World Translation Day!

ಒಂದು ಕೃತಿಯ ಅನುವಾದವನ್ನು ಮಾಡುವಾಗ ಅನುವಾದಕ ಮೂಲ ಕೃತಿಯ ಲೇಖಕನೇ ಆಗಿ ಪರಕಾಯ ಪ್ರವೇಶ ಮಾಡಬೇಕು. ತನ್ನ ಕೃತಿಯನ್ನು ಒಂದು ಪ್ರಾದೇಶಿಕ ಭಾಷೆಯಿಂದ ಇಂಗ್ಲಿಷ್ ಎಂಬ ಜಾಗತಿಕ ಭಾಷೆಗಾಗಲಿ ಅಥವಾ ಮತ್ತೊಂದು ಪ್ರಾದೇಶಿಕ ಭಾಷೆಗಾಗಲಿ ಹೇಗೆ ಅಳವಡಿಸಬೇಕೆಂಬ ಚಿಂತನೆಗೊಳಪಡಿಸಿ ಅನುವಾದಿಸಬೇಕಾಗುತ್ತದೆ. ಅನುವಾದಿಸಬೇಕಾದ ಭಾಷೆಗೆ ಸರಿಹೊಂದಬಹುದಾದ ನುಡಿಗಟ್ಟುಗಳು, ಗಾದೆಗಳು, ಸೂಕ್ತ ಸಂಭಾಷಣಾ ವೈವಿಧ್ಯತೆ, ಮತ್ತದೇ ಪರಿಸರಕ್ಕೆ ಮತ್ತು ಓದುಗನಿಗೆ ರಿಲೇಟ್ ಯಾ ಹೊಂದುವಂತಹ ಪರಿಭಾಷೆಯಲ್ಲಿ ಮೂಲ ಕೃತಿಯನ್ನು ಪುನರ್ರಚಿಸಬೇಕಾಗುತ್ತದೆ. ಹಾಗೆಂದ ಮಾತ್ರಕ್ಕೆ ಕೃತಿಯನ್ನು ಸಂಪೂರ್ಣವಾಗಿ ಹೊಸದಾಗಿ ರಚಿಸುವುದೆಂದಲ್ಲವೆಂಬ ಎಚ್ಚರಿಕೆಯನ್ನೂ ಇಟ್ಟುಕೊಂಡು ಹೊಸ ಭಾಷೆಗೆ ಮೂಲ ಸೊಗಡನ್ನು ಅಳವಡಿಸುತ್ತ ಸಾಗಬೇಕಾಗುತ್ತದೆ.

ಆದರೆ "ಮೂಲ ಕೃತಿಗೆ ಚ್ಯುತಿ ಬರದಂತೆ" ಎಂಬ ತತ್ವವನ್ನು ಯಥಾವತ್ತಾಗಿ ಹೇರಿಕೊಂಡು ಪದದಿಂದ ಪದವನ್ನೂ ಯಥಾವತ್ತಾಗಿ ಅನುವಾದಿಸುತ್ತಾ ಹೋದರೆ ಆದು ಅಭಾಸವೆನ್ನಿಸಿಬಿಡುತ್ತದೆ. ಅಂತಹ ಸಾಕಷ್ಟು ಅನುವಾದಗಳ ಉದಾಹರಣೆಗಳಿವೆ. ಹಾಗಾಗಿ ಅನುವಾದವೆಂಬುದು ಅತ್ಯಂತ ಶ್ರಮದ ಕೆಲಸ. ಇಲ್ಲಿ ಎರಡು ಭಾಷೆಗಳ ಪಾಂಡಿತ್ಯಕ್ಕಿಂತ ಆ ಭಾಷೆಗಳ ನಿತ್ಯ ಬಳಸುವಿಕೆಯ ಅನುಭವ ಮತ್ತು ಕಥಾವಸ್ತುವಿನ ಗಾಢ ಹಿನ್ನೆಲೆ ಕೂಡಾ ಅತ್ಯಂತ ಪ್ರಮುಖ.

ಈ ಎಲ್ಲಾ ಸೂತ್ರಗಳನ್ನಾಧಾರವಾಗಿಟ್ಟುಕೊಂಡು ಜುಗಾರಿ ಕ್ರಾಸ್ ಅನ್ನು ಅನುವಾದಿಸಿದ್ದೇನೆ. ಅದರ ಒಂದು ಅಧ್ಯಾಯ ತಮ್ಮ ಓದಿಗಾಗಿ ಇಲ್ಲಿದೆ. ಕನ್ನಡ ಸಾಹಿತ್ಯ ಪ್ರೇಮಿಗಳಾದ ತಾವು ಓದಿ ಸೂಕ್ತ ಸಲಹೆಗಳನ್ನು ಕೊಟ್ಟರೆ ಮುಂದೆ ಮಾಡಬಹುದಾದ ಅನುವಾದ ಕಾರ್ಯಗಳಿಗೆ ಅನುಕೂಲ. ಬನ್ನಿ ಕನ್ನಡ ಸಾಹಿತ್ಯವನ್ನು ವಿಶ್ವವ್ಯಾಪಿಯಾಗಿಸಲು ಸಹಕರಿಸಿ.
#World_Translation_Day

ಮೋದಿಯ ಭೇದಿಯ ಸಾಂದ್ರತೆ

ತುಂಗೆಯಿಂದ ಭದ್ರೆಗೆ ನೀರೆತ್ತಿ ಹರಿಸಿ, ಅಲ್ಲಿಂದ ವೇದಾವತಿಯ ಮುಖಾಂತರ ವಾಣಿವಿಲಾಸ ಸಾಗರಕ್ಕೆ ಪ್ರಾಯೋಗಿಕವಾಗಿ ಈಗಾಗಲೇ ಅನುಷ್ಠಾನಗೊಂಡು ಸಿದ್ಧವಿರುವ ಭದ್ರಾ ಮೇಲ್ದಂಡೆ ಯೋಜನೆಯ ಸಂಪನ್ಮೂಲಗಳನ್ನೇ ಉಪಯೋಗಿಸಿಕೊಂಡು ನೀರು ಹರಿಸಲು ತುಂಗಾ ಪ್ರವಾಹ ಅವಕಾಶವನ್ನು ಕೊಟ್ಟಿದ್ದಿತು.
ಈ ಯೋಜನೆಯನ್ನು ಪ್ರಾಯೋಗಿಕವಾಗಿ ಪ್ರಯೋಗಿಸಿದ್ದರೆ ಶಿವಮೊಗ್ಗೆಯ ಕುಂಬಾರಗುಂಡಿಯಲ್ಲಿ ಪ್ರವಾಹವೇ ಆಗುತ್ತಿರಲಿಲ್ಲ ಮತ್ತು ಎಷ್ಟೋ ವರ್ಷಗಳಿಂದ ಡೆಡ್ ಸ್ಟೋರೇಜಿನಲ್ಲಿರುವ ವಾಣಿವಿಲಾಸ ಸಾಗರ ತುಂಬುತ್ತಿತ್ತು.
ಅದಲ್ಲದೆ ದಾವಣಗೆರೆ ಜಿಲ್ಲೆಯಲ್ಲಿ ಕಳೆದ ವರ್ಷ ಅನುಷ್ಠಾನಗೊಂಡ ಎಪ್ಪತ್ತೆರಡು ಕೆರೆ ಯೋಜನೆಯನ್ನು ಈ ವೇಳೆಯಲ್ಲಿ ಉಪಯೋಗಿಸಿಕೊಂಡಿದ್ದರೆ ತುಂಗಾಭದ್ರ ಆರ್ಭಟ ಕೂಡಾ ಶಾಂತವಾಗಿರುತ್ತಿತ್ತು. ಬರಡು ಕೆರೆಗಳು ಕೂಡ ತುಂಬಿಕೊಳ್ಳುತ್ತಿದ್ದವು. ಎಲ್ಲಕ್ಕೂ ಮಿಗಿಲಾಗಿ ಜಲನಿರ್ವಹಣೆಯ ಒಂದು ಅತ್ಯುತ್ತಮ ಪ್ರಯೋಗಶೀಲ ಸಿದ್ದ ಮಾಡೆಲ್ ಪ್ರಾಮಾಣಿತವಾಗುತ್ತಿತ್ತು.
ಏಕೆ ಹೀಗೆ ಪ್ರವಾಹ ನಿರ್ವಹಣೆ ಸಾಧ್ಯವಾಗಲಿಲ್ಲ?!?
ನಾನೊಬ್ಬ ಎನ್ನಾರೈ ಪೆದ್ದ, ನಾನೇನು ಬಲ್ಲೆ? ಬಲ್ಲವರ ಕೇಳೋಣವೆಂದರೆ ಬುದ್ಧಿವಂತರೆಲ್ಲಾ ಮೋದಿಯ ಭೇದಿಯ ಸಾಂದ್ರತೆ, ಬಣ್ಣ, ವಾಸನೆ, ರುಚಿಗಳ ವಿಶ್ಲೇಷಣೆಯಲ್ಲಿ ಮಗ್ನ!

ಹಿಂದೂ ಒಂದು ಧರ್ಮವೇ?

ಹಿಂದೂ ಒಂದು ಧರ್ಮವೇ?
ಆರ್ಯ, ದ್ರಾವಿಡ ಜನಾಂಗದ ವಿಭಜನೆ ಸತ್ಯವೇ?
ಜಾತಿ, ಪಂಥಗಳು ಹುಟ್ಟಿನಿಂದ ಯಾವಾಗ ಜಾರಿಗೊಂಡವು?
ಅಸ್ಪೃಶ್ಯತೆ ಹೇಗೆ, ಯಾವಾಗ ಆಚರಣೆಗೆ ಬಂದಿತು?
ಚರಕ, ಆರ್ಯಭಟರಂತಹ ತಜ್ಞರ ಶಾಸ್ತ್ರ, ಸೂತ್ರಗಳ ಭಾರತ ಹೇಗೆ ಅಂಧಕಾರದಲ್ಲಿ ಮುಳುಗಿತು?
ಭಾರತದ ಬೀದಿಗಳಲ್ಲಿ ಮುತ್ತುರತ್ನಗಳನ್ನು ಮಾರುತ್ತಿದ್ದಷ್ಟು ದೇಶ ಶ್ರೀಮಂತವಾಗಿದ್ದಿತೇ?
ಹಾಗಿದ್ದ ಶ್ರೀಮಂತ ದೇಶ ಹೀಗೇಕೆ ಬಡವಾಯಿತು? ಇತ್ಯಾದಿ ಇತ್ಯಾದಿಯಾಗಿ ಇತಿಹಾಸದ ಕುರಿತಾಗಿ ನನ್ನಲ್ಲಿ ಮೂಡಿದ್ದ ಹತ್ತು ಹಲವಾರು ಪ್ರಶ್ನೆಗಳಿಗೆ ಉತ್ತರವನ್ನು ಹುಡುಕಿಕೊಂಡು ಸಾಗಿದಾಗ ಕಂಡುಕೊಂಡದ್ದು ಹೀಗೆ ಪುಸ್ತಕವಾಗಿದೆ.
ಆದರೆ ನಾನೊಬ್ಬ ವೃತ್ತಿನಿರತ ಸಂಶೋಧಕನಲ್ಲ, ಅದರಲ್ಲಿ ಶೈಕ್ಷಣಿಕ ಪರಿಣಿತಿಯೂ ಇಲ್ಲ. ಹಾಗೆಯೇ ನಾನೊಬ್ಬ ಸಾಹಿತಿ, ಚಿಂತಕ, ಇನ್ಯಾವುದೇ ವೃತ್ತಿ ಯಾ ಪ್ರವೃತ್ತಿ ವಿಶೇಷಣಗಳನ್ನು ಹೊಂದಿದವನೂ ಅಲ್ಲ. ನಾನೊಬ್ಬ ಕೇವಲ ಮಾಹಿತಿ ವಿಶ್ಲೇಷಕ ಮತ್ತು ಸತ್ಯದ ಅನ್ವೇಷಕ ಮಾತ್ರ. ಕೇವಲ ಒಬ್ಬ ಕುತೂಹಲಿಯಾಗಿ ನಾನು ನನ್ನ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಂಡಿದ್ದೇನೆ! ನನಗಿದ್ದ ವೃತ್ತಿಪರ ವಿಶ್ಲೇಷಣಾ ಅನುಭವ, ಮತ್ತು ಸತ್ಯ ಪ್ರತಿಪಾದನೆಯ ನಿಷ್ಠೆ ನನಗೆ ಈ ಸಂಶೋಧನೆಯಲ್ಲಿ ನೆರವಾಗಿದ್ದುದು ಮಾತ್ರ ಸತ್ಯ. ಹೀಗೆ ನನ್ನಂತೆಯೇ ಇದೇ ಪ್ರಶ್ನೆಗಳಿರಬಹುದಾದ ಹಲವರಿಗೆ ನಾನು ಕಂಡುಕೊಂಡದ್ದು ಕಿಂಚಿತ್ತಾದರೂ ತೋರುಗಂಬವಾಗಬಹುದೆಂಬ ಅನಿಸಿಕೆಯಿಂದ ಇದನ್ನು ಒಂದು ಪುಸ್ತಕವಾಗಿಸಿದ್ದೇನೆ. ಹಾಗಾಗಿ ಇದು ನನ್ನ ಪುಸ್ತಕವಲ್ಲ. ಇದು ನಮ್ಮಂತಹ ಎಲ್ಲಾ ಇತಿಹಾಸ ಕುತೂಹಲಿಗಳ ಪುಸ್ತಕ, ನಿಮ್ಮ ಪುಸ್ತಕ.
ಒಬ್ಬ ಅನಿವಾಸಿ ಕನ್ನಡ ಬರಹಗಾರನಿಗೆ ಬರೆಯುವ ಆಸಕ್ತಿ ಛಲವಿದ್ದರೂ, ಅದನ್ನು ಓದಿ ಸಲಹೆ ಕೊಡಬಲ್ಲ ಆಸಕ್ತ ವಲಯದ ಕೊರತೆ ಅಪಾರ. ಬರೆಯುವ ಓಘದಲ್ಲಿ ಆಗುವ ಕಾಗುಣಿತದ ತಪ್ಪುಗಳು, ತಲೆಯಿಂದ ಬರುವ ಸಿಗ್ನಲ್ಲುಗಳನ್ನು ಬೆರಳುಗಳು ಒಮ್ಮೊಮ್ಮೆ ಸರಿಯಾಗಿ ನಿರ್ವಹಿಸದೇ ಆಗುವ ಅಭಾಸಗಳನ್ನು ಸರಿಪಡಿಸಲು ಬರಹಗಾರ ಎಷ್ಟೇ ಗಮನ ಕೊಟ್ಟಿದ್ದರೂ ಆತನಿಗೆ ಎರಡನೇ ದೃಷ್ಟಿ ಅತ್ಯಗತ್ಯ. ಆ ಎರಡನೇ ದೃಷ್ಟಿಯ ಅಭಾವ ಅನಿವಾಸಿ ಬರಹಗಾರನಿಗೆ ಸದಾ ಅಲಭ್ಯ. ಅದರಲ್ಲೂ ಬರಹದ ವಸ್ತು ಕಾಲ್ಪನಿಕವಲ್ಲದೆ ಸಂಶೋಧನಾ ವಿಷಯವಾಗಿದ್ದರೆ ಆತ ಗೋಬಿ ಮರಳುಗಾಡಿನಲ್ಲಿ ಕಳೆದುಹೋದ ಹುಯೆನ್ ತ್ಸಾಂಗನೇ ಸರಿ.
ಆ ಎಲ್ಲಾ ಸಂಕಷ್ಟಗಳನ್ನು ಎದುರಿಸಿ, ವಿಚಲಿತಗೊಂಡು, ಹತ್ತು ಹಲವಾರು ಬಾರಿ ತಿದ್ದಿ ಸರಿಪಡಿಸಿ ಈ ಕೃತಿಯನ್ನು ರಚಿಸಿದ್ದೇನೆ. ಆದರೂ ಒಂದು ತಪ್ಪು ಇದರಲ್ಲಿ ಉಳಿದುಬಿಟ್ಟಿದೆ. ಇದು ಕನ್ನಂಬಾಡಿ ಕಟ್ಟೆಯ ಕುರಿತಾದ ಎರಡು ವಾಕ್ಯಗಳಲ್ಲಿ ಒಂದು ವಾಕ್ಯ ಬಿಟ್ಟುಹೋಗಿ ಅರ್ಥ ಅಭಾಸವನ್ನು ಕೊಟ್ಟಿದೆ. ಅದಕ್ಕಾಗಿ ಕ್ಷಮೆಯಿರಲಿ.
ಇನ್ನು ಇಪ್ಪತ್ತೈದು ಸಾವಿರ ಪುಸ್ತಕಗಳನ್ನು ನೂರು ರೂಪಾಯಿಗೊಂದರಂತೆ ಮಾರಿ, ಹತ್ತು ಪರ್ಸೆಂಟ್ ರಾಯಧನ ಗಳಿಸಿದರೆ ಸಿಗುವುದು ಎರಡೂವರೆ ಲಕ್ಷ! ಯಾವುದೇ ಒಂದು ಸಂಶೋಧನೆಗೆ ಸಂಪನ್ಮೂಲಗಳನ್ನು ಒಟ್ಟುಗೂಡಿಸಲು ತಿರುಗಾಡಿ ವ್ಯಯಿಸುವ ಹಣ, ರಾಯಲ್ಟಿಯ ದ್ವಿಗುಣ/ತ್ರಿಗುಣದಷ್ಟು.
ಸರ್ಕಾರಿ ಅನುದಾನಗಳಿಲ್ಲದೆ ಈ ರೀತಿಯ ಪುಸ್ತಕ ಕಷ್ಟ. ಆದರೆ ಇದು ನನ್ನ ಅರಿವಿನ ಪರಿಧಿಯ ವಿಸ್ತರಿಸಿಕೊಳ್ಳುವ ವೈಯಕ್ತಿಕ ಮೂಲೋದ್ದೇಶದ ಕಾರಣ ಇಲ್ಲಿ ಹಣ ಗೌಣ. ಇದೇ ಮನೋಭಾವನೆಯ ಪ್ರಕಾಶಕರಾದ ಲೋಕಪ್ಪನವರು ಸಿಕ್ಕಿದ್ದು ನನ್ನ ಸುಯೋಗ!
ಈ ಸಂಶೋಧನಾತ್ಮಕ ವಿಶ್ಲೇಷಣಾ ಕೃತಿಗಳು ಒಂದೆಡೆ ಅಧಿಕ ಖರ್ಚು ಎನಿಸಿದರೆ ಮತ್ತೊಂದೆಡೆ ಓದುಗರ ಅವಗಣನೆಗೆ ಒಳಗಾಗಿ ಲೈಬ್ರರಿಗಳಲ್ಲಿ ಧೂಳು ಹಿಡಿದು ಕೂರುತ್ತಿವೆ. ಮೂಲತಃ ಈ ರೀತಿಯ ಸಂಶೋಧನೆಗಳಿಗೆ ಗ್ರ್ಯಾಂಟ್ ಇರುವುದರಿಂದ ಸಂಶೋಧಕರೂ ಅಷ್ಟಾಗಿ ಮಾರುಕಟ್ಟೆ ಬಗ್ಗೆ ಚಿಂತಿಸುವುದಿಲ್ಲ. ಅದಲ್ಲದೆ, ಫಿಕ್ಷನ್ ಸಾಹಿತ್ಯಕ್ಕೆ ಸಾಕಷ್ಟು ಒತ್ತು ಕೊಟ್ಟು ಚರ್ಚೆ, ವಿಮರ್ಶೆಗೊಳಪಡಿಸುವ ನಾವು ನಾನ್-ಫಿಕ್ಷನ್ ಸಂಶೋಧನೆ, ವಿಶ್ಲೇಷಣೆಗಳಿಗೆ ಅಷ್ಟೊಂದು ಒತ್ತು ಕೂಡಾ ಕೊಡುವುದಿಲ್ಲ.
ಹಾಗಾಗಿ ಗ್ರ್ಯಾಂಟ್ ಇಲ್ಲದೆ ಈ ರೀತಿಯ ಸಾಹಸಗಳಿಗೆ ಕೈಹಾಕುವವರಿಗೆ ಎಂದಿಗಿಂತಲೂ ಹೆಚ್ಚಿನ ಮಹತ್ವ ಕೊಟ್ಟು ಓದುಗರು ಪ್ರೋತ್ಸಾಹಿಸಬೇಕಾಗಿದೆ. ಹಾಗೆಯೇ ಸಂಶೋಧಕರು ಕೂಡ ತಮ್ಮ ಸಂಶೋಧನಾತ್ಮಕ ಕೃತಿಗಳನ್ನು ಸಿದ್ಧ ಮಾದರಿಯ ಬೋರು ಹೊಡೆಸುವ ಶೈಕ್ಷಣಿಕ ಪಿಹೆಚ್ಡಿ ಶೈಲಿಯಲ್ಲಿ ರಚಿಸುವುದು ಕೂಡಾ ಓದುಗರ ಅವಗಣನೆಗೆ ಒಂದು ಪ್ರಮುಖ ಕಾರಣವೆನಿಸುತ್ತದೆ. ತಮ್ಮ ಪಿಹೆಚ್ಡಿ ಮುಗಿದ ನಂತರ ಸಂಶೋಧಕರು ಆ ಥೀಸಿಸ್ ಅನ್ನು ಕಥನ ಶೈಲಿಯಲ್ಲಿ ಸಾಮಾನ್ಯ ಓದುಗರಿಗಾಗಿ ಬರೆದರೆ ಸಂಶೋಧನೆಗಳು ಹೆಚ್ಚು ಜನರನ್ನು ತಲುಪಬಹುದು.
ಹಾಗಾಗಿ ಫಿಕ್ಷನ್ ಓದುಗರ ಪ್ರೋತ್ಸಾಹವನ್ನು ಬಯಸಿಯೇ ನಾನು ಈ ಕೃತಿಯನ್ನು ಕಥನ ಶೈಲಿಯಲ್ಲಿ ಬರೆದಿದ್ದೇನೆ.
ಶಿಕಾಗೋದ ನನ್ನಂಥಹ ಒಬ್ಬ ಶೈಕ್ಷಣಿಕೇತರ ಗಮಾರ, ಹವ್ಯಾಸಿ ಕುತೂಹಲಿಯ ಹುಡುಕಾಟದ ತಡವರಿಸುವಿಕೆಯನ್ನು, ಉತ್ಖನನ ಮತ್ತು ಪ್ರಾಚೀನ ಚರಿತ್ರೆಯ ಶೈಕ್ಷಣಿಕ ರಂಗದ, ವೃತ್ತಿಪರ ಸಂಶೋಧನೆಯ ಮೇರುಶಿಖರವೆನಿಸಿದ ಡಾ. A.V. ನರಸಿಂಹಮೂರ್ತಿಯವರು ಮೈದಡವಿ ಅಪ್ಪಿ ಮುನ್ನುಡಿ ಬರೆದುಕೊಟ್ಟು ಪ್ರೋತ್ಸಾಹಿಸಿದ್ದಾರೆ. ಅದೇ ರೀತಿ ಖ್ಯಾತ ಸಾಹಿತ್ಯ ವಿಮರ್ಶಕರಾದ ಡಾ. ನಂದೀಶ್ ಹಂಚೆಯವರು ಕೃತಿಯನ್ನು ಮೆಚ್ಚಿ, ಬೆನ್ನು ತಟ್ಟಿ ಬೆನ್ನುಡಿಯನ್ನು ಬರೆದಿದ್ದಾರೆ. ವಸ್ತುನಿಷ್ಠ ಸತ್ಯತೆಯನ್ನು ಸದಾ ಪ್ರೋತ್ಸಾಹಿಸುವ ಗುರುಗಳಾದ ಶ್ರೀ ಸುತ್ತೂರು ಸ್ವಾಮೀಜಿಯವರು ಆಶೀರ್ವದಿಸಿದ್ದಾರೆ.
ಬರೆಯುವುದನ್ನು ಮರೆತೇಬಿಟ್ಟಿದ್ದ ನನ್ನನ್ನು ಮತ್ತೆ ಬರೆಯಲು ಪ್ರೇರೇಪಿಸಿ, ನನ್ನ ಲೇಖನಗಳನ್ನು ಪ್ರಕಟಿಸಿ, ಪುಸ್ತಕಗಳನ್ನೂ ಬರೆಸಿದ ಸಮಾಜಮುಖಿ ಸಂಪಾದಕರಾದ ಚಂದ್ರಕಾಂತ ವಡ್ಡು, ಮತ್ತು ಉದಯಕಾಲ ದಿನಪತ್ರಿಕೆಯ ಬಳಗದ ಪುಟ್ಟಲಿಂಗಯ್ಯ ಮತ್ತು ದೇವರಾಜ್ ಹಿರೇಹಳ್ಳಿ ಅವರಿಗೆ ನಾನು ಚಿರಋಣಿ.
ರೂ.180/- ಮುಖಬೆಲೆಯ ''ಭಾರತ ಒಂದು ಮರುಶೋಧನೆ'' ಕೃತಿಯನ್ನು ರಿಯಾಯಿತಿ ದರದಲ್ಲಿ ಮುಂಗಡ ಕಾಯ್ದಿರಿಸುವ ಅವಕಾಶವಿದೆ. ಕೆಳಗಿನ ಬ್ಯಾಂಕ್ ಖಾತೆಗೆ ರೂ.150/- ಪಾವತಿಸಿ ನಿಮ್ಮ ಅಂಚೆ ವಿಳಾಸವನ್ನು ಮೊಬೈಲಿಗೆ ಕಳುಹಿಸಿದರೆ ಸಾಕು. ಪುಸ್ತಕವನ್ನು ಬಿಡುಗಡೆಗೊಂಡ ಮರುದಿನ ಅಂದರೆ ಆಗಸ್ಟ್ 26ಕ್ಕೆ ನಿಮ್ಮ ಮನೆಬಾಗಿಲಿಗೆ ತಲುಪಿಸುವ ಹೊಣೆ ನಮ್ಮದು.
ಡಿ.ಎನ್. ಲೋಕಪ್ಪ,
ಶ್ರೀ ರಾಜೇಂದ್ರ ಮುದ್ರಕರು ಮತ್ತು ಪ್ರಕಾಶಕರು,
ಯುಕೋ ಬ್ಯಾಂಕ್,
ದೇವರಾಜ ಅರಸ್ ರಸ್ತೆ ಶಾಖೆ, ಮೈಸೂರು.
ಚಾಲ್ತಿ ಖಾತೆ ಸಂಖ್ಯೆ:00540500004256
Ifsc: UCBA 0000054
ಮೊಬೈಲ್: 9902639593

ತೇಜಸ್ವಿ ಸೂರ್ಯಾ, ಪಂಪ ರನ್ನ!

ಆಷಾಡದಾಗ ಅಧಿಕ ಮಾಸ ಕೇಳಿದ್ದೆ. ಆದ್ರ, ಆಗಸ್ಟ್ರಿನ್ಯಾಗ ರಾಜ್ಯೋತ್ಸವ ಕೇಳಿರಲಿಲ್ಲ. ವಿಮಾನ ಹತ್ತಿ ಹುಚ್ಚಾಸ್ಪತ್ರ್ಯಾಗ ಇಳಿಯುದ್ರೊಳಗಾ ಹಿಂಗ ಆಗೇದ್ರಲ್ಲಪಾ, ಅವನೌನ!
ಏನ್ ಇದು ಅಂಥಾ ನೋಡಿದ್ರ...
ಪಾಪ, ಮರೋಡ್ಯಾರು ಯಾರ ಅವ್ರ ಧರ್ಮದ ಬ್ಯಾನರ್ರು ರಾಜಸ್ತಾನಿ, ಹಿಂದಿ ಭಾಷಾದಾಗ ಹಾಕ್ಕೊಂಡಿದ್ರ, ತುಡುಗು ಮಂದಿ ಗಲಾಟಿ ಮಾಡಿದ್ನ ಸೂರ್ಯ ಟ್ವೀಟ್ ಮಾಡಿದ್ನಂತ. ಅದಕ್ಕಾ ಎಲ್ಲಾರೂ ಕನಡಾನ ಕತ್ತಿ ಗುರಾಣಿ ಮಾಡ್ಕೊಂಡು ನಿಂತಾರಂತ, ಇದು ಹಕೀಕತ್ತು.
ಸರಿ, ನನ ದೋಸ್ತು ಡಾವನಗೇರಿ ವಿಜಯ ಮೆಟಲ್ಸ್ ವಿಜಿನ ಏನಲೇ ಏನಂತಿ ಇದ್ಕ ಅಂದೆ.
ಅದ್ಕ ವಿಜಿ "ಮಿಂಡ್ರಿಗುಟ್ಟಿದರಿಗೆ ಕೆಲಸ ಇಲ್ಲ ಬಗಿಸಿ ಇಲ್ಲ. ಪಂಪ ರನ್ನ ಎಲ್ಲಾ ಜೈನರು ಅದಾರ, ಮಾರೋಡೇರು ಆಟ ಜೈನರ ಅಲ್ಲ ಅಂತಾರಲ್ಲ... ಅವುಕ್ಕ ನಮ್ ಧರ್ಮ ಇತಿಹಾಸ ಏನ್ ಗೊತ್ತದ! ಕನ್ನಡ ಜೈನರು ದಿಗಂಬರರು ಅದಾರ, ನಾವು ಮಾರೋಡೆರು ಶ್ವೇತಾಂಬರರು. ಜನ ಆಪೀಸು, ಅಂಗಡಿ, ಕೆಲಸಕ್ಕ ಹ್ಯಾಂಗ ಬಟ್ಟಿ ಹಾಕ್ಕೊಂಡು ಇರ್ತಾರ ಮತ್ತ ಮೈ ತೊಕ್ಕೊಣಬೇಕಾರ ಹ್ಯಾಂಗ ಬರೇ ಬತ್ತಲ ಇರ್ತಾರಲ್ಲ ಅಂಥ ವ್ಯತ್ಯಾಸ ಐತಿ ನಮ್ಮದ್ರಾಗ. ಈ ದಡ್ಡ ಸೂ..ಮಕ್ಕಳು ಚಡ್ಡಿ ಹಾಕ್ಕೊಂಡು ಮೈ ತೊಕ್ಕೊಳ್ಳೋರಿಗೆ ಏನ್ ಅರ್ಥ್ ಆದೀತು ಬಿಡಲೇ. ಅವುಕ್ಕ ಅವ್ರ ಸಾಮಾನೇ ಹ್ಯಾಂಗ ಐತಿ ಗೊತ್ತುಲ್ಲ. ಇನ್ನ ಬ್ಯಾರೇರ್ದು ಏನ್ ನೋಡಿರ್ತಾವು? ಬೆಂಗ್ಳುರಾಗ ಕನ್ನಡ ಇವ್ರ ಹಾಳು ಮಾಡ್ಕೊಂಡು ನಮ್ಮ ಮುಕಳಿಗೆ ಒರಸಾಕ ಹತ್ಯಾರ. ಯಾಕಂದ್ರ ಪುಗಶೆಟಿ ಸಿಗರು ನಾವೇ ಅಲ್ಲೆನ್ ಮತ್ತಾ! ನಾಲಿಗಿ ಸೀಳಿದ್ರ ಮೂಗಾಗ ಕನ್ನಡ ಮಾತಾಡ್ತೇವಿ ಅಂಥ ಅವ್ರಿಗೆ ಅವ್ರ ನಾಲಿಗಿ ಸೀಳಿಕೆಂಡು, ಮುಗು ಕೊಯ್ಕೆಂಡು ಮುಕುಳಾಗ ಕನ್ನಡ ಮಾತಾಡದು ನೋಡಲೇ ಯಾವಾರ ಕನ್ನಡ ಚಾನಲ್ ಹಚ್ಚಿ" ಅಂದ.
ಅಲ್ಲಿಗೇ ಪಂಪ ರನ್ನ ಸೂರ್ಯ ರವಿ ಕತಿ ಮುಗೀತು.
ಏನ್ ಇವ ಹಿಂಗ್ ಮಾತಾಡಕ ಹತ್ಯಾನ ಅಂತೀರಿ! ಎಲ್ಲೋ ನನ್ DNAದಾಗ ಇದ್ದ ಸೊಲ್ಲಾಪುರಿ ಕನ್ನಡನಾ ಬಿಜಾಪುರದ ತೋತಾಪುರಿ ಕವಿಯಿತ್ರಿ ಒಬ್ಬರು ಮನ್ನೆ ಬಡುದು ಎಬ್ಬಿಸ್ಯಾರ (ಕಾಂಪ್ಲಿಮೆಂಟ್ ಇದು, ಮತ್ತ ಇನ್ನೇನಾರ ಅನ್ಕೋ ಬ್ಯಾಡ್ರಿ), ಹಂಗಾಗಿ ಹೀಂಗ. ಇದ್ರ ಮ್ಯಾಲೆ ಜನರಲ್ ವಾರ್ಡಿನ್ಯಾಗ ಅಡ್ಮಿಟ್ ಬ್ಯಾರೆ ಆಗೀನಲ್ಲ!

ಪ್ಲಾಸ್ಟಿಕ್ ಬ್ಯಾನು, ಶುಚಿತ್ವ ಮತ್ತು ಶೌಚ!


ದಾವಣಗೆರೆಯ ಕೆಫೆ ಕಾಫಿ ಡೇ ಗೆ ಬಂದೆ, ಒಂದು ಅಮೇರಿಕಾನೊ ಕಾಫಿ ಕುಡಿಯೋಣ ಎಂದು. ನನ್ನ ಬೆನ್ನಿಗೇ ಆರು ಜನ ಪುರುಷರು ಮತ್ತು ಮಹಿಳೆಯೋರ್ವರು ನುಗ್ಗಿಕೊಂಡು ಸೀದಾ ಕಿಚನ್ನಿಗೆ ನುಗ್ಗಿದರು. ಸ್ವಲ್ಪ ಗಮನಿಸಿದ ನಂತರ ಅವರೆಲ್ಲಾ ದಾವಣಗೆರೆ ಕಾರ್ಪೊರೇಷನ್ನಿನ ನೌಕರಶಾಹಿಗಳು ಬ್ಯಾನ್ ಆಗಿರುವ ಪ್ಲಾಸ್ಟಿಕ್ ಬಳಕೆಯನ್ನು ಹಿಡಿಯುವ ದಾಳಿಗೆ ಬಂದದ್ದೆಂದು ತಿಳಿಯಿತು.
ಎಲ್ಲಾ ಹುಡುಕಿದ ನಂತರ ಅಲ್ಲಿ ಅವರಿಗೆ ಆಹಾರ ಸಿದ್ದಪಡಿಸುವಾಗ ಹಾಕಿಕೊಳ್ಳುವ ಪ್ಲಾಸ್ಟಿಕ್ ಗ್ಲವುಸುಗಳ ಒಂದು ಬಂಡಲ್ ಸಿಕ್ಕಿತು. ಅದನ್ನು ವಶಪಡಿಸಿಕೊಂಡ ಅಧಿಕಾರಿಗಳು "ಗ್ಲವುಸು ಹಾಕಿಕೊಳ್ಳದೇ ಬರಿಗೈಯಿಂದ ಆಹಾರ ಸಿದ್ಧಪಡಿಸಿ" ಎಂದು ಫರ್ಮಾನು ಇತ್ತು, ಕಾಫಿ ಡೇ ನೌಕರರನ್ನು ತಮ್ಮ ಪಕ್ಕದಲ್ಲಿ ನಿಲ್ಲಿಸಿಕೊಂಡು ವಶಪಡಿಸಿಕೊಂಡ ಬಂಡಲ್ ಮುಂದೆ, ಹುಲಿ ಶಿಕಾರಿ ಮಾಡಿದ ಗತ್ತಿನಲ್ಲಿ ಫೋಟೋ ತೆಗೆಸಿಕೊಂಡರು. ಎರಡು ಸಾವಿರ ಫೈನ್ ಕೂಡ ಜಡಿದರು.
ಶುಚಿತ್ವದ ಆದ್ಯತೆಯಾಗಿ ಗ್ಲವುಸು ಇಲ್ಲದೆ ಆಹಾರ ಸಿದ್ಧತೆ ಹೇಗೆ ಮಾಡಬೇಕೆಂದು ಪೆಚ್ಚಾಗಿದ್ದ CCD ಉದ್ಯೋಗಸ್ಥ ಮಹಿಳೆಗೆ ಬಟ್ಟೆ ಗ್ಲವುಸು ಉಪಯೋಗಿಸಬಹುದು ಎಂದು ಸಮಾಧಾನ ಕೂಡ ಹೇಳಿತು ದಾವಣಗೆರೆ ಮಹಾಪಾಲಿಕೆ ನೌಕರಶಾಹಿ!
ಬಯಲು ಶೌಚವನ್ನು ನಿಯಂತ್ರಿಸಲಾಗದೆ, ಶೌಚವನ್ನೇ ನಿಷೇಧಿಸುವಂತಹ ಒಂದು ತಾಜಾ ಕಮಂಗಿತನಕ್ಕೆ ಹೀಗೆ ಸಾಕ್ಷಿಯಾದೆನು. ನವಿಲು ಕುಣಿಯುತ್ತದೆ ಎಂದು ಕೆಂಭೂತ ಕುಣಿಯುವ ಪ್ರಗತಿಯ ಸಂಕೇತವೆನ್ನುವ ಇಂತಹ ವಿರೋಧಾಭಾಸಗಳು ಸಾವಿರಾರು! ಮೊಗೆದಷ್ಟೂ ಉಕ್ಕುವ ಅಗಣಿತ ಅಭಾಸಗಳ ಅಕ್ಷಯ ಗಣಿ.
ಸಿದ್ಧಾರ್ಥರು ಈ ದೃಶ್ಯವನ್ನು ತಮ್ಮ ಕೆಫೆ ಡೇಯಲ್ಲಿ ಕಂಡಿದ್ದರೆ ಬುದ್ಧರಾಗುತ್ತಿದ್ದರೇನೋ!?!
ಈಗ ಪ್ರಧಾನಿ ಮೋದಿಯವರು ಜನಸಂಖ್ಯೆ ನಿಯಂತ್ರಣ ಮತ್ತು ಪ್ಲಾಸ್ಟಿಕ್ ಹಾವಳಿ ಬಗ್ಗೆ ಮಾತನಾಡಿದ್ದಾರೆ. ಹಾಗಾಗಿ ಜನಸಂಖ್ಯೆ ನಿಯಂತ್ರಣದ ಬಹುಮುಖ್ಯ ಅಂಗವೆನಿಸುವ ಕಾಂಡೋಮ್ ಕೂಡಾ ಲೇಟೆಕ್ಸ್ ಅಲ್ಲದೆ ಪ್ಲಾಸ್ಟಿಕ್ನಿಂದ ಕೂಡಾ ಮಾಡಲಾಗುತ್ತದೆ. ಇಲ್ಲಿ ಪ್ಲಾಸ್ಟಿಕ್ ಬ್ಯಾನ್ ಹೇಗೆ ಅಳವಡಿಸುತ್ತಾರೋ ಈ ಅಧಿಕಾರಿಗಳು! ಲೇಟೆಕ್ಸ್ ಅಲರ್ಜಿ ಇರುವ ಕಾಂಗ್ರೆಸ್ಸಿಗರು "ಹಸ್ತ"ವನ್ನು, ಬಿಜೆಪಿಗರಿಗೆ ಕರಸೇವೆಯ ಸ್ವಯಂಸೇವಕರಾಗಿ ಎಂದು ಸಮನ್ವಯ ಸೂತ್ರವನ್ನು ಬೋಧಿಸುತ್ತಾರೆನೋ!

ವಲಸೆಗಾರರ ಆದಿ ಸಂಯುಕ್ತ ಸಂಸ್ಥಾನ

"ಭಾರತದ ಇತಿಹಾಸದ ಮೂಲ ತುಂಬಾ ಕುತೂಹಲಕರವಾದದ್ದು...ಸಾಮಾನ್ಶರಿಗೆ ಇದನ್ನು ಅರಗಿಸಿಕೂಳ್ಳುವುದು ಕಷ್ಚ! ಇಲ್ಲಿನ ಸಂಸ್ಕೃತಿಗೆ 'ವಲಸೆ' ಬಹುಮುಖ್ಶ ಪಾತ್ರ ವಹಿಸಿದೆ. ವಿಶ್ವದ ಎಲ್ಲಾ ನಾಗರೀಕತೆಗಳ ಸಾರದ ಕಂಪು ಇಲ್ಲಿ ಹರಿದು ಬಂದಿದೆ...ಮೂರುವರೆ ಸಾವಿರ ವರ್ಷಕ್ಕಿಂತಲೂ ಹಿಂದಿನಿಂದ!"
ಹೀಗೆ ಹೇಳಿದವರು ಐತಿಹಾಸಿಕ ಶಿಲ್ಪಕಲೆಯ ಸೊಬಗನ್ನು ಪುನರ್ ಸೃಷ್ಟಿಸುವಲ್ಲಿ ನಿಷ್ಣಾತರಾದ ಗೋವಾ ವಾಸಿಗಳಾದ ಶ್ರೀ ಪುಟ್ಟಸ್ವಾಮಿ ಗುಡಿಕಾರರು, ಕೇವಲ ನನ್ನ ಫೇಸ್ಬುಕ್ ಪೋಸ್ಟಿನಿಂದಲೇ ನನ್ನ ಕೃತಿಯ ಸಮಗ್ರವನ್ನು ಗ್ರಹಿಸಿ ನಿಖರವಾದ ಹೊಳಹಿನಿಂದಲೇ ಹೀಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆ ಹಿನ್ನೆಲೆಯಲ್ಲಿ ಭಾರತವನ್ನು "ವಲಸೆಗಾರರ ಆದಿ ಸಂಯುಕ್ತ ಸಂಸ್ಥಾನ" ಎನ್ನಬಹುದು. ಅಂತಹ ಆದಿ ವಲಸೆಗಾರರ ಭಾರತದಿಂದ "ವಲಸೆಗಾರರ ನವ್ಯ ಸಂಯುಕ್ತ ಸಂಸ್ಥಾನ"ವಾದ ಅಮೆರಿಕಕ್ಕೆ ವಲಸೆ ಹೋದ ನಾನು ಈ ಪುಸ್ತಕವನ್ನು ಬರೆಯುವಂತಾದ್ದು ನನ್ನ ವಲಸೆಯ ಗಮ್ಯ ಗುರಿಯಾಗಿತ್ತೇನೋ!
ನಂಬಿದ ಆದರ್ಶಗಳಿಗೆ, ಮತ್ತು ಚಾರಿತ್ರಿಕ ಆದರ್ಶ ವ್ಯಕ್ತಿಗಳ ಕಟ್ಟಾಭಿಮಾನಕ್ಕೆ ಬದ್ಧರಾಗಿರುವ ಜನತೆ, ಆ ಆದರ್ಶ ಮತ್ತು ಆದರ್ಶವ್ಯಕ್ತಿಗಳನ್ನು ಯಾವುದೇ ಕೃತಿಗಳು ಪ್ರಶ್ನಿಸಿದರೆ ಒಪ್ಪಿಕೊಳ್ಳುವುದಿರಲಿ ದಂಡೆತ್ತಿ ಹೋಗುವ ಇತಿಹಾಸವಿರುವುದರಿಂದ ಚರಿತ್ರೆಯ ನಿರ್ಭಿಡೆಯ ಸತ್ಯಾತ್ಮಕ ವಿಶ್ಲೇಷಣೆಗಳು ಭಾರತದಲ್ಲಿ ಅಷ್ಟಾಗಿ ಇಲ್ಲ. ಅದನ್ನು ತುಂಬುವ ನಿಟ್ಟಿನಲ್ಲಿ ಇದು ಒಂದು ಪ್ರಯತ್ನ. ನನ್ನ 'ಭಾರತವೆಂಬೋ ಹುಚ್ಚಾಸ್ಪತ್ರೆಯಲ್ಲಿ", ಮತ್ತು "ಕರ್ನಾಟಕವೆಂಬೋ ಕಮಂಗಿಪುರದಲ್ಲಿ" ಎಂಬ ಹ್ಯಾಷ್ಟ್ಯಾಗ್ ಅನ್ನು ಸಾಕಷ್ಟು ಓದುಗರು ಮೆಚ್ಚಿಕೊಂಡು ಮುಕ್ತ ಹೃದಯದಿಂದ ಶ್ಲಾಘಿಸಿರುವ ಹಿನ್ನೆಲೆಯಲ್ಲಿ ನನಗೀ ನಿರ್ಭಿಡ ಪ್ರಾಮಾಣಿಕತೆ ಮೂಡಿಬಂದಿದೆ ಎಂದುಕೊಂಡಿದ್ದೇನೆ.
ಒಟ್ಟಿನಲ್ಲಿ ಪುಟ್ಟಸ್ವಾಮಿ ಗುಡಿಕಾರರು ಹೇಳಿದಂತೆ ಇದನ್ನು ಅರಗಿಸಿಕೊಳ್ಳಲು 'ಮುಕ್ತ' ಮನಸ್ಸು ಅತ್ಯವಶ್ಯಕ. ಯಾರು ಏನೇ ಅಸಹಿಷ್ಣುತೆ ದೇಶದ ತುಂಬೆಲ್ಲಾ ತುಂಬಿದೆ ಎಂದರೂ ಅದು ಕೇವಲ ಅಲ್ಲೊಂದು ಇಲ್ಲೊಂದು ಎಂಬಂತೆ ಕಾಣುವ ಘಟನೆಗಳಿಗೆ ಸೀಮಿತವಾಗಿದೆ ಎಂಬುದು ಸತ್ಯ.
ಒಟ್ಟಿನಲ್ಲಿ ಓದುಗರು ಈ ಕೃತಿಯನ್ನು ಓದಿದ ನಂತರ ನನ್ನನ್ನು ಒದೆಯಲಾರರು ಎಂದು ನಾನು ಬಲವಾಗಿ ನಂಬುವಷ್ಟು ಸಹಿಷ್ಣುತೆ ಇದೆ. ಆ ನಂಬಿಕೆಗೆ ಕಾರಣ ಬರ್ಟೆಂಡ್ ರಸೆಲ್ ನ ಈ ಕೆಳಗಿನ ಮಾತುಗಳು ನನ್ನ ಮಾರ್ಗದರ್ಶಿ ತತ್ವಗಳು.
"ಯಾವುದೇ ಒಂದು ವಿಷಯವನ್ನು ಓದುವಾಗ ಅಥವಾ ಒಂದು ತತ್ವವನ್ನು ಪರಿಗಣಿಸುವಾಗ, ನಾವು ಯಾವುದನ್ನು ನಂಬಲು ಇಚ್ಛಿಸುತ್ತೇವೋ ಅದರೆಡೆ ವಾಲುವುದಾಗಲಿ ಅಥವಾ ಈ ಸತ್ಯಾಂಶಗಳನ್ನು ನಾವು ನಂಬುವುದರಿಂದ ಸಾಮಾಜಿಕವಾಗಿ ಏನು ಒಳಿತಾಗಬಲ್ಲದು ಎಂದೆಲ್ಲ ಆಲೋಚಿಸದೇ ಕೇವಲ ಆ ವಿಷಯದೊಳಗಿನ ವಸ್ತುಸ್ಥಿತಿ ಮತ್ತು ಆ ವಸ್ತುಸ್ಥಿತಿಯಲ್ಲಿನ ಸತ್ಯಾಂಶವನ್ನು ಮಾತ್ರ ಅಂತಿಮವಾಗಿ ಪರಿಗಣಿಸಬೇಕು."
- ಬರ್ಟೆಂಡ್ ರಸೆಲ್
ಇನ್ನು ಕೆಲವೊಮ್ಮೆ ಭಾರತದ ಚರಿತ್ರೆ ಮತ್ತು ಉತ್ಖನನ ಸಂಶೋಧನೆಗಳು ಏಕೆ ಹಳ್ಳ ಹಿಡಿದವು? ಏಕೆಂದರೆ, ಚರಿತ್ರೆಯ ಉತ್ಖನನ ಮತ್ತು ಮಾಹಿತಿ ಮಥನವು ಗಣಿತಜ್ಞ, ಸಂಖ್ಯಾಶಾಸ್ತ್ರಜ್ಞ, ಜೀವಶಾಸ್ತ್ರಜ್ಞ, ಅಭಿಯಂತರಜ್ಞ, ಮುಂತಾದ ತಜ್ಞರ ಕೆಲಸವನ್ನು ಬಯಸುತ್ತದೆ ಅಥವಾ ಆ ಜ್ಞಾನಗಳ ಅನುಭವವಿರುವವರ ಪರಿಣಿತಿಯನ್ನು ಬಯಸುತ್ತದೆ. ಆ ಗ್ಯಾಪ್ ಅನ್ನು ಸಂಶೋಧಕರು ಭಾವನಾತ್ಮಕ ಯಾ ಊಹಾತ್ಮಕವಾಗಿ ತುಂಬಿದ್ದರಿಂದ ಇತಿಹಾಸ ಬೇರೆಯದೇ ಒಂದು ತಿರುವನ್ನು ಪಡೆದುಕೊಂಡಿತು ಎಂಬುದು ತಜ್ಞರ ಅಭಿಪ್ರಾಯ.
ಆ ಒಂದು ವಿವಿಧ ಶಾಸ್ತ್ರಗಳ ವೃತ್ತಿಪರ ಅನುಭವ ನನಗಿರುವುದರಿಂದ ಈ ರೀತಿಯ ಕೃತಿ ನನ್ನಿಂದ ಸಾಧ್ಯವಾಯಿತೇನೋ ಎಂದು ಒಮ್ಮೊಮ್ಮೆ ಅನಿಸಿದ್ದುಂಟು. ಒಟ್ಟಾರೆ ನನ್ನ ವಿಶ್ಲೇಷಣಾ ಅನುಭವವಿಲ್ಲಿ ಅಗಾಧವಾಗಿ ಉಪಯೋಗಕ್ಕೆ ಬಂದುದು ಸತ್ಯ.
ಇನ್ನು ಒಬ್ಬ ಅನಿವಾಸಿ ಕನ್ನಡ ಬರಹಗಾರನಿಗೆ ಬರೆಯುವ ಆಸಕ್ತಿ ಛಲವಿದ್ದರೂ, ಅದನ್ನು ಓದಿ ಸಲಹೆ ಕೊಡಬಲ್ಲ ಆಸಕ್ತ ವಲಯದ ಕೊರತೆ ಅಪಾರ. ಬರೆಯುವ ಓಘದಲ್ಲಿ ಆಗುವ ಕಾಗುಣಿತದ ತಪ್ಪುಗಳು, ತಲೆಯಿಂದ ಬರುವ ಸಿಗ್ನಲ್ಲುಗಳನ್ನು ಬೆರಳುಗಳು ಒಮ್ಮೊಮ್ಮೆ ಸರಿಯಾಗಿ ನಿರ್ವಹಿಸದೇ ಆಗುವ ಅಭಾಸಗಳನ್ನು ಸರಿಪಡಿಸಲು ಬರಹಗಾರ ಎಷ್ಟೇ ಗಮನ ಕೊಟ್ಟಿದ್ದರೂ ಆತನಿಗೆ ಎರಡನೇ ದೃಷ್ಟಿ ಅತ್ಯಗತ್ಯ. ಆ ಎರಡನೇ ದೃಷ್ಟಿಯ ಅಭಾವ ಅನಿವಾಸಿ ಬರಹಗಾರನಿಗೆ ಸದಾ ಅಲಭ್ಯ. ಅದರಲ್ಲೂ ಬರಹದ ವಸ್ತು ಕಾಲ್ಪನಿಕವಲ್ಲದೆ ಸಂಶೋಧನಾ ವಿಷಯವಾಗಿದ್ದರೆ ಆತ ಗೋಬಿ ಮರಳುಗಾಡಿನಲ್ಲಿ ಕಳೆದುಹೋದ ಹುಯೆನ್ ತ್ಸಾಂಗನೇ ಸರಿ.
ಹೀಗಿದ್ದಾಗ ನನ್ನಲ್ಲಿ ವಿಶ್ವಾಸ ತುಂಬಿ, ಕರಡನ್ನು ಓದಿ, ತಪ್ಪುಗಳನ್ನು ಒಬ್ಬ ವೃತ್ತಿನಿರತ ಪ್ರಕಾಶಕರಂತೆ ತಿದ್ದಿ ಕೊಟ್ಟವರು ನನ್ನಂತೆಯೇ ಅನಿವಾಸಿಗಳಾದ ಇಂಗ್ಲೆಂಡಿನ ಡಾ. ಮಠದ ವಿಜಯಕುಮಾರ್. ಸಾಹಿತ್ಯ, ಮುದ್ರಣ ಮತ್ತು ಪ್ರಕಾಶನದ ಕೌಟುಂಬಿಕ ಹಿನ್ನೆಲೆ ಹೊಂದಿದ ವಿಜಯಕುಮಾರರ ಬೆಂಬಲ ಅನನ್ಯ. ಇವರು ಕನ್ನಡ ಕಾವಲುಗಾರರೆಂದು ಖ್ಯಾತರಾದ ಮೈಸೂರು ಪಂಡಿತಾರಾಧ್ಯರ ಸೋದರರು ಕೂಡ.
ಒಟ್ಟಿನಲ್ಲಿ ಓದುಗರು ಈ ಕೃತಿಯನ್ನು ಓದಿದ ನಂತರ ನನ್ನನ್ನು ಒದೆಯಲಾರರು ಎಂದು ನಾನು ಬಲವಾಗಿ ನಂಬುವಷ್ಟು ಸಹಿಷ್ಣುತೆ ದೇಶದಲ್ಲಿ ಇದೆ ಎಂಬುದನ್ನು ಮತ್ತೊಮ್ಮೆ ಹೇಳಲು ಇಚ್ಛಿಸುತ್ತೇನೆ.

ಲಕ್ಸು ಸೋಪು ಹಚಿಗೊಂಡ್

ಲಕ್ಸು ಸೋಪು ಹಚಿಗೊಂಡ್ ಜಳಕ ಮಾಡಿ, ಜಸ್ಟು ಬಂದೀನಿ...ಎನ್ನುವ ಒಬ್ಬಳ ಜವಾರಿ ಮುಲುಗು.
ರಾsಮs ನಾsಮs ಪಾಯsಸಕ್ಕೆ ಕೃಷ್ಣನಾಮ ಸಕ್ಕರೆ... ಎನ್ನುವ ಶಾಸ್ತ್ರೀಯ ಹಿನ್ನೆಲೆಯಲ್ಲಿ ಒಬ್ಬಳ ಲವ್ವು ಬವ್ವು ಅನ್ನೋ ಪ್ರಾಸಬದ್ಧ ಮುಲುಗು.
ನಂತರ,
ಮುಂದೆ ಮುಂದೆ ನಾನು ಇಡುವೆ. ನೀವೂ ಮುಂದೆ ಮುಂದೆ ಇಡಿ. ಮುಂದೆ ಮುಂದೆ ಇಡುವವರಿಗೆ ಐಡಿಎಫ್ಸಿ ಫಸ್ಟ್ ಬ್ಯಾಂಕ್! ಜಾಹೀರಾತು.
ಯು ಆರ್ ಮೈ ಪೊಲೀಸ್ ಬೇಬಿ, ಯು ಆರ್ ಮೈ ಹೋಮ್ ಮಿನಿಸ್ಟರ್ ಅನ್ನೋ ಇನ್ನೊಂದು ಮೂಗು ಮುಕುಳಿಯಿಂದ ಹೊಮ್ಮಿಸುವ ತ್ರಾಸಬದ್ಧ ಮುಲುಗು.
ನಂತರ,
ರೇಡಿಯೋ ಮಿರ್ಚಿ ಸಖತ್ ಹಾಟ್ ಮಗಾ ಎಂಬ ಸ್ಖಲಿತಬದ್ದ ಮುಲುಗು.
ಇದು ಕನ್ನಡ ಪಂಡಿತರೆಲ್ಲಾ ಭಾಷೆ, ವ್ಯಾಕರಣ, ಉಚ್ಚಾರಣೆ, ನೈತಿಕತೆಯ ಪಾಠ ಮಾಡುವುದು ಬಿಟ್ಟು ಬೇರೆಲ್ಲಾ ಮಾಡುತ್ತಿರುವುದರ ಪರಿಣಾಮವೋ ಅಥವಾ ರಿಯಲ್ ಎಸ್ಟೇಟಿನ ಹಣದುಬ್ಬರದಲ್ಲಿ ಹೂಸುತ್ತಿರುವ ಕನ್ನಡ ಸಿನೆಮಾ ಸಂಸ್ಕೃತಿಯೋ!
ಒಟ್ಟಾರೆ ಗ್ರೌಂಡ್ ರಿಯಾಲಿಟಿ ಪುರಾವೆಗಳು ಅದ್ಭುತವಾಗಿ ಸಿಗುತ್ತಿವೆ.

The Rediscovery of India

ಎಡಪಂಥದ ಹೆಸರಲ್ಲಿ ಗುಂಪುಗಾರಿಕೆ ಮಾಡಿಕೊಂಡು ಉದಯೋನ್ಮುಖ ಬರಹಗಾರರನ್ನು ಹಾದಿ ತಪ್ಪಿಸುತ್ತಿರುವವರ ಗುಂಪಿನೊಳಗಿನಿಂದಲೇ ಸಿಡಿದು ಬಂದ ಅಪ್ಪಟ ಜವಾರಿ ಮಣ್ಣಿನ ಮಗಳ ಸಲಹೆ:
"ಮಗನs ನೀ ಬರ್ತಾನs ಸುದ್ದಿ ಮಾಡಿ, ಹೋಗುವಾಗೂ ಬೆಂಕಿ ಹಚ್ಚಿ ನಮ್ಮ ಎಡಪಂಥದೋರಿಗೆ insecurity ಆಗೂ ಹಂಗs ಅತಂತ್ರ ಮಾಡಿ ನೋಡು. ಅವರು ಹಾಕಿದ್ದ ಸ್ಟೇಟಸ್ಸಿನ್ಯಾಗ, ಅದ್ಕ ಬಂದಿದ್ದ ವಾಲ್ಕಿ ಕಾಮೆಂಟುಗಳಾಗ ಬರೇ insecurity ಕಾಣ್ತೇತಿ. ಇತಿಹಾಸ ಹ್ಯಾಂಗೈತಿ, ಏನೈತಿ ಅಂಥ ಸ್ಪಷ್ಟ್ ಬರದಿ. ಇತಿಹಾಸದ ಉದ್ದುಕೂ ವರ್ತಮಾನದ ಭಾರತ, ಹ್ಯಾಂಗ ತನ್ನ ರೂಪ ಪಡ್ಕೋತಾ ಬಂತು ಅಂಥ ಛಂದಾಗಿ ಚಿತ್ರಣ ಕೊಟ್ಟಿ. ಖರೇನs ನಿನ್ ಪುಸ್ತಕs ಸರಳ ಆಗಿ ಓದಿಸ್ಕೊಂಡು ಹೊಕ್ಕೆತಿ.
ಇಂಟರ್ನೆಟ್ಟಿನ್ಯಾಗ ಇನ್ಫಾರ್ಮೇಷನ್ ಗಳಿಸಿ ಅಂತಾನಲ್ಲ ಅವ, ಏನು ರದ್ದಿ ಅಂಗಡಿಗೆ ಹೋಗಿ ಹುಡಿಕ್ಯಾಡಿ ಬರದರ ಅಷ್ಟೇ ಸಂಶೋಧನಾನs! ಇಂಟರ್ನೆಟ್ ಅಂದ್ರ ಏನು ಮೈಲಿಗ್ಯಾ? ನಮ್ಮ ನೆಹರೂ ಅವರೂ ಇದಾ ಧಾಟಿಯಾಗ ಡಿಸ್ಕವರಿ ಆಫ್ ಇಂಡಿಯಾ ಅಂಥ ಬರಿದಿದ್ರಲ್ಲಾ ಅದುನೂ ಹೊಟ್ಟು ಅಂಥಾನ ಇವ. ಹೊಟ್ಟು ತುಂಬುಕೊಂಡಾವಗ ಹೊಟ್ಟಿನ ಯೋಚನಿ. ನೀ ಬರದ ಇತಿಹಾಸದಾಗ ಇಲ್ಲಿ ತಪ್ಪು ಐತಿ, ತಗ ಸಬೂತು ಹಿಂಗೈತಿ ಅಂದ್ರ ಒಪ್ಕೋಬೋದು. ಸಾರಾ ಸಗಟು ಷರಾ ಬರಿಯಾಕ ಇವ ಯಾರು? ಏನ್ ನೀಚ ಅದಾರಪಾ ನಮ್ ಮಂದೀ, ಬರೇ ವಿಕೃತಿ ನ ನೋಡು. ನೆಹರೂ ಜೈಲಿನ್ಯಾಗ ಕುಂತುಕೊಂಡು ಮಗಳಿಗೆ ಇದನ್ನ ಬರೆದಿದ್ದರಂತ, ಹಂಗಾ ನೀ ಅಲ್ಲಿ ಕುತುಗೊಂಡು ನಮಗ ಬರದಂಗ ಐತಿ.
ಹಾಂಗಿದ್ದಾಗ ಸಂಶೋಧನಾ ಮಾಡಬೇಕಾದ ಯೂನಿವರ್ಸಿಟಿ ಪ್ರೊಫೆಸರ್ ಒಬ್ಬ ಕೂಡಾ ಮುಕಳಿ ತಟುಗೊಂಡು ನಗ್ತಾನ ಅಂದ್ರ ಅವನ ಮುಕಳಿನೂ ನಿನ ಪುಸ್ತಕದಿಂದ ಬೆಚ್ಚಗ ಆಗೇದ ಅಂಥ..ಅರ್ಥs! ಪುಸ್ತಕ ಯಾವುದೇ ಪೂರ್ವಾಗ್ರಹ ಇಟ್ಕೊಂಡು ದ್ವೇಷ ಇಟ್ಕೊಂಡು ಓದುದಲ್ಲ. ಇನ್ಬಾಕ್ಸ್ ನ್ಯಾಗೊಂದು ಫೇಸ್ಬುಕ್ನ್ಯಾಗೊಂದು ಮಾತಾಡು ಮಂದಿ ಬಾಳ ಎಚ್ಚರದಿಂದ ಇರಬೇಕಾಕೈತಿ.
ಇನ್ನು ಇದರ ಮ್ಯಾಲ ಸಂವಾದ್ ಮಾಡಿ ಪ್ರಶ್ನೆ ಮಾಡಿದೋರಿಗೆ ಉತ್ತರ ಕೊಟ್ಟ್ ಹ್ವಾಗಿ. ನಾ ಇಷ್ಟ್ ಉದಾರ ಅದೀನಿ, ನಾ ಎಡಾನೂ ಅಲ್ಲ ಬಲಾನೂ ಅಲ್ಲ ಅಂಥ ತೋರಿಸಿ.
ಅತಂತ್ರ ಆದೋರು ಹ್ಯಾಂಗನ್ನ ಬಡ್ಕೋರ್ಯಾಕ ನೀ ಛಂದಾಗಿ ಹೊಸ ಶೋಧನೆ ಮಾಡು. ಹೀಂಗs ಬರ್ಕೋತ ಇರು."
ಆಕೆಯ ಹೆಸರು, ಜಾತಕಕ್ಕಿಂತ ವಿಮರ್ಶೆಯ ವಸ್ತುವಿಗೆ ಗಮನ ಕೊಡೋಣ.

ಹೌಡಿ ಫಿರೆಂಡ್ಸ್!!

ಹೌಡಿ ಫಿರೆಂಡ್ಸ್!!
ಫೇಸ್ಬುಕ್ ಸ್ನೇಹಿತರೊಬ್ಬರು ನಾನೊಬ್ಬ ಎನ್ನಾರೈ ಎಂದು ಈರ್ಷ್ಯೆ, ಅಸಹಿಷ್ಣುತೆ, ಸಂಕುಚಿತತೆಯಿಂದ ಮೂದಲಿಸಲೋ ಎಂಬರ್ಥದಲ್ಲಿ "ಇಲ್ಲಿ ಜನ ಒಂದು ಬಿರಿಯಾನಿ ಮತ್ತು ೨೦೦ ರುಪಾಯಿ ಆಸೆಗೆ ರಾಜಕೀಯ ಸಮಾವೇಶಕ್ಕೆ ಹೋದರೆ ಅವರನ್ನ ಮಾನಗೆಟ್ಟವರು, ಇವರಿಂದಾನೇ ದೇಶ ಹಾಳಾಗಿರೋದು ಎಂದು ಬೈತೀರಿ.. ಆದರೆ ಬಾರತದ ಪೌರತ್ವಕ್ಕೆ ತಿಲಾಂಜಲಿ ಬಿಟ್ಟು, ಇನ್ನೊಂದು ದೇಶದ ಪೌರತ್ವ ಪಡೆದು, ಅಲ್ಲಿನ ಸವಲತ್ತನ್ನೆಲ್ಲಾ ಪಡೆದು ಹೌಡಿ ಮೋದಿ ಅಂತಹ ರಾಜಕೀಯ ಸಮಾವೇಶಕ್ಕೆ ಬಾವುಟ ಹಾರಿಸಿಕೊಂಡು ಬರುವ ಎಡಬಿಡಂಗಿ ಎನ್ ಆರ್ ಐ ಗಳನ್ನು ದೇಶಪ್ರೇಮಿಗಳು ಅಂತೀರಿ..!
ಇದು ಶ್ರೀಮಂತರು ಹರಿದು ಹಾಕೋ ಬಟ್ಟೆ ಫ್ಯಾಷನ್ ಅಂತಲೂ ಬಡವರದಾದರೆ ಗತಿಕೆಟ್ಟವು ಎಂದಂತಲ್ಲವೇ.." ಎಂದು ಕಾಮೆಂಟ್ ಹಾಕಿದ್ದರು.
ಅದಕ್ಕೆ ನಾನು ಹೇಳುವುದಿಷ್ಟೇ... "ಭಾರತ ಸರ್ಕಾರ 'ಸಾಗರೋತ್ತರ ಪ್ರಜೆ' ಎಂಬ ಪಾಸ್ಪೋರ್ಟ್ ಮಾದರಿಯ ಗುರುತಿನ ಚೀಟಿಯೊಂದನ್ನು ತನ್ನ ಎನ್ನಾರೈಗಳಿಗೆ ಕೊಡುತ್ತದೆ. ಹಾಗೆಯೇ ಅಮೆರಿಕ ದ್ವಿಪೌರತ್ವವನ್ನು ಗೌರವಿಸುತ್ತದೆ. ಅಲ್ಲಿಗೆ ಮೇಲಿನ ಆರೋಪ ಠುಸ್ ಎಂದು ಪರಿಸಮಾಪ್ತಿಯಾಗುತ್ತದೆ."
ಎನ್ನಾರೈ ಎಂಬ ವ್ಯಾಖ್ಯಾನವನ್ನೇ ಸರಿಯಾಗಿ ಅರಿಯದೆ ಎನ್ನಾರೈಗಳ ಕಾರ್ಯಗಳನ್ನು ವಿಮರ್ಶಿಸಲು ಹೋಗುವುದು ಕೈಗೆಟುಕದ ದ್ರಾಕ್ಷಿ ಹುಳಿಯೆಂದಂತೆ ಎನ್ನಬಹುದೇ!
ಮೋದಿಯನ್ನು ಟೀಕಿಸುವ ಭರದಲ್ಲಿ, ಉರುಳುತ್ತಿರುವವನಿಗೆ ಹುಲ್ಲುಕಡ್ಡಿಯೂ ಆಸರೆ ಎಂಬಂತೆ ಆತನ ಪ್ರತಿಯೊಂದು ನಡೆಯನ್ನು ಟೀ(ತವ)ಕಿಸುವ ಭರದಲ್ಲಿ ಖುದ್ದು ಕಳೆದುಹೋಗಬೇಡಿ. "ಮತ್ತೊಮ್ಮೆ ಟ್ರಂಪ್" ಎಂದು ಟ್ರಂಪನನ್ನು ಬಿಜೆಪಿ ಅಭ್ಯರ್ಥಿ ಎಂಬಂತೆ ಮೋದಿ ಬಿಂಬಿಸಿದ್ದನ್ನು ಘನವಾಗಿ ಟೀಕಿಸಿ.
ವೃಷಣವ ಮಸ್ತಕವ ಮಾಡಿ
ತೃಣವ ಘನವೆನ್ನಿಸಿ
ಅರ್ಬುದದ ಬೀಜವ ಘನಲಿಂಗ ಮಾಡಿ
ಒಡ್ಡೋಲಗದಿ ಅದ್ಭುತ ಅತ್ಯದ್ಭುತವೆಂದು ಕೊಂಡಾಡುವ ತನು ವಿಕಾರಿ, ಮನ ವಿಕಾರಿಗಳ ಬೆವಹಾರವೆಪ್ಪುದೋ ಬಪ್ಪಾ ವಿಕಾರಲೋಕ ಸಂಚಾರಿ ಹಗೆದಿಬ್ಬೇಶ್ವರ!

ನವಸಮಾಜದ ಕನಸುಗಳು ಮತ್ತು ಜಂತು ನಿರ್ವಹಣೆ!

ಮಾನವ ಸಮಾಜ ಸೃಷ್ಟಿಯಾದಂದಿನಿಂದ ಆ ಕನಸುಗಳು ಹುಟ್ಟಿ ಕಾಲಕಾಲಕ್ಕೆ ನವೀಕರಣಗೊಳ್ಳುತ್ತಿವೆ. ಈಜಿಪ್ಟ್, ಮೆಸಪಟೋಮಿಯಾ, ಮತ್ತು ಸಿಂಧೂ ನದಿ ನಾಗರೀಕತೆಗಳಂತಹ ನಾಗರೀಕತೆಗಳು ಅಂತಹ ಕನಸುಗಳಿಂದಲೇ ಸೃಷ್ಟಿಯಾದದ್ದು. ಆ ನಂತರದ ಸಾಮ್ರಾಜ್ಯಗಳು, ಧಾರ್ಮಿಕ ಪಂಥಗಳು, ಭಿನ್ನಾಭಿಪ್ರಾಯ, ಕ್ರಾಂತಿಗಳೆಲ್ಲವೂ ಅಂತಹ ಕನಸುಗಳ ಫಲ.
ಭಾರತದ ಕಳೆದ ಐದು ಸಾವಿರ ವರ್ಷಗಳ ಇತಿಹಾಸವನ್ನು ಅವಲೋಕಿಸುತ್ತಾ, ವಿಶ್ಲೇಷಿಸುತ್ತ ನೋಡಿದಾಗ ಕಾಣುವುದು ಅನೇಕ ನವ ಸಮಾಜ ನಿರ್ಮಾಣದ ಕನಸುಗಳು ಮತ್ತವುಗಳನ್ನು ನನಸಾಗಿಸಲು ನಡೆಸಿದ ಪ್ರಯತ್ನಗಳು. ಆ ಪ್ರಯತ್ನಗಳಲ್ಲಿನ ಸಂಕಲ್ಪ, ವಿಕಲ್ಪ, ಸಾಕಾರ, ವಿಕಾರಗಳೆಲ್ಲದರ ನಡುವೆ ಸಮಾಜ, ವಿಕಸನದ ಸ್ಥಿತ್ಯಂತರವನ್ನು ಕಂಡರೂ ಸ್ಥಿತಪ್ರಜ್ಞತೆಯನ್ನು ಕಾಪಾಡಿಕೊಂಡು ಬಂದಿದೆ.
ಎಲ್ಲಾ ನವಸಮಾಜದ ಕನಸುಗಳು ಮೂಲತಃ ಭಾವನಾತ್ಮಕ ನೆಲೆಯಿಂದಲೇ ಆರಂಭವಾಗುವುದು. ಇದು ಚಂದ್ರಗುಪ್ತ ಮೌರ್ಯನ ರಾಷ್ಟ್ರೀಯತೆಯ ಕನಸಿರಬಹುದು, ಬ್ರಿಟಿಷರ ಸೂರ್ಯ ಮುಳುಗದ ಸಾಮ್ರಾಜ್ಯದ ಕನಸಿರಬಹುದು, ಅಮೆರಿಕನ್ನರ ಹಿರಿಯಣ್ಣನಾಗುವ ಕನಸಿರಬಹುದು, ಕುವೆಂಪುರವರ ವಿಶ್ವಮಾನವ ಸಂದೇಶ, ಜಾನ್ ಲೆನನ್ ನ ಡ್ರೀಮರ್ ಹಾಡು ಎಲ್ಲವೂ ಅತ್ಯುತ್ತಮ ಕನಸುಗಳೇ. ಈ ಕನಸುಗಳನ್ನು ಅನುಷ್ಠಾನಗೊಳಿಸಲು ವಾಸ್ತವಿಕ ನೆಲೆಗಟ್ಟಿನಲ್ಲಿ, ಒಂದು ಲಾಂಗ್ ಟರ್ಮ್ ನೀಲನಕಾಶೆಯನ್ನು ಸಿದ್ಧಪಡಿಸಿಟ್ಟುಕೊಂಡ ಕನಸುಗಳು ಸಾಕಾರಗೊಂಡಿವೆ. ಆದರೆ ಆ ನಿಶ್ಚಿತ ಮಾರ್ಗವರಿಯದ ಭಾವುಕ, ಭ್ರಾಮಕಗಳು ಉತ್ತಮ ಕತೆ, ಕವನ, ಮತ್ತು ಸಾಹಿತ್ಯವನ್ನು ಸೃಷ್ಟಿಸಿರುವವು.
ಇನ್ನು ನವ ಸಮಾಜದ ಕನಸುಗಳು ದೇಶಾತೀತವಾಗಿ ಎಲ್ಲೆಡೆ ಒಂದೇ ತೆರನಾಗಿ ಸಮಾಜಮುಖಿಯಾಗಿರುತ್ತವೆ. ಆದರೆ ಆ ಕನಸುಗಳಿಗೆ ಒಂದು ನಿರ್ದಿಷ್ಟ ರೂಪುರೇಷೆ, KPI, blueprint, ಇತ್ಯಾದಿ ಇತ್ಯಾದಿಗಳನ್ನು ರೂಪಿಸಿ ಅನುಷ್ಠಾನಗೊಳಿಸುವಲ್ಲಿನ ವ್ಯತ್ಯಾಸವೇ ಇಂದು ಭಾರತ ಮತ್ತು ಇತರೆ ಮುಂದುವರಿದ ದೇಶಗಳ ನಡುವಿನ ಬಹುದೊಡ್ಡ ವ್ಯತ್ಯಾಸ. ಆ ಗಮನಾರ್ಹ ವ್ಯತ್ಯಾಸ ನಮ್ಮಲ್ಲಿನ ಟೋಲ್ ರಸ್ತೆ, ಬಡಾವಣೆಗಳ ನಿರ್ಮಾಣ, ನಗರೀಕರಣ, ದೃಶ್ಯ ಮಾಧ್ಯಮ, ಪತ್ರಿಕೋದ್ಯಮ, ಮೆಟ್ರೋ, ಆರೋಗ್ಯವಿಮೆ, ಮಾಲ್ ಸಂಸ್ಕೃತಿ ಮುಂತಾದ ಪ್ರಗತಿಪಥವೆನ್ನಿಸುವ ಎಲ್ಲಾ ಬೆಳವಣಿಗೆಗಳ ಅನುಷ್ಠಾನದಲ್ಲಿ ಕಣ್ಣಿಗೆ ರಾಚುವಂತೆ ಕಾಣುತ್ತದೆ.
ಕೇವಲ ಐದಾರು ಪ್ರಮುಖ ಪಟ್ಟಣಗಳನ್ನು ತೋರಿ ಭಾರತ ಪ್ರಗತಿಯನ್ನು ಹೊಂದಿದೆ ಎನ್ನುವುದು ಎಷ್ಟು ಸರಿ!
ಇಂದು ಎಲ್ಲೆಡೆ ಜಂತುಹುಳು ನಿವಾರಣೆಯ ಅಭಿಯಾನ ನಡೆಯುತ್ತಿದೆ. ಈ ಜಂತುಹುಳುವಿನ ಸಮಸ್ಯೆ ಅಮೆರಿಕಾದಲ್ಲಿ ಹೇಗಿದೆ ಎಂದು ಕೆಲವರು ಕೇಳಿದ್ದರು. ಆ ಕುರಿತಾಗಿ ನನ್ನ ಅನುಭವ ಹೀಗಿದೆ.
ದಶಕದ ಹಿಂದೆ ನನ್ನ ಮಗನನ್ನು ಮಕ್ಕಳ ತಜ್ಞರಲ್ಲಿ ಕರೆದುಕೊಂಡು ಹೋಗಿ "ಇವನಿಗೆ ಈವರೆಗೆ ಜಂತಿನ ಔಷಧಿ ಕೊಟ್ಟಿಲ್ಲ ಕೊಡಿ" ಎಂದೆ. ಅರವತ್ತೈದರ ಆಸುಪಾಸಿನಲ್ಲಿದ್ದ ಆ ವೈದ್ಯರು ನನ್ನನ್ನು ಮೇಲಿನಿಂದ ಕೆಳಕ್ಕೆ ನೋಡಿ "ಹಾಗೆಂದರೇನು" ಎಂದು ಪ್ರಶ್ನಿಸಿದರು.
ನಾನು ರಿಬ್ಬನ್ ವರ್ಮ್, ಟೇಪ್ ವರ್ಮ್ ಎನ್ನುತ್ತಾರಲ್ಲ ಅದು ಎಂದೆ. ಆಗ ಆ ಡಾಕ್ಟರ್ ಏನನ್ನೋ ಜ್ಞಾಪಿಸಿಕೊಂಡಂತೆ "ಓಹ್, ನನ್ನ ಅಜ್ಜ ತಾನು ಚಿಕ್ಕವನಿದ್ದಾಗ ಈ ರೀತಿಯ ಸಮಸ್ಯೆ ಇತ್ತೆಂದೂ, ನಂತರ ಅದು ದೇಶಾದ್ಯಂತ ನಿವಾರಣೆಯಾಗಿದೆ ಎಂದು ನನಗೊಮ್ಮೆ ಹೇಳಿದ್ದರು. ಮೈ ಡಿಯರ್ ಯಂಗ್ ಮ್ಯಾನ್, ಈಗೇನಾದರೂ ನಿಮಗೆ ಆ ಸಮಸ್ಯೆ ಬಂದರೆ ಅಮೆರಿಕಾದ ಎಲ್ಲಾ ಆಹಾರ ಸಂಸ್ಥೆಗಳ ಮೇಲೆ ಕೇಸ್ ಹಾಕಿ ಕೋಟಿ ಕೋಟಿ ಪರಿಹಾರ ಗೆಲ್ಲಬಹುದು" ಎಂದು ನಸುನಕ್ಕರು.
ಈ ಜಂತು ಕ್ರಿಯೆ ಕೇವಲ ಅಂತಹ ನವ ಸಮಾಜದ ಕನಸನ್ನು ಸಾಕಾರಗೊಳಿಸಿಕೊಂಡ ಪ್ರಕ್ರಿಯೆಯ ಪರಿ ಎರಡು ದೇಶಗಳ ನಡುವೆ!