ಕೌದಿಯ ಮುಸುಕಿನಾಚೆಯ ಸೌದಿ!

ಕೌದಿಯ ಮುಸುಕಿನಾಚೆಯ ಸೌದಿ!
ನನ್ನ ಆತ್ಮೀಯ ಮಿತ್ರರಾದ ಸೌದಿ ಅರೇಬಿಯಾದ ಮಾನವ ಹಕ್ಕುಗಳ ಆಯೋಗದ ನಿರ್ದೇಶಕರಾದ ಹೀಶಮ್ ಅಲಾಮಾರ್ ಅಚಾನಕ್ ಆಗಿ ನಾನು ಉಳಿದುಕೊಂಡಿದ್ದ ಬೆಂಗಳೂರಿನ ಹೋಟೆಲಿನಲ್ಲಿ ಕಾಣಿಸಿಕೊಂಡರು. ನಾನವರನ್ನು ಹಲವಾರು ವರ್ಷಗಳ ಹಿಂದೆ ಅಮೆರಿಕಾದ ಏರ್ಪೋರ್ಟ್ ಒಂದರಲ್ಲಿ ಭೇಟಿಯಾದಾಗ ಸೌದಿ ರಾಯಭಾರ ಕಚೇರಿಯಲ್ಲಿ ಹುದ್ದೆಯನ್ನು ಹೊಂದಿದ್ದರು. ಅಂದು ಹೆಚ್ಚು ಮಾತನಾಡಲಾಗಿರದ ನಮಗೆ ಕಳೆದ ವಾರ ಭರಪೂರ ಮೂರು ದಿನಗಳ ಸಮಯ ಸಿಕಿತ್ತು. ನನ್ನನ್ನು ನಂದಿಬೆಟ್ಟ, ಬನ್ನೇರುಘಟ್ಟ ಸುತ್ತಿಸಿದ ಹೀಶಮ್ ರನ್ನು ನಾನು ನನ್ನ ಶಾಸಕ ಮಿತ್ರರುಗಳ ಸಹಾಯದಿಂದ ವಿಧಾನಸೌಧ, ಶಾಸಕರ ಭವನ ಸುತ್ತಿಸಿದೆ.
ಮಾನವ ಹಕ್ಕುಗಳ ಪ್ರಚಲಿತ ಸಮಸ್ಯೆಯಾದ ಮಾನವ ಕಳ್ಳಸಾಗಣೆಯೂ ಸೇರಿದಂತೆ ಇ-ಗವರ್ನೆನ್ಸ್, ಸರ್ಕಾರಿ ಉದ್ದಿಮೆಗಳ ಖಾಸಗೀಕರಣ, ಧರ್ಮ, ವಿದೇಶದಲ್ಲಿರುವ ಭಾರತೀಯರ ಕಟ್ಟುನಿಟ್ಟಿನ ನಿಯಮ ಪಾಲನೆ ಆದರೆ ಭಾರತದಲ್ಲಿರುವ ಭಾರತೀಯರ ಎಲ್ಲಾ ನಿಯಮಗಳ ಉಲ್ಲಂಘನೆಯ ಕುರಿತು ಸೋಜಿಗ,
ಬೆಂಗಳೂರು ಟ್ರಾಫಿಕ್ ಹೀಗೆ ಎಲ್ಲದನ್ನೂ ಚರ್ಚಿಸುವ ಮುನ್ನ ಸೌದಿ ಕುರಿತಾದ ಕೌತುಕದ ಬಾಸುಂಡೆ ಮೂಡಿಸುವ ಛಡಿಯೇಟು ಶಿಕ್ಷೆ, ತಲೆದಂಡ, ಕೈ ಕತ್ತರಿಸುವುದು, ಅನ್ಯಧರ್ಮದ ಮಹಿಳೆಯರೂ ಸೇರಿದಂತೆ ಎಲ್ಲಾ ಮಹಿಳೆಯರ ಮೇಲೆ ಬುರ್ಖಾ ಹೇರಿಕೆ, ಸ್ತ್ರೀ ಅಸಮಾನತೆ, ಶುಕ್ರವಾರದ ನಮಾಜು ವೇಳೆ ರಸ್ತೆಗಳಲ್ಲಿ ಯಾರೂ ಸಂಚರಿಸದಂತೆ ನಿಯಮ ಹೇರಿಕೆ, ಧಾರ್ಮಿಕ ಗುರುಗಳ ಕಾನೂನು ಚಲಾಯಿಸುವಿಕೆ, ಇತ್ಯಾದಿ ಇತ್ಯಾದಿಯಾಗಿ ನನ್ನ ಪತ್ರಕರ್ತ ಮಿತ್ರರು ಮತ್ತು ರಾಜಕಾರಣಿ ಮಿತ್ರರು ಪ್ರಶ್ನೆಗಳನ್ನು ಕೇಳಿದರು.
ಅದಕ್ಕೆ ನಸುನಗುತ್ತ ಹೀಶಮ್ "ನೋಡಿ, ನೀವು ಹೇಳಿದ ವಿಚಾರಗಳಲ್ಲಿ ಬಹುತೇಕ ಸುಳ್ಳು. ನೂರಕ್ಕೆ ನೂರು ಪ್ರತಿಶತ ಈ ವಿಚಾರಗಳನ್ನು ಉದ್ಯೋಗಕ್ಕೆ ಸೌದಿಗೆ ಹೋಗಿಬಂದ ಭಾರತೀಯರ ಮುಖಾಂತರ ನೀವು ತಿಳಿದುಕೊಂಡಿರುತ್ತೀರಿ. ಆ ಉದ್ಯೋಗಿಗಳು ಕೂಡ ಸೌದಿ ನಿಯಮಗಳನ್ನು ಓದಿ ತಿಳಿಯದೇ ತಮ್ಮಂತೆಯೇ ಉದ್ಯೋಗಕ್ಕೆ ಬಂದ ಇತರೆ ಭಾರತೀಯ ಮೂಲದವರನ್ನೋ, ಇತರೆ ವಿದೇಶಿ ನೌಕರರನ್ನೋ ಕೇಳಿ ತಿಳಿದುಕೊಂಡಿರುತ್ತಾರೆ. ನಾನು ಇದೆಲ್ಲವೂ ಊಹಾಪೋಹ ಎಂದರೆ ನಂಬುವಿರಾ! ಇರಲಿ, ನೀವು ಕೇಳಿದ ಪ್ರತಿಯೊಂದು ವಿಚಾರದ ಸತ್ಯವನ್ನು ಹೇಳುತ್ತಾ ಸಾಗುವೆ ಕೇಳಿ" ಎಂದರು.
ತಲೆದಂಡ - ಈ ಶಿಕ್ಷೆಯನ್ನು ಕೊಲೆ ಮಾಡಿದವರಿಗೆ ಕೊಡಲಾಗುತ್ತದೆ. ಅಪರಾಧ ಕೋರ್ಟಿನಲ್ಲಿ ಸಾಬೀತಾಗಬೇಕು. ಆದರೆ ಕೊಲೆಯಾದ ವ್ಯಕ್ತಿಯ ಪೋಷಕರು ಯಾ ಆತನ ಹೆಂಡತಿ/ಗಂಡ/ಮಕ್ಕಳು ಕೊಲೆ ಮಾಡಿದವನನ್ನು ಕ್ಷಮಿಸಿದ್ದೇವೆ ಎಂದರೆ ಸೌದಿ ಕೋರ್ಟ್ ಕೂಡ ಕ್ಷಮಿಸಿ ಬಿಟ್ಟುಬಿಡುತ್ತದೆ. ಅದೇ ಅಪರಾಧಿಯೇನಾದರೂ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದರೆ, ಆತನಿಗೆ ಯಾವ ಕ್ಷಮೆಯೂ ಇಲ್ಲ. ತಲೆದಂಡ ಶತಸಿದ್ದ. ಇದು ಸೌದಿ ಸರ್ಕಾರ ಮಹಿಳೆಯರ ಬಗ್ಗೆ ತೋರುವ ಕಳಕಳಿ.
ಕಳ್ಳತನಕ್ಕೆ ಕೈಕಡಿಯುವುದು - ಇದು ಸತ್ಯ. ಆದರೆ ಎಲ್ಲಾ ಕಳ್ಳತನಗಳಿಗೂ ಕೈಕಡಿಯುವುದಿಲ್ಲ. ಉದಾಹರಣೆಗೆ ನೀವು ನಿಮ್ಮ ಮನೆಯ ಟೇಬಲ್ಲಿನ ಮೇಲೆ ಬೆಲೆಬಾಳುವ ವಸ್ತುವನ್ನು ಬಿಟ್ಟಿದ್ದು ಅದನ್ನು ಕಂಡ ನಿಮ್ಮ ಮನೆ ಕೆಲಸದವರು ಅಥವಾ ದಾರಿಹೋಕರು ಕದ್ದರೆ ಅದಕ್ಕೆ ಅವರ ಕೈಕತ್ತರಿಸುವುದಿಲ್ಲ. ಯಾವ ರಕ್ಷಣೆಯೂ ಇಲ್ಲದೆ ಸುಲಭವಾಗಿ ಸಿಕ್ಕುವ ವಸ್ತುವಿನ ಆಸೆಯಿಂದಾದ ಕಳ್ಳತನದ ಅಪರಾಧಕ್ಕೆ ಕೈಕಡಿಯುವ ಶಿಕ್ಷೆಯಿಲ್ಲ. ಅದಕ್ಕೆ ಸೂಕ್ತವಾದ ಜೈಲುವಾಸ ಅಥವಾ/ಮತ್ತು ಛಡಿಯೇಟಿನ ಶಿಕ್ಷೆಯಿರುತ್ತದೆ. ಅದೇ ಕಳ್ಳತನ ಮಾಡಲೆಂದೇ ಬಾಗಿಲು ಮುರಿದು, ಲಾಕರ್ ಒಡೆದು ಮಾಡಿದ ಕಳ್ಳತನಕ್ಕೆ ಕೈ ಕಡಿಯಲಾಗುತ್ತದೆ. ಏಕೆಂದರೆ ಅದು ಉದ್ದೇಶಿತ ಮತ್ತು ಯಾವ ಪ್ರಚೋದನೆಯೂ ಇಲ್ಲದೆ, ಅಪರಾಧಿ ಕಳ್ಳತನವನ್ನು ಮಾಡುವ ಪೂರ್ವಭಾವಿ ಮನಸ್ಸಿನಿಂದ ಮಾಡಿರುತ್ತಾನೆ. ಹಾಗಾಗಿ ಇದಕ್ಕೆ ಕೈಕಡಿಯುವುದು ತಪ್ಪದು.
ಛಡಿಯೇಟು - ಛಡಿಯೇಟು ಎಂದರೆ ಶಕ್ತಿಯನ್ನು ಕ್ರೋಢೀಕರಿಸಿ ಚಾಟಿಯಿಂದ ಬಾಸುಂಡೆ ಬರುವಂತೆ ಅಥವಾ ಪಕ್ಕೆಲುಬುಗಳು ಮುರಿದು ಅಂಗವಿಕಲರಾಗುವಂತೆ ಹೊಡೆಯುವುದೆಂದಲ್ಲ. ಹಾಗೆ ಹೊಡೆದರೆ ನಮ್ಮಲ್ಲಿಗೆ ಯಾವ ದೇಶದವರೂ ಕೆಲಸಕ್ಕೆ ಬರುವುದಿಲ್ಲ. ಮೇಲಾಗಿ ನಮ್ಮ ಮಾನವ ಸಂಪನ್ಮೂಲವನ್ನು ಹೀಗೆ ಹೊಡೆದು ಬಡಿದು ಯಾರು ತಾನೆ ಕಳೆದುಕೊಳ್ಳಲು ಸಿದ್ಧವಿರುತ್ತಾರೆ ಹೇಳಿ. ನೀವೆಂದುಕೊಂಡ ಛಡಿಯೇಟು ಹಿಂಸೆ! ಹಿಂಸೆ ಇಸ್ಲಾಮಿನಲ್ಲಿ ನಿಷಿದ್ಧ. ನೀವು ಡೋಲು ಬಡಿಯುವಂತೆಯೇ ಕೈಯನ್ನು L ಆಕಾರದಲ್ಲಿ ಹಿಡಿದು ಕೋಲಿನಿಂದ ಡೋಲು ಬಡಿದಂತೆಯೇ ನಾವು ಛಡಿಯೇಟು ಕೊಡುವುದು. ನೀವು ನಲವತ್ತು ಛಡಿಯೇಟು ಅನುಭವಿಸಿದರೂ ಅದರಿಂದ ನೋವೇನೂ ಉಂಟಾಗದು. ಬದಲಿಗೆ ಒಂದು ಮಸಾಜ್ ಪ್ರಕ್ರಿಯೆಯಂತಿರುತ್ತದೆ! ಏಕೆಂದರೆ ಇದು ಒಂದು ಸಿಂಬಾಲಿಕ್ ಪ್ರಕ್ರಿಯೆ ಮಾತ್ರ. ನಿಜವಾದ ಶಿಕ್ಷೆಗಳೆಂದರೆ ದಂಡ, ಜೈಲುವಾಸ, ಕೈಕಡಿಯುವುದು, ಮತ್ತು ಡೆತ್ ಪೆನಾಲ್ಟಿಗಳು ಮಾತ್ರ. ಹಾಂ, ಎಲ್ಲಾ ದೇಶಗಳಲ್ಲಿರುವಂತೆಯೇ ನಮ್ಮಲ್ಲೂ ಟ್ರಾಫಿಕ್ ನಿಯಮಗಳ ಉಲ್ಲಂಘನೆಗಳಿಗೆ ದಂಡವಿದೆಯೇ ಹೊರತು ಛಡಿಯೇಟಿಲ್ಲ.
ಕಾನೂನು ಪ್ರಕ್ರಿಯೆ - ನಿಮ್ಮಲ್ಲಿ ಹೇಗೆ ಭಾರತೀಯ ಕಾನೂನು ಶಾಸನವಿದೆಯೋ ಅದೇ ರೀತಿ ನಮ್ಮಲ್ಲಿ ಷರಿಯಾ ಕಾನೂನು ಶಾಸನವಿದೆ. ಅದನ್ನು ಜಾರಿಗೊಳಿಸಲು ನ್ಯಾಯಾಂಗ ವ್ಯವಸ್ಥೆ, ನಮ್ಮ ಕಾನೂನಿನಲ್ಲಿ ಪದವೀಧರರಾದ ವಕೀಲರು ಇದ್ದಾರೆ. ಇದಾವುದೂ ಯಾವುದೋ ಮಸೀದಿಯ ಮುಲ್ಲಾ ಕೊಡುವ ನ್ಯಾಯದ ವ್ಯವಸ್ಥೆಯಲ್ಲ. ಇದೊಂದು ವ್ಯವಸ್ಥಿತ ರಾಷ್ಟ್ರೀಯ ಕಾನೂನು ವ್ಯವಸ್ಥೆ, ಅಮೆರಿಕ, ಯುಕೆ, ಚೈನಾ, ಭಾರತ ಅಥವಾ ಯಾವುದೇ ವ್ಯವಸ್ಥಿತ
ರಾಷ್ಟ್ರಗಳಲ್ಲಿರುವಂತೆಯೇ ಇರುವ ನ್ಯಾಯಾಂಗ ಸುವ್ಯವಸ್ಥೆ. ಇದು ಯಾವುದೇ ಸೌದಿ ಶ್ರೀಸಾಮಾನ್ಯ ಕಾಣುವ ಆಡಳಿತದ ವ್ಯವಸ್ಥೆ.
ವಿಚಾರಣಾ ಹಿಂಸೆ - ಮತ್ತೊಮ್ಮೆ ಹೇಳುತ್ತೇನೆ ಕೇಳಿ, ನಮ್ಮಲ್ಲಿ ಎಂತಹ ಅಪರಾಧಿಗಳೇ ಆದರೂ ಅವರನ್ನು ಹಿಂಸಿಸುವುದಿಲ್ಲ. ಹಿಂಸೆ ಇಸ್ಲಾಮಿನಲ್ಲಿ ಪರಮ ನಿಷಿದ್ಧ. ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿ ಶಿಕ್ಷೆಯನ್ನು ಜಾರಿಗೊಳಿಸುವವರೆಗೆ ಯಾವುದೇ ಹಿಂಸೆಯನ್ನು ಆರೋಪಿಗಳಿಗೆ ಕೊಡುವುದಿಲ್ಲ. ಸರಣಿ ಕೊಲೆ ಅಥವಾ ಸರಣಿ ಅತ್ಯಚಾರಗಳಂತಹ ಅಪರಾಧಗಳಿಂದ ಸಮಾಜದಲ್ಲಿ ಆತಂಕವನ್ನು ಸೃಷ್ಟಿಸಿದ ಸಮಾಜ ವಿದ್ರೋಹಿ ಅಪರಾಧಿಗಳ ತಲೆದಂಡದ ನಂತರ ಆತನ/ಆಕೆಯ ದೇಹವನ್ನು ತುಂಡುತುಂಡಾಗಿ ಸಾರ್ವಜನಿಕವಾಗಿ ಕತ್ತರಿಸಲಾಗುತ್ತದೆಯೇ ಹೊರತು ಜೀವಂತವಿದ್ದಾಗ ಯಾವುದೇ ಹಿಂಸೆಯನ್ನು ನೀಡಲಾಗುವುದಿಲ್ಲ. ಇಂತಹ ಘೋರ ಅಪರಾಧವನ್ನು ಮಾಡಿದವರಿಗೆ ಯಾವ ರೀತಿಯ ಅಂತಿಮ ಮರ್ಯಾದೆ ಸಿಗುತ್ತದೆ ಎಂಬ ಸಂದೇಶವನ್ನು ಕೊಡುವುದು ಇದರ ಉದ್ದೇಶ ಮಾತ್ರ, ಮತ್ತಿದು ನಾವು ಪಾಲಿಸುವ ಇಸ್ಲಾಂ ಷರಿಯಾ ಕಾನೂನಿನಲ್ಲಿದೆ.
ಇನ್ನು ಒಂದು ವೇಳೆ ಯಾರಾದರೂ ಅಧಿಕಾರಿಗಳು ಆರೋಪಿಗಳನ್ನು ವಿಚಾರಣೆಯ ವೇಳೆ ಹಿಂಸಿಸಿದ್ದರೆ ಅದು ಅವರಿಗೂ ಮತ್ತು ಆರೋಪಿಯ ನಡುವೆಯೂ ಇರಬಹುದಾದ ವೈಯಕ್ತಿಕ ದ್ವೇಷದಿಂದ. ಆ ಅಧಿಕಾರಿ ಅದಕ್ಕಾಗಿ ವಿಚಾರಣೆಯನ್ನು ಎದುರಿಸಬೇಕಾಗುತ್ತದೆ. ಪೊಲೀಸ್ ಅಧಿಕಾರಿಗಳ ಅಧಿಕಾರ ದುರುಪಯೋಗ ಎಲ್ಲಾ ರಾಷ್ಟ್ರಗಳಲ್ಲಿಯೂ ನಡೆಯುತ್ತದೆ. ಆದರೆ ಅದರ ಪ್ರಮಾಣ ಸೌದಿಯಲ್ಲಿ ಮಾತ್ರ ಅತ್ಯಂತ ಕಡಿಮೆ.
ಮಟ್ಟಾ ಮದುವೆಗಳು - ಇದು ವ್ಯಭಿಚಾರ ಮತ್ತು ವೇಶ್ಯಾವಾಟಿಕೆ ಎಂದೇ ಸೌದಿ ಸರ್ಕಾರದ ನಿಲುವು. ಈ ಮಟ್ಟಾ ಮದುವೆಗಳು ಎಲ್ಲಿ ನಡೆಯುತ್ತವೆಯೋ ಆಯಾಯ ದೇಶಗಳು ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು. ನಿಮ್ಮ ಹೈದರಾಬಾದಿಗೆ ಅರಬರು ಬಂದು pleasure ಮದುವೆಯಾದರೆ ಅದಕ್ಕೆ ಇಲ್ಲಿನ ಸರ್ಕಾರ ಕ್ರಮ ಕೈಗೊಳ್ಳಬೇಕೆ ಹೊರತು ಸೌದಿ ಸರ್ಕಾರವಲ್ಲ. ಮೇಲಾಗಿ ಈ ರೀತಿ ಮದುವೆಯಾಗುವವರು ಸೌದಿ ಪ್ರಜೆಗಳಾಗಿರದೆ ಇತರೆ ಮಧ್ಯಪ್ರಾಚ್ಯದ ದೇಶಗಳ ಪ್ರಜೆಗಳಿರಬಹುದು. ಒಟ್ಟಾರೆ ಸೌದಿ ಅರೇಬಿಯಾದ ಪ್ರಕಾರ ಇದು ವೇಶ್ಯಾವಾಟಿಕೆ ಮತ್ತದು ತಲೆದಂಡದ ಅಪರಾಧ.
ಬುರ್ಖಾ ಹೇರಿಕೆ - ಇದು ಸುಳ್ಳು. ನಮ್ಮಲ್ಲಿ ಬುರ್ಖಾ ಹೇರಿಕೆಯಿಲ್ಲ. ನನ್ನ ಹೆಂಡತಿ ಮತ್ತು ನಾಲ್ಕು ಹೆಣ್ಣುಮಕ್ಕಳು ಇದುವರೆಗೂ ಬುರ್ಖಾ ಧರಿಸಿಲ್ಲ. ನನ್ನ ಮಗಳು ಅಲ್ಲಿ ಕುಳಿತಿದ್ದಾಳೆ ನೋಡಿ ಎಂದು ಜೀನ್ಸ್ ಮತ್ತು ಟೀಷರ್ಟ್ ತೊಟ್ಟಿದ್ದ ಅವರ ಮಗಳ ಕಡೆ ಬೆರಳು ತೋರಿದರು.
ಅಸಮಾನತೆ - ಮೇಲಿನ ಎಲ್ಲಾ ಶಿಕ್ಷೆಗಳೂ ಮತ್ತು ನಿಯಮಗಳೆಲ್ಲವೂ ಸ್ತ್ರೀ-ಪುರುಷರಿಗೆ ಸಮಾನವಾಗಿ ಅನ್ವಯಿಸುತ್ತವೆ. ಯಾವುದೇ adultry ಅಪರಾಧಕ್ಕೆ ಸಮಾನ ಶಿಕ್ಷೆಯಿರುತ್ತದೆ. ಹಾಗೆಂದು ಅವರುಗಳು ಹೊಂದಾಣಿಕೆಯಾಗದಿದ್ದರೆ ವಿಚ್ಛೇದನವನ್ನು ಪಡೆದು ಇಷ್ಟವಾದವರೊಂದಿಗೆ ಮದುವೆಯಾಗಬಹುದು. ಆಸ್ತಿಯಲ್ಲಿ ಸ್ತ್ರೀಯರಿಗೆ ಅರ್ಧ ಭಾಗವಿದ್ದರೆ ಪುರುಷರಿಗೆ ಒಂದು ಭಾಗ ಸಿಗುತ್ತದೆ. ಏಕೆಂದರೆ ಪ್ರತಿಯೊಬ್ಬ ಸ್ತ್ರೀಯ ಪುರುಷನಿಗೆ ಒಂದು ಭಾಗ ಆಸ್ತಿ ಬಂದಿರುತ್ತದೆ ಮತ್ತು ಆ ಅಸ್ತಿಯನ್ನು ಆತ ಕುಟುಂಬಕ್ಕೆ ವ್ಯಯಿಸುತ್ತಾನೆಯೇ ಹೊರತು ಆತನ ಸ್ವಂತಕ್ಕಲ್ಲ. ಹಾಗಾಗಿ ಇಲ್ಲಿ ಕೌಟುಂಬಿಕ ಸಮಾನತೆಯಿದೆ.
ಇನ್ನು ಟ್ರಿಪಲ್ ತಲಾಖ್ ಅನ್ನು ಮೂರು ಬಾರಿ ಒಟ್ಟಿಗೆ ಹೇಳುವಂತಿಲ್ಲ. ಸೌದಿಯಲ್ಲಿ ಅದನ್ನು ಅಷ್ಟು ಸುಲಭವಾಗಿ ಹೇಳಲಾಗದು. ನೀವು ಕೇಳಿರಿರುವ ಟ್ರಿಪಲ್ ತಲಾಖ್ ಸೌದಿಯನ್ನು ಬಿಟ್ಟು ಇತರೆ ಮೂಲಭೂತವಾದಿ ಇಸ್ಲಾಂ ರಾಷ್ಟ್ರಗಳಲ್ಲಿರಬಹುದು. ಸೌದಿಯಲ್ಲಿಲ್ಲ.
ಶುಕ್ರವಾರದ ನಮಾಜು ವೇಳೆ ರಸ್ತೆಗಳಲ್ಲಿ ಯಾರೂ ಸಂಚರಿಸದಂತೆ ನಿಯಮ ಹೇರಿಕೆ - ಸುಳ್ಳು. ಆ ದಿನ ರಜೆಯಿರುವುದರಿಂದ ಅಂಗಡಿ ಮುಂಗಟ್ಟುಗಳು ಮುಚ್ಚಿರುತ್ತವೆ. ಹಾಗಾಗಿ ಬಿಸಿಲಿನಲ್ಲಿ ಖಾಲಿ ತಿರುಗಲು ಯಾರು ಹೋಗದ ಕಾರಣ ವಿದೇಶಿ ನೌಕರರು ಏನೇನೋ ಕಲ್ಪಿಸಿಕೊಂಡಿರಬಹುದು!
ಧಾರ್ಮಿಕ ಗುರುಗಳ ಕಾನೂನು ಚಲಾಯಿಸುವಿಕೆ - ಸುಳ್ಳು! ನಮ್ಮಲ್ಲಿನ ಕೆಲವು ಕಟ್ಟರ್ ವಾದಿಗಳು ನಿಮ್ಮ ಖಾಪ್ ಪಂಚಾಯತಿಯ ರೀತಿಯಲ್ಲಿ ತಮ್ಮದೇ ಆದ ವ್ಯವಸ್ಥೆಯನ್ನು ಅಲ್ಲಲ್ಲಿ ಹೊಂದಿ ತಮ್ಮದೇ moral policing ನಡೆಸುತ್ತಿದ್ದರು. ಈಗ ಅದಕ್ಕೆಲ್ಲ ಸೌದಿ ಸರ್ಕಾರ ಕಡಿವಾಣ ಹಾಕಿದೆ. ಬಹುಶಃ ನೀವು ಹೇಳಿದ/ಕೇಳಿದ ವಿಚಾರಗಳೆಲ್ಲ ಈ ಕಟ್ಟರ್ ವಾದಿಗಳಿಗೆ ಸಂಬಂಧಿಸಿದ್ದಿರಬಹುದು. ಭಾರತದ ಖಾಪ್ ಪಂಚಾಯಿತಿ, ಅಮೆರಿಕಾದ ಕೆಲವು ಕಲ್ಟ್ ಪಂಥದೊಳಗಿನ ನ್ಯಾಯ ವ್ಯವಸ್ಥೆಗಳು ಹೇಗೆ ರಾಷ್ಟ್ರೀಯ ವ್ಯವಸ್ಥೆಗಳು ಎಂದೆನಿಸುವುದಿಲ್ಲವೋ ಹಾಗೆಯೇ ನಮ್ಮಲ್ಲಿನ ಕೆಲವು ಮೂಲಭೂತವಾದಿಗಳ ವ್ಯವಸ್ಥೆ, ರಾಷ್ಟ್ರೀಯ ವ್ಯವಸ್ಥೆ ಎನಿಸುವುದಿಲ್ಲವಲ್ಲವೇ?
ಈ ಕಟ್ಟರ್ ಮೂಲಭೂತವಾದಿಗಳು ನಿಗ್ರಹಿಸುವಲ್ಲಿ ಸೌದಿ ಸರ್ಕಾರ ಸಮಯ ತೆಗೆದುಕೊಂಡಿತು ನಿಜ. ಇವರಿಂದ ನಮ್ಮ ಮಹಿಳೆಯರ ಗೌರವವನ್ನು ಕಾಪಾಡಲೆಂದೇ ಕೆಲವು ನಿಯಮಗಳನ್ನು ಮಹಿಳೆಯರ ಮೇಲೆ ಹೇರಿದ್ದೆವು. ನಮ್ಮಲ್ಲಿ ಆರ್ಥಿಕ ಸ್ಥಿತಿಗಿಂತ ಕೌಟುಂಬಿಕ ಹಿನ್ನೆಲೆಯನ್ನು ಹೆಚ್ಚಾಗಿ ಗೌರವಿಸುತ್ತೇವೆ. ವೈವಾಹಿಕ ಸಂಬಂಧಗಳನ್ನು ನೋಡುವಾಗ ಸೌದಿ ಅರಬರಿಗೆ ಕೌಟುಂಬಿಕ ಹಿನ್ನೆಲೆ ಶೇಕಡಾ 80ರಷ್ಟು ಮತ್ತು ಆರ್ಥಿಕ ಸ್ಥಿತಿ 20ರಷ್ಟು ಮುಖ್ಯ. ಹಾಗಾಗಿ ಕುಟುಂಬದ ಗೌರವಕ್ಕೆ ನಮ್ಮಲ್ಲಿ ಅತ್ಯಂತ ಮಹತ್ವ.
ಈ ಮೂಲಭೂತವಾದಿಗಳು ಅವರನ್ನು ಓಲೈಸದವರ ಕೌಟುಂಬಿಕ ಗೌರವಕ್ಕೆ ಚ್ಯುತಿ ತರುವಂತಹ ಕೆಲಸಗಳನ್ನು ಮಾಡುತ್ತಿದ್ದರು. ಅವರ ಅಂತಹ ನೀಚ ಕಾರ್ಯಕ್ಕೆ ಮಹಿಳೆಯರು ಸುಲಭವಾಗಿ ತುತ್ತಾಗುತ್ತಿದ್ದರು. ಹಾಗಾಗಿಯೇ ಕೆಲವು ನಿರ್ಬಂಧಗಳನ್ನು ಹೇರಿದ್ದುದು. ಅವುಗಳಲ್ಲಿ ಕಾರು ಚಲಾಯಿಸುವ ನಿರ್ಬಂಧ ಕೂಡ ಒಂದು. ಈಗ ಎಲ್ಲ ತಹಬದಿಗೆ ಬಂದಿದ್ದು ಆ ನಿರ್ಬಂಧಗಳನ್ನು ತೆಗೆದಿದ್ದೇವೆ. ಹಾಗಾಗಿಯೇ ಈಗ ನಮ್ಮ ಮಹಿಳೆಯರು ಕಾರ್ ಚಲಾಯಿಸುತ್ತಿರುವುದು.
ಒಟ್ಟಾರೆ, ಕೇಳಿದ್ದು ಸುಳ್ಳಾಗಬಹುದು, ನೋಡಿದ್ದು ಸುಳ್ಳಾಗಬಹುದು. ಆದರೆ ವಿಚಾರಿಸಿ ಪರಾಮರ್ಶಿಸಿ ನೋಡಿದಾಗ ಸತ್ಯವು ತಿಳಿಯುವುದು.
ರಾಜಪ್ರಭುತ್ವ vs ಪ್ರಜಾಪ್ರಭುತ್ವ - ರಾಜಪ್ರಭುತ್ವವೆಂದೊಡನೆ ಅದು ಹೇರಿಕೆ ಯಾ ಗುಲಾಮಿಕೆ ಎಂಬ ಅಭಿಪ್ರಾಯವಿದೆ. ಇದು ಸುಳ್ಳು. ನಮ್ಮ ರಾಜರಿಗೆ ಸಾಕಷ್ಟು ವಿದ್ಯಾವಂತ, ಬುದ್ಧಿಜೀವಿ ತಂತ್ರಜ್ಞರಿಂದೊಡಗೂಡಿದ ಸಲಹಾ ಸಮಿತಿಯಿದೆ. ಈ ಎಲ್ಲಾ ಸಲಹಾ ಸಮಿತಿಯ ಸಲಹೆಗಳನ್ನು ವಿಶ್ಲೇಷಿಸಿ ಪರಾಮರ್ಶಿಸಿ ಅನ್ವಯಿಸಲಾಗುತ್ತದೆ. ಇದು ಒಂದು ಅತ್ಯುತ್ತಮ ಗೌವರ್ನೆನ್ಸ್ ವ್ಯವಸ್ಥೆ ಎಂದುಕೊಳ್ಳಿ. ನಿಮ್ಮ ಪ್ರಜಾಪ್ರಭುತ್ವದಲ್ಲಿ ಸಾಕಷ್ಟು ನಿರ್ಧಾರಗಳು ಮಂದಗತಿಯಲ್ಲಿ ಸಾಗಿದರೆ, ನಮ್ಮ ರಾಜಪ್ರಭುತ್ವದಲ್ಲಿ ತ್ವರಿತವಾಗಿ ನಿರ್ಧರಿಸಲ್ಪಡುತ್ತವೆ. ಹಾಗೆಂದು ಅವಸರದ ನಿರ್ಧಾರಗಳು ಇಂದಿಗೂ ಆಗುವುದಿಲ್ಲ. ಸೌದಿಯ ಆರ್ಥಿಕ ಸ್ಥಿತಿ, ಜಾಗತೀಕರಣದ ಇಂದಿನ ಪ್ರಪಂಚದಲ್ಲಿ ಅತ್ಯುನ್ನತವಾಗಿಯೇ ಇದೆ. ಜಗತ್ತಿನ ಎಲ್ಲಾ ರಾಷ್ಟ್ರಗಳೊಂದಿಗೆ ಸೌಹಾರ್ದಯುತ ವ್ಯಾಪಾರ ಸಂಬಂಧಗಳನ್ನು, ರಾಜತಾಂತ್ರಿಕ ಸಂಬಂಧಗಳನ್ನು ಹೊಂದಿದ್ದೇವೆ. ಜನಸಾಮಾನ್ಯರಿಗೆ ಮಿನಿಮಮ್ ಗೌವರ್ನೆನ್ಸ್, ಮ್ಯಾಕ್ಸಿಮಮ್ ಸರ್ವಿಸ್ ಮುಖ್ಯವೇ ಹೊರತು ರಾಜಪ್ರಭುತ್ವ ಯಾ ಪ್ರಜಾಪ್ರಭುತ್ವವಲ್ಲ. ಹಾಗೆಂದು ಜನಸಾಮಾನ್ಯರು ಓದಿ ವಿದ್ಯಾವಂತರಾಗಿ ತಕ್ಕ ಅರ್ಹತೆಯನ್ನು ಗಳಿಸಿದರೆ ಪ್ರಮುಖ ಹುದ್ದೆಗಳಿಗೆ ನಮ್ಮ ಸುಲ್ತಾನರೇ ನೇಮಕಾತಿ ಮಾಡುವರು. ಕೆಲವರು ಇದನ್ನು ಎಲೆಕ್ಷನ್ ಎಂದು ತಪ್ಪಾಗಿ ತಿಳಿದುಕೊಂಡಿದ್ದಾರೆ, ಇದು ಸೆಲೆಕ್ಷನ್. ಹಾಗಾಗಿ ನೀವೇ ನಿರ್ಧರಿಸಿ ಯಾವುದು ಜನಸಾಮಾನ್ಯರಿಗೆ ಒಳಿತೆಂದು.
ಹೀಗೆ ನನ್ನ ಸ್ನೇಹಿತರು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಅತ್ಯಂತ ಸಮಾಧಾನಚಿತ್ತದಿಂದ ಉದಾಹರಣೆಗಳೊಂದಿಗೆ ಉತ್ತರಿಸಿ ಸೌದಿ ಕುರಿತಾದ ಸಾಕಷ್ಟು ತಪ್ಪು ತಿಳುವಳಿಕೆಯನ್ನು ಕಳೆದದ್ದಲ್ಲದೆ ಯಾವುದೇ ರಾಯಭಾರ ಕಚೇರಿಗೆ ಹೋಗದೆ ಮನೆಯಲ್ಲೇ ಕುಳಿತು ಈ-ವೀಸಾ ಪಡೆದು ಸೌದಿಗೆ ಬನ್ನಿ ಎಂದು ಆಹ್ವಾನ ಕೂಡಾ ನೀಡಿದರು.
ಸೌದಿ ಎಂದರೆ ಒಂದು ಮೌಢ್ಯದ ಕೌದಿ ಕವುಚಿಕೊಂಡದ್ದು ಹೀಗೆ ಮಗುಚಿಬಿದ್ದಿತು.

No comments: