ಮಲೆಕುಯ್ಲು

 ಮೂವತ್ತೈದು ವರ್ಷಗಳ ಹಿಂದೆ ಬೇಸಿಗೆ ರಜೆಗೆ ಬಸ್ಸು ಹತ್ತಿ ದಾವಣಗೆರೆಯಿಂದ ಶಿವಮೊಗ್ಗ ಕಡೆ ಹೊರಟರೆ ದಾರಿಯಲ್ಲಿ ಸಿಗುವ ಕೆರೆಗಳಲ್ಲಿ ನೀರಿರುತ್ತಿತ್ತು. ರಸ್ತೆಯ ಇಕ್ಕೆಲಗಳಲ್ಲಿನ ಕಾಲುವೆಗಳಲ್ಲಿ ಮತ್ತು ಗುಂಡಿಗಳಲ್ಲಿ ನೀರು ಕಾಣುತ್ತಿದ್ದಿತು.  ಪ್ರಾಯಶಃ ಗದ್ದೆಗಳ ನೀರು ಬಸಿದು ಈ ಕಾಲುವೆಗಳಲ್ಲಿ ನೀರಿರುತ್ತಿತ್ತೇನೋ! ತುಂಗೆಯಲ್ಲಿ ನೀರು ಹರಿಯುತ್ತಿದ್ದಿತು. ಅದರಲ್ಲಿ ಮೀನು ಹಿಡಿಯುವವರೂ ಬಲೆ ಹಾಕುತ್ತಿದ್ದರು.

 

ಈಗ ಮಳೆಗಾಲ ಮುಗಿದ ನಂತರದ ಸೆಪ್ಟೆಂಬರ್ ತಿಂಗಳಿನಲ್ಲಿ ಈ ರೂಟಿನಲ್ಲಿ ಹೊರಟರೆ ಸಿಕ್ಕುವ ಯಾವ ಕೆರೆಗಳಲ್ಲಿಯೂ ನೀರು ಕಾಣದು. ರಸ್ತೆಯ ಇಕ್ಕೆಲಗಳಲ್ಲಿ ಕಾಲುವೆಗಳೇ ಕಣ್ಮರೆಯಾಗಿವೆ. ಅಂದು ಬೇಸಿಗೆಯಲ್ಲಿ ಕೆರೆಯ ತುಂಬ ತೆಳ್ಳಗೆ ನೀರಿರುತ್ತಿದ್ದ ಕೊಮಾರನಹಳ್ಳಿ ಕೆರೆಯಲ್ಲಿ ಇಂದು ಸೆಪ್ಟೆಂಬರಿನಲ್ಲಿ ಅದರ  ಒಂದೆರಡು ಗುಂಡಿಗಳಲ್ಲಿ ಮಾತ್ರ ನೀರು ಕಂಡೀತು.

 

ಇನ್ನು ಶಿವಮೊಗ್ಗದಿಂದ ಬೆಂಗಳೂರು ಕಡೆ ಹೊರಟರೆ ಕಡೂರುಬೀರೂರುಅರಸೀಕೆರೆತಿಪಟೂರುತುಮಕೂರಿನ ತನಕ ಎಲ್ಲೆಲ್ಲೂ ತೆಂಗಿನ ತೋಟಗಳು ಕಾಣುತ್ತಿದ್ದವು. ಈ ಎಲ್ಲಾ ತೆಂಗಿನ ತೋಟಗಳು ಮಳೆಯಾಶ್ರಿತ ತೆಂಗಿನ ತೋಟಗಳಾಗಿದ್ದವು.  ಆ ತೋಟಗಳಲ್ಲಿ ತೆರೆದಬಾವಿಗಳಿದ್ದರೂ ಅವುಗಳಿಂದ ಯಾರೂ ತೆಂಗಿನಮರಗಳಿಗೆ ನೀರು ಹಾಯಿಸುತ್ತಿರಲಿಲ್ಲ. ಆ ಬಾವಿಯ ನೀರನ್ನು ಕುಡಿಯಲು ಹೆಚ್ಚೆಂದರೆ ತರಕಾರಿ ಬೆಳೆಯಲು ಮತ್ತು ತೆಂಗಿನ ಸಸಿಗಳನ್ನು ಮಾಡಿ ಆರೈಸಲು ಉಪಯೋಗಿಸುತ್ತಿದ್ದರು. ಬೋರ‍್ವೆಲ್ ಎಂಬುದು ಎಲ್ಲಿಯೂ ಇರಲಿಲ್ಲ.  ಇದೇ ಪರಿಸ್ಥಿತಿ ಹೊಳಲ್ಕೆರೆಹೊಸದುರ್ಗಚಿಕ್ಕಜಾಜೂರುರಾಮಗಿರಿಚನ್ನಗಿರಿಹಿರಿಯೂರು ಸುತ್ತಮುತ್ತ ಕೂಡ.  ಮಳೆಯಾಶ್ರಿತ ಈ ತೆಂಗಿನ ಮರಗಳಿಂದ ಎರಡು ತಿಂಗಳಿಗೊಮ್ಮೆ ಕಾಯಿ ಕೆಡವುತ್ತಿದ್ದರು. ಒಂದೊಂದು ವರ್ಷ ಮಳೆ ಕೈಕೊಟ್ಟರೂ ಈ ಮರಗಳು ಒಣಗದೇ ಮುಂದಿನ ಮಳೆಗಾಲದವರೆಗೆ ಸುಧಾರಿಸಿಕೊಳ್ಳುತ್ತಿದ್ದವು. ಹೆಚ್ಚೆಂದರೆ ಇಳುವರಿ ಕಡಿಮೆಯಾಗುತ್ತಿತ್ತೇ ವಿನಹಃ ಮರಗಳು ಒಣಗುತ್ತಿರಲಿಲ್ಲ.  ಅದಲ್ಲದೇ ಈ ರೈತರು ಆ ತೆಂಗಿನ ತೋಟಗಳಲ್ಲಿ ಬೇರೆ ಯಾವುದೇ ಬೆಳೆ ಬೆಳೆದರೂ ಅದು ವಾಣಿಜ್ಯ ಬೆಳೆಯಾಗಿರದೆ ಕೇವಲ ಸ್ವಂತವಾಗಿ ಬಳಸುವ ರಾಗಿಎಳ್ಳುಸಾಮೆಕೊತ್ತಂಬರಿಒಮ್ಮೊಮ್ಮೆ ತೊಗರಿಯಂತಹ ಮಳೆಯಾಶ್ರಿತ ಬೆಳೆಗಳನ್ನು ಮಾತ್ರ ಬೆಳೆಯುತ್ತಿದ್ದರು.

 

ಇಂದು ಈ ಎಲ್ಲಾ ತೆಂಗಿನತೋಟಗಳಿಗೆ ಒಂದೆರಡು ತಿಂಗಳು ಡ್ರಿಪ್ಪಿನಲ್ಲಿ ನೀರು ಕೊಡುವುದು ವ್ಯತ್ಯಾಸವಾದರೂ ಗರಿಗಳು ಬಾಡಿ ಒಣಗಲಾರಂಭಿಸುತ್ತವೆ. ಅದೇ ಹಿಂದಿನ ಹಳೆಯ ಮರಗಳೂ ವರ್ಷಗಟ್ಟಲೇ ಮಳೆಯಿಲ್ಲದಿದ್ದರೂ ಒಣಗದಿದ್ದವು ಇಂದು ಡ್ರಿಪ್ ಇಲ್ಲದಿದ್ದರೆ ಎರಡು ತಿಂಗಳಲ್ಲೇ ಬಾಡುತ್ತಿವೆ.

 

ಮೇಲ್ಕಾಣಿಸಿದ ಹೊಳಲ್ಕೆರೆಹೊಸದುರ್ಗಕಡೂರುಅರಸೀಕೆರೆತಿಪಟೂರುಚಿಕ್ಕನಾಯಕನಹಳ್ಳಿಜಾವಗಲ್ಹಳೇಬೀಡುಕಳಸ ಮುಂತಾದ ತೆಂಗಿನ ಬೆಲ್ಟ್ ಎನ್ನಬಹುದಾದ ಈ ಪ್ರದೇಶದ ಕಳೆದ ಐವತ್ತು ವರ್ಷಗಳ ವಾರ್ಷಿಕ ಸರಾಸರಿ ಮಳೆ ೬೦೦ ಮಿಲಿ ಮೀಟರ್. ಇಂದಿಗೂ ಕೂಡಾ ಈ ಪ್ರದೇಶದ ವಾರ್ಷಿಕ ಮಳೆ ಇದೇ ೬೦೦ ಮಿಲಿ ಮೀಟರಿನ ಆಜುಬಾಜು ಇದೆ.  ಮಳೆ ಬರುವ ಕಾಲ ಹೆಚ್ಚು ಕಮ್ಮಿಯಾಗಿದೆಯೇ ಹೊರತು ಮಳೆಯ ಪ್ರಮಾಣ ಅಷ್ಟೇ ಇದೆ. ಇಲ್ಲಿನ ಎಲ್ಲಾ ತೋಟಗಳಲ್ಲೂ ಅಂದಿನಿಂದ ಇಂದಿನವರೆಗೂ ತಟಾಕು/ಪಟ್ಟೆಗಳಿದ್ದು ಅವುಗಳು ಬದುಗಳಿಂದಾವೃತಗೊಂಡಿವೆ. ಅಂದರೆ ಮಳೆ ನೀರು ಬಿದ್ದದ್ದು ಆಯಾಯಾ ಪಟ್ಟೆ/ತಟಾಕಿನಲ್ಲಿ ಸಾಕಷ್ಟು ಇಂಗುತ್ತಿತ್ತು. ಹೆಚ್ಚಾದದ್ದು ಹತ್ತಿರದ ಹಳ್ಳಕ್ಕೆ ಹರಿದು ಹೋಗಿ ಕೆರೆ ಕೊಳ್ಳಗಳನ್ನು ಸೇರುತ್ತಿದ್ದಿತು.  ಈ ಪ್ರಕ್ರಿಯೆಗೆ ಮಳೆಗಾಲದಲ್ಲೇ ಮಳೆ ಬರಬೇಕೆಂಬ ನಿಯಮವೇನೂ ಇಲ್ಲ. ಒಟ್ಟಾರೆ ಮಳೆಯಾದರೆ ಈ ನೀರು ಹಳ್ಳಕೊಳ್ಳಗಳ ಮೂಲಕ ಕೆರೆಗಳನ್ನು ಸೇರುತ್ತಿದ್ದಿತು.

 

ಈಗ ನೀರಿನ ಕುರಿತು ಜನ ಹೆಚ್ಚು ಜಾಗೃತರಾಗಿದ್ದಾರೆ. ಈಗ ಇನ್ನೂ ಹೆಚ್ಚಿನ ಬದುಇಂಗುಗುಂಡಿಗಳನ್ನು ನಿರ್ಮಿಸಿ ತಮ್ಮ ತೋಟದಲ್ಲಿ ಬೀಳುವ ಮಳೆಯ ನೀರು ಎಲ್ಲಿಯೂ ಹರಿಯದಂತೆ ಇಂಗಿಸುತ್ತಿದ್ದಾರೆ. ಅಂದು ತೆಂಗಿನಮರಗಳೇ ಅಂತರ್ಜಲದಿಂದ ನೀರನ್ನು ಎಳೆದುಕೊಳ್ಳುತ್ತಿದ್ದರೆಇಂದು ಬೋರ್ವೆಲ್ಲಿನಿಂದ ಎಳೆದು ತೆಂಗಿಗೆ ನೀರು ಕೊಡುತ್ತಿದ್ದಾರೆಅಷ್ಟೇ ವ್ಯತ್ಯಾಸ. ಹಾಗಿದ್ದರೂ ಈ ತೋಟಗಳಲ್ಲಿ ಜಲಕ್ಷಾಮದಂತಹ ವ್ಯತ್ಯಯವುಂಟಾಗಲು ಏನು ಕಾರಣ?

 

ಅಮೇರಿಕಾದಲ್ಲಿನ ಹತ್ತೊಂಬತ್ತನೇ ಶತಮಾನದ ಆಣೆಕಟ್ಟುಗಳನ್ನು ಕಟ್ಟುವ ಕ್ರಾಂತಿ ಬಹುಪಾಲು ಇಂದು ಕರ್ನಾಟಕದಲ್ಲಿ ಚೆಕ್ ಡ್ಯಾಂಗಳನ್ನು ಕಟ್ಟುವ ಉಮೇದಿನಲ್ಲಿಯೇ ಕಟ್ಟಲ್ಪಟ್ಟಿದ್ದವು. ಉಪಯೋಗವಿರಲಿ ಬಿಡಲಿ ಆಣೆಕಟ್ಟುಗಳು ಪ್ರಗತಿಯ ಸಂಕೇತವೆಂಬಂತೆ ವಿಪರೀತವಾಗಿ ಕಟ್ಟಲ್ಪಟ್ಟಿದ್ದವು.  ಹಾಗಾಗಿ ಅಂದು ಕಟ್ಟಿದ ಅನೇಕ ಆಣೆಕಟ್ಟುಗಳು ಲಾಭದಾಯಕವಲ್ಲವೆಂದು ನಿರ್ವಹಣಾ ವೆಚ್ಚವನ್ನು ಉಳಿಸಲು ಇಂದು ಕೆಡವಲಾಗುತ್ತಿದೆ. ಹಾಗೆ ಕೆಡವುದರಿಂದ ಕೆಲ ಪರಿಸರಸ್ನೇಹೀ ಉಪಯೋಗಗಳೂ ಇವೆಯೆಂದು ಹೇಳಲಾಗುತ್ತದೆ. ಆದರೆ ಈ ಆಣೆಕಟ್ಟುಗಳಿಂದಾದ ಪರಿಸರನಾಶ, ಗುರುತಿಸಿಕೊಳ್ಳುವಷ್ಟು ನಾಶವಾಗಿರಲಿಲ್ಲ. ಹಾಗಾಗಿ ಇವುಗಳನ್ನು ಕೆಡುವುದರಿಂದ ನಿರ್ವಹಣಾ ವೆಚ್ಚದ ಉಳಿತಾಯ ಮುಖ್ಯವಾಗಿ ಕಾಣುವುದೇ ಹೊರತು ಪರಿಸರಸ್ನೇಹೀ ಉಪಯೋಗಗಳು ಅಷ್ಟಾಗಿ ಕಾಣುವುದಿಲ್ಲ.

 

ಆದರೆಅಮೇರಿಕಾದ ಆಣೆಕಟ್ಟುಗಳನ್ನು ಕೆಡುವುದನ್ನು ಎತ್ತಿ ಹಿಡಿದು ಭಾರತದ ಪರಿಸರವಾದಿಗಳು ಆಣೆಕಟ್ಟುಗಳು ಪರಿಸರಕ್ಕೆ ಮಾರಕವೆಂದು ಪ್ರತಿಪಾದಿಸುತ್ತಿರುವುದು ತಪ್ಪು.  ಆದರೆ ಈ ಪರಿಸರವಾದಿಗಳು ಯಾವುದು ಪರಿಸರಪೂರಕ ಎಂಬುವರೋ ಅದೇ ಪರಿಸರಕ್ಕೆ ಮಾರಕವಾಗಿರುವ ಉದಾಹರಣೆಯನ್ನು ಗಮನಿಸೋಣ.

 

ಓಡುವ ನೀರನ್ನು ನಡೆಸುನಡೆಯುವ ನೀರನ್ನು ನಿಲ್ಲಿಸುನಿಂತ ನೀರನ್ನು ಇಂಗಿಸು ಎಂಬುದು ಸರಿ. ಆದರೆ ಎಷ್ಟರ ಮಟ್ಟಿಗೆ ಇದನ್ನು ಅಳವಡಿಸಿಕೊಳ್ಳಬೇಕುಅತಿಯಾದರೆ ಅಮೃತವೂ ವಿಷವೆಂಬಂತೆ ಒಂದೆಡೆ ಎಂತಹ ಮಳೆ ಬಂದರೂ ಹಳ್ಳಗಳಲ್ಲಿ ನೀರು ಹರಿದು ಕೆರೆಗಳನ್ನು ಸೇರುವುದೇ ಇಲ್ಲ. ಅದೇ ಇನ್ನೊಂದೆಡೆ ಸಾಧಾರಣ ಮಳೆಯಾದರೂ ಪ್ರವಾಹ ಉಂಟಾಗಿಬಿಡುತ್ತದೆ ಹೀಗೇಕೆ?

 

ಅದೇ ರೀತಿಇಂದು ಸರ್ಕಾರ ಯಾವುದೇ ಧೀರ್ಘಾಲೋಚನೆಯಿಲ್ಲದೇಗುತ್ತಿಗೆದಾರರ ಮುಖಾಂತರ ಚರಂಡಿಯಂತಹ ಸಣ್ಣ ಹಳ್ಳಗಳಿಗೂ ಚೆಕ್ ಡ್ಯಾಂಗಳನ್ನು ಕಟ್ಟುತ್ತಿದೆ.  ಮಳೆಯ ನೀರು ಈಗ ಈ ಎಲ್ಲಾ ಚೆಕ್ ಡ್ಯಾಂಗಳಲ್ಲಿ ನಿಂತು ಇಂಗಿಮಿಕ್ಕಿ ಹರಿದು ನದಿಗಳನ್ನುಕೆರೆಗಳನ್ನು ಸೇರಬೇಕಾಗಿದೆ. ಒಟ್ಟಿನಲ್ಲಿ ಈ ಎಲ್ಲಾ ಜಲಸಾಕ್ಷರತೆಯಿಂದಾಗಿ ಮಳೆಯನೀರು ಇಂಗಿ ಇಡೀ ಕರ್ನಾಟಕದ ಭೂಪ್ರದೇಶ ಪಸೆಯ ಸ್ಪುರಿಸುವ ಜೌಗುತಾಣವಾಗಬೇಕಿದ್ದಿತು. ಆದರೆ ಇಂಗಿಸಿದಷ್ಟೂ ಇಂಗದ ದಾಹ ಉಂಟಾಗಿದೆ. ಹೀಗೇಕೆ?

 

ಈ ವಿಪರೀತ ನೀರಿನ ಕಾಳಜಿಯಿಂದ ಉಂಟಾದ ಒಂದು ದುಷ್ಪರಿಣಾಮವೆಂದರೆ ಒಂದು ಸಮತೋಲಿತ ಮಟ್ಟಿನ ಚೆಕ್ ಡ್ಯಾಂಗಳಿಲ್ಲದೆ ಹೆಜ್ಜೆ ಹೆಜ್ಜೆಗೂ ಚೆಕ್ ಡ್ಯಾಂಗಳಿದ್ದು ನೀರು ಹರಿಯುವುದೇ ನಿಂತಿದೆ. ಆ ಹರಿಯುವ ನೀರಿನ ಮೇಲಾಧರಿತವಾದ ಪರಿಸರ ಇಂಗಿಕೆರೆಗಳು ಮಾಯವಾಗಿನದಿಗಳು ಮಾಯವಾಗುತ್ತಿವೆ.  ಈಗೇನಿದ್ದರೂ ನದಿಗಳು ಅತಿವೃಷ್ಟಿಯಲ್ಲಿ ನೀರನ್ನು ಹರಿಸುವ ಕಾಲುವೆಗಳಾಗಿಮಳೆ ನಿಂತ ಬಳಿಕ ಒಣಗಿದ ಚರಂಡಿಗಳಾಗಿ ಮಾರ್ಪಾಟಾಗಿವೆ.

 

ಇದೆಲ್ಲದಕ್ಕೂ ಕಾರಣ ಮತ್ತದೇ ಉತ್ಕಟ ಆಸೆ ಮೂಡಿಸುವ ಬೋರ್ವೆಲ್ಲುಗಳು. ತಮ್ಮ ತೆಂಗಿನತೋಟಗಳಲ್ಲಿ ಇತರೆ ವಾಣಿಜ್ಯ ಬೆಳೆಗಳನ್ನು ಬೆಳೆಯುವ ಅತ್ಯುತ್ಸಾಹದಿಂದ ರೈತರು ಬೋರ್ವೆಲ್ಲುಗಳ ಮೊರೆಹೋದರು. ಮೊದಲೆಲ್ಲಾ ನೂರು ಅಡಿಗಳಲ್ಲಿ ಸಿಗುತ್ತಿದ್ದ ಅಂತರ್ಜಲ ಇನ್ನೂರು ಮುನ್ನೂರು ಅಡಿಗಳಿಗೆ ಕುಸಿಯುತ್ತಾ ಇಂದು ಸಾವಿರ ಅಡಿಗಳನ್ನು ತಲುಪಿದೆ. ಈಗ ರೈತರು ಇತರೆ ವಾಣಿಜ್ಯ ಬೆಳೆಯಿರಲಿ ತಮ್ಮ ಸಾಂಪ್ರದಾಯಿಕ ತೆಂಗಿನಬೆಳೆಯನ್ನು ಉಳಿಸಿಕೊಳ್ಳಲು ಹೆಣಗಿ ಸೋತುಹೋಗಿದ್ದಾರೆ.  ಮೊದಲೆಲ್ಲಾ ನೂರು ಅಡಿಗಳಲ್ಲಿರುತ್ತಿದ್ದ ಅಂತರ್ಜಲ ಕ್ಯಾಪಿಲರಿ ಸಿದ್ದಾಂತಕ್ಕನುಗುಣವಾಗಿ ನೀರಿನ ಪಸೆ ಮೇಲೇರುತ್ತಾ ತೆಂಗಿನ ಬೇರುಗಳಿಗೆ ಸಿಗುವ ಮಟ್ಟಕ್ಕೆ ಏರಿ ಬರುತ್ತಿದ್ದಿತು.  ಬೋರ್ವೆಲ್ಲುಗಳು ಹೆಚ್ಚಾದಂತೆ ಅದಕ್ಕೆ ತಕ್ಕನಾಗಿ ಅಂತರ್ಜಲ ಇಳಿಯುತ್ತಾ ಸಾಗಿ ಸಾವಿರ ಆಡಿಗಳ ಆಸುಪಾಸಿನಲ್ಲಿದೆ. ಈಗ ಸಾವಿರ ಅಡಿಗಳಿಂದ ಪಸೆ ಬೇರುಗಳನ್ನು ತಲುಪುವ ಮಟ್ಟಕ್ಕೆ ಏರಿ ಬರಲಾರದು. ಮತ್ತು ಬೇರುಗಳು ಕೂಡಾ ಅಷ್ಟು ಆಳಕ್ಕೆ ಇಳಿದು ಹೋಗಲಾರವು. ಹಾಗಾಗಿ ಇಂದು ಡ್ರಿಪ್ ಮಧ್ಯಂತರ ಪ್ರಕ್ರಿಯೆಯಾಗಿ ಅವಶ್ಯಕವಾಗಿ ಬೇಕಾಗಿರುವುದು.  ಆದರೆ ಈ ವ್ಯವಸ್ಥೆಯೇನಿದ್ದರೂ ತತ್ಕಾಲಿಕ ವ್ಯವಸ್ಥೆ. ಬೋರ್ವೆಲ್ಲುಗಳ ಪರ್ವ ಆರಂಭವಾದಾಗಲೇ ಅಂದಿನ ಸರ್ಕಾರಗಳು ಎಚ್ಚೆತ್ತು ನೀರಾವರಿ ಯೋಜನೆಗಳನ್ನು ಸಮರ್ಪಕವಾಗಿ ನಿರ್ಮಿಸಬೇಕಿದ್ದಿತು. ಆದರೆ ಸರ್ಕಾರಗಳು ಕೂಡ ಈ ತಾತ್ಕಾಲಿಕ ವ್ಯವಸ್ಥೆಯನ್ನೇ ಖಾಯಂ ವ್ಯವಸ್ಥೆ ಎಂದುಕೊಂಡುಬಿಟ್ಟವು. ಈಗ ರೈತನಿಗೆ ಬೋರುಗಳು ಇಲ್ಲಇತ್ತ ನೀರಿನ ಪರ್ಯಾಯವೂ ಇಲ್ಲ.

 

ಈಗಲೂ ಕೂಡಾ ಈ ಕೃಷಿಯ ಭೂಭಾಗಗಳನ್ನು ಅಲ್ಲಿನ ಸಾಂಪ್ರದಾಯಿಕ ಬೆಳೆಗಳಿಗನುಗುಣವಾಗಿ ವಿಂಗಡಿಸಿ ಬೋರ್ವೆಲ್ಲುಗಳನ್ನು ನಿಷೇಧಿಸಿದರೆ ಇಲ್ಲೆಲ್ಲಾ ಮತ್ತೆ ತೆಂಗು ಮಳೆಯಾಧಾರಿತವಾಗಿ ಬೆಳೆಯಬಲ್ಲದು. ಆದರೆ ಸರ್ಕಾರಗಳು ಈಗಲೂ ನೀರಿನ ನಿರ್ವಹಣೆಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ.  ಮತ್ತದೇ ಚೆಕ್ ಡ್ಯಾಂಇಂಗುಗುಂಡಿಯಂತಹ ಗುತ್ತಿಗೆ ಕಾಮಗಾರಿಗಳಲ್ಲಿ ಆಸಕ್ತವಾಗಿದೆಯೇ ಹೊರತು ಪ್ರವಾಹ ನಿರ್ವಹಣೆ ಕಂ ನೀರಾವರಿ ಯೋಜನೆಯಂತಹ ಸಮರ್ಪಕ ಯೋಜನೆಗಳನ್ನು ಹಾಕಿಕೊಳ್ಳುತ್ತಿಲ್ಲ.   ಅಂದು ಸರ್ಕಾರ ಸಮರ್ಪಕವಾಗಿ ನೀರಾವರಿಯನ್ನು ನಿರ್ವಹಿಸದಿದ್ದರಿಂದ ರೈತ ಬೋರ್ವೆಲ್ ಪರ್ಯಾಯವನ್ನು ಕಂಡುಕೊಂಡನು.  ಇಂದು ಚೆಕ್ ಡ್ಯಾಂ ಎಂಬ ಮಾಯಾಂಗನೆಯ ಬೆನ್ನು ಬಿದ್ದು ಹಳ್ಳಕೆರೆನದಿಗಳನ್ನು ಮಾಯವಾಗಿಸುತ್ತಿದ್ದಾನೆ. ಭಾರತದಲ್ಲಿನ ನೀರಾವರಿ ವ್ಯವಸ್ಥೆ ಇನ್ನೂ ಒಂದು ಸಮತೋಲಿತ ಮಟ್ಟವನ್ನು ಮುಟ್ಟಿಯೇ ಇಲ್ಲ. ಆ ಮಟ್ಟವನ್ನು ಮುಟ್ಟಿ ನಂತರ ಹಂತ ಹಂತವಾಗಿ ಬೋರ್ವೆಲ್ಲುಗಳನ್ನು ನಿಷೇಧಿಸಿದರೆ ಮತ್ತೊಮ್ಮೆ ಹಸಿರು ಚಿಗುರೊಡೆದೀತು. ಆದರೆ ಅಂತಹ ಇಚ್ಚಾಶಕ್ತಿಯನ್ನು ತೋರುವವರ‍್ಯಾರು?

 

ಒಂದೆಡೆ ಭೋರ್ಗರೆವ ವಿವೇಚನಾರಹಿತ ಪರಿಸರವಾದಮತ್ತೊಂದೆಡೆ ತತ್ಕಾಲದ ಪರಿಹಾರವಾಗಿ ವಿವೇಚನಾರಹಿತ ಬೋರ್ವೆಲ್ ಕೊರೆಸುವಿಕೆಈ ವಿವೇಚನಾರಹಿತ ವಿರೋಧಾಭಾಸಗಳ ಜಟಾಪಟಿಗಳ ಮಧ್ಯೆ ಸಮತೋಲಿತ ಚಿಂತನೆಯ ಸಮಾಧಾನವನ್ನು ಹೇಳುವವರ‍್ಯಾರುಕೇಳುವವರ‍್ಯಾರು?