ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಮುಂದಿನ ಆಯ್ಕೆ!

 ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಮುಂದಿನ ಆಯ್ಕೆ!


ಸ್ಕಂದ ಪುರಾಣದ ಶ್ಲೋಕಗಳಾದ, "ಯೋ ಹಸ್ತಪೀಠೇ ನಿಜಮಿಷ್ಟಲಿಂಗಂ ವಿನ್ಯಸ್ಯ ತಲ್ಲೀನಮನಃ ಪ್ರಚಾರಃ ಬಾಹ್ಯಕ್ರಿಯಾಸಂಕುಲನಿಸ್ಠಹಾತ್ಮಾ | ಸಂಪೂಜಯತ್ತಂಗ ಸ ವೀರಶೈವಂ|" ಮತ್ತು "ಶಿವಾಶ್ರಿತೇಷು ತೇ ಶೈನಾ ಜ್ಞಾನಯಜ್ಞ ರತಾ ನರಾಃ | ಮಾಹೇಶ್ವರಾಃ ಸಮಾಖ್ಯಾ ತಾಃ ಕರ್ಮಯಜ್ಜ ರತಾ ಭುವಿ|" ಎಂಬಂತೆ ಲಿಂಗವನ್ನು ಆಯತ ಮಾಡಿಕೊಂಡು ವಿದ್ಯೆಯನ್ನು ರಮಿಸುವವನು ವೀರಶೈವ ಲಿಂಗಾಯತ. ಈ ಎರಡೂ ಶ್ಲೋಕಗಳನ್ನು ಊರ್ಜಿತಗೊಳಿಸಿ ವಿಕಸಿಸಿದ ಸಂಸ್ಥೆಯೇ ಅಖಿಲ ಭಾರತ ವೀರಶೈವ (ಲಿಂಗಾಯತ) ಮಹಾಸಭಾ! 


ಶ್ರೀ ಹಾನಗಲ್ ಕುಮಾರಸ್ವಾಮಿಗಳ ಉದಾತ್ತ ದೂರದರ್ಶಿ ಚಿಂತನೆಯ ಕಾರಣವಾಗಿ ಈ ಸಂಸ್ಥೆ ಉದಯವಾಯಿತು. ಈ ಸಂಸ್ಥೆಗೆ ಅಧ್ಯಕ್ಷರಾಗಿ ಸಿರಸಂಗಿ ಲಿಂಗರಾಜ ಸರದೇಸಾಯಿ, ಕೆ.ಪಿ. ಪುಟ್ಟಣ್ಣಶೆಟ್ಟಿ, ರಾಜಾ ಲಖಮಗೌಡ, ವಾರದ ಮಲ್ಲಪ್ಪ, ಮಾಮಲೆ ದೇಸಾಯಿ, ಅರಟಾಳ ರುದ್ರಗೌಡ, ಶಾಂತವೀರಪ್ಪ ಮೆಣಸಿನಕಾಯಿ, ಸಿದ್ದಪ್ಪ ಕಂಬಳಿ, ಫಕೀರಪ್ಪ ಗುರುಬಸಪ್ಪ ಹಳಕಟ್ಟಿ, ಶಿ.ಶಿ. ಬಸವನಾಳ, ಎಂ.ಎಸ್‌. ಸರದಾರ, ಸಿ.ಸಿ. ಹುಲಕೋಟಿ, ಪೂಜ್ಯ ಶ್ರೀ ಬಂಥನಾಳ ಶಿವಯೋಗಿಗಳು, ಡಾ. ಡಿ.ಸಿ. ಪಾವಟೆ, ಪೂಜ್ಯ ಶ್ರೀ ಸಿದ್ಧಗಂಗಾ ಶಿವಕುಮಾರ ಮಹಾಸ್ವಾಮಿಗಳು ಜೆ.ಬಿ. ಮಲ್ಲಾರಾಧ್ಯ, ಈಶ್ವರ ಮಲ್ಲಪ್ಪ ಮಗ್ದುಂ, ಪೂಜ್ಯ ಶ್ರೀ ಡಾ| ಶರಣಬಸಪ್ಪ ಅಪ್ಪ, ಭೀಮಣ್ಣ ಖಂಡ್ರೆ, ಮತ್ತು ಶಾಮನೂರು ಶಿವಶಂಕರಪ್ಪ ಆಗಿ ಹೋಗಿದ್ದಾರೆ.


ಶ್ರೀ ಶರಣಬಸಪ್ಪ ಅಪ್ಪ ಅವರಿಗಿಂತ ಮುಂಚಿನ ಎಲ್ಲಾ ಅಧ್ಯಕ್ಷರೂ ಸಮಾಜವನ್ನು ಪ್ರಮುಖವಾಗಿ ಮೇಲಿನ ಸ್ಕಂದ ಶ್ಲೋಕಗಳಿಗನುಗುಣವಾಗಿ ವೀರಶೈವ ಲಿಂಗಾಯತ ಸಮಾಜವನ್ನು ವಿದ್ಯಾವಂತ ಸಾಧಕ ಸಮಾಜವಾಗಿ ಪರಿವರ್ತಿಸಲು ಅಪಾರ ಸೇವೆಯನ್ನು ಸಲ್ಲಿಸಿರುವುದು ಇತಿಹಾಸದಲ್ಲಿ ಕಾಣಬಹುದಾಗಿದೆ. ಮಹಾಸಭಾದಿಂದ ಸಮಾವೇಶಗಳನ್ನು ನಡೆಸಿ ಹಲವಾರು ವಿದ್ಯಾಸಂಸ್ಥೆಗಳ ಸ್ಥಾಪನೆಗೆ ಕಾರಣೀಭೂತರಾಗಿದ್ದಾರೆ. ಇವರೆಲ್ಲರ ಸಾಧನೆಯಿಂದ ವೀರಶೈವ ಲಿಂಗಾಯತ ಸಮಾಜವು ರಾಜಕೀಯವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಕರ್ನಾಟಕದ ಒಂದು ಬಲಿಷ್ಠ ಸಮಾಜವಾಗಿ ಅಸ್ತಿತ್ವವನ್ನು ಗಳಿಸಿಕೊಂಡಿದ್ದಲ್ಲದೆ ಸಮಗ್ರ ಮಾನವತೆಗೆ ಅಪಾರ ಕಾಣಿಕೆಯನ್ನು ನೀಡಿದೆ. ಇದೆಲ್ಲಕ್ಕೂ ಮಹಾಸಭಾ ಅಧ್ಯಕ್ಷರುಗಳಿಗೆ ಸೂಕ್ತ ಮಾರ್ಗದರ್ಶನ ನೀಡಲು ಆದಿಯಿಂದಲೂ ಒಂದು "ಚಿಂತಕರ ಚಾವಡಿ" ಸಮಿತಿಯಿತ್ತು. ಈ ಸಮಿತಿಯ ಮಾರ್ಗದರ್ಶನದಂತೆ ಅಧ್ಯಕ್ಷರು ಕಾರ್ಯ ನಿರ್ವಹಿಸುತ್ತಿದ್ದರು. ಈ ಸಮಿತಿಯಲ್ಲಿ ನಿವೃತ್ತ ನ್ಯಾಯಾಧೀಶರು, ಅಧಿಕಾರಿಗಳು, ಸಾಹಿತಿಗಳು, ಧರ್ಮ ಧುರೀಣರು ಇರುತ್ತಿದ್ದರು. ಮಹಾಸಭಾದ ಎಲ್ಲಾ ಮಹತ್ವದ ನಿರ್ಣಯಗಳು ಈ ಸಮಿತಿಯ ಅನುಮೋದನೆಯ ಮೇಲೆ ಅವಲಂಬಿತವಾಗಿರುತ್ತಿತ್ತು. 


ಶ್ರೀ ಶರಣಬಸಪ್ಪ ಅಪ್ಪ ಅವರ ನಂತರದ ಅಧ್ಯಕ್ಷರುಗಳ ಕೊಡುಗೆ ಹಿಂದಿನ ಎಲ್ಲ ಅಧ್ಯಕ್ಷರುಗಳಿಗಿಂತ ಗೌಣವೆನಿಸಿದರೂ ಅವರನ್ನು ಸರಿದಾರಿಯಲ್ಲಿ ಮುನ್ನಡೆಸಲು ಮಹಾಸಭಾದ ಈ "ಚಿಂತಕರ ಚಾವಡಿ" ಯಾನೆ think tank ಸಮಿತಿಯ ಸಲಹೆಗಳನ್ನು ಪಾಲಿಸಲಾಗುತ್ತಿತ್ತು. ಈ ಸಮಿತಿಯು ಭೀಮಣ್ಣ ಖಂಡ್ರೆಯವರ ಅಧಿಕಾರದ ಅವಧಿಯವರೆಗೂ ಕಾರ್ಯ ನಿರ್ವಹಿಸುತ್ತಿತ್ತು. ಖಂಡ್ರೆಯವರ ಅವಧಿಯಲ್ಲಿ ಈ ಚಿಂತಕರ ಚಾವಡಿಯಲ್ಲಿ ನ್ಯಾ.ಎಸ್.ಎಸ್.ಮಳಿಮಠ, ನ್ಯಾ ಶಿವರಾಜ ಪಾಟೀಲ್, ಗೊ.ರು. ಚನ್ನಬಸಪ್ಪ ಮುಂತಾದ ಸದಸ್ಯರಿದ್ದರು. 


ಯಾವಾಗ ಶಿವಶಂಕರಪ್ಪನವರು ಅಧಿಕಾರ ವಹಿಸಿಕೊಂಡರೋ ಆಗ ಅವರು ಈ ಚಿಂತಕರ ಚಾವಡಿಯನ್ನು ಬರಖಾಸ್ತುಗೊಳಿಸಿ ತಮ್ಮ ಸೇವಕ ವರ್ಗದ ಓರ್ವ ಸ್ವಜಾತಿಬಾಂಧವನನ್ನು ಮಹಾಸಭಾದ ಕಾರ್ಯದರ್ಶಿಯಾಗಿ ನೇಮಿಸಿಕೊಂಡರು. ಈವರೆಗೆ ಮಹಾಸಭೆಯ ಮಹಾ ಪ್ರಧಾನ ಕಾರ್ಯದರ್ಶಿ (ರಾಷ್ಟ್ರಿಯ) ಹುದ್ದೆಯನ್ನು ವಹಿಸಿಕೊಂಡವರು ನಿವೃತ ಐಎಎಸ್ ಅಧಿಕಾರಿಗಳು, ಉದ್ದಿಮೆದಾರರು ಅಥವಾ ಹಿರಿಯ ರಾಜಕಾರಣಿಗಳಾಗಿರುತ್ತಿದ್ದರು. ಅಂತಹ ಸ್ಥಾನಕ್ಕೆ ಟೂರಿಸ್ಟ್ ಹೋಟೆಲಿನ ಮುಂದೆ ನಿಂತು ಹಲವಾರು ವರ್ಗಾವಣೆ ದಂಧೆ, ವಿಶ್ವವಿದ್ಯಾಲಯಗಳ ನಕಲಿ ಅಂಕಪಟ್ಟಿ ದಂಧೆ, ರಾಜಕಾರಣಿಗಳ ಚೇಲಾಗಿರಿ ಮಾಡುವ ಸೇವಕ ವರ್ಗದ ವ್ಯಕ್ತಿಯನ್ನು ಕೇವಲ ಸ್ವಜಾತಿ ಬಂಧು ಕಾರಣಾರ್ಥ ಶಿವಶಂಕರಪ್ಪನವರು ಭಡ್ತಿ ನೀಡಿ ಪ್ರಧಾನವಲ್ಲದ ಕಾರ್ಯದರ್ಶಿಯಾಗಿಸಿಕೊಂಡರು. ಪ್ರಧಾನ ಕಾರ್ಯದರ್ಶಿ ಹುದ್ದೆ ಸದ್ಯಕ್ಕೆ ಇಲ್ಲವಾಗಿದೆ. ಶಿವಶಂಕರಪ್ಪನವರು ಈ ವ್ಯಕ್ತಿಯನ್ನು ಇಪ್ಪತ್ನಾಲ್ಕು ತಾಸು ತಮ್ನ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸಲು ವೈಯಕ್ತಿಕ ಸಂಭಾವನೆ ಕೊಟ್ಟು ಕಳೆದ ಹದಿನೈದು ವರ್ಷಗಳಿಂದ ನಿಯೋಜಿಸಿಕೊಂಡಿದ್ದು ಮಹಾಸಭಿಕರೆಲ್ಲರಿಗೂ ತಿಳಿದ ಸಾರ್ವತ್ರಿಕ ಮಾಹಿತಿ. ಶಿವಶಂಕರಪ್ಪನವರ ಉದ್ದೇಶ ಏನಿತ್ತೋ ಗೊತ್ತಿಲ್ಲ. ಆದರೆ ಈ ಕಾರ್ಯದರ್ಶಿಯು ಮಹಾಸಭಾವನ್ನು ನಿರ್ವೀರ್ಯಶವ ಲಿಂಗಾಹತ ಸಭಾವಾಗಿ ಮಾಡಿದನೆಂದು ಮಹಾಸಭಿಗರೆಲ್ಲರೂ ದೂರುತ್ತಾರೆ. 


ಇರಲಿ, ಹೀಗೆ ಸಂಬಳಕ್ಕಿರುವ ಅಪ್ರಾಮಾಣಿಕ ವ್ಯಕ್ತಿಗಳು ಸಿದ್ಧಾಂತವನ್ನು ಕಾಪಿಡಬಲ್ಲರೇ? ವರ್ಗಾವಣೆ ದಲ್ಲಾಳಿಗಳು ಅಧ್ಯಾತ್ಮವನ್ನು ಅರಿಯಬಲ್ಲರೇ? 


ಈ ಪ್ರಚ್ಛನ್ನ ಕಾರ್ಯದರ್ಶಿಯ ಕಾರ್ಯಗಳ ಪಟ್ಟಿ ಹೀಗಿದೆ:


ಶಿವಶಂಕರಪ್ಪನವರ ವಯೋಸಹಜ ದೌರ್ಬಲ್ಯವನ್ನು ಬಳಸಿಕೊಂಡು ಈತ ಮಾಡಿದ ಅನಾಹುತಗಳು ಧರ್ಮಘಾತಕವಷ್ಟೇ ಅಲ್ಲದೆ ತನ್ನ ಮಾಲೀಕ ಶಿವಶಂಕರಪ್ಪನವರಿಗೆ ಮಾಡಿದ ಮಹಾದ್ರೋಹವೆಂದು ಜಿಲ್ಲಾ ಮಹಾಸಭಾಗಳ ಸದಸ್ಯರು ದೂರಿದ್ದಾರೆ. ಈತನ ದ್ರೋಹವನ್ನು ಅರಿತೋ ಅರಿಯದೆಯೋ ಇಂದಿನ ಮಹಾಸಭಾದ ದುಸ್ಥಿತಿಗೆ ದಿವಂಗತ ಶಿವಶಂಕರಪ್ಪನವರನ್ನು ವೀರಶೈವ ಸಮಾಜ ದೂಷಿಸುವಂತಾಗಿದೆ. ಸೂತಕದ ಮುನ್ನವೇ ಈ ಬಗ್ಗೆ ಜನರು ಮಾತನಾಡಿಕೊಳ್ಳುವಂತಾಗಿದೆ. ಏಕೆಂದರೆ, ಟೂರಿಸ್ಟ್ ಹೋಟೆಲಿನ ಮುಂದೆ ನಿಂತು ಮಾಡುವ ಮಧ್ಯವರ್ತಿ ದಂಧೆಗಳು ಕಳೆದ ಹದಿನೈದು ವರ್ಷಗಳಿಂದ ಮಹಾಸಭಾದ ಆವರಣದಲ್ಲಿ ರಾಜಾರೋಷವಾಗಿ ನಡೆಯುತ್ತಿರುವ ದಂಧೆಗಳಾಗಿವೆ. ರಂಗಜಂಗಮ ನಟುವಾಂಗನ ಶಿಷ್ಯನಾದ ಈ ಪ್ರಚ್ಛನ್ನ ಕಾರ್ಯದರ್ಶಿಯು ಮಹಾಸಭೆಯನ್ನು ನಿಷ್ಕ್ರಿಯಗೊಳಿಸುವ ಮಂದವಿಷಗಾಮಿಯಾಗಿ ಧರ್ಮಭಂಜಕ ಲಿಂಗಾಹತರ ದಾಳವಾಗಿ ಬಳಕೆಯಾಗಿದ್ದು ಸ್ಫಟಿಕ ಸದೃಶ ಎಂದು ಮಹಾಸಭಿಗರು ಹಿಂದೆಯೇ ದೂರಿದ್ದರು. ಇದಕ್ಕೆ ಸಾಕ್ಷಿಯಾಗಿ ಮಹಾಸಭೆಯ ಮಹತ್ವದ ದಾಖಲೆಗಳು ಧರ್ಮಭಂಜಕ ಜಾಮದಾರರ ಕೈಗೆ ಸಿಕ್ಕದ್ದು ಹೇಗೆ ಎಂಬುದು ಬಸವ ಉದ್ಘೋಷಿತ ಮುತ್ತಿನಹಾರದಂತಿದ್ದರೂ ಅಧ್ಯಕ್ಷರ ಈ ಕುರಿತ ಮೌನ ಮಿಲಿಯನ್ ಡಾಲರ್ ಪ್ರಶ್ನೆಯಾಗಿ ಎಲ್ಲರಲ್ಲೂ ನರ್ತಿಸುತ್ತಲಿತ್ತು. ಆದರೆ ಕುರುಡು ಕಾಂಚಾಣದ ಮುಂದೆ ಎಲ್ಲರೂ ಕುರುಡಾಗಿದ್ದರು! ಇನ್ನು ಜಾಮದಾರರು ಬಹಿರಂಗವಾಗಿ ಮಹಾಸಭಾದ ವಿರುದ್ಧ ನೂರಾರು ಹೇಳಿಕೆ ಕೊಟ್ಟರೂ ಒಂದೇ ಒಂದು ಪ್ರತಿ ಹೇಳಿಕೆಯನ್ನು ಕೊಡುವುದಿರಲಿ, ಅದನ್ನು ಖಂಡಿಸಿ ಸಹ ಒಂದು ಹೇಳಿಕೆಯನ್ನು ಈ ಪ್ರಚ್ಛನ್ನ ಕಾರ್ಯದರ್ಶಿ ಎಂದೂ ಕೊಟ್ಟಿಲ್ಲ. ಅಂತಹ ಹೇಳಿಕೆ ಕೊಡುವಷ್ಟು ಪ್ರಬುದ್ಧತೆ ಈತನಲ್ಲಿ ಇಲ್ಲವೇ ಇಲ್ಲ. ಆದರೂ ಈತ ಎಲ್ಲಾ ಟಿವಿ ಮಾಧ್ಯಮಗಳಲ್ಲಿ ರಾರಾಜಿಸುತ್ತಿದ್ದರೂ ಮಹಾಸಭಾದ ನಿಷ್ಕ್ರಿಯತೆ ಸಭಾವನ್ನು ನಿರ್ವೀರ್ಯಶವವನ್ನಾಗಿ ನಗೆಪಾಟಲಿಗೆ ಈಡುಮಾಡಿದೆ.


ಅದರಲ್ಲೂ ಅಖಿಲ ಭಾರತ ವೀರಶೈವ ಮಹಾಸಭಾದ 1940 ಮೇ 26ರಿಂದ 28ರವರೆಗೆ ಕುಂಭಕೋಣಂನಲ್ಲಿ ನಡೆದ ಅಧಿವೇಶನದಲ್ಲಿ ಅಂಗೀಕರಿಸಲ್ಪಟ್ಟ ಹಲವು ನಿರ್ಣಯಗಳಲ್ಲೊಂದಾದ ನಿರ್ಣಯ ಸಂಖ್ಯೆ ೨೩, "ಬ್ರಿಟಿಷ್ ಭಾರತದಲ್ಲಿಯೂ ಭಾರತೀಯ ಸಂಸ್ಥಾನಗಳಲ್ಲಿಯೂ ಲಿಂಗಾಯತರಿಗೆ ಹಿಂದು ಕಾನೂನನ್ನು ಅನ್ವಯಿಸುವ ವಿಷಯದಲ್ಲಿ ನಡೆಯುತ್ತಿರುವ ಅನ್ಯಾಯವನ್ನು ಈ ಸಭೆ ಖಂಡಿಸುತ್ತದೆ. ವೀರಶೈವ ಶಾಸ್ತ್ರಗಳು ಮತ್ತು ಶಾಶ್ವತಾಚಾರಗಳ ಆಧಾರದ ಮೇಲೆ ಲಿಂಗಾಯತರಿಗೆ ಪ್ರತ್ಯೇಕ ಕಾನೂನು ಸಂಹಿತೆ ಅಗತ್ಯವೆಂದು ಮನಗಂಡು, ಕೆಳಗಿನ ಸಮಿತಿಯನ್ನು ಲಿಂಗಾಯತ ಕಾನೂನು ಸಂಹಿತೆಯನ್ನು ಸಿದ್ಧಪಡಿಸಲು ನೇಮಿಸಿ, ಮುಂದಿನ ಅಧಿವೇಶನಕ್ಕೂ ಮುನ್ನ ಮಹಾಸಭೆಯ ಕಾರ್ಯಕಾರಿ ಸಮಿತಿಗೆ ವರದಿ ಸಲ್ಲಿಸುವಂತೆ ವಿನಂತಿಸುತ್ತದೆ" ಎನ್ನುವುದನ್ನು ಪ್ರಚ್ಛನ್ನ ಕಾರ್ಯದರ್ಶಿಯು ತಿರುಚಿ ಕುಂಬಕೋಣಂ ಅಧಿವೇಶನದಲ್ಲಿ ವೀರಶೈವ-ಲಿಂಗಾಯತರು ಹಿಂದುಗಳಲ್ಲ ಎಂಬ ನಿರ್ಣಯ ಕೈಗೊಳ್ಳಲಾಗಿದೆ ಎಂದು ಶಿವಶಂಕರಪ್ಪನವರನ್ನು ದಿಕ್ಕು ತಪ್ಪಿಸಲಾಯಿತು ಎಂದು ಮಹಾಸಭಿಗರು ಮಾತನಾಡಿಕೊಳ್ಳುತ್ತಾರೆ. 


ಆದರೆ ಇದು ಕಾರ್ಯದರ್ಶಿ ಅಧ್ಯಕ್ಷರನ್ನು ಯಾಮಾರಿಸಿದ್ದೋ ಅಥವಾ ಅಧ್ಯಕ್ಷರ ನಿರ್ದೇಶನದಂತೆ ಕಾರ್ಯ ನಿರ್ವಹಿಸಿದ್ದೋ? ಚಿಂತಕರ ಚಾವಡಿಯನ್ನೇ ಬರಖಾಸ್ತು ಮಾಡಿದ ಶಿವಶಂಕರಪ್ಪನವರು ಇಷ್ಟೆಲ್ಲಾ ದೂರುಗಳಿದ್ದರೂ ತಮ್ಮ ಕಾರ್ಯದರ್ಶಿಯ ಕುರಿತು ಯಾವ ಕ್ರಮವನ್ನೂ ಕೈಗೊಳ್ಳದೇ ಹೋದರೇಕೆ!?


ತಮ್ಮ ಮನೆವಾರ್ತೆಯಿಂದ ಹಿಡಿದು ಸಂಸತ್ತಿನವರೆಗಿನ ಯಾವುದೇ ವ್ಯವಹಾರ, ವ್ಯಾಪಾರ, ಉಸಾಬರಿಯ ಸಣ್ಣ ನಿರ್ಧಾರಗಳನ್ನೂ ಖುದ್ದು ತಾವೇ ನಿರ್ವಹಿಸುವ ದಾವಣಗೆರೆ ಧಣಿಗಳು ತಮ್ಮ ಆಪ್ತವರ್ಗದ ಅಣಬೇರು ರಾಜಣ್ಣ, ಅಥಣಿ ವೀರಣ್ಣ ಮತ್ತು ತಮ್ಮ ಪುತ್ರ ಗಣೇಶ್ ಅವರನ್ನು ಮಹಾಸಭಾದ ಆಯಕಟ್ಟಿನ ಜಾಗದಲ್ಲಿ ಕೂರಿಸಿಯೂ ಈ ಕಾರ್ಯದರ್ಶಿಯ ಕಾರ್ಯವೈಖರಿಯ ಕುರಿತು ಇಷ್ಟೊಂದು ಉದಾಸೀನರಾಗಿದ್ದರೇ? ಹೋಗಲಿ, ಉಪಾಧ್ಯಕ್ಷ ಈಶ್ವರ್ ಖಂಡ್ರೆ ಏಕೆ ಈ ಕುರಿತು ಗಮನ ಹರಿಸಲಿಲ್ಲ?


ಕೇವಲ ಶಿವಶಂಕರಪ್ಪನವರಲ್ಲದೆ ಯಾವುದೇ ರಾಜಕಾರಣಿ ಅಥವಾ ವಿದ್ಯಾವ್ಯಾಪಾರಿಗಳು (ಸಂಸಾರಿ ಯಾ ಸನ್ಯಾಸಿ) ಒಂದು ಧಾರ್ಮಿಕ ಉದ್ದೇಶದ ಸಾಮಾಜಿಕ ಸಂಸ್ಥೆಯ ಅಧ್ಯಕ್ಷರಾದರೆ ಆಗುವ ನಿಶ್ಚಿತ ಅನಾಹುತವೇ ಮಹಾಸಭಾದಲ್ಲಿ ಆದದ್ದು. ಇಲ್ಲದಿದ್ದರೆ ಶಿವಶಂಕರಪ್ಪನವರ ಆಪ್ತರೂ, ವೀರಶೈವ ಲಿಂಗಾಯತ ಮಹಾಸಭಾದ ವಕ್ತಾರರೂ ಆದ ಅಣಬೇರು ರಾಜಣ್ಣ ಮತ್ತು ಅಥಣಿ ವೀರಣ್ಣನವರು ಧರ್ಮಭಂಜಕ ರಂಗಜಂಗಮರ ಭಂಜಕ ಅಭಿಯಾನಕ್ಕೆ ಜಯಕಾರ ಹಾಕಿ ಪಾಲ್ಗೊಳ್ಳುತ್ತಿದ್ದರೇ?!? ಶಿವಶಂಕರಪ್ಪನವರು ಎಂದಾದರೂ ತಮ್ಮ ಸ್ವಜಾತಿ ಶಾಖಾಮಠದ ರಂಗಜಂಗಮರ ಭಂಜಕ ನಡೆಯನ್ನು ಖಂಡಿಸಿದ್ದರೇ?


ದೂರದ ಪರದೇಶದಲ್ಲಿ ಕುಳಿತ ಅನಿವಾಸಿಗಳು ಇದನ್ನೆಲ್ಲಾ ಗಮನಿಸಿ ಹೇಸಿಕೊಳ್ಳುತ್ತಿರುವಾಗ ಸ್ವದೇಶವಾಸಿ ಸಮಾಜ ಬಾಂಧವರು ಕಳೆದ ಒಂದು ದಶಕದಿಂದ ಎಷ್ಟೊಂದು ಹೇಸಿಕೊಂಡಿರಬಹುದು? ಕಳವಳಕಾರಿ ಸಂಖ್ಯೆಯಲ್ಲಿ ಕ್ರೈಸ್ತಮತಕ್ಕೆ ಲಿಂಗಾಯತರು ಮತಾಂತರವಾಗುತ್ತಿರುವುದೇ ಈ ಹೇಸಿಗೆಯ ಒಂದು ವಾಸ್ತವಿಕ ಮಾಪನವಾಗಿದೆ. ಆದರೆ ನೋಟಿಗಾಗಿ ಓಟಿನ ಊಳಿಗಮಾನ ಪ್ರಜಾಪ್ರಭುತ್ವವೇ ಎಲ್ಲೆಲ್ಲೂ ಮೆರೆಯುತ್ತಿರುವಾಗ ಒಂದು ಧಾರ್ಮಿಕ ಸಮಾಜವು ಅಂಗೈ ಮೇಲಣ ಲಿಂಗಕ್ಕಿಂತ ಅಂಗೈಯೊಳಗಣ ಹಣದ ಥೈಲಿಗೆ ತಕಥೈ ಎಂದು ನರ್ತಿಸಲಾರದೇ?! ಎಂಬ ಜಿಜ್ಞಾಸೆ ಭೂತಾಕಾರವಾಗಿ ಬೆಳೆದು ಇಂದು ಸಾಕ್ಷಾತ್ಕಾರವಾಗಿದೆ. ಅಂದಹಾಗೆ ಸದ್ಯದ ಆಧ್ಯಾತ್ಮಿಕ ಜಗತ್ತಿನ ಸದ್ಗುರು ಜಗ್ಗಿ ವಾಸುದೇವರವರು ಸಾಕಷ್ಟು ಸಾರಿ ಭಾರತದ ಪ್ರಜಾಪ್ರಭುತ್ವವು ಊಳಿಗಮಾನ ಪ್ರಜಾಪ್ರಭುತ್ವವೇ ಆಗಿದೆ ಎಂದು ಜಗತ್ತಿಗೆ ಸಾರಿ ಹೇಳಿದ್ದಾರೆ ಎಂಬುದನ್ನು ಇಲ್ಲಿ ಸಾಂದರ್ಭಿಕವಾಗಿ ನೆನಪಿಸಿಕೊಳ್ಳಬಹುದು.


"ಪ್ರತ್ಯೇಕ ಧರ್ಮ" ಎಂಬ ಮೂಗಿನ ಮೇಲಿನ ಡಾಲ್ಡಾವನ್ನು ಸಮಾಜ ಅನುಭವಿಸಿದೆ. ಈ ಪ್ರತ್ಯೇಕ ಧರ್ಮದಿಂದ ಶ್ರೀಸಾಮಾನ್ಯನಿಗೆ ನಿಶ್ಶೂನ್ಯ ಲಾಭವಾಗಿ ಕ್ಯಾಪಿಟೇಶನ್ ಶುಲ್ಕ ನಿರ್ವಾಹಕರಿಗೆ ಸಿಗುವ ಲಾಭ, ಅದಕ್ಕಾಗಿ ಕ್ಯಾಪಿಟೇಶನ್ ಶುಲ್ಕ ನಿರ್ವಾಹಕರಿಂದ ಆದ ಸಮಾಜದ್ರೋಹವನ್ನು ಹಿಂದಿನ ಅಂಕಣಗಳಲ್ಲಿ ಸವಿವರವಾಗಿ ತಿಳಿಸಲಾಗಿದೆ. ಹೆಚ್ಚಿನ ವಿವರಗಳಿಗೆ ಹಿಂದಿನ ಲೇಖನಗಳನ್ನು ಗಮನಿಸಬಹುದು. ಹೀಗಿರುವಾಗ ಈ ಕಾರ್ಯದರ್ಶಿಯ ಕಾರ್ಯವೈಖರಿ ನಿರ್ದೇಶಿತವೇ ಏಕಾಗಿರಬಾರದು? ಇದಕ್ಕಾಗಿ ಕೆಲವೇ ಕೆಲವು ಕುಟುಂಬಗಳ ಕಪಿಮುಷ್ಠಿಯಲ್ಲಿರುವ ವಿದ್ಯಾಸಂಸ್ಥೆಗಳ ಲಾಭಕ್ಕಾಗಿ ಈ ಧರ್ಮಭಂಜನೆ ಏಕಾಗಿರಬಾರದು? ಒಂದೆಡೆ ವೀರಶೈವ ಲಿಂಗಾಯತ ಒಂದೇ ಎನ್ನುತ್ತಾ ಸ್ವಾಮೀಜಿಗಳ ಪಾದಪೂಜೆ, ಭಕ್ತಿಪ್ರದರ್ಶನ, ಭರಪೂರ ದಕ್ಷಿಣೆ ಕೊಟ್ಟು ಜನರಲ್ಲಿ ಭಾವುಕತೆಯನ್ನು ಬಿಂಬಿಸಿ ಇನ್ನೊಂದೆಡೆ ಪ್ರತ್ಯೇಕ ಧರ್ಮದ ಬದಿಯಲ್ಲಿನ ಬೀಗತನ, ಸ್ವಜಾತಿ ಶಾಖಾಮಠಿಯ ಭಂಜಕಕೃತ್ಯವನ್ನು ಎಲ್ಲಿಯೂ ಖಂಡಿಸದಿರುವುದು ಎಲ್ಲವೂ ಒಂದು ಬಂಡವಾಳಶಾಹಿಗಳ ಸಂಘಟಿತ ತಂತ್ರ ಯಾಕಾಗಿರಬಾರದು ಎಂದು ಇಂದು ಅಖಂಡ ವೀರಶೈವ ಲಿಂಗಾಯತರಲ್ಲಿ ಅನುಮಾನದ ಹುತ್ತಗಳನ್ನೇ ಹುಟ್ಟುಹಾಕಿದೆ. ಆದರೂ ಕುರುಡು ಕಾಂಚಾಣಕ್ಕೆ ಸಭಿಗರು ತಲೆಬಾಗಿಸಿದ್ದಾರೇನೋ ಎನಿಸಿದೆ. 


"ಲಿಂಗವನ್ನು ಸ್ವಾಯತ್ತ ಮಾಡಿಕೊಂಡು ವಿದ್ಯೆಯ ಮಾರಾಟದಲ್ಲಿ ತೊಡಗಿರುವವರು ವೀರಶೈವ ಲಿಂಗಾಯತಕ್ಕೆ ಹೊರಗು" ಎಂಬ ನಿಷ್ಠುರ ಕಟುಸತ್ಯವನ್ನು ಇಂದು ಕವಲುದಾರಿಯಲ್ಲಿರುವ ಅಖಂಡ ವೀರಶೈವ ಲಿಂಗಾಯತ ಸಮಾಜವು ಅರಿತು ನಿರ್ಣಾಯಕ ನಿರ್ಧಾರವನ್ನು ಕಂಡುಕೊಳ್ಳಬೇಕು. ಇಂತಹ ವಿದ್ಯಾ ವ್ಯಾಪಾರದಿಂದಲೇ ತಮ್ಮ ಶ್ರೀಮಂತಿಕೆಯ ಊಳಿಗಮಾನ ಕೋಟೆಯನ್ನು ಕಟ್ಟಿಕೊಂಡ ಸಂಸಾರಿಗಳು, ಮತ್ತು ಶ್ರೀಮಂತ ಮಠಗಳನ್ನು ಮಾಡಿಕೊಂಡ ಸನ್ಯಾಸಿ ವರ್ಗಗಳೆರಡೂ ವಿದ್ಯಾ ವ್ಯಾಪಾರಿಗಳದ್ದೇ ಆಗಿದೆ. ಇವರಲ್ಲಿ ಕೆಲವರು ತೋರಿಕೆಗೆ ಅನಾಥಾಶ್ರಮ, ವೃದ್ದಾಶ್ರಮ ಮಾಡಿದ್ದರೂ ಅದು ಅವರ ಮನದೊಳಗಿನ ಅಪರಾಧೀ ಪ್ರಜ್ಞೆಗಿಂತಲೂ, ಸಮಸಮಾಜ ಕಟ್ಟುವ ಉಳ್ಳವರಿಂದ ಪಡೆದು ಇರದವರಿಗೆ ಹಂಚಿಕೆ ಮಾಡುವ ಕಾಯಕ-ದಾಸೋಹ ಶರಣ ತತ್ವದ ಮೂಲಕ ನಾವು ಸಮಾಜ ಸೇವೆ ಮಾಡುತ್ತಿದ್ದೇವೆ ಎಂಬ ನಂದಿಕೋಡುಗಳಿಗಾಗಿ ಮಾತ್ರ. ಏಕೆಂದರೆ ವಿದ್ಯಾ ವ್ಯಾಪಾರದಿಂದ ಆಯತವಾದ ಸಂಪತ್ತು ಮತ್ತು ದಾಸೋಹಕ್ಕಾಗಿ ವ್ಯಯಿಸಿದ ವೆಚ್ಚದ ನಡುವಿನ ಅಂತರ, ಅಜಗಜಾಂತರ! ಇವರ ವ್ಯಾಪಾರೀ ಸೂತ್ರವು ವೀರಶೈವ ಶಾಸ್ತ್ರಕ್ಕೂ, ವಿರಕ್ತರ ಸೂತ್ರಕ್ಕೂ, ಶರಣರ ಸಿದ್ಧಾಂತಕ್ಕೂ ಎಳ್ಳಷ್ಟೂ ಹೊಂದದು. 


ಈ ವ್ಯಾಪಾರಿಗಳ್ಯಾರೂ ಸಮಾಜ ಬಾಂಧವರಿಗೆ ಸೋಡಿ (Discount) ಕೊಟ್ಟು ಸೀಟು ಕೊಟ್ಟದ್ದು ಅಷ್ಟಕ್ಕಷ್ಟೇ. ಕೆಲ ಸಂಸಾರೀ ವಿದ್ಯಾ ವ್ಯಾಪಾರಿಗಳು ತಮ್ಮ ಸ್ವಜಾತಿ ಬಾಂಧವರಿಗೆ ಜಾತಿ ಅತೀಯತೆಯಲ್ಲಿ ಸೋಡಿ ಸೀಟು, ಉದ್ಯೋಗ ಕೊಟ್ಟಿದ್ದಾರೆಯೇ ಹೊರತು ಅಖಂಡ ಸಮಾಜ ಬಾಂಧವರಿಗಲ್ಲ. ಇದಕ್ಕೆ ಶಿವಶಂಕರಪ್ಪನವರ ಬಾಪೂಜಿ ಸಂಸ್ಥೆ ಸಹ ಹೊರತಲ್ಲ. ಬಾಪೂಜಿ ಸಂಸ್ಥೆಯಲ್ಲಿ ಇತರೆ ವೀರಶೈವ ಜಾತಿಯವರಿಗಿಂತ ನಾಲ್ಕುಪಟ್ಟು ಅಧಿಕ ಸಂಖ್ಯೆಯ ಉದ್ಯೋಗಿಗಳಿರುವುದು ಶಿವಶಂಕರಪ್ಪನವರ ಸ್ವಜಾತಿ ಬಾಂಧವರು! ಶಿವಶಂಕರಪ್ಪನವರು ತಮ್ಮ ಸುಧೀರ್ಘ 95 ವರ್ಷಗಳ ಜೀವಿತದ ಕೊನೆಯ ಮೂವತ್ತು ವರ್ಷಗಳಲ್ಲಿ ತಮ್ಮ ರಾಜಕೀಯ ಮಹತ್ವಾಕಾಂಕ್ಷೆಯ ಉದ್ದೇಶಕ್ಕೆ ಅನಿವಾರ್ಯವಾಗಿ ಲಿಂಗಾಯತ ಒಳಪಂಗಡಗಳ ಜಾತ್ಯಾತೀತ ನಿಲುವನ್ನು ಅಪ್ಪಿಕೊಂಡರು. ಅದರಲ್ಲೂ ವೀರಶೈವ ಮಹಾಸಭಾದ ಅಧ್ಯಕ್ಷರಾದ ಮೇಲೆ ಅನಿವಾರ್ಯವಾಗಿ ಅಖಂಡ ವೀರಶೈವ ಲಿಂಗಾಯತ ಸಮಾಜದ ಬಗ್ಗೆ ಆಸ್ಥೆ ತೋರಿದರೆ ಹೊರತು ಇನ್ಯಾವ ವಿಶೇಷ ಆಸ್ಥೆಯಿಂದಲ್ಲ. ಈ ಬಗ್ಗೆ ಅನುಮಾನವಿರುವವರು ಅವರ ಬಾಪೂಜಿ ಸಂಸ್ಥೆಯಲ್ಲಿರುವ ವೀರಶೈವ ಲಿಂಗಾಯತ ಸಮುದಾಯದ ಉದ್ಯೋಗಿಗಳ ಜಾತಿಗಣತಿ ನಡೆಸಿ ಪರಿಶೀಲಿಸಬಹುದು. ಅವರ ಎಲ್ಲ ಸಾಮಾಜಿಕ ಮುತ್ಸದ್ದಿತನ, ದಾನದತ್ತಿಗಳು, ಧಾರ್ಮಿಕ ಸೇವೆಗಳು ಎಲ್ಲವೂ ಅವರ ಕೊನೆಯ ಮೂವತ್ತೈದು ವರ್ಷಗಳ ಜೀವಿತಾವಧಿಯಲ್ಲಿ ಆದ ಪರಿಪಕ್ವ ಬದಲಾವಣೆಗಳೇ ಹೊರತು ಅವೆಲ್ಲವೂ ಮೊದಲಿನಿಂದ ಇದ್ದಂತಹದ್ದಲ್ಲ. ಈ ಪರಿವರ್ತನೆಗೆ ಕಾರಣ ಅವರ ಪುತ್ರ ಮಲ್ಲಿಕಾರ್ಜುನರು ಎನಿಸುತ್ತದೆ. ತಂದೆಯು ಮಕ್ಕಳ ಭವಿಷ್ಯ ರೂಪಿಸಿದರೆ, ಇಲ್ಲಿ ಮಲ್ಲಿಕಾರ್ಜುನರು ತಮ್ಮ ತಂದೆಯ ನಿವೃತ್ತಿ ವಯಸ್ಸಿನಲ್ಲಿ ಅವರ ರಾಜ್ಯಮಟ್ಟದ ವ್ಯಕ್ತಿತ್ವವನ್ನು ರೂಪಿಸಿದರು. ಇಂದು ಶಿವಶಂಕರಪ್ಪನವರ ಎಲ್ಲಾ ಖ್ಯಾತಿ, ಜನಪ್ರಿಯತೆಯನ್ನು ರೂಪಿಸುವಲ್ಲಿ ಜನಾನುರಾಗಿ ದೂರದರ್ಶಿತ್ವದ ಅವರ ಕೊನೆಯ ಪುತ್ರ ಕಾರಣವೆಂಬುದು ನನ್ನ ವೈಯಕ್ತಿಕ ಅನಿಸಿಕೆಯಾಗಿದೆ. ಮಲ್ಲಿಕಾರ್ಜುನರಂತಹ ಓರ್ವ ಸಮರ್ಥ ಸಮಾಜಸೇವಕರನ್ನು ದಾವಣಗೆರೆಗೆ ಕೊಟ್ಟದ್ದು ಮಾತ್ರ ಶಿವಶಂಕರಪ್ಪನವರ ಸಾಧನೆ ಎನ್ನುವುದೂ ನನ್ನ ವೈಯಕ್ತಿಕ ಅನಿಸಿಕೆಯಾಗಿದೆ.


ಒಟ್ಟಾರೆ ಸಮಗ್ರವಾಗಿ ಶಿವಶಂಕರಪ್ಪನವರ ಸಾಮಾಜಿಕ ಸೇವೆ ಎಷ್ಟು ಗಹನವಾಗಿದೆಯೋ ಅದರ ನೆರಳು ಅಷ್ಟೇ ಕಪ್ಪಾಗಿದೆ. ಈ ಕಪ್ಪನೆಯ ನೆರಳು ಎಲ್ಲಾ ವಿದ್ಯಾ ವ್ಯಾಪಾರೀಗಳದ್ದೂ ಆಗಿದೆ.


ಈಗ ಶ್ರೀಯುತರ ನಿಧನದಿಂದ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಸ್ಥಾನ ಖಾಲಿಯಾಗಿದೆ. ಸಮಾಜದ ಇಂತಹ ದುರಿತ ಕಾಲದ ಸನ್ನಿವೇಶದಲ್ಲಿ ಮಹಾಸಭಾದ ರಾಷ್ಟೀಯ ಅಧ್ಯಕ್ಷ ಸ್ಥಾನಕ್ಕೆ ಮತ್ತದೇ ಹಳಸಲು ಊಳಿಗಮಾನ ವಂಶಾಡಳಿತದ, ರಾಜಕಾರಣಿಗಳ, ವಿದ್ಯಾ ವ್ಯಾಪಾರಿಗಳ (ಸಂಸಾರಿ ಮತ್ತು ಸನ್ಯಾಸಿ)ಹೆಸರುಗಳು ಮುನ್ನೆಲೆಗೆ ಬಂದಿವೆ. 


ಇಂತಹ ಸನ್ನಿವೇಶದಲ್ಲಿ ಧಾರ್ಮಿಕ ಸಂಸ್ಥೆಯಾದ ಮಹಾಸಭಾದ ಆಯ್ಕೆ ಯಾವುದಾಗಬೇಕು?


ಸದ್ಯಕ್ಕೆ ಈ ಸ್ಥಾನಕ್ಕೆ ಶಾಮನೂರು ಕುಟುಂಬಸ್ಥರಲ್ಲೊಬ್ಬರು, ಎಡೆಯೂರಪ್ಪ, ಈಶ್ವರ್ ಖಂಡ್ರೆ, ಪ್ರಭಾಕರ್ ಕೋರೆ ಅಲ್ಲದೆ ಸುತ್ತೂರು ಶ್ರೀಗಳು ಮತ್ತು ದಿಂಗಾಲೇಶ್ವರ ಶ್ರೀಗಳ ಹೆಸರುಗಳು ಮುನ್ನೆಲೆಯಲ್ಲಿ ಕೇಳಿಬರುತ್ತಿವೆ. ಈ ಎಲ್ಲಾ ಅಭ್ಯರ್ಥಿಗಳೂ ಅವರವರ ಮಾರ್ಗದಲ್ಲಿ ಸಾಧಕರೆನಿಸಿದ್ದರೂ ಇಂದಿನ ದುರಿತ ಕಾಲಮಾನದಲ್ಲಿ ಭಾವೋದ್ವೇಗಕ್ಕೊಳಗಾಗದೆ ಎಲ್ಲವನ್ನೂ ತರ್ಕಕ್ಕೊಡ್ಡಿ ತೂಲಿಸಿ ಅಧ್ಯಕ್ಷರನ್ನು ಆಯ್ಕೆ ಮಾಡುವ ನಿಷ್ಠುರ ನಿರ್ಧಾರ ಸಮಾಜದ ಮುಂದಿದೆ.


ಎಡೆಯೂರಪ್ಪನವರು ವಯೋವೃದ್ಧರು ಎಂಬ ಕಾರಣಕ್ಕೆ ಆಗಲೇ ನಿವೃತ್ತಿ ಹೊಂದಿದ್ದಾರೆ. ಈಶ್ವರ್ ಖಂಡ್ರೆ ಕ್ಯಾಬಿನೆಟ್ ಸಚಿವರಾಗಿ ಅವರದೇ ಕಾರ್ಯಗಳಲ್ಲಿ ಪುರುಸೊತ್ತು ಇಲ್ಲದಂತೆ ಮಗ್ನರಾಗಿದ್ದಾರೆ. ಮೇಲಾಗಿ ಈಗಾಗಲೇ ಮಹಾಸಭಾದ ಉಪಾಧ್ಯಕ್ಷರಾಗಿ ಅವರೂ ಮಹಾಸಭಾದ ಇಂದಿನ ದುಸ್ಥಿತಿಗೆ ಪರೋಕ್ಷ ಕಾರಣರು ಎಂಬ ಜನಾಭಿಪ್ರಾಯವಿದೆ. ಕೋರೆಯವರು ಸಹ ತಮ್ಮ ಸಂಸ್ಥೆಗಳಲ್ಲಿ ಮಗ್ನರು. ಇನ್ನು ಸುತ್ತೂರು ಶ್ರೀಗಳು ಸಹ ಅವರ ದೇಶ ವಿದೇಶದಲ್ಲಿ ಪಸರಿಸಿರುವ ಸಂಸ್ಥೆಗಳಲ್ಲಿ ಮಗ್ನರಾಗಿರುವ ಕಾರಣ ಅವರಿಗೆಷ್ಟು ಸಮಯಾವಕಾಶ ಮಹಾಸಭಾ ಕಾರ್ಯಗಳಿರುತ್ತದೋ ಗೊತ್ತಿಲ್ಲ.


ಅಲ್ಲದೇ ಈ ಹಿಂದೆಯೇ ಚರ್ಚಿಸಿದಂತೆ ಕ್ಯಾಪಿಟೇಶನ್ ಶುಲ್ಕ ನಿರ್ವಾಹಕರಿಂದ ಆದ ಎಡವಟ್ಟುಗಳನ್ನು ಸಮಾಜವು ನಿರ್ದಾಕ್ಷಿಣ್ಯವಾಗಿ ಸ್ವಚ್ಛಗೊಳಿಸಿ ಶುದ್ಧೀಕರಿಸಬೇಕಾದ ಧರ್ಮಕಾರಣದ ತುರ್ತು ಸಮಾಜದ ಮುಂದಿದೆ. ಈ ಹಿನ್ನೆಲೆಯನ್ನು ಪರಿಗಣಿಸಿದಾಗ ಸದ್ಯಕ್ಕೆ ವಿದ್ಯಾಸಂಸ್ಥೆಗಳನ್ನು ನಡೆಸುತ್ತಿರುವ ಎಡೆಯೂರಪ್ಪ, ಈಶ್ವರ್ ಖಂಡ್ರೆ, ಪ್ರಭಾಕರ್ ಕೋರೆ, ಶಾಮನೂರು ಕುಟುಂಬಸ್ಥರು, ಮತ್ತು ಸುತ್ತೂರು ಶ್ರೀಗಳು ಈ ಕುರಿತು ಆಲೋಚಿಸದಿರುವುದೇ ಒಳಿತು. ಹಾಗಾಗಿ ಮೇಲಿನ ಹೆಸರುಗಳಲ್ಲಿ ಕ್ಯಾಪಿಟೇಶನ್ ಶುಲ್ಕ ನಿರ್ವಹಣೆ-ರಹಿತ ಅಭ್ಯರ್ಥಿಗಳೆಂದರೆ ದಿಂಗಾಲೇಶ್ವರ ಸ್ವಾಮೀಜಿಗಳು ಮಾತ್ರ!


ಕ್ಯಾಪಿಟೇಷನ್ ಶುಲ್ಕ ನಿರ್ವಹಣೆಯಲ್ಲದೆ ಊಳಿಗಮಾನ ದೃಷ್ಟಿಯಿಂದ ನೋಡಿದಾಗ ಸಹ ಶಾಮನೂರು ಕುಟುಂಬಸ್ಥರಲ್ಲೊಬ್ಬರು, ಎಡೆಯೂರಪ್ಪ, ಈಶ್ವರ್ ಖಂಡ್ರೆ, ಮತ್ತು ಪ್ರಭಾಕರ್ ಕೋರೆ ಎಲ್ಲರೂ ಊಳಿಗಮಾನ ಪ್ರಜಾಪ್ರಭುತ್ವದ ಪೋಷಕರೇ ಎಂದು ಈಗಾಗಲೇ ಸಾಬೀತಾಗಿದೆ. ಈ ನಾಯಕರ ಎರಡನೇ ತಲೆಮಾರುಗಳು ಆಗಲೇ ಅಧಿಕಾರ ಹೊಂದಿ ಮೂರನೇ ತಲೆಮಾರಿಗೆ ವರ್ಗಾಯಿಸಿದ್ದಾರೆ/ವರ್ಗಾಯಿಸುತ್ತಿದ್ದಾರೆ. ಇನ್ನು ಸುತ್ತೂರು ಮಠವೂ ಸಹ ವಂಶಾಡಳಿತದ ಮಠವೇ ಆಗಿದ್ದು ಊಳಿಗಮಾನ ಮಠೀಯ ವ್ಯವಸ್ಥೆಯನ್ನೇ ಪ್ರತಿನಿಧಿಸುತ್ತದೆ. ಈ ಹಿನ್ನೆಲೆಯಿಂದಲೂ ಸಹ ಸೂಕ್ತವಾಗಿ ಉಳಿಯುವ ಏಕೈಕ ಅಭ್ಯರ್ಥಿ ಎಂದರೆ ದಿಂಗಾಲೇಶ್ವರ ಸ್ವಾಮೀಜಿಗಳು ಮಾತ್ರ!


ಅಂದ ಹಾಗೆ ದಿಂಗಾಲೇಶ್ವರ ಶ್ರೀಗಳು ಎಂದರೆ ಯಾರು?


ಈ ಬಗ್ಗೆ ಅವರ ಕುರಿತು ಕೊಂಚ ಅರಿತುಕೊಂಡಾಗ ತಿಳಿದದ್ದು:


ಮಹಾಸಭಾವನ್ನು ಸ್ಥಾಪಿಸಿದ ಪೂಜ್ಯ ಶ್ರೀ ಹಾನಗಲ್ ಕುಮಾರಸ್ವಾಮಿಗಳ ಶಿವಯೋಗಾಶ್ರಮದಲ್ಲಿ ಸನ್ಯಾಸ ದೀಕ್ಷೆ ಪಡೆದ ಮತ್ತು ವಯಸ್ಸಿನಲ್ಲಿ ಈ ಎಲ್ಲಾ ಅಭ್ಯರ್ಥಿಗಳಿಗಿಂತ ಕಿರಿಯರಾದ ದಿಂಗಾಲೇಶ್ವರ ಶ್ರೀಗಳು ಉತ್ತಮ ಪ್ರವಚನಕಾರರೂ, ವಾಗ್ಮಿಯೂ, ನಿಷ್ಠುರವಾದಿಯೂ, ಗುರು-ವಿರಕ್ತ-ಶರಣ ಸಮನ್ವಯಕಾರರೂ ಎಂದು ಮಾಧ್ಯಮಗಳ ಮೂಲಕ ತಿಳಿಯುತ್ತದೆ. ಶ್ರೀಗಳು ಮೊದಲಿಗೆ ಬಾಲೇಹೊಸೂರು ದಿಂಗಾಲೇಶ್ವರ ಮಠದಲ್ಲಿದ್ದವರು (ಕರ್ತೃ – ಶ್ರೀ ಮ.ನಿ.ಪ್ರ. ದಿಂಗಾಲೇಶ್ವರ ಶಿವಯೋಗಿಗಳು. ಗದಗ ಜಿಲ್ಲೆ ಶಿರಹಟ್ಟಿ ತಾಲ್ಲೂಕಿನ ಬಾಲೇಹೊಸೂರು ಗ್ರಾಮ) ನಂತರ ಶಿರಹಟ್ಟಿ ಫಕೀರೇಶ್ವರ ಮಠಕ್ಕೆ ಪಟ್ಟವಾದರು. ತಮ್ಮ ಅಧಿಕಾರಾವಧಿಯಲ್ಲಿ ಈ ಎರಡೂ ಮಠಗಳ ಕೆಲವು ಗಮನಾರ್ಹ ಅಭಿವೃದ್ಧಿಯನ್ನು ಮಾಡಿದ್ದಾರೆ ಎನ್ನಲಾಗಿದೆ. ಇವೆಲ್ಲಕ್ಕಿಂತ ಧಾರ್ಮಿಕವಾಗಿ ಅಖಂಡ ವೀರಶೈವ ಲಿಂಗಾಯತ ಸಮಾಜದ ೨೦೧೮ ರ ವಿಭಜನೆಯ ವಿರುದ್ಧ ಸಕ್ರಿಯವಾಗಿ ಸಮಾಜವನ್ನು ಸಂಘಟಿಸಿ ಅಖಂಡತೆಯನ್ನು ಎತ್ತಿಹಿಡಿಯುವ ಹೋರಾಟದ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದಾರೆ. ಈ ಹೋರಾಟದ ಸಮಯದಲ್ಲಿ ಮಾತೆ ಮಹಾದೇವಿಯವರನ್ನು ಸಂವಾದದಲ್ಲಿ ಮಣಿಸಿದ್ದು, ಪ್ರತ್ಯೇಕವಾದದ ಹೊರಟ್ಟಿ, ಜಾಮದಾರ ಮುಂತಾದವರನ್ನು ಸಂವಾದಕ್ಕೆ ಆಹ್ವಾನಿಸಿದ್ದು ಮತ್ತವರುಗಳು ಸಂವಾದಿಸಲಾಗದೆ ಹೋದದ್ದು, ಇತ್ತೀಚೆಗೆ ವೀರಣ್ಣ ರಾಜೂರರನ್ನು ವೇದಿಕೆಯ ಮೇಲೆಯೇ ತರಾಟೆಗೆ ತೆಗೆದುಕೊಂಡದ್ದು ಮತ್ತು ಎಲ್ಲಾ ಬಲ್ಲೆನೆಂದು ನರ್ತಿಸುವ ರಂಗಜಂಗಮರ ಅಜ್ಞಾನವನ್ನು ಸೌಮ್ಯವಾಗಿಯೇ ತಕ್ಕ ಉತ್ತರದಿಂದ ಬಯಲಾಗಿಸಿದ್ದು, ವೀರಶೈವ ಲಿಂಗಾಯತರಿಗೆ ತಕ್ಕ ಪ್ರಾತಿನಿಧ್ಯ ಸಿಗದಿದ್ದರೆ ಚುನಾವಣೆಗೆ ಸ್ಪರ್ಧಿಸುವುದಾಗಿ ನಾಮಪತ್ರವನ್ನು ಸಲ್ಲಿಸಿದ್ದುದು ಇವರ ನಿಲುವನ್ನು ಮತ್ತು ಬದ್ಧತೆಯನ್ನು ತೋರುತ್ತದೆ. ಎಲ್ಲಕ್ಕೂ ಮಿಗಿಲಾಗಿ ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಕೇವಲ ಹತ್ತು ದಿನಗಳ ಅವಧಿಯೊಳಗೆ ಗುರು-ವಿರಕ್ತ-ಶರಣ ಪರಂಪರೆಯವರನ್ನು ಒಗ್ಗೂಡಿಸಿ ಪಂಚಾಚಾರ್ಯರನ್ನು ಸಮಾಸನದಲ್ಲಿ ಕೂಡಿಸಿ ಎಲ್ಲಾ ಪಕ್ಷಗಳ ರಾಜಕಾರಣಿಗಳನ್ನೂ ಸೇರಿಸಿ ಏಕತಾ ಸಮಾವೇಶವನ್ನು ನಡೆಸಿದ್ದುದು ಇವರ ಸಂಘಟನಾ ಸಾಧನೆ ಎನ್ನಬಹುದು. ಒಟ್ಟಾರೆ ಯಾವುದೇ ಕ್ಯಾಪಿಟೇಶನ್ ಶುಲ್ಕ ನಿರ್ವಹಣೆ ರಹಿತ, ವಂಶಾಡಳಿತವಿರದ ಮತ್ತು ವೀರಶೈವ ಲಿಂಗಾಯತ ಅಖಂಡತೆಯ ಬದ್ಧತೆ ಹೊಂದಿರುವ ಸಂಘಟನಾ ಶಕ್ತಿಯ ಹೊಚ್ಚ ಹೊಸತನ ಇವರಲ್ಲಿದೆ ಎನ್ನಬಹುದು. ಸದ್ಯದ ಅಧ್ಯಕ್ಷ ಸ್ಥಾನಕ್ಕೆ ಮಂಚೂಣಿಯಲ್ಲಿರುವ ಹೆಸರುಗಳಲ್ಲಿ ದಿಂಗಾಲೇಶ್ವರ ಸ್ವಾಮೀಜಿಗಳ ವ್ಯಕ್ತಿತ್ವ ವಿಭಿನ್ನವೂ ಆಕರ್ಷಕವೂ ಆಗಿರುವುದು ನಿಜ. ಸದ್ಯಕ್ಕೆ ಮಹಾಸಭೆಗೆ ಬೇಕಾಗಿರುವುದೂ ಇಂತಹ ಹೊಚ್ಚ ಹೊಸ ಗುರುತಿನ ನಾಯಕತ್ವವೇ ಆಗಿದೆ. 


ಇದಿಷ್ಟು ಮಹಾಸಭಿಗರ ಮುಂದಿರುವ ಆಯ್ಕೆಯ ಪಟ್ಟಿ.


ಇಂದಿನ ದುರಿತ ಕಾಲದ ಪರಿಸ್ಥಿತಿಯಲ್ಲಿ ಮಹಾಸಭಿಗರು ಥೈಲಿಗೆ ಮಣಿಯದೆ ಲಿಂಗಕ್ಕೆ ನಿಷ್ಠರಾಗಿ ಒಂದು ನಿಷ್ಠುರ, ತಾರ್ಕಿಕ ನಿರ್ಧಾರವನ್ನು ಕೈಗೊಂಡು ಲಿಂಗಾಹತ ನಿರ್ವೀರ್ಯಶವದಂತಿರುವ ಸಂಸ್ಥೆಯನ್ನು ಮತ್ತೊಮ್ಮೆ ಸಂಘಟಿಸಿ ನಿಜಾರ್ಥದ ವೀರಶೈವ ಲಿಂಗಾಯತ ಮಹಾಸಭಾ ಆಗಿಸುವ ನೈತಿಕ ಹೊಣೆಯನ್ನು ಪ್ರದರ್ಶಿಸಬಲ್ಲರೇ!?!


ಅಂಗದ ಮೇಲೊಂದು ಲಿಂಗವು, ಲಿಂಗದ ಮೇಲೊಂದು ಅಂಗವು.

ಆವುದು ಘನವೆಂಬೆ? ಆವುದು ಕಿರಿದೆಂಬೆ ?

ತಾಳೋಷ್ಠಸಂಪುಟಕ್ಕೆ ಬಾರದ ಘನ, ಉಭಯಲಿಂಗವಿರ

ಹಿತವಾದ ಶರಣ.

ಕೂಡಲಚೆನ್ನಸಂಗಾ ಲಿಂಗೈಕ್ಯವು.


- ರವಿ ಹಂಜ್ 

ಲಿಂಗದ ಮೇಲೆ ಕಾಲಿಟ್ಟ ಸ್ವಾಮಿ, ತಪ್ಪೇ?

 ಲಿಂಗದ ಮೇಲೆ ಕಾಲಿಟ್ಟ ಸ್ವಾಮಿ, ತಪ್ಪೇ? 


"ಗುರು ಬ್ರಹ್ಮ ಗುರು ವಿಷ್ಣು:

ಗುರು ದೇವೋ ಮಹೇಶ್ವರಃ

ಗುರು ಸಾಕ್ಷಾತ್ ಪರಬ್ರಹ್ಮ

ತಸ್ಮೈ ಶ್ರೀ ಗುರುವೇ ನಮಃ"

 

ನಾನು ಒಮ್ಮೆ ಚಾಲನಾ ಪರವಾನಗಿ ಪಡೆಯಲು ಹೋಗಿದ್ದೆ. ಅಲ್ಲಿದ್ದ ಅಧಿಕಾರಿ ಒಂದೆರಡು ಚಾಲನಾ ನಿಯಮಗಳ ಪ್ರಶ್ನೆಗಳನ್ನು ಕೇಳಿ ನಂತರ, "ಬ್ರಹ್ಮ ದೊಡ್ಡವನೋ, ಗುರು ದೊಡ್ಡವನೋ?" ಎಂದು ಕೇಳಿದರು. ಆಗ ನನಗೆ ನಿತ್ಯ ಶಾಲೆಯಲ್ಲಿ ಪ್ರಾರ್ಥನೆ ಮಾಡುತ್ತಿದ್ದ ಮೇಲಿನ ಶ್ಲೋಕ ನೆನಪಾಗಿ, "ಗುರು ದೊಡ್ಡವನು" ಎಂದೆನು. ಆಗ ಅಧಿಕಾರಿಯು "ಗುಡ್, ಪರೀಕ್ಷೆ ಪಾಸ್ ಆದೆ, ನಡಿ" ಎಂದು ಪರವಾನಗಿ ದಯಪಾಲಿಸಿದರು. ಹೇಗೂ ಸೀಲು ಒತ್ತಿ ಸಹಿ ಮಾಡಿ ಆಗಿದೆಯೆಲ್ಲ ಎಂದು, "ತಾವು ಕೇಳಿದ ಪ್ರಶ್ನೆ ಇಲ್ಲಿ ಅವಶ್ಯವೇ" ಎಂದು ಕೇಳಿದೆ. ಅದಕ್ಕೆ ಆ ಅಧಿಕಾರಿ, "ಇದು ಭಾರತದ ಪ್ರತಿಯೊಂದು ಮಜಲಿನಲ್ಲಿಯೂ ಕೇಳಬೇಕಾದ ಪ್ರಶ್ನೆ, ನಡಿ" ಎಂದರು.

 

ಭಾರತದ ಸನಾತನ ಸಂಸ್ಕೃತಿಯಲ್ಲಿ ಗುರುವಿಗೆ ದೇವರಿಗಿಂತ ಮಿಗಿಲಾದ ಸ್ಥಾನಮಾನವನ್ನು ಕೊಡಲಾಗಿದೆ. ಈ ಮಹತ್ವವನ್ನು ಹಿಂದೂ ಪ್ರಭೇದದ ಎಲ್ಲಾ ಮತಧರ್ಮಗಳೂ ಪಾಲಿಸುತ್ತವೆ. ಪುರಂದರದಾಸರು, "ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ" ಎಂದು ಪದ ಹಾಡಿದ್ದಾರೆ.

 

ಇನ್ನು ಇದೇ ರೀತಿ ವೀರಶೈವ ಲಿಂಗವಂತರಲ್ಲಿ ಹಿಂದೂ ಪ್ರಭೇದದ ಇತರೆಲ್ಲಾ ಮತಪಂಥಗಳಿಗಿಂತ ಗುರುವಿಗೆ ಅತ್ಯಂತ ಹಿರಿಯ ಸ್ಥಾನವನ್ನು ಕೊಡಲಾಗಿದೆ. 

 

ಶೂನ್ಯಪೀಠದ ಶೂನ್ಯಾಧ್ಯಕ್ಷ ಅಲ್ಲಮನು, 

"ಶ್ರೀಗುರುವೆ ಎನಗೆ ಕಾಯವು, ಶ್ರೀಗುರುವೆ ಎನಗೆ ಪ್ರಾಣವು,

ಶ್ರೀಗುರುವೆ ಎನಗೆ ಇಹವು, ಶ್ರೀಗುರುವೆ ಎನಗೆ ಪರವು,

ಶ್ರೀಗುರುವೆ ಎನಗೆ ಗತಿಯು, ಶ್ರೀಗುರುವೆ ಎನಗೆ ಮತಿಯು,

ಶ್ರೀಗುರುಪಾದವೆ ಎನಗೆ ಘನತರ ಮುಕ್ತಿಗೆ ಕಾರಣವು.

ಗುಹೇಶ್ವರ ಗುಹೇಶ್ವರಾ, ನಿಮ್ಮಾಣೆ ಇದು ಸತ್ಯ." ಎಂದಿದ್ದಾನೆ.

 

ಷಟಸ್ಥಲ ಚಕ್ರವರ್ತಿ ಚೆನ್ನಬಸವಣ್ಣನು,

 

"ಪರುಷವಿದ್ದುದ ಕಂಡು ಪರಿಣಾಮಬಡುವರು,

ಇಷ್ಟಲಿಂಗ ಬಿದ್ದಿತ್ತೆಂದು ಕುತ್ತಿಕೊಂಡು ಸಾವರು.

ಅರಿದರಿದು ಗುರುಶಿಷ್ಯಸಂಬಂಧವು,

ಅರಿವುಳ್ಳವರಿಗಲ್ಲದೆ ಮತ್ತಾರಿಗೆಯೂ ಆಗದು.

ಕುರುಹು ಘನವೋ? ಲಿಂಗ ಘನವೋ? ಅರಿವುಳ್ಳವರು ಹೇಳಿರೆ.

ಮರಹು ಕವಿದಹುದೆಂದು ಕುರುಹ ತೋರಿದನಲ್ಲದೆ

ಅರಿದರಿವ ಮರೆದರೆ ಕೂಡಲಚೆನ್ನಸಂಗಯ್ಯಂಗೆ

ಅವನಂದೇ ದೂರ." 

 

ಎಂದು ಲಿಂಗಕ್ಕಿಂತ ಗುರುವೇ ಪ್ರಮುಖ ಎಂದಿದ್ದಾನೆ.

 

ಭಕ್ತಿ ಭಂಡಾರಿ ಬಸವಣ್ಣನು,

 

"ನೋಡಿ ನೋಡಿ ಮಾಡುವ ನೇಮ ಸಲ್ಲವು, ಸಲ್ಲವು.

ತನುವುದ್ದೇಶ, ಮನವುದ್ದೇಶವಾಗಿ

ಮಾಡುವ ನೇಮ ಸಲ್ಲವು, ಸಲ್ಲವು.

ಗುರುಪಥವ ಮೀರಿ ಮಾಡುವ ನೇಮ ಸಲ್ಲವು, ಸಲ್ಲವು.

ಕೂಡಲಸಂಗಮದೇವಯ್ಯಾ

ಇವು ನಿಮ್ಮ ನಿಜದೊಳಗೆ ನಿಲ್ಲವು, ನಿಲ್ಲವು." 

 

ಎಂದು ಗುರುಪಥಕ್ಕಿಂತ ಮಿಗಿಲಾದ ಯಾವ ಪಥವೂ ಸಲ್ಲದು ಎಂದಿದ್ದಾನೆ.

 

ಇನ್ನು ಆಗಮಗಳಲ್ಲಿ, "ಮಹಾಲಿಂಗವೇ ಗುರುವಿನ ಅನುಗ್ರಹದಿಂದ ಕರಸ್ಥಲಕ್ಕೆ ಬಂದು ಇಷ್ಟಲಿಂಗವಾಗಿದೆ, ಪ್ರಾಣದಲ್ಲಿ ಪ್ರಾಣಲಿಂಗವೆನಿಸಿದೆ, ಭಾವದಲ್ಲಿ ಭಾವಲಿಂಗವೆನಿಸಿದೆ. ಶ್ರೀಗುರುವು ಜೀವನಿಗೆ ದೀಕ್ಷೆ ನೀಡುವಾಗ ಅವನಲ್ಲಿ ಕಂಡುಬರುವ ದೈಹಿಕ, ಮಾನಸಿಕ, ಆಧ್ಯಾತ್ಮಿಕ ಭೇದಗಳನ್ನು ವಿಶ್ಲೇಷಿಸಿ ಸ್ಥೂಲ, ಸೂಕ್ಷ್ಮ, ಕಾರಣ ಶರೀರಗಳನ್ನು ಕಲ್ಪಿಸಿ ಅವುಗಳಲ್ಲಿ ಕ್ರಮವಾಗಿ ಈ ಲಿಂಗಗಳನ್ನು ಸ್ಥಾಪಿಸುವನು. ಕಾರಣ ಇಷ್ಟಲಿಂಗದಲ್ಲಿ ದೃಷ್ಟಿಯೋಗ, ಪ್ರಾಣಲಿಂಗದಲ್ಲಿ ಮನೋಯೋಗ ಮತ್ತು ಭಾವಲಿಂಗದಲ್ಲಿ ಭಾವಯೋಗವನ್ನು ಏಕಕಾಲದಲ್ಲಿ ಸಾಧಿಸಿದ ಸಾಧಕರು ಮುಕ್ತರು. ಈ ಮೂರರ ಸಮನ್ವಯವೇ ಶಿವಯೋಗವೆಂಬುದು ಶೈವಾಗಮದ ಸಿದ್ಧಾಂತ. ಅದೇ ಶಿವಾರಾಧನೆಯ ಕ್ರಮ ಎನ್ನಲಾಗಿದೆ. 

 

ಹೀಗೆ ಹಿಂದೂ ಪ್ರಭೇದಗಳಲ್ಲಿ, ವಚನಗಳಿಗೆ ಮೂಲವಾದ ಆಗಮಗಳಲ್ಲಿ ಮತ್ತು ಸಿದ್ಧಾಂತ ಶಿಖಾಮಣಿಯಲ್ಲಿ ಸಹ ಗುರುವನ್ನು ಶಿವನ ಸಾಕ್ಷಾತ್ ಸ್ವರೂಪವೆನ್ನುತ್ತ ಜ್ಞಾನದಾಯಕ ಮತ್ತು ಲಿಂಗ-ಜಂಗಮದೊಂದಿಗೆ ಆತ್ಮನ ಉದ್ಧಾರಕನೆಂದು ಬಣ್ಣಿಸಲಾಗಿದೆ.  ಗುರು, ಲಿಂಗ, ಜಂಗಮ ಎಂಬ ತ್ರಿವಿಧ ಸಂಪತ್ತಿನಲ್ಲಿ ಗುರುವೇ ಪ್ರಥಮ ಮತ್ತು ಶ್ರೇಷ್ಠವೆಂದು ಪ್ರತಿಪಾದಿಸಲಾಗಿದೆ.

 

ಹಾಗಾಗಿಯೇ ಲಿಂಗವಂತ ವೀರಶೈವರಲ್ಲಿ ಸಕಲ ಅರಿವು, ಕಲಿಕೆ (ಜ್ಞಾನ)ಯಿಂದ ಬಯಲು (ಮುಕ್ತಿ)ಗೆ ಗುರುಕಾರುಣ್ಯವೇ ಅಂತಿಮವಾಗಿದೆ. ಈ ಕಾರಣವಾಗಿಯೇ ಲಿಂಗೋದ್ಭವ (ಗರ್ಭದಲ್ಲಿರುವಾಗಲೇ ಕೊಡುವ ಲಿಂಗದೀಕ್ಷೆ)ದಿಂದ ಲಿಂಗೈಕ್ಯರಾಗಿ ಅಂತಿಮ ಸಂಸ್ಕಾರ ಪಡೆಯುವಾಗಲೂ ಗುರುವೇ ಪರಮವಾಗಿದ್ದಾನೆ. ವೀರಶೈವ ಲಿಂಗವಂತ ಮತದ ಎಲ್ಲಾ ಧರ್ಮಗ್ರಂಥಗಳ ಮುಖೇನ ಸಹ "ಗುರುವೇ ಪರಮೋಚ್ಚ" ಎಂದು ಹೇಳಲಾಗಿದೆ.

 

ಹೀಗಿರುವಾಗ ಅಖಂಡ ವೀರಶೈವ ಮತವನ್ನು ಅವಹೇಳಿಸುತ್ತಾ, ಕೆಲವು ಲಿಂಗಾಹತಿಗಳು ಸಮಾಜದಲ್ಲಿ ಅಶಾಂತಿ ಸೃಷ್ಟಿಸುತ್ತಿದ್ದಾರೆ. ಇದಕ್ಕೆ ಇತ್ತೀಚಿನ ತಾಜಾ ಉದಾಹರಣೆ ಎಂದರೆ ಈ ಚಿತ್ರ! ಇಲ್ಲಿ ವೀರಶೈವ ಧರ್ಮಗುರುಗಳಾದ ರಂಭಾಪುರಿ ಜಗದ್ಗುರುಗಳ ಪಾದಪೂಜೆಯ ಚಿತ್ರವನ್ನು ತಿರುಚಿ "ಲಿಂಗದ ಮೇಲೆ ಕಾಲಿಟ್ಟ ಸ್ವಾಮಿ" ಎಂದು ಅವಹೇಳಿಸಿ ಲಕ್ಷಾಂತರ ಭಕ್ತರ ಭಾವನೆಗಳನ್ನು ಕೆಣಕಲಾಗಿದೆ. ಪಾದಪೂಜೆಯ ಒಂದು ಕ್ರಮವಾಗಿ ಸ್ವಾಮಿಗಳ ಕಾಲಿಗೆ ಪುಷ್ಪಾರ್ಚನೆ ಮಾಡುತ್ತಿರುವ ಚಿತ್ರವನ್ನು ಹಿಡಿದು ವಿಚಿತ್ರ ವಿಕಾರವಾಗಿ ಸಮಾಜದಲ್ಲಿ ಧಾರ್ಮಿಕ ದ್ವೇಷ ಹರಡುತ್ತಿವೆ. 

 

ಹೀಗೆ ಅವಹೇಳಿಸುವವರಿಗಾಗಿಯೇ ಬಸವಣ್ಣನು,

 

“ಕಬ್ಬಿನ ಮೇಲೆ ಜೇನಿಟ್ಟಿತ್ತೆಂಬರು,

ಅವು ಒಂದರ ಸಿಹಿಯನೊಂದರಿಯವು.

ಭಕ್ತ ಜಂಗಮದ ನಡುವೆ ಅರ್ಥಪ್ರಾಣ ಅಭಿಮಾನವೆಂಬ

ಸಿಗುರು ಕಾಡಿತ್ತು ಕಾಣಾ, ಕೂಡಲಸಂಗಮದೇವಾ”

ಎಂದಿದ್ದಾನೆ.

 

ಅಂತೆಯೇ ಗುರುಸ್ವರೂಪಿ ಜಂಗಮನ ಕುರಿತು,

 

“ಗುರು ಮುನಿದಡೆ ಒಂದು ದಿನ ತಾಳುವೆ,

ಲಿಂಗ ಮುನಿದಡೆ ದಿನವರೆ ತಾಳುವೆ.

ಜಂಗಮ ಮುನಿದಡೆ ಕ್ಷಣಮಾತ್ರ ತಾಳಿದೆನಾದಡೆ,

ಎನ್ನ ಪ್ರಾಣದ ಹೋಕು ಕೂಡಲಸಂಗಮದೇವಾ”

 

ಎಂದೂ ಬಸವಣ್ಣನು ಹೇಳಿದ್ದಾನೆ.

 

ಮಡಿವಾಳ ಮಾಚಿದೇವನು ಗುರುವಿನ ಪ್ರಾಮುಖ್ಯತೆಯನ್ನು ಹೀಗೆ ವರ್ಣಿಸಿದ್ದಾನೆ:


"ಅರಿದಲ್ಲದೆ ಗುರುವ ಕಾಣಬಾರದು.

ಅರಿದಲ್ಲದೆ ಲಿಂಗವ ಕಾಣಬಾರದು.

ಅರಿದಲ್ಲದೆ ಜಂಗಮವ ಕಾಣಬಾರದು.

ಇಂತೀ ತ್ರಿವಿಧವು, ಬಸವಣ್ಣನ ಕೃಪೆಯಿಂದ

ಎನಗೆ ಸ್ವಾಯತವಾಯಿತ್ತಾಗಿ,

ಭಿನ್ನವಿಲ್ಲ ಕಾಣಾ ಕಲಿದೇವರದೇವ." 


ಹೀಗೆ ಈ ಲಿಂಗಾಹತಿಗಳೊಪ್ಪದ ಆಗಮ, ಸಿದ್ಧಾಂತ ಶಿಖಾಮಣಿಗಳ ಹೊರತಾಗಿಯೂ ವಚನಸಾಹಿತ್ಯದಲ್ಲಿಯೇ ಗುರುವಿನ ಮಹತ್ವ, ಮತ್ತು ಲಿಂಗಕ್ಕಿಂತ ಗುರುವೇ ಮುಖ್ಯ ಎಂಬ ಧಾರ್ಮಿಕ ನೀತಿಯೇ ವಿಜೃಂಬಿಸಿದೆ. ಇಷ್ಟೆಲ್ಲಾ ಇದ್ದೂ ಅರಿವಿಲ್ಲದ ಅರಿವುಗೇಡಿಗಳು ಅರಿತಿಹೆವೆಂದೆಡೆ ಇವರಿಗೇನು ಲಿಂಗ ಸ್ವಾಯತವಾಗುವುದು? ಹಾಗಾಗಿಯೇ ಇವರು ಲಿಂಗಾಹತರು! ಇವರೆಲ್ಲರೂ ಬಸವಣ್ಣ, ಲಿಂಗಾಯತ, ಲಿಂಗದ ಬಗ್ಗೆ ಮಾತನಾಡಲು ಅನರ್ಹರು.


ಇನ್ನು ಅಸಲಿಗೆ ಈ ಲಿಂಗಾಹತಿಗಳು ಆರೋಪಿಸುವಂತೆ ಲಿಂಗದ ಮೇಲೆ ಕಾಲನ್ನೇ ಇಟ್ಟಿದ್ದರೂ ಅದು ವೀರಶೈವ ಲಿಂಗವಂತ ಧರ್ಮಾನುಷ್ಠಾನದ ಭಾಗವೇ ಆಗಿದೆ! ಇದನ್ನು ಶೂನ್ಯಪೀಠವನ್ನು ಏರಿದ್ದ ಅಲ್ಲಮ, ಚೆನ್ನಬಸವಣ್ಣ , ಸಿದ್ಧರಾಮೇಶ್ವರರಾದಿಯಾಗಿ ತಮ್ಮ ವಚನಗಳಲ್ಲಿ ಸ್ಪಷ್ಟವಾಗಿ ಹೀಗೆಯೇ ಮಾಡಬೇಕೆಂದು ಹೇಳಿದ್ದಾರೆ. ಸಾಕ್ಷ್ಯವಾಗಿ ಚೆನ್ನಬಸವಣ್ಣನ ವಚನ ಹೀಗಿದೆ:


"ವೀರಶೈವಸಂಪನ್ನರಾದ ಸದ್ಭಕ್ತ ಶರಣಗಣಂಗಳಾದಡೆಯೂ

ವೀರಮಾಹೇಶ್ವರರಾದಡೆಯೂ ಕ್ರಿಯಾಪಾದೋದಕ ಮಾಡಬೇಕಾದಡೆ,

ತನ್ನ ಎರಡು ಅಂಗುಲಗಳಿಂದ, ಆ ಮಾಹೇಶ್ವರರ ಅಂಗುಷ್ಠ ಎಂಟು

ಅಂಗುಲಗಳಲ್ಲಿ

ತರ್ಜನಿ ಬೆರಳಿನಿಂದ ಬಲದ ಪಾದಾಂಗುಷ್ಠದ ಮೇಲೆ

ಮೂರು ವೇಳೆ ಸ್ಪರ್ಶನವ ಮಾಡಿ,

ನಾಲ್ಕನೆಯ ವೇಳೆಗೆ ಅದೇ ಬಲಪಾದದ ನಾಲ್ಕು ಬೆರಳುಗಳನ್ನು

ಒಂದು ವೇಳೆ ಸ್ಪರ್ಶನ ಮಾಡಿದಡೆ ಗುರುಪಾದೋದಕವೆನಿಸುವುದು.

ಇದೇ ರೀತಿಯಲ್ಲಿ ಎಡದ ಪಾದವ ಮಾಡಿದಡೆ ಲಿಂಗೋದಕವೆನಿಸುವುದು.

ಈ ಎರಡರ ಕೂಟವೆ ಜಂಗಮಪಾದೋದಕವೆನಿಸುವುದು.

ತನ್ನ ಹಸ್ತದಿಂದ ಪಾದವ ಮುಟ್ಟಿ ಮಾಡಿದಂತಹದೆ

ಸ್ಪರ್ಶನೋದಕವೆನಿಸುವುದು.

ಆ ಪಾದದ ಮೇಲಣ ದ್ರವವ ತೆಗೆದಂತಹದೆ ಅವಧಾನೋದಕವೆನಿಸುವುದು.

ಅದರ ಮೇಲಣ ಅಪೇಕ್ಷೆ ಮುಂದುಗೊಂಡು ತಾನು ಮಾಡಿಕೊಂಡಂತಹದೆ

ಅಪ್ಯಾಯನೋದಕವೆನಿಸುವುದು.

ಹಸ್ತದಿಂದ ಮುಟ್ಟಿ ಮಾಡಿದಂತಹದೆ ಹಸ್ತೋದಕವೆನಿಸುವುದು.

ಆ ಭಾಜನವ ತನ್ನ ಕೈಯಲ್ಲಿ ತೆಗೆದುಕೊಂಡು

ಆ ಜಂಗಮಕ್ಕೆ ನಮಸ್ಕರಿಸುವಂತಹದೆ ನಿರ್ಣಾಮೋದಕವೆನಿಸುವುದು.

ಆ ಜಂಗಮಕ್ಕೆ ನಮಸ್ಕರಿಸಿ ಆ ಭಾಜನವನ್ನು

ತನ್ನ ಕ್ರಿಯೆಗೆ ಇಟ್ಟುಕೊಂಡಂತಹುದೆ ಸತ್ಯೋದಕವೆನಿಸುವುದು_

ಈ ಪ್ರಕಾರದಲ್ಲಿ ಹತ್ತು ಪಾದೋದಕವು, ಶಿಕ್ಷಾಪಾದೋದಕದಲ್ಲಿ ಆಗುವುದೆಂದು

ಅರಿದು ಆಚರಿಸುವುದು.

ಆಚರಿಸಲಾಗದೆಂಬ ಹಚ್ಚಮಾನವರನೇನೆಂಬೆನಯ್ಯಾ

ಕೂಡಲಚೆನ್ನಸಂಗಮದೇವಾ."


ಅದೇ ರೀತಿ ಗುರುಸಿದ್ಧದೇವರ ವಚನ ಹೀಗಿದೆ:


"ಅಯ್ಯ, ಪರಮಸಚ್ಚಿದಾನಂದಮಂತ್ರಮೂರ್ತಿ ಜಂಗಮದೇವನು

ಪ್ರಮಥಗಣಾರಾಧ್ಯ ಭಕ್ತಮಾಹೇಶ್ವರರೊಪ್ಪಿಗೆಯಿಂದ

ನಿರಂಜನಜಂಗಮಕ್ಕೆ ಉಪರಿಸಿಂಹಾಸನ ಮಾಡಿ,

ಮುಹೂರ್ತಮಾಡಿದ ಮೇಲೆ ಷಡಕ್ಷರಮಂತ್ರಸ್ವರೂಪವಾದ

ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ, ಮಧ್ಯದಲ್ಲಿ ಮೂರ್ತಿಗೊಂಡಿರುವ

ಈಶಾನ್ಯಕಲಶ ಮೊದಲಾಗಿ ಪಂಚಕಲಶಂಗಳಿಗೆ

ಜಂಗಮದೀಕ್ಷಾಪಾದೋದಕವ ತುಂಬಿ,

ಮಂಟಪಷಟ್ಸಮ್ಮಾರ್ಜನೆ, ಷಡ್ವಿಧ ವರ್ಣದ ರಂಗಮಾಲೆ,

ನವಧಾನ್ಯ, ನವಸೂತ್ರ, ವಿಭೂತಿವೀಳ್ಯೆ,

ಸುವರ್ಣಕಾಣಿಕೆ, ಪಂಚಮುದ್ರೆ, ಅಷ್ಟವಿಧ

ಷೋಡಶೋಪಚಾರಂಗಳಿಂದೊಪ್ಪುವ

ಸದ್ಯೋಜಾತ, ವಾಮದೇವ, ಅಘೋರ, ತತ್ಪುರುಷ, ಈಶಾನ

ಕಲಶಮೂರ್ತಿಗಳ ಪಶ್ಚಿಮಭಾಗದಲ್ಲಿ

ಜಂಗಮಪಾದ ಸೋಂಕುವಂತೆ ಗುರುವು ಮುಹೂರ್ತಮಾಡಿ,

ಆ ಕಲಶಂಗಳ ಸೂತ್ರವ ತನ್ನ ಪಾದಕ್ಕೆ ಹಾಕಿ,

ತನ್ನ ಚಿದ್ಬೆಳಗಿನ ಮುಂದೆ ಮೂರ್ತಿಗೊಂಡಿರುವ ಕಲಶಂಗಳ

ಪೂರ್ವಭಾಗದಲ್ಲಿ ಕರಿಯಕಂಬಳಿಯ ಗರ್ದುಗೆಯ ಮಾಡಿಸಿ,

ಹಸೆಯ ರಚಿಸಿ, ಆ ಗರ್ದುಗೆಯ ಮೇಲೆ

ಶಿಷ್ಯೋತ್ತಮನ ಮುಹೂರ್ತವ ಮಾಡಿಸಿ, ಆತನಂಗಕ್ಕೆ ಗುರುಸೂತ್ರವ ಹಾಕಿ,

ಶಿಷ್ಯನಂಗದ ಮೇಲೆ ಮೂರ್ತಿಗೊಂಡಿರುವ ಪರಶಿವಲಿಂಗವ

ಗಣಸಾಕ್ಷಿಯಾಗಿ ಶ್ರೀ ಗುರುದೇವನು

ತನ್ನ ಕರಸ್ಥಲದಲ್ಲಿ ಮುಹೂರ್ತವ ಮಾಡಿಸಿ,

"ಆ ಲಿಂಗದ ಮಸ್ತಕದ ಮೇಲೆ ನಿರಂಜನಜಂಗಮದ ಪಾದವಿಡಿಸಿ,"

ಆ ಪಂಚಕಲಶಂಗಳಲ್ಲಿ ಶೋಬ್ಥಿಸುವಂಥ ದೇವಗಂಗಾಜಲಸ್ವರೂಪವಾದ

ಗುರುಪಾದೋದಕವನ್ನು ಒಂದು ಪಾತ್ರೆಯಲ್ಲಿ

ಆ ಕಲಶಂಗಳೈದರಲ್ಲಿ ತೆಗೆದುಕೊಂಡು

ಗುರುವಿನ ದಕ್ಷಿಣಭಾಗದಲ್ಲಿ ಮೂರ್ತಿಗೊಂಡಿರುವ ಪಾದೋದಕ ಕುಂಭದಲ್ಲಿ

ಒಂದು ಬಿಂದುವ ತಗೆದುಕೊಂಡು ಆ ಪಾತ್ರೆಯಲ್ಲಿ ಹಾಕಿ,

ಇವಾರುತೆರದ ಅರ್ಘೋದಕಂಗಳ ಪ್ರಮಥಗಣರಾಧ್ಯ ಭಕ್ತಮಹೇಶ್ವರರೆಲ್ಲ

ಆ ಗುರುವಿನ ಹಸ್ತಕಮಲದಲ್ಲಿರುವಂಥ ಉದಕವನ್ನು ತೆಗೆದುಕೊಂಡು,

ಶರಣಸತಿ ಲಿಂಗಪತಿಯಾಗಿ ಒಪ್ಪುವ ಶಿಷ್ಯೋತ್ತಮನ

ಮಸ್ತಕದಮೇಲೆ ಮಂತ್ರಧ್ಯಾನದಿಂದ ಸಂಪ್ರೋಕ್ಷಣೆಯ

ಮಾಡುವಂಥಾದೆ ಕಲಶಾಬ್ಥಿಷೇಕದೀಕ್ಷೆ.

ಇಂತುಟೆಂದು ಶ್ರೀಗುರು ನಿಷ್ಕಳಂಕ ಚನ್ನಬಸವರಾಜೇಂದ್ರನು

ನಿರ್ಲಜ್ಜಶಾಂತಲಿಂಗದೇಶಿಕೋತ್ತಮಂಗೆ ನಿರೂಪಮಂ ಕೊಡುತಿರ್ದರು ನೋಡ

ಸಂಗನಬಸವೇಶ್ವರ."


ಬಸವಾದಿ ಶರಣರೇ "ಲಿಂಗದ ಮಸ್ತಕದ ಮೇಲೆ ನಿರಂಜನಜಂಗಮದ ಪಾದವಿಡಿಸಿ..." ಎಂದಿರುವಾಗ ಈ ಲಿಂಗಾಹತಿಗಳು ಯಾವ ಬಸವ, ಯಾವ ಶರಣ, ಯಾವ ವಚನ, ಯಾವ ಲಿಂಗಾಯತದ ಬಗ್ಗೆ ಮಾತನಾಡುತ್ತಿದ್ದಾರೆ?!?!


ಅಂದು ನನಗೆ "ಬ್ರಹ್ಮ ದೊಡ್ಡವನೋ, ಗುರು ದೊಡ್ಡವನೋ" ಎಂದು ಕೇಳಿ ಚಾಲನಾ ಪರವಾನಗಿ ನೀಡಿದಂತೆ ಇಂದು ಗುರು, ಲಿಂಗ, ಜಂಗಮ, ಬಸವಣ್ಣ, ವಚನ, ಲಿಂಗಾಯತದ ಬಗ್ಗೆ ಮಾತನಾಡುವ ಅರ್ಹತಾ ಪತ್ರ ಅತ್ಯವಶ್ಯವಾಗಿದೆ. ಏನೊಂದರಿಯದೆ ಎಂತೆಂದರಿಯದೆ ಕೇವಲ "ಬಸವಪರ ಸಂಘಟನೆಗಳು"ಎಂದರೆ ಅವು ಭಕ್ತಿ ಭಂಡಾರಿ ಬಸವಣ್ಣನ ಹೆಸರಿನ ಸಂಘಟನೆಗಳಲ್ಲ! ಅವು ಕೇವಲ ಬೀಜವಿರದ ತುಡುಗು ದನಗಳ ಸಂಘಗಳು. ಬಸವ ದಟ್ ಬಸವ ದಿಸ್ ಎಂದು ಎಲ್ಲೆಲ್ಲಿಯೂ ಬುಲ್ ಶಿಟ್ ಹಾಕಿ ಸಮಾಜವನ್ನು ಕಲುಷಿತಗೊಳಿಸುತ್ತಿರುವ ಈ ದನಗಳ ಬಗ್ಗೆ ಸಮಾಜ ಎಚ್ಚರಗೊಂಡು ಪಾಠ ಕಲಿಸುವ ತುರ್ತು ಇಂದು ಅಖಂಡ ವೀರಶೈವ ಲಿಂಗಾಯತ ಸಮಾಜದ ಮುಂದಿದೆ.

 

~ ರವಿ ಹಂಜ್.

ಭಗವದ್ಗೀತೆ ಮತ್ತು ವಚನಗಳು, ಒಂದು ತೌಲನಿಕ ಅಧ್ಯಯನ!

 ಭಗವದ್ಗೀತೆ ಮತ್ತು ವಚನಗಳು, ಒಂದು ತೌಲನಿಕ ಅಧ್ಯಯನ!

 

ಪ್ರಾದೇಶಿಕವಾಗಿ ಭಾಷೆ, ಆಹಾರ, ಜನಾಂಗೀಯ ವಂಶೀಯತೆ, ಭೌಗೋಳಿಕ ಮತ್ತು ಸಾಂಸ್ಕೃತಿಕ ವ್ಯತ್ಯಾಸಗಳಿದ್ದರೂ ಸಹ, ಎಲ್ಲಾ ಪ್ರದೇಶಗಳ ನಡುವೆ ಅನೇಕ ಸಾಮ್ಯತೆಗಳು ಇವೆ. ಕನ್ನಡ, ಇಂಗ್ಲಿಷ್, ಹಿಂದಿ, ಸ್ಪ್ಯಾನಿಷ್, ಜರ್ಮನ್ ಅಥವಾ ಫ್ರೆಂಚ್ ಆಗಿರಲಿ, ಭಾಷಿಕವಾಗಿ ಈ ಸಾಮಾನ್ಯ ಅಂಶಗಳನ್ನು ಪ್ರತಿನಿಧಿಸುವ ಉತ್ತಮ ಉದಾಹರಣೆಗಳೆಂದರೆ ನಾಣ್ನುಡಿಗಳು! ಎಲ್ಲವುಗಳಲ್ಲೂ ಅಂತರಾರ್ಥದ ಮೂಲ ಸಾರ ಒಂದೇ ಆಗಿರುತ್ತದೆ. ಜನಾಂಗೀಯ ವಂಶೀಯತೆ ಮತ್ತು ಸಂಸ್ಕೃತಿಗಳ ಆಧಾರದ ಮೇಲೆ ಉಪಮೆ ಮತ್ತು ರೂಪಕಗಳ ನಿರೂಪಣೆ ವಿಭಿನ್ನವಾಗಿರಬಹುದು, ಆದರೆ ಅವು ಬೋಧಿಸುವ ನೈತಿಕ ಮೌಲ್ಯಗಳ ಸಾರವು ಜಾಗತಿಕವಾಗಿ ಸಾರ್ವತ್ರಿಕವೆನಿಸುತ್ತದೆ. ನಮ್ಮ ಪೂರ್ವಜರ ಜೀವನದ ಪಾಠಗಳಿಂದ ರೂಪುಗೊಂಡ ಈ ಬುದ್ಧಿವಾದದ ಮಾತುಗಳು, ಚುರುಕಾದ, ಸ್ಪಷ್ಟವಾದ, ಸರಳವಾದ ವಾಕ್ಯಗಳಲ್ಲಿ ತಲೆಮಾರುಗಳಿಂದ ತಲೆಮಾರುಗಳಿಗೆ ಉಳಿದುಕೊಂಡಿವೆ. ಕುತೂಹಲಕರ ವಿಷಯವೆಂದರೆ, ಎಲ್ಲ ವಂಶೀಯ ಗುಂಪುಗಳಲ್ಲೂ ಇರುವ ಈ ಏಕವಾಕ್ಯದ ಬುದ್ಧಿವಾದಗಳು, ಮಾನವಕುಲವೆಲ್ಲವೂ ಒಂದೇ ಎಂದು ಬೋಧಿಸುತ್ತವೆ.

 

ನಾವು ಹೊಸ ಭಾಷೆಗಳನ್ನು ಕಲಿಯುವಾಗ ಮತ್ತು ಆ ಭಾಷೆಗಳ ನಡುವೆ ಇರುವ ಗಮನಾರ್ಹ ಸಾದೃಶ್ಯಗಳನ್ನು ಗುರುತಿಸುವಾಗ, ಅದು ನಮಗೆ ಯಾವಾಗಲೂ ಅಚ್ಚರಿಯನ್ನುಂಟುಮಾಡುತ್ತದೆ. ದೂರದ ಅಂತರ ಮತ್ತು ಜನಾಂಗೀಯ ವಂಶೀಯತೆ, ಜೀವನಶೈಲಿ ಮತ್ತು ಸಂಸ್ಕೃತಿಯ ವ್ಯತ್ಯಾಸಗಳಿದ್ದರೂ ಸಹ, ನೈತಿಕ ಮೌಲ್ಯಗಳು ಮತ್ತು ಮಾನವೀಯ ಭಾವನೆಗಳು ಒಂದೇ ಆಗಿವೆ. ಸುಂದರ ಮತ್ತು ಸರಳ ಜೀವನದ ಭಾವನೆಯೇ ಎಲ್ಲ ಸಂಸ್ಕೃತಿಗಳ ಏಕಮಾತ್ರ ಧ್ಯೇಯವಾಗಿತ್ತು ಎಂದು ಅನಿಸುತ್ತದೆ. ಉದಾಹರಣೆಗೆ, ಕನ್ನಡದ ಗಾದೆ, "ಮನಸ್ಸಿದ್ದರೆ ಮಾರ್ಗ" ಎಂಬುದು ಇಂಗ್ಲಿಷಿನಲ್ಲಿ "Where there is a will, there's a way" ಎಂದಾದರೆ ಸ್ಪ್ಯಾನಿಷ್ ಭಾಷೆಯಲ್ಲಿ "donde hay gana, hay mana" ಎಂದಿದೆ. ಅದೇ ಗಾದೆಯ ಇಟಾಲಿಯನ್ ಭಾಷೆಯಲ್ಲಿ "Volere è potere"  ಎಂದೂ, ಫ್ರೆಂಚಿನಲ್ಲಿ, Quand on veut, on peut ಎಂದಿದೆ. ಹೀಗೆ ಒಂದೇ ಗಾದೆಯ ಸಮಾನಾರ್ಥಕ ಗಾದೆಗಳು ಮನುಷ್ಯರ ನಡುವೆ ಯಾವುದೇ ಸಂಪರ್ಕವಿರದಿದ್ದ ಕಾಲದಿಂದಲೂ ಸಮಾನವಾಗಿವೆ. ಇಂತಹ ಐವತ್ತಕ್ಕೂ ಹೆಚ್ಚು ಸ್ಪ್ಯಾನಿಷ್ ಮತ್ತು ಕನ್ನಡದ ಗಾದೆಗಳನ್ನು ಮಿತ್ರರಾದ ರಂಗಸ್ವಾಮಿ ಮೂಕನಹಳ್ಳಿಯವರು "ಸ್ಪ್ಯಾನಿಷ್ ಗಾದೆಗಳು" ಎಂಬ ಕೃತಿಯನ್ನು ಬರೆದಿದ್ದರು. ಅದನ್ನು ನಾನು ಇಂಗ್ಲಿಷಿಗೆ ಅನುವಾದಿಸಿದ್ದೆ. ಕುತೂಹಲದಿಂದ ಈ ಐವತ್ತು ಗಾದೆಗಳನ್ನು ಇಟಾಲಿಯನ್ ಮತ್ತು ಫ್ರೆಂಚಿನಲ್ಲಿ ಹುಡುಕಿದಾಗ ಆ ಭಾಷೆಗಳಲ್ಲೂ ಸಮಾನಾರ್ಥಕ ಗಾದೆಗಳಿರುವುದು ತಿಳಿಯಿತು. 

 

ಹೀಗೆ ಜಾಗತಿಕವಾಗಿ ಗಾದೆಗಳು ಹೇಗೆ ಒಂದೇ ಎನ್ನುವಂತೆ ಇರುವವೋ ಅದೇ ರೀತಿ ಮಾನವನ ವೈಯಕ್ತಿಕ ಮತ್ತು ಸಾಮಾಜಿಕ ಜೀವನ ಮೌಲ್ಯಗಳನ್ನು ಎಲ್ಲ ಮತಧರ್ಮಗಳೂ ಹೊಂದಿವೆ. ಆದರೆ ಈ ಮತಧರ್ಮಗಳಲ್ಲಿ ಆಚರಣೆಯ ವಿಷಯಗಳನ್ನು ಬೇರ್ಪಡಿಸಿ ಕೇವಲ ಮಾನವ ಮೌಲ್ಯಗಳನ್ನು ಪರಿಗಣಿಸಿದಾಗ ಅವೆಲ್ಲವೂ ಒಂದೇ ಆಗಿವೆ ಮತ್ತವು ಮತಧರ್ಮಗಳ ಹೊರತಾಗಿವೆ.

 

ಇಂತಹ ಧರ್ಮಾಚರಣೆಯ ಆಚೆಗಿನ ನೈತಿಕತೆಯು ಭಗವದ್ಗೀತೆಯ ಕರ್ಮಯೋಗವಾಗಿ ವಚನಗಳಲ್ಲಿ "ಕಾಯಕವೇ ಕೈಲಾಸ"ವಾಗಿದೆ. 

 

ಹೀಗೆ ಸನಾತನವಾಗಿದ್ದ ಮತಧರ್ಮಗಳ ಸಂಹಿತೆಗನುಗುಣವಾಗಿ ಇದ್ದಂತಹ ಜೀವನ ಮೌಲ್ಯಗಳನ್ನು ಕೃಷ್ಣನು ಸರಳೀಕರಿಸಿ ಸಂಸ್ಕೃತದಲ್ಲಿ ಭಗವದ್ಗೀತೆಯ ರೂಪದಲ್ಲಿ ಹೇಳಿದ್ದಾನೆ ಎನ್ನುವಂತೆಯೇ ಬಸವಣ್ಣ ಮತ್ತು ಶರಣರು ಸಹ ಸಾಮೂಹಿಕವಾಗಿ ಕನ್ನಡದಲ್ಲಿ ವಚನಗಳ ಮೂಲಕ ಹೇಳಿದರೇ ವಿನಃ "ಛೂ ಮಂತರ್" ಎಂದು ಶೂನ್ಯದಿಂದ ವಚನಗಳನ್ನು ಸೃಷ್ಟಿಸಲಿಲ್ಲ. ಈ ಎಲ್ಲಾ ಮಾನವ ಮೌಲ್ಯಗಳನ್ನು ಕೃಷ್ಣಬಸವಾದಿಶರಣರು ಸನಾತನ ವೇದಾಗಮ ಶಾಸ್ತ್ರಗಳಿಂದ ಹೆಕ್ಕಿ ಹಾಲಿಗೆ ಹೆಪ್ಪು ಹಾಕಿ, ಕಡೆದು ಬೆಣ್ಣೆಯನ್ನು ತೆಗೆದು ತುಪ್ಪ ಮಾಡಿ ಬಡಿಸಿದ್ದಾರೆ. ಇಂತಹ ಕೆನಪದರವನ್ನು ಕೊಟ್ಟಿರುವ ಕಾರಣವೇ ಶ್ರೀಸಾಮಾನ್ಯನಿಗೆ ಸಂಸಾರಿಕ ಜೀವನ ಸಾಗಿಸಲು ಬೇರೇನೂ ಬೇಕಿಲ್ಲದೇ ಇಷ್ಟನ್ನು ಪಾಲಿಸಿಕೊಂಡು ಹೋದರೆ ಸಾಕು ಎಂಬರ್ಥದಲ್ಲಿ ಗೀತೆ ಮತ್ತು ವಚನಗಳು ಇವೆ. ಹಾಗಾಗಿಯೇ ಇದು ಭಕ್ತ ಸ್ಥಲ ಯೋಗಾಚಾರ! ಭಕ್ತ ಸ್ಥಲ ಯೋಗಾಚಾರಕ್ಕಿಂತ ಹೆಚ್ಚಿನ ಆಧ್ಯಾತ್ಮಿಕ ಸಾಧನೆಗೆ ಹೆಚ್ಚಿನ ಅಧ್ಯಯನ, ತಪಸ್ಸು ಬೇಕಾಗುತ್ತದೆ. ಅದಕ್ಕೆ ಯೋಗದ ಅಷ್ಟಾಂಗ ಯೋಗವಿದ್ದರೆ ವೀರಶೈವದಲ್ಲಿ ಮಾಹೇಶ್ವರ, ಪ್ರಸಾದಿ, ಪ್ರಾಣಲಿಂಗಿ, ಶರಣ, ಐಕ್ಯ ಎಂಬ ಷಟ್ಸ್ಥಲಗಳು ಇರುವದು. ಹೀಗೆ ಒಂದು ಸಾಮಾನ್ಯ ತೌಲನಿಕ ಅವಲೋಕನವನ್ನು ಕೈಗೊಂಡರೆ ಎಲ್ಲವೂ ಸ್ಫಟಿಕ ಸದೃಶ ಅನಿಕೇತನದ ಗಮ್ಯವನ್ನೇ ತೆರೆದಿಡುತ್ತದೆ!

 

ಇರಲಿ, ಭಗವದ್ಗೀತೆಯು ಸಾಮಾಜಿಕ ಜೀವನದಲ್ಲಿ ಮಾನವನು ವಹಿಸಬಹುದಾದ ಹಲವಾರು ಕರ್ತವ್ಯ (ಪಾತ್ರ)ಗಳ ವೃತ್ತಿಪರತೆ, ಕರ್ತವ್ಯ ಸಂಹಿತೆ, ಮತ್ತು ನಡಾವಳಿಗಳ ಕೈಪಿಡಿಯಾಗಿದೆ. ಇಲ್ಲಿ ಯಾವುದೇ ಮತಧರ್ಮ ಆಚರಣೆಯ ವಿವರಗಳಿರದೇ ಕೇವಲ ಆಯಾಯ ಜವಾಬ್ದಾರಿಗಳನ್ನು ಯಾವುದೇ ಅರಿಷಡ್ವರ್ಗಗಳಿಗೆ ಎಡೆಯಾಗದೆ ಹೇಗೆ ನಿರ್ವಹಿಸಬೇಕು ಎಂಬ ಕರ್ತವ್ಯ ನಿರ್ವಹಣೆ ನಿಯಮಗಳ ಅನುಸೂಚಿ (code of conduct) ಯ ಮಾರ್ಗದರ್ಶಿಕೆಯಾಗಿ ಹೇಳಲಾಗಿದೆ. ಇಲ್ಲಿ ಮಾನವನೆಂದರೆ ಕೇವಲ ಪುರುಷನಲ್ಲದೆ ಸ್ತ್ರೀಪುರುಷರಾದಿಯಾಗಿ ಎಲ್ಲಾ ಲಿಂಗಾತೀತರೂ ನಿರ್ವಹಿಸಬಹುದಾದ ವೈಯಕ್ತಿಕ ಶಿಶುಧರ್ಮ, ವಿದ್ಯಾರ್ಥಿಧರ್ಮ, ಗುರುಧರ್ಮ, ಪಿತೃಧರ್ಮ, ಮಾತೃಧರ್ಮ, ಗೃಹಸ್ಥಧರ್ಮ, ಮಿತ್ರಧರ್ಮಗಳಲ್ಲದೆ ಸಾಮಾಜಿಕವಾಗಿರುವ ರಾಜ, ಸೈನಿಕ, ದಾಸ, ದಾಸಿಯರಾದಿಯಾಗಿ ಆಚರಿಸುವ ಅವರವರ ವೃತ್ತಿಧರ್ಮವನ್ನು ಹೇಗೆ ರಾಗದ್ವೇಷಗಳಿಗೊಳಗಾಗದೆ ನಿರ್ವಹಿಸಬೇಕು ಎನ್ನುವುದನ್ನು ಹೇಳಲಾಗಿದೆ. ಅಂತೆಯೇ ಅಂತಹ ಕರ್ತವ್ಯಮುಖಿ ಸ್ಥಿತಪ್ರಜ್ಞತೆಯನ್ನು ಸಾಧಿಸುವ ಕರ್ಮಯೋಗಮಾರ್ಗವನ್ನು ವಿವರಿಸಲಾಗಿದೆ ಎಂದು ಸಂಕ್ಷಿಪ್ತವಾಗಿ ಹೇಳಬಹುದು.

 

ಇಲ್ಲಿ ಕರ್ಮ ಎಂಬುದು ಕಾಯಕವೇ ಆಗಿದೆ! ಹಾಗಾಗಿ ಗೀತೆ ಮತ್ತು ವಚನಗಳ ಸಾಮ್ಯತೆಯನ್ನು ಗಮನಿಸೋಣ. ಮೊದಲಿಗೆ ಗೀತೆಯ ಪ್ರಮುಖ ಬೋಧನೆಗಳನ್ನು ಪರಿಶೀಲಿಸಿ ನಂತರ ಅವುಗಳ ಸಮಾನಾರ್ಥದ ವಚನಗಳನ್ನು ತಾಳೆ ಹಾಕಿ ತೂಲಿಸಿ ನೋಡೋಣ.

 

ಭಗವದ್ಗೀತೆಯ ಪ್ರಮುಖ ಬೋಧನೆಗಳು ಹೀಗಿವೆ:

 

"ನಿನಗೆ ನಿಗದಿತ ಕರ್ತವ್ಯವನ್ನು ನಿರ್ವಹಿಸುವ ಹಕ್ಕು ಇದೆ, ಆದರೆ ಕರ್ಮ ಫಲಗಳಿಗೆ ನೀನು ಅರ್ಹನಲ್ಲ." (ಅಧ್ಯಾಯ 2, ಶ್ಲೋಕ 47)
"ಧರ್ಮದ ಅವನತಿ ಮತ್ತು ಅಧರ್ಮದ ಉನ್ನತಿಯಾದಾಗಲೆಲ್ಲಾ, 'ನಾನು' ಉದ್ಭವಿಸುತ್ತೇನೆ" (ಅಧ್ಯಾಯ 4, ಶ್ಲೋಕ 7)
  "'ನಾನು' ಎಲ್ಲಾ ಆಧ್ಯಾತ್ಮಿಕ ಮತ್ತು ಭೌತಿಕ ಲೋಕಗಳ ಮೂಲ. ಎಲ್ಲವೂ 'ನನ್ನಿಂದ' ಹೊರಹೊಮ್ಮುತ್ತದೆ." (ಅಧ್ಯಾಯ 10, ಶ್ಲೋಕ 8)

 

ಇಲ್ಲಿ 'ನಾನು' ಎನ್ನುವದು ಕೃಷ್ಣನಲ್ಲ, ಆತ್ಮ! ನಾನು, ನನ್ನಿಂದ ಎನ್ನುವುದು ಆತ್ಮವನ್ನು ಕುರಿತಾಗಿದೆ. ಒಟ್ಟಾರೆ ಗೀತೆಯ ಅಂತಿಮ ಸಂದೇಶವು, "ಜಾಗೃತಿಯಿಂದ ಬಾಳುವುದು, ನಿಸ್ವಾರ್ಥವಾಗಿ ತನ್ನ ಕರ್ತವ್ಯವನ್ನು ನಿರ್ವಹಿಸುವುದು, ಭಕ್ತಿಯನ್ನು ಬೆಳೆಸುವುದು, ನಿಜವಾದ ಜ್ಞಾನವನ್ನು ಅನ್ವೇಷಿಸುವುದು, ಮತ್ತು 'ತನ್ನ' ಶಾಶ್ವತ ಸ್ವರೂಪವನ್ನು ಅರಿತುಕೊಳ್ಳುವುದು — ಇದರ ಮೂಲಕ ಆಂತರಿಕ ಶಾಂತಿ (ಆತ್ಮ) ಮತ್ತು ಅಂತಿಮ ಮುಕ್ತಿ (ಪರಮಾತ್ಮ) ಪಡೆಯುವುದು" ಎಂದಿದೆ.

 

ಹೀಗೆ ಗೀತೆಯ ಆತ್ಮ(ಕೃಷ್ಣ) ದ ಸಮಗ್ರ ಸಾರವೇ ವಚನಗಳ ಆತ್ಮ (ಲಿಂಗ) ದ  ವಿಸ್ತೃತ ವಾಣಿಗಳಾಗಿವೆ.

 

ಉದಾಹರಣೆಗೆ ಗೀತೆಯ, "ಯೋಗಸ್ಥಃ ಕುರು ಕರ್ಮಾಣಿ ಸಂಗಂ ತ್ಯಕ್ತ್ವಾ ಧನಂಜಯ ।
ಸಿದ್ಧ್ಯಸಿದ್ಧ್ಯೋಃ ಸಮೋ ಭೂತ್ವಾ ಸಮತ್ವಂ ಯೋಗ ಉಚ್ಯತೇ॥"

(ಯೋಗದಲ್ಲಿ ಸ್ಥಿರನಾಗಿರುವ ಅರ್ಜುನ, ಆಸಕ್ತಿಯನ್ನು ತ್ಯಜಿಸಿ ಕರ್ಮಗಳನ್ನು ಮಾಡು, ಯಶಸ್ಸು ಮತ್ತು ವೈಫಲ್ಯದಲ್ಲಿ ಸಮಭಾವನೆಯಿಂದ ಇರು; ಮನಸ್ಸಿನ ಸಮತೋಲನವೇ ಯೋಗ ಎಂದು ಕರೆಯಲ್ಪಡುತ್ತದೆ.)

 

"ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ ।
ಮಾ ಕರ್ಮಫಲಹೇತುರ್ಭೂರ್ಮಾ ತೇ ಸಂಗೋಽಸ್ತ್ವಕರ್ಮಣಿ॥"

(ನಿನಗೆ ನಿರ್ದಿಷ್ಟ ಕರ್ತವ್ಯವನ್ನು ನಿರ್ವಹಿಸುವ ಹಕ್ಕು ಇದೆ, ಆದರೆ ಕರ್ಮ ಫಲಗಳಿಗೆ ನೀನು ಅರ್ಹನಲ್ಲ. ನಿಮ್ಮ ಚಟುವಟಿಕೆಗಳ ಫಲಗಳ ಕಾರಣ ಎಂದು ಎಂದಿಗೂ ಭಾವಿಸಬೇಡ, ಮತ್ತು ನಿಷ್ಕ್ರಿಯತೆಗೆ ಆಸಕ್ತಿ ಹೊಂದಬೇಡ.) ಎನ್ನುವುದನ್ನು ಆಯ್ದಕ್ಕಿ ಮಾರಯ್ಯನು ತನ್ನ ವಚನದಲ್ಲಿ, 

"ಕಾಯಕದಲ್ಲಿ ನಿರತನಾದಡೆ, ಗುರುದರ್ಶನವಾದಡೂ ಮರೆಯಬೇಕು,

ಲಿಂಗಪೂಜೆಯಾದಡೂ ಮರೆಯಬೇಕು,

ಜಂಗಮ ಮುಂದೆ ನಿಂದಿದ್ದಡೂ ಹಂಗ ಹರಿಯಬೇಕು.

ಕಾಯಕವೆ ಕೈಲಾಸವಾದ ಕಾರಣ.

ಅಮರೇಶ್ವರಲಿಂಗವಾಯಿತ್ತಾದಡೂ ಕಾಯಕದೊಳಗು"

 

ಎಂದಿದ್ದಾನೆ.

 

ಅದೇ ರೀತಿ, "ವಾಸಾಂಸಿ ಜೀರ್ಣಾನಿ ಯಥಾ ವಿಹಾಯ
ನವಾನಿ ಗೃಹ್ಣಾತಿ ನರೋಽಪರಾಣಿ ।
ತಥಾ ಶರೀರಾಣಿ ವಿಹಾಯ ಜೀರ್ಣಾ-
ನ್ಯನ್ಯಾನಿ ಸಂಯಾತಿ ನವಾನಿ ದೇಹೀ ॥"

(ಹಳೆಯವುಗಳನ್ನು ತ್ಯಜಿಸಿದ ನಂತರ ವ್ಯಕ್ತಿಯು ಹೊಸ ಬಟ್ಟೆಗಳನ್ನು ಧರಿಸುವಂತೆ, ಹಾಗೆಯೇ ಆತ್ಮವು ಹಳೆಯ ಮತ್ತು ನಿಷ್ಪ್ರಯೋಜಕವಾದ ದೇಹಗಳನ್ನು ತ್ಯಜಿಸಿದ ನಂತರ ಹೊಸ ಭೌತಿಕ ದೇಹಗಳನ್ನು ಸ್ವೀಕರಿಸುತ್ತದೆ.)

 

"ನೈನಂ ಛಿಂದಂತಿ ಶಸ್ತ್ರಾಣಿ ನೈನಂ ದಹತಿ ಪಾವಕಃ ।
ನ ಚೈನಂ ಕ್ಲೇದಯಂತ್ಯಾಪೋ ನ ಶೋಷಯತಿ ಮಾರುತಃ॥"

(ಯಾವುದೇ ಆಯುಧದಿಂದ ಆತ್ಮವನ್ನು ತುಂಡು ತುಂಡಾಗಿ ಮಾಡಲಾಗುವುದಿಲ್ಲ, ಅಗ್ನಿಯಿಂದ ಸುಡಲಾಗುವುದಿಲ್ಲ, ನೀರಿನಿಂದ ನೆನೆಸಲಾಗುವುದಿಲ್ಲ, ಅಥವಾ ಗಾಳಿಯಿಂದ ಒಣಗಿಸಲಾಗುವುದಿಲ್ಲ.) ಎನ್ನುವುದನ್ನೇ ವೀರಶೈವ ಸಿದ್ಧಾಂತವು ಆತ್ಮವನ್ನು ಲಿಂಗರೂಪಿಯಾಗಿ ಕೊಟ್ಟಿದೆ. ಲಿಂಗಕ್ಕೆ ಯಾವುದೇ ಮೈಲಿಗೆಯಿಲ್ಲ. ಇದನ್ನು ಒಮ್ಮೆ ಧರಿಸಿದರೆ ತೆಗೆಯುವ ಪ್ರಮೇಯವೇ ಇಲ್ಲ. ಹಾಗಾಗಿಯೇ ದೇವರ ದಾಸಿಮಯ್ಯನು ನಡುವೆ ಸುಳಿವಾತ್ಮ ಗಂಡೂ ಅಲ್ಲ, ಹೆಣ್ಣೂ ಅಲ್ಲ ಎಂದಿರುವುದು. ಆತ್ಮಕ್ಕೆ ಯಾವುದೇ ಮಡಿ, ಮೈಲಿಗೆ, ಹುಟ್ಟು, ಸಾವು, ಹಸಿವು ಎಂಬುದಿಲ್ಲ ಎಂದು ಅನೇಕ ವಚನಕಾರರು ತಮ್ಮ ವಚನಗಳಲ್ಲಿ ಹೇಳಿದ್ದಾರೆ. ಇದನ್ನೇ ಮೋಳಿಗೆ ಮಾರಯ್ಯನು, 

"ವಸ್ತುವ ಮುಟ್ಟಿ ಇಹಪರದಲ್ಲಿ ಸುಖಿಯಾದೆನೆಂಬನ್ನಬರ,

ಅದು ತನ್ನ ನೆಲೆಯೋ? ಆತ್ಮನ ಭೇದವೋ? ಎಂಬುದ ತಾನರಿತಲ್ಲಿ,

ಇಷ್ಟಲಿಂಗಕ್ಕೆ ದೃಷ್ಟವ ಕೊಟ್ಟು, ಆತ್ಮಲಿಂಗಕ್ಕೆ ತೃಪ್ತಿಯ ಕೊಟ್ಟು,

ನಿಶ್ಚಯಿಸಿಕೊಂಡೆಹೆನೆಂಬುದು ಅದೇನು ಹೇಳಾ.

ಉಭಯಭಿನ್ನವುಳ್ಳನ್ನಕ್ಕ ಪ್ರಾಣಲಿಂಗಿಯಲ್ಲ,

ನಿಃಕಳಂಕ ಮಲ್ಲಿಕಾರ್ಜುನಾ."

 

ಎಂದಿದ್ದಾನೆ.

 

ಗೀತೆಯ, "ಸಮದುಃಖಸುಖಃ ಸ್ವಸ್ಥಃ ಸಮಲೋಷ್ಟಾಶ್ಮಕಾಂಚನಃ ।
ತುಲ್ಯಪ್ರಿಯಾಪ್ರಿಯೋ ಧೀರಸ್ತುಲ್ಯನಿಂದಾತ್ಮಸಂಸ್ತುತಿಃ॥"

(ಎಲ್ಲರೂ ಸಂತೋಷ ಮತ್ತು ದುಃಖದಲ್ಲಿ ಸಮಾನ. ಆತ್ಮದಲ್ಲಿ ಕಲ್ಲು, ಮಣ್ಣು, ಚಿನ್ನ ಸಮಾನವೆಂಬ ಸಮಭಾವ ಸ್ಥಾಪಿಸುವಂತೆ, ಬುದ್ಧಿವಂತನು ಪ್ರಶಂಸೆ ಮತ್ತು ದೂಷಣೆಯನ್ನು ಸಮಾನವಾಗಿ ಪರಿಗಣಿಸುವವನು.) ಎನ್ನುವುದನ್ನು ವಚನಕಾರ ಸಿದ್ಧರಾಮನು, 

"ವರ್ಗ ಪಟ್ಟಣದಲ್ಲಿ ಎರಡೆಂಟು ಕಳೆಗಳನು

ಹದುಳ ಪಟ್ಟಣಮಾಡಿ ಒಪ್ಪಿತೋರಿ

ಸಮತೆ ಅಧಿಕಾರದ ಸುಮತಿಯಾದುದು.

ಗ್ರಾಮ ಭ್ರಮೆಗೆಟ್ಟುದೈ ಬಿಡು ಜ್ಯೋತಿಮತಿರ್ಮಯವೈ.

ಆನಂದ ಪಾತ್ರೆಯ ಸಮತೆ ತೈಲವನೆರೆಯೆ

ಬೆಳಗು ಪ್ರಭೆಯಾಗಿ ದೆಸೆದೆಸೆಗೆವರಿದು,

ಅತಿಶಯದ ನಿತ್ಯ ಕಪಿಲಸಿದ್ಧಮಲ್ಲಿಕಾರ್ಜುನನ

ಎಯ್ದಿದ ಬೆಳಗು ಸಮತೆಯಾದೆ." ಎಂದಿದ್ದಾನೆ.

 

ಅದನ್ನೇ ಅಕ್ಕಮ್ಮನು, "ಸಮಶೀಲ ನೇಮ ಒಂದಾದಲ್ಲಿ ಉಡುವ ತೊಡುವ ಕೊಡುವ ಕೊಂಬ

ಅಡಿಯೆಡೆ ಮುಂತಾಗಿ ಸಕ್ಕರೆಯ ಬುಡಶಾಖೆಯಂತೆ

ಮಧುರಕ್ಕೆ ಹೆಚ್ಚು ಕುಂದಿಲ್ಲದೆ ಇಪ್ಪ ನೇಮ ಕಟ್ಟಾಚಾರ ನಿಶ್ಚಯವಾದವಂಗೆ,

ಅಂಗ ಹಲವಲ್ಲದೆ ಕುಂದಣ ಒಂದೆ ಭೇದ.

ನೇಮ ಹಲವಲ್ಲದೆ ಜ್ಞಾನವೊಂದೆ ಭೇದ.

ಭೂಮಿ ಹಲವಲ್ಲದೆ ಅಪ್ಪುವೊಂದೆ ಭೇದ, ಬಂದ ಯೋನಿ ಒಂದೆ.

ತಾ ಮುಂದಿಕ್ಕುವ ಯೋನಿ ಒಂದಾದ ಕಾರಣ.

ಹಿಟ್ಟು ಹಲವಾದಡೆ ಅಪ್ಪದಕಲ್ಲು ಒಂದೆಯಾದಂತೆ.

ಇದು ತಪ್ಪದ ಆಚಾರ, ಇದಕ್ಕೆ ಮಿಥ್ಯತಥ್ಯವಿಲ್ಲ, ತಪ್ಪದು ನಿಮ್ಮಾಣೆ.

ಆಚಾರಕ್ಕರ್ಹನಾದ ರಾಮೇಶ್ವರಲಿಂಗವೆ ನೀನೆ ಬಲ್ಲೆ." ಎಂದಿದ್ದಾಳೆ.

 

ಗುರು ಚೆನ್ನಬಸವಣ್ಣನು, "ಗುರುವಿನಲ್ಲಿ ಸದಾಚಾರಿ, ಲಿಂಗದಲ್ಲಿ ಶಿವಾಚಾರಿ, ಜಂಗಮದಲ್ಲಿ ಸಮಯಾಚಾರಿ.

ಇಂತೀ ತ್ರಿವಿಧಾಚಾರ ಸಂಬಂಧವಾದ ಬಳಿಕ

ತನ್ನ ಶೀಲಕ್ಕೆ ಸಮಶೀಲವಾಗದವರ

ಮನೆಯಲನುಸರಿಸಿ ನಡೆದಡೆ ಕೂಡಲಚೆನ್ನಸಂಗನ ಶರಣ,

ಪೂರ್ವಾಚಾರ್ಯ ಸಂಗನಬಸವಣ್ಣ ಮೆಚ್ಚ ಕಾಣಿರಣ್ಣಾ." ಎಂದಿದ್ದಾನೆ.

 

ಭಕ್ತಿಯ ಕುರಿತಾದ ಗೀತೆಯ ಶ್ಲೋಕ, "ಮನ್ಮನಾ ಭವ ಮದ್ಭಕ್ತೋ ಮದ್ಯಾಜೀ ಮಾಂ ನಮಸ್ಕುರು ।
ಮಾಮೇವೈಷ್ಯಸಿ ಯುಕ್ತ್ವೈವಮಾತ್ಮಾನಂ ಮತ್ಪರಾಯಣಃ॥"

(ನನ್ನ ಮೇಲೆ ನಿನ್ನ ಮನಸ್ಸನ್ನು ಸ್ಥಿರಪಡಿಸು, ನನ್ನ ಭಕ್ತನಾಗಿರು, ನನ್ನನ್ನು ಆರಾಧಿಸು, ನನಗೆ ನಮಸ್ಕರಿಸು. ಹೀಗೆ, ನಿನ್ನನ್ನು ನನ್ನೊಂದಿಗೆ ಐಕ್ಯಗೊಳಿಸಿಕೊಂಡು ಮತ್ತು ನನ್ನಲ್ಲಿ ಸಂಪೂರ್ಣವಾಗಿ ಲೀನವಾದ ನೀನು ಖಂಡಿತವಾಗಿ ನನ್ನ ಬಳಿಗೆ ಬರುತ್ತೀಯ.)

 

"ಸರ್ವಧರ್ಮಾನ್ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ ।
ಅಹಂ ತ್ವಾಂ ಸರ್ವಪಾಪೇಭ್ಯೋ ಮೋಕ್ಷಯಿಷ್ಯಾಮಿ ಮಾ ಶುಚಃ॥"

(ಎಲ್ಲಾ ರೀತಿಯ ಧರ್ಮವನ್ನು ತ್ಯಜಿಸಿ ಮತ್ತು ನನ್ನಲ್ಲಿ ಶರಣು ಹೋಗು. ನಾನು ನಿನ್ನನ್ನು ಎಲ್ಲಾ ಪಾಪಕ್ರಿಯೆಗಳಿಂದ ಮುಕ್ತಿಗೊಳಿಸುತ್ತೇನೆ. ಭಯಪಡಬೇಡ.) ಎನ್ನುವುದನ್ನು ಅಲ್ಲಮಪ್ರಭು, 

"ಎಣ್ಣೆ ಬೇರೆ ಬತ್ತಿ ಬೇರೆ: ಎರಡೂ ಕೂಡಿ ಸೊಡರಾಯಿತ್ತು.

ಪುಣ್ಯ ಬೇರೆ ಪಾಪ ಬೇರೆ: ಎರಡೂ ಕೂಡಿ ಒಡಲಾಯಿತ್ತು.

ಮಿಗಬಾರದು, ಮಿಗದಿರಬಾರದು, ಒಡಲಿಚ್ಛೆಯ ಸಲಿಸದೆ ನಿಮಿಷವಿರಬಾರದು.

ಕಾಯಗುಣವಳಿದು ಮಾಯಾಜ್ಯೋತಿ ವಾಯುವ ಕೂಡುವ

ಮುನ್ನ,

ಭಕ್ತಿಯ ಮಾಡಬಲ್ಲಡೆ ಆತನೆ ದೇವ ಗುಹೇಶ್ವರಾ." ಎಂದಿದ್ದಾನೆ.


ಎಲ್ಲಕ್ಕೂ ಮಿಗಿಲಾಗಿ ಪರಮಪದ ಕುರಿತು ಗೀತೆಯು, "ಅಹಂ ಸರ್ವಸ್ಯ ಪ್ರಭವೋ ಮತ್ತಃ ಸರ್ವಂ ಪ್ರವರ್ತತೇ ।
ಇತಿ ಮತ್ವಾ ಭಜನ್ತೇ ಮಾಂ ಬುಧಾ ಭಾವಸಮನ್ವಿತಾಃ॥"

(ನಾನು ಎಲ್ಲಾ ಆಧ್ಯಾತ್ಮಿಕ ಮತ್ತು ಭೌತಿಕ ಲೋಕಗಳ ಮೂಲ. ಎಲ್ಲವೂ ನನ್ನಿಂದ ಹೊರಹೊಮ್ಮುತ್ತದೆ. ಇದನ್ನು ತಿಳಿದುಕೊಂಡ ವಿವೇಕಿಗಳು ನನ್ನನ್ನು ತಮ್ಮ ಚೇತನವನ್ನು ನನ್ನಲ್ಲಿ ಲೀನಗೊಳಿಸಿ ಆರಾಧಿಸುತ್ತಾರೆ) ಎಂದಿದ್ದರೆ, ತೋಂಟದ ಸಿದ್ದಲಿಂಗೇಶ್ವರರು,"ಬ್ರಹ್ಮವೆನಲು ಪರಬ್ರಹ್ಮವೆನಲು

ಪರಮನೆನಲು ಪರಮೇಶ್ವರನೆನಲು

ಪರಮಾತ್ಮನೆನಲು ಪರತತ್ವವೆನಲು

ಪರಂಜ್ಯೋತಿಯೆನಲು ಪರವಸ್ತುವೆನಲು ಪರಾಪರವೆನಲು

ಇಂತಿವೆಲ್ಲಾ ನಾಮದಲ್ಲಿಯೂ ಪ್ರಕಾಶಿಸುತ್ತಿಪ್ಪಾತನು ಪರಶಿವನು.

ಪರಶಿವನೆಂದರೆ ಪರಮಾತ್ಮ.

ಪರಮಾತ್ಮನೆಂದರೆ ಮಹಾಲಿಂಗ.

ಆ ಮಹಾಲಿಂಗ ತಾನೆ ಪ್ರಸಾದಲಿಂಗವಾಗಿ ಉದ್ಭವಿಸಿತ್ತು.

ಪ್ರಸಾದಲಿಂಗದಲ್ಲಿ ಜಂಗಮಲಿಂಗ ಹುಟ್ಟಿತ್ತು.

ಜಂಗಮಲಿಂಗದಲ್ಲಿ ಶಿವಲಿಂಗ ಹುಟ್ಟಿತ್ತು.

ಶಿವಲಿಂಗದಲ್ಲಿ ಗುರುಲಿಂಗ ಜನಿಸಿತ್ತು.

ಗುರುಲಿಂಗ ಆಚಾರಲಿಂಗ ಉತ್ಪತ್ಯವಾಯಿತ್ತು.

ಇಂತೀ ಷಡ್ವಿಧಲಿಂಗವೂ ಒಂದರಿಂದೊಂದಾದವು.

ಒಂದನೊಂದ ಕೂಡಿಹವು.

ಇಂತೀ ಷಟ್‍ಸ್ಥಲವೂ ಏಕವೆಂದರಿವುದಯ್ಯಾ,

ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ." ಎಂದಿದ್ದಾರೆ.


 ಒಟ್ಟಾರೆ, ಆತ್ಮ-ಪರಮಾತ್ಮವೆಂಬ ಲಿಂಗಾಂಗ-ಸಾಮರಸ್ಯಕ್ಕೆ ಮಾರ್ಗಗಳಾದ ಕರ್ಮಯೋಗ, ಭಕ್ತಿಯೋಗ ಮತ್ತು ಧ್ಯಾನಯೋಗಗಳೇ ಗೀತೆ ಮತ್ತು ವಚನಗಳ ಅಂಶಗಳಾಗಿವೆ.

 

ಹೀಗೆ ಮೊಗೆದಷ್ಟೂ ಗೀತೆ ಮತ್ತು ವಚನಗಳಲ್ಲಿನ ಅರ್ಥ ಸಾಮ್ಯತೆ ಒಂದಾಗುತ್ತಾ ಎಲ್ಲಾ ಧರ್ಮಗಳ ತಿರುಳು ಒಂದೇ.ಎಂದು ಸಾಬೀತಾಗುತ್ತದೆ. ಲಿಂಗಾಯತ ಪ್ರತ್ಯೇಕಿಗಳು ಎಷ್ಟೇ ವಿಧವಿಧವಾಗಿ 'ನಾವು ಹಿಂದೂಗಳಲ್ಲ' ಎಂದರೂ ಅವರು ಅಷ್ಟೇ ಗಾಢವಾಗಿ ಹಿಂದೂ ಮೂಲವೇ ಆಗಿದ್ದಾರೆ.


ಅಂದ ಹಾಗೆ ಗೀತೆ ಮತ್ತು ವಚನ ಎರಡೂ ಪದಗಳ ಅರ್ಥವೂ ಒಂದೇ ಅಲ್ಲವೇ?!


- ರವಿ ಹಂಜ್