60*40

 ಡಾಲರ್ ಎದುರು ರೂಪಾಯಿ ಮೌಲ್ಯ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಇದು ಕೇವಲ ರೂಪಾಯಿ vs ಡಾಲರ್ ಎನ್ನದೆ ಡಾಲರ್ ವಿರುದ್ಧ ಯುರೋ ಸಹ ಸಾಕಷ್ಟು ಕುಸಿದಿದೆ. ಒಂದು ವರ್ಷದ ಹಿಂದೆ ಒಂದು ಯುರೋಗೆ ಒಂದೂಕಾಲು ಡಾಲರ್ ಇದ್ದದ್ದು ಈಗ ಸಮವಾಗಿದೆ.


ಇದಕ್ಕೆ ಕಾರಣ ಅಮೆರಿಕಾದ ಫೆಡರಲ್ ರಿಸರ್ವ್ ಬಡ್ಡಿ ದರವನ್ನು ಇತರೆ ರಾಷ್ಟ್ರಗಳಿಗಿಂತ ತ್ವರಿತಗತಿಯಲ್ಲಿ ಏರಿಸುತ್ತಿರುವುದು. ಇದರಿಂದ ಯು.ಎಸ್ ಟ್ರೆಜರಿ ಬಾಂಡುಗಳು ಜಾಗತಿಕ ಹೂಡಿಕೆದಾರರಿಗೆ ಆಕರ್ಷಕ ಎನ್ನಿಸಿ ಡಾಲರ್ ಬೇಡಿಕೆ ಹೆಚ್ಚುತ್ತಿದೆ. ಅಮೆರಿಕಾದ ಹಣದುಬ್ಬರ ನಿಯಂತ್ರಣ ಪಾಲಿಸಿಗಳು ಅಲ್ಲಿನ ಹಣದುಬ್ಬರವನ್ನು ತ್ವರಿತವಾಗಿ ನಿಯಂತ್ರಣಕ್ಕೆ ತರುತ್ತದೆ ಮತ್ತು ಡಾಲರ್ ಹೆಚ್ಚು ಲಾಭ ತರುತ್ತದೆ ಎಂದು ಡಾಲರ್ ಹೂಡಿಕೆದಾರರು ನಂಬಿದ್ದಾರೆ. 


ಅಲ್ಲದೆ ಈ ವರ್ಷ ಯುರೋ ಬಳಕೆಯ ಹತ್ತೊಂಬತ್ತು ರಾಷ್ಟ್ರಗಳು ತೀವ್ರ ರಿಸೆಷನ್ ಗೆ ಒಳಗಾಗುತ್ತಿವೆ. ಇವುಗಳ ಮೈ ಹಣ್ಣಾಗುವಂತೆ ಯುಕ್ರೇನ್ ಯುದ್ಧ ಇಂಧನ ತೈಲದ ಬೆಲೆಯಿಂದ ಪೆಟ್ಟುಕೊಟ್ಟಿದೆ. ಈ ಜಾಗತಿಕ ಜಗತ್ತಿನಲ್ಲಿ ಭಾರತ ಕೂಡ ಇದಕ್ಕೆ ಹೊರತೇನೂ ಅಲ್ಲ. 


ಡಾಲರ್ ಆಕರ್ಷಕ ಎನ್ನಿಸಿದ್ದರಿಂದಲೇ ಭಾರತದಲ್ಲಿ ಹೂಡಿದ್ದ ಹೂಡಿಕೆಯನ್ನು ವಿದೇಶಿ ಬಂಡವಾಳಗಾರರು ವಾಪಸ್ ಪಡೆಯುತ್ತಿದ್ದಾರೆ. ಇನ್ನು ಮೋದಿ ಆಡಳಿತದ ಆರ್ಥಿಕ ಸುಧಾರಣೆಗಳು ಏನೂ ಫಲ ಕೊಡದೆ ಉಕ್ರೇನ್ ಯುದ್ಧ ಸೃಷ್ಟಿಸಿದ ತೈಲ ಬಿಕ್ಕಟ್ಟಿನ ಜೊತೆಗೆ "ಆಷಾಢದಲ್ಲಿ ಅಧಿಕ ಮಾಸ" ಎಂಬಂತೆ ಈಗಾಗಲೇ ಚಾಲ್ತಿ ಖಾತೆ ಕೊರತೆ, ಕುಸಿಯುತ್ತಿರುವ ಜಿಡಿಪಿ, ವಿದೇಶಿ ಸಾಲದ ಅವಲಂಬನೆಯನ್ನು ಹೆಚ್ಚಿಸಿವೆ. ಭಾರತೀಯ ರಿಸರ್ವ್ ಬ್ಯಾಂಕ್ ಈ ಕುರಿತು ಯಾವ ಕ್ರಮ ಕೈಗೊಳ್ಳುತ್ತದೆಯೋ ಗೊತ್ತಿಲ್ಲ. ಆದರೆ ಭಾರತೀಯ ರಿಯಲ್ ಎಸ್ಟೇಟಿನ ಆಮ್ಲೀಯ ಉಬ್ಬರದಂತೆ ವಿದೇಶಿ ವಿನಿಮಯ ಸಹ ಅದಕ್ಕೆ ತಕ್ಕಂತೆ ಉಬ್ಬರಿಸಿ ಡಾಲರ್ ಒಂದಕ್ಕೆ ಎಂಟುನೂರು ರೂಪಾಯಿಗಳಾಗಿ ಎಲ್ಲಾ ಅನಿವಾಸಿಗಳೂ ತಮ್ಮ ತಮ್ಮ ಮೂಲ ಊರಿನಲ್ಲಿ ಒಂದೊಂದು ೬೦*೪೦ ಮನೆ ಮಾಡಿಕೊಳ್ಳುವಂತಾಗಲು ಮೋದಿ, ರಾಹುಲ್, ದೇವೇಗೌಡ, ಮಮತಾ, ಸ್ಟಾಲಿನ್, ಸಿದ್ದರಾಮಯ್ಯ, ಎಡ-ಬಲ ಚಿಂತಕರು ಸಹಕರಿಸಿ "ವೈವಿಧ್ಯತೆಯಲ್ಲಿ ಏಕತೆ"ಯನ್ನು ಅನಿವಾಸಿಗಳನ್ನೂ ಒಳಗೊಂಡ ಬಾಬಾ ಸಾಹೇಬರ ಸಮಸಮಾಜದ ಕನಸನ್ನು ನನಸಾಗಿಸಲು ಸಹಕರಿಸಲಿ. 


ಏಕೆಂದರೆ ಒಂದಾನೊಂದು ಕಾಲದ ಅನಿವಾಸಿಗಳಾಗಿದ್ದ ಗಾಂಧಿ, ನೆಹರೂ, ಜಿನ್ನಾ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟರೆ, ಅದೇ ಒಂದಾನೊಂದು ಕಾಲದ ಅನಿವಾಸಿಯಾಗಿದ್ದ ರಾಜೀವ್ ಗಾಂಧಿ / ಸ್ಯಾಮ್ ಪಿತ್ರೋಡ ದೂರಸಂಪರ್ಕ ತಂತ್ರಜ್ಞಾನದಲ್ಲಿ ಕ್ರಾಂತಿ ಮಾಡಿದರು. ಆ ದೂರಸಂಪರ್ಕ ತಳಹದಿಯ ಮೇಲೆ ನೀಲೇಕಣಿ, ನಾರಾಯಣಮೂರ್ತಿ ಅಂತಹವರು ಮಾಹಿತಿ ತಂತ್ರಜ್ಞಾನದ ಹೆದ್ದಾರಿ ನಿರ್ಮಿಸಿದರು. ಅದೇ ಒಂದಾನೊಂದು ಕಾಲದ ಅನಿವಾಸಿ ಎಸ್ಸೆಂ ಕೃಷ್ಣ, ಖೇಣಿ ಬೆಂಗಳೂರನ್ನು ಸಿಂಗಾಪುರ ಮಾಡಿ ರಿಯಲ್ ಎಸ್ಟೇಟ್ ಕ್ರಾಂತಿಗೆ ಬುನಾದಿ ಹಾಕಿದರು. ಇಂತಪ್ಪ ಅನಿವಾಸಿಗಳಿಗೆ ಒಂದು "ಭಾಗ್ಯ" ಬೇಡವೇ?!? ಪುಕ್ಕಟೆ ಬೇಡ, ಡಾಲರ್ ಎಂಟುನೂರು ರೂಪಾಯಿಯಾಗಿ ಅನಿವಾಸಿಗಳು ನಿವಾಸ ಕಂಡುಕೊಳ್ಳುವಂತಾಗಲಿ.


#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ

No comments: