯೆನ್ ತ್ಸಾಂಗನ ಮಹಾಪಯಣದ ಪ್ರಕಾಶಕರಾದ ಸಮಾಜಮುಖಿ, "ನಡೆದು ನೋಡು ನಾಡು" ಅಭಿಯಾನವನ್ನು ಆರಂಭಿಸಿದೆ. ಈ ನಡೆದು ನೋಡುವ ಅಭಿಯಾನ ಶೀಘ್ರದಲ್ಲಿ ಹುಯೆನ್ ತ್ಸಾಂಗ್ ನಡೆದು ಬಂದ, ಸನ್ ಶೂಯನ್ ಪ್ರಯಾಣಿಸಿದ ಹಾದಿಯಲ್ಲಿ ಒಂದು ಪಯಣವನ್ನು ಯೋಜಿಸಿ ತನ್ನ ಓದುಗರಿಗೆ ಕೂಡಾ ಆ ಅದ್ಭುತ ಅನುಭವವನ್ನು ಕಟ್ಟಿಕೊಡಲಿ.
"ಟೆನ್ ಥೌಸಂಡ್ ಮೈಲ್ಸ್ ವಿತೌಟ್ ಎ ಕ್ಲೌಡ್" ಪುಸ್ತಕದಿಂದ ಆಯ್ದ ಭಾಗ ಹೀಗಿದೆ.
ಒಂದು ದಿನ ನನ್ನಜ್ಜಿ "ಕೋತಿರಾಜನ ಸಾಹಸಗಳು" ಎಂಬ ಕಾಮಿಕ್ ಪುಸ್ತಕವನ್ನು ತಂದುಕೊಟ್ಟಳು. ಮುಖಪುಟ ಹರಿದಿದ್ದ ಆ ಪುಸ್ತಕ ಕಾಮಿಕ್ ಪುಸ್ತಕವಾದ್ದರಿಂದ ನನಗೆ ಮೆಚ್ಚುಗೆಯಾಗಿತು. ಅದರಲ್ಲಿನ ಒಬ್ಬ ಬಡಕಲು ಬೌದ್ಧಸನ್ಯಾಸಿ ಪವಿತ್ರ ಸೂತ್ರಗಳನ್ನು ತರಲು ಜ್ವಾಲೆಗಳ ಸಮುದ್ರವನ್ನು ದಾಟಿ, ಕತ್ತಿಗಳ ಬೆಟ್ಟಗಳನ್ನು ಏರಿ ಹೆಜ್ಜೆ ಹೆಜ್ಜೆಗೂ ಹೇಗೆ ಒಂದು ಮಂಗ ಮತ್ತು ಹಂದಿಯೊಂದರ ಸಹಾಯದಿಂದ ಸೂತ್ರಗಳನ್ನು ತಂದನೆಂಬ ಅತೀ ರಂಜನೀಯ ಸಾಹಸದ ಕತೆಗಳಿದ್ದವು. ಸನ್ಯಾಸಿಯ ಒಂದು ಮಂತ್ರಕ್ಕೆ, ಮಂತ್ರದಂಡದ ಸ್ಪರ್ಶಕ್ಕೆ ಅದರಲ್ಲಿನ ಮಂಗಕ್ಕೆ ಹೇಗೆ ಸೂರ್ಯ ಚಂದ್ರರಂತಹ ಕಣ್ಣುಗಳಾಗಿ, ಒಂದು ಲಾಗಕ್ಕೆ ನೂರಾ ಎಂಬತ್ತು ಸಾವಿರ ಯೋಜನಗಳನ್ನು ನೆಗೆದು ಪವಿತ್ರ ಸೂತ್ರಗಳನ್ನು ಬಡಕಲು ಸನ್ಯಾಸಿಗೆ ತಂದುಕೊಟ್ಟಿದ್ದಿತು. ತನ್ನ ಜೀವವನ್ನು ಅಂತಹ ಕಷ್ಟಕ್ಕೊಡ್ಡಿಯಾದರೂ ಏಕೆ ಆ ಮುದಿ ಸನ್ಯಾಸಿಗೆ ಬುದ್ಧನ ಸೂತ್ರಗಳು ಬೇಕಾಗಿದ್ದವೋ! ಕೋತಿರಾಜನ ಕತೆಯ ಕುರಿತು ಒಂದು ದಿನ ಸಂಜೆ ಮನೆಗೆ ಹಿಂತಿರುಗಿದ ಅಪ್ಪನನ್ನು ಕೇಳಿದೆನು. ಅದಕ್ಕೆ ಆತ "ಅದು ಒಂದು ಒಳ್ಳೆಯ ಪುಸ್ತಕ. ಚೇರ್ಮನ್ ಮಾವೋ ಅವರಿಗೆ ಕೂಡಾ ಅದು ಅಚ್ಚುಮೆಚ್ಚು. ಅದರ ಕುರಿತು ಚೇರ್ಮನ್ ಕವನಗಳನ್ನು ರಚಿಸಿದ್ದಾರೆ" ಎಂದನು. "ಅಪ್ಪಾ, ಹಾಗಿದ್ದರೆ ಆ ಸೂತ್ರಗಳು ಮಾವೋ ಅವರ ಕೆಂಪು ಪುಸ್ತಕವಿದ್ದಂತೆಯೇ" ಎಂದು ಕೇಳಿದೆನು. ಏಕೆಂದರೆ ಹಿರಿಯರು ಕೆಂಪು ಪುಸ್ತಕವನ್ನು ಸೂತ್ರವೆಂದು ಸಂಭೋದಿಸುವುದನ್ನು ಸಾಕಷ್ಟು ಸಾರಿ ಕೇಳಿಸಿಕೊಂಡಿದ್ದೆನು. ಅದಲ್ಲದೇ ಮಾವೋವಾದಿಗಳು ತಮ್ಮ ಸೂತ್ರದ ಭಾಗಗಳನ್ನು ಚಿನ್ನದ ಕೋತಿ, ಮಂತ್ರದಂಡವೆಂದು ಕೂಡಾ ಕರೆಯುತ್ತಿದ್ದರು. ಹಾಗಾಗಿ ಈ ಕೋತಿರಾಜನ ಕತೆಯೂ ಕೆಂಪುಪುಸ್ತಕವೂ ಒಂದೇ ಎಂದುಕೊಂಡಿದ್ದೆನು. "ಸೂತ್ರವೆಂದರೆ ಬುದ್ಧನ ತತ್ವಗಳು" ಎಂದುತ್ತರಿಸಿದ ಅಪ್ಪನ ಮಾತುಗಳನ್ನು ತಡೆದು "ಓಹ್, ಹಾಗಿದ್ದರೆ ಚೇರ್ಮನ್ ಮಾವೋ ಬುದ್ಧನೇ" ಎಂದು ಕೇಳಿದೆನು. ಇದರಿಂದ ಕೋಪಗೊಂಡ ಅಪ್ಪ "ಸಾಕು ಮಾಡು. ಅವು ಮಕ್ಕಳಿಗೆ ಬೇಕಿಲ್ಲದ ವಿಷಯಗಳು. ಈ ಕುರಿತು ಇನ್ನೆಂದೂ ಮನೆಯಲ್ಲಾಗಲಿ, ಹೊರಗಾಗಲಿ ಮಾತನಾಡಬೇಡ" ಎಂದು ನಿರ್ಬಂಧ ಹೇರಿದನು.
ಆ ನಿರ್ಬಂಧದಿಂದ ಕೋತಿರಾಜನ ಮೇಲಿನ ಕುತೂಹಲ ಮತ್ತಷ್ಟು ಜಾಸ್ತಿಯಾಯಿತು. ಒಮ್ಮೆ ನನ್ನಜ್ಜಿ ಮತ್ತು ನಾನು ಇಬ್ಬರೇ ಇದ್ದಾಗ "ಅಜ್ಜಿ, ಈ ಕೋತಿರಾಜ ಮತ್ತು ಬಡಕಲು ಸನ್ಯಾಸಿ ಯಾರು?" ಎಂದು ಕೇಳಿದೆನು. ಆಗ ನನ್ನಜ್ಜಿ "ಹುಷಾರು ಮೆತ್ತಗೆ ಮಾತಾಡು, ಯಾರಾದರೂ ಕೇಳಿಸಿಕೊಂಡಾರು" ಎನ್ನುತ್ತಾ ಮನೆಯ ಮುಂದಿನ ಬಾಗಿಲು ಮತ್ತು ನಮ್ಮ ಕೋಣೆಯ ಬಾಗಿಲುಗಳನ್ನು ಭದ್ರಪಡಿಸಿ ನನ್ನ ಕಿವಿಯಲ್ಲಿ "ಆತ ಬಡಕಲು ಸನ್ಯಾಸಿಯಲ್ಲ. ಅವನು ನಿಜವಾದ ಸಧೃಢ, ಸಾಹಸೀ ಬೌದ್ಧಭಿಕ್ಷು. ಏಕಾಂಗಿಯಾಗಿ ದೂರದ ಪೂರ್ವದೇಶಕ್ಕೆ ಹೋಗಿ ಬುದ್ಧಸೂತ್ರಗಳನ್ನು ತಂದವನು. ಆತನ ಹೆಸರು ಹುಯೆನ್ ತ್ಸಾಂಗ್! ಈ ವಿಷಯವನ್ನು ಹೊರಗೆ ಯಾರೊಂದಿಗೂ ಮಾತನಾಡಬೇಡ. ಚೇರ್ಮನ್ನನ ಭೂತಗಳು ಕೊಂದುಬಿಡುತ್ತವೆ" ಎಂದು ಉಸುರಿದಳು.