ಡಾ. ಕುಮಾರ್ ಅಂಕನಹಳ್ಳಿಯವರ "ಬಯಲಾದ ಹಂಪಿ" ಕೃತಿ ಬಿಡುಗಡೆ ಮಾಡಿ ಮಾತನಾಡಿದ ಮಾತುಗಳು:
ನಮಸ್ತೆ,
ಹಂಪಿ ಎನ್ನುವುದು ಒಂದು ಬೆರಗು, ಕೌತುಕ, ನಿಗೂಢ! ಹಾಗಾಗಿಯೇ ಸಾವಿರಾರು ವಿದೇಶಿಯರು ಹಂಪಿಗೆ ಪ್ರತಿ ವರ್ಷ ಮತ್ತೆ ಮತ್ತೆ ಬರುತ್ತಾರೆ. ಹಲವರು ಹಂಪಿಯನ್ನೇ ಮನೆಯಾಗಿಸಿಕೊಂಡಿದ್ದಾರೆ. ಕೇವಲ ಕೌತುಕವಲ್ಲದೆ ದ್ವಂದ್ವ, ಭಿನ್ನಾಭಿಪ್ರಾಯ, ಅನುಮಾನ, ಪಂಥಬೇಧಗಳ ತವರು ಕೂಡಾ ಈ ಹಂಪಿ! ರಾಮಾಯಣದ ಆಂಜನೇಯನಿಂದ, ಇಂದಿನ ಹಂಪಿ ವಿಶ್ವವಿದ್ಯಾಲಯದವರೆಗೂ ಇತಿಹಾಸದ ಎಲ್ಲಾ ಕಾಲಘಟ್ಟದಲ್ಲಿಯೂ ಆ ಎಲ್ಲಾ ವೈಶಿಷ್ಟ್ಯಗಳನ್ನು ಉಳಿಸಿಕೊಂಡು ಬೆಳೆಸಿಕೊಳ್ಳುತ್ತಾ ಸಾಗಿಬಂದಿದೆ, ಬರುತ್ತಿದೆ.
"ಶೈವ ಪರಂಪರೆಯ ಹಾಲುಮತದ ಹಕ್ಕ ಬುಕ್ಕರಿಂದ ಸ್ಥಾಪಿತಗೊಂಡ ವಿಜಯನಗರ ಸಾಮ್ರಾಜ್ಯದ ನಿಜವಾದ ಸಾಮ್ರಾಟ ಅಲ್ಲಿನ ಅಧಿದೇವತೆಯಾದ ಶ್ರೀ ವಿರೂಪಾಕ್ಷ. ತುಳುನಾಡಿನ ಸಾಳ್ವರು ಆಡಳಿತಕ್ಕೆ ಬರುವವರೆಗೆ ಬುಕ್ಕದೇವರಾಯ, ಪ್ರೌಢದೇವರಾಯರೆಲ್ಲಾ ವಿರುಪಾಕ್ಷನ ಹೆಸರಿನಲ್ಲಿ ರಾಜ್ಯಭಾರ ಮಾಡಿದ್ದಲ್ಲದೆ, ಸಹಿಯನ್ನು ವಿರುಪಾಕ್ಷನ ಹೆಸರಿನಲ್ಲಿಯೇ ಹಾಕುತ್ತಿದ್ದರು. ತುಳುನಾಡಿನ ವೈಷ್ಣವ ಪಂಥದ ಹಿನ್ನೆಲೆಯ ಸಾಳ್ವರು ವಿರುಪಾಕ್ಷನ ಹೆಸರನ್ನು ತೆಗೆದು ಶ್ರೀರಾಮ ಎಂಬ ಅಂಕಿತವನ್ನು ಬಳಸಲಾರಂಭಿಸಿದರು. ತುಳುವ ನರಸನಾಯಕನ ಉಪಪತ್ನಿಯಾದ ತೆಲುಗು ಭಾಷೆಯ ನಾಗಲಾದೇವಿಯ ಮಗನಾದ ಕೃಷ್ಣದೇವರಾಯನನ್ನು ನರಸನಾಯಕನ ಮಂತ್ರಿಯಾಗಿದ್ದ ತೆಲುಗರ ತಿಮ್ಮರಸನು ಪಟ್ಟಕ್ಕೆ ತಂದನು. ನರಸನಾಯಕನ ಪಟ್ಟದರಸಿಯರ ಗಂಡುಸಂತಾನವನ್ನು ಉಪೇಕ್ಷಿಸಿ ತೆಲುಗು ಪ್ರಿಯ ರಾಯನನ್ನು ಪಟ್ಟಕ್ಕೆ ವ್ಯವಸ್ಥಿತವಾಗಿ ತರಲಾಯಿತು. ಮುಂದೆ ಕೃಷ್ಣದೇವರಾಯನು ತನ್ನ ಆಸ್ಥಾನದಲ್ಲಿ ತೆಲುಗು ಪಂಡಿತರಿಗೆ ಸಾಕಷ್ಟು ಸ್ಥಾನಮಾನಗಳನ್ನು ನೀಡಿದ್ದಲ್ಲದೆ ವೈಷ್ಣವ ಗುಡಿಗಳನ್ನು ಕಟ್ಟಿಸಿದನು.
ಈ ಎಲ್ಲಾ ಬೆಳವಣಿಗೆಯು ಮೂಲತಃ ಶೈವ ಸಾಮ್ರಾಜ್ಯವಾಗಿದ್ದನ್ನು ವೈಷ್ಣವವಾಗಿಸಿದ್ದು ಸಹಜವಾಗಿ ಶೈವ-ವೈಷ್ಣವವಲ್ಲದೆ ಕನ್ನಡ-ತೆಲುಗು ವೈರತ್ವಕ್ಕೆ ಕೂಡ ನಾಂದಿಯಾಯಿತು. ಯಾವಾಗ ಕೃಷ್ಣದೇವರಾಯನು ತನ್ನ ದಾಯಾದಿ ಪುತ್ರರನ್ನು ಕಡೆಗಣಿಸಿ ತನ್ನ ತೆಲುಗು ಅಳಿಯಂದಿರನ್ನು ಪಟ್ಟಕ್ಕೆ ತಂದನೋ ಆಗಲೇ ವಿಜಯನಗರದ ಅವನತಿ ಪ್ರಾರಂಭವಾಯಿತು.
ಈ ಮೊದಲು ತೆಲುಗರು ಮುಸ್ಲಿಂ ಅರಸರೊಡಗೂಡಿ ಕನ್ನಡದ ಕುಮಾರರಾಮನ ರುಂಡವನ್ನು ಹಾರಿಸಿದ್ದುದು ಮುಂದೆ ಕನ್ನಡಿಗರು ಆದಿಲ್ ಶಾಹಿ ಸುಲ್ತಾನರೊಟ್ಟಿಗೊಡಗೂಡಿ ತೆಲುಗು ಅಳಿಯ ರಾಮರಾಯನ ರುಂಡವನ್ನು ಹಾರಿಸುವಲ್ಲಿಗೆ ಈ ವೈರತ್ವ ಪರಿಸಮಾಪ್ತಿಯಾಯಿತು. ಇಲ್ಲಿ ಮುಸ್ಲಿಂ ಅರಸೊತ್ತುಗೆಗಳು ಪರಿಸ್ಥಿತಿಯನ್ನು ತಮ್ಮ ಅನುಕೂಲಕ್ಕೆ ಬಳಸಿಕೊಂಡರೆ ಹೊರತು ಕಾಲು ಕೆದರಿ ಯುದ್ಧ ಮಾಡಲಿಲ್ಲ." ಇದು ಡಾ. ಎಂ.ಎಂ. ಕಲ್ಬುರ್ಗಿಯವರ ಸಂಶೋಧನೆಯ ಸಂಕ್ಷಿಪ್ತ ರೂಪ.
ಇನ್ನು ವಿಜಯನಗರದ ಸಾಮಂತರಾದ ಬೆಂಗಳೂರಿನ ಕೆಂಪೇಗೌಡರ ಮನೆಮಾತು ಕೂಡ ತೆಲುಗು ಆಗಿದ್ದಿತು. ಹಾಗಾಗಿಯೇ ಅವರ ಮನೆಮಾತು ಸಹಜವಾಗಿ ಈ ಸಾಮಂತಿಕೆ ದೊರೆಯುವಲ್ಲಿ ಸಹಾಯ ಮಾಡಿರಬಹುದು. ಏಕೆಂದರೆ ಸಾಕಷ್ಟು ತೆಲುಗು ಭಾಷಿಗರಿಗೆ ಕೃಷ್ಣದೇವರಾಯನು ಮಣೆ ಹಾಕಿದ್ದನು. ಆತನ "ದೇಸಭಾಶಲೋ ತೆಲುಗು ಲೇಸ" ಎಂಬ ಮಾತು ಆತನ ತೆಲುಗು ಪ್ರೀತಿಯನ್ನು, ಪಕ್ಷಪಾತವನ್ನು ಧೃಢೀಕರಿಸುತ್ತದೆ ಎಂದು ಸಂಶೋಧಕರು ತಿಳಿಸುತ್ತಾರೆ. ಆ ಹಿನ್ನೆಲೆಯಲ್ಲಿ ಇಂದಿನ ಹುಸಿ ಕನ್ನಡ ಅಭಿಮಾನಿಗಳು "ದೇಶಭಾಷೆಯೊಳಗೆ ನಮ್ಮ ಕನ್ನಡ ಚೆನ್ನ" ಎಂದು ರಿಮೇಕ್ ಮಾಡಿಕೊಂಡು ಹಾಡಿ ಕುಣಿಯುತ್ತಿರುವುದು ಎಷ್ಟು ಉಚಿತ?
ಇನ್ನು ಪೋರ್ಚುಗೀಸ್ ಪ್ರವಾಸಿಗರಾದ ನೂನೇಜ್ ಪಾಯಿಸರಿಗೆ ಹಂಪಿ ಬೇರೆಯಾಗಿಯೇ ಕಂಡಿದೆ. ಅವರ ವರ್ಣನೆಯ ಜನಜೀವನದ ಚಿತ್ರಣ ಬೇರೆಯಾಗಿಯೇ ಇದೆ. ಅದು ಇಂದು ಬೆಂಗಳೂರು ಪಟ್ಟಣವನ್ನೇ ಇಡೀ ಕರ್ನಾಟಕದ ಅಭಿವೃದ್ಧಿ ಎಂದು ಬಿಂಬಿಸುವಂತೆಯೇ ಇದ್ದಿತೆಂಬುದನ್ನು ತೆರೆದಿಡುತ್ತದೆ.
ಇದು ಹಂಪಿ ಒಬ್ಬೊಬ್ಬರಿಗೆ ಒಂದೊಂದು ತೆರನಾಗಿ ಬಿಚ್ಚಿಕೊಳ್ಳುವ ಪರಿ.
ಇಂದು ಬಿಡುಗಡೆಯಾಗುತ್ತಿರುವ "ಬಯಲಾದ ಹಂಪಿ" ಕೃತಿಯು ತನ್ನದೇ ವಿಧದಲ್ಲಿ ಹಂಪಿಯನ್ನು ತೆರೆದಿಡುತ್ತಿದೆ. ಪ್ರವಾಸ ಕಥನ ಶೈಲಿಯ ಈ ಕೃತಿ ಹಂಪಿಯ ಮೇಲೆ ಹೊಸದೊಂದು ಕೋನವನ್ನು ಪ್ರವಾಸ ಕರೆದುಕೊಂಡ ಪ್ರೊಫೆಸರರುಗಳ ಮೂಲಕ ತೆರೆದಿಡುತ್ತಿದೆ. ತಾವೆಲ್ಲ ಓದಿ ಆ ಹೊಸ ಕೋನವನ್ನು ಕಂಡು ಹಂಪಿಯ ಕುರಿತಾದ ಕೌತುಕವನ್ನು ಹೆಚ್ಚಿಸಿಕೊಳ್ಳಿ ಎಂದು ಆಶಿಸುತ್ತ ನನ್ನ ಮಾತನ್ನು ಮುಗಿಸುತ್ತೇನೆ. ಧನ್ಯವಾದಗಳು!
No comments:
Post a Comment