ಹರ್ಬಲ್, ಅರ್ಬನ್ ನಕ್ಸಲ್

ಯಾವುದೇ ದೇಶದ ಸಂವಿಧಾನಗಳು ಉಸಿರಾಡುವ ಜೀವಂತ ದಸ್ತಾವೇಜುಗಳು. ಕಾಲಕ್ಕನುಗುಣವಾಗಿ ಹೊಸತಾಗುತ್ತ ಬದಲಾಗಲೆಂಬ ಉದ್ದೇಶಕ್ಕಾಗೆ ರಚಿಸಲ್ಪಟ್ಟಿವೆ.

ನ್ಯಾಯಾಂಗ, ಶಾಸಕಾಂಗ ಮತ್ತು ಆಡಳಿತ ವರ್ಗ ಸಂವಿಧಾನದ ಭಾಗಗಳನ್ನು ಜಡವಾಗಿರಿಸದೆ ವರ್ತಮಾನದ ಅವಶ್ಯಕತೆಗೆ ತಕ್ಕಂತೆ ಬದಲಾಯಿಸಿ ಕ್ರಿಯಾಶೀಲವಾಗಿರಿಸಬೇಕೆಂಬುದೇ ಸಂವಿಧಾನ ರಚನೆಯ ಮೂಲೋದ್ದೇಶ.

ಜೀವಂತ ಸಮಾಜಕ್ಕೆ ತಕ್ಕಂತೆ ವಿಕಸಿಸುವ ವೈಜ್ಞಾನಿಕ ಅನುಶಾಸನವಿರಬೇಕೇ ಹೊರತು ಶಾಸ್ತ್ರಪುರಾಣಗಳಂತಹ  ಜಡಗ್ರಂಥವಲ್ಲ!

ಇದು ವುಡ್ ರೋ ವಿಲ್ಸನ್ 1912ರಲ್ಲೇ ಪ್ರತಿಪಾದಿಸಿದ್ದು.

2018ರ ಪ್ರಕಾಶಿಸುತ್ತಿರುವ ಭಾರತದಲ್ಲಿ ಅರ್ಬನ್ ನಕ್ಸಲ್, ಹರ್ಬಲ್ ನಕ್ಸಲ್, ಕಮ್ಯುನಿಸ್ಟ್ ಮತ್ತು ಜಡ ಸಂವಿಧಾನ ಪ್ರತಿಪಾದಕರು ಫ್ಯಾಸಿಸ್ಟ್ ಅಮೆರಿಕಾದ ಐಫೋನು, ಐಪ್ಯಾಡು, ಫೇಸ್ಬುಕ್, ಗೂಗಲ್ ಬಳಸುತ್ತಾ ಏನನ್ನು, ಹೇಗೆ, ಯಾರಿಗೆ ಪ್ರತಿಪಾದಿಸುತ್ತಿದ್ದಾರೆ?!

ಇವರೆಲ್ಲ ಉದಾರವಾದಿಗಳಲ್ಲ, ಉದಾರವಾದ ಕಮ್ಯುನಿಸ್ಟ್, ನಕ್ಸಲ್, ಜಡ ಸಮಾಜವಾದವಂತೂ ಅಲ್ಲವೇ ಆಲ್ಲ!

ಸದ್ಯದ ಭಾರತದ ತುರ್ತು, ಅಪಹರಣಕ್ಕೊಳಗಾಗಿರುವ ಉದಾರವಾದ ಮತ್ತು ಸ್ಟಾಕ್ ಹೋಮ್ ಸಿಂಡ್ರೋಮಿಗೊಳಗಾಗಿರುವ ಉದಾರವಾದಿಗಳನ್ನು ಈ ಎಡಬಿಡಂಗಿತನದಿಂದ ಬಿಡಿಸುವುದು.

#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ
#ಕರ್ನಾಟಕವೆಂಬೋಕಮಂಗಿಪುರದಲ್ಲಿ

ಕನ್ನಡಿಗನಿವ ಹೊರಗಣದವನು!

Image may contain: Ravi Hanj

ಅಮೇರಿಕಾದ ಡಲ್ಲಾಸ್ ನಗರದಲ್ಲಿ ನಡೆಯುತ್ತಿರುವ ಅಕ್ಕ ಸಮ್ಮೇಳನದ ಹಿನ್ನೆಲೆಯಲ್ಲಿ ಹೊರನಾಡಿನೆಲ್ಲ ಕನ್ನಡಿಗರನ್ನೊಳಗೊಂಡು ಕರ್ನಾಟಕ ರಾಜ್ಯ ಹೇಗೆ ಜಾಗತೀಕರಣವನ್ನು ಒಳಗೊಳ್ಳುತ್ತಾ ಸಮಾಜಮುಖಿಯಾಗುವೆಡೆಗೆ ಇರುವ ಆಶಯ, ನಿರೀಕ್ಷೆ, ಸಮಸ್ಯೆ, ಪರಿಹಾರಗಳನ್ನು ವಿಶ್ಲೇಷಿಸಿ ನೋಡೋಣ.

ಬದಲಾಗುತ್ತಿರುವ ಜಾಗತೀಕರಣದ ದೆಸೆಯಿಂದ ಒಂದೊಮ್ಮೆ ಇಲೈಟ್ ಜನಾಂಗವೆನಿಸಿದ್ದ ಎನ್ನಾರೈಗಳು ಇಂದು ಕನ್ನಡನಾಡಿನ ಸಾಮಾನ್ಯ ಮಧ್ಯಮವರ್ಗದ ಹೊರನಾಡ ಪ್ರತಿನಿಧಿಗಳಾಗಿದ್ದಾರೆ. ತಮ್ಮ ಕೈಲಾದಷ್ಟು ಮಟ್ಟಿಗೆ ನಾಡು ನುಡಿಗಾಗಿ ಕನ್ನಡ ಸಂಘಗಳನ್ನು ಕಟ್ಟಿಕೊಂಡು ಹೊರದೇಶಗಳಲ್ಲಿ ತಮ್ಮ ಭಾಷೆ, ಸಂಸ್ಕೃತಿಗಳನ್ನು ಉಳಿಸಿ ತಮ್ಮ ಮುಂದಿನ ಪೀಳಿಗೆಗೆ ದಾಟಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಅದಲ್ಲದೇ ತವರುನಾಡಿನ ಕೆಲ ಸಮಸ್ಯೆಗಳಿಗೆ ಸ್ಪಂದಿಸುತ್ತಾ ತಮ್ಮದೇ ಆದ ರೀತಿಯಲ್ಲಿ ಸಹಾಯಹಸ್ತ ಚಾಚುತ್ತಿದ್ದಾರೆ. ಇದು ಕೆಲವು ಗ್ರಾಮಗಳನ್ನು, ಶಾಲೆಗಳನ್ನು ದತ್ತು ತೆಗೆದುಕೊಳ್ಳುವ ವಿಚಾರವಿರಬಹುದು ಅಥವಾ ಕೆಲವು ಸಮಾಜಸೇವಾ ಸಂಸ್ಥೆಗಳಿಗೆ ದೇಣಿಗೆ ನೀಡುವುದಿರಬಹುದು. ಒಟ್ಟಾರೆ ತಾಯ್ನಾಡಿನ ಸಮಸ್ಯೆಗಳಿಗೆ ಸದಾ ಮನ ಮಿಡಿಯುವ ಈ ವರ್ಗಕ್ಕೆ ಕೂಡಾ ಹಲವಾರು ಸಮಸ್ಯೆಗಳಿವೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು! ’ಅ’ನಿವಾಸದ ದೆಸೆಯಿಂದ ತಮ್ಮ ತಮ್ಮ ಸಮಸ್ಯೆಯನ್ನು ಬೇರೆಯವರಲ್ಲಿ ಚರ್ಚಿಸುವ ದೇಸೀ ಗುಣವನ್ನು ಮರೆತುಬಿಟ್ಟಿರುವ ಈ ವರ್ಗದ ಸಮಸ್ಯೆಗಳು ಹೆಚ್ಚಾಗಿ ಚರ್ಚಿತವಾಗಿಲ್ಲ ಮತ್ತು ಮುಖ್ಯವಾಗಿ ಒಳನಾಡಿನ ಜನತೆಗೆ ಇವರ ಸಮಸ್ಯೆಗಳ ಪರಿಚಯ ಅಷ್ಟಾಗಿ ಕಂಡಿಲ್ಲ.

ಇವರಿಗೆ ಇವರದೇ ಆದ ಕೆಲ ಸಂಕೀರ್ಣ ಸಮಸ್ಯೆಗಳಿವೆ. ಸದ್ಯಕ್ಕೆ ಆ ಸಂಕೀರ್ಣ ಸಮಸ್ಯೆಗಳಿಗೆ ಇಲ್ಲಿಯ ವ್ಯವಸ್ಥೆಯಲ್ಲಿಯೇ ಪರಿಹಾರ ಕಂಡುಕೊಳ್ಳಬೇಕಾಗಿದೆ. ಹಾಗಾಗಿ ಯಾವ ಸಮಸ್ಯೆಗಳಿಗೆ  ಒಳನಾಡಿನ ಸ್ಪಂದನೆ ಅವಶ್ಯವೋ ಅಂತಹ ಸಮಸ್ಯೆಗಳನ್ನು ತಿಳಿದುಕೊಳ್ಳೋಣ. ಈ ಸಾಮಾನ್ಯ ಸಮಸ್ಯೆಗಳಿಗೆ ಒಳನಾಡಿನ ರಾಜ್ಯಾಡಳಿತದ ಸ್ಪಂದನೆ ಅಗತ್ಯವಾಗಿ ಬೇಕಿದೆ.

ಹಲವು ಬಾರಿ ವಿದಾರ್ಥಿಗಳು, ವೃತ್ತಿನಿರತರು ಅಪಘಾತಗಳಲ್ಲಿ ನಿಧನ ಹೊಂದಿದಾಗ ಅವರ ಮೃತದೇಹಗಳನ್ನು ತಾಯ್ನಾಡಿಗೆ ಕಳುಹಿಸುವ ಅಥವಾ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸಹಾಯಿಸುವ ಒಂದು ಅಧಿಕೃತ ಸಂಸ್ಥೆಯಿಲ್ಲದೇ ಸಾಕಷ್ಟು ಅನಿವಾಸಿಗಳು ನೋವು ಅನುಭವಿಸುತ್ತಿದ್ದಾರೆ. ಅದೆಷ್ಟೋ ಅನಿವಾಸಿಗಳು ಪ್ರತಿ ತಿಂಗಳೂ ತಮ್ಮ ಅಗತ್ಯಕ್ಕೆಷ್ಟು ಬೇಕೋ ಅಷ್ಟು ಹಣವನ್ನಿಟ್ಟುಕೊಂಡು ಉಳಿದೆಲ್ಲಾ ಹಣವನ್ನು ಭಾರತದ ತಮ್ಮ ತಮ್ಮ ಬ್ಯಾಂಕುಗಳಲ್ಲಿಯೋ ಅಥವಾ ತಮ್ಮ ಅವಲಂಬಿತ ಕುಟುಂಬ ಸದಸ್ಯರುಗಳ ಬಳಿಯೋ ಇರಿಸಿ ಜೀವನ ನಡೆಸುತ್ತಿರುತ್ತಾರೆ. ಹಾಗಿದ್ದವರು ಧಿಡೀರನೆ ಇಲ್ಲಿ ಸತ್ತಾಗ ಅವರ ಅಂತಿಮಸಂಸ್ಕಾರಕ್ಕೂ ಹಣವಿಲ್ಲದೇ ಗೋ-ಫಂಡ್-ಮಿ ವಂತಿಗೆ ಧರ್ಮಾರ್ಥವಾಗಿ ಅಂತಿಮಸಂಸ್ಕಾರಗೊಂಡ ಅನೇಕ ಪ್ರಸಂಗಗಳನ್ನು ಕಂಡಿದ್ದೇನೆ. ವೀರಯೋಧ ಮಡಿದಾಗ ದೊರಕುವ ಅಂತಿಮ ಸಂಸ್ಕಾರ ಭಾಗ್ಯದಂತೆಯೇ ಅನಿವಾಸಿಗಳಿಗೂ ಆ ಭಾಗ್ಯ ಬೇಕೆನಿಸುತ್ತದೆ. ಸಾಕಷ್ಟು ವಿದೇಶೀ ವಿನಿಮಯವನ್ನು ತಂದುಕೊಡುವುದಲ್ಲದೇ, ಒಂದು ಸಂಸಾರದ ಭಾರವನ್ನು ಹಗುರಾಗಿಸಿ ಭದ್ರತೆಯನ್ನೊದಗಿಸುವ, ತನ್ನ ಅನುಪಸ್ಥಿತಿಯಿಂದ ಇನ್ನೋರ್ವ ಒಳನಾಡಿಗನೊಂದಿಗಿನ ಸ್ಪರ್ಧೆಯನ್ನು ಇಲ್ಲವಾಗಿಸುವ, ಭಾರತದ ಕಾರ್ಬನ್ ಪ್ರಿಂಟ್ ಕಡಿಮೆ ಮಾಡುವ ಅನಿವಾಸಿಗೆ ತವರು ಸರ್ಕಾರಗಳು ಕನಿಷ್ಟ ಆತನಿಗೆ ಒಂದು ಸಂಸ್ಕಾರಭಾಗ್ಯವನ್ನಾದರೂ ಒದಗಿಸಬೇಕು.

ಇಂದು ಕೊಲ್ಲಿ ರಾಷ್ಟ್ರಗಳಲ್ಲಿನ ಉದ್ಯೋಗಿಗಳು ತಮ್ಮ ಅವಲಂಬಿತ ಕುಟುಂಬದವರ ಮೇಲೆ ಹೇರಲಾದ ಅವಲಂಬಿತರ ತೆರಿಗೆಯ ಹೊರೆಗೆ ತಮ್ಮ ಕುಟುಂಬ ಸದಸ್ಯರನ್ನು ತವರಿಗೆ ಕಳುಹಿಸುತ್ತಿರುವುದಲ್ಲದೇ ತಾವೂ ಉದ್ಯೋಗ ತೊರೆದು ತಾಯ್ನಾಡಿಗೆ ಹಿಂದಿರುಗುತ್ತಿದ್ದಾರೆ. ಆ ರೀತಿ ಹಿಂದಿರುಗಿ ಬಂದವರು ತಮ್ಮ ಅನುಪಸ್ಥಿತಿಯಲ್ಲಿ ಆದ ಒಳನಾಡಿನ ಸಾಮಾಜಿಕ ಬದಲಾವಣೆಗೆ ಹೊಂದಿಕೊಳ್ಳುವ ಪ್ರಕ್ರಿಯೆಯಲ್ಲಿ ಮಾನಸಿಕವಾಗಿ ಕುಗ್ಗುತ್ತ ತಮ್ಮ ನಾಡಿನಲ್ಲೇ ಅತಂತ್ರರಾಗುತ್ತಿದ್ದಾರೆ.  ಸೆರೆವಾಸದಿಂದ ಬಿಡುಗಡೆ ಹೊಂದಿದವರಿಗೂ ಸಮಾಜದ ಮುಖ್ಯವಾಹಿನಿಗೆ ತರಲು ಕೌನ್ಸಿಲಿಂಗ್ ಇದೆ. ಆದರೆ ಅನಿವಾಸಿ ಹಿಂದಿರುಗಿದಾಗ ಈ ರೀತಿಯ ಯಾವುದೇ ಕೌನ್ಸಿಲಿಂಗ್ ಸೌಲಭ್ಯ ಇಲ್ಲ!

ಇನ್ನು ನಾನು ಬಲ್ಲ ಅನೇಕ ಅನಿವಾಸಿ ಮಿತ್ರರು ತಾಯ್ನಾಡಿನ ಅನೇಕ ಉದ್ದಿಮೆ, ಕೃಷಿ, ರಿಯಲ್ ಎಸ್ಟೇಟ್ ಗಳಲ್ಲಿ ಬಂಡವಾಳ ಹೂಡಿ ಮೋಸಹೋಗಿದ್ದಾರೆ. ಇಲ್ಲಿ ಮೋಸ ಹೋಗಿರುವುದು, ತಮಗೆ ಸಾಕಷ್ಟು ಕಾನೂನು ಕ್ರಮ ಕೈಗೊಳ್ಳಲು ರಜೆ/ಸಮಯ ಮತ್ತು ಮಾರ್ಗದರ್ಶನಗಳ ಅಭಾವವೆಂಬ ಯಕಶ್ಚಿತ್ ಕಾರಣಗಳಿಗಾಗಿ ಎಂಬುದು ವಿಶೇಷ! ಅದಲ್ಲದೆ ತಮ್ಮ ಆಸ್ತಿಗಳು ಮೋಸದಿಂದ ಪರಭಾರೆಯಾಗಿ ಮನೆಮಠ ಕಳೆದುಕೊಂಡು ಪರದೇಶವನ್ನೇ ತಮ್ಮದೆಂದು ಗಟ್ಟಿಯಾಗಿ ಅಪ್ಪಿಕೊಳ್ಳುತ್ತಾ ತಾಯ್ನಾಡನ್ನು ಪರದೇಶವೆಂದು ಪರಿಗಣಿಸಿದವರು ಸಾಕಷ್ಟಿದ್ದಾರೆ. ಒಟ್ಟಾರೆ ಒಳನಾಡಿನಲ್ಲಿ ಬಂಡವಾಳ ಹೂಡುವ ವ್ಯಕ್ತಿಗತ ’ಅನಿವಾಸಿ’ಯನ್ನು ಬಕ್ರೀದ್ ಕುರಿಯಂತೆ ’ನಿವಾಸಿ’ಗಳು ಕಾಣುತ್ತಾರೆಂಬ ಅಪನಂಬಿಕೆಯನ್ನು ಇಂತಹ ಘಟನೆಗಳು ಸೃಷ್ಟಿಸಿವೆ.

ಇಂತಹ ಅನೇಕ ವೈಯಕ್ತಿಕ, ಸಾಮಾಜಿಕ, ರಾಜಕೀಯ, ಕಾನೂನಾತ್ಮಕ ಸಮಸ್ಯೆಗಳು ಅನಿವಾಸಿಗಳ ಸಮಸ್ಯೆಗಳೇ ಹೊರತು ರಾಜ್ಯದ ಜನತೆಯ ಸಮಸ್ಯೆಯಲ್ಲ ಎಂಬಂತಾಗಿದೆ. ಹಲವಾರು ಅನಿವಾಸಿ ಕನ್ನಡ ಸಂಸ್ಥೆಗಳು ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸಹಾಯಹಸ್ತ ಚಾಚಿದರೂ ಅದು ಅಧಿಕೃತವೆನಿಸದೇ ಅನುಕಂಪದ ಧರ್ಮಾರ್ಥವೆನಿಸುತ್ತದೆ. ಹೀಗಿದ್ದಾಗ ಏನೇ ಸಾಂಸ್ಕೃತಿಕ ಸಮಾವೇಶ/ಸಮ್ಮೇಳನಗಳು ನಡೆದರೂ, ಅವು ಬಂದು ಹೋಗುವ ಹಬ್ಬಗಳಾಗಿ ಸಂಭ್ರಮ ಮೂಡಿಸುತ್ತವೆಯೇ ಹೊರತು ಅನಿವಾಸಿಗಳಿಗೆ ತಮ್ಮ ತವರಿನ ವಾಸ್ತವ ಸ್ಪಂದನವನ್ನಲ್ಲ!

ಹಾಗಾಗಿ ಹೊರನಾಡ ಕನ್ನಡಿಗರ ಸಂಘಗಳು, ಚಟುವಟಿಕೆಗಳು ಭಾವುಕ ಸಾಂಸ್ಕೃತಿಕ ಸದಾಶಯಗಳನ್ನು ವ್ಯಕ್ತಪಡಿಸುವ, ವೇದಿಕೆಗಳೆನಿಸುತ್ತವೆಯೇ ಹೊರತು ಸ್ಪಂದನಾತ್ಮಕ ವೇದಿಕೆಗಳಾಗಿಯಲ್ಲ. ಇಂತಹ ವೇದಿಕೆಗಳಲ್ಲಿ ವ್ಯಕ್ತವಾಗದ ಸಾಕಷ್ಟು ಗುಪ್ತಗಾಮಿನೀ ಸದಾಶಯಗಳಿಗೆ ಅನುಷ್ಟಾನ ಪ್ರಕ್ರಿಯೆಗಳ ರೂಪು ಕೊಡುತ್ತಾ ಸ್ಪಂದನಾತ್ಮಕ ಯೋಜನೆಗಳಾಗಿಸುವತ್ತ ಇಂದು ಚಿತ್ತ ಹರಿಸಬೇಕಾಗಿದೆ. ಒಳನಾಡು ಮತ್ತು ಹೊರನಾಡು ಕನ್ನಡಿಗರ ನಡುವಿನ ಸಂಪರ್ಕಸೇತುವೆಗಿಂತ ಬಹುಮುಖ್ಯವಾಗಿ ಪರಸ್ಪರ ಏಕೀಕರಿಸಬೇಕಾದ ತುರ್ತಿದೆ.

ಒಬ್ಬ ಹೊರನಾಡ ಕನ್ನಡಿಗನಾಗಿ ಈ ನಿಟ್ಟಿನಲ್ಲಿ ತವರು ರಾಜ್ಯದಿಂದ ನಾನು ನಿರೀಕ್ಷಿಸುವ ನಿರೀಕ್ಷೆಗಳೇನೆಂದರೆ ಹೊರನಾಡ ಕನ್ನಡಿಗರ ಹಿತಾಸಕ್ತಿ ರಕ್ಷಣೆಗೆ ರಾಜ್ಯ ಸರ್ಕಾರ ಕೆಲವು ಮಹತ್ತರ ಹೆಜ್ಜೆಗಳನ್ನಿಡಬೇಕು.  ಈ ಒಳಗೊಳ್ಳುವ ಪ್ರಕ್ರಿಯೆಯಾಗಿ ಹೊರನಾಡ ಕನ್ನಡಿಗರಿಗಾಗಿಯೇ ಒಂದು ನಿಗಮ ರಚನೆ, ವಿಧಾನ ಪರಿಷತ್ತಿನ ಸದಸ್ಯತ್ವ, ಮತ್ತು ಯಾವುದಾದರೂ ಕನ್ನಡ ವಿಶ್ವವಿದ್ಯಾಲಯದಲ್ಲಿ ಹೊರನಾಡ ಕನ್ನಡಿಗರ ಅಧ್ಯಯನ ಪೀಠ ಸ್ಥಾಪನೆ ಇವುಗಳ ರಚನೆಯಾದಾಗ ಮಾತ್ರ ಈ ಒಳಗೊಳ್ಳುವ ಪ್ರಕ್ರಿಯೆಗೆ ಅರ್ಥ ಬರುತ್ತದೆ.

ಅಂತಹ ನಡೆಯ ಪ್ರಥಮ ಹೆಜ್ಜೆಯಾಗಿ ಅನಿವಾಸಿ ಕನ್ನಡಿಗರ ಹಿತಾಸಕ್ತಿ ನಿಗಮ ಸ್ಥಾಪಿಸಬೇಕಾಗಿದೆ. ಆ ನಿಗಮಕ್ಕೆ ಎನ್ನಾರೈ ಆದ ಭಾರತೀಯ ನಾಗರೀಕರು ಯಾ ಸಾಗರೋತ್ತರ ನಾಗರೀಕರು ಮಾತ್ರ ಸದಸ್ಯರಾಗಿರಬೇಕು. ಇಲ್ಲಿ ಎನ್ನಾರೈ ಅರ್ಹತೆ ಕಡ್ಡಾಯ. ಇದರ ಆಡಳಿತ ಮಂಡಲಿಯ ಅಧ್ಯಕ್ಷರು ಮಾತ್ರ ’ಸಾಗರೋತ್ತರ ನಾಗರೀಕ’ರಾಗಿರಬೇಕು. ಯಾವುದೇ ಕಾರಣಕ್ಕೂ ಅನಿವಾಸಿ (ಎನ್ನಾರೈ) ನಿವಾಸಿ (ಆರೈ) ಆದೊಡನೇ ಅವರ ಸದಸ್ಯತ್ವ ಅನರ್ಹಗೊಳ್ಳಬೇಕು. ಈ ನಿಯಮದಿಂದ ತತ್ಕಾಲಿಕವಾಗಿ ಎನ್ನಾರೈ ಆಗಿ, ನಂತರ ಇಲ್ಲಿಯೇ ಬೇರೂರುವ ಬಯಕೆಯ ರಾಜಕಾರಣೀ ಉದ್ದೇಶ ಸಾಧ್ಯತೆಯನ್ನು ನಿವಾರಿಸುತ್ತದೆ.  ಈ ರೀತಿಯ ಸ್ಪಷ್ಟ ರೂಪುರೇಷೆಗಳೊಂದಿಗೆ, ನಿಯಂತ್ರಣ/ಸಮತೋಲನಗಳ ಅಳವಡಿಕೆಯಿಂದ ನಿಗಮವನ್ನು ಯಶಸ್ವಿಗೊಳಿಸಬಹುದು.

ಎರಡನೆಯದಾಗಿ, ನಿಗಮದೊಟ್ಟಿಗೆ ’ಭಾರತೀಯ ನಾಗರೀಕ’ ಅನಿವಾಸಿ ಕನ್ನಡಿಗರೋರ್ವರನ್ನು (ಪದವೀಧರ ಕ್ಷೇತ್ರದ ಮಾದರಿ) ವಿಧಾನಪರಿಷತ್ತಿಗೆ ಆಯ್ಕೆ ಮಾಡಬೇಕು. ಇದರಿಂದ ಹೊರನಾಡ ಕನ್ನಡಿಗರ ಆಶಯ, ಸಮಸ್ಯೆಗಳನ್ನು ಸಮಾಜದ ಮುಖ್ಯವಾಹಿನಿಗೆ ತಂದಂತಾಗುತ್ತದೆ. ಹೊರನಾಡ ಕನ್ನಡಿಗರಿಗೂ ರಾಜ್ಯಾಡಳಿತದಲ್ಲಿ ತಮ್ಮನ್ನು ಪ್ರತಿನಿಧಿಸುವ ಪ್ರತಿನಿಧಿಯೊಬ್ಬನಿದ್ದಾನೆಂಬ ಭದ್ರತೆಯ "ಒಳಗೊಂಡ" ಭಾವನೆ ಮೂಡುತ್ತದೆ.

ಈ ಒಳ ಹೊರ ನಿವಾಸಿಗಳ ಜೋಡಣೆಗೆ ಗುಜರಾತ್, ಆಂಧ್ರ/ತೆಲಂಗಾಣ ಸರ್ಕಾರಗಳಾಗಲೇ ಇಂತಹ ನಿಗಮಗಳನ್ನು ಸ್ಥಾಪಿಸಿ ಅನಿವಾಸಿಗಳಿಗೆ ಆಧಾರ್/ಪ್ಯಾನ್ ಮತ್ತಿತರೆ ಸರ್ಕಾರಿ ಗುರುತುಪತ್ರಗಳನ್ನೊದಗಿಸುವ ಸೇವೆ, ಆಸ್ತಿಪತ್ರ/ದಾಖಲೆಗಳ ಸೇವೆ, ಅನಿವಾಸಿಗಳ ಆಸ್ತಿಯನ್ನು ಯಾರಾದರೂ ಕಬಳಿಸಿದ್ದರೆ ಕಾನೂನು ಕ್ರಮ ಕೈಗೊಳ್ಳುವ ಸೇವೆಗಳನ್ನೊದಗಿಸುತ್ತಿವೆ. ಅದಲ್ಲದೆ ನಿಗಮದ ನಿರ್ವಹಣೆಗೆ ಕೇವಲ ಸರ್ಕಾರಿ ಅನುದಾನವನ್ನು ನೆಚ್ಚಿಕೊಳ್ಳದೆ, ನಿಗಮಕ್ಕೆ ಲಾಭ ತರುವ ಸೇವೆಗಳಾದ ಅನಿವಾಸಿಗಳ ವೃದ್ಧ ಪೋಷಕರ ಆರೋಗ್ಯಸೇವೆ, ಆರೋಗ್ಯವಿಮೆ, ತೆರಿಗೆ ಸಲಹೆ, ಪ್ರವಾಸಗಳ ಪ್ಯಾಕೇಜ್, ಮತ್ತು ಅನಿವಾಸಿಗಳ ಬಂಡವಾಳವನ್ನು ಆಕರ್ಷಿಸುವ ಬಹುಮುಖ ಯೋಜನೆಗಳನ್ನು ಈ ನಿಗಮಗಳು ನಿಭಾಯಿಸುತ್ತ ಲಾಭಕರವಾಗಿವೆ.  ಅದಲ್ಲದೇ ಈ ನಿಗಮವು ರಾಜ್ಯದ ಉತ್ಪಾದನೆಗಳಿಗೆ ತನ್ನ ಸದಸ್ಯರ ಮೂಲಕ ಅಂತರರಾಷ್ಟ್ರೀಯ ಮಾರುಕಟ್ಟೆಯನ್ನು ತೆರೆದುಕೊಡುವ ಸಾಕಷ್ಟು ಸಾಧ್ಯತೆಯಿದ್ದು ಒಳನಾಡ ಕನ್ನಡಿಗರ ಕಲೆ, ಕರಕುಶಲ, ಕೃಷಿ ಉತ್ಪನ್ನಗಳಿಗೆ ಹೊಸ ಹೊಸ ಮಾರುಕಟ್ಟೆಗಳ ಆಯಾಮವನ್ನೊದಗಿಸಬಹುದು ಕೂಡ!

ಇನ್ನು ರಾಜ್ಯಕ್ಕೆ ರಜೆಯ ಮೇಲೆ ಬರುವ ಅನಿವಾಸಿ ಸದಸ್ಯರುಗಳಿಂದ ಅವರವರ ಪರಿಣಿತಿ, ಅನುಭವಗಳನ್ನು ಹಂಚಿಕೊಳ್ಳುವ ವೇದಿಕೆಯನ್ನೊದಗಿಸಿ ರಾಜ್ಯದ ಯುವಜನತೆಗೆ, ಆಸಕ್ತರಿಗೆ ಮಾರ್ಗದರ್ಶನ ಮಾಡಿಸಬಹುದು. ಹಲವಾರು ಬಾರಿ ಮಾಹಿತಿಯ ಕೊರತೆಯಿಂದ ತಮ್ಮದಲ್ಲದ ತಪ್ಪಿಗೆ ವಿದೇಶಗಳಲ್ಲಿ ಜೈಲುಶಿಕ್ಷೆ ಅನುಭವಿಸಿದ ಸಾಕಷ್ಟು ನಿದರ್ಶನಗಳಿವೆ. ಒಮ್ಮೆ ಅನಿವಾಸಿಯೋರ್ವರ ವೃದ್ಧ ತಂದೆ ವಿಮಾನದೊಳಗೆ ತನ್ನೆದುರು ನಗುತ್ತ ಬಂದ ಬಿಳಿಯರ ಮಗುವಿನ ಗಲ್ಲ ಹಿಡಿದು ಮುದ್ದಿಸಿದ್ದು ಶಿಶುಕಾಮಪೀಡನೆಯ ದೂರು ಆಗಿ ವಿಮಾನದಿಂದಿಳಿದೊಡನೆ ಆ ವೃದ್ಧರು ಬಂಧನಕ್ಕೀಡಾಗಿದ್ದನ್ನು ಕಣ್ಣಾರೆ ಕಂಡಿದ್ದೇನೆ. ಇಂತಹ ಅನೇಕ ಬೇಡದ ಸಂದರ್ಭಗಳನ್ನು ಈ ಮಾಹಿತಿ ಹಂಚಿಕೆಯ ವೇದಿಕೆ ನಿವಾರಿಸಬಹುದು.

ಒಟ್ಟಾರೆ ಒಳ/ಹೊರನಾಡಿನ ಕನ್ನಡಿಗರನ್ನು ಹೆಚ್ಚು ಹೆಚ್ಚು ಒಳಗೊಳ್ಳುವ ಪ್ರಕ್ರಿಯೆಯ ಸಾಧ್ಯತೆಗಳು ಈ ನಿಗಮ ರಚನೆಯಿಂದ ದಟ್ಟವಾಗುವ ಸಾಧ್ಯತೆಗಳೇ ಹೆಚ್ಚಾಗಿವೆ. ಉತ್ಪಾದಕ-ಗ್ರಾಹಕ, ಕಲಾವಿದ-ಕಲೋಪಾಸಕ, ಬೋಧಕ-ಆಸಕ್ತ, ಉದ್ಯಮಿ-ಉದ್ಯೋಗಿ, ಇತ್ಯಾದಿ ಇತ್ಯಾದಿಗಳ ಬೆಸೆಯುವ ಒಂದು ಬೃಹತ್ ನಿರಂತರ ವೇದಿಕೆಯಾಗಿ ಈ ನಿಗಮವು ಯಶಸ್ವಿಯಾಗುವ ಲಕ್ಷಣಗಳು ಹೆಚ್ಚಾಗಿವೆ. ಇಂತಹ ಸಾಧ್ಯತೆಯನ್ನು ಕಂಡೇ ಗುಜರಾತ್, ಆಂಧ್ರ, ತೆಲಂಗಾಣ, ಮತ್ತಿತರೆ ರಾಜ್ಯಗಳು ಈಗಾಗಲೇ ಈ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿವೆ.

ಇದು ನನ್ನ ಸಾಧ್ಯವಾಗಿಸಬಹುದಾದ ಸಾಮಾನ್ಯ ನಿರೀಕ್ಷೆ, ಒಳ ಮತ್ತು ಹೊರನಾಡಿನ ಕನ್ನಡಿಗರನ್ನು ಬೆಸೆಯಬಹುದಾದ ವಾಸ್ತವಿಕ ಪ್ರಸ್ತಾವ! ಪರಸ್ಪರ ಕೊಡುಕೊಳ್ಳುವಿಕೆಯ ಬುನಾದಿಯ ಭಾಗ್ಯಗಳ ಪಕ್ಷಗಳ ಸಮ್ಮಿಶ್ರ ಸರ್ಕಾರವಿರುವ ಪ್ರಚಲಿತ ಕಾಲಘಟ್ಟದಲ್ಲಿ, ಕೊಡುಕೊಳ್ಳುವಿಕೆಯ ಪರಸ್ಪರ ಲಾಭದಾಯಕವಲ್ಲದೇ ಹೊರ/ಒಳನಾಡ ಕನ್ನಡಿಗರನ್ನು ಬೆಸೆಯಬಲ್ಲ ನನ್ನ ಈ ಸಮ್ಮಿಶ್ರ ನಿರೀಕ್ಷೆ ಈಡೇರುವುದೆ?

#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ