ವಲಸೆಗಾರರ ಆದಿ ಸಂಯುಕ್ತ ಸಂಸ್ಥಾನ

"ಭಾರತದ ಇತಿಹಾಸದ ಮೂಲ ತುಂಬಾ ಕುತೂಹಲಕರವಾದದ್ದು...ಸಾಮಾನ್ಶರಿಗೆ ಇದನ್ನು ಅರಗಿಸಿಕೂಳ್ಳುವುದು ಕಷ್ಚ! ಇಲ್ಲಿನ ಸಂಸ್ಕೃತಿಗೆ 'ವಲಸೆ' ಬಹುಮುಖ್ಶ ಪಾತ್ರ ವಹಿಸಿದೆ. ವಿಶ್ವದ ಎಲ್ಲಾ ನಾಗರೀಕತೆಗಳ ಸಾರದ ಕಂಪು ಇಲ್ಲಿ ಹರಿದು ಬಂದಿದೆ...ಮೂರುವರೆ ಸಾವಿರ ವರ್ಷಕ್ಕಿಂತಲೂ ಹಿಂದಿನಿಂದ!"
ಹೀಗೆ ಹೇಳಿದವರು ಐತಿಹಾಸಿಕ ಶಿಲ್ಪಕಲೆಯ ಸೊಬಗನ್ನು ಪುನರ್ ಸೃಷ್ಟಿಸುವಲ್ಲಿ ನಿಷ್ಣಾತರಾದ ಗೋವಾ ವಾಸಿಗಳಾದ ಶ್ರೀ ಪುಟ್ಟಸ್ವಾಮಿ ಗುಡಿಕಾರರು, ಕೇವಲ ನನ್ನ ಫೇಸ್ಬುಕ್ ಪೋಸ್ಟಿನಿಂದಲೇ ನನ್ನ ಕೃತಿಯ ಸಮಗ್ರವನ್ನು ಗ್ರಹಿಸಿ ನಿಖರವಾದ ಹೊಳಹಿನಿಂದಲೇ ಹೀಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆ ಹಿನ್ನೆಲೆಯಲ್ಲಿ ಭಾರತವನ್ನು "ವಲಸೆಗಾರರ ಆದಿ ಸಂಯುಕ್ತ ಸಂಸ್ಥಾನ" ಎನ್ನಬಹುದು. ಅಂತಹ ಆದಿ ವಲಸೆಗಾರರ ಭಾರತದಿಂದ "ವಲಸೆಗಾರರ ನವ್ಯ ಸಂಯುಕ್ತ ಸಂಸ್ಥಾನ"ವಾದ ಅಮೆರಿಕಕ್ಕೆ ವಲಸೆ ಹೋದ ನಾನು ಈ ಪುಸ್ತಕವನ್ನು ಬರೆಯುವಂತಾದ್ದು ನನ್ನ ವಲಸೆಯ ಗಮ್ಯ ಗುರಿಯಾಗಿತ್ತೇನೋ!
ನಂಬಿದ ಆದರ್ಶಗಳಿಗೆ, ಮತ್ತು ಚಾರಿತ್ರಿಕ ಆದರ್ಶ ವ್ಯಕ್ತಿಗಳ ಕಟ್ಟಾಭಿಮಾನಕ್ಕೆ ಬದ್ಧರಾಗಿರುವ ಜನತೆ, ಆ ಆದರ್ಶ ಮತ್ತು ಆದರ್ಶವ್ಯಕ್ತಿಗಳನ್ನು ಯಾವುದೇ ಕೃತಿಗಳು ಪ್ರಶ್ನಿಸಿದರೆ ಒಪ್ಪಿಕೊಳ್ಳುವುದಿರಲಿ ದಂಡೆತ್ತಿ ಹೋಗುವ ಇತಿಹಾಸವಿರುವುದರಿಂದ ಚರಿತ್ರೆಯ ನಿರ್ಭಿಡೆಯ ಸತ್ಯಾತ್ಮಕ ವಿಶ್ಲೇಷಣೆಗಳು ಭಾರತದಲ್ಲಿ ಅಷ್ಟಾಗಿ ಇಲ್ಲ. ಅದನ್ನು ತುಂಬುವ ನಿಟ್ಟಿನಲ್ಲಿ ಇದು ಒಂದು ಪ್ರಯತ್ನ. ನನ್ನ 'ಭಾರತವೆಂಬೋ ಹುಚ್ಚಾಸ್ಪತ್ರೆಯಲ್ಲಿ", ಮತ್ತು "ಕರ್ನಾಟಕವೆಂಬೋ ಕಮಂಗಿಪುರದಲ್ಲಿ" ಎಂಬ ಹ್ಯಾಷ್ಟ್ಯಾಗ್ ಅನ್ನು ಸಾಕಷ್ಟು ಓದುಗರು ಮೆಚ್ಚಿಕೊಂಡು ಮುಕ್ತ ಹೃದಯದಿಂದ ಶ್ಲಾಘಿಸಿರುವ ಹಿನ್ನೆಲೆಯಲ್ಲಿ ನನಗೀ ನಿರ್ಭಿಡ ಪ್ರಾಮಾಣಿಕತೆ ಮೂಡಿಬಂದಿದೆ ಎಂದುಕೊಂಡಿದ್ದೇನೆ.
ಒಟ್ಟಿನಲ್ಲಿ ಪುಟ್ಟಸ್ವಾಮಿ ಗುಡಿಕಾರರು ಹೇಳಿದಂತೆ ಇದನ್ನು ಅರಗಿಸಿಕೊಳ್ಳಲು 'ಮುಕ್ತ' ಮನಸ್ಸು ಅತ್ಯವಶ್ಯಕ. ಯಾರು ಏನೇ ಅಸಹಿಷ್ಣುತೆ ದೇಶದ ತುಂಬೆಲ್ಲಾ ತುಂಬಿದೆ ಎಂದರೂ ಅದು ಕೇವಲ ಅಲ್ಲೊಂದು ಇಲ್ಲೊಂದು ಎಂಬಂತೆ ಕಾಣುವ ಘಟನೆಗಳಿಗೆ ಸೀಮಿತವಾಗಿದೆ ಎಂಬುದು ಸತ್ಯ.
ಒಟ್ಟಿನಲ್ಲಿ ಓದುಗರು ಈ ಕೃತಿಯನ್ನು ಓದಿದ ನಂತರ ನನ್ನನ್ನು ಒದೆಯಲಾರರು ಎಂದು ನಾನು ಬಲವಾಗಿ ನಂಬುವಷ್ಟು ಸಹಿಷ್ಣುತೆ ಇದೆ. ಆ ನಂಬಿಕೆಗೆ ಕಾರಣ ಬರ್ಟೆಂಡ್ ರಸೆಲ್ ನ ಈ ಕೆಳಗಿನ ಮಾತುಗಳು ನನ್ನ ಮಾರ್ಗದರ್ಶಿ ತತ್ವಗಳು.
"ಯಾವುದೇ ಒಂದು ವಿಷಯವನ್ನು ಓದುವಾಗ ಅಥವಾ ಒಂದು ತತ್ವವನ್ನು ಪರಿಗಣಿಸುವಾಗ, ನಾವು ಯಾವುದನ್ನು ನಂಬಲು ಇಚ್ಛಿಸುತ್ತೇವೋ ಅದರೆಡೆ ವಾಲುವುದಾಗಲಿ ಅಥವಾ ಈ ಸತ್ಯಾಂಶಗಳನ್ನು ನಾವು ನಂಬುವುದರಿಂದ ಸಾಮಾಜಿಕವಾಗಿ ಏನು ಒಳಿತಾಗಬಲ್ಲದು ಎಂದೆಲ್ಲ ಆಲೋಚಿಸದೇ ಕೇವಲ ಆ ವಿಷಯದೊಳಗಿನ ವಸ್ತುಸ್ಥಿತಿ ಮತ್ತು ಆ ವಸ್ತುಸ್ಥಿತಿಯಲ್ಲಿನ ಸತ್ಯಾಂಶವನ್ನು ಮಾತ್ರ ಅಂತಿಮವಾಗಿ ಪರಿಗಣಿಸಬೇಕು."
- ಬರ್ಟೆಂಡ್ ರಸೆಲ್
ಇನ್ನು ಕೆಲವೊಮ್ಮೆ ಭಾರತದ ಚರಿತ್ರೆ ಮತ್ತು ಉತ್ಖನನ ಸಂಶೋಧನೆಗಳು ಏಕೆ ಹಳ್ಳ ಹಿಡಿದವು? ಏಕೆಂದರೆ, ಚರಿತ್ರೆಯ ಉತ್ಖನನ ಮತ್ತು ಮಾಹಿತಿ ಮಥನವು ಗಣಿತಜ್ಞ, ಸಂಖ್ಯಾಶಾಸ್ತ್ರಜ್ಞ, ಜೀವಶಾಸ್ತ್ರಜ್ಞ, ಅಭಿಯಂತರಜ್ಞ, ಮುಂತಾದ ತಜ್ಞರ ಕೆಲಸವನ್ನು ಬಯಸುತ್ತದೆ ಅಥವಾ ಆ ಜ್ಞಾನಗಳ ಅನುಭವವಿರುವವರ ಪರಿಣಿತಿಯನ್ನು ಬಯಸುತ್ತದೆ. ಆ ಗ್ಯಾಪ್ ಅನ್ನು ಸಂಶೋಧಕರು ಭಾವನಾತ್ಮಕ ಯಾ ಊಹಾತ್ಮಕವಾಗಿ ತುಂಬಿದ್ದರಿಂದ ಇತಿಹಾಸ ಬೇರೆಯದೇ ಒಂದು ತಿರುವನ್ನು ಪಡೆದುಕೊಂಡಿತು ಎಂಬುದು ತಜ್ಞರ ಅಭಿಪ್ರಾಯ.
ಆ ಒಂದು ವಿವಿಧ ಶಾಸ್ತ್ರಗಳ ವೃತ್ತಿಪರ ಅನುಭವ ನನಗಿರುವುದರಿಂದ ಈ ರೀತಿಯ ಕೃತಿ ನನ್ನಿಂದ ಸಾಧ್ಯವಾಯಿತೇನೋ ಎಂದು ಒಮ್ಮೊಮ್ಮೆ ಅನಿಸಿದ್ದುಂಟು. ಒಟ್ಟಾರೆ ನನ್ನ ವಿಶ್ಲೇಷಣಾ ಅನುಭವವಿಲ್ಲಿ ಅಗಾಧವಾಗಿ ಉಪಯೋಗಕ್ಕೆ ಬಂದುದು ಸತ್ಯ.
ಇನ್ನು ಒಬ್ಬ ಅನಿವಾಸಿ ಕನ್ನಡ ಬರಹಗಾರನಿಗೆ ಬರೆಯುವ ಆಸಕ್ತಿ ಛಲವಿದ್ದರೂ, ಅದನ್ನು ಓದಿ ಸಲಹೆ ಕೊಡಬಲ್ಲ ಆಸಕ್ತ ವಲಯದ ಕೊರತೆ ಅಪಾರ. ಬರೆಯುವ ಓಘದಲ್ಲಿ ಆಗುವ ಕಾಗುಣಿತದ ತಪ್ಪುಗಳು, ತಲೆಯಿಂದ ಬರುವ ಸಿಗ್ನಲ್ಲುಗಳನ್ನು ಬೆರಳುಗಳು ಒಮ್ಮೊಮ್ಮೆ ಸರಿಯಾಗಿ ನಿರ್ವಹಿಸದೇ ಆಗುವ ಅಭಾಸಗಳನ್ನು ಸರಿಪಡಿಸಲು ಬರಹಗಾರ ಎಷ್ಟೇ ಗಮನ ಕೊಟ್ಟಿದ್ದರೂ ಆತನಿಗೆ ಎರಡನೇ ದೃಷ್ಟಿ ಅತ್ಯಗತ್ಯ. ಆ ಎರಡನೇ ದೃಷ್ಟಿಯ ಅಭಾವ ಅನಿವಾಸಿ ಬರಹಗಾರನಿಗೆ ಸದಾ ಅಲಭ್ಯ. ಅದರಲ್ಲೂ ಬರಹದ ವಸ್ತು ಕಾಲ್ಪನಿಕವಲ್ಲದೆ ಸಂಶೋಧನಾ ವಿಷಯವಾಗಿದ್ದರೆ ಆತ ಗೋಬಿ ಮರಳುಗಾಡಿನಲ್ಲಿ ಕಳೆದುಹೋದ ಹುಯೆನ್ ತ್ಸಾಂಗನೇ ಸರಿ.
ಹೀಗಿದ್ದಾಗ ನನ್ನಲ್ಲಿ ವಿಶ್ವಾಸ ತುಂಬಿ, ಕರಡನ್ನು ಓದಿ, ತಪ್ಪುಗಳನ್ನು ಒಬ್ಬ ವೃತ್ತಿನಿರತ ಪ್ರಕಾಶಕರಂತೆ ತಿದ್ದಿ ಕೊಟ್ಟವರು ನನ್ನಂತೆಯೇ ಅನಿವಾಸಿಗಳಾದ ಇಂಗ್ಲೆಂಡಿನ ಡಾ. ಮಠದ ವಿಜಯಕುಮಾರ್. ಸಾಹಿತ್ಯ, ಮುದ್ರಣ ಮತ್ತು ಪ್ರಕಾಶನದ ಕೌಟುಂಬಿಕ ಹಿನ್ನೆಲೆ ಹೊಂದಿದ ವಿಜಯಕುಮಾರರ ಬೆಂಬಲ ಅನನ್ಯ. ಇವರು ಕನ್ನಡ ಕಾವಲುಗಾರರೆಂದು ಖ್ಯಾತರಾದ ಮೈಸೂರು ಪಂಡಿತಾರಾಧ್ಯರ ಸೋದರರು ಕೂಡ.
ಒಟ್ಟಿನಲ್ಲಿ ಓದುಗರು ಈ ಕೃತಿಯನ್ನು ಓದಿದ ನಂತರ ನನ್ನನ್ನು ಒದೆಯಲಾರರು ಎಂದು ನಾನು ಬಲವಾಗಿ ನಂಬುವಷ್ಟು ಸಹಿಷ್ಣುತೆ ದೇಶದಲ್ಲಿ ಇದೆ ಎಂಬುದನ್ನು ಮತ್ತೊಮ್ಮೆ ಹೇಳಲು ಇಚ್ಛಿಸುತ್ತೇನೆ.

No comments: