ಕೊಳಲ ಕೈ ಹಿಡಿದು! ಕೃತಿಯ ಮುನ್ನುಡಿ

 The first step towards getting somewhere is to decide that you are not going to stay where you are. – JP Morgan 


ಎಲ್ಲಿಗೋ ಸಾಗಲು ಹಾಕುವ ಪ್ರಥಮ ಹೆಜ್ಜೆ, ಎಲ್ಲಿರುವೆನೋ ಅಲ್ಲಿರಲಾರೆ ಎಂದರಿಯುವುದು - ಜಾನ್ ಪಿಯರ್ಪಾಂಟ್ (ಜೆಪಿ) ಮೋರ್ಗನ್.


ನಾಡಿನ ಖ್ಯಾತ ಚಿಂತಕರಾದ ಅರವಿಂದ ಚೊಕ್ಕಾಡಿಯವರು ಬರೆದ ನಮ್ಮ ನಡುವಿನ ಅಪೂರ್ವ ರಾಜತಾಂತ್ರಿಕರಾದ ಅಣ್ಣಾ ವಿನಯಚಂದ್ರ ಅವರ ವ್ಯಕ್ತಿ ಚಿತ್ರಣ "ಕೊಳಲ ಕೈ ಹಿಡಿದು" ಕೃತಿಗೆ ಬರೆದ ನನ್ನ ಮುನ್ನುಡಿ. ಭಾರತಕ್ಕೆ ಇಂದು ಬೇಕಿರುವುದು ಇಂತಹ ರಾಜತಾಂತ್ರಿಕರೇ ಹೊರತು ರಾಜಕಾರಣಿಗಳಲ್ಲ.


ಮುನ್ನುಡಿ:

ವಲಸೆ ಮಾನವನ ಮೂಲ ಗುಣ. ಮೊದಲಿಗೆ ಆಹಾರವನ್ನು ಹುಡುಕುತ್ತಾ ಸಾಗಿದ ಮಾನವ ನಾಗರೀಕತೆ ಬೆಳೆದಂತೆ ತನ್ನ ಮೂಲಭೂತ ವಲಸೆಯ ಗುಣಕ್ಕೆ ಆರ್ಥಿಕ, ಭೌಗೋಳಿಕ, ಹವಾಮಾನದಂತಹ ಭೌತಿಕಾರ್ಥ ಕಾರಣಗಳನ್ನು ಕಂಡುಕೊಳ್ಳುತ್ತ ಮುಂದೆ ಬೌದ್ಧಿಕ, ಧಾರ್ಮಿಕ ಮತ್ತು ಮಾನವಿಕದಂತಹ ಆಧ್ಯಾತ್ಮಿಕ ಕಾರಣಗಳಿಗಾಗಿ ವಲಸೆಯ ಪರಿಹಾರವನ್ನು ಕಂಡುಕೊಂಡ. ಇಂತಹ ಒಂದು ಧಾರ್ಮಿಕ ಪಲ್ಲಟದ ಸಂಕಟದ ವಲಸೆಯ ಇತಿಹಾಸ ನನ್ನದೂ ಸಹ. ಬಿಜಾಪುರದ ಸುಲ್ತಾನ ಆದಿಲ್ ಶಾಹಿ ಕಾಲದಲ್ಲಿ ಬಿಜಾಪುರದ ಇಂದಿನ ಇಂಡಿ ತಾಲ್ಲೂಕಿನ ಹಂಜಗಿ ಗ್ರಾಮದಿಂದ ದಾವಣಗೆರೆ ಸಮೀಪದ ಎಳೆಹೊಳೆ ಗ್ರಾಮಕ್ಕೆ ವಲಸೆ ಬಂದ ನನ್ನ ಕುಟುಂಬವು ಅಂತಿಮವಾಗಿ ದಾವಣಗೆರೆಯಲ್ಲಿ ನೆಲೆಗೊಂಡಿತು.


ನನ್ನ ಪೂರ್ವಜರ ರೀತಿಯೇ ಒಂದು ಧಾರ್ಮಿಕ ಪಲ್ಲಟದ ಸಂಕಟ ಸಮಯದಲ್ಲಿ ಹೇರಿಕೆಯನ್ನು ತಿರಸ್ಕರಿಸಿ ಗೋವೆಯ ಕುಟುಂಬವೊಂದು ಕೇರಳಕ್ಕೆ ವಲಸೆ ಬಂದು ಕ್ರಮೇಣವಾಗಿ ದಕ್ಷಿಣ ಕನ್ನಡದಲ್ಲಿ ನೆಲೆಗೊಂಡಿತು. ಈ ಕುಟುಂಬದ ಕುಡಿ ಶಂಕರ ನಾಯಕ್ ರು ಮಹಾತ್ಮ ಗಾಂಧಿಯವರ ಪ್ರಭಾವ ಮತ್ತು ವಂಶವಾಹಿನಿಯಾಗಿ ತಮ್ಮಲ್ಲಿ ಬಂದಿದ್ದ ಪ್ರತಿರೋಧದ ಗುಣದಿಂದಾಗಿ ತಮ್ಮ ಸರ್ನೇಮ್ ಆಗಿ ಅಂಟಿಕೊಂಡಿದ್ದ ಜಾತಿಸೂಚಕ ಪದ "ನಾಯಕ್" ಅನ್ನು ಪ್ರತಿರೋಧಿಸಿ ತೆಗೆದು "ರಾವ್" ಎಂದು ಸೇರಿಸಿಕೊಂಡು ಶಂಕರ ರಾವ್ ಆಗಿ ಸಾಮಾಜಿಕ ಚಿಂತನೆ ಮತ್ತು ಸೇವೆಯನ್ನು ತಮ್ಮ ಧ್ಯೇಯವಾಗಿಸಿಕೊಳ್ಳುತ್ತಾರೆ. ಹೀಗೆ ನವಚೈತನ್ಯವನ್ನು ರೂಢಿಸಿಕೊಂಡ ತಂದೆಯ ಪ್ರತಿರೋಧದ ಗುಣವು ನವೀಕೃತಗೊಂಡು "ರಾವ್" ಎಂಬುದು ಸಹ ಮೇಲರಿಮೆಯ ಪದವೆನಿಸಿ ಅವರ ಪುತ್ರರಾದ ಕ್ರಿಯಾಶೀಲ ವಿನಯಚಂದ್ರರು "ರಾವ್" ಸರ್ನೇಮಿಗೂ ತಿಲಾಂಜಲಿ ಇಡುತ್ತಾರೆ. ಇಂತಹ ಒಂದು ಪ್ರತಿರೋಧ, ಸಾಮಾಜಿಕ ಚಿಂತನೆ, ಜೀವಪರ ಕಾಳಜಿ, ಹೊಸತನಕ್ಕೆ ತೆರೆದುಕೊಳ್ಳುವಿಕೆಯ ಎಲ್ಲಾ ಮಾನವಿಕ ಗುಣಗಳಿಗೂ ಮಾನವ ಸಹಜ ಮೂಲಭೂತ ಗುಣವಾದ ವಲಸೆಯೇ ಕಾರಣ. ಅದಕ್ಕಾಗಿಯೇ ಇರುವ ಗಾದೆ ಮಾತು, "ದೇಶ ಸುತ್ತು, ಕೋಶ ಓದು!" ದೇಶ ಸುತ್ತುವ ಗುಣ, ಕೋಶವನ್ನು ಓದಿಸಿಯೇ ಓದಿಸುತ್ತದೆ. ಓದಿಸುವ ತನಕ ಓಡಿಸುತ್ತಲೇ ಇರುತ್ತದೆ.


ವಿನಯಚಂದ್ರರಂತೆಯೇ ನಾನೂ ಸಹ ನನ್ನ ಜಾತಿಸೂಚಕ "ಹಂಜಗಿಮಠ" ಹೆಸರನ್ನು "ಹಂಜ್" ಆಗಿಸಿಕೊಂಡದ್ದು ಈ ಕೃತಿ ನನ್ನೊಂದಿಗೆ ಮತ್ತಷ್ಟು ಆಪ್ತವಾಗಿ ಬೆಸೆದುಕೊಳ್ಳಲು ಕಾರಣ. ಹೀಗೆ ಜಾತಿಸೂಚಕ ಹೆಸರುಗಳನ್ನು ಕಿತ್ತೆಸೆಯುವ ಪ್ರಗತಿಪರತೆ ಕಳೆದ ಎರಡು ತಲೆಮಾರುಗಳಲ್ಲಿ ಕ್ರಾಂತಿಯೋಪಾದಿಯಲ್ಲಿ ಮೂರ್ತಗೊಂಡಿತ್ತು. ವಿಪರ್ಯಾಸವೆಂಬಂತೆ ಇಂದು ಯಾವ ವರ್ಗ ತಮ್ಮನ್ನು ತಾವು ಉದಾರಿಗಳು, ಪ್ರಗತಿಪರರು ಎಂದು ಕರೆದುಕೊಳ್ಳುವರೋ ಅವರಿಂದಲೇ ಜಾತಿವಾದವು ಅಸ್ಮಿತೆಯ ರೂಪ ಪಡೆದುಕೊಂಡು ಕರ್ನಾಟಕದ ಆಟೋರಿಕ್ಷಾ, ಕಾರು, ಬೈಕುಗಳ ಮೇಲೆಲ್ಲಾ ಅವುಗಳ ಒಡೆಯರ ಜಾತಿ ರಾರಾಜಿಸುತ್ತಿದೆ. ಅದು ಭಾರತದ ಉದಾರವಾದದ ಅಧೋಮುಖ ಪ್ರಗತಿಯ ಸಂಕೇತ.


ಇರಲಿ, ವಿನಯಚಂದ್ರರ ಪೂರ್ವಿಕರ ಮತ್ತು ನನ್ನ ಪೂರ್ವಿಕರ ವಲಸೆಯ ಹಿಂದೆ ಧಾರ್ಮಿಕ ಹಕ್ಕು ಪ್ರಮುಖ ಕಾರಣವಾಗಿತ್ತು. ಇಲ್ಲಿ ಧಾರ್ಮಿಕ ಸ್ವಾತಂತ್ರ್ಯ ಬೇರೆ ಮತ್ತು ಧಾರ್ಮಿಕ ಹೇರಿಕೆ ಬೇರೆ. ಇಂತಹ ಸ್ವಾತಂತ್ರ್ಯವನ್ನು ಬಯಸಿ ಮತ್ತು ಹೇರಿಕೆಯನ್ನು ವಿರೋಧಿಸಿಯೇ ಯುರೋಪ್ ಕ್ರಾಂತಿಯಲ್ಲದೆ ಸಾಗರೋಪಾದಿಯಲ್ಲಿ ಯುರೋಪಿಯನ್ನರು ಅಮೆರಿಕೆಗೆ ವಲಸೆ ಬಂದದ್ದು, ಅಮೇರಿಕಾದ ಸಂವಿಧಾನವಲ್ಲದೆ ಅಂಬೇಡ್ಕರರೂ ಸಹ ಧಾರ್ಮಿಕ ಹಕ್ಕನ್ನು ಭಾರತದ ಸಂವಿಧಾನದಲ್ಲಿ ಮೂಲಭೂತ ಹಕ್ಕನ್ನಾಗಿಸಿದ್ದುದು!


ಹಾಗಾಗಿ ತನ್ನ, "ಕೊಳಲ ಕೈ ಹಿಡಿದು" ಶೀರ್ಷಿಕೆಗೆ ತಕ್ಕಂತೆ ಅಣ್ಣಾ ವಿನಯಚಂದ್ರರ ಜೀವನಗಾಥೆಯ ಒಂದು ಮಾರ್ಗಸೂಚಿಯಂತಿರುವ ಈ ಕೃತಿ ತಕ್ಷಣಕ್ಕೆ ನನ್ನೊಂದಿಗೆ ಬೆಸೆದುಕೊಂಡಿತು. ಯಾವ ಕೃತಿ ತನ್ನ ಓದುಗನೊಂದಿಗೆ ಬೆಸೆದುಕೊಂಡು, "ಅರೆ, ಇದು ನನ್ನದೇ ಕತೆಯಂತಿದೆಯಲ್ಲ!" ಎನಿಸಿ ಓದುಗನೊಂದಿಗೆ ಒಂದು ಅವಿನಾಭಾವ ಸಂಬಂಧವನ್ನು ಬೆಸೆಯುವುದೋ ಆಗಲೇ ಆ ಕೃತಿಗೆ ಸಾರ್ಥಕತೆ ಬಂದುಬಿಡುತ್ತದೆ. ಇಂತಹ "ಕಥನ-ಓದುಗ" ಸಂಯೋಗದ ಸಂಬಂಧ ಕೇವಲ ನನ್ನೊಟ್ಟಿಗಲ್ಲದೆ ಎಲ್ಲಾ ಓದುಗರಿಗೂ ಈ ಕೃತಿಯು ಒಂದಲ್ಲಾ ಒಂದು ಕಾರಣದಿಂದ ಬೆಸೆಯುತ್ತದೆ. ಇದಕ್ಕೆ ಪ್ರಮುಖ ಕಾರಣ ವಲಸೆಯಲ್ಲದೆ ಕೃತಿಯಲ್ಲಿ ಬಿಂಬಿತವಾಗಿರುವ ಮಾನವನ ಇತರೆ ಮೂಲಭೂತ ಗುಣಗಳಾದ ಸಾಮಾಜಿಕ, ಮಾನವೀಯ, ಸಹಜೀವನ, ಸಂಘಟನೆಗಳಲ್ಲದೆ ಬೌದ್ಧಿಕ ಚಿಂತನೆಯ ನೈತಿಕತೆ, ಧಾರ್ಮಿಕತೆ, ಬದ್ಧತೆಯಂತಹ ಗುಣಗಳ ವ್ಯಕ್ತಿ ಚಿತ್ರಣವು ಯಾವುದೇ ಸಹಮಾನವ ಓದುಗನಿಗೆ ಸ್ವಾಭಾವಿಕವಾಗಿ ಅತ್ಯಂತ ಆಪ್ಯಾಯಮಾನ ಎನಿಸುವುದೇ ಆಗಿದೆ.


ಅಂತಹ ಅವಿನಾಭಾವ ಸಾರ್ಥಕತೆಯ ಕೃತಿ, "ಕೊಳಲ ಕೈ ಹಿಡಿದು!"


ಈ ಕೃತಿಯನ್ನು ಲೇಖಕರಾದ ಅರವಿಂದ ಚೊಕ್ಕಾಡಿಯವರು ಅಣ್ಣಾ ವಿನಯಚಂದ್ರರಾಗಿ ಪರಕಾಯಪ್ರವೇಶ ಮಾಡದೆ, ಅನತಿ ದೂರದಲ್ಲಿ ನಿಂತು ಸ್ಥಿತಪ್ರಜ್ಞ ಭಾವದಿಂದ ಅಣ್ಣಾ ವಿನಯಚಂದ್ರರ ಸ್ಥಿತಪ್ರಜ್ಞ ವ್ಯಕ್ತಿತ್ವವನ್ನು ಕಟ್ಟಿಕೊಟ್ಟಿದ್ದಾರೆ. ವಿನಯಚಂದ್ರರಂತಹ ಸಾಧಕರ ಜೀವನ ಚಿತ್ರಣವನ್ನು ಕಟ್ಟಿಕೊಡುವಾಗ ಪರಕಾಯ ಪ್ರವೇಶ ಸಾಕಷ್ಟು ಬಾರಿ ಭಾವಾವೇಶಗಳಿಗೆ ಎಡೆಮಾಡಿ ಕೃತಿಯನ್ನು ಬೇರೆಯದೇ ಆಯಾಮಕ್ಕೆ ಕೊಂಡೊಯ್ಯುತ್ತದೆ. ಹಾಗಾದಾಗ ಹೊರಬರುವ ಸಾಧ್ಯತೆಗಳು ಎರಡಿವೆ. ಒಂದು, ಅಮೋಘ ಜೀವನ ಚರಿತ್ರೆ, ಮತ್ತೊಂದು ವಿನೀತಭಾವದ ಜಯಜಯ ಘೋಷ! ಇಲ್ಲಿ ಅರವಿಂದ ಚೊಕ್ಕಾಡಿಯವರು ಸಾವಧಾನದ ಸ್ಥಿತಪ್ರಜ್ಞರಾಗಿ ವಾಸ್ತವಿಕ ವ್ಯಕ್ತಿತ್ವ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ. ವಾಸ್ತವ ಹಿನ್ನೆಲೆಯ ಸ್ಥಿತಪ್ರಜ್ಞ ವೈಚಾರಿಕ ಬರಹಗಳಿಗೆ ನಾಡಿನಾದ್ಯಂತ ಹೆಸರುವಾಸಿಯಾದ ಅರವಿಂದ ಚೊಕ್ಕಾಡಿಯವರು ಇಲ್ಲಿಯೂ ತಮ್ಮ ಛಾಪನ್ನು ಕಾಪಿಟ್ಟುಕೊಂಡಿದ್ದಾರೆ. ಅದಕ್ಕಾಗಿ ಅರವಿಂದ ಚೊಕ್ಕಾಡಿಯವರು ಅಭಿನಂದನಾರ್ಹರು.


ವ್ಯಕ್ತಿ ಚಿತ್ರಣದಲ್ಲಿ ಆ ವ್ಯಕ್ತಿಯ ಸುತ್ತಲಿನ ಪರಿಸರದ ಚಿತ್ರಣ ಸಹ ಅತ್ಯಂತ ಅನಿವಾರ್ಯ. ಹಾಗಾಗಿ ಅದಕ್ಕೆ ಪೂರಕವಾಗಿ,


- ಕರಾವಳಿಯ ಭೌಗೋಳಿಕ ಚಿತ್ರಣವಲ್ಲದೆ ನೇಜಿ ಮಾಡುವಾಗ ಹಾಡುವ ಹಾಡುಗಳು ಮತ್ತು ಆ ಹಾಡುಗಳಲ್ಲಿರುವ ಸಾಮಾಜಿಕ ಚಿಂತನೆಗಳ ಚಿತ್ರಣವಿದೆ. ಘಟ್ಟಕ್ಕೆ ಕೆಲಸಕ್ಕೆ ಹೋಗಬೇಕಾದ ಆರ್ಥಿಕ ಸಂಕಷ್ಟ, ಘಟ್ಟದ ಮೇಲಿನ ಚಳಿ, ದುಡಿಯುವ ಅನಿವಾರ್ಯವಿದ್ದರೂ ಕಂಬಳಿ ಇಲ್ಲದ ಕಾರಣಕ್ಕೆ ಘಟ್ಟದ ಮೇಲೆ ಹೋಗಲಾಗದ ತೊಳಲಾಟಗಳ ಸೂಕ್ಷ್ಮ ಪರಿಚಯವಿದೆ. 


- ಸಾಮಾಜಿಕವಾಗಿ ಬಾಲ್ಯವನ್ನು ಪ್ರಮುಖವಾಗಿ ಪ್ರಭಾವಿಸುವ ಶಾಲೆ ಮತ್ತು ಶಿಕ್ಷಕರ ಸ್ಮರಣೆ ಇದೆ. ವಿನಯಚಂದ್ರರ ಶಿಕ್ಷಕರಾದ ಸಕರಾಮರಾವ್ ಅವರು ಹೇಳಿದ್ದ ಸಾಹಸಮಯ ಕತೆಗಳು, ಶೇಷಾಚಲಂ ಹೂಡೆ ಅವರ ಎನ್ ಸಿ ಸಿ ತರಬೇತಿ, ಶಾಲೆಯಲ್ಲಿ ಆಡಿದ ಕ್ರಿಕೆಟ್ ಆಟೋಟ, ಪಾಠೋಕ್ತಿ ಇವೆಲ್ಲವೂ ವಿನಯಚಂದ್ರರ ಮೇಲೆ ಪರಿಣಾಮಕಾರಿ ಪ್ರಭಾವ ಬೀರಿ ಅವರ ಜೀವನವನ್ನು ರೂಪಿಸಿದ ಉಲ್ಲೇಖಗಳಿವೆ.


- ಸಮಾಜೋಧಾರ್ಮಿಕ ಉತ್ಸವವಾಗಿ ಆರಂಭಗೊಂಡ ಬೆಳ್ಳಾರೆಯ ಗಣೇಶೋತ್ಸವ, ಮುಂದೆ ಗಣೇಶೋತ್ಸವವು ಟಿಸಿಲೊಡೆದು ಶಾರದೋತ್ಸವ, ಸಾಯಿಬಾಬಾ ಮತ್ತು ಸುಬ್ರಹ್ಮಣ್ಯ ಭಜನಾ ಮಂಡಳಿಗಳಾದರೂ ಅವೆಲ್ಲವೂ ಒಂದಾಗಿ ಬಾಲ ವಿನಯಚಂದ್ರರ ಸಂಗೀತ ಆಸಕ್ತಿಗೆ ಪೋಷಣೆ ನೀಡಿದ ಹೊಳಹಿದೆ.


- ಬೆಳ್ಳಾರೆಯ ಗಣೇಶೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ತಮಿಳರು ಬರುತ್ತಿದ್ದರು ಎನ್ನುವ ಕೃತಿಯಲ್ಲಿನ ಮಾತು ಕೆಲವರಿಗೆ ಕರಾವಳಿಯಲ್ಲಿ ತಮಿಳರು ಹೇಗೆ ಬಂದರು ಎಂಬ ಪ್ರಶ್ನೆಯನ್ನು ಮೂಡಿಸಬಹುದು. ಅದಕ್ಕೆ ಉತ್ತರವಾಗಿ ತಮಿಳರು ಕರಾವಳಿಗೆ ಶ್ರೀಲಂಕಾದಿಂದ ನಿರ್ವಸತಿಗರಾಗಿ ವಲಸೆ ಬಂದಿದ್ದರು ಎಂಬ ಮತ್ತೊಂದು ಕುತೂಹಲಕರ ವಲಸೆಯ ಕತೆಯು ಕೃತಿಯಾಚೆಗಿನ ಓದುಗರ ಹುಡುಕಾಟಕ್ಕೆ ಸಿಗುವುದು.


ಒಟ್ಟಾರೆ ಹೀಗೆ ಕೌಟುಂಬಿಕವಾಗಿ ಮತ್ತು ಸಾಮಾಜಿಕವಾಗಿ ಸಂಘಜೀವಿಯಾಗುತ್ತ ಬೆಳೆದ ವಿನಯಚಂದ್ರರನ್ನು ಸ್ವಾಭಾವಿಕವಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಆಕರ್ಷಿಸಿರಬಹುದು. ಆ ಆಕರ್ಷಣೆ ಕೊಳಲ ರೂಪವಾಗಿ ಸಾಂಕೇತಿಕ ರೂಪಕವಾಗಿರುವುದು ಕೃತಿಯ ಶೀರ್ಷಿಕೆಯ ವಿಶೇಷ. 


ಅವರ ಹಾಸ್ಟೆಲ್ ಜೀವನ ಮತ್ತದರ ಉಸ್ತುವಾರಿಯಲ್ಲಿ ಉತ್ತಮ ದಿನಸಿಗಳನ್ನು ಆಯುವ ಬಗೆಯನ್ನು ಕಲಿತಿದ್ದ ವಿನಯಚಂದ್ರರಿಗೆ ಜೀವನೋಪಾಯಕ್ಕೆ ಸಹಜವಾಗಿ ದಿನಸಿ ವ್ಯಾಪಾರ ಸೂಕ್ತ ಎನಿಸಿರಬಹುದು. ಹಾಗಾಗಿ ಅದರಲ್ಲಿ ತೊಡಗಿದಾಗಲೂ ಗುಣಮಟ್ಟದೊಂದಿಗೆ ರಾಜೀ ಆಗದೆ ತಮ್ಮ ವ್ಯಾಪಾರದಲ್ಲಿ ಸೂಕ್ತ ಬದಲಾವಣೆ ತಂದು ಯಶಸ್ವಿಯಾದರು. ಆದರೆ ಅವರ "ವ್ಯಾಪಾರವೂ ಜನಸೇವೆ" ಎಂಬ ನಿಲುವು ಕ್ರಮೇಣ ಅವರ "No profit no loss" ಸೂತ್ರದಿಂದ ವ್ಯಾಪಾರವನ್ನು ನಷ್ಟಕ್ಕೆ ತಿರುಗಿಸಿತು. ಮುಂದೆ ಅಪಘಾತವಾಗಿ ಸುಧಾರಿಸಿಕೊಂಡು ಬಂದು ತಮ್ಮ "ಭಾರತ್ ಟ್ರೇಡರ್ಸ್" ಛಾಪನ್ನು ಸುಳ್ಯದ ಉತ್ತಮ ಗುಣಮಟ್ಟದ ವಸ್ತುಗಳನ್ನು ನ್ಯಾಯಬೆಲೆಗೆ ಒದಗಿಸುವ ಮತ್ತು ನೈತಿಕ ವ್ಯಾಪಾರಕ್ಕೆ ಹೆಸರುವಾಸಿಯಾಗುವಂತೆ ಜನಸ್ನೇಹಿ ಆಗಿಸಿದರು. ಇವರ ಈ ಕಟ್ಟುವಿಕೆ ಸುಳ್ಯದ ದಿನಸಿ ವ್ಯಾಪಾರಸ್ಥರಲ್ಲಿ ಒಂದು ಬದ್ಧತೆಯನ್ನು ಹುಟ್ಟುಹಾಕಿ ಜನರಿಗೆ ಗುಣಮಟ್ಟದ ವಸ್ತುಗಳು ಸೂಕ್ತ ಬೆಲೆಗೆ ಸಿಗುವಂತೆ ಆಗಲು ಅವರ ಸಂಘ ಜೀವನ, ಬದ್ಧತೆ, ಸಾಮಾಜಿಕ ಕಳಕಳಿ, ಮತ್ತು ನಿಷ್ಠೆಯೇ ಕಾರಣವಾಗಿವೆ.  


ಸುಳ್ಯದ ವ್ಯಾಪಾರೀ ನೀತಿಗಳು, ಮತ್ತು ಅದನ್ನು ಬದಲಿಸಲು ಅಣ್ಣಾ ವಿನಯಚಂದ್ರರು ಮಾಡಿದ ಪ್ರಯತ್ನಗಳು ನನ್ನನ್ನು ಶಿವಮೊಗ್ಗದ ಶಿವಪ್ಪನಾಯಕ ಮಾರುಕಟ್ಟೆಯ ನಮ್ಮಜ್ಜನ ದಿನಸಿ ಅಂಗಡಿಯಲ್ಲಿ ಕುಳಿತು ನಾನು ವ್ಯಾಪಾರ ಮಾಡುತ್ತಿದ್ದ ದಿನಗಳನ್ನು ಕಣ್ಮುಂದೆ ತಂದವು. ಮಾರುಕಟ್ಟೆಯಲ್ಲಿನ ವ್ಯಾಪಾರೀ ಉದ್ದೇಶದ ಬಣಗಳು ಅವುಗಳಲ್ಲಿನ ಪರಸ್ಪರ ಒಳಒಪ್ಪಂದ, ಒಪ್ಪಂದಗಳನ್ನು ಮೀರಿದಾಗ ತಂದೊಡ್ಡಬಲ್ಲ ಲುಕ್ಸಾನು ಎಲ್ಲವೂ ನೆನಪಾದವು. ಈ ವ್ಯಾಪಾರೀ ಬಣಗಳು ಒಂದು ರೀತಿಯ ಮಾಫಿಯಾ ಬಣಗಳಂತೆಯೇ ಇದ್ದವು. ಮಾಫಿಯಾ ಎಂದರೆ ಅದು ನಿಷೇಧಿತ, ಹಾಗಾಗಿಯೇ ಈಗ ಆ ಬಣಗಳು ನೋಂದಾಯಿತ ಸಂಘಗಳಾಗಿ ಒಪ್ಪಿತವಾಗಿವೆ! ಒಟ್ಟಾರೆ ಇಂತಹ ಸಂಘಟಿತ ಬಣಗಳನ್ನು ಛಲ ಬಿಡದೆ ವಿನಯಚಂದ್ರರು ಬದಲಾಯಿಸಿದ್ದು ಸಾಹಸವೇ ಸರಿ. ಜೀವನ ಸಂಘರ್ಷದ ಅನುಭವದ ಹಿನ್ನೆಲೆಯ ಯಾವುದೇ ವ್ಯಕ್ತಿಗೂ ಹೀಗೆ ಕೃತಿಯು ಆಪ್ತವಾಗುತ್ತ ಸಾಗುತ್ತದೆ. ಅನುಭವವಿರದವರಿಗೆ ಜೀವನವು ಹೀಗೂ ಇರುತ್ತದೆ ಎಂಬ ಅರಿವನ್ನು ಮೂಡಿಸಿ ಆಪ್ತವಾಗುತ್ತದೆ. ಸುಳ್ಯದ ವ್ಯಾಪಾರೀ ವಲಯದಲ್ಲಿ ವಿನಯಚಂದ್ರರು ತಂದ ಇಂತಹ ಬದಲಾವಣೆ ಸುಲಭದ್ದಲ್ಲ, ಅದು ಅತ್ಯಂತ ಸಂಘರ್ಷಣೀಯ ಬದಲಾವಣೆ ಎನ್ನುವುದು ವ್ಯಾಪಾರೀ ಹಿನ್ನೆಲೆಯವರಿಗೆ ಮಾತ್ರ ಅರಿವಾಗುವ ಅಂಶ.


ಯಾವ ಧಾರ್ಮಿಕ ಹೇರಿಕೆಯ ಸರ್ವಾಧಿಕಾರಿ ಧೋರಣೆಯನ್ನು ಧಿಕ್ಕರಿಸಿ ವಲಸೆ ಬಂದಿದ್ದರೋ ಅದೇ ಧಿಕ್ಕಾರ ಮತ್ತು ಸರ್ವಾಧಿಕಾರ ಮುಖಾಮುಖಿಯಾಗಿ ವಿನಯಚಂದ್ರರನ್ನು ಸಂಸ್ಥಾ ಕಾಂಗ್ರೆಸ್ಸಿನಿಂದ ಇಂದಿರಾ ಕಾಂಗ್ರೆಸ್ಸಿಗೆ ಬದಲಾಗಿ ಜನಸಂಘಕ್ಕೆ ವಲಸೆ ತರುತ್ತದೆ. ಪಕ್ಷ ಬದಲಾದರೂ ಧೋರಣೆ ಅದೇ ಬಂಡಾಯದ್ದಾಗಿರುತ್ತದೆ. ಚುನಾವಣಾ ಅಕ್ರಮ, ಸರಕಾರಿ ಯಂತ್ರಗಳ ದುರ್ಬಳಕೆಯಿಂದ ಗೆದ್ದಿದ್ದ ಇಂದಿರಾ ಗಾಂಧಿಯವರ ಸದಸ್ಯತ್ವ ಅನೂರ್ಜಿತವಾಗಿ ತಪ್ಪಿತಸ್ಥರೆಂದು ಘೋಷಣೆಯಾದರೂ ಪ್ರಧಾನಮಂತ್ರಿಯಾಗಿ ಮುಂದುವರಿಯಲು ಅವಕಾಶ ಸಿಕ್ಕಿ ತುರ್ತುಪರಿಸ್ಥಿತಿ ಜಾರಿಯಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ತಮ್ಮ ನಿಲುವು, ಸಾಮಾಜಿಕ ಕಳಕಳಿ ಮತ್ತು ಬದ್ಧತೆಯನ್ನು ವಿನಯಚಂದ್ರರು ಹೇಗೆ ನಿಭಾಯಿಸಿದರು ಎಂಬ ನಿರೂಪಣೆ ಇಂದಿನ ಯುವಕರಿಗೆ ಮಾದರಿಯಾಗಿದೆ.


ಕರಾವಳಿಯ ಅತ್ಯಂತ ನೈತಿಕ, ಸಾಮಾಜಿಕ ಕಳಕಳಿಯ ಹೋರಾಟಗಾರರು ಹೇಗೆ ಸಂಸ್ಥಾ ಕಾಂಗ್ರೆಸ್, ಜನಸಂಘ, ಜನತಾ ಪಕ್ಷ ನಂತರ ಭಾರತೀಯ ಜನತಾ ಪಕ್ಷವಾಗಿ ಎಲ್ಲಾ ಧರ್ಮದ ಜನರನ್ನೂ ಒಳಗೊಂಡು ವಿಕಾಸ ಹೊಂದುತ್ತಾ ಇದ್ದುದು ಡಾ. ಚಿತ್ತರಂಜನ್ ಅವರ ಕೊಲೆಯ ನಂತರ ಹೇಗೆ ಇಂದಿನ ಕರಾವಳಿಯಾಗಿ ವಿಕಾಸ ಹೊಂದಿತು ಎಂಬ ಪರೋಕ್ಷ ನೈಜ ಚಿತ್ರಣದ ಕುರುಹಿದೆ. ಎಲ್ಲಿಯೂ ಉತ್ಪ್ರೇಕ್ಷೆ ಇಲ್ಲದೆ ಅತ್ಯಂತ ಸಹಜವಾಗಿ ಹೇಗೆ ರಾಜಕೀಯ ಮತ್ತು ಸಾಮಾಜಿಕ ಸ್ಥಿತ್ಯಂತರಗಳು ಕರಾವಳಿಯನ್ನು ಪಲ್ಲಟಿಸಿದವು ಎಂಬ ಸೂಕ್ಷ್ಮ ದಿಕ್ಸೂಚಿ ಚಿತ್ರಣವಿದೆ. ಕರಾವಳಿಯ ರಾಜಕೀಯ ಮತ್ತು ಸಾಮಾಜಿಕ ಪಲ್ಲಟದ ಕುರಿತಾಗಿ ಸಂಶೋಧನೆಗೆ ತೊಡಗುವವರಿಗೆ ಈ ಕೃತಿಯು ಒಂದು ಮಾರ್ಗದರ್ಶಿ ಕೈಪಿಡಿಯಾಗಬಲ್ಲದು. ಈ ಪಲ್ಲಟವು ಕೇವಲ ಕರಾವಳಿಯಲ್ಲದೇ ಇಡೀ ದೇಶಕ್ಕೆ ದೇಶವೇ ಹೇಗೆ "ರಘುಪತಿ ರಾಘವ ರಾಜಾರಾಂ" ಎಂಬ ಆಧ್ಯಾತ್ಮಿಕ ಸಾತ್ವಿಕತೆಯಿಂದ "ಜೈ ಶ್ರೀರಾಮ್" ಎಂಬ ಭೌತಿಕ ತಾತ್ವಿಕತೆಗೆ ಪಲ್ಲಟಗೊಂಡಿತು ಎಂಬ ಒಂದು ಅತ್ಯಂತ ಸೂಕ್ಷ್ಮ ಹೊಳಹನ್ನು ಇಲ್ಲಿ ಕಾಣಬಹುದು. 


ಏಕೆಂದರೆ ಇಂದು ಓಲೈಕೆಯ ಮಹಾಪೂರದಲ್ಲಿ ಕೊಚ್ಚಿಹೋಗಿರುವ ಭಾರತೀಯ ಎಡಪಂಥೀಯರು ಪದೇ ಪದೇ "ಬುದ್ದಿವಂತ"ರ ಕರಾವಳಿಯು ಹಿಂದುತ್ವದ ಕುಲುಮೆಯಾಗಿದೆ ಎಂದು ಕರಾವಳಿಗೆ ಕರಾಳತೆಯ ಬಣ್ಣ ಬಳಿಯುತ್ತಲೇ ಇದ್ದಾರೆ. ಕರಾವಳಿಯಲ್ಲಿ ಜನಸಂಘ ಎಂದಿನಿಂದಲೂ ಇದ್ದಾಗ ಅಂದಿರದ ಈ ಪರಿಸ್ಥಿತಿ ಇಂದೇಕೆ ಇದೆ?


ಭಟ್ಕಳದಂತಹ ಕ್ಷೇತ್ರದಲ್ಲಿ ಕೋಮು ಸಾಮರಸ್ಯ, ಮಾನವೀಯ ನೆಲೆಯ ಜನಸ್ನೇಹಿ ವೈದ್ಯರಾದ ಬಿಜೆಪಿಯ ಚಿತ್ತರಂಜನ್ ಅವರು ಗೆದ್ದಿರಲಿಲ್ಲವೇ! ಅವರ ಕೊಲೆಯಿಂದ ಉದ್ಭವವಾದ ವಿದೇಶಿ ಪ್ರೇರಿತ ಕರಾವಳಿಯ ಮೂಲಭೂತವಾದವನ್ನು, ಉಗ್ರವಾದವನ್ನು ನಿಷ್ಠುರವಾಗಿ ಖಂಡಿಸದ ಇದೇ ಓಲೈಕೆಯ ಬಳಗ ಮತ್ತು ಸರ್ಕಾರಗಳ ತುಷ್ಟೀಕರಣ ನೀತಿಗಳು ಇಂದಿನ ಕರಾವಳಿಗೆ ಕಾರಣವಾಗಿದೆ. ಇದು ಕೇವಲ ಕರಾವಳಿಯಲ್ಲದೆ ರಾಜ್ಯ, ದೇಶಾದ್ಯಂತ ಪಸರಿಸಿದೆ. ಆದರೂ ಈ ಓಲೈಕೆಯ ಚಿಂತಕವರ್ಗ ಎಲ್ಲರನ್ನೂ ಒಳಗೊಳ್ಳುವ ಪ್ರಕ್ರಿಯೆಯನ್ನು ಆರಂಭಿಸದೆ ಇಂದಿಗೂ ಬೌದ್ಧಿಕ ಅಸ್ಪೃಶ್ಯತೆಯನ್ನು ಪಾಲಿಸುತ್ತಿದೆ. ಇವರ ಕರ್ಮಠ ವಾದಗಳು ಇಂದು ದೇಶವನ್ನು ನಿಧಾನವಾಗಿ ಚುನಾಯಿತ "ಸರ್ವಾಧಿಕಾರ"ದತ್ತ ಕರೆದೊಯ್ಯುತ್ತಿವೆ. ಹಾಗಾಗಿಯೇ ಕರಾವಳಿಯ ಇಂದಿನ ಸ್ಥಿತಿಗತಿಯ ಬಗ್ಗೆ ಹೆಚ್ಚಿನ ಸಂಶೋಧನೆ ಮಾಡುವವರಿಗೆ ಈ ಕೃತಿಯಲ್ಲಿರುವ ಸೂಕ್ಷ್ಮ ಹೊಳಹು ಮಾರ್ಗದರ್ಶಿಯಾಗಬಲ್ಲದು ಎಂದದ್ದು.


ಇನ್ನು ರಾಜನೀತಿಯ ದೃಷ್ಟಿಯಿಂದ ವಿಧಾನ ಪರಿಷತ್ ಸದಸ್ಯರಾಗಿ ಅಣ್ಣಾ ವಿನಯಚಂದ್ರರು ನಡೆಸಿದ ಚರ್ಚೆಯ ಭಾಗದ ಪ್ರಮುಖ ಅಂಶಗಳ ದಾಖಲೆ ಅತ್ಯಂತ ಗಮನಾರ್ಹ. ಓರ್ವ ಸಂಸದೀಯ ಪಟು ತನ್ನ ಚರ್ಚೆಯನ್ನು ಮಂಡಿಸುವಾಗ ಆತನಿಗಿರಬೇಕಾದ ಚರ್ಚೆಯ ವಿಷಯದ ಆಳ ಅರಿವು, ವಿಶ್ಲೇಷಣೆ, ಒಳಿತು-ಕೆಡುಕುಗಳ ಪರಾಮರ್ಶೆ, ಕೆಡುಕುಗಳನ್ನು ಸರಿಪಡಿಸುವ ಚಿಂತನೆಯ ಮಾರ್ಗೋಪಾಯಗಳ ವಿವರಗಳು ರಾಜ್ಯಶಾಸ್ತ್ರ ಅಧ್ಯಯನಕ್ಕೆ ಮಾರ್ಗದರ್ಶನ ನೀಡುವಂತಿವೆ. ಏಕೆಂದರೆ ಕಾರ್ಪೊರೇಟ್ ಕಂಪೆನಿಗಳ ತಜ್ಞ ಆಡಳಿತಗಾರರು ಒಂದು ಯೋಜನೆಯ ಸಾಧಕ ಬಾಧಕಗಳನ್ನು ಹೇಗೆ ನಿರೂಪಿಸಿ ಚರ್ಚಿಸಿ ಒಂದು ದೂರಗಾಮಿ ದೃಢ ಯೋಜನೆಯನ್ನು ರಚಿಸುತ್ತಾರೆ ಎಂಬುದನ್ನು ಅವರುಗಳ ಸಲಹೆಗಾರನಾಗಿ ಹತ್ತಿರದಿಂದ ಕಂಡಿರುವ ಮತ್ತು ಅಮೆರಿಕನ್, ಯುರೋಪ್ ರಾಜನೀತಿಜ್ಞರು ನಡೆಸುವ ಇಂತಹುದೇ ಚರ್ಚೆಗಳನ್ನು ನೋಡಿರುವ ನನಗೆ ಅಂತಹ ವಿಷಯ ಮಂಡನೆ, ಚರ್ಚೆಗಳು ನಮ್ಮ ವಿಧಾನಸಭೆಯ ಕಲಾಪಗಳಲ್ಲಿ ಯಾವುದೇ ದೃಶ್ಯ ಅಥವಾ ಮುದ್ರಿತ ಮಾಧ್ಯಮದ ಸುದ್ದಿಗಳಲ್ಲಿ ಕಂಡುಬಂದಿಲ್ಲ. ಹಾಗಾಗಿ ಅಣ್ಣಾ ವಿನಯಚಂದ್ರರ ಪರಿಷತ್ ಕಲಾಪದ ಚರ್ಚೆಯ ದಾಖಲೆ ನನ್ನನ್ನು ವಿಶೇಷವಾಗಿ ಚಕಿತಗೊಳಿಸಿತು. ಇಂತಹ ಚರ್ಚೆ, ವಾದವನ್ನು ಮಂಡಿಸಬಲ್ಲ ಓರ್ವ ಸಮರ್ಥ ರಾಜನೀತಿಜ್ಞರು ಇವರೆಂದು ಅವರ ಮೇಲಿನ ಗೌರವ ಹೆಚ್ಚಿತು. ಇಂತಹ ದಾಖಲೆಗಳು ಶೈಕ್ಷಣಿಕ ವಲಯದ ರಾಜ್ಯಶಾಸ್ತ್ರ ಮತ್ತು ಸಾರ್ವಜನಿಕ ಆಡಳಿತ ವಿಷಯಗಳ ಬಗ್ಗೆ ಹೆಚ್ಚಿನ ಸಂಶೋಧನೆಗೆ ಉತ್ತಮ ಆಕರವಾಗುತ್ತದೆ.


ಇನ್ನು ಇಂತಹ ಗಹನವಾದ ಚರ್ಚೆಗಳು ಇಲ್ಲವೇ ಇಲ್ಲ ಎನ್ನುವ ಈ ಕಾಲದಲ್ಲಿ ಸಚಿವರಾಗಿದ್ದ ಮಾಧುಸ್ವಾಮಿ ಅವರ ವಿಷಯ ಮಂಡನೆ ನೆನಪಾಗುವುದು ಬಿಟ್ಟರೆ ಇನ್ಯಾರೂ ನೆನಪಿಗೆ ಬಾರದಷ್ಟು ಸಂಸದೀಯ ಪಟುಗಳು ಪಟಾಕಿ-ಚಟಾಕಿ ಚರ್ಚಿಗರಾಗಿದ್ದಾರೆ. ಅವರೆಲ್ಲರೂ ಈ ಕೃತಿಯನ್ನು ಓದುವುದು ಸಹ ಅವಶ್ಯ.


ಸಮಗ್ರವಾಗಿ ಹೀಗೆ ಬೇರುಮಟ್ಟದ ಸಾಮಾಜಿಕ ಕಾರ್ಯಕರ್ತರಾಗಿ, ಭಾರತೀಯ ಜನತಾ ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿ, ಸಹಕಾರ ಭಾರತಿ, ಭಾರತೀಯ ಕಿಸಾನ್ ಸಂಘವಲ್ಲದೆ ತಮಿಳುನಾಡು, ಕೇರಳದಲ್ಲಿ ಪಕ್ಷದ ನಾಯಕತ್ವ ವಹಿಸಿಕೊಂಡು ವಿಧಾನ ಪರಿಷತ್ ಸದಸ್ಯರಾಗಿ ಸಾಮಾಜಿಕ ಬದಲಾವಣೆಗೆ ಬದ್ಧರಾಗಿ ಎಲ್ಲಾ ಆಯಾಮಗಳಿಂದಲೂ ಕಾರ್ಯ ನಿರ್ವಹಿಸಿದ ಅಣ್ಣಾ ವಿನಯಚಂದ್ರರ ಸುದೀರ್ಘ ಪಯಣದ ಒಂದು ಝಲಕ್ ಈ ಕೃತಿಯಲ್ಲಿದೆ. "ಗುಜರಾತ್ ಮಾದರಿ" ಎಂದರೆ ಅದು ಅಲ್ಲಿನ ಸರ್ಕಾರವು ಭಾರತೀಯ ಕಿಸಾನ್ ಸಂಘದ ಜೊತೆಗೂಡಿ ಸಾಧಿಸಿದ "ಶಾಸಕ-ಕೃಷಿಕ", "ಸರ್ಕಾರ-ಸಹಕಾರ" ಸಂಯೋಗದ ಪ್ರಗತಿ ಎಂಬ ಅಣ್ಣಾ ವಿನಯಚಂದ್ರರು ಸಾಬೀತು ಮಾಡಿ ತೋರಿಸಿದ್ದ ನಿರೂಪಣಾತ್ಮಕ ವಿಷಯವನ್ನು ಇತ್ತೀಚಿನ ಬಿಜೆಪಿಗರು ಮರೆತು ಕೇವಲ "ಗುಜರಾತ್ ಮಾದರಿ" ಎಂಬ ಉದ್ಘೋಷವನ್ನು ಜಪಿಸುವುದು ವಿಷಾದನೀಯವಲ್ಲದೆ ವಿರೋಧಿಗಳ ಟೀಕೆಗೂ ಅಸ್ತ್ರವಾಗಿದೆ. ಈ ಬಗ್ಗೆ ಸಾಕಷ್ಟು ಮುಜುಗರದ ಟೀಕೆಗಳಿದ್ದು ಪಕ್ಷವನ್ನು ನಗೆಪಾಟಲಿಗೆ ಗುರಿ ಮಾಡಿವೆ. ಈ ಮಾದರಿಯಲ್ಲಿ ಪ್ರಾಮಾಣಿತ ಸಾಧನೆಯಿದ್ದರೂ ತೋರಿಸಲಾಗದ ಅಸಹಾಯಕ ನಾಯಕತ್ವದ ಸ್ಥಿತಿಗೆ ಪಕ್ಷವು ಆತ್ಮಶೋಧನೆ ಮಾಡಿಕೊಳ್ಳಬೇಕು ಎನಿಸುತ್ತದೆ.


ಒಟ್ಟಾರೆಯಾಗಿ ಮೂಲತಃ ಬಂಡಾಯ ಪ್ರವೃತ್ತಿಯ ಆದರೆ ವಾಸ್ತವವನ್ನು ಅರಿತ ಸ್ಥಿತಪ್ರಜ್ಞ ಫಲಾಪೇಕ್ಷೆರಹಿತ ಕರ್ಮಚಾರಿ ಅಣ್ಣಾ ವಿನಯಚಂದ್ರರ ವ್ಯಕ್ತಿತ್ವವು ವಲಸೆಯ ರೂಪಕವಾಗಿ "ಎಲ್ಲಿಯೂ ನಿಲ್ಲದಿರು, ಕೊನೆಯನೆಂದು ಮುಟ್ಟದಿರು....ನೀ ಅನಂತವಾಗಿರು" ಎಂಬ ಕವಿ ಆಶಯದಂತೆ "ಕೊಳಲ ಕೈ ಹಿಡಿದು" ಸಾಗಿ ಬಂದು ಕೊನೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನೂ ನಿರ್ಭಾವುಕ ಸ್ಥಿತಪ್ರಜ್ಞರಾಗಿ ತೊರೆದು ಜೆಪಿ ಮೋರ್ಗನ್ ಉಕ್ತಿಯಂತೆ ".....ಎಲ್ಲಿರುವೆನೋ ಅಲ್ಲಿರಲಾರೆ" ಎಂದು ಜಂಗಮಸ್ಥರಾಗುತ್ತಾರೆ.


ಹೀಗೆ ನನಗೆ ಚಲನಶೀಲ ವಲಸೆಯ ರೂಪಕವಾಗಿ ತೆರೆದುಕೊಂಡ "ಕೊಳಲ ಕೈ ಹಿಡಿದು" ಕೃತಿಯು ಓದುಗರಿಗೆ ಅವರದೇ ಆದ ಮಾನವಿಕ ಆಯಾಮಗಳಲ್ಲಿ ತೆರೆದುಕೊಂಡು ಆಪ್ಯಾಯಮಾನವಾಗುತ್ತದೆ ಎಂದು ದೃಢವಾಗಿ ಹೇಳಬಲ್ಲೆ. ಇಲ್ಲಿ ಯಾವುದೇ ಅತಿಮಾನವನಾಗದೇ ನಮ್ಮ ನಿಮ್ಮೆಲ್ಲರಂತೆ ಸಹಜಮಾನವನಾಗಿಯೂ ತಮ್ಮದೇ ಆದ ವೈಶಿಷ್ಟ್ಯದ ಛಾಪನ್ನು ಮೂಡಿಸಿ "ಚಲನೆ ಪ್ರಕೃತಿಯ ನಿಯಮ" ಎಂದು ನಿರೂಪಿಸುವ ವ್ಯಕ್ತಿ ಚಿತ್ರಣ ಮಾತ್ರವಿದೆ. ಅಣ್ಣಾ ವಿನಯಚಂದ್ರರ ಗಟ್ಟಿ ನಂಬಿಕೆಯ, "Experts are not always correct" ಎಂಬ ನುಡಿಗೆ ಕೃತಿಯು, "But experienced are" ಎಂದು ಇಂಬು ಕೊಡುವಂತಿದೆ.


ರವಿ ಹಂಜ್,

ಶಿಕಾಗೋ, ಯು.ಎಸ್. ಎ.

Galib to Hanj

 ಗಾಲಿಬ್ (1797-1869): 

ಮಸೀದಿಯಲಿ ಕುಳಿತು ಮದ್ಯ ಹೀರಲೇಕೆ ನಿರ್ಬಂಧ,

ಜಗದ ಕಣಕಣದಲ್ಲೂ ಇರಲು ದೇವನ ಅನುಬಂಧ!


ಅಲ್ಲಮ ಇಕ್ಬಾಲ್ (1877-1938): 

ಮಸೀದಿಯಲ್ಲ ಕುಡುಕರ ವಿಳಾಸ, ಅದು ದೇವರ ನಿವಾಸ.

ಕುಡಿಯಲು ಹೊಕ್ಕುಬಿಡು ದೇವನಿಲ್ಲದ ಕಾಫಿರನ ಮನಸ!


ಅಹ್ಮದ್ ಫರಾಜ್ (1931-2008): 

ಬಂದಿಹೆನು ನಾನು ಕಾಫಿರನ ಮನವ ಕಂಡು,

ದೇವನಿದ್ಧಾನೆ ಅಲ್ಲಿಯೂ ನಿಗೂಢಗೊಂಡು!


ವಾಸಿ ಶಾ (1973 - ): 

ಜಗದ ಕಣಕಣದಲ್ಲೂ ಇರಲು ದೇವನ ಅನುಬಂಧ,

ಸ್ವರ್ಗಕ್ಕೆ ಹೋಗು ಕುಡಿಯಲು ಅಲ್ಲಿ ಇಲ್ಲ ನಿರ್ಬಂಧ!


ಸಾಕಿ ಫರೂಕಿ (1936-2018): 

ಕುಡಿಯುವುದು ನಾನು ಜಗದ ದುಃಖವ ಮರೆಯಲು.

ಮಜವೇನಿದೆ ದುಃಖವೇ ಇಲ್ಲದ ಸ್ವರ್ಗದಲಿ ಕುಡಿಯಲು!


ರವಿ ಹಂಜ್ (ವರ್ತಮಾನ): ಅನಂತ ಕನ್ಯಾಸೆರೆಯ ದುಃಖ ಮಡುಗಟ್ಟಿದೆ ಅಲ್ಲಿಯೂ,

ಕಾತರಿಸುತಿಹರು ಹೂರಿಯರು ದುಃಖದೆ ಕೂಡಿ ಕುಡಿಯಲು!


ಶತಮಾನಗಳಿಂದ ಮೊನ್ನೆ ಮೊನ್ನೆಯತನಕ ಹೀಗೆ ಮದಿರೆ-ಮಸೀಹ, ರಸಿಕ-ರಹೀಮ ವ್ಯಾಖ್ಯಾನವನ್ನು ಮಾಡಿಕೊಂಡು ಬಂದಿದ್ದ ಸಾಹಿತ್ಯ ಪರಂಪರೆಯನ್ನು ಇಂದಿನ ದುರಿತ ಕಾಲದಲ್ಲಿ ಕಾಪಿಡುವುದು ಅತ್ಯಂತ ಅವಶ್ಯವಾಗಿದೆ. ಒಂದೆಡೆ ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗಿದೆ ಎಂಬ ಹತಾಶೆಯ ಮಾತು ಕೇಳಿಬಂದರೆ, ಇನ್ನೊಂದೆಡೆ ಎಗ್ಗಿಲ್ಲದ ಹೀಯಾಳಿಕೆ ಇದೆ. ಇವೆರಡರ ನಡುವೆ ಚುನಾವಣೆ ಮುಗಿದಿದೆ, ಚಿತಾವಣೆ ಬರಲಿದೆ. ನಡುವೆ ನಡೆಯಲಿ ಈ ಮದಿರೆಯ ಸಮಾರಾಧನೆ!


ಚಿಯರ್ಸ್, ಸ್ಕೋಲ್, ಸಾಲ್ಯೂತ್.

"ಅರಿದಡೆ ಆರದು, ಮರೆದೊಡೆ ಮೂರದು" ಕುರಿತು ಮಹೇಂದ್ರ ಮೂರ್ತಿ ಅವರ ಅಭಿಪ್ರಾಯ.

 ರವಿ ಹಂಜ್ ಅವರು ಈಗಾಗಲೇ ಸಾಹಿತ್ಯವಲಯದಲ್ಲಿ ಭದ್ರವಾದ ಹೆಜ್ಜೆಗಳನ್ನು ಇರಿಸಿದವರು. ಅವರು ಅನಿವಾಸಿ ಭಾರತೀಯರಾಗಿರುವ ಕಾರಣ ಅವರ ಕೃತಿಗಳು ಹೆಚ್ಚು ಚರ್ಚೆಯಾಗಿಲ್ಲ. ಇದು ಎಲ್ಲಾ ಅನಿವಾಸಿ ಭಾರತೀಯ ಸಾಹಿತಿಗಳಿಗೂ ಅನ್ವಯಿಸುತ್ತದೆ. "ಭಾರತ ಒಂದು ಮರುಶೋಧನೆ" ಕೃತಿಯಲ್ಲಿ ಶ್ರೀಯುತರು ಚರಿತ್ರೆ, ಧರ್ಮ, ರಾಜಕಾರಣ, ಸಾಹಿತ್ಯವನ್ನು ಹೇಗೆ ಗ್ರಹಿಸಬೇಕೆಂಬ ಮಾದರಿಯನ್ನೇ ಸೃಜಿಸಿದ್ದಾರೆ. ಹಾಗೆಯೇ ಅವರ "ಅಗಣಿತ ಅಲೆಮಾರಿ"ಯಲ್ಲಿ ಭಾರತ ಮತ್ತು ಚೈನಾ ವ್ಯವಸ್ಥೆಗಳನ್ನು ತೌಲನಿಕವಾಗಿ ವಿಶ್ಲೇಷಿಸಿ ಹೊಸ ಬೆಳಕಿಂಡಿಯನ್ನು ತೆರೆದಿದ್ದಾರೆ. "ಹುಯೆನ್ ತ್ಸಾಂಗ್ ನ ಮಹಾಪಯಣ" ಮತ್ತು "ಬಸವರಾಜಕಾರಣ" ಸಂಶೋಧನೆಯ ನೆಲೆಯಲ್ಲಿ ಬೆಲೆ ಕಟ್ಟಿದ್ದರೆ, "ರ ಠ ಈ ಕ" ಕೇವಲ ಆತ್ಮಚರಿತ್ರೆಯಾಗಿ ದಾಖಲಾಗದೆ ಸಾಂಸ್ಕೃತಿಕ ಪಠ್ಯವಾಗಿ ಗಮನ ಸೆಳೆಯುತ್ತದೆ. ನನಗೆ ತಿಳಿದಂತೆ ಭಾರತದ ಕರ್ನಾಟಕದ ಸಾಂಸ್ಕೃತಿಕ ಸಂಗತಿಗಳಿಗೆ ಬರಹಗಳ ಮೂಲಕ ಸದಾ ಸ್ಪಂದಿಸುವ ಏಕೈಕ ಅನಿವಾಸಿ ಬರಹಗಾರರಾಗಿ ರವಿ ಹಂಜ್ ಕಾಣುತ್ತಾರೆ.

ಅವರ ಇಂತಹ ಸ್ಪಂದನೆಯ ಮನಸ್ಥಿತಿಯೇ ಅವರಿಂದ ಅವರ ನೂತನ ಕಾದಂಬರಿ "ಅರಿದಡೆ ಆರದು, ಮರೆದೊಡೆ ಮೂರದು"ಯನ್ನು ಬರೆಸಿದೆ. ಈ ಕೃತಿಯು ತನ್ನ ಹೆಸರಿನಿಂದಲೇ ಗಮನ ಸೆಳೆಯುತ್ತದೆ. ’ನೂರನೋದಿ ನೂರ ಕೇಳಿದಡೇನು! ಆಸೆ ಬಿಡದು ರೋಷ ಹರಿಯದು’ ಎಂಬ ಬಸವಣ್ಣನವರ ವಚನವನ್ನು ಈ ಕೃತಿ ಸ್ಫಟಿಕ ಸದೃಶದಂತೆ ಅನಾವರಣಗೊಳಿಸುತ್ತದೆ. 

ಸುತ್ತಣ ಜಗತ್ತಿನಲ್ಲಿ ಇಂದ್ರಿಯ-ವಿಜೇತರನ್ನು ಗೌರವಿಸುವ, ಪೂಜಿಸುವ, ದೇವರೆಂದೇ ಬಗೆಯುವ ಪರಂಪರೆಯೊಂದು ಮನುಷ್ಯ ಲೋಕದಲ್ಲಿ ಪ್ರಾರಂಭಗೊಂಡಾಗಿನಿಂದ ಮಠ, ಸ್ವಾಮೀಜಿಗಳ ಪರಂಪರೆ ಆರಂಭವಾಯಿತು. ಅಂತಹ ಮಠಗಳು ಹೇಗೆ ಎಲ್ಲಾ ಇಂದ್ರಿಯ ವಾಂಛೆಗಳನ್ನು ಆವಾಹಿಸಿಕೊಳ್ಳುತ್ತಾ ಬಂದವು ಎಂಬುದನ್ನು ಸೃಜನಶೀಲತೆಯಿಂದ ರವಿ ಹಂಜ್ ಕಥೆ ಕಟ್ಟುತ್ತಾ ಸಾಗುತ್ತಾರೆ. ಶಕ್ತಿ ಕವಿ ರನ್ನ ತನ್ನ ’ಸಾಹಸಭೀಮ ವಿಜಯಂ’ ಕಾವ್ಯದಲ್ಲಿ ಕಾವ್ಯಶಕ್ತಿಯನ್ನು ವಿಮರ್ಶಿಸುವವರಿಗೆ ಎಂಟೆದೆ ಇರಬೇಕೆನ್ನುತ್ತಾನೆ. ಅಂತಹ ಎಂಟೆದೆ ಇದ್ದವರೇ ಅದನ್ನು ವಿಮರ್ಶಿಸಿದರು ಎನ್ನುವ ಮಾತು ಬೇರೆ. ಇಲ್ಲಿ ರವಿ ಹಂಜ್ ಮಠೀಯ ವ್ಯವಸ್ಥೆಯ ಕಥಾವಸ್ತುವನ್ನು ಆಯ್ಕೆ ಮಾಡಿಕೊಂಡು ಅಂತಹ ಎಂಟೆದೆಯವರಾಗಿದ್ದಾರೆ. ಈ ಕೃತಿಯ ಪ್ರಕಾಶಕರಾದ ಲೋಕಪ್ಪನವರೂ ಅಂತಹ ಧೀಮಂತರೇ. 

ಸಾಹಿತ್ಯ ಸಾಮಾಜಿಕ ಅಸ್ತ್ರವಾಗಬೇಕು, ಸಮಾಜದ ಆರೋಗ್ಯ ಕಾಪಿಡಬೇಕು ಎನ್ನುವ ಷೆಲ್ಲಿಯು ಕವಿಗಳನ್ನು ಶಾಸನಕಾರರು ಎಂದು ಕರೆದಿದ್ದಾನೆ. ಆ ಹಿನ್ನೆಲೆಯಲ್ಲಿಯೇ ವಚನಕಾರರು ಸಮಾಜ ತಿದ್ದಲು ಸಾಹಿತ್ಯವನ್ನು ಮಾಧ್ಯಮವಾಗಿಸಿಕೊಂಡರು. ’ಶೂದ್ರತಪಸ್ವಿ’ ಮೂಲಕ ಕುವೆಂಪುರವರು ಸಾಹಿತ್ಯವನ್ನು ಅಸ್ತ್ರವಾಗಿಸಿದರು. ರವಿ ಹಂಜ್ ಅವರು ಕನ್ನಡದ ಈ ಪರಂಪರೆಯ ವಾರಸುದಾರರಂತೆ ಈ ಕೃತಿಯ ಮೂಲಕ ಕಾಣುತ್ತಿದ್ದಾರೆ.

ಇಪ್ಪತ್ತೊಂಬತ್ತು ಅಧ್ಯಾಯಗಳ ಕಥಾನಕವು "ಅರಿದಡೆ ಆರದು, ಮರೆದೊಡೆ ಮೂರದು" ಕೃತಿಯಾಗಿದೆ. ಈ ಕಥಾವಸ್ತುವನ್ನು ಆಯ್ದುಕೊಳ್ಳುವುದು ಸುಲಭ; ಆದರೆ ಅದನ್ನು ನಿರ್ವಹಿಸುವುದು ಕಷ್ಟಸಾಧ್ಯ. ರವಿಯವರು ವಸ್ತುವನ್ನು ಚೆನ್ನಾಗಿ ದುಡಿಸಿಕೊಂಡಿರುವುದು ಅವರ ಸೃಜನಶೀಲತೆಯನ್ನು ತೋರಿಸುತ್ತದೆ. ಕೃತಿಯಾದ್ಯಂತ ಬಳಸಿರುವ ವಚನಗಳು ಕೀಲಿಕೈಯಂತಿವೆ. ದಖ್ಖನ್ ಪ್ರಸ್ತಭೂಮಿಯ ವರ್ಣನೆಯೊಂದಿಗೆ ಕೃತಿ ಆರಂಭವಾಗಿ ಸಂಚಾರಿ ಜಂಗಮ ಯೋಗಿಗಳು ಪಾಳೆಯಗಾರರ ಬಿಂಬಗಲ್ಲಿನಲ್ಲಿ ನೆಲೆನಿಲ್ಲುವುದರೊಂದಿಗೆ ಕೃತಿಯ ಆವರಣ ಅನಾವರಣವಾಗುತ್ತದೆ. ಕೃತಿಯಲ್ಲಿ ರಾಜಕೀಯ, ಸಾಮಾಜಿಕ, ರಾಜತಾಂತ್ರಿಕ ಆಯಾಮಗಳಲ್ಲದೆ ವೀರಶೈವ-ಶೈವ-ಲಿಂಗಾಯತ ಪಂಥ ಮತ್ತು ವಚನಗಳ ಕುರಿತ ಆರೋಗ್ಯಕರ ಚರ್ಚೆಗಳಿವೆ.

ವಿಶೇಷ ಕಥಾಹಂದರ, ಪಾತ್ರ ನಿರ್ವಹಣೆ, ವಿಡಂಬನೆ, ಆಯಾಯ ಕಾಲಘಟ್ಟದ ಸನ್ನಿವೇಶಗಳ ಸೃಷ್ಟಿಯೊಂದಿಗೆ ಕೃತಿಕಾರನಿಗಿರಬೇಕಾದ ಸ್ಥಿತಪ್ರಜ್ಞತೆ ಓದುಗರನ್ನು ಒಂದು ಮಾಯಾಲೋಕಕ್ಕೆ ಕರೆದೊಯ್ಯುತ್ತದೆ.

ಈ ಕಾದಂಬರಿಯನ್ನು ಓದುತ್ತ ಜಿ.ಎಸ್. ಶಿವರುದ್ರಪ್ಪನವರ ’ವಿಚಾರಣೆ’ ಕವಿತೆಯ ಕೆಲವು ಪಂಕ್ತಿಗಳು ನನಗೆ ನೆನಪಾದವು. ಅವು ಹೀಗಿವೆ:

"ಬಾ, ಪಾಪೀ ಬಾ; ಕೈ ಕಟ್ಟಿ ನಿಂತುಕೋ

ಈ ಕಟಕಟೆಯೊಳಗೆ-

ಬೊಗಳು, ಇದುವರೆಗೂ ಮಾಡಿದ್ದೆಲ್ಲವನು ಬಾಯ್ಬಿಟ್ಟು;

----------

ಎದುರಿಗಿದೆ ವೇದ - ಪುರಾಣಭಗವದ್ಗೀತೆ - ಬೈಬಲ್ಲು 

ಯಾವುದರ ಮೇಲಾದರೂ ಸರಿ, ಆಣೆಯಿಡು, ಹೇಳು,

ಶೋಧಿಸು, ನರನರದ ಒಳಪದರದಲ್ಲೂ ಹುದುಗಿ -

ದಿತಿಹಾಸಗಳ ಹಳೆಯ ಸರಕ.

ನೆನಪಿಲ್ಲವೇ ನಿನಗೆ? ಬರೆದಿಟ್ಟಿದ್ದಾನೆ

ಎಲ್ಲವನ ಈ ಗೂಢಾಚಾರ.

ಬೇರಿಂದ ತುದಿಯೆಲೆತನಕ ಗೊತ್ತಿದೆ ನಮಗೆ

ನಿನ್ನ ಅವತಾರ."

ಸಾಹಿತ್ಯ ಕಲೆಯೂ ಹೌದು; ಜೀವನವೂ ಹೌದು. ಸಮಾಜವನ್ನು ಹಸನುಗೊಳಿಸುವ ಸಾಧನವೂ ಹೌದು ಎಂಬುದನ್ನು ಈ ಕೃತಿ ತೋರಿಸಿದೆ. ಡೋಂಗಿ ಸ್ವಾಮಿಗಳ ಬಗ್ಗೆ ಬರೆಯಲು ತುಂಬಾ ಧೈರ್ಯ ಬೇಕಾಗುತ್ತದೆ. ಕಪಟ ಸನ್ಯಾಸಿಗಳ ಒಳಾವರಣ ಬದುಕು ಎಷ್ಟು ಹೊಲಸಾಗಿದೆ ಎಂಬುದನ್ನು ಈ ಕೃತಿ ಸಾಧ್ಯಂತ ಚರ್ಚಿಸಿದೆ. ಕನ್ನಡದ ಮಟ್ಟಿಗೆ ಈ ಕೃತಿ ಸಂಚಲನ ಉಂಟುಮಾಡುವಂತಿದೆ. 

’ನನ್ನ ಬರವಣಿಗೆ ನಿಂತಾಗ ನನ್ನ ಉಸಿರೂ ನಿಲ್ಲುತ್ತದೆ’ ಎಂದಿದ್ದ ಬಸವರಾಜ ಕಟ್ಟೀಮನಿಯವರ ’ಮೋಹದ ಬಲೆ’, ’ಜರತಾರಿ ಜಗದ್ಗುರು’ ಕಾದಂಬರಿಗಳು ದೊಡ್ಡ ಸಂಚಲನ ಸೃಷ್ಟಿಸಿ ಸಾಹಿತ್ಯಿಕ ಚರ್ಚೆ ಹುಟ್ಟು ಹಾಕಿದ್ದು ಈಗ ಚರಿತ್ರೆಯಾಗಿದೆ. ಮೆಚ್ಚುಗೆ, ವಿರೋಧ ಎರಡನ್ನೂ ಇಂತಹ ಕೃತಿಗಳು ದೊರಕಿಸಿಕೊಡುವಂಥವು. ೧೯೫೨ರಷ್ಟು ಹಿಂದೆಯೇ ಸಾಹಿತ್ಯವನ್ನು ಸಾಮಾಜಿಕ ಅಸ್ತ್ರವನ್ನಾಗಿ ಪಳಗಿಸಿ, ಝಳಪಿಸಿದವರು ಕಟ್ಟೀಮನಿಯವರು! ಅದೇ ಜಾಡನ್ನು ರವಿ ಹಂಜ್ ಹಿಡಿದು ಸಾಗಿದ್ದಾರೆ. ಈ ಕೃತಿಯ ಉದ್ದಕ್ಕೂ ನಿರ್ಭಯ, ನಿರ್ದಾಕ್ಷಿಣ್ಯ, ಸತ್ಯನಿಷ್ಠೆ, ನ್ಯಾಯಪರತೆಗಳು ಕೆಲಸ ಮಾಡಿವೆ. ಕಣ್ಣು ಮುಚ್ಚಿರುವ ಸಮಾಜವನ್ನು ಈ ಕೃತಿಯು ಎಚ್ಚರಿಸುವಂತಿದೆ. ಸಂಸ್ಕೃತಿಯ ಹೆಸರಿನಲ್ಲಿ ಮೆರೆಯುತ್ತಿರುವ ಅನಿಷ್ಟ, ಅನೈತಿಕ, ಅರಾಜಕತೆಗಳನ್ನು ಈ ಕೃತಿ ಪ್ರಕಟಿಸಿ ತನ್ನ ಎದೆಗಾರಿಕೆಯನ್ನು ತೋರಿಸಿದೆ. ಸಮಚಿತ್ತ, ಸಂಯಮದಿಂದ ವಸ್ತುವನ್ನು ನಿರ್ವಹಿಸಲಾಗಿದೆ. ಎಲ್ಲಿಯೂ ಭಾವೋದ್ರೇಕಗಳಿಲ್ಲ; ಅದರ ಅಗತ್ಯವೂ ಬೇಕಿಲ್ಲ. ವೈಚಾರಿಕತೆ, ಸೂಕ್ಷ್ಮಸಂವೇದನಾಶಕ್ತಿ, ವಾಸ್ತವಗಳ ಮೂಲಕ ರವಿ ಹಂಜ್ ಅವರು ಸದಭಿರುಚಿಯ ಲೇಖಕರೆಂದು ತೋರುತ್ತ ತಮ್ಮ ವಿಡಂಬನಾ ಶೈಲಿಯನ್ನು ಅಷ್ಟೇ ತಣ್ಣಗೆ ನಿರ್ವಹಿಸಿದ್ದಾರೆ. ಪಾತ್ರನಿರ್ವಹಣೆ, ಸಂಭಾಷಣೆಯ ಕೌಶಲ್ಯ, ಭಾಷಾಪ್ರಯೋಗ, ಜೀವನಸತ್ಯಗಳು ಮೇಲ್ತರಗತಿಯಲ್ಲಿವೆ. ಇಂದು ಏನಾದರೂ ಸಾಧಿಸಲು ಹೊರಟವರಿಗೆ ಪಲಾಯನ ಮಾಡಿಸಲು ದುರ್ವ್ಯವಸ್ಥೆ ಬೇರುಬಿಟ್ಟು ಕಾದು ಕುಳಿತಿದೆ. ಇಂತಹ ಚಕ್ರವ್ಯೂಹದಲ್ಲಿಯೂ ಇಂತಹ ಕಥಾವಸ್ತುವನ್ನಿಟ್ಟುಕೊಂಡು ಕೃತಿ ರಚಿಸಿದ ರವಿ ಹಂಜ್ ಅವರನ್ನು ನಾನು ಕನ್ನಡದ ಪರವಾಗಿ ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಕರ್ಮ, ಧರ್ಮ, ಮೋಕ್ಷ, ಸ್ವರ್ಗ, ನರಕ, ಪಾಪಪುಣ್ಯಗಳಲ್ಲಿ ಮಿಂದೇಳುವ ಮನುಷ್ಯನ ತಳಮಳವನ್ನು ಕಾದಂಬರಿಯ ಅಂತ್ಯ ಚೆನ್ನಾಗಿ ದುಡಿಸಿಕೊಂಡಿದೆ. ಆತ್ಮವನ್ನು ಉದ್ಧಾರಕ್ಕಾಗಿ ಚೆನ್ನಾಗಿ ಬಳಸಿಕೊಂಡ ಅನಂತರ ಬುದ್ಧಿಯ ವ್ಯವಹಾರದಲ್ಲಿ ಸಿಲುಕಿ ನಲುಗುವಂತಾಗುವ ಸ್ಥಿತಿಯದು. ತುಂಬಾ ಸಂಕೀರ್ಣವೂ ಮೂಲಭೂತವೂ ಆದ ನಮ್ಮ ದೇಶದ ಇತ್ತೀಚಿನ ವಿಶಿಷ್ಟ ವಸ್ತುವೊಂದರ ನಿರೂಪಣೆ ಈ ಕೃತಿಯಲ್ಲಿರುವುದು ವಿಶೇಷ.

ಪೂರ್ಣಚಂದ್ರ ತೇಜಸ್ವಿಯವರ 'ಚಿದಂಬರ ರಹಸ್ಯ', 'ಕರ್ವಾಲೋ', 'ಜುಗಾರಿ ಕ್ರಾಸ್', ಮತ್ತು 'ಮಾಯಾಲೋಕ' ಕೃತಿಗಳು ಹೇಗೆ ಓದುಗರಲ್ಲಿ ಇವುಗಳ ಮುಂದುವರಿದ ಭಾಗಗಳು ಬರಬಹುದು ಎಂಬ ನಿರೀಕ್ಷೆಯನ್ನು ಹುಟ್ಟುಹಾಕುತ್ತವೆಯೋ ಅಂತಹುದೇ ಅಂತ್ಯದ ತಂತ್ರಗಳನ್ನು ಶ್ರೀಯುತ ಹಂಜ್ ಅವರ 'ಅಗಣಿತ ಅಲೆಮಾರಿ', 'ರ ಠ ಈ ಕ' ಕೃತಿಗಳಲ್ಲದೇ ಈ ನೂತನ ಕೃತಿಯಲ್ಲಿಯೂ ಕಾಣಬಹುದಾಗಿದೆ. 

ಲೇಖಕನೊಬ್ಬ ನಿಜವಾಗಿ ನೀಡಬೇಕಾದ ಕೊಡುಗೆಯಾಗಿ ಈ ಕೃತಿಯಿದೆ. ಸಮಾಜದ ಅನೀತಿಯನ್ನು ನೋಡಿದಾಗ ಬರೆಯಬೇಕೆನಿಸುತ್ತದೆ. ಆದರೆ ಕೆಲವರಿಗೆ ಬರೆಯಲು ಕೈ, ಹೃದಯ ದುರ್ಬಲವಾಗಿಬಿಡುತ್ತವೆ. ಆದರೆ ರವಿಯವರು ಇದನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.

ಈ ಎಲ್ಲಾ ಹಿನ್ನೆಲೆಯಲ್ಲಿ ಏಕೋ ಏನೋ ಜಿ.ಎಸ್. ಶಿವರುದ್ರಪ್ಪನವರೇ ಮತ್ತೆ ನೆನಪಾಗುತ್ತಿದ್ದಾರೆ:

"ಕಾವಿಯೊಳಗೇ ಕೋವಿಯೆದ್ದು

ತನ್ನನ್ನು ತಾನೇ ಕೊಂದುಕೊಂಡದ್ದ ಕಂಡೆ.

ದೊಡ್ಡ ಪೀಠಗಳ ಮೇಲೆ ಸಣ್ಣಜನ

ಇಲಿ ಹೆಗ್ಗಣಗಳಾಗಿ ಹರಿದಾಡಿದ್ದ ಕಂಡೆ"

- ಡಾ. ಮಹೇಂದ್ರಮೂರ್ತಿ ದೇವನೂರು.

ವಿಮರ್ಶಕರು, ಮೈಸೂರು.

'ಅರಿದಡೆ ಆರದು ಮರೆದಡೆ ಮೂರದು' ಕುರಿತು Aravinda Chokkadi ಅವರ ಅಭಿಪ್ರಾಯ

 'ಅರಿದಡೆ ಆರದು ಮರೆದೊಡೆ ಮೂರದು' ರವಿ ಹಂಜ್ ಅವರು ಬರೆದಿರುವ ಕಾದಂಬರಿ. ಕಾದಂಬರಿ ಎಂದ ಮೇಲೆ ಕೃತಿಕಾರನ ಸೃಜನ ಕಲ್ಪನೆಯೇ ಮಹತ್ವದ್ದಾಗುತ್ತದೆ.

ಮಠೀಯ ವ್ಯವಸ್ಥೆಯ ಹಲವು ಬಗೆಯ ಅನೈತಿಕತೆಗಳು; ಮುಖ್ಯವಾಗಿ ಲೈಂಗಿಕ ಅನೈತಿಕ ಚಟುವಟಿಕೆಗಳು ಇಲ್ಲಿನ ಕಥಾ ವಸ್ತುವಾಗಿದೆ.‌
ಈ ಕಥಾ ವಸ್ತು ಎರಡು ದೃಷ್ಟಿಕೋನದಲ್ಲಿ ಅರ್ಥ ಮಾಡಿಕೊಳ್ಳಬೇಕಾದ ಸಂಗತಿಯಾಗಿದೆ. ಮೊದಲನೆಯದು ನಿಸರ್ಗದ ಸಹಜ‌ ಜೀವಿಯಾಗಿ ಮನುಷ್ಯರ ವರ್ತನೆಗಳು ಎಂಬ ಪರಿಕಲ್ಪನೆಯಲ್ಲಿ ಕೃತಿಯನ್ನು ನೋಡಿದಾಗ ಲೈಂಗಿಕತೆಯೇ ಇಲ್ಲಿ ನಿಜವಾದ ಹೀರೋ. ಏಕೆಂದರೆ ಅದು ಜೀವಿಯ ಸಹಜ ಪ್ರವೃತ್ತಿ.‌ ಅದನ್ನು‌ ನಿಯಂತ್ರಿಸಲು ಮನುಷ್ಯ ರೂಪಿಸಿದ ಕೃತಕ ನಾಗರಿಕತೆಯ ಪ್ರತಿನಿಧಿಗಳಾಗಿ ಕಾಣಿಸುವ ಧರ್ಮ, ಸನ್ಯಾಸ, ನೀತಿ ಬೋಧನೆ, ಧಾರ್ಮಿಕ ಆಡಳಿತ ಇವೆಲ್ಲವೂ ಇಲ್ಲಿ ವಿಲನ್ ಗಳಾಗಿವೆ. ಸಹಜ ಪ್ರವೃತ್ತಿಯನ್ನು ನಿಷೇಧಿಸುವ ಎಲ್ಲವೂ ವಿಲನ್‌ಗಳೇ. ಈ ದೃಷ್ಟಿಯಲ್ಲಿ‌ ನೋಡಿದಾಗ ರೂಪಿಸಲ್ಪಟ್ಟ ವ್ಯವಸ್ಥೆ ಎಷ್ಟು ಕೆಟ್ಟದಾಗಿದೆ ಮತ್ತು ಆ ವ್ಯವಸ್ಥೆಯಿಂದಾಗಿ ಸಹಜ ಮನುಷ್ಯ ಹೇಗೆ ಜೀವ ವಿರೋಧಿಯಾಗಿ ಪರಿವರ್ತನೆಯಾಗುತ್ತಾನೆ/ಳೆ ಎಂಬುದನ್ನು ಕೃತಿಯು ನಿರೂಪಿಸುತ್ತದೆ.
ಎರಡನೆಯದು ನಾಗರಿಕತೆಯ ಪ್ರತಿನಿಧಿಯಾಗಿ ಈ ಕೃತಿಯನ್ನು ನೋಡುವ ದೃಷ್ಟಿಕೋನ.‌ ಈ ದೃಷ್ಟಿಯಲ್ಲಿ ನೋಡಿದಾಗ ಕೃತಿಯನ್ನು ಬರೆದ ರವಿಯವರ ಮೇಲೆಯೇ," ಮಠದ ಬಗ್ಗೆ, ಸನ್ಯಾಸಿಗಳ ಬಗ್ಗೆಯೆಲ್ಲ ಹೀಗೆ ಬರೆಯುವುದಾ?" ಎಂದು ಸಿಟ್ಟು ಬರಬಹುದು. ಅಥವಾ ಸನ್ಯಾಸಿ ಹೀಗೂ ಮಾಡುವುದಾ? ಎಂದು ಸನ್ಯಾಸಿ ಮತ್ತು‌ ಮಠೀಯ ವ್ಯವಸ್ಥೆಯ ಮೇಲೆ ಸಿಟ್ಟು ಬರಲೂ ಬಹುದು. ಆದರೆ ಈ ದೃಷ್ಟಿಕೋನದ ಗ್ರಹಿಕೆ ಹೆಚ್ಚು ಸಂಕೀರ್ಣ ಮತ್ತು ಉತ್ತರವಿಲ್ಲದ ಸಮಸ್ಯೆಗಳನ್ನು ಮುಂದಿಡುತ್ತಾ ಹೋಗುತ್ತದೆ.
ರವಿಯವರು ಕಥನವನ್ನು ಕಾಣುವ ಕ್ರಮದಲ್ಲಿ ಮಾನವ ಸಹಜತೆ ಇದೆ ಎನ್ನುವ ಕಾರಣಕ್ಕಾಗಿ ಈ ಕೃತಿಗೆ ಮಹತ್ವ ಇದೆ. ಬಸವಣ್ಣ, ಚೆನ್ನಬಸವಣ್ಣ, ಸಿದ್ಧರಾಮ- ಮುಂತಾದ ಐತಿಹಾಸಿಕ ವ್ಯಕ್ತಿತ್ವಗಳನ್ನು ಅವರೆಲ್ಲರಿಗೆ ತೊಡಿಸಲಾಗಿರುವ ಮುಖವಾಡವನ್ನು ತೆರೆದು ಸಹಜ ಮನುಷ್ಯರಾಗಿ ರವಿಯವರು ನೋಡುತ್ತಾರೆ. ತನಗೆ ಅನ್ಯಾಯ ಆದಾಗಲೂ ಉದಾತ್ತವಾಗಿ, ತ್ಯಾಗಿಯಾಗಿ ನಡೆದುಕೊಂಡರು ಎನ್ನುವುದು ವರ್ತಮಾನವು ಇತಿಹಾಸಕ್ಕೆ ತೊಡಿಸಿರುವ ಮುಖವಾಡ. ತನಗೆ ಅನ್ಯಾಯ ಆದಾಗ ಪ್ರತಿದಾಳಿಗೆ ಸಿದ್ಧರಿದ್ದರು ಎನ್ನುವುದು ಮಾನವ ಸಹಜ ಸತ್ಯ.‌ ಈ ಸತ್ಯದ ನೆಲೆಯಲ್ಲಿ ರವಿಯವರು ಐತಿಹಾಸಿಕ ವ್ಯಕ್ತಿತ್ವಗಳನ್ನು ಗ್ರಹಿಸಿದ್ದಾರೆ ಎನ್ನುವುದು ಸಾಹಿತ್ಯಕವಾಗಿ ಕೃತಿಯ ಯಶಸ್ಸಿನ ಮೂಲವಾಗಿದೆ. ಈ ಗ್ರಹಿಕೆಯ ಕ್ರಮವೇ ಆ ನಂತರ ಆಧುನಿಕ ಕಲ್ಲಿನಾಥ ಜಗದ್ಗುರುಗಳ ಸುತ್ತಲಿನ ಸನ್ನಿವೇಶದಲ್ಲೂ ಇದೆ. ಇಂದು ನಮ್ಮೆದುರಿನ ಸನ್ಯಾಸಿಗಳಿಗೆ ನಾವೇ ಆರೋಪಿಸಿರುವ ಉದಾತ್ತ ಗುಣಗಳ ಮುಖವಾಡಗಳನ್ನು ತೆಗೆದೇ ರವಿಯವರು ಗ್ರಹಿಸಿದ್ದಾರೆ.
ಅವೈದಿಕ ಧಾರ್ಮಿಕ ಕಂದಾಚಾರಗಳು ಮತ್ತು ಮತಾಂಧತೆಗಳೆಲ್ಲವೂ ಪ್ರಗತಿಪರ ಎನ್ನುವ ಕರ್ನಾಟಕದ ಆತ್ಮಸಾಕ್ಷಿ ರಹಿತ ಜಾತಿವಾದಿ ಪ್ರಗತಿಪರರ ಮೇಲಿನ ತಮ್ಮ‌ ಟೀಕೆಯನ್ನು ರವಿಯವರು ಈ ಕೃತಿಯಲ್ಲೂ ಮುಂದುವರಿಸಿದ್ದಾರೆ. ಆದರೆ ಎಂದಿನಂತೆ ಕಟುವಾಗಿ ಅಲ್ಲ; ಸಾಕಷ್ಟು ಸೌಮ್ಯವಾಗಿ ಟೀಕಿಸಿದ್ದಾರೆ. ಉದಾಹರಣೆಗೆ ಈ ಸಾಲುಗಳನ್ನು ಗಮನಿಸಿ: " ...ಇತ್ತೀಚೆಗೆ ಮಠದ ವಿದ್ಯಾವಂತ ಪ್ರಗತಿಪರ ಕುಲೀನ ಭಕ್ತೆಯರನ್ನು ಸಾಹಿತ್ಯ, ಸಮಾಜ ಸೇವೆ, ಸ್ತ್ರೀ ಸಬಲತೆ, ಮುಂತಾದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಪ್ರೋತ್ಸಾಹಿಸಿ ಅಕ್ಕಮಹಾದೇವಿ ಮಹಿಳಾ ಸಮಾಜವನ್ನು ಮಠದಡಿಯಲ್ಲಿ ರಚಿಸಿ ಶಾಖಾ ಮಠಗಳಲ್ಲಿ ಸಹ ಮಹಿಳಾ ಸಮಾಜ ಶಾಖೆಗಳನ್ನು ತೆರೆದರು...ಇವರಲ್ಲಿ ಅನೇಕರು ಕ್ರಮೇಣವಾಗಿ ಗುರುಗಳ ಆಪ್ತೆಯರಾಗುತ್ತಾ ಕಲ್ಲಿನಾಥರೊಂದಿಗೆ ಏಕಾಂತದಲ್ಲಿ ಸಾಹಿತ್ಯಿಕ ಚರ್ಚೆಯಲ್ಲಿ ಭಾಗವಹಿಸುತ್ತಿದ್ದರು".
ರವಿಯವರ ಭಾಷಾ ಬಳಕೆ ಬಹಳ‌ ಪವರ್ಫುಲ್. ಆಯಾ ಸನ್ನಿವೇಶವನ್ನು ಹೇಳಲು ಬಳಸುವ ಭಾಷೆಯೇ ಒಬ್ಬ ಲೇಖಕನ ಒರಿಜಿನಲ್ ಪ್ರತಿಭೆಯ ಒಂದಂಶವೂ ಆಗಿರುತ್ತದೆ.‌ ಉದಾಹರಣೆಗೆ ಮಠದ ಆಡಳಿತಾಧಿಕಾರಿ ಬಸವ ಭಾಗ್ಯಳನ್ನು ಕಂಡಾಗ ಕಾಮೇಶ್‌ಗೆ ಇವಳಿಗೆ ನನ್ನನ್ನು ಪರಿಚಯ ಮಾಡಿಸು ಎಂದು ಕೇಳುತ್ತಾನೆ.‌ ಆ ಸನ್ನಿವೇಶವನ್ನು ರವಿ ಹೀಗೆ ನಿರೂಪಿಸಿದ್ದಾರೆ:" ....ಬಸವನು ಕಾಮೇಶನ ಕಿವಿಯಲ್ಲಿ ಉಸುರಿದ್ದನ್ನು ಕಿರುಗಿವಿಯಲ್ಲೆ ಕೇಳಿದ್ದ ಅವಳು ತನ್ನ ಮುಂದಿನ ಏಳು ಜನ್ಮದ ನೀಲಿನಕಾಶೆಯನ್ನೆ ತಕ್ಷಣಕ್ಕೆ ಮನದಲ್ಲಿ ಹಾಕಿಕೊಂಡುಬಿಟ್ಟಳು". ಲಿಂಗಮೂರ್ತಿ ಸ್ವಾಮಿಗಳು ವಾರಿಜಾಳಿಂದ ಸಂಗೀತ ಕಲಿಕೆಯ ನೆಪದಲ್ಲಿ ಏಕಾಂತ ಸೇವೆಗೆ ಕರೆದರೂ ನಿಜವಾದ ಅಪೇಕ್ಷೆಯ ಕಡೆಗೆ ಮುಂದುವರಿಯುವ ಧೈರ್ಯವಿಲ್ಲದೆ ಇದ್ದಾಗ ವಾರಿಜಾ ಲಿಂಗಮೂರ್ತಿಯೇ ಮುಂದುವರಿಯಲಿ ಎಂದು ತೀರ್ಮಾನಿಸುತ್ತಾಳೆ. ಲಿಂಗಮೂರ್ತಿ ಸ್ವಲ್ಪ ಧೈರ್ಯದಿಂದ ಸೂಚ್ಯವಾಗಿ," ಬರೇ ಸ್ವರ ನುಡಿಸುವುದು ಬೇಡ, ಹಾಡು ಹೇಳಿಕೊಡ್ರಿ" ಎಂದಾಗ ," ಹಂಗ ಬಾ ಮಗನೇ' ಎಂದು ಮನದಲ್ಲೆ ಅಂದುಕೊಳ್ಳುತ್ತಾ,' ಬುದ್ಧಿ ಇವತ್ತಿಂದ ಚಕೋರಂಗೆ ಚಂದ್ರಮನಾ ಬೆಳಗೀನ ಚಿಂತೆ ನುಡ್ಸೋದು ಹೇಳಿಕೊಡ್ತೀನಿ...ಬಿಡ್ರಿ ಎನ್ನುತ್ತಾ" ಎನ್ನುವ ವಾಕ್ಯ ರಚನೆ ಅದ್ಭುತ ಪ್ರಯೋಗವಾಗಿದೆ. ಕಾಮಿ ಗಂಡಿನ ಕುರಿತ ಅಂತರಂಗದ ತಿರಸ್ಕಾರ ಮತ್ತು ಬಹಿರಂಗದ ಗೌರವ ಎರಡನ್ನೂ ಒಟ್ಟಿಗೇ ಹಿಡಿದಿಡಬಲ್ಲ ಭಾಷಾ ಪ್ರಯೋಗದ ತೀವ್ರತೆ ಸಾಹಿತ್ಯಕವಾಗಿ ರವಿಯವರನ್ನು ತುಂಬ ಎತ್ತರಕ್ಕೆ ಕೊಂಡೊಯ್ಯುತ್ತದೆ.
ಕಾಮ ನಿಷೇಧಕ್ಕೆ ಒಳಗಾದಲ್ಲಿ ಆಚರಣೆಗೆ ತರಬೇಕಾದರೆ ಅದಕ್ಕೆ ಅಗತ್ಯವಾಗುವ ಆರ್ಥಿಕ ಮತ್ತು ಆಡಳಿತಾತ್ಮಕ ಭ್ರಷ್ಠಾಚಾರ, ಕುಂಯುಕ್ತಿ, ಕೊಲೆ, ಗೂಂಡಾಗಿರಿ ಎಲ್ಲವೂ ಒಳಗೊಂಡೂ ಧರ್ಮದ ಪೋಷಾಕಿನಲ್ಲಿ ಹೇಗೆ ಧರ್ಮವನ್ನೂ ಸಮಾಜವನ್ನೂ ಅಸಹಾಯಕಗೊಳಿಸುತ್ತಾ ಹೋಗುತ್ತದೆ ಎಂಬುದನ್ನು ಕಾದಂಬರಿಯು ಹೇಳುತ್ತದೆ.