'ಅರಿದಡೆ ಆರದು ಮರೆದೊಡೆ ಮೂರದು' ರವಿ ಹಂಜ್ ಅವರು ಬರೆದಿರುವ ಕಾದಂಬರಿ. ಕಾದಂಬರಿ ಎಂದ ಮೇಲೆ ಕೃತಿಕಾರನ ಸೃಜನ ಕಲ್ಪನೆಯೇ ಮಹತ್ವದ್ದಾಗುತ್ತದೆ.
ಈ ಕಥಾ ವಸ್ತು ಎರಡು ದೃಷ್ಟಿಕೋನದಲ್ಲಿ ಅರ್ಥ ಮಾಡಿಕೊಳ್ಳಬೇಕಾದ ಸಂಗತಿಯಾಗಿದೆ. ಮೊದಲನೆಯದು ನಿಸರ್ಗದ ಸಹಜ ಜೀವಿಯಾಗಿ ಮನುಷ್ಯರ ವರ್ತನೆಗಳು ಎಂಬ ಪರಿಕಲ್ಪನೆಯಲ್ಲಿ ಕೃತಿಯನ್ನು ನೋಡಿದಾಗ ಲೈಂಗಿಕತೆಯೇ ಇಲ್ಲಿ ನಿಜವಾದ ಹೀರೋ. ಏಕೆಂದರೆ ಅದು ಜೀವಿಯ ಸಹಜ ಪ್ರವೃತ್ತಿ. ಅದನ್ನು ನಿಯಂತ್ರಿಸಲು ಮನುಷ್ಯ ರೂಪಿಸಿದ ಕೃತಕ ನಾಗರಿಕತೆಯ ಪ್ರತಿನಿಧಿಗಳಾಗಿ ಕಾಣಿಸುವ ಧರ್ಮ, ಸನ್ಯಾಸ, ನೀತಿ ಬೋಧನೆ, ಧಾರ್ಮಿಕ ಆಡಳಿತ ಇವೆಲ್ಲವೂ ಇಲ್ಲಿ ವಿಲನ್ ಗಳಾಗಿವೆ. ಸಹಜ ಪ್ರವೃತ್ತಿಯನ್ನು ನಿಷೇಧಿಸುವ ಎಲ್ಲವೂ ವಿಲನ್‌ಗಳೇ. ಈ ದೃಷ್ಟಿಯಲ್ಲಿ ನೋಡಿದಾಗ ರೂಪಿಸಲ್ಪಟ್ಟ ವ್ಯವಸ್ಥೆ ಎಷ್ಟು ಕೆಟ್ಟದಾಗಿದೆ ಮತ್ತು ಆ ವ್ಯವಸ್ಥೆಯಿಂದಾಗಿ ಸಹಜ ಮನುಷ್ಯ ಹೇಗೆ ಜೀವ ವಿರೋಧಿಯಾಗಿ ಪರಿವರ್ತನೆಯಾಗುತ್ತಾನೆ/ಳೆ ಎಂಬುದನ್ನು ಕೃತಿಯು ನಿರೂಪಿಸುತ್ತದೆ.
ಎರಡನೆಯದು ನಾಗರಿಕತೆಯ ಪ್ರತಿನಿಧಿಯಾಗಿ ಈ ಕೃತಿಯನ್ನು ನೋಡುವ ದೃಷ್ಟಿಕೋನ. ಈ ದೃಷ್ಟಿಯಲ್ಲಿ ನೋಡಿದಾಗ ಕೃತಿಯನ್ನು ಬರೆದ ರವಿಯವರ ಮೇಲೆಯೇ," ಮಠದ ಬಗ್ಗೆ, ಸನ್ಯಾಸಿಗಳ ಬಗ್ಗೆಯೆಲ್ಲ ಹೀಗೆ ಬರೆಯುವುದಾ?" ಎಂದು ಸಿಟ್ಟು ಬರಬಹುದು. ಅಥವಾ ಸನ್ಯಾಸಿ ಹೀಗೂ ಮಾಡುವುದಾ? ಎಂದು ಸನ್ಯಾಸಿ ಮತ್ತು ಮಠೀಯ ವ್ಯವಸ್ಥೆಯ ಮೇಲೆ ಸಿಟ್ಟು ಬರಲೂ ಬಹುದು. ಆದರೆ ಈ ದೃಷ್ಟಿಕೋನದ ಗ್ರಹಿಕೆ ಹೆಚ್ಚು ಸಂಕೀರ್ಣ ಮತ್ತು ಉತ್ತರವಿಲ್ಲದ ಸಮಸ್ಯೆಗಳನ್ನು ಮುಂದಿಡುತ್ತಾ ಹೋಗುತ್ತದೆ.
ರವಿಯವರು ಕಥನವನ್ನು ಕಾಣುವ ಕ್ರಮದಲ್ಲಿ ಮಾನವ ಸಹಜತೆ ಇದೆ ಎನ್ನುವ ಕಾರಣಕ್ಕಾಗಿ ಈ ಕೃತಿಗೆ ಮಹತ್ವ ಇದೆ. ಬಸವಣ್ಣ, ಚೆನ್ನಬಸವಣ್ಣ, ಸಿದ್ಧರಾಮ- ಮುಂತಾದ ಐತಿಹಾಸಿಕ ವ್ಯಕ್ತಿತ್ವಗಳನ್ನು ಅವರೆಲ್ಲರಿಗೆ ತೊಡಿಸಲಾಗಿರುವ ಮುಖವಾಡವನ್ನು ತೆರೆದು ಸಹಜ ಮನುಷ್ಯರಾಗಿ ರವಿಯವರು ನೋಡುತ್ತಾರೆ. ತನಗೆ ಅನ್ಯಾಯ ಆದಾಗಲೂ ಉದಾತ್ತವಾಗಿ, ತ್ಯಾಗಿಯಾಗಿ ನಡೆದುಕೊಂಡರು ಎನ್ನುವುದು ವರ್ತಮಾನವು ಇತಿಹಾಸಕ್ಕೆ ತೊಡಿಸಿರುವ ಮುಖವಾಡ. ತನಗೆ ಅನ್ಯಾಯ ಆದಾಗ ಪ್ರತಿದಾಳಿಗೆ ಸಿದ್ಧರಿದ್ದರು ಎನ್ನುವುದು ಮಾನವ ಸಹಜ ಸತ್ಯ. ಈ ಸತ್ಯದ ನೆಲೆಯಲ್ಲಿ ರವಿಯವರು ಐತಿಹಾಸಿಕ ವ್ಯಕ್ತಿತ್ವಗಳನ್ನು ಗ್ರಹಿಸಿದ್ದಾರೆ ಎನ್ನುವುದು ಸಾಹಿತ್ಯಕವಾಗಿ ಕೃತಿಯ ಯಶಸ್ಸಿನ ಮೂಲವಾಗಿದೆ. ಈ ಗ್ರಹಿಕೆಯ ಕ್ರಮವೇ ಆ ನಂತರ ಆಧುನಿಕ ಕಲ್ಲಿನಾಥ ಜಗದ್ಗುರುಗಳ ಸುತ್ತಲಿನ ಸನ್ನಿವೇಶದಲ್ಲೂ ಇದೆ. ಇಂದು ನಮ್ಮೆದುರಿನ ಸನ್ಯಾಸಿಗಳಿಗೆ ನಾವೇ ಆರೋಪಿಸಿರುವ ಉದಾತ್ತ ಗುಣಗಳ ಮುಖವಾಡಗಳನ್ನು ತೆಗೆದೇ ರವಿಯವರು ಗ್ರಹಿಸಿದ್ದಾರೆ.
ಅವೈದಿಕ ಧಾರ್ಮಿಕ ಕಂದಾಚಾರಗಳು ಮತ್ತು ಮತಾಂಧತೆಗಳೆಲ್ಲವೂ ಪ್ರಗತಿಪರ ಎನ್ನುವ ಕರ್ನಾಟಕದ ಆತ್ಮಸಾಕ್ಷಿ ರಹಿತ ಜಾತಿವಾದಿ ಪ್ರಗತಿಪರರ ಮೇಲಿನ ತಮ್ಮ ಟೀಕೆಯನ್ನು ರವಿಯವರು ಈ ಕೃತಿಯಲ್ಲೂ ಮುಂದುವರಿಸಿದ್ದಾರೆ. ಆದರೆ ಎಂದಿನಂತೆ ಕಟುವಾಗಿ ಅಲ್ಲ; ಸಾಕಷ್ಟು ಸೌಮ್ಯವಾಗಿ ಟೀಕಿಸಿದ್ದಾರೆ. ಉದಾಹರಣೆಗೆ ಈ ಸಾಲುಗಳನ್ನು ಗಮನಿಸಿ: " ...ಇತ್ತೀಚೆಗೆ ಮಠದ ವಿದ್ಯಾವಂತ ಪ್ರಗತಿಪರ ಕುಲೀನ ಭಕ್ತೆಯರನ್ನು ಸಾಹಿತ್ಯ, ಸಮಾಜ ಸೇವೆ, ಸ್ತ್ರೀ ಸಬಲತೆ, ಮುಂತಾದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಪ್ರೋತ್ಸಾಹಿಸಿ ಅಕ್ಕಮಹಾದೇವಿ ಮಹಿಳಾ ಸಮಾಜವನ್ನು ಮಠದಡಿಯಲ್ಲಿ ರಚಿಸಿ ಶಾಖಾ ಮಠಗಳಲ್ಲಿ ಸಹ ಮಹಿಳಾ ಸಮಾಜ ಶಾಖೆಗಳನ್ನು ತೆರೆದರು...ಇವರಲ್ಲಿ ಅನೇಕರು ಕ್ರಮೇಣವಾಗಿ ಗುರುಗಳ ಆಪ್ತೆಯರಾಗುತ್ತಾ ಕಲ್ಲಿನಾಥರೊಂದಿಗೆ ಏಕಾಂತದಲ್ಲಿ ಸಾಹಿತ್ಯಿಕ ಚರ್ಚೆಯಲ್ಲಿ ಭಾಗವಹಿಸುತ್ತಿದ್ದರು".
ರವಿಯವರ ಭಾಷಾ ಬಳಕೆ ಬಹಳ ಪವರ್ಫುಲ್. ಆಯಾ ಸನ್ನಿವೇಶವನ್ನು ಹೇಳಲು ಬಳಸುವ ಭಾಷೆಯೇ ಒಬ್ಬ ಲೇಖಕನ ಒರಿಜಿನಲ್ ಪ್ರತಿಭೆಯ ಒಂದಂಶವೂ ಆಗಿರುತ್ತದೆ. ಉದಾಹರಣೆಗೆ ಮಠದ ಆಡಳಿತಾಧಿಕಾರಿ ಬಸವ ಭಾಗ್ಯಳನ್ನು ಕಂಡಾಗ ಕಾಮೇಶ್‌ಗೆ ಇವಳಿಗೆ ನನ್ನನ್ನು ಪರಿಚಯ ಮಾಡಿಸು ಎಂದು ಕೇಳುತ್ತಾನೆ. ಆ ಸನ್ನಿವೇಶವನ್ನು ರವಿ ಹೀಗೆ ನಿರೂಪಿಸಿದ್ದಾರೆ:" ....ಬಸವನು ಕಾಮೇಶನ ಕಿವಿಯಲ್ಲಿ ಉಸುರಿದ್ದನ್ನು ಕಿರುಗಿವಿಯಲ್ಲೆ ಕೇಳಿದ್ದ ಅವಳು ತನ್ನ ಮುಂದಿನ ಏಳು ಜನ್ಮದ ನೀಲಿನಕಾಶೆಯನ್ನೆ ತಕ್ಷಣಕ್ಕೆ ಮನದಲ್ಲಿ ಹಾಕಿಕೊಂಡುಬಿಟ್ಟಳು". ಲಿಂಗಮೂರ್ತಿ ಸ್ವಾಮಿಗಳು ವಾರಿಜಾಳಿಂದ ಸಂಗೀತ ಕಲಿಕೆಯ ನೆಪದಲ್ಲಿ ಏಕಾಂತ ಸೇವೆಗೆ ಕರೆದರೂ ನಿಜವಾದ ಅಪೇಕ್ಷೆಯ ಕಡೆಗೆ ಮುಂದುವರಿಯುವ ಧೈರ್ಯವಿಲ್ಲದೆ ಇದ್ದಾಗ ವಾರಿಜಾ ಲಿಂಗಮೂರ್ತಿಯೇ ಮುಂದುವರಿಯಲಿ ಎಂದು ತೀರ್ಮಾನಿಸುತ್ತಾಳೆ. ಲಿಂಗಮೂರ್ತಿ ಸ್ವಲ್ಪ ಧೈರ್ಯದಿಂದ ಸೂಚ್ಯವಾಗಿ," ಬರೇ ಸ್ವರ ನುಡಿಸುವುದು ಬೇಡ, ಹಾಡು ಹೇಳಿಕೊಡ್ರಿ" ಎಂದಾಗ ," ಹಂಗ ಬಾ ಮಗನೇ' ಎಂದು ಮನದಲ್ಲೆ ಅಂದುಕೊಳ್ಳುತ್ತಾ,' ಬುದ್ಧಿ ಇವತ್ತಿಂದ ಚಕೋರಂಗೆ ಚಂದ್ರಮನಾ ಬೆಳಗೀನ ಚಿಂತೆ ನುಡ್ಸೋದು ಹೇಳಿಕೊಡ್ತೀನಿ...ಬಿಡ್ರಿ ಎನ್ನುತ್ತಾ" ಎನ್ನುವ ವಾಕ್ಯ ರಚನೆ ಅದ್ಭುತ ಪ್ರಯೋಗವಾಗಿದೆ. ಕಾಮಿ ಗಂಡಿನ ಕುರಿತ ಅಂತರಂಗದ ತಿರಸ್ಕಾರ ಮತ್ತು ಬಹಿರಂಗದ ಗೌರವ ಎರಡನ್ನೂ ಒಟ್ಟಿಗೇ ಹಿಡಿದಿಡಬಲ್ಲ ಭಾಷಾ ಪ್ರಯೋಗದ ತೀವ್ರತೆ ಸಾಹಿತ್ಯಕವಾಗಿ ರವಿಯವರನ್ನು ತುಂಬ ಎತ್ತರಕ್ಕೆ ಕೊಂಡೊಯ್ಯುತ್ತದೆ.
ಕಾಮ ನಿಷೇಧಕ್ಕೆ ಒಳಗಾದಲ್ಲಿ ಆಚರಣೆಗೆ ತರಬೇಕಾದರೆ ಅದಕ್ಕೆ ಅಗತ್ಯವಾಗುವ ಆರ್ಥಿಕ ಮತ್ತು ಆಡಳಿತಾತ್ಮಕ ಭ್ರಷ್ಠಾಚಾರ, ಕುಂಯುಕ್ತಿ, ಕೊಲೆ, ಗೂಂಡಾಗಿರಿ ಎಲ್ಲವೂ ಒಳಗೊಂಡೂ ಧರ್ಮದ ಪೋಷಾಕಿನಲ್ಲಿ ಹೇಗೆ ಧರ್ಮವನ್ನೂ ಸಮಾಜವನ್ನೂ ಅಸಹಾಯಕಗೊಳಿಸುತ್ತಾ ಹೋಗುತ್ತದೆ ಎಂಬುದನ್ನು ಕಾದಂಬರಿಯು ಹೇಳುತ್ತದೆ.
No comments:
Post a Comment