#ಅಮೆರಿಕದ_ಶಿಕಾಗೊ ನಗರದಲ್ಲಿ 20 ವರ್ಷಗಳಿಂದ ವಾಸವಾಗಿರುವ ಮೇನೇಜ್ಮೆಂಟ್ ಕಂಪ್ಯೂಟರ್ ತಜ್ಞ, ಸಾಹಿತಿ ಶ್ರೀ ರವಿ ಹಂಜ್ ಅವರ ಮನೆಗೆ ಇತ್ತೀಚೆಗೆ ನಾನು ನನ್ನ ಹೆಂಡತಿ ಹೋಗಿಬಂದೆವು.
30.9.2018 ರಂದು ಬೆಂಗಳೂರು ಗಾಂಧಿ ಭವನದಲ್ಲಿ ಸಮಾಜಮುಖಿ ಪ್ರಕಾಶನದ ರವಿ ಹಂಜ್ ಅವರ ಮೊದಲ ಕೃತಿ "ಹುಯೆನ್ ತ್ಸಾಂಗನ ಮಹಾಪಯಣ" ಬಿಡುಗಡೆ ಸಮಾರಂಭದಲ್ಲಿ ಮೂರ್ನಾಲ್ಕು ನಿಮಿಷದ ಮೊದಲ ಭೇಟಿ. ನಂತರ ಫೇಸ್‌ಬುಕ್ ಬರಹಗಳ ಮೂಲಕ ಸ್ನೇಹ ಮುಂದುವರಿಕೆ.
ಎರಡನೇ ಭೇಟಿ: ಶಿಕಾಗೊಗೆ ನಾನು ಬರುವ ವಿಚಾರ ಅವರಿಗೆ ವೈಯಕ್ತಿಕವಾಗಿ ತಿಳಿಸಿರಲಿಲ್ಲ. ನಾನು ಅಮೆರಿಕಕ್ಕೆ ಬಂದಿರುವ ವಿಚಾರ ಫೇಸ್‌ಬುಕ್ ನಿಂದ ತಿಳಿದು ಅವರು ಮೆಸೇಜ್ ಮಾಡಿದರು. ಮಗಳು ಅಳಿಯ ಮೊಮ್ಮಕ್ಕಳ ಜೊತೆಗೆ ಮನೆಗೆ ಬರಲು ನಮ್ಮನ್ನು ಆಮಂತ್ರಿಸಿದರು. ಒಂದೇ ಕುಟುಂಬ ಇದ್ದಂತೆ, ಯಾವುದೇ ಸಂಕೋಚವಿಲ್ಲದೆ ಬರಬೇಕೆಂದರು. ಕಾರಣಾಂತರದಿಂದ ತಡವಾಯಿತು. ಮತ್ತೆ ಅವರದೇ ಮೆಸೇಜ್ "ನಮ್ಮ ಕಡೆ ಯಾವಾಗ ಪ್ರಯಾಣ?"
ಮನೆಯಲ್ಲಿ ಒಂದೂವರೆ ತಿಂಗಳ ನಮ್ಮ ಮೊಮ್ಮಗಳು ಇರುವುದರಿಂದ ನಮ್ಮ ಮಗಳು ಅಳಿಯ ಬರಲಿಲ್ಲ. ನಾನು ನನ್ನ ಪತ್ನಿ ಕ್ಯಾಬ್_ನಲ್ಲಿ ರವಿಯವರ ಮನೆಗೆ ಹೋದೆವು.
ರವಿ ಮತ್ತು ಅವರ ಪತ್ನಿ ಬಹಳ ಆತ್ಮೀಯತೆಯಿಂದ ನಮ್ಮನ್ನು ಬರಮಾಡಿಕೊಂಡರು. ಹಂಜ್ ದಂಪತಿಗೆ ಒಬ್ಬ ಮಗ. ವಿದ್ಯಾಭ್ಯಾಸ ಮುಗಿಸಿ ಈಗ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾನೆ.
ರವಿಯವರು ಮೂಲತಃ ದಾವಣಗೆರೆಯವರು. ಸುಮಾರು 25 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾಗ ರವಿ ಹಂಜ್ ದಂಪತಿಗೆ ಅಮೆರಿಕದ ಐಟಿ ಕಂಪನಿಯೊಂದರಲ್ಲಿ ಕೆಲಸ ಸಿಕ್ಕ ರೀತಿ, ಬೆಂಗಳೂರಿನಿಂದ ಅಮೆರಿಕಕ್ಕೆ ಪ್ರಯಾಣ ಮಾಡಿದ ಸಂದರ್ಭ ಬಹಳ ವಿಶೇಷವಾಗಿದೆ ಮತ್ತು ಸ್ವಾರಸ್ಯಕರವಾಗಿದೆ.
'ತೀರ್ಥ ಪ್ರಸಾದ'ದ ಜೊತೆಗೆ ಅಮೆರಿಕದ ಶಿಕ್ಷಣ ಪದ್ಧತಿ, ಆರೋಗ್ಯ ನೀತಿ, ಕೃಷಿರಂಗ, ರಾಜಕಾರಣ - ಚುನಾವಣೆಗಳು, ಆಡಳಿತ ವ್ಯವಸ್ಥೆ, ನ್ಯಾಯಾಂಗ, ತೆರಿಗೆ, ಗನ್ ವಯಲೆನ್ಸ್, ಇತ್ಯಾದಿ ಬಗ್ಗೆ ನನ್ನ ತಿಳುವಳಿಕೆ ಹೆಚ್ಚಿಸಿಕೊಳ್ಳುವ ದೃಷ್ಟಿಯಿಂದ ಮಾತುಕತೆ ನಡೆಯಿತು. ಚರ್ಚೆಯಲ್ಲಿ ದಾವಣಗೆರೆಯ ಹಳೆಯ ನೆನಪುಗಳು ಸಹಾ ಬಂದವು (ನಾನು 6 ವರ್ಷ- 1974-76 & 2006-10 ರಲ್ಲಿ
ವಿದ್ಯಾಭ್ಯಾಸ ಮತ್ತು ಕಾರ್ಯನಿಮಿತ್ತ ದಾವಣಗೆರೆಯಲ್ಲಿದ್ದೆ- ಆಗ ರವಿಯವರ ಪರಿಚಯವಿರಲಿಲ್ಲ)
ನಂತರ ಊಟೋಪಚಾರ! ರವಿಯವರ ಪತ್ನಿ ಶುದ್ಧ ಸಸ್ಯಾಹಾರಿ.
ರವಿಯವರೇ ತಯಾರಿಸಿದ ಚಿಕನ್ ಮಸಾಲ ಬಹಳ ರುಚಿಯಾಗಿತ್ತು! ಅಮೆರಿಕದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಕೊಡಗಿನ ಅವರ ಸ್ನೇಹಿತರ ಮಗಳು ಬಂದಿದ್ದರು. ಅವರು ಕೊಡಗಿನ ಒಂದೆರಡು ರುಚಿಕಟ್ಟಾದ ಭಕ್ಷ್ಯಗಳನ್ನು ಉಣಬಡಿಸಿದರು. ಹಾಗೂ ಕೊಡಗಿನ ಜೀವನಶೈಲಿಯ ಕೆಲವು ವಿವರಗಳನ್ನು ಸ್ವಾರಸ್ಯಕರವಾಗಿ ಹಂಚಿಕೊಂಡರು.
ಹಾಗೆಯೇ ರವಿಯವರೊಂದಿಗೆ ಮಧ್ಯಾಹ್ನ ಹಸಿರು ಗಿಡಮರಗಳ ಮಧ್ಯೆ ಒಂದಷ್ಟು ದೂರ ವಿಹಾರ. ಹತ್ತಿರದ ಪ್ರಾಥಮಿಕ ಶಾಲೆಯ ದರ್ಶನ ಮಾಡಿಸಿದರು.
ರವಿ ಹಂಜ್ ಅವರು ಇದುವರೆಗೆ #ಐದು_ಕೃತಿಗಳನ್ನು ಕನ್ನಡ ಸಾಹಿತ್ಯಕ್ಕೆ ನೀಡಿದ್ದಾರೆ.
1.ಹುಯೇನ್ ತ್ಸಾಂಗನ ಮಹಾಪಯಣ 2.ಅಗಣಿತ ಅಲೆಮಾರಿ
3.ರ ಠ ಈ ಕ 4.ಭಾರತ ಮರುಶೋಧ 5.ಬಸವರಾಜಕಾರಣ
ಪ್ರೀತಿ ವಿಶ್ವಾಸದಿಂದ ಮೂರು ಪುಸ್ತಕಗಳನ್ನು ನನಗೆ ನೀಡಿದರು.
ಫೇಸ್‌ಬುಕ್ ನಲ್ಲಿ ರವಿಯವರ ಹೆಚ್ಚಿನ ಬರಹಗಳು ಭಾರತದ ಪ್ರಸಕ್ತ ವಿದ್ಯಮಾನಗಳ ಆಗುಹೋಗುಗಳ ಬಗ್ಗೆ ಅವರ ಅನಿಸಿಕೆಗಳು, ವಿಶ್ಲೇಷಣೆಗಳು. ಕಾಮೆಂಟ್_ಗಳಿಗೆ ಅವರ ಕ್ಷಿಪ್ರ ಪ್ರತಿಕ್ರಿಯೆಗಳು ನೇರ ನಿಷ್ಠುರ ವ್ಯಂಗ್ಯ ತುಂಟತನಗಳ ಸಮ್ಮಿಶ್ರಣ!
ಕೆಲವೊಮ್ಮೆ ಎಡದವರನ್ನು ಕೆಲವೊಮ್ಮೆ ಬಲದವರನ್ನು ಕೆಲವೊಮ್ಮೆ ಎಡಬಲ ಇಬ್ಬರನ್ನೂ ಸೇರಿಸಿ ಟೀಕೆ ಟಿಪ್ಪಣಿ ಮಾಡುತ್ತಾರೆ. ಅವರ ಫೇಸ್‌ಬುಕ್ ಟ್ಯಾಗ್ ಲೈನ್ ವಿಶೇಷವಾಗಿದೆ. ದಾವಣಗೆರೆಯ ವಿಶಿಷ್ಟ ಜವಾರಿ ಭಾಷೆಯನ್ನು ನಿಸ್ಸಂಕೋಚವಾಗಿ ಸರಾಗವಾಗಿ ಉಪಯೋಗಿಸುತ್ತಾರೆ.
ಫೇಸ್‌ಬುಕ್ ನಲ್ಲಿನ ಅವರ ಕೆಲವು ಬರಹ ಪ್ರತಿಕ್ರಿಯೆಗಳ ಧಾಟಿ ಬಲು ಬಿರುಸು! ಅವರು ತುಂಬಾ ಜೋರು ವ್ಯಕ್ತಿ ಎಂಬ ಭಾವನೆ ಬರುತ್ತದೆ. ಆದರೆ ಅವರನ್ನು ಭೇಟಿಯಾದ ನಂತರ ನನ್ನ ಅಭಿಪ್ರಾಯ ಬದಲಾಯಿತು. ರವಿಯವರು ಸ್ನೇಹಮಯಿ. ಮಾತು ನಿರರ್ಗಳ, ಆದರೆ ಸೌಮ್ಯ! ಎಷ್ಟೋ ವರ್ಷಗಳ ಆತ್ಮೀಯ ಸ್ನೇಹಿತರ ಒಡನಾಟದಂತಿತ್ತು ಅವರೊಂದಿಗಿನ ಚೇತೋಹಾರಿ ಮಾತುಕತೆ.
ಇನ್ನೂ ಮಾತುಕತೆ ಮುಂದುವರೆಸುವ ಇಚ್ಚೆಯಿತ್ತು. ಆದರೆ ಸಮಯವಿರಲಿಲ್ಲ. ರವಿ ಹಂಜ್ ಅವರು ತಮ್ಮ ಕಾರಿನಲ್ಲಿ ನಮ್ಮನ್ನು ಮನೆಯವರಿಗೆ ಬಂದು ಬಿಟ್ಟು ಹೋದರು. ಇದು ಅವರ ದೊಡ್ಡತನ. ರವಿ ಹಂಜ್ ದಂಪತಿಗಳ ಮನೆಗೆ ಭೇಟಿ, ಅವರೊಂದಿಗಿನ ಮಾತುಕತೆ, ಅವರ ಸೌಜನ್ಯ ಅತಿಥಿ ಸತ್ಕಾರ ಸದಾ ನಮ್ಮ ನೆನಪಿನಲ್ಲುಳಿಯುವ ಸಂಗತಿಗಳು. ಅವರಿಗೆ ಅನಂತ ಧನ್ಯವಾದಗಳು.
No comments:
Post a Comment