ಬಂಡಾಯ ಸಾಹಿತ್ಯ ಸಂಘಟನೆ - ದಾವಣಗೆರೆ ಸಮ್ಮೇಳನ

 ೨೦೧೯ ರಲ್ಲಿ ಬಂಡಾಯ ಸಾಹಿತ್ಯ ಸಮ್ಮೇಳನದಲ್ಲಿ ಬರಗೂರು ರಾಮಚಂದ್ರಪ್ಪ ಹೀಗೆ ಹೇಳಿದ್ದರು ಎಂದು ನವೆಂಬರ್ ೧೭ ೨೦೧೯ ರ ಪ್ರಜಾವಾಣಿಯಲ್ಲಿ ವರದಿಯಾಗಿದೆ.

"ಇತ್ತೀಚಿನ ದಿನಗಳಲ್ಲಿ ಜಾತಿಯ ಗತಿಶೀಲತೆ ಬದಲಾಗುತ್ತಿದೆ. ಮೇಲ್ಜಾತಿಗಳು ಉಪಜಾತಿಗಳನ್ನು ಮರೆತು ಒಂದಾಗುತ್ತಿದ್ದಾರೆ. ಆದರೆ, ಕೆಳವರ್ಗದ ಜಾತಿಗಳಲ್ಲಿ ಉಪಜಾತಿಗಳ ಒಡಕು ಹೆಚ್ಚಾಗುತ್ತಿದೆ. ಈ ವೈರುಧ್ಯ ಜಾತಿ ವಿನಾಶಕ್ಕಿಂತ, ಜಾತಿ ವಿಕಾಸಕ್ಕೆ ಸಾಕ್ಷಿಯಾಗುತ್ತಿದೆ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ತಿಳಿಸಿದರು.
ಬಂಡಾಯ ಸಾಹಿತ್ಯ ಸಂಘಟನೆಯು ಭಾನುವಾರ ಆಯೋಜಿಸಿದ್ದ ‘ಮೀಸಲಾತಿ: ನೂರು ವರ್ಷ’ ರಾಜ್ಯಮಟ್ಟದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು."
ಈಗ ಇದೇ ಬಂಡಾಯ ಸಾಹಿತ್ಯ ಸಂಘಟನೆಯ ಸಮ್ಮೇಳನ ದಾವಣಗೆರೆಯಲ್ಲಿ ಕೆಲವೇ ದಿನಗಳಲ್ಲಿ ನಡೆಯುತ್ತಿದೆ. ೨೦೧೯ರ ತಮ್ಮ ಹೇಳಿಕೆಯಂತೆ "ಜಾತಿ ವಿಕಾಸ"ವನ್ನು ಮಾನ್ಯ ಬರಗೂರರು ಈ ಸಮ್ಮೇಳನದ ಎಲ್ಲಾ ಕಾರ್ಯಕ್ರಮದಲ್ಲಿ ತಮ್ಮ ಸ್ವಜಾತಿ ಬಾಂಧವರನ್ನು ಮತ್ತು ತಮ್ಮ ಬಾಂಧವರನ್ನು ಬೆಂಬಲಿಸಿದವರನ್ನು, ತಾವು ಮುನ್ನುಡಿ ಬರೆದುಕೊಟ್ಟವರನ್ನು, ಅಥವಾ ತಮಗೆ ಜೈಕಾರ ಹಾಕಿದವರನ್ನು ಸೇರಿಸಿ ಬಂಡಾಯವನ್ನೇ ಢಂಬಾಚಾರವಾಗಿಸಿದ್ದಾರೆ. ಈ ಬರಗೂರರ "ಜಾತಿ ವಿಕಾಸ"ದ ಬಗ್ಗೆ ಈಗಾಗಲೇ ಸಾಕಷ್ಟು ಅಸಮಾಧಾನ ಈ ಸಮ್ಮೇಳನದ ಹಿನ್ನೆಲೆಯಲ್ಲಿ ಬಹಿರಂಗಗೊಂಡಿದೆ. "ತೆಪರೇಸಿ" ಎಂದು ಎಲ್ಲಿಂದಲೋ ಬಂದು ಚುರುಮುರಿ ಕಟ್ಟೆಪುರಾಣ ಮಿಕ್ಸ್ ಹೊಡೆಯುವವರನ್ನು ಸಂಚಲನೆಗಿರಿಸಿಬಿಟ್ಟರೆ ಪಕ್ಕಾ ದಾವಣಗೆರೆಯವರಲ್ಲದೆ ರಾಜ್ಯಾದ್ಯಂತ ಇರುವ ಬಂಡಾಯಗಾರರು ತೆಪರೇಸಿಗಳಾಗಿಬಿಡುತ್ತಾರೆಯೇ?!
ಪ್ರಗತಿಪರರು, ಬಂಡಾಯಗಾರರು, ಚಿಂತಕರು ಏಕೆ ಜಾತಿಗಳನ್ನು ಪ್ರಮುಖವಾಗಿ "ಅಸ್ಮಿತೆ" ಎನ್ನುತ್ತಾರೆ ಎಂದರೆ ಹೀಗೆ ವಿಕಾಸ ಹೊಂದಲಷ್ಟೆ! ಮೊನ್ನೆ ತಿಳಿಸಾರಿನ ನರಪೇತಲರ "ಸಂಧಿ ಸಾಹಿತ್ಯ"ಕ್ಕೆ ಎಗರಿಬಿದ್ದು ಕ್ಯಾನ್ಸಲ್ ಮಾಡಿಸಿದ ಬಾಡಿನ ದಷ್ಟಪುಷ್ಟ "ಅಸ್ಮಿತೆ" ಬಂಡಾಯಗಾರರು ಈಗ್ಯಾಕೆ ಬಾಯಿ ಬಂದ್ ಮಾಡಿಕೊಂಡಿರುವರೋ!?!

ದಲಿತ ಫ್ಯಾಸಿಸಂ

 ಫೇಸ್ಬುಕ್ ಸ್ನೇಹಿತರೊಬ್ಬರು ಒಂದು ಪೋಸ್ಟ್ ಹಂಚಿಕೊಂಡು ದಲಿತ ಫ್ಯಾಸಿಸಂ ಯಾ ದಲಿತರೊಳಗಿನ ಬ್ರಾಹ್ಮಣ್ಯದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. ಆಗ ನೆನಪಿಸಿಕೊಂಡದ್ದು....


ಈ ದಲಿತ ಫ್ಯಾಸಿಸಂ/ಬ್ರಾಹ್ಮಣ್ಯ ಇಂದು ನೆನ್ನೆಯದಲ್ಲ. ಮೀಸಲಾತಿಯ ಪ್ರಸ್ತಾವನೆ ಮಾಡುವಾಗ ಅಂಬೇಡ್ಕರ್ (ಬಲಗೈ) ಅವರು ಮುಂಬೈ ಚರ್ಮೋದ್ಯಮದಲ್ಲಿರುವ ಆರ್ಥಿಕ ಸದೃಢ ಮಾದಿಗ (ಎಡಗೈ) ಜನಾಂಗದವರನ್ನು ತೋರಿ ಮಾದಿಗರಿಗೆ ಮೀಸಲಾತಿ ಬೇಡ ಎಂದಿದ್ದರಂತೆ. ಇಲ್ಲಿ "ಅಂತೆ" ಎಂದಿರುವುದಕ್ಕೆ ಕಾರಣ ಇದನ್ನು ನಾನು ಒಂದು ಲೈಬ್ರರಿ ಆರ್ಕೈವ್ ನಲ್ಲಿ ಓದಿದ್ದೆ. ಅದು ಯಾವ ಪತ್ರಿಕೆ ಎಂದು ಮರೆತಿರುವ ಕಾರಣವಷ್ಟೆ. ಇಲ್ಲದಿದ್ದರೆ ಆ ಐವತ್ತರ ದಶಕದ ಹಳೆಯ ಪತ್ರಿಕಾ ವರದಿಯನ್ನು ಪುರಾವೆಯಾಗಿ ಹಾಕುತ್ತಿದ್ದೆ. ಬಾಬು ಜಗಜೀವನರಾಂ ಈ ಕುರಿತು ಮಾತನಾಡಿದ್ದರು ಎಂದು ನನ್ನ ಆತ್ಮೀಯ ದಲಿತ ನಾಯಕರು ವಿಚಾರಿಸಿದಾಗ ತಿಳಿಸಿದ್ದರು.


ಈ ಎಡ-ಬಲ ಸಂಘರ್ಷ ಎಲ್ಲೆಲ್ಲಿ ಎಡ ಬಲ ಎಂಬ ವಿಂಗಡನೆ ಇದೆಯೋ ಅಲ್ಲೆಲ್ಲಾ ಇದೆ. ಈ ಬಗ್ಗೆ ಮಾಹಿತಿ ಇರುವವರು ಹಂಚಿಕೊಳ್ಳಬಹುದು.


Anyway, shit is shit and it stinks even if almighty shits.


ವಿಶೇಷ ಸೂಚನೆ: ಇಲ್ಲಿ almighty ಎಂದರೆ ದೇವರೇ ಹೊರತು ಯಾವುದೇ ಜೀವಿಸಿದ್ದ, ಜೀವಿಸಿರುವ ವ್ಯಕ್ತಿಯಲ್ಲ.


#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ

60*40

 ಡಾಲರ್ ಎದುರು ರೂಪಾಯಿ ಮೌಲ್ಯ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಇದು ಕೇವಲ ರೂಪಾಯಿ vs ಡಾಲರ್ ಎನ್ನದೆ ಡಾಲರ್ ವಿರುದ್ಧ ಯುರೋ ಸಹ ಸಾಕಷ್ಟು ಕುಸಿದಿದೆ. ಒಂದು ವರ್ಷದ ಹಿಂದೆ ಒಂದು ಯುರೋಗೆ ಒಂದೂಕಾಲು ಡಾಲರ್ ಇದ್ದದ್ದು ಈಗ ಸಮವಾಗಿದೆ.


ಇದಕ್ಕೆ ಕಾರಣ ಅಮೆರಿಕಾದ ಫೆಡರಲ್ ರಿಸರ್ವ್ ಬಡ್ಡಿ ದರವನ್ನು ಇತರೆ ರಾಷ್ಟ್ರಗಳಿಗಿಂತ ತ್ವರಿತಗತಿಯಲ್ಲಿ ಏರಿಸುತ್ತಿರುವುದು. ಇದರಿಂದ ಯು.ಎಸ್ ಟ್ರೆಜರಿ ಬಾಂಡುಗಳು ಜಾಗತಿಕ ಹೂಡಿಕೆದಾರರಿಗೆ ಆಕರ್ಷಕ ಎನ್ನಿಸಿ ಡಾಲರ್ ಬೇಡಿಕೆ ಹೆಚ್ಚುತ್ತಿದೆ. ಅಮೆರಿಕಾದ ಹಣದುಬ್ಬರ ನಿಯಂತ್ರಣ ಪಾಲಿಸಿಗಳು ಅಲ್ಲಿನ ಹಣದುಬ್ಬರವನ್ನು ತ್ವರಿತವಾಗಿ ನಿಯಂತ್ರಣಕ್ಕೆ ತರುತ್ತದೆ ಮತ್ತು ಡಾಲರ್ ಹೆಚ್ಚು ಲಾಭ ತರುತ್ತದೆ ಎಂದು ಡಾಲರ್ ಹೂಡಿಕೆದಾರರು ನಂಬಿದ್ದಾರೆ. 


ಅಲ್ಲದೆ ಈ ವರ್ಷ ಯುರೋ ಬಳಕೆಯ ಹತ್ತೊಂಬತ್ತು ರಾಷ್ಟ್ರಗಳು ತೀವ್ರ ರಿಸೆಷನ್ ಗೆ ಒಳಗಾಗುತ್ತಿವೆ. ಇವುಗಳ ಮೈ ಹಣ್ಣಾಗುವಂತೆ ಯುಕ್ರೇನ್ ಯುದ್ಧ ಇಂಧನ ತೈಲದ ಬೆಲೆಯಿಂದ ಪೆಟ್ಟುಕೊಟ್ಟಿದೆ. ಈ ಜಾಗತಿಕ ಜಗತ್ತಿನಲ್ಲಿ ಭಾರತ ಕೂಡ ಇದಕ್ಕೆ ಹೊರತೇನೂ ಅಲ್ಲ. 


ಡಾಲರ್ ಆಕರ್ಷಕ ಎನ್ನಿಸಿದ್ದರಿಂದಲೇ ಭಾರತದಲ್ಲಿ ಹೂಡಿದ್ದ ಹೂಡಿಕೆಯನ್ನು ವಿದೇಶಿ ಬಂಡವಾಳಗಾರರು ವಾಪಸ್ ಪಡೆಯುತ್ತಿದ್ದಾರೆ. ಇನ್ನು ಮೋದಿ ಆಡಳಿತದ ಆರ್ಥಿಕ ಸುಧಾರಣೆಗಳು ಏನೂ ಫಲ ಕೊಡದೆ ಉಕ್ರೇನ್ ಯುದ್ಧ ಸೃಷ್ಟಿಸಿದ ತೈಲ ಬಿಕ್ಕಟ್ಟಿನ ಜೊತೆಗೆ "ಆಷಾಢದಲ್ಲಿ ಅಧಿಕ ಮಾಸ" ಎಂಬಂತೆ ಈಗಾಗಲೇ ಚಾಲ್ತಿ ಖಾತೆ ಕೊರತೆ, ಕುಸಿಯುತ್ತಿರುವ ಜಿಡಿಪಿ, ವಿದೇಶಿ ಸಾಲದ ಅವಲಂಬನೆಯನ್ನು ಹೆಚ್ಚಿಸಿವೆ. ಭಾರತೀಯ ರಿಸರ್ವ್ ಬ್ಯಾಂಕ್ ಈ ಕುರಿತು ಯಾವ ಕ್ರಮ ಕೈಗೊಳ್ಳುತ್ತದೆಯೋ ಗೊತ್ತಿಲ್ಲ. ಆದರೆ ಭಾರತೀಯ ರಿಯಲ್ ಎಸ್ಟೇಟಿನ ಆಮ್ಲೀಯ ಉಬ್ಬರದಂತೆ ವಿದೇಶಿ ವಿನಿಮಯ ಸಹ ಅದಕ್ಕೆ ತಕ್ಕಂತೆ ಉಬ್ಬರಿಸಿ ಡಾಲರ್ ಒಂದಕ್ಕೆ ಎಂಟುನೂರು ರೂಪಾಯಿಗಳಾಗಿ ಎಲ್ಲಾ ಅನಿವಾಸಿಗಳೂ ತಮ್ಮ ತಮ್ಮ ಮೂಲ ಊರಿನಲ್ಲಿ ಒಂದೊಂದು ೬೦*೪೦ ಮನೆ ಮಾಡಿಕೊಳ್ಳುವಂತಾಗಲು ಮೋದಿ, ರಾಹುಲ್, ದೇವೇಗೌಡ, ಮಮತಾ, ಸ್ಟಾಲಿನ್, ಸಿದ್ದರಾಮಯ್ಯ, ಎಡ-ಬಲ ಚಿಂತಕರು ಸಹಕರಿಸಿ "ವೈವಿಧ್ಯತೆಯಲ್ಲಿ ಏಕತೆ"ಯನ್ನು ಅನಿವಾಸಿಗಳನ್ನೂ ಒಳಗೊಂಡ ಬಾಬಾ ಸಾಹೇಬರ ಸಮಸಮಾಜದ ಕನಸನ್ನು ನನಸಾಗಿಸಲು ಸಹಕರಿಸಲಿ. 


ಏಕೆಂದರೆ ಒಂದಾನೊಂದು ಕಾಲದ ಅನಿವಾಸಿಗಳಾಗಿದ್ದ ಗಾಂಧಿ, ನೆಹರೂ, ಜಿನ್ನಾ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟರೆ, ಅದೇ ಒಂದಾನೊಂದು ಕಾಲದ ಅನಿವಾಸಿಯಾಗಿದ್ದ ರಾಜೀವ್ ಗಾಂಧಿ / ಸ್ಯಾಮ್ ಪಿತ್ರೋಡ ದೂರಸಂಪರ್ಕ ತಂತ್ರಜ್ಞಾನದಲ್ಲಿ ಕ್ರಾಂತಿ ಮಾಡಿದರು. ಆ ದೂರಸಂಪರ್ಕ ತಳಹದಿಯ ಮೇಲೆ ನೀಲೇಕಣಿ, ನಾರಾಯಣಮೂರ್ತಿ ಅಂತಹವರು ಮಾಹಿತಿ ತಂತ್ರಜ್ಞಾನದ ಹೆದ್ದಾರಿ ನಿರ್ಮಿಸಿದರು. ಅದೇ ಒಂದಾನೊಂದು ಕಾಲದ ಅನಿವಾಸಿ ಎಸ್ಸೆಂ ಕೃಷ್ಣ, ಖೇಣಿ ಬೆಂಗಳೂರನ್ನು ಸಿಂಗಾಪುರ ಮಾಡಿ ರಿಯಲ್ ಎಸ್ಟೇಟ್ ಕ್ರಾಂತಿಗೆ ಬುನಾದಿ ಹಾಕಿದರು. ಇಂತಪ್ಪ ಅನಿವಾಸಿಗಳಿಗೆ ಒಂದು "ಭಾಗ್ಯ" ಬೇಡವೇ?!? ಪುಕ್ಕಟೆ ಬೇಡ, ಡಾಲರ್ ಎಂಟುನೂರು ರೂಪಾಯಿಯಾಗಿ ಅನಿವಾಸಿಗಳು ನಿವಾಸ ಕಂಡುಕೊಳ್ಳುವಂತಾಗಲಿ.


#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ

ಶಿವಣ್ಣನವರ ಖುಷಿ

 #ಅಮೆರಿಕದ_ಶಿಕಾಗೊ ನಗರದಲ್ಲಿ 20 ವರ್ಷಗಳಿಂದ ವಾಸವಾಗಿರುವ ಮೇನೇಜ್ಮೆಂಟ್ ಕಂಪ್ಯೂಟರ್ ತಜ್ಞ, ಸಾಹಿತಿ  ಶ್ರೀ ರವಿ ಹಂಜ್ ಅವರ ಮನೆಗೆ ಇತ್ತೀಚೆಗೆ ನಾನು ನನ್ನ ಹೆಂಡತಿ ಹೋಗಿಬಂದೆವು.

30.9.2018 ರಂದು ಬೆಂಗಳೂರು ಗಾಂಧಿ ಭವನದಲ್ಲಿ ಸಮಾಜಮುಖಿ ಪ್ರಕಾಶನದ ರವಿ ಹಂಜ್ ಅವರ ಮೊದಲ ಕೃತಿ "ಹುಯೆನ್ ತ್ಸಾಂಗನ ಮಹಾಪಯಣ" ಬಿಡುಗಡೆ ಸಮಾರಂಭದಲ್ಲಿ ಮೂರ್ನಾಲ್ಕು ನಿಮಿಷದ ಮೊದಲ ಭೇಟಿ. ನಂತರ ಫೇಸ್‌ಬುಕ್‌ ಬರಹಗಳ ಮೂಲಕ ಸ್ನೇಹ ಮುಂದುವರಿಕೆ.

ಎರಡನೇ ಭೇಟಿ: ಶಿಕಾಗೊಗೆ ನಾನು ಬರುವ ವಿಚಾರ ಅವರಿಗೆ ವೈಯಕ್ತಿಕವಾಗಿ ತಿಳಿಸಿರಲಿಲ್ಲ. ನಾನು ಅಮೆರಿಕಕ್ಕೆ ಬಂದಿರುವ ವಿಚಾರ ಫೇಸ್‌ಬುಕ್‌ ನಿಂದ ತಿಳಿದು ಅವರು  ಮೆಸೇಜ್ ಮಾಡಿದರು.  ಮಗಳು ಅಳಿಯ ಮೊಮ್ಮಕ್ಕಳ ಜೊತೆಗೆ ಮನೆಗೆ ಬರಲು ನಮ್ಮನ್ನು ಆಮಂತ್ರಿಸಿದರು. ಒಂದೇ ಕುಟುಂಬ ಇದ್ದಂತೆ, ಯಾವುದೇ ಸಂಕೋಚವಿಲ್ಲದೆ ಬರಬೇಕೆಂದರು. ಕಾರಣಾಂತರದಿಂದ ತಡವಾಯಿತು. ಮತ್ತೆ ಅವರದೇ ಮೆಸೇಜ್ "ನಮ್ಮ ಕಡೆ ಯಾವಾಗ ಪ್ರಯಾಣ?"


ಮನೆಯಲ್ಲಿ ಒಂದೂವರೆ ತಿಂಗಳ ನಮ್ಮ ಮೊಮ್ಮಗಳು ಇರುವುದರಿಂದ ನಮ್ಮ ಮಗಳು ಅಳಿಯ ಬರಲಿಲ್ಲ. ನಾನು ನನ್ನ ಪತ್ನಿ ಕ್ಯಾಬ್_ನಲ್ಲಿ ರವಿಯವರ ಮನೆಗೆ ಹೋದೆವು.

ರವಿ ಮತ್ತು ಅವರ ಪತ್ನಿ ಬಹಳ ಆತ್ಮೀಯತೆಯಿಂದ ನಮ್ಮನ್ನು ಬರಮಾಡಿಕೊಂಡರು. ಹಂಜ್ ದಂಪತಿಗೆ ಒಬ್ಬ ಮಗ. ವಿದ್ಯಾಭ್ಯಾಸ ಮುಗಿಸಿ ಈಗ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾನೆ.


ರವಿಯವರು ಮೂಲತಃ ದಾವಣಗೆರೆಯವರು. ಸುಮಾರು 25 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾಗ ರವಿ ಹಂಜ್ ದಂಪತಿಗೆ ಅಮೆರಿಕದ ಐಟಿ ಕಂಪನಿಯೊಂದರಲ್ಲಿ ಕೆಲಸ ಸಿಕ್ಕ ರೀತಿ, ಬೆಂಗಳೂರಿನಿಂದ ಅಮೆರಿಕಕ್ಕೆ ಪ್ರಯಾಣ ಮಾಡಿದ ಸಂದರ್ಭ ಬಹಳ ವಿಶೇಷವಾಗಿದೆ ಮತ್ತು ಸ್ವಾರಸ್ಯಕರವಾಗಿದೆ. 


'ತೀರ್ಥ ಪ್ರಸಾದ'ದ ಜೊತೆಗೆ ಅಮೆರಿಕದ ಶಿಕ್ಷಣ ಪದ್ಧತಿ, ಆರೋಗ್ಯ ನೀತಿ, ಕೃಷಿರಂಗ, ರಾಜಕಾರಣ - ಚುನಾವಣೆಗಳು, ಆಡಳಿತ ವ್ಯವಸ್ಥೆ, ನ್ಯಾಯಾಂಗ, ತೆರಿಗೆ,  ಗನ್ ವಯಲೆನ್ಸ್, ಇತ್ಯಾದಿ ಬಗ್ಗೆ ನನ್ನ ತಿಳುವಳಿಕೆ ಹೆಚ್ಚಿಸಿಕೊಳ್ಳುವ ದೃಷ್ಟಿಯಿಂದ ಮಾತುಕತೆ ನಡೆಯಿತು. ಚರ್ಚೆಯಲ್ಲಿ ದಾವಣಗೆರೆಯ ಹಳೆಯ ನೆನಪುಗಳು ಸಹಾ ಬಂದವು  (ನಾನು  6 ವರ್ಷ- 1974-76 & 2006-10 ರಲ್ಲಿ 

ವಿದ್ಯಾಭ್ಯಾಸ ಮತ್ತು ಕಾರ್ಯನಿಮಿತ್ತ ದಾವಣಗೆರೆಯಲ್ಲಿದ್ದೆ- ಆಗ ರವಿಯವರ ಪರಿಚಯವಿರಲಿಲ್ಲ)


ನಂತರ ಊಟೋಪಚಾರ! ರವಿಯವರ ಪತ್ನಿ ಶುದ್ಧ ಸಸ್ಯಾಹಾರಿ.

ರವಿಯವರೇ ತಯಾರಿಸಿದ ಚಿಕನ್ ಮಸಾಲ ಬಹಳ ರುಚಿಯಾಗಿತ್ತು! ಅಮೆರಿಕದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಕೊಡಗಿನ ಅವರ ಸ್ನೇಹಿತರ ಮಗಳು ಬಂದಿದ್ದರು. ಅವರು ಕೊಡಗಿನ ಒಂದೆರಡು ರುಚಿಕಟ್ಟಾದ ಭಕ್ಷ್ಯಗಳನ್ನು ಉಣಬಡಿಸಿದರು. ಹಾಗೂ ಕೊಡಗಿನ ಜೀವನಶೈಲಿಯ ಕೆಲವು ವಿವರಗಳನ್ನು ಸ್ವಾರಸ್ಯಕರವಾಗಿ ಹಂಚಿಕೊಂಡರು.


ಹಾಗೆಯೇ ರವಿಯವರೊಂದಿಗೆ ಮಧ್ಯಾಹ್ನ ಹಸಿರು ಗಿಡಮರಗಳ ಮಧ್ಯೆ ಒಂದಷ್ಟು ದೂರ ವಿಹಾರ. ಹತ್ತಿರದ ಪ್ರಾಥಮಿಕ ಶಾಲೆಯ ದರ್ಶನ ಮಾಡಿಸಿದರು.


ರವಿ ಹಂಜ್ ಅವರು ಇದುವರೆಗೆ #ಐದು_ಕೃತಿಗಳನ್ನು ಕನ್ನಡ ಸಾಹಿತ್ಯಕ್ಕೆ ನೀಡಿದ್ದಾರೆ.

1.ಹುಯೇನ್ ತ್ಸಾಂಗನ ಮಹಾಪಯಣ 2.ಅಗಣಿತ ಅಲೆಮಾರಿ

3.ರ ಠ ಈ ಕ 4.ಭಾರತ ಮರುಶೋಧ 5.ಬಸವರಾಜಕಾರಣ

ಪ್ರೀತಿ ವಿಶ್ವಾಸದಿಂದ ಮೂರು ಪುಸ್ತಕಗಳನ್ನು ನನಗೆ ನೀಡಿದರು.


ಫೇಸ್‌ಬುಕ್‌ ನಲ್ಲಿ ರವಿಯವರ ಹೆಚ್ಚಿನ ಬರಹಗಳು ಭಾರತದ ಪ್ರಸಕ್ತ ವಿದ್ಯಮಾನಗಳ ಆಗುಹೋಗುಗಳ ಬಗ್ಗೆ ಅವರ ಅನಿಸಿಕೆಗಳು, ವಿಶ್ಲೇಷಣೆಗಳು. ಕಾಮೆಂಟ್_ಗಳಿಗೆ ಅವರ ಕ್ಷಿಪ್ರ ಪ್ರತಿಕ್ರಿಯೆಗಳು ನೇರ ನಿಷ್ಠುರ ವ್ಯಂಗ್ಯ ತುಂಟತನಗಳ ಸಮ್ಮಿಶ್ರಣ!


ಕೆಲವೊಮ್ಮೆ ಎಡದವರನ್ನು ಕೆಲವೊಮ್ಮೆ ಬಲದವರನ್ನು  ಕೆಲವೊಮ್ಮೆ ಎಡಬಲ ಇಬ್ಬರನ್ನೂ ಸೇರಿಸಿ ಟೀಕೆ ಟಿಪ್ಪಣಿ ಮಾಡುತ್ತಾರೆ. ಅವರ ಫೇಸ್‌ಬುಕ್‌ ಟ್ಯಾಗ್ ಲೈನ್ ವಿಶೇಷವಾಗಿದೆ. ದಾವಣಗೆರೆಯ ವಿಶಿಷ್ಟ ಜವಾರಿ ಭಾಷೆಯನ್ನು ನಿಸ್ಸಂಕೋಚವಾಗಿ ಸರಾಗವಾಗಿ ಉಪಯೋಗಿಸುತ್ತಾರೆ.


ಫೇಸ್‌ಬುಕ್‌ ನಲ್ಲಿನ ಅವರ ಕೆಲವು ಬರಹ ಪ್ರತಿಕ್ರಿಯೆಗಳ ಧಾಟಿ ಬಲು ಬಿರುಸು! ಅವರು ತುಂಬಾ ಜೋರು ವ್ಯಕ್ತಿ ಎಂಬ ಭಾವನೆ ಬರುತ್ತದೆ. ಆದರೆ ಅವರನ್ನು ಭೇಟಿಯಾದ ನಂತರ ನನ್ನ ಅಭಿಪ್ರಾಯ ಬದಲಾಯಿತು. ರವಿಯವರು ಸ್ನೇಹಮಯಿ. ಮಾತು ನಿರರ್ಗಳ, ಆದರೆ ಸೌಮ್ಯ!  ಎಷ್ಟೋ ವರ್ಷಗಳ ಆತ್ಮೀಯ ಸ್ನೇಹಿತರ ಒಡನಾಟದಂತಿತ್ತು ಅವರೊಂದಿಗಿನ ಚೇತೋಹಾರಿ ಮಾತುಕತೆ.

ಇನ್ನೂ ಮಾತುಕತೆ ಮುಂದುವರೆಸುವ ಇಚ್ಚೆಯಿತ್ತು. ಆದರೆ ಸಮಯವಿರಲಿಲ್ಲ. ರವಿ ಹಂಜ್ ಅವರು ತಮ್ಮ ಕಾರಿನಲ್ಲಿ ನಮ್ಮನ್ನು ಮನೆಯವರಿಗೆ ಬಂದು ಬಿಟ್ಟು ಹೋದರು. ಇದು ಅವರ ದೊಡ್ಡತನ. ರವಿ ಹಂಜ್ ದಂಪತಿಗಳ ಮನೆಗೆ ಭೇಟಿ, ಅವರೊಂದಿಗಿನ ಮಾತುಕತೆ, ಅವರ ಸೌಜನ್ಯ ಅತಿಥಿ ಸತ್ಕಾರ ಸದಾ ನಮ್ಮ ನೆನಪಿನಲ್ಲುಳಿಯುವ ಸಂಗತಿಗಳು. ಅವರಿಗೆ ಅನಂತ ಧನ್ಯವಾದಗಳು.

Sarcasm

 ಒಂದು ವಿಷಯ ಯಾ ವ್ಯಕ್ತಿಯ ಮೂರ್ಖತನವನ್ನು ವಿಡಂಬನಾತ್ಮಕವಾಗಿ ಅಣಕವಾಡಿ ಅಥವಾ ಅವಹೇಳಿಸುವುದನ್ನು "ವ್ಯಂಗೋಕ್ತಿ" ಎನ್ನುತ್ತಾರೆ. ಇದು ಸಾಹಿತ್ಯದಲ್ಲಿ ಒಂದು ಪ್ರಮುಖ ಪ್ರಕಾರ. ಇಂಗ್ಲಿಷ್ ಸಾಹಿತ್ಯ ಅದರಲ್ಲೂ ಬ್ರಿಟಿಷ್ ಇಂಗ್ಲಿಷ್ ಸಾಹಿತ್ಯದಲ್ಲಿ ಈ ಪ್ರಕಾರವು ಹೆಚ್ಚು ಪ್ರಚಲಿತವಾಗಿದೆ. ಇದು ಕುಚೋದ್ಯದ ಹಾಸ್ಯ ಎನಿಸಿದರೂ ಈ ಪ್ರಕಾರವು ಸಂದೇಶಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಓದುಗರಿಗೆ ತಲುಪಿಸುತ್ತದೆ. ಇದು ಸಾಹಿತ್ಯದ ಒಂದು ತಂತ್ರ ಮಾಧ್ಯಮವಾಗಿ ಬರಹಗಾರನ ಕೋಪ, ಹತಾಶೆ, ಜುಗುಪ್ಸೆ, ಕುಚೋದ್ಯಗಳು ನವಿರು ಅಥವಾ ಗಾಢ ಹಾಸ್ಯದ ಲೇಪನದೊಂದಿಗೆ ಪ್ರಚಲಿತ ಸಾಮಾಜಿಕ, ರಾಜಕೀಯ ಅಥವಾ ಇನ್ಯಾವುದೇ ವಿದ್ಯಮಾನಗಳ ಕುರಿತಾದ ಕಟು ವಿಮರ್ಶೆಯನ್ನು ಒಳಗೊಂಡಿರುತ್ತದೆ. ಇಂಗ್ಲಿಷಿನಲ್ಲಿ ವ್ಯಂಗೋಕ್ತಿಯನ್ನು sarcasm ಎನ್ನುತ್ತಾರೆ. ಲ್ಯಾಟಿನ್ ಪದ sarcasmos ಮತ್ತು ಗ್ರೀಕ್ ಪದ sarkasmos ಎರಡರಿಂದಲೂ ಬಂದಿರುವ ಈ ಎರಡೂ ಭಾಷೆಗಳಲ್ಲಿ ಈ ಪದವು "ಚರ್ಮ ಸುಲಿಯುವುದು", "ರೋಷದಿಂದ ತುಟಿ ಕಚ್ಚುವುದು", "ಕುಹಕ ನಗೆ" ಎಂಬ ಅರ್ಥ ಹೊಂದಿದೆ. ಕ್ರಿ.ಶ. ೧೫೫೦ರಿಂದಲೂ ಈ ಪ್ರಕಾರವು ಪಾಶ್ಚಿಮಾತ್ಯ ಸಾಹಿತ್ಯದಲ್ಲಿ ಬಳಕೆಯಲ್ಲಿದೆ.


ನನ್ನ ಫೇಸ್ಬುಕ್ ಪೋಸ್ಟುಗಳು ಸಹ ಈ ರೀತಿಯ ಭಾರತದ ಸಾಮಾಜಿಕ, ರಾಜಕೀಯ ಮತ್ತಿತರೆ ಪ್ರಚಲಿತ ವಿದ್ಯಮಾನಗಳ ಕುರಿತಾದ ವಿಡಂಬನಾತ್ಮಕ ಬರಹಗಳು. ಸಾಕಷ್ಟು ಭಾರತೀಯ ಶ್ರೀಸಾಮಾನ್ಯರು ನನ್ನ ಬರಹಗಳನ್ನು ಇದೇ ಅರ್ಥದಲ್ಲಿ ಸ್ವೀಕರಿಸಿದರೂ ಅನೇಕ ಸಾಹಿತಿಗಳು, ಪತ್ರಕರ್ತರು, ಚಿಂತಕರು, ಸಾಕ್ಷಿಪ್ರಜ್ಞೆಗಳು, ಕನ್ನಡ ಸಂಶೋಧನ ಪಿಹೆಚ್ದಿ ಮತ್ತು ಸ್ನಾತಕೋತ್ತರ ಪದವೀಧರರು ಇವುಗಳನ್ನು ಗ್ರಹಿಸುವಲ್ಲಿ ಸೋತು ಅಥವಾ ಸೋತಂತೆ ನಟಿಸಿ ನನ್ನನ್ನು ಬಲವೆಂದು, ಎಡವೆಂದು, ನಡುವೆಂದು, ಮೋಜುಗಾರನೆಂದು, ವಿಲಾಸಿಯೆಂದು, ವಿದೇಶಿಯೆಂದು ಇತ್ಯಾದಿಯಾಗಿ ಬ್ರ್ಯಾಂಡ್ ಮಾಡುತ್ತಿದ್ದಾರೆ. ನಾನು ಈ ಮೇಲಿನ ಯಾವುದೋ ಕೇವಲ ಒಂದು ಮಾತ್ರವಲ್ಲದೆ ಎಲ್ಲವೂ ಆಗಿರುವ ಓರ್ವ ಶ್ರೀಸಾಮಾನ್ಯ ಮಾತ್ರ ಆಗಿರುತ್ತೇನೆ. ದಯಮಾಡಿ ನನ್ನನ್ನು ಹಳೇ ಮೈಸೂರು ಕಡೆ "ಪುಕ್ಸಟ್ಟೆ ತು... ಎಂದರೆ ಮೈತುಂಬಾ ತು..." ಎನ್ನುವಂತೆ ಮೈತುಂಬಾ ಇರುವವನೆಂದು ಗ್ರಹಿಸದೆ 'ಇರುವಲ್ಲಿ ಎಲ್ಲರಂತೆ ಒಂದೇ ಇರುವವ' ಎಂದು ಪರಿಗಣಿಸಬೇಕಾಗಿ ವಿನಂತಿಸುವೆ. ನಾನು ವಿಡಂಬನೆಯನ್ನು ಕೇವಲ ಜಾಗೃತಿ ಮೂಡಿಸುವ ಒಂದು ತಂತ್ರವಾಗಿ ನೋಡುತ್ತೇನೆಯೇ ಹೊರತು ಇನ್ನೇನಾಗಿಯೂ ಅಲ್ಲ. 


ಬ್ರಿಟಿಷ್ ಹಾಸ್ಯಗಾರ ರಿಕಿ ಜೆರ್ವೈಸ್ ಹೇಳುವಂತೆ ನಾನು ಸಹ ಬ್ರಿಟಿಷರು ಈ ಸಾಹಿತ್ಯ ಪ್ರಕಾರವನ್ನು ಕತ್ತಿ ಮತ್ತು ಗುರಾಣಿಯಾಗಿ ಸದಾ ಬಳಸುವಂತೆ ಬಳಸುತ್ತೇನೆ.  ನಮ್ಮ  ಚಿಂತಕರು ಹೇಗೆ ಸಂವಿಧಾನ, ಬುದ್ಧ, ಬಸವ, ಅಂಬೇಡ್ಕರ್, ಕುವೆಂಪು ಹಿಂದುತ್ವ, ಫ್ಯಾಸಿಸಂ, ಜಾತ್ಯಾತೀತ, ಅಸ್ಮಿತೆ, ಸೆಕ್ಯುಲರ್ ಇತ್ಯಾದಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪದಕೋಶವನ್ನು ಕತ್ತಿ, ಗುರಾಣಿಯಾಗಿ ಬಳಸುವರೋ ಹಾಗೆ! 


#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ

ಸಂವಿಧಾನ VS ಸಂವಿಧಾನ

 ಅತ್ಯಂತ ಹಳೆಯ (ಕ್ರಿ. ಶ. ೧೭೮೯) ಮತ್ತು ಚಿಕ್ಕದಾಗಿ ಸುಮಾರು ೪,೪೪೦ ಪದಗಳಲ್ಲಿ ಜೇಮ್ಸ್ ಮ್ಯಾಡಿಸನ್ ಬರೆದ ಸಂವಿಧಾನ, ಅಮೇರಿಕನ್ ಸಂವಿಧಾನ! ೨೭ ಬಾರಿ ತಿದ್ದುಪಡಿಗೊಂಡ ಈ ಸಂವಿಧಾನ ಅಮೇರಿಕಾವನ್ನು ಇತರೆ ದೇಶಗಳಿಂದ "ದೊಡ್ಡಣ್ಣ" ಎನ್ನಿಸಿದೆ.

ಅತ್ಯಂತ ನವೀನ (ಕ್ರಿ.ಶ. ೧೯೫೦) ಮತ್ತು ವಿಸ್ತೃತವಾಗಿ ಸುಮಾರು ೧,೪೫,೦೦೦ ಪದಗಳಲ್ಲಿ ಡಾ. ಭೀಮರಾವ್ ರಾಮ್ಜಿ ಅಂಬೇಡ್ಕರ್ ಬರೆದ ಸಂವಿಧಾನ, ಭಾರತೀಯ ಸಂವಿಧಾನ! ೧೦೫ ಬಾರಿ ತಿದ್ದುಪಡಿಗೊಂಡು ಇನ್ನೂ ಗೊಂದಲದಲ್ಲಿದ್ದರೂ ಭಾರತ ತನ್ನನ್ನು ತಾನು ವಿಶ್ವಗುರು ಎಂದು ಸ್ವಘೋಷಣೆ ಮಾಡಿಕೊಳ್ಳುವಷ್ಟು ಭಾವೋತ್ಕರ್ಷ ತುಂಬಿಸಿದೆ.
ಇದನ್ನು ಬರೆದ ಇಬ್ಬರೂ "ಸಂವಿಧಾನ ಪಿತಾಮಹ" ಎಂದು ಅವರವರ ದೇಶಗಳಲ್ಲಿ ಖ್ಯಾತರಾಗಿದ್ದಾರೆ.
ಇವೆರಡರ ನಡುವಿನ ಪ್ರಮುಖ ವ್ಯತ್ಯಾಸ ಅಮೇರಿಕನ್ ಸಂವಿಧಾನಕ್ಕೆ ಸ್ಫೂರ್ತಿ ೧೭೭೫-೭೬ ರಲ್ಲಿ ಥಾಮಸ್ ಪೇನ್ ಬರೆದ "Common Sense" ಎಂಬ ಸಾಮಾನ್ಯ ಜ್ಞಾನ! ಅದಕ್ಕೆ ತಕ್ಕಂತೆ ಅಮೆರಿಕಾದಲ್ಲಿ ಕೃತಿ ಮುಖ್ಯವಾಗಿದ್ದರೆ, ಭಾರತದಲ್ಲಿ ಕೃತಿಕಾರರು ಮುಖ್ಯವೆನಿಸಿ ದೇವಮಾನವ ಎನಿಸಿದ್ದಾರೆ.
ಇದೇ ಮಾದರಿಯಾಗಿ ಪುಟಗಟ್ಟಲೆ ಬರೆದು ನೂರಕ್ಕೆ ನೂರು ಅಂಕ ತೆಗೆವ ಅಂಕದ ಕೋಳಿಗಳಾಟ ಸ್ವಾತಂತ್ರ್ಯ ಭಾರತದ ಸಂವಿಧಾನದ ರಚನೆಯಿಂದ ಈವರೆಗಿನ ಊಳಿಗಮಾನ ಪ್ರಜಾಪ್ರಭುತ್ವದ ಆಧುನಿಕ ಮಾಹಿತಿ ತಂತ್ರಜ್ಞಾನದ ಪಿತಾಮಹ ಎಂದು ಸ್ವಉದ್ಘೋಷಿತ ಭಾರತದವರೆಗಿನ ಭಾರತದಲ್ಲಿ ಸಾಗಿಬರುತ್ತಿದೆ. ಓ(ದಿ)ಡಿ, ಓ(ದಿ)ಡಿ, ಓ(ದಿ)ಡಿ, ನೂರಕ್ಕೆ ನೂರು, ಪುಟಗಟ್ಟಲೆ ಸಂವಿಧಾನದಂತೆಯೇ ಪುಂಖಾನುಪುಂಖ ಬರೆದು ಸರ್ಕಾರಿ ಬಾಬುಗಳಾಗಿ ದೇವಮಾನವರೆನಿಸಿ ಎಡ, ಬಲ, ಊಪರ್ ನೀಛೆ, ಹಿಂದೆ ಮುಂದೆ, ಸಂದಿಗೊಂದಿಯಲ್ಲೆಲ್ಲಾ ಗೊಂದಲವನ್ನು ಸೃಷ್ಟಿಸುತ್ತಲೇ ಇರಿ.....!
ಆದರೂ ಇಂದು ಭಾವೋತ್ಕರ್ಷ ಎತ್ತಿಟ್ಟು ಮೇಲಿನ ವಾಸ್ತವಾಂಶ ಹಿಡಿದು ಎಡ-ಬಲ, ಮೇಲೆ-ಕೆಳಗೆ, ಆಲ್ಲಿ-ಇಲ್ಲಿ ನೋಡದೆ ಕೇಳದೆ, ನಮ್ಮ ನಮ್ಮ ಸಾಮಾನನ್ನು ನಮ್ಮ ನಮ್ಮ ಕೈಯಲ್ಲಿ ಭದ್ರವಾಗಿ ಹಿಡಿದು ಲಿಂಗವೇ ಜಂಗಮವೆಂದರಿದು "ಸ್ವಾತಂತ್ರ್ಯ, ಮನುಜರೆಲ್ಲ ಸಮಾನ, ಮತ್ತು ಸಂತೋಷಕರ ಜೀವನದ ಅನ್ವೇಷಣೆಯೇ ಸಂವಿಧಾನ" ಎನ್ನುವ ಸರಳ ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯೋಣ. ಏಕೆಂದರೆ ಅಮೇರಿಕನ್ ಸ್ವಾತಂತ್ರ್ಯ ದಿನವಾದ ಜುಲೈ ೪ರಂದು ನಮ್ಮ ಭಾರತ ಏಕೆ ಹೀಗೆ ಎಂದು ಮಮ್ಮಲ ಮರುಗುತ್ತಲೇ ವಿಶ್ವಮಾನವರಾಗಿ.........Raise the glass tonight for the liberty and in the pursuit of happiness!

ಸವಾಲೊಂದು ನಿನ್ನ ಮ್ಯಾಲ ಶಾಹೀರಕೆ...

 ಸವಾಲೊಂದು ನಿನ್ನ ಮ್ಯಾಲ ಶಾಹೀರಕೆ...

ಓರ್ವ ಅನಿವಾಸಿಯಾಗಿ ದೊಡ್ಡ ದೇಶದಲ್ಲಿ ಏಸಿಯಲ್ಲಿ ಕುಳಿತು ಏನು ಮಾಡ್ತೀ? ಬರಿಯೋದು ಅಲ್ಲ, ಬಾ ಇಲ್ಲಿ ನಮ್ಮೊಂದಿಗೆ ಹೋರಾಡಿ ತೋರ್ಸು.
ಆಯ್ತು ಹೋರಾಟಕ್ಕೆ ನಾನು ಸಿದ್ಧ. ಆದರೆ ನನಗೆ ಪರಿಹಾರ ಸಿಕ್ಕುವಂತಹ ಹೋರಾಟಗಳಲ್ಲಿ ಮಾತ್ರ ಆಸಕ್ತಿ. ನೀವು ಮಾಡುವ ಪ್ರಚಾರಪ್ರಿಯ, ಪರಿಹಾರ ಪಡೆಯಲೇಬೇಕೆಂಬ ದೃಢ ನಿರ್ಧಾರವಿರದ ಮತ್ತು ಅಲ್ಪದೃಷ್ಟಿಯ ಹೋರಾಟಗಳನ್ನು ನಾನು ನಿರಾಕರಿಸುವುದಲ್ಲದೆ ಖಂಡಿಸುತ್ತೇನೆ.
ನಮ್ಮ ಬುದ್ಧಿಜೀವಿಗಳು, ಚಿಂತಕರು, ಸಾಕ್ಷಿಪ್ರಜ್ಞೆಗಳು ಎನಿಸಿಕೊಂಡವರು ಹೇಳುವಂತೆ ನಮ್ಮ ಭಾರತದ ಪ್ರಜಾಪ್ರಭುತ್ವ ಇಡೀ ವಿಶ್ವದಲ್ಲೇ ಅತಿ ದೊಡ್ಡದು. ಇಲ್ಲಿನ ಸಂವಿಧಾನ ಸಹ ಅತ್ಯಂತ ದೊಡ್ಡ ಮತ್ತು ಶ್ರೇಷ್ಠ ಸಂವಿಧಾನ! ಹೌದು, ಅದರಲ್ಲಿ ಎರಡು ಮಾತಿಲ್ಲ.
ಇಂತಹ ದೊಡ್ಡ ಪ್ರಜಾಪ್ರಭುತ್ವ ಮತ್ತು ಶ್ರೇಷ್ಠ ಸಂವಿಧಾನದ ಅಡಿಯಲ್ಲಿನ ನ್ಯಾಯಾಂಗ ವ್ಯವಸ್ಥೆಯಲ್ಲಿ RSS ಎಂಬುದು ಒಂದು ದಮನಕಾರಿ, ಕಟುಕ ಕ್ರೂರಿ, ದೇಶದ ಪ್ರಣವಸ್ವರೂಪಿ ವೈವಿಧ್ಯತೆಯನ್ನು ಹಾಳು ಮಾಡುತ್ತಿರುವ ವಿಷಕಾರಿ ಸಂಸ್ಥೆ. ಈ ಸಂಸ್ಥೆಯ ಮೇಲೆ ಐಪಿಸಿ ೧೨೪ ಅಂತಹ ಬ್ರಹ್ಮಾಸ್ತ್ರ ಅಲ್ಲದಿದ್ದರೂ ಸಮಾಜದ ಸ್ವಾಸ್ಥ್ಯ ಕೆಡಿಸುವ ೧೫೩(ಎ), ೨೯೫(ಎ)... ಕಡೇ ಪಕ್ಷ ಒಂದು ಸಣ್ಣ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಿ ಪಾಠ ಕಲಿಸಲು ನಮಗೆ ಸಾಧ್ಯವಿಲ್ಲವೇ?! ಅದರಲ್ಲೂ ಯಕಶ್ಚಿತ್ ಒಂದು ಫೇಸ್ಬುಕ್ ಪೋಸ್ಟಿಗೆ FIR ಬಿದ್ದು ಕೇಸಾಗುತ್ತಿರುವ ನಮ್ಮ ಭವ್ಯ ಭಾರತದ ಸದೃಢ ಪ್ರಜಾಪ್ರಭುತ್ವದಲ್ಲಿ RSS ಅಂತಹ ಯಕಶ್ಚಿತ್ ೩% ಮೇಲೆ ೯೭% ಬಹುಮತದ ಕೇಸ್ ನಿಲ್ಲದೆ ಬಂಧುಗಳೇ?
ಪುಸ್ತಕ ಬರೆಯುವುದು, ಹೋರಾಟ ಮಾಡುವುದು ಪ್ರಚಾರ ನೀಡಬಲ್ಲುದೇ ಹೊರತು ಪರಿಹಾರವನ್ನಲ್ಲ. ಅಂತಹ ಯಕಶ್ಚಿತ್ ಕೆಲಸವನ್ನು ಕೈಲಾಗದ ನನ್ನಂತಹ ಅನಿವಾಸಿ "ಮತ ಹಾಕಲು ಹಕ್ಕಿಲ್ಲದ" ಅತಿ ದೊಡ್ಡ ಪ್ರಜಾಪ್ರಭುತ್ವದ ಸಾಗರೋತ್ತರ "ನಾಗರಿಕ" ಮಾಡಬೇಕೆ ಹೊರತು ಪ್ರಜಾಪ್ರಭುತ್ವದ "ಹಕ್ಕುದಾರ ಮತದಾರ" ನಾಗರಿಕನಲ್ಲ.
ಇಪ್ಪತ್ತೊಂದನೇ ಶತಮಾನದ ಮಾಹಿತಿ ತಂತ್ರಜ್ಞಾನದ ಈ ಯುಗದಲ್ಲಿ ಈದಿ ಅಮೀನ್, ಮುಸಲೋನಿ, ಸ್ಟಾಲಿನ್, ಸದ್ದಾಂ, ಖೋಮೇನಿ, ಮಾವೋ ಮುಂತಾದ ಹತ್ತು ಹಲವು ದುಷ್ಟರು 'ಮೋಡಿ' ಎಂಬ ಏಕರೂಪವಾಗಿ ಹುಚ್ಚು 'ಖೋಡಿ'ಯಂತೆ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವದ ಮೇಲೆ ದಾಳಿ ಇಡುತ್ತಾನೆ ಎಂಬುದನ್ನು ವಿಶ್ವವೇ ನಂಬಲಸಾಧ್ಯ! ಹಾಗಾಗಿ ಈ ಸೂಕ್ತಪುರುಷನ ಸೋಲಿಸಲು ನಮ್ಮ ಹಕ್ಕಿನ ನ್ಯಾಯಾಂಗದ ಹೋರಾಟವೇ ಸೂಕ್ತಮಾರ್ಗ ಅಲ್ಲವೇ!
ಅವನನ್ನು ಇದೇ ಪ್ರಜಾಪ್ರಭುತ್ವದ ಮಹಾನ್ ಸಂವಿಧಾನದ ಪರಿಧಿಯೊಳಗೇ ಒಂದು ತಿರುಮಂತ್ರ ಹಾಕಿ ಸೋಲಿಸಲು ಉದಾತ್ತ ಮೇರು ಚಿಂತಕರು, ಸಾಕ್ಷಿಪ್ರಜ್ಞೆಗಳಿಗೆ ಸಾಧ್ಯವಿಲ್ಲವೇ? ಇದೆ, ಇದು ಕೇವಲ ಎಡಗೈಯಲ್ಲಿಯೇ ನಿವಾರಿಸಬಹುದು. ಅಮಿತಾಭ್ ಬಚ್ಚನ್ ಹೇಳುತ್ತಾನಲ್ಲ, "ಯೇ ತೋ ಮೇರಾ ಬಾಯೆ ಹಾಥ್ ಕಾ ಖೇಲ್ ಹೈ" ಹಾಗೆ!
ಹಾಗಾಗಿ ನಿವಾಸಿ ಚಿಂತಕರು ಏನಿದ್ದರೂ ಶಾಶ್ವತ ಪರಿಹಾರ ತರುವ ಇಂತಹ ದೂರದೃಷ್ಟಿಯ ಹೋರಾಟಗಳನ್ನು ಹಮ್ಮಿಕೊಳ್ಳಬೇಕು. ಅಂತಹ ಶಾಶ್ವತ ಪರಿಹಾರ ಎಂದರೆ ಅದು ನ್ಯಾಯಾಂಗದ ಪರಿಹಾರ. ಇದು ಈಗಾಗಲೇ ಭಾರತದಲ್ಲಿ ಅಲ್ಲಲ್ಲಿ ಸಾಬೀತು ಸಹ ಆಗಿದೆ!
ಹಾಂ, ಇಂತಹ ಮೊಕದ್ದಮೆಯಿಂದ ಆಗುವ ಉಪಯೋಗವೆಂದರೆ ಶಾಶ್ವತ ಪರಿಹಾರ ಮತ್ತು ಸ್ವಸ್ಥ ಸದೃಢ ಸಮಾಜ ನಿರ್ಮಾಣ! ಮುಂದೆ ಭವಿಷ್ಯದ ಹೋರಾಟಗಳಿಗೆ ಇದೇ ಒಂದು ಮಾದರಿಯಾಗಿ ಮಾರ್ಗಸೂಚಿಯೂ ಆಗುತ್ತದೆ ಸಹ. ಸುಬ್ರಮಣಿಯನ್ ಸ್ವಾಮಿ ಗೊತ್ತಲ್ಲ!! ಆತನ ಹೋರಾಟ ಈಗಾಗಲೇ ಇಂತಹ ಫಲ ನೀಡಿದೆ, ಬಂಧುಗಳೇ! ಹಿಂಜರಿಯದಿರಿ. ಎದೆಯೂರಪ್ಪ ಜೈಲಿಗೆ ಹೋಗಿಬಂದದ್ದು ಸಹ ಇಂತಹ ನ್ಯಾಯಾಂಗ ಹೋರಾಟದಿಂದಲೇ ಎಂಬುದನ್ನು ನೆನಪಿಸಿಕೊಳ್ಳಿ.
ಮುಂದಿನ ಕಾರ್ಯಸೂಚಿಯಾಗಿ ಇಂತಹ ಶಾಶ್ವತ ಪರಿಹಾರ ಕೋರಿ ಎಲ್ಲಾ ಚಿಂತಕರು ತಕ್ಷಣಕ್ಕೆ ಒಡಗೂಡಿ ತಮ್ಮದೇ ಸಮಾನಮನಸ್ಕ ವಕೀಲರ ಸಹಾಯದಿಂದ ಒಂದು ಬಲಿಷ್ಠ ಮೊಕದ್ದಮೆಯನ್ನು RSS ವಿರುದ್ಧ ಏಕೆ ಹೂಡಬಾರದು? ಇಂತಹ ನ್ಯಾಯಾಂಗ ಹೋರಾಟಕ್ಕೆ ನಾನು ಚಿಕ್ಕ ವಂತಿಗೆಯಾಗಿ ಒಂದು ಲಕ್ಷ ರೂಪಾಯಿ ಕೊಡುತ್ತೇನೆ. ನನ್ನಂತೆಯೇ ಉದಾರವಾದವನ್ನೆ ಹಾಸಿ ಹೊದ್ದಿರುವ ನನ್ನ ಆತ್ಮೀಯ ಮಾರ್ಗದರ್ಶಕರು ಎಡ ಚಿಂತಕರೂ ಆದ ಮೇಷ್ಟ್ರ ಆಪ್ತರಾದ ರೆಡ್ಡಿ ಅಂತಹ ಅನೇಕ ಭಾರತಕ್ಕಾಗಿ ಮಿಡಿಯುವ ಅನಿವಾಸಿಗಳು ಸಹ ತಮ್ಮ ಕೈಲಾದ ವಂತಿಗೆ ಕೊಡಬಹುದು. ಸುಮ್ಮನೆ "RSS ಆಳ ಅಗಲ" ಎಂದು ಬರೆದರೆ ಅದು RSS ಅನ್ನು ಅಷ್ಟೇ ಆಳ ಅಗಲವಾಗಿ ಹೆಮ್ಮರವಾಗಿಸುತ್ತದೆ. ಈ ಪುಸ್ತಕ ದಾಖಲೆಯ ಮಾರಾಟವಾಗುವುದನ್ನು ಹಿಂದಿಕ್ಕಿ ಗೋಲ್ವಾಲ್ಕರ್ ಪುಸ್ತಕ "Bunch of Thoughts" ಡೌನ್ಲೋಡ್ ಆಗಿದೆ. ಇಂಗ್ಲಿಷ್ ಮಾಧ್ಯಮದಲ್ಲೇ ಓದಿರುವ ಕನ್ನಡದ ನಮ್ಮ ಇಂದಿನ ಯುವಜನಾಂಗ Bunch of Thoughts ಮೂಲವನ್ನು ಕೆದಕುತ್ತಿದ್ದಾರೆಯೇ ಹೊರತು ನಿಮ್ಮ ಆಳ ಅಗಲವನ್ನಲ್ಲ ಎಂದು ಈ ಡೌನ್ಲೋಡ್ ಅಂಕಿಅಂಶಗಳು ತೋರುತ್ತಿವೆ. ಇದರ ಪರಿಣಾಮ ಗೊತ್ತಲ್ಲ...! ಹಾಗಾಗಿ ಬಂಧುಗಳೇ, ಬನ್ನಿ 'ಬಾಯೇ ಹಾತ್ ಕ ಖೇಲ್' ತೋರಿಸೋಣ. ಎಲ್ಲಕ್ಕೂ ಮೇಲಾಗಿ ನಾನು, ನಾನು ರವಿ ಹಂಜ್ ಒಂದು ಲಕ್ಷ ರೂಪಾಯಿಯ ಚಿಕ್ಕ ಸಾಂಕೇತಿಕ ವಂತಿಗೆ ಕೊಡುತ್ತೇನೆ. ಏಳಿ ಎದ್ದೇಳಿ, ಗುರಿ ಮುಟ್ಟುವವರೆಗೆ ವಿಶ್ರಮಿಸದಿರಿ.
ಬನ್ನಿ, ಚಡ್ಡಿ ಕಿತ್ತೆಸೆಯುವುದು ಸ್ವಾತಂತ್ರ್ಯದ ಪ್ರತೀಕ. ಹಾಗಾಗಿ ಚಡ್ಡಿ ಕಿತ್ತೆಸೆಯೋಣ. ಸ್ವಾತಂತ್ರ್ಯವನ್ನು ಎತ್ತಿ ಹಿಡಿಯೋಣ.
ನಿಮಗೆ ಜುಗಾರಿ ಕ್ರಾಸ್ ಪ್ರೊಫೆಸರ್ ಗಂಗೂಲಿ ನೆನಪಾದರೆ ಅದು ಸಹಜ.

ಆರ್.ಎಸ್.ಎಸ್ ಆಳ ಮತ್ತು ಅಗಲ

 ನಾನು ಜಾಗತಿಕವಾಗಿ ಚಾಲನೆಯಲ್ಲಿರುವ ಉದಾರವಾದ ಚಿಂತನೆಯ ಕಟ್ಟಾ ಅಭಿಮಾನಿ. ಇದನ್ನು ಜಾಗತಿಕವಾಗಿ ಎಡ-ಚಿಂತನೆ ಎನ್ನುತ್ತಾರಾದರೂ ಅದು ಭಾರತೇತರದ ಎಡ-ಚಿಂತನೆ ಎಂದೇ ಸ್ಪಷ್ಟ ಪಡಿಸಬೇಕು! ಏಕೆಂದರೆ ಭಾರತದ ಎಡ-ಚಿಂತನೆ ಸದ್ಯಕ್ಕೆ ಅಲ್ಲಿನ ಬಲದಷ್ಟೇ ಉಗ್ರ, ನಿಕೃಷ್ಟ ಮತ್ತು ಯಕಶ್ಚಿತ! ಇಂತಹ ಉಗ್ರ ಮತ್ತು ನಿಕೃಷ್ಟ ಎಡ ಪಂಥವನ್ನು ಜಗತ್ತಿನ ಯಾವುದೇ ಉದಾರವಾದಿ ಒಪ್ಪುವುದಿಲ್ಲ.

ಜಗತ್ತಿನ ಎಲ್ಲಾ ಉದಾರವಾದಿಗಳಂತೆ ನಾನು ಟ್ರಂಪ್, ಪುಟಿನ್, ಮೋದಿಯನ್ನು ವಸ್ತುನಿಷ್ಠವಾಗಿ ಖಂಡಿಸಿದ್ದೇನೆ. ಇತಿಹಾಸದ ಮಾವೋ, ಸ್ಟಾಲಿನ್, ಲೆನಿನ್ ಅವರ ದುಷ್ಕೃತ್ಯಗಳನ್ನು ಅಂಕಿಅಂಶಗಳ ಸಮೇತ ಧಿಕ್ಕರಿಸಿದ್ದೇನೆ. ಆದರೆ ಸುಖಾಸುಮ್ಮನೆ ಅಧಿಕಾರದಲ್ಲಿಲ್ಲದವರನ್ನು, ಅಶಕ್ತರನ್ನು ಉದಾಹರಣೆಗೆ ರಾಹುಲ್, ಸೋನಿಯಾರನ್ನು, ಮುಗ್ಧ ಭಕ್ತರನ್ನು ಟ್ರೋಲ್ ಮಾಡಿಲ್ಲ. ಸಶಕ್ತ, ಬುದ್ಧಿಜೀವಿ ಎನಿಸಿಕೊಂಡವರನ್ನು ಮತ್ತು ಆ ರೀತಿ ಆವಾಹಿಸಿಕೊಂಡವರನ್ನು ಉದಾಹರಣೆಗೆ ಸಿದ್ಧರಾಮಯ್ಯ ಮತ್ತವರ ಬುದ್ಧಿಜೀವಿ ಸಾಹಿತಿಗಳ ದ್ವಂದ್ವಗಳನ್ನು ತಿವಿ ತಿವಿದು, ತಿವಿ ತಿವಿದು, ತಿವಿ ತಿವಿದು ತೋರಿಸಿದ್ದೇನೆ. ಟ್ರಂಪ್ನನ್ನು ಪುಟಗಟ್ಟಲೆ ತೆಗಳುವ ಭಾರತದ ಯಾವ ಬುದ್ಧಿಜೀವಿಯೂ ಉಕ್ರೇನ್ ಮೇಲೆ ಯುದ್ಧ ಮಾಡುತ್ತಿರುವ ಪುಟಿನ್ ನನ್ನು ಖಂಡಿಸಿಲ್ಲ. ಕಲ್ಲಂಗಡಿಗೆ ಅಭಿಯಾನ ಮಾಡಿದ ಪ್ರಚ್ಛನ್ನ ಎಡ ಚಿಂತಕರು ಉರುಳಿದ ತಲೆಗಳಿಗೆ ಯಾವ ಅಭಿಯಾನವನ್ನೂ ಮಾಡಿಲ್ಲ.
ನನ್ನ ಕೆಲವು ಫೇಸ್ಬುಕ್ ಬರಹಗಳಲ್ಲಿ ಸಾಮಾನು, ಸ್ಖಲನ, ಮಿಲನ ಮಹೋತ್ಸವ, ಶಾta ಇತ್ಯಾದಿ ಪದಗಳನ್ನು ಬೇಕೆಂದೇ ಬಳಸಿದ್ದೇನೆ. ಏಕೆಂದರೆ ಈ ಸಶಕ್ತ ಬುದ್ಧಿಜೀವಿಗಳ ದ್ವಂದ್ವಗಳನ್ನು ಜಾಣನಿಗೆ ಮಾತಿನ ಪೆಟ್ಟು ಎಂಬಂತೆ ಹಿಂದೆ ಕೊಟ್ಟು ಇತ್ತೀಚೆಗೆ ಈ ಪದಗಳ ದೊಣ್ಣೆ ಪೆಟ್ಟು ಕೊಡುತ್ತಿದ್ದೇನೆ. ಅಂದರೆ ಇದರ ಹಿಂದಿನ ಉದ್ದೇಶ ಓರ್ವ ಅನಿವಾಸಿ ಸಾಗರೋತ್ತರ ನಾಗರಿಕನ ಕಳಕಳಿ ಕಾಣಲಿ ಎಂದಷ್ಟೇ. ಮೇಲಾಗಿ ಇಂತಹ ಪದಗಳು ಇರುವ ವಿಷಯ ಬಲು ಬೇಗ ತಲೆಗೆ ಹೋಗುವ ಅಭ್ಯಾಸ ಕಾಮಸೂತ್ರದ ಭಾರತೀಯರಲ್ಲಿ ಅವ್ಯಾಹತವಾಗಿ ಹರಿಯುವುದು ಸಹ ಪೂರಕ ಅಂಶವೇ ಆಗಿದೆ.
ಸದ್ಯಕ್ಕೆ ಟ್ರೋಲ್ ಭಾರತದಲ್ಲಿ ಸಿಲುಕಿ ಸ್ಟಾಕ್ಹೋಮ್ ಸಿಂಡ್ರೋಮಿಗೆ ಈ ಎಲ್ಲಾ ಎಡ ಬಲ ಚಿಂತಕರು ಒಳಗಾಗಿರುವ ಕಾರಣ ನನ್ನ ಟ್ಯಾಗ್ ಲೈನ್ ಸುಳ್ಳಾಗುವ ಲಕ್ಷಣ ಮುಂದಿನ ಶತಮಾನದಲ್ಲೂ ಕಾಣುತ್ತಿಲ್ಲ. ಏಕೆಂದರೆ ಈಗ ನಮ್ಮ ನಾಡಿನ ಸಾಕ್ಷಿಪ್ರಜ್ಞೆ ಎನ್ನಬಹುದಾದ ಅತ್ಯಂತ ಗೌರವಾನ್ವಿತ ಸಾಹಿತಿಗಳು ಯಕಶ್ಚಿತ್ ಎನ್ನುವಂತಹ ರಾಜಕಾರಣಿಯೋರ್ವನ ಒಂದು ಭಾಷಣದ ಪ್ರತಿಯಂತಿರುವ "ಪ್ರಕಟಯೋಗ್ಯ" ಎನ್ನುವ ಪದದ ಅಸ್ತಿತ್ವವನ್ನೇ ಧಿಕ್ಕರಿಸುವಂತಹ "ಆರ್.ಎಸ್.ಎಸ್ ಆಳ ಮತ್ತು ಅಗಲ" ಕೃತಿಯನ್ನು ತಂದಿದ್ದಾರೆ. ಇದು ಇವರೇ ಬರೆದಿದ್ದೆ ಎಂದು ಜಿಜ್ಞಾಸೆಗೊಳಗಾಗುವಷ್ಟು ಮುಜುಗರಕ್ಕೆ ಇಂದು ನಾನೊಳಗಾಗಿರುವೆ. ಲಂಗೋಟಿಯಲ್ಲಿರುವ ತಮ್ಮ ಬಾಲಬಡುಕರು ಬರೆದಿದ್ದಕ್ಕೆ ದೊಡ್ಡ ಚಡ್ಡಿ ತೊಡಿಸಿ ತಮ್ಮ ಹೆಸರು ಹಾಕಿಸಿ ಅಚ್ಚೊತ್ತಿಸಿಬಿಟ್ಟರೇನೋ ಎಂಬ ಅನುಮಾನ ಮೂಡುವಷ್ಟು ಕೃತಿ ಗಂಭೀರತೆ ಇಲ್ಲದ ಗಮನಾರ್ಹತೆ ಗಳಿಸಿದೆ ಎಂದಷ್ಟೇ ಹೇಳಬಲ್ಲೆ.
ಆರ್.ಎಸ್.ಎಸ್ ಪ್ರಾಣ ಎಲ್ಲೆಲ್ಲಿದೆ ಎಂಬ ಅಧ್ಯಾಯದಲ್ಲಿ ಕೊಟ್ಟಿರುವ ಗೋಳ್ವಾಲ್ಕರ್, ಸಾವರ್ಕರ್ ಅವರ ಮನುಸ್ಮೃತಿ, ಧ್ವಜ, ಒಕ್ಕೂಟ ಕಲ್ಪನೆಯ ಬಗೆಗಿನ ಟಿಪ್ಪಣಿಗಳನ್ನು ಓದಿದಾಗ ಮೇಲ್ನೋಟಕ್ಕೆ ಗೋಳ್ವಾಲ್ಕರ್, ಸಾವರ್ಕರ್ ಚಿಂತನೆ ಮಾನಸಿಕ ಅಸ್ವಸ್ಥರ rubbish ಚಿಂತನೆ ಎನಿಸುತ್ತದೆ. ಆದರೆ ಇವರಿಬ್ಬರ ವೈಯಕ್ತಿಕ ಕೃತಿಗಳ ಸಂಬಂಜ ಆರ್.ಎಸ್.ಎಸ್ ಒಟ್ಟಿಗೆ ಹೇಗೆ ಮತ್ತು ಅದರ ಅಜೆಂಡಾ ಹೇಗೆಂಬ ಒಂದು ಲಿಂಕ್ ಇದ್ದಿದ್ದರೆ ಚೆನ್ನಾಗಿತ್ತು. ಗೋಲ್ವಾಲ್ಕರ್ ಆರ್.ಎಸ್.ಎಸ್ ಸಂಚಾಲಕರಾಗಿದ್ದ ಮಾತ್ರಕ್ಕೆ ಅವರ ಕೃತಿಗಳು ಆರ್.ಎಸ್.ಎಸ್ ಎಂದು ಹೇಳಲಾಗದು. ಹೇಗೆ ಈ ಆಳ ಮತ್ತು ಅಗಲ ಕೃತಿಯು ಮಾನವ ಬಂಧುತ್ವ ವೇದಿಕೆಯಿಂದ ಪ್ರಕಟವಾಗಿದೆ ಎಂದಾಕ್ಷಣ ಅದರ ಸ್ಥಾಪಕರ ಮತ್ತವರ ಸೋದರರ ಎಲ್ಲಾ ರಾಜಕೀಯ ಪಕ್ಷ, ಸು(ಕು)ಕೃತ್ಯಗಳನ್ನು ಲೇಖಕರು ಬೆಂಬಲಿಸುತ್ತಾರೆ ಎನ್ನಲಾಗುವುದಿಲ್ಲವೋ ಹಾಗೆಯೇ ಇಲ್ಲಿ ಸಂಬಂಜದ ಕೊರತೆ ಇದೆ.
ಕೊಟ್ಟಿರುವ ಒಂದೇ ಒಂದು ಲಿಂಕ್ ಎನ್ನಬಹುದಾದರೆ ಅದು ಆರ್. ಎಸ್.ಎಸ್ ಮುಖವಾಣಿ ಎನ್ನಲಾದ ಆರ್ಗನೈಜರ್ ಟಿಪ್ಪಣಿ. ಆದರೆ ಇದು ಅಂಬೇಡ್ಕರ್ ಅವರ ಸಂವಿಧಾನದ ಕುರಿತಾದ ಟೀಕೆಯಾಗಿದೆ. ಅದರಲ್ಲಿ 'ಮನುಸ್ಮೃತಿಯ ಕಾನೂನುಗಳು' ಎಂಬ ಅಂಶವನ್ನು ಹೊರತುಪಡಿಸಿದರೆ ಸಾಕಷ್ಟು ಅಂಶಗಳು ತಾರ್ಕಿಕವಾಗಿ ಅಂದಿನ ವಾಸ್ತವಾಂಶಕ್ಕೆ ಸರಿಯಾಗಿಯೇ ಇರುವುದಲ್ಲದೆ ಸತ್ಯಾಂಶ ಹೊಂದಿವೆ. ವರ್ತಮಾನದ ಬಿಜೆಪಿ ಸರ್ಕಾರದ ಬೆದರು ಬೊಂಬೆ ಪಾಕಿಸ್ತಾನ, ೧೫ ಲಕ್ಷ, ಅಂಬಾನಿ, ಆರ್ಯನ್ ಶ್ರೇಷ್ಠತೆ, ಪುಸ್ತಕ ಪರಿಷ್ಕರಣೆ, ಜಿಎಸ್ಟಿ, ಹಿಜಾಬ್, ಹಲಾಲ್, ಅಜಾನ್, ಮತಾಂತರ ನಿಷೇಧ ಕಾಯ್ದೆ...ಹೀಗೆ ಆಳ ಮತ್ತು ಅಗಲ ವಿಸ್ತರಿಸಿದೆ.
ಈ ಕೃತಿಯಲ್ಲಿ ಉಲ್ಲೇಖಿಸಿರುವ CMIE ದತ್ತಾಂಶಗಳು ೨೦೧೭ ರಿಂದ ೨೦೨೨ ರ ನಡುವೆ ಸುಮಾರು ಎರಡು ಕೋಟಿಗೂ ಹೆಚ್ಚು ಮಹಿಳೆಯರು ಕಾರ್ಮಿಕ ಪಡೆಯಿಂದ ಕಣ್ಮರೆಯಾಗಿದ್ದಾರೆ ಎನ್ನುವುದನ್ನು ಆರ್.ಎಸ್.ಎಸ್ ಹಿಡನ್ ಅಜೆಂಡಾ "ಮಹಿಳೆಯರು ಮನೆಯಲ್ಲಿರಬೇಕು" ಎಂಬ ಕಾರ್ಯತಂತ್ರದ ಭಾಗವೋ ಎಂದು ಸಂಬಂಜದ ಅನುಮಾನವನ್ನು ಲೇಖಕರು ವ್ಯಕ್ತಪಡಿಸಿದ್ದಾರೆ.
ನಿಜ ಸ್ಥಿತಿ ಏನೆಂದರೆ, Mckinsey ವಿಶ್ಲೇಷಣಾ ಅಧ್ಯಯನದ ಪ್ರಕಾರ ಭಾರತ vs ಅಮೆರಿಕಾ ಅಂಕಿ ಅಂಶಗಳು ಹೀಗಿವೆ:
ಕೊರೋನಾ ಪೂರ್ವದಲ್ಲಿ ಅಮೆರಿಕಾದ ಒಟ್ಟು ಉದ್ಯೋಗಗಳಲ್ಲಿ ಶೇಕಡಾ 46 ಪ್ರತಿಶತ ಮಹಿಳೆಯರಿದ್ದರು. ಕೊರೋನಾದಿಂದಾದ ಒಟ್ಟು ಉದ್ಯೋಗ ನಷ್ಟದಲ್ಲಿ ಶೇಕಡಾ 43 ಪ್ರತಿಶತ ಮಹಿಳೆಯರೆಂದು ಸಮೀಕ್ಷೆಗಳು ತೋರಿದರೂ ಕಾರ್ಮಿಕ ಇಲಾಖೆಯ ಅಂಕಿ-ಅಂಶಗಳು ಅದು ಶೇಕಡಾ 54 ಪ್ರತಿಶತ ನಷ್ಟ ಎನ್ನುತ್ತವೆ.
ಅದೇ ಕೊರೋನಾ ಪೂರ್ವ ಭಾರತದ ಒಟ್ಟು ಉದ್ಯೋಗಗಳ ಶೇಕಡಾ 20 ಪ್ರತಿಶತ ಮಹಿಳೆಯರಿದ್ದರು. ಕೊರೋನಾದಿಂದಾದ ಉದ್ಯೋಗ ನಷ್ಟದಲ್ಲಿ ಮಹಿಳೆಯರ ಅಂಶ ಶೇಕಡಾ 17 ಪ್ರತಿಶತ ಎಂದು ಸಮೀಕ್ಷೆಗಳು ತೋರಿದರೂ ಕೆಲವು ಸರ್ವೆಗಳು ಅದು ಶೇಕಡಾ 23 ಪ್ರತಿಶತ ಎನ್ನುತ್ತವೆ. ಈ ಉದ್ಯೋಗ ನಷ್ಟಕ್ಕೆ ಲಿಂಗ ತಾರತಮ್ಯದ ಕೊಡುಗೆ 1:4 ಅನುಪಾತ! ಅಂದರೆ ಪ್ರತಿ ನಾಲ್ಕು ಮಹಿಳೆಯರ ಉದ್ಯೋಗ ನಷ್ಟಕ್ಕೆ ಒಬ್ಬ ಪುರುಷ ಉದ್ಯೋಗ ಕಳೆದುಕೊಂಡಿದ್ದಾನೆ. ಅಂದರೆ ಮಹಿಳೆ ಅಶಕ್ತಳು ಎಂಬ ತಾರತಮ್ಯದ ಪೂರ್ವಾಗ್ರಹವೊಂದೇ 1:4 ಅನುಪಾತದ ಉದ್ಯೋಗ ನಷ್ಟಕ್ಕೆ ನೇರ ಕಾರಣವಾಗಿದೆ ಎಂದರೆ, ಲಿಂಗ ತಾರತಮ್ಯ ಎಷ್ಟು ಬಲವಾಗಿ ಬೇರೂರಿದೆ ಎಂದು ಗಮನಿಸಿ. ಈ ಬಗ್ಗೆ ಹೆಚ್ಚಿನ ವಿವರಗಳು ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ವಿಭಾಗಕ್ಕೆ ನಾನು ಕೊಟ್ಟ ಉಪನ್ಯಾಸದಲ್ಲಿ ಇವೆ. ಆಸಕ್ತರು ಗಮನಿಸಬಹುದು.
ಇನ್ನು ಭಾರತೀಯ ಲಿಂಗತಾರತಮ್ಯ ಸ್ವಾತಂತ್ಯ ಪೂರ್ವದಿಂದಲೂ ಜಗತ್ತಿಗೇ ಖ್ಯಾತ ಎಂಬುದು ಜಾಗತಿಕ ವಾಸ್ತವ. ಸುಪ್ತವಾಗಿದ್ದ ಈ ತಾರತಮ್ಯವನ್ನು ಕೊರೋನಾ ಬಡಿದೆಚ್ಚರಿಸಿದೆ. ಸಾಮಾಜಿಕವಾಗಿ ವ್ಯವಸ್ಥಿತವಾಗಿ ಲಿಂಗ ತಾರತಮ್ಯದ ಬಗ್ಗೆ ಅರಿವು ಮೂಡಿಸದಿರುವುದು ಸಹ ಈ ನಷ್ಟಕ್ಕೆ ನೇರ ಹೊಣೆಯಾಗಿದೆ. ಈ ಕೋವಿಡ್ ಕಾಲಘಟ್ಟದ ಅಂಕಿಅಂಶ ಹಿಡಿದು ಲೇಖಕರು ಇದಕ್ಕೆ ಕಾರಣ ಕೇವಲ ಆರ್.ಎಸ್.ಎಸ್ ಎನ್ನುವುದು ಅತ್ಯಂತ ಸೃಜನಶೀಲತೆ ಅಲ್ಲದೆ ಇನ್ನೇನೂ ಅಲ್ಲ ಎಂದು ದೃಢವಾಗಿ ಹೇಳಬಹುದು.
ಇರಲಿ, ಈ ರೀತಿಯಾಗಿ ಕೃತಿಯಲ್ಲಿ ವ್ಯಕ್ತಪಡಿಸಿರುವ ಭಯವಿಹ್ವಲಗೊಳಿಸುವಂತಹ ಆರ್.ಎಸ್.ಎಸ್ ಚಿಂತನೆಗಳನ್ನು ಹಿಟ್ಲರ್, ಮಾವೋ, ಈದಿ ಅಮೀನ್, ಸ್ಟಾಲಿನ್, ಅಯಾತೊಲ್ಲಾ ಖೊಮೈನಿ, ಸದ್ದಾಂ ಹುಸೇನ್ ಬಿಡಿ, ಇಂದಿನ ಸಾಕ್ಷಾತ್ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸಹ ಅಳವಡಿಸಲು ಸಾಧ್ಯವಿಲ್ಲ. ಅದೂ ಅಂಬೇಡ್ಕರರ ಸಂವಿಧಾನ ಜಾರಿಯಲ್ಲಿರುವ ಪ್ರಜಾಪ್ರಭುತ್ವ ಭಾರತದಲ್ಲಿ, ಊಹೂಂ! ಒಂದು ವೇಳೆ ಇದು ಸಾಧ್ಯವಾದರೆ ಅದು "ಸಂವಿಧಾನದ ದುರ್ಬಲತೆ" ಮತ್ತು "ಭಾರತದ ಊಳಿಗಮಾನ ಪ್ರಜಾಪ್ರಭುತ್ವ"ದ ಕಾರಣವೇ ಹೊರತು ಇನ್ನೇನೂ ಅಲ್ಲ. ಉತ್ಪ್ರೇಕ್ಷೆ (Glorification), ತುಷ್ಟೀಕರಣ (Appeasement), ಸ್ವಜನ ಪಕ್ಷಪಾತ (Nepotism), ಜಾತಿ ಅಧಿನಾಯಕತ್ವ (Hegemony) ಗಳ grand gala ಯುಗದಲ್ಲಿ ಒಂದು ಸಂಸ್ಥೆಯ ಬಗ್ಗೆ ದಿಗಿಲುಗೊಂಡಿರುವ ಸನಾತನ ಜಡ ಚಿಂತನೆಗೆ ಮರುಕ ಪಡಬಹುದಷ್ಟೆ.
ನೈಜ ಉದಾರವಾದಿ ಎಡಚಿಂತಕರು, ದೂರದೃಷ್ಟಿಯ ಬುದ್ಧಿಜೀವಿಗಳು "ಆಳ ಅಗಲ"ವಾಗಿ ಚಿಂತಿಸಬೇಕಿರುವುದು ಈ ನಿಟ್ಟಿನಲ್ಲಿಯೇ ಹೊರತು ಯಕಶ್ಚಿತ್ ಸಂಸ್ಥೆಯೊಂದರ ಕುರಿತಲ್ಲ.
ಇಂತಹ "ತೋಳ ಬಂತು ತೋಳ" ಪೂರ್ವಾಗ್ರಹದ ದಿಗಿಲುಗ್ರಹಣ ಹಿಡಿದಿರುವ ಭಾರತೀಯ ಎಡ-ಚಿಂತನೆಯು ತಾರ್ಕಿಕ ಮತ್ತು ನೈಜ ಉದಾರವಾದವನ್ನು ಅಳವಡಿಸಿಕೊಳ್ಳದಿದ್ದರೆ ಅಮಿತ್ ಷಾ ಹೇಳುವಂತೆ ಬಿಜೆಪಿ ಇನ್ನೂ ಮೂವತ್ತು ನಲವತ್ತು ವರ್ಷ ಅಧಿಕಾರದಲ್ಲಿರುತ್ತದೆ.

ಪುಸ್ತಕ ಲೋಕದ ಕೆಜಿಎಫ್

 ಪುಸ್ತಕ ಲೋಕದ ಕೆಜಿಎಫ್ ಎಂದೇ ಖ್ಯಾತವಾದ "ಅರ್ ಎಸ್ ಎಸ್: ಆಳ - ಅಗಲ" ಕೃತಿಯು ನನ್ನಂತಹ ಬೇವರ್ಸಿ ಬಿಕನಾಸಿ ಅನಿವಾಸಿಯನ್ನೂ ವಾಟ್ಸಾಪ್ ಮೂಲಕ ಪಿಡಿಎಫ್ ಆಗಿ ತಲುಪಿದೆ. ಇದು ಪೈರಸಿಯೋ ಅಥವಾ ಉದ್ದೇಶಪೂರ್ವಕವಾಗಿ ಹಂಚಿಕೆಯಾಗಿದೆಯೋ ಗೊತ್ತಿಲ್ಲ.

ಈ ಪಿಡಿಎಫ್ ಮುದ್ರಿತ ಪುಸ್ತಕವನ್ನು ಸ್ಕ್ಯಾನ್ ಮಾಡಿದ ರೀತಿಯದಲ್ಲ, ವೃತ್ತಿಪರ ಪಿಡಿಎಫ್ ಆಗಿರುವುದರಿಂದ ಇದು ಮೂಲ ಪ್ರಕಾಶಕರು ಅಥವಾ ಕೃತಿಕಾರರಿಂದಲೇ ಹಂಚಲ್ಪಟ್ಟಿರಬಹುದು. ಇದು ಪೈರಸಿ ಕಾಪಿ ಆಗಿದ್ದರೆ ಲೇಖಕರು ಮತ್ತು ಸಮೂಹ ಪ್ರಕಾಶಕರು ಕಾರ್ಯಪ್ರವೃತ್ತರಾಗಿ ಹಂಚಿದವರ ಮೇಲೆ ಕಾನೂನು ಕ್ರಮ ಜರುಗಿಸಿ ಸಂವಿಧಾನ, ಹಕ್ಕುಸ್ವಾಮ್ಯತೆ, ಮುಂತಾಗಿ ಇವರ ಹೋರಾಟದ ಅಂಶಗಳೇ ಆಗಿರುವ ಸಾಮಾಜಿಕ, ನೈತಿಕ, ಸಂವಿಧಾನಿಕ ಅಂಶಗಳನ್ನು ಎತ್ತಿ ಹಿಡಿಯಬೇಕು.
ಒಂದು ವೇಳೆ ಉದ್ದೇಶಪೂರ್ವಕವಾಗಿ ಲೇಖಕರು ಅಥವಾ ಅವರ ಸಮೂಹ ಪ್ರಕಾಶಕರುಗಳೇ ವಾಟ್ಸಾಪಿನಲ್ಲಿ ಹಂಚಿದ್ದರೆ ಅವರುಗಳಿಗೆ ಕಿಂಚಿತ್ ದೂರದೃಷ್ಟಿಯೂ ಇಲ್ಲದೆ ಅವರ ವಿರೋಧಿಗಳಂತೆ ಇವರೂ ಸಹ ವಾಟ್ಸಾಪ್ ವಿಶ್ವವಿದ್ಯಾಲಯಕ್ಕೆ ಶರಣಾಗಿರುವ ನೈತಿಕ ಕುಸಿತವನ್ನು ಅಧೋಗತಿಯನ್ನು ತೋರುತ್ತದೆ.
ದೂರದೃಷ್ಟಿ ಇದ್ದಿದ್ದರೆ:
ಕನ್ನಡ ಸಾಹಿತ್ಯವನ್ನು ಈಬುಕ್ ಆಗಿಸಿ ಜಾಗತಿಕವಾಗಿ ತಲುಪಿಸಲು ಹೆಣಗುತ್ತಿರುವ ಅಪ್ಪಟ ಕನ್ನಡ ಪ್ರೇಮಿ ನಿತೇಶ್ ಕುಂಟಾಡಿ ಅವರ ಋತುಮಾನ appನಲ್ಲಿ ಶೂನ್ಯ ಬೆಲೆಗೆ ಡೌನ್ಲೋಡ್ ಮಾಡಿಕೊಳ್ಳಲು ಏರ್ಪಾಡು ಮಾಡಬಹುದಿತ್ತು. ಆಗ ಕನ್ನಡದ ಋತುಮಾನ app ಸಾವಿರಾರು ಜನರ ಮೊಬೈಲಿನಲ್ಲಿರುತ್ತಿತ್ತು ಮತ್ತು ಆಸಕ್ತರು ಅಲ್ಲಿರುವ ಇತರೆ ಪುಸ್ತಕಗಳ ಮೇಲೆ ಕಣ್ಣಾಡಿಸಿಯಾದರೂ ಕುಂಟಾಡಿಯವರ ಪ್ರಯತ್ನವನ್ನು ಮತ್ತು ಕನ್ನಡದ e-booksಗಳನ್ನು ಗಮನಿಸುತ್ತಿದ್ದರು. ಎಲ್ಲಕ್ಕಿಂತ ಮೇಲಾಗಿ ಸಾಹಿತ್ಯ ಶ್ರೇಷ್ಠರು ಸಾಹಿತ್ಯದ ನೂತನ ಆಯಾಮವಾದ ಡಿಜಿಟಲೀಕರಣಕ್ಕೆ ಒಂದು ಪ್ರಚಾರವನ್ನು ಕೊಟ್ಟಂತಾಗುತ್ತಿತ್ತು.
ಇಲ್ಲದಿದ್ದರೆ ತಮ್ಮದೇ ಪಂಥನಿಷ್ಠ ಆನ್ಲೈನ್ ಪುಸ್ತಕ ಮಳಿಗೆಗಳಾದ ಜೀರುಂಡೆ, ಬೀರುಂಡೆ, ಕೈಮಾದುಂಡೆ ಇತ್ಯಾದಿ ಮಳಿಗೆಳಲ್ಲಿಯಾದರೂ ಶೂನ್ಯ ಬೆಲೆಗೆ ಓದುಗರು ಡೌನ್ಲೋಡ್ ಮಾಡಿಕೊಳ್ಳಲು ಬಿಟ್ಟಿದ್ದರೆ, ನಿಷ್ಠರಾದರೂ ಕೊಂಚ ಡಿಜಿಟಲ್ ಟ್ರಾಫಿಕ್ ನೋಡುತ್ತಿದ್ದರು.
ಇವರೆಲ್ಲಾ ಬೇಡ ಎಂದಿದ್ದರೆ ಗೂಗಲ್ ಬುಕ್ಸ್ ಸಹ ಇತ್ತು.
ಇದು ದೂರದೃಷ್ಟಿಯ ಒಂದು ಸಣ್ಣ ಉದಾಹರಣೆ ಅಷ್ಟೇ! ಇಂತಹ ಒಂದು ದೂರದೃಷ್ಟಿ ಇಲ್ಲದವರು ಒಂದು ರಾಷ್ಟ್ರವನ್ನು ರೂಪಿಸುವ, ಆಡಳಿತ, ಸಾಮಾಜಿಕ, ನ್ಯಾಯಾಂಗ, ಶಾಸಕಾಂಗ, ಇತ್ಯಾದಿ ಅಂಗಗಳ ಬಗ್ಗೆ ಅಧಿಕಾರಯುತವಾಗಿ ಒಂದು roadmap ಕೊಡಬಲ್ಲರೇ!
ಪ್ರೀತಿ, ಪ್ರೇಮ, ಕಕ್ಕುಲಾತಿ, ಕರುಣೆಯ ಕತೆಗಳು ಬಹು ಆಪ್ಯಾಯಮಾನ.
ಇಷ್ಟೇ ಇವರ ದೂರದೃಷ್ಟಿಯ ಆಳ - ಅಗಲ!!