World Translation Day!

ಒಂದು ಕೃತಿಯ ಅನುವಾದವನ್ನು ಮಾಡುವಾಗ ಅನುವಾದಕ ಮೂಲ ಕೃತಿಯ ಲೇಖಕನೇ ಆಗಿ ಪರಕಾಯ ಪ್ರವೇಶ ಮಾಡಬೇಕು. ತನ್ನ ಕೃತಿಯನ್ನು ಒಂದು ಪ್ರಾದೇಶಿಕ ಭಾಷೆಯಿಂದ ಇಂಗ್ಲಿಷ್ ಎಂಬ ಜಾಗತಿಕ ಭಾಷೆಗಾಗಲಿ ಅಥವಾ ಮತ್ತೊಂದು ಪ್ರಾದೇಶಿಕ ಭಾಷೆಗಾಗಲಿ ಹೇಗೆ ಅಳವಡಿಸಬೇಕೆಂಬ ಚಿಂತನೆಗೊಳಪಡಿಸಿ ಅನುವಾದಿಸಬೇಕಾಗುತ್ತದೆ. ಅನುವಾದಿಸಬೇಕಾದ ಭಾಷೆಗೆ ಸರಿಹೊಂದಬಹುದಾದ ನುಡಿಗಟ್ಟುಗಳು, ಗಾದೆಗಳು, ಸೂಕ್ತ ಸಂಭಾಷಣಾ ವೈವಿಧ್ಯತೆ, ಮತ್ತದೇ ಪರಿಸರಕ್ಕೆ ಮತ್ತು ಓದುಗನಿಗೆ ರಿಲೇಟ್ ಯಾ ಹೊಂದುವಂತಹ ಪರಿಭಾಷೆಯಲ್ಲಿ ಮೂಲ ಕೃತಿಯನ್ನು ಪುನರ್ರಚಿಸಬೇಕಾಗುತ್ತದೆ. ಹಾಗೆಂದ ಮಾತ್ರಕ್ಕೆ ಕೃತಿಯನ್ನು ಸಂಪೂರ್ಣವಾಗಿ ಹೊಸದಾಗಿ ರಚಿಸುವುದೆಂದಲ್ಲವೆಂಬ ಎಚ್ಚರಿಕೆಯನ್ನೂ ಇಟ್ಟುಕೊಂಡು ಹೊಸ ಭಾಷೆಗೆ ಮೂಲ ಸೊಗಡನ್ನು ಅಳವಡಿಸುತ್ತ ಸಾಗಬೇಕಾಗುತ್ತದೆ.

ಆದರೆ "ಮೂಲ ಕೃತಿಗೆ ಚ್ಯುತಿ ಬರದಂತೆ" ಎಂಬ ತತ್ವವನ್ನು ಯಥಾವತ್ತಾಗಿ ಹೇರಿಕೊಂಡು ಪದದಿಂದ ಪದವನ್ನೂ ಯಥಾವತ್ತಾಗಿ ಅನುವಾದಿಸುತ್ತಾ ಹೋದರೆ ಆದು ಅಭಾಸವೆನ್ನಿಸಿಬಿಡುತ್ತದೆ. ಅಂತಹ ಸಾಕಷ್ಟು ಅನುವಾದಗಳ ಉದಾಹರಣೆಗಳಿವೆ. ಹಾಗಾಗಿ ಅನುವಾದವೆಂಬುದು ಅತ್ಯಂತ ಶ್ರಮದ ಕೆಲಸ. ಇಲ್ಲಿ ಎರಡು ಭಾಷೆಗಳ ಪಾಂಡಿತ್ಯಕ್ಕಿಂತ ಆ ಭಾಷೆಗಳ ನಿತ್ಯ ಬಳಸುವಿಕೆಯ ಅನುಭವ ಮತ್ತು ಕಥಾವಸ್ತುವಿನ ಗಾಢ ಹಿನ್ನೆಲೆ ಕೂಡಾ ಅತ್ಯಂತ ಪ್ರಮುಖ.

ಈ ಎಲ್ಲಾ ಸೂತ್ರಗಳನ್ನಾಧಾರವಾಗಿಟ್ಟುಕೊಂಡು ಜುಗಾರಿ ಕ್ರಾಸ್ ಅನ್ನು ಅನುವಾದಿಸಿದ್ದೇನೆ. ಅದರ ಒಂದು ಅಧ್ಯಾಯ ತಮ್ಮ ಓದಿಗಾಗಿ ಇಲ್ಲಿದೆ. ಕನ್ನಡ ಸಾಹಿತ್ಯ ಪ್ರೇಮಿಗಳಾದ ತಾವು ಓದಿ ಸೂಕ್ತ ಸಲಹೆಗಳನ್ನು ಕೊಟ್ಟರೆ ಮುಂದೆ ಮಾಡಬಹುದಾದ ಅನುವಾದ ಕಾರ್ಯಗಳಿಗೆ ಅನುಕೂಲ. ಬನ್ನಿ ಕನ್ನಡ ಸಾಹಿತ್ಯವನ್ನು ವಿಶ್ವವ್ಯಾಪಿಯಾಗಿಸಲು ಸಹಕರಿಸಿ.
#World_Translation_Day

No comments: