Sarcasm

 ಒಂದು ವಿಷಯ ಯಾ ವ್ಯಕ್ತಿಯ ಮೂರ್ಖತನವನ್ನು ವಿಡಂಬನಾತ್ಮಕವಾಗಿ ಅಣಕವಾಡಿ ಅಥವಾ ಅವಹೇಳಿಸುವುದನ್ನು "ವ್ಯಂಗೋಕ್ತಿ" ಎನ್ನುತ್ತಾರೆ. ಇದು ಸಾಹಿತ್ಯದಲ್ಲಿ ಒಂದು ಪ್ರಮುಖ ಪ್ರಕಾರ. ಇಂಗ್ಲಿಷ್ ಸಾಹಿತ್ಯ ಅದರಲ್ಲೂ ಬ್ರಿಟಿಷ್ ಇಂಗ್ಲಿಷ್ ಸಾಹಿತ್ಯದಲ್ಲಿ ಈ ಪ್ರಕಾರವು ಹೆಚ್ಚು ಪ್ರಚಲಿತವಾಗಿದೆ. ಇದು ಕುಚೋದ್ಯದ ಹಾಸ್ಯ ಎನಿಸಿದರೂ ಈ ಪ್ರಕಾರವು ಸಂದೇಶಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಓದುಗರಿಗೆ ತಲುಪಿಸುತ್ತದೆ. ಇದು ಸಾಹಿತ್ಯದ ಒಂದು ತಂತ್ರ ಮಾಧ್ಯಮವಾಗಿ ಬರಹಗಾರನ ಕೋಪ, ಹತಾಶೆ, ಜುಗುಪ್ಸೆ, ಕುಚೋದ್ಯಗಳು ನವಿರು ಅಥವಾ ಗಾಢ ಹಾಸ್ಯದ ಲೇಪನದೊಂದಿಗೆ ಪ್ರಚಲಿತ ಸಾಮಾಜಿಕ, ರಾಜಕೀಯ ಅಥವಾ ಇನ್ಯಾವುದೇ ವಿದ್ಯಮಾನಗಳ ಕುರಿತಾದ ಕಟು ವಿಮರ್ಶೆಯನ್ನು ಒಳಗೊಂಡಿರುತ್ತದೆ. ಇಂಗ್ಲಿಷಿನಲ್ಲಿ ವ್ಯಂಗೋಕ್ತಿಯನ್ನು sarcasm ಎನ್ನುತ್ತಾರೆ. ಲ್ಯಾಟಿನ್ ಪದ sarcasmos ಮತ್ತು ಗ್ರೀಕ್ ಪದ sarkasmos ಎರಡರಿಂದಲೂ ಬಂದಿರುವ ಈ ಎರಡೂ ಭಾಷೆಗಳಲ್ಲಿ ಈ ಪದವು "ಚರ್ಮ ಸುಲಿಯುವುದು", "ರೋಷದಿಂದ ತುಟಿ ಕಚ್ಚುವುದು", "ಕುಹಕ ನಗೆ" ಎಂಬ ಅರ್ಥ ಹೊಂದಿದೆ. ಕ್ರಿ.ಶ. ೧೫೫೦ರಿಂದಲೂ ಈ ಪ್ರಕಾರವು ಪಾಶ್ಚಿಮಾತ್ಯ ಸಾಹಿತ್ಯದಲ್ಲಿ ಬಳಕೆಯಲ್ಲಿದೆ.


ನನ್ನ ಫೇಸ್ಬುಕ್ ಪೋಸ್ಟುಗಳು ಸಹ ಈ ರೀತಿಯ ಭಾರತದ ಸಾಮಾಜಿಕ, ರಾಜಕೀಯ ಮತ್ತಿತರೆ ಪ್ರಚಲಿತ ವಿದ್ಯಮಾನಗಳ ಕುರಿತಾದ ವಿಡಂಬನಾತ್ಮಕ ಬರಹಗಳು. ಸಾಕಷ್ಟು ಭಾರತೀಯ ಶ್ರೀಸಾಮಾನ್ಯರು ನನ್ನ ಬರಹಗಳನ್ನು ಇದೇ ಅರ್ಥದಲ್ಲಿ ಸ್ವೀಕರಿಸಿದರೂ ಅನೇಕ ಸಾಹಿತಿಗಳು, ಪತ್ರಕರ್ತರು, ಚಿಂತಕರು, ಸಾಕ್ಷಿಪ್ರಜ್ಞೆಗಳು, ಕನ್ನಡ ಸಂಶೋಧನ ಪಿಹೆಚ್ದಿ ಮತ್ತು ಸ್ನಾತಕೋತ್ತರ ಪದವೀಧರರು ಇವುಗಳನ್ನು ಗ್ರಹಿಸುವಲ್ಲಿ ಸೋತು ಅಥವಾ ಸೋತಂತೆ ನಟಿಸಿ ನನ್ನನ್ನು ಬಲವೆಂದು, ಎಡವೆಂದು, ನಡುವೆಂದು, ಮೋಜುಗಾರನೆಂದು, ವಿಲಾಸಿಯೆಂದು, ವಿದೇಶಿಯೆಂದು ಇತ್ಯಾದಿಯಾಗಿ ಬ್ರ್ಯಾಂಡ್ ಮಾಡುತ್ತಿದ್ದಾರೆ. ನಾನು ಈ ಮೇಲಿನ ಯಾವುದೋ ಕೇವಲ ಒಂದು ಮಾತ್ರವಲ್ಲದೆ ಎಲ್ಲವೂ ಆಗಿರುವ ಓರ್ವ ಶ್ರೀಸಾಮಾನ್ಯ ಮಾತ್ರ ಆಗಿರುತ್ತೇನೆ. ದಯಮಾಡಿ ನನ್ನನ್ನು ಹಳೇ ಮೈಸೂರು ಕಡೆ "ಪುಕ್ಸಟ್ಟೆ ತು... ಎಂದರೆ ಮೈತುಂಬಾ ತು..." ಎನ್ನುವಂತೆ ಮೈತುಂಬಾ ಇರುವವನೆಂದು ಗ್ರಹಿಸದೆ 'ಇರುವಲ್ಲಿ ಎಲ್ಲರಂತೆ ಒಂದೇ ಇರುವವ' ಎಂದು ಪರಿಗಣಿಸಬೇಕಾಗಿ ವಿನಂತಿಸುವೆ. ನಾನು ವಿಡಂಬನೆಯನ್ನು ಕೇವಲ ಜಾಗೃತಿ ಮೂಡಿಸುವ ಒಂದು ತಂತ್ರವಾಗಿ ನೋಡುತ್ತೇನೆಯೇ ಹೊರತು ಇನ್ನೇನಾಗಿಯೂ ಅಲ್ಲ. 


ಬ್ರಿಟಿಷ್ ಹಾಸ್ಯಗಾರ ರಿಕಿ ಜೆರ್ವೈಸ್ ಹೇಳುವಂತೆ ನಾನು ಸಹ ಬ್ರಿಟಿಷರು ಈ ಸಾಹಿತ್ಯ ಪ್ರಕಾರವನ್ನು ಕತ್ತಿ ಮತ್ತು ಗುರಾಣಿಯಾಗಿ ಸದಾ ಬಳಸುವಂತೆ ಬಳಸುತ್ತೇನೆ.  ನಮ್ಮ  ಚಿಂತಕರು ಹೇಗೆ ಸಂವಿಧಾನ, ಬುದ್ಧ, ಬಸವ, ಅಂಬೇಡ್ಕರ್, ಕುವೆಂಪು ಹಿಂದುತ್ವ, ಫ್ಯಾಸಿಸಂ, ಜಾತ್ಯಾತೀತ, ಅಸ್ಮಿತೆ, ಸೆಕ್ಯುಲರ್ ಇತ್ಯಾದಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪದಕೋಶವನ್ನು ಕತ್ತಿ, ಗುರಾಣಿಯಾಗಿ ಬಳಸುವರೋ ಹಾಗೆ! 


#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ

No comments: