ಆರ್.ಎಸ್.ಎಸ್ ಆಳ ಮತ್ತು ಅಗಲ

 ನಾನು ಜಾಗತಿಕವಾಗಿ ಚಾಲನೆಯಲ್ಲಿರುವ ಉದಾರವಾದ ಚಿಂತನೆಯ ಕಟ್ಟಾ ಅಭಿಮಾನಿ. ಇದನ್ನು ಜಾಗತಿಕವಾಗಿ ಎಡ-ಚಿಂತನೆ ಎನ್ನುತ್ತಾರಾದರೂ ಅದು ಭಾರತೇತರದ ಎಡ-ಚಿಂತನೆ ಎಂದೇ ಸ್ಪಷ್ಟ ಪಡಿಸಬೇಕು! ಏಕೆಂದರೆ ಭಾರತದ ಎಡ-ಚಿಂತನೆ ಸದ್ಯಕ್ಕೆ ಅಲ್ಲಿನ ಬಲದಷ್ಟೇ ಉಗ್ರ, ನಿಕೃಷ್ಟ ಮತ್ತು ಯಕಶ್ಚಿತ! ಇಂತಹ ಉಗ್ರ ಮತ್ತು ನಿಕೃಷ್ಟ ಎಡ ಪಂಥವನ್ನು ಜಗತ್ತಿನ ಯಾವುದೇ ಉದಾರವಾದಿ ಒಪ್ಪುವುದಿಲ್ಲ.

ಜಗತ್ತಿನ ಎಲ್ಲಾ ಉದಾರವಾದಿಗಳಂತೆ ನಾನು ಟ್ರಂಪ್, ಪುಟಿನ್, ಮೋದಿಯನ್ನು ವಸ್ತುನಿಷ್ಠವಾಗಿ ಖಂಡಿಸಿದ್ದೇನೆ. ಇತಿಹಾಸದ ಮಾವೋ, ಸ್ಟಾಲಿನ್, ಲೆನಿನ್ ಅವರ ದುಷ್ಕೃತ್ಯಗಳನ್ನು ಅಂಕಿಅಂಶಗಳ ಸಮೇತ ಧಿಕ್ಕರಿಸಿದ್ದೇನೆ. ಆದರೆ ಸುಖಾಸುಮ್ಮನೆ ಅಧಿಕಾರದಲ್ಲಿಲ್ಲದವರನ್ನು, ಅಶಕ್ತರನ್ನು ಉದಾಹರಣೆಗೆ ರಾಹುಲ್, ಸೋನಿಯಾರನ್ನು, ಮುಗ್ಧ ಭಕ್ತರನ್ನು ಟ್ರೋಲ್ ಮಾಡಿಲ್ಲ. ಸಶಕ್ತ, ಬುದ್ಧಿಜೀವಿ ಎನಿಸಿಕೊಂಡವರನ್ನು ಮತ್ತು ಆ ರೀತಿ ಆವಾಹಿಸಿಕೊಂಡವರನ್ನು ಉದಾಹರಣೆಗೆ ಸಿದ್ಧರಾಮಯ್ಯ ಮತ್ತವರ ಬುದ್ಧಿಜೀವಿ ಸಾಹಿತಿಗಳ ದ್ವಂದ್ವಗಳನ್ನು ತಿವಿ ತಿವಿದು, ತಿವಿ ತಿವಿದು, ತಿವಿ ತಿವಿದು ತೋರಿಸಿದ್ದೇನೆ. ಟ್ರಂಪ್ನನ್ನು ಪುಟಗಟ್ಟಲೆ ತೆಗಳುವ ಭಾರತದ ಯಾವ ಬುದ್ಧಿಜೀವಿಯೂ ಉಕ್ರೇನ್ ಮೇಲೆ ಯುದ್ಧ ಮಾಡುತ್ತಿರುವ ಪುಟಿನ್ ನನ್ನು ಖಂಡಿಸಿಲ್ಲ. ಕಲ್ಲಂಗಡಿಗೆ ಅಭಿಯಾನ ಮಾಡಿದ ಪ್ರಚ್ಛನ್ನ ಎಡ ಚಿಂತಕರು ಉರುಳಿದ ತಲೆಗಳಿಗೆ ಯಾವ ಅಭಿಯಾನವನ್ನೂ ಮಾಡಿಲ್ಲ.
ನನ್ನ ಕೆಲವು ಫೇಸ್ಬುಕ್ ಬರಹಗಳಲ್ಲಿ ಸಾಮಾನು, ಸ್ಖಲನ, ಮಿಲನ ಮಹೋತ್ಸವ, ಶಾta ಇತ್ಯಾದಿ ಪದಗಳನ್ನು ಬೇಕೆಂದೇ ಬಳಸಿದ್ದೇನೆ. ಏಕೆಂದರೆ ಈ ಸಶಕ್ತ ಬುದ್ಧಿಜೀವಿಗಳ ದ್ವಂದ್ವಗಳನ್ನು ಜಾಣನಿಗೆ ಮಾತಿನ ಪೆಟ್ಟು ಎಂಬಂತೆ ಹಿಂದೆ ಕೊಟ್ಟು ಇತ್ತೀಚೆಗೆ ಈ ಪದಗಳ ದೊಣ್ಣೆ ಪೆಟ್ಟು ಕೊಡುತ್ತಿದ್ದೇನೆ. ಅಂದರೆ ಇದರ ಹಿಂದಿನ ಉದ್ದೇಶ ಓರ್ವ ಅನಿವಾಸಿ ಸಾಗರೋತ್ತರ ನಾಗರಿಕನ ಕಳಕಳಿ ಕಾಣಲಿ ಎಂದಷ್ಟೇ. ಮೇಲಾಗಿ ಇಂತಹ ಪದಗಳು ಇರುವ ವಿಷಯ ಬಲು ಬೇಗ ತಲೆಗೆ ಹೋಗುವ ಅಭ್ಯಾಸ ಕಾಮಸೂತ್ರದ ಭಾರತೀಯರಲ್ಲಿ ಅವ್ಯಾಹತವಾಗಿ ಹರಿಯುವುದು ಸಹ ಪೂರಕ ಅಂಶವೇ ಆಗಿದೆ.
ಸದ್ಯಕ್ಕೆ ಟ್ರೋಲ್ ಭಾರತದಲ್ಲಿ ಸಿಲುಕಿ ಸ್ಟಾಕ್ಹೋಮ್ ಸಿಂಡ್ರೋಮಿಗೆ ಈ ಎಲ್ಲಾ ಎಡ ಬಲ ಚಿಂತಕರು ಒಳಗಾಗಿರುವ ಕಾರಣ ನನ್ನ ಟ್ಯಾಗ್ ಲೈನ್ ಸುಳ್ಳಾಗುವ ಲಕ್ಷಣ ಮುಂದಿನ ಶತಮಾನದಲ್ಲೂ ಕಾಣುತ್ತಿಲ್ಲ. ಏಕೆಂದರೆ ಈಗ ನಮ್ಮ ನಾಡಿನ ಸಾಕ್ಷಿಪ್ರಜ್ಞೆ ಎನ್ನಬಹುದಾದ ಅತ್ಯಂತ ಗೌರವಾನ್ವಿತ ಸಾಹಿತಿಗಳು ಯಕಶ್ಚಿತ್ ಎನ್ನುವಂತಹ ರಾಜಕಾರಣಿಯೋರ್ವನ ಒಂದು ಭಾಷಣದ ಪ್ರತಿಯಂತಿರುವ "ಪ್ರಕಟಯೋಗ್ಯ" ಎನ್ನುವ ಪದದ ಅಸ್ತಿತ್ವವನ್ನೇ ಧಿಕ್ಕರಿಸುವಂತಹ "ಆರ್.ಎಸ್.ಎಸ್ ಆಳ ಮತ್ತು ಅಗಲ" ಕೃತಿಯನ್ನು ತಂದಿದ್ದಾರೆ. ಇದು ಇವರೇ ಬರೆದಿದ್ದೆ ಎಂದು ಜಿಜ್ಞಾಸೆಗೊಳಗಾಗುವಷ್ಟು ಮುಜುಗರಕ್ಕೆ ಇಂದು ನಾನೊಳಗಾಗಿರುವೆ. ಲಂಗೋಟಿಯಲ್ಲಿರುವ ತಮ್ಮ ಬಾಲಬಡುಕರು ಬರೆದಿದ್ದಕ್ಕೆ ದೊಡ್ಡ ಚಡ್ಡಿ ತೊಡಿಸಿ ತಮ್ಮ ಹೆಸರು ಹಾಕಿಸಿ ಅಚ್ಚೊತ್ತಿಸಿಬಿಟ್ಟರೇನೋ ಎಂಬ ಅನುಮಾನ ಮೂಡುವಷ್ಟು ಕೃತಿ ಗಂಭೀರತೆ ಇಲ್ಲದ ಗಮನಾರ್ಹತೆ ಗಳಿಸಿದೆ ಎಂದಷ್ಟೇ ಹೇಳಬಲ್ಲೆ.
ಆರ್.ಎಸ್.ಎಸ್ ಪ್ರಾಣ ಎಲ್ಲೆಲ್ಲಿದೆ ಎಂಬ ಅಧ್ಯಾಯದಲ್ಲಿ ಕೊಟ್ಟಿರುವ ಗೋಳ್ವಾಲ್ಕರ್, ಸಾವರ್ಕರ್ ಅವರ ಮನುಸ್ಮೃತಿ, ಧ್ವಜ, ಒಕ್ಕೂಟ ಕಲ್ಪನೆಯ ಬಗೆಗಿನ ಟಿಪ್ಪಣಿಗಳನ್ನು ಓದಿದಾಗ ಮೇಲ್ನೋಟಕ್ಕೆ ಗೋಳ್ವಾಲ್ಕರ್, ಸಾವರ್ಕರ್ ಚಿಂತನೆ ಮಾನಸಿಕ ಅಸ್ವಸ್ಥರ rubbish ಚಿಂತನೆ ಎನಿಸುತ್ತದೆ. ಆದರೆ ಇವರಿಬ್ಬರ ವೈಯಕ್ತಿಕ ಕೃತಿಗಳ ಸಂಬಂಜ ಆರ್.ಎಸ್.ಎಸ್ ಒಟ್ಟಿಗೆ ಹೇಗೆ ಮತ್ತು ಅದರ ಅಜೆಂಡಾ ಹೇಗೆಂಬ ಒಂದು ಲಿಂಕ್ ಇದ್ದಿದ್ದರೆ ಚೆನ್ನಾಗಿತ್ತು. ಗೋಲ್ವಾಲ್ಕರ್ ಆರ್.ಎಸ್.ಎಸ್ ಸಂಚಾಲಕರಾಗಿದ್ದ ಮಾತ್ರಕ್ಕೆ ಅವರ ಕೃತಿಗಳು ಆರ್.ಎಸ್.ಎಸ್ ಎಂದು ಹೇಳಲಾಗದು. ಹೇಗೆ ಈ ಆಳ ಮತ್ತು ಅಗಲ ಕೃತಿಯು ಮಾನವ ಬಂಧುತ್ವ ವೇದಿಕೆಯಿಂದ ಪ್ರಕಟವಾಗಿದೆ ಎಂದಾಕ್ಷಣ ಅದರ ಸ್ಥಾಪಕರ ಮತ್ತವರ ಸೋದರರ ಎಲ್ಲಾ ರಾಜಕೀಯ ಪಕ್ಷ, ಸು(ಕು)ಕೃತ್ಯಗಳನ್ನು ಲೇಖಕರು ಬೆಂಬಲಿಸುತ್ತಾರೆ ಎನ್ನಲಾಗುವುದಿಲ್ಲವೋ ಹಾಗೆಯೇ ಇಲ್ಲಿ ಸಂಬಂಜದ ಕೊರತೆ ಇದೆ.
ಕೊಟ್ಟಿರುವ ಒಂದೇ ಒಂದು ಲಿಂಕ್ ಎನ್ನಬಹುದಾದರೆ ಅದು ಆರ್. ಎಸ್.ಎಸ್ ಮುಖವಾಣಿ ಎನ್ನಲಾದ ಆರ್ಗನೈಜರ್ ಟಿಪ್ಪಣಿ. ಆದರೆ ಇದು ಅಂಬೇಡ್ಕರ್ ಅವರ ಸಂವಿಧಾನದ ಕುರಿತಾದ ಟೀಕೆಯಾಗಿದೆ. ಅದರಲ್ಲಿ 'ಮನುಸ್ಮೃತಿಯ ಕಾನೂನುಗಳು' ಎಂಬ ಅಂಶವನ್ನು ಹೊರತುಪಡಿಸಿದರೆ ಸಾಕಷ್ಟು ಅಂಶಗಳು ತಾರ್ಕಿಕವಾಗಿ ಅಂದಿನ ವಾಸ್ತವಾಂಶಕ್ಕೆ ಸರಿಯಾಗಿಯೇ ಇರುವುದಲ್ಲದೆ ಸತ್ಯಾಂಶ ಹೊಂದಿವೆ. ವರ್ತಮಾನದ ಬಿಜೆಪಿ ಸರ್ಕಾರದ ಬೆದರು ಬೊಂಬೆ ಪಾಕಿಸ್ತಾನ, ೧೫ ಲಕ್ಷ, ಅಂಬಾನಿ, ಆರ್ಯನ್ ಶ್ರೇಷ್ಠತೆ, ಪುಸ್ತಕ ಪರಿಷ್ಕರಣೆ, ಜಿಎಸ್ಟಿ, ಹಿಜಾಬ್, ಹಲಾಲ್, ಅಜಾನ್, ಮತಾಂತರ ನಿಷೇಧ ಕಾಯ್ದೆ...ಹೀಗೆ ಆಳ ಮತ್ತು ಅಗಲ ವಿಸ್ತರಿಸಿದೆ.
ಈ ಕೃತಿಯಲ್ಲಿ ಉಲ್ಲೇಖಿಸಿರುವ CMIE ದತ್ತಾಂಶಗಳು ೨೦೧೭ ರಿಂದ ೨೦೨೨ ರ ನಡುವೆ ಸುಮಾರು ಎರಡು ಕೋಟಿಗೂ ಹೆಚ್ಚು ಮಹಿಳೆಯರು ಕಾರ್ಮಿಕ ಪಡೆಯಿಂದ ಕಣ್ಮರೆಯಾಗಿದ್ದಾರೆ ಎನ್ನುವುದನ್ನು ಆರ್.ಎಸ್.ಎಸ್ ಹಿಡನ್ ಅಜೆಂಡಾ "ಮಹಿಳೆಯರು ಮನೆಯಲ್ಲಿರಬೇಕು" ಎಂಬ ಕಾರ್ಯತಂತ್ರದ ಭಾಗವೋ ಎಂದು ಸಂಬಂಜದ ಅನುಮಾನವನ್ನು ಲೇಖಕರು ವ್ಯಕ್ತಪಡಿಸಿದ್ದಾರೆ.
ನಿಜ ಸ್ಥಿತಿ ಏನೆಂದರೆ, Mckinsey ವಿಶ್ಲೇಷಣಾ ಅಧ್ಯಯನದ ಪ್ರಕಾರ ಭಾರತ vs ಅಮೆರಿಕಾ ಅಂಕಿ ಅಂಶಗಳು ಹೀಗಿವೆ:
ಕೊರೋನಾ ಪೂರ್ವದಲ್ಲಿ ಅಮೆರಿಕಾದ ಒಟ್ಟು ಉದ್ಯೋಗಗಳಲ್ಲಿ ಶೇಕಡಾ 46 ಪ್ರತಿಶತ ಮಹಿಳೆಯರಿದ್ದರು. ಕೊರೋನಾದಿಂದಾದ ಒಟ್ಟು ಉದ್ಯೋಗ ನಷ್ಟದಲ್ಲಿ ಶೇಕಡಾ 43 ಪ್ರತಿಶತ ಮಹಿಳೆಯರೆಂದು ಸಮೀಕ್ಷೆಗಳು ತೋರಿದರೂ ಕಾರ್ಮಿಕ ಇಲಾಖೆಯ ಅಂಕಿ-ಅಂಶಗಳು ಅದು ಶೇಕಡಾ 54 ಪ್ರತಿಶತ ನಷ್ಟ ಎನ್ನುತ್ತವೆ.
ಅದೇ ಕೊರೋನಾ ಪೂರ್ವ ಭಾರತದ ಒಟ್ಟು ಉದ್ಯೋಗಗಳ ಶೇಕಡಾ 20 ಪ್ರತಿಶತ ಮಹಿಳೆಯರಿದ್ದರು. ಕೊರೋನಾದಿಂದಾದ ಉದ್ಯೋಗ ನಷ್ಟದಲ್ಲಿ ಮಹಿಳೆಯರ ಅಂಶ ಶೇಕಡಾ 17 ಪ್ರತಿಶತ ಎಂದು ಸಮೀಕ್ಷೆಗಳು ತೋರಿದರೂ ಕೆಲವು ಸರ್ವೆಗಳು ಅದು ಶೇಕಡಾ 23 ಪ್ರತಿಶತ ಎನ್ನುತ್ತವೆ. ಈ ಉದ್ಯೋಗ ನಷ್ಟಕ್ಕೆ ಲಿಂಗ ತಾರತಮ್ಯದ ಕೊಡುಗೆ 1:4 ಅನುಪಾತ! ಅಂದರೆ ಪ್ರತಿ ನಾಲ್ಕು ಮಹಿಳೆಯರ ಉದ್ಯೋಗ ನಷ್ಟಕ್ಕೆ ಒಬ್ಬ ಪುರುಷ ಉದ್ಯೋಗ ಕಳೆದುಕೊಂಡಿದ್ದಾನೆ. ಅಂದರೆ ಮಹಿಳೆ ಅಶಕ್ತಳು ಎಂಬ ತಾರತಮ್ಯದ ಪೂರ್ವಾಗ್ರಹವೊಂದೇ 1:4 ಅನುಪಾತದ ಉದ್ಯೋಗ ನಷ್ಟಕ್ಕೆ ನೇರ ಕಾರಣವಾಗಿದೆ ಎಂದರೆ, ಲಿಂಗ ತಾರತಮ್ಯ ಎಷ್ಟು ಬಲವಾಗಿ ಬೇರೂರಿದೆ ಎಂದು ಗಮನಿಸಿ. ಈ ಬಗ್ಗೆ ಹೆಚ್ಚಿನ ವಿವರಗಳು ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ವಿಭಾಗಕ್ಕೆ ನಾನು ಕೊಟ್ಟ ಉಪನ್ಯಾಸದಲ್ಲಿ ಇವೆ. ಆಸಕ್ತರು ಗಮನಿಸಬಹುದು.
ಇನ್ನು ಭಾರತೀಯ ಲಿಂಗತಾರತಮ್ಯ ಸ್ವಾತಂತ್ಯ ಪೂರ್ವದಿಂದಲೂ ಜಗತ್ತಿಗೇ ಖ್ಯಾತ ಎಂಬುದು ಜಾಗತಿಕ ವಾಸ್ತವ. ಸುಪ್ತವಾಗಿದ್ದ ಈ ತಾರತಮ್ಯವನ್ನು ಕೊರೋನಾ ಬಡಿದೆಚ್ಚರಿಸಿದೆ. ಸಾಮಾಜಿಕವಾಗಿ ವ್ಯವಸ್ಥಿತವಾಗಿ ಲಿಂಗ ತಾರತಮ್ಯದ ಬಗ್ಗೆ ಅರಿವು ಮೂಡಿಸದಿರುವುದು ಸಹ ಈ ನಷ್ಟಕ್ಕೆ ನೇರ ಹೊಣೆಯಾಗಿದೆ. ಈ ಕೋವಿಡ್ ಕಾಲಘಟ್ಟದ ಅಂಕಿಅಂಶ ಹಿಡಿದು ಲೇಖಕರು ಇದಕ್ಕೆ ಕಾರಣ ಕೇವಲ ಆರ್.ಎಸ್.ಎಸ್ ಎನ್ನುವುದು ಅತ್ಯಂತ ಸೃಜನಶೀಲತೆ ಅಲ್ಲದೆ ಇನ್ನೇನೂ ಅಲ್ಲ ಎಂದು ದೃಢವಾಗಿ ಹೇಳಬಹುದು.
ಇರಲಿ, ಈ ರೀತಿಯಾಗಿ ಕೃತಿಯಲ್ಲಿ ವ್ಯಕ್ತಪಡಿಸಿರುವ ಭಯವಿಹ್ವಲಗೊಳಿಸುವಂತಹ ಆರ್.ಎಸ್.ಎಸ್ ಚಿಂತನೆಗಳನ್ನು ಹಿಟ್ಲರ್, ಮಾವೋ, ಈದಿ ಅಮೀನ್, ಸ್ಟಾಲಿನ್, ಅಯಾತೊಲ್ಲಾ ಖೊಮೈನಿ, ಸದ್ದಾಂ ಹುಸೇನ್ ಬಿಡಿ, ಇಂದಿನ ಸಾಕ್ಷಾತ್ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸಹ ಅಳವಡಿಸಲು ಸಾಧ್ಯವಿಲ್ಲ. ಅದೂ ಅಂಬೇಡ್ಕರರ ಸಂವಿಧಾನ ಜಾರಿಯಲ್ಲಿರುವ ಪ್ರಜಾಪ್ರಭುತ್ವ ಭಾರತದಲ್ಲಿ, ಊಹೂಂ! ಒಂದು ವೇಳೆ ಇದು ಸಾಧ್ಯವಾದರೆ ಅದು "ಸಂವಿಧಾನದ ದುರ್ಬಲತೆ" ಮತ್ತು "ಭಾರತದ ಊಳಿಗಮಾನ ಪ್ರಜಾಪ್ರಭುತ್ವ"ದ ಕಾರಣವೇ ಹೊರತು ಇನ್ನೇನೂ ಅಲ್ಲ. ಉತ್ಪ್ರೇಕ್ಷೆ (Glorification), ತುಷ್ಟೀಕರಣ (Appeasement), ಸ್ವಜನ ಪಕ್ಷಪಾತ (Nepotism), ಜಾತಿ ಅಧಿನಾಯಕತ್ವ (Hegemony) ಗಳ grand gala ಯುಗದಲ್ಲಿ ಒಂದು ಸಂಸ್ಥೆಯ ಬಗ್ಗೆ ದಿಗಿಲುಗೊಂಡಿರುವ ಸನಾತನ ಜಡ ಚಿಂತನೆಗೆ ಮರುಕ ಪಡಬಹುದಷ್ಟೆ.
ನೈಜ ಉದಾರವಾದಿ ಎಡಚಿಂತಕರು, ದೂರದೃಷ್ಟಿಯ ಬುದ್ಧಿಜೀವಿಗಳು "ಆಳ ಅಗಲ"ವಾಗಿ ಚಿಂತಿಸಬೇಕಿರುವುದು ಈ ನಿಟ್ಟಿನಲ್ಲಿಯೇ ಹೊರತು ಯಕಶ್ಚಿತ್ ಸಂಸ್ಥೆಯೊಂದರ ಕುರಿತಲ್ಲ.
ಇಂತಹ "ತೋಳ ಬಂತು ತೋಳ" ಪೂರ್ವಾಗ್ರಹದ ದಿಗಿಲುಗ್ರಹಣ ಹಿಡಿದಿರುವ ಭಾರತೀಯ ಎಡ-ಚಿಂತನೆಯು ತಾರ್ಕಿಕ ಮತ್ತು ನೈಜ ಉದಾರವಾದವನ್ನು ಅಳವಡಿಸಿಕೊಳ್ಳದಿದ್ದರೆ ಅಮಿತ್ ಷಾ ಹೇಳುವಂತೆ ಬಿಜೆಪಿ ಇನ್ನೂ ಮೂವತ್ತು ನಲವತ್ತು ವರ್ಷ ಅಧಿಕಾರದಲ್ಲಿರುತ್ತದೆ.

No comments: