ಹಾಳೂರಿಗೆ ಉಳಿದವನೇ ಗೌಡ!



ಕರ್ನಾಟಕದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ತಾವು ಕಾಂಗ್ರೆಸ್ ಪಕ್ಷದ ಅಧೀನ. ಹಾಗಾಗಿ ನಿರೀಕ್ಷೆಯಂತೆ ಕೆಲಸ ಮಾಡಲಾಗುತ್ತಿಲ್ಲ ಎಂದು ಗೋಳಾಡುತ್ತಿದ್ದಾರೆ. ಅದನ್ನು ಜನತೆ ಕೂಡ ಒಪ್ಪಿಬಿಟ್ಟಿದೆ. ಇಂತಹ ಹೇಳಿಕೆಗಳು ಬೇರೆ ದೇಶದಲ್ಲಾಗಿದ್ದರೆ ಬಹು ದೊಡ್ಡ ಸುದ್ದಿಯಾಗಿಬಿಡುತ್ತಿದ್ದಿತು. ಆದರೆ ಮುಖ್ಯಮಂತ್ರಿಯವರನ್ನು ಕೆಲಸ ಮಾಡಲು ಬಿಡದ ಅದ್ಯಾವ ಒತ್ತಾಯಗಳನ್ನು ಕಾಂಗ್ರೆಸ್ ಪಕ್ಷ ಅವರ ಮೇಲೆ ಹೇರಿದೆ ಎಂದು ಬಹು ದೊಡ್ಡ ಸುದ್ದಿಯಾಗಬೇಕಾದುದು ಇಂದು ಸುದ್ದಿಯೇ ಎನಿಸದಷ್ಟು ಮತದಾರ ನಿರ್ಲಿಪ್ತನಾಗಿಬಿಟ್ಟಿದ್ದಾನೆ. ಆದರೆ ಅದೇ ಮತದಾರ ಸುಮಲತಾ "ಗೌಡತಿ"ಯೋ ಅಲ್ಲವೋ ಎಂಬುದನ್ನು ಬಹು ಮುಖ್ಯವಾಗಿ ಚರ್ಚಿಸುವುದರಲ್ಲಿ ಬಿಜಿ ಆಗಿದ್ದಾನೆ. ಎಲ್ಲ ಯಕಶ್ಚಿತ್ ವಿಷಯಗಳು ಬಹುಮುಖ್ಯವಾಗಿ, ಬಹುಮುಖ್ಯ ವಿಷಯಗಳು ಯಃಕಶ್ಚಿತವಾಗಿಬಿಟ್ಟಿವೆ. ಈ ಆಂತರಿಕ ಮಿತ್ರಪಕ್ಷಗಳ ನಡುವೆ ವಿರೋಧ ಪಕ್ಷದ ಶಾಸಕರ ಕುದುರೆ ವ್ಯಾಪಾರ ಸಹ ಒಮ್ಮೊಮ್ಮೆ ಸುದ್ದಿಯಾಗುತ್ತಿದೆ. ಅಂದಹಾಗೆ ಈ ಕುದುರೆ ವ್ಯಾಪಾರದ ರೂವಾರಿಗಳೇ ಈ ಕುಮಾರಸ್ವಾಮಿಗಳು! ಇಂದು ಶಾಸಕರ ವ್ಯಾಪಾರ ಆಗಾಗ್ಗೆ ಜಾತ್ರೆಗಳಲ್ಲಿ ಏರ್ಪಡುವ ದನಗಳ ಸಂತೆಯಂತಾಗಿದೆ, ಗೋವಾ, ನೋಯ್ಡಾ, ಬೆಂಗಳೂರು ಇತ್ಯಾದಿ ಜಾತ್ರೆಗಳ ಸಂತೆಮಾಳಗಳಲ್ಲಿ!

ಒಂದೆಡೆ ಇದೇ ರೀತಿ ಪಂಜರದ ಗಿಣಿಯಾಗಿದ್ದ ಮಾಜಿ ಪ್ರಧಾನಿಗಳು ಮಾಜಿಯಾದದ್ದಷ್ಟೇ ಅಲ್ಲದೇ ಅಪಹಾಸ್ಯಕ್ಕೊಳಗಾಗಿ ಚಲನಚಿತ್ರದ ಕಥಾವಸ್ತುವಾಗಿದ್ದರೆ, ಇದಕ್ಕೆ ವ್ಯತಿರಿಕ್ತವಾಗಿ ಬಿಜೆಪಿ ತನ್ನ ಪ್ರಧಾನಮಂತ್ರಿಗೆ ಎಲ್ಲಾ ಸ್ವಾತಂತ್ರ್ಯವನ್ನು ಕೊಟ್ಟಿದೆ. ಪ್ರಜಾಪ್ರಭುತ್ವದ ನಾಯಕನಿರಲಿ ಯಾ ಒಂದು ಕಚೇರಿಯ ಕಾರಕೂನನಿರಲಿ ಆತ ಸ್ವತಂತ್ರವಾಗಿ ಕೆಲಸ ಮಾಡುವಂತಹ ವಾತಾವರಣವಿದ್ದರೆ ಅಲ್ಲಿ ಕ್ರಿಯಾಶೀಲತೆ ಇರುತ್ತದೆ. ರಾಜಕಾರಣದ ನಾಯಕನೆನೆಸಿಕೊಂಡವರು ತಮ್ಮ ನಿರ್ಧಾರಗಳಿಗೆ ಹೊಣೆಯಾಗುವುದು ಈ ತೆರನಾದ ವಾತಾವರಣವಿದ್ದಾಗ ಮಾತ್ರ. ಇಲ್ಲದಿದ್ದರೆ ಪರಸ್ಪರರತ್ತ ತೋರುಬೆರಳು ತೋರಿ ಮತದಾರರಿಗೆ ಮಧ್ಯದ ಬೆರಳು ತೋರುತ್ತಾರೆ.

ಆ ರೀತಿಯ ಕೈಗೊಂಬೆ ರಾಜಕಾರಣ ವ್ಯವಸ್ಥೆಯಿಂದಲೇ ಹಿಂದಿನ ಸರ್ಕಾರಗಳ ಸಾಕಷ್ಟು ರಾಜ್ಯ, ಕೇಂದ್ರದ ಯೋಜನೆಗಳು ಅಡಿಗಲ್ಲು ಹಾಕಿಸಿಕೊಂಡು ಸಮಾಧಿಗಲ್ಲುಗಳಾಗಿವೆ. ಕೈಗೊಂಬೆಯಾಗಿರದ ಕಾರಣ ಮೋದಿಯವರು ಸಾಕಷ್ಟು ಯೋಜನೆಗಳನ್ನು ಸಂಪೂರ್ಣಗೊಳಿಸಿದ್ದಾರೆ. ಆ ಯೋಜನೆಗಳಿಂದ ಸಮಾಜಕ್ಕೆ ಎಷ್ಟು ಒಳಿತಾಗಿದೆ ಎಂಬುದು ಬೇರೆ. ಆದರೆ ಮೋದಿ ಸಾಕಷ್ಟು ಯೋಜನೆಗಳನ್ನು ಹಿಂದಿನ ಸರ್ಕಾರಗಳಿಗಿಂತ ತ್ವರಿತವಾಗಿ ಮುಗಿಸಿರುವುದು ಸತ್ಯ.

ಇನ್ನು ಈ ರೀತಿಯ ಕೈಗೊಂಬೆಯನ್ನಾಗಿಸಿದ್ದಕ್ಕೆ ರಾಜ್ಯದಲ್ಲಿ ಧರಂ ಸಿಂಗ್, ಕೇಂದ್ರದಲ್ಲಿ ಮನಮೋಹನ ಸಿಂಗರು ಸೋತಿದ್ದುದು. ಅದಲ್ಲದೆ ಯಾರ ಕೈಗೊಂಬೆಯೂ ಆಗಿರದಿದ್ದುದಕ್ಕೆ ಇಂದಿರಾಗಾಂಧಿ, ರಾಜೀವ್ ಗಾಂಧಿಯರು ಕೆಲವು ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದುದು. ಭಾರತ ತನ್ನ ಇತಿಹಾಸದಲ್ಲಿ ಪ್ರಗತಿಯನ್ನು ಸಾಧಿಸಿದೆಯೆಂದರೆ ಅದು ಈ ರೀತಿ ಕೈಗೊಂಬೆಯಾಗಿರದ, ನಿಶ್ಚಿತ ನಿಲುವಿನ ಆಡಳಿತವಿದ್ದಾಗ ಮಾತ್ರ.

ಬರಲಿರುವ ೨೦೧೯ರ ಲೋಕಸಭಾ ಚುನಾವಣೆಯಲ್ಲಿ ದೇಶದ ಮುಂದೆ ಮೂರು ಆಯ್ಕೆಗಳಿವೆ.

ಆಯ್ಕೆ ಒಂದು, ಒಂದು ಕುಟುಂಬದ ಕೈಗೊಂಬೆಯಾಗಲಿರುವ ಪ್ರಧಾನಿ. ಈ ಕುರಿತಾಗಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಕರ್ನಾಟಕದ ಹಾಲಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಮೇಲಿನ ಉದಾಹರಣೆಗಳ ಇತಿಹಾಸ ಮತ್ತು ವರ್ತಮಾನಗಳು ಭವಿಷ್ಯದ ಬಗ್ಗೆ ಸ್ಪಷ್ಟ ಚಿತ್ರಣವನ್ನು ನೀಡುತ್ತವೆ. ಆದರೆ ಕಾಂಗ್ರೆಸ್ಸಿನಲ್ಲಿ ಕೌಟುಂಬಿಕ ವ್ಯಕ್ತಿಗಳನ್ನು ಬಿಟ್ಟರೆ ಪರ್ಯಾಯವಾಗಿ ಪ್ರಧಾನಿಯಾಗಬಲ್ಲ ನಾಯಕರಿಲ್ಲವೇ?

ಸ್ಯಾಮ್ ಪಿತ್ರೋಡಾ, ಇಲ್ಲಿಯವರೆಗೆ ಭಾರತ ಕಂಡ ಅಪ್ರತಿಮ ದೂರದರ್ಶಿತ್ವದ ವ್ಯಕ್ತಿ. ಭಾರತದ ದೂರಸಂಪರ್ಕ ತಂತ್ರಜ್ಞಾನಕ್ಕೆ ಇವರು ಹಾಕಿದ ಬುನಾದಿಯ ಫಲವನ್ನು ಭಾರತ ಈಗಲೂ ಉಣ್ಣುತ್ತಿದೆ. ಇವರು ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ಇವರಿಗೆ ಸಂಪೂರ್ಣ ಸ್ವಾತಂತ್ರ್ಯವನ್ನು ರಾಜೀವ್ ಗಾಂಧಿಯವರು ಕೊಟ್ಟಿದ್ದರಿಂದ ಅವರು ಅಂತಹ ಸಾಧನೆಯನ್ನು ಮಾಡಿದ್ದರು. ಆದರೆ ಇದೇ ಪಿತ್ರೋಡಾ ಮನಮೋಹನ್ ಸಿಂಗ್ ಸರ್ಕಾರದಲ್ಲಿ ಕೂಡ ರಾಜೀವ್ ಗಾಂಧಿಯವರಿಗೆ ತಾಂತ್ರಿಕ ಸಲಹೆಗಾರರಾಗಿದ್ದ ರೀತಿಯಲ್ಲಿಯೇ ತಾಂತ್ರಿಕ ಸಲಹೆಗಾರರಾಗಿದ್ದರು. ಆದರೆ ಮನಮೋಹನರಂತೆಯೇ ಇವರನ್ನು ಅಲಂಕಾರೀ ಕೈಗೊಂಬೆಯಾಗಿಸಿದ್ದರಿಂದ ಅವರ ಕ್ರಿಯಾಶೀಲತೆ ನಿಂತ ನೀರಾಯಿತು.

ಶಶಿ ತರೂರ್, ಇವರು ಕೂಡಾ ಅಪ್ರತಿಮ ಕ್ರಿಯಾಶೀಲ ವ್ಯಕ್ತಿ. ವಿಶ್ವಸಂಸ್ಥೆಯಲ್ಲಿದ್ದಾಗ ಸಾಕಷ್ಟು ಕ್ರಿಯಾಶೀಲರಾಗಿದ್ದ ಇವರು ಕಾಂಗ್ರೆಸ್ಸಿನಲ್ಲಿ ಮಾತನಾಡುವ ವಕ್ತಾರಿಕೆಯ ಗೊಂಬೆಯಾಗಿದ್ದಾರೆ. ಇದೇ ರೀತಿ ಜೈರಾಮ್ ರಮೇಶ್ ಬೆದರು ಗೊಂಬೆಯಾಗಿದ್ದಾರೆ. ಕಳೆದ ನಾಲ್ಕೂವರೆ ವರ್ಷಗಳನ್ನು ಹುಡುಗಾಟದ ಚೆಲ್ಲಾಟದಲ್ಲಿ ಕಾಲ ಕಳೆದದ್ದು ಬಿಟ್ಟು ಕಾಂಗ್ರೆಸ್ ಪಕ್ಷ ಒಂದು ರಾಷ್ಟ್ರೀಯಪಕ್ಷವಾಗಿ ಹೊಣೆಗಾರಿಕೆಯಿಂದ ಮೋದಿಯವರನ್ನೆದುರಿಸುವ ಗೋಲ್ ಇಟ್ಟುಕೊಳ್ಳದೆ ಇಲ್ಲಿಯವರೆಗೆ ಟ್ರೋಲ್ ಮೆರೆಸಿದೆ. ಅದಲ್ಲದೆ ಅಂತಿಮ ಸಮಯದಲ್ಲಿ ಕೂಡ ಮತ್ತೊಂದು ಕುಟುಂಬ ಸದಸ್ಯೆಯನ್ನು ತಂದಿತೇ ಹೊರತು ಪರ್ಯಾಯ ನಾಯಕತ್ವವನ್ನಲ್ಲ. ಹಾಗಾಗಿ ಸ್ಯಾಮ್, ಶಶಿ, ರಮೇಶರನ್ನು ಮುಂದೆ ತುರ್ತಾಗಿ ಪರ್ಯಾಯವೆಂದು ಬಿಂಬಿಸಿದರೂ ಅವರೆಲ್ಲ ಕೈಗೊಂಬೆಗಳೆನಿಸಿಬಿಡುತ್ತಾರೆ. ಹಾಗೆ ಕೈಗೊಂಬೆಗಳಾಗಿಸಿಕೊಳ್ಳುವುದಿಲ್ಲವೆಂಬ ಭರವಸೆ ಕೊಟ್ಟು ಈಗಲೂ ಪ್ರಯತ್ನಿಸಿದರೆ ಪ್ರಯಾಯ ಸರ್ಕಾರವನ್ನು ಕೊಡಬಹುದು. ತ್ಯಾಗ, ದೇಶಪ್ರೇಮದ ಕುಟುಂಬವೆನ್ನುವ ಕುಟುಂಬ ಈ ಚುನಾವಣೆಯಲ್ಲಿ ಅಂತಹ ತ್ಯಾಗವನ್ನು ಮೆರೆವುದೆ?

ಆಯ್ಕೆ ಎರಡು, ಬಹು ಕುಟುಂಬಗಳ ಕೈಗೊಂಬೆಯಾಗಲಿರುವ ಪ್ರಧಾನಿ. ಈಗ ಮೋದಿ ವಿರೋಧದ ಮಂಚೂಣಿಯಲ್ಲಿರುವ ಘಟಬಂಧನದ ಘಟಾನುಘಟಿಗಳು ಏನೆಂದು ಇಡೀ ದೇಶವೇ ಅರಿತಿದೆ. ಕೇವಲ ಎರಡು ವರ್ಷಗಳ ಹಿಂದೆ ಇವರೆಲ್ಲರೂ ಪರಸ್ಪರ ಕೆಸರೆರಚುವುದರಲ್ಲಿ ತಲ್ಲೀನರಾಗಿದ್ದರು. ಬಂಗಾಳದ ಶಾರದಾ ಚಿಟ್ ಫಂಡಿನ ಕುರಿತಾಗಿ ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ ಕುರಿತು ಎರಡು ವರ್ಷದ ಹಿಂದೆ ಏನು ಹೇಳಿದ್ದರು ಮತ್ತು ಈಗ ಏನು ಹೇಳಿರುವರು ಎಂಬುದು ಟ್ರೋಲಾಗಿದೆ. ಅಖಿಲೇಶ್ ಯಾದವ್ ಸರ್ಕಾರೀ ಬಂಗಲೆಯನ್ನು ಖಾಲಿ ಮಾಡುವಾಗ ರಾಡಿ ಮಾಡಿಕೊಂಡದ್ದು, ಮಾಯಾವತಿಯ ಆನೆಗಳ ಪ್ರತಿಮೆಗಳು, ದೇವೇಗೌಡರ ಪುತ್ರಪ್ರೇಮ, ಲಲ್ಲೂಪ್ರಸಾದರ ದರ್ಭೆಯ ಗರ್ಭ, ನಾಯ್ಡುರ ಹೊಯ್ದಾಟ, ಎಲ್ಲವೂ ನಗೆಪಾಟಲಾಗಿವೆ. ತಮ್ಮ ಮಾತಿಗೆ ಹೊಣೆಯಾಗದ ಇಂತಹ ವ್ಯಕ್ತಿಗಳು ಸಮಾಜಕ್ಕೆ ಹೊರೆಯಾಗುತ್ತಾರೆಯೇ ಹೊರತು ನಾಯಕರಲ್ಲ. ತಮ್ಮ ಹೇಳಿಕೆಗೇ ಜವಾಬ್ದಾರರಾಗದ ಈ ಎಲ್ಲ ಘಟಬಂಧಕರು ಸಮಾಜಕ್ಕೆ ಹೊರೆ. ಏಕೆಂದರೆ ಬದ್ಧತೆ ನಾಯಕನಾಗುವವನ ಪ್ರಪ್ರಥಮ ಗುಣ.

ಆಯ್ಕೆ ಮೂರು ಸರ್ವಾಧಿಕಾರಿ ಮೋದಿ!  ಈಗಿರುವ ಬಿಜೆಪಿ ಪ್ರಧಾನಿ ಮೋದಿಯವರನ್ನು ಸರ್ವಾಧಿಕಾರಿ ಎಂದು ಅವರ "ವಿರೋಧಿಗಳು" ಬಿಂಬಿಸಿದ್ದಾರೆ. ಈ ವಾದವನ್ನು ಬಿಜೆಪಿಗರು ಬಿಂಬಿಸಿದ್ದರೆ ಅದಕ್ಕೆ ಬೆಲೆ ಮತ್ತು ಬಲವಿದೆಯೇ ಹೊರತು ವಿರೋಧಿಗಳ ವಾದಕ್ಕೆ ಬಲವಿಲ್ಲ.  ಮೋದಿ ಸರ್ವಾಧಿಕಾರಿಯಾಗಿದ್ದರೆ ಅವರ ಸಂಪುಟದ ಕೆಲ ಸಚಿವರು ಹುಚ್ಚಾಟದ ಹೇಳಿಕೆಗಳನ್ನು ನೀಡುತ್ತಿರಲಿಲ್ಲ. ಇಂದಿರಾಗಾಂಧಿಯವರಂತಹ ಸರ್ವಾಧಿಕಾರದ ಉದಾಹರಣೆಗಳು ಮೋದಿ ಬಣದಿಂದ ಕೇಳಿಬಂದಿಲ್ಲ. ಅದಲ್ಲದೆ ಭಾರತದಂತಹ ದೇಶಕ್ಕೆ ಗಟ್ಟಿ ನಿಲುವು ತೋರುವ ನಾಯಕತ್ವವಿದ್ದಾಗ ಮಾತ್ರ ಪ್ರಗತಿಯಾಗಿರುವುದನ್ನು ಇತಿಹಾಸ ತೋರುತ್ತದೆ. ಇದು ಇತಿಹಾಸದ ಚಂದ್ರಗುಪ್ತ ಮೌರ್ಯ, ಅಶೋಕ, ಕನಿಷ್ಕ, ಹರ್ಷ, ಪುಲಕೇಶಿಯರಿಂದ ಇಂದಿರಾ, ರಾಜೀವ್ ಗಾಂಧಿ, ಮೋದಿಯವರಿಗೆ ಸಾಬೀತಾಗಿದೆ. 

ಹಾಗಿದ್ದರೆ ಯಾವುದು ಉತ್ತಮ ಆಯ್ಕೆ ಈ ಮೂರರೊಳಗೆ ಎನ್ನುವ ಪ್ರಶ್ನೆಗಿಂತ ಯಾರು ಗೆಲ್ಲುತ್ತಾರೆ ಎಂಬ ಪ್ರಶ್ನೆ ಇಂದು ಮುಖ್ಯವಾಗಿಬಿಡುತ್ತದೆ. ಏಕೆಂದರೆ ಭಾರತೀಯ ಇಂದು  ರೋಚಕ, ಗಾಳಿಸುದ್ದಿಯ ಅಮಲಿನಲ್ಲಿ ತೇಲುತ್ತಿದ್ದಾನೆ. ಹಾಗಾಗಿ ಯಾರು ಎಷ್ಟು ರೋಚಕತೆಯನ್ನು ಕಟ್ಟಿಕೊಡುವರೋ ಅವರು ಗೆಲ್ಲುತ್ತಾರೆ. ಏಕೆಂದರೆ ಒಂದೊಮ್ಮೆ ಅಪ್ರತಿಮ ಚಿಂತಕರ, ಪ್ರಗತಿಪರರ ನಾಡೆನಿಸಿದ್ದ ಕರ್ನಾಟಕದ ಪ್ರಗತಿಪರರನ್ನೂ ಒಳಗೊಂಡು ಜನತೆ, ಭಾರತದ ಮಾಧ್ಯಮದ ಹುಚ್ಚು ಹೊಳೆಯಲ್ಲಿ ಕೊಚ್ಚಿ ಹೋಗುತ್ತಿದ್ದರೂ ವಿಲಾಸಿ ಕೊಳದಲ್ಲಿ ತೇಲುತ್ತಿರುವಂತೆ ಹೆಮ್ಮೆ ಪಡುತ್ತಿದೆ.

ಇಲ್ಲಿ ಜನತೆ  ಯಾವುದೇ ಪಕ್ಷಕ್ಕೆ ಬಹುಮತ ಕೊಡದಿದ್ದರೆ ಈ ಎಲ್ಲಾ ಆಯ್ಕೆಗಳೂ ಸಂತೆಮಾಳಗಳಲ್ಲಿ ತಲೆದೂಗುವ ಕತ್ತೆಗಳ ಕಾಲು ಹಿಡಿಯುವುದು ಶತಸಿದ್ಧ. ನಿಮ್ಮ ಆಯ್ಕೆ ಈ ಸಂತೆಮಾಳದ ಕತ್ತೆಗಳಾಗದಿರಲಿ  ಅಷ್ಟೇ.

ಇನ್ನು ಅತ್ಯಂತ ವಿಪರ್ಯಾಸಕರ ಸಂಗತಿಯೆಂದರೆ ಈ ಟ್ರೋಲ್ ಮತ್ತು ಗೋಲ್ ನಡುವಿನ ಅಂತರವನ್ನು ಪ್ರಗತಿಪರರು ಕೂಡಾ ಅರಿಯದಿರುವುದು. ಎಂತಹ ಅಪ್ರತಿಮ ಬುದ್ಧಿಜೀವಿಗಳೆನಿಸಿಕೊಂಡವರೆಲ್ಲಾ ಈ ಟ್ರೋಲೆಂಬ ಗೋಲದಲ್ಲಿ ಗಿರಿಗಿರಿ ಗಿರಿಗಿಟ್ಲೆಯಾಗಿರುವುದು. ಇವರೆಲ್ಲ ಇದುವರೆಗೂ ಮೋದಿ ಅವಹೇಳನದಲ್ಲಿ ಕಾಲ ಕಳೆದರೆ ಹೊರತು ಇತರೆ ಪಕ್ಷಗಳು ಒಬ್ಬ ಸಮರ್ಥ ನಾಯಕನನ್ನು ಪರ್ಯಾಯವಾಗಿ ರೂಪಿಸುವಂತೆ ಒತ್ತಡ ಹೇರಲು ಸೋತಿದ್ದಾರೆ. ಏಕೆಂದರೆ ಇವರಿಗೆ ಅವಹೇಳನದ ರೋಚಕತೆಯ "ಕಚಗುಳಿ" ಮುಖ್ಯವಾಗಿತ್ತೇ ಹೊರತು "ಕಳಕಳಿ"ಯಲ್ಲ. ಇವರು ಕಳಕಳಿಯ ಪರಾಕಾಷ್ಠೆ ಕೇವಲ ಹಗಲಿನಲ್ಲದೆ ಇರುಳಿನಲ್ಲಿ ನಡೆದುದನ್ನು ಈ ವಾರ ದೆಹಲಿಯ ಕನ್ನಡ ಭವನ ಕಂಡಿದೆ.

ಯಾವುದೇ ಸಮರ್ಥ ಪರ್ಯಾಯ ಯೋಜನೆಯಿರದೆ ಕೇವಲ ಭಾವುಕತೆ, ರೋಷಾವೇಶಗಳು ಕತೆ, ಕವನಗಳನ್ನು ಬರೆಸಬಲ್ಲುದೆ ಹೊರತು ದೇಶವನ್ನು ಮುನ್ನಡೆಸುವ ಅಂತಃಶಕ್ತಿಯನ್ನಲ್ಲ. ಆ ಒಂದು ಮೂಲಗುಣವನ್ನು ಯಾವುದೇ ಪಕ್ಷ, ನಾಯಕ, ಬುದ್ದಿಜೀವಿ, ಸಾಮಾನ್ಯಜೀವಿಗಳು ಇದುವರೆಗೂ ತೋರಿಲ್ಲ. ಟ್ರೋಲುಗಳಲ್ಲಿ ಸಮಯ ವ್ಯಯಿಸುತ್ತ ತಮ್ಮ ಕ್ರಿಯಾಶೀಲತೆಯನ್ನೇ ಕಳೆದುಕೊಂಡುಬಿಟ್ಟಿದ್ದಾರೆ. ಅದು ಎಷ್ಟರಮಟ್ಟಿಗೆಂದರೆ ನನ್ನ "ಭಾರತವೆಂಬೋ ಹುಚ್ಚಾಸ್ಪತ್ರೆಯಲ್ಲಿ" ಎಂಬ ಟ್ಯಾಗ್ ಲೈನ್ ಬರಹವನ್ನು ಸಾಬಿತುಪಡಿಸಲು ಹಠ ತೊಟ್ಟವರಂತೆ! ಬಹುಶಃ ಇಡೀ ದೇಶವೇ ಮ್ಯಾಡ್ ಕೌ ಡಿಸೀಸ್ ಅಥವಾ ಹೋಲಿ ಕೌ ಡಿಸೀಸಿಗೊಳಗಾಗಿರಬೇಕು.

ಕನಿಷ್ಠ ಪ್ರಗತಿಪರರೆನಿಸಿಕೊಂಡವರು ಇಲ್ಲಿಯವರೆಗೆ ಗಂಭೀರ ಚಿಂತನೆಯನ್ನು ತೋರಿ ವಿರೋಧಪಕ್ಷಗಳ ಮೇಲೆ ಜವಾಬ್ದಾರಿ ಹೇರಿದ್ದರೆ ಘಟಬಂಧನವೆಂಬ ಸೋಲಿಗರ ಗುಂಪಿರದೆ ಒಬ್ಬ ಪ್ರಬಲ ವಿರೋಧಪಕ್ಷದ ನಾಯಕನಿರುತ್ತಿದ್ದನು(ಳು). ಸದ್ಯಕ್ಕೆ ಮೋದಿಯವರನ್ನು ಎದುರಿಸಬಲ್ಲ ಯಾವೊಬ್ಬನೂ ಕಾಣುತ್ತಿಲ್ಲ.

No comments: