2019 ಲೋಕಸಭಾ ಚುನಾವಣೆ

ಇಂದಿನ ಉದಯಕಾಲದಲ್ಲಿ:

ಅಂತೂ ಇಂತೂ ಭರತವರ್ಷದ ಚುನಾವಣೆ ಬಂದಿದೆ. ಈ ಧರ್ಮಯುದ್ಧದಲ್ಲಿ ಜೆಡಿಎಸ್ ನಿಂದ ಧೃತರಾಷ್ಟ್ರ, ಕಾಂಗ್ರೆಸ್ಸಿನಿಂದ ರಾಜಮಾತೆ, ಅಳಿದುಳಿದ ಸಾಮಂತರೊಟ್ಟಿಗೆಲ್ಲಾ  ತಮ್ಮ ಸ್ವಂತಿಕೆಯನ್ನು ಮರೆತು ದೇಶಕಾರಣ ಕೈ ಜೋಡಿಸಿದ್ದರೆ, ಬಿಜೆಪಿ ಯಥಾಪ್ರಕಾರ ದೇಶಭಕ್ತಿಯ ಪರಾಕಾಷ್ಠೆಯನ್ನು ನೆಚ್ಚಿಕೊಂಡಿದೆ.

ಮೊನ್ನೆ ನನ್ನ ಬೆಂಗಳೂರಿನಲ್ಲಿರುವ ಸ್ನೇಹಿತನೊಬ್ಬ ಹೀಗೆಯೇ ಹರಟುತ್ತ "ಈ ರಾಜಕಾರಣಿಗಳು ಏನೇನು ತಿನ್ನಲು ಸಾಧ್ಯವೋ ಅದನ್ನೆಲ್ಲಾ ತಿಂದಾಗಿದೆ. ಕರ್ನಾಟಕದ ನೆಲವನ್ನೆಲ್ಲಾ ತಿಂದು, ನದಿ/ಕೆರೆ/ಡ್ಯಾಂಗಳನ್ನೆಲ್ಲಾ ಕುಡಿದು ಹೊಟ್ಟೆ ಕೆಟ್ಟು ಹೂಸಿಸುತ್ತ ಜನಸಾಮಾನ್ಯರಿಗೆ ಉಸಿರಾಡಲು ಶುದ್ಧ ಗಾಳಿಯೂ ಇಲ್ಲದೆ ಅಪಾಯವಾಯುವನ್ನು ಎಲ್ಲೆಡೆ ಪಸರಿಸಿದ್ದಾರೆ. ಇನ್ನು ಜನರನ್ನು ಮುಕ್ಕುವುದಷ್ಟೇ ಬಾಕಿಯಿರುವುದು. ಜನರನ್ನು ತಿನ್ನಲು ಈ ರಾಜಕಾರಣಿಗಳ ಹಲ್ಲುಗಳು ಕಟಕಟವೆನ್ನುತ್ತಿದ್ದರೂ ಕ್ರಾಂತಿಯಾದೀತೆಂದು ಹೇಗೋ ಆ ತೀಟೆಯನ್ನು ತಡೆದುಕೊಂಡಿರುವರು. ಇಂತಹ ರಾಜಕಾರಣಿಗಳಿಂದ ತುಂಬಿದ ಭಾರತದ ಭವಿಷ್ಯ, ಮುಂದಿನ ಜನಾಂಗದಲ್ಲಿ ಹೇಗಿರುತ್ತದೋ?" ಎಂದು ವಿಷಾದ ವ್ಯಕ್ತಪಡಿಸಿದನು.

ಯೋಚಿಸಿ ನೋಡಿ, ಈಗ ನಡೆಯುತ್ತಿರುವ ಚುನಾವಣೆಗಳನ್ನು, ಅಭ್ಯರ್ಥಿಗಳನ್ನು ನೆನೆಸಿಕೊಂಡರೆ ಅಸಹ್ಯವಾಗುತ್ತದೆ. ಈ ರಾಜಕಾರಣಿಗಳ ಮೇಲಿನ ಅಸಹ್ಯ ಎಲ್ಲಿ ಭಾರತದ ಮೇಲೆಯೇ ಅಸಹ್ಯ ಹುಟ್ಟಿಸುತ್ತದೋ ಎಂದು ದಿಗಿಲಾಗುತ್ತದೆ! ಪ್ರತಿ ಚುನಾವಣೆಗಳಲ್ಲಿಯೂ ಬಾಲಬಡುಕರು, ನೆಲಗಳ್ಳರು, ರೌಡಿಗಳು, ದಗಾಕೋರರು, ಮಕ್ಕಳು, ಮೊಮ್ಮಕ್ಕಳು, ಹೆಂಡತಿಯರು, ಇತ್ಯಾದಿ ಇತ್ಯಾದಿ ವಂಶಜರು  ಪಕ್ಷಾತೀತವಾಗಿ ಅಲ್ಲಲ್ಲಿ ಇರುತ್ತಿದ್ದರೆ, ಈ ಬಾರಿ ಅವರುಗಳೇ ವಿಜೃಂಭಿಸುತ್ತಿದ್ದಾರೆ. ಭಾರತದ ಪ್ರಜೆಗಳೂ ಈ ಜನನಾಯಕರುಗಳಂತೆಯೇ ಭ್ರಷ್ಟರಾಗುತ್ತ ದೇಶ ಅಧಃಪತನದತ್ತ ದಾಪುಗಾಲಿಡುತ್ತಿದೆ ಎಂದೇ ಅನಿಸುತ್ತದೆ. ಇದು ಎಂದಾದರೂ ಬದಲಾದೀತೇ?

ನಾನೊಬ್ಬ ಆಶಾಜೀವಿ, ಹಾಗಾಗಿ ಭಾರತದ ಈ ರಾಜಕೀಯ ಗಾಢಾಂಧಕಾರದಲ್ಲಿ ಸಣ್ಣ ಬೆಳಕಿನ ಅಸ್ಪಷ್ಟ ರೇಖೆ ಕಂಡುಬಂದರೂ ಅದೊಂದು ಮಹಾ ಬದಲಾವಣೆಯ ಆರಂಭವೆಂದೇ ಅಂದುಕೊಳ್ಳುತ್ತೇನೆ. ನಮ್ಮ ನಿಮ್ಮಂಥ ಯಾವುದೇ ದೇಶಪ್ರೇಮಿಯು ಕೂಡಾ ಹೀಗೆಯೇ ಅಂದುಕೊಳ್ಳಬೇಕು. ಹಾಗಾಗಿ ಈ ಎಲ್ಲಾ ಅಭ್ಯರ್ಥಿತನಗಳನ್ನು ಆಶಾವಾದದಿಂದ ಕಾಣಬೇಕು.  ಆ ಭರವಸೆಯ ಸಣ್ಣ ಆಶಾಕಿರಣ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕಾಣಿಸುತ್ತಿದೆ.

ಪ್ರಮುಖವಾಗಿ ಆ ಆಶಾಕಿರಣ ಮಂಡ್ಯ ಮತ್ತು ಹಾಸನದ ಎರಡು ಕ್ಷೇತ್ರಗಳಲ್ಲಿ ಕಾಣಿಸುತ್ತಿದೆ. ಈ ಎರಡೂ  ಕ್ಷೇತ್ರಗಳಲ್ಲಿ ಉತ್ಸಾಹಿ ಯುವಕರೀರ್ವರು ಅಭ್ಯರ್ಥಿಗಳಾಗಿದ್ದಾರೆ. ಯುವಜನತೆಯ ಆಶಾಕಿರಣ ರಾಹುಲ್ ಗಾಂಧಿಯವರ ಕಾಂಗ್ರೆಸ್ ಪಕ್ಷ ಮತ್ತು ರಾಜಕೀಯ ಪಟ್ಟುಗಳ ಭೀಷ್ಮ ಪಿತಾಮಹರೆನಿಸಿದ ದೇವೇಗೌಡರ ಜೆಡಿಎಸ್ ಪಕ್ಷಗಳು ಒಟ್ಟಾಗಿ ಈ ಯುವಶಕ್ತಿಗಳಿಗೆ ಬೆಂಬಲವಾಗಿ ನಿಂತಿದೆ. ಇಲ್ಲಿ ಜನತೆ ಪ್ರಮುಖವಾಗಿ ಈ ಯುವಕರ ಕೌಟುಂಬಿಕ ಹಿನ್ನೆಲೆಯನ್ನು ನೋಡದೆ ಅವರ ಅಭ್ಯರ್ಥಿತನ ತರುವ ಅಮೋಘ ಯುವಶಕ್ತಿಯನ್ನು ಗಮನದಲ್ಲಿರಿಸಿಕೊಳ್ಳಬೇಕು. ಏಕೆಂದರೆ ನಾವು ಎಲ್ಲದರಲ್ಲೂ ಹುಳುಕನ್ನು ಹುಡುಕದೆ ಒಳ್ಳೆಯದನ್ನು ಮಾತ್ರ ಪರಿಗಣಿಸಬೇಕು. ಹಾಗಾಗಿ ಇಲ್ಲಿ ಪ್ರಮುಖವಾಗಿ ಯುವಶಕ್ತಿ ಅದರಲ್ಲೂ ಈ ಎರಡು ಜಿಲ್ಲೆಗಳಲ್ಲಿನ ಪ್ರಮುಖ ಜಾತಿ ಜನಾಂಗೀಯ ಅಸ್ಮಿತೆಯನ್ನು ಪ್ರತಿನಿಧಿಸುವ ಶಕ್ತಿ ಕೂಡ ಆಗಿರುವುದರಿಂದ ಇದೊಂದು ಆಶಾಕಿರಣವೇ ಆಗಿದೆ.

ಇನ್ನು ಈ ಮೊಮ್ಮಕ್ಕಳ ಕುರಿತು ಯೋಚಿಸುವುದಕ್ಕಿಂತ ಅವರ ಹಿರಿಯರ ದೇಶಕಾರಣವನ್ನು ಗಮನಿಸೋಣ.

ಫ್ಯಾಸಿಸ್ಟ್ ಶಕ್ತಿಗಳನ್ನು ಮತ್ತು ಸರ್ವಾಧಿಕಾರವನ್ನು ಕಿತ್ತೊಗೆಯುವ  ಮಹಾಭಿಲಾಷೆಯಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಒಗ್ಗಟ್ಟಾಗಿ  ಭಾರತದಲ್ಲಿ ಇತರೆ ಸಮಾನ ಮನಸ್ಕರಾದ ಚಂದ್ರಬಾಬು ನಾಯ್ಡು, ಮಮತಾ ಬ್ಯಾನರ್ಜಿ, ಮಾಯಾವತಿ, ಯಾದವೀ ಕುಟುಂಬ, ದ್ರಾವಿಡ ಶಿಶು ಸ್ಟ್ಯಾಲಿನ್ ಮುಂತಾದವರನ್ನು ಒಡಗೂಡಿಕೊಂಡು  ಸ್ವರ್ಣಯುಗವನ್ನು ಆರಂಭಿಸಿದ್ದಾರೆ. ಸತ್ಯ, ನಿಷ್ಟೆ, ರಾಷ್ಟ್ರಪ್ರೇಮ, ಪ್ರಾಮಾಣಿಕತೆಯ ತತ್ವಗಳೊಂದಿಗೆ ಆಧ್ಯಾತ್ಮದ ಚಿಂತನೆಯನ್ನೂ ಒಗ್ಗೂಡಿಸಿಕೊಂಡು ಭ್ರಷ್ಟಾಚಾರವನ್ನು ನಿರ್ಮೂಲನೆಗಾಗಿ ರಾಜಕೀಯ ಕ್ರಾಂತಿಯನ್ನು ಮಾಡುವತ್ತ ಒಂದು ಅತೀ ಮಹತ್ವದ ಹೆಜ್ಜೆಯನ್ನಿರಿಸಿದ್ದಾರೆ.

ಇವರು ಸದ್ಯಕ್ಕೆ ಯಾವುದನ್ನು ವಿರೋಧಿಸಿ ನಿರ್ನಾಮ ಮಾಡುತ್ತೇವೆನ್ನುತ್ತಿರುವರೋ ಆ ವಿಚಾರಗಳಲ್ಲಿ ಇವರುಗಳ ಪಾತ್ರವೇನು ಎಂದು ನೋಡೋಣ.

ಫ್ಯಾಸಿಸ್ಟ್ ಶಕ್ತಿ: ಪ್ರಮುಖವಾಗಿ ಒಂದು ಪಕ್ಷವೇ ಪ್ರಮುಖವಾಗಿ ಆಡಳಿತ ನಡೆಸುತ್ತ, ಪ್ರಜಾಪ್ರಭುತ್ವವನ್ನು ಸಂಕಷ್ಟಕ್ಕೀಡುಮಾಡಿ, ಯುದ್ಧೋತ್ಸಾಹ ಮೆರೆಯುತ್ತ ದೇಶಕ್ಕೆ ಆರ್ಥಿಕ ಸಂಕಷ್ಟಗಳನ್ನು ತರುವುದನ್ನು ಫ್ಯಾಸಿಸ್ಟ್ ಶಕ್ತಿ ಎಂದು ಭಾರತದ ಮಟ್ಟಿಗೆ ಹೇಳಬಹುದು. ಯೂರೋಪಿನ ಮಟ್ಟಿಗಾದರೆ ಇದನ್ನು "ಚರ್ಚು-ಆಡಳಿತ" ಇತ್ಯಾದಿಯಾಗಿ ಕೂಡ ವ್ಯಾಖ್ಯಾನಗೊಳಿಸಬಹುದು. ಚರ್ಚು ಎಂದೊಡನೆ ಅದನ್ನು ಗುಡಿ, ಮಸೀದಿಗಳೆಂದು ಭಾರತಕ್ಕೆ ಕೂಡ ಅನ್ವಯಿಸಲಾಗದು. ಹತ್ತೊಂಬತ್ತನೇ ಶತಮಾನದ ಯೂರೋಪಿನ ಚರ್ಚ್ ಕೇಂದ್ರಿತ ಆಡಳಿತವೇ ಬೇರೆ ಮತ್ತು ಆ ಫ್ಯಾಸಿಸ್ಟ್ ವ್ಯಾಖ್ಯಾನವೇ ಬೇರೆ.

ಈಗ ಬಿಜೆಪಿ ಅಂತಹ ಫ್ಯಾಸಿಸ್ಟ್ ಶಕ್ತಿ ಎಂಬುದು ಇವರೆಲ್ಲರ ಅಭಿಪ್ರಾಯ. ಅದು ಅಲ್ಲವೇ ಹೌದೇ ಎಂಬುದಕ್ಕಿಂತ ಅದನ್ನು ವಿರೋಧಿಸುವ ಇವರು ಫ್ಯಾಸಿಸ್ಟರಲ್ಲವೆಂಬುದು ಮೊದಲು ಸಾಬೀತಾಗಬೇಕಲ್ಲವೇ?

ಬಿಜೆಪಿ ಅತ್ಯಂತ ದೊಡ್ಡ ಪಕ್ಷವಾಗಿ ಕೇವಲ ಐದು ವರ್ಷಗಳ ಹಿಂದಷ್ಟೇ ಅಧಿಕಾರಕ್ಕೆ ಬಂದಿದ್ದಿತು, ಅದೂ  ಪ್ರಜಾಪ್ರಭುತ್ವದ ಚುನಾವಣೆಯ ಆಧಾರದ ಮೇಲೆ. ಹಾಗೆಯೇ  ಈ ಹಿಂದೆ ಕಾಂಗ್ರೆಸ್ ಒಂದಲ್ಲ ಸಾಕಷ್ಟು ಚುನಾವಣೆಗಳಲ್ಲಿ ಇದೇ ರೀತಿ ಚುನಾವಣೆಗಳಲ್ಲಿ ಅತಿ ದೊಡ್ಡ ಪಕ್ಷವಾಗಿ ಅಧಿಕಾರಕ್ಕೆ ಚುನಾಯಿತವಾಗಿದ್ದಿತು. ಹಾಗಾಗಿ ಕಾಂಗ್ರೆಸ್ ಬಿಜಿಪಿಗಿಂತ ಅತಿ ದೊಡ್ಡ ಫ್ಯಾಸಿಸ್ಟ್ ಶಕ್ತಿಯೆನಿಸಿಬಿಡುತ್ತದೆ. ಏಕೆಂದರೆ ಫ್ಯಾಸಿಸ್ಟ್ ವ್ಯಾಖ್ಯಾನವೇ ಹಾಗಿದೆ.   ಅದನ್ನೇ ಸಾಕಷ್ಟು ಅಂದಿನ ಬುದ್ಧಿಜೀವಿಗಳು ವಿರೋಧಿಸಿಕೊಂಡು ಬಂದು ಲೋಹಿಯಾ, ಜೆಪಿ ಚಳುವಳಿಗಳನ್ನು ರೂಪಿಸಿ ಸಂಚಲನ ಮೂಡಿಸಿದ್ದರು. ದೇವೇಗೌಡ, ವಾಜಪೇಯಿಗಳೆಲ್ಲ ಆ ಚಳುವಳಿಗಳ ಬಾಧ್ಯಸ್ಥರಾಗಿದ್ದವರೇ.  ಕೇವಲ ಐದು ವರ್ಷಗಳಲ್ಲಿ ತಮಗೆ ಅಧಿಕಾರ ಸಿಗದಿದ್ದುದಕ್ಕೆ ಈ ಶಕ್ತಿಗಳೆಲ್ಲ ತಮ್ಮ ತತ್ವ ಸಿದ್ಧಾಂತಗಳನ್ನೆಲ್ಲ ತೂರಿ ಒಡಹುಟ್ಟಿದವರಿಗಿಂತಲೂ ಹೆಚ್ಚಾಗಿ ಕೈಜೋಡಿಸಿರುವುದು ಹೇಗೆ ಫ್ಯಾಸಿಸ್ಟ್ ಅನ್ನಿಸದು ಎಂಬುದು ಶ್ರೀಸಾಮಾನ್ಯನ ಪ್ರಶ್ನೆ!

ಸರ್ವಾಧಿಕಾರ: ಕಳೆದ ನಲವತ್ತು ವರ್ಷಗಳ ಸುದ್ದಿಗಳನ್ನು, ಪ್ರಗತಿಪರರ ಚಿಂತನೆಗಳನ್ನು ಓದಿದರೆ ಶ್ರೀಮತಿ ಇಂದಿರಾ ಗಾಂಧಿಯವರು ಇಂತಹ ಸರ್ವಾಧಿಕಾರಿಗಳಾಗಿದ್ದರು ಎಂಬುದರ ಚಿತ್ರಣ ಸಿಗುತ್ತದೆ. ಅಂದು ಕಾಂಗ್ರೆಸ್ಸಿನ ಒಬ್ಬ ಪ್ರಮುಖ ಕೂಡ ಒಂದು ಪತ್ರಿಕಾ ಹೇಳಿಕೆಗೆ ದೆಹಲಿಗೆ ಟ್ರಂಕ್ ಕಾಲ್ ಮಾಡಿದ ನಂತರವೇ ಮಾತನಾಡಬೇಕಿದ್ದಿತು. ಇಂದು ಮೋದಿ ಸರ್ವಾಧಿಕಾರಿಯಾಗಿದ್ದರೆ ಅವರ ಪಕ್ಷದ ಮಂತ್ರಿಗಳು, ವಕ್ತಾರರು ಬೇಕಾಬಿಟ್ಟಿಯಾಗಿ ಉಚ್ಛೆಯಿಂದ ಯೂರಿಯಾ ಉತ್ಪಾದನೆ, ಕಣ್ಣು ಹೊಡೆದರೆ ಕಣ್ಣು ಕೀಳುವ, ಮುಟ್ಟಿದರೆ ಕೈ ಕತ್ತರಿಸುವ ಕ್ಷುಲ್ಲಕ ಹೇಳಿಕೆಗಳನ್ನು ನೀಡುತ್ತಿರಲಿಲ್ಲ.  ಇನ್ನು ದೇವೇಗೌಡರ ಕೌಟುಂಬಿಕ ಅಭ್ಯರ್ಥಿತನ ಸರ್ವಾಧಿಕಾರವನ್ನಲ್ಲದೆ, ಫ್ಯಾಸಿಸ್ಟ್ ಧೋರಣೆಯನ್ನಲ್ಲದೆ ಇನ್ನೇನನ್ನು ಹೇಳುವುದಿಲ್ಲ.

ಭ್ರಷ್ಟಾಚಾರ: ಈ ವಿಚಾರವಾಗಿ ಇಂದು ಘಟಬಂಧನದಲ್ಲಿ ಜೊತೆಯಾಗಿರುವ ಯಾದವ ಕುಟುಂಬ, ಗೌಡ ಕುಟುಂಬ, ಗಾಂಧೀ ಕುಟುಂಬ, ಮಾಯಾವತಿ ನಿಷ್ಠಮಂಡಳಿ, ಮಮತಾ ಮಿತ್ರಮಂಡಳಿ , ನಾಯ್ಡು ಕುಟುಂಬ, ಕರುಣಾನಿಧಿಯವರ ಕರುಣಾ ಪ್ರಸಾದಗಳು ಇತ್ಯಾದಿ ಇತ್ಯಾದಿಗಳ ಭ್ರಷ್ಟಾಚಾರದ ಆರೋಪಗಳನ್ನೊಮ್ಮೆ ಅವಲೋಕಿಸಿದರೆ ಸಾಕು, ಇನ್ನೇನು ಹೇಳುವುದೇ ಬೇಕಿಲ್ಲ. ಅದಲ್ಲದೆ ಭ್ರಷ್ಟಾಚಾರದ ಕುರಿತು ಮಾತನಾಡುವ ಹಕ್ಕು ನಮಗ್ಯಾರಿಗೂ ಇಲ್ಲ. ಏಕೆಂದರೆ ಕೋಟಿಗಟ್ಟಲೆ ಹಣ ಸುರಿದು ಚುನಾವಣೆಗೆ ನಿಲ್ಲುವುದನ್ನು ನಾವೆಲ್ಲರೂ ಒಪ್ಪಿಕೊಂಡಿದ್ದೇವೆ. ಅಷ್ಟು ಹಣ ಸುರಿದವ ಅದನ್ನು ಬಡ್ಡಿ ಸಮೇತವಾದರೂ ಮರಳಿ ಪಡೆಯುವುದು ಬೇಡವೇ ಎಂದು ಆತನ ಭ್ರಷ್ಟತೆಯನ್ನು ಸಮರ್ಥಿಸುತ್ತೇವೆ.

ಎಲ್ಲಾ ಮಾರ್ಗ, ಪಕ್ಷಗಳಿಂದ ನೋಡಿದಾಗ ಭಾರತದ ಪ್ರಜಾಪ್ರಭುತ್ವ ಫ್ಯಾಸಿಸ್ಟ್ ಧೋರಣೆಯ ಊಳಿಗಮಾನ್ಯ ಪ್ರಜಾಪ್ರಭುತ್ವ ಎನಿಸುತ್ತದೆ.

ಇನ್ನು ಭಾರತೀಯ ಸಂವಿಧಾನ ಕೂಡ ಯಾವುದಾದರೂ ಒಂದು ಪಕ್ಷ ನಿಗದಿತ ಪ್ರಮಾಣದ ಸ್ಥಾನಗಳನ್ನು ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದರೆ ಸರ್ಕಾರ ರಚಿಸಬಹುದೆಂದು ಹೇಳಿದೆ. ಅಂದರೆ ಸಂವಿಧಾನ ಕೂಡಾ ಫ್ಯಾಸಿಸ್ಟ್ ಧೋರಣೆಯನ್ನು ಪ್ರತಿಪಾದಿಸುತ್ತದೆನ್ನಬೇಕೆ? ಹೌದೆನ್ನುವುದಾದರೆ ಭಾರತೀಯ ಬಹುತ್ವವನ್ನು ಒಂದು ದೊಡ್ಡ ಪಕ್ಷವಾಗಿ ಚುನಾಯಿತ ಪಕ್ಷಕ್ಕಿಂತ ಬಹುಪಕ್ಷಗಳು ಒಡಗೂಡಿ ಸರ್ಕಾರವನ್ನು ರಚಿಸಬೇಕೆಂದು ಸಂವಿಧಾನಕ್ಕೆ ತಿದ್ದುಪಡಿ ತರಬೇಕಾಗುತ್ತದೆ. ಹಾಗಾಗಿ ಫ್ಯಾಸಿಸ್ಟ್ ಎಂಬುವ ದ್ವಂದ್ವದ ಫ್ಯಾಷನ್ನಿಗೊಳಗಾಗದೆ ವಾಸ್ತವಿಕವಾಗಿ ಚಿಂತಿಸಬೇಕಾಗುತ್ತದೆ. ಭಾರತದ ಇಲ್ಲಿಯವರೆಗಿನ ಸಮ್ಮಿಶ್ರ ಸರ್ಕಾರಗಳು ಏಳಿಗಿಂತ ಬೀಳುಗಳ ಸರಮಾಲೆಯನ್ನೇ ತಂದೊಡ್ಡಿವೆ. ಸಮ್ಮಿಶ್ರ ಸರ್ಕಾರಗಳು ಯಾವುದೇ ತತ್ವ ಸಿದ್ಧಾಂತಗಳಿಗೆ, ವೈಚಾರಿಕತೆಗೆ, ಪ್ರಾಮಾಣಿಕತೆಗೆ, ರಾಷ್ಟ್ರಹಿತಕ್ಕೆ ಬದ್ಧರಾಗಿರದೆ ತಮ್ಮ ಅನುಕೂಲಗಳಿಗೆ ಬದ್ಧತೆಯನ್ನು ಮೆರೆದ ಇತಿಹಾಸವನ್ನೇ ಕಳೆದೆರಡು ದಶಕಗಳಿಂದ ನೋಡಿದ್ದೇವೆ. ಹೀಗಿದ್ದಾಗ ಯಾವುದು ಹಿತ?

ಈ ಎಲ್ಲಾ ನಿದರ್ಶನಗಳು ಬಿಜೆಪಿಯಲ್ಲಿಯೂ ದಂಡಿಯಾಗಿ ಇವೆ. ಇದುವರೆಗೆ ಮೋದಿ ಸುಳ್ಳನೆಂದು ವಿರೋಧಿಗಳೆಲ್ಲ ಘೋಷಿಸಿಯಾಗಿದೆ.  ಹಾಗಾಗಿ ಇದ್ದುದರಲ್ಲಿ ಕಳ್ಳರಿಗಿಂತ ಸುಳ್ಳ ವಾಸಿಯೋ ಅಥವಾ ಕಳ್ಳರೇ ಲೇಸೋ ಎಂಬುದು ಮಾತ್ರ ಈ ಚುನಾವಣೆಯಲ್ಲಿರುವ ಆಯ್ಕೆ ಮತ್ತು ನಿರ್ಧಾರವಾಗುವುದು. ಬೇರೆಲ್ಲಾ ವಿಚಾರಗಳೂ ಭಾರತೀಯ ಸಿನಿಮಾಗಳಲ್ಲಿನ ಐಟಂ ಸಾಂಗು, ಚಿಂದಿ ಡೈಲಾಗು, ಆ ಡೈಲಾಗು ತಾಳ ತಪ್ಪಿದರೆ ಕಣ್ಣೀರ ಕೋಡಿ ಅಥವಾ ಪುಂಖಾನುಪುಂಖ ಬುದ್ಧಿಜೀವಿಗಳ ಲೇಖನಮಾಲೆ (ಡಿಸ್ಲೆಕ್ಸಿಯಾ, ಮೀಟು, ಇತ್ಯಾದಿ ಕುರಿತು ಬರೆದಂತೆ)! ಒಟ್ಟಾರೆ ಚುನಾವಣೆ ಎಂಬುದು ಅವರವರ ಅಭಿರುಚಿಗೆ ತಕ್ಕಂತೆ, ಅವರವರ ಭಾವಕ್ಕೆ ಹೊಂದುವ ಒಂದು ಸಾರ್ವತ್ರಿಕ ಪಂಚವಾರ್ಷಿಕ ಯೋಜನೆ.  ಚಲನಚಿತ್ರ ಅಭಿಮಾನಿಗಳಿಗೆ ಒಂದು ಭರ್ಜರಿ ಸಿನೆಮಾ, ಮಾಧ್ಯಮಕ್ಕೆ ಒಂದು ರೇಟಿಂಗ್ ಅವಕಾಶ, ಪುಗುಸಟ್ಟೆಗಳಿಗೆ ಭೂರಿ ಭೋಜನ! ಇನ್ನೊಂದೆರಡು ತಿಂಗಳು ಭಾರತವೆಂಬೋ ಹುಚ್ಚಾಸ್ಪತ್ರೆಯಲ್ಲಿ ಎಲ್ಲಾ ರೀತಿಯ ಚಿಕಿತ್ಸೆಗಳೂ ಭರದಿಂದ ಸಾಗುತ್ತವೆ.

ಅಂದಹಾಗೆ ಭಾರತವೆಂಬೋ ಹುಚ್ಚಾಸ್ಪತ್ರೆ ಎಂದು ನಾನು ಹೇಳುತ್ತಿಲ್ಲ, ನನ್ನ ಬಾಲ್ಯದಲ್ಲೇ ಜ್ಞಾನಪೀಠ ಪ್ರಶಸ್ತಿ ವಿಜೇತರಾದ ಶಿವರಾಮ ಕಾರಂತರು  "ಈ ದೇಶ ಎತ್ತ ಹೋಗುತ್ತಿದೆಯೋ ಗೊತ್ತಿಲ್ಲ. ಏನು ಮಾಡಿದರೂ ನಾನು ಪತ್ರಿಕೆಗಳಲ್ಲಿ ಬರಬೇಕು ನಾನು ಇಂಥವನು ಎಂದು ಹೇಳಿಕೊಳ್ಳುವ ಆತ್ಮರತಿಯಲ್ಲಿ ಮುಳುಗಿದ್ದೇವೆ. ನಮ್ಮನ್ನು ನಾವೇ ದೊಡ್ಡವರು ಎಂದು ಕರೆದುಕೊಳ್ಳುತ್ತಿರುವ 'ಆಸ್ಪತ್ರೆ' ಆಗುತ್ತಿದೆ ಈ ದೇಶ" ಎಂದು ಹೇಳಿದ್ದಾರೆ. (ಕಾರಂತ ನುಡಿ - ೫೮)

ಭಯೋತ್ಪಾದನೆ ವಿರುದ್ಧದ ಭಾರತದ ಯುದ್ಧ

ಭಾರತ ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದ ಉಗ್ರರ ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಮತ್ತು ಅದಕ್ಕೆ ಪ್ರತೀಕಾರವಾಗಿ ಪಾಕಿಸ್ತಾನದ ಆಕ್ರಮಣದ F16 ವಿಮಾನವನ್ನು ಹೊಡೆದುರುಳಿಸುತ್ತ ಅವಘಡಕ್ಕೊಳಗಾಗಿ ಪಾಕಿಸ್ತಾನದ ಗಡಿಯೊಳಗೆ ಪ್ಯಾರಶೂಟಿನಿಂದಿಳಿದು ಬಂಧಿತನಾದ ಭಾರತೀಯ ಯೋಧನ ಹಿನ್ನೆಲೆಯಲ್ಲಿ, ದೇಶ ಯುದ್ಧದ ಕುರಿತು ಇಬ್ಭಾಗವಾಗಿದೆ. ಒಂದು ಬಣ ಭಾರತದ ನಡೆಯನ್ನು ಸಮರ್ಥಿಸಿದರೆ, ಇನ್ನೊಂದು ಬಣ ಯುದ್ಧವನ್ನು ಆಹ್ವಾನಿಸುವ ಈ ನಡೆಯನ್ನು ವಿರೋಧಿಸುತ್ತಿವೆ. ಕೇವಲ ಒಬ್ಬ ವ್ಯಕ್ತಿಯ ಮೇಲಿನ ದ್ವೇಷ ರಾಷ್ಟ್ರದ ಹಿತಾಸಕ್ತಿಯನ್ನೇ ಧಿಕ್ಕರಿಸುವ ಮಟ್ಟಕ್ಕೆ ಒಂದು ಕಡೆ ಬೆಳೆದಿದ್ದರೆ, ಮತ್ತೊಂದೆಡೆ ಆ ವ್ಯಕ್ತಿಯ ಮೇಲಿನ ಪ್ರೇಮ ಎಲ್ಲರನ್ನೂ ಸೈನಿಕರನ್ನಾಗಿಸಿದೆ.

ಇನ್ನು ಕೆಲವು ಭಾರತೀಯರು ಪಾಕಿಸ್ತಾನವೆಂದರೆ ಭಾರತದಷ್ಟೇ ಸುರಕ್ಷಿತವೆಂದುಕೊಂಡಿದ್ದಾರೆ. ನನ್ನ ಅನೇಕ ಪಾಕಿಸ್ತಾನಿ ಮಿತ್ರರು ರಜೆಗೆ ಕೂಡಾ ಪಾಕಿಸ್ತಾನಕ್ಕೆ ಹೋಗುವುದಿಲ್ಲ. ಹೋಗಲೇಬೇಕಾದ ಮದುವೆ ಅಥವಾ ಇನ್ಯಾವುದಾದರೂ ಅನಿವಾರ್ಯಗಳಿದ್ದರೆ ಮಾತ್ರ ಪಾಕಿಸ್ತಾನಕ್ಕೆ ಹೋಗುತ್ತಾರೆ. ನನ್ನ ಆ ಮಿತ್ರರೆಲ್ಲರೂ ಹೇಗಾದರೂ ಮಾಡಿ ತಮ್ಮ ಬಂಧುಗಳನ್ನು ಆ ನರಕದಿಂದ ಹೊರತಂದು ಅಮೇರಿಕಾದಲ್ಲಿ ಸೆಟ್ಲ್ ಮಾಡಬೇಕೆಂದು ಸದಾ ಯೋಚಿಸುತ್ತಿರುತ್ತಾರೆ. ನಮ್ಮ ಪ್ರಗತಿಪರರ ಬಹುಮೆಚ್ಚಿನ ಮಲಾಲಾ ತನಗೆ ಪಾಕಿಸ್ತಾನ ಅಸುರಕ್ಷಿತವೆಂದೇ ಲಂಡನ್ನಿನಲ್ಲಿರುವುದು. ಭುಟ್ಟೋ, ಇಮ್ರಾನ್, ನವಾಜ್ ಷರೀಫ್, ಮುಷರಫ್ ಮುಂತಾದ ಪಾಕಿಸ್ತಾನದ ಘಟಾನುಘಟಿಗಳೆಲ್ಲ ಪಾಕಿಸ್ತಾನ ಅಸುರಕ್ಷಿತವೆಂದು ಯುರೋಪ್, ಅಮೆರಿಕದಲ್ಲಿ ನಿವಾಸಗಳನ್ನು ಹೊಂದಿದ್ದಾರೆ. ಅಧಿಕಾರವಿದ್ದಾಗ ಮಾತ್ರ ಅವರಿಗೆ ಪಾಕಿಸ್ತಾನ ಇಲ್ಲದಿದ್ದರೆ ಯುರೋಪ್, ದುಬೈ, ಲಂಡನ್! ಇದು ಅಲ್ಲಿಯ ನಾಯಕರ ಗತಿಯಾದರೆ, ಸಾಮಾನ್ಯನ ಗತಿ! ಇದು ಪಾಕಿಸ್ತಾನದ ವಾಸ್ತವ.

ಹಾಗಾಗಿ ಪೂರ್ವಾಗ್ರಹಗಳ ಭಾವೋದ್ವೇಗ ಎಲ್ಲೆಲ್ಲೂ ರಾರಾಜಿಸುತ್ತಿರುವ ಈ ಸನ್ನಿವೇಶವನ್ನು ಸ್ಥಿತಪ್ರಜ್ಞರಾಗೊಮ್ಮೆ ವಿಶ್ಲೇಷಿಸೋಣ.

ಪ್ರಪಂಚದಲ್ಲಿ ಎಲ್ಲಿಯವರೆಗೆ ಗಡಿ ಸೈನ್ಯಗಳಿರುತ್ತವೋ ಅಲ್ಲಿಯವರೆಗೆ ಯುದ್ಧಗಳಿರುತ್ತವೆ. ಯುದ್ಧವನ್ನು ಕಾಲು ಕೆದರಿಕೊಂಡು ಮಾಡುವ ಕಾಲ ಯಾವಾಗಲೋ ಮುಗಿದುಹೋಗಿದೆ. ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಕೂಡಾ ಕಾಲು ಕೆರೆದುಕೊಂಡರೂ ಯುದ್ಧದಂತಹ ದುಸ್ಸಾಹಸಕ್ಕೆ ಕೈ ಹಾಕಿಲ್ಲ. ಈಗೇನಿದ್ದರೂ ಭಯೋತ್ಪಾದನೆಯಂತಹ ಪ್ಯಾರಾ ಯುದ್ಧಗಳಲ್ಲಿ ಸರ್ವಾಧಿಕಾರಿಗಳು ಯಾ ಮತಾಂಧ ದೇಶಗಳು ಆಸಕ್ತವೇ ಹೊರತು ಶಾಸ್ತ್ರೀಯ ಯುದ್ಧಗಳಲ್ಲಿಯಲ್ಲ. ಆದರೆ ಮತಾಂಧವಲ್ಲದ ಮತ್ತು ಸರ್ವಾಧಿಕಾರವಲ್ಲದ ರಾಷ್ಟ್ರಗಳು ಮಾತ್ರ ಶಾಸ್ತ್ರೀಯ ಯುದ್ಧಗಳಲ್ಲಿ ತೊಡಗುತ್ತವೆ. ಆದರೆ ಆ ಯುದ್ಧಗಳು ಅವಶ್ಯಕವೆನಿಸಿ ನ್ಯಾಯಯುತವಾಗಿರಬೇಕು. ಹಾಗಿದ್ದರೆ ಯುದ್ಧಗಳು ಯಾವಾಗ ಅವಶ್ಯಕ ಮತ್ತು 'ನ್ಯಾಯಯುತ'ವೆನಿಸುತ್ತವೆ?

ಅಂತರರಾಷ್ಟ್ರೀಯ ಯುದ್ಧತಜ್ಞರ ಪ್ರಕಾರ ಯುದ್ಧಗಳು ಈ ಕೆಳಗಿನ ಕಾರಣಗಳಿಗಾಗಿ 'ನ್ಯಾಯಯುತ'ವೆನಿಸುತ್ತವೆ.

· ಆತ್ಮ ರಕ್ಷಣೆಗಾಗಿ:

    o   ಒಂದು ದೇಶದ ಗಡಿಯನ್ನು ಶತ್ರುಗಳು ದಾಟಿ ದಾಳಿ ನಡೆಸಿದಾಗ.

    o   ಒಂದು ದೇಶದ ಅಧ್ಯಕ್ಷ ಯಾ ಪ್ರಮುಖ ನಾಯಕನನ್ನು ಹತ್ಯೆಗೈದಾಗ.

    o   ಒಂದು ದೇಶದ ಘನತೆಗೆ ಚ್ಯುತಿಯಾದಾಗ. ಉದಾ: ರಾಷ್ಟ್ರೀಯ ಧ್ವಜ ಸುಡುವುದು, ಎಂಬೆಸಿಗಳ     ಮೇಲೆ ದಾಳಿ ಇತ್ಯಾದಿ.

    o   ರಾಷ್ಟ್ರೀಯ ಧರ್ಮವೊಂದಕ್ಕೆ ಚ್ಯುತಿ ತಂದಾಗ.

    o   ಆರ್ಥಿಕ ಸಂಕಷ್ಟಕ್ಕೆ ಈಡು ಮಾಡಿದಾಗ.

    o   ನೆರೆಯ ಮಿತ್ರ ರಾಷ್ಟ್ರವನ್ನುಆಕ್ರಮಿಸಿದಾಗ.

· ಮಿತ್ರ  ರಾಷ್ಟ್ರಗಳು ಸಹಾಯ ಕೋರಿದಾಗ.

· ಮಾನವ ಹಕ್ಕುಗಳ ಉಲ್ಲಂಘನೆ.

· ಶಿಕ್ಷೆಯ ರೂಪವಾಗಿ: ಇದನ್ನು ಕೆಲವರು ಒಪ್ಪದಿರಬಹುದು. ಆದರೆ ಈ ಕಾರಣಕ್ಕಾಗಿ ಸಾಕಷ್ಟು     ಯುದ್ಧಗಳಾಗಿವೆ ಮತ್ತು ನ್ಯಾಯಯುತವೆನಿಸಿವೆ.

ಈಗ ಭಾರತ ಮತ್ತು ಪಾಕಿಸ್ತಾನಗಳ ಹಿನ್ನೆಲೆಯಲ್ಲಿ ಭಾವೋದ್ವೇಗದಿಂದ ಯುದ್ಧ ನಡೆಯಬೇಕೆ ಬೇಡವೇ ಎಂಬುದಕ್ಕಿಂತ ಇಲ್ಲಿ ಯುದ್ಧ ನ್ಯಾಯಯುತವಾಗಿ ಬೇಕೇ ಎಂದು ನೋಡಬೇಕು.

ಇಲ್ಲಿ ಮೇಲ್ನೋಟಕ್ಕೇ ಭಾರತ ಮೇಲಿನ "ಆತ್ಮರಕ್ಷಣೆ"ಯ ಕಾರಣಕ್ಕಾಗಿ ನ್ಯಾಯಯುತ ಯುದ್ಧಕ್ಕೆ ಹಕ್ಕುದಾರನೆನಿಸುತ್ತದೆ. ಅದಲ್ಲದೆ ಭಾರತ ಏಕಾಏಕಿ ಯುದ್ಧದ ನಿರ್ಧಾರಕ್ಕೆ ಬಂದಿದೆಯೇ, ಇಲ್ಲ. ಅದು ಸಾಕಷ್ಟು ದಶಕಗಳ ಕಾಲ ಯುದ್ಧೇತರ ಮಾರ್ಗೋಪಾಯಗಳನ್ನು ಅನುಸರಿಸಿ ಕಡೆಯದಾಗಿ ಈ ವೈಮಾನಿಕ ದಾಳಿಯನ್ನು ಮಾಡಿದೆ. ಮಾತುಕತೆಯಿಂದ ಈ ಸಮಸ್ಯೆ ಬಗೆಹರಿಯುವುದಿದ್ದರೆ ಈ ಸಮಸ್ಯೆ ಬಗೆಹರಿದು ಹಲವಾರು ದಶಕಗಳೇ ಕಳೆದಿರುತ್ತಿದ್ದವು. ಹಾಗಾಗಿ ಬೇರೆಲ್ಲ ಮಾರ್ಗೋಪಾಯಗಳು ಫಲಶೃತಿಯಾಗದಿದ್ದುದರಿಂದ ಈ ಮಾರ್ಗವನ್ನು ಕಂಡುಕೊಳ್ಳಲಾಗಿದೆ.

ಅದಲ್ಲದೆ ಈ ವೈಮಾನಿಕ ದಾಳಿ ಪಾಕಿಸ್ತಾನಿ ಸೈನ್ಯದ ಮೇಲಲ್ಲ, ಉಗ್ರಗಾಮಿಗಳ ನೆಲೆಯ ಮೇಲೆ.  ಅಮೇರಿಕ ಕೂಡ ಪಾಕಿಸ್ತಾನದ ನೆಲದಲ್ಲಿಯೇ ಈ ರೀತಿಯ ಕಾರ್ಯಾಚರಣೆ ನಡೆಸಿ ಉಗ್ರ ಒಸಾಮಾ ಬಿನ್ ಲಾಡೆನ್ ಅನ್ನು ಕೊಂದಿದ್ದಿತು. ಅಮೆರಿಕದಿಂದ ಉಗ್ರರ ವಿರುದ್ಧ ಹೋರಾಡಲೆಂದೇ F ೧೬ ಯುದ್ಧವಿಮಾನಗಳನ್ನು ಪಡೆದಿರುವ ಪಾಕಿಸ್ತಾನ, ಭಾರತದ ಕಾರ್ಯಾಚರಣೆಯನ್ನು ನೈತಿಕವಾಗಿ ಬೆಂಬಲಿಸಬೇಕು.  ಆದರೆ ಇದಕ್ಕೆ ಪ್ರತೀಕಾರವಾಗಿ ಪಾಕಿಸ್ತಾನ ತನ್ನ ವಾಯು ಸೈನ್ಯದ F16 ನಿಂದ ಭಾರತದ ಮೇಲೆ ವೈಮಾನಿಕ ದಾಳಿಗೆ ಪ್ರಯತ್ನಿಸಿದ್ದು ಏನನ್ನು ಹೇಳುತ್ತದೆ!

ಭಾರತದ ಈ ನಡೆ ಏಕಾಏಕಿ ಆದದ್ದಲ್ಲ. ಹಲವಾರು ದಶಕಗಳಿಂದ ಪಾಕಿಸ್ತಾನ ಮೂಲದ ಭಯೋತ್ಪಾದನೆಯನ್ನು ಸಹಿಸಿ, ಸಾಕಷ್ಟು ಮಾತುಕತೆ, ಪರಸ್ಪರ ಪೂರಕ ವಾಣಿಜ್ಯ ಸಂಬಂಧ, ಕ್ರಿಕೆಟ್ ಪಂದ್ಯಾವಳಿ, ಸಂಜೋತಾ ಎಕ್ಸ್ಪ್ರೆಸ್ ರೈಲು, ಬಸ್ಸುಗಳ ಸಂಚಾರ, ಕಡೆಗೆ ಭಾರತದ ಪ್ರಧಾನಿ ದಿಢೀರನೆ ಪಾಕಿಸ್ತಾನದ ಪ್ರಧಾನಿಯ ಮನೆಗೆ ನೆಂಟರಂತೆ ಹೋಗಿ ಬಂದದ್ದೆಲ್ಲಾ ಶಾಂತಿಯನ್ನು ಏರ್ಪಡಿಸುವ ನಡೆಗಳೇ ಆಗಿದ್ದವು. ಅವೆಲ್ಲವುಗಳ ಕೊನೆಗೆ ಬಂದು ನಿಲ್ಲುವುದು ಆತ್ಮರಕ್ಷಣೆ.  ಇಲ್ಲಿ ತನ್ನ ಆತ್ಮರಕ್ಷಣೆಗಾಗಿ ನಾವು ನೀವೆಲ್ಲರೂ ಏನು ಮಾಡುತ್ತೇವೆಯೋ ಅದನ್ನೇ ರಾಷ್ಟ್ರಗಳೂ ತಮ್ಮ ಪ್ರಜೆಗಳ ರಕ್ಷಣೆಗೆ ಮಾಡಲೇಬೇಕು. ಅದು ರಾಷ್ಟ್ರೀಯ ಕರ್ತವ್ಯ. ಆದರೆ ಅದು ನ್ಯಾಯಯುತವೆನಿಸುವುದೇ ಇಲ್ಲವೇ ಎಂಬುದು ಪ್ರಮುಖವೇ ಹೊರತು ಭಾವೋದ್ವೇಗವಲ್ಲ.

ಪ್ರತಿಯೊಂದು ಕರ್ತವ್ಯಗಳಲ್ಲಿಯೂ ಅವುಗಳದೇ ಆದ ವಿಪತ್ತುಗಳಿರುತ್ತವೆ. ಹಾಗೆಯೇ ಸೈನಿಕನ ಕೆಲಸ ಕೂಡ ಅದರದೇ ಅದ ವಿಪತ್ತುಗಳನ್ನು ಹೊಂದಿದೆ. ಆ ವಿಪತ್ತುಗಳನ್ನೊಪ್ಪಿಕೊಂಡೇ ಜನರು ಸೈನ್ಯಕ್ಕೆ ಸೇರಿರುತ್ತಾರೆ. ಹಾಗಾಗಿ ಸೈನಿಕರ ಕೆಲಸದ ಬಗ್ಗೆ ಸೈನಿಕರಿಗೆ ಚಿಂತಿಸಲು ಬಿಟ್ಟು, ಸೈನಿಕರಲ್ಲದವರು ತಮ್ಮ ತಮ್ಮ ಕರ್ತ್ಯವ್ಯಗಳ ಕುರಿತು ಚಿಂತಿಸಲಿ.

ಆದರೆ ಇಲ್ಲಿ ಅತ್ಯಂತ ಕಳವಳಕಾರಿ ಸಂಗತಿಯೆಂದರೆ ಈ ಎಲ್ಲಾ ವಿಚಾರಗಳನ್ನು ತಿಳಿದಿಕೊಂಡಿರಬಹುದಾದ ಭಾರತದ  ಪಂಡಿತ ಪುರುಷೋತ್ತಮರುಗಳು ಒಂದು ಬಣವನ್ನು ಸೇರಿಕೊಂಡು ಸಮೂಹಸನ್ನಿಗೊಳಗಾಗಿರುವುದು. ಜನ ಮರುಳೋ ಜಾತ್ರೆ ಮರುಳೋ ಎಂಬಂತೆ ನಿಕೃಷ್ಟ ಅಭಿಪ್ರಾಯಗಳನ್ನು ಸಾಮಾಜಿಕ ತಾಣಗಳಲ್ಲಿ ಹರಿಯಬಿಡುತ್ತಿದ್ದಾರೆ. ಸಾಮರಸ್ಯ ಮೂಡಿಸುವ ನೆಪದಲ್ಲಿ ಇವರುಗಳೂ ಅಸಹಿಷ್ಣುತೆಯನ್ನೇ ಪಸರಿಸುತ್ತಿದ್ದಾರೆ.  ಒಟ್ಟಿನಲ್ಲಿ ರಾಯರ ಕುದುರೆಗಳು ಬರುಬರುತ್ತಾ ಕತ್ತೆಗಳಾಗಿ ಬೌದ್ಧಿಕ ದಿವಾಳಿತನ ಪ್ರದರ್ಶಿಸುತ್ತಿರುವುದು ಮಾತ್ರ ದಿಟ! ಇದರಲ್ಲಿ ಪ್ರಖ್ಯಾತ  ಮಾಧ್ಯಮಗಳಷ್ಟೇ ಅಲ್ಲದೆ ಸಾಕಷ್ಟು ಲೇಖಕರು, ಕವಿಪುಂಗವರು, ಪ್ರಗತಿಪರರು ಎಲ್ಲರದೂ ಸಮಪಾಲು ಸಮಬಾಳು!

ಇನ್ನು ಯುದ್ಧಗಳು ಯಾವಾಗ, ಏತಕ್ಕಾಗಿ ಮಾಡಬೇಕೆಂದು ನಿರ್ಧರಿಸಲು ಭಾರತ ಸೇನೆಗೆ ದಂಡನಾಯಕರುಗಳಿದ್ದಾರೆ,  ಮತ್ತವರು ಅದನ್ನು ಸಕಾಲವಾಗಿ ಸಕಾರಣವಾಗಿ ನಿರ್ಧರಿಸುತ್ತಾರೆ. ಸೈನ್ಯದ ಆ ನಿರ್ಧಾರವನ್ನು ಪ್ರಧಾನಿ ಯಾ ಅಧ್ಯಕ್ಷರು ಅನುಮೋದಿಸುತ್ತಾರೆಯೇ ಹೊರತು, ಪ್ರಧಾನಿ ಯಾ ಅಧ್ಯಕ್ಷರ ಯುದ್ಧ ನಿರ್ಧಾರವನ್ನು ಸೈನ್ಯ ಅನುಮೋದಿಸುವುದಿಲ್ಲ. ಈ ಹಿಂದಿನ ಸರ್ಕಾರಗಳಿಗೂ ಸೈನ್ಯ ಸೂಕ್ಷ್ಮ ಕಾಲಘಟ್ಟದಲ್ಲಿ ಯುದ್ಧಾನುಮತಿಯನ್ನು ಕೇಳಿದೆ ಮತ್ತು ಕೇಂದ್ರ ಆಡಳಿತಗಳು ಅನುಮತಿಸಿವೆ. ಇಲ್ಲಿ ಪ್ರಧಾನಿ ಮತ್ತು ಅಧ್ಯಕ್ಷರರುಗಳು ನಿಮಿತ್ತ ಮಾತ್ರ. ಹಾಗಾಗಿಯೇ ಕೆಲವು ಪ್ರಜಾಪ್ರಭುತ್ವಗಳು ಒಮ್ಮೊಮ್ಮೆ ಸೈನ್ಯದ ಕೈಗೊಂಬೆ ಕೂಡ ಆದ ನಿದರ್ಶನಗಳಿವೆ. ಇದಕ್ಕೆ ಉದಾಹರಣೆಯಾಗಿ ಇಂದಿನ ಪ್ರಮುಖ ವಿಷಯವಾಗಿರುವ ಪಾಕಿಸ್ತಾನ! ಒಮ್ಮೊಮ್ಮೆ ಪ್ರಜಾಪ್ರಭುತ್ಬ, ಒಮ್ಮೊಮ್ಮೆ ಸರ್ವಾಧಿಕಾರ, ಒಮ್ಮೊಮ್ಮೆ ಮಿಲಿಟರಿ ಆಡಳಿತಕ್ಕೆ ಒಳಗಾಗುತ್ತ ಪ್ರಮುಖವಾಗಿ ಭಯೋತ್ಪಾದನೆಯನ್ನೇ ಉದ್ದಿಮೆಯನ್ನಾಗಿ ಮಾಡಿಕೊಂಡಿರುವ ನೆರೆಯನ್ನು ಪ್ರಪಂಚದ ಇನ್ಯಾವ ದೇಶವಾಗಿದ್ದರೂ ಭಾರತದ ಇಂದಿನ ನಡೆಯನ್ನೇ ಅನುಮೋದಿಸುವುದು. ಅದನ್ನೇ ಸಾಕಷ್ಟು ರಾಷ್ಟ್ರಗಳು ಅನುಮೋದಿಸಿದ್ದು ಕೂಡ.

ಇಲ್ಲಿ ಸೈನ್ಯಕ್ಕೆ ಅನುಮತಿ ಕೊಡುವುದು ರಾಷ್ಟ್ರೀಯ ಭದ್ರತೆ ಎನಿಸುತ್ತದೆಯೇ ಹೊರತು ರಾಜಕೀಯವಲ್ಲ. ಆದರೆ ಸೈನ್ಯದ ಸಕಾರ್ಯಕ್ಕೆ ಅನುಮತಿಯನ್ನು ಪದೇ ಪದೇ ರಾಷ್ಟ್ರೀಯ ಭದ್ರತೆಯ ನೆಪದಲ್ಲಿ ನಿರಾಕರಿಸುವುದು ರಾಜಕೀಯವೆನಿಸುತ್ತದಲ್ಲದೇ ರಾಷ್ಟ್ರದ್ರೋಹ ಕೂಡ ಎನಿಸುತ್ತದೆ.

ಅಮೆರಿಕಾದ ಮೇಲಿನ 911 ಭಯೋತ್ಪಾದನೆಯ ದಾಳಿಗೆ ಪ್ರತ್ಯುತ್ತರವಾಗಿ ಅಮೆರಿಕಾದ ಸೈನ್ಯಕ್ಕೆ ಬುಷ್ ಅನುಮತಿಯನ್ನು ಕೊಟ್ಟಾಗ ಬುಷ್ ನ ಕಟು ವಿರೋಧಿಗಳೂ ಸೇರಿದಂತೆ ಇಡೀ ಅಮೆರಿಕಾ ಅವರನ್ನು ಬೆಂಬಲಿಸಿದ್ದಿತು. ಅಂತಹ ಒಂದು ಪ್ರಬುದ್ಧತೆಯನ್ನು ಪ್ರದರ್ಶಿಸದಂತೆ, ವೈಯಕ್ತಿಕ ತೆವಲು ಭಾರತೀಯರನ್ನು ತಡೆ ಹಿಡಿದುಬಿಟ್ಟಿದೆ. ಹಾಗಾಗಿಯೇ ದೇಶದ ಪ್ರಧಾನಿ ಯಾರಾದರೇನು ತನ್ನ ಸೊಸೆ ಅಥವಾ ಅಳಿಯ ತನ್ನ ಜಾತಿಯವಳೇ ಆಗಬೇಕೆನ್ನುತ್ತಾನೆ ಭಾರತೀಯ. ದೇಶ ಏನಾದರೇನು ನನ್ನ ಮನೆ ಮುಖ್ಯವೆನ್ನುತ್ತಾನೆ. ಅದೇ ಅಮೆರಿಕನ್ನನು ತನ್ನ ಹೆಂಡತಿ ಯಾವ ದೇಶದವಳಾದರೇನು, ನನ್ನ ಅಧ್ಯಕ್ಷ ನನ್ನ ದೇಶದಲ್ಲೇ ಹುಟ್ಟಿರಬೇಕೆನ್ನುತ್ತಾನೆ. ಇದು ರಾಷ್ಟ್ರಭಕ್ತಿಯಾಗಲಿ, ರಾಷ್ಟ್ರಪ್ರೇಮವಾಗಲಿ ಅಲ್ಲ. ಇದು ಪ್ರಜೆಯೊಬ್ಬ ತನ್ನ ರಾಷ್ಟ್ರಕ್ಕೆ ತೋರುವ ಬದ್ಧತೆ ಯಾ ನಿಷ್ಠೆ.

ಹಾಗಾಗಿ ಇದು ಪ್ರಧಾನಿಯ ನಿರ್ಧಾರವೆಂದು ಹೊಗಳುವ ಅಥವಾ ಹೀಗಳೆಯುವ ತೆವಲನ್ನು ಬಿಟ್ಟು ರಾಷ್ಟ್ರ ಹಿತಚಿಂತನೆ ನಮ್ಮದಾಗಲಿ.

ಇನ್ನು ಪಾಕಿಸ್ತಾನ ಭಾರತೀಯ ಯೋಧನನ್ನು ಸಾಮರಸ್ಯದ ಸಂಕೇತವಾಗಿ ಬಿಡುಗಡೆ ಮಾಡಿದ್ದುದು ಬೊಗಳೆಯ ಸಂಕೇತ. ಇಂತಹ ಬೊಗಳೆಗಳಿಗೆ ನೊಬೆಲ್ ಕೊಡಬೇಕೆನ್ನುವ ಬೌದ್ಧಿಕ ದಾರಿದ್ರ್ಯತೆ ಕೂಡ ನಿವಾರಣೆಯಾಗಬೇಕು. ಪಾಕಿಸ್ತಾನ, ಭಯೋತ್ಪಾದನೆಯ ವಿರುದ್ಧದ ಭಾರತದ ಹೋರಾಟಕ್ಕೆ ಜೊತೆಯಾಗಿ ಜಂಟಿಯಾಗಿ ಹೋರಾಡುತ್ತೇನೆ ಎನ್ನವುದು ಸಾಮರಸ್ಯ. ಇಂತಹ ಸಾಮರಸ್ಯವನ್ನು ಪಾಕಿಸ್ತಾನ ತೋರಿದರೆ ಅದು ನೊಬೆಲ್ ಪ್ರಶಸ್ತಿಗೆ ಅರ್ಹ.