ಭಾರತ ಒಂದು ಮರುಶೋಧನೆ ಕುರಿತ ಜಟಾಪಟಿ!

ದಾಕ್ಷಾಯಿಣಿ ಹುಡೇದ್ ಅವರು ವೃತ್ತಿಯಲ್ಲಿ ಶಾಲಾ ಶಿಕ್ಷಕಿ. ಎಡಪಂಥ ಚಿಂತನಧಾರೆಗಳ ಬಗ್ಗೆ ಒಲವಿರುವ ಇವರು ಹಲವಾರು ಜೀವಪರ, ಬಹುತ್ವದ ಕುರಿತಾದ ಚಿಂತನೆಯನ್ನು ಯಾವುದೇ ದ್ವಂದ್ವವಿಲ್ಲದೆ ಪ್ರತಿಪಾದಿಸುವವರು. ಅಂತಹ ಒಂದು ಮುಕ್ತ ಚಿಂತನೆ ಮತ್ತು ಜ್ಞಾನಾರ್ಜನೆಯ ಹಸಿವಿರುವ ಕಾರಣ ನನ್ನ "ಭಾರತ ಒಂದು ಮರುಶೋಧನೆ"ಯನ್ನು ಓದುವುದೂ ಅಲ್ಲದೆ ಅಷ್ಟೇ ಮುಕ್ತವಾಗಿ ತಮ್ಮ ಸದಭಿಪ್ರಾಯವನ್ನು ತಮ್ಮ ಫೇಸ್ಬುಕ್ ವಾಲಿನಲ್ಲಿ ಹಂಚಿಕೊಂಡಿದ್ದಾರೆ.

ಯಾವುದೇ ವಿಚಾರ ಮತ್ತು ವಿಷಯಕ್ಕೂ ಮಿತಿಗಳಿರಬಹುದು. ಅವುಗಳನ್ನು ಪರಸ್ಪರ ಚರ್ಚಿಸಿ ಪರಿಹರಿಸಿಕೊಂಡು ಸತ್ಯವನ್ನು ಕಂಡುಕೊಳ್ಳಬೇಕೆಂಬ ಉದಾರತೆಯನ್ನ ಪ್ರತಿಪಾದಿಸುವ ನಾವೆಲ್ಲರೂ ದಾಕ್ಷಾಯಿಣಿಯವರ ಅಭಿಪ್ರಾಯವನ್ನು ಓದಲೇಬೇಕು. ಇವರ ವಿಮರ್ಶೆಯ ಕೊಂಡಿ ಇಲ್ಲಿದೆ.

https://m.facebook.com/story.php?story_fbid=790210234769298&id=100013409864949

ನಂತರ ಇವರ ಪೋಸ್ಟಿಗೆ ಪ್ರತಿಯಾಗಿ ತಮ್ಮ ಎಡಪಂಥೀಯ ಗುಂಪಿನಿಂದ ಒಬ್ಬರು ಗಡಿ ದಾಟುತ್ತಿದ್ದಾರೆಂದು ಮತ್ತೊಬ್ಬರು ಪೋಸ್ಟ್ ಹಾಕಿ ಬೌದ್ಧಿಕ ಬೆದರಿಕೆಯ ತಂತ್ರವನ್ನು ಬಳಸಿರುವುದನ್ನು ಗಮನಿಸಿ. ಅದರ ಕೊಂಡಿ ಇಲ್ಲಿದೆ.

https://m.facebook.com/story.php?story_fbid=2522244181217116&id=100002946772746

ಈ ಪೋಸ್ಟಿಗೆ ಬಂದಿರುವ ಪ್ರತಿಕ್ರಿಯೆಗಳನ್ನೂ ಗಮನಿಸಿ.

ಒಂದು ಕೃತಿಯನ್ನು ಓದದೆಲೆ, ಅಥವಾ ಪೂರ್ವಾಗ್ರಹಪೀಡಿತವಾಗಿ ಓದಿ, ಇಂತಿಂತಹ ವಿಷಯಕ್ಕೆ ಪೂರಕ ಸಾಕ್ಷಿಯ ಆಕರವನ್ನು ಕೊಟ್ಟಿಲ್ಲವೆಂದು ವಸ್ತುನಿಷ್ಠವಾಗಿ ವಿಮರ್ಶಿಸದೆ ಬೇಕಾಬಿಟ್ಟಿ ಕಾಮೆಂಟಿಸುವ ತಂತ್ರವೇ ಕೂಪಮಂಡೂಕ ತಂತ್ರ! ತಮ್ಮ ಸಿದ್ದಾಂತ ಪಂಥದ ಬಾವಿಯೊಳಗಿಂದ ಒಂದು ಕಪ್ಪೆ ಹಾರಿ ಹೊರಜಗತ್ತನ್ನು ಕಂಡು ಜಗತ್ತು ಸುಂದರ ಎಂದೊಡನೇ ಬಾವಿಯೊಳಗಿನ ಇತರೆ ಕಪ್ಪೆಗಳು ಆ ಮುಗ್ದ/ಮುಕ್ತ ಮನಸ್ಸಿನ ಕಪ್ಪೆಯನ್ನು ನೀನು ಇದನ್ನು ಓದಿದ್ದೀಯೆ/ಅದನ್ನು ಓದಿದ್ದೀಯೆ? ನಿನ್ನ ಓದು ತುಂಬಾ ಮಿತಿಯೊಳಗಿನದು ಅಥವಾ ಅಪ್ರಾಮಾನಿಕವಾದದ್ದು, ಇದು ಬ್ರಾಹ್ಮಣ್ಯ ಮನಸ್ಥಿತಿ, ಅದು ಹಿಡನ್ ಅಜೆಂಡಾದ ಕೃತಿ, ವ್ಯಕ್ತಿ ಸರಿಯಿಲ್ಲ ಮುಂತಾದ ವಟರ್ಗುಟ್ಟುವಿಕೆ ಏನನ್ನು ಹೇಳುತ್ತದೆ?

ಉರುಳುತ್ತಿರುವವನೇ ಸಿಕ್ಕುವ ಹುಲ್ಲುಕಡ್ಡಿಗಳನ್ನೆಲ್ಲಾ ಬಾಚಿ ಹಿಡಿಯಲೆತ್ನಿಸುವುದು.  ಅದು ಒಂದು ದುರ್ಬಲ ಮನಸ್ಥಿತಿಯ ಪರಿಸ್ಥಿತಿ. ಮನಶಾಸ್ತ್ರವನ್ನು ಕಿಂಚಿತ್ ಓದಿಕೊಂಡವರಿಗೂ ಇದು ಅರ್ಥವಾಗಿಬಿಡುತ್ತದೆ. ವಸ್ತುವನ್ನು ಹಿಡಿದು ವ್ಯಕ್ತಿಯನ್ನು ನಿಂದಿಸುವ ಇವರ ವರಸೆ ಸಾಕಷ್ಟು ಸಾರಿ ಫೇಸ್ಬುಕ್ನಲ್ಲಿ ಕಂಡಿದೆ. ಇದಕ್ಕೆ ಸಾಕ್ಷಿಯಾಗಿ ಮೊನ್ನೆ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ ಆಯ್ಕೆಗೊಂಡವರ ಮೇಲಿನ ದ್ವೇಷಕಾರಕ ಪೋಸ್ಟ್ ಕೂಡ ಇಂತಹ ಪ್ರವೃತ್ತಿಗೆ ಸಾಕ್ಷಿಯಾಗಿದೆ.

ಸತ್ಯವಿದ್ದರೂ ತಮ್ಮ ಸಿದ್ದಾಂತಕ್ಕೊಪ್ಪದ ಒಂದು ಭಾಗವನ್ನು ಹಿಡಿದುಕೊಂಡು ಹಿಂಜುತ್ತಿರುವ ಇವರ ಪರಿ ನೋಡಿ. ಹಾಗೆ ಒಂದು ಭಾಗದ ಸ್ಕ್ರೀನ್ ಶಾಟ್ ಹಾಕಿ ರಂಜಿಸಿ ಕಾಮೆಂಟಿಗರನ್ನು ಖುಷಿ ಪಡಿಸುವ ಈ ವಿದ್ವಾಂಸರು ಪುಸ್ತಕವನ್ನೇ ತಮ್ಮ ಬಳಗಕ್ಕೆ ಕೊಟ್ಟು ಓದಿಸಿದ್ದೇ ಆದರೆ ಬರುವ ಅಭಿಪ್ರಾಯಗಳು ವಸ್ತುನಿಷ್ಠವಾಗಿ ದಾಕ್ಷಾಯಣಿ ಹುಡೇದ್ ಅವರ ಅಭಿಪ್ರಾಯದಂತೆಯೇ ಆಗಿರುತ್ತವೆ ಎಂದು ಖಚಿತವಾಗಿ ಹೇಳಬಲ್ಲೆ. ಏಕೆಂದರೆ ಸತ್ಯದ ಬುನಾದಿಯ ಮೇಲೆ ನನ್ನ ಪುಸ್ತಕವಿದೆಯೇ ಹೊರತು ಸತ್ತ ಪಂಥಸಿದ್ದಾಂತಗಳ ಮೇಲಲ್ಲ.

ವಿಮರ್ಶೆಗೊಂದು ಪರಿಭಾಷೆಯಿದೆಯೆನ್ನುವುದನ್ನು ಮರೆತ ಇವರಿಗೆ ದಾಕ್ಷಾಯಿಣಿಯವರ ಬರಹದಲ್ಲಿ ಅಪ್ರಾಮಾಣಿಕತೆ ಕಾಣಿಸಿರುವುದೊಂದು ವಿಪರ್ಯಾಸವಷ್ಟೇ ಅಲ್ಲದೇ ದಬ್ಬಾಳಿಕೆ ಕೂಡ. ಈ ಗುಂಪುಗಾರಿಕೆಯ ಅಸಹಿಷ್ಣು ಗುಣ, ಮತ್ತು ದಾಕ್ಷಾಯಿಣಿಯವರ ಮುಕ್ತ ಮುಗ್ಧ ಬರಹ ಇವೆರಡೂ ಇಲ್ಲಿ ಗಮನಾರ್ಹ.

ಒಟ್ಟಿನಲ್ಲಿ ಜನಪರವಲ್ಲದ ಸೈದ್ದಾಂತಿಕ ಮುಖವಾಡಗಳಿಲ್ಲದೆ ಪುಸ್ತಕಗಳನ್ನು ಬರೆಯುವಂತಾಗಬೇಕು ಎನ್ನುವ ಈ ಗುಂಪು ಅಂತಹದೇ ನಿಲುವಿನಿಂದ ಬರೆದ ನನ್ನ "ಭಾರತ ಒಂದು ಮರುಶೋಧನೆ" ಪುಸ್ತಕವನ್ನು ಗ್ರಹಿಸಬಲ್ಲುದೇ!?!

ಸತ್ಯಮೇವಜಯತೇ!

ಪುಸ್ತಕಕ್ಕಾಗಿ ಸಂಪರ್ಕಿಸಿ:

http://www.navakarnatakaonline.com/bookslist.php

RCEP, ಆರ್ಸಿಇಪಿ ಏನಪ್ಪಿ ಇದು?!


ರದ್ದಿ ಅಂಗಡಿ ಫೇಸ್ಬುಕ್ ಕಟ್ಟೆ ಮ್ಯಾಕೆ ಚಿಂತಕರ ಪಟಾಲಂ ಸೇರಿತ್ತು. ಏನ್ ಅಂಗೇ RCEP, ಆರ್ಸಿಇಪಿ ಅಂಥ ಅವರವರ ಫಾರಿನ್ ಫೋನಲ್ಲಿ ಎಲ್ಲಾ ಕುಟ್ಟತಾ ಇದ್ದೋ. ಆಗ ಸಡನ್ನಾಗಿ ಆಕಾಸವಾಣಿಯಿಂದ "ಇರಮ್ಮಿ, ಸುಮ್ಕೆ ಚಂದ್ರೇಗೌಡನ್ ಜುಮ್ಮಿ ತರಕೆ ಡವ್ ಬುಡಬೇಡ. ಇದೇನ್ ನಿಮ್ ಕುಂದಾಪುರದ್ ಘಿ ರೋಸ್ಟ್ ಅಂಕಂಡೇ... ನಮಗೂ ಗೊತ್ತದೆ ಆರ್ಸಿಇಪಿ, ವಸಿ ಅದಿಮಿಕೊಂಡು ಕುತ್ಕಾ ಯೋಳ್ತೀನಿ. ಕುಂದಾಪುರದ್ ಮೀನ್ ಕಂಡ್ ಜೊಲ್ ಸುರ್ಸ ಮಂಡೇವುದ್ ವಾಟಿಸ್ಸೆ ಭಾಸೆಲಿ ಯೋಳ್ಳಾ?...ಬ್ಯಾಡ ಬುಡು ನಿಂಗ್ ತಲೇಲಿ ನೆಟ್ಟಗೆ ಓಗಂಗೆ ಸುದ್ಧ ಪಂಪ ಪಂಪ ಅಂಥ ಬೊಮ್ಮಡಿ ವಡ್ಕತನಲ್ಲ ಮೈಸೂರು ಮೇಸ್ಟ್ರು ಉಗ್ರಿ...ಅವ್ನ ಭಾಸೇಲೆ ಬುಡ್ತೀನಿ ಕೇಳ್ಕ" ದನಿಯೊಂದು ಕೇಳಿತು.

ಹುಂ ಹುಂ...ರೆಡಿ ಒನ್, ಟೂ, ತ್ರೀ..ಬಾಲಣ್ಣ ಸವಂಡು ಜಾಸ್ತಿ ಮಾಡು...ಆ ತಕತಿಕದೋನಿಗೂ ಕೇಳ್ಳಿ ವಸಿ, ಕೆಪ್ಪಲೌಡಿದಿಕ್ಕೆ... ಗೋ!

RCEP ಎಂದರೆ ದಿ Regional Comprehensive Economic Partnership ಎಂದು. ಈ ಪಾಲುದಾರಿಕೆ ಒಪ್ಪಂದದ ಪ್ರಕಾರ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಸೇರಿ ಏಷ್ಯಾದ ರಾಷ್ಟ್ರಗಳು ತಮ್ಮತಮ್ಮಲ್ಲಿ ಆಮದು/ರಫ್ತು ಸುಂಕಮುಕ್ತ ವ್ಯಾಪಾರ ಸಂಬಂಧವನ್ನು ಹೊಂದುವುದು ಎಂದು ಸಡಿಲಾಗಿ ಹೇಳಬಹುದು.

ಅಂದರೆ ಕುವೆಂಪು ಅವರ ವಿಶ್ವಮಾನವ ತತ್ವವನ್ನು ಅಳವಡಿಸುವಲ್ಲಿ ಒಂದು ಮಹತ್ವದ ಹೆಜ್ಜೆ. ವಸುದೈವ ಕುಟುಂಬಕಂ ಯಾ ಜಾನ್ ಲೆನನ್ ಕನಸು ಕಂಡಂತೆ ಬೇಲಿಯಿಲ್ಲದ, ಗಡಿಗಳಿಲ್ಲದ ವಿಶ್ವದ ಕನಸನ್ನು ನನಸಾಗಿಸುವಲ್ಲಿನ ಒಂದು ದಿಟ್ಟ ಹೆಜ್ಜೆ ಎಂದು ಕೂಡ ಹೇಳಬಹುದು. ಈ ಕನಸನ್ನು ನನಸಾಗಿಸುವುದು ತಪ್ಪೇ? ಈ ಕನಸು ಕೇವಲ ಕನಸಾಗಿ, ಕವನವಾಗಿ, ಹಾಡಾಗಿಸಲು ಮಾತ್ರ ಯೋಗ್ಯ, ಇದು ಹಕೀಕತ್ತಾಗಕೂಡದು ಎನ್ನುತ್ತಿದ್ದಾರೆ ಈ RCEP ವಿರೋಧಿ ಮಸಲತ್ತುಗಾರರು! ಇದಕ್ಕೆ ಭಾರತ ಒಪ್ಪುತ್ತಿದೆಯೋ ಇಲ್ಲವೋ ಅದು ಭಾರತ ಸರ್ಕಾರಕ್ಕೆ ಬಿಟ್ಟದ್ದು. ಆದರೆ ಇದು ವಿಶ್ವವನ್ನು ಬೆಸೆಯುವಲ್ಲಿ ಒಂದು ಮುಕ್ತ ಹೆಜ್ಜೆ. ಆದರೆ ಮುಕ್ತತೆಯ ಠೇಕೆದಾರರೆಂದು ಸ್ವಘೋಷಿಸಿಕೊಂಡಿರುವವರು ಈ ಮುಕ್ತ ಮಾರುಕಟ್ಟೆಯ ಬಗ್ಗೆ ಸಂಕುಚಿತತೆ ಮತ್ತು ಅಸಹಿಷ್ಣುತೆಯನ್ನು ಏಕೆ ಪ್ರದರ್ಶಿಸುತ್ತಿದ್ದಾರೆ? ಆಲೋಚಿಸಿ.

ಇನ್ನು ನಾವು ನೀವೆಲ್ಲರೂ ಬಾಲ್ಯದಿಂದ ಈ ಮುಕ್ತ ಚಿಂತಕರ ರೈತ/ಉತ್ಪಾದಕ-ಗ್ರಾಹಕರ ನಡುವೆ ನೇರ ಸಂಪರ್ಕವೇರ್ಪಟ್ಟು ಈ ಮಧ್ಯವರ್ತಿಗಳನ್ನು/ವ್ಯಾಪಾರಿಗಳನ್ನು ತೆಗೆದುಹಾಕಬೇಕೆಂಬ ಚಿಂತನೆಯನ್ನು ಕೇಳುತ್ತಲೇ ಬೆಳೆದಿದ್ದೇವೆ. ಆ ತತ್ವವನ್ನು ಅಪ್ಪಿ ಆರಾಧಿಸಿ ಬಯಸುತ್ತಲೇ ಇದ್ದೇವೆ. ಇಂತಹ ಮಧ್ಯವರ್ತಿ ನಿವಾರಣೆಯ ಕನಸು ಇಂದಿನ ಆಧುನಿಕ ತಂತ್ರಜ್ಞಾನದ ಸಹಾಯದಿಂದ ಅಮೇಜಾನ್, ಫ್ಲಿಪ್ಕಾರ್ಟ್ ಅಂತಹ ಸಂಸ್ಥೆಗಳಿಂದ ಸಾಧ್ಯವಾಗಿದೆ. ಈ ಕಂಪೆನಿಗಳು ಉತ್ಪಾದಕ-ಗ್ರಾಹಕರ ಸಂಪರ್ಕ ಸೇತುವಾಗಿ ಅದರ ಲಾಭವನ್ನು ಕಡಿಮೆ ಬೆಲೆಯ ರೂಪದಲ್ಲಿ ವಸ್ತುಗಳನ್ನು ಗ್ರಾಹಕರಿಗೆ ತಲುಪಿಸುತ್ತಿದ್ದಾರೆ ಮತ್ತು ಉತ್ತಮ ಗ್ರಾಹಕ ಸೇವೆಯನ್ನು ಕೊಡುತ್ತಿದ್ದಾರೆ. ಆದರೆ ಅದೇ ಚಿಂತಕರ ಚಾವಡಿ ಇಂದು ಮಧ್ಯವರ್ತಿಗಳ ಪರವಾಗಿ ನಿಂತಿದೆ. ಏಕೆಂದರೆ ಅವರಿಗಾಗದ ಓರ್ವ ಖುರ್ಚಿ ಹಿಡಿದಿದ್ದಾನೆ ಎಂಬ ಏಕೈಕ ಕಾರಣಕ್ಕಾಗಿ! ಉಳಿದದ್ದು ತಮ್ಮ ವಿವೇಚನೆಗೆ ಬಿಟ್ಟದ್ದು.

ಈಗ ಇದೇ ಚಾವಡಿ ನಮ್ಮ ರೈತರನ್ನು ಕತ್ತಿ ಗುರಾಣಿಯಾಗಿ ಬಳಸಲು ರೈತರನ್ನು ಪ್ರಚೋದಿಸುತ್ತಿದೆ. ಈ ಆರ್ಸಿಇಪಿ ಒಪ್ಪಂದದಿಂದ ಆಸ್ಟ್ರೇಲಿಯಾ/ನ್ಯೂಜಿಲೆಂಡ್ ನ ಬೃಹತ್ ಡೈರಿಗಳಿಂದ ಹಾಲು ದೂದ್ ಸಾಗರವಾಗಿ ಭಾರತಕ್ಕೆ ಹರಿದು ಬಂದು ನಮ್ಮ ದೇಸೀ ಹಾಲು ಉತ್ಪಾದಕರೆಲ್ಲಾ ಬರಡು ರಾಸುಗಳಾಗುತ್ತಾರೆ ಎಂದು ತುತ್ತೂರಿ ಊದುತ್ತಿದ್ದಾರೆ.

ಹಾಗಾಗಿ ಸ್ವಲ್ಪ ಸತ್ಯಾಸತ್ಯತೆಯನ್ನು ನೋಡೋಣ. ಆಸ್ಟ್ರೇಲಿಯಾ/ನ್ಯೂಜಿಲೆಂಡಿನಲ್ಲಿ ಒಂದು ಲೀಟರ್ ಹಾಲಿಗೆ ಆಸ್ಟ್ರೇಲಿಯನ್ $0.48. ಅಂದರೆ ರೂ.45 ರ ಆಜುಬಾಜು. ಆ ಹಾಲನ್ನು ಭಾರತಕ್ಕೆ ಹರಿಸಲು ಆಗುವ ಸಾಗಣೆಯ ವೆಚ್ಚ ಎಲ್ಲ ಸೇರಿ ಆ ಹಾಲಿನ ಬೆಲೆ ರೂ.90 ಆಗುತ್ತದೆ. ತೊಂಬತ್ತು ರೂಪಾಯಿ ಕೊಟ್ಟು ಆ ಹಳಸಲು ಹಾಲನ್ನು ಯಾರು ಕೊಳ್ಳುತ್ತಾರೆ?!? ಈ ದೇಶಗಳಿಂದ ಬರಬಹುದಾದ ಡೈರಿ ಉತ್ಪನ್ನ ಚೀಸ್! ಪನೀರ್ ಅಲ್ಲ. ಅಲ್ಲಿನ ಚೀಸ್ ಏನಿದ್ದರೂ ವಿದೇಶಿ ಅಡಿಗೆಗಳಲ್ಲಿ ಬಳಸುವಂತಹದು. ಇದರಿಂದ ವಿದೇಶಿ ಅಡಿಗೆ ಮಾಡುವ ಹೋಟೆಲುಗಳು ಲಾಭ ಮಾಡಬಹುದು ಮತ್ತು ಆ ಲಾಭವನ್ನು ಗ್ರಾಹಕರಿಗೆ ಕಡಿಮೆ ದರದ ಮುಖಾಂತರ ತಲುಪಿಸಬಹುದು. ಉಳಿದದ್ದು ನಿಮ್ಮ ವಿವೇಚನೆಗೆ ಬಿಟ್ಟದ್ದು.

ಇಲ್ಲಿ ಭಾರತ ಸರ್ಕಾರ ಅಂದರೆ ಪ್ರಧಾನಿ ಮೋದಿ ಈ ಒಪ್ಪಂದಕ್ಕೆ ಸಹಿ ಹಾಕುತ್ತಾರೆಯೋ ಇಲ್ಲವೋ ಗೊತ್ತಿಲ್ಲ. ಆದರೂ ಅವರ ವಿರೋಧಿಗಳ ಗುಂಪು ಈ ರೀತಿ ಒಂದು ಬೆದರುಬೊಂಬೆಯನ್ನು ಸೃಷ್ಟಿಸಿ ಸಮಾಜದಲ್ಲಿ ದುಗುಡ ದುಮ್ಮಾನ, ದುರಿತ, ಸನ್ನಿವೇಶವನ್ನು ಈ ರೀತಿಯಾಗಿ ಕೃತಕವಾಗಿ ಸೃಷ್ಟಿಸುತ್ತಿದೆ. ಹಾಗಾಗಿ ಕೊಂಚ ನಿಮ್ಮ ಬೆರಳುಗಳಿಗೆ ಕೆಲಸ ಕೊಟ್ಟು, ನಿಮ್ಮ ಡೇಟಾ ಪ್ಲ್ಯಾನ್ ಅನ್ನು ಸಮರ್ಥವಾಗಿ ಬಳಸಿಕೊಳ್ಳಿ. ನಿಮ್ಮ ಬುದ್ದಿ ನಿಮ್ಮಲ್ಲೇ ಇರಲಿ ಎಂದು ಹಾರೈಸುವೆ.

"ಹಾಂ, ಇಂಥವರು ಬರುತ್ತಲೇ ಇರುತ್ತಾರೆ, ನೀವು ಓಡಿಸುತ್ತಲೇ ಇರಬೇಕು. ಇಂಥವರು ಬರುತ್ತಲೇ ಇರುತ್ತಾರೆ, ನೀವು ಓಡಿಸುತ್ತಲೇ ಇರಬೇಕು." ಇದು ಪಡುವಾರಹಳ್ಳಿ ಪಾಂಡವರು ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯ! ಇಂದಿಗೂ ಅನ್ವಯ.

ಏಯ್ ಚೇಂಜ್ ಮಾಡ್ರುಲಾ ಟೇಶನ್ನ ಅಂಥಾ ವಾಟಿಸ್ಸೆ ಕೂಗಿದ್ ಕಿಟ ಬಾಲಣ್ಣ ಟೇಶನ್ ಚೇಂಜ್ ಮಾಡಿದ. ಆಗ "ಓ ನನ್ನ ಚೇತನಾ ಆಗು ನೀ ಅನಿಕೇತನ..." ಎಂಬ ಹಾಡು ತೇಲಿ ಬಂತು.

ಇಲ್ಲಿಗೆ ರದ್ದಿ ಅಂಗಡಿಯ ಫೇಸ್ಬುಕ್ ಕಟ್ಟೆ ಪುರಾಣ ಪರಿಸಮಾಪ್ತಿ!

#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ
#ಕರ್ನಾಟಕವೆಂಬೋಕಮಂಗಿಪುರದಲ್ಲಿ

ರಿಸೆಷನ್ ರಿಸೆಷನ್ ರಿಸೆಷನ್!

ಇಂದಿನ ಉದಯಕಾಲದಲ್ಲಿ,

ರಿಸೆಷನ್, ರಿಸೆಷನ್, ರಿಸೆಷನ್!

PTI ವರದಿಯ ಪ್ರಕಾರ ಇಡೀ ದಕ್ಷಿಣ ಏಷ್ಯಾ, "ಜಾಗತಿಕ ಆರ್ಥಿಕ ಹಿಂಜರಿತ"ದ ಎಫೆಕ್ಟಿಗೆ ಒಳಗಾಗಿದೆ. ಅದರಲ್ಲಿ ಹೆಚ್ಚು ಜಾಗತೀಕರಣಕ್ಕೆ ತೆರೆದುಕೊಂಡಿರುವ ಭಾರತಕ್ಕೆ ಇದರ ಪರಿಣಾಮ ಬೇರೆಲ್ಲಾ ದಕ್ಷಿಣ ಏಷ್ಯಾದ ರಾಷ್ಟ್ರಗಳಿಗಿಂತ ಅತಿ ಹೆಚ್ಚು ಪರಿಣಾಮ ಬೀರಲಿದೆ. ಏಕೆಂದರೆ ಭಾರತದಲ್ಲಿ ಜಾಗತಿಕ ಮಟ್ಟದ ಸಂಸ್ಥೆಗಳು ಕೇವಲ ಬಂಡವಾಳ ಹೂಡಿಕೆ ಮಾತ್ರವಲ್ಲದೆ ಇನ್ನಿತರೆ ವ್ಯವಹಾರ, ಉದ್ದಿಮೆಗಳ ಆಯಾಮಗಳಲ್ಲೂ ತೊಡಗಿಸಿಕೊಂಡಿವೆ. ಬಂಡವಾಳ ಹೂಡಿರುವ ಕಂಪೆನಿಗಳು ಬಂಡವಾಳವನ್ನು ಮುಂಜಾಗ್ರತಾ ಕ್ರಮವಾಗಿ ಹಿಂಪಡೆಯುವುದು ಮತ್ತು ಹೆಚ್ಚಿನ ಲಾಭವಿರುವ ಕಡೆ ಮರುತೊಡಗಿಸುವುದು ಅಥವಾ ನಗದನ್ನು ಹಿಡಿದಿಟ್ಟುಕೊಳ್ಳುವ ಪ್ರಕ್ರಿಯೆ ನಾವು-ನೀವು ನಮ್ಮ ಹಣ ಯಾ ಬಂಡವಾಳವನ್ನು ಹೇಗೆ ಸುಭದ್ರಪಡಿಸಿಕೊಳ್ಳಲು ಪ್ರಯತ್ನಿಸುತ್ತೇವೆಯೋ ಹಾಗೆಯೇ ಇರುತ್ತದೆ. ನೀವು ಷೇರು ಮಾರುಕಟ್ಟೆಯಲ್ಲಿ ತೊಡಗಿಸಿದ ಬಂಡವಾಳವನ್ನು ಹೇಗೆ ಕಾಲಕಾಲಕ್ಕೆ ತೆಗೆಯುವುದು ಅಥವಾ ಬದಲಾಯಿಸುವುದು ಮಾಡುತ್ತೀರೋ ಹಾಗೆ. ಎಲ್ಲಾ ಷೇರು ಮಾರುಕಟ್ಟೆಗಳು ಸದಾ ಏರುಗತಿಯಲ್ಲಿಯೇ ಹೇಗೆ ಇರುವುದಿಲ್ಲವೋ ಹಾಗೆಯೇ ಒಂದು ದೇಶದ ಆರ್ಥಿಕ ಸ್ಥಿತಿಗತಿಗಳು ಕೂಡ.

ಈ ಬಂಡವಾಳ ಹಿಂತೆಗೆತವನ್ನು ತಡೆಯಲು ಸರ್ಕಾರಗಳು ಕೆಲವೊಂದು ಆರ್ಥಿಕ ನೀತಿಗಳನ್ನು ಪ್ರಕಟಿಸಬಹುದು. ಆದರೆ ಹಿಂತೆಗೆತವನ್ನು ಸಂಪೂರ್ಣವಾಗಿ ನಿಲ್ಲಸಲಾಗುವುದಿಲ್ಲ. ಉದಾಹರಣೆಗೆ ನೀವು ಒಂದು ಬ್ಯಾಂಕಿನಲ್ಲಿಟ್ಟಿರುವ FD ಅನ್ನು ಹಿಂತೆಗೆದುಕೊಳ್ಳುವಾಗ ಬ್ಯಾಂಕಿನವರು ಹೆಚ್ಚಿನ ಬಡ್ಡಿಯ ಆಸೆಯನ್ನು ತೋರಿಸಬಹುದು. ಆದರೆ ನಿಮ್ಮ ಅನಿವಾರ್ಯ ಬಡ್ಡಿ ದರವೊಂದೇ ಆಗಿರದಿದ್ದರೆ ನೀವು ನಿಮ್ಮ FDಯನ್ನು ಹಿಂತೆಗದುಕೊಂಡೇತೀರುತ್ತೀರಿ. ಅದೇ ರೀತಿ ಆರ್ಥಿಕ ಹಿಂಜರಿತವನ್ನು ತಡೆಯಲು ಸರ್ಕಾರ ಬಡ್ಡಿ ಏರಿಸುವ/ಇಳಿಸುವ, ಯಾ ತೆರಿಗೆ ಸಡಿಲಿಸುವ, ಸಬ್ಸಿಡಿ ಘೋಷಿಸುವ ಇನ್ನೂ ಹಲವಾರು ಯೋಜನೆಗಳನ್ನು ಪ್ರಕಟಿಸಬಹುದು. ಆದರೆ ಈ ಯೋಜನೆಗಳು ತಕ್ಷಣಕ್ಕೆ ಫಲ ಕೊಡುವುದಿಲ್ಲ.
ಏಕೆಂದರೆ ಇನ್ಫಲೇಶನ್, ಡಿಫ್ಲೇಶನ್, ರಿಸೆಷನ್ನುಗಳು ಗಳು ಆರ್ಥಿಕ ವ್ಯವಸ್ಥೆಯ ಋತುಗಳಿದ್ದಂತೆ. ಆಯಾಯ ಋತುವಿಗೆ ತಕ್ಕಂತೆ ಕೋಟು ಹಾಕಿಕೊಳ್ಳುವುದೋ, AC ಹಾಕಿಕೊಳ್ಳುವುದೋ ಮಾಡಬಹುದೇ ಹೊರತು, ಋತುಗಳನ್ನೇ ಬದಲಾಯಿಸಲಾಗುವುದಿಲ್ಲ. ಹಾಗಾಗಿ ಸರ್ಕಾರಗಳು ಈ ನಿಟ್ಟಿನಲ್ಲಿ ತೆಗೆದುಕೊಳ್ಳುವ ನಿಯಮಗಳು ಕೇವಲ ಕೋಟು/AC ಆಗುವವೇ ಹೊರತು ಬದಲಾಗುವ ಋತುಗಳನ್ನು ನಿಲ್ಲಿಸಲಾರವು.

ಅಮೆರಿಕದಲ್ಲಿ ರಿಸೆಷನ್ ಎಂಬುದು ಆಗಾಗ್ಗೆ ಕ್ಲಿಂಟನ್, ಬುಷ್, ಒಬಾಮರ ಅಧಿಕಾರಾವಧಿಗಳಲ್ಲೂ ಬಂದಿದೆ, ಟ್ರಂಪನ ಕಾಲದಲ್ಲಿಯೂ ಬರಲಿದೆ. ಆದರೆ ಈ ರಿಸೆಷನ್ ಕುರಿತು ಭಾರತದಲ್ಲಿ ಇತ್ತೀಚೆಗೆ ಜನ ಸಾಮಾನ್ಯರು ಮಾತನಾಡಿಕೊಳ್ಳುವಂತಾಗಿರುವುದಕ್ಕೆ ಕಾರಣ, ಭಾರತ ಜಾಗತಿಕವಾಗಿ ಗುರುತಿಸಿಕೊಳ್ಳುವಂತಹ ಆರ್ಥಿಕತೆಯನ್ನು ಪಡೆದುಕೊಂಡಿರುವುದು.

ಕಳೆದ ಇಪ್ಪತ್ತೈದು ವರ್ಷಗಳಲ್ಲಿ ಆಗಿಹೋದ ಸರ್ಕಾರಗಳು ಈ ರೀತಿಯ ಆರ್ಥಿಕ ಋತುಗಳನ್ನು ಗುರುತಿಸಿ ನಿಯಂತ್ರಿಸದೇ ಇನ್ಫಲೇಶನ್ ಎಂಬ ಭೂತವನ್ನು ಬೆಳೆಯಬಿಟ್ಟದ್ದೇ ಈಗ ರಿಸೆಷನ್ ಎಂಬ ಸಾಮಾನ್ಯ ಆರ್ಥಿಕ ಚಕ್ರ ಪೆಡಂಭೂತವಾಗಿ ಬಹುದೊಡ್ಡ ಮಟ್ಟದಲ್ಲಿ ಬಂದೆರಗಬಹುದಾದ ಸನ್ನಿವೇಶವನ್ನು ಸೃಷ್ಟಿಸಲು ಕಾರಣವೆನ್ನಬಹುದು.

ಇದೆಲ್ಲವೂ ಸೃಷ್ಟಿಯಾದದ್ದು ಸಾಫ್ಟವೇರ್ ಎಂಬ ಮೇಕೆಯ ಮೂತಿಗೆ ಬೆಣ್ಣೆ ಕದ್ದ ಕೋತಿಗಳು ಕೈಯೊರೆಸುವ ಅನೌಪಚಾರಿಕ, ಅವ್ಯವಸ್ಥಿತ ಆರ್ಥಿಕ ನಡೆ ಮತ್ತು ನೀತಿಗಳಿಂದಾದ ಅವಘಡ!

ಇಪ್ಪತ್ತೈದು ವರ್ಷಗಳ ಕೆಳಗೆ ಒಬ್ಬ ಸಾಮಾನ್ಯ ಸಾಫ್ಟವೇರ್ ಎಂಜಿನಿಯರನ ಸಂಬಳ ತಿಂಗಳಿಗೆ ಹದಿನೈದು ಸಾವಿರವಿದ್ದರೆ, ಒಬ್ಬ ಸಿವಿಲ್ ಎಂಜಿನಿಯರ್ ಯಾ ಉಪನ್ಯಾಸಕ ಯಾ ತಹಸೀಲ್ದಾರನ ಸಂಬಳ ನಾಲ್ಕು ಸಾವಿರವಿದ್ದಿತು. ಹಾಗೆಯೇ ಬೆಂಗಳೂರಿನ ಯಲಹಂಕಾದಲ್ಲಿ ಚದರಡಿ ಸೈಟಿಗೆ ಐವತ್ತು ರೂಪಾಯಿ!

ಯಾವತ್ತು ಕೇವಲ ಶೇಕಡಾ ಮೂರು ಪ್ರತಿಶತಕ್ಕಿಂತಲೂ ಕಡಿಮೆ ಜನಸಂಖ್ಯೆಯ ಸಾಫ್ಟವೇರ್ ಉದ್ಯೋಗಿಗಳ ಆದಾಯಕ್ಕನುಗುಣವಾಗಿ ದೇಶದ ಇನ್ನಿತರೆ ತೊಂಬತ್ತೇಳು ಪ್ರತಿಶತ ಜನಸಂಖ್ಯೆಗೆ ಆರ್ಥಿಕ ನೀತಿಗಳು, ವಸ್ತುವಿನ ಬೆಲೆಗಳು ರೂಪುಗೊಳ್ಳುತ್ತಾ ಸಾಗಿದವೋ, ಅದರ ದುಷ್ಪರಿಣಾಮವೇ ಇದೆಲ್ಲದುದರ ಮೂಲ.

ಇಪ್ಪತ್ತೈದು ವರ್ಷಗಳಲ್ಲಿ ಐವತ್ತು ರೂಪಾಯಿ ಚದರಡಿ ಇದ್ದ ಯಲಹಂಕಾದ ಸೈಟಿನ ಬೆಲೆ ಹತ್ತು ಸಾವಿರ ರೂಪಾಯಿಗಳನ್ನು ದಾಟಿದೆ. ನಾಲ್ಕು ಸಾವಿರವಿದ್ದ ಒಬ್ಬ ಸರ್ಕಾರಿ ಉಪನ್ಯಾಸಕ, ತಹಶೀಲ್ದಾರ, ಸಿವಿಲ್ ಎಂಜಿನಿಯರನ ಸಂಬಳ ಲಕ್ಷ ರೂಪಾಯಿಯಾಗಿದೆ. ಹಾಗೆಯೇ ಅದನ್ನು ಸರಿತೂಗಲು ಹೋಟೆಲ್, ವಸತಿ, ಜನಜೀವನ ದುಬಾರಿಯಾಗಿ ಬೆಳೆದಿದೆ. ಈ ಎಲ್ಲಾ ಬೆಲೆ ಏರಿಕೆಗಳನ್ನು ಭರಿಸಲು ಭ್ರಷ್ಟಾಚಾರ ಸರ್ಕಾರಿ ವಲಯವಷ್ಟೇ ಅಲ್ಲದೇ ಖಾಸಗಿ ಕಂಪೆನಿಗಳು, ಶಿಕ್ಷಣ ಸಂಸ್ಥೆಗಳು, ನರ್ಸಿಂಗ್ ಹೋಮುಗಳಿಂದ ಹಿಡಿದು ಸುಲಭ್ ಶೌಚಾಲಯದವರೆಗೆ ಪಸರಿಸಿದೆ. ಏಕೆಂದರೆ ಲಕ್ಷ ರೂಪಾಯಿ ಸಂಬಳವಿರದ ಖಾಸಗಿ ಕಾಲೇಜಿನ ಉಪನ್ಯಾಸಕ, ನೌಕರರು ಕೂಡ ವಸತಿ, ಊಟದಂತಹ ಮೂಲಭೂತ ವೆಚ್ಚವನ್ನು ದುಬಾರಿಯಾದರೂ ಭರಿಸಲೇಬೇಕಲ್ಲವೇ?

ಇಂದು ಕೊಡಗಿನ ಕಾಫ಼ಿ ತೋಟ ಎಕರೆಗೆ ಮೂವತ್ತು ಲಕ್ಷವಾಗಿರುವುದಿರಲಿ, ಬಿಜಾಪುರದ ಕೃಷ್ಣಾ ತೀರದ ಹೊಲಗಳೂ ಎಕರೆಗೆ ಮೂವತ್ತು ಲಕ್ಷವಾಗಿವೆ. ಈ ಬೆಲೆಗೆ ಕೊಂಡು ಅಲ್ಲಿ ಗಾಂಜಾ/ಅಫ಼ೀಮು ಬೆಳೆದರಷ್ಟೇ ಲಾಭಕರವಾಗಬಹುದಲ್ಲದೇ ಕಾಫ಼ಿ, ಕಬ್ಬು, ಹತ್ತಿ, ಭತ್ತ ಬೆಳೆದರೆ ಬಡ್ಡಿಯೂ ಗಿಟ್ಟದು.

ಇಂತಹ "ಆಮ್ಲೀಯ ಹಣದುಬ್ಬರ"ವನ್ನು ಆಗಿ ಹೋದ ಯಾವುದೇ ಸರ್ಕಾರಗಳು ನಿಯಂತ್ರಣವನ್ನು ಹೇರುವುದಿರಲಿ ಖುದ್ದು ಲಾಭ ಮಾಡಿಕೊಳ್ಳಲು ಆಸ್ತಿ ನೋಂದಣಿಯ ಮಾರ್ಗದರ್ಶಿ ಬೆಲೆಯನ್ನು ಹಿಂದುಮುಂದು ನೋಡದೆ ತಟಕ್ಕನೆ ಏರಿಸುತ್ತಲೇ ಸಾಗಿದವು! ಹೋಟೆಲ್, ವಸತಿ, ಖಾಸಗಿ ಶಿಕ್ಷಣ, ಆರೋಗ್ಯ ವ್ಯವಸ್ಥೆಗಳ ಬೆಲೆ ಇದಕ್ಕನುಗುಣವಾಗಿ ಗಗನಕ್ಕೇರಿದವು. ಬ್ಯಾಂಕ್ ಸಾಲ ಸೌಲಭ್ಯಗಳು ಸುಲಭವಷ್ಟೇ ಅಲ್ಲದೇ ಬೇಕಾಬಿಟ್ಟಿ ಸಿಗಲಾರಂಭಿಸಿದವು. ಹಾಗೆಯೇ ಹಲವಾರು ದೊಡ್ಡ ಮೊತ್ತದ ಸಾಲಗಳು ವಸೂಲಾಗದೆ ಪೇರಿಸಿಕೊಳ್ಳುತ್ತಾ ಸಾಗಿದವು. ಇನ್ನು ಜನಜೀವನದಲ್ಲಿ  KG ಕ್ಲಾಸಿಗೆ ಲಕ್ಷ ರೂಪಾಯಿಯ ಡೋನೇಷನ್ ಸಾಮಾನ್ಯವೆನಿಸಿಬಿಟ್ಟಿದೆ. ಟೈಫಾಯಿಡ್ ಬಂದಾಗಲೂ ಜನ ಹತ್ತಿರದ ಕ್ಲಿನಿಕ್ಕಿನಲ್ಲಿ ಚಿಕಿತ್ಸೆ ಪಡೆದು ಗುಣವಾಗುತ್ತಿದ್ದವರು ಈಗ ಕಡ್ಡಾಯವಾಗಿ ಆಸ್ಪತ್ರೆಗಳಲ್ಲಿ ಅಡ್ಮಿಟ್ ಆಗಲೇಬೇಕಾಗಿದೆ. ಅಸಿಡಿಟಿ ಎಂದು ಆಸ್ಪತ್ರೆಗೆ ಹೋದವನಿಗೆ ಹಾರ್ಟ್ ಬೈಪಾಸ್ ಮಾಡಿ ಕಳಿಸುತ್ತಿದ್ದಾರೆ. ವಿಶ್ವವಿದ್ಯಾಲಯದ ಪ್ರೊಫೆಸರರುಗಳು ತಮಗೆ ತೋಚಿದಂತೆ ಇಂಗ್ಲಿಷ್ ಲೇಖನ/ಸಂಶೋಧನಾ ಪ್ರಬಂಧ, ಪುಸ್ತಕಗಳನ್ನು ಅನುವಾದಿಸಿ ಬೋಧಿಸುತ್ತಿದ್ದಾರೆ. ಕೆಜಿಯಿಂದಲೇ ಲಕ್ಷ ಕಕ್ಕಿ ಕಲಿತ ವಿದ್ಯಾರ್ಥಿಗಳು, ಬೆರಳ ತುದಿಯಲ್ಲೇ ಮಾಹಿತಿಯಿದ್ದರೂ ಇದನ್ನೆಲ್ಲ ಪರಿಶೀಲಿಸುವ ತರ್ಕವನ್ನೇ ಮಾಡುವುದಿಲ್ಲ. ಅಂದರೆ ಎಲ್ಲಾ ವ್ಯವಸ್ಥೆಗಳ ಬೆಲೆ ಏರಿದೆಯೇ ಹೊರತು, ಗುಣಮಟ್ಟ ಪಾತಾಳಕ್ಕೆ ಕುಸಿದುಹೋಗಿದೆ. ಕೇವಲ ಬೆಲೆಯಲ್ಲಿ ಎಲ್ಲಾ ದೇಶಗಳನ್ನು ಮೀರಿಸಿ ನಾನು ವಿಶ್ವಗುರು ಎಂದು ಉದ್ಘೋಷಿಸಲಾಗದು. ಬೆಲೆಗೆ ತಕ್ಕ ತೂಕವಿದ್ದರೇನೇ ಕಳೆ, ಇಲ್ಲದಿದ್ದರೂ ಕಳೆಯೇ! ಒಂದು ಕಳೆ ಮೆರುಗನ್ನು ಕೊಟ್ಟರೆ ಇನ್ನೊಂದನ್ನು ಕಿತ್ತೆಸೆಯಬೇಕು.

ಒಟ್ಟಿನಲ್ಲಿ ವಿಶ್ವವೇ ಗೌರವಿಸುವ ಆರ್ಥಿಕ ತಜ್ಞರೆನಿಸಿಕೊಂಡ ಮನಮೋಹನ್ ಸಿಂಗ್, ಚಿದಂಬರಂ ಅವರ ಮಾರ್ಗದರ್ಶನದಲ್ಲೇ ಈ ಎಲ್ಲಾ ಆಮ್ಲೀಯ ಹಣದುಬ್ಬರ ಉಬ್ಬರಿಸುತ್ತಲೇ ಸಾಗಿತು. ನಂತರ ಸರ್ಕಾರ ಬದಲಾಯಿತು!  ಬ್ಯಾಂಕುಗಳಲ್ಲಿ ಪೇರಿಸಲ್ಪಟ್ಟಿದ್ದ ದೊಡ್ಡ ಮೊತ್ತದ ಸಾಲಗಾರರು ದೇಶ ಬಿಟ್ಟರು, ಬ್ಯಾಂಕಿನ ಅವ್ಯವಹಾರಗಳು ಬಯಲಾದವು. ಹಾಗೆಯೇ ನೋಟು ಅಮಾನ್ಯೀಕರಣವಾಯಿತು.

ನೊಬೆಲ್ ವಿಜೇತೆ ಎಸ್ತರ್ ಡಫ್ಲೋ ಪ್ರಕಾರ ಭಾರತದಲ್ಲಿ ಜಾರಿಯಲ್ಲಿರುವ ಸಂಖ್ಯಾಶಾಸ್ತ್ರ ನಿಯಮಾವಳಿಗಳು ಮತ್ತು ಚಾಲ್ತಿಯಲ್ಲಿರುವ ಕ್ರಮಗಳು ಅನೌಪಚಾರಿಕ ಮಾಮೂಲಿ ಆರ್ಥಿಕ ಬದಲಾವಣೆಯ ಕುರಿತಾಗಿ ಮಾಹಿತಿಯನ್ನು ಹೊಂದಿರದ ಮತ್ತು ಕ್ರಮಬದ್ಧವಾಗಿ ಸಂಗ್ರಹಿಸದ ಕಾರಣ ಅಮಾನ್ಯೀಕರಣದ ಪ್ರಗತಿಯನ್ನಾಗಲೀ, ಹಿನ್ನೆಡೆಯನ್ನಾಗಲಿ ಅಳೆಯಲು ಯಾವತ್ತೂ ಸಾಧ್ಯವಾಗದು ಎಂದಿದ್ದಾರೆ. ಅಂದರೆ ಮಾಹಿತಿಯ ಕೊರತೆಯಿಂದ ಅಮಾನ್ಯೀಕರಣದ ಪರಿಣಾಮವನ್ನು ಅಳೆಯಲಾಗುವುದಿಲ್ಲವೇ ಹೊರತು ಅದು ಒಳ್ಳೆಯದೋ ಕೆಟ್ಟುದೋ ಎಂದು ಹೇಳಲಾಗುವುದಿಲ್ಲ ಎಂಬುದು ಸ್ಪಷ್ಟ. ಹಾಗೆಂದು ಅಳೆಯಲಾಗುವುದಿಲ್ಲವೆಂದು ಅಮಾನ್ಯೀಕರಣವನ್ನು ಮಾಡಲೇಬಾರದೆಂಬುದು ಕೂಡಾ ಪ್ರಶ್ನಾರ್ಹವಾಗುತ್ತದೆ.

ಇರಲಿ, ಇಲ್ಲಿ ಎಸ್ತರ್ ಅವರ ಅಭಿಪ್ರಾಯದಲ್ಲಿ ಗಮನಿಸಬೇಕಾದ ಅಂಶವೆಂದರೆ ಭಾರತದಲ್ಲಿ ಅನೌಪಚಾರಿಕ ಆರ್ಥಿಕತೆಯನ್ನು ಅಳೆಯುವ ಯಾವುದೇ ರೀತಿಯ ನೀತಿ ನಿಯಮಗಳು, ವ್ಯವಸ್ಥೆಗಳು ಜಗದ್ವಿಖ್ಯಾತ ಆರ್ಥಿಕ ತಜ್ಞರಾದ ಮನಮೋಹನ್ ಸಿಂಗ್ ಮತ್ತು ಚಿದಂಬರಂ ನಾಯಕತ್ವದಲ್ಲಿಯೂ ರೂಪುಗೊಳ್ಳದಿದ್ದುದು!

ಇನ್ನು ಅದೇ ಹದಿನೈದು ಸಾವಿರವಿದ್ದ ಒಬ್ಬ ಸಾಮಾನ್ಯ ಸಾಫ್ಟವೇರ್ ಎಂಜಿನಿಯರನ ಸಂಬಳ ಇಂದು ಮೂವತ್ತು ಸಾವಿರದ ಆಜುಬಾಜು ಇದೆ, ಏಕೆಂದರೆ ಇದು ನಿಜದ ಆರ್ಥಿಕ ಪ್ರಗತಿ ಮತ್ತು ಜಾಗತಿಕ ಮಟ್ಟಕ್ಕೆ ಸರಿಸಮವಾಗಿ ಬೆಳೆದಿದೆ. ಅದೇ ಜಾಗತಿಕ ಮಟ್ಟದ ಆರ್ಥಿಕತೆಗೆ ಸರಿಸಮವಾಗಿ ಬೆಳೆಯದೆ, ಆಮ್ಲೀಯ ಹಣದುಬ್ಬರಕ್ಕೆ ತೆರೆದುಕೊಂಡು ಬೆಳೆದ ದೇಶೀಯ ಆರ್ಥಿಕತೆ ತತ್ತರಿಸಿದೆ. ಈ ಆಮ್ಲೀಯ ಹಣದುಬ್ಬರಕ್ಕೆ ಅನುಗುಣವಾಗಿ ಎಲ್ಲಾ ಉದ್ಯೋಗ/ಉದ್ದಿಮೆಗಳಲ್ಲಿಯೂ ಸಮೃದ್ಧವಾಗಿ ಬೆಳೆದದ್ದು ಭ್ರಷ್ಟಾಚಾರ.  ಇದು ಲಂಗುಲಗಾಮಿಲ್ಲದೆ ಭ್ರಷ್ಟಾಚಾರವನ್ನು ಬೆಳೆಸಿದ ಆರ್ಥಿಕ ನೀತಿಗಳ ನೇರ ಮತ್ತು ಪ್ರತ್ಯಕ್ಷ ಪರಿಣಾಮ. ಉದಾಹರಣೆಗೆ ಆಸ್ತಿ ನೋಂದಣಿಯಲ್ಲಿ ಕಡಿಮೆ ಬೆಲೆ ತೋರಿಸುತ್ತಾರೆಂದು ಸರ್ಕಾರಗಳೇ ಯಾವುದೇ ಆರ್ಥಿಕ ಸೂತ್ರಕ್ಕೂ ಅನ್ವಯವಾಗದಂತಹ ಮಾರ್ಗದರ್ಶಿ ನೋಂದಣಿ ಬೆಲೆಯನ್ನು ಜಾರಿಗೆ ತಂದದ್ದು.  ಹೀಗೆ ಸುನಾಮಿಯನ್ನೇ ಆರ್ಥಿಕ ಬಲೂನಿನಲ್ಲಿ ತುಂಬಿ ಈಗ ಬಲೂನು ಸ್ಪೋಟಿಸುತ್ತದೆ ಎಂದರೆ...!?! ಕೇವಲ ಮತ್ತು ಕೇವಲ ಜನಸಂಖ್ಯೆಯ ಏಕೈಕ ಕಾರಣಕ್ಕೆ ಭಾರತದಲ್ಲಿ ಈ ರಿಸೆಷನ್ ಕಳೆದ ಎರಡು ದಶಕಗಳಿಂದ ಮುಂದೂಡಿಕೊಂಡು ಬಂದಿದೆ. ಆದರೆ ಈಗ ಕುತ್ತಿಗೆಗೆ ಬಂದಿದೆ. ಬ್ಯಾಂಕುಗಳಲ್ಲಿ ಈಗ ಮೊದಲಿನಂತೆ ಬೇಕಾಬಿಟ್ಟಿ ಸಾಲ ಸಿಗುತ್ತಿಲ್ಲ, ಆಮ್ಲೀಯ ಉಬ್ಬರದ ತಾಯಿಯಾಗಿದ್ದ ಅಬ್ಬರದ ರಿಯಲ್ ಎಸ್ಟೇಟ್ ತಣ್ಣಗಾಗಿದೆ, ಇವುಗಳಿಗೆ ತಕ್ಕಂತೆ ಉಬ್ಬರ ನಿಂತಿದೆ.  ಇಂತಹ ಆರ್ಥಿಕತೆಯ ನೈಜ ಚಿತ್ರಣ ರೂಪುಗೊಳ್ಳುವ ಸಮಯದಲ್ಲಿ ಸಂಕಟ ಬಂದಾಗ ವೆಂಕಟರಮಣ ಎಂಬಂತೆ ಒಂದು ಸಮಗ್ರ ದೂರದೃಷ್ಟಿಯಿಲ್ಲದೆ ಕೇವಲ ಭಾವನಾತ್ಮಕವಾಗಿ "ಪವಿತ್ರ ಆರ್ಥಿಕತೆ" ಎಂಬಂತಹ ಸಿಲ್ಲಿ ಹೋರಾಟಗಳು ಭಜನೆ ಎನಿಸಿಬಿಡುತ್ತದೆ.

ರಿಸೆಷನ್ನಿನಂತಹ ಆರ್ಥಿಕ ಸೈಕ್ಲಿಕಲ್ ಬದಲಾವಣೆಗಳನ್ನು ಸಮರ್ಥವಾಗಿ ನಿಯಂತ್ರಿಸದೆ "ತಲೆಗಿಂತ ತರಡು ದಪ್ಪ" ಮಾಡಿಕೊಂಡಿದ್ದರೂ ಅದು ನನ್ನ ಶಕ್ತಿ ಎಂದುಕೊಂಡು ದುರ್ಮಾಂಸ ಬೆಳೆಸಿಕೊಂಡವರಿಗೆ ಈ ಶಸ್ತ್ರಚಿಕಿತ್ಸೆ ಅವಶ್ಯಕ. ಈಗಲೂ ಇದು ಶಕ್ತಿಯಲ್ಲ ದುರ್ಮಾಂಸವೆಂದರೆ  ಯಾರೂ ನಂಬುವುದಿಲ್ಲ ಕೂಡ. ಹಾಗೊಮ್ಮೆ ನಂಬಿಸಿದರೂ ಮೋದಿಯಂತಹ ನಾಯಕರು ಏನಾದರೂ ಶಸ್ತ್ರಚಿಕಿತ್ಸೆರಹಿತ ದುರ್ಮಾಂಸ ತೆಗೆಯುವ ಮ್ಯಾಜಿಕ್ ಕಂಡುಹಿಡಿದಿರಬಹುದೆಂಬ ಆಶೆ! ಇಲ್ಲಾ ಇದನ್ನು ಪರಿಹರಿಸುವ ಗೋಮೂತ್ರ, ಕತ್ತೆಹಾಲು, ಸಾವಯವ ಔಷಧೀಯ ಗಿಡಮೂಲಿಕೆಗಳಿರಬಹುದೆಂಬ ಭ್ರಮೆ! ಅಥವಾ ಮುಂಬರಬಹುದಾದ ರಾಹುಲರ ನ್ಯಾಯ್ ನ್ಯಾಯವೊದಗಿಸುತ್ತಾರೆಂಬ ಇನ್ನೊಂದು ಗುಂಪಿನ ಉಬ್ಬರದ ಅಬ್ಬರ.

ಇರಲಿ, ಈಗ ಯಾವ ಅಂತರರಾಷ್ಟ್ರೀಯ ಆರ್ಥಿಕ ತಜ್ಞರು ಈ ಹಿಂಜರಿತದ ಕುರಿತು ಮಾತನಾಡುತ್ತಿರುವರೋ ಅವರುಗಳೇ ಜಾಗತಿಕ ಮಟ್ಟದ ಅಂಕಿಅಂಶಗಳ ಪ್ರಕಾರ
ಈ ಪರಿಸ್ಥಿತಿ 2021ರಷ್ಟೊತ್ತಿಗೆ ಸರಿಪಡಿಸಿಕೊಂಡು ಭಾರತ ಆರ್ಥಿಕವಾಗಿ ಮುಂದುವರಿಯಲಿದೆ ಎಂದಿದ್ದಾರೆ.

ಆದರೆ ದೇಶೀಯ ಅಂಕಿ-ಅಂಶಗಳು ಏನೆನ್ನುತ್ತವೆ? ಗೊತ್ತಿಲ್ಲ.

ಈ ಆರ್ಥಿಕ ಹಿಂಜರಿತ ಯಾ ರಿಸೆಷನ್ ಎಂಬುದು ಕೇವಲ ಒಂದು tip of the iceberg!  ಇಂತಹ ಅನಾಹುತಗಳೇ ನಡೆದು ಒಂದೊಮ್ಮೆ ಅಮೆರಿಕಾದಂತಹ ಅಮೆರಿಕವೇ ದಿ ಗ್ರೇಟ್ ಡಿಪ್ರೆಷನ್ ಎಂಬ ಆರ್ಥಿಕ ಪ್ಲೇಗಿಗೆ ಒಳಗಾಗಿತ್ತು. ಅಲ್ಲಿನ ಜನಸಾಮಾನ್ಯರಿಗೆ ಮುಂದಿನ ಊಟ ಮತ್ಯಾವಾಗ ಸಿಗುವುದೋ ಎಂಬುದು ಕೂಡ ಗೊತ್ತಿರುತ್ತಿರಲಿಲ್ಲ, ಊಟ ಸಿಕ್ಕಾಗ ಗಡದ್ದಾಗಿ ತಿನ್ನುತ್ತಿದ್ದರು. ಹಾಗಾಗಿಯೇ ಇಂದಿಗೂ ಅಮೆರಿಕಾದ ಹೋಟೆಲುಗಳಲ್ಲಿ ಕೊಡುವ ಊಟದ ಪ್ರಮಾಣ ಅಧಿಕ. ಅಂತಹ ಪರಿಸ್ಥಿತಿಯನ್ನು ಡಿಪ್ರೆಷನ್ ಸೃಷ್ಟಿಸಿತ್ತು. ಭಾರತ  ಇದನ್ನು ಒಂದು ಜಾಗತಿಕ ಗುಣಮಟ್ಟದ ಆರ್ಥಿಕ ನೀತಿ ಮತ್ತು ಭ್ರಷ್ಟಾಚಾರ ನಿರ್ಮೂಲನೆಯೊಟ್ಟಿಗೆ ತಹಬದಿಗೆ ತಂದು, ಒಂದು ಸತ್ಯದ ಆರ್ಥಿಕ ಅಭಿವೃದ್ಧಿ ಮಾಪನದ ಅಡಿಪಾಯದೊಂದಿಗೆ ಹೊಸ ಆರಂಭವನ್ನು ಆರಂಭಿಸದಿದ್ದರೆ ಆರ್ಥಿಕ ಡಿಪ್ರೆಷನ್ನಿಗೊಳಗಾಗಿ ದೇಶದ ತುಂಬೆಲ್ಲಾ ಇಂದಿರಾ ಕ್ಯಾಂಟೀನುಗಳನ್ನು ತೆರೆದು ಉಚಿತವಾಗಿ ಊಟ ಹಂಚಬೇಕಾಗುತ್ತದೆ. 
http://epaper.udayakala.news/

#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ
#ಕರ್ನಾಟಕವೆಂಬೋಕಮಂಗಿಪುರದಲ್ಲಿ

ಅಮೇರಿಕ, ಜಗತ್ತು, ಮೋದಿ, ನೋಟ್ ಬ್ಯಾನು, ಮತ್ತು ಬಲಪಂಥ!

ಕಳೆದ ತಿಂಗಳು ಮೈಸೂರಿನಲ್ಲಿ ನಡೆದ ಬಯಲು ಬೆಡಗು ಸಂವಾದದಲ್ಲಿ ನನಗೆ ಬಂದ ಮೂರು ಪ್ರಶ್ನೆಗಳು.

ಪ್ರಶ್ನೆ 1: ಜಗತ್ತೇ ಬಲಪಂಥದೆಡೆ ಸಾಗುತ್ತಿದೆ ಏಕೆ?

ಉತ್ತರ: ಭಾರತ ಬಲಪಂಥದೆಡೆ ಸಾಗಿದೆ ಎಂದು ಇಲ್ಲಿನ ವಿಚಾರಪರರು ಹೇಳುತ್ತೀರಿ ಸರಿ. ಅದನ್ನು ಅನಿವಾಸಿಯಾದ ನಾನು ಅಲ್ಲಗಳೆಯಲಾರೆ. ಆದರೆ ಹಾಗೆಂದು ಇಡೀ ಜಗತ್ತು ಬಲಪಂಥದೆಡೆ ಸಾಗುತ್ತಿದೆಯೇ ಎಂಬುದನ್ನು ಎರಡು ದೇಶಗಳ ಉದಾಹರಣೆಗಳನ್ನು ತೆಗೆದುಕೊಂಡು ನೋಡೋಣ.

ಮೊದಲನೆಯದಾಗಿ ಅಮೇರಿಕ. ಇಲ್ಲಿ ಟ್ರಂಪ್ ಉದ್ಯೋಗ ಸೃಷ್ಟಿಸುತ್ತೇನೆ ಮತ್ತು ಉದ್ಯಮಗಳನ್ನು ಮರಳಿ ಅಮೆರಿಕೆಗೆ ತರುತ್ತೇನೆ ಎಂಬ ಭರವಸೆಯನ್ನು ಕೊಟ್ಟು ಚುನಾವಣೆಯನ್ನು ಗೆದ್ದಿರುವುದು. ಆ ನಿಟ್ಟಿನಲ್ಲಿ ಉದ್ಯೋಗ ಸೃಷ್ಟಿಗೆ ವಲಸೆಯ ನಿಯಮಗಳನ್ನು ಬಿಗಿಗೊಳಿಸಿದ್ದಾನೆ. ಮತ್ತು ಅದಕ್ಕೆ ಪೂರಕವಾದ ಕೆಲವು ನಿಯಂತ್ರಣಗಳನ್ನು ಹಾಕಿದ್ದಾನೆ. ಹಾಗಿದ್ದಾಗ ಆತನ ಕ್ರಮ ಬಲಪಂಥೀಯವೇ? ಕೆಲವೊಂದು ಜನಾಂಗೀಯ ಕೊಲೆಗಳ ಘಟನೆಗಳು ನಡೆದವು. ಹಾಗೆಂದು ಆ ರೀತಿಯ ಘಟನೆಗಳು ಒಬಾಮಾರ ಸರ್ಕಾರವಿದ್ದಾಗ ಆಗಿರಲಿಲ್ಲವೇ, ಆಗಿದ್ದವು. ಒಬ್ಬ ಅಧ್ಯಕ್ಷ ತನ್ನ ದೇಶದಲ್ಲಿ ಉದ್ಯೋಗ ಸೃಷ್ಟಿಸಲು ಏನನ್ನು ಮಾಡಿದನೋ ಅದನ್ನು ಬಲಪಂಥವೆನ್ನಲಾಗದು. ಮೇಲಾಗಿ ಧರ್ಮ, ಧರ್ಮ, ಧರ್ಮ ಎಂದು ಅಮೆರಿಕಾದಲ್ಲಿ ಆಧ್ಯಕ್ಷೀಯ ಚುನಾವಣೆಯಲ್ಲಿ ಉದ್ಗರಿಸಿ ಚುನಾವಣೆ ಗೆಲ್ಲಬಹುದೆಂಬ ಅಲೋಚನೆಯೇ ನಗೆ ತರಿಸುತ್ತದೆ. ಅಮೆರಿಕಾದಲ್ಲಿ ಉದ್ಯೋಗ, ಉದ್ಯೋಗ ಭದ್ರತೆ, ಆರೋಗ್ಯ ಯೋಜನೆ, ಅಮೆರಿಕೆಯ ಪ್ರೌಢಿಮೆ/ಹಿರಿಮೆ/ಗರಿಮೆ ಮತ್ತು ಸಂಪತ್ತು ಸೃಷ್ಟಿಯ ಯೋಜನೆಯುಕ್ತ ಭರವಸೆಯನ್ನು ಟಾಮ್, ಡಿಕ್ ಮತ್ತು ಹ್ಯಾರಿ ತೋರಿದರೂ ಗೆಲ್ಲುತ್ತಾರೆ. ಅಮೆರಿಕೆಯ ಚುನಾವಣೆಯ ಪ್ರಣಾಳಿಕೆ ಯಾವತ್ತೂ ಇದೇ ಆಗಿದೆ, ಅಲ್ಲಿನ ಚುನಾವಣೆಯ ಇತಿಹಾಸವನ್ನು ಕೂಲಂಕುಷವಾಗಿ ಒಮ್ಮೆ ಪರಿಶೀಲಿಸಿ.

ಅದೇ ರೀತಿ ಜರ್ಮನಿಯ ಏಂಜೆಲಾ ಮರ್ಕೆಲ್ ಸಿರಿಯಾದ ರೆಫ್ಯುಜಿಗಳನ್ನು ತನ್ನ ದೇಶಕ್ಕೆ ಕರೆತಂದಳು. ಹಿಟ್ಲರ್ ಪಾತಕತನದಿಂದ ಇಂದು ಇಡೀ ಜರ್ಮನಿ ಪಾಪಪ್ರಜ್ಞೆಯಿಂದ ನರಳುತ್ತಿದೆ. ಆ ಪಾಪಪ್ರಜ್ಞೆಯ ಕಾರಣದಿಂದಲೇ ಜರ್ಮನಿಯ ನಾಯಕಿ ಆ ನಿರಾಶ್ರಿತರನ್ನು ಹಿಂದುಮುಂದು ನೋಡದೆ ಜರ್ಮನಿಗೆ ಕರೆತಂದದ್ದು. ಒಂದು "ಅನಾಗರಿಕ" ಹಿನ್ನೆಲೆಯ ಜನರನ್ನು ಮತ್ತೊಂದು ಸುಸಂಸ್ಕೃತ ನಾಗರೀಕತೆಗೆ ನೇರವಾಗಿ ತಂದು ಬಿಡುವ ಮುನ್ನ ಆ ನಿರಾಶ್ರಿತರನ್ನು ಒಂದು ಕ್ಯಾಂಪಿನಲ್ಲಿಟ್ಟು, ಶಿಕ್ಷಣ ಕೊಟ್ಟು ಅವರನ್ನು ಸಮಾಜದಲ್ಲಿ ಬೆರೆಯುವಂತೆ ಮಾಡಬೇಕಾಗಿದ್ದಿತು. ಆದರೆ ಅದು ಮಾನವ ವಿರೋಧಿ ಧೋರಣೆ ಎಂದು ಆಕೆ ನೇರವಾಗಿ ಆ ಜನರನ್ನು ಜರ್ಮನಿಯ ಮುಖ್ಯವಾಹಿನಿಗೆ ತಂದಳು. ಅದರ ಫಲಶ್ರುತಿಯಾಗಿ ಆ ನಿರಾಶ್ರಿತ "ಅನಾಗರಿಕ"ರು ಸುಲಿಗೆ, ಕಳ್ಳತನ ಅತ್ಯಾಚಾರವಲ್ಲದೆ ಸ್ಪುರದ್ರೂಪಿ ಜರ್ಮನ್ ಬಾಲಕರನ್ನು ಕೂಡಾ ಬಲಾತ್ಕಾರಿಸಲಾರಂಭಿಸಿದರು. ಈ ಅನಾಗರಿಕ ವರ್ತನೆಗಳ ವಿರುದ್ಧ ಜರ್ಮನರು ದಂಗೆದ್ದು ನಿರಾಶ್ರಿತರ ಮೇಲೆ ದಾಳಿ ಮಾಡಲಾರಂಭಿಸಿದರು. ಇದು ಬಲಪಂಥವೇ?

ಹೀಗೆ ಆಯಾಯ ದೇಶಕ್ಕೆ ಅದರದೇ ಕಾರಣದ ಆಯಾಮಗಳಿರುತ್ತವೆ. ಹಾಗಾಗಿ ಅವೆಲ್ಲವನ್ನೂ ನಮ್ಮ ಮೂಗಿನ ನೀರಕ್ಕೆ ಹೋಲಿಸಿ ಜಗತ್ತೇ ಬಲಪಂಥದೆಡೆ ಸಾಗುತ್ತಿದೆ ಎನ್ನುವುದು ನಮ್ಮಲ್ಲಿನ ಪೂರ್ವಾಗ್ರಹವೆನಿಸಿಬಿಡುತ್ತದೆ.

ಪ್ರಶ್ನೆ 2: ಅಮೆರಿಕಾ ವಲಸೆಗಾರರನ್ನು ಎರಡನೇ ದರ್ಜೆಯವರಂತೆ ಕಾಣುತ್ತದೆ ಮತ್ತು ಯಾರೂ ಮಾಡಲಿಚ್ಛಿಸದ ಉದ್ಯೋಗಗಳನ್ನು ಮಾತ್ರ ಅವರಿಗೆ ಕೊಡುತ್ತದೆ. ಇದು ಅಮೇರಿಕಾದವರ "ಬಂಡವಾಳಶಾಹಿ ಮನಸ್ಥಿತಿ".  ನಾನು ಸಾಕಷ್ಟು ಸಾರಿ ಅಮೆರಿಕೆಗೆ ಹೋಗಿದ್ದೇನೆ ಮತ್ತು ಇದನ್ನು ಕಂಡಿದ್ದೇನೆ. ಅಲ್ಲಿನ ಹೋಟೆಲ್ ಮತ್ತು ದಿನಸಿ ಅಂಗಡಿಗಳಲ್ಲಿ ಕೆಲಸ ಮಾಡುವವರೆಲ್ಲಾ ಭಾರತೀಯರು ಅಥವಾ ಪಾಕಿಸ್ತಾನಿಯರು. ಅಲ್ಲಿನ ಕಕ್ಕಸ್ಸು ತೊಳೆಯುವವರು ಮೆಕ್ಸಿಕನ್ನರು.

ಉತ್ತರ: ನೋಡಿ ತಾವು ಅಮೇರಿಕಾದಲ್ಲಿ ಇಳಿದ ತಕ್ಷಣ ಕಂಡ ಕಸ್ಟಮ್ಸ್ ಯಾ ಇಮಿಗ್ರೇಷನ್ ಅಧಿಕಾರಿ ನಿಮ್ಮನ್ನು ಯಾವುದೇ ಭಾರತದ ಅಧಿಕಾರಿಯ ಅಧಿಕಾರಶಾಹಿ ಗತ್ತಿನಲ್ಲಿ ಮಾತನಾಡಿಸಿದನೆ? ಅಥವ ತಮಗೆ ವಾಕಿಂಗ್ ಹೋಗುವಾಗಲೋ, ಮಾಲುಗಳಲ್ಲೋ ಸಿಕ್ಕ ಅಮೇರಿಕನ್ನರು ನಿಮ್ಮನ್ನು ಎರಡನೇ ದರ್ಜೆಯ ನಾಗರಿಕರನ್ನು ಕಂಡಂತೆ ವ್ಯವಹರಿಸಿದರೆ? ಇಲ್ಲ ತಾನೇ! ನಿಮಗೆ ಹಾಗೆನ್ನಿಸಲು ಒಂದು ಕಾರಣವಿದೆ. ಅದು ನೀವು ಅಮೇರಿಕೆಗೆ ಹೋದದ್ದು ತಮ್ಮ ಆಪ್ತೇಷ್ಟರನ್ನು ಕಾಣಲು.

ಹಾಗಾಗಿ ತಮ್ಮ ಹೇಳಿಕೆಯಿಂದಲೇ ನಾನು ಹೇಳಬಲ್ಲೆ ನೀವು ಅಮೆರಿಕದಲ್ಲಿ ಕೇವಲ ಭಾರತೀಯ ಮೂಲದ ಹೋಟೆಲ್ ಮತ್ತು ದಿನಸಿ ಅಂಗಡಿಗಳಿಗೆ ಮಾತ್ರ ಭೇಟಿ ಕೊಟ್ಟಿದ್ದೀರಿ. ಹಾಗಾಗಿಯೇ ಸಹಜವಾಗಿ ಅಲ್ಲಿ ಕೆಲಸ ಮಾಡುವ ಕೇವಲ ಭಾರತೀಯ ಮೂಲದವರನ್ನು ಮಾತ್ರ ಕಂಡಿದ್ದೀರಿ ಮತ್ತು ಕಕ್ಕಸ್ಸು ತೊಳೆಯುವ ಮೆಕ್ಸಿಕನ್ನನನ್ನು ಕಂಡಿದ್ದೀರಿ. ಇಲ್ಲಿ ಶೋಷಣೆ ಇದ್ದರೆ ಅದು ಒಬ್ಬ ಲೀಗಲ್ ವಲಸಿಗ (ಭಾರತೀಯ) ಮತ್ತೊಬ್ಬ ಇಲ್ಲೀಗಲ್ ವಲಸಿಗನ (ಮೆಕ್ಸಿಕನ್) ಪರಿಸ್ಥಿತಿಯ ಶೋಷಣೆ ಇರುತ್ತದೆಯೇ ಹೊರತು ಮತ್ಯಾವ ಅಮೇರಿಕನ್ ಶೋಷಣೆ ಇರುವುದಿಲ್ಲ.

ನೀವು ಯಾವುದೇ ಅಮೇರಿಕನ್ ಮೂಲದ ಹೋಟೆಲ್, ದಿನಸಿ ಅಂಗಡಿ ಯಾ ಯಾವುದೇ ರಿಟೇಲ್ ಅಂಗಡಿ ಮುಂಗಟ್ಟುಗಳಿಗೆ ಹೋದರೆ ನಿಮಗೆ ಅಲ್ಲಿ ವೇಟರ್, ಹೆಲ್ಪರ್, ಗುಮಾಸ್ತ, ಕೂಲಿಯಷ್ಟೇ ಅಲ್ಲದೆ ಕಕ್ಕಸ್ಸು ತೊಳೆಯುವ ಬಿಳಿಯ ಅಮೇರಿಕನ್ ಕೂಡ ಕಾಣುತ್ತಾನೆ.

ಹಾಗಾಗಿ ದಯವಿಟ್ಟು ಮತ್ತೊಮ್ಮೆ ಅಮೇರಿಕೆಗೆ ಅಮೇರಿಕಾವನ್ನು ಕಾಣುವ ಸಲುವಾಗಿ ಭೇಟಿ ಕೊಡಿ. ಕೇವಲ ನಿಮ್ಮ ಮಕ್ಕಳನ್ನು ಕಂಡು ಅಮೆರಿಕಾದಲ್ಲಿಯೂ ಇಡ್ಲಿ ದೋಸೆ ತಿನ್ನದೇ ಅಮೆರಿಕಾದ ಆಹಾರವನ್ನೂ ತಿಂದು ನಿಜದ ಅಮೇರಿಕನ್ ಸಂಸ್ಕೃತಿಯನ್ನು ನೋಡಿಕೊಂಡು ಬನ್ನಿ.

ಪ್ರಶ್ನೆ 3: ಮೋದಿಯನ್ನು ವಿನಾ ಕಾರಣ ಏಕೆ ಬೆಂಬಲಿಸುತ್ತೀರಿ.

ಉತ್ತರ: ಮೋದಿಯನ್ನು ನಾನು ವ್ಯಕ್ತಿಗತವಾಗಿ ಬೆಂಬಲಿಸದೆ ಕೇವಲ ಆತನ ಕೆಲವು ಪಾಲಿಸಿಗಳಿಗೆ ತರ್ಕಬದ್ಧವಾಗಿ ಬೆಂಬಲಿಸಿದ್ದೇನೆ. ಹಾಗಾಗಿ ಆತನ ಒಂದು ಪಾಲಿಸಿಯನ್ನು ಹೇಳಿ, ಆ ಕುರಿತು ಮಾತನಾಡೋಣ ಎಂದಾಗ ನನಗೆ ಕೊಟ್ಟ ವಿಷಯ ನೋಟ್ ಬ್ಯಾನ್.

ನೋಟ್ ಬ್ಯಾನ್ ಒಂದು ಉತ್ತಮ ನಿರ್ಣಯ. ಅದರಿಂದ ಚಾಲನೆಯಲ್ಲಿದ್ದ ಎಲ್ಲಾ ನೋಟುಗಳು ಎಲ್ಲಿಂದ ಬಂದವೆಂಬ ಆಡಿಟ್ ಟ್ರೇಲ್ ಸಿಕ್ಕಿದೆ. ಆ ಆಡಿಟ್ ಟ್ರೇಲ್ ಹಿಡಿದು ಯಾವ ಖಾತೆಗೆ ಇಪ್ಪತ್ತೈದು ಲಕ್ಷಕ್ಕಿಂತ ಅಥವಾ ಐವತ್ತು ಲಕ್ಷಕ್ಕಿಂತ ಅಧಿಕ ಜಮಾವಣೆಯಾಗಿದೆ ಅವರೆಲ್ಲಾ ಲೆಕ್ಕ ಕೊಡಿ ಎಂದರೆ ಅದರ ಪೂರ್ಣ ಫಲ ಸಿಗಲಿದೆ. ಹಾಗೆ ಮಾಡಿರೆಂದು ನಿಮ್ಮನ್ನೂ ಸೇರಿ ಯಾರಾದರೂ ಪ್ರಗತಿಪರರು ಪ್ರಶ್ನಿಸಿದ್ದೀರೇ? ಇಲ್ಲ, ಇನ್ನು ನೋಟು ಬದಲಾಯಿಸಿಕೊಳ್ಳಲು ಜನ ಕ್ಯೂನಲ್ಲಿ ಸತ್ತರೆಂದು ಬೊಬ್ಬಿರಿದದ್ದೇ ಹಾಸ್ಯಾಸ್ಪದ. ಜನ ನೀರಿಲ್ಲದೇ ಸತ್ತಾರೆಯೇ ವಿನಹ ನೋಟಿಲ್ಲದೇ ಸಾಯುವುದಿಲ್ಲ. ಒಬ್ಬ ಕೃಷಿ ಕಾರ್ಮಿಕ ಕೂಡಾ ಉದ್ರಿ ಮೇಲೆಯೇ ದಿನಸಿ ಸಾಮಾನು ತರುವುದು. ಇಡೀ ಭಾರತದ ಅರ್ಥವ್ಯವಸ್ಥೆ ನಿಂತಿರುವುದೇ ಉದ್ರಿ ವ್ಯವಹಾರದ ಮೇಲೆ! ನನ್ನ ಅಜ್ಜನ ಕಾಲದಿಂದಲೂ ಉದ್ರಿ ಹುಂಡಿ ವ್ಯವಸ್ಥೆ ಇದ್ದಿತು.  ನಾನೊಬ್ಬ ಮಾಜಿ ದಿನಸಿ ಅಂಗಡಿ, ದಲಾಲಿ ಮಂಡಿ ನೌಕರ. ಈ ಉದ್ರಿ ವ್ಯವಹಾರದ ಅನುಭವ ನಿಮ್ಮೆಲ್ಲರಿಗಿಂತ ನನಗೆ ಚೆನ್ನಾಗಿದೆ. ಇನ್ನೂ ಉದ್ರಿ ವ್ಯವಹಾರದ ವಿವರಗಳು ಬೇಕಿದ್ದರೆ ಕೇಳಿ, ರೈತ-ಬೀಜ/ಗೊಬ್ಬರದ ಅಂಗಡಿ-ದಲಾಲಿ ಮಂಡಿ-ಖರೀದಿ ಮಂಡಿಗಳ ಉದ್ರಿ ಕುರಿತು ಗಂಟೆಗಟ್ಟಲೆ ಆ ವ್ಯವಹಾರ ಸೂತ್ರಗಳನ್ನು ಬಿಚ್ಚಿಡುವೆ. ಹಾಗಾಗಿ ನೋಟಿಲ್ಲದೇ ಜನ ಸತ್ತರೆಂಬುದು ಅವಾಸ್ತವ. ಈ ರೀತಿಯಾಗಿ ತಾರ್ಕಿಕ ಮೋದಿ ವಿರೋಧ ಸೃಷ್ಟಿಯಾಗದ ಕಾರಣ ಮೋದಿ ಎರಡನೇ ಬಾರಿ ಇನ್ನೂ ಹೆಚ್ಚಿನ ಗೆಲುವು ಸಾಧಿಸಿದ್ದುದು. ಈ ರೀತಿಯ ಆತಾರ್ಕಿಕ ವಿರೋಧ ಮುಂದುವರಿದದ್ದೇ ಆದರೆ ನಿಮ್ಮ ವಿಷಾದದ ಶೋಕ ಕೂಡಾ ಹೆಚ್ಚಲಿದೆ. ಹಾಗಾಗಿ ಒಂದು ಪ್ರಮುಖ ವಿರೋಧಪಕ್ಷ ಸೃಷ್ಟಿಗಾದರೂ ನಾವೆಲ್ಲರೂ ತಾರ್ಕಿಕ ಮೌಲ್ಯಯುತ ಹೋರಾಟವನ್ನು ಸೃಷ್ಟಿಸಬೇಕು.

Spanish Proverbs

Cómo están tus amigos ಅಂದರೆ ಸ್ನೇಹಿತರೇ ನೀವು ಹೇಗಿದ್ದೀರಿ? ಎಂದು ಸ್ಪ್ಯಾನಿಷ್ ಭಾಷೆಯಲ್ಲಿ.

ರಂಗಸ್ವಾಮಿಗಳು ನನ್ನ ಹಳೆಯ ದೋಸ್ತಿ. ಆಗಿನ್ನೂ ಅವರು ಕವನಗಳನ್ನು ಬರೆಯುತ್ತಿದ್ದರು. ಹೊಸದಾಗಿ ಮದುವೆಯಾಗಿದ್ದರು ನೋಡಿ, ಹಾಗಾಗಿ ಭಾರೀ ಚುಟುಕು ಕವನಗಳನ್ನು ಬರೆಯುತ್ತಿದ್ದರು. ಆಮೇಲೆ ಸಣ್ಣದಾಗಿ ಲೇಖನಗಳನ್ನು ಬರೆಯುತ್ತ ಹೆಂಡತಿಯರನ್ನು ಗೃಹಲಕ್ಷ್ಮೀ ಎಂದು ಏಕೆ ಕರೆಯುತ್ತಾರೆ ಎಂದು ಅರ್ಥವಾದ ನಂತರ ಹಣಕ್ಲಾಸಿಗೆ ಬಂದು ಈಗ ಆ ವಿಷಯದಲ್ಲಿ ತಜ್ಞರೆನಿಸಿಕೊಂಡಿದ್ದಾರೆ ಮತ್ತು ಖ್ಯಾತವಾಗಿದ್ದಾರೆ ಕೂಡ.
ಹಾಗಾಗಿಯೇ ಈ ಗಾದೆ, there is a woman behind every successful man.

ಇನ್ನು ನಮ್ಮಂತಹ ಎನ್ನಾರೈಗಳು ಹೇಗಪ್ಪಾ ಎಂದರೆ , ಎಲ್ ಕೆ ನೋ ಮೀರಾ, ನೋ ಸಸ್ಪಿರಾ
ಅಂದ್ರೆ Out of sight, out of mind!  ಹಾಗಾಗಿಯೇ ನಮ್ಮನ್ನು ಕ್ಯಾರೆ ಎನ್ನುವವರಿಲ್ಲ. ಅದಕ್ಕಾಗಿ ನಾವಿಬ್ಬರೂ ಎನ್ನಾರೈಗಳು ದಿಸ್ ಗ್ರೇಸಿಯ ಕೋಂಪಾರ್ಟಿದಾ ಮೆನೋಸ್ ಸೆಂತಿದಾ ಅಂದರೆ Two in distress makes sorrow less! ಎಂದು ನಮ್ಮ ಸಂಕಷ್ಟ ಪರಸ್ಪರ ಹಂಚಿಕೊಂಡು ಹಗುರಾಗುತ್ತೇವೆ.

ಸದ್ಯದಲ್ಲಿ ಈಗ ಎಲ್ಲರೂ ಆರ್ಥಿಕ ಹಿಂಜರಿತದ ಕುರಿತು ಮಾತನಾಡುವವರೆ ಎಲ್ಲೆಲ್ಲೂ. ಅರೆ, 200 ರೂಪಾಯಿ ಚದರಡಿ ಇದ್ದದ್ದು ಇಪ್ಪತ್ತು ವರ್ಷಗಳಲ್ಲಿ 20000 ರೂಪಾಯಿ ಆದಾಗ ಅದು ಏಕೆ ಆರ್ಥಿಕ ಮುಂದ್ಸರಿತ ಎಂದು ಎಲ್ಲಾ ಆರ್ಥಿಕ ತಜ್ಞರ ಅರಿವಿಗೆ ಬರಲಿಲ್ಲ? ಅದಕ್ಕೂ ಗಾದೆಗಳೇ ಉತ್ತರಿಸುತ್ತವೆ ಹೀಗೆ, ಉಪ್ಪು ತಿಂದ ಮೇಲೆ ನೀರು ಕುಡಿಯಲೇ ಬೇಕು, What goes up must come down, ಮಾಡಿದ್ದುಣ್ಣೋ ಮಹರಾಯ, ಅಥವಾ ಸ್ಪ್ಯಾನಿಷ್ ನ ಎಲ್ ಕೆ ಹಾಸೆ ಲಾ ಪಾಗಾ!

ಆಗ ಮೋದಿ ಸರ್ಕಾರವಿರದಿದ್ದ ಕಾರಣ ಅಥವಾ ಫೇಸ್ಬುಕ್ ಇರದ ಕಾರಣ ಜನ ಸರ್ವಶಾಸ್ತ್ರ ತಜ್ಞರಾಗಿರಲಿಲ್ಲವೆನಿಸುತ್ತದೆ. ಈಗ ಎಲ್ಲರೂ ಎಲ್ಲಾ ವಿಷಯದಲ್ಲಿ ತಜ್ಞರು!  ಹಾಗಾಗಿಯೇ ಅದಕ್ಕೂ ಸಮರ್ಪಕವಾದ ಗಾದೆಗಳಿವೆ, In the land of the blind, the one-eyed man is the king. ಅಥವಾ ಸ್ಪ್ಯಾನಿಷ್ ಭಾಷೆಯ ಉನ್ ಸಿಯೇಗೊ ಗೈಯಂದೋ ಆ ಓತ್ರೋ ಸಿಯೇಗೊ!

ಹೀಗೆ ಶತಶತಮಾನಗಳ ಹಿಂದೆ ಸೃಷ್ಟಿಯಾದ ಗಾದೆಗಳು ಈಗಲೂ ಪ್ರಸ್ತುತ. ಪ್ರತಿಯೊಂದು ಭಾಷೆಯಲ್ಲಿನ ಗಾದೆಗೆ ಇನ್ನೊಂದು ಭಾಷೆಯಲ್ಲಿ ಸಮಾನಾರ್ಥದ ಗಾದೆಯೊಂದು ಇದ್ದೇ ಇರುತ್ತದೆ. ಇದು ಕನ್ನಡ, ತೆಲುಗು, ಹಿಂದಿ, ಸ್ಪ್ಯಾನಿಷ್, ಇಂಗ್ಲಿಷ್, ಫ್ರೆಂಚ್, ಸ್ವಾಹಿಲಿ ಅಥವಾ ಇನ್ಯಾವುದೇ ಭಾಷೆಯಿರಲಿ ಅವುಗಳಲ್ಲಿ ಪರಸ್ಪರ ಸಮಾನಾರ್ಥದ ಗಾದೆಗಳು ಸರ್ವೇಸಾಮಾನ್ಯ.

ಯಾರು ಹೇಳಿದ್ದು ಜಗತ್ತು ಈಗ ಜಾಗತಿಕವಾಗಿದೆ ಎಂದು? ಜಗತ್ತು ವಿಕಾಸಗೊಂಡದ್ದೇ ಜಾಗತಿಕವಾಗಿ! ಇಂತಹ ಕೌತುಕ ಮತ್ತು ಭಾಷಾ ಬೆರಗನ್ನು ಕಾಣಲು "Spanish Proverbs" ಎಂಬ ಈ ಪುಸ್ತಕ ಮತ್ತದರ ಕನ್ನಡದ ಮೂಲ "ಸ್ಪ್ಯಾನಿಷ್ ಗಾದೆಗಳು" ಎರಡನ್ನೂ ಓದಿ.

ಆಸಕ್ತರು ನಿಮ್ಮ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ಆಗರ -Aagara ಗೆ ಇನ್‌ಬಾಕ್ಸ್ ಸಂದೇಶ ಕಳುಹಿಸಿ ಪುಸ್ತಕ ಪಡೆಯಬಹುದು.

ಕನ್ನಡ-ಇಂಗ್ಲಿಷ್ ಎರಡೂ ಆವೃತ್ತಿಗಳು ಸೇರಿ ಬೆಲೆ ₹ 190/- ಅಂಚೆ ಮತ್ತು ರವಾನೆ ವೆಚ್ಚ ಉಚಿತ.

ಗೂಗಲ್ ಪೇ, ಪೇಟಿಎಂ, ಫೋನ್ ಪೇ, ಭೀಮ್ ಅಪ್ಲಿಕೇಶನ್ ಮೂಲಕ 9844192952ಗೆ ಪಾವತಿಸಿ.

ಭಾರತ ಒಂದು ಮರುಶೋಧನೆ ಕೃತಿಯ ಹಿನ್ನೆಲೆಭಾರತೀಯರಾದ ನಿಮಗೊಬ್ಬ ಚೀನಿ ಸಹೋದ್ಯೋಗಿ ಸಿಗುತ್ತಾನೆ ಎಂದಿಟ್ಟುಕೊಳ್ಳಿ. ಆಗ ನಿಮ್ಮ ಅವನ ಬಗ್ಗೆ ಇರುವ ಸಮಾನ ವಿಷಯ ಎಂದರೆ ಜನಸಂಖ್ಯೆ, ಇಂಡೋ ಚೈನಾ ಯುದ್ಧ, ಬುದ್ಧ, ಕಮ್ಯುನಿಸಂ, ಬಿಟ್ಟರೆ ಹುಯೆನ್ ತ್ಸಾಂಗ್! ಹೀಗೆ ಹುಯೆನ್ ತ್ಸಾಂಗ್ ಬಗ್ಗೆ ಅವನು ಗೊತ್ತಾ, ಓದಿದ್ದೀಯಾ ಇತ್ಯಾದಿ ಮಾತನಾಡುತ್ತೀರಿ.
ಆ ರೀತಿಯಾಗಿ ಆರಂಭಗೊಂಡ ನನ್ನ ಮೇಜುವಾನಿ ಸಂಭಾಷಣೆ, ಹುಯೆನ್ ತ್ಸಾಂಗನ ಮಹಾಪಯಣ ಎಂಬ ಪುಸ್ತಕವಾಯಿತು.
ಆ ಪುಸ್ತಕ, ಡಲ್ಲಾಸ್ ನಗರದಲ್ಲಿ ನಡೆದ ಅಕ್ಕ ಸಮ್ಮೇಳನದಲ್ಲಿ ಕಳೆದ ವರ್ಷ ಬಿಡುಗಡೆಗೊಂಡಿತು.  ಅಕ್ಕದ ಆ ಸಮ್ಮೇಳನದ ಒಂದು ಸಂಜೆ ಶಿಕಾಗೋದಿಂದ ಬಂದಿದ್ದ ನಾನು, ಮೋಹನ್ ಗೌಡರು, ಶ್ರೀಶೈಲ ವಿರುಪಣ್ಣಾವರ್, ಪ್ರಭು ನಂಜಣ್ಣಾವರ್, ಬೆಂಗಳೂರಿನಿಂದ ಬಂದಿದ್ದ ಸಮಾಜಮುಖಿ ಬಳಗದ ಜಯರಾಮ್, ಮತ್ತು ಡಲ್ಲಾಸಿನವರೇ ಆದ ಸುಷ್ಮಾ ಮತ್ತು ನನ್ನ ಹೆಂಡತಿ ಸುನೀತಾ ಕುಳಿತು ಹುಯೆನ್ ತ್ಸಾಂಗನ ಕುರಿತಾದ ನನ್ನ ಸಂಶೋಧನೆಯ ಕುರಿತು ಮಾತನಾಡುವಾಗ, ಜಯರಾಮ್ ಅವರು ರಾಖೀಗಢಿಯಲ್ಲಿ ದೊರೆತ ಪಳೆಯುಳಿಕೆಗಳ ಇತ್ತೀಚಿನ ಉತ್ಖನನದ ಸಂಶೋಧನೆಯ ಬಗ್ಗೆ ಉಲ್ಲೇಖಿಸಿದರು. ಆಗ ಚರ್ಚೆ ಗಂಭೀರವಾಗುತ್ತಾ ರಾಮಾಯಣ, ಮಹಾಭಾರತ, ಆರ್ಯ, ದ್ರಾವಿಡ, ಸಂಸ್ಕೃತ, ಪ್ರಾಕೃತ, ಹಿಂದುತ್ವ, ಕೊಲಂಬಸ್, ಐಟಿ ಎಲ್ಲಾ ವಿಷಯಗಳೂ ಚರ್ಚಾ ವಿಷಯಗಳಾಗಿ ಎಲ್ಲರೂ ಇತಿಹಾಸದ ಕುತೂಹಲಿಗಳಾದರು.
ಇತ್ತ ಸುನೀತಾ ಮತ್ತು ಸುಷ್ಮಾ ಯಾವುದೋ ನೃತ್ಯ ನೋಡಲು ಹೋಗುತ್ತಿದ್ದಂತೆಯೇ ಶ್ರೀಶೈಲರು ಸ್ಕಾಚ್ ತೆಗೆದು ಚರ್ಚೆಗೆ ತುಪ್ಪ ಸುರಿದರು. ಮೋಹನ್ ಗೌಡರು ಈ ಎಲ್ಲಾ ವಿಷಯಗಳ ಬಗ್ಗೆ ಯಾರಾದರೂ ಸ್ವಲ್ಪ ಹೆಚ್ಚಿನ ಸಂಶೋಧನೆ ಮಾಡಿ ಒಂದು ಕೈಪಿಡಿ ಮಾಡಬೇಕು ಕಣ್ರೀ ಎಂದರು. ನಂಜಣ್ಣಾವರರು ನೀವೆಲ್ಲಾ ಇಸ್ಪೀಟು ಆಡಲು ಬರುತ್ತೀರಿ ಎಂದುಕೊಂಡರೆ ಇತಿಹಾಸ ಕೆದಕುತ್ತಿರುವಿರಿ ಎಂದು ಹುಸಿ ಬೇಸರ ತೋರಿದರೂ, ಜೂಜು ಭಾರತೀಯರ ಮೂಲಗುಣ ಎಂದಾಗ ತಮ್ಮ ಜೂಜಿನ ಚಟ ವಂಶವಾಹಿ ಗುಣವೆಂದು ಬೀಗುತ್ತ ಚರ್ಚೆಗೆ ಕಿವಿಯಾದರು. ಹೀಗೆ ಜಯರಾಮರು ಎತ್ತಿದ ರಾಖೀಗಢಿ ಒಂದು ಕಿಡಿಯನ್ನು ಹಚ್ಚಿತು. ಆ ಕಿಡಿ, ಇಂದು ಕೃತಿಯಾಗಿ ನಿಮ್ಮ ಕೈ ಸೇರಿದೆ. 
ಬಿಸಿನೆಸ್ ಪ್ರಾಸೆಸ್, ರೋಡ್ ಮ್ಯಾಪ್, ಬ್ಲೂ ಪ್ರಿಂಟ್, ಬಿಗ್ ಡೇಟಾ, ಮಷಿನ್ ಲರ್ನ್ನಿಂಗ್ ಎನ್ನುವ ನನಗೆ, ಸಮುದ್ರಮಥನದಿಂದ ಅಮೃತ ಸೃಷ್ಟಿಯಾಯಿತೆಂಬುವ ಪೌರಾಣಿಕ ಕತೆ ಪ್ರಪ್ರಥಮ ಮಾಹಿತಿ ತಂತ್ರಜ್ಞಾನದ ವಿಶ್ಲೇಷಣೆಯ ದೃಷ್ಟಾಂತ ಸೂಚಿಯಾದರೆ, ಹುಯೆನ್ ತ್ಸಾಂಗ್ ಅಗಣಿತ ಮಾಹಿತಿಯನ್ನು ಮಥಿಸಿ, ಭಾರತದ ಇತಿಹಾಸದ ಉಪಯುಕ್ತ ನಿಖರ ಮಾಹಿತಿಯನ್ನು ನೀಡಿ ಮಾಹಿತಿ ವಿಶ್ಲೇಷಣೆಯನ್ನು ಸಾಕಾರಗೊಳಿಸಿದ ಆದಿಪುರುಷನೆನಿಸುತ್ತಾನೆ. ಅಂತಹ ಮಹಾನ್ ಪುರುಷನ ಕುರಿತು ಬರೆದ ನಾನು, ಅದೇ ರೀತಿಯಲ್ಲಿ ಮಾಹಿತಿಯನ್ನು ಮಥಿಸಿ ಈ ನನ್ನ ಕೃತಿ 'ಭಾರತ ಒಂದು ಮರುಶೋಧನೆ'ಯನ್ನು ರಚಿಸಿದ್ದೇನೆ ಎಂದುಕೊಂಡಿದ್ದೇನೆ.
ಹಮ್ಮ್, ಯಾರು ಹೇಳಿದ್ದು ಇತ್ತಲಿಂದ ಆಲೂಗಡ್ಡೆ ಹಾಕಿ ಅತ್ತಲಿಂದ ಬಂಗಾರ ತೆಗೆಯಲು ಸಾಧ್ಯವಿಲ್ಲ ಎಂದು? ಇನ್ನೊಮ್ಮೆ ಯೋಚಿಸಿ.😊
ಇರಲಿ, ಈ ಕೃತಿ ಕೇವಲ tip of an iceberg.
ಹಾಗಾಗಿಯೇ ಇದು ಒಂದು ಕೈಪಿಡಿಯಂತಿರುವುದು. ಇದನ್ನು ಅರಗಿಸಿಕೊಳ್ಳಲಿಕ್ಕೆ ತುಂಬಾ ಮುಕ್ತ ಮನಸ್ಸು ಬೇಕು. ಇನ್ನು ಆಳಕ್ಕೆ ಇಳಿದು ವಸ್ತುನಿಷ್ಠವಾಗಿ, ನಿರ್ಭಿಡೆಯಿಂದ ಬರೆದರೆ ಏನಾಗಬಹುದು ಎಂಬುದನ್ನು ಊಹಿಸಿಕೊಂಡು ಸತ್ಯವನ್ನು ಅಪ್ಪಿಕೊಳ್ಳಲು ತಯಾರಾಗಿ. ಏಕೆಂದರೆ ನಮ್ಮ ಪರಂಪರೆ ಉನ್ನತ, R1 DNA ಭಾರತ ಮೂಲದ್ದೆಂದು ಕೂಡ ಇತ್ತೀಚೆಗೆ ಸಾಬೀತಾಗುತ್ತಿದೆ.  ಆದರೂ ಒಂದು ಪರಂಪರೆಯಲ್ಲಿ ಒಳಿತು, ಕೆಡಕುಗಳು ಇದ್ದೇ ಇರುತ್ತವೆ ಎಂಬ ಸತ್ಯದ ಆಧಾರದ ಮೇಲೆ ನಮ್ಮ ಪರಂಪರೆಯನ್ನು ನಮ್ಮ ಚರಿತ್ರೆಯಾಗಿ ಒ/ಅಪ್ಪಿಕೊಂಡು ಮುಂದುವರಿಯಬೇಕಾಗಿದೆ.
ಒಟ್ಟಿನಲ್ಲಿ ಭಾರತ ಸದಾ ಮುಕ್ತ ಚಿಂತನೆಗೆ ತನ್ನನ್ನು ಸದಾ ತೆರೆದುಕೊಂಡಿದ್ದಿತು. ಹಾಗಾಗಿಯೇ ಹೊಸ ಹೊಸ ಚಿಂತನೆ, ಶಾಸ್ತ್ರ, ಪಂಥ, ಭಾಷೆ, ಪ್ರಭುತ್ವ, ಸಂಸ್ಕೃತಿಗಳು ಇಲ್ಲಿ ಹುಟ್ಟಿದ್ದು ಮತ್ತು ಪಸರಿಸಿದ್ದುದು. ಈ ಮುಕ್ತ ಚಿಂತನೆಯನ್ನು ಕೆಲವರು ತಮ್ಮ ಪಂಥ, ಭಾಷೆ, ಪ್ರಭುತ್ವಗಳನ್ನು ಹೇರಲು ಬಳಸಿಕೊಂಡರು, ಬಳಸಿಕೊಳ್ಳುತ್ತಿದ್ದಾರೆ. ಹಾಗೆಯೇ ಆ ಹೇರಿಕೆಯ ವಿರುದ್ಧದ ಹೋರಾಟ ಕೂಡ. ಈ ಘರ್ಷಣೆ ಸಾರ್ವಕಾಲಿಕ. ಇದೆಲ್ಲದರ ನಡುವೆಯೂ ಎದ್ದು ಕಾಣುವುದು ಭಾರತದ ಮುಕ್ತತೆ! ವಿಪರ್ಯಾಸವೆಂದರೆ, ಇಂದಿನ ಭಾರತೀಯ ತನ್ನ ಅಗಾಧ ಮುಕ್ತತೆಯ ಪಂಪರೆಯನ್ನು ಮರೆತು ಇತರೆ ದೇಶಗಳ ಮುಕ್ತತೆಯನ್ನು ಕೊಂಡಾಡುತ್ತಿದ್ದಾನೆ.
ಇಂತಹ ಇತಿಹಾಸದ ವಿಶ್ಲೇಷಣೆಗಳು, ಮತ್ತು ಶಾಸ್ತ್ರೋಕ್ತ ಸಂಶೋಧನೆಗಳು ಹೆಚ್ಚು ಹೆಚ್ಚಾಗಿ ಬಂದು ಭಾರತದ ಪರಂಪರೆಯನ್ನು ಕಟ್ಟಿಕೊಡಲು ಓದುಗರ ಪ್ರೋತ್ಸಾಹ ಅತ್ಯಾವಶ್ಯಕ.
ಬನ್ನಿ, ನಮ್ಮ ಪರಂಪರೆಯ ಒಂದು ಪಕ್ಷಿನೋಟವನ್ನು ನೋಡೋಣ. ಭಾರತ ಒಂದು ಮರುಶೋಧನೆಯನ್ನು ಇಲ್ಲಿ ಕೊಳ್ಳಬಹುದು.

ಪಿಹೆಚ್ಡಿ ಸಂಶೋಧನೆಗಳ ಶೋಷಣೆ!

ಜಾತಿ ಪದ್ದತಿ ತೊಲಗಬೇಕೆನ್ನುವ ವೈಚಾರಿಕತೆಯನ್ನು ಮೆಚ್ಚಿಕೊಳ್ಳುವ ಹಳ್ಳಿಗಾಡು, ಬಡತನದ ಹಿನ್ನೆಲೆಯ ಮೂವರು ಯುವಕರು ಮತ್ತು ಮೂವರು ಯುವತಿಯರು ಖ್ಯಾತ ಭಾಷಾ ವಿಶ್ವವಿದ್ಯಾಲಯದಲ್ಲಿ ಪಿಹೆಚ್ಡಿ ಮಾಡಲು ಆಯ್ಕೆಯಾಗಿದ್ದರು. ನವ ಸಮಾಜದ ಕನಸು ಕಾಣುತ್ತ ಅದಕ್ಕೆ ಪೂರಕವಾದ ವಿಚಾರಗಳ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳುವಂತಹ ವಿಷಯ ತಮ್ಮ ಪಿಹೆಚ್ಡಿ ವಿಷಯವಾಗುತ್ತದೆಂಬ ನಿರೀಕ್ಷೆಯನ್ನಿಟ್ಟುಕೊಂಡಿದ್ದರು.

ಭಾಷಾ ಅಧ್ಯಯನ ಸಂಸ್ಥೆಯ ಮುಖ್ಯಸ್ಥ ಪ್ರೊ. ಕನ್ನಡದೇವ. ಇವರು ಸಾಹಿತ್ಯ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದ್ದರು. ತಮ್ಮ ಜಾತಿವಿನಾಶದ ಕತೆ ಕಾದಂಬರಿಗಳಿಂದ ಸಾಕಷ್ಟು ಪ್ರಶಸ್ತಿಗಳನ್ನು ಪಡೆದಿದ್ದರು.  ಇವರ ಸಾಹಿತ್ಯದಿಂದ ಪ್ರಭಾವಿತರಾಗಿದ್ದ ಆ ಆರು ಜನ ವಿದ್ಯಾರ್ಥಿಗಳ ನಿರೀಕ್ಷೆ ಜಾತಿಮುಕ್ತ ಸಮಾಜದ ಕುರಿತಾದ ಸಂಶೋಧನೆಗಳೇ ಆಗಿದ್ದವು. ಇಂತಹ ಧೀಮಂತರು ತಮಗೆ ಅತ್ಯುತ್ತಮ ಸಂಶೋಧನಾ ವಿಷಯವನ್ನೇ ಕೊಡುತ್ತಾರೆಂದು ಪ್ರೊಫೆಸರರಿಗಾಗಿ ಈ ಪಿಹೆಚ್ಡಿ ವಿದ್ಯಾರ್ಥಿಗಳು ಕಾತುರದಿಂದ ಕಾಯುತ್ತ ಕುಳಿತಿದ್ದರು. ಕನ್ನಡದೇವರ ತಂದೆ ತಮ್ಮ ಮಗನಿಗೆ ಜಾತಿಯ ಸೋಂಕು ಭಾದಿಸದ ಕನ್ನಡವೇ ಧರ್ಮ ಜಾತಿಯಾಗಲೆಂಬ ಸದುದ್ದೇಶದಿಂದ "ಕನ್ನಡದೇವ" ಎಂಬ ತಟಸ್ಥ ಹೆಸರನ್ನಿರಿಸಿದ್ದರು.

ಚಕಚಕನೆ ಮೆಟ್ಟಿಲೇರಿ ತಮ್ಮ ಚೇಂಬರಿಗೆ ಬಂದ ಪ್ರೊ.ಕನ್ನಡದೇವರು ಈ ವಿದ್ಯಾರ್ಥಿಗಳನ್ನು ಕರೆಸಿಕೊಂಡು ಪಿಹೆಚ್ಡಿ ವಿಷಯ ಹಂಚಲು ತೊಡಗಿದರು. ಮೊದಲ ವಿದ್ಯಾರ್ಥಿ ಪ್ರವೀಣ್ ನಾಯಕನಿಗೆ "ನೋಡು ಪ್ರವೀಣ, ನಿನ್ನ ವಿಷಯ 'ಕಾಡು ನಾಯಕ ಮತ್ತು ಊರು ನಾಯಕರ ಸೂಕ್ಷ್ಮ ಸಂಸ್ಕೃತಿ ಬೇಧ'" ಎನ್ನುತ್ತಾ ಪ್ರಭಾವತಿ ಸಾಲಿಮಠಳಿಗೆ 'ವಚನಕಾರರ ಕಾಮ ಮುಕ್ತತೆ ಮತ್ತು ಸಂಪ್ರದಾಯ ನಿಗ್ರಹ', ರಾಜಾಸಾಬ್ ಹುಕ್ಕೇರಿಗೆ 'ಪಿಂಜಾರರ ಆಲಿ ದೇವ ಮತ್ತು ಸಕ್ಕರೆ ಶಾಸ್ತ್ರ ಸಂಸ್ಕೃತಿ', ದೀಪಾ ಪೂಜಾರಳಿಗೆ 'ಹಾಲುಮತದ ಜನಪದದಲ್ಲಿ ಮಹಿಳೆಯರ ಪಾತ್ರ',    ಶಂಕರಶಾಸ್ತ್ರಿಗೆ ' ವೈದಿಕ ಪೌರೋಹಿತ್ಯಶಾಹಿಯಲ್ಲಿ ತಾಂತ್ರಿಕ ಪಂಥದ ಏಕೀಕರಣ' ಮತ್ತು ಯೂಸುಫಾ ಜಾನ್ ಳಿಗೆ 'ಉತ್ತರ ಕರ್ನಾಟಕದ ಉರ್ದು ಗಜಲ್ಗಳ ಮೇಲೆ ಗುರುರಾಜ ಹೊಸಕೋಟಿಯ ಪೋಲಿ ಪ್ರಭಾವ' ಎಂದು ವಿಷಯಗಳನ್ನು ಕೊಟ್ಟರು.

ಈ ವಿಷಯಗಳಿಂದ ವಿಚಲಿತರಾದ ವಿದ್ಯಾರ್ಥಿಗಳು ಪೆಚ್ಚಾಗಿ " ಸರ್, ನಾವು ನಿಮ್ಮ ಜಾತಿಮುಕ್ತ ಚಳುವಳಿಯಿಂದ ತುಂಬಾ ಪ್ರಭಾವಿತರಾಗಿದ್ದೇವೆ. ಹಾಗಿದ್ದಾಗ ಈ ವಿಷಯಗಳು..." ಎನ್ನುತ್ತಿದ್ದಂತೆಯೇ ಅವರನ್ನು ಅರ್ಧದಲ್ಲಿ ತುಂಡರಿಸಿ "ನೋಡಿ, ನಾವು ಪಿಹೆಚ್ಡಿಯನ್ನು ಜಾತಿ ವಿಷಯಗಳಲ್ಲೇ ಮಾಡ್ಬೇಕು. ಏಕೆಂದರೆ ಜಾತಿ ನಮ್ಮ ಅಸ್ಮಿತೆ. ನಿಮ್ಮ ಜಾತಿಯ ಮೂಲಬೇರು ನಿಮಗೆ ತಿಳಿದಿರುವುದರಿಂದ ಈ ವಿಷಯವನ್ನು ನೀವು ಸಮರ್ಥವಾಗಿ ನಿಭಾಯಿಸಬಲ್ಲಿರಿ ಮತ್ತು ಅದು ನಿಮ್ಮ ಕರ್ತವ್ಯ ಕೂಡ. ಇನ್ನು ಜಾತಿಮುಕ್ತತೆ ಕೇವಲ ಅಂತರ್ಜಾತಿ ವಿವಾಹವಾದರೆ ಸಾಕು, ನಿಮಗೆ ಮುಕ್ತಿ ಸಿಗುತ್ತದೆ. ಅಂತಹ ಅಸ್ಮಿತೆಯ ಕುರಿತಾಗಿಯೇ ನೆರೂಡ, ಕಾಫ್ಕಾ, ಟಾಲ್ಸ್ಟಾಯ್ ಅವರೆಲ್ಲಾ ಹೇಳಿರುವುದು.  ಆದರೆ ಜಾತಿ ಎಂಬ ಅಸ್ಮಿತೆ ನಿಮ್ಮಲ್ಲಿ ಸದಾ ಜಾಗೃತವಾಗಿರಲಿ. ಹಾಂ, ಮುಂದಿನ ತಿಂಗಳೊಷ್ಟತ್ತಿಗೆ ಒಂದು ರೂಪು ರೇಷೆ ಹಾಕಿಕೊಂಡು ಬನ್ನಿ, ಈಗ ಹೊರಡಿ" ಎಂದರು.

ಯೂಸುಫಾ ಜಾನ್ ಮಾತ್ರ ಅಲ್ಲೇ ನಿಂತಿದ್ದಳು.  ಏನೆಂದು ಪ್ರೊಫೆಸರರು ಹುಬ್ಬೇರಿಸಿದರು. "ಸರ್, ನನ್ನ ಹೆಸರು ಜೋಸೆಫಾ ಜಾನ್. ಅದನ್ನು ನಮ್ಮ ಪಾದ್ರಿಗಳು ಯೂಸುಫಾ ಎನ್ನಬೇಕು ಎಂದು ಹಾಗೆ ಹೆಸರಿಟ್ಟಿದ್ದಾರೆ" ಎಂದಳು.

"ಅರೆ, ಅದಕ್ಕೇನಂತೆ...ಇನ್ನೂ ಉತ್ತಮ ವಿಷಯ ಕೊಡುತ್ತೇನೆ ತಗೋ. 'ಪ್ರೊಟೆಸ್ಟಂಟರ ಚಳುವಳಿ ಮತ್ತು ಕಲ್ಯಾಣ ಕ್ರಾಂತಿ ಸಮೀಕರಣ.' ಗಾಡ್ ಬ್ಲೆಸ್ ಯೂ, ನೌ ಗೋ"  ಎಂದರು.

ಇದು ಯಾವುದೇ ಉತ್ಪ್ರೇಕ್ಷೆಯಲ್ಲ, ಇಂದು ಸಂಶೋಧನಾ ವಿಶ್ವವಿದ್ಯಾಲಯಗಳಲ್ಲಿ ನಡೆಯುತ್ತಿರುವ ಪಿಹೆಚ್ಡಿಗಳೇ ಹೀಗೆ. ಕಳೆದ ಹತ್ತು ವರ್ಷಗಳಲ್ಲಿ ಕನ್ನಡ ನಾಡು ನುಡಿ ಕುರಿತಾದ ಸಂಶೋಧನಾ ವಿಭಾಗಗಳಲ್ಲಿ ಆದ ಪಿಹೆಚ್ಡಿಗಳನ್ನು ಗುಡ್ಡೆ ಹಾಕಿ ನೋಡಿ! ಹಾಗೆಯೇ ಕಾಫ್ಕಾ, ನೆರೂಡಾ, ಮುಂತಾದ ವಿದೇಶಿ ಲೇಖಕರುಗಳನ್ನು ಬಿಡಿ, ನಮ್ಮ ಅಂಬೇಡ್ಕರರ ಪುಸ್ತಕಗಳ ಕನ್ನಡ ಅನುವಾದಗಳನ್ನು ಗಮನಿಸಿ. ABCD ಬಿಟ್ಟರೆ ಇನ್ನೇನೂ ಬಾರದ ಕನ್ನಡ ಭಾಷಾ ಪ್ರೊಫೆಸರರುಗಳು ಮೂಲ ಕೃತಿಗಳನ್ನು ಕೈಯಲ್ಲಿ ಹಿಡಿದು ಹಿಂದೆ ಮುಂದೆ ತಿರುವಿ ನೋಡಿ ಅನುವಾದಿಸಿರುವಂತಿವೆ. ನನ್ನ ಈ ಮೊದಲ "ಮಹಿಷ ಮತ್ತು ವಿದೂಷ" ಲೇಖನ ಇಂತಹ ತಿರುಚುವಿಕೆಯ ಸವಿವರಗಳನ್ನು ಹೊಂದಿದೆ.

ಹಾರ್ವರ್ಡ್ ವಿಶ್ವವಿದ್ಯಾಲಯದ ಡೇವಿಡ್ ರೀಚ್ ಅವರ R1A DNA ಸಂಶೋಧನೆಯನ್ನು ಎತ್ತಿಹಿಡಿದು ವೈದಿಕ, ಪುರೋಹಿತಶಾಹಿ, ದಲಿತ, ದಮನಿತ ಎಂಬ ರಂಗುಗಳ ಸೃಜನಶೀಲ ಮೆರುಗನ್ನು ಹಚ್ಚಿ ಮಿರಿಮಿರಿ ಮಿಂಚಿಸುತ್ತಾರೆ. ಆದರೆ ಇದೇ ಹಾರ್ವರ್ಡ್ ವಿಶ್ವವಿದ್ಯಾಲಯದ ಮೈಕಲ್ ವಿಟ್ಜೆಲ್ ಋಗ್ವೇದವನ್ನು ಆರ್ಯರ ಆಗಮನಕ್ಕೂ ಮುಂಚಿತವಾಗಿಯೇ ಮೂಲನಿವಾಸಿಗಳು ರಚಿಸಿದ್ದರು ಎಂಬ ಸಂಶೋಧನೆಯನ್ನು ಮರೆಮಾಚಿಸಿ ತಮ್ಮ ವೈದಿಕ ಬ್ರಾಹ್ಮಣ್ಯ ಹೇರಿಕೆ/ದಲಿತ ಶೋಷಣೆ ಎಂಬ ಸಿದ್ದ ಸಿದ್ಧಾಂತವನ್ನು ಸಂಶೋಧನೆಗಳಿಗೆ ಸಂಯೋಜಿಸುತ್ತಾರೆ.

ಕಪ್ಪು ಬಿಳುಪಿನ ಸಂಶೋಧನೆಗಳಿಗೆ ರಂಗು ಬಳಿಯುವ ಜಾಣತನ/ಸಣ್ಣತನಗಳ ಕನ್ನಡದೇವರಿಂದ ಸಂಶೋಧನೆಗಳನ್ನು ಬೇರ್ಪಡಿಸುವ ತುರ್ತುಪರಿಸ್ಥಿತಿಯನ್ನು ಹೇರಬೇಕಾಗಿದೆ.

ಮಹಿಷ ಮತ್ತು ವಿದೂಷ!

ಇತ್ತೀಚೆಗೆ ದಸರಾ ಬಂದೊಡನೆಯೇ ಚಾಮುಂಡಿಗಿಂತ ಮಹಿಷ ಹೆಚ್ಚು ಹೂಂಕರಿಸುತ್ತಿದ್ದಾನೆ. ಈತ ಸ್ಥಳೀಯ ಬೌದ್ಧ ಬಿಕ್ಷು
ಜನಾನುರಾಗಿ ರಾಜನಾಗಿ ಆಡಳಿತ ನಡೆಸಿದ್ದನು. ಆದರೆ ವೈದಿಕ ಪುರೋಹಿತಶಾಹಿಗಳು ಹುನ್ನಾರದಿಂದ ಈತನನ್ನು ಕೊಂದು ರಾಕ್ಷಸನಾಗಿ ಬಿಂಬಿಸಿದ್ದಾರೆ ಎನ್ನುವ ಬಲವಾದ ವಾದಗಳು ಎಡದಿಂದ ಕೇಳಿಬರುತ್ತಿವೆ. ಈ ಕುರಿತಾಗಿ ಪ್ರಗತಿಪರರು ಹೋರಾಟವನ್ನೇ ರೂಪಿಸಿಕೊಂಡಿದ್ದಾರೆ. ಇನ್ನು ಕೆಲ ಬಲಪಂಥೀಯರು ಮಹಿಷನೆಂಬ ಸನ್ಯಾಸಿ ಬೌದ್ಧ ಭಿಕ್ಷು ರಾಜನಾಗಿದ್ದನೆಂಬುದೇ ಜೋಕು ಎಂದು ಅಪಹಾಸ್ಯ ಮಾಡುತ್ತಿದ್ದಾರೆ.

ಹಲವಾರು ಓದುಗ ಮಿತ್ರರು ನನ್ನ ಕೃತಿ "ಭಾರತ ಒಂದು ಮರುಶೋಧನೆ"ಯನ್ನು ಓದಿ ಕೌತುಕಗೊಂಡು ಮಹಿಷನ ಇತಿಹಾಸವನ್ನು ಬಲ್ಲಿರಾ ಮತ್ತು ಆ ಕುರಿತು ತಿಳಿಸಿಕೊಡುವಿರಾ ಎಂದು ಕೇಳಿದ್ದಾರೆ. ಆ ಹಿನ್ನೆಲೆಯಲ್ಲಿ ಮಹಿಷ ಪುರಾಣ ಇತಿಹಾಸದ ಪುರಾವೆಯೊಟ್ಟಿಗೆ ಇಲ್ಲಿದೆ.

ಮೊದಲಿಗೆ, ಮಹಿಷ ದಸರಾ ಪರವಾಗಿ ನಿಂತಿರುವವರ ವಾದವನ್ನು ಗಮನಿಸೋಣ. ಈ ಗುಂಪಿನ ನಾಯಕರಾಗಿರುವ ಪ್ರೊ. ಬಿ.ಪಿ. ಮಹೇಶ್ ಚಂದ್ರ ಗುರು ಅವರು ಮಹಿಷನ ಬಗ್ಗೆ ಒಂದು ಲೇಖನವನ್ನೇ ಬರಿದಿದ್ದಾರೆ. ಹಾಗಾಗಿ ಅವರ ಮಾಹಿತಿಯನ್ನೇ ಆಧಾರವಾಗಿಟ್ಟುಕೊಂಡು ಇತಿಹಾಸ ಏನೆನ್ನುತ್ತದೆ ಎಂದು ವಿಶ್ಲೇಷಿಸೋಣ.

ಇಲ್ಲಿ ಐತಿಹಾಸಿಕವಾಗಿ ಮಹಿಷ ಒಬ್ಬ ಬೌದ್ಧ ಭಿಕ್ಷುವಲ್ಲ. ಆತ ಸಾಮ್ರಾಟ್ ಅಶೋಕನು ನೇಮಿಸಿದ ತೇರ ಮಹದೇವ ಎಂಬ ಆಡಳಿತಗಾರ. ಆತನು ಮಹಿಷ್ಮತಿ ಎಂಬ ವಂಶದವ. ಈ ವಂಶದ ಬಗ್ಗೆ ಮುಂದೆ ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳೋಣ. ಆತನ ಧರ್ಮ ಬೌದ್ಧಧರ್ಮ.

ಇನ್ನು ಪ್ರೊ. ಮಹೇಶ್ ಚಂದ್ರ ಗುರುಗಳು 'ನಾನುಗೌರಿ' ಪತ್ರಿಕೆಯಲ್ಲಿ ಬರೆದಿರುವ "ಮೂಲನಿವಾಸಿಗಳ ಮಹಿಷ ದಸರಾದ ಇತಿಹಾಸ" ಲೇಖನದಲ್ಲಿ ಪ್ರಸ್ತಾಪಿಸಿದ ಕೆಲ ವಿಚಾರಗಳು ಹೀಗಿವೆ.
1. 'ಒಂದು ಕಾಲದಲ್ಲಿ ಮೂಲನಿವಾಸಿಗಳ ದೊರೆಯಾದ ಮಹಿಷ ಯುದ್ಧದಲ್ಲಿ ದೇವತೆಗಳನ್ನು ಗೆದ್ದು ಅವರನ್ನು ಯಾವ ಅಧೋಗತಿಗೆ ಇಟ್ಟಿದ್ದನೆಂದರೆ ಅವರು ಭೂಮಿಯ ಮೇಲೆ ಭಿಕ್ಷುಕರಾಗಿ ಅಲೆದಾಡುತ್ತಿದ್ದರು’ (ಡಾ.ಬಿ.ಆರ್.ಅಂಬೇಡ್ಕರ್, ಸಂ.3, ಪು.395) ಎನ್ನುತ್ತಾ ಅಂಬೇಡ್ಕರರ ಸಂಪುಟವನ್ನು ಸಾಕ್ಷಿಯಾಗಿಸುತ್ತಾರೆ.

ಅಂದರೆ ಅಂಬೇಡ್ಕರ್ ಇಂದ್ರ ಮುಂತಾದ ದೇವತೆಗಳು ಭೂಮಿ ಮೇಲೆ ಇದ್ದರೆಂದು ನಂಬಿದ್ದರೆ?!?!

ಅಂಬೇಡ್ಕರರು ತಮ್ಮ ಸಂಪುಟ 3ರ ಪುಟ 395ರಲ್ಲಿ ಹಿಂದು ಪೌರಾಣಿಕ ಕಥೆಗಳಲ್ಲಿ ಬರುವ ನಹುಷ ಎಂಬ ಕ್ಷತ್ರಿಯನ ಮತ್ತು ಬ್ರಾಹ್ಮಣರ ನಡುವಿನ ಸಂಘರ್ಷದ ಬಗ್ಗೆ ಹೇಳಿದ್ದಾರೆಯೇ ವಿನಃ ಯಾವುದೇ ಇತಿಹಾಸದ ಕುರಿತಲ್ಲ. ಈ ನಹುಷನಿಗೂ ಮತ್ತು ಮಹಿಷೂರಿಗೂ (ಮೈಸೂರು) ಯಾವುದೇ ಸಂಬಂಧವಿಲ್ಲ. ಮಹಾಭಾರತದಲ್ಲಿ ಬರುವ ಕಾರ್ತವೀರ್ಯನೆಂಬುವವನು  ಮಹಿಷ್ಮತಿ ಎನ್ನುವ ನಗರದಲ್ಲಿ ವಾಸವಾಗಿದ್ದಾನೆನ್ನಲಾಗುವ ಕಥೆಯನ್ನು  ಉಲ್ಲೇಖಿಸಿದ್ದಾರೆ. ಈ ಮಹಿಷ್ಮತಿ ನಗರಕ್ಕೂ ಮೈಸೂರಿಗೂ ಯಾವುದೇ ಸಂಬಂಧವನ್ನು ಅವರು ಜೋಡಿಸಿಲ್ಲ.

2. "ಸಾಮ್ರಾಟ್ ಅಶೋಕನು ಮಹಾದೇವತೇರ ಎಂಬ ಬುದ್ಧನ ಅನುಯಾಯಿಯನ್ನು ದಕ್ಷಿಣ ಭಾರತಕ್ಕೆ ಬೌದ್ಧ ಧರ್ಮ ಪ್ರಚಾರ ಮತ್ತು ಮೌಲ್ಯಾಧಾರಿತ ಆಡಳಿತ ನೀಡುವ ಸಲುವಾಗಿ ಕಳುಹಿಸಿದನು. ಬೌದ್ಧ ಭಿಕ್ಕು ಮಹಾದೇವತೇರ ಅಂದು ಆಳಿದ ಮಹಿಷ ಮಂಡಲವೇ ಇಂದಿನ ಮೈಸೂರು ಎಂಬುದನ್ನು ಪ್ರಸಿದ್ಧ ಇತಿಹಾಸಕಾರ ಸೂರ್ಯನಾಥ ಕಾಮತ್ ಮೈಸೂರು ಗೆಜೆಟಿಯರ್‌ನಲ್ಲಿ ಐತಿಹಾಸಿಕ ದಾಖಲೆಗಳ ಆಧಾರದ ಮೇಲೆ ಮಂಡಿಸಿದ್ದಾರೆ. ಮಹಿಷ ಮಂಡಲ, ಮಹಿಷ ಪುರಿ, ಮಹಿಷೂರು ಮೊದಲಾದ ಹೆಸರಿನಿಂದ ಮಹಿಷನ ಸಾಮ್ರಾಜ್ಯವು ಕರೆಯಲ್ಪಟ್ಟಿದೆ.

ಭಾರತದ ವೈದಿಕಶಾಹಿ ಮೂಲನಿವಾಸಿಗಳ ಶ್ರೇಷ್ಠ ದೊರೆಗಳಾದ ಬಲಿಚಕ್ರವರ್ತಿ, ರಾವಣ, ನರಕಾಸುರ, ಮಹಿಷಾಸುರ ಮೊದಲಾದವರನ್ನು ತುಚ್ಛೀಕರಿಸಿ ಬೌದ್ಧ ಪರಂಪರೆಯನ್ನು ನಾಶಮಾಡುವ ಹುನ್ನಾರ ನಡೆಸಿದ್ದಾರೆ" ಎಂದು ಪ್ರೊಫೆಸರರು ಆರೋಪಿಸುತ್ತಾರೆ.

ಆದರೆ ಅವರ ಲೇಖನವೇ ಹೇಳುವಂತೆ ಉತ್ತರ ಭಾರತದಿಂದ ಬಂದ ತೇರ ಮಹದೇವನೆಂಬ ಮಹಿಷ ಅದು ಹೇಗೆ ಸ್ಥಳೀಯ ಮೂಲನಿವಾಸಿಯಾಗುವನು?!  ಅಶೋಕನ ಅಜ್ಜಿ ಅಂದರೆ ಚಂದ್ರಗುಪ್ತ ಮೌರ್ಯನ ಹೆಂಡತಿಯಾದ ಹೆಲೀನ ಗ್ರೀಕ್ ರಾಜಕುಮಾರಿ ಎಂಬುದು ನಿಮ್ಮ ಗಮನದಲ್ಲಿರಲಿ. ಏಕೆಂದರೆ ಇಂದಿನ ಪ್ರಗತಿಪರರು ಹೇಳುವಂತೆ ಮಹಿಷ ಮೈಸೂರು ಸೀಮೆಯ ಮೂಲನಿವಾಸಿ ಅಲ್ಲ. ಆತ ಶಕ ಅಥವಾ ಸೈಥಿಯನ್ ಮೂಲದವನು. ಅಂದರೆ ಗ್ರೀಕ್ ಹಿನ್ನೆಲೆಯವನು.

ಇನ್ನು ಈ ಪ್ರಗತಿಪರರು ಉಲ್ಲೇಖಿಸಿದ ಸೂರ್ಯನಾಥ ಕಾಮತರು ಬರೆದ ಎಂಟನೂರು ಚಿಲ್ಲರೆ ಪುಟಗಳಿರುವ ಮೈಸೂರು ಗೆಜೆಟಿಯರ್ ನಲ್ಲಿ ತೇರ ಮಹದೇವ ಎಂಬ ಹೆಸರಿರುವ ಏಕೈಕ ಪುಟದ ಚಿತ್ರ ಕೆಳಗಿರುವ ಮೊದಲನೆಯದು. ನೀವೇ ಓದಿ ನೋಡಿ, ತೂಲಿಸಿ. ಮಹಿಷ ಸೈಥಿಯನ್/ಶಕ ಎಂಬ ಬಗ್ಗೆ ಪುರಾವೆ ಕೂಡ ಅಲ್ಲಿದೆ.3. "ಮಹಿಷನು ಇಂದ್ರಾದಿ ದೇವತೆಗಳ ವಿರುದ್ಧ ವೀರೋಚಿತವಾಗಿ ಹೋರಾಟ ನಡೆಸಿ ಜಯಗಳಿಸಿದ ಸಂತಸದ ಸುದ್ದಿ ದಶ ದಿಕ್ಕುಗಳಲ್ಲಿಯೂ ಹರಡಿದ ಹಿನ್ನೆಲೆಯಲ್ಲಿ ಮೂಲನಿವಾಸಿಗಳು ಮಹಿಷನ ವಿಜಯವನ್ನು ‘ದಸರಾ’ ಎಂಬ ಹೆಸರಿನಲ್ಲಿ ದೊಡ್ಡ ಹಬ್ಬವನ್ನಾಗಿ ಆಚರಿಸುತ್ತಾರೆ" ಎಂದು ಮಹೇಶ್ ಚಂದ್ರ ಗುರುಗಳು ಪ್ರತಿಪಾದಿಸುತ್ತಾರೆ.

ಅಂದರೆ ದೇವಾನುದೇವತೆಗಳು ಐತಿಹಾಸಿಕವಾಗಿ ಇದ್ದರು ಎಂದು ನಾಸ್ತಿಕ ಪ್ರಗತಿಪರರು ಸಾಬೀತು ಮಾಡುತ್ತಿದ್ದಾರೆಯೇ? ಅವರೇ ಹೇಳಬೇಕು!

ಇರಲಿ, ಈ ಕುರಿತು ಮತ್ತದೇ ಸೂರ್ಯನಾಥ ಕಾಮತರ ಮೈಸೂರು ಗೆಜೆಟಿಯರ್ ನಲ್ಲಿ ಮಹಿಷ್ಮತಿಯರು ಸೈಥಿಯನ್ ಅಥವಾ ಶಕರು ಎಂಬ ಗ್ರೀಕ್ ಮೂಲದ ವಲಸೆಗಾರರು ಎಂಬ ವಿವರಗಳು ಸಿಗುತ್ತವೆ.  ಮಹಿಷ್ಮತಿಯರಿಗೆ ಹೆದರಿ ಇಲ್ಲಿನ ಆದಿವಾಸಿಗಳು ಕಾಡು ಬೆಟ್ಟಗಳಲ್ಲಿ ವಾಸಿಸುತ್ತಿದ್ದರು ಎಂದು ಕಾಮತರ ಗೆಜೆಟಿಯರ್ ಹೇಳುತ್ತದೆ. ಅದಲ್ಲದೇ ಈ ಬೆಟ್ಟದ ಜೀವಿಗಳು ಒಂದು ಬೆಟ್ಟದಿಂದ ಮತ್ತೊಂದು ಬೆಟ್ಟದಲ್ಲಿರುವವರನ್ನು ಬೆಟ್ಟದ ತುದಿಯಿಂದ ಕೂಗಿ ವಿವಿಧ ಧ್ವನಿಗಳನ್ನು ಹೊರಡಿಸಿ ಪರಸ್ಪರ ಸಂವಹಿಸುತ್ತಿದ್ದರೆಂದೂ ಗೆಜೆಟಿಯರ್ ಹೇಳುತ್ತದೆ. ಆ ಸಂವಹನ ಪ್ರಕ್ರಿಯೆ ಸಾಕಷ್ಟು ಆದಿವಾಸಿಗಳಲ್ಲಿ ಇತ್ತೀಚಿನವರೆಗೆ ಚಾಲನೆಯಲ್ಲಿದ್ದಿತು. ಹಾಗಾಗಿಯೇ ಚಾಮುಂಡಿಯು ಬೆಟ್ಟದ ವಾಸಿ! ಈ ಸ್ಥಳೀಯ ಬುಡಕಟ್ಟು ಬೆಟ್ಟದ ವಾಸಿಗಳ ಚಾಮುಂಡಿಯೇ ವಲಸೆಗಾರ ಮಹಿಷನನ್ನು ಕೊಂದಳೆನ್ನಲಾಗುತ್ತದೆ ಎಂದು ಕಾಮತರು ದಾಖಲಿಸಿದ್ದಾರೆ. ಅವರೆಲ್ಲೂ ಇದು ವೈದಿಕ ಹೇರಿಕೆಯೆಂದಾಗಲಿ, ಅಥವಾ ಇದು ಪೌರಾಣಿಕ ಸಂಗತಿಯೆಂದಾಗಲಿ ಉಲ್ಲೇಖಿಸದೇ ಇದು ಇತಿಹಾಸದ ಸಂಗತಿ ಎನ್ನುತ್ತಾರೆ. ಈ ವಲಸಿಗ ಮಹಿಷನಿಂದ ಮಹಿಷೂರು ಎಂಬ ಹೆಸರು ಬಂದದ್ದು ನಿಜ. ಆದರೆ ಆತ ಇಲ್ಲಿನ ಮೂಲವಾಸಿ ಪಶುಪಾಲಕರವನಲ್ಲ.

ಕೆಳಗಿರುವ ಎರಡನೆಯ ಚಿತ್ರ ಈ ವಿವರಗಳನ್ನೊಳಗೊಂಡ ಮೈಸೂರು ಗೆಜೆಟಿಯರ್ ನ ಪುಟದ್ದು.

ಹಾಗೆಂದು ಬೌದ್ಧ/ಜೈನ/ವೈದಿಕ/ತಾಂತ್ರಿಕ ಪಂಥಗಳ ನಡುವೆ ಈರ್ಷ್ಯೆ ಇರಲಿಲ್ಲವೆಂದಲ್ಲ. ಅದೆಲ್ಲವೂ ಇದ್ದಿತು. ಆದರೆ ಅದು ಇಲ್ಲಿ ಅಪ್ರಸ್ತುತ.   ಪ್ರಸ್ತುತ ಎನ್ನುವುದಾದರೆ ಅದು ಮುಂದುವರಿದ ಜ್ವಲಂತ ಪಂಥವಾದ ಮಾತ್ರ. ಒಟ್ಟಿನಲ್ಲಿ ಮಹಿಷ ಹೊರಗಿನವ. ಇಲ್ಲಿನ ಪಶುಪಾಲಕ, ಅರಣ್ಯವಾಸಿ, ಆದಿವಾಸಿಗಳ ಅಧಿನಾಯಕಿ ಚಾಮುಂಡಿಯೇ ಹೊರತು ಮಹಿಷನಲ್ಲ.

ಹೀಗೆ ಪ್ರಗತಿಪರರು ಕೊಟ್ಟ ಸಾಕ್ಷಿಯಲ್ಲೇ ಇಂತಹ ವ್ಯತಿರಿಕ್ತ ವಿಚಾರವಿದ್ದಾಗ ಅದು ಹೇಗೆ ಈ ಪ್ರಗತಿಪರ ವಿಚಾರವಾದಿಗಳು ಘಂಟಾಘೋಷವಾಗಿ ಸುಳ್ಳನ್ನು ನುಡಿಯುತ್ತಿದ್ದಾರೆ?!? ಕೇವಲ ಮಹಿಷ ಬೌದ್ಧ ಧರ್ಮೀಯನಾಗಿದ್ದನೆಂಬ ಏಕೈಕ ಕಾರಣಕ್ಕೆ ಆತ ನಮ್ಮವನೆಂದು ನವಬೌದ್ಧಮತಿಗಳು ಪಕ್ಷಪಾತಗೈಯುತ್ತಿರುವರೇ? ಚಾಮುಂಡಿ ದಸರೆಗೆ ಪರ್ಯಾಯವಾಗಿ ಏಕೆ ನಾವೊಂದು ತೊಡೆ ತಟ್ಟಬಾರದೆಂಬ ಕದನೋತ್ಸಾಹವೆ? ದಸರಾ ಕುಸ್ತಿ ಪಂದ್ಯದಲ್ಲಿ ಅನ್ಯಪಂಥೀಯರಿಗೆ ತೊಡರುಗಾಲು ಹಾಕಿ ಮಣ್ಣು ಮುಕ್ಕಿಸಬೇಕೆಂಬ ಕುಸ್ತಿ ಪಟ್ಟೇ? ಇದು ನಮ್ಮ ನವ ಸಮಾಜದ ದುರಂತ.

ಒಟ್ಟಾರೆ ಸಮಾಜದಲ್ಲಿನ ಸ್ವಾಸ್ಥ್ಯವನ್ನು ಹೇಗೆ ಇಂದಿನ ವಿದ್ಯುನ್ಮಾನ ಯುಗದಲ್ಲೂ ಹಾಳುಗೆಡವಲಾಗುತ್ತಿದೆ ಎಂಬುದಕ್ಕೆ ಇದೊಂದು ಅತ್ಯುತ್ತಮ ನಿದರ್ಶನ. ಮಾಹಿತಿ ತಂತ್ರಜ್ಞಾನದಲ್ಲಿ ಜಗತ್ತಿಗೇ ಅತ್ಯುತ್ತಮವೆಂದು, ವಿಶ್ವಗುರುವೆಂದು ಸ್ವಘೋಷಿಸಿಕೊಂಡಿರುವ, ಮತ್ತು ಕಿಂಡರ್ ಗಾರ್ಟನ್ನಿಗೆ ಲಕ್ಷ ಲಕ್ಷ ರೂಪಾಯಿಗಳ ಶುಲ್ಕ ವಿಧಿಸುವ ನಮ್ಮ ಶಿಕ್ಷಣ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದರ ಪ್ರಾತ್ಯಕ್ಷಿಕ ನಿದರ್ಶನವಿದು. ನಮ್ಮ ಸಮಾಜ ಸಮಗ್ರವಾಗಿ ವಿಮರ್ಶಿಸಿಕೊಳ್ಳಲೇಬೇಕಾದ "ದುರಿತ ಕಾಲ" ಕೂಡ.

ಸುಳ್ಳನ್ನೇ ಸಾವಿರ ಸಲ ಹೇಳಿ ಸತ್ಯ ಮಾಡುವ ಈ "ಮಹಿಷ ಕಾಲ"ದಲ್ಲಿ ನಿಜ ಇತಿಹಾಸವನ್ನು ಎತ್ತಿ ಹಿಡಿಯೋಣ.  ಎಡ ಬಲ ಪಂಥಗಳು ಪರಸ್ಪರ ಸೈದ್ಧಾಂತಿಕ ವಾಗ್ವಾದಗಳಲ್ಲಿ ಜಯ ಸ್ಥಾಪಿಸಲು ಹೆಣಗುವ ಮತ್ತು ಹಣಿಯುವ ಈ ಕಾಲಘಟ್ಟದಲ್ಲಿ ಸತ್ಯದ ಇತಿಹಾಸ ಕೊಚ್ಚಿ ಹೋಗದಂತೆ, ವಿರೂಪಗೊಳ್ಳದಂತೆ ಕಾಪಾಡುವ ನಾಗರೀಕ ಜವಾಬ್ದಾರಿಯನ್ನು ನಾವೆಲ್ಲರೂ ಹೊರಲೇಬೇಕು. ಇಲ್ಲದಿದ್ದರೆ ಸುಳ್ಳಿನ ಪರಂಪರೆಯನ್ನೇ ನಾವು ನಮ್ಮ ಮುಂದಿನ ಸಂತತಿಗೆ ಬಿಟ್ಟು ಹೋಗಬೇಕಾಗುತ್ತದೆ, ಅದೂ ಲಕ್ಷ ಲಕ್ಷ ಶುಲ್ಕ ಪಡೆದು! ಇದು ಅಕ್ಷಮ್ಯ ಅಕ್ಷರ ವ್ಯಭಿಚಾರ. ಈ ಅಕ್ಷರ ವ್ಯಭಿಚಾರ, ಪಂಥ ಹೇರಿಕೆ, ಸಿದ್ದಾಂತ ಸಾಬೀತಿಗೆ ನಮ್ಮ ಇತಿಹಾಸ ಬಲಿಯಾಗುವುದನ್ನು ತಡೆಯಲು ಮತ್ತೊಂದು ಸತ್ಯಪಂಥದ ಚಳುವಳಿಯನ್ನೇ ಆರಂಭಿಸಬೇಕೇನೋ!?!

ಇನ್ನು ವಿಪರ್ಯಾಸವೆಂದರೆ ಯಾರಲ್ಲಿ ಅಸಹಿಷ್ಣುತೆ, ಅಸೂಯೆ, ಕುಚೋದ್ಯ, ಕುತಂತ್ರ, ಭಯೋತ್ಪಾದನೆ (ಪರಪಂಥದೆಡೆ), ಸಂಕುಚಿತತೆ, ಉದಾರತೆಯ ಸೋಗಿನಲ್ಲಿ ಸ್ತ್ರೀಶೋಷಣೆ, ಜಾತೀಯತೆಗಳೆಂಬ ದಶ ಗುಣಗಳು ತುಂಬಿ ತುಳುಕುತ್ತಿವೆಯೋ ಅದೇ ಪಟ್ಟಭದ್ರಹಿತಾಸಕ್ತಿಗಳು, ಈ ಎಲ್ಲಾ ಗುಣಗಳು ದೇಶದ ತುಂಬೆಲ್ಲಾ ತುಂಬಿ ತುಳುಕುತ್ತಿವೆಯೆಂದು ಕಳವಳ ವ್ಯಕ್ತಪಡಿಸುತ್ತಿರುವುದು!
ಆ ಎಲ್ಲಾ ಮಹಿಷ, ಚಾಮುಂಡಿ, ದುರ್ಗೆ, ಎಮ್ಮೆ ಮೈಯವರು, ಹುಲಿಸವಾರಿಯವರು, ಮತ್ತು ಮನುಷ್ಯರಾದಿಯಾಗಿ ಎಲ್ಲರಲ್ಲೂ ತುಂಬಿರುವ ದಶ ಅವಗುಣಗಳು ದಶಹರವಾಗಲಿ.

ಹೇ ರಾಮ್ ಮತ್ತು ಶ್ರೀರಾಮ್ ನಡುವಿನ ಹರಾಮಿತನವನ್ನು ಭಸ್ಮವಾಗಿ ಸತ್ಯಮೇವಜಯತೆ ಪ್ರಜ್ವಲಿಸಲಿ.

#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ
#ಕರ್ನಾಟಕವೆಂಬೋಕಮಂಗಿಪುರದಲ್ಲಿ